ಸಂಪಾದಕೀಯ: ಸಮ್ಮೇಳನಾಧ್ಯಕ್ಷ ಭಾಷಣದ ಹಿಂದು, ಮುಂದು …

ಸಂಸ್ಕೃತ ಸಂಪರ್ಕ ಭಾಷೆಯಾಗಬೇಕು. ಇಂಗ್ಲಿಶ್ ಕಲಿಸುವ ಶಿಬಿರಗಳಾಗಬೇಕು. ಹೊರ ಪ್ರಾಂತ್ಯದಿಂದ ಬಂದವರು ಪಂಪ ಕುಮಾರವ್ಯಾಸರನ್ನು ಓದುವಷ್ಟಾದರೂ ಕನ್ನಡ ಕಲಿಯಬೇಕು, ತುಳು-ಕೊಂಕಣಿ ಭಾಷೆಗಳ ಸಾಹಿತ್ಯ ವರ್ಷೊಪ್ಪತ್ತಿನೊಳಗೆ ಕನ್ನಡಕ್ಕೆ ಅನುವಾದವಾಗಬೇಕು, ಕನ್ನಡ ಸಾಹಿತ್ಯ ಭಾರತದಲ್ಲಿ ಅನುವಾದವಾಗಿ ಅನುರಣಿಸಬೇಕು. ಕನ್ನಡ ತಾಯಿಯ ದಿವಿನಾದ ಕಂಠೀಹಾರದಲ್ಲಿ ಲಂಬಾಣಿ, ಕೊಡವ, ಉರ್ದು ಮಣಿಗಳು ಜೋತಾಡುತ್ತಿವೆ. ಮತ್ತದೇ ಪಂಪ ಕುಮಾರವ್ಯಾಸರನ್ನು ತತ್ಸಮದಲ್ಲಿ ಅಲ್ಲದೇ ತದ್ಭವದಲ್ಲಿ ಅನುವಾದ ಮಾಡಿಕೊಂಡು ಚಪ್ಪರಿಸುತ್ತ ಅಲ್ಲಿಯೇ ರೌಂಡು ಹೊಡೆಯಬೇಕು. ಸಿಂಗಪೂರಿಗರಿಗೆ ಷೇಕ್ಸ್ಪಿಯರು ಬ್ಯಾಡ. ಜರ್ಮನಿ ಜಪಾನುಗಳಲ್ಲಿ ಉದ್ಯೋಗಾರ್ಥಿಗಳಿಗೆ ಭಾಷೆ ಕಲಿಸುವ ಶಿಬಿರಗಳಿವೆ. ಕುವೆಂಪು ಹೇಳುತ್ತಾರೆ: ಇಂಗ್ಲಿಷ್ ಎಲ್ಲರೂ ಕಲಿಯುವ ಅಗತ್ಯವಿರುವ ಭಾಷೆಯಲ್ಲ. ಮತ್ತೇನೋ ಇಂಗ್ಲಿಶ್ ಬಗ್ಗೆ ಲೋಹಿಯಾ ಹೇಳಿದ್ದರು. ಊರುಗಳಲ್ಲಿ ಕುಂಬಾರಿಕೆ ನಡೆಯುತ್ತಿಲ್ಲ. ಲಕ್ಷಾಂತರ ಕೂಲಿ ಕಾರ್ಮಿಕರು ಇಂಗ್ಲಿಶ್ ನ ಹಂಗಿಲ್ಲದೇ “ಸ್ವಾಭಿಮಾನದಲ್ಲಿ” ಬದುಕುತ್ತಿದ್ದಾರೆ. ಇಂಗ್ಲಿಶ್ನ ಹಂಗಿಲ್ಲದೇ ರೈತರು ಅನ್ನ ಬೆಳೆಯುತ್ತಿದ್ದಾರೆ. ಮಾಧವ ಗಾಡ್ಗಿಳ್ ಕಾಗದದ ಉದ್ಯಮಕ್ಕಾಗಿ ಹೇಗೆ ಬುಟ್ಟಿ ಹೆಣೆಯುವವರ ಲೈಫು ನಾಶ ಆಯ್ತೆಂದು ಹೇಳಿದ್ದಾರೆ. ನಮ್ಮ ಮೊಮ್ಮಕ್ಕಳು ಇಂಗ್ಲಿಶ್ನಲ್ಲಿ ಕಾದಂಬರಿ ಓದಿ ಪದ್ಯ ಬರೆಯುತ್ತಿದ್ದಾರೆ. ವಿಮಾನದಲ್ಲಿ ಮೊದಲು ನಿಮ್ಮನ್ನು ಕಾಪಾಡಿಕೊಳ್ಳಿ ಎಂದು ಹೇಳುವಷ್ಟು ಜಗತ್ತು ಹಾಳಾಗಿ ಹೋಗಿದೆ. ಬಸವಣ್ಣ ಸ್ಫಟಿಕ, ಶಲಾಕೆ – ಇವುಗಳ ನಂತರ ಲಿಂಗ ಅಹುದಹುದು ಎನ್ನಬೇಕೆಂದು ಹೇಳಿದ್ದಾರೆ.

ಒಟ್ಟಿನಲ್ಲಿ ಭುವನೇಶ್ವರಿಗೂ ಬೇಜಾರಾಗಬಾರದು; ಭಾರತಿಗೂ ಬೇಸರವಾಗಕೂಡದು. ಯಡಿಯೂರಪ್ಪನವರಿಗೆ ನಮಸ್ಕಾರ, ಪಕ್ಕದಲ್ಲಿ ಸಿ.ಟಿ. ರವಿ.

ಈ ಭಾಷಣಗಳೆಲ್ಲ ಹೆಂಗೆ ಅಂದರೆ – ಸಂಯುಕ್ತ ಕರ್ನಾಟಕದಲ್ಲಿ “ಪುಟಿನ್ ಟ್ರಂಪ್ ಜೊತೆ ಮಾತನಾಡಿ ಮಧ್ಯಪ್ರಾಚ್ಯದ ಸಮಸ್ಯೆ ಬಗೆಹರಿಸಲಿ” ಎಂದು ಸಂಪಾದಕೀಯ ಪ್ರಕಟವಾದ ಹಾಗೆ. ಅಥವಾ “೫೦ ವರ್ಷದ ಹಿಂದೆ ಈ ದಿನ” ಅಂತ ಪ್ರಜಾವಾಣಿಯ ಕಾಲಂ ನಲ್ಲಿಯೂ ಸಾಹಿತ್ಯ ಸಮ್ಮೇಳನದ ನೆನಪು ಪ್ರಕಟವಾದ ಹಾಗೆ: ಹಕ್ಕೊತ್ತಾಯದ ಮಂಡನೆ. ಅಲ್ಲೂ ಇದೇ ಪಂಪ-ಕುಮಾರವ್ಯಾಸ ರೋದನೆ. ಸಾಸಿವೆಕಾಳು-ಜೀರಿಗೆಯಂತೆ ಕುವೆಂಪು-ಲಂಕೇಶ್. ಒಂದು ಅನಂತಮೂರ್ತಿ ಗೋಡಂಬಿ. ಆಕ್ಛುಯಲಿ ಈಗಿನ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರು ಬಗೆಹರಿಸಬೇಕಾದ ಸಮಸ್ಯೆಗಳೇ ಬೇರೆ ಇವೆ. ಯುವ ಸಾಹಿತಿಗಳಿಗೆ ಅವರು ತಿಳಿಹೇಳಬೇಕಾದ ಮಾತುಗಳೆಂದರೆ – ಲೈಕು ಕಾಮೆಂಟ್ ಬರಲಿಲ್ಲ ಅಂತ ಸ್ನೇಹಿತರ ಪ್ರಾಣ ತಿನ್ನಬಾರದು. ಹೀಗೆ ಬರೆದರೆ ಕೇಂದ್ರ ಸಾಹಿತ್ಯ ಅಕಾಡೆಮಿ ಅವಾರ್ಡ್ ಬರುತ್ತೆ ಅಂತ ಆ ಸಾಹಿತಿಗೆ ಗೊತ್ತಿದೆ ಅನ್ನೋದು ನನಗೆ ಗೊತ್ತಿದೆ ಅಂತ ಎಲ್ಲರಿಗೂ ಗೊತ್ತಾಗುವಂತೆ ಹೇಳಿ – ಅದೇನು ಟ್ರಿಕ್ಕು ಅಂತ ಯಾರಿಗೂ ಹೇಳದೇ ಎಲ್ಲರಿಗೂ ಕನ್ಫೂಸ್ ಮಾಡುವುದಕ್ಕಿಂತ – ಮುಚ್ಚಿಕೊಂಡು ಬರೆಯಬೇಕು. ಬರೆದದ್ದೆಲ್ಲ ಬೆಳಗಾಮುಂಚೆ ಪ್ರಕಟಿಸಿ ಸಂಜೆ ಹೊತ್ತಿನೊಳಗೆ ಹಾಳೆಗಳಿಲ್ಲದೇ ಬರೀ ಕವರ್ ಪೇಜು ಪಿಡಿಎಫ್ ಪ್ರಿಂಟ್ ತೆಗೆದು ಸಂಕಲನವೇ ಪ್ರಕಟವಾಯ್ತು ಅನ್ನೋ ಭ್ರಮೆ ಹುಟ್ಟಿಸಬಾರದು. ಯಾಕೆಂದರೆ ಮಾರನೇ ದಿನ ಬೆಳಿಗ್ಗೆ ಅವರಿಗೇ ಸಂಕಲನ ಪ್ರಕಟವಾಗಿಹೋಗಿದೆ ಅನ್ನೋ ಭ್ರಮೆ ಬಂದುಬಿಟ್ಟು – ಇನ್ನೂ ಹೆಚ್ಚು ಕವನಸಂಕಲನ ಚೆಲ್ಲಾಡಿ – ಮಾಧವ ಗಾಡ್ಗಿಳ್ ಹೇಳಿದಂತೆ ಬುಟ್ಟಿ ಹೆಣೆಯುವವರ ಬದುಕನ್ನು ನಾಮಾವಶೇಷ ಮಾಡಬಾರದು. ಮುಖ್ಯವಾಗಿ, ಹತ್ತಿಪ್ಪತ್ತು ಮುಖಪುಟಗಳನ್ನು ಡಿಸೈನ್ ಮಾಡಿಸಿ ಫೇಸ್ಬುಕ್ನಲ್ಲಿ ಆಯ್ಕೆಯ ಸ್ಪರ್ಧೆ ಏರ್ಪಡಿಸುವ ಬದಲು – ಆ ಪುಸ್ತಕದ ಒಂದಿಪ್ಪತ್ತು ಪುಟಗಳನ್ನೇ ಓದಲು ಕೊಟ್ಟು ಪುಸ್ತಕ ಪ್ರಕಟವಾಗಬೇಕೋ ಬೇಡವೋ ಎಂಬ ಕಾಂಪಿಟೇಷನ್ ಇಟ್ಟರೆ ಬಹಳ ಕಸ ಕಡಿಮೆಯಾಗುತ್ತದೆ. ಮುಖಪುಟದ ವಿನ್ಯಾಸವು ಬರಹಗಾರನ ಛಾಪು ಮತ್ತು ಅಕ್ಷರಾರ್ಥದ ಮದುವೆ ಎಂಬ ಭರವಸೆಯನ್ನು ಪುನರ್ಸ್ಥಾಪಿಸಬೇಕು.

ಈ ರೀತಿಯಲ್ಲಿ ಹೊಸ ಸಮಾಸ, ತತ್ಸಮ-ತದ್ಭವ ಮಾಡದೇ ಬರೀ ಕನ್ನಡಾಂಬೆ, ಅವಳಿಗೆ ಭಾಷೆಗಳ ಕರ್ಮಣಿಸರ-ಕೆಂಬವಳ ಅಂದುಕೊಂಡಿದ್ದರೆ, ಅವಳಿಗೇ ಒಂದು ಸಲ ಸಿಟ್ಟುಬಂದು ಮುಂಬರುವ ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಕೋಲು ಹಿಡಿದುಕೊಂಡು ನಮ್ಮನ್ನೆಲ್ಲ ಅಟ್ಟಾಡಿಸಿಕೊಂಡು ಹೊಡೆಯುವ ಸಾಧ್ಯತೆಯಿದೆ. ಈಗಿನ ಸಮ್ಮೇಳನಾಧ್ಯಕ್ಷರ ಮಾತು ಕೇಳಿದರೆ, ಕನ್ನಡಾಂಬೆಯೂ ಪಾಪ ಸಂಸ್ಕೃತ ಕಲಿತುಕೊಂಡು ಮುಂದಿನ ವರ್ಷ ಚಿಕ್ಕೆರೂರು – ಹಿರೇಕೇರೂರಿನಲ್ಲಿ ಕಂಗಾಲಾಗಿ ಓಡಾಡುವ ಅನಿವಾರ್ಯತೆ ಉಂಟಾಗುವ ಹಾಗಿದೆ. ವಾಸ್ತವವಾಗಿ ನಾವು ಕನ್ನಡಾಂಬೆಗೆ ಪ್ಯಾಂಟು ಶರ್ಟು ಹಾಕಿ ಜೆ.ಎಂ. ಕೊಯೆಟ್ಸಿ, ನೋಹಾ ಹರಾರಿ, ಎಲೆನಾ ಫರಾಂಟೆ, ಜ್ಯುಲಿಯೋ ಕೋರ್ಟಝಾರ್ ಇತ್ಯಾದಿಗಳ ಜೊತೆ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸುತ್ತಾಡಲು ಬಿಟ್ಟರೆ ಅವಳೂ ಸ್ವಲ್ಪ ಹಗುರಾದಾಳು. ಪರವೂರಿನ ಜನರು ನಮ್ಮಮ್ಮನನ್ನು “..ಎಷ್ಟು ಕೂಲ್ ಗುರು” ಎಂದು ಆಶ್ಚರ್ಯಪಟ್ಟು ನೋಡಿಯಾರು. ವೈಕಂ ಮೊಹಮದ್ ಬಶೀರರ “ಒಂದು + ಒಂದು ಇನ್ನೂ ದೊಡ್ಡ ಒಂದು ಆಗುತ್ತದೆ” ಎಂಬ ಮಾತನ್ನು ಕೋಟ್ ಮಾಡಿದ ವೆಂಕಟೇಶಮೂರ್ತಿಯವರಿಗೆ ಈ ಇನ್ನೊಂದು ಸಹ ಅರ್ಥವಾಗಿದ್ದರೆ ಚೆನ್ನಾಗಿತ್ತು.

“ಇವತ್ತಿನ ಸಮಾಜದಲ್ಲಿ ಆತ್ಮರಕ್ಷಣೆ ಮುಖ್ಯವಾಗಿದೆಯೇ ಹೊರತು ಆರ್ತರಕ್ಷಣೆಯಲ್ಲ” ಎಂಬುದನ್ನು ಸಮ್ಮೇಳನಾಧ್ಯಕ್ಷರು ನಮ್ಮ ಗಮನಕ್ಕೆ ತರಲು ಬಯಸಿದ್ದಾರೆ. ಅದೇ ಮಾತನ್ನು ಇಲ್ಲಿ ಕೋಟ್ ಮಾಡುವುದರ ಮೂಲಕ ಅದನ್ನೇ ಅವರ ಗಮನಕ್ಕೂ ತರಲು ಬಯಸುತ್ತಿದ್ದೇವೆ. ಆದರೆ ಅವರು ಈ ಸಂಪಾದಕೀಯವನ್ನೂ ಇತರೆಲ್ಲ ಸಂಪಾದಕೀಯಗಳಂತೆ ಓದದೇ ಹೋಗುವುದರಿಂದ ಅದು ಅವರ ಗಮನಕ್ಕೆ ಬರಲಾರದು. ಅಥವಾ ತಮ್ಮ ಭಾಷಣವನ್ನು ಬರೆಯುವಾಗಲೂ ಅವರಿಗೆ ತಾವು ಬರೆದದ್ದೇ ಗಮನಕ್ಕೆ ಬಂದಿರುವಂತೆಯೂ ಇಲ್ಲ. ಹೀಗೆ ನಾವು ಬರೆಯುವಾಗ ನಮ್ಮ ಗಮನಕ್ಕೇ ಬಾರದಂತೆ ಸ್ಫುರಣವಾಗುವುದೇ ಕಾವ್ಯವಿರಬೇಕು.

ಜಗತ್ತಿನ ಊರುಗಳಲ್ಲಿ ಪತ್ತೆದಾರಿ ಸಾಹಿತ್ಯೋತ್ಸವಗಳು ನಡೆಯುತ್ತವೆ. ಫ್ರಾನ್ಸ್ ನ ಟುಲೂಸ್ನಲ್ಲಿ ಅಂಥ ಒಂದು ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ಪತ್ತೆದಾರಿ ಸಾಹಿತಿಯೊಬ್ಬರ ಕಥೆಯೊಳಗಿನ ಕ್ಲೂಗಳನ್ನು ಬಳಸುತ್ತ ಊರಿನ ಮೂಲೆಯಲ್ಲಿ ಅಡಗಿರುವ ಅವನನ್ನು ಹುಡುಕುವ ಆಟವಿತ್ತು. ನಮ್ಮಲ್ಲೂ ಅಂಥದ್ದಿದ್ದರೆ ಎಷ್ಟು ಮಜಾ ಅಂತ ಆಗ ಅನ್ನಿಸಿತ್ತು. ಈಗ ಶೃಂಗೇರಿ ಸಾಹಿತ್ಯ ಸಮ್ಮೇಳನ ನೋಡಿದರೆ ನಮ್ಮದು ಇನ್ನೂ ಮುಂದೆ ಹೋಗಿ ಸಾಹಿತ್ಯ ಸಮ್ಮೇಳನವೆಂಬುದು ಪಬ್-ಜಿ ಆಟವಾಗಿ ಹೋಗಿದೆ. ಅಧ್ಯಕ್ಷನನ್ನು ಹುಡುಕಿ, ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಸಾಹಿತ್ಯತ್ಯಾಸಕ್ತರು ಓಡಾಡುತ್ತಿದ್ದಾರೆ. ಅಂಥದ್ದನ್ನೆಲ್ಲ ವಿರೋಧಿಸದ ನಮ್ಮ ಬೇಲಿಸಾಲು ಸಾಹಿತಿಗಳ ಮನಸ್ಸಿನಲ್ಲೇನಿದೆ ಅಂತ ಕಂಡುಹಿಡಿಯುವುದು ಜಾಕ್ ಐರಿಶ್, ಫೆಲೂದಾ, ಶೆರ್ಲಾಕ್ ರಂಥ ಡಿಟೆಕ್ಟಿವ್ ಗಳಿಗೂ ಸಾಧ್ಯವಿಲ್ಲ. ಇನ್ನೇನಿದ್ದರೂ ಕೌಂಡಿನ್ಯರ ಜಿಂಕೆಯಂತೆ ಫ್ರಂಟ್ ಕಿಕ್, ಬ್ಯಾಕ್ ಪಂಚ್ ಮಾಡಿ “ಸತ್ಯ ಹೇಳು ಕಳ್ಳ ಸಾಹಿತಿಯೇ” ಅಂತ ಬಾಯಿಬಿಡಿಸಬೇಕು.

ಸಮ್ಮೇಳನಾಧ್ಯಕ್ಷರು ಕವಿ ಬಿಸರಳ್ಳಿಯವರ ಮೇಲೆ ಎಫ್.ಐ.ಆರ್ ಹಾಕಿದ್ದರ ಕುರಿತು ಧ್ವನಿ ಎತ್ತಬೇಕು ಎಂದು ಎಲ್ಲರೂ ಬಯಸಿದ್ದರು. ಅದು ಸಾಧುವೂ ಸಾಧ್ಯವೂ ಅಲ್ಲ. ಅದರ ಬದಲು ಅವರೊಬ್ಬರನ್ನು ಹೊರಗೆ ಬಿಟ್ಟರೆ ೧೧೩ ಬೇರೆ ಸ್ವಘೋಷಿತ ಕವಿಗಳನ್ನು ಹಿಡಿದುಕೊಡುತ್ತೇನೆ ಎಂದು ಅಧ್ಯಕ್ಷರು ಯಡಿಯೂರಪ್ಪನವರ ಜೊತೆ ಒಪ್ಪಂದ ಮಾಡಿಕೊಳ್ಳಬಹುದಾಗಿತ್ತು. ೧೧೩ ಎಂಬ ಮ್ಯಾಜಿಕ್ ನಂಬರ್ ಕೇಳಿದೊಡನೆಯೇ ಸಿ.ಟಿ ರವಿ, ಯಡಿಯೂರಪ್ಪ ಇಬ್ಬರೂ ಒಪ್ಪಿಕೊಂಡುಬಿಡುತ್ತಿದ್ದರು ಎಂಬ ತರ್ಕ ಮ್ಯಾಥ್ಸ್ ನಲ್ಲಿ ಚುರುಕಲ್ಲದ ಕವಿಗಳಿಗೆ ಹೊಳೆಯುವುದೇ ಇಲ್ಲ.

ಇದೇ ಭಾಷಣದಲ್ಲಿ ಅಧ್ಯಕ್ಷರು “ಪರಿಸರದ ಭಾಷೆ ಆತ್ಮಾಭಿವ್ಯಕ್ತಿಗೆ ಪೂರಕ, ಪೋಷಕ… ಮಾಸ್ತಿ ಮನೆಭಾಷೆ ತಮಿಳು” ಇತ್ಯಾದಿ ಇತ್ಯಾದಿ ಹೇಳಿದ್ದಾರೆ. ಕವಿಗಳಿಗೆ ಭಾಷೆ ಎಂದರೆ ಪದಗಳಲ್ಲ, ಧ್ವನಿಯಲ್ಲ, ಉಕ್ತಿಗಳಲ್ಲ ಅಥವಾ ಕಡೆಗೆ ಭಾಷೆಯೇ ಕಾವ್ಯವೂ ಅಲ್ಲ ಎಂದು ಗೊತ್ತಿರುತ್ತದೆ. ಇಂತಿರುವಾಗ ಈಗಿನ ಪರಿಸರದ ಭಾಷೆಯಾದರೂ ಯಾವುದು? ಕೇಸುಗಳು, ಕಾನೂನು, ದಬ್ಬಾಳಿಕೆ; ಭಾಷೆ ಕಲಿಯುತ್ತಿರುವ ಮಕ್ಕಳ ಮೇಲೆ ಕೇಸುಗಳು. ಈ ಪರಿಸರದ ಭಾಷೆಯಲ್ಲಿ ಆತ್ಮಾಭಿವ್ಯಕ್ತಿ ಹಾಗೂ ಸೃಷ್ಟಿಶೀಲತೆ ಜೈಲಿಗೆ ಹೋಗಿ ಕುಳಿತುಕೊಳ್ಳುತ್ತದೆ. “ನಮ್ಮ ಒಕ್ಕೊರಲ ಹಾಡುಗಳು ಕನ್ನಡದಲ್ಲಿಯೇ ಅನುರಣಿಸಬೇಕು” ಎಂದು ಉದ್ಘೋಷಿಸುವ ಎಚ್ಚೆಸ್ವಿ ಯವರಿಗೆ ಬಿಸರಳ್ಳಿ ಜಿಬರಿಶ್ ನಲ್ಲಿ ಬರೆಯಲಿಲ್ಲ – ಆ ಪದ್ಯ ಇದ್ದದ್ದು ಕನ್ನಡದಲ್ಲಿಯೇ ಎಂದು ಏಕೆ ಹೊಳೆಯಲಿಲ್ಲವೋ.

ಇದನ್ನು ಎಳೆದು ಬೆಳೆಸುತ್ತಲೇ ಹೋಗಬಹುದು. ಆದರೆ ಬೇಡ ಅನ್ನಿಸುತ್ತಿದೆ. ಬಹುಶಃ ಅಧ್ಯಕ್ಷರು ತಮ್ಮ ಭಾಷಣದಲ್ಲಿ “ತನಗಾಗಿಯಲ್ಲದೇ ಬೇರೆಯವರಿಗಾಗಿ ಬದುಕಬೇಕು ಎಂಬುದು ಭಾರತೀಯ ಜೀವನಕ್ರಮದ ಆದರ್ಶವಾಗಿತ್ತು” ಎಂದು ಹೇಳಿದ್ದು – ಬೀದರ್ ನ ಹನ್ನೊಂದು ವರ್ಷದ ಹುಡುಗಿಯ ವಿಧವೆ ಅಮ್ಮನನ್ನು ಸೆಡಿಷನ್ ಛಾರ್ಜ್ ನಲ್ಲಿ ಒಳಗೆ ಹಾಕಿದ್ದರ ಬಗ್ಗೆಯೇ ಇರಬೇಕು. ಅದನ್ನೇ ಅವರು  – ಕವಿತ್ವದ ಧಾಟಿಯಲ್ಲಿ, ಧ್ವನಿಯನ್ನು ಅಡಕಗೊಳಿಸಿ, ಶ್ಲೇಷೋತ್ಪತ್ತಿ ಇತ್ಯಾದಿಗಳನ್ನು ಮಾಡಿ ಮುಖ್ಯಮಂತ್ರಿ ಮತ್ತು ರಾಜ್ಯಕ್ಕೆ ತಿಳಿಯುವಂತೆಯೂ/ ತಿಳಿಯಲಾರದಂತೆಯೂ ಮಾತಾಡಿರಬಹುದು. ಕವಿಗಳ ವಿಧಾನಗಳು ಹೇಗೋ ಏನೋ.

ಈ ಕೆಳಗೆ ಎತ್ತಿಕೊಟ್ಟಿರುವ ಸಾಲಿನ ಮೂಲಕ ಈ ಸಂಪಾದಕೀಯ ಮುಗಿಯುತ್ತದೆ: ಜನರು ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಓದಿಯೂ, ಕೇಳಿಯೂ ಇರಬಹುದಾದ ಆದರೆ ಸರಿಯಾಗಿ ಅರ್ಥಮಾಡಿಕೊಳ್ಳದಿರಬಹುದಾದ ಒಂದು ಸಾಲು ಅವರ ಭಾಷಣದಲ್ಲಿ ಹುದುಗಿದೆ. ಈ ವಾಕ್ಯದ ಮೂಲಕ – ಈ ಸಮಯದ ಅವರ ಟೀಕಾಕಾರರಿಗೆ ಅವರು ತಮ್ಮ ಸಮಸ್ಯೆಯನ್ನೂ ಹೇಳಿದ್ದಾರೆ:

“ವಾಸ್ತವ ಮತ್ತು ಆದರ್ಶಗಳ ಸಂಘರ್ಷದ ಪ್ರಸ್ತಾಪ ಮಾಡುವಾಗ ನನಗೆ ಬದುಕು ಮತ್ತು ಕಲೆಯ ನಡುವಿನ ಈವತ್ತಿನ ವಿಷಮ ನೆಲೆಯೂ ಕಾಡುವುದು.”

ಅಲ್ಲಿಗೆ,

 

 

ಕಿರಣ್ – ಅವಿನಾಶ್ – ನಿತೇಶ್
ಋತುಮಾನ ಸಂಪಾದಕೀಯಬಳಗ
9/2/2020.

4 comments to “ಸಂಪಾದಕೀಯ: ಸಮ್ಮೇಳನಾಧ್ಯಕ್ಷ ಭಾಷಣದ ಹಿಂದು, ಮುಂದು …”
  1. ಮುಂದಿನ ಸಮ್ಮೇಳನಾಧ್ಯಕ್ಷರು ಋತುಮಾನದ ಸಂಪಾದಕರನ್ನು ಕೇಳಿ, ಅವರ ಸಲಹೆಯನ್ನು ಪಡೆದು, ಭಾಷಣ ಬರೆದುಕೊಂಡು ಓದಿ.

    • ಪ್ರತಿ ಸಲ ಸರ್ಕಾರದವರ ಪರವಾಗಿ ಮಾತನಾಡಲು ಸಲಹೆ ಪಡೆದು ಓದಿದ್ದನ್ನು ಕೇಳಿ ಕೇಳಿ ತಾಯಿ ಭುವನೇಶ್ವರಿಗೆ ಬೇಸರವಾಗಿರಲ್ವೆ ??

      ಮುಂದಿನ ಸಲವಾದರೂ ಋತುಮನದವರನ್ನ ಕೇಳಲಿ ಬಿಡಿ.

  2. ಅಭಿಪ್ರಾಯ ಅವರವರ ಸ್ವಂತ.
    ಯಾವ ಅಂಶ ಸರಿ ಅಥವಾ ಸರಿ ಅಲ್ಲ ಎಂದು ಚರ್ಚೆ ಮಾಡಬಹುದು.
    ಯಾರೂ ಯಾರ ಬಗ್ಗೆಯೂ ಉಡಾಫೆ ತೋರುವುದು ಸಲ್ಲದು

ಪ್ರತಿಕ್ರಿಯಿಸಿ