ಜೀವವೃಕ್ಷ: ಜೀವವಿಕಾಸ ಸಿದ್ಧಾಂತದ ಹೃದಯಭಾಗದಲ್ಲಿರುವ ಶಕ್ತಿಯುತ ಗಣಿತಶಾಸ್ತ್ರೀಯ ಆಲೋಚನೆ

ಸೂಕ್ಷ್ಮಾಣು ಜೀವಿ ಬ್ಯಾಕ್ಟೀರಿಯಾಗಳಿಂದ, ಮನುಷ್ಯರು ಹಾಗೂ ದೈತ್ಯ ಸಿಕ್ವೊಯಾವರೆಗೆ ಎಲ್ಲ ಜೀವಿಗಳ ನಡುವೆ ಇರುವ ಸಂಬಂಧ ಒಂದು ಆಳವಾದ ಮತ್ತು ಅನಿರೀಕ್ಷಿತ ಗಣಿತಶಾಸ್ತ್ರೀಯ ಮಾದರಿಯನ್ನು ಅನುಸರಿಸುತ್ತದೆ. ಇದನ್ನು ನಾವೀಗಜೀವವೃಕ್ಷ‘ (tree of life) ಎಂದು ಕರೆಯುತ್ತೇವೆ. ನೈಸರ್ಗಿಕವಾದಿಗಳು ಶತಮಾನಗಳಷ್ಟು ಕಾಲದಲ್ಲಿ ಮಾದರಿಯನ್ನು ಆವಿಷ್ಕರಿಸಿದ್ದು, ಇದು ಜೀವದ ಉಗಮ ಮತ್ತು ಭೂಮಿಯ ಮೇಲಿನ ವೈವಿಧ್ಯವನ್ನು ವಿವರಿಸುವಲ್ಲಿ ಮುಖ್ಯ ಪಾತ್ರ ಹೊಂದಿದೆ ಎಂದು ಅರಿತಿದ್ದು ಚಾರ್ಲ್ಸ್ ಡಾರ್ವಿನ್ ಮತ್ತು ರಸೆಲ್ ವಾಲೇಸ್.

ಇನ್ನಿತರ ಅನೇಕ ಪ್ರಾಣಿಗಳಂತೆ, ಸುತ್ತಲಿನ ಜಗತ್ತಿನಲ್ಲಿ ಮಾದರಿಗಳನ್ನು (pattern) ಕಾಣುವ ಸಹಜ ಪ್ರವೃತ್ತಿಯನ್ನು ನಾವು ಹೊಂದಿದ್ದೇವೆ. ನಮ್ಮ ಉಳಿವು ಈ ಸಹಜ ಪ್ರವೃತ್ತಿಯನ್ನು ಅವಲಂಬಿಸಿದೆ. ಇದು ನಮಗೆ ಮಿತ್ರರಿಂದ ಶತ್ರುಗಳನ್ನು ಗುರುತಿಸಲು, ಋತುಮಾನಗಳನ್ನು ಗ್ರಹಿಸಲು, ಹಿಂದಿನ ಅನುಭವಗಳಿಂದ ಮುಂದಿನ ಕ್ರಿಯೆಯನ್ನು ಯೋಜಿಸಲು ಅನುವು ಮಾಡಿಕೊಡುತ್ತದೆ. ವಿಜ್ಞಾನ ಅಥವಾ, ಮುಂಚೆ ಕರೆಯಲ್ಪಡುತ್ತಿದ್ದಂತೆ, ನೈಸರ್ಗಿಕ ತತ್ವಶಾಸ್ತ್ರ ಈ ಸಹಜ ಪ್ರವೃತ್ತಿಯಿಂದ ಹುಟ್ಟಿದ್ದು. ಗೋಚರಿಸುವ ವಿಶ್ವದ ಅಗಾಧ ವೈವಿಧ್ಯತೆಯಲ್ಲಿ ಕೆಲವು ಮಾದರಿಗಳನ್ನು ಗುರುತಿಸಿ ಅವುಗಳನ್ನು ನಿಸರ್ಗದ ನಿಯಮಗಳಿಂದ ವಿವರಿಸುವ ಪ್ರಯತ್ನ. ವಿಪರ್ಯಾಸವೆಂದರೆ, ನಮ್ಮೊಳಗೆ ಒಡಗೂಡಿದ ಈ ಸಹಜ ಪ್ರವೃತ್ತಿ, ಎಷ್ಟೋ ಬಾರಿ, ವಿಜ್ಞಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸುತ್ತದೆ. ನಾವು ಮಾದರಿಗಳಿಲ್ಲದಲ್ಲಿಯೂ ಮಾದರಿಗಳನ್ನು ಕಾಣುತ್ತೇವೆ. ಯಾದೃಚ್ಛಿಕತೆಯಲ್ಲಿ (randomness) ನಮೂನೆಗಳನ್ನು ಕಾಣುತ್ತೇವೆ. ವಿಜ್ಞಾನದ ಇತಿಹಾಸವು ನಿಜವಾದ ಮಾದರಿಗಳನ್ನು ಸುಳ್ಳು ಮಾದರಿಗಳಿಂದ ಬೇರ್ಪಡಿಸಲು ನಾವು ಕಲಿತ ಬಗೆಯನ್ನು ಕುರಿತ ಇತಿಹಾಸವಾಗಿದೆ.

ಬಾಕ್ಸ್ : ವೀಕ್ಷಣೆ, ಮಾದರಿಗಳು ಮತ್ತು ವಿವರಣೆಗಳು

ಬಹುತೇಕ ಯಶಸ್ವಿ ವೈಜ್ಞಾನಿಕ ಸಿದ್ಧಾಂತಗಳು, ಮೂರು ಹಂತದಲ್ಲಿ ಬೆಳೆದಿವೆ. ಮೊದಲು ವೀಕ್ಷಣೆಗಳು ಬರುತ್ತವೆ. ವಿಶ್ವವನ್ನು  ಕುರಿತ ಅಗಾಧ ಸಂಖ್ಯೆಯ ನಾವು ಕಾಣುವ ಅಥವಾ ಪ್ರಯೋಗಗಳ ಮೂಲಕ ವಿಶ್ವವನ್ನು ಶೋಧಿಸಿ ಪಡೆಯುವ ವಿವರಗಳ ಪಟ್ಟಿ. ಈ ವೀಕ್ಷಣೆಗಳು ಗೊಂದಲದಿಂದ ಹಾಗೂ ಅಸ್ತವ್ಯಸ್ತತೆಯಿಂದ ತುಂಬಿರುವಂತಹವು. ಅವು ಹೇಗೆ ಒಂದಕ್ಕೊಂದಕ್ಕೆ ಸಂಬಂಧಪಟ್ಟಿವೆ ಎನ್ನುವುದು ಅಸ್ಪಷ್ಟವಾಗಿದ್ದು, ಮುಂದಿನ ವೀಕ್ಷಣೆ ಎತ್ತ ಕೊಂಡುಯ್ಯುತ್ತದೆಂದು ಹೇಳುವುದು ಕಷ್ಟದ ಕೆಲಸ. ಇದು ಕಲಾವಿದರೊಬ್ಬರು ಕ್ಯಾನ್‍ವಾಸ್‍ ಮೇಲೆ ವರ್ಣಚಿತ್ರವೊಂದನ್ನು  ರಚಿಸುವುದನ್ನು ನೋಡುತ್ತಿರುವ ಹಾಗೆ. ಅವರು ಕ್ಯಾನ್‍ವಾಸ್‍ನ ಇಲ್ಲೊಂದಿಷ್ಟು ಅಲ್ಲೊಂದಿಷ್ಟು ತುಂಬುತ್ತಿದ್ದು ಆಕಾರ ಹಾಗೂ ಬಣ್ಣಗಳು ಅರ್ಥರಹಿತವೆನಿಸಿ ವರ್ಣಚಿತ್ರ ಯಾವುದರ ಕುರಿತೆಂದು ನಾವು ಹೇಳಲಾಗದಿರಬಹುದು. ಆದರೆ ಸಮಯದೊಡನೆ ಸಾಕಷ್ಟು ವೀಕ್ಷಣೆಗಳು ಸೇರುತ್ತಿದ್ದಂತೆಯೇ ವಿಶಾಲವಾಗಿ ಕೆಲವು ಮಾದರಿಗಳು ಗೋಚರಿಸತೊಡಗುತ್ತವೆ. ಬಹುತೇಕ ಸಲ, ಒಂದು ಏಕೈಕ ಕ್ಷಣದಲ್ಲಿ ಕ್ಯಾನ್‍ವಾಸ್ ಒಂದು ಚಿತ್ರವಾಗಿ ಮೂಡಿ ನಾವು ಏನನ್ನು ನೋಡುತ್ತಿದ್ದೇವೆನ್ನುವುದರ ಅರಿವಾಗುತ್ತದೆ. ವಿಜ್ಞಾನದಲ್ಲಿ ಈ ಅರಿವನ್ನು ಬಹುತೇಕ ಸಲ ಗಣಿತದ ರೂಪದಲ್ಲಿ ಬರೆಯಬಹುದು. ನಮ್ಮ ವೀಕ್ಷಣೆಗಳ ವಿಶಾಲವಾದ ನಮೂನೆಗಳನ್ನು ಕೆಲವು ಸರಳ ನಿಯಮಗಳಲ್ಲಿ ಅಥವಾ ಸಮೀಕರಣಗಳಲ್ಲಿ ಹೇಳಬಹುದು. ಇದು, ಒಂದು ಬದಲಾವಣೆಯ ಸಮಯ. ನಾವು ಏನನ್ನು ನೋಡುತ್ತಿದ್ದೇವೆಂದು ವಿವರಣೆಯನ್ನು ನೀಡುವುದು ಕೊನೆಯ ಹಂತವಾಗಿದೆ. ಇದು ವೀಕ್ಷಕ ವರ್ಣಚಿತ್ರದ ಅರ್ಥವನ್ನು, ಕಲಾವಿದರು ಏನನ್ನು ಹೇಳುತ್ತಿದ್ದಾರೆಂದು ಗ್ರಹಿಸುವ ಹಂತ. ಒಬ್ಬರು ವಿಜ್ಞಾನಿಗೆ ಇದು ಕೇವಲ ಗಣಿತರೂಪದಲ್ಲಿ ಕಲೆಹಾಕುವುದನ್ನು ಮೀರಿ, ಈ ಮಾದರಿಗಳಿಗೆ ಆಳವಾದ ಕಾರಣಗಳೇನೆಂದು ನೋಡುವುದನ್ನು ಒಳಗೊಂಡಿರುತ್ತದೆ. ವಿಜ್ಞಾನದ ಅತಿದೊಡ್ಡ ವಿಜಯವೇನೆಂದರೆ ಈ ಆಳವಾದ ಕಾರಣಗಳು ಕೆಲವೇ ಉಲ್ಲಂಘಿಸಲಾಗದ ನೈಸರ್ಗಿಕ ನಿಯಮಗಳಾಗಿದ್ದು ಯಾವುದೋ ಅಡಗಿಕೊಂಡಿರುವ ಬ್ರಹ್ಮಾಂಡದ ವಿಚಿತ್ರ ಕಲಾವಿದರಲ್ಲ  ಎಂದು ತೋರಿಸಿದ್ದಾಗಿದೆ. ಇದು ವಿಜ್ಞಾನವನ್ನು ಕೇವಲ ವಿವರಣೆಯ ಶಾಸ್ತ್ರವಾಗಿರದೇ, ಮುಂದಾಗುವುದನ್ನು ಊಹಿಸಬಲ್ಲಂತೆ ಅನುವು ಮಾಡಿಕೊಡುತ್ತದೆ.

ಟೇಬಲ್ ೧. ವೈಜ್ಞಾನಿಕ ಸಿದ್ಧಾಂತದ ಬೆಳವಣಿಗೆಯ ಮೂರು ಹಂತಗಳು: ವೀಕ್ಷಣೆಗಳು, ಗಣಿತಶಾಸ್ತ್ರೀಯ ಮಾದರಿಗಳು ಮತ್ತು ವಿವರಣೆ. Credits: Mukund Thattai. Licence: CC-BY-NC

ಕೆಲವು ಉದಾಹರಣೆಗಳು ಈ ಪ್ರಕ್ರಿಯೆಯನ್ನು ತಿಳಿಯಾಗಿಸಬಹುದು. ೧೫೦೦ರಲ್ಲಿ ಟೈಕೋ ಬ್ರಾಹೆ ಆಕಾಶದಲ್ಲಿ ಗ್ರಹಗಳ ಚಲನೆಯನ್ನು ಅಭೂತಪೂರ್ವ ನಿಖರತೆಯೊಂದಿಗೆ ದಾಖಲಿಸುತ್ತಾರೆ. ಟೈಕೋ ಬ್ರಾಹೆಯ ವೀಕ್ಷಣೆಯ ದಾಖಲೆಗಳನ್ನು ಉಪಯೋಗಿಸಿ ಯುವ ಗಣಿತಜಜ್ಞ ಹಾಗೂ ಖಗೋಳಶಾತ್ರಜ್ಞ ಕೆಪ್ಲರ್ ಗ್ರಹಗಳ ಚಲನೆಯ ತನ್ನ ಪ್ರಸಿದ್ಧ ದೀರ್ಘ ವೃತ್ತಾಕಾರದ ಮಾದರಿಯನ್ನು ಕಂಡುಹಿಡಿಯುತ್ತಾರೆ. ಕೆಪ್ಲರ್‍ನ ನಿಯಮಗಳನ್ನು ಇನ್ನೂ ಆಳವಾದ ಸಾರ್ವತ್ರಿಕವಾದ ಯಂತ್ರಶಾಸ್ತ್ರದ ಸಿದ್ಧಾಂತದ ಮೂಲಕ ಅರ್ಥ ಮಾಡಿಕೊಳ್ಳಲು ಐಸಾಕ್ ನ್ಯೂಟನ್‍ರ ಪ್ರತಿಭೆ ಬೇಕಾಯಿತು. ೧೬೮೭ರ ಪ್ರಿನ್ಸಿಪಿಯಾ ಮಾಥಮಾಟಿಕಾದೊಂದಿಗೆ ನ್ಯೂಟನ್ನಿನ ಯಂತ್ರಶಾಸ್ತ್ರವು ಆಧುನಿಕ ವೈಜ್ಞಾನಿಕ ಯುಗಕ್ಕೆ ನಾಂದಿ ಹಾಡಿತು. ಅಂತೆಯೇ ೧೭೮೯ರಲ್ಲಿ ಆಂಟ್ವಾ ಲೆವೋಸಿಯೇರ್ ರಾಸಾಯನಿಕ ಕ್ರಿಯಗಳ ತಮ್ಮ ಅಧ್ಯಯನದ ಆಧಾರದ ಮೇಲೆ ೩೩ ರಾಸಾಯನಿಕ ಮೂಲಧಾತುಗಳನ್ನು ಗುರುತಿಸಿದರು, ಆದರೆ ಅವುಗಳ ಗುಣಗಳಿಗೆ ಸರಳ ವಿವರಣೆ ನೀಡಲು ವಿಫಲರಾದರು. ೧೮೬೯ರಲ್ಲಿ ಡಿಮಿಟ್ರಿ ಮೆಂಡಲೀವ್ ಧಾತುವಿನ ರಾಸಾಯನಿಕ ಗುಣಗಳು ಅವುಗಳ ಅಣು ತೂಕದ ಮೇಲಲ್ಲದೇ ಅಣು ಸಂಖ್ಯೆಯ, ಆವರ್ತ ಕೋಷ್ಟಕ (periodic table)ನಲ್ಲಿ ಎಷ್ಟನೆಯದೆರನ್ನುವ, ಮೇಲೆ ಅವಲಂಬಿಸಿದ್ದೆಂದು ತೋರಿಸಿದರು. ಈ ಮಾದರಿಯ ಇರುವಿಕೆ ಅರ್ಥವಾಗಲು ೧೯೦೦ರ ಪರಮಾಣು ಕಣಗಳ ಆವಿಷ್ಕಾರದವರೆಗೆ ಕಾಯಬೇಕಾಯಿತು: ಅಣುವಿನ ರಾಸಾಯನಿಕ ಗುಣಗಳನ್ನು ನಿರ್ಧರಿಸಿದ್ದು ಅದರಲ್ಲಿರುವ ಪ್ರೋಟಾನ್ ಮತ್ತು ಎಲೆಕ್ಟ್ರಾನ್‍ಗಳ ಸಂಖ್ಯೆಯೇ ಹೊರತು ನ್ಯೂಟ್ರಾನ್‍ಗಳದ್ದಲ್ಲ.

೧೯೦೦ರ ಶತಮಾನವು, ಹಲವು ಶತಮಾನಗಳಷ್ಟು ಹಳೆಯದಾದ ಸಿದ್ಧಾಂತಗಳನ್ನು ಉರುಳಿಸುವ ವೈಜ್ಞಾನಿಕ ಕ್ರಾಂತಿಗಳನ್ನು ಕಂಡಿತು. ವಿದ್ಯುತ್ ಮತ್ತು ಕಾಂತೀಯತೆಯ ಕುರಿತು ಶತಮಾನಗಳ ವೀಕ್ಷಣೆಗಳನ್ನು ವಿವರಿಸುವ , ಮ್ಯಾಕ್ಸ್ವೆಲ್ ಸಮೀಕರಣಗಳಲ್ಲಿ ಕಂಡುಕೊಂಡ ಮಾದರಿಗಳು ಐನ್‍ಸ್ಟೈನ್‍ರನ್ನು ವಿಶೇಷ ಸಾಪೇಕ್ಷತಾ ಸಿದ್ಧಾಂತವನ್ನು ಕಂಡುಹಿಡಿಯುವಂತೆ ಮಾಡಿತು. ವಿಶ್ವದ ಕ್ವಾಂಟಮ್ ತತ್ವದ ವಿವರಣೆಗೆ ವೇದಿಕೆ ಕಲ್ಪಿಸಿದ್ದು ಜಲಜನಕದ ರೋಹಿತವನ್ನು (spectrum) ವಿವರಿಸಲು ರಿಡ್‍ಬರ್ಗ್ ಕಂಡುಕೊಂಡ ಗಣಿತಶಾಸ್ತ್ರೀಯ ಮಾದರಿ. ಸಾಪೇಕ್ಷತೆ ಮತ್ತು ಕ್ವಾಂಟಮ್ ಸಿದ್ಧಾಂತವನ್ನು ಸೇರಿಸಿ ೨೦ನೇಯ ಶತಮಾನದಲ್ಲಿ ವಸ್ತುವಿನ ಸ್ಥಿತಿಯ ಅತ್ಯಂತ ನಿಖರ ಸಿದ್ಧಾಂತವನ್ನು ರೂಪಿಸಲಾಯಿತು. Standard model (ಪರಿಮಾಣಿತ ಮಾದರಿ) ಎಂದು ಕರೆಯಲಾಗುವ ಈ ಸಿದ್ಧಾಂತವು ಕೂಡ ನಿಸರ್ಗದ ಸಮ್ಮಿತಿಗಳೆಂದು (symmetry)  ಕರೆಯಲ್ಪಡುವ ಗಣಿತಶಾಸ್ತ್ರೀಯ ಮಾದರಿಗಳನ್ನಾಧರಿಸಿದ್ದು.

ಈ ಎಲ್ಲದರಲ್ಲೂ ಮುಖ್ಯವಾದದ್ದೇನೆಂದರೆ, ವೀಕ್ಷಣೆಯ ದಾಖಲೆಗಳು ಒಮ್ಮೆ ಗಣಿತಶಾಸ್ತ್ರೀಯ ಮಾದರಿಯ ರೂಪದಲ್ಲಿ ದೊರೆತ ಕೂಡಲೇ, ವಿಜ್ಞಾನಿಯು ವೀಕ್ಷಣೆಯ ವಿವರಗಳಿಂದ ದೂರ ನಿಂತು ಆಳವಾದ ಹಾಗೂ ಸಾಮಾನ್ಯವಾಗಿ ಸರಳವಾದ ವಿವರಣೆಗಳನ್ನು ಹುಡುಕಲು ಪ್ರಾರಂಭಿಸಬಹುದು.

 

ಜೀವಿಗಳ ವರ್ಗೀಕರಣ

ಚಿತ್ರ ೧: The great chain of being, ಇರುವಿನ ಮಹಾ ಸರಪಣಿ),Credits: Wikimedia Commons. https://en.wikipedia.org/wiki/Great_chain_of_being#/media/File:BonnetChain.jpg, Licence: Public domain

ಭೂಮಿಯ ಮೇಲಿರುವ ಜೀವವೈವಿಧ್ಯತೆಯನ್ನು ವರ್ಗೀಕರಿಸಲು ಹಲವು ಪ್ರಯತ್ನಗಳಾಗಿವೆ.  ಸಾಮಾನ್ಯವಾಗಿ ಪ್ರಚಲಿತವಾಗಿರುವ ಮತ್ತು ಅತ್ಯಂತ ಹಿಂದಿನ ಪ್ರಯತ್ನ ಗಳಲ್ಲೊಂದಾದ ಇರುವಿನ ಮಹಾ ಸರಪಣಿ (Great chain of being), ಅರೆಧಾರ್ಮಿಕವಾದ ನೆಲೆಯಲ್ಲಿ ವಿಭಜಿಸುವ ಪ್ರಯತ್ನವಾಗಿದೆ (ಚಿತ್ರ ೧).  ಇದು ಕ್ರೈಸ್ತ ವಿದ್ವಾಂಸರಿಂದ ರೂಪಿಸಲ್ಪಟ್ಟಿದ್ದು, ಹಿಂದೂ ಪುರಾಣಗಳಲ್ಲಿ, ಪುರಾತನ ಗ್ರೀಕ್ ಮತ್ತು ಈಜಿಪ್ಟಿನ ತತ್ವಶಾಸ್ತ್ರಗಳಲ್ಲಿ ಇದೇ ರೀತಿಯ ಪ್ರಯತ್ನಗಳು ಕಾಣಸಿಗುತ್ತವೆ. ಈ ಇರುವಿನ ಮಹಾ ಸರಪಣಿಯ ಎಲ್ಲಾ ಆವೃತ್ತಿಗಳಲ್ಲೂ ಜೀವಿಗಳನ್ನು ಒಂದು ನಿರ್ದಿಷ್ಟ ಏಣಿಯಲ್ಲಿ ವರ್ಗೀಕರಿಸಲಾಗುತ್ತದೆ. ಈ ಏಣಿಯ ಕೆಳಸ್ತರದಲ್ಲಿ ಖನಿಜಾಂಶ ಮತ್ತು ಅಜೈವಿಕ ವಸ್ತುಗಳಿದ್ದು, ಇವುಗಳ ನಂತರ ಸರಳ ಜೀವಿಗಳು, ಉದಾಹರಣೆಗೆ ಸೂಕ್ಷ್ಮ ಜೀವಿಗಳು (ಇದು ಆಧುನಿಕವಾಗಿ ಸೇರಿಸಲ್ಪಟ್ಟದ್ದು), ನಂತರ ಸಸ್ಯಗಳು, ನಂತರ ಪ್ರಾಣಿಗಳು, ಮತ್ತು ಇವೆಲ್ಲದಕ್ಕಿಂತ ಮೇಲೆ ಮನುಷ್ಯರು ಮತ್ತು ಕೆಲವೊಮ್ಮೆ ಮನುಷ್ಯರಿಗಿಂತ ಮೇಲೆ ದೇವತೆಗಳು ಹಾಗೂ ದೇವರುಗಳು. ಇದೊಂದು ಮೋಡಿಗೊಳಿಸುವ ಮಾದರಿ. ನಮ್ಮನ್ನು ನಾವು ಅತ್ಯಂತ ಮೇಲೆ ಇರಿಸಿಕೊಳ್ಳುವ ನಮ್ಮ ಸ್ವಾಭಾವಿಕ ಗುಣದ ಮೇಲೆ ಇದು ಅವಲಂಬಿಸಿದೆ. ಕ್ರಮವಾದ ವೀಕ್ಷಣೆ ಹಾಗು ಅವಲೋಕನೆಯನ್ನವಲಂಬಿಸದೇ, ವಿಶ್ವವನ್ನು ನಮ್ಮ ಪೂರ್ವಭಾವೀ ಕಲ್ಪನೆಗಳಿಗೆ ಹೊಂದುವಂತೆ ಮಾಡುವ ಬಯಕೆಯನ್ನವಲಂಬಿಸಿದೆ.

ಪೂರ್ವಗ್ರಹಗಳಿಲ್ಲದ ವೀಕ್ಷಣೆ ಮತ್ತು ಅವಲೋಕನೆಯಲ್ಲಿ ನೆಲೆಗೊಂಡ, ವೈಜ್ಞಾನಿಕವಾಗಿ ಜೀವಜಗತ್ತನ್ನು ವರ್ಗೀಕರಿಸುವ ಪ್ರಯತ್ನವನ್ನು ಟಾಕ್ಸಾನಮಿ ಅಥವಾ ಜೀವವರ್ಗೀಕರಣ ಎನ್ನುತ್ತೇವೆ. ಮೊದಲಿಗೆ, ನಾವು ನಮಗೆ ತಿಳಿದಿರುವ ಎಲ್ಲ ಜೀವಿಗಳ ಗುಣಲಕ್ಷಣಗಳ ಬಗ್ಗೆ ಬೃಹತ್ ಪ್ರಮಾಣದಲ್ಲಿ ಮಾಹಿತಿಯನ್ನು ಕಲೆಹಾಕುತ್ತೇವೆ. ಇದಾದ ನಂತರ ಈ ಗುಣಲಕ್ಷಣಗಳನ್ನಾಧರಿಸಿ ಜೀವಿಗಳನ್ನು ವರ್ಗೀಕರಿಸುವ ಕ್ಲಿಷ್ಟ ಕೆಲಸಕ್ಕೆ ತೊಡಗುತ್ತೇವೆ. ಆದರೆ ಇದನ್ನು ಮಾಡತೊಡಗಿದ ಕೂಡಲೇ ನಮಗೆ ಒಂದು ಸಮಸ್ಯೆ ಎದುರಾಗುತ್ತದೆ. ಯಾವ ಗುಣಲಕ್ಷಣಗಳ ಮೇಲೆ ವರ್ಗೀಕರಿಸಬೇಕೆಂಬ ಪ್ರಶ್ನೆಯ ಕುರಿತು ವಿವಿಧ ತಜ್ಞರು ವಿಭಿನ್ನ ಅಭಿಪ್ರಾಯಗಳನ್ನು ತೆಳೆಯುತ್ತಾರೆ. ಕೆಲವರು ಸಂಕೀರ್ಣತೆಯನ್ನು ಮಾನದಂಡವಾಗಿ ಪರಿಗಣಿಸಿದರೆ, ಕೆಲವರು ಗಾತ್ರ, ಕೆಲವರು ಬದುಕುವ ವಿಧಾನ, ಇನ್ನು ಕೆಲವರು ಆವಾಸಸ್ಥಾನವನ್ನು ಮಾನದಂಡವಾಗಿ ಪರಿಗಣಿಸುತ್ತಾರೆ. ಇವುಗಳಲ್ಲಿ ಯಾವುದು ಸರಿಯೆನ್ನುವುದು ವಾಸ್ತವಕ್ಕಿಂತ ಅವರವರ ನಂಬಿಕೆ ಅಥವಾ ಅಭಿಪ್ರಾಯದ ಮೇಲೆ ನಿರ್ಭರಿತವಾದದ್ದು ಹಾಗೂ ಪ್ರತಿಯೊಂದು ಆಯ್ಕೆ ವಿಭಿನ್ನ ಜೀವವರ್ಗೀಕರಣವನ್ನು ನೀಡುತ್ತದೆ.

೧೬೦೦ರ ಶತಮಾನದ ಯುರೋಪಿನಲ್ಲಿ ವರ್ಗೀಕರಣದ ಆಟ ತಾಪಕ್ಕೇರಿದ ಸ್ಥಿತಿ ತಲುಪಿತ್ತು. ಇದು ಯುರೋಪಿನ ಶಕ್ತಿ ಜಗತ್ತಿನಾದ್ಯಂತ ತಲುಪಿದ್ದ ಸಮಯವಾಗಿತ್ತು. ವಿಲಕ್ಷಣವಾದ ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿಗಳನ್ನು ತಮ್ಮ ತಮ್ಮ ಸಾಮ್ರಾಜ್ಯಗಳ ತುದಿಗಳಿಂದ ಮೃಗಸಂಗ್ರಹಾಲಯಗಳಿಗೆಂದು ಜನರ ಮೋಜಿಗಾಗಿ ತರಲಾಯಿತು (ಚಿತ್ರ ೨).  ಒಂದು ಬೃಹತ್ ಸಭಾಂಗಣದ ತುಂಬಾ ಅಚ್ಚುಕಟ್ಟಾಗಿ ಎಲ್ಲ ರೀತಿಯ ಪ್ರಾಣಿಗಳ ಮಾದರಿಗಳನ್ನು ಜೋಡಿಸಿರುವ ಕಲ್ಪನೆ ನನ್ನ ಮನಸ್ಸಿನಲ್ಲಿ ಮೂಡುತ್ತದೆ. ಹವ್ಯಾಸಿ ಜೀವವರ್ಗೀಕರಣ ಶಾಸ್ತ್ರಜ್ಞರು ಸಭಾಂಗಣದ ಸುತ್ತ ಸುತ್ತುತ್ತಾ, ಈ ಮಾದರಿಗಳನ್ನು ಒಂದೆಡೆಯಿಂದ ಎನ್ನೊಂದೆಡೆಗೆ ಇರಿಸುತ್ತ ತಮ್ಮ ಗುಂಪುಗಳ ರಚನೆಯಲ್ಲಿ ಒಬ್ಬರನ್ನೊಬ್ಬರನ್ನು ಮೀರಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಇದರ ಫಲಿತಾಂಶ ಏನಾಗಬಹುದು? ಒಬ್ಬರು ಎಲ್ಲ ಮಾದರಿಗಳನ್ನು ಬಣ್ಣದ ಆಧಾರವಾಗಿ ಜೋಡಿಸಿ ಮರುದಿನ ಇನ್ನೊಬ್ಬರು ಎಲ್ಲವನ್ನು ಗಾತ್ರದ ಆಧಾರವಾಗಿ ಜೋಡಿಸಿದ್ದನ್ನು ನೋಡಿ ಬೇಸರಗೊಳ್ಳುವುದು. ಎಲ್ಲರೂ ಒಬ್ಬರೊಬ್ಬರ ಮೇಲೆ ಕುಪಿತರಾಗಿದ್ದಾರೆ. ಆದರೆ ನಂತರ ಅಸಮಾನ್ಯ ಸಂಗತಿಯೊಂದು ಘಟಿಸುತ್ತದೆ. ಕೆಲವು ಜೀವವರ್ಗೀಕರಣ ಶಾಸ್ತ್ರಜ್ಞರು, ಸುಮ್ಮನೆ ತಮಾಷೆಗೆಂದು, ಹೆಚ್ಚು ಹೆಚ್ಚು ಅಸ್ಪಷ್ಟ ಗುಣಗಳ ಆಧಾರದ ಮೇರೆಗೆ ವರ್ಗೀಕರಿಸಲು ಆರಂಭಿಸುತ್ತಾರೆ. ಗಾತ್ರ ಅಥವಾ ಬಣ್ಣವನ್ನು ಬಿಟ್ಟು, ಇವರು ಕಿವಿಯಲ್ಲಿಯ ಮೂಳೆಗಳ ಸಂಖ್ಯೆ, ಸೊಂಟದ ಮೂಳೆಗಳಲ್ಲಿರುವ ರಂಧ್ರಗಳು, ಕಾಲ್ಬೆರಳುಗಳ ಮೇಲೆ ಮಾಂಸಖಂಡಗಳು ಹರಡಿರುವ ರೀತಿ ಇತ್ಯಾದಿಗಳ ಮೇಲೆ ಗಮನ ನೀಡುತ್ತಾರೆ. ಈಗಲೂ ಹಲವರ ನಡುವೆ ಭಿನ್ನಾಭಿಪ್ರಾಯಗಳಿದ್ದು ಕೋಪದಲ್ಲಿ ಸಭಾಂಗಣವನ್ನು ತೊರೆಯಬಹುದು. ಆದರೆ ನಿಧಾನವಾಗಿ ಬಹುತೇಕರು ಒಪ್ಪುವ ಒಂದು ವಿಶಾಲವಾದ ವರ್ಗೀಕರಣದ ಮಾನದಂಡ ಮೂಡಿ ಪ್ರತಿಯೊಬ್ಬರು ತಮ್ಮ ಪಾಡಿಗೆ ತಾವು ವಿವರಗಳ ಕುರಿತಾಗಿ ಸಭಾಂಗಣದ ತುದಿಗಳಲ್ಲಿ ಕಾರ್ಯ ಮಾಡಲಾರಂಭಿಸುತ್ತಾರೆ.

ಇಲ್ಲಿ ನಡೆಯುತ್ತಿರುವುದು ಏನು? ಸಂಪೂರ್ಣವಾಗಿ ವಿಭಿನ್ನ ಮಾನದಂಡಗಳನ್ನು ಉಪಯೋಗಿಸುತ್ತಿದ್ದ ಇಷ್ಟೊಂದು ಜನ ಕೆಲವು ವಿಚಾರಗಳಲ್ಲಿ ಒಪ್ಪಿಕೊಳ್ಳಲಾರಂಭಿಸುವುದು ಹೇಗೆ ಸಾಧ್ಯವಾಯಿತು? ಇಲ್ಲಿ, ಮೊದಲ ಬಾರಿಗೆ ನಾವು ಒಂದು ಆಳವಾದ ಗಣಿತಶಾಸ್ತ್ರೀಯ ಮಾದರಿಯನ್ನು ಕಾಣಬಹುದು. ಸಭಾಂಗಣದಲ್ಲಿ ಯಾವುದೇ ಮೂರು ಪ್ರಾಣಿಗಳನ್ನು ಪರಿಗಣಿಸಿ, ಅವುಗಳನ್ನು X, Y ಮತ್ತು Z  ಎಂದು ಕರೆಯೋಣ. ಭಿನ್ನ ಗುಣಗಳನ್ನು ಆಧರಿಸಿ ವರ್ಗೀಕರಿಸುವ ಇಬ್ಬರು ಜೀವ ವರ್ಗೀಕರಣ ಶಾಸ್ತ್ರಜ್ಞರನ್ನು A ಮತ್ತು B  ಎಂದು ಕರೆಯೋಣ. ನಾವು A ಅನ್ನು ಕೇಳಿ ಅವಳು {X, Y} ಒಂದು ಗುಂಪಿಗೆ ಸೇರಿದ್ದು {Z} ಇನ್ನೊಂದು ಗುಂಪಿಗೆ ಸೇರಿದೆ ಎಂದು ಪರಿಗಣಿಸಿದರೆ, ಅದನ್ನು {{X,Y},Z} ಎಂದು ಬರೆಯೋಣ. B ಯ ಮಾನದಂಡದ ಪ್ರಕಾರ {Y,Z} ಒಂದು ಗುಂಪಿಗೆ ಸೇರಿದ್ದು, {X} ಇನ್ನೊಂದು ಗುಂಪಿಗೆ ಸೇರಿದ್ದಾದರೆ ಅದನ್ನು {{X},{Y,Z}} ಎಂದು ಬರೆಯೋಣ. ಹೀಗಿದ್ದಲ್ಲಿ A ಮತ್ತು B ಎಂದೂ ಒಪ್ಪಿಗೆಗೆ ಬರಲಾರರು. ಆದರೆ, ಬದಲಾಗಿ B ಯು {X}, {Y} ಮತ್ತು {Z} ಮೂರು ಪ್ರತ್ಯೇಕ ಗುಂಪಿಗೆ ಸೇರಿದವೆಂದರೆ ನಾವದನ್ನು {{X}, {Y}, {Z}} ಆಗಿ ಬರೆಯುತ್ತೇವೆ. ಈಗ ಯಾವುದೇ ಚಿಂತೆಯಿಲ್ಲವೆಂದು A ಹೇಳುತ್ತಾಳೆ. ಏಕೆಂದರೆ B ಮಾಡಿದ್ದೇನೆಂದರೆ ಆಕೆಯ ವರ್ಗೀಕರಣವನ್ನು ಇನ್ನಷ್ಟು ಉಪವಿಭಾಗಿಸಿದ್ದು. ಉದಾಹರಣೆಗೆ A ತನ್ನ ವರ್ಗೀಕರಣದಲ್ಲಿ ಕೀಟಗಳು {X,Y} ಹಾಗೂ ಪಕ್ಷಿಗಳು {Z} ಎಂದರೆ; ಜೀರುಂಡೆಗಳು {X} ಜೇನುನೊಣಗಳು {Y} ಹಾಗೂ ಪಕ್ಷಿಗಳು {Z} ಎಂದು B ಯೋಚಿಸುತ್ತಿರಬಹುದು. ಈ ಗುಂಪುಗಳನ್ನು ನಾವು ಒಂದನ್ನೊಂದೊಳಗೊಂಡ ಪಟ್ಟಿಯಾಗಿ {{{X}, {Y}}, {Z}} ಎಂದು ಬರೆದರೆ A ಮತ್ತು B ಇಬ್ಬರೂ ಖುಷಿಯಾಗಿರಬಹುದು. ಹೆಚ್ಚು ಸಾಮಾನ್ಯವಾಗಿ ಹೇಳುವುದಾದರೆ ಯಾವುದೇ ಮೂರು X, Y ಮತ್ತು Z ಪ್ರಾಣಿಗಳ ಆಯ್ಕೆಯಲ್ಲಿ A ಮತ್ತು B ಯ ವರ್ಗೀಕರಣದಲ್ಲಿ ಭಿನ್ನಾಭಿಪ್ರಾಯವಿಲ್ಲದಿದ್ದರೆ ,ಈ ವರ್ಗೀಕರಣಗಳು ಪರಸ್ಪರ ಹೊಂದುವಂತಹದ್ದು ಎನ್ನಬಹುದು. ನಾವು ಮೇಲೆ ಚರ್ಚಿಸಿದ ಆಟದಲ್ಲಿ ಆದದ್ದೇನೆಂದರೆ (ಚಿತ್ರ ೩), ಸಾವಿರಾರು ಜೀವ ವರ್ಗೀಕರಣ ಶಾಸ್ತ್ರಜ್ಞರು ತಮ್ಮ ವರ್ಗೀಕರಣಗಳು ಪರಸ್ಪರ ಹೊಂದುತ್ತವೆಂದು ಕಂಡುಕೊಂಡು, ಸಮಯ ಕಳೆದಂತೆ, ಇಡೀ ಸಬಾಂಗಣವು ಒಂದನ್ನೊಂದಳಗೊಂಡ (nested) ಗುಂಪು ಹಾಗೂ ಉಪಗುಂಪುಗಳಾಗಿ ವಿಭಜಿತವಾಯಿತು. 

ಈ ಒಗಟಿನ ಅಂತಿಮ ತುಣುಕು ಈಗ ಬರುತ್ತದೆ. ನಾವು ಕಲ್ಪಿಸಿಕೊಂಡ ಆಟವನ್ನು ಹೋಲುವಂತಹ ಪ್ರಕ್ರಿಯೆ ೧೭೦೦ರ ಶತಮಾನದ ಉದ್ದಕ್ಕೂ ನಡೆಯಿತು. ಈ ಭಿನ್ನಾಭಿಪ್ರಾಯದ ಧೂಳು ಸರಿದಾಗ, ವರ್ಗೀಕರಣದ ಸಮಸ್ಯೆಗೆ ಒಂದು ಏಕಮಾತ್ರ ಅನನ್ಯ ಪರಿಹಾರವಿದೆಯೆಂದು ಅರಿಯಲಾಯಿತು. ಒಂದಕ್ಕೊಂದು ಹೊಂದುವ ಸಾವಿರಾರು (ಬಹುತೇಕ ಅಸ್ಪಷ್ಟ ಗುಣಗಳನ್ನೂ ಸೇರಿಕೊಂಡ) ಗುಣಗಳ ಪಟ್ಟಿಯೊಂದನ್ನು ರಚಿಸಲಾಯಿತು, ಹೊಂದದ ಗುಣಗಳನ್ನು (ಉದಾಹರಣೆಗೆ ಬಣ್ಣ ಮತ್ತು ಗಾತ್ರ) ಕಡೆಗಣಿಸಲಾಯಿತು. ಇದು ನಂಬಿಕೆ ಅಥವಾ ಅಭಿಪ್ರಾಯಗಳ ಮೇಲೆ ಅವಲಂಬಿಸಿರಲಿಲ್ಲ. ಈ ಬೆಳವಣಿಗೆಯ ಸಂಪೂರ್ಣ ಅಭಿವ್ಯಕ್ತಿಯಾಗಿ ೧೭೩೫ರಲ್ಲಿ ಬರೆದ ಕಾರ್ಲ್ ಲಿನ್ನೇಯಸ್ ಅವರ ಸಿಸ್ಟೆಮಾ ನ್ಯಾಚುರೇ ಅನ್ನು ಕಾಣಬಹುದು. ಆ ದಿನಾಂಕದ ನಂತರ ಲಿನ್ನೇಯನ್ ಪದ್ಧತಿಯ ಜೀವವರ್ಗೀಕರಣವನ್ನು ಏಕೈಕ ಜೀವವರ್ಗೀಕರಣ ವಿಧಾನವಾಗಿ ಪರಿಗಣಿಸಲಾಯಿತು. ಯಾವುದೇ ಹೊಸ ಜೀವಸಂತತಿಯನ್ನು ಕಂಡುಹಿಡಿದಾಗ ಅವು ಎಲ್ಲಿ ಸೇರುತ್ತವೆಂದು ಶುರುವಿನಲ್ಲಿ ಭಿನ್ನಾಭಿಪ್ರಾಯಗಳು ಮೂಡಿದರೂ ಹಲವು ಗುಣಗಳ ಆಧಾರದ ಮೇಲೆ ಅವಲೋಕಿಸಿದಾಗ ಅದರ ಸರಿಯಾದ ಸ್ಥಾನ ಸ್ಪಷ್ಟವಾಗತೊಡಗಿತು.

 

ಚಿತ್ರ ೨: ವಿಲಕ್ಷಣ ಪ್ರಾಣಿಗಳುಳ್ಳ ಯುರೋಪಿನ ಒಂದು ಮೃಗಸಂಗ್ರಹಾಲಯ. Credits: Annelore Rieke-Müller, Lothar Dittrich: Unterwegs mit wilden Tieren. Wandermenagerien zwischen Belehrung und Kommerz 1750–1850 S. 70. https://commons.wikimedia.org/wiki/File:Menagerie.hermann.van.aken.1833.jpg. License: Public Domain.

ಡಾರ್ವಿನ್ ಮತ್ತು ವಾಲೇಸ್ ಅವರ ಒಳನೋಟ: ಒಂದನ್ನೊಂದಳಗೊಂಡ ಗುಂಪುಗಳು ವೃಕ್ಷಗಳೂ ಆಗಿರುತ್ತವೆ

೧೮೩೧ರಲ್ಲಿ ಚಾರ್ಲ್ಸ್ ಡಾರ್ವಿನ್ ಎಚ್.ಎಮ್.ಎಸ್ ಬೀಗಲ್‍ನಲ್ಲಿ ನೌಕಾಯಾನಕ್ಕೆ ಹೊರಡುವ ಹೊತ್ತಿನಲ್ಲಿ, ಒಂದನ್ನೊಂದೊಳಗೊಂಡ ಗುಂಪುಗಳಾಗಿ ಜೀವಿಗಳ ವರ್ಗೀಕರಣದ ಕುರಿತು ಸಂಪೂರ್ಣ ಒಮ್ಮತ ಮೂಡಿತ್ತು. ಚಾರ್ಲ್ಸ್ ಅವರ ಅಜ್ಜ ಇರೇಸ್ಮಸ್ ಅವರನ್ನೂ ಒಳಗೊಂಡಂತೆ ಬಹುತೇಕ ನೈಸರ್ಗಿಕವಾದಿಗಳಿಗೆ ಈ ಗಣಿತಶಾಸ್ತ್ರೀಯ ಮಾದರಿಯಿರುವುದು ಎಷ್ಟು ಅಚ್ಚರಿಯ ವಿಚಾರ ಎನ್ನುವುದರ ಅರಿವಿತ್ತು. ಬೇರೆ ರೀತಿಯ ವಸ್ತುಗಳನ್ನು ವರ್ಗೀಕರಿಸಲು ಪ್ರಯತ್ನಿಸುವ ಮೂಲಕ ಈ ವಿಚಾರವನ್ನು ಒಮ್ಮೆ ಪರಿಗಣಿಸೋಣ. ಪೀಠೋಪಕರಣಗಳನ್ನು ಅವುಗಳ ಗಾತ್ರ, ಆಕಾರ, ವಸ್ತು, ಬಣ್ಣ ಮತ್ತು ಬಳಕೆಯ ಆಧಾರದ ಮೇಲೆ ವರ್ಗೀಕರಿಸಬಹುದು. ಆದರೆ ಈ ವಿವಿಧ ಗುಂಪುಗಳ ನಡುವೆ ಯಾವುದೇ ಒಮ್ಮತಕ್ಕೆ ನೀವು ಬರಲಾರಿರಿ. ಪದಗಳನ್ನು ನಾಮಪದ, ಕ್ರಿಯಾಪದ, ವಿಶೇಷಣ ಇತ್ಯಾದಿಗಳಾಗಿ ವರ್ಗೀಕರಿಸಬಹುದು, ಆದರೆ ಈ ಪದ್ಧತಿ ಒಂದನ್ನೊಂದಳಗೊಂಡ ಪಟ್ಟಿಯ ಆಧಾರದ್ದಲ್ಲ, ಬದಲಾಗಿ ಒಂದೇ ಸ್ತರದಲ್ಲಿ ಕಲಸ ಮಾಡುವಂತಹದ್ದು. ಸದ್ದನ್ನು ಅವುಗಳ ಸ್ವರ ಮತ್ತು ಧ್ವನಿಮಟ್ಟದ ಆಧಾರದ ಮೇಲೆ, ಮತ್ತು ಇನ್ನೂ ಆಧುನಿಕ ನೆಲೆಯಲ್ಲಿ ರೋಹಿತ ಘಟಕಗಳ (spectral components) ಮುಖಾಂತರ ವರ್ಗೀಕರಿಸಬಹುದು. ಆದರೆ ಈ ಗುಣಗಳು ಸಂಯೋಜಕ (additive) ಪದ್ಧತಿಯನ್ನಾಧಾರಿಸಿದ್ದು ಒಂದನ್ನೊಂದೊಳಗೊಂಡ ಪದ್ಧತಿಯ ಮೇಲಲ್ಲ.

ಚಿತ್ರ ೩: ವರ್ಗೀಕರಣದ ಆಟ. Credits: Mukund Thattai. Licence: CC-BY-NC

ನಾವು ಈ ಸಮಸ್ಯೆಯನ್ನು ತಲೆಕೆಳಗಾಗಿಸಿ, ಯಾವ ರೀತಿಯ ವಸ್ತುಗಳನ್ನು ಒಂದನ್ನೊಂದಳಗೊಂಡ ಗುಂಪುಗಳಾಗಿ ಕಾಣಬಹುದೆಂಬ ಪ್ರಶ್ನೆಯನ್ನು ಕೇಳಬಹುದು. ಇಲ್ಲಿ ನಮಗೊಂದು ಪರಿಚಿತ ಉದಾಹರಣೆ ಸಿಗುತ್ತದೆ. ಅಂಚೆ ಸುಗಮವಾಗಿ ತಲುಪಲೆಂದು ದೇಶವನ್ನು ಅಂಚೆ ಸಂಖ್ಯೆಗಳ ಮೂಲಕ ವಿಭಜಿಸಲಾಗುತ್ತದೆ. ಸಾಧಾರಣವಾಗಿ ಈ ಅಂಚೆ ಸಂಖ್ಯೆಗಳ ಎಡತುದಿಯಲ್ಲಿರುವ ಸಂಖ್ಯೆಗಳು ದೊಡ್ಡ ಉಪವಿಭಾಗಗಳನ್ನು ಗುರುತಿಸುತ್ತವೆ ಹಾಗೂ ಬಲತುದಿಯಲ್ಲಿರುವ ಸಂಖ್ಯಗಳು ಸಣ್ಣ ಉಪವಿಭಾಗಗಳನ್ನು ಗುರುತಿಸುತ್ತವೆ (ಚಿತ್ರ ೪). ಈ ಸಂಖ್ಯೆಗಳ ಅರ್ಥವೇನೆಂದು ನಾವು ಆಳಕ್ಕಿಳಿದು ಪ್ರಶ್ನಿಸಿದರೆ, ಪ್ರತಿ ಸಂಖ್ಯೆಯೂ ಒಂದು ನಿರ್ದಿಷ್ಟ ವಾಸ್ತವದ ವಸ್ತು ಅಂದರೆ ಅಂಚೆ ಖಚೇರಿಗೆ ಸಂಬಂಧಿಸಿದ್ದೆಂದು ತಿಳಿಯುತ್ತದೆ. ಸಾಮಾನ್ಯ ಅಂಚೆ ಖಚೇರಿಯಿಂದ ಪ್ರಾರಂಭಗೊಂಡು ಎಡದಿಂದ ಬಲಕ್ಕೆ ಪ್ರತಿ ಸಂಖ್ಯೆಯೂ ಒಂದು ಜಿಲ್ಲಾ, ನಗರ ಹಾಗೂ ರಸ್ತೆಯ ಅಂಚೆ ಖಚೇರಿಗಳ ಹೆಸರಾಗಿದೆ. ಹೀಗೆ ಯೋಚಿಸಿದಾಗ ತಿಳಿಯುವುದೇನೆಂದರೆ ಒಂದನ್ನೊಂದಳಗೊಂಡ ಗುಂಪು ವಾಸ್ತವದಲ್ಲಿ ಒಂದು ವೃಕ್ಷವಾಗಿದೆ! ವೃಕ್ಷದ ಪ್ರತಿಯೊಂದ ಕವಲೊಡೆಯುವ ಬಿಂದು ಒಂದು ಅಂಚೆ ಖಚೇರಿಯಾಗಿದೆ, ಮತ್ತು ಬಾಣಗಳು ಅಂಚೆ ಹೇಗೆ ಮೇಲ್ಸ್ತರದಿಂದ ಕೆಳ ಸ್ತರಕ್ಕೆ ಸಂಚರಿಸುತ್ತದೆಂದು ತಿಳಿಸುತ್ತದೆ.

ಚಿತ್ರ ೪. ಆಯತಾಕೃತಿಪುರದ ಒಂದನ್ನೊಂದೊಳಗೊಂಡ ಅಂಚೆ ಪದ್ಧತಿ. Credits: Mukund Thattai. Licence: CC-BY-NC

ಜೀವಶಾಸ್ತಕ್ಕೆ ಇದನ್ನು ಹೇಗೆ ಅರ್ಥೈಸಲಾಗುತ್ತದೆ? ಜೀವವರ್ಗೀಕರಣ ಶಾಸ್ತ್ರಜ್ಞರು ಯಾವತ್ತೂ, ಒಂದು ನಿರ್ದಿಷ್ಟ ಸಮಯದಲ್ಲಿ ಭೂಮಿಯ ಮೇಲಿರುವ ಜೀವಿಗಳನ್ನು ವರ್ಗೀಕರಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಈ ಜೀವಿಗಳ ಪಟ್ಟಿಯೂ ಕಾಲದೊಡನೆ ಬದಲಾಗುವ ಸಾಧ್ಯತೆಯನ್ನು ಕಡಗಣಿಸಲಾಗುತ್ತದೆ. ಎಲ್ಲ ಜೀವಸಂತತಿಗಳು ಒಂದು ಸೃಷ್ಟಿಯ ಕ್ಷಣದಲ್ಲಿ ರೂಪಿಸಲ್ಪಟ್ಟು ಅಂತೆಯೇ ಇರುವ ವಿಶ್ವವೊಂದನ್ನು ಕಲ್ಪಿಸಿಕೊಳ್ಳಿ. ಹೀಗಿದ್ದರೆ ಒಂದು ಅನನ್ಯ ಏಕಮಾತ್ರ ಒಂದನ್ನೊಂದೊಳಗೊಂಡ ವರ್ಗೀಕರಣ ಪಟ್ಟಿಯಿರುವುದು ಬಹಳ ಆಶ್ಚರ್ಯದ ವಿಷಯವಾಗುತ್ತದೆ. ಕಲ್ಪನಾಶಕ್ತಿಯಿಂದ ರಚಿಸಲ್ಪಟ್ಟ ಜಗತ್ತಿನಲ್ಲಿರುವ ಪ್ರಾಣಿಗಳ ಗುಣಗಳನ್ನು ಪಟ್ಟಿಮಾಡಿದರೆ ಅದು ಪೀಠೋಪಕರಣಗಳ ಪಟ್ಟಿಯಂತೆ ವರ್ಗೀಕರಣಕ್ಕೆ ದಕ್ಕದ್ದಾಗುತ್ತದೆ.

ಲಿನ್ನೇಯನ್ ವರ್ಗೀಕರಣ ವಿಧಾನವನ್ನು ಒಂದನ್ನೊಂದೊಳಗೊಂಡ ಗುಂಪುಗಳಾಗಿಯಲ್ಲದೇ ವೃಕ್ಷಗಳಾಗಿ ತಿಳಿಯಬೇಕೆಂದು ಡಾರ್ವಿನ್ ಮತ್ತು ವಾಲೇಸ್ ಪ್ರತ್ಯೇಕವಾಗಿ ಪ್ರತಿಪಾದಿಸಿದರು. ಫಿಂಚ್‍ಗಳ ಕುರಿತಾಗಿ ಡಾರ್ವಿನ್‍ರ ಅಧ್ಯಯನ ಹಾಗೂ ವಾಲೇಸ್‍ರ ಜೈವಿಕ-ಭೌಗೋಳಿಕ ವಲಯಗಳ ಗುರುತಿಸುವಿಕೆ, ಕಾಲದ ಸರಿಯುವಿಕೆಯ ಪ್ರಾಮುಖ್ಯತೆಯನ್ನು ಒತ್ತುಮಾಡಿ ಹೇಳಿದವು. ಇದು ಆಳವಾದ ಬದಲಾವಣೆಯನ್ನು ತಂದಿತು, ಏಕೆಂದರೆ ವೃಕ್ಷದ ರೀತಿಯ ಮಾದರಿಗೆ ಇದು ಯಾಂತ್ರಿಕ ರೂಪದ ವಿವರಣೆಯನ್ನು ನೀಡಿತು. ವೃಕ್ಷದಲ್ಲಿಯ ಬಾಣಗಳು ಸಮಯದ ಸರಿಯುವಿಕೆಯನ್ನು ತೋರಿಸುತ್ತವೆಂದು ನಾವು ಭಾವಿಸಿದರೆ, ಇಂದು ಜೀವಿಸುತ್ತಿರುವ ಜೀವಿಗಳ ನಡುವಣವಿರುವ (ಒಂದನ್ನೊಂದಳಗೊಂಡ ಪಟ್ಟಿಯ ರೂಪದ) ಸಂಬಂಧಗಳು ಹಿಂದಿನ  (ವೃಕ್ಷದ ಪುರಾತನ ಅಂಗಗಳು) ಕುರಿತು ಬಹಳ ಸಂಗತಿಗಳನ್ನು ತಿಳಿಸುತ್ತವೆ. ಪ್ರಾಣಿ ಹಾಗೂ ಸಸ್ಯಗಳು ಪೋಷಕರಿಂದ ಪೀಳಿಗೆಗೆ ವಿಭಿನ್ನತೆಗಳನ್ನು ಹೊಂದುತ್ತ  ಸಮಯದೊಡನೆ ಬದಲಾಗುವುದು ಸಾಧ್ಯವಿದ್ದರೆ, ಇಂದು ಇರುವ ಒಂದನ್ನೊಂದೊಳಗೊಂಡ ಪಟ್ಟಿಯನ್ನು ಸುಲಭವಾಗಿ ವಿವರಿಸಬಹುದು. ಇದು ಕೇವಲ ಆರಂಭವಷ್ಟೇ. ಈ ಗುಣಗಳು ಹೇಗೆ ಬದಲಾದವು, ಅವು ಎಷ್ಟರಮಟ್ಟಿಗೆ ಆನುವಂಶಿಕವಾಗಿದ್ದವು, ಅಥವಾ ಹೇಗೆ ಪ್ರತಿ ಪೀಳಿಗೆಯಲ್ಲಿ ಕೆಲವು ಗುಣಗಳು ಆಯ್ಕೆಯಾಗಲ್ಪಟ್ಟವು ಎಂಬುದಕ್ಕೆ ನಾವು ವಿವರಣೆಗಳನ್ನು ನೀಡಬೇಕಾಗುತ್ತದೆ. ಆನುವಂಶಿಕತೆ ಮತ್ತು ಜೀನ್‍ನಲ್ಲಿ ಎನ್‍ಕೋಡ್‍ ಆಗುವಿಕೆಯ ಒಳಗಿನ ಅಣುಕ್ರಿಯೆಗಳ ಕಾರ್ಯವಿಧಾನವನ್ನು ಸ್ಪಷ್ಟಪಡಿಸಲು ಆಧುನಿಕ ಜೈವಿಕಶಾಸ್ತ್ರದ ಯುಗದವರೆಗೆ ಕಾಯಬೇಕಾಯಿತು. ಈ ವಿಚಾರಗಳ ಸಂಗ್ರಹ ಒಟ್ಟಾಗಿ ನೈಸರ್ಗಿಕ ಆಯ್ಕೆಯ ಮೂಲಕ ನಡೆಯುವ ಜೀವ ವಿಕಾಸದ ಆಧುನಿಕ ಸಂಶ್ಲೇಷಣೆಯನ್ನು ರೂಪಿಸುತ್ತವೆ. ಹಾಗೂ ಇದು ಜೀವವೃಕ್ಷವನ್ನು ಗುರುತಿಸುವ ಮುಖಾಂತರ ಪ್ರಾರಂಭವಾಯಿತು.

I think…

ಡಾರ್ವಿನ್‍ರ ಟಿಪ್ಪಣಿ ಪುಸ್ತಕದಲ್ಲಿ ೧೮೩೭ರಲ್ಲಿ ರಚಿಸಿದ ರೇಖಾಚಿತ್ರವೊಂದು ಜೀವಿಗಳ ವೃಕ್ಷದ ಮೊದಲ ಚಿತ್ರಣವಾಗಿ ಸಿಗುತ್ತದೆ. ಇದರ ಶೀರ್ಷಿಕೆ “I think” (ನಾನು ಅಂದುಕೊಳ್ಳುವುದು) ಎಂದು ನೀಡಲಾಗಿದ್ದು, ಪಸಿದ್ಧವಾಗಿದೆ. ೧೮೫೯ರಲ್ಲಿ ಪ್ರಕಟವಾದ ಡಾರ್ವಿನ್‍ರ ‘ಜೀವಿಗಳ ಉಗಮ’ ಪುಸ್ತಕದಲ್ಲಿ ಒಂದೇ ಚಿತ್ರವಿದ್ದು ಅದು ಜೀವಿಗಳ ವೃಕ್ಷವನ್ನು ಚಿತ್ರಿಸುತ್ತದೆ (ಚಿತ್ರ ೫). ಹಾಗಾದರೆ ಡಾರ್ವಿನ್ ಯೋಚಿಸಿದ್ದು ಏನು? 

ಚಿತ್ರ ೫ a) ಡಾರ್ವಿನ್‍ರ “I think”, https://en.wikipedia.org/wiki/Charles_Darwin#/media/File:Darwin_Tree_1837.png Licence: Public domain. ಚಿತ್ರ ೫ b) In the origin of species (ಜೀವಿಗಳ ಉಗಮ),೧೮೫೯ರಲ್ಲಿ. https://en.wikipedia.org/wiki/Tree_of_life_(biology)#/media/File:On_the_Origin_of_Species_diagram.PNG Licence: Public domain

ನಾವು ಖಚಿತವಾಗಿ ಎಂದೂ ತಿಳಿಯಲಾರೆವು. ಆದರೆ ಡಾರ್ವಿನ್ ಆ ಕ್ಷಣ ಒಂದನ್ನೊಂದೊಳಗೊಂಡ ಪಟ್ಟಿ ಹಾಗೂ ವೃಕ್ಷಗಳ ನಡುವಿನ ಸಂಬಂಧವನ್ನು ಅರಿತುಕೊಂಡರು ಎಂದು ನಾವು ಭಾವಿಸಿದರೆ ಸಮಂಜಸವಾಗುತ್ತದೆ. ಇವೆರಡೂ ಕೂಡ ಜೀವಿಗಳ ವಿಭಿನ್ನ ಗುಣಲಕ್ಷಣಗಳ ಬೃಹತ್ ಪ್ರಮಾಣದ ಮಾಹಿತಿಯನ್ನು ಸೂಕ್ತವಾಗಿ ಸೆರೆಹಿಡಿಯುತ್ತವೆ. ಆದರೆ ಒಂದನ್ನೊಂದಳಗೊಂಡ ಪಟ್ಟಿಯು, ಈ ಪಟ್ಟಿ ನಿಶ್ಚಲವೆಂದು ಸೂಚಿಸುತ್ತದೆ; ಅದೇ ವೃಕ್ಷ ಒಂದು ಜೀವ ಸಂತಿತಿ ನಿಧಾನವಾಗಿ ಇನ್ನೊಂದಾಗುವ ರೂಪಾಂತರವನ್ನು ಸೂಚಿಸುತ್ತದೆ. ಇದು ತಿಳಿಯಾದ ಕೂಡಲೇ, ಡಾರ್ವಿನ್‍ರಿಗೆ ವೃಕ್ಷದ ಎಲ್ಲ ಪುರಾತನ ರೆಂಬೆಗಳೂ ಇಲ್ಲಿಯವರೆಗೆ ಉಳಿಯಬೇಕೆಂದಿಲ್ಲ ಎಂಬುದರ ಅರಿವಾಗುತ್ತದೆ. ಹಿಂದೆ ಜೀವಿಸುತಿದ್ದ ಹಲವು ವಿಚಿತ್ರ ಜೀವರೂಪಗಳು ಯಾವುದೇ ಜಾಡುಳಿಸದೆಯೇ ಅಳಿದುಹೋಗಿರಬೇಕು. ಇನ್ನೂ ಮುಖ್ಯವಾಗಿ ಡಾರ್ವಿನ್‍ಗ ಮತ್ತೊಂದು ಒಳನೋಟ ದೊರೆಯಿತು. ಹೇಗೆ ಅಂಚೆ ಇಲಾಖೆಯ ವೃಕ್ಷದ ಕವಲೊಡೆಯುವ ಬಿಂದುಗಳು ಒಂದು ವಾಸ್ತವದ ಕಟ್ಟಡವನ್ನು ಪ್ರತಿನಿಧಿಸುತ್ತವೆಯೋ ಹಾಗೆ ಜೀವವೃಕ್ಷದ ಕವಲೊಡೆಯುವ ಬಿಂದುಗಳೂ ಸಹ ವಾಸ್ತವದ ವಸ್ತುವೊಂದನ್ನು ಪ್ರತಿನಿಧಿಸುತ್ತವೆ. ಪ್ರತಿಯೊಂದು ಬಿಂದುವೂ ಬಿಲಿಯನ್‍ಗಟ್ಟಲೆ ವರ್ಷದ ಹಿಂದೆ ಬದುಕಿ ಅಳಿದುಹೋಗಿರುವ ಒಂದು ಪುರಾತನ ಜೀವಿ – ಸೂಕ್ಷಜೀವಿ, ಸಸ್ಯ ಅಥವಾ ಪ್ರಾಣಿಯಾಗಿರಬಹುದು. ಇನ್ನೊಂದು ರೀತಿ ಹೇಳುವುದಾದರೆ ಈ ಒಂದನ್ನೊಂದೊಳಗೊಂಡ ಜೀವವರ್ಗೀಕರಣವು, ಇಂದಿನ ಮತ್ತು ಪುರಾತನ ಜೀವಿಗಳ ನಡುವಿನ ಮಧ್ಯಂತರ ಜೀವರೂಪುಗಳು ಗತಕಾಲದ ಸಾಕ್ಷಿಗಳಾಗಿ ಭೂಮಿಯಡಿಯ ಬಂಡೆಗಳಲ್ಲಿ ಪಳೆಯಳಿಕಗಳ ರೂಪದಲ್ಲಿ ಸಿಗುತ್ತವೆಂದು ತಿಳಿಸುತ್ತದೆ.

ಡಾರ್ವಿನ್ ಮತ್ತು ವಾಲೇಸ್‍ರ ಜೀವ ವಿಕಾಸದ ಸಿದ್ಧಾಂತವನ್ನು ಪರೀಕ್ಷೆಗೊಳಪಡಿಸಲಾಗಿದೆ ಹಾಗೂ ಅದು ಎಲ್ಲ ಸವಾಲುಗಳನ್ನು ದಾಟಿಬಂದಿದೆ. ಸಸ್ಯಗಳು ಹಾಗೂ ಪ್ರಾಣಿಗಳಲ್ಲಿನ ವೈವಿಧ್ಯತೆಯನ್ನು ವಿವರಿಸಲು ಹುಟ್ಟಿದ ಜೀವ ವಿಕಾಸದ ಸಿದ್ಧಾಂತ ಹಾಗೂ ಜೀವವೃಕ್ಷ, ಇಂದು ಪ್ರೋಕ್ಯಾರಿಯೋಟಿಕ್ ಬಾಕ್ಟೀರಿಯಾ, ಆರ್ಕಿಯಾ ಮತ್ತು ಏಕಕೋಶ ಸೂಕ್ಷಜೀವಿ ಯೂಕಾರಿಯೋಟ್‍ಗಳವರೆಗೆ ಎಲ್ಲ ಜೀವಿಗಳಿಗೂ ಅನ್ವಯವಾಗುತ್ತದೆಂದು ಸ್ಪಷ್ಟವಾಗಿದೆ. ಕೆಲವು ಕುತೂಹಲಕಾರಿ ವಿಚಲನೆಗಳಿವೆ- ಜೀವಕೋಶಗಳು ಡಿಎನ್‍ಎ ಬದಲಿಸಿಕೊಳ್ಳಬಹುದು ಹಾಗೂ ಎರಡು ಜೀವಸಂತತಿಗಳು ಹೈಬ್ರಿಡ್ ಆಗಿ ಮೂರನೆಯ ಜೀವಸಂತತಿಯೊಂದು ಉಂಟಾಗಬಹುದೆಂದು ನಮಗೆ ತಿಳಿದಿದೆ. ಆದರೆ ಈ ಪ್ರಕ್ರಿಯೆಗಳು ಕೇಂದ್ರದಲ್ಲಿರುವ ಜೀವವೃಕ್ಷಕ್ಕೆ ಅಲಂಕಾರಿಕ ವಸ್ತುಗಳಷ್ಟೇ. ಪರಸ್ಪರ ಹೊಂದಿಕೊಳ್ಳುವ ಎಲ್ಲ ಗುಣಲಕ್ಷಣಗಳ ಪಟ್ಟಿ ಇಂದು ದೃಗ್‍ಗೋಚರ ವೀಕ್ಷಣೆಗಳಿಂದ ಹಿಡಿದು ಅಣುಗಳ ಸ್ತರದ ಮಾಹಿತಿಗಳಿಂದ ತುಂಬಿದೆ. ಜೀನೋಮ್‍ನ ಪ್ರತಿಯೊಂದು ನೆಲೆ-ಜೋಡಿಯು (base pair) ಜೀವ ವಿಕಾಸಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ೧೯೭೦ರಲ್ಲಿ ಅಣುಗಳ ಸ್ತರದಲ್ಲಿ ವರ್ಗೀಕರಿಸಲು ಕಾರ್ಲ್ ವೋಸೆ ಮಾಡಿದ ಮೊದಲ ಪ್ರಯತ್ನಗಳಿಂದ ಪ್ರಾರಂಭವಾಗಿ, ಕೇವಲ ಡಿಎನ್‍ಎ ಸಾಕ್ಷಿಯ ಆಧಾರದ ಮೇಲೆ ಜೀವವೃಕ್ಷದಲ್ಲಿ ಜೀವಿಗಳ ಸ್ಥಾನವನ್ನು ಕಂಡುಕೊಳ್ಳುವುದು ಇವತ್ತು ರೂಢಿಯ ಕ್ರಿಯೆಯಾಗಿದೆ.

ಜೀವಜಗತ್ತಿನ ಇತಿಹಾಸವನ್ನು ಅರ್ಥೈಸುವುದು, ನಮಗೆ, ಪ್ರತಿಯೊಂದು ಜೀವವಸ್ತುವೂ ಅಮೂಲ್ಯವಾದದ್ದು ಮತ್ತು ಇತಿಹಾಸಕ್ಕೆ ತಲುಪುವ ತನ್ನದೇ ನಿರಂತರ ಹಾದಿಯೊಂದನ್ನು ಪ್ರತಿನಿಧಿಸುವಂತಹದ್ದು ಎಂದು ತಿಳಿಸುತ್ತದೆ. ಜೀವ ವಿಕಾಸ ಇಂದಿಗೂ ನಡೆಯುತ್ತಿರುವಂತಹದ್ದು. ಜೀವಜಗತ್ತಿನ ವರ್ತಮಾನವನ್ನು ರೂಪಿಸಿದ ಪ್ರಕ್ರಿಯೆಗಳು ಇಂದಿಗೂ ಕಾರ್ಯನಿರತವಾಗಿವೆ. ಜೀವ ವಿಕಾಸ ಕೆಲವೇ ಘಂಟೆಗಳಲ್ಲಿ ಅಥವಾ ಬಿಲಿಯನ್‍ಗಟ್ಟಲೆ ವರ್ಷಗಳಲ್ಲಿ ಆಗಬಹುದು. ಮನುಷ್ಯರು ಕೂಡ ಎಲ್ಲ ಜೀವಿಗಳಂತೆ ಜೀವವಿಕಾಸಕ್ಕೊಳಗಾಗುತ್ತಲೇ ಇದ್ದಾರೆ. ಹೊಸ ಜೀವಸಂತತಿಗಳು ಉದಯಿಸುತ್ತಲೇ ಇರುತ್ತವೆ, ಆದರೆ ಭೂಮಿಯ ಆರನೇ ಮಹಾ ಜೀವಸಂಕುಲಗಳ ಅಳಿವಿನಲ್ಲಿ ಮನುಷ್ಯರ ಕ್ರಿಯಗಳಿಂದ ಇನ್ನೂ ಎಷ್ಟೋ ಜೀವಸಂತತಿಗಳು ಅಳಿದುಹೋಗುತ್ತಿವೆ. ಈ ಮಟ್ಟದ ಜೀವಸಂಕುಲಗಳ ಅಳಿವು ಹಿಂದೆಂದೂ ಕಂಡಿಲ್ಲದಂತಹದ್ದು ಮತ್ತು ಪೂರ್ವಸ್ಥಿತಿಗೆ ಮರಳಲಾಗದಂತಹದ್ದು. ನಾವು ಜೀವವೃಕ್ಷದ ಕಳಪೆ ಪಾಲಕರಾಗಿದ್ದೇವೆ – ಜೀವವಸ್ತುಗಳ ವೈವಿಧ್ಯತೆಯನ್ನು ಉಳಿಸುವುದು ನಮ್ಮ ಕಾಲದ ಅತ್ಯಂತ ದೊಡ್ಡ ಸವಾಲಾಗಿದೆ.

ಈ ಲೇಖನವು ಮೂಲವಾಗಿ, ಆಂಗ್ಲ ಭಾಷೆಯಲ್ಲಿ, ಅಜಿಮ್ ಪ್ರೇಮ್‍ಜಿ ಫೌಂಡೇಶನ್‍ನ ‘i wonder’ ಮಾಸಪತ್ರಿಕೆಯ ಆಗಸ್ಟ್ ೨೦೧೮ರ ಆವೃತ್ತಿಯಲ್ಲಿ ಪ್ರಕಟವಾಗಿತ್ತು.

ಅನುವಾದ: ಸುಬ್ರಹ್ಮಣ್ಯ ಹೆಗಡೆ ಅಲಹಾಬಾದ್‍ನ ಹರೀಶ್-ಚಂದ್ರ ಸಂಶೋಧನಾ ಸಂಸ್ಥೆಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಡಾಕ್ಟರೇಟ್ಟೋತ್ತರ ಸಂಶೋಧಕರು.

 

ಪ್ರತಿಕ್ರಿಯಿಸಿ