ಪೌರತ್ವ ತಿದ್ದುಪಡಿ ಕಾಯಿದೆ (ಸಿ.ಎ.ಎ) ಮತ್ತು ಬುಡಕಟ್ಟು (ಆದಿವಾಸಿ) ಸಮುದಾಯ

ಪೌರತ್ವ ತಿದ್ದುಪಡಿ ಕಾಯಿದೆಯನ್ನು ಧರ್ಮದ ಆಧಾರದಲ್ಲಿ ವಿಭಜನೆಯ ದೃಷ್ಟಿಯಿಂದ ವಿರೋಧಿಸಲಾಗುತ್ತಿದೆ. ಆದರೆ ಇದು ಭಾರತದಲ್ಲಿರುವ ಆದಿವಾಸಿಗಳನ್ನು ಹೇಗೆ ತ್ರಿಶಂಕು ಸ್ಥಿತಿಗೆ ತಲುಪಿಸಿದೆ ಎನ್ನುವುದನ್ನು ಕಡೆಗಣಿಸಲಾಗುತ್ತಿದೆ. ಈ ಉಪಖಂಡದ ಭೂಭಾಗಗಳಿಗೆ ಪ್ರಸ್ತುತ ಹೆಸರುಗಳು ದೊರೆಯುವ ಮುನ್ನವೇ ಇಲ್ಲಿದ್ದ ಜನರ ಭವಿಷ್ಯವನ್ನು ಕಾಗದದ ಚೂರುಗಳು ನಿರ್ಧರಿಸುತ್ತಿವೆ.

ಪೌರತ್ವ ತಿದ್ದುಪಡಿ ಮಸೂದೆಯು (Citizenship Amendment Bill – ಸಿ.ಎ.ಬಿ) ಜಾರಿಯಾದಂದಿನಿಂದ ವಿದ್ಯಾರ್ಥಿ ಪ್ರತಿಭಟನೆಗಳು ದೇಶವನ್ನು ನಡುಗಿಸಿವೆ. ಈ ಸಿ.ಎ.ಬಿಯು ಈಗಾಗಲೇ ಪೌರತ್ವ ತಿದ್ದುಪಡಿ ಕಾಯಿದೆ (Citizenship Amendment Act- ಸಿ.ಎ‍.ಎ) ಆಗಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ (National Register of Citizens -ಎನ್.ಆರ್.ಸಿ) ಅನ್ನು ತಯಾರಿಸಲಾಗುವುದೆಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಈ ಸಿ.ಎ.ಎ ಮತ್ತು ದೇಶವ್ಯಾಪಿ ಎನ್.ಆರ್.ಸಿಯ ಪ್ಯಾಕೇಜ್ ಅನ್ನು ಅದರ ಕೋಮು ಉದ್ದೇಶಗಳಿಗಾಗಿ, ಧರ್ಮದ ಆಧಾರದಲ್ಲಿ ಅಸಮಾನತೆ ಸೃಷ್ಟಿಸಿದ್ದಕ್ಕಾಗಿ ಹಾಗೂ ಭಾರತದ ಸಂವಿಧಾನದ ಆಶಯವನ್ನು ಉಲ್ಲಂಘಿಸಿದ್ದಕ್ಕಾಗಿ, ವಿರೋಧಿಸಲಾಗುತ್ತಿದೆ ಹಾಗೂ ಪ್ರತಿಭಟಿಸಲಾಗುತ್ತಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಸ್ಥಳೀಯರನ್ನು ವಲಸಿಗರಿಂದ ರಕ್ಷಿಸಬೇಕೆಂದು ವಿರೋಧವಿದೆ. ಆದರೆ ದೇಶದ ಬಹುತೇಕ ಆದಿವಾಸಿಗಳಿಗೆ ಹೇಗೆ ಇದು  ತ್ರಿಶಂಕು ಸ್ಥಿತಿಯನ್ನು ಕಲ್ಪಿಸುತ್ತಿದೆ ಎಂಬುದನ್ನು ಕಡೆಗಣಿಸಲಾಗುತ್ತಿದೆ.

ಆದಿವಾಸಿಗಳ ಧಾರ್ಮಿಕ ನಂಬಿಕೆಗಳು ಒಂದು ಬುಡಕಟ್ಟಿನಿಂದ ಇನ್ನೊಂದು ಬುಡಕಟ್ಟಿಗೆ ಬೇರೆಯಿದ್ದು, ಅವರ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ಭಾರತದಲ್ಲಿ ಆಚರಿಸಲ್ಪಡುವ ಮುಖ್ಯವಾಹಿನಿ ಧರ್ಮಗಳಿಗಿಂತ, ಅದರಲ್ಲೂ ಸಿ.ಎ.ಎ ಅಲ್ಲಿ ಉಲ್ಲೇಖಿಸಿದ ಧರ್ಮಗಳಿಗಿಂತ, ಬಹುಮಟ್ಟಿಗೆ ಭಿನ್ನವಾದದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಜಾರ್ಖಂಡ್‍ನ ಉದಾಹರಣೆಯನ್ನು ತೆಗೆದುಕೊಳ್ಳಿ. 2011ರ ಜನಗಣತಿಯ ಪ್ರಕಾರ ಜಾರ್ಖಂಡ್‍ನ ಒಟ್ಟು ಬುಡಕಟ್ಟು ಜನಾಂಗದವರ ಸಂಖ್ಯೆ 86,45,042. ಧಾರ್ಮಿಕ ಆಧಾರದಲ್ಲಿ ನೋಡಿದರೆ, ಅದರಲ್ಲಿ 46.17 ಶೇಕಡ ಜನ “ಬೇರೆ ಧರ್ಮಗಳು ಹಾಗೂ ಹಿಂಬಾಲಿಸುವಿಕೆಗಳು” ಮತ್ತು “ಧರ್ಮವನ್ನು ಹೆಸರಿಸಲಾಗಿಲ್ಲ” ಎಂಬ ಗುಂಪಿಗೆ ಸೇರುವವರು. ಇದರಿಂದ, ಜಾರ್ಖಂಡ್‍ನ ಅರ್ಧದಷ್ಟು ಬುಡಕಟ್ಟು ಜನಾಂಗದವರು ಸಿ.ಎ.ಎ ಅಲ್ಲಿ ನೀಡಿದ ಧರ್ಮಗಳಿಗೆ ಸೇರಿದವರಲ್ಲ ಎಂದು ತಿಳಿಯುತ್ತದೆ (ಈ ಅಂಕೆಸಂಕೆಗಳು ಪ್ರತಿ ರಾಜ್ಯಕ್ಕೂ ಬೇರೆಯದಿದೆ).

ಹೀಗಾಗಿ ದೇಶವ್ಯಾಪಿ ಎನ್.ಆರ್.ಸಿ ಜರುಗಿದರೆ, ಈ ವರ್ಗದ ಜನರು ಬಿಟ್ಟುಹೋಗುತ್ತಾರೆ (ಬಹುತೇಕ) ಹಾಗೂ ಸಿ.ಎ.ಎ ಅವರಿಗೆ ಯಾವುದೇ ಸುರಕ್ಷೆ ನೀಡದ ಕಾರಣ ‘ದೇಶರಹಿತ’ ವ್ಯಕ್ತಿಗಳಾಗುತ್ತಾರೆ. ಹಾಗೂ ಆದಿವಾಸಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಗಳನ್ನು ಗಮನಿಸಿದರೆ ಮಿಕ್ಕ ಯಾವುದೇ ಗುಂಪಿಗಿಂತ ಅವರು ದೇಶವ್ಯಾಪಿ ಎನ್.ಆರ್.ಸಿ ಇಂದ ಹೊರಗಿಡಲ್ಪಡುವ ಪ್ರಮಾಣ ಹೆಚ್ಚಾದದ್ದು. ಇದು ಅವರ ದುಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುವಂತದ್ದು.

ಇದಷ್ಟೇ ಅಲ್ಲ, ‘ದೇಶರಹಿತ’ರಾಗಿ ಕಾನ್ಸಂಟ್ರೇಶನ್ ಕ್ಯಾಂಪ್‍ಗಳಿಗೆ ಕಳಿಸಲ್ಪಡುವುದರಿಂದ ರಕ್ಷಿಸಿಕೊಳ್ಳುವ ಆಲೋಚನೆಯ ಮೂಲಕ, ಎನ್.ಆರ್.ಸಿ. ಮತ್ತು ಸಿ.ಎ.ಎ ಅವರಿಗೆ ಈ ಧರ್ಮಗಳಿಗೆ ಮತಾಂತರಗೊಳ್ಳುವಂತೆ ಒತ್ತಯಿಸಬಹುದು. ಇದು ಸಂವಿಧಾನದ ಆಶಯಕ್ಕೆ ಗಂಭೀರ ಅನ್ಯಾಯವಾಗುವುದಲ್ಲದೇ ಭಾರತದ ಆದಿವಾಸಿಗಳ ವಿಶಿಷ್ಟ ನಂಬಿಕೆಗಳು ಮತ್ತು ಆಚರಣೆಗಳಿಗೆ ಅಪಾಯ ಉಂಟುಮಾಡಿದೆ. ಸಿ.ಎ.ಎ. ಮೂಲಕ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಈ ಸರ್ಕಾರ ಎಷ್ಟೇ ಅಕ್ಕರೆಯ ಮಾತುಗಳನ್ನಾಡಿದರೂ, ಅದು ಆದಿವಾಸಿ ವಿರೋಧಿ ಎನ್ನುವುದು ಬಹಳ ಸ್ಪಷ್ಟವಾಗಿದೆ.

ಹಾಗೂ ಇದು ಯಾರಿಗೂ ಆಶ್ಚರ್ಯದ ಸಂಗತಿಯಾಗಬೇಕಿಲ್ಲ, ಏಕೆಂದರೆ ಭಾರತವನ್ನು ಹಿಂದೂರಾಷ್ಟ್ರವನ್ನಾಗಿಸುವುದರ ಅನಿವಾರ್ಯ ಪರಿಣಾಮಗಳಿವು. ಭಾರತದ ಸಾಮಾಜಿಕ ವಾಸ್ತವವು ಸಂಕೀರ್ಣವಾಗಿದ್ದು, ಹಿಂದೂ-ಮುಸ್ಲಿಂ ಎನ್ನುವ ಎರಡು ಮುಖಗಳನ್ನು ಮೀರಿದ್ದು ಎಂದು ಅವರಿಗೆ ಅರ್ಥವಾಗದ ಕಾರಣ ಈ ಆದಿವಾಸಿಗಳು ದೇಶರಹಿತರಾಗುತ್ತಾರೆ.

ಈ ಉಪಖಂಡಕ್ಕೆ ಈಗಿನ ಹೆಸರುಗಳೆಲ್ಲ ಬರುವುದರ ಮುಂಚೆಯೇ ಇಲ್ಲಿದ್ದ ಜನರ ಭವಿಷ್ಯ ಈಗ ತುಂಡು ಕಾಗದಗಳಿಂದ ನಿರ್ಧರಿಸಲ್ಪಡುತ್ತದೆ. ಅಥವಾ ಇದು ಆಗಲೇ ನಿರ್ಧರಿತವಾಗಿದೆ. “ಗಾಂಧೀಜಿ, ನನಗೆ ತಾಯ್ನಾಡೆಂಬುದೇ ಇಲ್ಲ” ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ ಮಾತು ಹಿಂದೆಂದಿಗಿಂತಲೂ ಇಂದು ಸತ್ಯವಾಗಿದೆ.

ಮುಖ್ಯವಾಹಿನಿಯ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿನ ಸಾಮಾನ್ಯ ಚರ್ಚೆಗಳನ್ನು ನೋಡಿದರೆ, ಆದಿವಾಸಿಗಳ ಬಾಗಿಲು ತಟ್ಟುತ್ತಿರುವ ಅನಿಶ್ಚಿತತೆಯ ಕುರಿತು ಯಾರೂ ಮಾತನಾಡುತ್ತಿಲ್ಲವೆಂದು ಸ್ಪಷ್ಟವಾಗುತ್ತದೆ. ಇದನ್ನು ಕೇವಲ ಹಿಂದೂ ವರ್ಸಸ್ ಮುಸ್ಲಿಂ, ಜಾತ್ಯತೀತ ವರ್ಸಸ್ ಕೋಮುವಾದಿ ವಿಷಯವೆಂದು ಮಾಡಲು ಪಣತೊಟ್ಟಿರುವ ಮಾಧ್ಯಮಗಳು ಬ್ರಾಹಣ್ಯದ ಸುಳ್ಳುಪ್ರಚಾರಕ್ಕೆ ಸಹಾಯವನ್ನಷ್ಟೇ ಮಾಡುತ್ತಿದ್ದಾರೆ. ‘ಹಿಂದೂ ರಾಜ್ಯ ವಾಸ್ತವರೂಪಕ್ಕೆ ಬಂದರೆ ಅದು ದೇಶಕ್ಕೆ ಅತಿದೊಡ್ಡ ವಿಪತ್ತಾಗುತ್ತದೆ. ಹಿಂದೂ ರಾಜ್ಯವು ನಿಜರೂಪಕ್ಕೆ ಬರುವುದನ್ನು ತಡೆಯಲು ನಾವು ಎಲ್ಲ ರೀತಿಯ ಪ್ರಯತ್ನ ನಡೆಸಬೇಕು’ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಆದರೆ ನಾವು ಆದಿವಾಸಿಗಳ ಸಮಸ್ಯೆಗಳ ಕುರಿತು ಮಾತನಾಡದಿದ್ದರೆ ನಮ್ಮ ಶ್ರಮ ವ್ಯರ್ಥವಾಗುತ್ತದೆ. ಹಿಂದುತ್ವವೆನ್ನುವ ಬ್ರಾಹ್ಮಣ್ಯದ ಯೋ‍ಜನೆ ಮೇಲ್ಜಾತಿಯವರಲ್ಲದೇ ಬೇರೆ ಯಾರಿಗೂ ಸಹಾಯಕ್ಕೆ ಬಾರದ್ದು ಎಂದು ತೋರಿಸಲು ಆದಿವಾಸಿಗಳ ದುಸ್ಥಿತಿಯನ್ನು ಕುರಿತು ಹೇಳುವ ಅಗತ್ಯವಿದೆ. ಇದಕ್ಕಾಗಿಯೇ, ಬೇರೆ ಸಂಗತಿಗಳ ಜೊತೆಗೆ ಆದಿವಾಸಿ ವಿರೋಧಿಯಾಗಿರುವ ಕಾರಣಕ್ಕೂ ಸಿ.ಎ.ಎ ಮತ್ತು ಎನ್.ಆರ್.ಸಿ ಅನ್ನು ವಿರೋಧಿಸಬೇಕಿದೆ.

ಈ ಲೇಖನ ಮೊದಲಿಗೆ ಆಂಗ್ಲ ಭಾಷೆಯಲ್ಲಿ ರೌಂಡ್ ಟೇಬಲ್ ಇಂಡಿಯಾ ಜಾಲತಾಣದಲ್ಲಿ ಪ್ರಕಟಿತವಾದದ್ದು.

ಪ್ರತಿಕ್ರಿಯಿಸಿ