ಕೆ.ಜಿ. ನಾಗರಾಜಪ್ಪನವರ ಅನುಶ್ರೇಣಿ – ಯಜಮಾನಿಕೆ – ಹೊಸ ಪ್ರಮೇಯಗಳ ಪ್ರತಿಪಾದನೆ

ಇತಿಹಾಸದ ಕುರಿತಿರುವ ಯಾವುದೇ ಬರವಣಿಗೆಯ ಬಗೆಗೆ ಎದುರಾಗುವ ಪ್ರಮುಖ ಸಮಸ್ಯೆ ಎಂದರೆ, ಅಂತಹ ಬರವಣಿಗೆಯಲ್ಲಿ ಬರುವ ವಿವರಗಳು ಲೇಖಕನ ವ್ಯಾಖ್ಯಾನದ ಪರಿಣಾಮಗಳೋ ಅಥವಾ ಘಟನೆಗಳ ಯಥಾವತ್ತು ನಿರೂಪಣೆಗಳೋ ಎನ್ನುವುದು. ಯಾವುದೇ ನಿರೂಪಣೆಯೂ ಸಂಪೂರ್ಣವಾಗಿ ವಸ್ತುನಿಷ್ಠವಿರಲು ಅಸಾಧ್ಯ, ಎಲ್ಲ ವಿವರಣೆಗಳು, ನಿರೂಪಣೆಗಳು ಲೇಖಕರ ದೃಷ್ಟಿಕೋನದ ಭಟ್ಟಿಯಲ್ಲಿ ಹೊಯ್ದ ಎರಕಗಳೇ ಎನ್ನುವ ವಾದದ ಎದುರು, ಪುರಾವೆ ಆಧಾರಿತ ಬರವಣಿಗೆ ನಂಬಿಕೆಗೆ ಎಷ್ಟು  ಅರ್ಹ ಎನ್ನುವ ಪ್ರಶ್ನೆ ಮತ್ತೆ ಮತ್ತೆ ನಮ್ಮನ್ನು ಕಾಡುತ್ತದೆ. ಈ ವಾದ-ಪ್ರತಿವಾದಗಳ ನಡುವೆ ಇತಿಹಾಸದ ಬರವಣಿಗೆ ಕುರಿತು ಕಡೆಗಣಿಸಲಾಗದ ಇನ್ನೊಂದು ಮಹತ್ವದ ಸಂಗತಿ ಎಂದರೆ, ಇತಿಹಾಸಕಾರ ಹಲವು ಸಲ, ಹಗುರ ಪುರಾವೆಗಳ ಆಧಾರದ ಮೇಲೆ, ಘನಘಂಭೀರ ಪ್ರತಿಪಾದನೆಗಳನ್ನು ಒಳತಿಳಿವಿನ (intuition) ಆಧಾರದ ಮೇಲೆ ಮಾಡುತ್ತಲಿರುವುದು. ಪ್ರಾಚೀನ ಇತಿಹಾಸದ ಕುರಿತ ನಮ್ಮ ಜ್ಞಾನದ ಬಹು ಅಂಶ ಇಂತಹ ನಿರ್ಭೀತ ತರ್ಕಗಳೇ ಆಗಿವೆ. ಆಗಾಗ್ಗೆ, ಹೊಸ ಇತಿಹಾಸಕಾರರು ಹಳೆ ಜಗತ್ತಿನ ಬಗ್ಗೆ ಹೊಸ ತರ್ಕಗಳನ್ನು ಹೆಣೆದು, ನಮ್ಮ ಪ್ರಸ್ತುತ ಅರಿವನ್ನು ನವೀಕರಿಸುತ್ತ ಬಂದಿರುವುದೂ ದಿಟ. ಈ ಬಗೆಯ ಹೊಸ ತರ್ಕಗಳು, ಪ್ರಮೇಯಗಳು ಕೆಲವೊಮ್ಮೆ ಹೊಸದಾಗಿ ಲಭ್ಯವಾದ ಪುರಾವೆಗಳನ್ನಾಧರಿಸಿದ್ದರೆ, ಹಲವು ಸಲ ಹೊಸ ಅರ್ಥೈಸುವಿಕೆಯ (interpretation) ಆಧಾರದ ಮೇಲಿರುತ್ತವೆ. ಹೀಗೆ ಇತಿಹಾಸದ ಕುರಿತು ಪದೇ ಪದೇ ಒದಗುವ ಹೊಸ ದೃಷ್ಟಿಕೋನಗಳು ನಮ್ಮ ಕಲ್ಪನಾಶಕ್ತಿಯನ್ನು  ಶ್ರೀಮಂತಗೊಳಿಸಿ, ಇತಿಹಾಸ ಬರವಣಿಗೆಗಳ ಕುರಿತು ರುಚಿಯನ್ನು ವೃದ್ಧಿಸುತ್ತವೆ ಮತ್ತು ಕುತೂಹಲವನ್ನು ಜಾಗೃತ ಇರಿಸುತ್ತವೆ. ಇತಿಹಾಸ ಬರವಣಿಗೆಯ ಸಂಧರ್ಭದಲ್ಲಿ ಅರ್ಥೈಸುವಿಕೆಯ ಮೇಲೆ ಅವಲಂಬಿಸಿರುವ ವಿವರಣೆಗಳ ಕುರಿತು ಸ್ಪಷ್ಟತೆ ಪ್ರಾಯಷಃ ಕಮ್ಮಿಯೇ.

ಕೆ.ಜಿ. ನಾಗರಾಜಪ್ಪನವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ “ಅನುಶ್ರೇಣಿ – ಯಜಮಾನಿಕೆ” ಅಂತಹುದೇ ಕೃತಿ. ಇದು ಇತಿಹಾಸ ಬರಹವೋ, ಸಾಹಿತ್ಯ ವಿಮರ್ಶೆಯೋ ಎಂಬ ಜಿಜ್ಞಾಸೆ ಹುಟ್ಟುಹಾಕುವ ಈ ಕೃತಿ, ಕನ್ನಡ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ಒಂದು ಮಹತ್ವದ ಸಾಧನೆ.  ಶೀರ್ಷಿಕೆಯೇ ಸ್ಪಷ್ಟ ಪಡಿಸುವಂತೆ, ನಾಗರಾಜಪ್ಪನವರ ಈ ಪುಸ್ತಕದಲ್ಲಿ ಭಾರತದ, ಅದರಲ್ಲಿಯೂ ಕರ್ನಾಟಕದ, ಸಾಂಸ್ಕೃತಿಕ ಇತಿಹಾಸವನ್ನು ಯಜಮಾನಿಕೆಯ ಸಂಘರ್ಷಗಳ ಕಥನವಾಗಿ ನೋಡಲಾಗಿದೆ. ಈ ಸಂಘರ್ಷ ಕಥನ ಶ್ರೇಣೀಕೃತ ಸಮಾಜ ಸ್ಥಾಪನೆಯ ಸುತ್ತ ಪರ-ವಿರೋಧ ಹಾಗೂ ಬಗೆಬಗೆಯ ಅನುಸಂಧಾನಗಳ ಕಥನವೂ ಆಗಿದೆ.

“ಅನುಶ್ರೇಣಿ – ಯಜಮಾನಿಕೆ”ಯಲ್ಲಿ ನಾಲ್ಕು ಪ್ರಭಂಧಗಳಿವೆ. ಎಲ್ಲ ಪ್ರಬಂಧಗಳನ್ನೂ ವಿಚಾರ ಸಂಕಿರಣಗಳಲ್ಲಿ ಮಂಡಿಸಲಿಕ್ಕಾಗಿ ಬರೆದಿದ್ದರೂ, ಪುಸ್ತಕದಲ್ಲಿ ಅವುಗಳ ಪರಿಷ್ಕೃತ ಆವೃತ್ತಿಯನ್ನು ಸೇರಿಸಲಾಗಿದೆ. ಪ್ರತಿ ಪ್ರಬಂಧದ ವಿಷಯ ಸಹಜವಾಗಿಯೇ ಬೇರೆ, ಬೇರೆ, ಆದರೆ, ಅವೆಲ್ಲವುಗಳ ಒಳಸುಳಿ ಒಂದೇ. ಅದೆಂದರೆ, ಹೇಗೆ ನಮ್ಮ ಸಮಾಜದ ಸಾಂಸ್ಕೃತಿಕ ಇತಿಹಾಸದುದ್ದಕ್ಕೂ ಹಿಂಸಾತ್ಮಕ ರೀತಿಯಿಂದ ಮುಂದಾಳತ್ವ ಸಾಧಿಸಿರುವ ಕುರುಹುಗಳಿವೆ. ಈ ಪ್ರಬಂಧಗಳು ಮುಖ್ಯವಾಗಿ ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯ ಮರುಕಥನವಾಗಿದ್ದರೂ, ಅವು ಕನ್ನಡ ನಾಡಿನ ಹೊರಗೂ ಹೋಗುತ್ತವೆ, ಒಟ್ಟಾರೆ ಭಾರತದ  ಇತಿಹಾಸದ ಕುರಿತೇ ಇಲ್ಲಿ ನಮಗೆ ಹೊಳಹುಗಳು ದೊರೆಯುತ್ತವೆ. ಇಲ್ಲಿ ಕಟ್ಟಿರುವ ಇತಿಹಾಸ ಕಥನ ಸನಾತನದಿಂದ ಸಮಕಾಲೀನದವರೆಗಿನ ಕಾಲದೇಶಗಳ ವಿಶ್ಲೇಷಣೆಗಳಿದ್ದರೂ, ಹೆಚ್ಚಿನ ಗಮನ ಕೇಂದ್ರಿತವಾಗಿರುವುದು ಭಕ್ತಿ ಪರಂಪರೆಯ ಅವಧಿಯ ಮೇಲೆ. ಒಟ್ಟಾರೆ ಈ ನಾಲ್ಕು ಪ್ರಬಂಧಗಳು ಮಂಡಿಸುತ್ತಿರುವ ವಾದವನ್ನು ಲೇಖಕರು ತಮ್ಮ “ಅರಿಕೆಯಲ್ಲಿ” ಸ್ಥೂಲವಾಗಿ ಸೂಚಿಸಿದ್ದಾರೆ : ವೈದಿಕ ಮತ್ತು ಅವೈದಿಕ ಸಂಸ್ಕೃತಿಗಳ ನಡುವಿನ ವೈರುಧ್ಯ, ಸಂಘರ್ಷ ಮತ್ತು ತನ್ಮೂಲಕ ಇತಿಹಾಸದುದ್ದ ಕಾಣಸಿಗುವ ವೈದಿಕ ಸಂಸ್ಕೃತಿಯ ಯಜಮಾನಿಕೆಯ ಹೇರಿಕೆ. ರಾಜ್ಯಾಧಿಕಾರ ಚಲಾಯಿಸುವ ಹಿಂಸೆಗಿಂತ ಸಾಂಸ್ಕೃತಿಕ ಆಕ್ರಮಣ – ಒಂದು ಸಂಸ್ಕೃತಿ ಇನ್ನೊಂದನ್ನು ಹತ್ತಿಕ್ಕುವುದು – ಹೆಚ್ಚು ಅಪಾಯಕಾರಿ ಎನ್ನುವ ಕಾಳಜಿ ಇಲ್ಲಿಯ ಬರಹಗಳ ಒಡಲಾಗಿದೆ.

“ಅನುಶ್ರೇಣಿ – ಯಜಮಾನಿಕೆ”ಯ ಮೊದಲ ಅಧ್ಯಾಯವಾದ “ಭಕ್ತಿ-ಕಾರ್ಯಸ್ವರೂಪ”ದಲ್ಲಿ ಭಕ್ತಿ ಪರಂಪರೆಯ ಪುನರಾವಲೋಕನ ನಡೆಸುವ ಲೇಖಕರು ಹಲವು ಹೊಳಹುಗಳನ್ನು ಕಾಣಿಸುತ್ತಾರೆ. ಎಂಬತ್ತು ಪುಟಗಳ ಈ ದೀರ್ಘ ಪ್ರಬಂಧದಲ್ಲಿ ಒತ್ತು ಕೊಟ್ಟಿರುವುದು ಹೇಗೆ ಶ್ರೇಣೀಕೃತ ವ್ಯವಸ್ಥೆಯ ಪರ-ವಿರೋಧ ಸಾಂಸ್ಕೃತಿಕ ಚಳುವಳಿಗಳು ನಡೆದು, ವಚನ ಪರಂಪರೆಯು ಶ್ರೇಣೀಕರಣ ವಿರೋಧಿ ನೆಲೆಗಳನ್ನು ಪ್ರಚುರ ಪಡಿಸಿದರೆ, ವೈಷ್ಣವ ಭಕ್ತಿ ಪರಂಪರೆಯು ವಿರುದ್ಧ ದಿಕ್ಕಿನಲ್ಲಿ ಚಲಿಸಿ ವೈದಿಕ ಅಧಿಕಾರ ಸ್ಥಾಪಿಸುವ ಒಲವು ತೋರುತ್ತದೆ. ಎರಡನೆಯ ಅಧ್ಯಾಯವು “ಭಕ್ತಿ – ಹಿಂಸಾ ವಿಧಾನ” ಭಾರತದ ಧಾರ್ಮಿಕ ಆಚರಣೆಗಳಲ್ಲಿ ಹಿಂಸೆಯ ಪಾತ್ರದ ಸ್ವಭಾವಗಳ ಅನ್ವೇಷಣೆಯಾಗಿದೆ. ಮೂರನೆಯ ಅಧ್ಯಾಯ “ತಮಿಳು ಶೈವ ಪರಂಪರೆ ಮತ್ತು ರಗಳೆಗಳು” ಶೈವ ಪರಂಪರೆಯಲ್ಲಿ ವೇದಾಂತೀಕರಣ, ತಾಂತ್ರೀಕರಣ, ವೈದಿಕ ಮತ್ತು ಅವೈದಿಕ ಮಾರ್ಗಗಳ ನಡುವಿನ ಸಂಘರ್ಷ ಹಾಗೂ ಸಾಮರಸ್ಯದ ವಿಶ್ಲೇಷಣೆ ಮಾಡುತ್ತದೆ. ನಾಲ್ಕನೆಯ ಅಧ್ಯಾಯ “ಸಹಜ ಪಂಥ’ ಭಾರತದ ಧಾರ್ಮಿಕ ಇತಿಹಾಸದಲ್ಲಿ ಹೆಸರಿಲ್ಲದಂತಾಗಿರುವ ಅವೈದಿಕ ಸಹಜೀಯ ಪಂಥಗಳನ್ನು ಪರಿಚಯಿಸುವ ಪ್ರಯತ್ನವಾಗಿದೆ.

“ಅನುಶ್ರೇಣಿ – ಯಜಮಾನಿಕೆ”ಯಲ್ಲಿ ನಾಗರಾಜಪ್ಪನವರು ಹಲವು ಪ್ರಶ್ನೆಗಳ ಸುತ್ತ ತಮ್ಮ ಸಾಂಸ್ಕೃತಿಕ ಚಿಂತನೆಯನ್ನು ಪ್ರಸ್ತುತ ಪಡಿಸುತ್ತಾರೆ. ಆ ಪ್ರಶ್ನೆಗಳಲ್ಲಿ ಪ್ರಮುಖವೆಂದರೆ : ಧಾರ್ಮಿಕ ಅನುಶ್ರೇಣಿ ಮೊದಲಾದದ್ದು ಹೇಗೆ? ಸಮಾಜದಲ್ಲಿ ಧಾರ್ಮಿಕ ಅನುಶ್ರೇಣಿಯ ಕುರುಹುಗಳು ಭಕ್ತಿ ಸಾಹಿತ್ಯದಲ್ಲಿ ಕಾಣುವ ಬಗೆ ಹೇಗೆ? ವೈದಿಕ, ಅವೈದಿಕ, ತಾಂತ್ರಿಕ ಮೊದಲಾದ ಪರಂಪರೆಗಳ ನಡುವೆ ಸಂಘರ್ಷ-ಸಾಮರಸ್ಯದ ಸಂಭಂಧ ಹೇಗೆ ಆಯಾ ಕಾಲದಲ್ಲಿ ಸಾಂಸ್ಕೃತಿಕ ಯಾಜಮಾನ್ಯ ಗಳಿಸುವ ಪ್ರಯತ್ನಗಳನ್ನು ಸೂಚಿಸುತ್ತವೆ? ಹೇಗೆ ಶೈವ ಮತ್ತು ವೈಷ್ಣವ ಮುಂತಾದ ಪಂಥಗಳು ತಂತ್ರ ಪರಂಪರೆಯ ಒಳಹೊಕ್ಕು ಶೂದ್ರರಿಂದ ಆಗಬಹುದಾದ ಧಾರ್ಮಿಕ ಕ್ರಾಂತಿಯನ್ನು ತಣ್ಣಗಾಗಿಸಿದರು? ಭಕ್ತಿ ಮಾರ್ಗ ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣಕ್ಕೆ ಒಳಗಾದ ಸಂಧರ್ಭವೇನು? ಭಕ್ತಿ ಪಂಥ ಜಾತಿ ವಿರುಧ್ಧದ ಪ್ರತಿಭಟನೆ ಜಾತಿಯ ರಕ್ಷಣಾ ಕೋಟೆಯಂತಾಗಲು ಕಾರಣಗಳೇನು? ಶಾಸ್ತ್ರಗಳು ಮತ್ತು ಕಾವ್ಯಗಳು ಊರ್ಧ್ವಮುಖೀ ಸಾಮಾಜಿಕ ಬದಲಾವಣೆಯ ನಿರಾಕರಣೆಯ ಭಾಗವಾಗಿದ್ದು ಹೇಗೆ? ಈ ಮುಂತಾದ ಪ್ರಶ್ನೆಗಳನ್ನೆತ್ತಿಕೊಂಡು ಲೇಖಕರು ಐತಿಹಾಸಿಕ, ತತ್ವಶಾಸ್ತ್ರಿಕ ಮತ್ತು ಸಾಂಸ್ಕೃತಿಕ ವಿಶ್ಲೇಷಣೆಗಳ ಮೂಲಕ ಉತ್ತರಗಳನ್ನು ಶೋಧಿಸುತ್ತಾರೆ.

“ಅನುಶ್ರೇಣಿ – ಯಜಮಾನಿಕೆ”ಯನ್ನು ಸಫಲವಾಗಿ ಪರಿಚಯಿಸುವುದೆಂದರೆ ಇಲ್ಲಿ ನಮಗೆ ಕಾಣಸಿಗುವ ಹಲವು ಒಳತಿಳಿವಿನ ಪ್ರತಿಪಾದನೆಗಳನ್ನು (intutional formulations) ಪರಿಚಯಿಸುವದು, ಹಾಗಾಗಿ ಈ ಕೆಳಗೆ ಅಂತಹ ಪ್ರತಿಪಾದನೆಗಳ ಪಟ್ಟಿ ಮಾಡಲಾಗಿದೆ:

೧. ಧಾರ್ಮಿಕ ಅನುಶ್ರೇಣಿಯ ಉದ್ದಿಷ್ಯವೆಂದರೆ ವೈದಿಕ ಯಾಜಮಾನ್ಯವನ್ನು ಸ್ಥಿರವಾಗಿರಿಸುವುದು.

೨. ವಚನ ಚಳುವಳಿಯ ಸಮಾನತೆಯ ಆಶಯಗಳನ್ನು ಇಲ್ಲವಾಗಿಸಲು ಅದರೊಳಗಿನ ವಿರೋಧೀ ಅಂಶಗಳನ್ನು ಆವ್ಹಾಹಿಸಿಕೊಂಡ ವೈಷ್ಣವ ಭಕ್ತಿ ಪರಂಪರೆಯು ಯಶಸ್ವಿಯಾಯಿತು.

೩. ಬ್ರಾಹ್ಮಿಣೀಕರಣದ ಫಲವಾಗಿ ವೀರಶೈವ ಪರಂಪರೆ ಜಾತಿಶ್ರೇಣಿಯಲ್ಲಿ ಬ್ರಾಹ್ಮಣರ ನಂತರದ ಸ್ಥಾನ ಪಡೆಯಿತು.

೪. ದಕ್ಷಿಣ ಭಾರತದ ಧಾರ್ಮಿಕ ಚರಿತ್ರೆ ಅಂದರೆ ಆಸ್ತಿಕ ನಾಸ್ತಿಕರ ನಡುವಿನ ಸಂಘರ್ಷವೇ ಆಗಿದೆ.

೫. ಭಕ್ತಿ ಪರಂಪರೆಯೂ ಬ್ರಾಹ್ಮಣೀಕರಣಕ್ಕೆ ಒಳಗಾಯಿತು.

೬. ಇತಿಹಾಸದುದ್ದಕ್ಕೂ ವೈದಿಕರು ಇತರ ಧಾರ್ಮಿಕ ಚಳುವಳಿಗಳ ಸತ್ವವನ್ನು ಹೀರಿ, ಅವುಗಳನ್ನು ನಿಸ್ತೇಜಗೊಳಿಸಿ ತಾವು ಬಲಿಷ್ಠರಾದರು.

೭. ಶತಶತಮಾನಗಳಿಂದ ಧಾರ್ಮಿಕ ಅನುಶ್ರೇಣಿಯನ್ನು ಕಾಯ್ದಿರಿಸಿಕೊಂಡಿರುವುದು ಏಕೆಂದರೆ ಸಮಾಜದಲ್ಲಿ ಲೌಕಿಕ ಪ್ರತಿಷ್ಠಿತ ವರ್ಗ ಮತ್ತು ಜನಸಾಮಾನ್ಯರನ್ನು ಹದ್ದಿನಲ್ಲಿಡಲು.

೮. ಸಾಹಿತ್ಯವು ಧಾರ್ಮಿಕ ವಿಷಯ, ಮೌಲ್ಯಗಳ ಪ್ರಚಾರಕ್ಕೆ ತೊಡಗಿ ಭ್ರಷ್ಟಗೊಂಡವು.

೯. ವೈದಿಕ ವರ್ಗವು ತಮ್ಮ ವರ್ಗರಕ್ಷಣೆಯೇ ಜಗತ್ತಿನ ರಕ್ಷಣೆ, ತಮ್ಮ ಧರ್ಮ ರಕ್ಷಣೆಯೇ ಲೋಕದ ರಕ್ಷಣೆ ಎಂಬ ಅರಿವನ್ನು ಎಲ್ಲ ವರ್ಗಗಳೂ ಒಪ್ಪುವಂತೆ ಮಾಡುವಲ್ಲಿ ಶಿಷ್ಟ ಕಾವ್ಯದ ಕೊಡುಗೆ ಅಪಾರ.

೧೦. ವೇದ ಪುರಾಣ ಕಾಲಕ್ಕಿಂತ ಭಕ್ತಿ ಕಾಲದಲ್ಲಿ ವೈದಿಕವರ್ಗ ಹೆಚ್ಚು ರಕ್ಷಣೆ ಪಡೆಯಿತು.

೧೧. ಶಾಸ್ತ್ರಪ್ರಮಾಣವನ್ನು ವಿರೋಧಿಸುವ ವಚನಕಾರರಿಗೂ, ಶಾಸ್ತ್ರಪ್ರಮಾಣಕ್ಕೆ ಬದ್ಧರಾದ ವೀರಶೈವ ವಿದ್ವಾಂಸರಿಗೂ ಅಜಗಜಾಂತರ ವ್ಯತ್ಯಾಸವಿದೆ.

೧೨. ವೈದಿಕ ಧರ್ಮದ ವರ್ಣ ವ್ಯವಸ್ಥೆಯ ಪುನರುತ್ಥಾನವೇ ವೈಷ್ಣವ ಭಕ್ತಿಯ ಮುಖ್ಯ ಧೋರಣೆ.

೧೩. ದೇವರು ಮತ್ತು ಅಸುರರ ನಡುವಿನ ಯುದ್ಧಮಾದರಿ ವರ್ಣಾಶ್ರಮ ಧರ್ಮದ ರಕ್ಷಣೆಯ ಧ್ಯೇಯ ಉಳ್ಳದ್ದು.

೧೪. ಶಾಸ್ತ್ರ ಮತ್ತು ಕಾವ್ಯ  ವೈದಿಕವರ್ಗದ ಅಗತ್ಯತೆಯನ್ನು ಸಾರುವ ಸಾಧನವಾದವು ಮತ್ತು ಶೂದ್ರಾದಿಗಳನ್ನು ಅಧೀನರಾಗಿಸುವ ಮೌಲ್ಯ ಪ್ರತಿಪಾದನೆಗೆ ಬದ್ಧವಾದವು.

೧೫. ಮಧ್ಯಕಾಲದ ಕನ್ನಡ ಸಾಹಿತ್ಯದ ಬಹುತೇಕ ಕೃತಿಗಳು ಮತಪ್ರಚಾರಕ್ಕಾಗಿಯೇ ರಚಿತವಾದವು. ಇವು ಧರ್ಮ ಸಮ್ಮತ ಹಿಂಸೆಗೆ ಪ್ರಚೊದನೆಯನ್ನೂ ನೀಡಿದವು.

೧೬. ಮಧ್ಯಯುಗದಲ್ಲಿ ದೇವಾಲಯ ಕೇಂದ್ರಿತ ಯಾಜಮಾನ್ಯ ಮೊದಲಾಯಿತು.

೧೭. ವರ್ಣಧರ್ಮ ಮತ್ತು ಮಾತಾಂತರೀ ಧರ್ಮಗಳು ಧರ್ಮಕಾರ್ಯಕ್ಕಾಗಿ ಶೂದ್ರವರ್ಗವನ್ನು ಹಿಂಸೆಯ ಸಾಧಕರಾಗಿಯೂ, ಭಾಧಕರಾಗಿಯೂ ಬಳಸಿದರು.

೧೮. ಮಧ್ಯಯುಗದಲ್ಲಿ ಹಿಂಸೆ ಒಂದು ಮೌಲ್ಯ, ಸಮೂಹ ಪ್ರಜ್ಞೆಯೇ ಆಗಿತ್ತು.

೧೯. ಜೈನ ಮತ್ತು ಬೌದ್ಧ ಮತಗಳು ಜನಸಾಮಾನ್ಯರ ಚಳುವಳಿಗಳಾದರೂ, ಕ್ಷತ್ರಿಯ ಅನುಶ್ರೇಣಿಯನ್ನು ಅಂಗೀಕರಿಸಿ ಕ್ರಮೇಣ ಜನರಿಂದ ದೂರ ಸರಿದವು.

೨೦. ವೀರಶೈವ ಕವಿಗಳು ಸಂಪೂರ್ಣ ಬ್ರಾಹ್ಮಣೀಕರಣಕ್ಕೆ ಒಳಗಾದರು.

ನಾಗರಾಜಪ್ಪನವರು ತಮ್ಮ ಪ್ರಧಾನ ವಿಷಯವಾದ ಧಾರ್ಮಿಕ ಯಾಜಮಾನ್ಯದ ಇತಿಹಾಸದ ವಿಶ್ಲೇಷಣೆಗೆ ಬಳಸಿರುವ ಆಕರಗಳು ಅವರ ಅರಿವಿನ ವಿಸ್ತೃತತೆ ಮತ್ತು ಆಳವನ್ನು ಬಿಂಬಿಸುತ್ತವೆ. ಈ ಅಧ್ಯಯನದ ಮುಖ್ಯ ಅಂಶವೆಂದರೆ ಇದು ಸಾಹಿತ್ಯ ಕೃತಿಗಳನ್ನು ಆಕರವಾಗಿ ಬಳಸಿ ಸಾಮಾಜಿಕ ಇತಿಹಾಸ ಕಥನ ಕಟ್ಟುವ ಬಗೆ. ಪುಸ್ತಕದುದ್ದಕ್ಕೂ ಲೇಖಕರು ಕನ್ನಡ, ಸಂಸ್ಕೃತ ತಮಿಳು ಇತ್ಯಾದಿ ಭಾಷೆಗಳಲ್ಲಿ ರಚಿತವಾಗಿರುವ ಅದೆಷ್ಟೋ ಸಾಹಿತ್ಯ ಕೃತಿಗಳನ್ನು ವಿಶ್ಲೇಷಿಸುತ್ತಾರೆ ಮತ್ತು ಇತಿಹಾಸದ ಕುರಿತ ತಮ್ಮ ಪ್ರತಿಪಾದನೆಗಳಿಗೆ ತನ್ಮೂಲಕ ಆಧಾರ ಒದಗಿಸುತ್ತಾರೆ. ತಾರ್ಕಿಕವಾಗಿ ತಮ್ಮ ಅಭಿಮತವನ್ನು ಪ್ರಸ್ತುತ ಪಡಿಸುವ ಲೇಖಕರು ಆಕರಗಳ ಬಂಧನಕ್ಕೆ ಒಳಗಾಗದೇ ನಿರ್ಭಿಡೆಯ ತೀರ್ಮಾನಗಳಿಗೆ ಬರುವಲ್ಲಿ ಹಿಂಜರಿಯುವುದಿಲ್ಲ.

ಕೃತಿಯೊಂದು ಏಕಕಾಲಕ್ಕೆ ಸಾಮಾಜಿಕ, ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವಿಶ್ಲೇಷಣೆಯ ಮೂಲಕ ನಮ್ಮ ಸಮಾಜದಲ್ಲಿ ಪುನರಪಿ ಚರ್ಚಿತವಾಗುವ ವಿಷಯಗಳ ಕುರಿತು ಹೊಸ ಪ್ರಮೇಯಗಳನ್ನು ತೋರುತ್ತಿರುವುದು ತುಂಬಾ ಗಂಭೀರ ಪ್ರಯತ್ನವೆಂದೇ ಹೇಳಬೇಕು. ಅಂತಹ ಮುಖ್ಯ ಕೃತಿಯೊಂದನ್ನು ಸಾಧ್ಯವಾದಷ್ಟೂ ಅಚ್ಚುಕಟ್ಟಾಗಿ ತರುವುದು ಪ್ರಕಾಶಕರ ಕರ್ತವ್ಯ. ಕನ್ನಡದಲ್ಲಿ ಪ್ರಕಟಣೆ ಪೂರ್ವ ಪರಿಷ್ಕರಣೆಯ ಜವಾಬ್ದಾರಿಯನ್ನು ಪ್ರಕಾಶಕರು ಹೊರುವುದಿಲ್ಲವೋ ಎಂಬ ಅನುಮಾನ ನನಗಿದೆ.

ವಸಾಹತುಶಾಹಿಯಿಂದಾಗಿ ನಮ್ಮ ಸಮಾಜದಲ್ಲಿ ಯುರೋಪು-ಕೇಂದ್ರಿತ ಜ್ಞಾನಮಾದರಿಯ ಅನುಕರಣೆ  ಸಾರ್ವತ್ರಿಕವಾಗಿರುವ ಸಂಧರ್ಭದಲ್ಲಿ ನಾಗರಾಜಪ್ಪನವರಂತ ಅಪ್ಪಟ ಊರೊಳಗೆ ಬೇರುಳ್ಳ ಚಿಂತಕರ ಬರಹಗಳು ತುಂಬಾ ಸ್ವಾಗತಾರ್ಹ.

 

 


ಶೀರ್ಷಿಕೆ : ಅನುಶ್ರೇಣಿಯಜಮಾನಿಕೆ

ಲೇಖಕರು: ಕೆ. ಜಿ. ನಾಗರಾಜಪ್ಪ

ಪ್ರಕಾಶಕರು: ಅಭಿನ, ಬೆಂಗಳೂರು

ವರ್ಷ: ೨೦೧೫

ಪುಟಗಳು: ೨೦೪

ಪ್ರತಿಕ್ರಿಯಿಸಿ