ಭಾರತವನ್ನು ಬಾಧಿಸುತ್ತಿರುವುದಾದರೂ ಏನು?


ಭಾರತವನ್ನು ಬಾಧಿಸುತ್ತಿರುವುದಾದರೂ ಏನು? ಇದನ್ನು ತಿಳಿಯಲು ಕೇಂದ್ರದ ಶಾಸಕಾಂಗವಾದ ನಮ್ಮ ಸಂಸತ್ತಿನ ಅವಲೋಕನೆಯೊಂದಿಗೆ ಪ್ರಾರಂಭಿಸೋಣ. ಈ ವಿಚಾರವಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ಮಾತ್ರವಲ್ಲದೆ ಅದರ ಕಾರ್ಯವೈಖರಿಯ ಪ್ರಸ್ತುತತೆಯ ಬಗ್ಗೆಯೇ ಬೆಂಬಿಡದ ಸಂದೇಹಗಳು ನನ್ನನ್ನು ಹೆಚ್ಚುಹೆಚ್ಚಾಗಿ ಕಾಡುತ್ತಿವೆ. ಪ್ರಜಾಪ್ರಭುತ್ವದ ಉದ್ದೇಶಗಳ ಸ್ಥಾನವನ್ನು ಶುಷ್ಕ ಆಚರಣೆಗಳೇ ತುಂಬುವಂತಾಗಿವೆಯೇ?

ನಮ್ಮ ಪ್ರಜಾತಾಂತ್ರಿಕ ಮತ್ತು ಶಾಸಕಾಂಗೀಯ ಕಾರ್ಯವಿಧಾನದ ಕೆಲವು ಅಂಶಗಳನ್ನು ಮಾತ್ರ ಪರಿಗಣಿಸಿ ನೋಡಿ. ಯಾವ ಸರ್ಕಾರಗಳೇ ಆಗಲಿ, ಅವು  ನಿಜವಾಗಿಯೂ ಯಾರನ್ನು ಪ್ರತಿನಿಧಿಸುತ್ತವೆ? ರಾಷ್ಟ್ರೀಯ ಮತದಾನದ ಶೇಕಡಾವಾರು ೫೦ರ ಸುತ್ತಲೇ ಸುತ್ತುತ್ತಿರುತ್ತದೆ. ನಾವೇನಾದರೂ ಜನಸಂಖ್ಯೆಯಲ್ಲಿ ೧೨೦ ಕೋಟಿ ಇದ್ದಲ್ಲಿ ಮತ್ತು ಅದರ ಶೇಕಡಾ ೬೦ರಷ್ಟು ಮತದಾರರಾಗಿದ್ದಲ್ಲಿ, ಮತದಾನ ಮಾಡಿದವರ ಸಂಖ್ಯೆ ಕೇವಲ ೩೬ ಕೋಟಿ ಆಗಿರುತ್ತದೆ. ಈ ಪ್ರಕ್ರಿಯೆಯಿಂದಾಗಿಯೇ, ದಿವಂಗತ ರಾಜೀವ್ ಗಾಂಧಿಯವರ ಸರ್ಕಾರ, ಮೊಟ್ಟಮೊದಲನೆಯ ಬಾರಿಗೆ ಸರಿಸುಮಾರು ಅರ್ಧದಷ್ಟು ಬೆಂಬಲ ಪಡೆಯಿತು, ಅಂದರೆ ಆ ಕಾಲದಲ್ಲಿ ೮ ಕೋಟಿ ಜನರು ಅಥವಾ ಆಗಿನ ನಮ್ಮ ಜನಸಂಖ್ಯೆಯ ಹತ್ತನೇ ಒಂದು ಭಾಗ ಮಾತ್ರ ಅವರ ಸರ್ಕಾರವನ್ನು ಅಧಿಕಾರಕ್ಕೇರಿಸಿತು. ಇದು ಸಾಮಾನ್ಯವಾಗಿ ನಡೆಯುವಂತದ್ದೇನಲ್ಲ, ಹಾಗಾಗಿ ಭಾವೋದ್ವೇಗಕ್ಕೊಳಗಾದ ಅನುಕಂಪದ ಮತವೆನ್ನುವುದು ವಾಡಿಕೆ ಎಂದೇನು ಕರೆಯಲಾಗದು.

ಅದಕ್ಕೇ ನಮ್ಮ ವ್ಯವಸ್ಥೆಗಳ ಸುಧಾರಣೆಯ ಕುರಿತು ಆಗಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಆದರೆ ನಾವು ಮಾಡುವುದಾದರೂ ಏನು? ಪರ್ಯಾಯ ಮತಎಣಿಕೆಯ ಮಾರ್ಗಗಳು, ಶಾಸಕಾಂಗಗಳಲ್ಲಿ ಭಿನ್ನರೀತಿಯ ಸೀಟು ಹಂಚಿಕೆ, ಅಥವಾ ಜನರ ಇಚ್ಛೆಯನ್ನು ಕಾರ್ಯಾಂಗ ಕ್ರಿಯೆಯಾಗಿ ಬದಲಾಯಿಸಲು ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ, ಇತ್ಯಾದಿ ಸಲಹೆಗಳನ್ನು ನೀಡುವುದರಿಂದಾಚೆಗೆ ಹೋಗುವುದೇ ಇಲ್ಲ

ಇದಕ್ಕೆ ಸಂಬಂಧಿಸಿದಂತೆ, ಜನರ ಪ್ರತಿನಿಧಿಗಳಾಗಿ ಸಂಸತ್ತಿನಲ್ಲಿ ಕೂರುವ ನಮ್ಮಂಥವರು ಅರ್ಥಪೂರ್ಣವಾಗಿ ಸರ್ಕಾರದ ಚಿಂತನೆಯನ್ನು ಪ್ರಭಾವಿಸುತ್ತೇವೆಯಂಬ ಸಂಸದೀಯ ಕಟ್ಟುಕಥೆಯೊಂದಿದೆ. ನಮಗೆಲ್ಲ ತಿಳಿದಿರುವ ಹಾಗೆ, ಆಡಳಿತ ಪಕ್ಷಕ್ಕೇ ಇದನ್ನು ಏಕೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಗಳು ಇಡೀ ದೇಶಕ್ಕೆ ಸುಸ್ಪಷ್ಟ.ವಾಗಿರುವಾಗ, ಪ್ರತಿಪಕ್ಷ ಇದನ್ನು ಮಾಡಬೇಕೆಂದು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ? ಇದೊಂದು ಹತಾಶೆಗೊಂಡ ನಿರ್ಲಕ್ಷ್ಯ ಪ್ರಲಾಪವಲ್ಲ, ಇದು ವಾಸ್ತವವಾಗಿ, ಒಂದು ಪ್ರಮುಖ ಪ್ರಶ್ನೆಯನ್ನು ಕೇಳುವುದಾಗಿದೆ. 

ನಮ್ಮ ರಾಷ್ಟ್ರದ ಜೀವನದಲ್ಲಿನ ಸಂಸತ್ತಿನ ಪಾತ್ರದ ಈ ಅಪಮೌಲ್ಯೀಕರಣಕ್ಕೆ ಎಲ್ಲದಕ್ಕಿಂತ ಹೆಚ್ಚಾಗಿ ಸರ್ಕಾರವನ್ನೇ ದೂಷಿಸಬೇಕಾಗಿದೆ. ಏಕೆಂದರೆ, ಇದರ ಕಾರ್ಯಾಂಗ ಮುಖ್ಯಸ್ಥರಾದ ಪ್ರಧಾನಮಂತ್ರಿಗಳು ಸಂಸತ್ತಿನ ಹಾಜರಾತಿ ಮತ್ತು ಸಮಾಲೋಚನೆಗಳನ್ನು ಕೇವಲ ಹುರುಳಿಲ್ಲದ ಖಾಲಿ ಆಚರಣೆಗಳ ಮಟ್ಟಕ್ಕಿಳಿಸಿ, ಯಾವ ಘನತೆಯೂ ಇಲ್ಲದ ಉಪದ್ರವಕರ ದೈನಂದಿನ ಬಾಧ್ಯತೆಯನ್ನಾಗಿ ಮಾಡಿಬಿಟ್ಟಿದ್ದಾರೆ. 

ಸಂಸತ್ತಿನ ಸದಸ್ಯರಾದ ನಾವುಗಳೇ ನಮ್ಮ ಸಂಸ್ಥೆಯ ಕುರಿತು ಆಲೋಚನೆ/ಚರ್ಚೆ ಮಾಡುವಲ್ಲಿ, ನಮಗೆ ದತ್ತವಾಗಿದೆಯೆಂದು ಭಾವಿಸಿಕೊಂಡಿರುವ ‘ಅಧಿಕಾರ’ವನ್ನು  ಚಲಾಯಿಸಲು ಆಗದಿರುವಾಗ, ‘ನಮ್ಮ ರಾಷ್ಟ್ರೀಯ ಜೀವನ’ದ ಮೇಲಿನ ನಮ್ಮ ಪ್ರಭಾವ ಬಹಳ ಕಡಿಮೆ; ವಾಸ್ತವದಲ್ಲಿ ಇದು ಅಪ್ರಸ್ತುತವೆನ್ನುವ ಮಟ್ಟಕ್ಕೆ ಕ್ಷೀಣಿಸಿದೆ. ಚುನಾವಣಾಕಾಂಕ್ಷಿಗಳ ಮಾತುಕತೆಗಳಲ್ಲಿ ನಿಮಗೆ ಈ ಗೊಂದಲಮಯ ವಿಚಾರ ಸಿಗುವುದಿಲ್ಲ. ಸಂಸತ್ತು ನಮ್ಮ ಸ್ವಾತಂತ್ರ್ಯಗಳ ರಕ್ಷಕ, ದುರಾಡಳಿತದ ಮೇಲೆ ಕಣ್ಣಿಟ್ಟು ಕಾವಲು ಕಾಯುವ ಸಂಸ್ಥೆ, ಕಾರ್ಯಾಂಗದ ಮೇಲಿರುವ ಒಂದು ನಿಗಾದೃಷ್ಟಿ… ಹೀಗೆಲ್ಲಾ ಸಿದ್ಧಾಂತದ ಹಂತದಲ್ಲಿ ಇವೆಯಾದರೂ ಶೋಚನಾವಸ್ಥೆಯೇನೆಂದರೆ ನಿಜಸ್ಥಿತಿಯಲ್ಲಿ ಹೀಗಿಲ್ಲ, ಮತ್ತು ನಾವುಗಳು ಈ ವಸ್ತುಸ್ಥಿತಿಯನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದನ್ನು ನೀವು ನೋಡುವುದು ಬಹು ವಿರಳ. ‘ಪರಿಶೀಲನೆ ಮತ್ತು ಸಮತೋಲನೆ (checks and balances)’ಯ ಒಂದು ಸೈದ್ಧಾಂತಿಕ ವ್ಯವಸ್ಥೆ ತನ್ನ ಸಮತೋಲನವನ್ನೇ ಸಂಪೂರ್ಣವಾಗಿ ಕಳೆದುಕೊಂಡಿದೆ; ಈಗುಳಿದಿರುವ ‘ಪರಿಶೀಲನೆ’: ಅಶಿಸ್ತಿನ ನಡವಳಿಕೆ, ಪ್ರತಿಬಂಧಕ ವರ್ತನೆ ಮತ್ತು ಪರ್ಯಾಲೋಚಕ ಸಂಸ್ಥೆಯಾದ ಸಂಸತ್ತನ್ನು (ಅಥವಾ ವಿಧಾನಸಭೆಗಳು) ನಿರಂತರ ಪ್ರಚಾರಕ್ಕಾಗಿರುವ ವೇದಿಕೆಯನ್ನಾಗಿ ಮಾರ್ಪಾಟು ಮಾಡಿರುವುದು. ವಿಷಾದದ ಸಂಗತಿಯೇನೆಂದರೆ, ಅಸಮರ್ಥತೆಯೇ ಸರ್ಕಾರಗಳ ಮೇಲಿನ ದೊಡ್ಡ ‘ಪರಿಮಿತಿ’ಯಾಗಿರುವುದು. 

ಹೀಗಿದ್ದರೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ನಂಬಿಕೆಯನ್ನಿರಿಸುತ್ತೇವೆ, ಇದು ಬಹುಶಃ ಸರಿಯಾಗಿಯೂ ಇದೆ. ಏಕೆಂದರೆ, ಉಳಿದೆಲ್ಲಾ ವ್ಯವಸ್ಥೆಗಳು ನಮ್ಮನ್ನು ಮತ್ತಷ್ಟು ದಿಗಿಲುಗೊಳಿಸುತ್ತವೆ. ನಮ್ಮ ರೀತಿಯ ಪ್ರಾತಿನಿಧಿಕ ಸಹಭಾಗಿತ್ವ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಗೊಂದಲಕಾರಿ ಬೆಳವಣಿಗೆಯೊಂದು ದಿವಂಗತ ಇಂದಿರಾಗಾಂಧಿಯವರ ಪ್ರಧಾನಮಂತ್ರಿಗಿರಿಯ ದಿನಗಳಿಂದಲೇ ಅಸ್ತಿತ್ವಕ್ಕೆ ಬಂದಿದೆ. ಅದೇನೆಂದರೆ, ಯಾವುದೇ ಪರ್ಯಾಯ, ವ್ಯತಿರಿಕ್ತ ದೃಷ್ಟಿಕೋನ ಅಥವಾ ವಿರೋಧಿಸುವ ವಿಚಾರವನ್ನಷ್ಟೇ ಅಲ್ಲದೆ ಪ್ರತಿಪಕ್ಷ ಎಂಬ ಪರಿಕಲ್ಪನೆಯನ್ನೇ ಸತ್ತ್ವವಿಲ್ಲದ್ದೆಂದು ಚಿತ್ರಿಸುತ್ತಿರುವುದು. ನಮ್ಮನ್ನು ಗಾಬರಿಗೊಳಿಸುವ ಮಟ್ಟಕ್ಕೆ ಇನ್ನಷ್ಟು  ಪಲ್ಲಟವಾಗಿರುವುದೇನೆಂದರೆ, ಪ್ರತಿಪಕ್ಷದ ಈ ಅಪಮೌಲ್ಯೀಕರಣ ನಮ್ಮ ಪ್ರಜಾಪ್ರಭುತ್ವದ ಧ್ಯೇಯವಾಗಿಬಿಟ್ಟಿದೆ. ಹೀಗಿದ್ದರೂ ನಾವದರ ಸದ್ಗುಣಗಳ ಕುರಿತು ಪ್ರಶಂಸಾಗೀತೆಗಳನ್ನು ಹಾಡುತ್ತಾ ಅದಕ್ಕೆ ಏಕಾನುಮತದ ಒಪ್ಪಿಗೆಗಾಗಿ ಒತ್ತಾಯಿಸುತ್ತೇವೆ. 

ನಮ್ಮ ‘ಪ್ರಜಾತಾಂತ್ರಿಕ ರೀತಿ’ಗಳನ್ನು ಗುಣ-ಅವಗುಣಗಳುಳ್ಳ ಮತ್ತೊಂದು ಮಾನವ ಪ್ರಯತ್ನವೆಂದು ತೋರಿಸದೆ, ಅದು ಮತ್ತೆಂದೂ ಬದಲಾಯಿಸಲಾಗದ ನಂಬಿಕೆ ಎಂಬಂತೆ ತೋರಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವವೆಂಬ ಪರಿಕಲ್ಪನೆಯಾಗಲಿ ಮತ್ತದರ ಚೇತನದ ಬಗ್ಗೆಯಾಗಲಿ  ಹೇಳುತ್ತಿರುವ ಮಾತಲ್ಲ. ಬದಲಿಗೆ, ಅದರ ಹೆಸರಲ್ಲಿ ನಡೆಯುತ್ತಿರುವ ನಮ್ಮ ಭ್ರಷ್ಟ ಆಚರಣೆಗಳ ಕುರಿತಷ್ಟೇ ಹೇಳುತ್ತಿರುವ ಮಾತು. ರಾಜಕಾರಣಿಗಳು ಸಾರ್ವಜನಿಕ ಅಸಮಾಧಾನಗಳನ್ನು ಸೆಳೆದು ಸ್ವೀಕರಿಸುವಂತವರು ಎನ್ನುವುದು ಅಸ್ವಾಭಾವಿಕವೇನಲ್ಲ.  ನಮ್ಮನ್ನು ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಕೆಲಸಕ್ಕೆ ಬಾರದವರೆಂದು ನಿರೂಪಿಸಿರುವುದರಿಂದ ನಾವುಗಳು ಪ್ರಜೆಗಳ ಕಷ್ಟಗಳ ವಿಚಾರದಲ್ಲಿ ವಾಹಿನಿಯಾಗದೆ ಗಲಿಬಿಲಿಯಾದ, ಒರಟಾದ ಮತ್ತು ಹುರುಳಿಲ್ಲದ ಬಿಡುವಿಲ್ಲದಿರುವಿಕೆಗಳಂತಹ ಪೊಳ್ಳು ವರ್ತನೆಗಳನ್ನು ಅಳವಡಿಸಿಕೊಂಡುಬಿಡುತ್ತೇವೆ. ಇದು ಅಸಹಾಯಕತೆಯ ಅಭಿವ್ಯಕ್ತಿಯಾಗದೆ ರಾಜಕಾರಣಿಗಳು ಸಹಾನುಭೂತಿಯಿಲ್ಲದವರು ಎಂಬ ವಿರೋಧಾತ್ಮಕ ಸಂದೇಶ ಹೊರಡಿಸುತ್ತದೆ. ಇಲ್ಲ, ಹಾಗೇನೂ ಇಲ್ಲ. ನಾವು ವ್ಯವಸ್ಥೆಯ ಉತ್ಪನ್ನಗಳು ಮತ್ತದರ ಸಮಸ್ಯೆಗಳನ್ನು ಶಾಶ್ವತಗೊಳಿಸಲು ಕೊಡುಗೆ ಸಲ್ಲಿಸುತ್ತಿರುವವರು. ಆ ಸಮಸ್ಯೆಗಳ ಪ್ರಮುಖ ಕಾರಣೀಭೂತರುಗಳೂ ನಾವೇ ಆಗಿರಬಹುದು. ಆದರೆ ಇಲ್ಲಿರುವುದು ನಾವಷ್ಟೇ ಅಲ್ಲ. ನಾವುಗಳೇ ನಮ್ಮನ್ನು ಬಾಧಿಸುತ್ತಿರುವ ದೈನಂದಿನ ತಪ್ಪುಗಳು, ಕಿರಿಕಿರಿಗಳು ಮತ್ತು ಆತಂಕಗಳಿಂದ ನಿಮ್ಮ ಮನತಿರುಗುವಂತೆ ಮಾಡಲು ಸಾಧ್ಯವಿಲ್ಲದಾಗಿರುವಾಗ, ‘ನಾವು ಪ್ರತಿನಿಧಿಗಳಿಗೆ ಈ ರೀತಿ ಮತ ನೀಡಿದ್ದಾದರೂ ಏಕೆ?’ ಎಂಬ ಸರಳ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಬೇಕು. 

ಮತ್ತೀಗೇನು ಮಾಡುವುದು? ಮತ್ತೆ ಮೂಲಭೂತ ವಿಚಾರಗಳನ್ನು ಪ್ರಶ್ನಿಸುವಲ್ಲಿಂದಲೇ ಪ್ರಾರಂಭಿಸೋಣ. ಏಕೆಂದರೆ ನಾವು, ಅಸ್ತವ್ಯಸ್ತತೆ, ದುರಾಡಳಿತ ಅಥವ ಆಡಳಿತವೇ ಇಲ್ಲದಿದ್ದಂತ  ಶಾಹ್ ಆಲಂನ ಆಳ್ವಿಕೆಯ ದಿನಗಳ ಪರಿಸ್ಥಿತಿಯನ್ನು ವಿಷಾದಮಯ ರೀತಿಯಲ್ಲಿ ಹೋಲುವಂತ ಸ್ಥಿತಿಗೆ ಮರಳಿದ್ದೇವೆ.

ದೆಹಲಿಯಂತೂ ಈಗ ದೆಹಲಿಯನ್ನೂ ಪ್ರಭಾವಿಸುತ್ತಿಲ್ಲ. ಅದಕ್ಕೇ ಒಕ್ಕೂಟದ ರಾಜ್ಯಗಳು ಕೇಂದ್ರದೆಡೆಗೆ ಪದೇಪದೇ ದಿಟ್ಟತನ ಪ್ರದರ್ಶಿಸುತ್ತಾ ಸ್ವಾಯತ್ತ ಪಾಳೇಗಾರಿಕೆಗಳ ರೀತಿಯಲ್ಲಿ ತಮ್ಮ ವ್ಯವಹಾರಗಳನ್ನು ತಾವೇ ನಿರ್ವಹಿಸಿಕೊಳ್ಳುತ್ತಿವೆ. ನಾನು ಉತ್ಪ್ರೇಕ್ಷಿಸುತ್ತಿದ್ದೇನೆಯೇ? ಪ್ರಾಯಶಃ. ಹೌದು. ಆದರೆ ಅದಂತೂ ಎಚ್ಚೆತ್ತುಕೊಂಡು ಅರಿವನ್ನು ಪಡೆದುಕೊಳ್ಳಲಿ ಎಂದಷ್ಟೆ.   ಮತ್ತೆ ನಾವು ತಪ್ಪಿದ್ದೆಲ್ಲಿ?  

ಈ ಅಸ್ತವ್ಯಸ್ತತೆಯ ಕಾರಣಗಳನ್ನು ಗುರುತಿಸಲು ನಾವು ಮೂಲಕ್ಕೆ ಹೋಗಬೇಕು. ನಾವು ವೆಸ್ಟ್ಫಾಲಿಯನ್ ಅರ್ಥದಲ್ಲಿರುವ ‘ನೇಷನ್’ ಎಂಬ ಪದವನ್ನು ನಮ್ಮ ಪ್ರಾಚೀನ ಪರಿಕಲ್ಪನೆಯಾದ ‘ರಾಷ್ಟ್ರ’ದ ಜೊತೆ ಸಮೀಕರಿಸಿದಾಗ ಸರಿಯಾದ ಹಾದಿಯಲ್ಲಿದ್ದೇವೆಯೇ? ಭಾರತ ಖಂಡಿತವಾಗಿ ಒಂದು ‘ರಾಷ್ಟ್ರ’ ನಿಜ, ಆದರೆ ಮೂಲಭೂತವಾಗಿ ಅದು ‘ಸೀಮೆರಹಿತ (non-territorialised)’. ಅದಕ್ಕೇ, ಸ್ವತಂತ್ರ ಅಸ್ತಿತ್ವದ ದಶಕಗಳ ನಂತರವೂ ನಾವು ಪ್ರೊ. ಅಮರಿಕ್ ಸಿಂಗ್ ಅವರ ‘India is a combine of many countries.’ (ಭಾರತ ಅನೇಕ ದೇಶಗಳ ಒಂದು ಕೂಟ), ಎಂಬ ಅಭಿಪ್ರಾಯಗಳನ್ನೂ ಆಹ್ವಾನಿಸುತ್ತೇವೆ. ಇಂತಹ ಹೇಳಿಕೆಗಳು ‘ನಿಜವಾಗಿಯೂ ಭಾರತ ಎಂದರೇನು?’ ಎಂಬ ಪ್ರಶ್ನೆಯನ್ನು ಎತ್ತುತ್ತವೆ. 

ಬ್ರಿಟಿಷ್ ಸಂಸದೀಯ ವ್ಯವಸ್ಥೆಗೆ ಹತ್ತಿರವೆನ್ನುವಂತಹ ಮರುಮುದ್ರಣದ ರೀತಿಯ ವ್ಯವಸ್ಥೆಯನ್ನು ನೀಡಿದ ‘೧೯೩೫ರ ಭಾರತ ಸರ್ಕಾರ ಕಾಯ್ದೆ’ಯನ್ನು ಮಾರ್ಪಡಿಸಿ ಅಳವಡಿಸಿಕೊಂಡ ನೆಹರು ಸರಿಯಾದ ಕೆಲಸ ಮಾಡಿದರೇ ? ನಾವು ‘ರಾಷ್ಟ್ರಪಿತ ಎಂದು ಕರೆವ ಗಾಂಧಿ ‘ಗ್ರಾಮ ಗಣರಾಜ್ಯ’ಗಳನ್ನೇಕೆ ಆರಿಸಿದರು? ಅದಕ್ಕೇ ನಾವು ಕೇಳುವುದು: ಭಾರತ ರಾಷ್ಟ್ರ ಎಂದರೇನು? ಪ್ರಾದೇಶಿಕ ಗುರುತಿನಿಂದಾಚೆ ಏನಿದೆ? ಅದಕ್ಕಾಗಿ ನಮ್ಮ ಕನಸು ಏನೆಂದಿತ್ತು ಮತ್ತು ಈಗೇನಿದೆ? ಈಗಿನ ನಿಜಸ್ಥಿತಿ ಹೀಗೇಕಿದೆ? ಹಾಗೂ ಈ ‘ಇಂಡಿಯಾ’ ಮತ್ತು ‘ಇಂಡಿಯನ್ಸ್’, ಇವುಗಳ ಸ್ವರೂಪವೇನು?

ಯಾವ ಪ್ರಧಾನ ವಿಚಾರದಿಂದ ನಾವು ಎಲ್ಲವನ್ನು ‘ಒಂದುಗೂಡಿಸಬೇಕು’? ಮತ್ತು ‘ನಾವು’ ಎಂದರೆ ಯಾರು? ೧೨೭ ಜಿಲ್ಲೆಗಳು ಏಕೆ ದಂಗೆಯಲ್ಲಿವೆ? ಇಂಡಿಯಾ ಒಂದು ಅಚಲಿತ ಪರಿಕಲ್ಪನೆಯಾಗಿ ಕಟ್ಟುಬಿದ್ದಿರುವುದರಿಂದ ಹೀಗಾಗಿದೆಯೋ ಅಥವಾ ಈ ಇಂಡಿಯಾ ಎನ್ನುವುದಕ್ಕೆ ಭವಿಷ್ಯನ್ನು ಹೊಂದಿರುವ ಒಂದು ಐತಿಹಾಸಿಕ ಗುರುತಾಗಲಿ ಹಾಗೂ ಹಲವಾರು ವರ್ಷಗಳಿಂದ ವಿಕಸನಗೊಂಡ ಒಂದು ಗುರುತಿಸಬಹುದಾದಂತಹ ಸಮಗ್ರತೆಯಾಗಲಿ ಇದೆಯೇ? ನಮ್ಮ ಆಲೋಚನೆಗಳ ನಿಶ್ಚಲತೆಯಲ್ಲಿ ನಾವು ಜೌಗುನೆಲದಲ್ಲಿ ಸಿಲುಕಿದಂತಾಗಿದೆಯೇ ಅಥವಾ ನಮ್ಮ ರಾಷ್ಟ್ರೀಯ ಅಸ್ಮಿತೆಯ ಸಾಮುದಾಯಿಕ ವ್ಯವಸ್ಥೆಯು ಒಂದು ಉದಾತ್ತ ದೂರದೃಷ್ಟಿಯ ಶಕ್ತಿಯಿಂದ ಪ್ರೇರೇಪಿತಗೊಂಡ ನಿರಂತರತೆಯೇ? ‘ಹೊಸ’ ತಲೆಮಾರುಗಳ ಭಾರತೀಯರು ಏನನ್ನು ಆಶಿಸಬೇಕು? ಇಂದಿನ ಮತ್ತು ನಾಳಿನ ಮಕ್ಕಳು ಯಾವ ಉನ್ನತ ಪ್ರಯತ್ನದೆಡೆಗೆ ಸೆಳೆಯಲ್ಪಡಬೇಕು? ಭಾವನಾತ್ಮಕ ಶ್ರಮದ ಬೇಗುದಿಯ ಅಖಾಡದಲ್ಲಿ ನಿರಂತರವಾಗಿ ಬದುಕುವುದು ಇಡೀ ಜನಸಮೂಹವೊಂದಕ್ಕೆ ಸಂಭವನೀಯವೂ ಅಲ್ಲ, ಆರೋಗ್ಯಕರವೂ ಅಲ್ಲವೆಂದು ಯಾರೊಬ್ಬರಾದರೂ ಸೂಚಿಸಬಹುದು. ವ್ಯಕ್ತಿಗಳ ಹಾಗೆಯೇ ರಾಷ್ಟ್ರಗಳಿಗೂ ಹೊಸ ಪ್ರಯತ್ನಗಳನ್ನು ಕೈಗೊಳ್ಳುವ ಮೊದಲು, ತಮ್ಮನ್ನು ತಾವೇ ಮೀರಿನಿಲ್ಲುವ ಮೊದಲು, ನೀರವ ಅವಧಿಯ, ಅಚಲ ಏಕೀಕರಣ ಪ್ರಕ್ರಿಯೆಯ ಅವಶ್ಯಕತೆಯಿದೆ. ಹೀಗಿದ್ದಲ್ಲಿ,  ನಾವು ಒಂದುಗೂಡಿಸುತ್ತಿದ್ದೇವೆಯೇ, ಹೌದೆಂದಾದರೆ ಏನನ್ನು? ಅಥವಾ ಸದ್ಯ ಸ್ಪಷ್ಟವಾಗಿರುವ ಸಿನಿಕತನದ ಆಸಕ್ತಿಹೀನತೆಯನ್ನು ಸದ್ಗುಣವೆಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇವೆಯೆ? 

ಈ ರೀತಿಯ ಮತ್ತು ಇಂಥವೇ ಇನ್ನೂ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಎಲ್ಲ ಉತ್ತರಗಳು ತಕ್ಷಣ ಸಿಗದಿರುವುದು ಮಾತ್ರವಲ್ಲ, ಎಲ್ಲ ಪ್ರಶ್ನೆಗಳನ್ನು ಕೇಳಲೂ ಸಾಧ್ಯವಿಲ್ಲ. ಏನಿದ್ದರೂ ನಮ್ಮ ಕಾಳಜಿಗಳ ರೂಪುರೇಖೆಯನ್ನು ಮಾತ್ರ ಎಳೆಯಬಹುದಷ್ಟೆ. ಈ ವಿಚಾರವಾಗಿ ನಾನು ಪಿ.ಎನ್. ಹಕ್ಸಾರ್ ಅವರ ‘Reflections on Our Times’ ಕೃತಿಯನ್ನು ಹೆಸರಿಸಲೇಬೇಕು. ಅವರ ನಿರರ್ಗಳ ಅಭಿವ್ಯಕ್ತಿಯನ್ನು ನಾನು ಮತ್ತಷ್ಟು ಸುಧಾರಿಸಲಾರೆ, ಹಾಗಾಗಿ ಹಾಗೆಯೇ ಉಲ್ಲೇಖಿಸುತ್ತಿದ್ದೇನೆ:  

‘ಭಾರತದಲ್ಲಿನ ಸ್ವಾತಂತ್ರ್ಯಾನಂತರದ ತಲೆಮಾರು ಹೇಗಾದರೂ ಮಾಡಿ ಸಂಪೂರ್ಣ ಭಾರತದ ಒಂದು ನೋಟವನ್ನು ರಾಜಕೀಯ, ಅರ್ಥಶಾಸ್ತ್ರ, ಸಾಮಾಜಿಕ ಸಂರಚನೆ, ಸಾಂಸ್ಕೃತಿಕ ಮಾದರಿ ಮತ್ತು ಮೌಲ್ಯ ವ್ಯವಸ್ಥೆಗಳ ನಡುವಿನ ಪರಸ್ಪರ ಸಂಬಂಧದ ಸಮಗ್ರ ದೃಷ್ಟಿಕೋನಕ್ಕೆ ಸಂಬಂಧಿಸಿದಲ್ಲಿ, ಕವಿದ ಮೋಡಗಳು ಮಾಯವಾಗಲು ಮೊದಲಾಗುತ್ತವೆ. ಇಂತಹ ಪ್ರಯತ್ನವಿಲ್ಲದೆ ನಾವು ಹೆಮ್ಮೆ ಪಡಬಹುದಾದ ಯಾವುದೇ ಭವಿಷ್ಯ ಇರಲಾರದು. ಭಾರತ ತ್ವರಿತ-ಮಾರ್ಗಗಳಿಂದ ಮತ್ತು ಅತೀಸರಳೀಕರಣಗಳಿಂದ ಮುನ್ನಡೆಯುವುದಕ್ಕಾಗದಷ್ಟು ಬಹುದೊಡ್ಡ ದೇಶ. ಜೇಡಿಮಣ್ಣಿಗೆ ಹೊಸರೂಪು ಪಡೆಯುವ ಗುಣವಿದ್ದರೂ, ಆಕಾರ ಮತ್ತು ರೂಪ ಪಡೆಯಲು ಕುಂಬಾರನ ಕೈ ಅವಶ್ಯಕ.’

ಅವರು ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಹೇಳಿದ ಮಾತುಗಳಿವು. 

ನಮ್ಮ ಇಂದಿನ ‘ರಾಷ್ಟ್ರೀಯತೆ’ಯ ಪರಿಕಲ್ಪನೆ ಅಸ್ಪಷ್ಟವಾಗೇ ಉಳಿದಿದೆ; ನೆರೆತ ಗತಕಾಲದಲ್ಲಿ ಬೇರೂರಿರುವ, ಬಹುತೇಕ ಅಮೂರ್ತವಾದ, ತಾತ್ವಿಕವಾದ ಮತ್ತು ಅರಿವಿಗೆ ಎಟುಕದ್ದನ್ನೂ ಒಪ್ಪಿಕೊಳ್ಳುವಂತಹ ‘ರಾಷ್ಟ್ರ’ದ ಸ್ಥಾನವನ್ನು ತುಂಬಲು ಅದು ಸೋತಿದೆ. ಅದಕ್ಕೆ ಆಕಾರ ನೀಡಲು ಪ್ರಯತ್ನಿಸಿದಾಗಲೆಲ್ಲಾ ಅದೊಂದು ಮರಳಿ ಸೆರೆಹಿಡಿದ ಬಿಂಬವೂ ಮರುಸೃಷ್ಟಿಯೂ ಆಗಿಯೇ ಮೂಡುತ್ತಿದೆ. ಸ್ಪಷ್ಟವಾದ ಗ್ರಹಿಕೆಗೆ ಸಿಗದಂತಹ ಒಂದು ಅವಿವರಣೀಯ ಚೇತನದ ತಂತು ಇದನ್ನೆಲ್ಲವನ್ನೂ ಹಿಡಿದಿಟ್ಟಿದೆ. ಹಿಂದೆಲ್ಲ ಈ ತಂತುಗಳು, ಬಹುಪಾಲು ನಂಬಿಕೆಯಲ್ಲೇ ಬೇರೂರಿದ್ದ ಧಾರ್ಮಿಕ ವಿಶ್ವಾಸ ಮತ್ತು ಒಂದು ಸಾಂಸ್ಕೃತಿಕ ನಿರಂತರತೆಯ  ಸಂಕೋಲೆಗಳಾಗಿದ್ದವು. ನಿಖರವಾಗಿ ಈ ವಿಷಯದಲ್ಲೇ ಇದರ ಬಲ ಮತ್ತು ದೌರ್ಬಲ್ಯಗಳಿವೆ. ಸರ್ವವ್ಯಾಪಕತೆ, ನಿರಾಕಾರವಾದರೂ ಸಂಪೂರ್ಣತೆ, ವ್ಯಾಖ್ಯಾನ ಮತ್ತು ಸೆರೆಗಳನ್ನು ನಿರೋಧಿಸಿದ ಕಾರಣಗಳೇ ಇದಕ್ಕೆ ಬಲ. ಆದ್ದರಿಂದಲೇ, ಹಲವು ಶತಮಾನಗಳ ವಿದೇಶೀ ಅಧಿಪತ್ಯದ ನಂತರವೂ ಉಳಿದುಕೊಂಡಿರುವುದು ಮಾತ್ರವಲ್ಲದೆ ಅಂತರ್ಮುಖರೂಪದ ಅಸ್ತಿತ್ವದಲ್ಲಿದೆ. ಬಹಳ ಸಡಿಲವಾಗಿದ್ದ ನಮ್ಮ ‘ನೇಷನ್ಹುಡ್’ನ ಪ್ರಜ್ಞೆಯಿಂದಾಗಿಯೇ ನಮ್ಮನ್ನು ಅಷ್ಟು ಸುಲಭವಾಗಿ ಅಧೀನರನ್ನಾಗಿ ಮಾಡಲು ಸಾಧ್ಯವಾದದ್ದು. ಇದು ನಮ್ಮ ದೌರ್ಬಲ್ಯವಾಗಿತ್ತು ಮತ್ತು ಹೀಗೆಯೇ ಮುಂದುವರೆಯುತ್ತದೆ. ಏಕೆಂದರೆ, ಯಾವಾಗ ಪ್ರಧಾನ ಪರಿಕಲ್ಪನೆಯು ಮೋಡದೋಪಾದಿಯಲ್ಲಿದ್ದು ಮತ್ತದರ ಘಟಕಗಳು ಆ ಮೋಡದ ಹನಿಗಳ ರೀತಿಯಲ್ಲಿರುತ್ತವೋ ಆಗ ಬರಿಯ ಸಂರಕ್ಷಣೆಯ ಮಾತ್ರಕ್ಕೆ ಒಂದು ಬಲವಾದ ಕೋಶಸಂರಚನೆಯ ಅಗತ್ಯವಿರುತ್ತದೆ.

ಇಂಡಿಯಾ, ಭಾರತ, ಹಿಂದೂಸ್ಥಾನ ಅಥವಾ ನಿಮಗ್ಯಾವುದಿಷ್ಟವೋ ಅದರ ರಾಷ್ಟ್ರೀಯ ಪರಿಕಲ್ಪನೆಯ ಸುತ್ತ ಹಾಗೂ ಒಳಗೆ, ಇತಿಹಾಸದ ಮೂಲಕ, ಜಾತಿ, ಧರ್ಮ, ಭಾಷೆ, ಪ್ರದೇಶಗಳೆಂಬ ‘ಕೋಶಗಳ’ ಬೆಳವಣಿಗೆಯಾಯಿತು. ಈ ಕೋಶಗಳು ಬಲಶಾಲಿಯಾಗಿದ್ದರೂ, ರಾಷ್ಟ್ರೀಯತೆಯೆಂಬ ಪ್ರಧಾನ ಪರಿಕಲ್ಪನೆಯಿಂದಾಚೆ ಇವುಗಳ ಅಸ್ತಿತ್ವ ಸಾಧ್ಯವಿಲ್ಲ. ಕೋಶಕೇಂದ್ರದಲ್ಲಿ ಒಂದು ಬಲವಾದ ಪ್ರೇರಕ ಚಿಂತನೆ ಬಂದಾಗಲೆಲ್ಲ ಈ ಕೋಶರಚನೆಯು ತನ್ನ ಸಣ್ಣ ಗುರುತುಗಳನ್ನು ಬಿಟ್ಟು ಅದಕ್ಕಿಂತ ದೊಡ್ಡದಾದಂತಹ ಒಂದು ನಿರಾಕಾರವಾದ ಸಂಪೂರ್ಣತೆಯ ಜೊತೆ ವಿಲೀನಗೊಳ್ಳುತ್ತಲೇ ಬಂದಿದೆ. ಈ ಕೋಶಕೇಂದ್ರ ಯಾವಾಗ ತನ್ನ ಚಿಂತನೆಯ ಸತ್ವವನ್ನು ಮತ್ತದರ  ಗುರುತ್ವಾಕರ್ಷಣೆಯನ್ನು ಕಳೆದುಕೊಳ್ಳುತ್ತದೋ ಆಗ ಈ ಜಾತಿ ಮತ್ತು ಪ್ರದೇಶಗಳೆಂಬ ಕೋಶಗಳು, ಮತ್ತೇನನ್ನೂ ಮಾಡಲಾರದೆ, ತಮ್ಮ ಸ್ವಂತ ಪಥಗಳನ್ನು ಸೃಷ್ಟಿಸಿಕೊಳ್ಳುತ್ತವೆ; ಇದು ಸ್ವಯಂ ಸಂರಕ್ಷಣಾಕ್ರಮವೇ ಹೊರತು ಯಾವುದೇ ಕೇಡು ಬಗೆಯುವ ಉದ್ದೇಶದಿಂದಲ್ಲ. ಈ ನಿಟ್ಟಿನಲ್ಲಿ, ನಮ್ಮ ಮೇಲೆ, ಬ್ರಿಟಿಷ್ ವಿಜಯದ ಜೊತೆಗೆ ಪಾಶ್ಚಿಮಾತ್ಯ ರೀತಿಯ ಚಳುವಳಿಯನ್ನೂ, ನಮ್ಮ ರಾಷ್ಟ್ರೀಯ ಪ್ರಜ್ಞೆಯ ಸಾಮ್ರಾಜ್ಯಶಾಹೀ ಆಜ್ಞಾಪಿತ ರಾಜಕೀಯ ಅಭಿವ್ಯಕ್ತಿಯಾದ ‘ರಾಜ್ಯ'(ಸ್ಟೇಟ್) ಎಂಬ ಪರಿಕಲ್ಪನೆಯನ್ನೂ ಹೇರಲಾಯಿತು. ಸಹಜವಾಗಿಯೇ, ನಮ್ಮ ಮನಸ್ಸುಗಳ ಮೇಲೆ ಅದು ಗಾಢವಾದ ಪರಿಣಾಮ ಬೀರಲೇ ಇಲ್ಲ. ಕೋಶಗಳು ಒಟ್ಟಾಗಿ ರೂಪುಗೊಂಡವು, ಆದರೆ ಆಡಳಿತಾತ್ಮಕವಾಗಿ ಮಾತ್ರ. 

ನಂತರ ಬಂದದ್ದೇ ರೋಮಾಂಚನಕಾರಿಯಾದ ಸ್ವಾತಂತ್ರ್ಯ ಹೋರಾಟ ಮತ್ತು ‘ಸಮಾಜದ ವಿಶಾಲವಾದ ಮತ್ತು ವಿಸ್ತಾರವಾದ ಸ್ತರಗಳನ್ನು ಹೆಚ್ಚುಹೆಚ್ಚಾಗಿ ಒಳಗೊಳ್ಳಿಸಿಕೊಳ್ಳುತ್ತಿದ್ದ ಈ ಸ್ವಾತಂತ್ರ್ಯ ಹೋರಾಟದ ಪ್ರಕ್ರಿಯೆ, ಈ ಹಿಂದೆ ನಾವು  ನಮ್ಮ ಗುರುತನ್ನು ರೂಪಿಸಿಕೊಳ್ಳುತ್ತಿದ್ದ ಬಗೆಗಿಂತ ಭಿನ್ನವಾಗಿ, ಒಂದು ಹೊಸ ಗುರುತಿನ ಅವಶ್ಯಕತೆಯ ಕುರಿತು ಪ್ರಜ್ಞೆಯನ್ನು ಹುಟ್ಟುಹಾಕಿತು. ಹೊಸ ಗುರುತನ್ನು ರಾಷ್ಟ್ರೀಯತೆ ಎಂದು ಕರೆಯಲಾಯಿತು. ಇದು “ಜಾತಿ”ಯ ಆಧಾರದ ಮೇಲಿನ ಗುರುತಿಗಿಂತ ಭಿನ್ನವಾಗಿತ್ತು. (ಪಿ. ಎನ್. ಹಕ್ಸಾರ್, ರಿಫ್ಲೆಕ್ಷನ್ಸ್ ಆನ್ ಅವರ್ ಟೈಮ್ಸ್. ಲ್ಯಾನ್ಸರ್, ದೆಹಲಿ, 1982, ಪುಟ 89)

ಸ್ವಾತಂತ್ರ್ಯ ಗಳಿಸಿದ ನಂತರದ ಅವಧಿ ನಿರ್ಣಾಯಕವಾಗಿತ್ತು. ನಾವು ಆಗಲೂ ಕೂಡ ಹಿಂದಿನ ರೀತಿಯಲ್ಲೇ ದಾರಿತಪ್ಪಿದೆವು. ಎಲ್ಲರೂ ವಿ.ಎಸ್. ನೈಪಾಲ್ ಅವರನ್ನ ಒಪ್ಪಲಿಕ್ಕಿಲ್ಲ ಆದರೆ ಅವರು ಹೇಳುವ ಈ ಮಾತನ್ನು ಗಮನಿಸಿದರೆ ಅದರಲ್ಲಿ ಸತ್ಯದ ಅಂಶವಿದ್ದಂತೆ ಅನ್ನಿಸುತ್ತದೆ; ‘ಗಾಂಧಿ ಭಾರತಕ್ಕೆ ಅದರ ಬಗ್ಗೆಯೇ ಒಂದು ವಿಚಾರ ಕೊಟ್ಟರು. ಅಹಿಂಸೆಯನ್ನು ಪುರಾತನ, ಬಹುಮುಖಿ ಭಾರತೀಯ ಸತ್ಯ, ಹಿಂದೂ ಕಾರ್ಯಗಳ ಸನಾತನ ಮೂಲ ಎಂದೆಲ್ಲ ಕಾಣುವಂತೆ ಮಾಡಲಾಯಿತು. ಈಗ ಗಾಂಧೀವಾದದಲ್ಲುಳಿದಿರುವುದು ಲಾಂಛನಗಳು ಮತ್ತು ಶಕ್ತಿ(ಬಹುಷಃ ಸ್ವಲ್ಪವಾದರೂ); ಈ (ಉಳಿದಿರುವ) ಶಕ್ತಿ  ಹಾನಿಕರವಾಗಿದೆ. ಸ್ವಾತಂತ್ರ್ಯಾನಂತರ ನಮಗೊಂದು ‘ಹೊಸ ಸಂಹಿತೆ’ ಮತ್ತು ಸಮಾಜಕ್ಕೊಂದು ನೈತಿಕ ನೆಲೆಗಟ್ಟು ಅವಶ್ಯಕವಾದಾಗ ನಮ್ಮ ಬಳಿ ರಾಜಕೀಯ ಭ್ರಷ್ಟತೆಯನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ‘ಇದ್ದಕ್ಕಿದ್ದಂತೆ, ಮತ್ತೊಮ್ಮೆ, ನಾವು ಯಾವುದೇ ನಿಯಮಗಳಿಲ್ಲದೆ ರಾಷ್ಟ್ರವಾಗಿದ್ದೇವೆ.’ ಆಗಾಗ್ಗೆ ಆಕ್ರಮಣಕ್ಕೊಳಗಾದ, ವಶಪಡಿಸಿಕೊಳ್ಳಲ್ಪಟ್ಟ, ಲೂಟಿಮಾಡಿಸಿಕೊಂಡ – ಭಾರತ ‘ಗುರುತಿಸಲು ದೇಶವಿಲ್ಲದ, ಬರೀ ಒಡೆಯರಿದ್ದ’ ಒಂದು ಜನಸಮೂಹವಾಗಿತ್ತು. ನಾವು ಒಂದು ‘ಭೀಕರವಾಗಿ ಕ್ರೂರವಾದ ಮತ್ತು ಹಿಂಸೆಯ ನೆಲ’ವಾಗಿರುವುದಲ್ಲಿ ಆಶ್ಚರ್ಯವೇನಿದೆ?   

‘ಸಮಗ್ರತೆ’ ಇಲ್ಲದೆ ‘ಏಕೀಕರಣ’ ಸಾಧ್ಯವಿಲ್ಲವೆಂಬುದು ನಾವು ಗುರುತಿಸಬೇಕಾದ ಮತ್ತೊಂದು ಕ್ರೂರ ಸತ್ಯ. ಸ್ವಾತಂತ್ರ್ಯಾನಂತರದ ಭಾರತಕ್ಕೆ, ತನ್ನ ಆರಂಭಿಕ ಮತ್ತೇರಿದ ವರ್ಷಗಳಲ್ಲಿ, ಪ್ರಮುಖವಾದ ಒಂದು ‘ಸಮಗ್ರತೆ’ಗಾಗಿ ಧೃಢನಿಶ್ಚಯವಿರಲಿಲ್ಲ. ಸ್ವರಾಜ್ಯಕ್ಕಾಗಿದ್ದ ನಮ್ಮ ಅನ್ವೇಷಣೆ ನಮಗೆ ಅವಶ್ಯಕವಾಗಿದ್ದ ಒಂದು ದೃಷ್ಟಿಯನ್ನು ಕೊಟ್ಟಿತ್ತು.   ಈ ವಿಚಾರದಲ್ಲೇ ಅದರ ಉದ್ವೇಗವಿತ್ತು. ಈ ಅನ್ವೇಷಣೆ ಯೋಗ್ಯವಾಗಿತ್ತು ಹಾಗೂ ಈ ದೇಶ ಪ್ರದರ್ಶಿಸಿದ ಚಿಂತನೆ ಮತ್ತು ಕಾರ್ಯದ ಐಕ್ಯತೆಗೆ, ಎದ್ದುಕಾಣುವಂತಹ ಭಿನ್ನತೆಗಳನ್ನೆಲ್ಲಾ ಮುಳುಗಿಸಿಲು,  ಈ ಪರಿಕಲ್ಪನೆಯ ಸಾಮರ್ಥ್ಯ ಮತ್ತು ಈ ಪ್ರಯತ್ನಕ್ಕೆ ಅಗಾಧವಾಗಿದ್ದ ಏಕೀಕರಿಸುವ ಶಕ್ತಿಗಳೇ ಕಾರಣ. ಆ ರೋಮಾಂಚಕ ಕಾಲದಲ್ಲಿ ಒಂದು ನಿರ್ದಿಷ್ಟವಾದ, ಸಂಪೂರ್ಣ ರಾಷ್ಟ್ರೀಯತೆಯು ಸ್ವಲ್ಪ ದಿನಗಳವರೆಗಾದರೂ ನಮ್ಮ ಗ್ರಹಿಕೆಯಲ್ಲಿತ್ತು. ತದನಂತರ, ಬಹುಬೇಗ, ಸ್ವಾತಂತ್ರ್ಯಗಳಿಸುವ ಪ್ರಕ್ರಿಯೆಯಲ್ಲಿಯೇ ನಾವು ಈ ದೃಷ್ಟಿಯ ಚೇತನವನ್ನೇ ಕಳೆದುಕೊಂಡೆವು. 

ಎರಡು-ರಾಷ್ಟ್ರಗಳ ಸಿದ್ಧಾಂತವನ್ನು ಸ್ವೀಕರಿಸಿದ್ದೇ, ನನ್ನ ಮನಸ್ಸಿಗೆ, ಸ್ವಾತಂತ್ರ್ಯ ಸಂಘರ್ಷದ ದೊಡ್ಡ ವೈಫಲ್ಯ. ಈ ರಾಷ್ಟ್ರತ್ವದ ಪರಿಕಲ್ಪನೆಯ ಬಗೆಗಿನ ತದನಂತರದ ಎಲ್ಲ ಗೊಂದಲಗಳು ಹರಿದುಬಂದಿದ್ದು ಈ ಮೂಲಪಾಪದಿಂದಲೇ ಧರ್ಮವು ರಾಷ್ಟ್ರತ್ವದ ಆಧಾರವಾದರೆ, ಒಂದು ಲೆಕ್ಕಾಚಾರದ ಪ್ರತಿಕ್ರಿಯೆಯಾಗಿ, ಉಳಿದಿರುವ ಭೂಮಿ ‘ಹಿಂದೂ’ ಭಾರತ ಎಂದು ಪರಿಣಮಿಸುತ್ತದೆ. ಹೀಗಿದ್ದರೂ, ಎಲ್ಲವನ್ನು ಜೊತೆಗೆ ಕೊಂಡೊಯ್ಯುವಂಥ ಸನಾತನ ವಿಚಾರಧಾರೆ ಮತ್ತದರ ಆಶಯ ಇದರ ಪ್ರತಿಯಾಗಿ ನಡೆದದ್ದರಿಂದ ಇದು ಸಾಧ್ಯವಾಗಲಿಲ್ಲ. (ಇಲ್ಲ, ಇದು ಪಾಕಿಸ್ತಾನದ ವಾಸ್ತವತೆಯ ತಿರಸ್ಕಾರವಾಗಲಿ ಅಥವಾ ನಿರಾಕರಣೆಯಾಗಲಿ ಅಲ್ಲ). ಪರಿಕಲ್ಪನೆಯ ಮೂಲಾಂಶವೇ ಕಳೆದುಹೋದದ್ದರಿಂದ ನಂತರದ ತೊಂದರೆಗಳು ಸಹಜವಾಗಿ ಹಿಂಬಾಲಿಸಿದವು. ಯಾವಾಗ ನಮ್ಮ ದೃಷ್ಟಿಯೇ ಮಬ್ಬಾಯಿತೋ ಆಗ ಭಾರತದ ಮುಖವೇ ಗುರುತುಸಿಗದಂತಾಯಿತು. ಯಾವಾಗ ನಾವು ಏಕೀಕರಣಗೊಳಿಸಲಿಚ್ಛಿಸುವ ವಸ್ತುವೇ  ಗುರುತುಸಿಗದಂತಾಗುವುದೋ ಆಗ ರಾಷ್ಟ್ರೀಯ ಐಕ್ಯತೆ ಇತ್ಯಾದಿಗಳ ಕುರಿತ ನಮ್ಮ ಬಿನ್ನಹಗಳೆಲ್ಲ ‘ಬರಿಮಾತುಗಳಾಗಿಬಿಡುತ್ತವೆ. 

ಸ್ವಾತಂತ್ರ್ಯಾನಂತರ ರಾಜಕಾರಣ ನಮ್ಮ ರಾಷ್ಟ್ರೀಯ ಚಟುವಟಿಕೆಯಾಯಿತು ಮತ್ತು ರಾಜಕಾರಣಿಗಳು ಭಾರತದ ಮೇಲೆ ಒಂದುರೀತಿಯ ಏಕಸ್ವಾಮ್ಯತಾ ಹಕ್ಕನ್ನು ಒಂದು ರೀತಿಯ ಸೊಕ್ಕಿನಿಂದ ತಮಗೇ ತಾವೇ ವಹಿಸಿಕೊಂಡರು. ರಾಜಕಾರಣಿಗಳು ತಮ್ಮನ್ನು ದೇಶದೊಂದಿಗೆ ಗುರುತಿಸಿಕೊಂಡು ತಾವುಗಳು ಮಾತ್ರವೇ ದೇಶವನ್ನು ಪ್ರತಿನಿಧಿಸುತ್ತಿರುವಂತೆ ಮಾತನಾಡುತ್ತಿದ್ದರು. ರಾಜಕೀಯ ಪಕ್ಷಗಳು ತಮ್ಮ ಪಕ್ಷಪಾತೀಯ, ಸಂಕುಚಿತ ಹಿತಾಸಕ್ತಿಗಳನ್ನು ರಾಷ್ಟ್ರಧ್ವಜದಲ್ಲಿ ಮುಚ್ಚಿದರು. ಭಾರತೀಯ ರಾಜಕಾರಣಿಯ ಮುಖ ಅಸಹ್ಯವಾಗಿದೆ. ಹೆಚ್ಚೂಕಮ್ಮಿ, ಹೀಗೆ, ಹಲವು ವರ್ಷಗಳಲ್ಲಿ, ಭಾರತದ ಮುಖವೂ ಸಹ ಅದೇ ರೂಪರೇಖೆಗಳನ್ನು ಪಡೆಯಲಾರಂಭಿಸಿದೆ. ಸ್ವರಾಜ್ಯಕ್ಕಾಗಿ ಗಾಂಧಿಯ ಅನ್ವೇಷಣೆಯು ಸರ್ವತ್ಯಾಗಕ್ಕೂ ಸಿದ್ಧರಾದ ಭಾರತೀಯರ ಒಂದು ಸಂಪೂರ್ಣ ಶ್ರೇಣಿಯನ್ನೇ ನೀಡಿತ್ತು. ಆದರೆ ಈಗ? 

ನಮ್ಮ ಸ್ವಾತಂತ್ರ್ಯ ಚಳುವಳಿಯು, ಹೊಸದಾಗಿ ಸ್ವತಂತ್ರಗೊಂಡ ಎಳಸಾದ ದೇಶದ ಆಡಳಿತಕ್ಕಾಗಿ, ಸಡಿಲವಾಗಿ ಹೆಣೆದ ರಾಜಕೀಯ ಪಕ್ಷವಾಗಿ ರೂಪಾಂತರಗೊಂಡದ್ದು,  ಬಹುಶಃ ಒಂದು ಅನಿವಾರ್ಯತೆಯಾದರೂ, ಇದೀಗ ಹಿಂದಿರುಗಿ ನೋಡಿದಾಗ ಅದೊಂದು ಪ್ರಮಾದವೆಂದು ಸ್ಪಷ್ಟವಾಗುತ್ತದೆ. ಅಧಿಕಾರದ ಭ್ರಷ್ಟ ವಾಸ್ತವತೆಯು ಸ್ಪರ್ಶಿಸಿದಾಗ ಈ ಚಳುವಳಿಯು ಲಕ್ಷ್ಯದ ಮತ್ತು ಕರ್ತವ್ಯಪ್ರಜ್ಞೆಯ ರಕ್ಷಣಾಗೋಡೆಯನ್ನೆತ್ತಲು ವಿಫಲವಾಗಿತ್ತು. ಅವರೂ ಸಹ ನನ್ನ ಮತ್ತು ನಿಮ್ಮಂತವರೇ ಆಗಿದ್ದಿದ್ದರಿಂದ ಪ್ರಾಯಶಃ ಅವರ ಮೇಲೆ ಇಷ್ಟೊಂದು ದೋಷವನ್ನು ಹೊರಿಸುವುದು ತರವಲ್ಲ. ಆದರೆ ನಾವು ಇಂದಿನ ಕಷ್ಟಗಳಿಂದ ಪೀಡಿತರಾಗಿರುವುದು ಅವರ ವಿಫಲತೆಯ ಫಲವಾಗಿರುವಾಗ ಈ ಆಲೋಚನೆಯು ಅನಿವಾರ್ಯವಾಗಿದೆ. 

ಯಾವಾಗ ಸ್ವಾತಂತ್ರ್ಯ ಹೋರಾಟ ‘ಕುರ್ಚಿ’ಗಾಗಿ ಹೋರಾಟವಾಗಿ ಮಾರ್ಪಟ್ಟಿತೋ, ಅಣುಗಳೆಲ್ಲವನ್ನು ಕೋಶಕೇಂದ್ರದೆಡೆಗೆ ಸೆಳೆದಿಟ್ಟಿದ್ದ ಐಕ್ಯತೆಯ ಆಕಾಂಕ್ಷೆ ಕೋಶಾತ್ಮಕ ವಾಸ್ತವಗಳಾದ ಜಾತಿ ಮತ್ತು ಪ್ರಾಂತ್ಯಗಳೆಡೆಗೆ ಚಲಿಸಲಾರಂಭವಾಯಿತು. ನಮ್ಮ ರಾಜಕೀಯ ನಾಯಕತ್ವದ ‘ಮುನಿಸಿಪಲ್ ಮತಿ’ಯ ಗುರುತು ತನ್ನನ್ನು ತಾನೇ ಪ್ರತಿಪಾದಿಸಲಾರಂಭಿಸಿತು. ಈ ನೆಲದ ಜನರನ್ನು ನಡೆಸಿದ್ದ ಮತ್ತು ನಡೆಸುತ್ತಿರುವ ಶಕ್ತಿಗಳ ಒಂದು ಐತಿಹಾಸಿಕ ಗ್ರಹಿಕೆಯಂತೂ ಬೇಡ, ಈ ದೇಶದ ಮಹಾನ್ವ್ಯಾಪ್ತಿಯ ಭೌಗೋಳಿಕ ತಿಳಿವಳಿಕೆಯಾದರೂ(ಅದು ಎಷ್ಟು ಟೀಕಾತ್ಮಕವಾಗಿಯಾದರೂ ಕೇಳಿಸಲಿ) ಇರಬೇಕಿತ್ತು. ಆದರೆ, ಭಾರತದ ಪರಿಕಲ್ಪನೆ, ಮುಂಗಾಣ್ಕೆಗಳ ಗೈರಿನಲ್ಲಿ ಈ ರಾಷ್ಟ್ರವನ್ನು ರೂಪಿಸಲು ಅವರವರ ಸಂಕುಚಿತ ಪೂರ್ವಾಗ್ರಹಗಳ ರೀತಿಯಲ್ಲೇ ಪ್ರಯತ್ನಿಸಲಾಯಿತು. 

ಹೀಗಾಗಿ ಕೀಳುದರ್ಜೆಯ ರಾಜಕೀಯ ಪ್ರಜಾಪೀಡಕರೇ ಭಾರತದ ಮುಖವಾಗಿದ್ದಾರೆ. ಸಾಲುಗಟ್ಟಿ ನಿಂತ ಪೋಲಿಸರು ಮತ್ತವರ ಕಾರುಗಳ ಸೈರನ್ನುಗಳು, ಅರೆಸೈನಿಕ ಪಡೆಗಳು, ಅಧಿಕೃತ ಹೆಲಿಕಾಪ್ಟರ್ಗಳು, ಜೈಲುಗಳಲ್ಲಿನ ಕಿರುಕುಳ, ಸರ್ಕಾರದ ಮುಖ್ಯಸ್ಥರ ಅಧಿಕೃತವಾಗಿ ಪ್ರಾಯೋಜಿತವಾದ ಭ್ರಷ್ಟಾಚಾರ, ನೈತಿಕತೆಯ ನಶಿಸುವಿಕೆ, ತಕ್ಷಣದ ರಾಜಕೀಯ ಲಾಭಕ್ಕಾಗಿ ನಿರಂತರವಾಗಿ, ಅಪ್ರಾಮಾಣಿಕವಾಗಿ ನಾಯಕರುಗಳನ್ನು ಭಟ್ಟಂಗಿಗಳಾಗಿ ಅನುಸರಿಸುವುದು, ಈಗಿನ ನಡವಳಿಕಾರೂಢಿಯ ಮಟ್ಟಗಳಾಗಿಬಿಟ್ಟಿವೆ. ತಮ್ಮನ್ನು ಆಳುವವರ ಮಾರ್ಗಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತೀಯರಷ್ಟು ಬೇಗ ಮತ್ತಿನ್ಯಾವ ನೆಲದ ಜನರೂ ಇರಲಾರರು.. ‘ಯಥಾ ರಾಜ ತಥಾ ಪ್ರಜ’ – ಈ ರೀತಿಯ ಗಾದೆ ನಮ್ಮಲ್ಲಿ ಮಾತ್ರ ಇರಲು ಸಾಧ್ಯ.

ಸ್ವರಾಜ್ಯದ ಕನಸು ಅದರೊಂದಿಗೆ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನೂ ತರುತ್ತದೆಂದು  ನಮ್ಮನ್ನು ನಂಬುವಂತೆ ಮಾಡಿತು. ನಮಗೀಗಿರುವ ಈ ಎಲ್ಲಾ ತೊಂದರೆಗಳ ಜೊತೆಗೆ ನಾವು ಎತ್ತರಕ್ಕೇರಿಸುತ್ತಿರುವ ಬಡತನವೆಂಬ ಅಭೇದ್ಯ ತಡೆಗೋಡೆಯೊಂದಿಗೆ ಸ್ಪರ್ಧಿಸಬೇಕೆಂದು ಎಣಿಸಿಯೇಯಿರಲಿಲ್ಲ. ‘ದರಿದ್ರ ನಾರಾಯಣ’ನು ನಮ್ಮ ದಾರಿಯಲ್ಲಿ ನಿಲ್ಲುತ್ತಾನೆ. ದೇಶದ ಬಡತನಪೀಡಿತರಾದ ಈ ನಮ್ಮ ೪೦ ಕೋಟಿ ಗಂಡಸರು ಮತ್ತು ಹೆಂಗಸರು ಯಾವ ಭಾರತದ ಜೊತೆ ಗುರುತಿಸಿಕೊಳ್ಳಬೇಕು? ಈ ಹಾದಿಯಲ್ಲೇ ಎಲ್ಲೋ ‘ವರ್ಣಾಶ್ರಮ ಧರ್ಮ’ವೆಂಬ ಅಡಚಣೆಯೂ ಇರುತ್ತದೆ. ಎಲ್ಲ ದೇಗುಲಗಳ ಬಾಗಿಲುಗಳು ‘ದ್ವಿಜ’ರಲ್ಲವೆನ್ನುವ ೨೦ ಕೋಟಿಯಷ್ಟಿರುವ ಜನರಿಗೆ ತೆರೆದಿದ್ದರೂ ಇವರುಗಳು ಯಾವ ಭಾರತದೊಂದಿಗೆ ಗುರುತಿಸಿಕೊಳ್ಳಬೇಕು? ಇವರುಗಳಿಗೆ ಭಾರತದ ಮುಖ ಹೇಗಿತ್ತೋ ಹಾಗೆಯೇ ಉಳಿದಿದೆ: ಅದು ಸಹಜ ವ್ಯವಸ್ಥೆಯಿಲ್ಲದ ಮತ್ತು ಮೂಲಭೂತ ನ್ಯಾಯವೂ ಇಲ್ಲದ, ಪೂರ್ವಾಗ್ರಹಪೀಡಿತ, ಅಸಮಾನತೆಯ ಮುಖ. ಇದು ಗ್ರಾಮ ಲೆಕ್ಕಿಗ ಅಥವಾ ಪೋಲೀಸ್ ಪೇದೆಯ, ಪೋಸ್ಟ್ ಆಫೀಸ್ನಲ್ಲಿನ ಸಣ್ಣ ಗುಮಾಸ್ತನ ಮುಖ. 

ಹಳೆಯ ಊಳಿಗಮಾನ್ಯ ಮುಖ್ಯಸ್ಥರ ಬದಲಿಗೆ ಅವರಷ್ಟೇ ತಿಳಿಗೇಡಿಯಾದ ಒಂದು ಹೊಸ ಶ್ರೇಣಿವ್ಯವಸ್ಥೆ ಬಂದಿದೆ. ಹಿಂದಿನ ದಿನಗಳಲ್ಲಿದ್ದಂತೆಯೇ, ಈ ವ್ಯವಸ್ಥೆಯಲ್ಲೂ ಈ ಸಣ್ಣ ಪ್ರಜಾಪೀಡಕರು ತಮ್ಮ ತಕ್ಷಣದ ಮೇಲಧಿಕಾರಿಗಳನ್ನು, ಆ ಅಧಿಕಾರಿಗಳು ತಮ್ಮ ಮೇಲಿನವರನ್ನು, ಪಿರಮಿಡಾಕಾರದಲ್ಲಿ, ಅನುಕರಿಸುತ್ತಾ ಭಾರತದ ಮುಖವನ್ನು ಅದರ ಅಸಹ್ಯ ರಾಜಕಾರಣಿಯಂತೆ ಸ್ವವಿನಾಶಕಾರಿಯನ್ನಾಗಿಸುತ್ತದೆ. ಆದ್ದರಿಂದ, ಏಕೀಕರಣದ ಅನ್ವೇಷಣೆಯಲ್ಲಿ ನಾವೇನಾದರೂ ತೊಂದರೆಗಳನ್ನು ಕಂಡುಕೊಂಡರೆ ಆಶ್ಚರ್ಯಪಡಬೇಕೇ? ‘ಸಮಗ್ರತೆ’ಎಂಬ ಧೃಡಚಿತ್ತದೊಂದಿಗೆ ಮಾತ್ರ ಏಕತೆ ಸಾಧ್ಯ. 

ಎಲ್ಲ ಸಮಾಜಕ್ಕೂ ಒಂದು ನೈತಿಕ ನೆಲೆಗಟ್ಟು ಇರಲೇಬೇಕು. ಸ್ವಾತಂತ್ರ್ಯಾನಂತರ ನಮ್ಮ ಸಮಾಜದ ಕೋಶಾತ್ಮಕ ಸಂರಚನೆಯಲ್ಲೊಂದು ವಿಭಜನೆಯ ಅವಶ್ಯಕತೆ ಬಂದಾಗ ಅದಕ್ಕಾಗಿ ನಮ್ಮ ರಾಜಕೀಯ ನಾಯಕತ್ವ ಕೊಟ್ಟದ್ದು ಮಾತ್ರ ಒಂದು ಅಸಹ್ಯ ವಿನಾಶೋತ್ಸವ. ಹೌದು, ಅಸ್ತಿತ್ವದಲ್ಲಿದ್ದದ್ದು ರೋಗಪೀಡಿತವಾಗಿತ್ತಾದ್ದರಿಂದ ಬದಲಾಯಿಸಬೇಕಿತ್ತು. ಅದಕ್ಕಾಗಿ ವಿಚಾರ ಮತ್ತು ಇತಿಹಾಸದ ಪ್ರಜ್ಞೆ ಇವೆರಡರ ಅವಶ್ಯಕತೆಯಿತ್ತು. ಸ್ವಾತಂತ್ರ್ಯ ಆಂದೋಲನದಿಂದ ಹೊಣೆಗಾರಿಕೆಯ ಉತ್ತರಾಧಿಕಾರ ಪಡೆದ ರಾಜಕಾರಣಿಗಳು ಭಾರತದ ಸಾಮಾಜಿಕ ರೂಪಾಂತರವು ತಮ್ಮದೊಬ್ಬರದೇ ಜವಾಬ್ದಾರಿಯೆಂದು ಸೊಕ್ಕಿನಿಂದ ತಾವೇ ವಹಿಸಿಕೊಂಡರು. ಈ ಕೆಲಸ ಅವರ ಸಾಮರ್ಥ್ಯಕ್ಕೆ ನಿಲುಕದ್ದಾದ್ದರಿಂದ ಅದು ವಿಫಲಗೊಳ್ಳಲೇಬೇಕಿತ್ತು. 

ಭಾರತ ರಾಷ್ತ್ರದ ಅವಶ್ಯ ನಿಜಸ್ಥಿತಿಯಿರುವುದೇ ನಂಬಿಕೆಯಲ್ಲಿ. ಆ ನಂಬಿಕೆ ಎಂಥ ಪ್ರೇರಣೆಯದಾಗಿರಲಿ, ಅಥವಾ ವರ್ಣಲೇಪಿತವಾಗಿರಲಿ, ಭಾರತೀಯರು ಆ ನಂಬಿಕೆಯಿಂದ ಪಡೆಯುವಷ್ಟು ನೈತಿಕ ಮತ್ತು ಸಾಮಾಜಿಕ ಪೋಷಣೆ ಜಗತ್ತಿನ ಯಾವ ರಾಷ್ಟ್ರವೂ ಪಡೆಯುವುದಿಲ್ಲ. ಈ ವಿಶಾಲವಾದ ನಾಡು ಹಲವಾರು ಬಾರಿ ಸುಧಾರಣಾ ಘಟ್ಟಗಳನ್ನು ನೋಡಿದೆ. ಇವುಗಳು, ಸ್ವಹಿತಾಸಕ್ತಿಗಳಿಂದ ಕೂಡಿದ್ದ ಧಾರ್ಮಿಕ ಅಸ್ಪಷ್ಟತೆಗಳಿಂದ ಸಂಗ್ರಹಗೊಂಡಿದ್ದ ಸಮಸ್ಯೆಗಳಿಂದ ಸಮಾಜವನ್ನು ತೊಳೆಯಲು ಶುರುವಾದ ಸ್ವಯಂ ಶುದ್ಧೀಕರಣ ಪ್ರಕ್ರಿಯೆಗಳಾಗಿದ್ದವು. ಈ ಕೆಲಸವನ್ನು ಕೈಗೊಂಡವರು ನಮ್ಮ ರಾಜಕೀಯ ನಾಯಕರಲ್ಲ, ನಮ್ಮನ್ನಾಳಿದವರೂ ಅಲ್ಲ ಬದಲಾಗಿ ತಮ್ಮ ನಂಬಿಕೆ ಮತ್ತು ತೀವ್ರ ಪ್ರಚೋದನೆಯಿಂದಾಗಿ ಸಿಡಿದೆದ್ದ ಅಸಾಮಾನ್ಯ ಭಾರತೀಯರು.

ನಮ್ಮ ಸ್ವತಂತ್ರ ಭಾರತದ ರಾಜಕೀಯ ನಾಯಕತ್ವವು, ಯೋಗ್ಯತೆಯಿಲ್ಲದಿದ್ದರೂ, ಇಂತಹದ್ದೇ ಒಂದು ಕಾರ್ಯಕ್ಕೆ ಕೈಹಾಕಿತು. ಪ್ರಾಯಶಃ ಎಲ್ಲರೂ ಅಲ್ಲ, ಆದರೆ ಅದರಲ್ಲಿದ್ದ ಒಂದು ದೊಡ್ಡ ಭಾಗಕ್ಕೆ ಈ ಕೆಲಸ ಮಾಡಲು ಸಾಮರ್ಥ್ಯವಿರಲಿಲ್ಲ. ಯಾರು ಯೋಗ್ಯರಾಗಿದ್ದರೋ ಮತ್ತು ಒಂದು ಘನವಾದ ಆದರ್ಶವಾದದಿಂದ ಪ್ರಭಾವಿತಗೊಂಡಿದ್ದರೋ ಅವರು ಒಂದು ಜ್ಞಾನೋದಯಗೊಂಡ ಅನುಯಾಯಿಗಳ ವರ್ಗವನ್ನು ಸೃಷ್ಟಿಸಲಾಗಲಿಲ್ಲ. ನಮ್ಮ ಸಂವಿಧಾನ ಸಭೆ ನಮ್ಮ ಜನರಿಗೆ ‘secular democracy’ (ಧರ್ಮನಿರಪೇಕ್ಷ ಪ್ರಜಾಪ್ರಭುತ್ವ) ಎಂಬ ಧ್ಯೇಯವನ್ನು ನೀಡಿತು. ಆದರೆ ನಾವು ‘ಸೆಕ್ಯುಲರ್’ ಎಂಬ ಪದವನ್ನು ಸರಿಯಾಗಿ ಅರ್ಥೈಸಿಕೊಳ್ಳಲೇ ಇಲ್ಲ. ಏಕೆಂದರೆ, ನಮ್ಮನ್ನು ಮುನ್ನಡೆಸಿದ ಕೆಲವೇ ಕೆಲವು ಮನಸ್ಸುಗಳ ಹೊರತಾಗಿ ಉಳಿದ ನಮ್ಮ ರಾಜಕೀಯ ನಾಯಕತ್ವವು ಸಂಕುಚಿತ ಧರ್ಮಾಂಧತೆಯಿಂದ ಪೀಡಿತವಾಗಿತ್ತು. ಸೆಕ್ಯುಲರಿಸಂ, ಮೂಢನಂಬಿಕೆಯ ವೈಜ್ಞಾನಿಕ ನಿರಾಕರಣೆಯಾಗಲಿ, ಧರ್ಮ ಮತ್ತು ಸರ್ಕಾರದ ಸಂಪೂರ್ಣ ಬೇರ್ಪಡಿಸುವಿಕೆಯಾಗಲಿ ಆಗದೆ, ಒಂದು ರಾಜಕೀಯ ಅನುಕೂಲವಾಯಿತು. ರಾಜಕೀಯಪ್ರೇರಿತ ಕಾರ್ಯವಾಸಿ ಶ್ರದ್ಧಾಭಕ್ತಿ, ಕಣ್ಣು ಮತ್ತು ಮತವನ್ನು ಸೆಳೆವ ಸನ್ನೆಗಳು, ಈ ಪರಿಕಲ್ಪನೆಯ ಚೇತನದ ಬದಲಿ ಬಂದುಕೂತವು. ನಾಯಕತ್ವವು ಯಾವುದನ್ನ ಪ್ರವೀಣ ಚಿಹ್ನೆಗಳು ಎಂದುಕೊಳ್ಳುತ್ತದೋ (ಸಿಖ್ ಅಥವಾ ಮುಸ್ಲಿಮರು ಅಧ್ಯಕ್ಷಾರಾಗಬೇಕೆನ್ನುವುದು ; ವಿವಿಧ ಮತಗಳಿಗೆ ‘ಸಮತೋಲಿತ’ ಸಾರ್ವಜನಿಕ ರಜಾದಿನಗಳು) ಅವುಗಳ ರೂಪ ಟೊಳ್ಳಾಗಿದೆ ಮತ್ತು ಅವುಗಳನ್ನ ಸಿನಿಕತನದ ತಿರಸ್ಕಾರದೊಂದಿಗೆ ಸ್ವಾಗತಿಸಲಾಗುತ್ತದೆ. ಆದ್ದರಿಂದ, ದೇಶ ಈಗೇನಾದರೂ ತೊಂದರೆಗಳನ್ನೆದುರಿಸಿದರೆ, ಅದರ ಜವಾಬ್ದಾರಿಯು ಪ್ರಶ್ನಾತೀತವಾಗಿ ನಿಂತಿರುವುದು ಹಿಂದಿನ ಮತ್ತು ಇಂದಿನ ರಾಜಕೀಯ ನಾಯಕತ್ವದ ಮೇಲೆ.          

ಭಾರತೀಯ ರಾಜಕಾರಣಿಯೇ ಭಾರತದ ಐಕ್ಯತೆಗೆ ಧಕ್ಕೆತರಬಹುದಾದಂತಹ ಒಂದು ದೊಡ್ಡ ಅಂಶವೆಂಬುದು ನನ್ನ ದೃಢವಾದ ನಂಬಿಕೆ. ಮುಂದಿನ ಅಂಶವೇನೆಂದರೆ, ಈ ‘ಪ್ರಾತಿನಿಧಿಕ ಸ್ವಭಾವ’ವನ್ನು ಸಾಧಿಸಲು ನಮ್ಮ ರಾಜಕಾರಣಿಗಳು ಅಳವಡಿಸಿಕೊಳ್ಳುವ ವಿಧಾನಗಳು. ನಾವು ಭ್ರಷ್ಟಗೊಳಿಸಿರುವ ಪ್ರಾತಿನಿಧಿಕ ಪ್ರಜಾಪ್ರಭುತ್ವ ಅತ್ಯಂತ ವಿಭಜನಾತ್ಮಕವಾಗಿರಲು ಕಾರಣವಾಗಿರುವುದು ನಾವೇ ಸಂಸ್ಕರಿಸಿದ ಚುನಾವಣಾಪ್ರಕ್ರಿಯೆ, ಅದರ ಸರ್ವವ್ಯಾಪಿ ಭ್ರಷ್ಟಾಚಾರ, ಶೀಘ್ರಮಾರ್ಗಗಳು, ಹಾಗೂ ಯಾವುದೇ ನಿಯಮ ಪಾಲಿಸದೆ ಎಲ್ಲವನ್ನು ಗೆದ್ದವರೇ ಎಲ್ಲವನ್ನೂ ಒಯ್ಯುವ ವಿಧಾನ . ದೂಷಿಸಬೇಕಿರುವುದು ಹಾಡನ್ನಲ್ಲ; ಮಾಧುರ್ಯದ ಅಂತರ್ಗತ ಸಂಯಮ ಮತ್ತು ಶಿಸ್ತನ್ನು ಪ್ರೀತಿಸದ ಹಾಡುಗಾರನನ್ನು. ಭಯವನ್ನು ಸೃಷ್ಟಿಸಿ ಮತ್ತದನ್ನೇ ದುರ್ಬಳಿಸುವ ಕೇಡುಬಗೆಯುವ ಕಲೆಯನ್ನು ಇಂದಿನ ನಾಯಕತ್ವ ಸಿದ್ಧಿಸಿಕೊಂಡಿದೆ. 

ದೇಶದೊಳಗಿನ ಪ್ರತಿಯೊಂದು ವಿಚಾರವನ್ನು ಚುನಾವಣಾ ಹಿತಾಸಕ್ತಿಗೆ ಇಳಿಸಲಾಗುತ್ತಿದೆ. ಹಿಂದೂಗಳ ವಿರುದ್ಧ ಮುಸ್ಲಿಮರು; ಮುಸ್ಲಿಮರು ಮತ್ತು ಹರಿಜನರು ಮತ್ತು ಕ್ರಿಶ್ಚಿಯನ್ನರು ಮತ್ತು ಅಂತ್ಯವಿಲ್ಲದ ಇಂತಹ ಬೇಸರ ತರುವ ಕ್ರಮಪಲ್ಲಟನೆಗಳು ಮತ್ತು ಸಂಯೋಜನೆಗಳು. ‘ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾರೆ, ನಾವು ಮಾತ್ರ ಅವರನ್ನು ರಕ್ಷಿಸಿಕೊಳ್ಳಬಹುದು.’ ನಿಜವಾದ ಅಪಾಯವಿಲ್ಲದಿದ್ದರೆ ಅದರ ಕುರಿತು ಭಯವನ್ನು ಸೃಷ್ಟಿಸುವುದು. ಯಾವ ಧರ್ಮದಿಂದ, ಧಾರ್ಮಿಕ ಉಪ-ಸಮುದಾಯದಿಂದ, ಯಾವ ಜಾತಿಯಿಂದ, ಯಾವ ಭಾಷೆಯಿಂದ ಎಷ್ಟು ಮತಗಳು. ಪಂಜಾಬಿನಲ್ಲಿ ಹಿಂದೂವನ್ನು ಸಿಖ್ಖನಿಂದ ದೂರವಿಡುವುದು ಮತ್ತು ಸಮಯಕ್ಕೆ ಸರಿಯಾಗಿ ಆ ರಾಜ್ಯದ ಸಮಸ್ಯೆಗಳನ್ನು ಪರಿಹರಿಸದಿರುವುದು, ಏಕೆಂದರೆ ಇದೇ ಇಡೀ ಚುನಾವಣಾ ಪರಿಗಣನೆಯಮೇಲೆ ಪ್ರಾಬಲ್ಯ ಹೊಂದಿರುವುದು. ಅಸ್ಸಾಂನಲ್ಲಿ, ಭಾರತಕ್ಕೆ ಪ್ರವೇಶಿಸುವ ವಿದೇಶಿಯರನ್ನು ನಿಲ್ಲಿಸುವ ಮತ್ತು ಗುರುತಿಸುವ ಒಂದು ಚಳುವಳಿ ನಡೆಯುವಾಗ, ಸಂಪೂರ್ಣವಾಗಿ ಧರ್ಮದಾಧಾರದಮೇಲೆ, ಅದಕ್ಕೆ ಪ್ರತಿವಾದ ಸೃಷ್ಟಿಸುವಂತೆ ಅಧಿಕೃತ ಪ್ರೋತ್ಸಾಹ ನೀಡಲಾಗುತ್ತದೆ. ಇಂದು ಇಡೀ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳು ಸಂಕುಚಿತವಾದ, ಭೀತಿಗೊಂಡ ಪಂಥೀಯ ಗುಂಪುಗಳಾಗಿ ವಿಭಜನೆಯಾಗಿವೆ, ಎಲ್ಲರೂ ರಾಜಕೀಯ ರಕ್ಷಣೆಯ ಮೂಲಕ ಅವರ ಭಯಕ್ಕೆ ಪರಿಹಾರವನ್ನು ಬಯಸುತ್ತಾರೆ.  ಉನ್ನತ ನಾಯಕತ್ವದ ಚುನಾವಣಾ ಮಾತುಗಳು ರಾಜಕೀಯ ಭಿನ್ನಾಭಿಪ್ರಾಯವನ್ನು ರಾಷ್ಟ್ರದ ಮೇಲಿನ ನಂಬಿಕೆದ್ರೋಹವೆಂಬಂತೆ ಸಮೀಕರಿಸುತ್ತಿವೆ. ಅವರಿಗೆ ಒಮ್ಮತವೆಂದರೆ ಒಂದು ಸಮಂಜಸವಾದ ಮಧ್ಯಮನೆಲೆಗೆ ಬರುವುದಲ್ಲ, ಬದಲಾಗಿ ಬುದ್ಧಿಹೀನವಾಗಿ ಅವರಿಗನುಗುಣವಾಗಿರುವುದು. ಹೌದು, ರಾಜಕೀಯ ನೈತಿಕತೆಗಳ ಬದಲಾಗಿ ಹಿತಾಸಕ್ತಿಗಳ ಒಂದು ಕ್ಷೇತ್ರ. ಆದರೆ ತತ್ವಗಳಂತೆ ಮುಖವಾಡ ಧರಿಸಿರುವ ಸ್ವಹಿತಾಸಕ್ತಿಗಳ ಮೈದಾನವಂತೂ ಅಲ್ಲ. ಎಲ್ಲ ಪ್ರಯತ್ನಗಳೂ ಹಿಂದಿನ ‘ವಿಭಜಿಸಿ ಆಳುವ’ ಕಡೆಗೇ ನಿರಂತರವಾಗಿ ನಿರ್ದೇಶಿತವಾದರೆ, ನಾವು ಯಾರೊಂದಿಗೆ ಒಗ್ಗೂಡಬೇಕು’? 

ಮತ್ತೊಂದೆಡೆ, ಭಾರತದೇಶವನ್ನು ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ಜೊತೆ ಅಸಂಬದ್ಧವಾಗಿ ಗುರುತಿಸಿದ ಕೇಂದ್ರೀಯ ನಾಯಕತ್ವವು ‘ಐಕ್ಯತೆ’ಯ ಬಗ್ಗೆ ಟೊಳ್ಳು ಅರ್ಥಹೀನ ಮಾತುಗಳನ್ನಾಡಲು ಮುಂದುವರೆಸಿದೆ. ಇದು ಅಧಿಕಾರವನ್ನೇ ಕುಡಿದು ಮತ್ತೇರಿಸಿಕೊಂಡ, ಪ್ರಜಾತಾಂತ್ರಿಕ ನಿರ್ಬಂಧನೆಗಳ ಬಗ್ಗೆ ತಾಳ್ಮೆಯಿಲ್ಲದ ಮತ್ತು ಎಲ್ಲ ಸಂದರ್ಭಗಳಲ್ಲೂ ಆಡಳಿತ ಪಕ್ಷದ ಸದಸ್ಯರು ಗುಲಾಮರಂತೆ ಹಾಡುವ ಪ್ರಶಂಸಾಗೀತೆಗಳ ಬಲಿಪಶು. ಈ ಭಟ್ಟಂಗಿ ಹಾಡುಗಳು ನಾಯಕನ ಪೂಜೆಯಲ್ಲ. ಈ ಕ್ರಮಗಳಿಗೆ ಊಳಿಗಮಾನ್ಯದ ಲಕ್ಷಣವಿರುವ ಕಾರಣ ಈ ಭಟ್ಟಂಗಿತನ ನಾಯಕನ ಪೂಜೆಮಾಡುವವರ ವಿರುದ್ಧ ಇರುವಂಥದ್ದು. 

ನಮ್ಮ ಕೇಂದ್ರೀಯ ನಾಯಕತ್ವಕ್ಕಿರುವುದು ದೇಶದ ದೈನಂದಿನ ವಿಷಯಗಳೆಡೆಗೆ ಬೇಜಾರು ಮತ್ತು ಅಸಾಮರ್ಥ್ಯ. ಇದು, ಇವುಗಳೆಲ್ಲವನ್ನು ಅರಾಜಕತೆಗೆ ತಿರುಗಲು ಬಿಟ್ಟು ನಮ್ಮ ಸಮಾಜದ ಕೋಶಕಣಗಳ ಪಥಕ್ಕೆ ವೇಗವನ್ನು ನೀಡುತ್ತದೆ. ನಮ್ಮ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಕುರಿತಾಗಿ ನಮಗೆ ಮಹತ್ವಪೂರ್ಣವಾದ ದೃಷ್ಟಿಕೋನಗಳಿವೆ. ಇನ್ನೂ ಕ್ರೂರ ವ್ಯಂಗ್ಯವೇನೆಂದರೆ, ಯಾವುದೇ ಅರ್ಥಪೂರ್ಣವಾದ ರೂಪದಲ್ಲಿ, ಅಂತರರಾಷ್ಟ್ರೀಯ ಕ್ಷೇತ್ರದ ಮೇಲೆ ಯಾವುದೇ ವಿಚಾರದಿಂದ ಪ್ರಭಾವ ಬೀರಲು ನಮಗೆ ಸಾಧ್ಯವಾಗುವುದಿಲ್ಲ. ಮೊದಲಿಗೆ, ನಮ್ಮಲ್ಲಿ ಹೇಳಲು ಯೋಗ್ಯವಾದದ್ದೇನೂ ಉಳಿದಿಲ್ಲ, ಮತ್ತು ನಾವು ಹೇಳಬೇಕಾದಂತಹ ವಿಷಯವನ್ನು ಪುಷ್ಟೀಕರಿಸಿಕೊಳ್ಳಲು ನಮ್ಮ ಬಳಿ ದೇಶೀಯ ಸಾಮರ್ಥ್ಯವೂ ಇಲ್ಲ. ಇದು ನಮ್ಮ ಭಾರತದ ಪರಿಕಲ್ಪನೆಯಲ್ಲಿನ ಕಾಣ್ಕೆಯ ಗೈರು. ನಮಗೆ ಈ ದೃಷ್ಟಿಯೇ ಒಂದು ಅಖಂಡ ಸಂಪೂರ್ಣತೆ ಕೊಡಬಹುದಾದಂತಹದ್ದು. 

ಹಾಗಾದರೆ ನಮಗೇನು ಬೇಕು? ಎಲ್ಲಾ ಉತ್ತರಗಳನ್ನು ತಿಳಿದಿರುವಂತೆ ನಾನು ನಟಿಸಲು ಸಾಧ್ಯವಿಲ್ಲ. ಆದರೂ, ನಮ್ಮ ಪ್ರಯತ್ನದ ಆರಂಭವು ರಾಜಕಾರಣಿ ಮತ್ತು ರಾಜಕೀಯದ ಪ್ರಾಮುಖ್ಯತೆಯನ್ನು ನಮ್ಮ ರಾಷ್ಟ್ರಜೀವನದಲ್ಲಿ ಕಡಿಮೆ ಮಾಡುವಲ್ಲಿ ಅಡಗಿದೆ ಎಂದು ನಾನು ಭಾವಿಸಿದ್ದೇನೆ. ಪ್ರಸ್ತುತ ರಾಜಕೀಯ ನಾಯಕತ್ವವು ನಮ್ಮನ್ನು  ವಿಫಲಗೊಳಿಸಿದ್ದರೆ, ನಾವು ಅದನ್ನು ಬದಲಿಸಬೇಕಾದದ್ದು ತುರ್ತಾದ ಮತ್ತು ಅತ್ಯಧಿಕ ಪ್ರಾಮುಖ್ಯತೆಯ ವಿಷಯ. ರಾಷ್ಟ್ರಜೀವನದ ಎಲ್ಲಾ ಹಂತಗಳಲ್ಲಿ ಹೊಸ ಪೀಳಿಗೆಯ ನಾಯಕರು ನಮಗೆ ಬೇಕು. ನಮಗೆ ಸಕಾರಾತ್ಮಕ ಚುನಾವಣಾ ಸುಧಾರಣೆಗಳ ಅಗತ್ಯವಿರುವುದರಿಂದ ಚುನಾವಣೆಗಳಲ್ಲಿ ಭ್ರಷ್ಟ ಮತ್ತು ವಿಭಜನಾ ಅಂಶಗಳನ್ನು ತೆಗೆದುಹಾಕಿ ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸುವಂತೆ ಸಾಧ್ಯಗೊಳಿಸಬೇಕಿದೆ. ಆಗಲೇ, ಈಗಿರುವ ಗೊಂದಲದ ಮೋಡದಿಂದ, ನಿಜವಾದ ಭಾರತದ ಕಾಣ್ಕೆ ಪ್ರಾಯಃ ಹೊರಹೊಮ್ಮುತ್ತದೆ. 

ಕೃಪೆ : ಸೆಮಿನಾರ್

ಅನುವಾದ: ಯಶವಂತ ಟಿ. ಎಸ್

ಯಶವಂತ ಟಿ. ಎಸ್. ಅವರು ತುಮಕೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕರು ಹಾಗೂ PhD ಸಂಶೋಧನಾರ್ಥಿ. ರಾಷ್ಟ್ರವಾದದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಸಂಸ್ಕೃತಿ ಅಧ್ಯಯನ ಮತ್ತು ರಾಜಕೀಯ ತತ್ವಶಾಸ್ತ್ರ ಇವರ ಸಂಶೋಧನಾ ವಲಯಗಳು

ಪ್ರತಿಕ್ರಿಯಿಸಿ