ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ: ವಿದೇಶಿ ಸಹನಿರ್ಮಾಣ

220px-Himanshu_Raiರಷ್ಯಾಗೆ ಇತ್ತೀಚೆಗೆ ಭೇಟಿ ಮಾಡಿದ ಫ್ರಾನ್ಸ್ ನ ಅಧ್ಯಕ್ಷ ಸರ್ಕೋಜಿ ಹೇಳಿದ ಮಾತು ನನ್ನ ಗಮನ ಸೆಳೆಯಿತು. ” ನನಗೆ ಏಕಮುಖಿ ಸಂಸ್ಕೃತಿಯ ಜಗತ್ತು ಬೇಡ. ಹಾಗೆಯೇ ಏಕರೀತಿಯ ಸಿನೆಮಾವೂ ಬೇಡ..”

೧೯೨೦ ರ ದಶಕದಲ್ಲಿ ವಿದೇಶಿ ಸಹನಿರ್ಮಾಣಗಳು ಶುರುವಾದ ಹೊಸತರಲ್ಲಿ, ಜರ್ಮನ್ ನಿರ್ಮಾಪಕ ಎರಿಚ್ ಪಾಮರ್ ಈ ಬಗೆಯ ಅಂತರಾಷ್ಟ್ರೀಯ ಸಿನೆಮಾಗಳ ಕುರಿತು ಸ್ವಲ್ಪ ಹೆಚ್ಚೇ ಅನುಮಾನಿತನಾಗಿದ್ದರಿಂದ ಆತ ತನ್ನದೇ ಕೆಲವು ಗುಣ ಲಕ್ಷಣಗಳನ್ನಳವಡಿಸಿಕೊಂಡಿದ್ದ ಜರ್ಮನ್ ಚಿತ್ರೋದ್ಯಮದ ಒಳಗೇ ಚಿತ್ರಗಳನ್ನು ನಿರ್ಮಿಸುವಲ್ಲಿ ಹೆಚ್ಚು ಆಸಕ್ತಿ ತೋರಿಸಿದ. ಈ ಸಮಯದಲ್ಲಿ ಈ ‘ಅಂತರಾಷ್ತ್ರೀಯ ಸಿನೆಮಾ’ ಪರಿಕಲ್ಪನೆ ಹುಟ್ಟಲು ಮುಖ್ಯ ಕಾರಣ ಯುದ್ದ (೧೯೧೪-೧೮) ಮತ್ತು ಅದರಿಂದ ಯುರೋಪಿನಲ್ಲಿ ಕುಸಿದ ಅರ್ಥವ್ಯವಸ್ಥೆ. ಯುರೋಪಿನ ಮಟ್ಟಿಗೆ ಆಗ ‘ಸಹನಿರ್ಮಾಣ’ ವೆಂಬುದು ಎರಡು ರಾಷ್ಟ್ರಗಳು ಸಹಕಾರಿ ವ್ಯವಸ್ಥೆಯಲ್ಲಿ ಚಿತ್ರಗಳನ್ನು ನಿರ್ಮಿಸಿ ವೆಚ್ಚವನ್ನು ಕಡಿತಗೊಳಿಸಿಕೊಳ್ಳುವುದರ ಜೊತೆಗೆ ಯುದ್ದದಿಂದ ಲಾಭ ಪಡೆದು ಪ್ರಭಾವಿ ಚಿತ್ರೋದ್ಯಮವಾಗಿ ಬೆಳೆಯುತ್ತಿದ್ದ ಹಾಲಿವುಡ್ ಅನ್ನು ಸಡ್ಡು ಹೊಡೆಯಲೂ ಒಂದು ಅವಕಾಶವಾಗಿತ್ತು.

ಮೂವತ್ತರ ದಶಕದ ಹೊತ್ತಿಗೆ ಯುರೋಪಿನ ಒಳಗೆ ಬೇರೆ ಬೇರೆ ಭಾಷೆಯಲ್ಲಿ ಬೇರೆ ಬೇರೆ ಕಲಾವಿದರನ್ನು ಬಳಸಿಕೊಂಡು ತಯಾರಿಸಲಾದ ಹಲವು ಸಹ ನಿರ್ಮಾಣದ ಸಿನೆಮಾಗಳು ಬಂದವು. ಸ್ವಲ್ಪ ಮಟ್ಟಿಗೆ ಈ ಸಂಪ್ರದಾಯದಿಂದ ಚಿತ್ರದ ವಸ್ತುವಿನ ಮೇಲೂ ಪರಿಣಾಮ ಬೀರಿತು. ಕೆಲವರು ಇಡೀ ಯುರೋಪಿಗೆ ಕಾಮನ್ ಎನ್ನಬಹುದಾದ ಐಡೆಂಟಿಟಿಯನ್ನು ಹುಡುಕಿ ಅದಕ್ಕೆ ಚಿತ್ರದಲ್ಲಿ ಹೆಚ್ಚು ಮಹತ್ವ ನೀಡಲಾರಂಭಿಸಿದರು. ಸ್ಪಾನಿಷ್ ನ ಕ್ಲಾಸಿಕ್ ಕಾದಂಬರಿ ಡಾನ್ ಕ್ಸಿಕೊಟೆ (೧೯೩೩) ಆಧಾರಿತ ಚಿತ್ರವನ್ನು ಮೂರು ಭಾಷೆಗಳಲ್ಲಿ ನಿರ್ಮಾಣ ಮಾಡಲಾಗಿ ರಷ್ಯನ್ ಒಪೆರಾ ಗಾಯಕ Feodor Chaliapin ಯನ್ನು ಮುಖ್ಯ ಭೂಮಿಕೆಯಲ್ಲಿ ತೋರಿಸಲಾಯಿತು. ಕೆಲವರು ಅಂತರಾಷ್ಟ್ರೀಯ ಸಹಕಾರದ ಅಗತ್ಯ ಒತ್ತಿ ಹೇಳುವ ದಿ ಟನೆಲ್ (೧೯೩೩) ತರಹದ ಸಿನೆಮಾ ಮಾಡಿದರು. ಫ್ರೆಂಚ್ ಮತ್ತು ಜರ್ಮನಿ ಭಾಷೆಯಲ್ಲಿ ತಯಾರಾದ ಈ ಚಿತ್ರ ಅಟ್ಲಾಂಟಿಕ್ ಸಮುದ್ರದೊಳಗೆ ಸುರಂಗ ಕೊರೆಯುವ ಕಾಲ್ಪನಿಕ ಯೋಜನೆಯ ಸುತ್ತ ಸುತ್ತುತ್ತದೆ.

Picture22ಎರಡನೆ ವಿಶ್ವ ಯುದ್ಧದ ನಂತರ , ೬೦ ಮತ್ತು ೭೦ ರ ದಶಕದಾದ್ಯಂತ ಫ್ರೆಂಚ್ ಮತ್ತು ಇಟಾಲಿಯನ್ ಸಿನೆಮಾಗಳ ಸಹನಿರ್ಮಾಣದ ಕೊಡುಕೊಳ್ಳುವಿಕೆ ನಡೆದೆ ಇತ್ತು. ಫ್ರೆಂಚ್ ನಟರು ಇಟಾಲಿಯನ್ ಸಿನೆಮಾದಲ್ಲಿ ನಟಿಸುವ ಇಟಾಲಿಯನ್ನರು ಫ್ರೆಂಚ್ ಸಿನೆಮಾದಲ್ಲಿ ನಟಿಸುವ ಮೂಲಕ ಪರಸ್ಪರ ಸಹಕಾರದಲ್ಲಿ ಚಿತ್ರಗಳು ತಯಾರಾಗುತ್ತಿದ್ದವು. ಈ ಹೊಸ ಸಂಪ್ರದಾಯದಲ್ಲಿ ಸಾಕಷ್ಟು ಒಳ್ಳೆಯ ಸಿನೆಮಾಗಳು ಬಂದರೂ ಹೆಚ್ಚಿನವು ಜನಪ್ರಿಯ ಕಾಮಿಡಿ ಚಿತ್ರಗಳೇ ನಿರ್ಮಾಣಗೊಂಡಿದ್ದು ಸುಳ್ಳಲ್ಲ. ಇಟಲಿಯಲ್ಲಿ ಬಂದ ‘ನಿಯೊ ರಿಯಲಿಸಂ’ ಮತ್ತು ಫ್ರಾನ್ಸ್ ನಲ್ಲಿ ಬಂದ ‘ಹೊಸ ಅಲೆಯ’ ಚಿತ್ರಗಳಿಗೆ ಈ ಸಹನಿರ್ಮಾಣ ಹೆಚ್ಚಿನ ರೀತಿಯಲ್ಲಿ ನೆರವಾಗಲಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಭಾರತದಲ್ಲಿ ಈ ಸಂಪ್ರದಾಯ ಹೆಚ್ಚು ಸಹಜವಾಗಿಯೇ ಬೆಳೆದು ಬಂದಿದೆ ಎನ್ನಬಹುದು. ಮರಾಠಿ ಮತ್ತು ಹಿಂದಿಯಲ್ಲಿ, ಬೆಂಗಾಲಿ ಮತ್ತು ಹಿಂದಿಯಲ್ಲಿಹಾಗೆಯೇ ದಕ್ಷಿಣ ಭಾರತದಲ್ಲಿ ಯಾವುದಾದರೂ ಎರಡು ಮೂರು ಭಾಷೆಗಳಲ್ಲಿ ಒಟ್ಟಿಗೆ ಸಿನೆಮಾ ನಿರ್ಮಾಣವಾಗುವ ಸಂಪ್ರದಾಯ ಮೊದಲಿನಿಂದಲೂ ಇದೆ. ೧೯೩೫ ರಲ್ಲಿ ಬಂದ ದೇವದಾಸ್ ಚಿತ್ರವನ್ನು ಹಿಂದಿ, ಬಂಗಾಳಿ ಮತ್ತು ಅಸ್ಸಾಮಿಯಲ್ಲಿ ಏಕಕಾಲಕ್ಕೆ ತಯಾರಿಸಲಾಗಿತ್ತು. ಆದರೀಗ ಅದರ ಹಿಂದಿ ಆವೃತ್ತಿ ಮಾತ್ರ ಉಳಿದುಕೊಂಡಿದೆ.

ದೇಶಿ ಸಹನಿರ್ಮಾಣಗಳಿದ್ದರೂ ,ಅಂತರಾಷ್ತ್ರೀಯ ಸಹನಿರ್ಮಾಣ ಭಾರತದಲ್ಲಿ ತೀರ ವಿರಳ.

ಮೂಕಿ ಯುಗದಲ್ಲಿ ಹಿಮಾಂಶು ರಾಯ್ ವಿದೇಶಿ ಸಹನಿರ್ಮಾಣದಲ್ಲಿ ಮೊದಲಿಗ ಎನ್ನಬಹುದು. ೧೯೨೪ ರಿಂದ ೧೯೨೬ ರ ನಡುವೆ ಈತ ನಿರ್ಮಿಸಿದ ಮೂರೂ ಚಿತ್ರಗಳನ್ನು (ಪ್ರೇಮ್ ಸನ್ಯಾಸ್, ಶಿರಜ್, ಪ್ರಪಂಚ್ ಪಾಶ್) ನಿರ್ದೇಶಿಸಿದ್ದು ಜರ್ಮನ್ ನಿರ್ದೇಶಕ ‘ಪ್ರಾಂಜ್ ಓಸ್ಟಿನ್’ ಮತ್ತು ಹೆಚ್ಚಿನ ತಂತ್ರಜ್ಞರು ಸಹ ಜರ್ಮನ್ ರೇ ಆಗಿದ್ದರು. ವಿದೇಶದಲ್ಲಿ ಜನಪ್ರಿಯವಾದ ಈ ಚಿತ್ರಗಳು ಭಾರತದಲ್ಲಿ ಹೆಚ್ಚಿನ ಸದ್ದು ಮಾಡಲಿಲ್ಲ. ತದನಂತರ ಹಿಮಾಂಶು ರಾಯ್ ೧೯೨೯ರಲ್ಲಿ ಬಾಂಬೆ ಟಾಕೀಸ್ ಎಂಬ ಸಿನೆಮಾ ನಿರ್ಮಾಣ ಕಂಪನಿಯನ್ನು ಹುಟ್ಟುಹಾಕಿದ ಮೇಲೂ ಜರ್ಮನ್ ನಿರ್ದೇಶಕ ಪ್ರಾಂಜ್ ಓಸ್ಟಿನ್ ಈ ಸಂಸ್ಥೆಯೊಂದಿಗೆ, ಎರಡನೇ ವಿಶ್ವಯುದ್ಧ ಪ್ರಾರಂಭವಾಗುವವರೆಗೂ ಹಲವಾರು ಸಿನೆಮಾಗಳನ್ನು ನಿರ್ಮಿಸಿದ್ದರು. ಯುದ್ಧ ಶುರುವಾದ ಹಾಗೆ ಬ್ರಿಟಿಶರು ಎಲ್ಲ ಜರ್ಮನರನ್ನು ಶತ್ರುಗಳೆಂದು ಪರಿಗಣಿಸಿದ್ದು ಈ ಸಹನಿರ್ಮಾಣ ನಿಲ್ಲಲು ಕಾರಣವಾಯಿತು.

೧೯೫೭ ರಲ್ಲಿ ಮದರ್ ಇಂಡಿಯಾ ವಿದೇಶದಲ್ಲಿ ಜನಪ್ರಿಯವಾದ ನಂತರ , ಇದರ ನಿರ್ದೇಶಕ ಮೆಹಬೂಬ್ ಖಾನ್ ಹಾಲಿವುಡ್ ಮಾರುಕಟ್ಟೆಯಲ್ಲಿ ಗೆಲುವಿನ ರುಚಿ ನೋಡಬೇಕೆಂದು ಇಚ್ಚಿಸಿದ್ದರು. ಅದಕ್ಕಾಗಿ ಅಮೆರಿಕ-ಭಾರತ ಸಹನಿರ್ಮಾಣದ ಸಾಧ್ಯತೆಗಳನ್ನು ಹುಡುಕಿದ್ದರೂ ಅಮೆರಿಕನ್ ನಿರ್ಮಾಪಕರ ದುಬಾರಿ ರೇಟು, ಮುಖ್ಯ ಭೂಮಿಕೆಯಲ್ಲಿ ಅಮೆರಿಕನ್ ನಟರೇ ಬೇಕೆಂದು ಪಟ್ಟು ಹಿಡಿದದ್ದು, ಸಿನೆಮಾದ ಸಂಪೂರ್ಣ ಹಿಡಿತವೂ ಅವರ ಕೈಯಲ್ಲೇ.. ಮುಂತಾದ ಕಾರಣಗಳಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ.

ಭಾರತದ ವಿದೇಶಿ ಸಹನಿರ್ಮಾಣದ ಕೌತುಕಮಯ ಸಂಗತಿ ಗೈಡ್ ಚಿತ್ರದ್ದು. ಅಮೆರಿಕ ಮತ್ತು ಭಾರತದ ಸಹನಿರ್ಮಾಣದೊಂದಿಗೆ ತಯಾರಾದ ಈ ಚಿತ್ರ ಹಿಂದಿ ಮತ್ತು ಇಂಗ್ಲೀಶ್ ಎರಡೂ ಆವೃತ್ತಿಯಲ್ಲಿ ತಯಾರಾಯ್ತು. ಹಿಂದಿಯಲ್ಲಿ ದೇವಾನಂದ್ ಸಹೋದರ ವಿಜಯ್ ಆನಂದ್ ಇದನ್ನು ನಿರ್ದೇಶಿಸಿ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿತ್ತು. ಅದೇ ಇಂಗ್ಲೀಷಿನಲ್ಲಿ ಹೇಳ ಹೆಸರಿಲ್ಲದಂತೆ ಫ್ಲಾಪ್ ಆಗಿತ್ತು. ಇವತ್ತಿಗೂ ಅದರ ಇಂಗ್ಲೀಷ್ ವರ್ಷನ್ ಲಭ್ಯವಿಲ್ಲದಿದ್ದರೂ ಅದರ ಪುಟ್ಟ ಟ್ರೇಲರ್ ಲಭ್ಯವಿದೆ. ಆರ್ ಕೆ ನಾರಾಯಣ್ ಕಾದಂಬರಿ ಆಧಾರಿತ ಗೈಡ್ ಚಿತ್ರ ಒಂದು ಕಡೆ ಕ್ಲಾಸಿಕ್ ಎನಿಸಿಕೊಂಡು ಇನ್ನೊಂದು ಕಡೆ ಕಳಪೆ ಎನಿಸಿಕೊಂಡದ್ದು ಇಂದಿಗೂ ಸೋಜಿಗದ ವಿಷಯ. ಇದಕ್ಕೆ ಕಾರಣಗಳನ್ನು ಹುಡುಕುವುದು ಕಷ್ಟವಾದರೂ, ಟ್ರೇಲರ್ ಅನ್ನು ನೋಡಿ ಗಮನಿಸಿದರೆ ದೇವ್ ಆನಂದ್ ರ ಇಂಗ್ಲೀಷ್ ಉಚ್ಚಾರಣೆಯ ಭಾರವೂ ಚಿತ್ರ ಸೋಲಲು ಕಾರಣವಾಗಿರಬಹುದು ಎನಿಸುತ್ತದೆ.

ಈಚೆಗೆ ವಿದೇಶಿ ಸಹನಿರ್ಮಾಣ ದ ಪರಿಕಲ್ಪನೆ ತೀರ ಸಾಮಾನ್ಯವಾಗಿಬಿಟ್ಟಿದೆ. ಬಹಳಷ್ಟು ಸಲ ಸಂಪನ್ಮೂಲದ ಕೊರತೆಯನ್ನ ಇದು ನೀಗಿಸುತ್ತದೆ. ಹಿಂದಿನ ಫ್ರೆಂಚ್ ವಸಾಹತುಶಾಹಿ ಆಫ್ರಿಕಾ ದೇಶಗಳಲ್ಲಿ ಫ್ರೆಂಚ್ ಸಹನಿರ್ಮಾಣದ ನೆರವಿಲ್ಲದೆ ಚಿತ್ರ ನಿರ್ಮಾಣ ಸಾಧ್ಯವೇ ಇರಲಿಲ್ಲ. ಹೆಚ್ಚಿನ ದೇಶಗಳು ತೀರಾ ಬಡದೇಶಗಳಾಗಿರುವುದು ಒಂದು ಕಾರಣ. ಈ ಬಗೆಯ ಸಹನಿರ್ಮಾಣದಲ್ಲಿ ತಯಾರಾದ ಸಿನೆಮಾಗಳು -ಆಫ್ರಿಕಾದ ಸ್ವತಂತ್ರ ಸಿನೆಮಾಗಳಿಗೆ ಹೋಲಿಸಿದರೆ- ಯುರೋಪಿಯನ್ ದೃಷ್ಟಿಕೋನದಿಂದಲೇ ಕೂಡಿರುತ್ತವೆ.

ಹಾಗಾಗಿ ವಿದೇಶಿ ಸಹನಿರ್ಮಾಣದ ಚರಿತ್ರೆ ನಮಗೆ ಪೂರ್ಣ ಸಮಾಧಾನವನ್ನಂತೂ ನೀಡುವುದಿಲ್ಲ. ಬಡ ರಾಷ್ಟ್ರಗಳಿಗೆ ಈ ಸಹ ನಿರ್ಮಾಣ ಊರುಗೋಲಾಗಿರುವುದು ಎಷ್ಟು ಸತ್ಯವೋ, ಈ ಬಗೆಯ ಚಿತ್ರಗಳಿಂದ ಬಲಿಷ್ಟ ರಾಷ್ಟ್ರಗಳು ತಮ್ಮ ‘ಸಾಂಸ್ಕೃತಿಕ ಅಧಿಪತ್ಯ’ವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದೂ ಅಷ್ಟೇ ಸತ್ಯ. ತಮಗೆ ಚಿತ್ರದ ವಸ್ತು-ವಿಷಯದ ಮೇಲೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ ಇರದ ಹೊರತು ನಿರ್ದೇಶಕರುಗಳು ವಿದೇಶಿ ಸಹನಿರ್ಮಾಣವನ್ನು ಕಡೆಗಣಿಸುವುದು ಒಳಿತು ಎಂಬುದು ನನ್ನ ಖಚಿತ ಅಭಿಪ್ರಾಯ.

(ಮುಂದಿನ ಅಂಕಣದಲ್ಲಿ- ಕೋರ್ಟ್ (ಮರಾಠಿ) ಚಿತ್ರದ ವಿಮರ್ಶೆ.)

ಪ್ರತಿಕ್ರಿಯಿಸಿ