ಅಂಬೇಡ್ಕರ್ ಬಗ್ಗೆ ಬಂದ ಆರು ಮರು ವ್ಯಾಖ್ಯಾನಗಳು ಮತ್ತು ಆಂಗ್ಲಭಾಷಾ ಬರವಣೆಗೆಗಳು ಹಾಗೂ ದಲಿತ-ಬಹುಜನರ ನಡುವಿನ ಕಂದರ.
ದಲಿತ-ಬಹುಜನರ ಜನಪದದಲ್ಲಿ, ಕಾವ್ಯದಲ್ಲಿ, ಹಾಡುಗಳಲ್ಲಿ, ಕಾದಂಬರಿಗಳಲ್ಲಿ ಹಾಗೂ ಜೀವನಚರಿತ್ರೆಗಳಲ್ಲಿ ಅಂಬೇಡ್ಕರ್ ರವರನ್ನು ಬಹುತೇಕ ದೇವರ ಹಾಗೆ ಅಥವಾ ಬುದ್ಧ, ಯೇಸು ಕ್ರಿಸ್ತ, ಗುರುನಾನಕರ ರೀತಿ ಉದ್ಧಾರಕ ಅವತಾರ ಪುರುಷನ ಹಾಗೆ ಚಿತ್ರಿಸಲಾಗಿದೆ. ಬ್ರಾಹ್ಮಣರ ನಿರಂಕುಶ ಜಗತ್ತನ್ನು ಪ್ರಶ್ನಿಸಿ ದಲಿತ ಜನರನ್ನು ಗುಲಾಮಗಿರಿ, ಅನಕ್ಷರತೆ ಮತ್ತು ಬಲಹೀನತೆಯ ಕೂಪದಿಂದ ಬಿಡುಗಡೆಗೊಳಿಸಿದ ಪೌರಾಣಿಕ ಪಾತ್ರವಾಗಿ ಅಥವಾ ಸೂಪರ್ ಹೀರೋ ಆಗಿ ಮೇಲೇರಿಸಲಾಗಿದೆ. ಅವರನ್ನು ಒಬ್ಬ ಅದ್ಭುತ ಶಿಕ್ಷಣ ತಜ್ಞ, ಪತ್ರಕರ್ತ, ನ್ಯಾಯವಾದಿ ಹಾಗೂ ಅರ್ಥಶಾಸ್ತ್ರಜ್ಞ, ಭಾರತ ಸಂವಿಧಾನ ಶಿಲ್ಪಿ ಮತ್ತು ಕೊನೆಗೆ ನವ ಭಾರತದಲ್ಲಿ ಬೌದ್ಧ ಧರ್ಮವನ್ನು ಮರು ಪರಿಚಯಿಸಿದ ಧಾರ್ಮಿಕ ಕ್ರಾಂತಿಕಾರಿ ಎಂದು ಬಣ್ಣಿಸಲಾಗಿದೆ. ಅವರ ಜನ್ಮದಿನದಂದು ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ಜನ ಜಾತ್ರೆಯೇ ನೆರೆಯುತ್ತದೆ. ಇಂತಹ ಭಕ್ತಿ- ಭಾವನೆಗಳು ಅವರ ಅನುಯಾಯಿಗಳಲ್ಲಿ ಅಂಬೇಡ್ಕರ್ ರವರನ್ನು ಪ್ರಶ್ನೆ ಮತ್ತು ಟೀಕೆಗಳಿಗೆ ಮೀರಿದ ವರ್ಚಸ್ವಿ ನಾಯಕನನ್ನಾಗಿ ಮಾಡಿವೆ.
ಅವರ ಜೀವನದ ಬಗ್ಗೆ ಸಾಮಾನ್ಯವಾಗಿ ಹೇಳುವ ಕ್ರಮ ಹೀಗಿದೆ- ಏಪ್ರಿಲ್ 14, 1891 ರಲ್ಲಿ ಮಹಾರ್ ಜಾತಿಯಲ್ಲಿ ಹುಟ್ಟಿದ ಅಂಬೇಡ್ಕರ್ ರವರು ದೀಕ್ಷೆ ತೆಗೆದುಕೊಂಡವರ ಹಾಗೆ ಸಮಾಜದ ಮೇಲ್ಜಾತಿಯ ಜನರಿಂದ, ಅವಮಾನ ಮತ್ತು ಶೋಷಣೆಯನ್ನು ಅನುಭವಿಸಿದರು. ಈ ಎಲ್ಲಾ ಸಂಕಷ್ಟಗಳನ್ನು ಎದುರಿಸುತ್ತಲೇ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಿಂದ ಪ್ರತಿಷ್ಠಿತ ಪದವಿಗಳನ್ನು ಪಡೆದರು. ನಂತರ ಜಾತಿ ತಾರತಮ್ಯದ ವಿರುದ್ಧದ ಧೀರೋದ್ಧಾತ ಹೋರಾಟಕ್ಕೆ ತಮ್ಮ ಶೈಕ್ಷಣಿಕ ತರಬೇತಿ ಹಾಗೂ ಬೌದ್ಧಿಕ ಸಂಪತ್ತನ್ನು ಬಳಸಿಕೊಂಡು ಅಸ್ಪೃಶ್ಯ ಜಾತಿಗಳಿಗೆ ಸಾಮಾಜಿಕ ಹಾಗೂ ರಾಜಕೀಯ ಗೋಳಗಳಲ್ಲಿ ಗೌರವಾನ್ವಿತ ನೆಲೆಯನ್ನು ಒದಗಿಸಿದರು. ಭಾರತವು ಬ್ರಿಟಿಷ್ ಸಾಮ್ರಾಜ್ಯ ಶಾಹಿಯಿಂದ ಬಿಡುಗಡೆಗೊಳ್ಳುವಷ್ಟರಲ್ಲಿ ಅಂಬೇಡ್ಕರ್ ಒಬ್ಬ ಎತ್ತರದ ರಾಷ್ಟ್ರನಾಯಕರಾಗಿದ್ದರು. ನವ ಭಾರತದ ಸಂವಿಧಾನ ಶಿಲ್ಪಿಯಾಗಿ, ಹೊಸ ಗಣರಾಜ್ಯದ ತಳಹದಿಯ ಚಿಂತನೆಗಳಿಗೆ ಗಣನೀಯ ಕೊಡುಗೆ ನೀಡಿದರು. ಅಕ್ಟೋಬರ್ 14, 1956 ತಮ್ಮ ಸಾವಿಗೆ ಎರಡು ತಿಂಗಳು ಮುಂಚೆ ತಮ್ಮ ಸಾವಿರಾರು ಅನುಯಾಯಿಗಳ ಜೊತೆಗೆ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿ ಭಾರತದಲ್ಲಿ ಒಂದು ಹೊಸ ಸಮಾಜೋ ಧಾರ್ಮಿಕ ಕ್ರಾಂತಿಗೆ ಮುನ್ನುಡಿ ಬರೆದರು.
ಆದರೆ, ಬಲಪಂಥೀಯ ರಾಜಕೀಯ ಶಕ್ತಿಗಳು ಮೇಲೇರುತ್ತಿರುವ ಇಂದಿನ ಭಾರತದಲ್ಲಿ- ಹಿಂದುತ್ವ ಪ್ರತಿಪಾದಕ ಜೋಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನತಾ ಪಾರ್ಟಿಗಳು ಮುನ್ನಲೆಯಲ್ಲಿ ಅಂಬೇಡ್ಕರ್ ರವರನ್ನು ಅವರ ಬ್ರಾಹ್ಮಣ್ಯ ವಿರೋಧಿ ಮೂಲಭೂತವಾದದಿಂದ ಬೇರ್ಪಡಿಸಿ, ಕೇವಲ ಹಿಂದೂ ಸಮಾಜ ಸುಧಾರಕನಾಗಿ ಹಾಗೂ ಜನಪ್ರಿಯ ರಾಷ್ಟ್ರನಾಯಕನನ್ನಾಗಿ ಚಿತ್ರಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ, ಅಂಬೇಡ್ಕರ್ ರವರ ಜೀವನವನ್ನು ಸಂತರ ಹಾಗೆ ವರ್ಣಿಸಿ ಎತ್ತರದ ಪೀಠದಲ್ಲಿ ಕೂರಿಸಿ, ವಿಚಾರವಾದಿ, ದಲಿತೋದ್ಧಾರದ ಅವತಾರ ಪುರುಷರನ್ನಾಗಿ ಚಿತ್ರಿಸಿದರೂ, ಇವು ಅವರ ಬೌದ್ಧಿಕ ಕಾಣಿಕೆಗಳ ಬಗ್ಗೆ ಮತ್ತು ತತ್ವಶಾಸ್ತ್ರೀಯ ಸಮಗ್ರತೆಯ ಬಗ್ಗೆ ಗಂಭೀರವಾಗಿ ಅಲೋಚಿಸುವ ಮಿತಿಯಿಂದ ಕೂಡಿವೆ. ಅವರ ಬಗ್ಗೆ ಬಂದಿರುವ ಜನಪ್ರಿಯ ಸಾಹಿತ್ಯಗಳೆಲ್ಲವೂ ಭಾವೋದ್ವೇಗದಿಂದ, ಅಬೌದ್ಧಿಕ ಕ್ರಿಯೆಗಳಿಂದಲೇ ತುಂಬಿದೆಯೇ ಹೊರತು ಅಂಬೇಡ್ಕರ್ ಅವರ ಜೀವನವನ್ನು ಮತ್ತು ಚಿಂತನೆಗಳನ್ನು ವೈಜ್ಞಾನಿಕ, ಜಾತ್ಯಾತೀತ ಮತ್ತು ವಸ್ತುನಿಷ್ಠವಾಗಿ ಅನ್ವೇಷಣೆ ಮಾಡುವುದಿಲ್ಲ. ಅವರನ್ನು ಈ ರೀತಿಯಲ್ಲಿ ಅರ್ಥೈಸಿಕೊಳ್ಳುವುದು, ಬಲಪಂಥೀಯ ಶಕ್ತಿಗಳು ಅಂಬೇಡ್ಕರರ ನೈಜ ವ್ಯಕ್ತಿತ್ವವನ್ನು ಮರೆಮಾಚಲು ಮಾಡುವ ಪ್ರಯತ್ನವನ್ನು ಹತ್ತಿಕ್ಕುವ ಸಾಧನವಾಗುತ್ತದೆ.
ಅಂಬೇಡ್ಕರ್ ಬಗೆಗಿನ ಪರ್ಯಾಯ ಮಾರ್ಗದ ಆಂಗ್ಲ ಬರಹಗಳಲ್ಲಿ ಅವರ ಚಿಂತನೆ ಮತ್ತು ನಡತೆಯ ನಡುವಿನ ವ್ಯತ್ಯಾಸವನ್ನು ಹೇಳುವ ಗುರಿಯೊಂದಿಗೆ, ಅವರು ಕೇವಲ ತತ್ವಜ್ಞಾನಿ, ಸಂವಿಧಾನವಾದಿ ಹಾಗೂ ಧಾರ್ಮಿಕ ಮುಖಂಡ ಮಾತ್ರವಲ್ಲದೆ, ಕೆಲವು ನ್ಯೂನತೆಗಳು ಹಾಗೂ ಮಿತಿಗಳುಳ್ಳ ಆಧುನಿಕ ವ್ಯಕ್ತಿಯನ್ನಾಗಿ ಚಿತ್ರಿಸಲಾಗಿದೆ. ಈ ಬರಹಗಳು, ಬಲಪಂಥೀಯ ಧೋರಣೆಗಳಿಗೆ ವಿರುದ್ಧವಾಗಿ ಅವರ ಜೀವನ ಚರಿತ್ರೆಯ ಭಾವನಾತ್ಮಕ ಅಂಶಗಳನ್ನು ಸೂಕ್ಷ್ಮವಾಗಿ ಪ್ರತಿಫಲಿಸಿದರೂ, ಅವರ ಅನುಯಾಯಿಗಳ ಕಲ್ಪನೆಯಿಂದ ಮತ್ತು ದಲಿತ-ಬಹುಜನ ಸಿದ್ಧಾಂತಗಳ ದೃಷ್ಟಿಕೋನದಿಂದ ಅಂತರ ಕಾಯ್ದುಕೊಳ್ಳುತ್ತವೆ. ಅಂಬೇಡ್ಕರ್ ರವರ ಪ್ರಸ್ತುತತೆಯನ್ನು ಹಾಗೂ ತಮ್ಮ ನಂತರದ ಭಾರತದಲ್ಲಿ ಅವರು ಸೃಷ್ಟಿಸಲು ಪ್ರಯತ್ನಿಸಿದ ಬಹುಮುಖ್ಯ ಆಯಾಮಗಳನ್ನು ತಿಳಿಸುವಲ್ಲಿ ಇವು ಸೋಲುತ್ತವೆ.
ಇಂದು ಭಾರತದಲ್ಲಿ ಬಲಪಂಥೀಯ ರಾಜಕೀಯ ಶಕ್ತಿಗಳ ಉದಯದೊಂದಿಗೆ ಅಂಬೇಡ್ಕರ್ ಅವರನ್ನು, ಅವರ ತೀವ್ರಗಾಮಿ ಬ್ರಾಹ್ಮಣ ವಿರೋಧಿ ಚಿಂತನೆಯಿಂದ ಅವರನ್ನು ಬೇರ್ಪಡಿಸಿ ಹಿಂದೂ ಸಮಾಜ ಸುಧಾರಣಾವಾದಿ ಮತ್ತು ಜನಪ್ರಿಯ ರಾಷ್ಟ್ರೀಯವಾದಿ ನಾಯಕರನ್ನಾಗಿ ಗುರುತಿಸಲು ಪ್ರಯತ್ನಿಸಲಾಗುತ್ತಿದೆ.
ಅಂಬೇಡ್ಕರ್ ಭಾರತವನ್ನು ಒಂದು ಆಧುನಿಕ ದೇಶವನ್ನಾಗಿ ಮಾಡಲು ನೀಡಿದ ಕಾಣಿಕೆಗಳನ್ನು ಮುಖ್ಯವಾಹಿನಿಯ ಶೈಕ್ಷಣಿಕ ಶಕ್ತಿಗಳು ಬಹಿರಂಗವಾಗಿಯೇ ಕಡೆಗಣಿಸಿವೆ ಎಂಬುದು ದಲಿತ-ಬಹುಜನ ಚಿಂತಕರ ಆರೋಪ. 1900ಕ್ಕೂ ಮುಂಚೆ ಇಂಗ್ಲೀಷ್ ನಲ್ಲಿ ಅಂಬೇಡ್ಕರ್ ರವರ ಬಗ್ಗೆ ಲಭ್ಯವಿದ್ದ ಸಣ್ಣ ವಿದ್ವತ್ ಲೇಖನವೊಂದು ಅವರನ್ನು ಕೇವಲ “ಅಸ್ಪೃಶ್ಯ ಸಮುದಾಯಗಳ ನಾಯಕನಾಗಿ” ಸಂಕುಚಿತವಾಗಿ ವಿವರಸುತ್ತದೆ. ಉದಾಹರಣೆಗೆ ಅಂಬೇಡ್ಕರ್ ರವರ ಜೀವನದ ಬಹುಮುಖ್ಯ ವಿವರಣೆಗಾರರಾದ ಅಮೆರಿಕ ಲೇಖಕಿ ಎಲೀನರ್ ಜೇಲಿಯಟ್ ರವರು ಸಹ ಅವರ ಸಾಮಾಜಿಕ ಹೋರಾಟಗಳನ್ನು ‘ಮಹಾಡ್ ಚಳುವಳಿ’ ಎಂಬ ಶೀರ್ಷಿಕೆಯಡಿ ಕಿರಿದಾಗಿಸಿ ಅವರ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳು ಕೇವಲ ಮಹಾರಾಷ್ಟ್ರದ ಒಂದು ನಿರ್ದಿಷ್ಟ ಸಮುದಾಯದ ಏಳಿಗೆಗೆ ಮಾತ್ರ ಎಂಬಂತೆ ಸೀಮಿತಗೊಂಡಿದ್ದ ಹಾಗೆ ಸೂಚಿಸಿದ್ದಾರೆಯೇ ಹೊರತು, ಜಾತಿಪದ್ಧತಿಗಳ ನಿರ್ಮೂಲನೆ ಹಾಗೂ ಭವಿಷ್ಯ ಭಾರತದ ಪುನರ್ವಿನ್ಯಾಸದ ಅವರ ಗುರಿಯನ್ನು ವಿವರಿಸಿಲ್ಲ. 1966ರಲ್ಲಿ ಬಂದ ಧನಂಜಯ ಕೀರ್ ರವರ ಅಂಬೇಡ್ಕರ್ ಜೀವನ ಚರಿತ್ರೆಯಲ್ಲಿ, ಜಾತಿ ಪದ್ಧತಿಗಳಿಂದ ತುಂಬಿದ್ದ ಹಿಂದೂ ಧರ್ಮದ ಸಾಂಪ್ರದಾಯಿಕ ಕಟ್ಟಳೆಗಳನ್ನು ಮರುಜೋಡಣೆ ಮಾಡಿ ಒಂದು ಮಾನವೀಯ ಸಂಘಟನೆಯಾಗಿಸಿದ, ಅಸ್ಪೃಶ್ಯರನ್ನು ಈ ಹೊಸ ದೇಶದ ವಾರಸುದಾರರನ್ನಾಗಿಸಿದ ಸಾಂಕೇತಿಕ ಪುರುಷನನ್ನಾಗಿ ತೋರಿಸಿದ್ದರೂ, ಅವರ ವೈಯಕ್ತಿಕ ಜೀವನದ ಹಲವು ಮಜಲುಗಳನ್ನು ಶೋಧಿಸಿಲ್ಲ.
1980ರ ನಂತರ ಬಹುಜನ ಸಾಮಾಜವಾದಿ ಪಕ್ಷದ ಉದಯ, ಭಾರತದ ಸಾರ್ವಜನಿಕ ಜೀವನದ ಮೇಲೆ ಅದರ ಪರಿಣಾಮ ಮತ್ತು ದಲಿತರಿಂದಲೇ ಮುನ್ನಡೆಸಲ್ಪಟ್ಟ ರಾಜಕೀಯ ಶಕ್ತಿಯು ಅಂಬೇಡ್ಕರರನ್ನು ಸಂಶೋಧಕರು ವ್ಯಾಪಕವಾಗಿ, ಅದರಲ್ಲೂ ನಿರ್ದಿಷ್ಟವಾಗಿ ಅವರನ್ನು ರಾಜಕೀಯ ಸಿದ್ಧಾಂತಿ ಮತ್ತು ಸಾಮಾಜಿಕ ತತ್ವಜ್ಞಾನಿಯಾಗಿ ಅಧ್ಯಯಿಸುವಂತೆ ಮಾಡಲು ಸಾಧ್ಯವಾಯಿತು. ವಿದ್ವಾಂಸರುಗಳಾದ ವೆಲೇರಿಯನ್ ರೋಡ್ರಿಗಸ್, ಕ್ರಿಸ್ಟೋಫರ್ ಜೆಫರ್ಲಾಟ್ ಮತ್ತು ಗೈಲ್ ಒಮ್ವೆದ್ ರವರುಗಳು ಅವರ ಜೀವನ ಮತ್ತು ಹೋರಾಟಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಲಭ್ಯವಿದ್ದ ವಿವಿಧ ಐತಿಹಾಸಿಕ ಮತ್ತು ಪ್ರಸ್ತುತ ಸಾಹಿತ್ಯ ಮೂಲಗಳನ್ನು ವಿಶ್ಲೇಷಿಸಿ ಬೌದ್ಧಿಕ ಆವೃತ್ತಿಯನ್ನು ಕಟ್ಟಿಕೊಡುತ್ತಾರೆ. ಬಹಳ ಇತ್ತೀಚಿನ ಬರಹಗಳಲ್ಲಿ ವಿದ್ವಾಂಸರಾದ ಐಶ್ವರ್ಯ ಕುಮಾರ್ ಮತ್ತು ಸೌಮ್ಯಬ್ರತ ಚೌಧರಿ ರವರುಗಳ ಅಂಬೇಡ್ಕರ್ ಅವರನ್ನು ಪಶ್ಚಿಮದ ರಾಜಕೀಯ ಚಿಂತಕರಾದ ಪೆರಿಕ್ಲೀಸ್, ಕಾರ್ಲ್ ಮಾರ್ಕ್ಸ್, ಅಂಟೋನಿಯೋ ಗ್ರಾಮ್ಷಿ, ಜಾನ್ ಡುಯಿ ಹಾಗೂ ಜಾನ್ ರಾಲ್ಸ್ ರವರುಗಳಿಗೆ ಹೋಲಿಕೆಯ ಕೊಂಡಿಗಳನ್ನು ಬೆಸೆದು ಆಧುನಿಕ ಮತ್ತು ಆಧುನಿಕೋತ್ತರ ರಾಜಕೀಯ ತತ್ವಜ್ಞಾನಿಯಾಗಿ ಗುರುತಿಸುತ್ತಾರೆ.
ಈಗ ಅಂಬೇಡ್ಕರ್ ಬಗೆಗೆ ಬರುತ್ತಿರುವ ಹೊಸ ಅಲೆಯ ಪುಸ್ತಕಗಳು ಅವರ ಸುತ್ತಲೂ ಹೃದಯಸ್ಪರ್ಶಿ ಚರ್ಚೆಗಳನ್ನು ವಿಸ್ತರಿಸುತ್ತಾ , ವಾದಗಳನ್ನು ತರ್ಕಗಳನ್ನು ಮಂಡಿಸುವ ಜೊತೆಗೆ ಪ್ರಾಮಾಣಿಕವಾಗಿ ಪರಾಮರ್ಶೆ ಮಾಡುತ್ತಿವೆ. ಅವುಗಳ ಲೇಖಕರು ಅವರನ್ನು “ದಲಿತೋದ್ಧಾರದ ವಿಮೋಚಕ” ನನ್ನಾಗಿ ಸೀಮಿತಗೊಳಿಸಿ ಪಟ್ಟಕ್ಕೇರಿಸದೆ ಎಚ್ಚರಿಕೆಯಿಂದ ಪರೀಕ್ಷಿಸುತ್ತಿದ್ದು ಅವರನ್ನು ಒಬ್ಬ ವ್ಯಕ್ತಿಯಾಗಿ, ವಿಚಾರವಂತನನ್ನಾಗಿ ಆಧುನಿಕ ನ್ಯಾಯ, ಧರ್ಮ, ಹಕ್ಕುಗಳ ಮತ್ತು ಸ್ವಾತಂತ್ರ್ಯಗಳ ಮೇಲೆ ಪ್ರಧಾನವಾಗಿ ಪ್ರಭಾವ ಬೀರಿದ ನಾಯಕನನ್ನಾಗಿ ನೋಡುತ್ತಿದ್ದಾರೆ. ಈ ಹಿಂದಿನ ಶೈಕ್ಷಣಿಕ ಬರಹಗಳಿಗಿಂತಲೂ ಇವು ಭಿನ್ನ. ಈ ಹೊಸ ಬರಹಗಳು ಅವರ ಜೀವನ ಮತ್ತು ಆಲೋಚನೆಗಳ ಆಳವಾದ ಸಂಶೋಧನೆಗಳಾಗಿವೆ. ಮುಖ್ಯವಾಗಿ ಕೆಲವು ದಾಖಲೆಗಳು ಮತ್ತು ಅಂಬೇಡ್ಕರರ ಜೀವನದ ವೈಯಕ್ತಿಕ ವಿಚಾರಗಳ ಮಾಹಿತಿಯನ್ನು ಶ್ರೀ ಸಿ.ಬಿ. ಖೈರ್ಮೋಡೆ ರವರ 12 ಸಂಪುಟಗಳ ಮರಾಠಿ ಜೀವನಚರಿತ್ರೆಯ ಸಂಪಾದಕೀಯವನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡುವ ಮೂಲಕ ಸ್ವಲ್ಪ ಮಟ್ಟಿಗೆ ತಿಳಿದಿವೆ.
ಅಂಬೇಡ್ಕರ್ ಬಗೆಗಿನ ಹೊಸ ಪ್ರಕಟಣೆಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಮೊದಲ ಗುಂಪಿನ ಮೂರು ಪುಸ್ತಕಗಳು ಅವರ ಅಧಿಕೃತ ಜೀವನಚರಿತ್ರೆಗಳು – ಬರೆದವರು ಇತಿಹಾಸಕಾರ ಅಶೋಕ್ ಗೋಪಾಲ್, ತತ್ವಜ್ಞಾನಿ ಆಕಾಶ್ ಸಿಂಗ್ ರಾಥೋಡ್ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ರಾಜಕಾರಣಿ ಶಶಿ ತರೂರ್. ಇವು ಅವರ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ನಿರ್ಣಾಯಕ ಘಟನೆಗಳನ್ನು ಕಾಲಾನುಕ್ರಮದಲ್ಲಿ ಪೋಣಿಸುತ್ತವೆ. ಎರಡನೆಯ ಗುಂಪಿನಲ್ಲಿ ತತ್ವಜ್ಞಾನಿ ಸ್ಕಾಟ್ ಸ್ಟ್ರೌಡ್ ರವರ THE EVOLUTION OF PRAGMATISM IN INDIA ಹಾಗೂ ವಿದ್ವಾಂಸರುಗಳಾದ ಕ್ರಿಸ್ಟೋಫ್ ಜಾಫ್ರೆ಼ಲೋಟ್, ವಿಲಿಯಂ ಗೌಲ್ಡ್ ಮತ್ತು ಸಂತೋಷ್ ದಾಸ್ ಸಂಪಾದಿಸಿರುವ AMBEDKAR IN LONDON ಹೆಸರಿಸಬಹುದು. ಇವು ಪಶ್ಚಿಮದಲ್ಲಿ ಅವರ ಬೌದ್ಧಿಕ ವಿಕಸನ, ವಿದೇಶಿ ನಗರಗಳು ಮುಖ್ಯವಾಗಿ ಲಂಡನ್ , ವಿಶ್ವವಿದ್ಯಾಲಯಗಳು(ಕೊಲಂಬಿಯಾ ಯೂನಿವರ್ಸಿಟಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್) ಹಾಗೂ ವಿದೇಶಿ ವಿದ್ವಾಂಸರುಗಳು (ಜಾನ್ ಡ್ಯುಯೆ) ಹೇಗೆ ಅವರ ಸೈದ್ಧಾಂತಿಕ ವಿಧಾನಗಳನ್ನು ರೂಪಿಸುವಲ್ಲಿ ಪಾತ್ರವಹಿಸಿದವು ಮತ್ತು ರಾಜಕೀಯ ನಿರ್ಧಾರಗಳನ್ನು ಪ್ರೇರೇಪಿಸಿದವು ಎಂದು ತಿಳಿಸುತ್ತವೆ.
ಸಂತರಂತ ಚಿತ್ರಣಗಳು ಅಂಬೇಡ್ಕರ್ ಅವರಿಗೆ ಅಸಾಧಾರಣ ಶಕ್ತಿಯನ್ನು ಆರೋಪಿಸಿ ಅವರನ್ನು ತುಳಿತಕ್ಕೊಳಗಾದವರ ಅತ್ಯತ್ಸಾಹಿ, ತೀವ್ರಗಾಮಿ ನಾಯಕ ಎಂದು ಬಿಂಬಿಸುತ್ತವೆಯಾದರೂ, ಅವರು ಅವರ ಬೌದ್ಧಿಕ ಕೊಡುಗೆಗಳು ಮತ್ತು ತಾತ್ವಿಕ ಕಾರ್ಯಗಳ ಬಗ್ಗೆ ಗಂಭೀರವಾದ ಚರ್ಚೆಯನ್ನು ಮಿತಿಗೊಳಿಸುತ್ತವೆ.
ಕೊನೆಯದಾಗಿ ನದೀಮ್ ಖಾನ್ ಮರಾಠಿ ಭಾಷೆಯಿಂದ ಇಂಗ್ಲೀಷಿಗೆ ಅನುವಾದಿಸಿರುವ, ಅಂಬೇಡ್ಕರರ ಎರಡನೆಯ ಪತ್ನಿ ಸಾಮಾಜಿಕ ಹೋರಾಟಗಾರ್ತಿ ಸವಿತಾ ಅಂಬೇಡ್ಕರ್ ರವರ ಆತ್ಮಚರಿತ್ರೆ BABASAHEB: MY LIFE WITH DR AMBEDKAR. ಈ ಪುಸ್ತಕವು ಅವರನ್ನು ಕೊನೆಯ ಹತ್ತು ವರ್ಷಗಳಲ್ಲಿ ಕಾಡಿದ ಭಾವನಾತ್ಮಕ ತಳಮಳ ಹಾಗೂ ರಾಜಕೀಯ ತೊಂದರೆಗಳನ್ನು ವಿವರಿಸುತ್ತದೆ. ತಮ್ಮ ವೈಯಕ್ತಿಕ ಒಡನಾಟ ಮತ್ತು ಅಂಬೇಡ್ಕರ್ ಆಕೆಗೆ ಬರೆದ ಪತ್ರಗಳನ್ನು ಆಧರಿಸಿ ತನ್ನ ಗಂಡನ ಬಗೆಗಿನ ಆಕರ್ಷಕ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾರೆ. ಇದು ಬಹಳ ಆಸಕ್ತಿದಾಯಕ. ಅಂಬೇಡ್ಕರ್ ಜೊತೆಗಿನ ಅವರ ಮದುವೆ ಮತ್ತು ನಂತರದ ಆಕೆಯ ಸಾಮಾಜಿಕ ಹೋರಾಟಗಳಿಗೆ ದಲಿತ-ಬಹುಜನ ಪ್ರಪಂಚದಲ್ಲಿ ಅಷ್ಟು ಗೌರವ ದೊರೆತಿಲ್ಲ. ಸವಿತಾ ರವರ ಬ್ರಾಹ್ಮಣ ಪರಂಪರೆ, ಅದರ ಕಾರಣಕ್ಕೆ ಸಿಕ್ಕ ಸೌಕರ್ಯಗಳು ಅಂಬೇಡ್ಕರರ ನಿಕಟವರ್ತಿಗಳು ಹಾಗೂ ಅನುಯಾಯಿಗಳ ನಡುವೆ ಕಂದಕವನ್ನು ನಿರ್ಮಾಣ ಮಾಡಿತ್ತು. ದಶಕಗಳ ವರೆಗೆ ಅಂಬೇಡ್ಕರರ ಸಾವಿನ ಸಂಚುಗಾರ್ತಿ ಎಂಬ ವದಂತಿಗೆ ಆಕೆ ಬಲಿಪಶುವಾಗಬೇಕಾಯಿತು.
2003ರಲ್ಲಿ ತೀರಿಕೊಂಡ ಸವಿತಾ ಅವರು ಕೂಡಾ ಮಾರುತ್ತರ ನೀಡಲು ಹಿಂಜರಿದಿಲ್ಲ.
ಪುಸ್ತಕದ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ – “ಅಂಬೇಡ್ಕರರ ಬಗ್ಗೆ ಬರುತ್ತಿರುವ ಹೊಸ ಪುಸ್ತಕಗಳು ಅವರ ಜೀವನದ ನ್ಯಾಯೋಚಿತ ಹಾಗೂ ಪ್ರಾಮಾಣಿಕ ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತಿವೆ. ಅವರ ಖಾಸಗಿ ಕ್ಷಣಗಳನ್ನು ತೋರಿಸಲು ಸಹ ಯಾವುದೇ ಅಂಜಿಕೆ ತೋರುವುದಿಲ್ಲ. ಅವರ ಕ್ರಾಂತಿಕಾರಕ ಚಿಂತನೆಗಳು ಪಿತ್ರಾರ್ಜಿತವಾಗಿಯೋ ಅಥವಾ ದೈವಿಕ ಬಳುವಳಿಯಾಗಿಯೋ ಬಂದುವಲ್ಲ ಬದಲಿಗೆ ಪಾಂಡಿತ್ಯಪೂರ್ಣ ಮೆದುಳಿನ ಪರಿಶ್ರಮದಿಂದ ಬಂದಿದ್ದು ಎಂದು ವಾದಿಸುತ್ತವೆ. ಬಹಳಷ್ಟು ತಾಜಾ ವಿಶ್ಲೇಶಣಾ ಕ್ರಮಗಳನ್ನು ಅನುಸರಿಸಿ ಮಾಡಿರುವ ಹೊಸ ಅಧ್ಯಯನಗಳಿಂದ ಈ ಹಿಂದಿಗಿಂತಲೂ ಆಳವಾದ ಬೌದ್ಧಿಕ ತುಲನೆ ಮತ್ತು ವಿಮರ್ಶಾತ್ಮಕ ದೃಷ್ಟಿಕೊನದಿಂದ ಅವರ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಾಗಿದೆ. ಆದರೂ ಈ ಎಲ್ಲಾ ಮಾರ್ಗಗಳ ಹೊರತಾಗಿಯೂ ಅಂಬೇಡ್ಕರರ ಬಗ್ಗೆ ಯಾರಿಗೆ ಬರೆಯಲು ಸಾಧ್ಯ ? ಆ ಬರಹಗಾರರ ಸಾಮಾಜಿಕ ಹಿನ್ನೆಲೆಯಲ್ಲಿ ಅವರ ಕೃತಿಯು ಯಾರನ್ನು ಪ್ರಭಾವಿಸುತ್ತದೆ ಮತ್ತು ಯಾರಿಂದ ಸ್ವೀಕರಿಸಲ್ಪಡುತ್ತದೆ ಎಂಬ ಪ್ರಶ್ನೆ ಏಳುತ್ತದೆ”.
MAKING OF BABASAHEB : ಬಾಬಾ ಸಾಹೇಬ್ ರವರ ನಿರ್ಮಾಣ
ಅಂಬೇಡ್ಕರರ ಸಾಧನೆಯ ಹಾದಿಯಲ್ಲಿ ದಿನನಿತ್ಯವೂ ಅವಮಾನ, ಸಾಮಾಜಿಕ ಬಹಿಷ್ಕಾರ, ಆಳುವ ಮೇಲ್ವರ್ಗದ ಜನರ ದ್ವೇಷ, ಕಿತ್ತು ತಿನ್ನುವ ಬಡತನ ಮತ್ತು ಹದಗೆಟ್ಟ ಆರೋಗ್ಯ, ಕುಟುಂಬಸ್ಥರ ಸಾವಿನಂತಹ ದುರ್ಘಟನೆಗಳು ಎಲ್ಲವನ್ನೂ ಎದುರಿಸಿದ್ದಾರೆ. ಅವರ ಹೊಸ ಜೀವನಚಿತ್ರಗಳಲ್ಲಿ ಅವರು ಅನುಭವಿಸಿದ ಬೇಧಭಾವಗಳನ್ನು ಮತ್ತವರ ಸಾಮಾಜಿಕ ಸ್ಥಾನಮಾನದ ವಿವರಗಳನ್ನು ಅಧಿಕೃತ ದಾಖಲೆಗಳ ಮೂಲಕ ಮಂಡಿಸಲಾಗಿದೆ. ಹಲವು ಐತಿಹ್ಯಗಳನ್ನು ಅಂಬೇಡ್ಕರರ “Waiting for Visa” ದ ರೀತಿಯ ಚದುರಿದ ಆತ್ಮಕತೆಯಂತಹ ಟಿಪ್ಪಣಿಗಳಿಂದ ಎರವಲು ಪಡೆಯಲಾಗಿದೆ. ಅವರು ಅನುಭವಿಸಿದ ಸಾಮಾಜಿಕ ಬಹಿಷ್ಕಾರ (ತರಗತಿಯಲ್ಲಿ ಸರಿಯಾದ ಜಾಗವನ್ನು ನೀಡದಿರುವುದು, ಎಲ್ಲರೂ ನೀರು ಕುಡಿಯುವ ಮಡಿಕೆಯನ್ನು ಮುಟ್ಟಲೂ ಬಿಡದಿರುವುದು), ಅವಮಾನ (ತಲೆಗೂದಲು ಕತ್ತರಿಸಲು ಕ್ಷೌರಿಕನ ನಿರಾಕರಣೆ) ಮತ್ತು ಶೋಷಣೆ (ಜಾತೀಯ ಬೈಗುಳಗಳು, ಮೂಲಭೂತ ಸೌಕರ್ಯಗಳ ನಿರಾಕರಣೆ) ಹೀಗೆ ಎಲ್ಲವನ್ನೂ ಬಳಸಿಕೊಳ್ಳಲಾಗಿದೆ. ಆಸಕ್ತಿದಾಯಕ ಅಂಶವೆಂದರೆ ಅಂಬೇಡ್ಕರ್ ನಾಯಕತ್ವಕ್ಕೆಈ ಸಾಮಾಜಿಕ ಅನುಭವಗಳು ಕಾರಣ ಎಂಬುದನ್ನು ಸಮೀಕರಿಸಲು ಲೇಖಕರು ಹಿಂಜರಿಯುತ್ತಾರೆ. ಬದಲಾಗಿ ಸಾಮಾಜಿಕ ಪ್ರಜ್ಞೆಯನ್ನು ಎಚ್ಚರಗೊಳಿಸುವಲ್ಲಿ ಅವರ ಪಾಂಡಿತ್ಯ ಮತ್ತು ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಅವರ ಬೌದ್ಧಿಕ ತರಬೇತಿಯ ಬಗ್ಗೆ ಹೆಚ್ಚು ಒತ್ತು ಕೊಡಲಾಗಿದೆ.
ಆರ್ಥಿಕತೆ, ಕಾನೂನು ಮತ್ತು ಸಮಾಜಶಾಸ್ತ್ರ ದಂತಹ ವಿಶೇಷ ಕ್ಷೇತ್ರಗಳಲ್ಲಿ ಯುವ ಅಂಬೇಡ್ಕರರ ಶೈಕ್ಷಣಿಕ ಬದ್ಧತೆಯನ್ನು ಶೋಧಿಸುವಲ್ಲಿ ಹೊಸ ಅಧ್ಯಯನಗಳು ಗಮನಹರಿಸಿವೆ. ಸವಿತಾ ಅಂಬೇಡ್ಕರ್ ರವರ ನೆನಪುಗಳನ್ನು ಹೊರತು ಪಡಿಸಿದರೆ ಮಿಕ್ಕ ಎಲ್ಲಾ ಕೃತಿಗಳೂ ಅವರ ಬೌದ್ಧಿಕ ಜೀವನ ಮತ್ತು ಅವರು ಜನಪ್ರಿಯ ನಾಯಕ ಎಂಬುದರ ಜೊತೆಗೆ ಒಬ್ಬ ವಿದ್ವಾಂಸ, ಆದರ್ಶವಾದಿ ಮತ್ತು ಆಧುನಿಕ ಚಿಂತನೆಗಳ ದಾರ್ಶನಿಕ ಎಂದು ಶೋಧಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಸ್ಟ್ರೌಡ್ಸ್ ರವರು ಅಂಬೇಡ್ಕರರನ್ನು ಭಾರತದ ಪ್ರಮುಖ ತತ್ವಶಾಸ್ತ್ರಿಯ ಪರಂಪರೆಯ ಪ್ರಾಯೋಗಿಕ ದೃಷ್ಟಿಕೋನದ ಬಹುಮುಖ್ಯ ವಕ್ತಾರ ಎನ್ನುತ್ತಾರೆ.
ಆಕಾಶ್ ಸಿಂಗ್ ರಾಥೋಡ್ ರವರ BECOMING BABASAHEB ಎರಡು ಸಂಪುಟಗಳ ಅಂಬೇಡ್ಕರ್ ಜೀವನಚರಿತ್ರೆಯಲ್ಲಿ ಮೊದಲ ಸಂಪುಟವು 1891 ರಿಂದ 1929 ರವರೆಗಿನ ಯೌವ್ವನದ ದಿನಗಳನ್ನು ಕಟ್ಟಿಕೊಡುತ್ತದೆ. ಅವರನ್ನು ದೈನಂದಿನ ವ್ಯಕ್ತಿಯಾಗಿ, ಪರಿಚಿತ ಮನುಷ್ಯಗುಣಗಳ ಪರಿಣಾಮಗಳಿಗೆ ಎದುರುಗೊಂಡು ಕೈಜಾರುವ ಬಗ್ಗೆ ಅಧ್ಯಯನ ನಡೆಸಲು ಪ್ರಯತ್ನ ನಡೆಸುತ್ತಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಯುರೋಪಿನ ಮಹಿಳೆಯೊಬ್ಬರ ಬಗ್ಗೆ ಮೋಹ ಬೆಳೆಸಿಕೊಂಡಿದ್ದರು ಎಂಬ ಕ್ಷುಲ್ಲಕ ಸಲಹೆಯನ್ನು ನೀಡುತ್ತದೆ. ಈ ಸಂಪುಟಗಳ ಉತ್ತಮ ಪ್ರಯತ್ನವೆಂದರೆ ಅಂಬೇಡ್ಕರ್ ಅವರನ್ನು ಆಧುನಿಕ ಮನುಷ್ಯ ನಾಗಿ ಕಾಣುವುದು. ಒಬ್ಬ ಮೇಧಾವಿ ಶೈಕ್ಷಣಿಕ ವ್ಯಕ್ತಿಯಾಗಿ ಮತ್ತು ಸಾಮಾಜಿಕ ಹೋರಾಟಗಾರನಾಗಿ ‘ಬಾಬಾ ಸಾಹೇಬ್’ ಎಂದು ಪೂಜಿಸುವ ಹಂತಕ್ಕೆ ಬೆಳೆದು ಬಂದ ಹಾದಿಯನ್ನು ಇದು ಅವಲೋಕಿಸುತ್ತದೆ. ಈ ಹಿಂದಿನ ಜೀವನ ಚರಿತ್ರೆಗಳಲ್ಲಿ ಇದ್ದ ದೋಷಗಳನ್ನು ಮತ್ತು ನಿಖರವಲ್ಲದ ಮಾಹಿತಿಗಳನ್ನು ಚಿಕಿತ್ಸಾತ್ಮಕವಾಗಿ ಸರಿಪಡಿಸಿ ಕಥೆಯನ್ನು ಹೇಳಿದ್ದಾರೆ. ತಮ್ಮ ಮೂಲ ಉಪನಾಮ ‘ಅಂಬಾವಾಡೇಕರ್’ ಎಂಬುದನ್ನು ‘ಅಂಬೇಡ್ಕರ್’ ಎಂದು ಬದಲಿಸಿಕೊಂಡ ಬಗೆಯನ್ನು ಪರಿಶೋಧಿಸುತ್ತಾ ಬ್ರಾಹ್ಮಣ ಶಿಕ್ಷಕರೊಬ್ಬರು ತಮ್ಮ ಉಪನಾಮವನ್ನು ಬಾಬಾಸಾಹೇಬರಿಗೆ ನೀಡಿದ ಜನಪ್ರಿಯ ಗ್ರಹಿಕೆಯನ್ನು ನಿಕಶಕ್ಕೊಡ್ಡುತ್ತಾರೆ. ಅವರ ಹಣಕಾಸಿನ ತೊಂದರೆಗಳ ಬಗ್ಗೆ, ವಿದೇಶಿ ವಿಶ್ವವಿದ್ಯಾಲಯಗಳಿಂದ ಎರಡು ಪಿ.ಹೆಚ್.ಡಿ ಪದವಿಗಳನ್ನು ಪಡೆಯುವ ಶೈಕ್ಷಣಿಕ ಪಯಣದಲ್ಲಿ ಎದುರಿಸಿದ ಹಲವು ಸವಾಲುಗಳ ಬಗ್ಗೆ ಈ ಮುಂಚೆ ಯಾವ ಸಾಹಿತ್ಯದಲ್ಲೂ ದೊರಕಿರದ ಸಮೃದ್ಧ ವಿವರಗಳನ್ನು ರಾಥೋಡ್ ಒದಗಿಸುತ್ತಾರೆ.
ರಾಥೋಡ್ ರವರು ಗಮನಿಸಿರುವ ಪ್ರಮುಖ ಮತ್ತು ಆಸಕ್ತಿದಾಯಕ ಅಂಶವೆಂದರೆ 1927ರ “ಮಹಾಡ್ ಸತ್ಯಾಗ್ರಹ”ದ ನಂತರ ಸಾಮಾಜಿಕ ಮೇಲ್ವರ್ಗದವರೊಂದಿಗೆ ಅವರು ಎದುರಿಸಿದ ಕಾನೂನು ಹೋರಾಟ. ಎಲ್ಲ ಸಮುದಾಯದವರಿಗಾಗಿ ಇದ್ದ ಕೆರೆಯಲ್ಲಿ ಅಸ್ಪೃಶ್ಯ ಜಾತಿಯ ಜನರು ನೀರು ಕುಡಿಯಲು ನಡೆಸಿದ ಗೆಲುವಿನ ಚಳುವಳಿ. ಈ ಚಳುವಳಿಯು ಅಂಬೇಡ್ಕರ್ ಅವರನ್ನು ಸಾಮಾಜಿಕ ಅನಿಷ್ಟಗಳಿಗೆ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಗತಿಪರ-ಪ್ರಜಾಪ್ರಭುತ್ವವಾದಿ ಹೋರಾಟಗಾರನಾಗಿ ವಿಶಾಲ ಪ್ರಪಂಚಕ್ಕೆ ಪರಿಚಯಿಸಿತು.
Amid the competing approaches to Ambedkar, they also raise questions of who gets to write about him, and how the social background of those who do influences the reception and perceived value of their work.
ಪ್ರಾಥಮಿಕ ಮೂಲಗಳನ್ನು ಮರು ಪರಿಶೀಲನೆ ಮಾಡುತ್ತಾ ಬಹಳಷ್ಟು ಹಳೆಯ ದಾಖಲೆಗಳನ್ನು ತಿರುವಿಹಾಕುತ್ತಾ ಹಲವು ವೈಪರೀತ್ಯಗಳನ್ನು ಅವರು ಬಹಿರಂಗಪಡಿಸಿದ್ದಾರೆ. ಉದಾಹರಣೆಗೆ ಅಂಬೇಡ್ಕರರ ಜನ್ಮದಿನಾಂಕದ ಬಗೆಗಿನ ಗೊಂದಲ, ಪ್ರಯಾಣದ ದಿನಾಂಕಗಳು , ಭೇಟಿಕೊಟ್ಟ ಸ್ಥಳಗಳು ಮುಂತಾದ ವಿಚಾರಗಳಲ್ಲಿ ಇದ್ದ ದೋಷಗಳನ್ನು ಸರಿಪಡಿಸಲು ರಾಥೋಡ್ ಪ್ರಯತ್ನಿಸಿದ್ದಾರೆ. ಅಂಬೇಡ್ಕರರ ಸ್ವಭಾವವನ್ನು ಸಮಗ್ರವಾಗಿ ತಿಳಿಯಲು ಸಹಾಯವಾಗುವಂತೆ ಬಹಳಷ್ಟು ರೋಚಕ ಸಂಗತಿಗಳು ಹಾಗೂ ಸಣ್ಣ ಅಂಶಗಳನ್ನು ರಾಥೋಡ್ ಗಮನಕ್ಕೆ ತಂದರೂ, ಇತರೆ ಲೇಖಕರುಗಳು ಎತ್ತಿತೋರುವ, ಒಬ್ಬ ಚಿಂತಕನಾಗಿ ಅಂಬೇಡ್ಕರರನ್ನು ವಿಚಾರಣೆಗೊಳಪಡಿಸುವ ಸೈದ್ಧಾಂತಿಕ ಪ್ರಶ್ನೆಗಳಿಂದ ಇವುಗಳು ಓದುಗರನ್ನು ವಿಮುಖವಾಗಿಸುತ್ತವೆ.
ರಾಥೋಡ್ ರವರ ಮೊದಲ ಕಿರು ಸಂಪುಟಕ್ಕಿಂತಲೂ ಅಶೋಕ್ ಗೋಪಾಲ್ ಅವರ ವಿಸ್ತ್ರೃತವಾದ ಆದರೆ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿರುವ ಪಠ್ಯವು ಅಂಬೇಡ್ಕರ್ ಅವರ ಜೀವನದ ವಿವಿಧ ತೊಡುಕಗಳನ್ನು ಶೋಧಿಸುತ್ತಾ , ಮುಚ್ಚಿಟ್ಟ ಹಲವು ಸಂಗತಿಗಳನ್ನು ಬಹಿರಂಗಗೊಳಿಸುತ್ತ, ರೋಮಾಂಚನಗೊಳಿಸುವ ಐತಿಹಾಸಿಕ ವಿವರಗಳನ್ನು ನೀಡುತ್ತಾ ಓದುಗರನ್ನು ಹಿಡಿದಿಟ್ಟುಕೊಳ್ಳಬಹುದಾದ ಜೀವನಚರಿತ್ರೆಯಾಗಿದೆ. ಬ್ರಿಟಿಷ್ ರಾಜ್ ನಲ್ಲಿ ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಮತ್ತು ಶಾಸಕನಾಗಿ ಅವರ ಮೊದಲ ಚಳುವಳಿಗಳ ಬಗ್ಗೆ ವಿವರವಾದ ಚಿತ್ರಗಳನ್ನು ನೀಡುತ್ತಾರೆ. ಅಸ್ಪೃಶ್ಯರನ್ನು ದೇವಸ್ಥಾನದ ಒಳಗೆ ಬಿಟ್ಟುಕೊಳ್ಳುವಂತಹ ಸಮಾಜಿಕ ಧಾರ್ಮಿಕ ಸುಧಾರಣೆಗಳ ಮುಖಾಂತರ ಒಂದು ಸಾಮರಸ್ಯವುಳ್ಳ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟುವ ಗುರಿಯನ್ನು ಹೊಂದಿದ ಸಂವಿಧಾನಾತ್ಮಕ ಸುಧಾರಕನಾಗಿ ಈ ಪೂರ್ವಸೂರಿಯು ಕಾಣಸಿಗುತ್ತಾರೆ. ನಂತರ ಈ ಆಂತರಿಕ ಸಮಾಜಿಕ ಸುಧಾರಣೆಯ ಉದ್ದೇಶದಿಂದ ವಿಮುಖರಾಗಿ, ಸಾಂವಿಧಾನಿಕ ಮತ್ತು ಸಕ್ರಿಯ ರಾಜಕಾರಣದಿಂದ ಈ ವಿಮೋಚನೆಗೆ ಇರುವ ವಿಶಾಲ ಸಾಧ್ಯತೆಗಳ ಬಗ್ಗೆ ಗಮನ ಹರಿಸಿದರು.
1980ರ ದಶಕದ ಉತ್ತರಾರ್ಧದಲ್ಲಿ ವಿದ್ವಾಂಸರು ಅಂಬೇಡ್ಕರ್ ಅವರನ್ನು ರಾಜಕೀಯ ಸಿದ್ಧಾಂತ ಮತ್ತು ಸಾಮಾಜಿಕ ತತ್ವಜ್ಞಾನಿಯಾಗಿ ಹೆಚ್ಚು ಸಮಗ್ರವಾಗಿ ಪರಿಶೀಲಿಸಲು ಪ್ರಾರಂಭಿಸಿದರು.
ಅಂಬೇಡ್ಕರರ ವ್ಯಕ್ತಿತ್ವವನ್ನು ರೂಪಿಸಲು ಪ್ರಭಾವ ಬೀರಿದ ಸಂದರ್ಭಗಳನ್ನು, ದೃಢೀಕೃತ ಆಕರಗಳ ಭಂಡಾರವನ್ನೇ ಬಿಚ್ಚಿಟ್ಟಿದ್ದಾರೆ ಗೋಪಾಲ್. ಅಂಬೇಡ್ಕರ್ ರವರು 1936ರಲ್ಲಿ ತಮ್ಮ ಮೊದಲ ರಾಜಕೀಯ ಪಕ್ಷಕ್ಕೆ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಎಂದು ಹೆಸರಿಸಿದ್ದರ ಹಿನ್ನೆಲೆಯನ್ನು, 1930ರಲ್ಲಿನ ಬಾಂಬೆಯ ನೆಲದಲ್ಲಿ ಎಡ ಸಿದ್ಧಾಂತ ಮತ್ತು ಮಾರ್ಕ್ಸ ವಾದದ ಚಿಂತನೆಗಳೊಂದಿಗೆ ಅಂಬೇಡ್ಕರ್ ವಿಮರ್ಶಾತ್ಮಕವಾಗಿ ಒಡನಾಡಿದ್ದನ್ನು ಚೆನ್ನಾಗಿ ವಿವರಿಸಿದ್ದಾರೆ. ಅಂಬೇಡ್ಕರ್ ಜಾಣ್ಮೆಯಿಂದ ಅಸ್ಪೃಶ್ಯ ಜಾತಿ ಮತ್ತು ವರ್ಗಗಳನ್ನು ಕೇವಲ ಸಮಾಜವಾದಿ ಚಿಂತನೆಗಳ ಪ್ರಭಾವಕ್ಕೆ ಒಳಗಾಗಲು ಬಿಡದೆ, ಚುನಾವಣಾ ಹೋರಾಟಗಳ ಮೇಲೆ ಬೀರಬಹುದಾದ ಗಮನಾರ್ಹ ಪರಿಣಾಮಗಳ ಕಡೆಗೆ ತೊಡಗಿಸುವುದನ್ನು ತಿಳಿಸುತ್ತಾರೆ. ಬಾಂಬೆಯ ಅಸ್ಪೃಶ್ಯ ಕಾರ್ಮಿಕರ ಹೀನಾಯ ಪರಿಸ್ಥಿತಿಯನ್ನು ಗುರುತಿಸಿ ಅವರ ಸಮಸ್ಯೆಗಳನ್ನು ಕಡೆಗಣಿಸಿದ್ದ ಕಮ್ಯುನಿಸ್ಟ್ ಕಾರ್ಮಿಕರ ಸಂಘನೆಯನ್ನು ಅಂಬೇಡ್ಕರ್ ತರಾಟೆಗೆ ತಗೆದುಕೊಂಡಿದ್ದರು. ಸಾಮಾಜವಾದದ ಚಿಂತನೆಗಳಿಗೆ ಉತ್ತಮ ಅರ್ಥವನ್ನು ಕೊಡುವ ವರ್ಗ ಮತ್ತು ಜಾತಿ ದೌರ್ಜನ್ಯಗಳ ವಿಷಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಬಗ್ಗೆ ಅವರ ಪಕ್ಷವು ಆಶ್ವಾಸನೆ ನೀಡಿತ್ತು.
ಮಾನವೀಯ ಮೌಲ್ಯಗಳ ಬಗ್ಗೆ ಅವರಿಗಿದ್ದ ಬದ್ಧತೆ ಮತ್ತು ಜಾತಿಗಳ ನಡುವೆ ಇದ್ದ ತಾರತಮ್ಯವನ್ನು ತೊಡೆಯಲು ಬೌದ್ಧ ಧರ್ಮದ ಆಯ್ಕೆ ಇವೆಲ್ಲದರ ಮೂಲಕ ಅಂಬೇಡ್ಕರ್ ಅವರನ್ನು ಸಾಮಾಜ ಸುಧಾರಕನಾಗಿ ಸರಿಯಾದ ಸ್ಥಾನದಲ್ಲಿ ಇರಿಸುವುದು ಗೋಪಾಲ್ ರವರ ಉದ್ದೇಶವಾಗಿದೆ. ‘ಸದ್ಧಮ್ಮ’ ಎಂಬ ಪಠ್ಯದಲ್ಲಿ ಅಂಬೇಡ್ಕರ್ ಚಿಂತನೆಗಳು ಮತ್ತು ಮತಾಂತರ ಚಳುವಳಿ ಹಾಗೂ ಆಧುನಿಕ ಸಮಯಕ್ಕೆ ಬೇಕಾದ ಧರ್ಮದ ಬಗ್ಗೆ ಮಾಡುವ ವಿಶ್ಲೇಷಣೆ ಧನಂಜಯ್ ಕೀರ್ ರವರನ್ನು ಹೋಲುತ್ತದೆ. ಅಂಬೇಡ್ಕರ್ ರವರು “ಉತ್ತಮ ಧರ್ಮ” ಎಂಬ ಯೋಚನೆಯೊಂದಿಗೆ, ಧರ್ಮದ ಮಾರ್ಕ್ಸ್ ವಾದಿ ನೋಟದಿಂದ ಹೇಗೆ ಅಂತರ ಕಾಪಾಡಿಕೊಂಡರು ಎಂಬುದನ್ನು ಕೀರ್ ತಿಳಿಸುತ್ತಾರೆ. ಗೋಪಾಲ್ ಕೂಡಾ ದೇಶಭಕ್ತ ರಾಷ್ಟ್ರವಾದಕ್ಕೆ ಲಂಗರು ಹಾಕದೆ ಎಚ್ಚರದಿಂದಿರುತ್ತಾರೆ. ಬದಲಿಗೆ ಹಿಂದುತ್ವ ಸಿದ್ಧಾಂತದ ವಿ.ಡಿ.ಸಾವರ್ಕರ್ ರವರ ಬಲಪಂಥೀಯ ಧೋರಣೆಗಳ ಒಡನಾಡಿಯಾಗದೆ ಹೇಗೆ ಅಂಬೇಡ್ಕರ್ ರವರು ಸಾವರ್ಕರ್ ವಿರುದ್ಧವಾಗಿದ್ದರು ಎಂಬುದನ್ನು ಗೋಪಾಲ್ ತೋರಿಸುತ್ತಾರೆ.
ಈ ಎರಡೂ ಜೀವನ ಚರಿತ್ರೆಗಳಿಗೆ ಹೋಲಿಸಿದರೆ ಶಶಿ ತರೂರ್ ರವರ ಕೃತಿಯು ಸ್ವಲ್ಪ ಗಟ್ಟಿಯಾದ ತಿರುಳಿಲ್ಲದಂತೆ ತೋರುತ್ತದೆ. ಅಂಬೇಡ್ಕರರ ಜೀವನದ ಘಟನೆಗಳನ್ನು ಮತ್ತು ತಿಅವರ ಬಗ್ಗೆ ತಿಳಿದಿರುವ ಸ್ಪಷ್ಟ ಅಂಶಗಳನ್ನು ಮರುಸಾಬೀತು ಪಡಿಸಲು ಅವರು ಕೀರ್ ರವರ ಚಿತ್ರಣ ಹಾಗೂ ಇನ್ನಿತರ ದ್ವಿತೀಯ ಸಂಪನ್ಮೂಲಗಳ ಮೇಲೆ ಅವಲಂಬಿತರಾಗಿರುವುದು ಕಾಣುತ್ತದೆ. ಇದು, ಅಂಬೇಡ್ಕರರ ಜಾತ್ಯತೀತ ಮತ್ತು ರಾಷ್ಟ್ರವಾದಿ ನಿಲುವುಗಳನ್ನು ಪರಿಚಯಿಸುತ್ತಾ ದಲಿತೇತರರನ್ನು ಓಲೈಸಲು ಬರೆದಿರುವ ಸಂತಚರಿತೆಯಂತೆ ಭಾಸವಾಗುತ್ತದೆ. ಆದರೆ ತರೂರ್ ರವರು ಈ ಆರೋಪವನ್ನು ಒಪ್ಪುವುದಿಲ್ಲ. ಒಂದು ಅಧ್ಯಾಯದಲ್ಲಿ ಅವರ ಜೀವನದ ನಾಲ್ಕು ನ್ಯೂನ್ಯತೆಗಳನ್ನು ಚರ್ಚಿಸುವುದಾಗಿ ಹೇಳಿದರೂ, ಪುಸ್ತಕವು ಅವರ ಬಗೆಗೆ ಅದಾಗಲೇ ಪ್ರಚಲಿತವಿರುವ ಟೀಕೆಗಳ ಮೇಲ್ಮೈಯನ್ನಷ್ಟೇ ಸ್ಪರ್ಶಿಸಿದ್ದಾರೆ. ಅಂಬೇಡ್ಕರ್ ಆದಿವಾಸಿಗಳ ಸಮಸ್ಯೆಗಳನ್ನು ಕಡೆಗಣಿಸಿದರು (ಅರುಂಧತಿ ರಾಯ್ ಇಂತಹುದೇ ಆರೋಪವನ್ನು ಈಗಾಗಲೇ ಮಾಡಿದ್ದಾರೆ), ಅವರು ತುಳಿತಕ್ಕೊಳಗಾದ ಸಮುದಾಯಗಳ ಏಳಿಗೆಗಾಗಿ ಆಧುನಿಕ ರಾಷ್ಟ್ರದ ಕಲ್ಯಾಣ ನೀತಿಗಳ ಮೇಲೆ ಅವಲಂಬಿತರಾಗಿದ್ದರು ( ಎಡಪಂಥೀಯ ಸಾಮಾಜಿಕ ಗುಂಪುಗಳಲ್ಲಿ ಪ್ರಚಲಿತವಿರುವ ಟೀಕೆ). ಈ ಎಲ್ಲಾ ಟೀಕೆಗಳಿಗೆ ವಾದಗಳ ಆಧಾರವಿದ್ದರೂ ಅವನ್ನು ಪರಾಮರ್ಶಿಸಲು ಅವಶ್ಯಕವಿರುವ ಬೌದ್ಧಿಕ ಸರಕುಗಳನ್ನು ತರೂರ್ ಒದಗಿಸುವುದಿಲ್ಲ. ಈ ವಿಚಾರಗಳನ್ನು ಪ್ರಸ್ತಾಪಿಸುವ ಹಲವಾರು ಹೊಸ ಸಾಹಿತ್ಯದ ಪರಿಕರಗಳು ಈಗಾಗಲೇ ಲಭ್ಯವಿವೆ. ಉದಾಹರಣೆಗೆ ಅಂಬೇಡ್ಕರ್ ಮುಸ್ಲಿಮರ ಜೊತೆಗೆ ನಡೆದುಕೊಂಡ ರೀತಿಯನ್ನು ಪ್ರಶ್ನಿಸುವ ಆನಂದ್ ತೇಲ್ತುಂಬೆ ರವರ Ambedkar on Muslims, ಲಿಂಗ ಸಮಾನತೆಯ ಸಮಸ್ಯೆಗಳು (ಶೈಲಜಾ ಪೈಕ್ ರವರ ಕೃತಿ), ಆದಿವಾಸಿಗಳ ಹಾಗೂ ಪರಿಶಿಷ್ಟ ಪಂಗಡಗಳ ಬಗ್ಗೆ ಅಂಬೇಡ್ಕರ್ ನಿಲುವನ್ನು ಪ್ರಶ್ನಿಸುವ Economic and Political Weekly ಯಲ್ಲಿ ಪ್ರಕಟವಾದ ನಿಶಿಕಾಂತ್ ಕೊಲ್ಗೆ ರವರ ಲೇಖನ “Is Ambedkar’s prejudice against ‘Tribe’ a settled matter?”. ಶಶಿ ತರೂರ್ ರವರು ಈ ಯಾವ ಆಕರಗಳನ್ನೂ ಗಮನಿಸಿದಂತೆ ಕಾಣುವುದಿಲ್ಲ.
ಗಮನಿಸಬೇಕಾದ ಮುಖ್ಯ ಅಂಶವೆಂದರೆ ತರೂರ್ ಅವರು ತಮ್ಮ ಹಿಂದಿನ ಪುಸ್ತಕ INGLORIOUS EMPIRE ನಲ್ಲಿ ಭಾರತದ ಜಾತಿ ಅಸಮಾನತೆ ಮತ್ತು ಕೋಮು ಸಂಘರ್ಷಕ್ಕೆ ಬ್ರಿಟಿಷರ ವಸಾಹತು ನೀತಿಗಳನ್ನೇ ಸಂಪೂರ್ಣ ಹೊಣೆಯನ್ನಾಗಿಸಿದ್ದರು. ಆದರೆ ಅಂಬೇಡ್ಕರ್ ರವರ ಪ್ರಕಾರ ಅಸ್ಪೃಶ್ಯರ ದೂಷಣೆ, ಹೀನಾತಿಹೀನ ಕೆಲಸಗಳಿಗೆ ಅವರ ನಿಯೋಜನೆ, ದೈಹಿಕ ಶೋಷಣೆ ಮತ್ತು ಸಾಮಾಜಿಕ ತಾರತಮ್ಯ ಎಲ್ಲವೂ ಹಿಂದೂ ಧರ್ಮದ ಸಾಂಪ್ರದಾಯಿಕ ವ್ಯವಸ್ಥೆ. ಅಂಬೇಡ್ಕರ್ ರವರ ಮೊದಲ ದುಂಡು ಮೇಜಿನ ಸಭೆಯ ಭಾಷಣಗಳನ್ನು ತರೂರ್ ರವರೇ ಪ್ರಸ್ತಾಪಿಸುತ್ತಾರೆ. ” ಬ್ರಿಟಿಷರ ಪೂರ್ವದ ಭಾರತೀಯ ಸಮಾಜಕ್ಕೂ ಮತ್ತು ಇಂದಿಗೂ ನಮ್ಮನ್ನು ಕಲ್ಪಿಸಿಕೊಳ್ಳುವುದಾದರೆ, ಅಂದು ನಾವು ಬಹಳಷ್ಟು ಸಹಿಸಿಕೊಂಡಿದ್ದೇವೆ. ಈಗ ಸುಮ್ಮನೆ ಮುಂದೆ ಹೋಗುವ ಬದಲು ನಮ್ಮ ಸಮಯಕ್ಕಾಗಿ ಕಾಯುತ್ತಿದ್ದೇವೆ. ಬ್ರಿಟೀಷರಿಗಿಂತಲೂ ಮುನ್ನ ಅಸ್ಪೃಶ್ಯತೆಯ ಕಾರಣದಿಂದ ನಮ್ಮ ಸ್ಥಿತಿಯು ಅಸಹ್ಯವಾಗಿತ್ತು. ಇದನ್ನು ತೊಡೆದು ಹಾಕಲು ಬ್ರಿಟಿಷ್ ಸರ್ಕಾರ ಏನಾದರೂ ಕ್ರಮ ಕೈಗೊಂಡಿದಿಯೇ?” ಎಂದು ಅಂಬೇಡ್ಕರ್ ಕೇಳಿದ್ದರು. ಸಾಮಾಜಿಕವಾಗಿ ಭಾರತದ ಅಸ್ಪೃಶ್ಯರ ಹೀನಾಯ ಸ್ಥಿತಿಗೆ ಪುರಾತನ ಹಿಂದೂ ಧರ್ಮದ ಜಾತೀಯ ಮನಸ್ಥಿತಿಯೇ ಕಾರಣ ಎಂಬುದನ್ನು ಅಂಬೇಡ್ಕರ್ ಕಂಡುಕೊಂಡಿದ್ದರು. ಆಧುನಿಕ ಅವಧಿಯ ವಿಮೋಚನಾ ಸಾಮರ್ಥ್ಯವನ್ನು – ನಿದರ್ಶನವಾಗಿ ಬಹಳ ಕಡಿಮೆ ಸಂಖ್ಯೆಯಲ್ಲಿಯಾದರೂ ವಸಾಹತು ಶಿಕ್ಷಣ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದ ಜಾತಿಗಳಿಗೆ ಬ್ರೀಟೀಷರು ನೀಡಿದ ಗಮನಾರ್ಹ ಅವಕಾಶವನ್ನು ಅಂಬೇಡ್ಕರ್ ಪ್ರಶಂಸಿದ್ದನ್ನು ಗುರುತಿಸುವಲ್ಲಿ ತರೂರ್ ವಿಫಲರಾಗುತ್ತಾರೆ. ಇದು ಕೇವಲ ಸಣ್ಣ ಭಿನ್ನಾಭಿಪ್ರಾಯ ಮಾತ್ರವಲ್ಲ. ಅಂಬೇಡ್ಕರರ ಜೀವನಚರಿತ್ರೆಯನ್ನು ಬರೆಯುವ ಪ್ರಯತ್ನಕ್ಕೆ ಕೈಹಾಕುವ ಶಶಿ ತರೂರ್ ರವರಿಗೆ ಜಾತಿಯ ಭಯಾನಕತೆಗೆ ಹಿಂದೂ ಧರ್ಮವೇ ಕಾರಣ ಎಂಬ ಅವರ ಮೂಲಭೂತ ಸಿದ್ಧಾಂತವನ್ನು ವಜಾಗೊಳಿಸುವುದು ಆಶ್ಚರ್ಯವೆನಿಸುತ್ತದೆ.
ಅಂಬೇಡ್ಕರರ ನಿರ್ಮಾಣ ಕಾಲ
ಅಂಬೇಡ್ಕರ್ ಅವರನ್ನು ಕೇವಲ ದಲಿತ ನಾಯಕ ಎಂದು ಬಿಂಬಿಸಲಾಗಿದೆ. ಅವರ ಮಹೋನ್ನತ ಸಾಧನೆಗಳಾದ ಎರಡು ಡಾಕ್ಟರೇಟ್ ಪದವಿ, ಕಾನೂನು ವ್ಯವಹಾರಗಳ ಮೇಲಿನ ತರಬೇತಿ ಮತ್ತು ಬ್ಯಾರಿಸ್ಟರ್ ಇನ್ ಲಾ ಪದವಿ ಗಳ ಬಗ್ಗೆ ಬಹಳ ಕಡಿಮೆ ಅಧ್ಯಯನವಾಗಿದೆ. ಹೆಚ್ಚೆಂದರೆ ಅವುಗಳನ್ನು ಅಡಿಬರಹವನ್ನಾಗಿ ಬಳಸಲಾಗಿದೆ. ಅವರ ಅಂತರಾಷ್ಟ್ರೀಯ ಮನ್ನಣೆ, ಪ್ರಮುಖವಾಗಿ ಲಂಡನ್ ಮತ್ತು ನ್ಯೂಯಾರ್ಕ್ ಮಹಾನಗರಗಳಲ್ಲಿನ ಅನುಭವಗಳು, ಮೊದಲ ಮಹಾ ಯುದ್ಧದ ಸಮಯದ ಮುಖಾಮುಖಿ ಅವರ ಅನುಭವ ಮತ್ತು ವಿಚಾರಗಳ ಮೇಲೆ ಹೇಗೆ ಪ್ರಭಾವ ಬೀರಿದವು ಎಂದು ತಿಳಿಯುವ ಸಣ್ಣ ಪ್ರಯತ್ನಗಳು ಆಗಿವೆ.
ಅಂಬೇಡ್ಕರ್ ಅವರ ಜೀವನ ಮತ್ತು ಬೌದ್ಧಿಕ ಚಟುವಟಿಕೆಯ ಅಧ್ಯಯನವು ಜನಪ್ರಿಯ ಶೈಕ್ಷಣಿಕ ಶಿಸ್ತಾಗಿ ಹೊರಹೊಮ್ಮಿದೆ ಮತ್ತು ಇದು ದಲಿತರಲ್ಲದ, ಬಹುಜನೇತರ ವಿದ್ವಾಂಸರು ಮತ್ತು ಬುದ್ಧಿಜೀವಿಗಳಿಂದ ತುಂಬಿದೆ, ಅವರಲ್ಲಿ ಹೆಚ್ಚಿನವರು ಪುರುಷರು.
ತರೂರ್ ಮತ್ತು ರಾಥೋಡರ ಕೃತಿಗಳಲ್ಲಿ ಪ್ರತಿಷ್ಠಿತ ಶೈಕ್ಷಣಿಕ ಪದವಿಗಳನ್ನು ಪಡೆದ ಅವರ ಅಸಮಾನ್ಯ ಸಾಧನೆಯನ್ನು ಬಹುವಾಗಿ ಹೊಗಳಲಾಗಿದೆ. ಲಂಡನ್ನಿನಲ್ಲಿ ಅನಾರೋಗ್ಯಕ್ಕೀಡಾಗಿ ಹೇಗೆ ಬಳಲಿದರು, ಬಡತನದ ಕಾರಣಕ್ಕಾಗಿ ಹೇಗೆ ಊಟವಿಲ್ಲದ ರಾತ್ರಿಗಳನ್ನು ಕಳೆದರು ಎಂದು ರಾಥೋಡ್ ವಿವರಿಸಿದ್ದಾರೆ. ಅವರು ಭಾರತಕ್ಕೆ ಮರಳಿದ ಮೇಲೆಯೂ ಯಾವುದೇ ಧನಸಹಾಯ ದೊರೆಯದೆ , ವೃತ್ತಿಪರ ಉದ್ಯೋಗ ಸಿಗದೆ ಬಹಳಷ್ಟು ಕಾಲದವರೆಗೆ ಖಾಲಿ ಕೈಯಲ್ಲಿ ಬದುಕಿದರು. ಅಂಬೇಡ್ಕರ್ ಅನುಭವಿಸಿದ ಆರ್ಥಿಕ ತೊಂದರೆಗಳು ಮತ್ತು ಉನ್ನತ ವ್ಯಾಸಂಗ ಪಡೆಯಲು ಇದ್ದ ರಚನಾತ್ಮಕ ತೊಡಕುಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ತಮ್ಮ ಶಿಕ್ಷಣಕ್ಕೆ ಸಾಲ ಒದಗಿಸಿದ್ದ ಬರೋಡಾದ ರಾಜಪ್ರಭುತ್ವವು ಶಿಕ್ಷಣ ಮುಗಿದ ಬಳಿಕ ಅಂಬೇಡ್ಕರ್ ಒಂದು ಶಾಶ್ವತ ಉದ್ಯೋಗ ಪಡೆಯುವ ಮುನ್ನವೇ ಋಣ ಸಂದಾಯ ಮಾಡುವಂತೆ ಬರೆದ ಪತ್ರವನ್ನು ಉಲ್ಲೇಖವಾಗಿ ಕೊಡುತ್ತಾರೆ. ಆಸಕ್ತಿದಾಯಕ ಸಂಗತಿ ಎಂದರೆ ಅಂಬೇಡ್ಕರರು ಇಷ್ಟೆಲ್ಲಾ ಆರ್ಥಿಕ ತೊಂದರೆಗಳಿಗೆ ಒಳಗಾದರೂ ತಮ್ಮ ಮೊದಲಿನ ಬರಹಗಳ ಮೇಲೆ ಅದರ ಪ್ರಭಾವ ಎಳ್ಳಷ್ಟೂ ಇರಲಿಲ್ಲ ಎಂದು ಅಶೋಕ್ ಗೋಪಾಲ್ ಸೂಚಿಸುತ್ತಾರೆ. ವಿಶೇಷವಾಗಿ ಅವರ ಮೊದಲ ಪಾಂಡಿತ್ಯಪೂರ್ಣ ಬರಹ “ಭಾರತದ ಜಾತಿಗಳು”(Castes in India) ಅತ್ಯಂತ ಗಮನಾರ್ಹವೂ, ಸಾಮಾಜಿಕ ಅಧ್ಯಯನಕ್ಕೆ ಸ್ವಂತಿಕೆಯುಳ್ಳ ಸತ್ವಯುತ ಕೊಡುಗೆ ನೀಡುವುದರ ಜೊತೆಗೆ ಅವರ ಅಸಾಧಾರಣ ಪಾಂಡಿತ್ಯವನ್ನು ನಿರೂಪಿಸಿತು. ಬೇಸರದ ವಿಷಯವೆಂದರೆ ನಂತರ ಬಂದ ಸಮಾಜ ಶಾಸ್ತ್ರಜ್ಞರು ಅಂಬೇಡ್ಕರರನ್ನು ತಮ್ಮ ಅಧ್ಯಯನದ ಭಾಗವಾಗಿ ಒಪ್ಪಿಕೊಳ್ಳಲು ಹಿಂಜರಿದರು ಎನ್ನುತ್ತಾರೆ ಗೋಪಾಲ್.
‘Ambedkar in London’ edited by William Gould, Santosh Dass and Christophe Jaffrelot. Hurst Publishers (December 2022)
ವಿಲಿಯಮ್ ಗೌಲ್ಡ್, ಸಂತೋಷ್ ದಾಸ್ ಹಾಗೂ ಕ್ರಿಸ್ಟೋಫರ್ ಜಾಪರ್ಲೆಟ್ ರವರುಗಳು ಸಂಪಾದಿಸಿರುವ ಅಂಬೇಡ್ಕರ್ ಇನ್ ಲಂಡನ್ ಪುಸ್ತಕದ ಮೊದಲ ಬಾಗವು ಯಥೇಚ್ಛವಾದ ಐತಿಹಾಸಿಕ ಹಿನ್ನೆಲೆಗಳನ್ನು ಒದಗಿಸುತ್ತಾ 1920ರ ಸಮಯದ ಲಂಡನ್ ಮತ್ತು ನ್ಯುಯಾರ್ಕ್ ನಗರಗಳಲ್ಲಿನ ಅವರ ಸಮಯವನ್ನು ಪರಿಶೀಲಿಸುತ್ತದೆ. ವಿಲಿಯಮ್ ಗೌಲ್ಡ್ ಬರೆದಿರುವ ನಿರ್ದಿಷ್ಟವಾಗಿ ಅಂಬೇಡ್ಕರ್ ರವರ ರಾಜಕೀಯ ಹಣಕಾಸಿನ ಬಗೆಗಿನ ತಾಜಾ ಬರಹಗಳು, ಬ್ರಿಟೀಷ್ ವಸಾಹತುಶಾಹಿಯ ಶೋಷಣೆಯ ಬಗ್ಗೆ ಅವರ ವಿಚಾರಣೆ ಮತ್ತು ಭಾರತೀಯ ರೂಪಾಯಿಯ ಬದಲಾಗುತ್ತಿದ್ದ ಸ್ವರೂಪದ ಮೇಲಿನ ಪ್ರಬಂಧವನ್ನು ಶೋಧಿಸುತ್ತದೆ. ಲೂಯಿ ಕಬ್ರೇರಾ ಹಾಗೂ ಸೂರಜ್ ಯೆಂಗ್ಡೆ ರವರಂತಹ ವಿದ್ವಾಂಸರುಗಳ ಇತ್ತೀಚಿನ ಕೆಲಸಗಳನ್ನು ಪ್ರಸ್ತಾಪಿಸುತ್ತಾ ಜೀಸಸ್ ಎಫ್ ಖೈರೆಜ್ ಗಾರ್ಜಾ ಬರೆದಿರುವ ಒಂದು ಅಧ್ಯಾಯದಲ್ಲಿ ಅಗಾಧವಾದ ಬೌದ್ಧಿಕ ತಿಳುವಳಿಕೆಯಿರುವ ಅಂಬೇಡ್ಕರ್ ರವರನ್ನು “ಅಂತರಾಷ್ಟ್ರೀಯವಾದಿ” ಎಂದು ಕರೆಯಬೇಕು ಎನ್ನುತ್ತಾರೆ. ಅಂಬೇಡ್ಕರ್ ರವರ ಭವಿಷ್ಯದ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳಿಗೆ ಸುಭದ್ರ ಅಡಿಪಾಯ ಹಾಕುವಲ್ಲಿ ಅವರ ಲಂಡನ್, ನ್ಯೂಯಾರ್ಕ್ ಹಾಗೂ ಜರ್ಮನಿಯಲ್ಲಿನ ಶೈಕ್ಷಣಿಕ ವರ್ಷಗಳು ನೇರವಾಗಿ ನೆರವಿಗೆ ಬರಲಿಲ್ಲ, ಬದಲಿಗೆ ಅವರು ಹಲವು ಆಯ್ಕೆಗಳ ನಡುವೆ ಹೊಯ್ದಾಡುತ್ತಿದ್ದರು ಎನ್ನುತ್ತಾರೆ ಲೇಖಕಿ ಜಾಫ್ರೆಲಾಟ್. 1931 – 32ರಲ್ಲಿ ಬ್ರಿಟಿಷರು ಭಾರತದ ಸಾಂವಿಧಾನಿಕ ತಿದ್ದುಪಡಿಗಳನ್ನು ಚರ್ಚಿಸಲು ಆಯೋಜಿಸಿದ್ದ ಎರಡು ದುಂಡು ಮೇಜಿನ ಸಭೆಗಳಲ್ಲಿ ಅಂಬೇಡ್ಕರ್ ಭಾಗವಹಿಸಿದ ನಂತರವೇ ಸ್ಪಷ್ಟ ಸೈದ್ಧಾಂತಿಕ ನಿಲುವಿನೊಂದಿಗೆ ಅಸ್ಪ್ರಷ್ಯರಿಗಾಗಿ ಸಾಂವಿಧಾನಿಕ ಮಾರ್ಗಗಳ ಮೂಲಕ ಪ್ರತ್ಯೇಕ ರಾಜಕೀಯ ಮತ್ತು ಕಾನೂನು ಹಕ್ಕುಗಳಿಗಾಗಿ ಬೇಡಿಕೆ ಇಟ್ಟರು ಎನ್ನುತ್ತಾರೆ.
‘The Evolution of Pragmatism in India: An Intellectual Biography of B R Ambedkar’ by Scott R Stroud. HarperCollins India (April 2023)
ಸ್ಕಾಟ್ ಆರ್ ಸ್ಟ್ರೌಡ್ ರವರು ಅಂಬೇಡ್ಕರ್ ರವರನ್ನು ಒಬ್ಬ ಪ್ರಯೋಗಾತ್ಮಕ ವಿದ್ವಾಂಸರನ್ನಾಗಿ ಗುರತಿಸುತ್ತಾರೆ. ಯುವ ಅಂಬೇಡ್ಕರ್ ರವರ ಮೇಲೆ ಉದಾರವಾದಿ ವಿದ್ವಾಂಸರುಗಳಾದ ಬರ್ಟ್ರಾಂಡ್ ರಸಲ್ ಹಾಗೂ ಜಾನ್ ಡುಯಿ ರವರುಗಳು ಬೀರಿದ ಆಳವಾದ ಪ್ರಭಾವ ಮತ್ತು ಭಾರತದ ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಪರೀಕ್ಷಿಸುವಲ್ಲಿ ಅದನ್ನು ಅಂಬೇಡ್ಕರ್ ಬಳಸಿಕೊಂಡ ಬಗ್ಗೆ ತಿಳಿಸುತ್ತಾರೆ. ಕೆಲ ಕಾಲ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಜಾನ್ ಡುಯಿ ರವರ ಬಳಿ ಅಂಬೇಡ್ಕರ್ ಕಲಿಯುತ್ತಾರೆ.
ಚಿಂತನೆ ಹಾಗೂ ನಂಬಿಕೆಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಜಾನ್ ಡುಯಿ ರವರ ಪ್ರಾಯೋಗಿಕ ಸಿದ್ಧಾಂತವು ಬೀರಿದ ಪರಿಣಾಮವು, ಅಂಬೇಡ್ಕರ್ ಅವರಿಗೆ ಸಾರ್ವಜನಿಕ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ಬಹು ಆಯಾಮದ ದೃಷ್ಟಿಕೋನಗಳಿಂದ ಪರಿಶೀಲಿಸಿ ಜಾಣತನದಿಂದ ಪರಿಹರಿಸುವಲ್ಲಿ ಸಹಾಯ ಮಾಡಿತು ಎಂದು ಸ್ಟ್ರೌಡ್ ವಾದಿಸುತ್ತಾರೆ. ಅಂಬೇಡ್ಕರ್ ರವರಿಗೆ ಇದ್ದ ವಿವೇಕವು ತನ್ನ ಸಾಮಾಜಿಕ ಇತಿಹಾಸ, ಬುದ್ಧನ ಬೋಧನೆಗಳು ಹಾಗೂ 19ನೆಯ ಶತಮಾನದ ಪ್ರಮುಖ ಜಾತಿವಿರೋಧಿ ಚಿಂತಕ ಜ್ಯೋತಿಬಾ ಫುಲೆ ರವರುಗಳ ಪ್ರಭಾವದಿಂದ ಬಂದಂತಹವು ಎಂಬ ಸಾಂಪ್ರದಾಯಿಕ ವಾದವನ್ನು ಸ್ಟ್ರೌಡ್ ರವರ ಅಭಿಪ್ರಾಯವು ಮೀರುತ್ತದೆ.
ಸ್ಟ್ರೌಡ್ ರವರ ಮೌಲ್ಯಮಾಪನವನ್ನು ಗೋಪಾಲ್ ಬೆಂಬಲಿಸಿದರೂ ಸಹ ಜಾನ್ ಡುಯಿ ರವರ ಚಿಂತನೆಗಳನ್ನು ವಿಶೇಷವಾಗಿ ಸ್ವಾತಂತ್ರ್ಯ, ನಾಗರೀಕ ಸಮಾಜ, ಶಿಕ್ಷಣ ಮತ್ತು ಬೌಧ್ಧ ತತ್ವಗಳಂತಹ ವಿಷಯಗಳನ್ನು ಅಂಬೇಡ್ಕರ್ ಹೇಗೆ ಮತ್ತಷ್ಟು ಉತ್ತಮಪಡಿಸಿ ಭಾರತದ ಆಧುನಿಕತೆಯ ಪ್ರತಿಪಾದಕರಾದರು ಎಂದು ನಿರೂಪಿಸುತ್ತಾರೆ. ವಿಶೇಷವಾಗಿ ಧಾರ್ಮಿಕ ಚರ್ಚೆಗಳಲ್ಲಿ ಜಾನ್ ಡುಯಿ ರವರ ಪ್ರಯೋಗಾತ್ಮಕತೆಯಿಂದ ಅಂಬೇಡ್ಕರ್ ದೂರ ಸರಿದರು ಎನ್ನುತ್ತಾರೆ ಗೋಪಾಲ್. ಜಾನ್ ಡುಯಿರವರು ಒಬ್ಬ ಜಾತಿ ವಿರೋಧಿ ನಾಸ್ತಿಕರಾಗಿ ಕಂಡರೂ ಸಹ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು ಒಂದು ಉತ್ತಮ ಸಮಾಜವನ್ನು ನಿರ್ಮಿಸಲು ಹೇಗೆ ಸಹಾಯ ಮಾಡಬಲ್ಲವು ಎಂಬುದನ್ನು ಅಂಬೇಡ್ಕರ್ ಪರೀಕ್ಷಿಸುತ್ತಾರೆ.
ಜಾತಿಯ ಭೀಕರತೆಗೆ ಹಿಂದೂ ಧರ್ಮವೇ ಕಾರಣ ಎಂಬ ಅಂಬೇಡ್ಕರ್ ಅವರ ಪ್ರಬಂಧದ ಮೂಲಭೂತ ವಿಷಯ ವನ್ನು ತಳ್ಳಿಹಾಕುವ ಭರದಲ್ಲಿ ಶಶಿ ತರೂರ್ ಅವರು ಅಂಬೇಡ್ಕರರ ಜೀವನ ಚರಿತ್ರೆಯನ್ನು ಬರೆಯಲು ಪ್ರಯತ್ನಿಸುತ್ತಿರುವುದು ವಿಚಿತ್ರವಾಗಿದೆ.
ಅಂಬೇಡ್ಕರ್ ರವರ ವಿದೇಶದಲ್ಲಿನ ವಿದ್ಯಾಭ್ಯಾಸ ಮತ್ತು ಜೀವನದ ಬಗೆಗಿನ ಈ ಎಲ್ಲಾ ಶೋಧನೆಗಳು ಕೇವಲ ವೈಯಕ್ತಿಕ ಹಾಗೂ ಶೈಕ್ಷಣಿಕ ಪಯಣಕ್ಕೆ ಸೀಮಿತಗೊಂಡಿವೆ. ಅಂಬೇಡ್ಕರ್ ಜಾಗತಿಕ ಪ್ರಕ್ಷುಬ್ಧತೆಯ ಸಮಕಾಲೀನರಾಗಿ ಬದುಕಿದ್ದರು: ಯೂರೋಪಿನ ರಾಜಕೀಯ ವಿನ್ಯಾಸವನ್ನೇ ಅಲುಗಾಡಿಸಿದ ಸೋಶಿಯಲಿಸ್ಟ್ ಮತ್ತು ಕಮ್ಮ್ಯುನಿಸ್ಟ್ ಕ್ರಾಂತಿಗಳು; ಆಫ್ರಿಕಾ ಹಾಗೂ ಏಷಿಯಾ ಖಂಡಗಳಲ್ಲಿ ಮುನ್ನೆಲೆಗೆ ಬರುತ್ತಿದ್ದ ವಸಾಹತು ವಿರೋಧಿ ಹೋರಾಟಗಳು; ಅಮೆರಿಕದಲ್ಲಿ ಹೊಸದಾಗಿ ಬೇರೂರುತ್ತಿದ್ದ ವರ್ಣಬೇಧ ವಿರೋಧಿ ಚಳುವಳಿಗಳು ಚಾಲ್ತಿಯಲ್ಲಿದ್ದವು. ಈ ಎಲ್ಲಾ ನಿರ್ಣಾಯಕ ಬೆಳವಣಿಗೆಗೆಳ ವಿಚಾರಗಳಲ್ಲಿ ಅಂಬೇಡ್ಕರ್ ರವರ ನಿಲುವು ಏನಾಗಿತ್ತು ಎಂಬುದು ಓದುಗರಿಗೆ ತಿಳಿಯುವುದೇ ಇಲ್ಲ ಮತ್ತು ಈ ವಿಪ್ಲವಗಳಿಂದ ಅಂಬೇಡ್ಕರ್ ತಮ್ಮ ಅಂತರವನ್ನು ಕಾಪಾಡಿಕೊಂಡಿದ್ದರ ಬಗ್ಗೆಯೂ ಲೇಖಕರುಗಳು ಬೆಳಕು ಚೆಲ್ಲುವುದಿಲ್ಲ. ಆದರೆ ವಸಾಹತು ರಾಷ್ಟ್ರದೊಂದಿಗೆ ಹೃತ್ಪೂರ್ವಕ ಸಂಬಂಧವನ್ನಿರಿಕೊಂಡು ಶೋಷಿತ ಸಮುದಾಯಗಳ ವಿಮೋಚನೆಗೆ ಕಾನೂನಾತ್ಮಕ ರಕ್ಷಣೆ ಮತ್ತು ರಾಜಕೀಯ ಹಕ್ಕುಗಳನ್ನು ಪಡೆದುಕೊಳ್ಳಲು ಅವರು ಪ್ರಯತ್ನಿಸಿದರು. ಈ ವಿಷಯವಾಗಿ ಭಾರತದ ಶೋಷಿತ ಸಮುದಾಯಕ್ಕೆ ಶತಮಾನಗಳ ಹಿಂದೂ ಸಮಾಜಿಕ ವ್ಯವಸ್ಥೆಗಿಂತಲೂ ಬ್ರಿಟೀಷರ ಆಡಳಿತವೇ ಆಶಾದಾಯಕ ಎಂದು ನಂಬಿದ್ದ ಫುಲೆಯವರನ್ನು ಅನುಸರಿಸಿದರು.
ಗಾಂಧಿ – ಅಂಬೇಡ್ಕರ್ ದ್ವಂದ್ವ:
ಅಂಬೇಡ್ಕರ್ ರವರ ಬಗ್ಗೆ ಬರೆಯುವಾಗಲೆಲ್ಲ ಗಾಂಧಿಯವರನ್ನು ಕಾಂತಿವರ್ಧಕದಂತೆ ಬಳಸಲಾಗಿದೆ. ಉದಾಹರಣೆಗೆ ಅರುಂಧತಿ ರಾಯ್ ಬರೆದಿರುವ ದಿ ಡಾಕ್ಟರ್ ಅಂಡ್ ದಿ ಸೈಂಟ್ ಕೃತಿಯಲ್ಲಿ ಇವರಿಬ್ಬರ ಸಂಬಂಧವನ್ನು ಬಹಳ ವಿಸ್ತೃತ ಅಧ್ಯಯನ ಹಾಗೂ ಚರ್ಚೆಗೊಳಪಡಿಸಲಾಗಿದೆ. 1920ರ ನಂತರ ಭಾರತದ ಸಮಾಜೋ ರಾಜಕೀಯದಲ್ಲಿ ಈ ಇಬ್ಬರೂ ನಾಯಕರು ಬಹಳ ಸಕ್ರಿಯವಾಗಿ ಪಾಲ್ಗೊಂಡವರು ಹಾಗೂ ಎದುರುಗೊಂಡವರು. ಕೆಲವು ಹೊಸ ಪುಸ್ತಕಗಳು ಇದರ ಬಗ್ಗೆ ಚರ್ಚೆಯನ್ನು ಸಹ ಹುಟ್ಟುಹಾಕಿವೆ.
ಅಸ್ಪೃಷ್ಯರಿಗೆ ಬ್ರಿಟಿಷ್ ಸರ್ಕಾರದಿಂದ ವಿಶೇಷ ಹಕ್ಕುಗಳನ್ನು ಕಲ್ಪಿಸುವ ವಿಚಾರದ ಚರ್ಚೆಗೆ ಗಾಂಧಿ ಅಂಬೇಡ್ಕರ್ ರವರನ್ನು 1931 ರಲ್ಲಿ ಅಹ್ವಾನಿಸಿದ್ದನ್ನು ತರೂರ್ ದಾಖಲಿಸುತ್ತಾರೆ. ಅದು ಇವರಿಬ್ಬರ ನಡುವೆ ನಡೆದ ಮೊದಲ ಪತ್ರ ವ್ಯವಹಾರ. ದಲಿತ ಬಹುಜನ ಇತಿಹಾಸಕಾರರಲ್ಲಿ ಸಾಂಪ್ರದಾಯಿಕವಾಗಿ ಕಂಡು ಬರುವ ಇವರಿಬ್ಬರ ನಡುವಿನ ವ್ಯತ್ಯಾಸಗಳಿಗೆ ಒತ್ತು ಕೊಡದೆ, ಇಬ್ಬರ ನಡುವೆ ಇದ್ದ ಒಮ್ಮತದ ವಿಷಯಗಳತ್ತ ಗಮನ ಹರಿಸುತ್ತಾರೆ. ಅಸ್ಪೃಷ್ಯತೆಯು ಸಾಮಾಜಿಕ ಪಿಡುಗು ಎಂಬುದನ್ನು ಇವರಿಬ್ಬರೂ ಒಪ್ಪಿ ಈ ಅಮಾನವೀಯ ಆಚರಣೆಗೆ ಅಂತ್ಯ ಹಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಅರ್ಥೈಸಿಕೊಂಡಿದ್ದನ್ನು ತರೂರ್ ಹುಡುಕಲು ಪ್ರಯತ್ನಿಸುತ್ತಾರೆ. ಆದರೆ ಇದನ್ನು ಓದುಗರಿಗೆ ದಾಟಿಸುವಲ್ಲಿ ಅಷ್ಟು ಯಶಸ್ವಿ ಆಗಿಲ್ಲ ಎಂಬುದನ್ನು ಗಮನಿಸಬಹುದು. ಗಾಂಧಿ ಮತ್ತು ಅಂಬೇಡ್ಕರ್ ರವರ ರಾಜಕೀಯದಲ್ಲಿದ್ದ ವ್ಯತ್ಯಾಸಗಳನ್ನು ತರೂರ್ ಹೀಗೆ ದಾಖಲಿಸುತ್ತಾರೆ: “ಅರ್ಥಶಾಸ್ತ್ರಜ್ಞನಾಗಿ ಅಂಬೇಡ್ಕರ್ ರವರು ಆರ್ಥಿಕ ಪ್ರಗತಿ, ಭೌತಿಕ ಸಮೃದ್ಧಿ ಹಾಗೂ ಸಮಾನ ಹಂಚಿಗೆ ಒತ್ತು ಕೊಟ್ಟರೆ ಗಾಂಧಿ ಸೀಮಿತ ಉಪಭೋಗದ ಬಗ್ಗೆ ಮಾತನಾಡುತ್ತಿದ್ದರು. ಮಹಾತ್ಮಾ ಗಾಂಧಿಯವರು ನಂಬಿದ್ದ ಒಗಟಾದ ಗ್ರಾಮೀಣ ಜೀವನಶೈಲಿಯ ಬಗ್ಗೆ ಅಸಹನೆ ವ್ಯಕ್ತಪಡಿಸುವ ಅಂಬೇಡ್ಕರ್ ಅದು ಶೋಷಿತ ಜನರ ಜೀವನವನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತದೆ ಎಂದು ಖಂಡಿಸುತ್ತಿದ್ದರು”.
ಇದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಮತ್ತು ಗಾಂಧಿವರವರ ಸಾಮಾಜಿಕ ಬದಲಾವಣೆಯ ಮಾರ್ಗಗಳು ಬೇರೆ ಬೇರೆ ಎನ್ನುತ್ತಾರೆ ಗೋಪಾಲ್. ಎರಡನೆಯ ದುಂಡು ಮೇಜಿನ ಸಮ್ಮೇಳನದಲ್ಲಿ ಇಬ್ಬರೂ ಎದುರು ಬದುರಾದಾಗ ಜರುಗಿದ ವಿದ್ಯಮಾನಗಳನ್ನು ವಿವರಿಸುತ್ತಾ ಅಸ್ಪೃಷ್ಯರಿಗೆ ಪ್ರತ್ಯೇಕ ಮತಪಟ್ಟಿಯನ್ನು ಸೃಷ್ಟಿಸುವ ಅಂಬೇಡ್ಕರ್ ರವರ ಪ್ರಸ್ತಾವನೆಯನ್ನು ಹಣಿಯಲು ಗಾಂಧಿಯವರು ಬಳಸಿದ ತಂತ್ರಗಳನ್ನು ಪರೀಕ್ಷಿಸುತ್ತಾರೆ. ಬೇರುಬಿಟ್ಟ ಬಲಾಢ್ಯ ಜಾತಿಗಳ ಸಾಮಾಜಿಕ ಹಾಗೂ ರಾಜಕೀಯ ಕಪಿಮುಷ್ಟಿಯನ್ನು ಮುರಿಯಲು ಅಸ್ಪೃಷ್ಯರ ಪ್ರತ್ಯೇಕ ಮತಪಟ್ಟಿಯು ಅತ್ಯವಶ್ಯಕ ಎಂದು ಅಂಬೇಡ್ಕರ್ ನಂಬಿದ್ದರು. ‘ಶೋಷಿತ ವರ್ಗಗಳನ್ನು ಸಾಂವಿಧಾನಿಕ ವ್ಯವಸ್ಥೆಯಿಂದ ಹೊರಗಿಡಲು‘ ಗಾಂಧಿ ಹಾಗೂ ಮುಸ್ಲಿಂ ಲೀಗ್ ಗಳು ಮಾಡಿಕೊಂಡ ಗುಪ್ತ ಒಳ ಒಪ್ಪಂದಗಳ ಬಗ್ಗೆ ಗೋಪಾಲ್ ಬೆಳಕು ಚೆಲ್ಲುತ್ತಾರೆ. ಜಾಫ್ರಲೋಟ್ ಸೂಚಿಸುವಂತೆ ಶೋಷಿತ ವರ್ಗಗಳ ರಾಜಕೀಯ ಕಳಕಳಿಯ ಪ್ರತಿನಿಧಿ ತಾನು ಮಾತ್ರ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದು, ಅದಾಗಲೇ ಅಸ್ಪೃಷ್ಯರನ್ನೂ ಸೇರಿ ಇಡೀ ಭಾರತದ ಪ್ರತಿಯೊಬ್ಬರನ್ನೂ ನಾನು ಪ್ರತಿನಿಧಿಸುತ್ತಿದ್ದೇನೆ ಎಂದು ಸಾರಿದ್ದ ಗಾಂಧಿಯವರೆಗೆ ಆವೇಶವನ್ನು ತರಿಸಿತ್ತು.
ಗಾಂಧಿಯ ಬದ್ಧ ವೈರಿಯಂತೆ ನಡೆದುಕೊಂಡ ಅಂಬೇಡ್ಕರ್ ಅಸ್ಪೃಷ್ಯತೆಯನ್ನು ಪ್ರಭುತ್ವದ ಪ್ರತ್ಯೇಕ ವಿಚಾರವನ್ನಾಗಿ ಸ್ಥಾಪಿಸಿ ಅದಕ್ಕೆ ಅಲ್ಪಸಂಖ್ಯಾತ ಸ್ಥಾನವನ್ನು ಒದಗಿಸುವ ಮೂಲಕ ಸಾಮಾಜಿಕ ಹಾಗೂ ರಾಜಕೀಯ ಮುಂದುವರಿಕೆಗಾಗಿ ಸಾಂವಿಧಾನಿಕ ಅನುಕೂಲಗಳನ್ನು ಪಡೆಯಲು ದೃಢವಾಗಿ ನಿಶ್ಚಯಿಸಿದ್ದರು. ಆದರೆ ಗಾಂಧಿ ಈ ವಿಭಜನಾತ್ಮಕ ಪ್ರಯತ್ನಗಳನ್ನು ಖಂಡಿಸುತ್ತಾ ಅಸ್ಪೃಷ್ಯರು ಹಿಂದೂ ಧರ್ಮದ ಅವಿಭಾಜ್ಯ ಅಂಗವೆಂದು ಆಶ್ರಯದಾತನಂತೆ ಧರ್ಮೋಪದೇಶ ನೀಡಿ ಅಸ್ಪೃಷ್ಯರುನ್ನು ಹಿಂದೂಗಳಿಂದ ಬೇರ್ಪಡಿಸುವ ಅಂಬೇಡ್ಕರ್ ರವರ ಯೋಜನೆಯನ್ನು ತಡೆಯಲು ತನ್ನ ಜೀವವನ್ನೇ ಪಣಕ್ಕಿಡುವುದಾಗಿ ಘೋಷಿಸಿದರು.
ದುಂಡು ಮೇಜಿನ ಸಮ್ಮೇಳನವು ಅಂಬೇಡ್ಕರ್ ರವರ ಜೀವನದ ಮೈಲಿಗಲ್ಲು ಎನ್ನಬಹುದು. ಇದಾದ ನಂತರ ಗಾಂಧಿ ಹಾಗೂ ಕಾಂಗ್ರೆಸ್ ನ ವಿರುದ್ಧ ಆಳವಾದ ವೈಚಾರಿಕ ನಿಲುವುಗಳನ್ನು ತಳೆಯುತ್ತಾ ಸ್ವತಂತ್ರ ನಾಯಕನಾಗಿ ಬೆಳೆದರು. ಎರಡನೆಯ ದುಂಡು ಮೇಜಿನ ಸಮ್ಮೇಳನದ ಬಳಿಕ ಬ್ರಿಟೀಷರು ಅಸ್ಪೃಷ್ಯರಿಗೆ ವಿಶೇಷ ರಾಜಕೀಯ ಹಕ್ಕುಗಳನ್ನು ನೀಡಿದ ನಂತರವಂತೂ ಅಂಬೇಡ್ಕರ್ ಖ್ಯಾತಿ ಉತ್ತುಂಗಕ್ಕೇರಿತು. ಆದರೆ ಇದನ್ನು ವಿರೋಧಿಸಿ ಗಾಂಧೀಜಿ ಆಮರಣಾಂತ ಉಪವಾಸ ಸತ್ಯಾಗ್ರಹದಂತಹ ಭಾವನಾತ್ಮಕ ಹಾದಿ ಹಿಡಿದರು. ಈ ವಿಚಾರವಾಗಿ ಗಾಂಧಿಯವರ ಸಾವು ಸಂಭವಿಸಿದರೆ ಅದರಿಂದ ದಲಿತರ ಮೇಲೆ ಆಗಬಹುದಾದ ಭೀಕರ ಪರಿಣಾಮಗಳಿಗೆ ಹೆದರಿ ಗಾಂಧೀ ಪ್ರತಿಪಾದಿಸಿದ ರಾಜಕೀಯ ಸುಧಾರಣೆಗಳ ‘ಪೂನಾ ಒಪ್ಪಂದ‘ ಕ್ಕೆ ಅಂಬೇಡ್ಕರ್ ಒತ್ತಾಯಪೂರ್ವಕವಾಗಿ ಸಹಿ ಹಾಕಲೇಬೇಕಾಯಿತು. ಪೂನಾ ಒಪ್ಪಂದವು ಅಂಬೇಡ್ಕರ್ ಇಟ್ಟಿದ್ದ ಅಸ್ಪೃಷ್ಯರಿಗೆ ಪ್ರತ್ಯೇಕ ಮತಕ್ಷೇತ್ರಗಳ ಬೇಡಿಕೆಯ ಬದಲಾಗಿ ಸಾಮಾನ್ಯ ಮತಕ್ಷೇತ್ರಗಳಲ್ಲಿ ಅಸ್ಪೃಷ್ಯರಿಗೆ ಮೀಸಲಾತಿ ಸ್ಥಾನಗಳನ್ನು ನೀಡಲಾಯಿತು. ಬಲಾಢ್ಯ ಜಾತಿಗಳ ಹಿಡಿತದಿಂದ ಹಿಂದುಳಿದ ವರ್ಗಗಳ ಏಳಿಗೆಗೆ ಇದು ನೀಡಿದ ಕೊಡುಗೆ ಅಲ್ಪ ಮಾತ್ರ ಎಂಬುದು ಐತಿಹಾಸಿಕವಾಗಿ ಸಾಬೀತಾಗಿದೆ.
Gandhi is often used as a foil when writing about Ambedkar, and their relationship has been widely studied and argued over. New books wade into the debate as well.
ಸ್ಟ್ರೌಡ್ ರವರು ಗುರುತಿಸುವಂತೆ ಇಂತಹ ಪರಿಸ್ಥಿತಿಯಲ್ಲಿ ಕೂಡ ಸಾವಧಾನವಾಗಿ ನೀತಿಗಳನ್ನು ರೂಪಿಸುವಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದು ಅಂಬೇಡ್ಕರ್ ಭಾರತದ ನವ ಪ್ರಯೋಗಾತ್ಮಕ ವಿದ್ವಾಂಸರಾಗಿ ವಿಕಸನ ಹೊಂದಲು ಅನುಕೂಲವಾಯಿತು. ಇದು ನಂತರದ ದಿನಗಳಲ್ಲಿ ಅವರ ಆಲೋಚನೆಗಳನ್ನು ಕಟ್ಟುವ ಪ್ರಾಯೋಗಿಕ ಸಾಧನವಾಗಿ, ಸಮಾಜೋ ರಾಜಕೀಯ ಚಳುವಳಿಗಳಿಗೆ ಪರಿಣಾಮಕಾರಿ ಮಾರ್ಗದರ್ಶನ ನೀಡುವಲ್ಲಿ ಮತ್ತು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಅವರ ನಿರ್ಧಾರಕ್ಕೆ ಸಹಕಾರಿಯಾಯಿತು. ಅಂಬೇಡ್ಕರ್ ಅವರು ಗಾಂಧಿ ಮತ್ತವರ ರಾಜಕೀಯದ ಕಡುವಿರೋಧಿಯಾಗಿದ್ದರೂ, ಅವರ ಎಲ್ಲ ಅಸಮ್ಮತಿಗಳ ನಡುವೆ ಗಾಂದಿಯವರ ಬಗ್ಗೆ ಗಾಂಧಿಯ ನೈತಿಕ ಬದ್ಧತೆಗಳ ಬಗ್ಗೆ ಸೂಕ್ಷ್ಮವಾದ ಗೌರವವಿತ್ತು ಹಾಗೂ ತಮ್ಮಿಬ್ಬರ ನಡುವೆ ಬಹಳಷ್ಟು ಸಾಮ್ಯತೆಯಿದೆ ಎಂದು ಅಂಬೇಡ್ಕರ್ ನಂಬಿದ್ದರು ಎನ್ನುತ್ತಾರೆ ಗೋಪಾಲ್. ಉದಾಹರಣೆಗೆ, ಮರಾಠಾ ಬ್ರಾಹ್ಮಣ ಮತಾಂಧನೊಬ್ಬನಿಂದ ಗಾಂಧಿ ಕೊಲೆಯಾದಾಗ ತಮ್ಮ ಪತ್ನಿಗೆ ಅಂಬೇಡ್ಕರ್ ಅವರು ಬರೆದಿರುವ ಪತ್ರಗಳಲ್ಲಿ ಗಾಂಧಿ ಬಗ್ಗೆ ವ್ಯಕ್ತಪಡಿಸಿರುವ ಆಳವಾದ ದು:ಖವು ಅವರೆಷ್ಟು ಸೂಕ್ಷ್ಮ ಸಂವೇದಿ ಮನುಷ್ಯ ಎಂಬುದು ತಿಳಿಯುತ್ತದೆ.
ಅಂಬೇಡ್ಕರ್ ಎಂಬ ಮನುಷ್ಯ
ರಾಥೋಡ್ ತಮ್ಮ ಪುಸ್ತಕದ ಮುನ್ನುಡಿಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ಬಂದಿರುವ ಇತರೆ ಕೃತಿಗಳು ಜೀವಂತಿಕೆ ಇಲ್ಲದ ಘಟನಾವಳಿಗಳಂತಿದ್ದು ಅವರನ್ನು ‘ವ್ಯಕ್ತಿ ಕೇಂದ್ರಿತ ನಿರೂಪಣೆ ‘ಯಲ್ಲಿ ಶೋಧಿಸಲು ಇಚ್ಛಿಸುತ್ತೇನೆ ಎನ್ನುತ್ತಾರೆ. ಅಂಬೇಡ್ಕರ್ ಅವರನ್ನು ಮೇಲ್ಮಟ್ಟದ ಪಾಂಡಿತ್ಯದ ಆಡಂಬರದ ಮಾತುಗಳಲ್ಲೇ ಪ್ರಸ್ತುತಪಡಿಸುವ, ಬುದ್ಧಿಜೀವಿಗಳ ನಕ್ಷತ್ರಪುಂಜದ ಅಂಶವೆಂಬಂತೆ ಸ್ಟ್ರೌಡ್ ರವರ ಕೃತಿಯಲ್ಲಿ ಬಿಂಬಿಸುವ ಬದಲಿಗೆ ಇದು ವಿನೂತನ ಕ್ರಮ. ರಾಥೋಡ್ ಬಹಳ ಕಷ್ಟದ ಕೆಲಸವೊಂದನ್ನು ಹೆಗಲೇರಿಸಿಕೊಂಡು ನಿರ್ವಹಿಸಿದ್ದರೂ ಅದರ ಪರಿಣಾಮ ಮಾತ್ರ ತೆಳುವಾದ ವ್ಯಕ್ತಿಚಿತ್ರವಾಗಿದೆ. ಜಾತಿ ತರತಮಗಳ ಕ್ರೂರ ಅನುಭವಗಳಲ್ಲಿ ಬೇರುಬಿಟ್ಟು ಅವುಗಳಿಗೆ ಪ್ರತಿಕ್ರಿಯೆಯಾಗಿ ಹೊಸ ರಾಜಕೀಯ ಚಳುವಳಿಯನ್ನು ಮತ್ತು ದಿಟ್ಟ ರಾಜಕೀಯ ಕ್ರಿಯೆಯನ್ನು ತೋರಿದ ಅವರ ಸ್ವತಂತ್ರ ಅಸಾಂಪ್ರದಾಯಿಕ ವ್ಯಕ್ತಿತ್ವಕ್ಕೆ ನ್ಯಾಯ ಒದಗಿಸಿದಂತೆ ಆಗಿಲ್ಲ. ಗೋಪಾಲ್ ಹೇಳುವಂತೆ ಅಂಬೇಡ್ಕರ್ ಲಂಡನ್ ನಿಂದ ಹಿಂದಿರುಗಿ ಮುಂಬಯಿಯ ದಲಾಲ್ ಸ್ಟ್ರೀಟ್ ನಲ್ಲಿ ಕಾನೂನು ಸೇವೆಗಳನ್ನು ಒದಗಿಸಲು ಮುಂದಾದಾಗ ಜನ ಅವರ ಕೆಳ ಜಾತಿಯ ನೆಲೆಯನ್ನು ಕಂಡರು. ಬಹಳ ಹೀನಾಯವಾಗಿ ಅವರನ್ನು ಕುಹಕವಾಡಿದರು. ಅವರ ಹೆಸರಿನ ಬದಲು ಗುಜರಾತಿನ ಅಸ್ಪೃಷ್ಯ ಜಾತಿಯಾದ ‘ಧೇಡ್’ ಎಂದು ಕೂಗಿ ಅವಮಾನಿಸಿದರು. ಇಂತಹ ಪುನರಾವರ್ತಿತ ಅವಮಾನಗಳು ಅಂಬೇಡ್ಕರ್ ರವರಿಗೆ ಚಿತ್ರಹಿಂಸೆ ನೀಡುವುದರ ಜೊತೆಗೆ ಅವರ ಕೌಟುಂಬಿಕ ಹಾಗೂ ಸಾಮಾಜಿಕ ಒಡಂಬಡಿಕೆಗಳ ಮೇಲೂ ಪರಿಣಾಮ ಬೀರಿದವು. ಅವರು ಬಹಳ ಭಾವನಾತ್ಮಕ ಮನುಷ್ಯ. ಹಲವಾರು ವೈಯುಕ್ತಿಕ ಕಷ್ಟಗಳು ಮತ್ತು ದುರಂತಗಳು ಎದುರಾದಾಗ ಅತ್ತುಬಿಡುತ್ತಿದ್ದರು. ಆದರೂ ಪ್ರಕ್ಷುಬ್ಧ ಸಮಯಗಳಲ್ಲಿ ತಮ್ಮ ಭಾವನೆಗಳನ್ನು ನಿಭಾಯಿಸಿದ್ದಾರೆ. ಬರೋಡಾ ಸಂಸ್ಥಾನದ ಅಧಿಕಾರಿಗಳು ಬಹಳಷ್ಟು ಸನ್ನಿವೇಶಗಳಲ್ಲಿ ಇವರಿಗೆ ಕಿರುಕುಳ ನೀಡಿದರೂ, ಬೇಧಭಾವ ಮಾಡಿದರೂ ತಮ್ಮ ವಿದ್ಯಾಭ್ಯಾಸಕ್ಕೆ ಪ್ರಾಯೋಜಕತ್ವ ನೀಡಿದ ಬರೋಡಾದ ರಾಜ ಸಯ್ಯಾಜಿರಾವ್ ಗಾಯ್ಕವಾಡ್ ರವರಿಗೆ ವಿನಮ್ರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ.
‘Babasaheb: My Life with Dr Ambedkar’ by Savita Ambedkar. Translated by Nadeem Khan. Penguin Random House India (November 2022)
1930ರಷ್ಟರಲ್ಲಿ ಅಂಬೇಡ್ಕರ್ ತಾನು ರಾಷ್ಟ್ರ ರಾಜಕೀಯದಲ್ಲಿ ನಿರ್ವಹಿಸಬೇಕಾದ ಬಹು ಮುಖ್ಯ ಪಾತ್ರದ ಬಗ್ಗೆ ಹಾಗೂ ತನ್ನ ಸಮುದಾಯವು ಹೊರಿಸಿದ್ದ ಜವಾಬ್ದಾರಿಗಳನ್ನು ಅರಿತಿದ್ದರು. ಈ ಸ್ವೀಕೃತಿಯು ಅವರನ್ನು ಬಹಳ ಗಂಭೀರ ಮನುಷ್ಯನನ್ನಾಗಿಸಿತು. ಮಣಭಾರವನ್ನು ಹೊತ್ತಿದ್ದರೂ ಅದರಿಂದ ಸ್ಫೂರ್ತಿಗೊಂಡಿದ್ದರು. ಅಂಬೇಡ್ಕರ್ ರವರ ಜೀವನವನ್ನು ಪ್ರಭಾವಿಸಿದ ಪ್ರೊಫೆಸರ್ ಎಡ್ವಿನ್ ಸೆಲಿಗ್ಮೆನ್ ನೀಡಿದ್ದ ಶಿಫಾರಸು ಪತ್ರದಲ್ಲಿ “ಬಹಳ ದಕ್ಷ ಮಾತ್ರವಲ್ಲದೆ ಅತ್ಯಂತ ಉಲ್ಲಾಸಕರ ವ್ಯಕ್ತಿ” ಎಂದು ಅಂಬೇಡ್ಕರ್ ಅವರನ್ನು ಬಣ್ಣಿಸಿದ್ದಾರೆ.
While acknowledging the rift between herself and many of Ambedkar’s followers, Savita’s memoir offers an intimate portrayal of her and Ambedkar’s partnership, as well as his health and emotional life in his final years.
ವಿಶೇಷವಾಗಿ ಸವಿತಾ ಅಂಬೇಡ್ಕರ್ ರವರ ನೆನಕೆಗಳಲ್ಲಿ ಅವರು ದೈತ್ಯ ರಾಷ್ಟ್ರೀಯ ಹಾಗೂ ಜಾಗತಿಕ ವ್ಯಕ್ತಿ, ಅಸ್ಪೃಷ್ಯರ ವಿಮೋಚಕ ಮುಂತಾದ ಉಪಮೆಗಳಿಗಿಂತಲೂ ಹೆಚ್ಚಿನದಾಗಿ ಕಾಣಸಿಗುತ್ತಾರೆ. ಆಕೆಗೆ ಬರೆದ ಪತ್ರಗಳಲ್ಲಿ ಅವರ ವಿನಮ್ರ ವ್ಯಕ್ತಿತ್ವ ಮತ್ತು ಭಾವನಾತ್ಮಕ ಸಿಡುಕುತನದ ಕುರುಹುಗಳು ಕಾಣುತ್ತವೆ. ಅವರಿಗೆ ಇದ್ದ ಅಭಿರುಚಿಗಳನ್ನು ಆಕೆ ಬಿಚ್ಚಿಡುತ್ತಾರೆ. ಪಾಶ್ಚಿಮಾತ್ಯ ದಿರಿಸು, ಇಂಗ್ಲೀಷ್ ಮಾತುಗಾರಿಕೆ ಮತ್ತು ಆಧುನಿಕ ಶಿಕ್ಷಣ ಅವರ ನೆಚ್ಚಿನವಾಗಿದ್ದವು. ತಾವು ಆಘಾತಕ್ಕೊಳಗಾಗಿದ್ದರೂ, ಹಲವು ಬಾರಿ ಚಿತ್ರಹಿಂಸೆಗೊಳಪಟ್ಟರೂ ಪ್ರೀತಿಸುವ ಹೃದಯವನ್ನು ಅಂಬೇಡ್ಕರ್ ತೋರುತ್ತಿದ್ದರು. ಸವಿತಾರಿಗೆ ಆರಂಭದಲ್ಲಿ ಬರೆದ ಪತ್ತವೊಂದರಲ್ಲಿ ಅಂಬೇಡ್ಕರ್ ಹೀಗೆ ಹೇಳುತ್ತಾರೆ – “ನಂಬು ನೀನು ಅತ್ತರೆ ನಾನು ಅಳುತ್ತೇನೆ. ಬಹುಷಃ ಬೇರೊಂದು ಕಾರಣಕ್ಕೆ. ಘನವಾದ ಕನಸೊಂದು ನನಸಾಗಿದ್ದಕ್ಕೆ. ಸದ್ಗುಣ ಮತ್ತು ವಿವೇಕಗಳನ್ನು ಹೊಂದಿದ ಹೆಂಗಸನ್ನು ಮಡದಿಯಾಗಿ ಪಡೆದಿದ್ದಕ್ಕೆ. ಆ ಸಂತೋಷಕ್ಕೆ ಬರುವ ಅಳು ಇದು. ನಾವು ಪರಸ್ಪರರನ್ನು ಖುಷಿಯಾಗಿಟ್ಟುಕೊಳ್ಳುವ ಸಂಕಲ್ಪ ಮಾಡೋಣ “.
ಅಂಬೇಡ್ಕರ್ ತಮ್ಮ ಪತ್ನಿ ಸವಿತಾ ಜೊತೆಗೆ 1948 ರಲ್ಲಿ. ಅಂಬೇಡ್ಕರ್ ಅನುಯಾಯಿಗಳು ಹಾಗೂ ತಮ್ಮ ನಡುವೆ ಇರುವ ಬಿಕ್ಕಟ್ಟುಗಳನ್ನು ಒಪ್ಪಿಕೊಳ್ಳುತ್ತಲೇ ಸವಿತಾ ರವರು ಅಂಬೇಡ್ಕರ್ ಅವರೊಂದಿಗೆ ಇದ್ದಅನ್ಯೋನ್ಯ ಸಂಬಂಧ, ಅವರ ಆರೋಗ್ಯ ಹಾಗೂ ಕೊನೆಗಾಲದಲ್ಲಿನ ಭಾವನಾತ್ಮಕ ಜೀವನವನ್ನು ಇವರ ಆತ್ಮಚರಿತ್ರೆ ಕಟ್ಟಿಕೊಡುತ್ತದೆ
ತಮ್ಮ ಸಹೋದ್ಯೋಗಿಗಳಿಗೆ ಹಾಗೂ ಅನುಯಾಯಿಗಳಿಗೆ ಬರೆದ ಹಲವು ಪತ್ರದಲ್ಲಿ ಅಂಬೇಡ್ಕರ್ ತಮ್ಮ ಅನಾರೋಗ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಒಬ್ಬ ತಜ್ಞ ವೈದ್ಯಯಾಗಿ ಸವಿತಾರವರು ಮಧುಮೇಹ ಸೇರಿದಂತೆ ಅಂಬೇಡ್ಕರ್ ಬಳಲುತ್ತಿದ್ದ ಹಲವಾರು ದೀರ್ಘಕಾಲೀನ ಪಿಡುಗುಗಳ ಬಗ್ಗೆ ತಿಳಿಸುತ್ತಾರೆ. ಜಾತಿ ತಾರತಮ್ಯದ ಕಹಿ ಅನುಭವಗಳು ಹಾಗೂ ಶೋಷಣೆ ಕೂಡ ಅವರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿವೆ ಎಂದು ಸವಿತಾ ಅನುಮಾನ ವ್ಯಕ್ತಪಡಿಸುತ್ತಾರೆ. ಸವಿತಾ ಬರೆಯುವಂತೆ – “ತಮ್ಮ ಕುಟುಂಬದವರ ಸಾವು ಅವರನ್ನು ವಿಷಣ್ಣನನ್ನಾಗಿಸಿದ್ದವು. ಅವರ ತಂದೆ, ಮೊದಲ ಪತ್ನಿ ಮತ್ತು ನಾಲ್ಕು ಜನ ಮಕ್ಕಳ ಸಾವು ಆಳವಾಗಿ ಇರಿದಿದ್ದವು. ಭಾರವಾದ ಹೃದಯದಿಂದ ಅವುಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಮೊದಲ ಪತ್ನಿ ರಮಾಬಾಯಿಯವರು ತೀರಿಕೊಂಡ ನಂತರ ಬಹಳಷ್ಟು ಕಾಲ ಏಕಾಂತವಾಗಿ, ಯಾತನೆಯಿಂದ ಬಳಲುತ್ತಾ ಬದುಕಿದ್ದರು. ಈ ಯಾತನೆ ಅವರನ್ನು ಕಾಯಿಲೆ ಬೀಳುವಂತೆ ಮಾಡಿತು” ಎನ್ನುತ್ತಾರೆ.
ಆದರೆ ತಮ್ಮ ವೈಯಕ್ತಿಕ ಆತಂಕಗಳು ಹಾಗೂ ಮಾನಸಿಕ ತುಮುಲಗಳಿಗೆ ಅಂಬೇಡ್ಕರ್ ಎಂದೂ ಶರಣಾಗಲಿಲ್ಲ. ಬದಲಾಗಿ ತಮ್ಮ ಕೊನೆಗಾಲದವರೆಗೆ ಭವಿಷ್ಯ ಭಾರತದಲ್ಲಿ ಅಸ್ಪೃಷ್ಯರ ಭರವಸೆ ಹಾಗೂ ಹಣೆಬರಹದ ಬಗ್ಗೆ ಚಿಂತಿತರಾಗಿದ್ದರು. ಭಾರತವನ್ನು ಉದಾರವಾದಿ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿಸಲು ಅವಿರತವಾಗಿ ದುಡಿದರು.”ಅಂಬೇಡ್ಕರ್ ಬಗ್ಗೆ ಸವಿತಾ ಹೇಳುವುದು ಹೀಗೆ “ಡಾ. ಅಂಬೇಡ್ಕರ್ ಕೇವಲ ಕಾರ್ಮೋಡದ ಮರೆಯಲ್ಲಿ ಮಿಂಚಿ ಹೊಳೆಯುವ ಬೆಳಕು ಮಾತ್ರವಾಗಿರಲಿಲ್ಲ.ಅವರು ಪ್ರಜ್ವಲಿಸುವ ಸೂರ್ಯನ ಹಾಗೆ ಶಾಶ್ವತವಾಗಿ ನಿಲ್ಲುತ್ತಾರೆ”.
Ashok Gopal suggests that Ambedkar, despite all their disagreements, had a subtle admiration for Gandhi and his moral commitment, and found that between them there was “much in common”.
ಸಂವಿಧಾನ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿ ಸ್ವತಂತ್ರ ಭಾರತಕ್ಕೆ 1950ರಲ್ಲಿ ಸಂವಿಧಾನ ನೀಡಲು ಹೊತ್ತ ಮಣಭಾರ ಹಾಗೂ ಹಾಕಿದ ಅವಿರತ ಶ್ರಮವನ್ನು ಗೋಪಾಲ್ ಸೊಗಸಾಗಿ ವಿವರಿಸುತ್ತಾರೆ. ಇದಕ್ಕಾಗಿ ರಾಥೋಡ್ ರವರ ಕೃತಿಯ ಮೊರೆಹೋಗುವ ಅವರು ಸಂವಿಧಾನ ಪೀಠಿಕೆಯಲ್ಲಿ ‘ಸಹೋದರತ್ವ’ ಪದವನ್ನು ಸೇರಸುವಲ್ಲಿ ಇರುವ ಅಂಬೇಡ್ಕರ್ ಅವರ ಕೊಡುಗೆಯನ್ನು ವಿವರಿಸುತ್ತಾ ಆ ಪದ ವ್ಯಕ್ತಿಯ ಘನತೆ ಹಾಗೂ ದೇಶದ ಐಕ್ಯತೆ ಮತ್ತು ಪ್ರಾಮಾಣಿಕತೆಯನ್ನು ಪ್ರಮಾಣೀಕರಿಸುವುದನ್ನು ತಿಳಿಸುತ್ತಾರೆ. ರಾಥೋಡ್ ಹೇಳುವಂತೆ “ಸಂವಿಧಾನ ಪೀಠಿಕೆಯು ಐತಿಹಾಸಿಕ ಮತ್ತು ಅಚ್ಚರಿಯ ಎಂಭತ್ತು ಪದಗಳ ಗುಚ್ಛ”.
ಅಂಬೇಡ್ಕರ್ ಜೀವನ ಚರಿತ್ರೆಗಳ ರಾಜಕೀಯ ಆರ್ಥಿಕತೆ
ಅಂಬೇಡ್ಕರ್ ಸ್ವತಃ ತಮ್ಮ ಜೀವನ ಚರಿತ್ರೆಯನ್ನು ಬರೆಯುವ ಇಂಗಿತ ವ್ಯಕ್ತಪಡಿಸಿದ್ದರು. ಅದನ್ನು ಅವರ ಹಲವಾರು ಟಿಪ್ಪಣಿಗಳಲ್ಲಿಯೂ ಕಾಣಬಹುದು. ಆದರೆ ವೈಯಕ್ತಿಕ ಹಾಗೂ ರಾಜಕೀಯ ವಿದ್ಯಮಾನಗಳ ಒತ್ತಡದ ಕಾರಣ ಅವರ ಹಲವು ಬರಹಗಳಂತೆಯೇ ಈ ಯೋಜನೆಯೂ ಅಪೂರ್ಣವಾಯಿತು. ಅವರು ತಮ್ಮ ಕೊನೆಯ ದಿನಗಳಲ್ಲಿ ಬುದ್ಧ ಮತ್ತು ಅವನ ಧಮ್ಮ, ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್, ಪ್ರಾಚೀನ ಭಾರತದಲ್ಲಿ ಕ್ರಾಂತಿ ಪ್ರತಿಕ್ರಾಂತಿ, ಶೂದ್ರು ಯಾರು?, ಮತ್ತು ಹಿಂದೂ ಧರ್ಮದ ಒಗಟುಗಳು ಇಂತಹ ಹಲವು ಪುಸ್ತಕಗಳ ಮೇಲೆ ಕೆಲಸ ಮಾಡಿದರು. ಇವು ಕಾಲಾನಂತರ ಪ್ರಕಟಗೊಂಡವು. ಸವಿತಾ ಅಂಬೇಡ್ಕರ್ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದ ಮತ್ತಷ್ಟು ಪುಸ್ತಕಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಜ್ಯೋತಿರಾವ್ ಫುಲೆ ಹಾಗೂ ಗಾಂಧಿಯ ಬಗ್ಗೆ ಕೂಡಾ ಬರೆಯುವ ಯೋಜನೆ ಇದ್ದವು: ‘ಗಾಂಧಿಯನ್ನು ನಾನು ಮಾತ್ರ ಸರಿಯಾಗಿ ಅರ್ಥ ಮಾಡಿಕೊಂಡಿದ್ದೇನೆ’ ಎಂದು ಅಂಬೇಡ್ಕರ್ ಹೇಳುವುದನ್ನು ಸ್ಮರಿಸುತ್ತಾರೆ.
ಇತ್ತೀಚಿನವೂ ಸೇರಿ ಇಂಗ್ಲೀಷಿನಲ್ಲಿ ಅಂಬೇಡ್ಕರ್ ಬಗೆಗೆ ಬಂದಿರುವ ಹಲವಾರು ಜೀವನ ಚರಿತ್ರೆಗಳು ವರ್ಚಸ್ವಿ ವ್ಯಕ್ತಿಯೊಬ್ಬರ ಜೀವನ ಮತ್ತು ಅವರ ಅಸಾಧಾರಣ ಕೈಂಕರ್ಯಗಳನ್ನು ಸ್ತುತಿಸುವ ಮತ್ತು ಶೋಧಿಸುವ ಪ್ರಾಮಾಣಿಕ ಕೆಲಸವನ್ನು ಮಾಡಿವೆ. ಆದರೆ ಬಾಹ್ಯನೋಟಕ್ಕೆ ಅವೆಲ್ಲವು ಈಗಾಗಲೇ ಲಭ್ಯವಿರುವ ಅವರ ಮಹೋನ್ನತ ಜೀವನಕ್ಕೆ ಮರು ಬಣ್ಣ ಬಳಿದ ಪ್ರಯತ್ನದಂತೆ ಕಾಣುತ್ತವೆ. ಮುಖ್ಯವಾಹಿನಿಯ ಬೌದ್ಧಿಕ ಚರ್ಚೆಗಳಿಂದ ದಶಕಗಳವರೆಗೆ ತೆರೆಗೆ ಸರಿದಿದ್ದ ಅಂಬೇಡ್ಕರ್ ಇಂದು ಮತ್ತೆ ಚಾಲ್ತಿಯಲ್ಲಿದ್ದಾರೆ. ಹೊಸ ಕೃತಿಗಳು ಅಂಬೇಡ್ಕರ್ ಅವರನ್ನು ಮತ್ತವರ ಅಪ್ರತಿಮ ವಿದ್ವತ್ತನ್ನು ಮರುಮೌಲ್ಯಮಾಪನ ಮಾಡಲು ಸಾಕಷ್ಟು ಸರಕನ್ನು ಒದಗಿಸುತ್ತಿವೆ. ಜೊತೆಗೆ ಹೊಸ ತಲೆಮಾರು ಅಂಬೇಡ್ಕರ್ ಅವರೊಂದಿಗೆ ಒಡನಾಡಲು ಮತ್ತು ಅವರ ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತವೆ. ಈ ಸಾಹಿತ್ಯದ ಕುದಿಯು ಅಂಬೇಡ್ಕರ್ ಅವರನ್ನು ಜಾಗತಿಕ ತತ್ವಜ್ಞಾನಿಯಾಗಿ, ನ್ಯಾಯದ ಸಿಧ್ದಾಂತವಾದಿಯಾಗಿ ಮತ್ತು ಶೋಷಿತರ ಸಾರ್ವತ್ರಿಕ ನಾಯಕನಾಗಿ ಬಿಂಬಿಸುವ ಹೊಸ ದಿಕ್ಕಿನತ್ತ ಸಾಗುತ್ತಿದೆ.
The rich collection of new works has contributed handsomely to reappraising Ambedkar and his phenomenal intellect, and should motivate a new generation to engage both with him and with social-justice discourse.
ಭಾರತದಲ್ಲಿ ಈಗಲೂ ಇರುವ ಸಾಮಾಜಿಕ ಅನ್ಯಾಯದ ವಿರುದ್ಧದ ಹೋರಾಟಗಳಿಗೆ ಬಲವನ್ನು ತುಂಬಲು ಹಾಗೂ ಜಾತಿ ಆಧಾರಿತ ಅಸಮಾನತೆಯ ಪಿಡುಗಿಗೆ ಮದ್ದಾಗಲು ಈ ತಾತ್ವಿಕ ಗ್ರಂಥಗಳನ್ನು ಮತ್ತು ಜೀವನ ಚರಿತ್ರೆಯ ಹೊಸ ದೃಷ್ಟಿಕೋನಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಕಡೆ ಲೇಖಕರು ಗಮನಹರಿಸಿದ್ದರೆ ಹೊಸ ಪ್ರಯತ್ನಗಳು ಮತ್ತಷ್ಟು ಫಲದಾಯಕವಾಗುತ್ತಿದ್ದವು.
ಈ ಕೃತಿಗಳ ಎಲ್ಲ ವಿವರಣೆಗಳ ಹೊರತಾಗಿಯೂ ಅಂಬೇಡ್ಕರ್ ಅವರ ಕ್ರಾಂತಿಕಾರಿ ಪರಂಪರೆಯನ್ನು ಅರ್ಥೈಸಿಕೊಳ್ಳಲು ಬೇಕಾದ ನಿರ್ಣಾಯಕ ಅಂಶಗಳು ಲೇಖಕರುಗಳ ಪೂರ್ವನಿರ್ಧಾರಿತ ವಿಚಾರಗಳ ಕಾರಣಕ್ಕೆ ಕಡೆಗಣಿಸಲ್ಪಟ್ಟಿವೆ. ಗೋಪಾಲ್ ರವರ ಸುದೀರ್ಘ ಮತ್ತು ಸಮೃದ್ಧ ಜೀವನಚರಿತ್ರೆಯಲ್ಲಿ, ಅಂಬೇಡ್ಕರ್ ರವರ ಮುಂದಿನ ಹೋರಾಟಗಳಿಗೆ ಮಾರ್ಗಸೂಚಿ ಒದಗಿಸಿದ, ಅವರ ಚಳುವಳಿಯನ್ನು ಪ್ರೇರೇಪಿಸಿದ ಮಹಾಡ್ ಚಳುವಳಿಯ ಪೂರ್ವಕಾಲವನ್ನು ಸೂಕ್ತ ಚರ್ಚೆಗೆ ಒಳಪಡಿಸುವುದಿಲ್ಲ. ಅಂಬೇಡ್ಕರ್ ಅವರ ವಯಕ್ತಿಕ ಜೀವಕ್ಕೆ ರಾಥೋಡ್ ಒತ್ತುಕೊಟ್ಟರೂ ಮೊದಲ ಪತ್ನಿ ರಮಾಬಾಯಿ ಬಗ್ಗೆ ಅಲ್ಲಲ್ಲಿ ಪ್ರಸ್ತಾಪವಾಗುತ್ತದೆ ವಿನಃ ಅವರ ನಡುವಿನ ಒಡನಾಟದ ಬಗ್ಗೆ ಉತ್ತಮ ಅವಲೋಕನ ದೊರೆತಿಲ್ಲ. ಸ್ಕಾಟ್ ರವರ ಕೃತಿಯಲ್ಲಿ ಅಂಬೇಡ್ಕರ್ ರವರ ಯೋಚನೆಗಳನ್ನು ವಿವರಿಸಲು ಹಲವು ಬಾರಿ ಪ್ಲೇಟೋನ ಪ್ರಸ್ತಾಪವಾದರೂ, ಅವರ ಮೇಲಾದ ಫುಲೆರವರ ಪ್ರಭಾವಕ್ಕೆ ಒತ್ತು ಕೊಟ್ಟಿಲ್ಲ.
ಈ ಪುಸ್ತಕಗಳು ಮುಖ್ಯವಾದರೂ ದಲಿತ – ಬಹುಜನ ಹಾಗೂ ಅಂಬೇಡ್ಕರ್ ಮತ್ತು ಅವರ ಚಳುವಳಿಗಳ ಬಗ್ಗೆ ಆಂಗ್ಲಭಾಷೀಯ ಬರವಣಿಗೆಗಳ ನಡುವೆ ಇರುವ ರಚನಾತ್ಮಕ ಕಂದಕವನ್ನು ತೋರುತ್ತವೆ. ದಲಿತ – ಬಹುಜನ ವಿದ್ವಾಂಸರುಗಳು ಈಗಾಗಲೇ ವೈವಿಧ್ಯಮಯ ವಿಷಯಗಳು ಮತ್ತು ಸಂಶೋಧನಾ ವಲಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮರಾಠಿ ಭಾಷೆಯ ದಲಿತ ವಿದ್ವಾಂಸರುಗಳ ಕೊಡುಗೆಗಳನ್ನು ಮೇಲ್ನೋಟಕ್ಕೆ ಗಮನಿಸಿದರೂ ಅವರ ಪಾಂಡಿತ್ಯದ ಆಳ ಮತ್ತು ಕಠಿಣ ಪರಿಶ್ರಮವು ಗಮನಕ್ಕೆ ಬರುತ್ತದೆ. ಬಾಬುರಾವ್ ಬಾಗುಲ್, ನರೇಂದ್ರ ಜಾಧವ್ ಹಾಗೂ ಊರ್ಮಿಳಾ ಪವಾರ್ ರವರುಗಳು ಬರೆದಿರುವ ಜೀವನಚರಿತ್ರೆಗಳು, ಸಾಮಾಜಿಕ ನ್ಯಾಯ ಚಳುವಳಿ ಮತ್ತು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಸುಖದೇವ್ ಥೋರಾಟ್, ಆನಂದ್ ತೇಲ್ತುಂಬೆ ಮತ್ತು ಸೂರ್ಯಕಂಠ ವಾಗ್ಮೋರೆ ರವರುಗಳ ವ್ಯಾಖ್ಯಾನಗಳು; ಸಮಾನತೆ, ಅಪಮಾನ ಮತ್ತು ಅಸ್ಮಿತೆ ರಾಜಕೀಯದಂತಹ ಮುಖ್ಯ ಪರಿಕಲ್ಪನೆಗಳ ಬಗ್ಗೆ ಗೋಪಾಲ್ ಗುರು, ಅನಿಕೇತ್ ಜಾವರೆ ಮತ್ತು ಶೈಲಜಾ ಪೈಕ್ ರವರುಗಳ ಸೈಧ್ಧಾಂತಿಕ ಪ್ರಬಂಧಗಳು; ಧಾರ್ಮಿಕ ಸಿದ್ಧಾಂತ ಹಾಗೂ ಇತಿಹಾಸದ ಬಗೆಗಿನ ರಾವ್ ಸಾಹೇಬ್ ಕಸ್ಬೆ, ಸುರೇಂದ್ರ ಜೊಂಧಳೆ ಹಾಗೂ ಪ್ರದೀಪ್ ಗಾಯಕ್ವಾಡ್ ರವರ ಬರಹಗಳನ್ನು ಉದಾಹರಿಸಬಹುದು. ಆದರೆ ಈ ಎಲ್ಲಾ ಕೃತಿಗಳನ್ನು ಸಾಮಾನ್ಯ ವ್ಯುತ್ಪನ್ನಗಳೆಂದು ಬದಿಗಿರಿಸಿ ಸಾಮಾಜಿಕ ಗಣ್ಯರಾದ ಆಂಗ್ಲಭಾಷಾ ಬರಹಗಾರರ ಶೈಕ್ಷಣಿಕ ಬರಹಗಳನ್ನೇ ‘ಮೂಲ’ಕೊಡುಗೆಗಳೆಂದು ಮೆಚ್ಚಲಾಗುತ್ತಿದೆ.
A woman holds a portrait of B R Ambedkar at a protest against the Citizenship Amendment Act in 2020. New anglophone publications on Ambedkar curate details of his life for a global audience, but push him away from the “vernacular” Dalit-Bahujan minds that both admire him as a philosopher and derive inspiration from his legend. Photo: Hindustan Times / IMAGO
ಇಲ್ಲಿಯವರೆಗೆ ಅಂಬೇಡ್ಕರ್ ಬಗ್ಗೆ ಇಂಗ್ಲೀಷಿನ ಪ್ರಖ್ಯಾತ ಅಂತರಾಷ್ಟ್ರೀಯ ಪ್ರಕಾಶನಗಳಿಂದ ಬಂದಿರುವ ಜೀವನ ಚರಿತ್ರೆ ಹಾಗೂ ಸೈದ್ದಾಂತಿಕ ಬರಹಗಳಲ್ಲಿ ಒಂದು ಗ್ರಂಥ ಸಂಪಾದನೆಯೂ ದಲಿತ-ಬಹುಜನ ಲೇಖರಿಂದ ಮೂಡಿಲ್ಲ. ಅಂಬೇಡ್ಕರ್ ಅವರ ಜೀವನ ಮತ್ತು ಬೌಧ್ಧಿಕ ರಚನೆಗಳ ಅಧ್ಯಯನವು ಜನಪ್ರಿಯ ಶೈಕ್ಷಣಿಕ ಪ್ರಕಾರವಾಗುತ್ತಿದ್ದರೂ ಅದು ದಲಿತೇತರರಿಂದ, ಬಹುಜನರಲ್ಲದ ಅದರಲ್ಲೂ ಪುರುಷ ವಿದ್ವಾಂಸರಿಂದ ನಿಯಂತ್ರಿಸಲ್ಪಡುತ್ತಿದೆ. ಇಲ್ಲಿ ದಲಿತ ಬಹುಜನ ವಿದ್ಯಾರ್ಥಿ ವೇತನವು ಕಚ್ಚಾ ಸಾಮಗ್ರಿಯಾಗಿ, ಉಳ್ಳವರ ಮೆದುಳುಗಳ ವಿಧಾನ ಶಾಸ್ತ್ರೀಯ ಪರಿಶೋಧನೆಯ ಜ್ಞಾನಕ್ಷೇತ್ರವಾಗಿ ಬಳಕೆಯಾಗುತ್ತಿದೆ. ದಲಿತ-ಬಹುಜನ ವಿದ್ವಾಂಸರಿಗೆ ಇಂತಹುದೇ ಅಧ್ಯಯನ ನಡೆಸಲು ಸೀಮಿತ ಅವಕಾಶಗಳು ಮಾತ್ರ ದೊರಕುತ್ತಿದ್ದು ಇವರುಗಳನ್ನು ಹಲವು ಬಾರಿ ಪ್ರಿವಿಲೇಜ್ಡ್ ಜನರ ಕೃತಿಗಳ ವ್ಯಾಖ್ಯಾನಕಾರರಾಗಿ, ವಿಮರ್ಶಕರಾಗಿ ಬಳಸಲಾಗುತ್ತಿದೆ. ಇನ್ನೂ ಕೀಳು ಎಂದರೆ ದಲಿತ-ಬಹುಜನರ ಅಂಬೇಡ್ಕರ್ ಬಗೆಗಿನ ಬರಹಗಳನ್ನು ಅವುಗಳಲ್ಲಿ ನಂಬಲಾಸಾಧ್ಯವಾದ ಭಾವನಾತ್ಮಕತೆ ಇದೆ ಎಂದೋ ಅಥವಾ ಜ್ಞಾನೋತ್ಪಾದನೆಯ ಅತ್ಯಾಧುನಿಕ ಅಭ್ಯಾಸಗಳಿಂದ ಇವು ದೂರವಿವೆ ಎಂದೋ ಕಡೆಗಣಿಸಲಾಗುತ್ತಿದೆ.
ಅಂಬೇಡ್ಕರ್ ಅವರ ಜೀವನ ಮತ್ತು ಬೌದ್ಧಿಕತೆಯನ್ನು ಹೊಸ ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಈ ಜೀವನಚರಿತ್ರೆಯ ಹೊಸ ಪುಸ್ತಕಗಳೂ ಇದನ್ನು ಸಾಬೀತುಪಡಿಸುತ್ತಿವೆ. ಈ ಹೊಸ ದಿರಿಸನಲ್ಲಿ ಆಳುವ ವರ್ಗಗಳಿಗೆ ಅಂಬೇಡ್ಕರ್ ಹೆಚ್ಚು ಅಧಿಕೃತವಾಗಿ, ವಿದ್ವಾಂಸರಾಗಿ ತಾವುಗಳು ಗೌರವಿಸುವ ತಾತ್ವಿಕ ಮೌಲ್ಯಗಳಿಗೆ ಹತ್ತಿರದವರಾಗಿ ಕಾಣುತ್ತಾರೆ. ಅಂಬೇಡ್ಕರ್ ಅವರನ್ನು ಗೌರವಾನ್ವಿತ ವಿದ್ವಾಂಸರನ್ನಾಗಿ ಮಾತ್ರವಲ್ಲದೆ ಸಾಮಾಜಿಕ ಅನ್ಯಾಯಗಳ ಹೋರಾಟ ಮತ್ತು ವಿಮೋಚನೆಯ ಸ್ಫೂರ್ತಿಯನ್ನಾಗಿಸಿಗೊಂಡು ಅವರ ಪರಂಪರೆಯನ್ನು ಮುಂದುವರೆಸಲು ದೇಶೀಯ ದಲಿತ-ಬಹುಜನರ ಸಮೂಹ ಇಚ್ಛಿಸುತ್ತದೆ. ಆದರೆ ಈ ಆಂಗ್ಲೋಫೋನಿಕ್ ಜೀವನಚರಿತ್ರೆಗಳು ಅಂಬೇಡ್ಕರರನ್ನು ಇವರಿಂದ ದೂರ ತಳ್ಳುತ್ತವೆ.
ಗಮನಿಸಿ : ಇದೇ ಸರಣಿಯಲ್ಲಿ ಬಂದ ಮತ್ತೊಂದು ಪುಸ್ತಕ ಅನುರಾಗ್ ಭಾಸ್ಕರ್ ಅವರ “The Foresighted Ambedkar : Ideas That Shaped Indian Constitutional Discourse” . ಈ ಲೇಖನ ಬಂದಾಗ ಈ ಕೃತಿ ಬಿಡುಗಡೆಯಾಗಿರಲಿಲ್ಲ . ಮೊನ್ನೆ ಮೊನ್ನೆ ಅಂಬೇಡ್ಕರ್ ಬಗ್ಗೆ ಮುಂಚಿನಿಂದಲೂ ಬರೆಯುತ್ತಾ ಬಂದಿರುವ ಆಕ್ಟಿವಿಸ್ಟ್ , ಚಿಂತಕ ಆನಂದ ತೇಲ್ತುಂಬೆಅವರ “Iconoclast: A Reflective Biography of Dr Babasaheb Ambedkar” ಹೊರಬಂದಿದೆ.
ಅನುವಾದ : ಹೇಮಂತ್ ಲಿಂಗಪ್ಪ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲ ಗ್ರಾಮದವರು. ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ, ಬೆವಿಕಂ ನೆಲಮಂಗಲ ವಿಭಾಗದಲ್ಲಿ ಸಹಾಯಕ ಇಂಜಿನಿಯರ್(ವಿ.) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಕಥೆ, ಕವಿತೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು.
ಕೃಪೆ : himalmag.com
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ರಾಜಕೀಯ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅವರು ಜಾತಿ ರಾಜಕೀಯ, ದಲಿತ ಚಳುವಳಿಗಳು, ಹಿಂದುತ್ವ ಮತ್ತು ಹಿಂದಿ ಚಿತ್ರರಂಗದ ವಿಷಯಗಳ ಕುರಿತು ಪ್ರಮುಖ ರಾಷ್ಟ್ರೀಯ ಪತ್ರಿಕೆಗಳು, ನಿಯತಕಾಲಿಕಗಳು ಮತ್ತು ಶೈಕ್ಷಣಿಕ ನಿಯತಕಾಲಿಕೆಗಳಲ್ಲಿ ಆಗಾಗ ಬರೆಯುತ್ತಾರೆ.