ಕವಿ ಎಸ್.ಮಂಜುನಾಥ್ ಅವರ ಕವನ ಸಂಕಲನ ‘ನಕ್ಷತ್ರ ದೇವತೆ’

ಕವಿ ಎಸ್.ಮಂಜುನಾಥ್ ಅವರ ಕವನ ಸಂಕಲನ ‘ನಕ್ಷತ್ರ ದೇವತೆ’ – ಪ್ರಕೃತಿ ಪ್ರಕಾಶನವು ಪ್ರಕಟಿಸುತ್ತಿರುವ ನಾಲ್ಕನೇ ಪುಸ್ತಕ; ಮೂರನೆಯ ಕವನ ಸಂಕಲನ.

 

ಕನ್ನಡ ಕಾವ್ಯಲೋಕದಲ್ಲಿ ಎಸ್.ಮಂಜುನಾಥ್ ಮೆಲುದನಿಗೆ ಹೊಸ ಹುರುಪು ಕೊಟ್ಟವರು. ಆ ಮೆಲುದನಿಗೆ ತಕ್ಕ ಲಯಗಾರಿಕೆ, ಹುರುಪಿಗೆ ತಕ್ಕ ಭಾಷೆಯ ಬಳುಕು, ಪದಗಳ ಮಿತವಾದ ಬಳಕೆ, ಸ್ಥಳೀಯತೆಯ ಮಹಿಮಾ ಚಿಂತನೆ,  ಹಣ-ಅಧಿಕಾರ ಮಾತ್ರವಲ್ಲದೆ ಕಾವ್ಯದೊಳಗೂ ಕವಿ  ಲೋಲುಪನಾಗಿರಬಾರದೆಂಬ ಎಚ್ಚರ, ವಿಚಾರಗಳು ಅಮೂರ್ತ ಕಾವ್ಯವು ಮೂರ್ತ ಎನ್ನುವ ಒಳನೋಟ, ಕಾವ್ಯದ ಐಂದ್ರಿಕ ಅನುಭವದ ಬಗೆಗಿನ ನಿಖರತೆ, ತನ್ನ ಕಾವ್ಯದ ನಿಲುವುಗಳ ಬಗ್ಗೆ ಅಪಾರವಾದ ಆತ್ಮವಿಶ್ವಾಸ, ಕಿರಿಯರ ಟೀಕೆ ತಿದ್ದುಪಡಿಗಳನ್ನು ಸ್ವೀಕರಿಸುವ ವಿನಯ,  ಬದುಕಿನ ಸಣ್ಣ ಸಣ್ಣ ಸಂಗತಿಗಳೇ ಮನುಷ್ಯನ ಒಳಗನ್ನು ತೆರೆಯಬಲ್ಲ ಸಾಧನ ಎಂಬ ನಂಬಿಕೆ ಮತ್ತು ಅದರ ಕಡೆಗೇ ಕವಿಯ ತುಡಿತ, ಕಾವ್ಯ ಮತ್ತು ಕೇವಲ ಕಾವ್ಯದ ಕುರಿತಾದ ಆಸ್ಥೆ, ನಿಷ್ಠೆ, ವಿಮರ್ಶೆ, ಇವೆಲ್ಲವೂ ಮಂಜುನಾಥರ ಕಾವ್ಯಧರ್ಮದ ಕೆಲವು ಪಲುಕುಗಳು.

 

ಫೋನೊಳಗೆ ಮಾತಿಗಿಳಿದರೂ ಕನಿಷ್ಠ ಮುಕ್ಕಾಲು ಗಂಟೆ ಮಾತನಾಡುವ ಮಂಜುನಾಥರ ವಾಗ್ಧಾರೆಗೂ ಅವರ ಕವಿತೆಗಳ ಹಾಗೆಯೇ ಜೇನುಗತಿ. ಅವರ ಮಾತಿನ ಮೆಲುದನಿ, ಧಾಟಿ, ಗತಿ, ನಾಟ್ಯ, ಖಚಿತತೆ, ಕೊಂಕು, ಟೀಕೆ, ಎಲ್ಲವೂ ಹಾರ್ಮೋನಿಯಮ್ ಶೃತಿ ಅನುಸರಿಸುವ ಹಾಗೆ.

 

ಹೀಗೆ ಕನ್ನಡದ ವಿಶಿಷ್ಟ  ಕಾವ್ಯ ಮನೋಧರ್ಮದ ಕವಿ ಮಂಜುನಾಥ್. ಕಸ, ಕಡ್ಡಿ,ಕಲ್ಲು, ಹುಲ್ಲಿನ ಬಗೆಗೇ ನೋಟ ನೆಟ್ಟಿರುವ ಈ ಕವಿಯ ಹೊಸ ಕವನಗಳ ಸಂಕಲನದ ಹೆಸರು ‘ನಕ್ಷತ್ರ ದೇವತೆ’ ಅಂತಿರುವುದು ವೈರುಧ್ಯವೇ ಸರಿ. ಅದು ಅವರ ಇಚ್ಛೆಯೂ ಆಗಿತ್ತು. ಆದರೆ ಅವರಿಗಿದು ಆಕಾಶದಲ್ಲಿ ಮಿನುಗುವ ನಕ್ಷತ್ರವಲ್ಲ, ದೇವತೆ ಎಂದರೆ ಆಕಾಶ ಲೋಕದಲ್ಲಿದ್ದು ಹರಸುವವಳಲ್ಲ. ಬಾನೆದೆಯಿಂದ ಎದೆಬಾನಿನೊಳಗೆ ಇಳಿದು ಬರಲು ತವಕಿಸುತ್ತಿರುವವಳು. ಓದುಗರ ಎದೆಬಾನು ಅವರ ಕವಿತೆಗಳನ್ನು ಸಾವಕಾಶವಾಗಿ ಇಳಿಸಿಕೊಳ್ಳುವುದೆಂಬ ನಂಬಿಕೆಯೊಂದಿಗೆ…

 

ಪ್ರಕಾಶನದ ಪರವಾಗಿ,
ವಿಕ್ರಮ ಹತ್ವಾರ

 

ನಕ್ಷತ್ರ ದೇವತೆ ಕವನ ಸಂಕಲನ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ನಿಮಗೆ ತಲುಪಿಸುವ ಅಪೇಕ್ಷೆ ನಮ್ಮದು . ಋತುಮಾನ ಸ್ಟೋರ್ ನ ಈ ಕೆಳಗಿನ ಲಿಂಕ್ ಬಳಸಿ ನಿಮ್ಮ ಪ್ರತಿಯನ್ನು ಕಾಯ್ದಿದಿರಿಸಿ .

ಪ್ರತಿಕ್ರಿಯಿಸಿ