ಹಿಂದಿಗೇಕೆ ವಿಶೇಷ ಸ್ಥಾನಮಾನ ? ಅದನ್ನು ಆರ್ಟಿಕಲ್ ೩೭೦ ರಂತೆಯೇ ತೆಗೆದುಹಾಕಿ

ತ್ರಿಭಾಷಾ ಸೂತ್ರದ ಫಲವಾಗಿ ಉತ್ತರ ಭಾರತದಲ್ಲಿ ಮಾತನಾಡಲ್ಪಡುವ ಹಿಂದಿ ಭಾಷೆಯು ವಿಶೇಷ ಸ್ಥಾನಮಾನವನ್ನೇಕೆ ಪಡೆಯುತ್ತದೆ. ಈ ಆಷಾಢಭೂತಿತನ ಏತಕ್ಕಾಗಿ?

 

ರಾಮಚಂದ್ರ ಗುಹಾರವರು ಹೇಳುವಂತೆ, ಭಾರತ ಒಂದು ‘ಅಸಹಜ ದೇಶ’. ಬೆಳಗಿ ಬಾಳುತ್ತಿರುವ ರಾಷ್ಟ್ರಕ್ಕೆ ಈ ಮಾತು ಅಸಮಂಜಸವಾದದ್ದು . ಒಂದು ದೊಡ್ಡ ಸಂಖ್ಯೆಯ, ಪರಸ್ಪರ ಯಾವ ಸಾಮ್ಯತೆ ಇಲ್ಲದಿರುವ ಜನ ಇಷ್ಟು ದೀರ್ಘ ಕಾಲ ಒಟ್ಟಿಗೆ ಒಂದು ರಾಷ್ಟ್ರವಾಗಿದ್ದಾರೆ ಎಂಬುದೇ ತರ್ಕಕ್ಕೆ ಸವಾಲೆಸೆವಂತಿದೆ. ಕೆಲವರು ಇದು ನ್ಯಾಯ ಸಮ್ಮತವೇ ಎಂದು ಕೇಳಬಹುದು . ಅವರ ಪ್ರಶ್ನೆ ಕೂಡ ಉಚಿತವಾದದ್ದೇ.

‘ಭಾರತವೆಂಬ ಕಲ್ಪನೆ’ಗಾಗಿ ಹಲವರು ಬೆಲೆ ತೆತ್ತಿದ್ದಾರೆ. ಹಲವಾರು ಪ್ರತ್ಯೇಕತಾ ಹೋರಾಟಗಳು ಕ್ರೂರವಾಗಿ ಹೊಸಕಿ ಹಾಕಲ್ಪಟ್ಟಿವೆ. ದೀರ್ಘಕಾಲದಿಂದಲೂ ಇದ್ದ ಹಲವು ಬಗೆಯ ಸಾಂಸ್ಕೃತಿಕ ಚಹರೆಗಳನ್ನು ಒಂದೋ ನಿರಾಕರಿಸಲಾಗಿದೆ ಇಲ್ಲವೇ ಅವುಗಳ ಅಭಿವ್ಯಕ್ತಿಯನ್ನು ಕಡಿತಗೊಳಿಸಲಾಗಿದೆ ಮತ್ತು ಹಾಗೆ ಮಾಡುವಾಗ ಅವು ಯಾರಿಗೆ ಆಪ್ತವಾಗಿದ್ದವೋ ಅಂತಹವರ ಭಾವನೆಗಳ ಬಗೆಗೆ ಕನಿಷ್ಠ ಕಾಳಜಿಯನ್ನೂ ವಹಿಸಲಾಗಿಲ್ಲ.ಇದಾಗ್ಯೂ ಈ ಕಲ್ಪನೆಯ ಆಯುವು ಇಷ್ಟು ಹೆಚ್ಚಾಗಿರುವುದನ್ನು ಸಾಧ್ಯವಾಗಿಸಿದ ‘ಹೊಂದಾಣಿಕೆ’ಗಳ ಬಗೆಗೂ ಒಂದಿಷ್ಟು ಹೇಳುವುದಿದೆ.

ತ್ರಿಭಾಷಾ ಸೂತ್ರವು ಅಂತಹ ಒಂದು ಆಲೋಚನೆ. ಇದು ಹುಟ್ಟಿದ್ದು ಒಂದು ಸಂಘರ್ಷದ ಸಮಯದಲ್ಲಿ. ನಮ್ಮ ಸಂವಿಧಾನ ಕರ್ತೃಗಳು ೧೯೪೬ ರಿಂದ ೧೯೪೯ ರ ನಡುವೆ ಅದರ ಕರಡನ್ನು ಸಿದ್ಧಪಡಿಸುವಾಗ, ನಮ್ಮ ರಾಷ್ಟ್ರಕ್ಕೆ ಒಂದು ‘ರಾಷ್ಟ್ರೀಯ ಭಾಷೆ’ ಎನ್ನುವ ಕಲ್ಪನೆ ಹೊಂದುವುದಿಲ್ಲವೆಂಬುದನ್ನು ಕಂಡುಕೊಂಡರು.

ಹಿಂದಿವಾಲಾಗಳು, ಬ್ರಿಟೀಷರು ಹೊರಟುಹೋದ ಮೇಲೆ ತಮ್ಮ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡುವ ಉತ್ಸಾಹದಲ್ಲಿದ್ದರು. ಇಂಗ್ಲೀಷನ್ನು ಹೊರಹಾಕಿ, ಹಿಂದಿಯು ಪ್ರಮುಖ ಭೂಮಿಕೆಯನ್ನು ಪಡೆಯುವುದೆಂದು ನಂಬಿಕೊಂಡಿದ್ದರು. ಪುಣ್ಯಕ್ಕೆ ಹಾಗಾಗಲಿಲ್ಲ. ಭಾರತದ ದಕ್ಷಿಣ ಹಾಗೂ ಪೂರ್ವ ಭಾಗದ ರಾಜ್ಯಗಳು ಈ ಪ್ರಕ್ರಿಯೆಯನ್ನು ಗಟ್ಟಿಯಾಗಿ ವಿರೋಧಿಸಿದರು. ಅವರು, ಇಂಗ್ಲೀಷ್ ತಾನಿರುವ ಸ್ಥಾನದಲ್ಲೇ ಮುಂದುವರೆಯ ಬೇಕೆಂದು ಒತ್ತಾಯಿಸಿದರು.

ಅವರು, ಬ್ರಿಟೀಷರ ಆಳ್ವಿಕೆಯಲ್ಲಿ ಉಪೇಕ್ಷಿಸಲ್ಪಟ್ಟಿದ್ದ ತಮ್ಮ ಭಾಷೆಗಳನ್ನು ಸ್ವತಂತ್ರ ಭಾರತದಲ್ಲಿ ಮುನ್ನೆಲೆಗೆ ತರುವ ಸದಾಶಯ ಹೊಂದಿದ್ದರು. ಅವರು ತಮ್ಮ ಮೇಲೆ ಹಿಂದಿ ಹೇರಿಕೆಯನ್ನು ಸುತಾರಾಂ ಒಪ್ಪುವ ಮನಸ್ಥಿತಿಯಲ್ಲಿ ಇರಲಿಲ್ಲ. ಅವರಲ್ಲಿ ಹಲವರು ಇಂಗ್ಲೀಷಿನಂತೆ ಹಿಂದಿ ಕೂಡ ತಮಗೆ ಪರಕೀಯ ಭಾಷೆ ಎಂದು ಪ್ರತಿಪಾದಿಸಿದರು. ಅಂದಿನ ದಿನಮಾನದಲ್ಲಿ ಇದ್ದಂತೆ, ಅವರುಗಳು ತಮ್ಮ ಭಾಷೆಗಳ ಬಗ್ಗೆ ಗಮನ ಕೇಂದ್ರೀಕರಿಸಲು ಉತ್ಸುಕರಾಗಿದ್ದು, ಪರಕೀಯ ಭಾಷಾ ಪರಿಸ್ಥಿತಿ, ಹಿಂದಿನಂತೆಯೇ ಮುಂದುವರೆಸ ಬಯಸಿದ್ದರು. ಅಂದರೆ ಇಂಗ್ಲೀಷಿನ ಪರಿಸ್ಥಿತಿ ಬದಲಾಗದಂತೆ, ಮತ್ತೊಂದು ‘ಪರಕೀಯ ಭಾಷೆ’ ಹಿಂದಿಯೊಂದಿಗೆ ವ್ಯವಹರಿಸುವ ಆಸಕ್ತಿ ಹೊಂದಿರದವರಾಗಿದ್ದರು.

ಒಂದು ಹಂತಕ್ಕೆ ಹಿಂದಿಯ ‘ಪರಕೀಯತೆ’ಯು ಅತಿರಂಜಕವಾಗಿ ವಿವರಿಸಲ್ಪಟ್ಟಿದೆ. ಇಂಗ್ಲೀಷಿಗೆ ಹೋಲಿಸಿದರೆ, ಹಿಂದಿಗೆ ದೇಶದ ಹಲವು ಭಾಗಗಳಲ್ಲಿ ಮಾನ್ಯತೆ ಇತ್ತು. ಆದರೂ ಈ ತೆರನಾದ ಸಂದೇಶ ಜನರನ್ನು ತಲುಪಿತು. ಅತಿಹೆಚ್ಚು ಜನರಿಂದ ಮಾತನಾಡಲ್ಪಡುವ ಹಿಂದಿ ಜನರಿಂದ ತಾವು ಗೌಣವಾಗಬಹುದು ಎಂದು ಸಣ್ಣ ಭಾಷಾ ಸಮೂಹಗಳವರು ಹೆದರಿದ್ದರು.

ನೆಹರು ಹಾಗು ಆಜಾದ್ ರಂತಹ ಹೆಚ್ಚು ಒಳಗೊಳ್ಳುವ ಸ್ವಭಾವದ ನಾಯಕರುಗಳು, ಹಿಂದಿ ಭಾಷಾ ವ್ಯಾಮೋಹಿಗಳು ತೆಗೆದುಕೊಂಡಿದ್ದ ಅವಿನೇಯ ನಿಲುವುಗಳ ವಿರುದ್ಧ ಮಾತನಾಡಿದರು. ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳು ಅಧಿಕೃತ ಭಾಷೆಗಳೆಂದು ಘೋಷಿಸಲ್ಪಟ್ಟು (ಇಂಗ್ಲೀಷ್ ೧೯೬೫ರವರೆಗೆ), ಉಳಿದ ೧೪ ಭಾಷೆಗಳು ಮಾನ್ಯಮಾಡಿದ ನುಡಿಗಳೆಂದು ಕರೆಯಲ್ಪಟ್ಟವು. ಇದರಿಂದ ಭಾರತವು ಒಂದು ಅಪಾಯಕಾರಿ ಧೃವೀಕರಣ ಪರಿಸ್ಥಿತಿಯಿಂದ ನುಣುಚಿಕೊಂಡಿತು ಅಥವಾ ಹಾಗೆ ಮಾಡಿದಂತನಿಸಿತು.

ಹಿಂದಿಯೇತರ ಭಾಷಾ ಸಮುದಾಯಗಳ ಆತಂಕಗಳನ್ನು ದೃಢೀಕರಿಸುವಂತೆ ಹಿಂದಿ ವ್ಯಾಮೋಹಿಗಳು ಆದಷ್ಟು ಕೂಡಲೆ ತಮ್ಮ ನಿಜವಾದ ಬಣ್ಣಗಳನ್ನು ಪ್ರದರ್ಶಿಸಿದರು. ಇದರಿಂದ ಘಾಸಿಗೊಂಡ ಮೊದಲ ರಾಜ್ಯ ಪಂಜಾಬ್ ಆಗಿತ್ತು. ೧೯೫೬ರಲ್ಲಿ, ಪಂಜಾಬಿ ಭಾಷೆಯು ಹಿಂದಿ ಭಾಷೆಯೊಂದಿಗೆ ಬಹಳ ಸಾಮ್ಯತೆಯನ್ನು ಹೊಂದಿದೆ ಎಂಬ ಸೋಗಿನ ವಾದದ ಆಧಾರದಲ್ಲಿ, ಪಂಜಾಬಿ ಭಾಷಿಕರಿಗೆ, ಪಂಜಾಬಿ ಆಡುವ ಪ್ರತ್ಯೇಕ ಪಂಜಾಬ್ ರಾಜ್ಯದ ಹಕ್ಕನ್ನು ನಿರಾಕರಿಸಲಾಯಿತು.

ತದನಂತರ, ಪಂಜಾಬಿ ಮಾತನಾಡುವ ರಾಜ್ಯಕ್ಕಾಗಿನ ಚಳುವಳಿ ಪ್ರಬಲವಾಗುತ್ತಿದ್ದಂತೆ, ಹಿಂದಿ ಪಕ್ಷಪಾತಿಗಳು, ಪಂಜಾಬಿ ಹಿಂದುಗಳು ೧೯೬೧ರ ಜನಗಣತಿಯಲ್ಲಿ, ತಮ್ಮ ಮಾತೃಭಾಷೆ ಹಿಂದಿಯೆಂದು ನೋಂದಾಯಿಸಬೇಕೆಂದು ಕರೆ ನೀಡಿ, ಪಂಜಾಬಿ ಭಾಷಿಕರು, ಸಂಯುಕ್ತ ಪಂಜಾಬ್(ಆಗ ಹರ್ಯಾಣ ಹಾಗು ಹಿಮಾಚಲ ಪ್ರದೇಶಗಳ ಭಾಗಗಳನ್ನು ಒಳಗೊಂಡಿತ್ತು) ನ ಹೆಚ್ಚಿನ ಭಾಗದಲ್ಲಿ, ಬಹುಮತ ಪಡೆಯುವುದನ್ನು ತಡೆಯಲು ಪ್ರಯತ್ನಿಸಿದರು. ಅದರ ಫಲಶೃತಿಯಾಗಿ, ಪಂಜಾಬಿ ಮಾತನಾಡುವ ಪಂಜಾಬ್ ಸಾಕಾರವಾದದ್ದು ೧೯೬೬ ರಲ್ಲಿಯೇ. ಅದಕ್ಕೂ ಮೊದಲು ಭಾಷಾ ವಿಚಾರವು ತಮಿಳುನಾಡಿನಲ್ಲಿ ಭುಗಿಲೆದ್ದಿತು.

೧೯೬೫ರ ಪ್ರಾರಂಭದಲ್ಲಿ, ಇಂಗ್ಲೀಷಿಗೆ ಅಧಿಕೃತ ಸ್ಥಾನ ನೀಡುವ ಸಂವಿಧಾನ ಒಪ್ಪಿತ ಕಾಲಾವಧಿ ಮುಕ್ತಾಯವಾಗುವುದು ಹತ್ತಿರವಾದಂತೆ, ಹಿಂದಿ ಹೇರಿಕೆಯ ಸಮಯ ಸನ್ನಿಹಿತವಾಗುತ್ತಿದೆ ಎಂದು ಜನ ಅಭಿಪ್ರಾಯಪಟ್ಟರು. ಈ ಸಾಮೂಹಿಕ ಅಭಿಪ್ರಾಯವು, ಹಿಂದೆ ೧೯೫೬ ಹಾಗು ೧೯೬೧ ರಲ್ಲಿ ಹಿಂದಿಯೇತರ ಭಾಷಿಕರ ಮೇಲೆ ಹಿಂದಿಯನ್ನು ಅಧಿಕಾರಕೇಂದ್ರ ಹೇರುವುದಿಲ್ಲ ಎಂದು ವಿಶ್ವಾಸ ಮೂಡಿಸುವ ಪ್ರಯತ್ನಗಳನ್ನು ಗಣನೆಗೆ ತೆಗೆದುಕೊಳ್ಳದೆ ಹೋಯಿತು. ಇದರ ಪರಿಣಾಮವಾಗಿ ಅರಾಜಕ ಪರಿಸ್ಥಿತಿ ಏರ್ಪಟ್ಟಿತು.

೧೯೫೬ರಲ್ಲಿ ಅಖಿಲ ಭಾರತ ಶಿಕ್ಷಣ ಪರಿಷತ್ತು, ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವ ಶಿಫಾರಸ್ಸು ಮಾಡಿತ್ತು. ೧೯೬೧ರ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಇದು ಪುನರುಚ್ಚರಿಸಲ್ಪಟ್ಟಿತು. ಆದರೂ ಆತಂಕಗಳು ದೂರವಾಗಿರಲಿಲ್ಲ. ಹಿಂದಿ ವ್ಯಾಮೋಹಿಗಳು ತಮ್ಮ ನಡವಳಿಕೆಗಳ ಮೂಲಕ, ಈ ರೀತಿಯ ಭಾವನೆ ಹಿಂದಿಯೇತರ ಭಾಷಿಕರ ಮನಸ್ಸುಗಳಲ್ಲಿ ಮೂಡಲು ಅವಕಾಶ ಮಾಡಿಕೊಟ್ಟಿದ್ದರು.

ತ್ರಿಭಾಷಾ ಸೂತ್ರವು, ಹಿಂದಿ ಮಾತನಾಡುವ ರಾಜ್ಯಗಳಲ್ಲಿ, ‘ಒಂದು ಆಧುನಿಕ ಭಾರತೀಯ ಭಾಷೆ’, ಎಂದರೆ ಆದ್ಯತೆಯ ಮೇರೆಗೆ ದಕ್ಷಿಣ ಬಾರತೀಯ ಭಾಷೆಗಳನ್ನು, ಹಿಂದಿ ಮತ್ತು ಇಂಗ್ಲೀಷುಗಳ ಜೊತೆಗೆ ಹಾಗೂ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯ ಜೊತೆಗೆ ಒಂದು ಪ್ರಾದೇಶಿಕ ಭಾಷೆ ಮತ್ತು ಇಂಗ್ಲೀಷನ್ನು ಕಲಿಸುವ ಪ್ರಸ್ತಾವನೆ ಹೊಂದಿತ್ತು. ಇದು ಉದ್ದೇಶ ಹಾಗು ಬಳಕೆಯಲ್ಲಿ ಸೂಕ್ತವಾಗಿ ಕಾರ್ಯಗತಗೊಳಿಸಲ್ಪಟ್ಟಿದ್ದರೆ ಒಂದು ಉತ್ತಮ ಆಶಯವಾಗಿ, ಭಾರತದ ಭಾವೈಕ್ಯತೆಯನ್ನು ಬೆಳೆಸಲು ಪ್ರಯೋಜನಕಾರಿಯಾಗಬಲ್ಲದ್ದಾಗಿತ್ತು.

ಬಹುತೇಕ ದಕ್ಷಿಣ ಭಾರತ, ತಮಿಳು ನಾಡು ಹಾಗೂ ಪಾಂಡಿಚೆರಿಯನ್ನು ಹೊರತುಪಡಿಸಿ ತ್ರಿಭಾಷಾ ಸೂತ್ರವನ್ನು ಉತ್ಸಾಹದಿಂದ ಸ್ವೀಕರಿಸಿತು. ಆದರೆ ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ, ಸಂಸ್ಕೃತವನ್ನೇ ‘ಆಧುನಿಕ ಭಾರತೀಯ ಭಾಷೆ’ಯೆಂದು ಪರಿಗಣಿಸಿ, ತೃತೀಯ ಭಾಷೆಯಾಗಿ ಕಲಿಸಲ್ಪಡುತ್ತಿದೆ. ಅವರು ಸೂತ್ರವನ್ನು ಅಕ್ಷರಶಃ ಪಾಲಿಸಿ ಅದರ ಸದುದ್ದೇಶವನ್ನು ಗಾಳಿಗೆ ತೂರಿದ್ದಾರೆ. ಈ ಪರಿಸ್ಥಿತಿಯು ಕಳೆದು ಸುಮಾರು ಐದು ದಶಕಗಳಿಂದ ಚಾಲ್ತಿಯಲ್ಲಿದೆ.

ಹಿಂದೆ, ಹಿಂದಿಯ ಸೋಂಕಿಲ್ಲದ ದೇಶದ ಭಾಗಗಳಿಗೂ ಆ ಭಾಷೆ ವಿಸ್ತರಿಸಿದೆ ಎಂಬುದು ನಿರ್ವಿವಾದಿತ. ಅಷ್ಟೇ ಅಲ್ಲಗಳೆಯಲಾಗದ ವಿಚಾರವೆಂದರೆ, ಉತ್ತರ ಭಾರತದಲ್ಲಿ, ತ್ರಿಭಾಷಾ ಸೂತ್ರದ ಪೇಲವ ಅನುಷ್ಟಾನ.

ಭಾರತದ ಒಕ್ಕೂಟ ವ್ಯವಸ್ಥೆಯು ಭಾಷಿಕ ಸಮುದಾಯಕ್ಕೆ, ಇತರರಿಗಿಂತ ಹೆಚ್ಚಿನ ಸವಲತ್ತು ನೀಡಿದೆ. ತ್ರಿಭಾಷಾ ಸೂತ್ರದ ಅನುಷ್ಟಾನ ನಿಯಮವನ್ನು ಉತ್ತರ ಭಾರತಕ್ಕೆ ಬಹುತೇಕ ಸಡಿಲಗೊಡಿಸಲಾಗಿದ್ದು, ದೇಶದ ಇತರ ಭಾಗಗಳು, ‘ರಾಷ್ಟ್ರೀಯ ಭಾವೈಕ್ಯತೆ’ಯ ಹೊರೆಯನ್ನು ಹೆಚ್ಚುವರಿಯಾಗಿ ಹೊರಬೇಕಾಗಿದೆ. ಭಿನ್ನಾಭಿಪ್ರಾಯದ ಧ್ವನಿಗಳು ಇದರ ಬಗ್ಗೆ ಕಾಲಾನುಕಾಲದಿಂದ ಗಮನಸೆಳೆಯುತ್ತಲೇ ಇದ್ದರೂ, ಈ ಸಂದೇಶದ ಸಾರವನ್ನು ಜನರಿಗೆ ತಲುಪಿಸಲು ಯಾವುದೇ ಉತ್ಸಾಹಿ ಚಳುವಳಿ ಇಲ್ಲವಾಗಿರುವುದಲ್ಲದೇ, ರಾಜಕಾರಣಿಗಳು ಕೂಡ ಈ ಸಂಗತಿಯನ್ನು ರಾಜಕೀಯ ವಿಷಯವನ್ನಾಗಿಸಲಾಗದೇ ಹೋಗಿದ್ದಾರೆ.

ಭಾರತದ ಒಕ್ಕೂಟ ತತ್ವವನ್ನು ಹೇಗೆ ಹೆಣೆಯಲಾಗಿದೆಯೆಂದರೆ, ಅದು ಕೆಲವರಿಗೆ ಆಯ್ಕೆಗಳ ಸಮಗ್ರ ಪರಿವಿಡಿಯನ್ನು ಮುಂದಿಟ್ಟರೆ, ಉಳಿದವರಿಗೆ ಸ್ಪಷ್ಟ ಲಕ್ಷ್ಮಣರೇಖೆಗಳನ್ನೆಳೆಯುತ್ತದೆ. ಹೀಗಿದ್ದಾಗ್ಯೂ, ಒಕ್ಕೂಟ ಒಂದಾಗಿ ಉಳಿದು ಬಂದಿದೆ.

ಭಾಷಾ ಪ್ರಶ್ನೆಯನ್ನು ಉತ್ತರ ಭಾರತವು ಹೊಂದಿರುವ ವಿಶಿಷ್ಟ ಸವಲತ್ತಿನ ಹಿನ್ನೆಲೆಯಲ್ಲಿ ನೋಡಿದಾಗ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊಡಮಾಡಿದ ಆರ್ಟಿಕಲ್ ೩೭೦ ಕ್ಕೆ ಬಲವಾದ ವಿರೋಧವು ಸೋಗಲಾಡಿತನದ್ದೆಂದು, ಕಂಡುಬರುತ್ತದೆ. ವಾಸ್ತವವಾಗಿ, ಆರ್ಟಿಕಲ್ ೩೭೦ ರ ಅನುಷ್ಟಾನ ಪೇಲವವಾಗಿತ್ತು. ದೂರ ಭವಿಷ್ಯದಲ್ಲಿ, ಭಾರತದೊಡನೆ ಕಾಶ್ಮೀರದ ಸಂಪೂರ್ಣ ಏಕೀಕರಣದ ಭರವಸೆಯನ್ನು ನೀಡುತ್ತಾ ಈ ವಿಧಿಯ ಮೌಲ್ಯ ಹೆಚ್ಚಾಗಿ ಸಾಂಕೇತಿಕವಾಗಿತ್ತು. ಈಗ ಆ ರಾಜ್ಯದ ವಿಶೇಷ ಸ್ಥಾನಮಾನವನ್ನು ವಿವಾದಾತ್ಮಕ ವಿಚಾರವನ್ನಾಗಿಸಿ ಅದನ್ನು ಹಿಂಪಡೆಯಲಾಗಿದೆ.

ತ್ರಿಭಾಷಾ ಸೂತ್ರವು ತನ್ನ ಮೂಲ ಹುರುಪಿನೊಂದಿಗೆ ಅನುಷ್ಟಾನಗೊಳ್ಳುವ ಸಾಧ್ಯತೆ, ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಸದ್ಯಕ್ಕಂತೂ ಕಾಣುತ್ತಿಲ್ಲ. ಆದರೆ, ಹಿಂದಿಯು ಭಾರತದ ರಾಷ್ಟ್ರೀಯ ಭಾಷೆಯೆಂಬ ಮಿಥ್ಯೆಯನ್ನು, ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು, ಬಹಳ ಕಾಲದಿಂದ ಸಾರುತ್ತಾ ಬರಲಾಗುತ್ತಿದೆ. ಒಂದೆಡೆ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ ಅದು ದೇಶದ ಇತರ ಪ್ರದೇಶಗಳೊಂದಿಗೆ ನಿಧಾನವಾಗಿ ಭಾವೈಕ್ಯ ಸಾಧಿಸಲು ಅನುವುಮಾಡಿಕೊಟ್ಟ ಕ್ರಮವನ್ನು ಹೀಯಾಳಿಸುತ್ತಲೇ, ಇನ್ನೊಂದೆಡೆ ಭಾಷೆಗಳ ವಿಚಾರಲ್ಲಿ ಅಂಥಹುದೇ ನಿಧಾನಗತಿಯ ಭಾವೈಕ್ಯತೆಯ ವಿಧಾನ ಅನುಸರಿಸುವುದನ್ನು ಸರಿಯಾದ ಕ್ರಮವೆಂದು ಪರಿಗಣಿಸಲಾಗುತ್ತಿದೆ ಎಂಬುದು ಸ್ಪಷ್ಟ.

ಭಾರತದ ಪ್ರಜಾಪ್ರಭುತ್ವ ಪ್ರಯೋಗದ ‘ಹೊಂದಾಣಿಕೆ’ಗಳು ಕಾರಣಗಳಿಲ್ಲದೆ ಇಲ್ಲ. ಈ ಹೊಂದಾಣಿಕೆಗಳಿದ್ದಾಗ್ಯೂ ‘ಭಾರತದ ಕಲ್ಪನೆ’ಯನ್ನು ಒಟ್ಟಾಗಿಡುವುದು ಪ್ರಯಾಸಕರವಾಗಿದೆ. ಇದಕ್ಕೆ, ತಂತ್ರ, ರಾಜನೀತಿ ಹಾಗು ಪ್ರತಿಯೊಬ್ಬರನ್ನೂ ಒಳಗೊಳ್ಳಬೇಕಾದ ಅಗತ್ಯವನ್ನು ಗುರುತಿಸುವುದು ಮುಖ್ಯವಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಈ ಗುರುತಿಸುವಿಕೆಯ ಜವಾಬ್ದಾರಿ, ಹಿಂದಿಯೇತರ ರಾಜ್ಯಗಳ ಪಾಲಿಗೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ. ಹಿಂದಿ ಆಡುವ ರಾಜ್ಯಗಳು ಈಗಿನಂತೆ, ತಮಗೆ ಸವಲತ್ತನ್ನುಗಳಿಗಾಗಿ ಒತ್ತಾಯಿಸುತ್ತವೆಯೇ ಹೊರತು ಹಿಂದಿರುಗಿಸಿ ಇತರರಿಗೆ ಯಾವುದೇ ಸೌಕರ್ಯಗಳನ್ನು ನೀಡುತ್ತಿಲ್ಲ.

ಅನುವಾದ: ರೋಹಿತ್ ರಾಮಚಂದ್ರಯ್ಯ, ಕಾರ್ತಿಕ್ . ಆರ್ ನೆರವಿನೊಂದಿಗೆ.

2 comments to “ಹಿಂದಿಗೇಕೆ ವಿಶೇಷ ಸ್ಥಾನಮಾನ ? ಅದನ್ನು ಆರ್ಟಿಕಲ್ ೩೭೦ ರಂತೆಯೇ ತೆಗೆದುಹಾಕಿ”
  1. ಲೇಖನ ಚೆನ್ನಾಗಿದೆ. ಹಿಂದೀ ಭಾಷೆಯ ಹೇರಿಕೆ ಹೀಗೇ ಮುಂದುವರಿದರೆ ದೇಶ ಮತ್ತೊಮ್ಮೆ ಒಡೆಯಲಿದೆ

  2. ನಿಜಸ್ಥಿತಿಯನ್ನು ಪರಿಣಾಮಕಾರಿಯಾಗಿ ಲೇಖಕರು ವಿವರಿಸಿದ್ದಾರೆ…ಸಾಮಾಜಿಕ ಅಸಮಾನತೆ, ಆರ್ಥಿಕ ಬಡತನ , ನಿರಕ್ಷರತೆ ಮುಂತಾದವುಗಳನ್ನು ಮರೆಮಾಚಲು ಹಿಂದಿ ನಾಡಿನವರು ಹಿಂದಿಯನ್ನು ಕರಗದಂತೆ ಮೆರೆಸುತ್ತಾರೆ

ಪ್ರತಿಕ್ರಿಯಿಸಿ