ಅಸುರನ್ : ಪ್ರಜಾಸತ್ತೆಯ ನೆಲೆಯಲ್ಲೇ ಬದುಕಿನ ಅರ್ಥ ಹುಡುಕುವ ಸಮರ್ಥ ದಲಿತ ಕಥನ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಮಿಳು ಚಿತ್ರ ನಿರ್ದೇಶಕ ವೆಟ್ರಿ ಮಾರನ್ ನಿರ್ದೇಶನದ 5 ನೇ ಸಿನೆಮಾ “ಅಸುರನ್” ಭಾರತೀಯ ದಲಿತ ಕಥನವೊಂದನ್ನು ಸಮರ್ಥ ರೀತಿಯಲ್ಲಿ ಚಿತ್ರರೂಪಕ್ಕೆ ತಂದಿದೆ . 1982ನೇ ಇಸವಿಯಲ್ಲಿ ಪ್ರಕಟವಾದ 2014 ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ತಮಿಳು ಕಥೆಗಾರ ‘ಪೂಮಣಿ’ಯವರ ‘ವೆಕ್ಕೈ’ (ಉರಿ) ಎಂಬ ತಮಿಳು ಕಾದಂಬರಿಯ ಚಿತ್ರರೂಪ ವೆಟ್ರಿಮಾರನ್ ನಿರ್ದೇಶಿಸಿರುವ ‘ಅಸುರನ್.’ ಮೂಲತಃ ಈ ಕಥೆ ಅಸುರನ್ ಚಿತ್ರದಲ್ಲಿ ಇರುವಂತೆ ಶಿವಸಾಮಿ’ಯದ್ದಲ್ಲ. ಬದಲಾಗಿ ಶಿವಸಾಮಿಯ ಎರಡನೆಯ ಮಗ 15 ವರ್ಷದ ‘ಚಿದಂಬರ’ನದ್ದು. ಈ ಕಾದಂಬರಿ “Heat” ಎಂಬ ಹೆಸರಿನಲ್ಲಿ ಇಂಗ್ಲೀಷಿನಲ್ಲಿ ಅನುವಾದಗೊಂಡಿದೆ.

ಅಸುರನ್ ಚಿತ್ರವನ್ನು ನೋಡಿ ಚಿತ್ರಮಂದಿರದಿಂದ ಹೊರಬಂದಾಗ ನಾನಿನ್ನೂ ರೋಮಾಂಚಿತನಾಗಿಯೇ ಇದ್ದೆ. ನನ್ನ ಬುದ್ಧಿ ಕೆಲಕಾಲ ಸ್ಥಬ್ದವಾಗಿತ್ತು. ನನಗೆ ತಮಿಳು ಭಾಷೆಯನ್ನು ಓದಲಾಗಲೀ, ಮಾತನಾಡಲಾಗಲೀ ಅಥವಾ ಬರೆಯಲಾಗಲೀ ಬರುವುದಿಲ್ಲ; ಮತ್ತು ಚಿತ್ರದ ಯಾವ ಸಂಭಾಷಣೆಯೂ ನನಗೆ ಅರ್ಥವಾಗಿರಲಿಲ್ಲ (ನಾನೂ ನೋಡಿದ ಶೋನಲ್ಲಿ subtitles ಇರಲಿಲ್ಲ). ಆದಾಗ್ಯೂ ನನಗೆ ಈ ಕಥೆ ಗೊತ್ತಿದೆ ಎಂದೇ ಅಂದುಕೊಂಡೆ. ಏಕೆಂದರೆ, ನಾನು ಈ ಕಥೆಯನ್ನು ಓದಿದ್ದೆ. ಹಾಗೆಯೇ ಬದುಕಿದವರನ್ನೂ ಬಲ್ಲವನಾಗಿದ್ದೆ. ಹಾಗಾಗಿಯೇ ಈ ಚಿತ್ರವನ್ನು ನೋಡಲು ಹೋದೆ. (ಅಸುರನ್ ಪೂಮಣಿಯವರ “ವೆಕ್ಕಯ್” ಕಾದಂಬರಿ ಆಧಾರಿತ ಚಿತ್ರ).

ಹಾಗೆ ನೋಡಿದಲ್ಲಿ ಅಸುರನ್ ತನ್ನ ಕಥೆಯನ್ನು ಹೇಳುವಲ್ಲಿ ಮಹತ್ತರ ಯಶಸ್ಸನ್ನೇ ಸಾಧಿಸಿದೆ. ಅದು ತನ್ನ ಭಾಷೆಯ ಗಡಿಯನ್ನು ಮೀರಿ ಸಾಗಿದೆ. ಊಳಿಗಮಾನ್ಯ ಪದ್ದತಿಯ (ಮೇಲ್ಜಾತಿಯವರ) ಕ್ರೌರ್ಯವನ್ನು ಮತ್ತು (ದಲಿತರ ಮೇಲಿನ) ಆ ಹಕ್ಕಿನ ಸಮರ್ಥನೆಯನ್ನು(ದಬ್ಬಾಳಿಕೆ) ನೀವು ಅರಿತಿದ್ದಲ್ಲಿ, ಈ ಕಥೆಯನ್ನು ಒಂದು ಚಲನಚಿತ್ರವಾಗಿ ನೋಡುವಲ್ಲಿ ಇರುವುದರ ಮಹತ್ವ ನಿಮಗೆ ಅರ್ಥವಾಗುತ್ತದೆ ಮತ್ತು ದಲಿತ ಜನಾಂಗದವರ ಬಗ್ಗೆ ಹೊಸ ಆಯಾಮವೊಂದು ಮೂಡುತ್ತದೆ. ಅವರು ಕೇವಲ ಜಾತಿಪದ್ಧತಿಯ ಕ್ರೌರ್ಯದ ಬಲಿಪಶುಗಳಾಗಿ ಕಾಣದೇ, ಹೋರಾಟಗಾರರಾಗಿ ಕಾಣಲಾರಂಭಿಸುತ್ತಾರೆ.

ಬಾಲಿವುಡ್‍ನ ಸೇಡಿನ ಆಧಾರಿತ ಬಹುತೇಕ ಚಲನಚಿತ್ರಗಳು ಮೇಲ್ಜಾತಿಯ ಭೂಮಾಲಿಕರ ವಿರುದ್ಧದ ಹೋರಾಟದಲ್ಲಿ ತಮ್ಮ ಹಕ್ಕುಗಳ ಪ್ರತಿಪಾದನೆಯ ಆಯುಧವನ್ನು ಮೇಲ್ಜಾತಿಯವರ ಕೈಯಲ್ಲಿಯೇ ಇಡುತ್ತವೆ. ನನಗನ್ನಿಸಿದಂತೆ ಬಾಲಿವುಡ್ ದಲಿತರ ಬಗೆಗಿನ ಸಾಮಾಜಿಕ ಇತಿಹಾಸವನ್ನು ತಿರುಚಿ ಸಾರುತ್ತದೆ. ಅಸುರನ್ ಆ ಎಲ್ಲಾ ಬಾಲಿವುಡ್ ಚಿತ್ರಗಳಿಗೆ ಉತ್ತರವಾಗಿದೆ.

'ವೆಕ್ಕೈ' ಕಾದಂಬರಿಯ ಮುಖಪುಟ ಮತ್ತು ಲೇಖಕ ಪೂಮಣಿ

‘ವೆಕ್ಕೈ’ ಕಾದಂಬರಿಯ ಮುಖಪುಟ ಮತ್ತು ಲೇಖಕ ಪೂಮಣಿ

ಅಸುರನ್ ಕಥೆಯನ್ನು ನಾನು ಓದಿದ್ದೇನೆ, ನೋಡಿದ್ದೇನೆ ಮತ್ತು ಅರಿತಿದ್ದೇನೆ. ಏಕೆಂದರೆ ಇದು ಭಾರತದಾದ್ಯಂತ, ಪ್ರಜಾಪ್ರಭುತ್ವದ ಅಡಿಯಲ್ಲಿ, ಹೆದರದೇ, ತಮ್ಮ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುತ್ತಿರುವ, ತಮ್ಮ ಬದುಕಿಗೊಂದು ಘನತೆಯನ್ನು ತಂದುಕೊಳ್ಳುತ್ತಿರುವ ಮತ್ತು ಅರ್ಥ ಕಂಡುಕೊಳ್ಳುತ್ತಿರುವ ಎಲ್ಲಾ ದಲಿತ ಸಮುದಾಯದವರ ಕಥೆ. ಇನ್ನೂ ವಿಸ್ತರಿಸಿ ಹೇಳುತ್ತೇನೆ, ಕೇಳಿ.

2006ರಲ್ಲಿ, ಮಹಾರಾಷ್ಟ್ರದಲ್ಲಿ ಖೈರ್ಲಾಂಜಿ ಹತ್ಯಾಕಾಂಡ (Khairlanji massacre) ನಡೆಯಿತು. ಇದು ಶುರುವಾದದ್ದು ಹೀಗೆ. ಭೋಟ್ಮಂಗೆ (Bhotmange, ದಲಿತ/ಬೌದ್ಧ) ಪರಿವಾರವೊಂದು ಜಮೀನನ್ನು ಹೊಂದಿ ಗೌರವಯುತ ಜೀವನವನ್ನು ನಡೆಸುತ್ತಿತ್ತು. ಮಗಳಾದ ಪ್ರಿಯಾಂಕ ಓದಿನಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದಳು. ಇದನ್ನು ಗಮನಿಸಿದ ಅಲ್ಲಿನ ಕುಂಬಿಗಳು(ಮೇಲ್ಜಾತಿಯವರು) ಅಸೂಯೆಯಿಂದ, ಪ್ರಿಯಾಂಕಳ ತಾಯಿಯಾದ ಸುರೇಖ ಭೋಟ್ಮಂಗೆ ಅವರಿಗೆ ತೊಂದರೆ ಕೊಡಲು ಶುರು ಮಾಡುತ್ತಾರೆ. ಅವರ ಜಮೀನಿಗೆ ಸುಮ್ಮನೆ ನೀರು ಬಿಟ್ಟೋ, ಇಲ್ಲವೇ ನೀರನ್ನು ನಿಲ್ಲಿಸಿಯೋ ಬೆಳೆಗೆ ತೊಂದರೆಯಾಗುವಂತೆ ಮಾಡುತ್ತಾರೆ. ಸುರೇಖ ಪೋಲಿಸರ ಬಳಿ ದೂರು ದಾಖಲಿಸುತ್ತಾರೆ. ಇಲ್ಲಿಂದ ಶುರುವಾದ ಘರ್ಷಣೆ ಆಧುನಿಕ ಭಾರತದ ಇತಿಹಾಸದಲ್ಲೇ ಅತೀ ಕ್ರೂರವಾದ ಜಾತಿ ಆಧಾರಿತ ಹತ್ಯಾಕಾಂಡಕ್ಕೆ ಎಡೆ ಮಾಡಿಕೊಟ್ಟಿತು.

ಭಾರತದಲ್ಲಿನ ಕ್ರೌರ್ಯ ಅಥವಾ ಅದರ ಪ್ರತಿಪಾದನೆಯ/ಸಮರ್ಥನೆಯ(ದಬ್ಬಾಳಿಕೆಯ) ಇತಿಹಾಸದ ಬಗ್ಗೆ ನಿಮಗೆ ಗೊತ್ತಿದ್ದಲ್ಲಿ, ಆಸುರನ್ ನಿಮಗೆ ಖಂಡಿತಾ ಅರ್ಥವಾಗುತ್ತದೆ. ಪಂಚಾಯಮ್ಮನ ಪಾತ್ರದಲ್ಲಿ(ಮಂಜು ವಾರಿಯರ್ ಅಭಿನಯ) ನೀವು ಸುರೇಖ ಭೋಟ್ಮಂಗೆಯವರನ್ನು ಕಾಣುತ್ತೀರಿ. ಆಸುರನ್‍ ಎಷ್ಟೋ ಶತಮಾನಗಳ ಹೋರಾಟದ ಕಥೆಯೆಂದು ನಿಮಗೆ ಅರಿವಾಗುತ್ತದೆ. ಅದರಲ್ಲಿ, ಶೋಷಿತರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹೋರಾಟಗಾರರಾಗಿ ರೂಪಾಂತರಗೊಳ್ಳುತ್ತಾರೆ.

ವೆಟ್ರಿ ಮಾರನ್‍ರವರ ಮುಂಚಿನ ಚಿತ್ರಗಳಿಗೆ ಹೋಲಿಸಿದಲ್ಲಿ(ಆಡುಕಲಮ್ ನನ್ನ ನೆಚ್ಚಿನ ಚಿತ್ರ) ಅಸುರನ್ ಹೆಚ್ಚು ಪ್ರತಿಮಾತ್ಮಕ ಮತ್ತು ದರ್ಶನದ ದೃಷ್ಟಿಯಿಂದಲೂ ಹೆಚ್ಚು ಶಕ್ತ. ಅದರ ನಿಜವಾದ ಗೆಲುವು, ಕ್ರೌರ್ಯಾಧಾರಿತ ಸಾಮಾಜಿಕ ಇತಿಹಾಸವನ್ನು ಸೂಚ್ಯವಾಗಿ ಮತ್ತು ಅಷ್ಟೇ ಅದ್ಭುತವಾಗಿ ಬಿಂಬಿಸಿರುವ ಸಿನಿಮೀಯ ಭಾಷೆಯಲ್ಲಿ ಅಡಗಿದೆ. ಉದಾಹರಣೆಗೆ, ತನ್ನ ಜಮೀನಿಗೆ ಹಂದಿಯೊಂದು ನುಗ್ಗಿದಾಗ ಸಿವಸಾಮಿ(ಧನುಷ್) ಮತ್ತು ಆತನ ಮಗ ಮುರುಗನ್ ಅದನ್ನು ಹಿಡಿಯಲು ಹೋಗುತ್ತಾರೆ. ಅದು ಹೇಗೋ ತಪ್ಪಿಸಿಕೊಂಡು ನರಸಿಂಹನ ವಿದ್ಯುತ್ ಹರಿಯುವ ಮುಳ್ಳುತಂತಿಯ ಬೇಲಿಯಿರುವ ಜಮೀನಿನ ಕಡೆ ಸಾಗುತ್ತದೆ. ಆ ಹಂದಿಯೇನೋ ಅದನ್ನು ದಾಟಿ ತಪ್ಪಿಸಿಕೊಳ್ಳುತ್ತದೆ. ಆದರೆ, ಸಿವಸಾಮಿಯ ನಾಯಿ ಅದನ್ನು ದಾಟಲಾಗದೇ, ವಿದ್ಯುತ್ ತಗುಲಿ, ಸಾಯುತ್ತದೆ. ಇಲ್ಲಿ ಆ ಮುಳ್ಳುತಂತಿ ಅಸ್ಪೃಶ್ಯತೆಯ ಧ್ಯೋತಕ. ಅದನ್ನು ದಾಟಲು ಕಾಡುಹಂದಿಗೆ ಸಾಧ್ಯ; ಆದರೆ ದಲಿತ ಜನಾಂಗದ ಜನರಿಗಾಗಲಿ ಅಥವಾ ಅವರ ಸಾಕುಪ್ರಾಣಿಗಳಿಗಾಗಲಿ ಸಾಧ್ಯವಿಲ್ಲ.

ಇನ್ನೊಂದು ಸನ್ನಿವೇಶದಲ್ಲಿ, ಕಥೆ ಸ್ವಲ್ಪ ಹಿಂದೆ ಸಾಗಿದಾಗ, ಸಿವಸಾಮಿ ಚಪ್ಪಲಿ ಹಾಕಿಕೊಂಡು ಸಂತೆಯಲ್ಲಿ ಗಾಂಭೀರ್ಯದಿಂದ ನಡೆಯುತ್ತಿರುತ್ತಾರೆ. ತನ್ನ ಶಾಲಾದಿನಗಳ ಪ್ರೇಯಸಿಗೂ ಕೂಡ ಶಾಲೆಗೆ ಚಪ್ಪಲಿ ಹಾಕಿಕೊಂಡು ಬರಲು ಪ್ರೇರೇಪಿಸಿರುತ್ತಾರೆ. ಇದು ಮೇಲ್ಜಾತಿಯವರಿಗೆ ಸರಿ ಕಾಣದೇ ಹಿಂಸೆಯ ರೂಪ ತಾಳುತ್ತದೆ ಮತ್ತು ಅದಕ್ಕೆ, ಮುಂದಿನ ಸನ್ನಿವೇಶದಲ್ಲಿ, ಸಿವಸಾಮಿ ಹಿಂಸೆಯಿಂದಲೇ ಉತ್ತರಿಸುತ್ತಾರೆ. ಹೀಗೆ, ಜಾತಿಪದ್ದತಿಗೆ ಹಿಂಸೆಯಿಂದಲೇ ಉತ್ತರಿಸಿದರೂ ತಮ್ಮ ಪಂಚಮಿ ನೆಲದ ಹೋರಾಟಕ್ಕಾಗಿ ಸಿವಸಾಮಿ ತನ್ನ ಸಹೋದರನ ಜೊತೆ ಪ್ರಜಾಪ್ರಭುತ್ವದ ಹಾದಿಯನ್ನೇ ಹಿಡಿಯುತ್ತಾರೆ. ಇದು, ಸಿವಸಾಮಿಯ ಪ್ರೇಯಸಿ ಮರಿಯಮ್ಮನೂ(ಅಮ್ಮು ಅಭಿರಾಮಿ) ಸೇರಿದಂತೆ, ಮತ್ತಷ್ಟು ಸಾವು-ನೋವುಗಳಿಗೆ ಕಾರಣವಾಗುತ್ತದೆ. ಈ ಸನ್ನಿವೇಶವನ್ನು ಹೀಗೆ ವ್ಯಾಖ್ಯಾನಿಸಬಹುದು. ದಲಿತನೊಬ್ಬ ಪ್ರಜಾಪ್ರಭುತ್ವದ ಹಾದಿಯಲ್ಲಿಯೇ ಹೋರಾಡಲು ಪ್ರಯತ್ನಿಸಿದರೂ ಆತ ಮೇಲ್ಜಾತಿಯವರಿಂದ ಅಪಹಾಸ್ಯಕ್ಕೆ ಒಳಗಾಗುವುದರ ಜೊತೆಗೆ ತನಗೆ ಅತ್ಯಮೂಲ್ಯವಾದ ಪ್ರೀತಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಆದರೆ ಚಿತ್ರದ ಕೇಂದ್ರಬಿಂದುವಾಗಿರುವ ಹಾಗೂ ಶಿವಸಾಮಿಯಲ್ಲಿ ಭವಿಷ್ಯದಲ್ಲಿ ಹಕ್ಕು ಸಾಧನೆ (ಶಿಕ್ಷಣದ ಮೂಲಕ) ಮಾಡಬೇಕೆಂಬ ಯೋಚನೆ ಹಚ್ಚಲು ಕಾರಣವಾಗುವ ದೃಶ್ಯ ಆತನ ಹಿರಿಮಗ ಮುರುಗನ್ ಮರಣದ್ದು. ತದನಂತರದ ಸನ್ನಿವೇಶಗಳು ಸಿವಸಾಮಿಯಲ್ಲಿ ಅಸಹಾಯಕತೆಯ ಭಾವವನ್ನು ಹುಟ್ಟುಹಾಕುತ್ತವೆ. ಆತನ ಕುಟುಂಬ, ಕ್ರೌರ್ಯದ ವಿರುದ್ಧ ಕಾನೂನಿನ ಹೋರಾಟವನ್ನು ಮುಂದುವರಿಸುತ್ತದೆಯಾದರೂ ಅದಕ್ಕೆ ಯಾವ ಪ್ರತಿಫಲವೂ ಸಿಗುವುದಿಲ್ಲ.

ಆಸುರನ್‍ನ ಕೊನೆಯ ದೃಶ್ಯ ಮತ್ತು ಸಿವಸಾಮಿಯ ಮಾತು ಈ ಚಿತ್ರದ ನಿರ್ಮಾಪಕರ ಮತ್ತು ನಿರ್ದೇಶಕರ ದೃಷ್ಟಿಕೋನವನ್ನು ಸಾದರಪಡಿಸುತ್ತದೆ. ನನ್ನ ಪ್ರಕಾರ, ಈ ಚಿತ್ರ ನೋಡುಗರ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರುತ್ತದೆ. ಏಕೆಂದರೆ, ಅಂತ್ಯದಲ್ಲಿ, ಈ ಚಿತ್ರವು ನಾಯಕ ಸಿವಸಾಮಿಯ ಸೇಡನ್ನೂ ಮೀರಿ ಮುಂದೆ ಸಾಗುತ್ತದೆ. ಆತ ಹಿಂಸೆ ಮತ್ತು ರಕ್ತಪಾತದ ಸಮರ್ಥನೆಯ ಇತಿಹಾಸವನ್ನು ದಾಟಿ ಮುಂದೆ ಸಾಗುತ್ತಾನೆ. ಅವಮಾನಕ್ಕೆ ಆಗಾಗ ಗುರಿಯಾಗುವ ಮತ್ತು ಅದನ್ನು ಕಾಲಕಾಲಕ್ಕೆ ವಿರೋಧಿಸುವ ಮನೋಭಾವದ ಸಿವಸಾಮಿ, ಚಿತ್ರದ ಕೊನೆಯಲ್ಲಿ, ತನ್ನ ಅಣ್ಣ ಮುರುಗನ್‍ನನ್ನು ಕೊಂದ, ನರಸಿಂಹನನ್ನು ಸಾಯಿಸಿದ ತನ್ನ ಎರಡನೇ ಮಗ ಚಿದಂಬರನ್‍ಗೆ ಹೀಗೆ ಹೇಳುತ್ತಾನೆ; “ನಮ್ಮ ಬಳಿ ಜಮೀನಿದ್ದರೆ, ಅವರು ತೆಗೆದುಕೊಳ್ಳುತ್ತಾರೆ. ನಮ್ಮ ಬಳಿ ಹಣವಿದ್ದರೆ, ಅವರು ಕಿತ್ತುಕೊಳ್ಳುತ್ತಾರೆ. ಆದರೆ ನಮ್ಮ ಬಳಿ ವಿದ್ಯೆಯಿದ್ದರೆ ಅದನ್ನೆಂದೂ ಅವರು ನಮ್ಮಿಂದ ಕಸಿಯಲಾಗುವುದಿಲ್ಲ”, ಮತ್ತು ನಗುತ್ತಾನೆ.

ಸಿವಸಾಮಿಯ ಆ ನಗು, ಧೈರ್ಯದಿಂದ ಭೂಮಾಲೀಕರನ್ನು ಎದುರಿಸುವ, ಅವರ ಜಾತಿಪದ್ದತಿಯನ್ನು ವಿರೋಧಿಸುವ ಮತ್ತು ಗೌರವಯುತ ಬದುಕಿಗಾಗಿ ಹೋರಾಡುವ ಹೋರಾಟಗಾರನ ಬದುಕಿಗೆ ಅರ್ಥ ಪ್ರಾಪ್ತಿಯಾಗುವುದರ ಸಂಕೇತವಾಗಿದೆ. ಅಸುರನ್ ಸೇಡಿನ ಬಗ್ಗೆ ಇರುವ ಚಿತ್ರವಲ್ಲ; ಇದು, ಇತ್ತೀಚಿಗಷ್ಟೇ ತಾವು ಅಸ್ಪೃಶ್ಯತೆಯ ಬಲಿಪಶುಗಳು ಎಂಬ ಭಾವನೆಯನ್ನು ತೊಡೆದುಹಾಕಿ, ಪ್ರಜಾಪ್ರಭುತ್ವದ ಹಾದಿಯನ್ನು ಹಿಡಿದು, ಶಿಕ್ಷಣ ಮುಖೇನ ನ್ಯಾಯಯುತ, ಸಹಬಾಳ್ವೆಯ ಹಾಗೂ ಸ್ವಾತಂತ್ರ್ಯದ ಬದುಕು ಸಾಧ್ಯ ಎಂದು ಪ್ರತಿಪಾದಿಸಿದ ಹೋರಾಟಗಾರರ ಇಡೀ ಸಮುದಾಯದ ಜೀವನ ಕಥನ.

ಇದು ಸೇಡಿನ ಚಿತ್ರವಾಗಿದ್ದಲ್ಲಿ, ಅಂತ್ಯದಲ್ಲಿ, ಶಿಕ್ಷಣದ ಮಹತ್ವವನ್ನು ಸಾರುತ್ತಿರಲಿಲ್ಲ. ಏಕೆಂದರೆ, ಸೇಡಿನ ಚಿತ್ರಗಳು ಶತ್ರುವಿನ ಕೊಲೆಯಲ್ಲಿ ಕೊನೆಯಾಗುತ್ತವೆ. ಆದರೆ ಅಸುರನ್, ದಲಿತರು ಪ್ರತಿದಿನ ಹೇಗೆ ತಮ್ಮದೇ ಹಾದಿಯಲ್ಲಿ ಬದುಕುತ್ತ, ಗುದ್ದಾಡುತ್ತ, ವಿರೋಧಿಸುತ್ತ, ಅಂಬೇಡ್ಕರ್ ಹೇಳಿದುದನ್ನು (ಶಿಕ್ಷಣ, ಸಂಘಟನೆ ಮತ್ತು ಆಂದೋಲನ) ಅರ್ಥೈಸಿಕೊಳ್ಳುತ್ತ ಸಾಗುತ್ತಿದ್ದಾರೆ ಎನ್ನುವುದರ ಕಥೆ!

ಅನುವಾದ : ಅಖಿಲೇಶ್ ಚಿಕ್ಕದೇವನೂರ್

ಪ್ರತಿಕ್ರಿಯಿಸಿ