ಸಂಪಾದಕೀಯ- ಸಾಹಿತ್ಯದಲ್ಲಿ ಸ್ಪರ್ಧೆ

ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಸ್ಪರ್ಧೆಗಳು ಗಾಬರಿ ಹುಟ್ಟಿಸುವಂತಿವೆ. ದೊಡ್ಡ ಮೊತ್ತದ ಪ್ರಶಸ್ತಿ ಮತ್ತು ಹತ್ತಾರು ಕಥಾ ಸ್ಪರ್ಧೆಗಳು. ಕತೆಗಳಿಗೆ ಸ್ಪರ್ಧೆ ಏರ್ಪಡಿಸುವುದೇ ದೊಡ್ಡ ನಾನ್ಸೆನ್ಸ್. ಸಾಹಿತ್ಯದ ಮೂಲ ದ್ರವ್ಯ ಮನುಷ್ಯ ಪ್ರೀತಿ. ಸ್ಪರ್ಧೆ ಎನ್ನುವುದು ಯಾವತ್ತಿಗೂ ದ್ವೇಷ , ಅಸಹನೆಗೆ ಮೂಲ. ಸ್ಪರ್ಧೆ, ಇನಾಮು, ಪ್ರಶಸ್ತಿ ಇಂತಹ ಕ್ಷುಲ್ಲಕಗಳನ್ನ ಮೀರಿ ಬದುಕುವುದನ್ನ ನಿಜವಾದ ಸಾಹಿತ್ಯ ಹೇಳಿಕೊಡುತ್ತದೆ. ಹೇಳಿಕೊಡಬೇಕು. ಅಂತಹ ಕ್ಷೇತ್ರದಲ್ಲಿ ಈ ಮಟ್ಟಿಗೆ ಸ್ಪರ್ಧೆ, ಹಣ ಆವರಿಸಿರುವುದು ವಿಪರ್ಯಾಸ.

ಸ್ಪರ್ಧೆ ಡಿವಿಜನ್ (ವರ್ಗ) ಹುಟ್ಟುಹಾಕುತ್ತದೆ. ಒಂದು ಕತೆ ಉತ್ತಮ ಎನ್ನುವಾಗ ಉಳಿದದ್ದು ಕಳಪೆ ಎಂಬ ಧ್ವನಿಯೂ ಅದರಲ್ಲಿ ಅಡಗಿರುತ್ತದೆ. ಯಾವುದೇ ಕೃತಿ ಬರೆದ ಮೇಲೆ ನಿಕಷಕ್ಕೆ ಒಡ್ಡಬೇಕೆನ್ನುವುದು ಸತ್ಯ. ಆದರೆ ಅದಕ್ಕೆ ಸ್ಪರ್ಧೆಗಳೇ ಮಾನದಂಡವಾಗಬೇಕಿಲ್ಲ. ಕೃತಿ ರಚನೆಯಾದ ಮೇಲೆ ಲೇಖಕನಿಗೇ ತನ್ನ ಕೃತಿಯ ಸತ್ವ ಬಹುಪಾಲು ತಿಳಿದಿರುತ್ತದೆ. ಅಷ್ಟಾಗಿಯೂ ಹಿರಿಯ ಲೇಖಕರನ್ನು , ಒಳ್ಳೆಯ ಓದುಗರ ನೆರವಿನಿಂದ ಕೃತಿಯ ಮೌಲ್ಯಮಾಪನ ಮಾಡಿಕೊಳ್ಳಬಹುದು. ಸಾಹಿತ್ಯ ಸ್ಪರ್ಧೆಗಳಿಂದ ಮಾತ್ರ ಒಳ್ಳೆಯ ಬರಹಗಾರ ಅಥವಾ ಕೃತಿಗಳು ಹೊರಬರುತ್ತವೆ ಎನ್ನುವುದು ಸತ್ಯಕ್ಕೆ ದೂರ.

ಸಾಹಿತ್ಯ ಸ್ಪರ್ಧೆಗಳಲ್ಲಿ ಗೆದ್ದ ಎಷ್ಟೋ ಕತೆಗಳು ಕಳಪೆಯಾಗಿರುವುದನ್ನ ನಾವು ನೋಡಿದ್ದೇವೆ. ಸ್ಪರ್ಧೆಗೆ ಇಳಿಯದೇ ಎಷ್ಟೊಂದು ಒಳ್ಳೆಯ ಕೃತಿಗಳು, ಲೇಖಕರು ನಮಗೆ ಸಿಕ್ಕಿದ್ದಾರೆ ಎಂಬುದೂ ನಮಗೆ ತಿಳಿದಿದೆ. ಹೀಗಾಗಿ ಕೇವಲ ಸಾಹಿತ್ಯ ಸ್ಪರ್ಧೆ ಮಾತ್ರವಲ್ಲ, ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಶಸ್ತಿ, ಸನ್ಮಾನಗಳಿಂದ ಸಾಹಿತಿಗಳು ದೂರವಿರಬೇಕು. ಮೂಲತಃ ಇಂತಹ ಮನೋಭಾವದಿಂದಲೇ ನಮ್ಮ ಲೇಖಕರು ಹೊರಬರಬೇಕಾಗಿದೆ. ಶಾಲೆ ಇತ್ಯಾದಿಗಳ ಕಡೆ ಜ್ಞಾನಪೀಠ ಪುರಸ್ಕೃತರ ಫೋಟೋ ಗಳನ್ನು ಪ್ರದರ್ಶಿಸುವುದು ಕೂಡ ಅನಗತ್ಯ. ಬದಲಿಗೆ ಅಂತಹ ಮೇರು ಸಾಹಿತಿಗಳ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕೆಲಸ ಇಂದು ಹೆಚ್ಚಾಗಿ ಆಗಬೇಕು. ಕುವೆಂಪು ಅವರ ಭಾವಚಿತ್ರಕ್ಕಿಂತ ಅವರ ಮನುಜಮತದ ಸಂದೇಶ ನಮಗೆ ಮುಖ್ಯವಾಗಬೇಕಿದೆ.

ಅತ್ಯಂತ ವಿಷಮಯವಾದ ಈ ದಿನಗಳು ಸಾಹಿತಿಗಳಿಗೆ ಅಗ್ನಿದಿವ್ಯದ ಕಾಲ. ವೈಜ್ಞಾನಿಕ ಮತ್ತು ವೈಚಾರಿಕ ತಳಹದಿಯ ಮೇಲೆ ನಿಲ್ಲಬೇಕಾದ ಸಮಾಜ ಮೂರ್ಖತನ ಮತ್ತು ಮೌಢ್ಯದ ಅಂಧಕಾರದತ್ತ ಸರಿಯುತ್ತಿರುವುದು ಸ್ಪಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ಎಲ್ಲ ಹಿರಿಯ ಕಿರಿಯ ಸಾಹಿತಿಗಳು ಸಮಾಜವನ್ನು ಮುನ್ನಡೆಸುವ ದಾರಿದೀಪಗಳಾಗಬೇಕಿದೆ.

–  ಸಂಪಾದಕ ಬಳಗ