೧೯ನೇ ಶತಮಾನದ ಫ್ರಾನ್ಸ್ ನ ಆತ್ಮವಂಚಕ ಸಮಾಜಕ್ಕೆ ಇರಿಯುವಂತೆ ಮಾಡಿದ್ದ ಫ್ಲೊಬೆರ್ ನಂತರ ಕೋರ್ಟಿನಲ್ಲಿ ಬಡಿದಾಡಬೇಕಾಯಿತು. ಬೋದಿಲೇರನ ಕವನ ಸಂಕಲನಕ್ಕೂ ಇದೇ ಗತಿಯಾದಾಗ ಅವನ ಜೊತೆಗೆ ಗಟ್ಟಿಯಾಗಿ ನಿಂತದ್ದು ಫ್ಲೊಬೆರ್ ನೇ. ಫ್ಲೊಬೆರ್ ಗದ್ಯಕಾರನಾದ್ದರಿಂದ ಅವನ ಕೃತಿಗಳು ಸಮಾಜದ ನಯವಂತಿಕೆಯನ್ನು ಟೀಕಿಸುತ್ತ ಒಂದು ಬಗೆಯಲ್ಲಿ ಉನ್ನತ ನೈತಿಕತೆಯನ್ನು ಪ್ರತಿಪಾದಿಸಿದ್ದು ಗೋಚರವಾಗುತ್ತಿತ್ತು. ಆದರೆ ಬೋದಿಲೇರ್ ಮಧ್ಯಮವರ್ಗದ ಹಿಪಾಕ್ರಸಿಯಿಂದ ಬೇಸತ್ತು ನೇರವಾಗಿಯೇ ಸಾಹಿತ್ಯ ಮತ್ತು ನೈತಿಕತೆಗಳಿಗೆ ಏನೇನೂ ಸಂಬಂಧವಿಲ್ಲವೆಂದು ಘೋಷಿಸಿದ.
“Il a été fait avec fureur et patience”
– ಬೋದಿಲೇರ್ (೯ನೇ ಜುಲೈ ೧೮೫೭)
ಒಂದು ಕೆಟ್ಟ ಪ್ರತಿಮೆಯೊಂದಿಗೆ ಆರಂಭಿಸುತ್ತೇನೆ. ಸೂಳೆಯರೇ ತಲೆಹಿಡುಕರೂ ಆಗಿರುವಂತಿದೆ ಸದ್ಯದ ಕನ್ನಡ ಸಾಹಿತ್ಯ ಲೋಕ. ಇಲ್ಲಿ ಗಿರಾಕಿಯಾಗಲೂ ನಾಚಿಕೆಯಾಗುತ್ತದೆ. ಏಕೆಂದರೆ ಗಿರಾಕಿಗಳು ತಾವೂ ಸಹ ತಲೆಹಿಡುಕರೋ ವೇಶ್ಯೆಯರೋ ಆಗಲು ಹಪಹಪಿಸಿ ಕಾಯುತ್ತಿರುವಂತೆ ಕಾಣುತ್ತ ಎಲ್ಲರೂ ಕಾವ್ಯಕಾಮುಕರಾಗಿಬಿಟ್ಟಿದ್ದಾರೆ. ಬೆಲೆವೆಣ್ಣಿನದೇನು ಮಹಾ? ನಮ್ಮಲ್ಲೂ ವಸ್ತು-ಸಾಮಾನು-ಸಾಮಗ್ರಿಗಳಿಲ್ಲವೇ ಎಂದು ಗಿರಾಕಿಯೂ; ಪಿಂಪ್ ಗೆ ಏಕೆ ತೆರಬೇಕು- ನಾನೇ ಉತ್ಪಾದಿಸಲಾರೆನೇ ಹೊಸ ಹಾದರಗಿತ್ತಿಯರನ್ನು ಎಂದು ವೇಶ್ಯೆಯೂ ಪರಿತಪಿಸಿ ಹೊಡೆದಾಡುವಾಗ ಸೃಷ್ಟಿಕ್ರಿಯೆ ಸತ್ತು ಎಲ್ಲ ಕಡೆ ಬಿಳಿದ್ರವದ ಕಲೆಗಳು ಅಕ್ಷರಗಳಂತೆ ಚೆಲ್ಲಾಡಿಕೊಂಡಿವೆ.
ಈ ರಂಪದ ನಡುವೆ ಉದ್ರಿಕ್ತ ಗರತಿಯೊಬ್ಬಳು ಮೌನ ಮತ್ತು ತಾಳ್ಮೆಯಲ್ಲಿ, ಹುಟ್ಟಬಹುದಾದ ಮಕ್ಕಳಿಗೆ ಹೆಣೆದ ಸ್ವೆಟರುಗಳಂತಿದೆ ಬಂಡೆಯ ಕಾವ್ಯ. ಒಂದೇ ಸ್ವೆಟರನ್ನೇ ಮತ್ತೆ ಬಿಚ್ಚಿ ಮತ್ತೆ ಹೆಣೆಯುತ್ತಲೂ ಅದನ್ನು ತೊಡುವ ಮಗುವಿನ ಕಲ್ಪನೆಯೇ ಸ್ವೆಟರಿನ ವಿನ್ಯಾಸವನ್ನು ಅನನ್ಯಗೊಳಿಸುತ್ತಿರುವ ಹಾಗಿವೆ ಈ ಕವಿತೆಗಳು. ಬಿಹೆವಿಯರಿಸಂ ನ ವಿಧ್ವಾಂಸ ಎಫ್.ಬಿ. ಸ್ಕಿನರ್ “ನಮ್ಮ ಪರಿಸರದ ಚರ್ಯೆಗಳು ಕಾಲಾಂತರದಲ್ಲಿ ನಮ್ಮ ಮೇಲೆ ಮಾಡುವ ಪರಿಣಾಮಗಳೇ ನಮ್ಮ ವರ್ತನೆಗಳನ್ನು ನಿರ್ಧರಿಸುತ್ತವೆ” ಎನ್ನುತ್ತಾನೆ. ಅವನ ಸಿದ್ಧಾಂತವನ್ನು ಸಾಹಿತ್ಯಕ್ಕೆ ಅಳವಡಿಸಿ “ಕನ್ನಡ ಸಾಹಿತ್ಯ ಮೀಮಾಂಸೆ” ಪುಸ್ತಕ ಬರೆದ ಗಿರಿಯವರು ಒಂದು ಪದದ ಪರಿಣಾಮ ಹೇಗೆ ಮುಂದಿನ ಪದವನ್ನು ನಿರ್ಧರಿಸುತ್ತದೆ; ಹಾಗೆಯೇ ಹಿಂದಿನ ವಾಕ್ಯ ಹೇಗೆ ಮುಂದಿನ ವಾಕ್ಯದ ಅರ್ಥ ಮತ್ತು ಗುಣಗಳನ್ನು ಅನಿವಾರ್ಯವಾಗಿಸುತ್ತದೆ ಎಂದು ತೋರಿಸುತ್ತಾರೆ. ಇದನ್ನು ಏಕೆ ಹೇಳಬೇಕಾಯಿತು ಎಂದರೆ, ಬಂಡೆಯ ಕಾವ್ಯ ಓದುವಾಗ ಉಂಟಾದ ಪರಿಪ್ರೇಕ್ಷ್ಯವೇ ಸೂಳೆ-ಗಿರಾಕಿ-ಪಿಂಪುಗಳ ರೂಪಕವನ್ನು ಬಳಸಿ ಈಗಿನ ಸಾಹಿತ್ಯಲೋಕವನ್ನು ಸೆರೆಹಿಡಿಯಲು ಪ್ರಚೋದಿಸಿರಬಹುದು. (ಕಾರಣವು ಕೊನೆಯ ಭಾಗದಲ್ಲಿ ನಿಮಗೆ ಕಾಣುತ್ತದೆ.) ಅದಕ್ಕಿಂತ ಮುಖ್ಯವಾಗಿ ಎಷ್ಟೇ ಬೇಡವೆಂದುಕೊಂಡರೂ ಬೋದಿಲೇರ್ ಮತ್ತು – ಆತ ತೀರಿದ ಮೇಲೆ ಪ್ರಕಟವಾದ- Le Spleen de Paris ಯ ಕನಸಿನ ಭಾಷೆಯ ಗದ್ಯದ ಜೊತೆಗೇ ಈ ರುದ್ರಪದ್ಯಗಳನ್ನು ಇಟ್ಟುನೋಡುತ್ತ ಹೋಗಬೇಕಾಯಿತು. ಚಾರಿತ್ರಿಕವಾಗಿ ಬೋದಿಲೇರ್ ಆರಿಸಿಕೊಂಡ ಅರಿಸ್ಟೋಕ್ರಸಿಯ ಪರವಾದ ನಿಲುವೊಂದನ್ನು ಬಿಟ್ಟು ಅನುಭವ, ಥೀಮುಗಳು, ಭಾಷೆ, ಐಚ್ಛಿಕ ಒಂಟಿತನ, ನಗರದ ಕುರಿತು ವ್ಯಗ್ರತೆ ಎಲ್ಲ ಈ ಪದ್ಯಗಳಲ್ಲಿ ಶಾಕಿಂಗ್ ಅನ್ನುವಷ್ಟು ಹತ್ತಿರವಾಗಿವೆ. ಇದು ಅಸಹಜವೇನಲ್ಲ. ಬೋದಿಲೇರನೇ ತಾನು ಎಡ್ಗರ್ ಅಲೆನ್ ಪೋ ನನ್ನು ಅನುವಾದಿಸಿದ್ದಕ್ಕೆ ಕಾರಣ ಕೊಡುತ್ತ “ಆತ ನಾನು ಯೋಚಿಸಿದ್ದನ್ನಷ್ಟೇ ಅಲ್ಲ; ನಾನು ಬರೆಯಬೇಕೆಂದುಕೊಂಡಿದ್ದ ವಾಕ್ಯಗಳನ್ನೂ ೨೦ ವರ್ಷ ಮುಂಚೆಯೇ ಬರೆದುಬಿಟ್ಟಿದ್ದ” ಎನ್ನುತ್ತಾನೆ (Quinn 15). ಆದರೆ ಶಾರ್ಲ್ ಬೋದಿಲೇರನ ಸಿಂಗ್ಯುಲರ್ ಆದ ಭಾಷೆಯ ಹಾಗೆಯೇ ರಾಜಶೇಖರ ಬಂಡೆಯ ಒಂದೊಂದು ಕವಿತೆಯೂ ಕನ್ನಡದಿಂದ ಹೊರಕ್ಕೆ ತೆಗೆಯಲಾರದಷ್ಟು ಬಿಗಿಯಾಗಿವೆ.
೧೬೨ ವರುಷಗಳ ಹಿಂದಿನ ಪ್ಯಾರಿಸ್ ನಲ್ಲಿ ಬದುಕಿದ್ದ ಬೋದಿಲೇರ್ ಗೆ ದುಷ್ಟವಾಗಿ ಕಂಡ ನಗರ ಅವನ ಅಭಿವ್ಯಕ್ತಿಯನ್ನು ರೂಪಿಸಿತು. ಈಗ ಅಷ್ಟಾವಕ್ರನಂತೆ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸೌಂದರ್ಯವನ್ನು ಅರಸಿ, ಸೃಜಿಸಿ ಬರೆಯುತ್ತಿರುವ ಬಂಡೆ, ಪಾಪದ ಪರಿಸರಕ್ಕೆ ಕವಿಯೊಬ್ಬ ಬಲಿಯಾಗಲಾರೆ ಎಂದು ಎದುರುನಿಂತಾಗ ಆಗುವ ಅಮೋಘ ಚರ್ನಿಂಗ್ ಮತ್ತು ಸಾಕ್ಷಾತ್ಕಾರವನ್ನು ತೋರಿಸುತ್ತಿರುವಂತಿದೆ.
ಆರಂಭದಲ್ಲಿ ಬೋದಿಲೇರ್ ನ “It is created with rage and patience” ಎಂಬ ವಾಕ್ಯವನ್ನು ಬಳಸಲು ಕಾರಣವಿದೆ. Les Fleurs du Mal (ಪಾಪದ ಹೂವುಗಳು) ಪ್ರಕಟವಾದ ಮೇಲೆ ನಾಗರಿಕ ಸಮಾಜ ಪ್ರಕ್ಷುಬ್ದಗೊಂಡಾಗ, ತನ್ನ ಅಮ್ಮನಿಗೆ ಬರೆದ ಪತ್ರದಲ್ಲಿ- ಹೊಸದನ್ನು ಶೋಧಿಸುವ ಚೈತನ್ಯ ಮತ್ತು ಫ್ರೆಂಚ್ ನ ಸಾಧ್ಯತೆಗಳನ್ನು ಅಗೆಯುವ ತನ್ನ ಆಸೆಗೆ ಈ ಮೂರ್ಖರು ಅಡ್ಡಿಪಡಿಸುತ್ತಿದ್ದಾರೆ ಎನ್ನುತ್ತಾನೆ. ಅಲ್ಲಿಯೇ ತನ್ನ ಪುಸ್ತಕವು “ವ್ಯಗ್ರತೆ ಮತ್ತು ತಾಳ್ಮೆಯಿಂದ” ನಿರ್ಮಿತಗೊಂಡಿದ್ದು ಎಂದು ತನ್ನ ಕೃತಿಯ ಕುರಿತು ಖಚಿತವಾಗಿ ನುಡಿಯುತ್ತಾನೆ. “ಚಿಟ್ಟೆ ರೆಕ್ಕೆಯ ರೇಟು” ಸಂಕಲನದಲ್ಲಿ ಈ ಕೆಳಗಿನ ಸಾಲುಗಳಿವೆ:
“ಕ್ಷಣಗಳಲ್ಲಿ ನಿನ್ನ ಬೆವರ ಮೈಯ್ಯಿಯ ಕುರಿತು
ಕವಿತೆ ಬರೆದು ಬಿಸಾಡುತ್ತಿದ್ದೆ” (ಬಂಡೆ, ೬೦)
ಎಂದು ಬರೆಯುವ ಬಂಡೆ,
“ಬದುಕು ದೇಹಗಳನ್ನು ಕೊಟ್ಟುಬಿಡಬಹುದು…
… ಆದರೆ ಈ ಕವಿತ್ವವನ್ನು ಕೊಡುವ ಕಡುಪಾಪದ
ಕೆಲಸವನ್ನ ನಾನು ಮಾಡಲಾರೆ“ (ಬಂಡೆ, ೧೦೪)
ಎಂದೂ ಬರೆಯುವಾಗ ಆತನ ಆವೇಶ ಮತ್ತು ತಾದಾತ್ಮ್ಯಗಳೆರಡೂ ಕಾಣಿಸಿಕೊಳ್ಳುತ್ತವೆ.
****
ಈಗಿನ ತಲೆಮಾರಿನ ಮುಕ್ಕಾಲು ವೀಸಾ ಕವಿಗಳು ಅರ್ಬನ್ನು, ಅಧ್ಯಾತ್ಮ ಎಂದು ಬಳಾಂಗು ಬಿಡುತ್ತ, ಕಾವ್ಯ ಕೆತ್ತುತ್ತಿದೇವೆ ಎಂಬ ಭ್ರಮೆಯಲ್ಲಿದ್ದರೆ – ನಗರಕ್ಕೆ ನೇರವಾಗಿ ಎದುರಾಗುವ ದಿಟ್ಟತನ ಬಂಡೆಯಲ್ಲಿದೆ. “ನಾಗರೀಕತೆಯ ನಟ್ಟನಡುವಲ್ಲಿ“ ಕವನ ಗಾಜಿನ ಮಡಕೆಯೊಳಗಿನ ಮೀನನ್ನು ಉಪಾಧಿಯಾಗಿಸಿಕೊಂಡು ಸ್ವಾತಂತ್ರ್ಯ-ಬಂಧನಗಳ ಕುರಿತು ಹೇಳಿದರೆ,
“…ಏನು ಮಾಡಲಿ ಏಕಾಂತದಲ್ಲಿ ಹಾಡು
ಕೇಳೋಕೆ ಬೆಂಗಳೂರು ಯಾವ ತರಹದಲ್ಲೂ
ತಲೆಯಾಡಿಸುವುದೇ ಇಲ್ಲ…”
ಈ ಪದ್ಯದಲ್ಲಿ ಹೀಗೆ ಬರೆದು ಅರ್ಬಾನಿಟಿಯನ್ನು ಕೇವಲ ಐಡಿಯಾವಾಗಿ ಮಾತ್ರವೇ ಗಣಿಸದೇ, ಅದು ನಿರ್ಧಿಷ್ಟ ನಗರವೇ ಆಗಿ ವ್ಯಕ್ತಿಯ ಮೇಲಾಗುವ ಮಾಡುವ ಪರಿಣಾಮವನ್ನು ಕಾಣಿಸುತ್ತಾನೆ. ‘ನಾಗರೀಕತೆ-ಕತೆ’ ಯನ್ನು ಕುರಿತು ವಿಫುಲವಾಗಿ ಪದ್ಯಗಳನ್ನು ಬರೆದ ನಾಗರಾಜ ವಸ್ತಾರೆ ಮತ್ತು ನಗರವನ್ನು ನೋಡುವ ಬಂಡೆಯ ನೋಟದಲ್ಲಿ ಕುತೂಹಲಕರ ವ್ಯತ್ಯಾಸಗಳಿವೆ. ವಸ್ತಾರೆಯ ಭಾಷೆ ಅವರ ಕಾವ್ಯದಷ್ಟೇ “ಕಟ್ಟುವಿಕೆ”ಯ ಹಾಗಿದ್ದರೆ, ಬಂಡೆಯ ಕಾವ್ಯಸಲ್ಲಿಕೆ “ಬಿಚ್ಚುತ್ತ” ನಿರುಮ್ಮಳವಾಗುತ್ತದೆ. ಇದಕ್ಕೆ ಕಾರಣ ಬಂಡೆ ಏಕಕಾಲಕ್ಕೆ ನಗರದಲ್ಲಿದ್ದೇ ನಗರವನ್ನು ಹಾಗೂ ಇತರ ಕೆಲವು ರಚನೆಗಳಲ್ಲಿ ಮೂಲದ ಊರಿನಿಂದ ನಗರವನ್ನು ಗ್ರಹಿಸುವುದು. ಅದಕ್ಕೆ ಸಂಕಲನದ “ಅಪ್ಪನ ಹೊಲದೊಳು ಠಕ್ಕರು ಬಂದರೆ”, “ನೆಲವ ಹರಿದು ಬೀಜವಿಟ್ಟು” ಪದ್ಯಗಳು ಶಕ್ತ ಉದಾಹಾರಣೆಗಳು. “ಮತ್ತ ಮತ್ತದೇ ಹುಡುಗ” ದಲ್ಲಿ ಬಂಡೆ ಬಳಸುವ ಭಾಷೆ ಈ ಸಂಕಲನಕ್ಕೇ ಸೇರಿಲ್ಲವೇನೋ ಎಂಬಂಥ ಜನಪದ ಲಯದಿಂದ ತುಂಬಿದೆ. ಇಲ್ಲಿ:
“ಎದೆಮಟ್ಟ ಬೆಳೆದ ಮಗ ಗೇಯ್ಲಿಲ್ಲ ಗೆತ್ತಿಲ್ಲ
ಲಿಂಗಾನ ಕಟಕೊಂಡು ತಿರುಕಾದನೋ
ತುಂಡೈಕ್ಳು ಸಂಗಾನ ಆಗಾಗೆ ಮಾಡ್ಯಾನು
ಉಡುದಾರ ಬಿಚಕೊಂಡು ಓಡುತಾನೋ
ಉಂಡಿಲ್ಲ ಬಿಡಲಿಲ್ಲ ಅಗಲಾದ ಎದೆಯಾದ
ಬೆನ್ನೂರ ಬಯಲಂತೆ ಹರಡುತಾನೋ…” (ಬಂಡೆ, ೫೧)
ಸಂಕಲನದ ತುಂಬ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಇನ್ನೊಂದು ಥೀಮ್ ಎಂದರೆ ಕಾಲ. ಕೆಲವೊಮ್ಮೆ ಅದು ಎಣಿಸಬಲ್ಲ ದಿನಗಳಲ್ಲಿದ್ದರೆ, “ಕಾಲಾತೀತ” ದಂಥ ರಚನೆಗಳು ಒಂದೇ ಗುಕ್ಕಿನಲ್ಲಿ ಮಿಲಿಯಾಂತರ ವರ್ಷಗಳನ್ನು ಪ್ರಜ್ಞೆಯಲ್ಲಿ ಓಡಿಸಿಬಿಡುತ್ತದೆ. ಇದು ಅನೇಕ ಲೇಖಕರನ್ನು ಕಾಡಿದ ವಸ್ತುವೇ ಆಗಿದ್ದರೂ ಬಂಡೆಯಲ್ಲಿ ಅದು ವಿಶಿಷ್ಟವಾಗುವುದು ಕಾಲಪ್ರಜ್ಞೆಯು ಇದ್ದಕ್ಕಿದ್ದಂತೆ ಹಿಂದಕ್ಕೂ, ಮುಂದಕ್ಕೂ ತುಯ್ದರೂ ಸಹ ಕವಿತ್ವದ ದೇಹಕ್ಕೂ, ಓಘಕ್ಕೂ ಸ್ವಲ್ಪವೂ ಕುಂದುಂಟಾಗುವುದಿಲ್ಲ. ಸಮಯವು ಎಷ್ಟೇ ಕ್ಲಟರ್ಡ್ ಆಗಿ ಚೆಲ್ಲಿಕೊಂಡಿದ್ದರೂ ಓದುಗನ ಅನುಭವದಲ್ಲಿ ಮಾತ್ರ ಅದು ಸಮಗ್ರವಾಗಿಯೇ ಹೊಂದಿಕೊಳ್ಳುವ ಸೋಜಿಗ. ಮ್ಯಾಜಿಕ್ ಮಾಡುವಾಗ ಡಿಸ್ಟ್ರಾಕ್ಷನ್ ಕೂಡ ಹೇಗೆ ಒಂದು ಉಪಾಯವೋ ಹಾಗೆಯೇ, ಈ ತುಯ್ಯುವಿಕೆಯು ಓದುಗನನ್ನು ಮುಗ್ಧವಾಗಿಸಿ ಹಿಡಿದಿಟ್ಟುಕೊಳ್ಳುವ ತಂತ್ರವೇ ಆದ ಹಾಗಿದೆ. ಇಲ್ಲಿ ನೋಡಿ:
“ನಮ್ಮ ಗಾಂಧಿ ಬುದ್ಧ ಗೂಡ್ಸೆ ಅಂಗೂಲಿ ಲಾಲಾ
ಪಾಲಾ ನೆಹರೂ ಸುಭಾಷ್ ರಂಥವರು ಬರುತ್ತಿದ್ದಾರೆ
ಅಲ್ಲೆಲ್ಲೋ ಮಾನ್ಯ ಮೋದಿ ದಾರಿತಪ್ಪಿ
ಮುಂದಕ್ಕೆ ಹೋದಂತಿದೆ,
ಸ್ವಲ್ಪ ಹಿಂದಕ್ಕೆ ಕರೆಯಿರಿ“ (ಬಂಡೆ, ೬೨)
ಈ ಇಡೀ ಪದ್ಯ ಮನುಷ್ಯ ಚರಿತ್ರೆಯನ್ನು ಹಿಂದಕ್ಕೋಡಿಸುತ್ತ ತೆಗೆದುಕೊಂಡು ಹೋದರೆ “ ಅಲ್ಲೆಲ್ಲೋ ಮಾನ್ಯ ಮೋದಿ ದಾರಿತಪ್ಪಿ / ಮುಂದಕ್ಕೆ ಹೋದಂತಿದೆ” ಎಂಬ ಸಾಲುಗಳು ಚಕ್ಕನೆ ವ್ಯಂಗ್ಯ ಚಿಮ್ಮಿಸಿ, ವಿಕಾಸ ಮತ್ತು ಚರಿತ್ರೆಯನ್ನು ಪರಸ್ಪರ ಉಜ್ಜಿಬಿಡುವ ಚೋದ್ಯ. ಇದು ಕೇವಲ ಪರಿಣಾಮಕ್ಕೆ ಮಾತ್ರವೇ ಆಗಿದ್ದರೆ ಇಡೀ ಪದ್ಯ ಕುಸಿಯಲು ಇದೊಂದೇ ಸಾಲು ಸಾಕಿತ್ತು. ಆದರೆ ಅದೇ ಸಾಲು ಆರ್ಗ್ಯಾನಿಕ್ ಆಗಿ ಇಡೀ ಪದ್ಯವನ್ನು ಒಂಟಿಕಂಬದಂತೆ ನಿಲ್ಲಿಸುತ್ತದೆ ಸಹ. ಈ ಬಗೆಯ ಅನೇಕ ಪದ್ಯಗಳು ಇಲ್ಲಿವೆ. ಇದು:
“ಮುಂದೊಂದು ದಿನ ನೀನು ಮುದುಕಿಯಾದಾಗ
ನಾನು ಮುದುಕನಾಗಿರುತ್ತೇನೆ,
ಸಧ್ಯದ ವಾಸ್ತವ ಭವಿಷ್ಯದ ಭೂತವಾದಾಗ ಹೌದು
ಖಂಡಿತ ನೀನು ಮುದುಕಿಯಾಗಿರುತ್ತೀಯ…” (ಬಂಡೆ, ೧೯)
ಹಿಂದೆ-ಸದ್ಯ-ಮುಂದೆ ಎಲ್ಲ ಕಡೆಯಿಂದಲೂ ಕೇಂದ್ರವಸ್ತುವನ್ನು ಗಮನಿಸುವಂತೆ ಈ ಪದ್ಯ ಓದುಗನನ್ನು ಒತ್ತಾಯಿಸುತ್ತದೆ. ಒಂದೇ ಪದ್ಯವನ್ನು ನಾವೇ ಬಿಡಿಸಿ ಕಟ್ಟಿಕೊಳ್ಳುವ ಆಟದ ಅವಕಾಶವನ್ನು ಪುಷ್ಕಳವಾಗಿ ನೀಡುತ್ತದೆ. ಇನ್ನೊಂದು ನೋಡಿ:
“ಮುದುಕ, ಒಮ್ಮೆ ಜಾರಿಬಿದ್ದು ಮುಗಿದುಹೋದ,
ಕಾಲವಾದ ಮುದುಕನನ್ನ ನೋಡುತ್ತ ನೀನು ನಿಂತೆ
ದಿಕ್ಕುಗೆಟ್ಟವನಂತೆ ನಾನು ಸುತ್ತುತ್ತಲೇ ಇದ್ದೆ,
ಇದೀಗ, ಇದ್ಯಾರೋ ಪುಟ್ಟ ಕಾಲು ಪುಟ್ಟ ಕೈಗಳ
ಹುಡುಗನೊಬ್ಬ ನನ್ನೆಲ್ಲ ಅಂಗಾಂಗಳನ್ನ ಕಳೆದು
ಚೆನ್ನಾಗಿ ಥಳಿಸುತ್ತಲಿದ್ದಾನೆ, ನಾನು ಓಡುತ್ತಲಿದ್ದೇನೆ“ (ಬಂಡೆ, ೯೯)
ಈ ಪದ್ಯದಲ್ಲಿ ಒಬ್ಬ ಮುದುಕ, ಒಬ್ಬ ಹುಡುಗ ಮತ್ತು ಒಂದು ಸೈಕಲ್ಲಿನ ಚಕ್ರದ ಪ್ರತಿಮೆಗಳಿವೆ. ಕಾಲದ ಓಟವನ್ನು ದೂರದಲ್ಲಿ ನಿಂತು ಗ್ರಹಿಸದೇ ಈ ಪದ್ಯ, ಅದರ ಜೊತೆಗೇ ಓಡುತ್ತ, ಒಂದು ಕ್ಷಣದಲ್ಲಿ ಅದರಿಂದ ಕಳಚಿಕೊಳ್ಳುತ್ತದೆ. ಆದರೆ ಮುಂದುವರೆಯುವ ಕಾಲದ ಸಾತತ್ಯವನ್ನು ಹುಡುಗನೊಬ್ಬ ಚಕ್ರವನ್ನು ಆಟಾಡಿಸಿಕೊಂಡು ಹೋಗುವುದರಲ್ಲಿ ಕಟ್ಟುತ್ತದೆ. “ನಾವಿಬ್ಬರೂ ಕೂತಲ್ಲೇ ಕಲ್ಲಾಗಿ ಹೋದಾಗ“ ಸಹ ಈ ವಸ್ತುವನ್ನು ಮತ್ತೊಂದು ಮಜಲಿನಲ್ಲಿ ನೋಡುವ ಪದ್ಯ.
*****
“ನನ್ನದೊಂದು ಪುಟ್ಟ ಕೋಣೆಯ ಬಾಗಿಲು” ಪದ್ಯವಂತೂ ನನ್ನನ್ನು ಕಂಗೆಡಿಸಿಬಿಟ್ಟಿತು. ಕಾರಣ ಪದ್ಯವಲ್ಲ. ಆದರೆ ಬೋದಿಲೇರ್ ನ “La Chambre Double” (The Double Room: Le Spleen de Paris) ನ ಪಕ್ಕಾ ಪದ್ಯರೂಪದಂತಿದೆ ಈ ಕವನ. ಕೋಣೆ, ಕೋಣೆಯೊಳಗಿನ ಮಬ್ಬುತನ, ವಸ್ತುಗಳು, ಗಡಿಯಾರ, ನಿಂತೇಹೋಗಿರುವ ಕಾಲವನ್ನು ಓದುಗ ಮುಟ್ಟಬಲ್ಲಂತೆ ಚಿತ್ರಿಸುವ ಭಾಷೆ. ಒಂದೂವರೆ ಶತಮಾನಗಳ ಅಂತರದ ಇಬ್ಬರು ಕವಿಗಳ ಅನುಭವ ಮತ್ತು ಗ್ರಹಿಕೆಯ ಸಾಮ್ಯತೆ ಆಶ್ಚರ್ಯದ ಹೊರತು ಇನ್ನೇನನ್ನು ಉಂಟುಮಾಡಬಹುದು?
ಬಂಡೆಯ ಅನೇಕ ಕವಿತೆಗಳಲ್ಲಿ ಒಂದು ಬಗೆಯ ಸ್ಥಬ್ಧತೆ ಅನುಭವಕ್ಕೆ ಬರುತ್ತದೆ. ಸೋಮಾರಿತನದ ಕಾರ್ಯರಾಹಿತ್ಯವಲ್ಲ. ಬದಲು ಟ್ಯೂನಿಂಗ್ ಫೋರ್ಕ್ ಅನ್ನು ಬಡಿದುಬಿಟ್ಟಾಗ ಅದು ಪ್ರಕ್ಷುಬ್ಧವಾಗಿ ಅಲುಗುತ್ತಿರುವ ಹಾಗೆಯೋ, ಬಲ್ಬಿನೊಳಗಿನ ಟಂಗ್ಸ್ಟನ್ ಬೆಳಕನ್ನು ಆವಾಹಿಸಿಕೊಳ್ಳುವ ಆತುರದಲ್ಲಿ ತಲ್ಲಣಿಸುತ್ತಿರುವ ಹಾಗೆಯೋ ಒಂದು ಸಂಚಲನ ಅದು. ಚಲನೆಯೇ ಇಲ್ಲದ ನಿರ್ವಾತದಲ್ಲಿ ಕವಿ ಇದ್ದು ಕೇವಲ ಪ್ರಜ್ಞೆಯನ್ನಷ್ಟೇ ದಶದಿಕ್ಕುಗಳಿಗೂ ಅಟ್ಟಿ ಓದುಗ ಅದರ ಹಿಂದೆ ನಾಯಿಯಂತೆ ಓಡುವ ಹಾಗಾಗುತ್ತದೆ.
ವೆರೋನಿಕಾ ಅಂಥ ಪದ್ಯಗಳಲ್ಲೊಂದು. ಇದೂ ಸಹ ಒಂದು ಕೋಣೆಯೇ; ಜೈಲು. ಆದರೆ ಅಂಥ ದುರ್ಭರತೆಯಲ್ಲೂ ಕವಿ ತನ್ನ ಮನಸ್ಸನ್ನು ವಿಸ್ತರಿಸುವ ವೇಗ ಮತ್ತು ವ್ಯಾಪ್ತಿ ಒಂದು ಬಗೆಯ ವಿಚಿತ್ರ ಚೈತನ್ಯವನ್ನು ಹೊತ್ತಿಸುವಂತಿದೆ. “ಆಫೀಸಿನ ಜೇಡ” ವನ್ನೇ ನೋಡಿ:
“ನಾನು ಹಾಸಿಗೆಯ ಮೇಲೆ ಮಲಗಿ
ರೋಗಗಳನ್ನು ಒಂದರ ಮೇಲೊಂದರಂತೆ ಹೊದ್ದುಕೊಂಡಿದ್ದೆ,
ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದುಕೊಂಡಿದ್ದೆ“ (ಬಂಡೆ, ೬೧)
ಈ ಪದ್ಯದಲ್ಲಿ ಮುಂದೆ ಕವಿ ತನ್ನ ಜಡತ್ವದಲ್ಲಿಯೂ ಸುತ್ತಲಿನ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಅದರ ಜೀವಂತಿಕೆಯಲ್ಲಿ ಹಿಡಿಯುತ್ತಾನೆ. “ನಾಯಿ ಬಾಯಲ್ಲಿ ನನ್ನ ಮೂಳೆ“, “ನಾಯಿಪಾಡು” ಪದ್ಯಗಳೂ ಸಹ ಇದೇ ರೀತಿಯಲ್ಲಿ ಜಡತ್ವ ಮತ್ತು ಜೀವಂತಿಕೆಗಳು ಪರಸ್ಪರ ಸೆಣೆಸುವಂತೆ ಮಾಡಿ ಪದ್ಯದಲ್ಲಿ ಪ್ರಾಣಸಂಚಾರ ಮಾಡಿಸಿದಂತೆ ಭಾಸವಾಗುತ್ತದೆ. ತಾನೇ ಬಯಸಿ ನಿರ್ಮಿಸಿಕೊಂಡ, ಕಾಪಿಟ್ಟುಕೊಂಡ ಏಕಾಕಿತನವು ಹೊರಗಿನ ಕೊಚ್ಚೆಯಿಂದ ಈ ಕವಿಯನ್ನೂ ಅವನ ಕಾವ್ಯವನ್ನೂ ಬದುಕಿಸಿವೆ. ಅದನ್ನು ಆತನ ಮಾತುಗಳಲ್ಲೇ ಕೊಡುವುದಾದರೆ-
“ಸಹಜ ಬದುಕಿನಾಚೆಗೆ ಈ ಕೋಣೆ ನನಗೆ ಆಪ್ತವಾಗಿ
ಕಿಟಕಿಯಿಂದಾಚೆಗಿನದ್ದೆಲ್ಲ ಯಾವನೋ ಬೋಳಿಮಗನ
ಕುಕೃತ್ಯವೆನಿಸುತ್ತದೆ, ಇನ್ನೊಂದು ಗುಟುಕು ವ್ಹಿಸ್ಕಿ ಜಾರುತ್ತದೆ,
ಸಿಗಾರ್ ನ ಹೊಗೆ ವೇಶ್ಯೆಯಾಗುತ್ತದೆ..” (ಬಂಡೆ, ೧೦೭)
***
ಸಾಹಿತ್ಯ ಮತ್ತು ಮೊರಾಲಿಟಿಯ ಸಂಬಂಧ, ವಿರಸಗಳೇನು ಎನ್ನುವುದು ಯಾವತ್ತಿನ ಅಭಿಜಾತ ಪ್ರಶ್ನೆ. ಬೊದಿಲೇರ್ Les Fleurs du Mal ಬರೆದಾಗ, ನೊಬೊಕೋಫ್ ನ ಲೊಲಿಟಾ ಹೊರಬಂದಾಗ, ಲಾರೆನ್ಸ್ ನ The Lady Charterly’s Lover ಇಂಗ್ಲೆಂಡಿನಲ್ಲಿ ಬ್ಯಾನ್ ಆದಾಗ ಅದಕ್ಕೆ ಕಾರಣವಾಗಿದ್ದದ್ದು ಇದೇ ಸಮಸ್ಯೆ. ಬೋದಿಲೇರ್ ಗಿಂತ ಆರೆಂಟು ತಿಂಗಳು ಕಿರಿಯನಾದ ಗುಸ್ತಾವ್ ಫ್ಲೋಬೆರ್ ಮದಾಮ್ ಬೊವರಿ ಪ್ರಕಟಿಸಿದಾಗ ಅದನ್ನು ನಿಷೇಧಿಸಲಾಯಿತು. ೧೯ನೇ ಶತಮಾನದ ಫ್ರಾನ್ಸ್ ನ ಆತ್ಮವಂಚಕ ಸಮಾಜಕ್ಕೆ ಇರಿಯುವಂತೆ ಮಾಡಿದ್ದ ಫ್ಲೊಬೆರ್ ನಂತರ ಕೋರ್ಟಿನಲ್ಲಿ ಬಡಿದಾಡಬೇಕಾಯಿತು. ಬೋದಿಲೇರನ ಕವನ ಸಂಕಲನಕ್ಕೂ ಇದೇ ಗತಿಯಾದಾಗ ಅವನ ಜೊತೆಗೆ ಗಟ್ಟಿಯಾಗಿ ನಿಂತದ್ದು ಫ್ಲೊಬೆರ್ ನೇ. ಫ್ಲೊಬೆರ್ ಗದ್ಯಕಾರನಾದ್ದರಿಂದ ಅವನ ಕೃತಿಗಳು ಸಮಾಜದ ನಯವಂತಿಕೆಯನ್ನು ಟೀಕಿಸುತ್ತ ಒಂದು ಬಗೆಯಲ್ಲಿ ಉನ್ನತ ನೈತಿಕತೆಯನ್ನು ಪ್ರತಿಪಾದಿಸಿದ್ದು ಗೋಚರವಾಗುತ್ತಿತ್ತು. ಆದರೆ ಬೋದಿಲೇರ್ ಮಧ್ಯಮವರ್ಗದ ಹಿಪಾಕ್ರಸಿಯಿಂದ ಬೇಸತ್ತು ನೇರವಾಗಿಯೇ ಸಾಹಿತ್ಯ ಮತ್ತು ನೈತಿಕತೆಗಳಿಗೆ ಏನೇನೂ ಸಂಬಂಧವಿಲ್ಲವೆಂದು ಘೋಷಿಸಿದ. “A whole crowd of people imagine that the aim of poetry is some sort of lesson, that its duty is to fortify conscience, or to perfect social behavior, or even briefly look into ourselves. Poetry will be seen to have no other aim but itself.” (Ibid, p. 267).
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಗೆಯ ಲೇಖಕರೇ ವಾಸ್ತವದಲ್ಲಿ ಆಳದ ನೈತಿಕತೆಯನ್ನು ಮನುಷ್ಯ ಸಮಾಜದಲ್ಲಿ ಬೆಳೆಸಲು ಕಾರಣವಾದವರು. ಕಲೆಯನ್ನು ಕಾನೂನಿನ ಹಿಡಿತ ಮತ್ತು ಸಾಮಾಜಿಕ ನೈತಿಕತೆಗಳಿಂದ ರಕ್ಷಿಸಿಕೊಂಡು ಸೃಷ್ಟಿಶೀಲತೆಯನ್ನಷ್ಟೇ ಕೇಂದ್ರೀಕರಿಸಿಕೊಂಡಾಗ, ಸಹಜವಾಗಿಯೇ ಸಾಹಿತ್ಯ ಮಾನವೀಯವಾಗುತ್ತದೆ. ಅದೇ ಸರಳ ಮಾನವೀಯ-ನೈತಿಕತೆಯನ್ನೂ ಬೆಳೆಸುತ್ತದೆ. ಇಲ್ಲದಿದ್ದರೆ, “Art for the sake of art” ಎಂದು ಹೇಳಿ ಅದರ ಹಿಂದೆಯೇ “All art is quite useless” ಎಂದೂ ಬರೆದ ಆಸ್ಕರ್ ವೈಲ್ಡ್ “ಪಿಕ್ಚರ್ ಆಫ್ ಡೋರಿಯನ್ ಗ್ರೇ” ನಲ್ಲಿ ಕಡೆಗೆ ಯವ್ವನಕ್ಕೆ ಮಾರಿಕೊಂಡ ಆತ್ಮವನ್ನು ವಾಪಾಸ್ ಮರಳಿಸದೇ ಇರುತ್ತಿರಲಿಲ್ಲ. ಈ ಮಾತು ಇಲ್ಲೇಕೆ ಬಂತು ಎಂದರೆ ಬಂಡೆಯ ಸಂಕಲನದಲ್ಲಿನ ಮೂರು ಮುಖ್ಯ ಕವಿತೆಗಳಿಗೆ ಹಿನ್ನೆಲೆಯಾಗಿ.
ಫ್ರಾನ್ಸ್ ನಲ್ಲಿ ಆದ ಹಾಗೆ ನಮ್ಮ ಬಂಡೆಯ ಕವಿತೆಗಳನ್ನು ಆಂಟಿ-ಸೋಷಿಯಲ್ ಎಂದು ಇಲ್ಯಾರೂ ಗಲಾಟೆ ಮಾಡಲಿಲ್ಲ. ಕಾಲ ಬದಲಾಗಿರುವುದು ಒಂದು ಕಾರಣವಾದರೆ, “ಅವ್ರೇನ್ ಕಿಸಿತಾರೆ” ಎಂದು ನಮ್ಮ ಜನ ಬರಹಗಾರರನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳದೇ ಇರುವುದು ಇನ್ನೊಂದು ಕಾರಣವಿರಬಹುದು. (ಅಥವಾ ನಮ್ಮಲ್ಲಿ ಕಾವ್ಯಕ್ಕೆ ಮತ್ತು ಮೊರಾಲಿಟಿಗೆ ಸಂಬಂಧ ಸಾಯಲಿ, ಕವಿಗಳಿಗೆ ಮತ್ತು ಮೊರಾಲಿಟಿಗೇ ಸಂಬಂಧವಿರದೇ ಇರುವುದು ಮುಖ್ಯ ಕಾರಣ ಎನ್ನಿಸುತ್ತದೆ!) ಬೋದಿಲೇರ್ ನಲ್ಲಿನ ಹಾಗೆಯೇ ಬಂಡೆಯ ಕಾವ್ಯದಲ್ಲಿಯೂ ಮುಖ್ಯವಾದ ವಸ್ತು ಪ್ರೇಮ ಮತ್ತು ಸೆಕ್ಸ್. ಈ ಎರಡರ ಕುರಿತು ನೇರವಾಗಿ ಆಡುವ ೨೪ ಪದ್ಯಗಳು ಈ ಸಂಕಲನದಲ್ಲಿವೆ. ಅದರಲ್ಲಿ ಮೂರು ಪದ್ಯಗಳು ಅಮೋಘವಾಗಿವೆ. ಮೇಲ್ನೋಟಕ್ಕೆ ದೈಹಿಕತೆ ಮತ್ತು ವಾಂಛೆಗಳನ್ನು ಕುರಿತು ಬರೆಯಲಾದಂತೆ ಕಾಣುವ ಪದ್ಯಗಳು, ಅವುಗಳ ಆಂತರಿಕ ರಚನೆಯಲ್ಲಿ ಹೇಗೆ ಆಳದ ಕೊಳಕನ್ನು ಏತದಂತೆ ಎತ್ತಿ ಚೆಲ್ಲಿ ಶುದ್ಧವಾಗುವ ಮತ್ತು ಸುತ್ತಲನ್ನು ಸೌಂದರ್ಯದಿಂದ ಅಲಂಕರಿಸಲು ಹವಣಿಸುತ್ತವೆ ಎಂಬುದು ಕುತೂಹಲಕರ.
ಈ ಮೂರು ಪದ್ಯಗಳು: ಅದೆಂಥದೋ ಬೆಳಕಲ್ಲದ ಬೆಳಕು, ಮತ್ತೆ ಮತ್ತದೇ ಹಾಡು, ಶವಸಂಭೋಗ,
ಕಾಮ ಅಭಿವ್ಯಕ್ತವಾಗುವ ಮೂರು ಸನ್ನಿವೇಷ -ಸಂಕಟಗಳನ್ನು ಈ ಪದ್ಯಗಳು ಬೆಚ್ಚಿಬೀಳಿಸುವ ತೀವ್ರತೆಯಲ್ಲಿ ಚಿತ್ರಿಸುತ್ತವೆ. ಮೊದಲನೇಯ ಪದ್ಯ “ಅದೆಂಥದೋ ಬೆಳಕಲ್ಲದ ಬೆಳಕು” ಹೀಗೆ ಆರಂಭವಾಗುತ್ತದೆ:
“ಈ ಕೋಣೆಯ ತುಂಬ ಹೂಗಳನ್ನು
ಚೆಲ್ಲಿದ ಹಾಸಿಗೆಯನ್ನು ಹಾಸಲಾಗಿದೆ,
ಅದರ ಕೆಳಗೆ ನಮ್ಮವರ ಇತಿಹಾಸವಿದೆ,
ಮೇಲೆ ಮಲಗಲು ನನ್ನನ್ನೂ ಒಂದು
ಮಗುವಿನಂತಹ ಹೆಣ್ಣನ್ನೂ ತಳ್ಳಿದ್ದಾರೆ“ (ಬಂಡೆ, ೪೯)
ಮೊದಲ ರಾತ್ರಿ ಆರಂಭವಾಗಿದೆ. ಮತ್ತದೇ ಬಂಡೆ ಸೃಷ್ಟಿಸುವ ಕೋಣೆ. ಸಂಬಂಧಕ್ಕೆ ಏನೋ ಒಂದು ಹೆಸರಿಟ್ಟುಕೊಂಡು ಒಟ್ಟಾಗಿಯೂ ಬಿಡಿಬಿಡಿಯಾಗಿರುವ ಇಬ್ಬರು. ಮುಕ್ಕಾಲು ಪೇಜಿನ ಪದ್ಯದಲ್ಲಿ ದಾಂಪತ್ಯ, ಸಖ್ಯ, ಕಾಮ, ನಿತ್ಯ ಎಲ್ಲವನ್ನೂ ಎರಚಿಬಿಡುತ್ತದೆ. ಬೆಳಗು ಮತ್ತು ರಾತ್ರಿಗಳ ಸೇರಿದ ಪೂರ್ಣ ದಿನವನ್ನು ಇಬ್ಬರು ವ್ಯಕ್ತಿಗಳ ಸಂಬಂಧದಲ್ಲಿ ಕಟ್ಟಿ, ಆವರಣಕ್ಕೆ ಸಂಬಂಧವೇ ಇರದ ಹೊಸದೇ ಕಾಣ್ಕೆಯನ್ನು ಕೊಡುವ ಈ ಪದ್ಯ ಇತ್ತೀಚಿನ ಕನ್ನಡ ಕಾವ್ಯದಲ್ಲಿಯೇ ಎತ್ತರದ್ದು.
ಮತ್ತೆ ಮತ್ತದೇ ಹಾಡು ಎನ್ನುವ ಎರಡನೇ ಪದ್ಯ ವೇಶ್ಯೆಯೊಬ್ಬಳ ಮಾತುಗಳಲ್ಲಿದೆ.
“ಗೇಟೆಳೆದು ಒಳಬನ್ನಿ ಬೆತ್ತಲಿರುವೆನು ಇನ್ನು
ಉಂಡು ಹೋದವ‘ನಲ್ಲ‘ ನಿಮ್ಮ ಸರದಿ
ಜಾರಿರುವ ಸೆರಗಿನಲಿ ಗರಿಯ ನೋಟುಗಳಿಲ್ಲ
ಬರಿಯ ನೋವುಗಳಷ್ಟೆ ನಿಮಗಿದೇಕೆ
ಹದಿನಾರು ವರುಷಗಳು ಇಲ್ಲೆ ಸರಿಯಿತು ಈಗ
ರಾತ್ರಿ ಬೆಳಕುಗಳೆಲ್ಲ ಒಂದೆ ತಾನೆ
ಬಟ್ಟೆ ಕಳಚಿಡಿ ಅಲ್ಲಿ ಮುಖವಾಡ ಧರಿಸಲಿಕ್ಕೆ…” (ಬಂಡೆ, ೬೭)
ಮತ್ತೆ ರಾತ್ರಿ-ಹಗಲಿನ ಇಮೇಜ್. ಈ ಕವನವೂ ಸಹ ಕಾಮವನ್ನು ಇನ್ನೊಂದು ಸಂಬಂಧಸಾಧ್ಯತೆಯಲ್ಲಿಟ್ಟು ಪರೀಕ್ಷಿಸುತ್ತ, ಅದರ ಹೇಸಿಗೆತನವನ್ನು ಬಟಾಬಯಲು ಮಾಡುತ್ತದೆ. ಒಂದೇ ಪದ್ಯದಲ್ಲಿ ಅವಳ ವ್ಯವಹಾರಜ್ಞಾನ, ದಯನೀಯತೆ, ಹೆಣ್ತನ, ದಿಟ್ಟತೆಗಳನ್ನು ದಾಖಲಿಸಿ ಕಡೆಗೆ-
ಗಂಡ ಸತ್ತಿರಲಂತ ಹರಸಿ ಹೋಗಿ.
ಎಂಬಂಥ ಬರೆ ಎಳೆಯುವ ವಾಕ್ಯವನ್ನು ವಿಟನಿಗೂ, ಓದುಗನಿಗೂ ರಾಚಿ ಇಬ್ಬರೂ ಒಂದೇ ಎನ್ನುವಂಥ ಆತ್ಮನಿರೀಕ್ಷೆಗೆ ಹಚ್ಚುವ ಪ್ರತಿಭೆ ಈ ಪದ್ಯದ್ದು.
ಕಡೆಯ ಪದ್ಯ ಶವಸಂಭೋಗ. ಅತ್ಯಾಚಾರದ ಕುರಿತು ಕನ್ನಡದಲ್ಲಿ ಬಂದ ಏಕೈಕ ಬೆಂಕಿ ಪದ್ಯ ಇದಿರಬಹುದು.
“ಬಿದ್ದವನೇ… ಬೇಡಿದರೂ, ಕಿರುಚಿದರೂ, ರಕ್ತ ಸಂಬಂಧದೆಲ್ಲ
ಮಾದರಿಗಳೆಲ್ಲವನೆದುರಿತ್ತರೂ ಬಗ್ಗಲಿಲ್ಲ, ಬಿದ್ದವನು ಏಳಲಿಲ್ಲ,
ಅದ್ಯಾವನಿಗೆ ಹುಟ್ಟಿದ ಹಾರ್ಮೋನೋ ರಿಯಾಕ್ಟಾಗಿ
ಅಂಗೈ ಚೂರಿಗಳಲ್ಲಿರಿದೂ ಇರಿದೂ ಕೊಂದವು, ಸತ್ತೆ.” (ಬಂಡೆ, ೭೦)
ಇಡೀ ಕೃತ್ಯದ ಭೀಕರತೆಯನ್ನು ಒಂದೋ ಎರಡೋ ಉಸಿರಿನಲ್ಲಿಯೇ ವಿವರಿಸಿ, ಕಾಮದ ಇನ್ನೊಂದು ಹೊಲಸು ಮಗ್ಗಲನ್ನು ವಿಷಾದ, ನಾಚಿಕೆ ಹಾಗೂ ಸಂಕಟಗಳಲ್ಲಿ ಓದುಗನೆದುರು ಸುರಿಯುತ್ತದೆ. ಹೆಂಡ, ಕಾಮ, ಸಾವು, ಏಕಾಕಿತನ ಇವುಗಳೇ ಸಂಕಲನದ ಕೇಂದ್ರಗಳಾಗಿದ್ದರೂ – ಈ ಸಬ್ಜೆಕ್ಟ್ ಗಳನ್ನು ಆಲಂಗಿಸುವ ಕ್ರಮ ಮಾತ್ರ ಇವುಗಳ ಆಳದ ಸೌಂದರ್ಯವನ್ನು ತಡಕುವುದು. (ಅಥವಾ ಪ್ರಯತ್ನಿಸಿ ಹತಾಶನಾಗುವುದು). ಭಾಷೆ, ವಸ್ತು ಮತ್ತು ಅವುಗಳನ್ನು ಬಳಸುವ ರಿಯಲಿಸಂನ ಬಗೆಯಿಂದ ಹೇಳುವುದಾದರೆ, ನಮ್ಮ ತಲೆಮಾರಿನ ಏಕೈಕ ಆಧುನಿಕ ಕವಿ ರಾಜಶೇಖರ.
****
ಮೀಡಿಯಾಕ್ರಿಟಿ ಯಾವ ಕಾಲವನ್ನೂ ಬಿಟ್ಟಿಲ್ಲ ಎನ್ನುವುದು ಸಾಮಾನ್ಯ ಜ್ಞಾನವೆಂಬಷ್ಟು ಎಲ್ಲರಿಗೂ ಗೊತ್ತಿದೆ. ಆದರೆ ಈಗಿನದ್ದು ಮೀಡಿಯ-ಅಟ್ರಾಸಿಟಿ ಎನ್ನುವಷ್ಟು ಗಬ್ಬೆದ್ದು ಹೋಗಿದೆ. ಇದು ಭಾಷೆಗೂ, ನಿಜವಾದ ಕಾವ್ಯಕ್ಕೂ ಡೇಂಜರು ಎಂದು ಹೇಳಿದರೆ ಎಲ್ಲ ಕವಿಗಳೂ “… ನಾನಲ್ಲಪ್ಪ!” ಎಂದು ಪಕ್ಕದವಳ/ನ- ನ್ನು ನೋಡುತ್ತಾರೆ. ಇದು ಪೇಜ್ ಥ್ರೀ ಪಾರ್ಟಿಗಳಲ್ಲಿ ನಡೆಯುವ ಸಂಭಾಷಣೆಯ ಹಾಗೆ. ಹೀಗಿರುವಾಗ ಕಾವ್ಯಕ್ಕಷ್ಟೇ ಬದ್ಧನೆಂದು ಬರೆಯುವ ವ್ಯಕ್ತಿಗೆ ಸೆಡವು ಮತ್ತು ಏಕಾಕಿತನ ಅನಿವಾರ್ಯವಿರಬೇಕು.
“ರಾತ್ರಿ ಬರೆದು ಬಿಸಾಕಿದ್ದ ಪೋಸ್ಟನ್ನ
ಎಷ್ಟೊಂದು ಲೈಕುಗಳು ನೆಕ್ಕುತ್ತಿವೆ,
ಕಮೆಂಟುಗಳು ಕಚ್ಚುತ್ತಿವೆ…”
ಎಂಬ ಈ ಒಂದು ಪದ್ಯ ಇಡೀ ಸಂಕಲನದಲ್ಲಿ ಗುಂಪಿಗೆ ಸೇರದ ಪದ್ಯದಂತಿದೆ. ಆದರೆ ಅದರ ಜೊತೆಗೇ-
“ನನ್ನ ಗಡ್ಡದ ತುಂಬ ಹೊಗಳಿಕೆಯ
ಹುಂಬತನವೇ ತುಂಬಿಕೊಂಡು ತುರಿಸುತ್ತಿದೆ”
ಎಂದು ಹೇಳಿ ಕುವೆಂಪುರ “ಕೀರ್ತಿ ಶನಿ ತೊಲಗಾಚೆ”ಯ ಆಧುನಿಕ ಆವೃತ್ತಿಯಾದ ಇದು ನಿಜಕ್ಕೂ ನಮ್ಮ ಕಾಲದ ಅಗತ್ಯ. “ಬೋದಿಲೇರ್ ಮತ್ತು ಫ್ಲೊಬೆರ್ ನಿಂದಲೇ ನಾನು ನನ್ನ ಚಿಂತನೆಗಳನ್ನು ಧಾರೆ ಪಡೆದಿದ್ದು” ಎಂದು ಹೇಳಿದ ಕೆನಡಾದ ವಿಧ್ವಾಂಸ ಮಾರ್ಷಲ್ ಮೆಕ್-ಲುಹಾನ್ ೧೯೬೪ರಲ್ಲಿಯೇ “Medium is the message” ಎಂಬ ಪ್ರಸಿದ್ಧ ಸೂತ್ರ ಮಂಡಿಸಿದ. ಅದರ ಅರ್ಥ “ಒಂದು ಘಟನೆ ಅದರಷ್ಟಕ್ಕೇ ಅದು ಸುದ್ದಿಯ ತೂಕ ಪಡೆಯುತ್ತದೆಯೋ ಅಥವಾ ಅದು ಒಂದು ಮಾಧ್ಯಮದಲ್ಲಿ ಪ್ರಕಟವಾದ್ದರಿಂದ ಅದಕ್ಕೆ ಸುದ್ಧಿಯ ಮಾನ್ಯತೆ ಬಂದಿತೋ” ಎಂದು. ಹಾಗೆಯೇ ಜರಡಿಯಿಲ್ಲದ ಈ ಮಾಧ್ಯಮ ಯುಗದಲ್ಲಿ “ಫೇಸ್ ಬುಕ್ಕಿನಲ್ಲಿಯೋ ಅಥವಾ ಬುಕ್ಕಿನಲ್ಲಿಯೋ ಪ್ರಕಟಿಸಿ ‘ನಾನು ಕವಿ, ನಾನು ಕವಿ’ ಎಂದು ಅರಚಿಕೊಳ್ಳುವುದರಿಂದ ಅದು ಕಾವ್ಯವಾಗುತ್ತದೆಯೋ ಅಥವಾ ಅದು ಮೌಲಿಕ ಕಾವ್ಯವಾದ್ದರಿಂದ ತಾನು ಪ್ರಕಟಗೊಳ್ಳುತದೆಯೋ” ಎಂಬುದು ಪ್ರಶ್ನೆ.
ಈ ಬರಹ ರಾಜಶೇಖರ ಬಂಡೆಯ ಕಾವ್ಯವನ್ನು ಅತಿಯಾಗಿ ಹೊಗಳಿದಂತೆ ಕಾಣಬಹುದು. ಹಾಗೆ ಕಂಡರೆ ಅದಕ್ಕೆ ಕಾರಣ ಕನ್ನಡ ಚಿಂತನೆ ಮತ್ತು ಸಾಹಿತ್ಯ ಎಷ್ಟು ಅಳ್ಳಕವಾಗಿ ಹಳ್ಳ ಹಿಡಿಯುತ್ತಿದೆ ಎಂದೇ ಅರ್ಥ. ಕಳೆದ ಐದು ವರ್ಷಗಳಲ್ಲಿ ಯಾವೊಬ್ಬ ಬರಹಗಾರನನ್ನಾದರೂ ತೂಗಿ ನೋಡಲಾಗಿದೆಯೇ? ವಿಮರ್ಷೆಯ ಧೈರ್ಯವೇ ಇಲ್ಲವಾಗಲು ಕಾರಣಗಳೇನು? ಇಲ್ಲವಾದಲ್ಲಿ ಎಲ್ಲ ಬರಹಗಾರರೂ ಅತ್ಯುತ್ಕೃಷ್ಟವಾದ ಕಂಟೆಂಟ್ ಮಾತ್ರವೇ ಹುಟ್ಟುಹಾಕುತ್ತಿದ್ದಾರೆ ಎಂದಾಯಿತು. ಈ ಸಲುವಾಗಿಯೇ- ಮಹತ್ವಾಕಾಂಕ್ಷಿಯಲ್ಲದ, ತೆಳುವಾದ, ಅಲ್ಪತೃಪ್ತವಾದ ಸಾಹಿತ್ಯರಾಶಿಯನ್ನು- ಒಂದಿನಿತೂ ಸಂಕೋಚ ಹಾಗೂ ಸ್ವನಿರೀಕ್ಷೆ ಇಲ್ಲದೇ- ಕವಿಕುಲತಿಲಕರು ಸುರಿಯುವಾಗ ಸ್ವಲ್ಪವೇ ಒರಿಜಿನಲ್ ಆಗಿರುವುದು ಬಂದಾಗಲೂ ಹೀಗೆ ಜಾತ್ರೆಯ ಖುಷಿಯಾಗುತ್ತದೆ. ಹೀಗಾದಾಗ, ಅಸಹಾಯಕ ವ್ಯಂಗ್ಯವಲ್ಲದೇ ಬೇರೆ ಧ್ವನಿ ಏನಿದೆ.
ಇಷ್ಟು ಬರೆದ ಮೇಲೆ ಈ ಸಂಕಲನ ಬರೆದ ಕವಿಯಂತೆಯೇ ನನಗೂ ಇವೆಲ್ಲ ಅಸಂಗತವಾಗಿ ಕಂಡು ಬೋರು ಬರುತ್ತಿದೆ. ಯಾವನಿಗೆ ಬೇಕು ಇವೆಲ್ಲ. ಮುನ್ನುಡಿ ಮತ್ತು ಫೇಸ್ ಬುಕ್ ಪೋಸ್ಟ್ ಗಳು ಸೂಚಿಸುವ ಪ್ರಕಾರ ಬಂಡೆಗೆ ಈ ಪ್ರತಿಕ್ರಿಯೆಗಳಲ್ಲಿ ಆಸಕ್ತಿಯಿಲ್ಲ. ಕಾವ್ಯ ಮತ್ತು ಭಾಷೆಯ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳದ ಹಿರಿಯರು ಎಲ್ಲರನ್ನೂ ಹೊಗಳುತ್ತ ತಮ್ಮ ಪುಸ್ತಕಕ್ಕೆ “ಗಿರಾಕಿ”ಗಳನ್ನು ಉತ್ಪಾದಿಸುವಲ್ಲಿ ಬಿಝಿಯಾಗಿ – ಅವರಿಗೆ ಚಿಂತೆಯಿಲ್ಲ. ಅದೇನೆ ಇದ್ದರೂ ಕನ್ನಡ ಕಾವ್ಯಕ್ಕೆ ಚಲನೆ ತಂದುಕೊಟ್ಟ ಬಂಡೆಗೆ ಧನ್ಯವಾದ.
ರಾಜಶೇಖರ ಬಂಡೆಯವರ ಮೊದಲ ಕವನ ಸಂಕಲನ ಋತುಮಾನ ಸ್ಟೋರ್ ನಲ್ಲಿ ಲಭ್ಯವಿದೆ.
https://store.ruthumana.com/product/chitte-rekkeya-retu/
ಪ್ಯಾಪಿಲಾನ್ ಹೆಸರಿನಲ್ಲಿ ಬರೆಯುವ ಅವಿನಾಶ್ ಜಿ , ಋತುಮಾನದ ಸಂಪಾದಕರಲ್ಲೊಬ್ಬರು . ಹುಟ್ಟೂರು ಸಾಗರ ತಾಲೂಕಿನ ಹೆಗ್ಗೋಡು.
ಈಗ ಅವಿನಾಶ್, ಈ ಬರಹವನ್ನ ಚೆನ್ನಾಗಿ ಸಮಾ ತಿವಿಯುವ ಹಾಗೆ ಬರೆದಿದೀ ನೀನು ಅಂತ ನಾನು ಹೇಳಬಹುದೋ.
ಬಯ್ಯುವುದಿಲ್ಲವೋ.
fun apart..
ಕಾವ್ಯಕ್ಕಿಂತ ತೀಕ್ಷ್ಣವಾದ ಸ್ಪಂದನೆ ಬರೆದುಬಿಟ್ಟಿದೀಯ. ಬೆಂಕಿ ಹಚ್ಚಿರುವ ಕಟ್ಟಿಗೆಗಿಂತಲೂ ಅದರ ಜ್ವಾಲೆಗೇ ಕಾವು ಎಂಬ ಹಾಗೆ.
ಬಂಡೆಯ ಕೆಲವು ಕವಿತೆಗಳಷ್ಟೇ ಓದಿರದು ನಾನು. ಇತ್ತೀಚೆಗೆ ಫೇಸ್ಬುಕ್ಕಿನ ಲೈಕುಗಳು ಗಡ್ದ ತುರಿಸುವುದಕ್ಕೆ ಮುಂಚಿನವು. ಭರವಸೆಯ ಕವಿ ಹೌದು.
ನೀನು ಇನ್ನೊಂದು ಸ್ವಲ್ಪ ಜಾಸ್ತಿ ಬರೀಬೇಕು. ವರ್ಷಕ್ಕೊಂದು ಸಲವೋ ಎರಡು ಸಲವೋ ಕಾವು ಕೊಟ್ಟರೆ ನಮಗೆ ಸಾಕಾಗುವುದಿಲ್ಲವಲ್ಲೋ ಗೆಳೆಯಾ.
ಬಂಡೆಯ ಕಾವ್ಯದ ಜೊತೆಗೆ ನೀನು ಇಲ್ಲಿ ಹೇಳಿರುವ ಬಹಳಷ್ಟು ಮಹತ್ವದ ಪಾಯಿಂಟುಗಳನ್ನ ನಮ್ಮ ಕಾಲದ ಸೀರಿಯಸ್ ಕಾವ್ಯ ಪ್ರೇಮಿಗಳು ಗಮನಿಸುತ್ತೇವೆ ಮತ್ತು ಎಚ್ಚೆತ್ತುಕೊಳ್ಳುತ್ತೇವೆ ಅಂತ ಒಂದು ನಿಜವಾದ ಹೋಪ್. ನೋಡಣ ಏನೇನಾಗತ್ತೆ ಅಂತ.
i want to reiterate your words
ಕನ್ನಡ ಚಿಂತನೆ ಮತ್ತು ಸಾಹಿತ್ಯ ಎಷ್ಟು ಅಳ್ಳಕವಾಗಿ ಹಳ್ಳ ಹಿಡಿಯುತ್ತಿದೆ ಎಂದೇ ಅರ್ಥ. ಕಳೆದ ಐದು ವರ್ಷಗಳಲ್ಲಿ ಯಾವೊಬ್ಬ ಬರಹಗಾರನನ್ನಾದರೂ ತೂಗಿ ನೋಡಲಾಗಿದೆಯೇ? ವಿಮರ್ಷೆಯ ಧೈರ್ಯವೇ ಇಲ್ಲವಾಗಲು ಕಾರಣಗಳೇನು? ಇಲ್ಲವಾದಲ್ಲಿ ಎಲ್ಲ ಬರಹಗಾರರೂ ಅತ್ಯುತ್ಕೃಷ್ಟವಾದ ಕಂಟೆಂಟ್ ಮಾತ್ರವೇ ಹುಟ್ಟುಹಾಕುತ್ತಿದ್ದಾರೆ ಎಂದಾಯಿತು. ಈ ಸಲುವಾಗಿಯೇ- ಮಹತ್ವಾಕಾಂಕ್ಷಿಯಲ್ಲದ, ತೆಳುವಾದ, ಅಲ್ಪತೃಪ್ತವಾದ ಸಾಹಿತ್ಯರಾಶಿಯನ್ನು- ಒಂದಿನಿತೂ ಸಂಕೋಚ ಹಾಗೂ ಸ್ವನಿರೀಕ್ಷೆ ಇಲ್ಲದೇ- ಕವಿಕುಲತಿಲಕರು ಸುರಿಯುವಾಗ ಸ್ವಲ್ಪವೇ ಒರಿಜಿನಲ್ ಆಗಿರುವುದು ಬಂದಾಗಲೂ ಹೀಗೆ ಜಾತ್ರೆಯ ಖುಷಿಯಾಗುತ್ತದೆ.
ಮಿಡಿಯೋಕ್ರಿಟಿ ಮತ್ತು ಹಿಪಾಕ್ರಸಿ ಎರಡೂ ಅಗಾಧ ಪ್ರಪಾತಗಳು. ಒಂದ್ಸಲ ಬಿದ್ರೆ ಹತ್ಬರದು ಕಷ್ಟ.
ಬಂಡೆಗೆ ಶುಭಾಶಯಗಳು.
ಬಂಡೆ ಯವರ ಕಾವ್ಯಗಳನಗನು ಫೇಸ್ ಬುಕ್ ಲ್ಲಿ ಕುತೂಹಲದಿಂದ ಓದುತ್ತಿದ್ದೆ.ಭಾಷೆಯ ತಾಜಾತನ ಖುಷಿ ಕೊಡುತ್ತಿತ್ತು.ಅವರ ‘ಚಿಟ್ಟೆಯ ರೆಕ್ಕೆಯ ರೇಟು’ಕುರಿತ ನಿಮ್ಮ ಅಭಿಪ್ರಾಯ ಮತ್ಯಷ್ಟು ಕುತೂಹಲವನ್ಮು ಮೂಡಿಸಿದ್ದು ಸುಳ್ಳಲ್ಲ.
ಖಡ್ಗ ಮಸೆಯುವ ಸಾಣೆಯಂತಿದೆ ವಿಮರ್ಶೆ.