ಗಿರೀಶ್ ಕಾರ್ನಾಡ್ ನುಡಿ ನಮನ : ಲಕ್ಷ್ಮಣ್ ಕೆ. ಪಿ

2017 ರ ನವೆಂಬರ್ ಹೊತ್ತಿಗೆ ನಾನು ಸಿಂಗಾಪುರದಲ್ಲಿ ಅಭಿನಯ ತಜ್ಞ ಫಿಲಿಪ್ ಜೆರ್ರಿಲಿ ಅವರ ಜೊತೆಯಲ್ಲಿ ಸೋಲೋ ಪ್ರದರ್ಶನ ಒಂದರ ತಯಾರಿಯಲ್ಲಿದ್ದೆ. ಅದು ನನ್ನ ಕೋರ್ಸ್ನ ಭಾಗವಾಗಿತ್ತು. ಫಿಲಿಪ್ ಅವರು ನಟರಿಗಾಗಿ ಮತ್ತು ನೃತ್ಯಪಟುಗಳಿಗಾಗಿ pre-performative ಟ್ರೈನಿಂಗ್, psycho physical ಟ್ರೈನಿಂಗ್ ಗಳಿಂದ ಮತ್ತು minimalist ಅಭಿವ್ಯಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ಅವರು ಕಟ್ಟುತ್ತಾ ಬರುತ್ತಿರುವ ವಿವಿಧ ರಂಗ ಪ್ರಯೋಗಗಳಿಂದಾಗಿ ಜಗತ್ತಿನಾಂದ್ಯಂತ ಹೆಸರು ಮಾಡಿರುವವರು. ಫಿಲಿಪ್ ಮತ್ತು ಭಾರತದ ಸಂಬಂಧ ಹಲವು ದಶಕಗಳಷ್ಟು ಹಳೆಯದು ಅವರ ಮುಖ್ಯ ಪುಸ್ತಕ when the body becomes all eyes ಕೇರಳದ ಕಳರಿ ಪಯಟ್ಟಿನ ಕುರಿತಾದ್ದು “ಮೈಯಲ್ಲ ಕಣ್ಣಾಗುವ” ನುಡಿಗಟ್ಟನ್ನು ಮಲಯಾಳಂಯಿಂದ ಕಲಿತು ಅವರ ಎಲ್ಲ ತರಗತಿಗಳಲ್ಲಿ ಮತ್ತೆ ಮತ್ತೆ ಬಳಸುತ್ತಾರೆ. ಹೀಗೊಂದು ದೇಸಿ ನುಡಿಗಟ್ಟನ್ನು ಬಹಳ ಪ್ರಬಲವಾದ ಆಧುನಿಕ ರಂಗ ಕಲಿಕೆ ಭಾಗವಾಗಿಸಿದವರು ಫಿಲಿಪ್. ಅವರ ಬಗ್ಗೆ ಹೇಳುವುದು ಅಥವಾ ಅವರ ಸಾಹಿತ್ಯ ಕೃತಿ ಮತ್ತು ರಂಗ ಕೃತಿಗಳ ಬಗ್ಗೆ ಹೇಳುವುದು ಈ ಲೇಖನದ ಮುಖ್ಯ ಉದ್ದೇಶವಲ್ಲ ಆದ್ದರಿಂದ ಅದನ್ನ ಮತ್ತೊಮ್ಮೆ ವಿವರವಾಗಿ ಬರೀತೇನೆ. ಫಿಲಿಪ್ ಕನ್ನಡದ ನಾಟಕಕಾರ ಗಿರೀಶ್ ಕಾರ್ನಾಡ್ ಬಗ್ಗೆ ನನ್ನೊಂದಿಗೆ ಆಡಿದ ಕೆಲವು ಮಾತುಗಳು ನನಗೆ ಮುಖ್ಯವೆನಿಸಿ ಅದರ ಪೀಠಿಕೆಯಾಗಿ ಫಿಲಿಪ್ ಕುರಿತು ಸಣ್ಣ ಪರಿಚಯ ನೀಡುತ್ತಿದ್ದೇನೆ. 

ಪ್ರತಿ ವರ್ಷ ನಡೆಯುವ ವಿಶ್ವ ರಂಗಭೂಮಿಯ ದಿನದ ಆಚರಣೆ ಭಾಗವಾಗಿ 2002ರಲ್ಲಿ International theater institute ಪ್ರಕಟಿಸಿದ್ದ ವಿಶ್ವ ರಂಗಭೂಮಿ ಸಂದೇಶದ ಕಾರ್ನಾಡರ ಮಾತನ್ನು ಪ್ರಸ್ತಾಪಿಸುತ್ತಾ ಅಲ್ಲಿ ಅವರು ನಾಟ್ಯಶಾಸ್ತ್ರದ ಮೊದಲ ಅಧ್ಯಾಯವನ್ನು ರೂಪಕವಾಗಿ ಬಳಸಿದ ರೀತಿಗೆ ಮೆಚ್ಚಿಕೊಂಡಿದ್ದರು . (ಕಾರ್ನಾಡರು ಈ ಸಂದೇಶ ನೀಡಿರುವ ಏಕೈಕ ಭಾರತೀಯ , ಕನ್ನಡಿಗ ರಂಗಕರ್ಮಿ ) ನಾನು ಫಿಲಿಪ್ ಜೊತೆಗೆ ಐರಿಶ್ ನಾಟಕಕಾರ ಸಾಮ್ಯಯೇಲ್ ಬೆಕೆಟ್ನ ” ohio impromptu” ಎಂಬ ನಾಟಕದ ತಯಾರಿಯಲ್ಲಿದ್ದೆ. ಭಾಷೆ , ಸಂರಚನೆ, ದರ್ಶನ ಮತ್ತು ಏಸ್ಥೆಟಿಕ್ಸ್ ದೃಷ್ಟಿಯಿಂದ ಬೆಕೆಟ್ನ ನಾಟಕಗಳು ತುಂಬ ಆಧುನಿಕವೂ ಪ್ರಯೋಗಮುಖಿಯಾದವೂ ಕೂಡ. ಎಷ್ಟರ ಮಟ್ಟಿಗೆ ಅಂದರೆ ಆತನ ಕೆಲವು ಏಕಾಂಕಗಳು ಗಣಿತದ ಕೆಲವು ಸರಳ ಸಂಖ್ಯಾ ಸಂಯೋಜನೆಗಳನ್ನು , ರೇಖಾಗಣಿತದ ಬಾಹು ವಿಭಜನಾ ತಂತ್ರಗಳನ್ನು ಬಳಸಿ ರಚಿತವಾಗಿವೆ. ಆತನ Act without words ಎಂಬ ನಾಟಕದಲ್ಲಿ ಬರಿಯ ಕ್ರಿಯೆಗಳನ್ನು ಭಾಷೆಯಾಗಿ ಬಳಸಿದ್ದಾನೆ.( ಹಾಗೆಂದರೆ ಮೈಮ್ ಎಂಬ ಅರ್ಥವಲ್ಲ) .ಈ ರೀತಿ ಪ್ರಯೋಗಗಳನ್ನು ಭಾರತೀಯ ನಾಟಕ ಸಾಹಿತ್ಯದಲ್ಲಿ ಆಗಿರುವುದು ನನ್ನ ಓದಿನ ಮಿತಿಯೊಳಗೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಆದರೆ ಈ ರೀತಿಯ ನಾಟಕಗಳ ಬೀಜ ಸ್ವರೂಪ ಸಾಧ್ಯತೆಗಳು ಗಿರೀಶ್ ಕಾರ್ನಾಡ್ರರ ನಾಟಕಗಳಿಗೆ ಇದೆ ಅಂದಿದ್ದರು ಫಿಲಿಪ್. ಭಾಷೆ ಮತ್ತು ತಂತ್ರದ ದೃಷ್ಟಿಯಿಂದಲೂ ಬೆಕೆಟ್ ಬಗೆಯ ಸಾಧ್ಯತೆಗಳು ಗಿರೀಶ ನಾಟಕಗಳಲ್ಲಿ ಇಣುಕುತ್ತವೆ ಅಂದಿದ್ದರು.

ನನಗೆ ಇದು ಹೌದು ಅನಿಸಿತ್ತು ಬೆಕೆಟ್ಗೆ ಹಾಲಿವುಡ್ ಸಿನಿಮಾಗಳಂತೆ ನಾಟಕ ಬರೆಯುವ ಇಂಗ್ಲೀಷ್ ನಾಟಕಕಾರರಿಗಿಂತ ಬೇರೆ ಬಗೆಯ ನಿರ್ಲಿಪ್ತ, ತಟಸ್ಥ , ಧ್ಯಾನಸ್ಥ ಗುಣವಿದೆ. ಅದು ಆತನ ನಾಟಕಗಳ ಭಾಷೆಯ ಲಯಗಾರಿಕೆಯಲ್ಲಿ ಮೌನದ ಲಯಗಾರಿಕೆಯಲ್ಲಿ ಶಬ್ದಚಿತ್ರಚಲನೆಯ ಲಯಗಾರಿಗೆಯಲ್ಲಿ ವ್ಯಕ್ತವಾಗುತ್ತದೆ. ಅದೊಂದು ಐರಿಶ್ ತನವೂ ಹೌದು ( ಬೆಕೆಟ್ ಐರಿಶ್ ಭಾಷೆಯಲ್ಲಿ ನಾಟಕಗಳನ್ನು ಬರೆಯುತ್ತಿದ್ದ ಮತ್ತು ಅದನ್ನ ಆತನೇ ಇಂಗ್ಲಿಷ್ ಗೆ ಅನುವಾದಿಸುತ್ತಿದ್ದ ಕೂಡ ) ಅದು ಆತನ ಏಕಾಕಿ ಮತ್ತು ಯಾತನೆಯ ಬದುಕಿಕೆ ದಕ್ಕಿದ ಅಭಿವ್ಯಕ್ತಿ ಇರಬಹುದು.

ಕಾರ್ನಾಡರ ನಾಟಕಗಳಲ್ಲಿ ನಮಗೆ ಸಿಗುವ ಹೆಣ್ಣು, ದ್ವಂದ್ವ, ಪ್ರೇಮ , ಕಾಮ, ಜಾತಿ, ಅಧಿಕಾರ, ಕನಸುಗಾರಿಕೆ, ಲೋಲುಪತೆ ಹಾಗೂ ಮಾಯಕಾರತನ ಇವೆಲ್ಲವೂ ಅವರು ಬದುಕಿದ ಬದುಕಿನ ಸಾಂದ್ರ ಅಭಿವ್ಯಕ್ತಿಯೇ ಇರಬಹುದು. ಇವೆಲ್ಲವೂ ಅವರ ನಾಟಕಗಳ ಶಬ್ದ ನಿಶ್ಶಬ್ದತೆಗಳ ನಡುವೆ ಕಾಣುತ್ತದೆ ಕೇಳಿಸುತ್ತದೆ. ಬಂಧಗಳು ಕಟ್ಟಿಕೊಳ್ಳುತ್ತವೆ ಸಂಕೀರ್ಣಗೊಳ್ಳುತ್ತವೆ , ಬಿಚ್ಚಿಕ್ಕೊಳುತ್ತವೆ, ಸರಳವಾಗುತ್ತವೆ. ಇದು ಕಾರ್ನಾಡರ ನಾಟಕಗಳ ಸಂರಚನೆಯ ಹೊರಬಂಧಗಳ ರೂಪು ಮಾತ್ರವಲ್ಲ ಪಾತ್ರಗಳ ಆಂತರ್ಯದಲ್ಲೂ ಈ ಚಲನೆಯಿದೆ. ನಿರ್ಭೀಡ ಪ್ರಜ್ಞೆಯೊಂದಕ್ಕೆ ಮಾತ್ರ ಏಕಕಾಲಕ್ಕೆ ಹೀಗೊಂದು ವೈಯಕ್ತಿವಾದ ಮತ್ತು ಸಾಮುದಾಯಿಕವಾದ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳಲು ಸಾಧ್ಯ. ಇದನ್ನು ಕಾರ್ನಾಡರು ಅಂತರಂಗ ಮತ್ತು ಬಹಿರಂಗದಲ್ಲೂ ಸಾಧಿಸಿಕೊಂಡಿದ್ದರು ಅನಿಸುತ್ತದೆ ನನಗೆ. ಇನ್ನು ನಾಟಕ ಬರೆಯುವ ಪ್ರಕ್ರಿಯೆ ಇತರೆ ಸಾಹಿತ್ಯ ರಚನೆ ರೀತಿಗಿಂತ ಬೇರೆ ಥರದ್ದು ಅದಕ್ಕೆ ಭಾಷೆಯ, ಸಾಹಿತ್ಯದ ಸಂವೇದನೆ ಇದ್ದರೆ ಸಾಲದು. ನಾಟಕ ಬರೆಯುವ ಪ್ರಕ್ರಿಯೆ ಆಟ ಕಟ್ಟುವ ಪ್ರಕಿಯೆ ಇಲ್ಲಿ ಪಾತ್ರದ ಅಂತರಂಗದ ಆಟ , ಪಾತ್ರಗಳ ನಡುವಿನ ಆಟ ನಾಟಕ ಮತ್ತು ಪ್ರೇಕ್ಷಕರ ನಡುವಿನ ಆಟ ಈ ಎಲ್ಲ ಆಟಗಳನ್ನು ನಾಟಕಕಾರ ತನ್ನ ಪ್ರಜ್ಞಾಭೂಮಿಕೆ ಯಲ್ಲಿ ಒಳಗೊಳ್ಳಲೇ ಬೇಕಾಗುತ್ತದೆ.(ಇದು ಇತರೆ ಸಾಹಿತ್ಯ ಪ್ರಕಾರಗಳಿಗೆ ಅಗತ್ಯವಿದೆಯಾದರೂ ನಾಟಕಕ್ಕೆ ಅನಿವಾರ್ಯ.) ಎಷ್ಟೋ ಬಾರಿ ಈ ಆಟವೇ ಆಯಾ ನಾಟಕದ ಆಂಗಿಕ-ವಾಚಿಕ-ನಟನಾ ಶೈಲಿಯನ್ನು ನಿರ್ಧರಿಸುತ್ತದೆ. ಇದೊಂದು ನಿರಂತರ ಪ್ರಕ್ರಿಯೆ ಲೋಕದ ದಿನದಿನದಾಟವನ್ನು ಅರಿಯದವನು ರಂಗದ ಮೇಲೆ ಜರುಗುಬಹುದಾದ ಆಟವನ್ನು ಕಟ್ಟಲಾರ. ಕಾರ್ನಾಡರು ಸ್ವತಃ ನಟರು ,ನಿರ್ದೇಶಕರು ಆಗಿದ್ದರಿಂದ ಅವರಿಗೆ ಇದರಲ್ಲಿ ಒಂದು ಬಗೆಯ ನಿಪುಣತೆ ಸಾಧ್ಯವಾಗಿದೆ. ಇನ್ನು ಕಾರ್ನಾಡರ ನಾಟಕಗಳಿಗೆ ದೇಸಿ -ಪಾಶ್ಚಾತ್ಯ ವಿಚಿತ್ರವಾದ ಕಸಿಯೂ ಸಾಧ್ಯವಾಗಿದೆ ಅದು ಅವರು ಕಂಡ ಯಕ್ಷಗಾನ, ಉತ್ತರ ಕರ್ನಾಟಕದ ದೊಡ್ಡಾಟ, ಕುರ್ತಕೋಟಿ, ಜಢಭರತ , ರಾಮಾನುಜನ್ ಪ್ರಭಾವದ ಜೊತೆಗೆ ಬರ್ನಾರ್ಡ್ ಷಾ, ಸ್ಟ್ರಿಂಡ್ ಬರ್ಗ್ ನಂತಹ ನಾಟಕಕಾರರ ಪ್ರಭಾವವು ಇರಬಹುದು.

ವಿಶ್ವ ರಂಗಭೂಮಿಗೆ ಆಧುನಿಕ ಭಾರತೀಯ ರಂಗಭೂಮಿಯ ಪರಿಚಯ ಇರುವುದು ಸಾಸಿವೆ ಕಾಳಿಗಿಂತ ನೂಲು ಜಾಸ್ತಿ ಅಷ್ಟೇ. ನಾಟ್ಯ ಶಾಸ್ತ್ರ, ನಾಲ್ಕಾರು ಸಂಸ್ಕೃತ ನಾಟಕಗಳು , ಒಂದಷ್ಟು ಆಧುನಿಕ ನಾಟಕಕಾರರು ಇಷ್ಟೇ. ಉಳಿದಂತೆ ಇತರೆ ದೇಶದ ರಂಗ ಶಾಲೆಗಳನ್ನು ಬಿಡಿ ಭಾರತದ ಆಧುನಿಕ ರಂಗಶಾಲೆಗಳೂ ಕೂಡ ಪಠ್ಯಕ್ರಮಗಳಲ್ಲಿ ಹೆಚ್ಚೆಚ್ಚು ಪಶ್ಚಿಮದ ನಾಟಕಗಳ, ಅಭಿನಯ ಸಿದ್ಧಾಂತಗಳ ಮೊರೆ ಹೋಗುತ್ತವೆ. ಭಾರತೀಯ ಅನ್ನಬಹುದಾದ ಅಭಿನಯ, ವಿನ್ಯಾಸ, ರಂಗಪಠ್ಯಗಳನ್ನು ಕಂಡು ಕೊಳ್ಳುವ ಹಲವಾರು ಜನ ಪ್ರಯತ್ನಿಸದರಾದರೂ ಅದಕ್ಕೊಂದು ಅಂತರಾಷ್ಟ್ರೀಯ ಮನ್ನಣೆ ಬರುವಷ್ಟು ನಿಖರತೆ , ಸ್ಪಷ್ಟತೆ ಇನ್ನೂ ಬಂದಿಲ್ಲ. ನಾನು ಈ ಮಾತನ್ನು ಭಾರತದ ಆಧುನಿಕ ರಂಗಭೂಮಿ ಕುರಿತಾಗಿ ಹೇಳುತ್ತಿದ್ದೇನೆ. ಕಾರ್ನಾಡರ ನಾಟಕಗಳು ಭಾಷೆ, ಸಂರಚನೆ, ವಸ್ತು ಮತ್ತು ದರ್ಶನದ ದೃಷ್ಟಿಯಿಂದ ಭಾರತೀಯ ಅನ್ನಬಹುದಾದ ಒಂದು ಮಾದರಿಯನ್ನಂತೂ ನೀಡಿವೆ. ಅವರ ಹಯವದನ , ತುಘಲಕ್, ಅಗ್ನಿ ಮತ್ತು ಮಳೆ ಇವುಗಳ ಹಿಂದಿ ಮತ್ತು ಇಂಗ್ಲೀಷ್ ಪ್ರಯೋಗಗಳನ್ನು ನಾನು ನೋಡಿದ್ದೇನೆ. ಕಾರ್ನಾಡರು ಹಲವು ಪಠ್ಯಗಳು ಭಾರತೀಯ ಅನ್ನಬಹುದಾದ ಚೆಲುವನ್ನು, ಸಂಕೀರ್ಣತೆಯನ್ನು ತೀರ ಪ್ರಾದೇಶಿಕ ಮತ್ತು ಸ್ಥಳೀಯವಾಗಿದ್ದುಕೊಂಡು ಲೋಕಚರಿತವಾಗಿಸಲು ಪ್ರಯತ್ನಿಸಿವೆ. ಭಾರತೀಯ ಅನ್ನಬಹುದಾದ ರಂಗಭಾಷೆಯನ್ನು ಕನಿಷ್ಠ ಪಕ್ಷ ನಾಟಕ ಪಠ್ಯದ ಮಟ್ಟಿಗಾದರೂ ಜಗತ್ತಿಗೆ ಕಾಣಿಸಿವೆ. ಇಲ್ಲಿನ ಯಾಯಾತಿ , ತುಘಲಕ್ , ಬಿಜ್ಜಳನಂತ ಪಾತ್ರಗಳು ದೇಶ ವಿದೇಶಗಳ ಭಾಷೆಯಲ್ಲಿ ಅಭಿನಯಿಸಲ್ಪಟ್ಟಿವೆ . ಒಬ್ಬ ನಾಟಕ ಬರೆಯುವ ಕಸುಬುಗಾರ ತನ್ನ ದೇಶ-ಸಂಸ್ಕೃತಿ ಕುರಿತು ಹೆಚ್ಚಿಗೆ ಮತ್ತೇನು ಮಾಡಬಲ್ಲ?. ಹಾಗಾದರೆ ಕಾರ್ನಾಡರು ಅಂತರಾಷ್ಟ್ರೀಯ ಪ್ರೇಕ್ಷಕರಿಗಾಗಿ ನಾಟಕ ಬರೆದರೆ ?ಇಲ್ಲ. ಬದಲಿಗೆ ಇಲ್ಲಿಯ ಮಾತು ಅಲ್ಲಿಗೂ ಸಲ್ಲುವಂತೆ. ಇಷ್ಟಕ್ಕೂ ಕಾರ್ನಾಡರು ಇವನ್ನೆಲ್ಲ ಸಾಧಿಸಿಕೊಂಡದ್ದು ಅಪ್ಪಟ ಕಸುಬುಗಾರನ ರೀತಿಯಲ್ಲಿ. ಕೂತು ತೀಡಿ ತಿದ್ದಿ ಕಸುಬನ್ನು ಕಲಿಯುತ್ತಾ ಹೋದವರು ಕಾಯಕವೇ ಕೈಲಾಸವೆಂಬತೆ. ಹಾಗಾಗಿ ಕಾರ್ನಾಡರಿಗೆ ಭಾರತದ ಲೇಖಕರು ಸೃಷ್ಟಿಸಿಕೊಳ್ಳುವ ಕವಿಪ್ರಭೆ , ಗುರು ಪ್ರಭೆಯ ಮೋಹ ಇರಲಿಲ್ಲ. ಅಪ್ಪಟ ಕಸುಬುಗಾರ ಹಾಗೆ ಬದುಕಿದರು, ಸತ್ತರು. ನಟರನ್ನು , ಕವಿಗಳನ್ನು ದೈವಿಕರಿಸುವ ಇಂಡಿಯಾದಂತಹ ದೇಶಕ್ಕೆ ಇದೊಂದು ಮಾದರಿ.

ರಂಗಭೂಮಿಯ ಮಟ್ಟಿಗೆ ಕಾರ್ನಾಡರು ಜಗತ್ತಿನ ರಂಗಭೂಮಿಗೆ ಅವರ ಭಾರತೀಯತೆಯ ಕಾರಣಕ್ಕಾಗಿಯೇ ಹೆಚ್ಚು ಪರಿಚಿತರು (ಯಾವುದು ಭಾರತೀಯತೆ ಅನ್ನುವುದು ದೊಡ್ಡ ಪ್ರಶ್ನೆ ) ಅದರ ವಿರೋಧಭಾಸವೆಂಬಂತೆ ಕಾರ್ನಾಡರು ಭಾರತದಲ್ಲಿ ದೇಶವಿರೋಧಿಯಾಗಿ , ದೇಶದ್ರೊಹಿಯಾಗಿ ಬಿಂಬಿತವಾಗಿದ್ದುರು. ನಿರ್ಭಿಡ ಪ್ರಜ್ಞೆಯೊಂದನ್ನು ಲೋಕ ವಿರೋಧಿಯಾಗಿ ಕಾಣುವ ,ಅಭಿವ್ಯಕ್ತಿಯನ್ನು ವಿಕಾರವಾಗಿ ಕಾಣುವ ಹುಲುಸಾದ ಪಸಲು ಈ ಕಾಲದಲ್ಲಿ ಕಟಾವಾಗುತ್ತಿದೆ. ಕಾರ್ನಾಡರ ಕೊನೆಗಾಲದ ಬದುಕು ಮತ್ತು ಸಾವು ಇದಕ್ಕೆ ಬಲಿಯಾದದ್ದು ದುಃಖಕರವಾದರೂ ಸಾಮಾನ್ಯವಾದದ್ದೇ. 

ಕಾರ್ನಾಡರನ್ನು ನಾಟಕಕಾರ, ನಟ, ನಿರ್ದೇಶಕ ಅನ್ನುವುದನ್ನು ಬಿಟ್ಟು ಬಿಡೋಣ 75 ದಾಟಿದ ಮುದಿಜೀವ ಆಕ್ಸಿಜನ್ ನಳಿಕೆಯೊಂದಿಗೆ ಬೋರ್ಡ್ ನೇತಾಕಿಕೊಂಡು ಹೋರಾಟಕ್ಕೆ ಬೀದಿಯಲ್ಲಿ ಕೂತಿದೆ ಅಂದರೆ ಆ ಜೀವಚಿತ್ರ ನಮನ್ನ ಕಿಂಚಿತ್ತಾದರೂ ಕಲಕಬೇಕಿತ್ತಲ್ಲವೇ? ಕಡೆ ಪಕ್ಷ ಕೇಳಿಸಿಕೊಳ್ಳುವ, ಚಿಂತಿಸುವ ಒಪ್ಪದಿದ್ದರೂ ಗೌರವಯುತವಾಗಿ ತಿರಸ್ಕರಿಸಿಸುವ ಕನಿಷ್ಠ ಸೌಜನ್ಯದ ಪಸೆಯಾದರೂ ನಮ್ಮ ಎದೆಯಲ್ಲಿ ಇರಬೇಕಿತ್ತು. ಏನು ಮಾಡುವುದು ನಮ್ಮದು ನೀರಿಲ್ಲದ ಕಾಲ .. ಎದೆ , ಭೂಮಿ ಎಲ್ಲದರ ಅಂತರಗಂಗೆಯೂ ಬತ್ತಿ ಹೋಗಿದೆ ಕನಸುಗಾರ ಕಾರ್ನಾಡರಿಗೆ ಬತ್ತಿ ಹೋದ ಕಾಲದಲ್ಲಿ ಇರುವುದು ಕಷ್ಟವಾಗುತ್ತಿತ್ತು ಅನಿಸುತ್ತದೆ. ಸತ್ತ ಮೇಲೆ ನಾವು ಹೊಗಳಿದರೂ ತೆಗಳಿದರೂ ಹೋದ ಜೀವಕ್ಕೆ ಒಳಿತು ಕೆಡುಕಿನ ಹಂಗಿರುವುದಿಲ್ಲ… ನೀರಿನ ಮೇಲೆ ಚಿತ್ರ ಬರೆಯಲು ಆಗುವುದಿಲ್ಲ

5 comments to “ಗಿರೀಶ್ ಕಾರ್ನಾಡ್ ನುಡಿ ನಮನ : ಲಕ್ಷ್ಮಣ್ ಕೆ. ಪಿ”
  1. ನಿಜಕ್ಕೂ ಮನಸ್ಸಿಗೆ ತಾಗುವ ವಿಶ್ಲೇಷಣೆ.
    ಲಕ್ಷ್ಮಣ್ ಪರಿಚಯ ಇತ್ತು. ಅವರ ಬರಹದ ಪರಿಚಯ ಇರಲಿಲ್ಲ.
    ಈ ಲೇಖನವು ಕಾರ್ನಾಡರನ್ನು ಹೊಸ ಕಣ್ಣಿಂದ ನೋಡುವುದನ್ನು ಕಲಿಸುತ್ತಲೇ ಲಕ್ಷ್ಮಣ್ ಎಂಬ ಹೊಸ ಬರಹಗಾರರನ್ನು ಪರಿಚಯಿಸಿದೆ.
    ಧನ್ಯವಾದಗಳು.
    – ಬಿ.ಸುರೇಶ

  2. ಬರಹ ಮೆಚ್ಚುಗೆಯಾಯ್ತು. Phillip Zarilli ಅವರೊಟ್ಟಿಗೆ ಲಕ್ಷ್ಮಣ್ ಮಾಡಿದ ಕಾರ್ಯಗಳ ಬಗ್ಗೆ ಮಾಹಿತಿ ಸಿಗುವುದೇ?
    ಚಂದ್ರ ಐತಾಳ

  3. ಅದ್ಭುತವಾದಂತಹ ಲೇಖನ ಲಕ್ಷಣ್, ರಂಗಭೂಮಿಗೆ ಅಷ್ಟೇ ಏಕೆ, ಕನ್ನಡ ಸಾಹಿತ್ಯಕ್ಕೆ ಕಾರ್ನಾಡರ ಕೊಡುಗೆ ಅಪಾರ.
    ವೆಂಕಟ್ – ಸಿಂಗಾಪುರ

  4. ಕಾರ್ನಾಡರ ಕಾಣಿಕೆಯನ್ನು ಈವರೆಗೂ ಯಾರೂ ಗಂಭೀರವಾಗಿ ಪರಿಚಯಿಸುವ ಕಾರ್ಯ ಮಾಡಿರಲಿಲ್ಲ. ಒಂದು ಅವರು ಯಾವ ಗುಂಪಿಗೂ ಸದಸ್ಯರಾಗಿ ರಲಿಲ್ಲ. ಎರಡು ಅವರಿಗೆ ಸಿಕ್ಕ ಜಾಗತಿಕ ಮನ್ನಣೆ ಬಗ್ಗೆ ಸಮಕಾಲೀನರಲ್ಲಿ ಅಸೂಯಿತ್ತು. ಅವರಿಗೆ ಕನ್ನಡ ಬರದು ಎಂಬಷ್ಟರ ಮಟ್ಟಿಗೆ ಗೇಲಿ ಮಾಡುವ ಮನಸ್ಸು ಕೆಲವರಲ್ಲಿತ್ತು. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾರ್ನಾಡ್ ತಾವು ನೀಡಿದಂತೆ ಬದುಕಿದರು. ಕಾವೇರಿ ತೀರ್ಪು, ಕೋಮು ಸೌಹಾರ್ದ ವೇದಿಕೆ, ಅರ್ಬನ್ ನಕ್ಸಲ್, ನಯಪಾಲ್.ಟ್ಯಾಗೋರ್ ಈ ಎಲ್ಲದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳಿದರು. ತಮ್ಮ ಸಾವಿನಲ್ಲು ಘನತೆ ತೋರಿದರು. ಒಳ್ಳೆಯ ಲೇಖನಕ್ಕಾಗಿ ಕೃತಜ್ಞತೆಗಳು

  5. ಧನ್ಯವಾದಗಳು ಸರ್…. ನನ್ನ M.A ನಾಟಕ ಅಧ್ಯಯನಕ್ಕೆ ಸಹಾಯ ವಾಗಿದೆ. ಇಂತಹ ಹೆಚ್ಚು ಲೇಖನಗಳು ಬರಲಿ.
    ಈ ಲಿಂಕ್ ಕಳುಹಿಸಿದ ಯತೀಶ್ ಕೊಳ್ಳೇಗಾಲ ಸರ್ಗೆ ಸಹ ಧನ್ಯವಾದಗಳು…. 🙏🙏🙏..

ಪ್ರತಿಕ್ರಿಯಿಸಿ