ಒಳ ಅರಿವಿನ ಬೇರುಗಳ ಶೋಧ

ಕಥನದ ಮೂಲಕ ಬದುಕಿನ ರಚನೆಯನ್ನು ಆಳವನ್ನು ಶೋಧಿಸಲು ಹೊರಡುವ ಹಂಬಲ ಜಗತ್ತಿನ ಅನೇಕ ಕಾದಂಬರಿಗಳ ಮೂಲದ್ರವ್ಯವೇ ಹೌದು. ಬದುಕನ್ನು ರೂಪಿಸುವ ಅನೇಕ ಸಂಕೀರ್ಣ ವ್ಯವಸ್ಥೆಗಳನ್ನು ನಿರಚಿಸುತ್ತ ನಡೆದಾಗ ಮುಗ್ಧವಾದ ಅರಿವೊಂದು ತೆರೆದುಕೊಳ್ಳುತ್ತದೆ. ಈ ಮುಗ್ಧತೆ ಎಲ್ಲ ಬೌದ್ಧಿಕ ಸಂಘರ್ಷ, ವೈಚಾರಿಕ ಮಂಥನಗಳಾಚೆ ಲಭಿಸುವ ಮೌನದಲ್ಲಿ ಅರಳಿದ ಮುಗ್ಧತೆ. ಹಾಗಂತ ಅದು ಶೂನ್ಯದಿಂದ ಲಭಿಸಿದ್ದಲ್ಲ. ಅದು ಎಲ್ಲ ಸಂಕೀರ್ಣ ಅನುಭವಗಳ ಒಡಲಿನಿಂದಲೇ ಎದ್ದುಬಂದದ್ದು. ಎಲ್ಲ ಸದ್ದುಗಳು ಮುಗಿದ ಮೇಲೆ ಆವರಿಸುವ ಶಾಂತಸ್ಥಿತಿಯಲ್ಲಿ ಹರಡುವ ಪೂರ್ಣತೆಯ ಅನುಭವವನ್ನು ಮೂಡಿಸುವ ಅರಿವಿನ ಮೌನವದು. ಇಂಥದೊಂದು ಸಿದ್ಧಿಸುವುದಕ್ಕೂ ಮೊದಲು ಬದುಕಿನ ಎಲ್ಲ ಕೇಡುಗಳನ್ನು, ತಳಮಳಗಳನ್ನು ಹಾಯ್ದು ಬರಲೇಬೇಕು. ಅದು ಮನುಷ್ಯನ ಪಾಡು. ಹಾಯ್ದು ಬರುವ ಅನುಭವಲೋಕದ ಎಲ್ಲ ಸೂಕ್ಷ್ಮಛಾಯೆಗಳನ್ನು ಅದರೆಲ್ಲ ನೆರಳು-ಬೆಳಕಿನ ವಿನ್ಯಾಸದೊಟ್ಟಿಗೆ ಹಿಡಿಯಲು ಕಾದಂಬರಿ ಒಂದು ಸಶಕ್ತ ಮಾಧ್ಯಮ. ಅದೊಂದು ಮಹಾಕಥನ. ಮನುಷ್ಯ ಪ್ರಜ್ಞೆಯು ಅವನು/ಳು ಬದುಕುವ ಪರಿಸರದೊಟ್ಟಿಗೆ ವಿಕಾಸಗೊಳ್ಳುವ ಬಹು ನಿಧಾನಗತಿಯನ್ನು ವಿಶಾಲವಾದ ಕ್ಯಾನ್ವಾಸಿನಲ್ಲಿ ವಿವರವಾಗಿ ಚಿತ್ರಿಸಲು ಕಾದಂಬರಿಗೆ ಸಾಧ್ಯ. ಅಂಥ ಮಹತ್ವಾಕಾಂಕ್ಷೆಯನ್ನು ಹೊತ್ತು ಬರಹಕ್ಕಿಳಿಸಿದ್ದಕ್ಕಾಗಿ ಶ್ರೀಧರ ಬನವಾಸಿ ಅವರನ್ನು ಅಭಿನಂದಿಸಲೇಬೇಕು. ಕನ್ನಡ ಕಥನ ಜಗತ್ತಿನ ವಿಸ್ತಾರದಲ್ಲಿ ಬೇರೂರುವ ಅವರ ಈ ಪ್ರಯತ್ನ ಸಾಕಷ್ಟು ಮಹತ್ವದ್ದು.

ಕನ್ನಡ ಕಾದಂಬರಿ ಜಗತ್ತನ್ನು ಒಂದು ಬೀಸಿನಲ್ಲಿ ಗ್ರಹಿಸುವುದಾದರೆ, ವ್ಯವಸ್ಥೆಯನ್ನು ವೈಚಾರಿಕವಾಗಿ ಗ್ರಹಿಸುವ ಮಾದರಿಯ ಕಥನಗಳಿರುವಂತೆ, ಅದನ್ನು ಸಂವೇದನೆಯ ಭಾಗವಾಗಿ ನಿರೂಪಿಸುತ್ತ ಹೋಗುವ ಕಥನಗಳೂ ಇವೆ. ನಿರುಮ್ಮಳವಾದ ತಾದಾತ್ಮ್ಯದಿಂದ ಬದುಕಿನ ಚಲನೆಯನ್ನು ಅರಿಯುತ್ತಲೇ ಹರಿಯುವ ನದಿಯಂತೆ ಸಾಕ್ಷಿಪ್ರಜ್ಞೆಯಿಂದ ಕಾಣುವ ಕಾದಂಬರಿಗಳಿವೆ. ಇಂಥ ಕಾದಂಬರಿಗಳು ಪೂರ್ವನಿರ್ಧರಿತ ಸಿದ್ಧಾಂತಗಳನ್ನು ಕಟ್ಟುವ ಕಾದಂಬರಿಗಳಲ್ಲ. ನಿರ್ದಿಷ್ಟ ವೈಚಾರಿಕ ಆಕೃತಿಯೊಂದನ್ನು ನಿರ್ಮಿಸಲು ಹೊರಟಾಗ ಅಂಥ ಕಾದಂಬರಿಯ ಪಾತ್ರಗಳು ತಮ್ಮ ಸ್ವಾಯತ್ತ ಶಕ್ತಿಯನ್ನು ಕಳೆದುಕೊಂಡು ದುರ್ಬಲವಾಗಿಬಿಡುತ್ತವೆ. ಅವು ನಿರೂಪಕನ ಕೈಗೊಂಬೆಗಳಾಗಿ ಪೇಲವವಾಗುತ್ತವೆ. ಕುವೆಂಪು, ಕಾರಂತರಂತವರ ಕಾದಂಬರಿಗಳು ಎಲ್ಲ ಕಾಲಕ್ಕೂ ನಮ್ಮ ಸಂವೇದನೆಯನ್ನು ಪ್ರಚೋದಿಸುವುದು ಯಾಕೆಂದರೆ ಅವು ತಮ್ಮೊಳಗಿನ ಕಟ್ಟಕಡೆಯ ವ್ಯಕ್ತಿಯೊಳಗನ್ನೂ ಸೂಕ್ಷ್ಮವಾಗಿ ಅಗೆದು ಅವರ ಭಾವದ ಬೇರುಗಳನ್ನು ಕಾಣಿಸುತ್ತವೆ. ಕೇವಲ ಮನುಷ್ಯರಷ್ಟೇ ಅಲ್ಲ, ಅವರು ಬದುಕುವ ಜೀವಂತ ಪರಿಸರದ ಸಕಲ ಚರಾಚರಗಳನ್ನೂ ನಮ್ಮ ಪ್ರಜ್ಞೆಯ ಭಾಗವನ್ನಾಗಿ ಮಾಡಿಬಿಡುತ್ತವೆ. ಪರಿಸರ ಹಾಗೂ ಪ್ರಜ್ಞೆಗಳ ಸ್ವಾಯತ್ತ ಚೆಲುವು ಅಲ್ಲಿ ಮಾಯದಂತೆ ಕಾಯಲ್ಪಡುತ್ತದೆ. ಕಾಲದ ಚಲನೆಯ ವೇಗ ಹಲವು ಪಟ್ಟುಹೆಚ್ಚಾಗಿರುವ ಅಥವಾ ಆ ವೇಗವನ್ನು ಗ್ರಹಿಸು ನೋಟವೇ ರೂಪುಗೊಂಡಿರದ ಇಂದಿನ ಸಂಕರ ಸ್ಥಿತಿಯಲ್ಲಿ ಹಟ್ಟುವ ಕಾದಂಬರಿಗಳು ಹೇಗಿರಬಹುದು? ಎಂಬ ಕುತೂಹಲದ ನಡುವೆಯೇ ಅನೇಕ ಯುವ ಬರಹಗಾರರು ಕಾದಂಬರಿಯನ್ನು ಸೃಷ್ಟಿಸುತ್ತಿರುವುದು ನಿಜಕ್ಕೂ ಆಶಾದಾಯಕ.

ಎಲ್ಲ ದೇಶ-ಕಾಲಗಳ ಕಥನದಲ್ಲಿರುವ ಒಂದು ಸಾಮಾನ್ಯ ಅಂಶವೆಂದರೆ, ಕೇಡಿನ ವಿರುದ್ಧ ಹೋರಾಡುವುದು. ಈ ಹೋರಾಟದಲ್ಲಿ ಎದುರಾಗುವ ದ್ವಂದ್ವಗಳು, ಸಂಕಟಗಳನ್ನು ನೀಗಿಸಿಕೊಳ್ಳುತ್ತಾ ಸಾಗುವುದು. ಈ ಒಳಿತು-ಕೆಡಕುಗಳೆಂಬ ಪರಿಕಲ್ಪನೆಗಳು ಸಾಪೇಕ್ಷವಾಗಿರುತ್ತವೆಯಾದರೂ ಅದನ್ನು ವಿವಿಧ ನಿಲುವುಗಳಿಂದ ಅರಿಯುತ್ತ ಹೋಗುವಲ್ಲಿ ಕಥನವು ಮೈತುಂಬಿಕೊಳ್ಳುತ್ತದೆ. ಅನೇಕ ವ್ಯಕ್ತಿಗಳು, ಘಟನೆ, ಸಂದರ್ಭಗಳ ಆಳ-ವಿಸ್ತಾರಗಳು ಬಿಚ್ಚಿಕೊಳ್ಳುತ್ತ ಅವುಗಳ ನಡುವಿನ ಸೂಕ್ಷ್ಮ ಹೆಣಿಗೆಯೊಂದು ರೂಪುಗೊಳ್ಳುತ್ತದೆ. ವಸ್ತು, ಪಾತ್ರಗಳ ಒಳತೋಟಿ, ಅದನ್ನು ಹೊಮ್ಮಿಸುವ ತಂತ್ರಗಳು, ಭಾಷೆಯ ಧ್ವನಿಶಕ್ತಿ ಮುಂತಾದವುಗಳೆಲ್ಲ ಒಂದರೊಳಗೊಂದು ಬೆಸೆಯುತ್ತ ಸಜೀವಶಿಲ್ಪವಾಗಿ ಕಾದಂಬರಿ ರೂಪುಗೊಳ್ಳುತ್ತದೆ.

ಶ್ರೀಧರ ಅಲಿಯಾಸ್ ಫಕೀರ ಅವರ ‘ಬೇರು’ ಕಾದಂಬರಿಯೂ ಸಹ ಕೇಡಿನ ವಿರುದ್ಧ ಸೆಣಸುವ ಕತೆಯೇ. ಆದರೆ ಈ ಸೆಣಸಾಟ ನಡೆಯುವುದು ವ್ಯಕ್ತಿಗಳ ಒಳಗೇ ಆಗಿದೆ. ಒಳಗೆ ಮಥಿಸುವ ಅರಿವಿನಲ್ಲಿ ಸ್ವಸ್ಥವಾದ ಬದುಕನ್ನು ಕಟ್ಟುವ ಹಂಬಲದ ಬೇರೂ ಸಹ ಇಲ್ಲಿ ಅಡಗಿದೆ. ಆ ದಿಶೆಯಲ್ಲಿ ಕಾದಂಬರಿಕಾರರ ಉದ್ದೇಶ ಘನವಾದದ್ದು. ಕಾದಂಬರಿಯ ಮುನ್ನುಡಿಯಲ್ಲಿ ಓ.ಎಲ್.ನಾಗಭೂಷಣಸ್ವಾಮಿಯವರು ಹೇಳುವಂತೆ ಸ್ವಸ್ಥ ಸಮಾಜವನ್ನು ನಿರ್ಮಿಸುವ ಹಂಬಲವೊಂದು ಇಲ್ಲಿ ಸಾಕಾರಗೊಂಡಿದೆ. ಬರವಣಿಗೆಗೆ ಅಂತಹದೊಂದು ಜವಾಬ್ದಾರಿ ಬೇಕು ಎಂಬ ಅಂಶ ಅವರ ಮಾತಿನಲ್ಲಿ ಸೂಚ್ಯವಾಗಿದೆ. ಆದರ್ಶವೆಂಬುದು ಒಂದು ಸೋಗು ಆಗಿಹೋಗಿರುವ ಈ ಕಾಲದ ಸಂದರ್ಭದಲ್ಲಿ ಅಂಥ ಸಾಧ್ಯತೆ ಇನ್ನೂ ಉಸಿರಾಡುತ್ತಿದೆಯೆಂಬುದನ್ನು ಬೇರು ಪ್ರತಿಪಾದಿಸುತ್ತಿದೆ.

ಈ ಕಾದಂಬರಿಯ ಹಿಂದಿರುವ ಮಹತ್ವಾಕಾಂಕ್ಷೆಗೆ ಮಿತಿಯೊಡ್ಡಿರುವುದು ಅದರ ಕಟ್ಟುವಿಕೆ. ಹಲವು ಕೇಂದ್ರಗಳುಳ್ಳ ಈ ಕಥನವನ್ನು ಬೆಸೆಯುವ ತಂತುಗಳು ಜೀವಂತಗೊಳ್ಳದೇ ಶುಷ್ಕವಾಗಿವೆಯೆಂದು ಅಲ್ಲಲ್ಲಿ ಅನಿಸುತ್ತದೆ. ಕಾದಂಬರಿಯೆಂದರೆ ಬರಿಯ ಘಟನೆಗಳ ಸೂತ್ರಬದ್ಧ ನಿರೂಪಣೆಯಲ್ಲ. ಅಲ್ಲಿ ಕಾದಂಬರಿಕಾರನ ಲೋಕದೃಷ್ಟಿಯು ವ್ಯಕ್ತಿ ಹಾಗೂ ಘಟನೆಗಳ ನಡುವೆ ಸಾವಯವ ಸಂಬಂಧವೊಂದನ್ನು ಸೂಕ್ಷ್ಮವಾಗಿ ಹೆಣೆಯುತ್ತಿರುತ್ತದೆ. ಬೇರು ಕಾದಂಬರಿಯಲ್ಲಿ ‘ಕರುಣಾಶ್ರಮ’ವೆಂಬ ಕಾಲ್ಪನಿಕ ಸ್ಥಳದಲ್ಲಿ ಸಂಧಿಸುವ ಹಲವು ಜೀವಗಳ ತಳಮಳಗಳು ನಿಧಾನಕ್ಕೆ ತಹಬಂದಿಗೆ ಬರುವ ಚಲನೆಯಿದೆ. ಕಾರ್ಯಕಾರಣ ಸಂಬಂಧಗಳನ್ನು ಮೀರಿ ಸ್ವಯಂಸಂಘಟನೆಗೊಳ್ಳುವ ಅರಿವಿನ ಬಗ್ಗೆ ಆಧ್ಯಾತ್ಮ ಹಾಗೂ ವಿಜ್ಞಾನಗಳೆರಡೂ ಮಾತನಾಡುತ್ತವೆ. ಅಂಥದೊಂದು ಎಳೆ ಕಾದಂಬರಿಯನ್ನು ಮುನ್ನಡೆಸಿದೆ. ಇದನ್ನು ನಿರ್ವಹಿಸುವಲ್ಲಿ ಇನ್ನಷ್ಟು ತಾದಾತ್ಮ್ಯ ಬೇಕಿತ್ತು ಎನಿಸುತ್ತದೆ.
ಬೇರು ಕಾದಂಬರಿಗೆ ವ್ಯವಸ್ಥೆಗಿಂತ ವ್ಯಕ್ತಿಗಳನ್ನು ಅರಿಯುವಲ್ಲಿ ಹೆಚ್ಚಿನ ಆಸ್ಥೆಯಿದೆ. ವ್ಯಕ್ತಿಗಳ ಆಂತರಿಕ ಪರಿವರ್ತನೆಯನ್ನು ಇಲ್ಲಿ ಹೆಚ್ಚು ಫೋಕಸ್ ಮಾಡಲಾಗಿದೆ. ಕಾದಂಬರಿಯ ಅನೇಕ ಪಾತ್ರಗಳು ಕೊನೆಯಲ್ಲಿ ತಮ್ಮ ಮನದ ಕೇಡನ್ನು ನಿವಾರಿಸಿಕೊಂಡು ಉದಾತ್ತಗೊಳ್ಳುತ್ತವೆ. ಇಂಥ ಪರಿವರ್ತನೆಗಳಿಗೆ ಸಕಾರಣಗಳೇನೋ ಕಾದಂಬರಿಯಲ್ಲಿ ತರ್ಕಬದ್ಧವಾಗಿ ಹೆಣೆಯಲ್ಪಟ್ಟಿವೆ. ಆದರೆ ವಿಕಾಸದ ಈ ನಡೆಯಲ್ಲಿ ಪರಿವರ್ತನೆಯ ಸೂಕ್ಷ್ಮ ಹಂತಗಳು ತಾವು ಮೈಹೊರಳಿ ಬಂದ ಅನುಭವದ ಗಂಧವನ್ನು ಉಳಿಸದೇ ಸರಿದುಹೋಗುತ್ತವೆ. ಉದಾಹರಣೆಗೆ, ಕಾದಂಬರಿಯ ಪಾತ್ರಗಳಾದ ರಾಮಸ್ವಾಮಿ ಹಾಗೂ ಬಾಬೂರಾವ್ ಅವರಲ್ಲಿ ನಡೆಯುವ ಆಂತರಿಕ ವಿಕಾಸವನ್ನು ಗಮನಿಸಬಹುದು. ಸ್ವಾರ್ಥ, ಅಧಿಕಾರ ಲಾಲಸೆ, ಹಣದ ಆಮಿಷ ಹಾಗೂ ಹೆಣ್ಣುಬಾಕತನದಲ್ಲಿ ಲೋಲುಪನಾದ ರಾಮಸ್ವಾಮಿ ಕ್ರೌರ್ಯವನ್ನು ಒಳಗೇ ಮಸೆದಿಟ್ಟುಕೊಂಡವನು. ಕರುಣಾಶ್ರಮದ ನಿರ್ವಹಣೆಗೆ ಸಹಾಯಕನಾಗಿ ತನ್ನನ್ನು ಕರೆತಂದ ಸ್ವಾಮಿ ರಮಾನಂದರನ್ನೇ ಕ್ರಮೇಣ ಮೂಲೆಗುಂಪು ಮಾಡಿ ಅಲ್ಲಿ ತನ್ನನ್ನು ಪ್ರತಿಷ್ಠಾಪಿಸಿಕೊಂಡುಬಿಡುವ ಧೂರ್ತತನ ಅವನಿಗೆ ಸಹಜ. ಆದರೆ, ಈರಮ್ಮನೊಂದಿಗಿನ ಅವನ ಕಾಮ ಪ್ರೇಮವಾಗಿ ಪರಿವರ್ತನೆಯಾಗುವುದು, ರಮಾನಂದರೆಡೆಗಿನ ದ್ವೇಷಕ್ಕಾಗಿ ಆತ ಪಶ್ಚಾತ್ತಾಪ ಪಡುವುದು ಸಿನಿಮೀಯವಾಗಿ ನಡೆದುನಿಡುತ್ತದೆ. ವಿವಾಹಿತೆಯಾದ ಈರಮ್ಮ ತನ್ನ ಗಂಡನನ್ನು ಉಳಿಸಿಕೊಳ್ಳಲೋಸುಗ ರಾಮಸ್ವಾಮಿಗೆ ಮೈಯೊಪ್ಪಿಸುವುದು, ಕೊನೆಕೊನೆಗೆ ಅವನೆಡೆಗೆ ಮೆಚ್ಚುಗೆ, ಕೃತಜ್ಞತೆಗಳನ್ನು ಬೆಳೆಸಿಕೊಳ್ಳುವುದು, ಅಂತ್ಯದಲ್ಲಿ ಅವನಿಂದ ಸಲೀಸಾಗಿ ಕಳಚಿಕೊಳ್ಳುವುದು ಎಲ್ಲವೂ ಹೆಣ್ಣಿನ ರಾಗಗಳನ್ನು ಅರಿಯುವಲ್ಲಿ ಲೇಖಕರ ತಾದಾತ್ಮ್ಯವು ಸಾಧ್ಯವಾಗಲಿಲ್ಲವೇನೋ ಎಂದೆನಿಸುತ್ತದೆ.

ಕಾದಂಬರಿಯ ಕಾಣಿಸುವ ಆಂತರಿಕ ವಿಕಾಸದ ಹಿಂದೆ ಆಧ್ಯಾತ್ಮಿಕ ಸಂವೇದನೆಯೊಂದು ಪ್ರಬಲವಾಗಿದೆ. ಕರುಣಾಶ್ರಮದಲ್ಲಿ ಮೂಡುವ ಆಧ್ಯಾತ್ಮಿಕ ಅನುಭೂತಿಯು ನಿಧಾನವಾಗಿ ಆವರಿಸಿಕೊಳ್ಳುತ್ತ ವ್ಯಕ್ತಿಗಳ ಬದುಕನ್ನು ಬದಲಿಸುವುದು ಗೋಚರಿಸುತ್ತದೆ. ಕರುಣಾಶ್ರಮವು ಶಿವಶಂಕರ ಹಾಗೂ ಫ್ಲಾರೆನ್ಸ್ ದಂಪತಿಗಳು ಮಾನವ ಸೇವೆಯ ಉದಾತ್ತ ಧ್ಯೇಯ ಹೊತ್ತು ಆರಂಭಿಸಿದ ಆಸ್ಪತ್ರೆ. ಇದು ಬರಿಯ ಆಸ್ಪತ್ರೆಯಷ್ಟೇ ಅಲ್ಲ. ಅಬಲರು, ಅನಾಥರು, ನಿರ್ಗತಿಕರು, ಹಣವಿಲ್ಲದ ರೋಗಿಗಳಿಗೆ ಭರವಸೆಯ ಬದುಕನ್ನೂ, ಧೈರ್ಯ, ಸಮಾಧಾನಗಳನ್ನೂ ಇತ್ತು ಆಶ್ರಯ ನೀಡುವ ಒಂದು ಆದರ್ಶ ಕೇಂದ್ರ. ಆ ದಂಪತಿಗಳ ಮರಣಾನಂತರ ಸ್ವಾಮಿ ರಮಾನಂದರು ಅವರ ಆಶಯದಂತೇ ಕರುಣಾಶ್ರಮವನ್ನು ಮುಂದುವರೆಸುತ್ತಾರೆ. ಆದರೆ, ಕಾಲಕ್ರಮದಲ್ಲಿ ಈ ಮಾನವೀಯ ಆದರ್ಶ ವ್ಯವಸ್ಥೆಯಲ್ಲಿ ಸುತ್ತಲಿನ ಸಮಾಜದಲ್ಲಿರುವ ಎಲ್ಲ ಕೇಡುಗಳೂ ಸೇರಿಕೊಳ್ಳುತ್ತವೆ. ಮೇಲ್ನೋಟಕ್ಕೆ ತೋರದಂತೆ ಒಳಗೊಳಗೇ ಹೊಗೆಯಾಡುತ್ತಿರುತ್ತವೆ. ಈ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಕಾಳಜಿಯುಳ್ಳ ಸ್ವಾಮಿ ರಮಾನಂದ, ಡಾ.ಚಂದ್ರಶೇಖರರಂಥವರು ಮೂಲೆಗುಂಪಾಗುತ್ತಾರೆ. ಆದರೆ ಕೊನೆಯಲ್ಲಿ ಇವರ ಒಳ್ಳೆಯತನವೇ ಗೆಲ್ಲುತ್ತದೆ. ಒಳ್ಳೆಯತನ ಎಂದರೆ ವ್ಯಕ್ತಿತ್ವದ ನೈತಿಕ ಶುದ್ಧತೆ. ಈ ಶುದ್ಧತೆ ಧಿಡೀರ್ ಎಂದು ಅವರಿಗೊಲಿದದ್ದಲ್ಲ. ಇದೊಂದು ತಪಸ್ಸು. ಅಂತರ್ಮುಖಗೊಳ್ಳುತ್ತ ಹೋದಂತೆ ರಾಗ-ದ್ವೇಶಗಳ ಬಗ್ಗಡ ತಿಳಿಯಾಗುತ್ತ ಶುದ್ಧಗೊಳ್ಳುವ ಆಂತರಿಕ ಪ್ರಕ್ರಿಯೆಯಿದು. ಬಾಬುರಾವನ ಮನಪರಿವರ್ತನೆಯಲ್ಲಿ ಇದನ್ನು ಕಾಣುತ್ತೇವೆ. ಗುಣಪಡಿಸಲಾಗದ ಕ್ಯಾನ್ಸರ್‍ನಿಂದ ಬಳಲುವ ಮಗನ ಸಲುವಾಗಿ ಕರುಣಾಶ್ರಮ ಸೇರಿದ ಬಾಬುರಾವ್ ದಂಪತಿಗಳಿಗೆ ಅಲ್ಲಿ ಹೊಸ ಬದುಕೇ ಪ್ರಾಪ್ತವಾಗುತ್ತದೆ. ಆಗರ್ಭ ಶ್ರೀಮಂತನಾದ ಬಾಬೂರಾವ್‍ನನ್ನು ಆಶ್ರಮದಲ್ಲಿ ನಡೆಯುವ ಸಾಮೂಹಿಕ ಭಜನೆ, ರಮಾನಂದರ ಉಪನ್ಯಾಸಗಳು, ಮನುಷ್ಯನ ಅಸ್ತಿತ್ವದ ಕುರಿತ ಜಿಜ್ಞಾಸೆಗಳು ಆವರಸಿಕೊಳ್ಳುತ್ತ ಹೋಗುತ್ತವೆ. ಅವನ ವ್ಯಾಪಾರೀ ಮನೋಭಾವವು ಮಾಗುತ್ತ ಸೇವೆಯ ಅಂತಃಕರಣದಲ್ಲಿ ಸ್ಥಿರವಾಗುತ್ತದೆ. ಸ್ವತಃ ಅವನ ಪತ್ನಿಗೂ ಅರಿವಿಗೆ ಬಾರದಂತೆ ಈ ಪ್ರಜ್ಞೆಯ ಪರಿವರ್ತನೆ ಘಟಿಸುತ್ತದೆ. ತನ್ನ ಮಗನನ್ನು ಉಳಿಸಿಕೊಟ್ಟ ಡಾ.ಚಂದ್ರಶೇಖರ್ ಅವರ ವ್ಯಕ್ತಿತ್ವದ ಸಾಹಚರ್ಯ ಕೂಡ ಬಾಬೂರಾವನನ್ನು ಹೊಸ ಮನುಷ್ಯನನ್ನಾಗಿಸುತ್ತದೆ.

ಶ್ರ್ರೀಧರ ಬನವಾಸಿ

ಶ್ರೀಧರ ಬನವಾಸಿ

ಆರಂಭದಲ್ಲಿ ಕರುಣಾಶ್ರಮಕ್ಕೆ ಚಿಕಿತ್ಸೆಗಾಗಿ ಬಂದ ಭರಮಪ್ಪ ಹಾಗೂ ಸಂಧ್ಯಾ ಕೊನೆಯಲ್ಲಿ ಗೆಲುವಾಗಿ ಹೊರಡುತ್ತಾರೆ. ಅವರ ಜೊತೆ ಬಂದ ಕುಂತಮ್ಮ, ಈರಮ್ಮರ ಬದುಕು ಕೂಡ ಭರವಸೆಯನ್ನು ಗಳಿಸಿಕೊಳ್ಳುತ್ತದೆ. ಇಂಥದೊದಂದು ಪರಿವರ್ತನೆಯ ಹಿಂದೆ ಸಾಮೂಹಿಕ ವಿದ್ಯಮಾನವೊಂದಿದೆ. ಅದೇ ಭಜನೆ ಹಾಗೂ ದುಡಿಮೆ. ಇಡೀ ಕಾದಂಬರಿಯನ್ನು ಭಜನೆಯ ಗುಂಗು ಆವರಿಸಿಕೊಂಡಿದೆ. ವೈಯಕ್ತಿಕ ಸಂಕಟಗಳು ಭಜನೆಯ ಸಾಮೂಹಿಕ ಧ್ವನಿಯಲ್ಲಿ ಕರಗುತ್ತ ಹೋಗÀ್ತವೆ. ಬುಟ್ಟಿ, ಚಾಪೆ ಹೆಣೆಯುವ ಶ್ರಮದ ತಾದಾತ್ಮ್ಯವು ಮನಸ್ಸನ್ನು ಏಕೋಭಾವದಲ್ಲಿ ಬೆಸೆಯುತ್ತ ಹೋಗುತ್ತದೆ. ಬೇರೆಬೇರೆ ಜಾತಿ, ಹಿನ್ನೆಲೆ, ಪ್ರದೇಶಗಳಿಂದ ಬಂದ ನಿರ್ಗತಿಕರು ಒಂದಾಗಿ ಬಾಳುವ ಸಾಮೂಹಿಕ ಧ್ವನಿಯೊಂದನ್ನು ಲೇಖಕರು ಭಜನೆಗಳ ಮೂಲಕ ತಿಳಿಸುವುದು ಗಮನಾರ್ಹ ತಂತ್ರ. ಜೋಗಪ್ಪನ ಹಾಡುಗಳು ಗದ್ಯದ ಏಕತಾನವನ್ನು ಮುರಿದು ಭಾಷೆಗೆ ನಾದಮಯತೆಯನ್ನು ನೀಡಿವೆ. ವ್ಯಕ್ತಿಮತೆಯನ್ನು ದಾಟಿ ಸಮುದಾಯಕ್ಕಾಗಿ ಮಿಡಿಯುವ ಭಾವವೊಂದು ಎಲ್ಲರಲ್ಲಿ ಸ್ಫುರಿಸಲು ಈ ಭಜನೆಗಳೂ ಕಾರಣವಾಗುತ್ತವೆ.

ವ್ಯಕ್ತಿಗಳು ಕಷ್ಟಗಳನ್ನು ಗೆಲ್ಲುತ್ತ ಹೋಗುವ ಈ ಕಥನದಲ್ಲಿ ಅಪಾರ ತಾಳ್ಮೆಯ ಮಹತ್ವವು ಬಿಂಬಿತವಾಗಿದೆ. ಬೆಂಗವಾಡಿಯ ಕರುಣಾಶ್ರಮದ ಆಸರೆಗೆ ಬಂದ ಎಲ್ಲರಲ್ಲಿಯೂ ಒಂದಲ್ಲ ಒಂದು ಬಗೆಯ ಕಷ್ಟಗಳಿವೆ. ಅವರು ಅದನ್ನು ಸ್ವೀಕರಿಸುವ, ಎದುರಿಸುವ ರೀತಿಗಳಷ್ಟೇ ಭಿನ್ನವಾಗಿವೆ. ಬಲಿಷ್ಠನೆಂದು ತೋರುವ ರಾಮಸ್ವಾಮಿಗೂ ಅವನದೇ ಆದ ಕಷ್ಟಗಳಿವೆ. ಮೌನಸಾಧನೆಯಿಂದ ಪರಿಪಕ್ವಗೊಂಡ ಜೀವವಾದ ಸ್ವಾಮಿ ರಮಾನಂದರಿಗೂ ಕಷ್ಟ ಬಿಟ್ಟಿದ್ದಲ್ಲ. ರೋಗಿಗಳಿಗೆ ಜೀವದಾನ ನೀಡುವ ಡಾ.ಚಂದ್ರಶೇಖರರಂತಹ ನಿಸ್ವಾರ್ಥಿಗಳ ಬದುಕೂ ಮಕ್ಕಳನ್ನು ಕಳೆದುಕೊಂಡು ಅತಂತ್ರವೇ. ಆದರೆ ಬದುಕು ನಿಲ್ಲುವುದಿಲ್ಲ. ಎಲ್ಲರೂ ತಮ್ಮ ರೋಗಗಳಿಗೆ ತಾವೇ ಮದ್ದರೆದುಕೊಳ್ಳಬೇಕು. ಅದಕ್ಕೊಂದು ಸಮಚಿತ್ತ ಬೇಕು. ಕಾದಂಬರಿಯಲ್ಲಿ ಡಾ.ಚಂದ್ರಶೇಖರ ಹೇಳುವ ಮಾತೊಂದಿದೆ. “ಬಾಬೂರಾವ್, ಕಷ್ಟಗಳು, ನೋವುಗಳು ಅಂದ್ರೆ ಕಲ್ಲುಬಂಡೆ ಇದ್ದಂಗೆ! ಅವು ಸುಮ್ನೆ ಕರಗಬೇಕು ಅಂದ್ರೆ ಆಗುತ್ತಾ? ಅದ್ಕೆ ವರ್ಷಗಳೇ ಬೇಕಾಗ್ತವೆ. ಮಳೆ, ಗಾಳಿಯೆಲ್ಲಾ ಆ ಬಂಡೆ ಮೇಲೆ ಬೀಸ್ತಾನೇ ಇರಬೇಕು. ಅದೇ ರೀತಿ ಮನುಷ್ಯರಾಗಿ ಹುಟ್ಟಿದ ಮೇಲೆ ಕಷ್ಟಗಳು ಸಹಜ. ಕಷ್ಟ ಅಂದ್ರೆ ಕಡಿಮೆ ಸುಖ, ಸುಖ ಅಂದ್ರೆ ಕಡಿಮೆ ಕಷ್ಟ ಅಂತ ತಿಳ್ಕೋಬೇಕು.” (ಪು.83, ಬೇರು) ಪರಿವರ್ತನೆಯ ಕಾಲಕ್ಕಾಗಿ ಮೌನವಾಗಿ ಸಮಚಿತ್ತದಿಂದ ಕಾಯುವ ಸಾವಕಾಶದ ಪಯಣವೊಂದನ್ನು ಬೇರು ಕಾದಂಬರಿ ಪ್ರತಿಫಲಿಸಿದೆ. ಕಾದಂಬರಿಯಲ್ಲಿ ನೋವನ್ನು ಕರಗಿಸಲು ಸಹನೆ, ದಯೆ, ಪ್ರೇಮ, ಕರುಣೆಗಳ ಆಚ್ಛಾದವಿದೆ. ಅದು ಸ್ವಾಮಿ ರಮಾನಂದರಂಥವರ ಹಾಗೂ ಚಂದ್ರಶೇಖರರಂಥವರ ಸಾತ್ವಿಕ ಸಾಧನೆಯಿಂದ ಒದಗಿದೆ. ನಿಧಾನವಾಗಿ ಇವರ ವ್ಯಕ್ತಿತ್ವವು ತಮ್ಮ ಸಂಪರ್ಕಕ್ಕೆ ಬಂದವರನ್ನೂ ಬದಲಿಸುತ್ತದೆ. ಭಾರತೀಯ ಸಂತಪರಂಪರೆಯ ಈ ಪ್ರೇಮಧಾರೆಯು ಆಧ್ಯಾತ್ಮಿಕ ಶಕ್ತಿಯಾಗಿ ಮನುಕುಲವನ್ನು ಪೊರೆಯುತ್ತಿದೆ. ಈ ಕಥಾನಕದಲ್ಲಿ ಕರುಣಾಶ್ರಮವನ್ನು ಸ್ಥಾಪಿಸಿದ ಸದಾಶಿವ ದಂಪತಿಗಳು ಸಂತರಲ್ಲದಿದ್ದರೂ ಸಂತರಂತೆ ಬದುಕಿದವರು. ಡಾ.ಚಂದ್ರಶೇಖರರೂ ಅದೇ ಸ್ವಭಾವದ ಮುಂದುವರಿಕೆ. ಅವರ ನೇತೃತ್ವದಲ್ಲಿ ಕರುಣಾಶ್ರಮವು ಮುನ್ನಡೆಯುವುದೆಂಬ ಭರವಸೆಯೊಂದಿಗೆ ಕಾದಂಬರಿಯು ಕೊನೆಗೊಳ್ಳುತ್ತದೆ. ಕಷ್ಟದ ಬಂಡೆಗಳು ಕರಗುತ್ತ ಮೆದುವಾಗುತ್ತವೆ. ಆ ಮೆದುಮಣ್ಣಿನಲ್ಲಿ ಅಲ್ಲಿ ಬಂದವರ ಹೊಸ ಜೀವನದ ಬೇರುಗಳು ಊರಲ್ಪಡುತ್ತವೆ.

ಇದಲ್ಲದೇ ಕಾದಂಬರಿಯಲ್ಲಿ ಸಮಕಾಲೀನ ಬದುಕಿನ ಅನೇಕ ವಿವರಗಳು ಸೇರಿಕೊಂಡಿವೆ. ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಕಾಲಿನ ಬಲ ಕಳೆದುಕೊಂಡ ಸಂಧ್ಯಾ, ಸರ್ಕಾರ ನೀಡಿದ ಪರಿಹಾರವನ್ನು ಲಪಟಾಯಿಸಿದ ಅವಳದೇ ತಂದೆ ಹಾಗೂ ಅಣ್ಣ, ಬೀಟಿ ಹತ್ತಿ ಬೆಳೆದು ಸೋತ ರೈತ ಭರಮಪ್ಪ, ಹೋರಾಟದಲ್ಲಿ ತೊಡಗಿದ್ದಾಗ ಪೋಲೀಸರ ಗೋಲೀಬಾರ್‍ನಿಂದಾಗಿ ಗಾಯಗೊಂಡು ಅತಂತ್ರವಾದ ಅವನ ಬದುಕು ಎಲ್ಲವೂ ವಾಸ್ತವಕ್ಕೆ ಹಿಡಿದ ಕನ್ನಡಿಗಳು. ಆದರೆ ಗ್ರಾಮೀಣ ಬದುಕಿನ ಈ ವ್ಯಂಗ್ಯಗಳನ್ನು ಅದರ ಹಿಂದಿನ ರಾಜಕಾರಣಗಳನ್ನು, ವ್ಯವಸ್ಥೆಯ ಕ್ರೌರ್ಯದ ಹಿಂದಿನ ನಾನಾ ಮುಖಗಳನ್ನು ಶ್ರೀಧರ ಅವರು ಫೋಕಸ್ ಮಾಡುವುದಿಲ್ಲ. ಅಲ್ಲಲ್ಲಿ ಸೂಚ್ಯವಾಗಿ ಹೇಳಿ ಮುನ್ನಡೆದುಬಿಡುತ್ತಾರೆ. ಅವರ ಕೇಂದ್ರ ಕಾಳಜಿಯಿರುವುದು ಅಂತರ್‍ದರ್ಶನದಲ್ಲಿ. ಸ್ವಾಮಿ ರಮಾನಂದರಲ್ಲಿ ಅದು ಸಾಕಾರಗೊಂಡಿದೆ. ಈ ಪಾತ್ರವನ್ನು ಹೆಚ್ಚು ಬಯಲಾಗಿÀಸದೆಯೂ ಏನು ಕಾಣಿಸಬೇಕೋ ಅದನ್ನು ಬೇರು ಕಾದಂಬರಿಯು ಬಯಲಾಗಿಸಿದೆ. ತಾಳುತ್ತ ತಾಳುತ್ತ ಮೌನದಲ್ಲಿ ಪಕ್ವಗೊಳ್ಳುವ ಅರಿವಿನಲ್ಲಿ ಬದುಕುಗಳು ತಂತಾನೆ ಅರಳುವ ಹದವೊಂದನ್ನು ಬೇರು ಕಾಣಿಸುತ್ತಿದೆ. ಪ್ರಜ್ಞೆಯು ವಿಕಾಸಗೊಳ್ಳಲು ತನ್ನದೇ ಕಾಲವನ್ನು ತೆಗೆದುಕೊಳ್ಳುತ್ತದೆ. ಕಾಲ ಪಕ್ವವಾದಾಗ ಭ್ರಮೆಗಳು ತಂತಾನೇ ಕಳಚಿಕೊಳ್ಳುತ್ತವೆ. ಇಂಥ ಮಾತುಗಳು ಕಾದಂಬರಿಯಲ್ಲಿ ಪತ್ರಗಳ ಮೂಲಕ ವ್ಯಕ್ತವಾಗಿವೆ. ಆದರೆ ಅವು ಪಾತ್ರಗಳ ಸಂವೇದನೆಯಲ್ಲಿ ಹದಗೊಂಡು ಮೂಡುವಂತಿದ್ದರೆ ಕಥನವು ಇನ್ನಷ್ಟು ಎದೆಗೆ ತಾಕುತ್ತಿತ್ತೇನೋ ಎಂದೆನಿಸುತ್ತದೆ. ಅಂಥ ಸಾಧ್ಯತೆಯ ಬೇರನ್ನು ಶ್ರೀಧರ ಅವರು ಊರಿಯಾಗಿದೆ.

ಈ ಕೃತಿಯನ್ನು ಋತುಮಾನ ಸ್ಟೋರ್ ನ ಈ ಕೊಂಡಿಯಲ್ಲಿ ಕೊಳ್ಳಬಹುದು  :  https://store.ruthumana.com/product/beru/

ಪ್ರತಿಕ್ರಿಯಿಸಿ