ಬಿಕ್ಕಟ್ಟು ಅಥವಾ ಸಂಕಟಗಳು ಯಾವ ಕಾಲಮಾನವನ್ನೂ ಬಿಟ್ಟಿಲ್ಲ. ಪ್ರತಿ ಕಾಲಕ್ಕೂ ಅದರದ್ದೇ ಆದ ಸವಾಲುಗಳು ಅಂದಿಗೂ ಇದ್ದವು. ಹಾಗೆಯೇ ಇಂದಿಗೂ ಇವೆ. ಸವಾಲುಗಳ ಸ್ವರೂಪ ಬೇರೆಯಿರಬಹುದು. ಸದ್ಯದ ಬಿಕ್ಕಟ್ಟು ತುಸು ಹೆಚ್ಚಿನದೇ ಎನಿಸಲು ಕಾರಣಗಳಿವೆ. ಸಾಹಿತ್ಯದ ಓದು ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ಹಲಬುವ ನಾವೇ ಮಕ್ಕಳಲ್ಲಿ, ಯುವಕರಲ್ಲಿ ಸಾಹಿತ್ಯದಿಂದ ಪ್ರಯೋಜನವಿಲ್ಲವೆಂಬ ವಿಷ ಬೀಜವನ್ನ ಬಿತ್ತುತ್ತಿದ್ದೇವೆ. ಸಮಾಜವಾದವೆಂದು ಹಲುಬುತ್ತ ಪಕ್ಕಾ ಕ್ಯಾಪಿಟಲಿಸ್ಟ್ ಗಳಾಗಿರುವ ನಾವು ಎಲ್ಲವನ್ನೂ ’ಪ್ರಯೋಜನ’, ’ಉಪಯೋಗ’ ಗಳೆಂಬ ಹೊಸ ಮಾಪಕಗಳಲ್ಲಿ ಅಳೆಯುತ್ತಿದ್ದೇವೆ. ಪರಿಣಾಮ ಬೀದಿ ಬದಿಯ ಪುಸ್ತಕದ ಅಂಗಡಿಗಳು ಕಣ್ಮರೆಯಾಗುತ್ತಿವೆ. ಧೂಳು ಹಿಡಿದ ಹಳೆಯ ಪುಸ್ತಕಗಳನ್ನ ಒರೆಸಿ ಅದರ ಪುಟಗಳನ್ನು ತಿರುವಿ ಹಾಕುವ ವ್ಯವಧಾನ ನಮಗೀಗ ಇಲ್ಲ.
ಇಷ್ಟಾಗಿಯೂ ಓದಿನ ಹೊಸ ಉಪಕರಣಗಳು ನಮ್ಮನ್ನಿನ್ನೂ ಆಶಾವಾದಿಯನ್ನಾಗಿರಿಸಿದೆ. ಆಧುನಿಕ ಮನುಷ್ಯ ತನ್ನ ನಿತ್ಯದ ಹೆಚ್ಚಿನ ಸಮಯವನ್ನು ಕಂಪ್ಯುಟರಿನೆದುರಿನಲ್ಲಿ ಕಳೆಯುತ್ತಿದ್ದಾನೆ. ಇಂಟರ್ನೆಟ್ ಎಂಬ ಮಾಯಾಂಗನೆ; ಅಥವಾ ಅಪ್ಸರೆಯೋ? ನಮ್ಮ ಓದುಗರ ಹೊಸ ಸಂಗಾತಿಯಾಗಿದೆ. ನಮ್ಮ ಓದು ತಾಳೆಗರಿಯಿಂದ ಪುಸ್ತಕಕ್ಕೆ , ಪುಸ್ತಕದಿಂದಕ್ಕೆ ಮೊಬೈಲ್ ಸ್ಕ್ರೀನಿಗೆ ಬದಲಾಗಿದೆ. ಪತ್ರಿಕೆಗಳೂ ಈ ಡಿಜಿಟಲ್ ಲೋಕಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿದೆ.ಬರಬರುತ್ತ ನಾವೆಲ್ಲ ಭ್ರಮಾಲೋಕವೆಂದು ಜರೆದ ಈ ಡಿಜಿಟಲ್ ಲೋಕದೊಳಗೇ ಹೊಸದೊಂದು ಸಮುದಾಯ ಸೃಷ್ಟಿಯಾಗುತ್ತಿದೆ. ಋತುಮಾನ ಈ ಹೊಸ ಜನಾಂಗದ ಕೂಸು.
ಗತಿ
ಋತುಮಾನದ ಉದ್ದೇಶ ಎರಡು.
-
ಮೊದಲನೆಯದು ನಮ್ಮ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಆದಷ್ಟು ಅಂತರ್ಜಾಲದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವುದು. ಪುಸ್ತಕ ಮಗುಚಿ ಹಾಕಲು ಪುರಸೊತ್ತಿಲ್ಲದ ಇಂದಿನ ಮತ್ತು ಮುಂದಿನ ಯುವ ಪೀಳಿಗೆಗೆ ಹಿಂದಿನ ಕನ್ನಡ ಸಾಹಿತ್ಯವನ್ನು (ಆದಷ್ಟು ಅಲಭ್ಯವಾಗಿರುವ ಗುಣಮಟ್ಟದ ಸಾಹಿತ್ಯವನ್ನು) ಸುಲಭಲಭ್ಯವಾಗುವಂತೆ ನೋಡಿಕೊಳ್ಳುವುದು ಇದರ ಹಿಂದಿನ ಆಸೆ. ಉಪಯೋಗಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟದ್ದು.
-
ಎರಡನೆಯದು ಮತ್ತು ಬಹುಮುಖ್ಯವಾದದ್ದು ಇಂದಿನ ಋತುಮಾನಕ್ಕೆ ತಕ್ಕಂತೆ ಹೊಸ ನುಡಿಗಟ್ಟುಗಳನ್ನು ಕಟ್ಟುವುದರಲ್ಲಿ ಶ್ರಮಿಸುವುದು, ಯುವಕರಲ್ಲಿ ಓದಿನ ಸುಖ ಹೆಚ್ಚಿಸುವುದು ಮತ್ತು ಹೊಸ ಲೇಖಕರ ಹೊಸ ಬಗೆಯ ಬರವಣಿಗೆಗಳಿಗೆ ವೇದಿಕೆಯಾಗುವುದು, ಅವರ ಸಂವೇದನೆಗಳಿಗೆ ಕಿವಿಯಾಗುವುದು. ಬದುಕು ಬದಲಾದಂತೆ ಸಾಹಿತ್ಯದ ಪರಿಭಾಷೆಗಳೂ ಬದಲಾಗಬೇಕು. ಹೊಸ ಪರಿಭಾಷೆ ಮತ್ತು ನುಡಿಗಟ್ಟುಗಳನ್ನ ಕಟ್ಟಿಕೊಳ್ಳುವುದು. ಹೀಗೆ ಕಟ್ಟಿಕೊಳ್ಳುತ್ತ ನಮ್ಮ ಸುತ್ತಲಿನ ಸಮಾಜವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವುದು, ಹೀಗೆ ಪ್ರಯತ್ನಿಸುತ್ತಲೇ ತೀವ್ರವಾಗಿ ಪ್ರೀತಿಸುತ್ತಲೇ ಬದುಕುವುದು.
ಅಷ್ಟಕ್ಕೂ ಸಾಹಿತ್ಯದ ಮೂಲದ್ರವ್ಯವೇ ಪ್ರೀತಿಯಲ್ಲವೇ?
ನಾವು
ಕಿರಣ್ ಮಂಜುನಾಥ್
ಕುಂಟಾಡಿ ನಿತೇಶ್
ರಂಜಿತಾ ಜಿ. ಎಚ್
ಪ್ರಮೋದ್ ಪಟಗಾರ್
ಅವಿನಾಶ್ ಜಿ
ಕಬೀರ್ ಮಾನವ
|
ಋತುಮಾನದ ದಾಖಲೀಕರಣ ಯೋಜನೆಗೆ ನೀವು ಸಹ ನಿಮ್ಮಲ್ಲಿ ಲಭ್ಯವಿರುವ ಆಡಿಯೋ, ವಿಡಿಯೋ ಮತ್ತು ಅಪರೂಪದ ಭಾವಚಿತ್ರಗಳನ್ನು ಕಳುಹಿಸಬಹುದು.
ಕಳುಹಿಸುವ ಮುನ್ನ:
ಅದನ್ನು ಪ್ರಕಟಿಸಲು ಅಗತ್ಯವಿರುವ ಅನುಮತಿಗಳಿರಲಿ.
ಈ ದಾಖಲೆಗಳು ಸಾಂಸ್ಕೃತಿಕವಾಗಿ ಮಹತ್ವದ್ದಾಗಿರಲಿ.
ಋತುಮಾನಕ್ಕೆ ನಿಮ್ಮ ಬರಹಗಳನ್ನು ನಮ್ಮ ಮಿಂಚಂಚೆಗೆ ಕಳಿಸಿ.
ಸಂಪರ್ಕ
9591368966 / 9480009997
ಋತುಮಾನ ಟ್ರಸ್ಟ್
ಋತುಮಾನ ಟ್ರಸ್ಟ್ ನ್ನು ೭ ಫೆಬ್ರವರಿ ೨೦೧೭ ರಂದು ಕರ್ನಾಟಕ ಸರ್ಕಾರದ ಕಾಯಿದೆ ಅಡಿಯಲ್ಲಿ ನೋಂದಾಯಿಸಲಾಗಿದೆ.
ಟ್ರಸ್ಟಿಗಳ ಹೆಸರುಗಳು ಈ ಕೆಳಗಿನಂತಿವೆ .
೧. ಕಿರಣ್ ಮಂಜುನಾಥ್
೨. ಪ್ರಮೋದ್ ಪಟಗಾರ್
೩. ನಿತೇಶ್ ಕುಂಟಾಡಿ