“ಊರೆಂಬ ಉದರ” – ಆತ್ಮ (ಗ್ರಾಮ) ಕಥನ : ಕೃಷ್ಣಮೂರ್ತಿ ಹನೂರು ಬರಹ

ಅಕ್ಷರ ಪ್ರಕಾಶನ ಇತ್ತೀಚೆಗೆ ಹೊರತಂದಿರುವ ಪುಸ್ತಕ “ಊರೆಂಬ ಉದರ”. ಒಂದು ಸಂಕೇತಿ ಗ್ರಾಮದ ವೃತ್ತಾಂತ ಎಂಬ ಅಡಿಶೀರ್ಷಿಕೆ ಇರುವ ಈ ಪುಸ್ತಕ, ಒಂದು ಸಮುದಾಯ, ಗ್ರಾಮಕ್ಕೆ ಸಂಬಂಧಿಸಿದ ಬದುಕು, ಆಹಾರ, ಅಡುಗೆ, ರೀತಿ-ನೀತಿಗಳ ವಿವರಣೆಗಳನ್ನು ಒಂದು ಸಂಜೆಗಣ್ಣಿನ ಹಿನ್ನೋಟದಲ್ಲಿ ದಾಖಲಿಸುತ್ತದೆ. ಇದರ ಕುರಿತು ವಿಧ್ವಾಂಸ ಕೃಷ್ಣಮೂರ್ತಿ ಹನೂರರು ಬರೆದಿದ್ದಾರೆ.

ಶ್ರೀಮತಿ ಪ್ರಮೀಳಾ ಸ್ವಾಮಿ ಅವರು ಬರೆದ `ಊರೆಂಬ ಉದರ’ ಆತ್ಮಕಥನ ಅಥವ ಗ್ರಾಮ ಕಥನವನ್ನು ಹೆಗ್ಗೋಡಿನ ಅಕ್ಷರ ಪ್ರಕಾಶನ ಪ್ರಕಟಿಸಿದೆ. ಪ್ರಮೀಳಾ ಅವರ ಜನ್ಮಸ್ಥಳ ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕು, ಕುಪ್ಪಹಳ್ಳಿ. ಈ ಗ್ರಾಮದ ಬಗ್ಗೆ ಬರೆಯುವಾಗ ತಮ್ಮ ಊರು ಹೇಮಗಿರಿ ಇಲ್ಲವೇ ಬಂಡೀಹೊಳೆ ಸಮೀಪವೇ ಇದೆಯೆಂದು ಹೇಳಿಕೊಳ್ಳುತ್ತಾರೆ. ಲೇಖಕಿಯ ತಂದೆಯವರು ಮತ್ತು ಬಂಡೀಹೊಳೆಯ ಅರ್ಚಕ ರಂಗಸ್ವಾಮಿ ಅವರು ಸ್ನೇಹಿತರಾಗಿದ್ದರಂತೆ. ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ಕೆ.ಆರ್.ಪೇಟೆ ಸನಿಹದ ಬಂಡೀಹೊಳೆಯ ನಿವಾಸಿ ಅರ್ಚಕ ರಂಗಸ್ವಾಮಿ ಅವರ ಹೆಸರನ್ನು ಉಲ್ಲೇಖಿಸದೆ ಮುಂದೆ ಸರಿಯುವಂತಿಲ್ಲ.

ಅರ್ಚಕ ಬಿ.ರಂಗಸ್ವಾಮಿ ಅವರು ರಚಿಸಿದ `ಹುಟ್ಟಿದ ಹಳ್ಳಿ’ ಗ್ರಂಥವು 1940ರ ದಶಕದಲ್ಲಿ ಪ್ರಕಟವಾದ ಕನ್ನಡ ಜನಪದದ ಮೊದಲ ಗ್ರಂಥ. ಉತ್ತರ ಕರ್ನಾಟಕದಲ್ಲಿ ಬಂದ ಹಲಸಂಗಿ ಸಹೋದರರ `ಗರತಿಯ ಹಾಡು’ ಕನ್ನಡ ಜನಪದದ ಮೊದಲ ಗೀತ ಸಂಕಲನವಾದರೆ ರಂಗಸ್ವಾಮಿಯವರ ಹುಟ್ಟಿದ ಹಳ್ಳಿ ಗದ್ಯ ಗ್ರಂಥ, ದಕ್ಷಿಣ ಕರ್ನಾಟಕದ ಮೊದಲ ಜನಪದ ಕೃತಿ ಎನಿಸಿಕೊಂಡಿದೆ. ಹೀಗೆ ಬಂಡೀಹೊಳೆಯ ಸಮೀಪದ ಕುಪ್ಪಹಳ್ಳಿಯಲ್ಲಿ ಹುಟ್ಟಿಬಂದ ಪ್ರಮೀಳಾಸ್ವಾಮಿ ಅವರು ತಮ್ಮ ಸುತ್ತಿನಲ್ಲಿ ಬಂದ ಜನಪದ ಗ್ರಂಥದಿಂದ ಮೂರ್ನಾಲ್ಕು ಗೀತೆಗಳನ್ನು ಅರ್ಚಕ ರಂಗಸ್ವಾಮಿ ಅವರನ್ನು ನೆನೆಯುತ್ತ ಉಲ್ಲೇಖಿಸುತ್ತಾರೆ. ಇದು ಸೂಕ್ತ, ಯಾಕೆಂದರೆ ಯಾವುದೇ ಒಂದು ಜನಪದ ಗೀತೆ, ಕಥೆ, ಗಾದೆ ಅದು ಆ ಗ್ರಾಮಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಬಂಡೀಹೊಳೆಯ ಜನಪದ ಕುಪ್ಪಹಳ್ಳಿಯದು ಆಗಿರುತ್ತದೆ. ಅಷ್ಟೇ ಅಲ್ಲ ಪ್ರಮೀಳಾ ಸ್ವಾಮಿ ಅವರು ತಾಯಿಯ ಅಂತರಂಗದ ಹಾಡೋ, ಕಥೆಯೋ ಆಗಿರಲಿಕ್ಕೂ ಸಾಕು. ಈ ಅರ್ಥದಲ್ಲಿಯೇ 1940ರ ದಶಕದಲ್ಲಿ ಬಂದ ಹುಟ್ಟಿದ ಹಳ್ಳಿ ಗ್ರಂಥ ಯಾವ್ಯಾವ ನೆನಪುಗಳನ್ನು, ಹಾಡು, ಕಥೆಗಳನ್ನು ಮತ್ತೆ ಆ ಪರಿಸರದ ಬದುಕಿನ ಕ್ರಮವನ್ನು ಓದುಗರ ನೆನಪಿಗೆ ತಂದುಕೊಡುತ್ತದೋ ಅದೇ ಕ್ರಮದಲ್ಲಿ ಅದರ ಮುಂದಿನ ದಶಕಗಳ ಆ ಸುತ್ತಿನ ಗ್ರಾಮ ವಿದ್ಯಮಾನಗಳನ್ನು ಊರೆಂಬ ಉದರ ದಾಖಲಿಸುತ್ತದೆ.

ಅರ್ಚಕ ರಂಗಸ್ವಾಮಿ ಅವರ ಕೃತಿಯ ಬರಹ ಊರ ವಿದ್ಯಮಾನ ಮತ್ತು ಇನ್ನಿತರ ಜನಪದ ನಿತ್ಯ ಬದುಕಿನ ಬಹಿರಂಗ ಸಂಗತಿಗಳಾದರೆ ಪ್ರಮೀಳಾ ಸ್ವಾಮಿ ಅವರ ಆತ್ಮಕಥನ ಹೇಮಗಿರಿ ಸುತ್ತಿನ ಮಹಿಳಾ ಲೋಕದ ಅಂತರಂಗ ಸಂಗತಿಗಳನ್ನು ಈ ಲೋಕದ ಹೆಣ್ಣು ಮಕ್ಕಳ ರಂಗಶಾಲೆ ಎಂಬ ಅಡುಗೆ ಮನೆಯಿಂದ ತೊಡಗಿ ಅಲ್ಲಿಂದಲೇ ವಿಸ್ತರಿಸಿಕೊಳ್ಳುತ್ತದೆ. ಹಾಗೆಂದು ಇದು ಪರಿಣಾಮದಲ್ಲಿ ಮಹಿಳಾವಾದಿ ಬರಹವಾಗಿ ಮುಕ್ತಾಯವಾಗುವುದಿಲ್ಲ. ಈ ಕಾರಣಕ್ಕಾಗಿ ಕುಪ್ಪಹಳ್ಳಿ ಮತ್ತು ಬಂಡೀಹೊಳೆ ಸುತ್ತಿನ ಈ ಜೀವನ ಕಥನ ಸಾಹಿತ್ಯಪ್ರಿಯರಿಗೆ, ಜನಪದ ಅಧ್ಯಯನಾಸಕ್ತರಿಗೆ ಮತ್ತು ಮಹಿಳಾ ಸಂಕಥನಕಾರರಿಗೆ ಮುಖ್ಯವಾಗುತ್ತದೆ.

ನವೋದಯ ಸಂದರ್ಭಕ್ಕೆ ಬಂದ ಅನೇಕ ಮಹಿಳಾ ಲೇಖಕಿಯರು ಪುರುಷ ವಿದ್ವಾಂಸರಂತೆ ಕನ್ನಡ ಸಾಹಿತ್ಯ ಕ್ಷೇತ್ರದ ಇನ್ನಿತರೇ ಸಂಶೋಧನೆ, ಸಂಪಾದನೆ, ಕ್ಷೇತ್ರ ಕಾರ್ಯದಂಥ ಅಧ್ಯಯನ ಪ್ರಕಾರಗಳಿಗೆ ಕೈ ಹಾಕದಿದ್ದರೂ ಕಥೆ ಮತ್ತು ಕಾದಂಬರಿ ಕ್ಷೇತ್ರದಲ್ಲಿ ಸಮರ್ಥವಾಗಿಯೇ ತೊಡಗಿಸಿಕೊಂಡಿದ್ದರು. ಆದರೆ ಆತ್ಮಕಥನಗಳನ್ನು ಬರೆದದ್ದು ಕಡಿಮೆ. ಹೆಚ್ಚೆಂದರೆ ಅವರ ಅಂತರಂಗ ಸಂಗತಿಗಳು ಕಾದಂಬರಿಗಳಲ್ಲಿ ಮುಸುಕು ಹೊದ್ದು ಹೊರಬರುತ್ತಿದ್ದವು. ಆದರೆ ಇತ್ತೀಚಿನ ದಶಕಗಳಲ್ಲಿ ಅದರಲ್ಲೂ ನವ್ಯ, ಬಂಡಾಯದ ನಂತರ ಮಹಿಳಾ ಲೇಖಕಿಯರು ತಂತಮ್ಮ ಆತ್ಮಕಥನಗಳನ್ನು ಬರೆಯತೊಡಗಿದ್ದಾರೆ. ಅಲ್ಲಿ ಪುರುಷ ಲೇಖಕರು ಕೂಡ ಹೇಳಲಾಗದ, ವಿವರಿಸಲಾಗದ ಕಥನಸಂಗತಿಗಳನ್ನು ಹೊರಗೆಡವುತ್ತಿದ್ದಾರೆ. ಅದನ್ನೀಗ ಪುರುಷ ಜಗತ್ತು ಸಾವಧಾನವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಇದೀಗ ಪ್ರಮೀಳಾ ಸ್ವಾಮಿ ಅವರು ಪ್ರಕಟಿಸಿರುವ ಆತ್ಮಕಥನವನ್ನು ಅವಲೋಕಿಸುವ ಅಗತ್ಯವಿರುತ್ತದೆ.

ಊರೆಂಬ ಉದರದ ಬರವಣಿಗೆ ಲೇಖಕಿಗೆ ಸ್ವಮರುಕದ ಬರಹವು ಅಲ್ಲ, ಹೆಣ್ಣಾಗಿ ಹುಟ್ಟಿದ್ದರ ಚಿಂತೆಯೂ ಅಲ್ಲ, ಪುರುಷ ವಿರೋಧ ಸಂಗತಿಯೂ ಆಗಿಲ್ಲ. ಅದರ ಬದಲಾಗಿ ಪ್ರಮೀಳಾ ಅವರಿಗೂ ಅವರನ್ನು ಹೆತ್ತ ತಾಯಿಯವರಿಗೂ ಒಟ್ಟು ಈ ಜೀವನ ನಡೆಸುವುದರ ಬಗೆಗೇ ಅಪಾರ ಪ್ರೀತಿ, ಕಾಳಜಿ ಇದ್ದು, ಅದು ಕೃತಿಯ ಪ್ರತಿ ವಾಕ್ಯದಲ್ಲೂ ಎದ್ದು ಕಾಣಿಸುತ್ತದೆ. ಹಾಗಾದರೆ ಕೃತಿಯ ಮುಖ್ಯಪಾತ್ರ ಪ್ರಮೀಳಾ ಸ್ವಾಮಿ ಅವರೇ, ತಾಯಿ ಸುಂದರಮ್ಮನವರೇ, ತಂದೆ ವೆಂಕಟಸುಬ್ಬಯ್ಯನವರೇ ಅಂದರೆ ಹಾಗೇನೂ ಆಗದೆ ಒಟ್ಟು ಕುಪ್ಪಳ್ಳಿ ಗ್ರಾಮವೇ, ಅದರ ಸನಿಹ ಹರಿಯುವ ಹೇಮಾವತಿಯೇ ಮುಖ್ಯಪಾತ್ರ ವಹಿಸುವಂತೆ ತೋರುತ್ತದೆ. ಒಮ್ಮೊಮ್ಮೆ ಇದೂ ಅಲ್ಲ, ಪ್ರಮೀಳಾ ಸ್ವಾಮಿ ಅವರ ತಾಯಿ ನಿತ್ಯವೂ ಸಂಜೆ ಹಚ್ಚುವ ಬುಡ್ಡಿಯ ಬೆಳಕು ಅಥವ ಒಲೆಯ ಬೆಂಕಿ ಉರಿಯೇ ಅಂದರೆ ಅದು ಕೂಡ ಕೃತಿಯ ಮುಖ್ಯಸಂಗತಿಯೆಂತಲೇ ಅನಿಸುತ್ತದೆ. ಇದೆಲ್ಲದರೊಂದಿಗೆ ಹೇಮಾವತಿ ಹೊಳೆಯ ಪ್ರವಾಹದ ಅಬ್ಬರದಲ್ಲೂ, ರೈತರ ಬದುಕಿನ ಉದ್ದಾರಕ್ಕೆಂದೇ ಗುಡುಗು ಸಿಡಿಲ ಸಹಿತ ಸುರಿವ ಮಳೆಯಲ್ಲೂ ಓದುಗರು ನೆನೆಯುವಂತೆ ವಿವರಗಳು ಇವೆ. ಹೀಗೆ ಕೃತಿಯ ಕಥನವು ಒಂದಕ್ಕೊಂದು ಹೆಣಿಗೆಗೊಳ್ಳುತ್ತಾ ಊರ ಹೊರಗಿನ ವಿವರಗಳಿಂದ ಮನೆಯ ಒಳಗೆ ಬರುತ್ತದೆ. ಹಾಗೆಯೇ ಅಡಿಗೆ ಮನೆಗೂ ಪ್ರವೇಶಿಸುತ್ತದೆ.

ಲೋಕದ ನಿತ್ಯ ವ್ಯವಹಾರಗಳಲ್ಲಿ ಮನೆಮನೆಗಳಲ್ಲಿ ತುಂಬಿರುವವರ ಉದರಗಳನ್ನು ಪೊರೆಯುವ ಅಡಿಗೆ ಮನೆಗಳಲ್ಲಿ ನಿತ್ಯ ಬೇಯುವ ಪಾಕ ಪದಾರ್ಥ ಹಲವು ಬಗೆಯದು. ಉಪ್ಪು, ಹುಳಿ ಬೆರೆತು ಕುದಿಯುವ ಸಾರಿನಿಂದ, ಸುವಾಸನೆ ಬೀರಬಲ್ಲ ಎಲ್ಲ ಥರದ ಸಿಹಿಗಳ ತಯಾರಿಯ ವರೆಗೆ ವಿವರಗಳು ಪ್ರಮೀಳಾ ಅವರ ಬರಹದಲ್ಲಿ ಅದರ ಇನ್ನಿತರ ವ್ಯಂಜನ ವಿವರಗಳೊಂದಿಗೆ ನಿರೂಪಣೆಗೊಳ್ಳುತ್ತಾ ಹೋಗುತ್ತದೆ. ಲೇಖಕಿ ಅಡುಗೆ ಮನೆಯನ್ನು ಹಾಗೆಂದು ಹೆಸರಿಸದೆ ಅಡುಗೆಶಾಲೆ ಎಂದು ಕರೆದಿರುವುದನ್ನು ಗಮನಿಸಬೇಕು. ಪುರುಷರು ಪ್ರವೇಶ ಮಾಡದ, ಅವರು ಎಂದಿಗೂ ತಾತ್ಸಾರದಿಂದಲೇ ನೋಡುವ ಸ್ಥಳ ಅದು. ಆದರೆ ಮನೆಯ ಮಕ್ಕಳಾದಿಯಾಗಿ ಆಚೆಯ, ಈಚೆಯ ಎಲ್ಲ ಪುರುಷರನ್ನು ಪೊರೆಯುವ ರಂಗಶಾಲೆ ಆ ಅಡಿಗೆ ಮನೆಯೇ!

ಪುಸ್ತಕದಲ್ಲಿ ಬರುವ ಜೀವನ ವಿವರಗಳೊಂದಿಗೆ ಬಗೆಬಗೆಯ ಅಡಿಗೆ ತಯಾರಿ ಸಂಗತಿಗಳು ಸೇರಿಕೊಂಡಿವೆ. ಆದರೆ, ಆ ರುಚಿಕಟ್ಟು ಅಡುಗೆಯ ವಿವರಗಳು ಪಾಕಶಾಸ್ತ್ರದ ಕೈಪಿಡಿಯಾಗಿಲ್ಲ. ನಿತ್ಯವೂ ಪುರುಷರನ್ನು ತಣಿಸುವ, ಮುನ್ನಡೆಸುವ ಮೂಲ ಯಜ್ಞಶಾಲೆಯ ಉತ್ಪನ್ನಗಳಾಗಿ, ಅನ್ನಬ್ರಹ್ಮ ಸ್ವರೂಪವಾಗಿ ನಿರೂಪಣೆಗೊಂಡಿವೆ. ಇಂಥ ಯಜ್ಞಶಾಲೆಯ ನಿತ್ಯ ನಿರಂತರ ಕಾಯಕಜೀವಿ ತಾಯಂದಿರಿಗೆ ಅದು ಎಂದಾದರೂ ಬೇಸರ ತರಿಸಿವೆಯೇ ಎಂದರೆ, ಅಂಥ ಸುಳಿವು ಪುಸ್ತಕದಲ್ಲಿ ದೊರೆಯುವುದಿಲ್ಲ. ಉದರತೃಪ್ತಿ ಒಂದು ಹೊತ್ತು ತಪ್ಪಿದರೂ ತಮ್ಮ ಅಂತರಂಗ ಸಂತೋಷಕ್ಕೆ ಭಂಗವಾಗಿಬಿಡುವಂತೆ ಇನ್ನಷ್ಟು ಚಟುವಟಿಕೆಯಲ್ಲಿ ತೊಡಗಿಬಿಡುವ ಹೆಣ್ಣು ಮಕ್ಕಳ ಸಮೂಹದ ವಿವರ ಇಲ್ಲಿ ಕಾಣಿಸಿಕೊಳ್ಳುತ್ತದೆ. ಇಷ್ಟಾಗಿ ಈ ಹೆಣ್ಣು ಮಕ್ಕಳು ಸಕಲ ಸಂಪತ್ತಿನಿಂದ ಕೂಡಿದ್ದವರೇ ಎಂದರೆ ಹಾಗೇನೂ ಅನ್ನಿಸುವುದಿಲ್ಲ.

ಕೃತಿಯ ಆರಂಭಕ್ಕೆ ಮುನ್ನುಡಿಯಂತಿರುವ `ಸೂಪ ಶಾಸ್ತ್ರದ ಸುತ್ತಾ’ ಬರೆಹದಲ್ಲಿ ದೀಪಾ ಗಣೇಶ್ ಅವರು ಕಾಣಿಸಿರುವ ಮಾತೊಂದು ಹೀಗಿದೆ- ‘ದೇವರ ಜೊತೆಯಾಗಲೀ, ಹಬ್ಬದ ಜೊತೆಯಾಗಲೀ ಪ್ರೀತಿಯೋ, ಭಕ್ತಿಯೋ ಹುಟ್ಟಬೇಕಾದರೆ ಸಂಪ್ರದಾಯವೆಂಬ ಸರಪಳಿಯಲ್ಲಿ ಸಿಲುಕಿ ಅದರೊಳಗೆ ಅರ್ಥ ಹುಡುಕಿಕೊಳ್ಳುವುದೊಂದೇ ದಾರಿಯಾಗಿತ್ತು. ಕಾಣದ್ದನ್ನು ಕಂಡ ಹಾಗೆಯೂ ಅಥವ ಕಂಡದ್ದನ್ನು ಕಾಣದ ಹಾಗೆಯೂ ಭವಿಸಿ ಭಾವಿಸಬೇಕಿತ್ತು’ ಎಂದಿದ್ದಾರೆ. ಇದೇ ಹೆಣ್ಣು ಮಕ್ಕಳ ಭರವಸೆಯ ಬೆಳಕು. ತಾವು ಮಾಡುತ್ತಿರುವುದು ದೈವ ಮೆಚ್ಚಲಿಕ್ಕೆ ಎಂಬ ತಿಳುವಳಿಕೆ; ಅಂದರೆ ಕಾಣದಿರುವ ದೈವವನ್ನು ನಿರಂತರ ಕಾಯಕದ ಆರಾಧನೆಯ ಮುಖೇನ ಮೆಚ್ಚಿಸುವ ಅದಮ್ಯ ಉತ್ಸಾಹ. ಹಾಗಾಗಿ ತಾವು ನಿರ್ಮಿಸಿ ಅಲಂಕರಿಸುವ ಗೊಂಬೆಗಳಲ್ಲಿ ದೈವವು ಅವತರಿಸಿಬಿಟ್ಟಂತೆ ಕಾಣುವುದು. ಈ ಬಗೆಯ ಭಾವ ತುಮುಲವು ಕೃತಿಯ ಉದ್ದಕ್ಕೂ ಲೌಕಿಕ ಅಲೌಕಿಕ ನೆಲೆಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತ ಹೋಗುತ್ತದೆ. ಈ ಆವರ್ತನದಲ್ಲಿಯೇ ಅದಕ್ಕನುಗುಣವಾಗಿ ಅವರೇ ಹಾಡಿಕೊಳ್ಳುವ ಪದಗಳು ಸೃಷ್ಟಿಯಾಗುತ್ತವೆ. ಈ ಹಾಡುಗಳೊಂದಿಗೆ ಊರ ನಡುವೆ ಬರುವ ಜನಪದ ಕಲೆಗಳು ಅನಾವರಣಗೊಳ್ಳುತ್ತವೆ.

ರಾತ್ರಿಯೆಲ್ಲಾ ಗೊಂಬೆಗಳನ್ನು ಕುಣಿಸಿ ಜನಸಮೂಹವನ್ನು ಪುರಾಣ ಕಥನ ಪ್ರಪಂಚದಲ್ಲಿ ಮುಳುಗಿಸಿದ ಜನಪದ ಕಲಾವಿದರು ಮತ್ತೆ ಬೆಳಗ್ಗೆ ಊರಾಚೆಯ ಬಯಲಲ್ಲಿ ತಮ್ಮ ಗುಡಾರದಡಿಯಲ್ಲಿ ಮೂರು ಕಲ್ಲು ಹೂಡಿ, ಅನ್ನ ಬೇಯಿಸುವ, ಮುದ್ದೆ ತಿರಿಯುವ ಗೊಂಬೆ ರಾಮರು ಈ ಕಥನದೊಳಗೆ ಸೇರಿಕೊಳ್ಳುತ್ತಾರೆ. ಹಗಲು ಎಲ್ಲರದು ಈ ಲೋಕ. ರಾತ್ರಿ ಎಲ್ಲರದು ಕಲ್ಪನಾ ಜಗತ್ತಿನ ದೀರ್ಘ ಪ್ರಯಾಣ.

ಕುಪ್ಪಹಳ್ಳಿಯ ಜನಸಮುದಾಯ, ಹೇಮಾವತಿ ಹೊಳೆ ಮತ್ತು ಧಾರಾಕಾರ ಮಳೆ, ಅದು ತಂದೊಡ್ಡುತ್ತಿದ್ದ ಸಂಕಷ್ಟಗಳು ಇದೆಲ್ಲವನ್ನು ಸೇರಿಸಿ ಒಂದನ್ನೊಂದು ಪೊಣಿಸಿಕೊಂಡು ಹೋಗುವ ಈ ಕಥನ ಕೇವಲ ನೆನಪುಗಳ ಹಳಹಳಿಕೆಯಾಗಿಲ್ಲ. ಲೇಖಕಿ ಹೇಳುವ ಎಲ್ಲ ಸಂಗತಿಗಳೂ ಈಗಲೂ ಅದೇ ಜಾಗದಲ್ಲಿ ಜೀವಂತವಾಗಿರುವಂತೆ ಭಾಸವಾಗುತ್ತದೆ. ಪ್ರಮೀಳಾಸ್ವಾಮಿ ಅವರು ತಮ್ಮ ಊರ ದರ್ಶನಕ್ಕಾಗಿ ಬೆಂಗಳೂರಿನಿಂದ ಹೊರಟು ಗ್ರಾಮ ಹತ್ತಿರವಾಗುತ್ತಿದ್ದಂತೆ ಊರ ಮುಂದಣ ಹುಣಸೇಮರ ಇಲ್ಲೇ, ಇಲ್ಲೇ, ಅದೇ ಊರ ಅಗಸೆಯ ಬಾಗಿಲು ಎಂಬ ಉತ್ಸಾಹ ತೋರುತ್ತ ಗ್ರಾಮದೊಳಗೆ ಪ್ರವೇಶಿಸಿ ಅಂತರಂಗಕ್ಕೆ ತಂದುಕೊಳ್ಳುವ ವಿವರಗಳೆಲ್ಲ ಹೂವಿನ ಸರದಂತೆ ಬಿಚ್ಚಿಕೊಳ್ಳುತ್ತವೆ.

ಹೇಮಾವತಿ ಹೊಳೆ: (ಚಿತ್ರಕೃಪೆ: ನಿಲುಮೆ)

ಎಷ್ಟೋ ದಿನಗಳ ನಂತರ ಹುಟ್ಟಿದ ಹಳ್ಳಿಗೆ ಭೇಟಿ ಕೊಟ್ಟಲ್ಲಿ ಎದುರು ಕಂಡ ಸತ್ಯಪ್ಪ ಮೇಷ್ಟ್ರ ಕೈಗೆ ಹಣ್ಣಿನ ಚೀಲ ಕೊಟ್ಟರೆ ಅದು ಕೆಳಗೆ ಬಿದ್ದುಹೋಯಿತು! ಪ್ರಮೀಳಾ ಅವರಿಗೆ ಸ್ಲೇಟು ಹಿಡಿಸಿ ಅಕ್ಷರ ತಿದ್ದಿಸಿದ ಸತ್ಯಪ್ಪ ಮೇಷ್ಟ್ರಿಗೆ ಶಿಷ್ಯೆ ಕೊಟ್ಟ ಹಣ್ಣಿನ ಚೀಲವನ್ನು ಕೈಯಲ್ಲಿ ಹಿಡಿಯುವ ಶಕ್ತಿಯೂ ಉಳಿದಿಲ್ಲ. ಕಾಲ ಸರಿದಂತೆ ಜೀವ ಜಗತ್ತು ಹಣ್ಣಾಗಿ ಉದುರದೆ ನಿರ್ವಾಹವಿಲ್ಲ. ಅರ್ಧ ಪುಟದ ಸತ್ಯಪ್ಪ ಮೇಷ್ಟ್ರ ಈ ಬರೆಹ ಒಂದು ಇಡೀ ಕಾದಂಬರಿ ಹೇಳಬಹುದಾದ ನೆನಪಿನಂತೆ ತೋರುತ್ತದೆ. ಈ ಘಟನೆಯೊಳಗೆ ಮಿಳಿತಗೊಂಡ ಪ್ರೀತಿ, ಅಲ್ಲೇ ಹುಟ್ಟುವ ಮರುಕ, ಕರುಣೆ ಎಲ್ಲ ಭಾವಗಳನ್ನು ಒಂದೇ ಘಳಿಗೆಯಲ್ಲಿ ಅದೊಂದೇ ಪ್ಯಾರಾ ಸೃಷ್ಟಿಸಿಬಿಡುತ್ತದೆ. ಅಷ್ಟೇ ಅಲ್ಲ, ಹೇಮಾವತಿ ಹೊಳೆಯ ಪ್ರವಾಹದಲ್ಲಿ ಸಿಲುಕಿದ ಸುಂದರಮ್ಮ ಮತ್ತು ಪ್ರಮೀಳಾ ಅವರನ್ನು ಇದ್ದಕ್ಕಿದ್ದಂತೆ ದೇವಬಾಲಕನಂತೆ ಪ್ರತ್ಯಕ್ಷನಾದ ಅನ್ವರ್ ರಕ್ಷಿಸುವುದಲ್ಲದೆ, ನದಿಯಲ್ಲಿ ಮುಳುಗಿದ ದೇವರ ಪಾತ್ರೆಗಳನ್ನು ಹುಡುಕಿಕೊಡುತ್ತಾನೆ. ಈ ಪರಿಯ ನೆನಪಿನ ತೇರು ಕುಪ್ಪಳ್ಳಿಯ ತೇರು ಮಾತ್ರವಲ್ಲ ಅದು ಎಲ್ಲ ಊರಿನ ತೇರು. ಈ ಕಾರಣದಿಂದ ಕೃತಿಯನ್ನು ಓದುತ್ತಾ ಹೋಗುವಲ್ಲಿ ವಿವರಗಳೆಲ್ಲ ನಮ್ಮ ಊರಿನದು ಮಾತ್ರವಲ್ಲದೆ ಅಂತರಂಗದಲ್ಲಿ ಹುದುಗಿದ ಭಾವಗಳೇ ಆಗಿಬಿಡುತ್ತ `ಯಲಾ ಇದು ನಮ್ಮ ಗ್ರಾಮ ಸುತ್ತಿನ ಬದುಕೂ ಆಗಿತ್ತಲ್ಲ’ ಅಂದರೆ ಅದನ್ನು ಒಪ್ಪಿಕೊಳ್ಳದೆ ಬೇರೆ ದಾರಿ ಇಲ್ಲ.

ಲೇಖಕನ ತೀರಾ ವೈಯಕ್ತಿಕವೆನಿಸುವ ಸಂಗತಿಗಳು ಸಾರ್ವತ್ರಿಕವಾಗುವಲ್ಲಿಯೇ ಯಾವುದೇ ಬರೆಹ ಶ್ರೇಷ್ಠವಾಗುವುದು. ಅಡುಗೆಮನೆ ಪರಿಕರಗಳಿಂದಲೇ ಸಂಕಲನಗೊಳ್ಳುತ್ತ ಹೋಗುವ ಈ ಭಾವ ಸರಪಳಿಯು ಎಲ್ಲಿಯೂ ಬಿಡಿಸಿಕೊಳ್ಳುವುದೇ ಇಲ್ಲ. ಕಲೆಯ ಗುಟ್ಟು ಅಂದರೆ ಯಾವ್ಯಾವುದೋ ಸಂಗತಿಗಳ ವ್ಯವಸ್ಥಿತ ಸಂಕಲನ! ಇದನ್ನು ಎಲ್ಲ ಮಹತ್ವದ ಲೇಖಕರು ಒಪ್ಪಿಕೊಂಡಿದ್ದಾರೆ. ಇಂಥ ವೇಳೆ ಪ್ರಮೀಳಾ ಸ್ವಾಮಿ ಅವರು ಅನೇಕ ಕೃತಿಗಳನ್ನು ರಚಿಸಿದ ನಂತರ ಈ ಬಗೆಯ ಊರೆಂಬ ಉದರ ರಚನೆಗೆ ಕೈಹಾಕಿದ್ದಾರೆಯೇ ಅಂದರೆ ಹಾಗೇನೂ ಇಲ್ಲ. ಮಹಿಳೆಯರ ತೀವ್ರಥರ ಜೀವನಾನುಭವವೇ ಆ ಮಾದರಿಯದಾಗಿದ್ದು ಅಲ್ಲಿ ಅಕ್ಷರದ ಗೊಡವೆ ಇಲ್ಲದಿದ್ದರೂ ಅದನ್ನು ಮೀರಿದ ಭಾವ ಪ್ರಪಂಚವೊಂದು ತನಗೇ ತಾನೇ ಸಂಕಲನಗೊಂಡು ಜನಪದ ಹಾಡಾಗಿ, ಕಥನವಾಗಿ ಮೂಡಿಬಿಡುತ್ತದೆ. ಜನಪದ ಮಹಿಳಾ ಲೋಕದ ಸಾಹಿತ್ಯ ಸೃಷ್ಟಿಯಾಗಿರುವುದು ಆ ಕ್ರಮದಲ್ಲೇ. ಹಾಗೆ ಸಂಕಲನಗೊಂಡಿರುವ `ಊರೆಂಬ ಉದರ’ ಕಾಲಚಕ್ರದ ಮೇಲೆ ಹಾಯುವ ನೆನಪುಗಳ ತೇರು. ಕನ್ನಡದ ಪ್ರಸಿದ್ಧ ಲೇಖಕಿ ವೈದೇಹಿ ಅವರು ಈ ಕೃತಿಯ ಹಿನ್ನುಡಿಯಲ್ಲಿ ಇದನ್ನು `ನೆನಪುಗಳ ತೇರು’ ಎಂತಲೇ ಹೆಸರಿಸಿದ್ದಾರೆ. ತೇರು ಎಂಬ ಎರಡಕ್ಷರದ ಪದ ಯಾವ ಕಾಲಕ್ಕೂ ಗ್ರಾಮ ಜಗತ್ತಿನ ಲೌಕಿಕ, ಅಲೌಕಿಕ ವಿದ್ಯಮಾನವಾಗಿ ಹರಿದು ಬಂದಿರುತ್ತದೆ. ಹಾಗಾಗಿ ವೈದೇಹಿ ಅವರ ನೆನಪಿನ ತೇರು ಪದ ಈ ಕೃತಿಗೆ ಅರ್ಥಪೂರ್ಣವಾಗಿ ಹೊಂದಿಕೊಳ್ಳುತ್ತದೆ.


ಪುಸ್ತಕವನ್ನು ಕೊಳ್ಳಲು ಭೇಟಿಕೊಡಿ: https://store.ruthumana.com/product/ooremba-udara/

One comment to ““ಊರೆಂಬ ಉದರ” – ಆತ್ಮ (ಗ್ರಾಮ) ಕಥನ : ಕೃಷ್ಣಮೂರ್ತಿ ಹನೂರು ಬರಹ”
  1. Fantastic write up.As you go thru, we feel as though we are experiencing the journey.Hats of to Prameela and Mr krishna Murthy.

Leave a Reply to Vanaja Ramanujam Cancel reply