ವೈರಸ್ ಮತ್ತು ಪರಿಸರ ವಿಜ್ಞಾನ

ಖಾಯಿಲೆಗಳು ಹೆಚ್ಚಾಗಿ ಒಂದು ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳು. ಈಗ ಹೊರಬರುತ್ತಿರುವ ಶೇಕಡಾ ಅರವತ್ತರಷ್ಟು ಖಾಯಿಲೆಗಳು ಪ್ರಾಣಿಜನ್ಯವಾದವು (ಜ಼ೂನೋಟಿಕ್). ಅಂದರೆ ಅವು ಮೂಲತಃ ಪ್ರಾಣಿಗಳಿಂದ ಹುಟ್ಟಿರುತ್ತವೆ. ಹಾಗೂ ಅವುಗಳಲ್ಲಿ ಮೂರನೇ ಎರಡು ಭಾಗ ವನ್ಯಜೀವಿಗಳಲ್ಲಿ ಹುಟ್ಟುತ್ತವೆ. ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ವೈರಸ್ ಗಳ ಹುಟ್ಟು ಮತ್ತು ಹರಡುವಿಕೆ ಮತ್ತು ಪ್ರಾಣಿ ಸಂಕುಲದೊಡನೆ ಇದರ ಸಂಬಂಧವನ್ನು ಈ ಲೇಖನ ಸವಿಸ್ತಾರವಾಗಿ ಚರ್ಚಿಸುತ್ತದೆ .

ಇತ್ತೀಚಿನ ವರ್ಷಗಳಲ್ಲಿ ಜೀವಶಾಸ್ತ್ರಜ್ಞರು ಮತ್ತು ಪರಿಸರ ವಿಜ್ಞಾನಿಗಳು ಉಪಯೋಗಿಸುವ ಒಂದು ನುಡಿ “ಪರಿಸರ ವ್ಯವಸ್ಥೆಯ ಸೇವೆಗಳು”. ಈ ನುಡಿ, ಮಾನವಪ್ರಯತ್ನವನ್ನು ಪ್ರಕೃತಿಯು ವಿವಿಧ ರೀತಿಗಳಿಂದ ಬೆಂಬಲಿಸುವುದನ್ನು ಉಲ್ಲೇಖಿಸುತ್ತದೆ. ಉದಾಹರಣೆಗೆ, ಕಾಡುಗಳು ನಾವು ಕುಡಿಯುವ ನೀರನ್ನು ಶೋಧಿಸುತ್ತವೆ; ಹಕ್ಕಿಗಳು ಮತ್ತು ಜೇನುನೊಣಗಳು ಪರಾಗಸ್ಪರ್ಷ ನಡೆಸುತ್ತವೆ. ಈ ಎರಡೂ ಕ್ರಿಯೆಗಳು ಸಾಕಷ್ಟು ಮಟ್ಟದಲ್ಲಿ ಆರ್ಥಿಕವಾದ ಹಾಗೂ ಜೈವಿಕವಾದ ಮೌಲ್ಯ ಹೊಂದಿವೆ.

ನಾವು ಇದನ್ನು ಅರ್ಥ ಮಾಡಿಕೊಳ್ಳಲು ಮತ್ತು ಪ್ರಾಕೃತಿಕ ಜಗತ್ತನ್ನು ಸಂಭಾಳಿಸಲು ಸಮರ್ಥರಾಗದಿದ್ದರೆ ಅದರಿಂದ ಈ ವ್ಯವಸ್ಥೆಗಳು ಮುರಿದುಬೀಳುವ ಸಾಧ್ಯತೆಗಳಿರುತ್ತವೆ ಹಾಗೂ ಅದು ತಿರುಗಿ ಬಂದು ನಮಗೆ ಹೆಚ್ಚು ತಿಳಿಯದೇ ಇರುವ ವಿಧಾನಗಳಲ್ಲಿ ನಮ್ಮನು ಕಾಡಲೂ ಬಹುದು.

ಇದಕ್ಕೆ ಒಂದು ಮಹತ್ವದ ಉದಾಹರಣೆಯೆಂದರೆ ಮುಕ್ಕಾಲುವಾಸಿ ಸಾಂಕ್ರಾಮಿಕ ರೋಗಗಳ ಅಂದರೆ – ಏಡ್ಸ್,ಎಬೋಲ, ವೆಸ್ಟ್ ನೈಲ್, ಸಾರ್ಸ್, ಲೈಮ್ ಡಿಸೀಸ್ ಮತ್ತು ಈ ಹಿಂದಿನ ಹಲವಾರು ದಶಕಗಳಲ್ಲಿ ಬಂದಿರುವ ಇಂಥ ನೂರಾರು ಸಾಂಕ್ರಾಮಿಕ ರೋಗಗಳ ನಿಚ್ಚಳವಾದ ರೂಪರೇಶೆ. ಈ ರೂಪರೇಶೆಯ ಪ್ರಕಾರ ಈ ಸಾಂಕ್ರಾಮಿಕ ರೋಗಗಳು ತಮ್ಮಷ್ಟಕ್ಕೆ ತಾವೇ ಬರುವುದಿಲ್ಲ, ಅವುಗಳು ಮಾನವರು ಪ್ರಕೃತಿಯ ಮೇಲೆ ನಡೆಸುವ ಕ್ರಿಯೆಗಳ ಪರಿಣಾಮವಾಗಿ ಬರುತ್ತವೆ.

ಖಾಯಿಲೆಗಳು ಹೆಚ್ಚಾಗಿ ಒಂದು ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳು. ಈಗ ಹೊರಬರುತ್ತಿರುವ ಶೇಕಡಾ ಅರವತ್ತರಷ್ಟು ಖಾಯಿಲೆಗಳು ಪ್ರಾಣಿಜನ್ಯವಾದವು (ಜ಼ೂನೋಟಿಕ್). ಅಂದರೆ ಅವು ಮೂಲತಃ ಪ್ರಾಣಿಗಳಿಂದ ಹುಟ್ಟಿರುತ್ತವೆ. ಹಾಗೂ ಅವುಗಳಲ್ಲಿ ಮೂರನೇ ಎರಡು ಭಾಗ ವನ್ಯಜೀವಿಗಳಲ್ಲಿ ಹುಟ್ಟುತ್ತವೆ.

ಪಶುವೈದ್ಯರ ಮತ್ತು ಸಂರಕ್ಷಣಾ ಜೀವಶಾಸ್ತ್ರಜ್ಞರ ತಂಡಗಳು, ವೈದ್ಯರುಗಳು ಮತ್ತು ಸಾಂಕ್ರಾಮಿಕರೋಗ ತಜ್ಞರುಗಳ ಜೊತೆಗೂಡಿ, “ಖಾಯಿಲೆಗಳ ಪರಿಸರ ವಿಜ್ಞಾನ”ವನ್ನು ಅರ್ಥಮಾಡಿಕೊಳ್ಳುವ ಒಂದು ಜಾಗತಿಕ ಪ್ರಯತ್ನದಲ್ಲಿದ್ದಾರೆ. ಈ ಕಾರ್ಯಯೋಜನೆಯನ್ನು “ಪ್ರೆಡಿಕ್ಟ್” ಎಂದು ಕರೆಯಲಾಗಿದೆ, ಹಾಗೂ ಇದು ಅಂತರರಾಷ್ಟ್ರೀಯ ಪ್ರಗತಿಗಾಗಿರುವ ವಿಶ್ವಸಂಸ್ಥೆಯ ಏಜೆನ್ಸಿಯಿಂದ (United States Agency for International Development) ಆರ್ಥಿಕ ಬೆಂಬಲ ಪಡೆದಿದೆ. ಜನರು ಭೂಚಹರೆಗಳನ್ನು ಹೇಗೆ ಬದಲಿಸುತ್ತಿದ್ದಾರೆ, ಅಂದರೆ ಉದಾಹರಣೆಗೆ ಒಂದು ಹೊಸ ರಸ್ತೆ ಅಥವಾ ತೋಟ ಮಾಡಲು ಜನರು ಹೇಗೆ ನೆಲದ ನೋಟವನ್ನು ಬದಲಿಸುತ್ತಿದ್ದಾರೆ ಎಂಬುದರ ಆಧಾರದ ಮೇಲೆ ತಜ್ಞರು, ಮುಂದಿನ ಖಾಯಿಲೆಗಳು ಎಲ್ಲಿ ಮಾನವರ ಮೇಲೆ ಹರಡಲು ಆರಂಭವಾಗಬಹುದು ಮತ್ತು ಅವುಗಳು ಹರಡುವ ಮೊದಲೇ ಅವುಗಳು ಹಾಗೆ ಮಾನವವಲಯದಲ್ಲಿ ಕಾಣಿಸಿಕೊಳ್ಳತೊಡಗಿದರೆ ಅವುಗಳನ್ನು ಗುರುತಿಸುವುದು ಹೇಗೆ ಎಂಬುದನ್ನು ಗ್ರಹಿಸಲು ಪ್ರಯತ್ನಪಡುತ್ತಿದ್ದಾರೆ. ಅವರು, ಅತಿ ಹೆಚ್ಚು ಅಪಾಯ ಸಾಧ್ಯತೆಯಿರುವ ವನ್ಯಜೀವಿಜಾತಿಗಳ ರಕ್ತ, ಎಂಜಲುಗಳನ್ನು ಸಂಗ್ರಹಿಸಿ ವೈರಸ್ಸುಗಳ ಒಂದು ಸಂಗ್ರಹ ಭಂಢಾರವನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ಅವುಗಳಲ್ಲಿ ಯಾವುದಾದರೊಂದರಿಂದ ಮಾನವರಿಗೆ ಸೋಂಕು ತಗುಲಿದರೆ, ತತ್ಕ್ಷಣವೇ ಅದನ್ನು ಗುರುತಿಸಲು ಸುಲಭವಾಗುತ್ತದೆ. ಮತ್ತು ಮುಂದಿನ ಸರ್ವವ್ಯಾಪಿ ವ್ಯಾಧಿಯಾಗದಂತೆ (ಪ್ಯಾಂಡೆಮಿಕ್)ನಿರೋಧಿಸಲು ಮತ್ತು ಈ ಖಾಯಿಲೆಗಳು ಅರಣ್ಯಪ್ರದೇಶಗಳನ್ನು ಬಿಟ್ಟು ಹೊರಬರದಿರಲು, ಅರಣ್ಯಗಳನ್ನು, ವನ್ಯಜೀವಿಗಳನ್ನು ಮತ್ತು ಜಾನುವಾರುಗಳನ್ನು ಹೇಗೆ ನಿರ್ವಹಿಸಬೇಕೆಂಬ ವಿವಿಧ ಮಾರ್ಗಗಳನ್ನು ಅಧ್ಯಯನ ನಡೆಸುತಿದ್ದಾರೆ.

ಇದು ಸಾರ್ವಜನಿಕ ಆರೋಗ್ಯ ಸಮಸ್ಯೆ ಮಾತ್ರವಲ್ಲ, ಆರ್ಥಿಕ ಸಮಸ್ಯೆಯೂ ಹೌದು. ಉದಾಹರಣೆಗೆ ವಿಶ್ವಬ್ಯಾಂಕು ಒಂದು ತೀವ್ರವಾದ ಇನ್ಫ್ಲುಎಂಜ಼ಾ ಸರ್ವವ್ಯಾಪಿ ಸೋಂಕು ವಿಶ್ವಕ್ಕೆ 3 ಟ್ರಿಲ್ಲಿಯನ್ ಡಾಲರುಗಳಷ್ಟು ನಷ್ಟ ಉಂಟು ಮಾಡಬಲ್ಲದು.
ಬಡ ರಾಷ್ಟ್ರಗಳಲ್ಲಿ ಜಾನುವಾರುಗಳನ್ನು ಇಟ್ಟಿರುವ ಸ್ಠಿತಿ, ಈ ಸಮಸ್ಯೆಯನ್ನು ಕೆರಳಿಸಬಹುದು ಹಾಗೂ ಇದರಿಂದ ವನ್ಯಪ್ರಾಣಿಗಳಲ್ಲಿರುವ ರೋಗಗಳು ಉಲ್ಬಣಗೊಳ್ಳಬಹುದು. ಅಂತರರಾಷ್ಟ್ರೀಯ ಜಾನುವಾರು ಸಂಶೋಧನಾ ಸಂಸ್ಥೆಯು ಈ ತಿಂಗಳ ಮೊದಲಲ್ಲಿ ಹೊರತಂದ ಅಧ್ಯಯನದ ಪ್ರಕಾರ ಪ್ರತಿ ವರ್ಷ ಸುಮಾರು 2 ಮಿಲ್ಲಿಯನ್ ಜನರು ವನ್ಯಪ್ರಾಣಿಗಳಿಂದ ಮತ್ತು ಸಾಕುಪ್ರಾಣಿಗಳಿಂದ ಮಾನವರಿಗೆ ಬರುವ ಖಾಯಿಲೆಗಳಿಂದ ಸಾಯುತ್ತಾರೆ.

ಹೆನಿಪಾ ಕುಲದ ವೈರಸ್ಸುಗಳಾದ ದಕ್ಷಿಣ ಏಶಿಯಾದ ನಿಪಾ ವೈರಸ್ ಮತ್ತು ಅದರ ಹತ್ತಿರದ ಸಂಬಂಧಿಯಾದ ಆಸ್ಟ್ರೇಲಿಯಾದ ಹೆಂಡ್ರಾ ವೈರಸ್ ಇವೆರಡೂ, ಪರಿಸರ ವ್ಯವಸ್ಥೆಯನ್ನು ಕಲಕುವುದರಿಂದ ಹೇಗೆ ಖಾಯಿಲೆಗಳಿಗೆ ಅದು ಕಾರಣವಾಗುತ್ತದೆ ಎಂಬುದಕ್ಕೆ ತುರ್ತಿನ ಉದಾಹರಣೆಗಳಾಗಿವೆ.

ಈ ವೈರಸ್ಸುಗಳು ಬಾವಲಿಗಳಿಂದ (ಟೀರೋಪಸ್ ವ್ಯಾಂಪಿರಸ್) ಅಂದರೆ ಹಣ್ಣುತಿನ್ನುವ ಬಾವಲಿಗಳಿಂದ ಉಗಮವಾಯಿತು. ಇವುಗಳು ತಿನ್ನುವಾಗ ಬಹಳ ಗಲೀಜು ಮಾಡುತ್ತವೆ ಎಂಬುದೇನೂ ಈ ಸಂದರ್ಭಕ್ಕೆ ಸಣ್ಣ ವಿಷಯವಲ್ಲ. ಇವು ಸಾಧಾರಣವಾಗಿ ಡ್ರ್ಯಾಕುಲಾದಂತೆ ಕಾಣುತ್ತಾ ಮೇಲುಕೆಳಗಾಗಿ ನೇತಾಡಿಕೊಂಡು, ಅವುಗಳ ತೆಳುತೊಗಲಿನ ರೆಕ್ಕೆಗಳನ್ನು ತಮ್ಮ ಸುತ್ತಾ ಬಿಗಿಯಾಗಿ ಸುತ್ತಿಕೊಂಡು, ಹಣ್ಣುಗಳ ತಿರುಳನ್ನು ಅಗಿದು ತಿನ್ನುತ್ತಾ, ಬೀಜಗಳು ಮತ್ತು ರಸವನ್ನು ಉಗಿಯುತ್ತವೆ.

ಈ ಬಾವಲಿಗಳು ಹಲವಾರು ಮಿಲ್ಲಿಯನ್ ವರ್ಷಗಳಿಂದ ಹೆನೀಪಾ ವೈರಸ್ಸಿನೊಂದಿಗೆ ವಿಕಸನಗೊಳ್ಳುತ್ತಾ ಬಂದಿವೆ. ಈ ಸಹ-ವಿಕಸನದಿಂದ ಈ ಬಾವಲಿಗಳಿಗೆ ನಮಗೆ ಒಂದು ಸಣ್ಣ ನೆಗಡಿ ಆದರೆ ಹೇಗಾಗಬಹುದೋ, ಈ ವೈರಸ್ಸಿನಿಂದ ಹಾಗೆ ಆದಂತಾಗುತ್ತದಷ್ಟೆ. ಆದರೆ ಒಮ್ಮೆ ಈ ವೈರಸ್ಸುಗಳು ಬಾವಲಿಗಳನ್ನು ಬಿಟ್ಟು ಹೊರಬಂದು ತಮ್ಮೊಂದಿಗೆ ಸಹ-ವಿಕಸನ ಹೊಂದಿಲ್ಲದ ಜಾತಿಯ ಜೀವಿಗಳನ್ನು ಹೊಕ್ಕರೆ, 1999ರಲ್ಲಿ ಮಲೇಶಿಯಾದ ಗ್ರಾಮೀಣ ಪ್ರದೇಶದಲ್ಲಿ ಆದಂತೆ ಒಂದು ಭಯಾನಕ ಪ್ರಸಂಗವೇ ನಡೆಯಬಹುದು. ಒಂದು ಬಾವಲಿಯು ತಾನು ಕಚ್ಚಿದ ಹಣ್ಣನ್ನು ಒಂದು ಹಂದಿಗಳ ಮಂದೆಯ ಮಧ್ಯೆ ಬೀಳಿಸಿರಬಹುದು. ಆ ಹಂದಿಗಳಿಗೆ ಈ ವೈರಸ್ಸಿನ ಸೋಂಕು ತಗುಲಿತು. ಮತ್ತು ಅದು ಉಲ್ಬಣಗೊಂಡಿತು. ಅಲ್ಲಿಂದ ಇದು ಮಾನವರಿಗೆ ಹಾರಿತು.ಅದು ತನ್ನ ಮಾರಣಾಂತಕ ಗುಣದಲ್ಲಿ ನಮ್ಮನ್ನು ಬೆಚ್ಚಿಬೀಳಿಸಿತು. ಮಲೇಶಿಯಾದಲ್ಲಿ ಸೋಂಕಿಗೀಡಾದ 276 ಜನರಲ್ಲಿ 106 ಜನ ಮಡಿದರು ಮತ್ತು ಇನ್ನೂ ಹಲವಾರು ಜನರು ಶಾಶ್ವತವಾದ ಮತ್ತು ಅಂಗವಿಕಲಗೊಳಿಸುವ ನರವ್ಯಾಧಿಗೆ ಸಂಬಂಧಪಟ್ಟ ಅಸ್ವಸ್ಥತೆಗಳಿಗೆ ತುತ್ತಾದರು. ಇದಕ್ಕೆ ಯಾವುದೇ ಔಷಧಿ ಅಥವಾ ಲಸಿಕೆಯಿಲ್ಲ. ಇದಾದ ನಂತರದಲ್ಲಿ ದಕ್ಷಿಣ ಏಶಿಯಾದಲ್ಲಿ ಇಂಥದೇ 12 ಸಣ್ಣಸಣ್ಣ ರೋಗ ಸ್ಫೋಟಗಳು ಏಕಾಏಕಿ ಕಾಣಿಸಿಕೊಂಡಿವೆ. ಆಸ್ಟ್ರೇಲಿಯಾದಲ್ಲಿ 4 ಮಂದಿ ಹಾಗೂ ದಜûನ್ನುಗಟ್ಟಳೆ ಕುದುರೆಗಳು ಹೆಂಡ್ರಾದಿಂದ ಸತ್ತಿವೆ. ಆದರೆ ಅಲ್ಲಿನ ದೃಶ್ಯ ವಿಭಿನ್ನವಾಗಿತ್ತು. : ಉಪನಗರಗ ನಿರ್ಮಾಣಗಳಿಂದಾಗಿ ಕಾಡುಗಳಲ್ಲಿ ವಾಸಿಸುತ್ತಿದ್ದ ಸೋಂಕು ತಗುಲಿದ ಬಾವಲಿಗಳು ಹಿತ್ತಲುಗಳಿಂದ ಹುಲ್ಲುಗಾವಲುಗಳಿಂದ ಆಕ್ರ್ಶಿತವಾದವು. ಸಾಧಾರಣವಾದ ಪ್ರಾಸಂಗಿಕ ಸಂಪರ್ಕದಿಂದ ಸುಲಭವಾಗಿ ಹರಡುವಂತೆ ಹನೀಪಾ ವೈರಸ್ ವಿಕಸನಗೊಂಡರೆ, ಅದು ಕಾಡುಗಳನ್ನು ಬಿಟ್ಟು ಏಶಿಯಾದಲ್ಲೆಲ್ಲಾ ಹಾಗೂ ಜಗತ್ತಿನಲ್ಲೆಲ್ಲಾ ಹರಡಬಹುದೆಂಬ ಕಾಳಜಿಯಿದೆ.

ಖಾಯಿಲೆಗಳ ಪಾರಿಸಾರಿಕ ಕಾರಣಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕಿನಲ್ಲಿರುವ “ಎಕೋ ಹೆಲ್ತ್ ಅಲ್ಲಿಯಾಂಸ್” ಎಂಬ ಸಂಸ್ಥೆಯ ಪಶು ವೈದ್ಯ ಜೊನಾತನ್ ಎಪ್ಸ್ಟೀನ್, ” ನಿಪಾ ಹೆಚ್ಚಾಗಿ ಹೊರಬರುತ್ತಿದೆ. ನಾವು ಅಲ್ಲಲ್ಲಿ ಈ ಸಣ್ಣಸಣ್ಣ ಗೊಂಚಲುಗಳ ಹಾಗೆ ರೋಗ ನಿದರ್ಶನಗಳನ್ನು ಕಾಣುತ್ತಿದ್ದೇವೆ. ಸರಿಯಾದ ತಳಿಯೊಂದು ಹೊರಬಂದು ಅದು ಜನರಲ್ಲಿ ಸಮರ್ಥವಾಗಿ ಹರಡುವುದಕ್ಕೆ ಕಾಲ ಹೆಚ್ಚೇನೂ ದೂರವಿಲ್ಲ” ಎನ್ನುತ್ತಾನೆ. ಇದಕ್ಕೆ ಯಾವುದೇ ಔಷಧಿ ಅಥವಾ ಲಸಿಕೆಯಿಲ್ಲ. ಇದಾದ ನಂತರದಲ್ಲಿ ದಕ್ಷಿಣ ಏಶಿಯಾದಲ್ಲಿ ಇಂಥದೇ 12 ಸಣ್ಣಸಣ್ಣ ರೋಗ ಸ್ಫೋಟಗಳು ಏಕಾಏಕಿ ಕಾಣಿಸಿಕೊಂಡಿವೆ.

ಆಸ್ಟ್ರೇಲಿಯಾದಲ್ಲಿ 4 ಮಂದಿ ಹಾಗೂ ಡಜನ್ನುಗಟ್ಟಲೆ ಕುದುರೆಗಳು ಹೆಂಡ್ರಾದಿಂದ ಸತ್ತಿವೆ. ಆದರೆ ಅಲ್ಲಿನ ದೃಶ್ಯ ವಿಭಿನ್ನವಾಗಿತ್ತು. :ಉಪನಗರಗ ನಿರ್ಮಾಣಗಳಿಂದಾಗಿ ಕಾಡುಗಳಲ್ಲಿ ವಾಸಿಸುತ್ತಿದ್ದ ಸೋಂಕು ತಗುಲಿದ ಬಾವಲಿಗಳು ಹಿತ್ತಲುಗಳಿಂದ ಹುಲ್ಲುಗಾವಲುಗಳಿಂದ ಆಕ್ರ್ಶಿತವಾದವು. ಸಾಧಾರಣವಾದ ಪ್ರಾಸಂಗಿಕ ಸಂಪರ್ಕದಿಂದ ಸುಲಭವಾಗಿ ಹರಡುವಂತೆ ಹನೀಪಾ ವೈರಸ್ ವಿಕಸನಗೊಂಡರೆ, ಅದು ಕಾಡುಗಳನ್ನು ಬಿಟ್ಟು ಏಶಿಯಾದಲ್ಲೆಲ್ಲಾ ಹಾಗೂ ಜಗತ್ತಿನಲ್ಲೆಲ್ಲಾ ಹರಡಬಹುದೆಂಬ ಕಾಳಜಿಯಿದೆ. ಆದ್ದರಿಂದಲೇ ತಜ್ಞರು ಇದರ ತಳಪಾಯದಲ್ಲಿರುವ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಮಹತ್ವದ್ದೆಂದು ಹೇಳುತ್ತಾರೆ. ಎಕೋ ಹೆಲ್ತ್‍ನ ಅಧ್ಯಕ್ಷನೂ ರೋಗ ಪರಿಸರ ವಿಜ್ಞಾನಿಯೂ ಆದ ಪೀಟರ್ ಡಸ್ಸಾಕ್, ” ಹಿಂದಿನ 30-40 ವರ್ಷಗಳಲ್ಲಿ ಹೊರಬಂದ ಎಲ್ಲಾ ರೋಗಗಳೂ ವನ್ಯಪ್ರದೇಶಗಳನ್ನು ಆಕ್ರಮಿಸಿಕೊಂಡಿರುವುದರಿಂದ ಮತ್ತು ಜನವಿವರಣೆಗಳಲ್ಲಾದ ಬದಲಾವಣೆಗಳ ಪರಿಣಾಮದಿಂದಲೇ ಹೊರಬಂದಿವೆ” ಎನ್ನುತಾನೆ.

ರೋಗಾಣು ( ವೈರಸ್ )

ಹೊರಬರುತ್ತಿರುವ ಸೋಂಕು ರೋಗಗಳ ರೋಗಾಣು(ವೈರಸ್ ) ಗಳು ಒಂದೋ ಹೊಸ ರೀತಿಯ ರೋಗಾಣುಗಳು ಅಥವಾ ಫ್ಲೂ ರೋಗಾಣು ಪ್ರತಿ ವರ್ಷ ಮಾಡುವಂತೆ ಹಳೆಯವೇ ರೂಪಾಂತರ ಹೊಂದಿ ಆಗಿರುವ ನವೀನ “ನೊವೆಲ್” ರೋಗಾಣುಗಳು. ಉದಾಹರಣೆಗೆ ಏಡ್ಸ್ ರೋಗವು 1920ರಲ್ಲಿ, ವನ್ಯಜೀವಿಯ ಮಾಂಸಕ್ಕಾಗಿ ಬೇಟೆಯಾಡುವ ಬೇಟೆಗಾರರು ಚೀಂಪಾಂಜ಼ೀಗಳನ್ನು ಕೊಂದು ಅವುಗಳನ್ನು ಕಡಿದು ಹಾಕಿದುದರ ಫಲವಾಗಿ ಚಿಂಪಾಂಜಿಗಳಿಂದ ಮಾನವರಿಗೆ ವರ್ಗಾವಣೆಗೊಂಡಿತು.

ಖಾಯಿಲೆಗಳು ಯಾವಾಗಲೂ ಕಾಡುಗಳಿಂದ ವನ್ಯಜೀವಿಗಳಿಂದ ಹೊರಬಂದು ಮಾನವ ಜನಾಂಗಗಳ ಒಳಹೊಕ್ಕಿವೆ. ಪ್ಲೇಗ್ ಮತ್ತು ಮಲೇರಿಯಾ ಇದರ ಎರಡು ಉದಾಹರಣೆಗಳು. ಆದರೆ ಹೀಗಾಗುವುದು ಹಿಂದಿನ ಅರ್ಧ ಶತಮಾನದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ. ತಜ್ಞರ ಅಭಿಪ್ರಾಯದಂತೆ ಇದಕ್ಕೆ ಮುಖ್ಯವಾದ ಕಾರಣ, ಪ್ರಾಣಿಗಳ ಆವಾಸಸ್ಥಾನಗಳನ್ನು ಮಾನವರು ಹೆಚ್ಚು ಹೆಚ್ಚಾಗಿ ಆಕ್ರಮಿಸುವುದು, ಅದರಲ್ಲೂ ಖಾಯಿಲೆಗಳ ಅಪಾಯವಿರುವ ಭೂಮಿಯ ಪ್ರದೇಶಗಳಲ್ಲಿ ಅದರಲ್ಲೂ ಉಷ್ಣವಲಯದ ಪ್ರದೇಶಗಳಲ್ಲಿ. ಈಗಿನ ಆಧುನಿಕ ವಾಯುಯಾನಗಳಿಂದಾಗಿ ಮತ್ತು ವನ್ಯಜೀವಿ ಕಳ್ಳಸಾಗಣೆಗೆ ಇರುವ ಧೃಡವಾದ ಮಾರುಕಟ್ಟೆಯಿಂದಾಗಿ ದೊಡ್ಡಜನಸಂಖ್ಯೆಯಿರುವ ಕೇಂದ್ರಗಳಲ್ಲಿ ಒಂದು ರೋಗಸ್ಫೋಟ ಏಕಾಏಕಿಯಾಗಿ ಕಾಣಿಸುಕೊಳ್ಳುವ ಬೃಹತ್ತಾದ ಸಾಧ್ಯತೆಯಿದೆ.

ಮುಂದಿನ ಸರ್ವವ್ಯಾಪಿ ರೋಗಗಳ ಮುಂಸೂಚನೆ ಮತ್ತು ತಡೆಗಟ್ಟುವಿಕೆಗಳಿಗಾಗಿ ತಜ್ಞರು , ತಾವು ಯಾವುದನ್ನು ಅಖಂಡ ಪ್ರಕೃತಿಯ “ಸಂರಕ್ಷಣಾ ಪರಿಣಾಮಗಳು” ಎಂದು ಕರೆಯುತ್ತಾರೋ ಅದನ್ನು ಅರ್ಥಮಾಡಿಕೊಳ್ಳಬೇಕು ಎನ್ನುತ್ತಾರೆ. ಉದಾಹರಣೆಗೆ ಶೇಕಡಾ ನಾಲ್ಕರಷ್ಟು ಅಮಜ಼ೋನ್ ಕಾಡುಗಳಲ್ಲಿ ಅರಣ್ಯನಾಶ, ಮಲೇರಿಯಾ ರೋಗ ಸಂಭವವನ್ನು ಶೇಕಡಾ 50 ರಷ್ಟು ಹೆಚ್ಚಿಸಿತು. ಏಕೆಂದರೆ ಈ ರೋಗವನ್ನು ಹರಡುವ ಸೊಳ್ಳೆಗಳು ಅರಣ್ಯನಾಶವಾದ ಪ್ರದೇಶಗಳಲ್ಲಿರುವ ಬಿಸಿಲು ಮತ್ತು ನೀರಿನ ಸರಿಯಾದ ಪ್ರಮಾಣದ ಬೆರಕೆಯ ಸ್ಥಿತಿಯಲ್ಲಿ ಪ್ರವರ್ಧಿಸುತ್ತವೆ. ಅರಣ್ಯಗಳನ್ನು ತಪ್ಪಾದ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದು ಒಂದು ಪಂಡೊರಾ ಡಬ್ಬಿಯನ್ನು ತೆರೆದಂತೆಯೇ, ಕಂಡರಿಯದ ದುಶ್ಪರಿಣಾಮಗಳಿಗೆ ಎಡೆ ಮಾಡಿಕೊಡಬಹುದು. ಈ ರೀತಿಯಸಂಬಂಧಗಳನ್ನು ಹೊಸ ತಂಡಗಳು ಹೊರತರುತ್ತಿವೆ.ಸಾರ್ವಜನಿಕ ಆರೋಗ್ಯ ತಜ್ಞರುಗಳು ತಮ್ಮ ಮಾದರಿಗಳಲ್ಲಿ ಪರಿಸರವನ್ನೂ ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ ಸಧ್ಯದಲ್ಲಿ ಆಸ್ಟ್ರೇಲಿಯಾ ಬಾವಲಿಗಳನ್ನೂ ಮತ್ತು ಹೆಂಡ್ರಾ ವೈರಸ್ಸನ್ನೂ ಅರ್ಥ ಮಾಡಿಕೊಳ್ಳಲು ಒಂದು ಬಹು ಮಿಲಿಯನ್  ಗಳ ಪ್ರಯಾಸವನ್ನು ಪ್ರಕಟಿಸಿದೆ.

ಅಖಂಡ ಉಷ್ಣವಲಯ ಭೂದೃಶ್ಯಗಳ ಅತಿಕ್ರಮಣ ಮಾತ್ರವೇ ರೋಗಗಳಿಗೆ ಕಾರಣವಲ್ಲ. ವೆಸ್ಟ್ ನೈಲ್ ವೈರಸ್ ಆಫ್ರಿಕಾದಿಂದ ಯುನೈಟೆಡ್ ಸ್ಟೇಟ್ಸಿಗೆ ಬಂದು ಹರಡಿತು. ಏಕೆಂದರೆ, ಈ ರೋಗಾಣು ಅಲ್ಲಿನ ಹುಲ್ಲುಹಾಸುಗಳಲ್ಲಿ ಮತ್ತು ಹೊಲಗದ್ದೆಗಳಲ್ಲಿ ಪ್ರವೃದ್ಧಿಸುವ ರಾಬಿನ್ ಹಕ್ಕಿಯನ್ನು ಆತಿಥೇಯವಾಗಿ ಆರಿಸಿತು. ಈ ರೋಗವನ್ನು ಹರಡುವ ಸೊಳ್ಳೆಗಳಿಗೆ ರಾಬಿನ್ನುಗಳ ಮೇಲೆ ವಿಶೇಷವಾದ ಆಸ್ಥೆ. ಕ್ಯಾಲಿಫಾರ್ನಿಯ ವಿಶ್ವವಿದ್ಯಾಲಯ, ಸ್ಯಾಂಟಾ ಕ್ರೂಸ್ನ ಜೀವವಿಜ್ಞಾನಿ, ಮಾರ್ಮ್ ಕಲ್ಪ್ಯಾಟ್ರಿಕ್,” ಒಂದು ಜನಗಳ ಸುತ್ತಮುತ್ತ ಸುಖವಾಗಿ ವ್ಯವಹರಿಸುವ ಒಂದು ಜಾತಿಯ ಜೀವಿಯನ್ನು ಅನುಕೂಲಕರ ಆತಿಥೇಯವಾಗಿ ಆರಿಸಿಕೊಂಡಿದ್ದರಿಂದ ಈ ವೈರಸ್ಸಿನಿಂದಾಗುವ ಮಾನವ ಆರೋಗ್ಯದ ಮೇಲಿನ ಪರಿಣಾಮ ಮುಖ್ಯವಾಗಿದೆ”. ಎನ್ನುತ್ತಾರೆ. ವೆಸ್ಟ್ ನೈಲ್ ರೋಗದಲ್ಲಿ ರಾಬಿನ್ ವಹಿಸಿದ ಪ್ರಮುಖ ಪಾತ್ರದಿಂದಾಗೆ ಅದಕ್ಕೆ “ಸೂಪರ್ ಸ್ಪ್ರೆಡರ್ / ಸೂಪರ್ ಹರಡುಕಾರ ಎಂಬ ಹೆಸರಿದೆ.

“ಪೂರ್ವ ಕಡಲದಂಡೆಯ ಪೀಡೆ” ಎಂದು ಹೆಸರಾದ ಲೈಮ್ ರೋಗ ಖಚಿತವಾಗಿ ಪರಿಸರದ ಮೇಲೆ ಮಾನವನ ಮಾಡಿದ ಬದಲಾವಣೆಗಳ ಒಂದು ಫಲಿತಾಂಶ: ಒಂದಕ್ಕೊಂದು ಅಂಟಿಕೊಂಡಿದ್ದ ಅರಣ್ಯವನ್ನು ವಿಭಾಗಿಸಿದ್ದು ಮತ್ತು ಅದರ ವಿಸ್ತೀರ್ಣವನ್ನು ಕಡಿಮೆ ಮಾಡಿದ್ದು. ಅಭಿವೃದ್ಧಿಯಿಂದಾಗಿ ಪರಭಕ್ಷಕ ಪ್ರಾಣಿಗಳು ಕಣ್ಮರೆಯಾದವು. ತೋಳಗಳು, ನರಿಗಳು, ಗೂಬೆಗಳು ಮತ್ತು ಗಿಡುಗಗಳು. ಇದರಿಂದಾಗಿ ಬಿಳಿ ಕಾಲಿನ ಇಲಿಗಳ ಸಂಖ್ಯೆಯಲ್ಲಿ 5 ಪಟ್ಟು ಹೆಚ್ಚಳ ಕಂಡಿತು. ಈ ಇಲಿಗಳು, ಬಹುಶಃ ತಮ್ಮ ಅಶಕ್ತ ರೋಗನಿರೋಧಕ ಸ್ಥಿತಿಯ ಕಾರಣದಿಂದ ಲೈಮ್ ಬ್ಯಾಕ್ಟೀರಿಯಾದ ಒಂದು ಶ್ರೇಷ್ಠ ದಾಸ್ತಾನುಗಳು. ಅವು ತುಂಬಾ ಅಸಮರ್ಥ “ಗ್ರೂಮರ್”ಗಳೂ (ಅಂದರೆ ತಮ್ಮ ಮೈ ಮೇಲಿನ ಚರ್ಮ ಮತ್ತು ಕೂದಲನ್ನು ಬಾಯಿಂದ ತಿಕ್ಕಿ ತಿಕ್ಕಿ ಮಾಲೀಶು ಮಾಡಿಕೊಳ್ಳುವ ಪ್ರಾಣಿಗಳು.) ಒಪ್ಪೋಸಮ್ಮುಗಳು ಮತ್ತು ಬೂದು ಬಣ್ಣದ ಅಳಿಲುಗಳು ತಮ್ಮ ಮೈಗುಡಿಸುಕೊಳ್ಳುವಾಗ ಶೇಕಡಾ 90 ರಷ್ಟು ರೋಗ ಹರಡುವ ಉಣ್ಣೆ ಹುಳುಗಳ ಮರಿಹುಳಗಳನ್ನು ತೆಗೆದು ಹಾಕುತ್ತವೆ. ಆದರೆ ಇಲಿಗಳು ಅರ್ಧದಷ್ಟು ಹುಳಗಳನ್ನು ಮಾತ್ರಾ ತೆಗೆದುಹಾಕುತ್ತದೆ. ಆದ್ದರಿಂದ ಇಲಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಮರಿಹುಳುಗಳನ್ನು ತಯಾರುಮಾಡುತ್ತದೆ. ಹೀಗೆಂದು ಲೈಮ್ ರೋಗ ಸಂಶೋಧಕ ರಿಚರ್ಡ್ ಓಸ್ಟ್ಫೀಲ್ಡ್ ವಿವರಿಸುತ್ತಾರೆ.

“ನಾವು ಅರಣ್ಯಗಳನ್ನು ತುಂಡು ಮಾಡಿ ವಿಭಾಗಿಸುವುದು ಅಥವಾ ಪ್ರಾಣಿಗಳ ಆವಾಸಸ್ಥಾನಗಳನ್ನು ಹೊಲಗದ್ದೆಗಳಾಗಿ ಮಾರ್ಪಡಿಸುವುದು, ಇವೇ ಮುಂತಾದ ಜೀವವೈವಿಧ್ಯತೆಯು ಕ್ಷಯಿಸುವಂತೆ ಮಾಡುವ ಕಾರ್ಯಗಳನ್ನು ಒಂದು ಪರಿಸರ ವ್ಯವಸ್ಥೆಯಲ್ಲಿ ನಡೆಸಿದರೆ ನಾವು ಸಂರಕ್ಷಣೆಯ ಪಾತ್ರ ವಹಿಸುವ ಕೆಲವು ಜೀವಜಾತಿಗಳನ್ನು ನಿರ್ನಾಮ ಮಾಡುತ್ತೇವೆ.” ಹೀಗೆಂದು ಡಾ.ಓಸ್ಟ್ಫೀಲ್ಡ್ ನನಗೆ ತಿಳಿಸಿದರು.” ಕೆಲವು ಜೀವಜಾತಿಗಳು ದಾಸ್ತಾನುಕಾರರುಗಳು ಇನ್ನು ಕೆಲವು ಹೀಗೆ ಶೇಖರಿಸುವುದಿಲ್ಲ. ನಾವು ಇಂಥಹ ದಾಸ್ತಾನುಕಾರರಾಗಿ ಪಾತ್ರ ವಹಿಸುವವನ್ನು ಉತ್ತೇಜಿಸುತ್ತೇವೆ.

ಡಾ. ಓಸ್ತ್ಫಿಲ್ಡರು ಎರಡು ಹೊರಹೊಮ್ಮುತ್ತಿರುವ — ಬೇಬ್‍ಸಿಯೊಸಿಸ್ ಮತ್ತು ಅನಪ್ಲಾಸ್ಮೋಸಿಸ್ — ಮಾನವರ ಮೇಲೆ ಪರಿಣಾಮ ಬೀರುವ ಈ ರೋಗಾಣುಗಳನ್ನು ಅವರು ಅಧ್ಯಯನ ಮಾಡಿದ ಉಣ್ಣಿಗಳಲ್ಲಿ ಕಂಡಿದ್ದಾರೆ. ಇವುಗಳ ಹರಡುವಿಕೆಯ ಬಗ್ಗೆ ಅವರು ಅಪಾಯಸೂಚಕ ಎಚ್ಚರಿಕೆಯ ಧ್ವನಿಯನ್ನೆತ್ತಿದ್ದಾರೆ.

ಎಬೋಲಾ ವೈರಸ್ ನ ಹರಡುವಿಕೆ

ತಜ್ಞರ ನಿಪುಣರ ಅಭಿಪ್ರಾಯದಂತೆ ಮುಂದೆ ಬರಬಹುದಾದ ಮಾನವರ ರೋಗಸ್ಫೋಟನದ ಸಾಧ್ಯತೆಯನ್ನು ತಡೆಗಟ್ಟುವ ಅತ್ಯುತ್ತಮ ಮಾರ್ಗವೆಂದರೆ ” ವನ್ ಹೆಲ್ತ್ ಇನಿಶಿಯೇಟಿವ್”. ( ಏಕ ಆರೋಗ್ಯ ಉಪಕ್ರಮ). ಇದೊಂದು ಪ್ರಪಂಚದಾದ್ಯಂತದ ಯೋಜನೆ. ಈ ಯೋಜನೆ, 600 ರಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತಿತರ ವೃತ್ತಿನಿರತರನ್ನೊಳಗೊಂಡಿದೆ. ಇದು ಮಾನವರು, ಪ್ರಾಣಿಗಳು ಮತ್ತು ಪರಿಸರದ ಆರೋಗ್ಯ ಒಂದಕ್ಕೊಂದು ಬಿಡಿಸಲಾರದಂತೆ ಬೆಸೆದುಕೊಂಡಿದೆಯೆಂದೂ, ಇವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ನಿರ್ವಹಿಸಬೇಕೆಂದೂ ತನ್ನ ವಿಚಾರವನ್ನು ಮುಂದಿಡುತ್ತದೆ.

“ಇದು ಶುದ್ಧರೂಪದ ಅರಣ್ಯಗಳನ್ನು ಜನರಹಿತವಾಗಿ ಶುದ್ಧರೂಪದಲ್ಲೇ ಇಡುವುದು ಎಂದರ್ಥವಲ್ಲ” ಎಂದು ವನ್ಯಜೀವಿ ಸಂರಕ್ಷಣೆಗೆ ತಮ್ಮ ಕಾರ್ಯಗಳನ್ನು ಮುಡುಪಾಗಿಟ್ಟ ವಿಜ್ಞಾನಿಗಳ ಸಂಸ್ಥೆಯಾದ ಎಕೋ ಹೆಲ್ತ್‍ನಲ್ಲಿ ಕೆಲಸ ಮಾಡುತ್ತಿರುವ,  ಕೊಲಂಬಿಯಾ ವಿಶ್ವವಿದ್ಯಾಲಯದ ಮೈಲ್ಮಾನ್ ಸಾರ್ವಜನಿಕ ಆರೋಗ್ಯ ವಿದ್ಯಾಕೇಂದ್ರದ ರೋಗದ ಸೋಂಕು ಮತ್ತು ರೋಗ ನಿರೋಧಕತೆಯ ಕೇಂದ್ರದ, ಮಾಲಿಕ್ಯುಲಾರ್ ವೈರಸ್ ಶಾಸ್ತ್ರಜ್ಞ ಸೈಮನ್ ಆಂತೊನೀ ಹೇಳುತ್ತಾರೆ. ” ಹೀಗೆಂದರೆ ಸುಸ್ಥಿರ ಕೆಲಸಗಳನ್ನು ಹೇಗೆ ಮಾಡುವುದೆಂದು ಕಲಿಯುವುದು. ನಿಮಗೆ ರೋಗಗಳು ಹೊರಹೊಮ್ಮುವಿಕೆಯನ್ನು ಯಾವುದು ನಿರ್ಧರಿಸುತ್ತದೆ ಎನ್ನುವುದರ ಮೇಲೆ ಹಿಡಿತ ಸಿಕ್ಕರೆ ನಂತರ ಪರಿಸರವನ್ನು ಸುಸ್ಥಿರವಾಗುವಂತೆ ಮಾರ್ಪಾಡು ಮಾಡಲು ಕಲಿಯಬಹುದು.” ಎಂದೂ ಅವರು ತಿಳಿಸುತ್ತಾರೆ.

ಈ ಸಮಸ್ಯೆಯ ಹರವು ಅತಿ ದೊಡ್ಡದು ಹಾಗೂ ಸಂಕೀರ್ಣವಾದುದು. ವನ್ಯಜೀವಿಗಳ ಅಂದಾಜು ಮಾಡಿರುವ ಶೇಕಡಾ ಒಂದರಷ್ಟು ವೈರಸ್ಸುಗಳು ಮಾತ್ರಾ ನಮಗೆ ತಿಳಿದಿರುವ ವೈರಸ್ಸುಗಳು. ಮಾತೊಂದು ಅಂಶವೆಂದರೆ ವನ್ಯಜೀವಿಗಳ ರೋಗನಿರೋಧಕ ಶಾಸ್ತ್ರ ಇನ್ನೂ ತನ್ನ ಶೈಶವದಲ್ಲಿರುವ ವಿಜ್ಞಾನ. ಖಾಯಿಲೆಗಳ ಪರಿಸರವನ್ನು ಅಧ್ಯಯನ ಮಾಡುವ ಪೆನ್ಸಲ್ವೇನಿಯಾ ಸ್ಟೇಟ್ ವಿಶ್ವವಿದ್ಯಾಲಯದ ಜೀವಶಾಸ್ತ್ರಜ್ಞೆ ರೈನಾ .ಕೆ. ಪೌಲ್ರೈಟ್, ಹೆಂಡ್ರಾ ವೈರಸ್ಸಿನ ಬಾವಲಿಗಳಲ್ಲಿನ ರೋಗಸ್ಫೋಟಗಳು ಗ್ರಾಮೀಣ ಪ್ರದೇಶಗಳಲ್ಲಿ ಅಪರೂಪವೆಂದೂ ಆದರೆ ನಗರ ಹಾಗೂ ಉಪನಗರ ಪ್ರದೇಶಗಳಲ್ಲಿ ಅದು ಅತಿ ಹೆಚ್ಚಾಗಿ ಕಾಣಬರುವುದೆಂದೂ ಕಂಡುಹಿಡಿದಳು. ಅವಳು ಮುಂದಿಡುವ ಊಹಾವಿಚಾರದ ಪ್ರಕಾರ ನಗರ ಪ್ರದೇಶದ ಬಾವಲಿಗಳು ಒಂದೇಕಡೆ ಸ್ಥಗಿತವಾಗಿರುವುದು ಹೆಚ್ಚು. ಹಾಗಾಗಿ ಸೋಂಕನ್ನು ಕಡಿಮೆ ಪ್ರಮಾಣದಲ್ಲಿಡುತ್ತಿದ್ದ ವನ್ಯಪ್ರದೇಶದಲ್ಲಿ ಅದಕ್ಕೆ ಪದೇಪದೇ ದೊರೆಯುತ್ತಿದ್ದ ವೈರಸ್ಸಿನ ಸಂಪರ್ಕ ತಪ್ಪಿಹೋಗುತ್ತದೆ. ಅಂದರೆ ಹೆಚ್ಚಿನ ಬಾವಲಿಗಳು, ಅವು ಕಡಿಮೆ ಪೋಶಕಾಂಶಗಳನ್ನು ಪಡೆದ ಬಾವಲಿಯಾಗಿರಬಹುದು, ಅಥವಾ ತಮ್ಮ ಆವಾಸಸ್ಥಾನಗಳನ್ನು ಕಳೆದುಕೊಂಡ ಬಾವಲಿಗಳಾಗಿರಬಹುದು ಅಥವಾ ಇನ್ಯಾವುದೋ ಅಂಶದಿಂದಾಗಿರಬಹುದು ಸೋಂಕು ತಗುಲಿಸಿಕೊಂಡು ಹಿತ್ತಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈರಸ್ಸುಗಳನ್ನು ಉದುರಿಸುತ್ತವೆ.

ಮುಂದಿನ ಸರ್ವವ್ಯಾಪಿ ರೋಗದ ವಿಧಿ “ಪ್ರೇಡಿಕ್ಟ್”ನ ಕಾರ್ಯದ ಮೇಲೆ ನಿಂತಿರಬಹುದು. ಎಕೋ ಹೆಲ್ತ್ ಮತ್ತು ಅದರ ಸಹಭಾಗಿಗಳಾದ ಡೇವಿಸ್ಸಿನ ಕ್ಯಾಲಿಫಾರ್ನಿಯ ವಿಶ್ವವಿದ್ಯಾಲಯ, ವನ್ಯಜೀವಿ ಸಂರಕ್ಷಣಾ ಸಮಾಜ, ಸ್ಮಿತ್ಸೋನಿಯನ್ ಸಂಸ್ಥೆ ಮತ್ತು ಗ್ಲೋಬಲ್ ವೈರಲ್ ಫೋರ್‌ಕ್ಯಾಸ್ಟಿಂಗ್, ಇವೆಲ್ಲವೂ ಉಷ್ಣವಲಯದಾದ್ಯಂತ ವೈರಸ್ಸನ್ನು ಹೊತ್ತ ವನ್ಯಜೀವಿಗಳನ್ನು ಅಭ್ಯಸಿಸುತ್ತಾ ಒಂದು ಸಂಗ್ರಹವನ್ನು ಮಾಡುತ್ತಿದ್ದಾರೆ. ಮಾನವರಿಗೆ ಪರಿಣಾಮ ಬೀರುವ ರೋಗಗಳನ್ನು ಹೊರುವ ಹೆಚ್ಚಿನ ಸಾಧ್ಯತೆಯಿರುವ ವಾನರರು, ಇಲಿಗಳು ಮತ್ತು ಬಾವುಲಿಗಳನ್ನು ಕೇಂದ್ರವಾಗಿಟ್ಟುಕೊಂಡು ಹೆಚ್ಚಿನ ಕೆಲಸ ಸಾಗುತ್ತದೆ.

ಅತ್ಯಂತ ಮುಖ್ಯವಾಗಿ ಪ್ರೆಡಿಕ್ಟ್ ಸಂಶೋಧಕರು, ಯಾವ ಸ್ಥಳಗಳಲ್ಲಿ ಮಾರಕ ವೈರಸ್ಸುಗಳು ಇರುತ್ತವೆಯೋ ಮತ್ತು ಯಾವ ಅರಣ್ಯಭಾಗಗಳನ್ನು ಜನರು ಒಡೆದು ತೆಗೆಯುತ್ತಿದ್ದಾರೋ ಅಂಥಹ ಎರಡು ಪ್ರದೇಶಗಳ ನಡುವಿನ ಮೇಲ್ಮೈಯನ್ನು ಅವಲೋಕಿಸುತ್ತಿದ್ದಾರೆ. ಉದಾಹರಣೆಗೆ ಅಟ್ಲ್ಯಾಂಟಿಕ್ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವಿನ, ಆಂಡೀಸ್ ಪರ್ವತ ಶ್ರೇಣಿಯನ್ನು ಹಾದು ಬರುವ, ಪೆರು ಮತ್ತು ಬ್ರೆಜ಼ಿಲ್ ರಾಷ್ಟ್ರಗಳಲ್ಲಿ ಸಾಗುವ ಮಹಾ ಹೆದ್ದಾರಿ. ಎಕೋ ಹೆಲ್ತ್‍ನ ಅಧ್ಯಕ್ಷರಾದ ಡಾ. ಡಾಸ್ಸಕ್ ಹೀಗೆ ಹೇಳುತ್ತಾರೆ, ” ಅರಣ್ಯದೊಳಗೆ ಆಕ್ರಮಿಸುವ ಪ್ರದೇಶಗಳ ನಕ್ಷೆಯನ್ನು ಬರೆಯುವುದರಿಂದ ಮುಂದಿನ ರೋಗ ಎಲ್ಲಿ ಬರಬಹುದು ಎಂಬುದರ ಬಗ್ಗೆ ಮುಂಸೂಚನೆ ನೀಡುವುದು ಸಾಧ್ಯ. ನಾವು ಹಳ್ಳಿಗಳ ಅಂಚಿಗೆ ಹೋಗುತ್ತಿದ್ದೇವೆ. ನಾವು ಈಗಷ್ಟೇ ತೆರೆದುಕೊಂಡಿರುವ ಗಣಿಗಳಿಗೆ ಹೋಗುತ್ತಿದ್ದೇವೆ. ಎಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆಯೋ ಅಂಥಹ ಸ್ಥಳಗಳಿಗೆ ನಾವು ಹೋಗುತ್ತಿದ್ದೇವೆ. ಈ ವಲಯಗಳಲ್ಲಿ ವಾಸಿಸುತ್ತಿರುವ ಜನರೊಂದಿಗೆ ನಾವು ಸಂಭಾಷಿಸುತ್ತೇವೆ. ನಾವು ಅವರಿಗೆ ಹೀಗೆಂದು ಹೇಳುತ್ತೇವೆ , ” ನೀವು ಏನು ಮಾಡುತ್ತಿದ್ದೀರೋ ಅದು ಬಹಳ ಅಪಾಯಕಾರಿಯಾಗುವ ಸಾಧ್ಯತೆ ಹೊಂದಿದೆ.” ನಾವು ಜನರೊಂದಿಗೆ ಅವರು ವನ್ಯಜೀವಿಗಳನ್ನು ಕತ್ತರಿಸಿ ಅದರ ಮಾಂಸ ತಿನ್ನುವ ರೀತಿಯ ಬಗ್ಗೆ ಮಾತನಾಡಬಹುದು, ಅಥವಾ ಅವರು ತಮ್ಮ ಜಾನುವಾರುಗಳಿಗೆ ಬಾವುಲಿಗಳಿರುವ ಸ್ಥಳದಲ್ಲಿ ಕಟ್ಟುವ ಹಟ್ಟಿಗಳ ಬಗ್ಗೆ ಮಾತನಾಡಬಹುದು. ಬಾಂಗ್ಲಾದೇಶದಲ್ಲಿ ಹಲವಾರು ಬಾರಿ ನೀಪಾ ರೊಗಸ್ಫೋಟ ಆಗಿದೆ. ಅಲ್ಲಿ ಬಾವುಲಿಗಳು ಈಚಲ ಮರದ ನೀರಾ ಸಂಗ್ರಹಕ್ಕಾಗಿ ಜನರು ಕಟ್ಟಿದ್ದ ಮಡಕೆಗಳೊಳಗಿಂದ ಆ ರಸವನ್ನು ಕುಡಿಯಲು ಬರುತ್ತಿದ್ದುದರಿಂದ ಮತ್ತು ಅದನ್ನು ಆಮೇಲೆ ಜನರೂ ಕುಡಿಯುತ್ತಿದ್ದುದರಿಂದ ರೋಗದ ಸೋಂಕು ಹಬ್ಬಿತು ಎಂದು ರೋಗದ ಜಾಡು ಹಿಡಿಯಲಾಯಿತು. 8 ಸೆಂಟುಗಳಷ್ಟು ಬೆಲೆಬಾಳುವ ಬೊಂಬಿನ ಚಾಪೆಗಳನ್ನು ನೀರಾ ಸಂಗ್ರಹಿಸುವ ಮಡಕೆಯ ಮೇಲೆ ಮುಚ್ಚುವುದರಿಂದ ರೋಗದ ಮೂಲವನ್ನು ನಿರ್ಮೂಲ ಮಾಡಲಾಯಿತು.

ಎಕೋ ಹೆಲ್ತ್, ವಿಮಾನನಿಲ್ದಾಣಗಳಲ್ಲಿ ಸಾಮಾನುಗಳನ್ನೂ ಪ್ಯಾಕೇಜುಗಳನ್ನೂ ಸ್ಕ್ಯಾನ್ ಮೂಲಕ ಪರಿಶೀಲಿಸಿ ಮಾರಕ ವೈರಸ್ಸುಗಳಿರಬಹುದಾದ ಮಾಂಸ ಆಮದಾಗುತ್ತಿದೆಯೇ ಎಂದು ನೋಡುತ್ತದೆ. ಅದಲ್ಲದೆ “ಪೆಟ್ ವಾಚ್” (ಸಾಕು ಪ್ರಾಣಿಗಳ ವೀಕ್ಷಣೆ) ಎಂಬ ಇನ್ನೊಂದು ಯೋಜನೆಯಿದೆ. ಇದು ರೋಗಗಳಿರುವ ಸಾಧ್ಯತೆಯ ಕಾಡು ಪ್ರದೇಶಗಳಿಂದ ಪರದೇಶದ ವನ್ಯ ಜೀವಿಗಳನ್ನು ಹೊರತೆಗೆದು ಸಾಕುಪ್ರಾಣಿಗಳಂತೆ ಮಾರುಕಟ್ಟೆಗಳಲ್ಲಿ ಮಾರುವವರಿಗೆ ಮತ್ತು ಅದನ್ನು ಕೊಳ್ಳುವ ಗಿರಾಕಿಗಳಿಗೆ ಎಚ್ಚರಿಕೆ ನೀಡಲು ಈ ಯೋಜನೆಯಿದೆ.

ಒಟ್ಟಿನಲ್ಲಿ ಈ ಹಿಂದಿನ ಕೆಲವು ವರ್ಷಗಳಿಂದ, ಹೊರಬರುತ್ತಿರುವ ರೋಗಗಳ ಬಗ್ಗೆ ನಾವು ಪಡೆದುಕೊಂಡಿರುವ ಜ್ಞಾನ ನಮಗೆ ಇಂದು ರಾತ್ರಿಗಳಲ್ಲಿ ಸ್ವಲ್ಪ ಹೆಚ್ಚು ಶಾಂತಿಯಿಂದ ನಿದ್ರಿಸಲು ಅನುವು ಮಾಡಿಕೊಡುತ್ತಿದೆ.ಹೀಗೆಂದು ಎಕೋ ಹೆಲ್ತ್‍ನ ಪಶುವೈದ್ಯರಾದ ಎಪ್ಸ್ಟೀನ್ ಹೇಳುತ್ತಾರೆ.” ಮೊಟ್ಟಮೊದಲ ಬಾರಿಗೆ 20 ದೇಶಗಳು ಸಹಕಾರದಿಂದ ಒಂದು ಬೇಗ ಎಚ್ಚರಿಸುವ ವ್ಯವಸ್ಥೆಯನ್ನು ಹೊರಬರುತ್ತಿರುವ “ಜ಼ೂನೋಟಿಕ್” ರೋಗಸ್ಫೊಟಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.

ಕೃಪೆ : ನ್ಯೂಯಾರ್ಕ್ ಟೈಮ್ಸ್


ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಇವು ನನ್ನ ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .

2 comments to “ವೈರಸ್ ಮತ್ತು ಪರಿಸರ ವಿಜ್ಞಾನ”

ಪ್ರತಿಕ್ರಿಯಿಸಿ