೨೦೦೯ರಲ್ಲಿ ಅಮರ್ತ್ಯ ಸೇನ್ ದ ಐಡಿಯಾ ಆಫ್ ಜಸ್ಟಿಸ್ ಎನ್ನುವ ಪುಸ್ತಕ ಬರೆದರು. ಅದರಲ್ಲಿ ಚರ್ಚಿಸಿರುವ ಒಟ್ಟು ಸಿದ್ಧಾಂತವನ್ನು ಕುರಿತು ಏಪ್ರಿಲ್ ೨೦, ೨೦೧೦ರಲ್ಲಿ ರೊಬೆರ‍್ಟಾ ಬಫೆಟ್ ಸೆಂಟರ್ ಫಾರ್ ಇಂಟರ್‌ನ್ಯಾಷನಲ್ ಅಂಡ್ ಕಂಪ್ಯಾರೆಟಿವ್ ಸ್ಟಡೀಸ್‌ನಲ್ಲಿ ಭಾಷಣ ಮಾಡಿದರು. ಆ ಭಾಷಣದಲ್ಲಿ ನ್ಯಾಯವನ್ನು ಕುರಿತ ಇತರ ಸಿದ್ಧಾಂತಗಳು ಮತ್ತು ಅವುಗಳ ಮಿತಿಗಳು ಮತ್ತು ತಮ್ಮ ಸಿದ್ಧಾಂತ ಅದಕ್ಕಿಂತ ಎಲ್ಲಿ, ಯಾಕೆ ಭಿನ್ನವಾಗುತ್ತದೆ ಎನ್ನುವುದನ್ನು ಸ್ಥೂಲವಾಗಿ ವಿವರಿಸಿದ್ದಾರೆ. ನ್ಯಾಯದ ಪರಿಕಲ್ಪನೆಯನ್ನು ಕುರಿತ ಮರುಚಿಂತನೆಯ ಅವಶ್ಯಕತೆ ಇದೆ ಎಂದು ಹೇಳುತ್ತಾರೆ. ಹೆಚ್ಚಿನ ವಿವರಗಳಿಗೆ ಅವರ ’ದ ಐಡಿಯಾ ಆಫ್ ಜಸ್ಟಿಸ್’ ಕೃತಿಯನ್ನು ಗಮನಿಸಬೇಕು.
೧೮೬೦ರಲ್ಲಿ ಇಂಗ್ಲೆಂಡಿನಲ್ಲಿ ತೀವ್ರ ಕ್ಷಾಮ. ಜೇಮ್ಸ್ ಮಿಲ್ ಪ್ರಯೋಜಕತಾವಾದಿ (ಯುಟಿಲಿಟೇರಿಯನ್) ಸಿದ್ಧಾಂತದ ಪ್ರವರ್ತಕ. ಸ್ಟುವಾರ್ಟ್ ಮಿಲ್‌ನ ತಂದೆ. ಅವನು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಡೇವಿಡ್ ರಿಕಾರ್ಡೋಗೆ ಒಂದು ಪತ್ರ ಬರೆಯುತ್ತಾನೆ. ಅದರಲ್ಲಿ ಬರಗಾಲದಿಂದ ಕೃಷಿಯ ಉತ್ಪನ್ನದ ಮೇಲೆ ಆಗಬಹುದಾದ ಪರಿಣಾಮ ಮತ್ತು ಅದರಿಂದ ಜನರು ಹಸಿವು, ಹೊಟ್ಟೆಗಿಲ್ಲದೆ ನರಳಬೇಕಾಗಿ ಬರಬಹುದಾದ ಸ್ಥಿತಿಯನ್ನು ಕುರಿತು ಬರೆದಿದ್ದ. ಈ ಬರಗಾಲದಿಂದ ನಿರ್ಮಾಣವಾಗಬಹುದಾದ ಸ್ಥಿತಿಯ ಬಗ್ಗೆ ನನಗೆ ತೀವ್ರ ಕಳವಳವಾಗುತ್ತಿದೆ. ಅದರ ಕಲ್ಪನೆಯೇ ನನ್ನ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿದೆ. ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಸಾಯುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ನನಗೆ ಭಯವಾಗುತ್ತಿದೆ. ಆ ಪತ್ರದಲ್ಲಿ ನಿಯತಿವಾದ (ಫೇಟಲಿಸಂ) ಸ್ಪಷ್ಟವಾಗಿ ಕಾಣುತ್ತಿತ್ತು. ಅಷ್ಟೇ ಮುಖ್ಯವಾಗಿ ಸರಳ ಪ್ರಯೋಜಕತಾವಾದಿ ನ್ಯಾಯದ ಪರಿಕಲ್ಪನೆಯೂ ಅದರಲ್ಲಿ ವ್ಯಕ್ತವಾಗುತ್ತಿತ್ತು. ಆ ಪತ್ರದಲ್ಲಿ ಹಸಿವು ಹಾಗೂ ಹೊಟ್ಟೆಗಿಲ್ಲದೆ ಹೀಗೆ ನರಳುತ್ತಿರುವ ಜನರನ್ನು ನಗರದ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ನಿಲ್ಲಿಸಿ, ಹಂದಿಗಳ ಕುತ್ತಿಗೆಯನ್ನು ಸೀಳುವಂತೆ ಅವರ ಕುತ್ತಿಗೆಯನ್ನು ಸೀಳಿಬಿಡಬೇಕು. ಇದು ನಿಜವಾಗಿಯೂ ಅವರ ಪಾಲಿಗೆ ವರ. ಎಂದು ಬರೆದಿದ್ದ. ಅವನ ಪ್ರಯೋಜಕತಾವಾದಿ ನ್ಯಾಯದ ಪರಿಕಲ್ಪನೆಯ ಬಲವಾದ ಪ್ರತಿಪಾದನೆ ಇದರಲ್ಲಿ ವ್ಯಕ್ತವಾಗುತ್ತಿತ್ತು. ರಿಕಾರ್ಡೋ ಆ ಕಾಲದ ಅತ್ಯಂತ ದೊಡ್ಡ ರಾಜಕೀಯ ಅರ್ಥಶಾಸ್ತ್ರಜ್ಞ. ಅವನು ಮಿಲ್‌ನ ಕೋಪ ಮತ್ತು ಹತಾಶೆ ತುಂಬಿದ ಹೇಳಿಕೆಗಳಿಗೆ ಕೂಡಲೆ ತನ್ನ ಸಹಾನುಭೂತಿಯನ್ನು ವ್ಯಕ್ತಪಡಿಸಿದ. ಸರ್ಕಾರಕ್ಕೆ ಈ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯವಿದೆ ಎಂದು ಪ್ರತಿಭಟನಕಾರರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಕುರಿತು ಅವನು ತನ್ನ ಉತ್ತರದಲ್ಲಿ ತಿರಸ್ಕಾರ ಮತ್ತು ಅಸಡ್ಡೆಯನ್ನು ವ್ಯಕ್ತಪಡಿಸಿದ್ದ. ಕಾನೂನಿನಲ್ಲಿ ಜನರ ಈ ಕಷ್ಟಕ್ಕೆ ಪರಿಹಾರವಿದೆ ಎಂದು ಪ್ರತಿಭಟನಕಾರರು ಸೂಚಿಸುತ್ತಿದ್ದಾರೆ. ಆ ಮೂಲಕ ಕೆಳಸ್ತರದ ಜನರ ಮನಸ್ಸನ್ನು ಅವರು ಕೆರಳಿಸುತ್ತಿದ್ದಾರೆ. ಈ ಬಗ್ಗೆ ನನಗೆ ತೀವ್ರ ವಿಷಾದವಿದೆ ಎಂದು ಮಾರುತ್ತರ ಬರೆದಿದ್ದ.
೧೯ನೇ ಶತಮಾನ ಈ ಇಬ್ಬರು ಮಹಾನ್ ಮೇಧಾವಿಗಳ ನಡುವೆ ಹಲವು ಪತ್ರಗಳು ವಿನಿಮಯವಾದವು. ಆ ಪತ್ರಗಳಲ್ಲಿ ಈ ಕುಲೀನ ಮೇಧಾವಿಗಳು ಕೆಳಸ್ತರದ ಜನಗಳನ್ನು ಕುರಿತಂತೆ ಬಳಸಿರುವ ಭಾಷೆ ಮತ್ತು ಅದರಲ್ಲಿ ವ್ಯಕ್ತವಾಗಿರುವ ನಿಯತಿವಾದವನ್ನು ಗಮನಿಸಬಹುದು. ಅದನ್ನು ಗಮನಿಸುವುದು ಮುಖ್ಯ. ಈ ಪತ್ರಗಳು ಇನ್ನೂ ಹಲವು ಕಾರಣಗಳಿಗಾಗಿಯೂ ತುಂಬಾ ಮುಖ್ಯವಾಗುತ್ತವೆ. ರಿಕಾರ್ಡೋ ಆ ಕಾಲದ ಅತ್ಯಂತ ಪ್ರತಿಭಾನ್ವಿತ ಅರ್ಥಶಾಸ್ತ್ರಜ್ಞ. ಹಾಗಿದ್ದಾಗ್ಯೂ ಅವನ ವಾದಕ್ಕಿಂತ ಅವನು ಕೇವಲ ಪ್ರಚೋದನಕಾರರು ಎಂದು ತಳ್ಳಿಹಾಕಿದ್ದ ಪ್ರತಿಭಟನಕಾರರ ವಾದವೇ ಹೆಚ್ಚು ಗಟ್ಟಿಯಾಗಿತ್ತು. ಕಾನೂನು ಮತ್ತು ನೀತಿಗಳ ಮೂಲಕ ಜನರ ಹಸಿವನ್ನು ತೊಡೆದುಹಾಕುವುದಕ್ಕೆ ಸರ್ಕಾರಕ್ಕೆ ಸಾಧ್ಯವಿದೆ ಎಂದು ಪ್ರತಿಭಟನಕಾರರು ಹೇಳುತ್ತಿದ್ದರು. ಆದರೆ ಅದು ಸರ್ಕಾರಕ್ಕೆ ಸಾಧ್ಯವಿಲ್ಲ ಅನ್ನುವುದು ರಿಕೋರ್ಡೋವಿನ ಅಭಿಪ್ರಾಯವಾಗಿತ್ತು. ವಾಸ್ತವವಾಗಿ ರಿಕಾರ್ಡೋವಿನ ನಿರಾಸೆಯ ಮಾತುಗಳಿಗಿಂತ ಪ್ರತಿಭಟನಕಾರರ ಮಾತುಗಳು ಸರಿಯಿದ್ದವು. ಏಕೆಂದರೆ ಹೆಚ್ಚು ಪರಿಣಾಮಕಾರಿಯಾದ ಆರ್ಥಿಕ ನೀತಿಯನ್ನು ಬಳಸಿ ಕ್ಷಾಮ ಮತ್ತು ಹಸಿವೆಯನ್ನು ಸಂಪೂರ್ಣವಾಗಿ ಪರಿಹರಿಸುವುದಕ್ಕೆ ಸರ್ಕಾರಕ್ಕೆ ಸಾಧ್ಯವಿದೆ ಎನ್ನುವುದನ್ನು ಇತ್ತೀಚಿನ ಆರ್ಥಿಕ ವಿಶ್ಲೇಷಣೆ ಮತ್ತು ಸಾರ್ವಜನಿಕ ನೀತಿ ಸಮರ್ಥಿಸಿವೆ.
ಜನತೆಯ ವೈಚಾರಿಕತೆಯನ್ನು ಸಾರಾಸಗಟಾಗಿ ತಿರಸ್ಕರಿಸಬಾರದು. ಮೊದಲ ನೋಟಕ್ಕೆ ಆ ನಂಬಿಕೆಗಳು ಸಂಭವನೀಯವೇ ಅಲ್ಲ ಅಂತ ಅನ್ನಿಸಬಹುದು. ಆದರೆ ಅವು ಸರಿಯಿರಬಹುದು. ಆ ಪ್ರತಿಭಟನೆಗಳು ಒರಟು, ರೂಕ್ಷ ಮತ್ತು ವಾಚಾಳಿತನದ್ದು (voluble) ಅಂತಲೂ ಅನ್ನಿಸಬಹುದು. ಆದರೂ ನಮ್ಮ ಅನಿಸಿಕೆಗಳನ್ನು ಬದಿಗಿಟ್ಟು ಜನರ ವಾದಗಳನ್ನು ಪರಿಶೀಲಿಸಬೇಕು. ಅವೂ ಸರಿಯಿರಲೂಬಹುದು. ಈ ಪ್ರತಿಭಟನಕಾರರ ಚಿಂತನೆಯಲ್ಲಿ ನಾವು ಅದನ್ನು ಕಂಡಿದ್ದೇವೆ. ನ್ಯಾಯವನ್ನು ಹುಡುಕಿಕೊಂಡು ಹೊರಟಿರುವಾಗ, ಜನತೆಯ ವಿಚಾರಗಳನ್ನು ಮುಕ್ತಮನಸ್ಸಿನಿಂದ ನಮಗೆ ಚರ್ಚಿಸುವುದಕ್ಕೆ ಸಾಧ್ಯವಾಗಬೇಕು. ಜನರು ಕೋಪ ಹಾಗೂ ಹತಾಶೆಯಿಂದ ಅನ್ಯಾಯದ ವಿರುದ್ದದ ಪ್ರತಿಭಟಿಸುತ್ತಿರಬಹುದು. ಆದರೆ ಜನರ ಕೋಪಕ್ಕೆ ಕಾರಣವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅದನ್ನು ಪರಿಶೀಲಿಸಬೇಕಾದರೆ ಅವರ ಚಿಂತನೆಯನ್ನು ಗಮನಿಸಬೇಕಾಗುತ್ತದೆ. ಅವನ್ನು ವೈಚಾರಿಕವಾಗಿ ಅರ್ಥಮಾಡಿಕೊಳ್ಳಬೇಕು. ಆಗ ಅವರ ಕೋಪವನ್ನು ನ್ಯಾಯಸಮ್ಮತವಾದ ಮತ್ತು ಸಮರ್ಥನೀಯವಾದ ರೀತಿಯಲ್ಲಿ ಗ್ರಹಿಸಿಕೊಳ್ಳುವುದಕ್ಕೆ ಸಾಧ್ಯ. ಅವರ ಕಷ್ಟಗಳನ್ನು ಪರಿಹರಿಸುವುದಕ್ಕೆ ಸಾಧ್ಯ.
ಕೋಪ ಮತ್ತು ವೈಚಾರಿಕತೆ (ಇಂಡಿಗ್ನೇಷನ್ ಮತ್ತು ರೀಸನಿಂಗ್) ಈ ಎರಡು ಕ್ರಿಯೆಗಳನ್ನೂ ಮೇರಿ ವೂಲ್ಸ್‌ಟನ್‌ಕ್ರಾಫ್ಟ್ ಅವರ ಬರಹಗಳು ಅತ್ಯಂತ ಸಮರ್ಥವಾಗಿ ವಿವರಿಸುತ್ತವೆ. ಸ್ತ್ರೀವಾದಿ ಚಿಂತನೆಗೆ ೧೮ನೇ ಶತಮಾನದ ಈ ಲೇಖಕಿಯ ಕೊಡುಗೆ ತುಂಬಾ ಹಿರಿದು. ವಿಂಡಿಕೇಷನ್ ಆಫ್ ದ ರೈಟ್ಸ್ ಆಫ್ ಮೆನ್, ವಿಂಡಿಕೇಷನ್ ಆಫ್ ದ ರೈಟ್ಸ್ ಆಫ್ ವುಮನ್, ಇವು ಅವರ ಕೃತಿಗಳು. ಈ ಎರಡು ಕೃತಿಗಳಲ್ಲಿ ಮಹಿಳೆಯರ ಹಕ್ಕುಗಳನ್ನು ದಮನ ಮಾಡಬಾರದು ಎನ್ನುವುದನ್ನು ಕುರಿತು ಚರ್ಚಿಸುವಾಗ ಕೋಪ, ಉದ್ರೇಕ, ಕಹಿ ಇವೆಲ್ಲವೂ ಧಾರಾಳವಾಗಿ ವ್ಯಕ್ತವಾಗಿವೆ. ಮೊದಲನೆಯ ಕೃತಿಯಲ್ಲಿ ಹೆಂಗಸರು ಹಾಗೂ ಗಂಡಸರು ಇಬ್ಬರ ಹಕ್ಕುಗಳ ದಮನವನ್ನು ಕುರಿತು ಚರ್ಚಿಸಲಾಗಿದೆ. ಅದರಲ್ಲಿನ ಚರ್ಚೆ ಮುಖ್ಯವಾಗಿ ಗುಲಾಮಗಿರಿಗೆ ಸಂಬಂಧಿಸಿದೆ. ಡಿಕ್ಲರೇಷನ್ ಆಫ್ ಇಂಡಿಪೆಂಡೆನ್ಸ್ ಅನ್ನು ಎಡ್ಮಂಡ್ ಬರ್ಕ್ ಬೆಂಬಲಿಸುತ್ತಾನೆ. ಆದರೆ ಅವನು ಗುಲಾಮರ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಿಲ್ಲ. ಹಾಗೆ ಗುಲಾಮರ ಸ್ವಾತಂತ್ರ್ಯದ ಬಗ್ಗೆ ಮಾತನಾಡದೆ ಅಮೇರಿಕೆಯ ಸ್ವಾತಂತ್ರ್ಯದ ಘೋಷಣೆಯನ್ನು ಹೇಗೆ ಬೆಂಬಲಿಸಲು ಸಾಧ್ಯ, ಎಂದು ಮೇರಿ ಅವನನ್ನು ಉಗ್ರವಾಗಿ ಟೀಕಿಸುತ್ತಾಳೆ. ಎರಡನೆಯ ಕೃತಿಯಲ್ಲಿ ಫ್ರೆಂಚ್ ಕ್ರಾಂತಿಯನ್ನು ಬೆಂಬಲಿಸಲಿಲ್ಲ ಎನ್ನುವ ಕಾರಣಕ್ಕೆ ಎಡ್ಮಂಡ್ ಬರ್ಕ್‌ನನ್ನು ಟೀಕಿಸುತ್ತಾಳೆ. ಅದು ತುಂಬಾ ಮುಖ್ಯ. ನ್ಯಾಯ ಅನ್ನುವುದು ಕೆಲವರಿಗಷ್ಟೇ ಅಲ್ಲ ಎಲ್ಲರಿಗೂ ಅನ್ವಯವಾಗಬೇಕು. ಆಕೆ ಆ ಕಾಲಘಟ್ಟದ ಒಬ್ಬ ಅಸಾಧಾರಣ ಚಿಂತಕಿ. ಆಕೆ ಸ್ತ್ರೀವಾದದ ಆದ್ಯ ಪ್ರವರ್ತಕಳು. ಹಾಗಾಗಿ ಸ್ತ್ರೀವಾದಿಗಳು ಅವಳನ್ನು ತುಂಬಾ ಗೌರವಿಸುತ್ತಾರೆ. ಆದರೆ ಅವಳನ್ನು ಅಷ್ಟಕ್ಕೇ ಸೀಮಿತಗೊಳಿಸುವುದು ಸರಿಯಲ್ಲ. ಆಕೆ ಒಟ್ಟಾರೆಯಾಗಿ ನ್ಯಾಯಕ್ಕಾಗಿ ಹೋರಾಡಿದವಳು. ಹಾಗಿದ್ದಾಗ್ಯೂ ಅಂತಹ ವ್ಯಕ್ತಿಯನ್ನು ಕೇವಲ ಗಾಡ್‌ವಿನ್ ಅವರ ಹೆಂಡತಿ ಮತ್ತು ಮೇರಿ ಶೆಲ್ಲಿಯ ತಾಯಿ ಎಂದಷ್ಟೇ ನೆನಪಿಸಿಕೊಳ್ಳುತ್ತಾರೆ. ಅವೆರಡೂ ನಿಜ. ಆದರೆ ಆಕೆ ಸ್ವತಃ ಮಹತ್ವದ ಚಿಂತಕಿ ಅನ್ನುವುದೂ ಅಷ್ಟೇ ಸತ್ಯ.
ಈ ಎರಡು ಕೃತಿಗಳಲ್ಲೂ ಮೊದಲಿಗೆ ಕಾಣುವುದು ಮೇರಿ ವೂಲ್ಸಟನ್‌ಕ್ರಾಫ್ಟ್ ಅವರ ಕೋಪ. ಆದರೆ ಕ್ರಮೇಣ ಆಕೆಯ ಚಿಂತನೆ ಪ್ರಬಲವಾದ ವಚಾರಿಕತೆಯತ್ತ ಸಾಗುತ್ತದೆ. ಇದನ್ನು ಎರಡು ಕೃತಿಗಳಲ್ಲಿಯೂ ನೋಡಬಹುದು. ತಾನು ಮಂಡಿಸುತ್ತಿರುವ ವಾದದಲ್ಲಿನ ವೈಚಾರಿಕತೆಯನ್ನು ತನ್ನ ಎದುರಾಳಿ ಗುರುತಿಸಬೇಕೆಂದು ಮೇರಿ ಬಯಸುತ್ತಾಳೆ. ತೀವ್ರವಾದ ಕೋಪದ ನಡುವೆಯೂ ಆಕೆ ವೈಚಾರಿಕತೆಯನ್ನು ಬಲವಾಗಿ ನೆಚ್ಚಿಕೊಂಡಿದ್ದಳು. ಆಕೆ ಫ್ರಾನ್ಸಿನ ಫ್ರೆಂಚ್ ಪೊಲಿಟಿಕಲ್ ಸೊಸೈಟಿಯ ನಾಯಕ ಟೆಲ್ಲಿರಾಂಡ್ ಪೆರಿಗೋರ್ಡ್ ಅವರಿಗೆ ಬರೆದ ಪತ್ರದಲ್ಲಿ ಈ ಅಂಶವನ್ನು ಗಮನಿಸಬಹುದು. ತನ್ನ ವಿಂಡಿಕೇಷನ್ ಆಫ್ ರೈಟ್ಸ್ ಆಫ್ ವುಮನ್ ಕೃತಿಯನ್ನು ಆಕೆ ಬರೆದದ್ದೇ ಆತನನ್ನೇ ಉದ್ದೇಶಿಸಿ. ಹೆಂಗಸರು ಅನುಭವಿಸುವ ತಾರತಮ್ಯವನ್ನು ಕುರಿತು ಆಕೆ ಉಲ್ಲೇಖಿಸುವಾಗ ಬ್ರಿಟನ್ ಮತ್ತೆ ರಷ್ಯಾದೊಂದಿಗೆ ವ್ಯಾಪಾರವನ್ನು ಪ್ರಾರಂಭಿಸಿ ಚಾವಟಿಗಳನ್ನು ತರಿಸಿಕೊಳ್ಳಬೇಕೆಂದು ವ್ಯಂಗ್ಯ ಮಾಡುತ್ತಾಳೆ. ಅದನ್ನು ಬಳಸಿ ಹೆಚ್ಚು ಅಧಿಕಾರಯುತವಾಗಿ ಪುರುಷರ ಅಧಿಪತ್ಯವನ್ನು ಸ್ಥಾಪಿಸಬಹುದೆಂದು ಸಲಹೆ ನೀಡುತ್ತಾಳೆ. ಅಕೆಯ ಪ್ರತಿಕ್ರಿಯೆ ತೀರಾ ತೀಕ್ಷ್ಣವಾಗಿಯೇ ಇದೆ. ಅಲ್ಲಿಗೆ ಅದು ನಿಲ್ಲುವುದಿಲ್ಲ. ಮುಂದೆ ಹಲವು ಪುಟಗಳಲ್ಲಿ ಅವಳ ಸುಸುಂಬದ್ದವಾದ ಚಿಂತನೆ ಮುಂದುವರಿಯುತ್ತದೆ. ಪತ್ರದ ಕೊನೆಯಲ್ಲಿ ವೈಚಾರಿಕತೆಯನ್ನು ಕುರಿತಂತೆ ತನಗಿರುವ ವಿಶ್ವಾಸವನ್ನು ಸೂಚಿಸುತ್ತಾಳೆ. ಫ್ರಾನ್ಸಿನಲ್ಲಿ ಒಂದಿಷ್ಟು ಸಂಶೋಧನೆ ನಡೆಯಬೇಕು. ಅದರಿಂದ ನನ್ನ ವಿಚಾರಗಳು ಸರಿಯಿದೆ ಎಂದು ಸ್ಪಷ್ಟವಾದರೆ, ಮಹಿಳೆಯರು ಗೌರವಕ್ಕೆ ಅರ್ಹರು ಎನ್ನುವುದಕ್ಕೆ ವೈಚಾರಿಕ ಸಮರ್ಥನೆ ಇದೆ ಅನ್ನುವುದು ಸಾಬೀತಾದರೆ, ನೀವು ಮುಂದೆ ನಿಮ್ಮ ಫ್ರೆಂಚ್ ಸಂವಿಧಾನವನ್ನು ಪರಿಷ್ಕರಿಸುವಾಗ (ಮೂಲ ಸಂವಿಧಾನದಲ್ಲಿ ಮಹಿಳೆಯರ ಸಮಾನತೆಗೆ ಅವಕಾಶವಿರಲಿಲ್ಲ ಅನ್ನುವುದರ ಬಗ್ಗೆ ಆಕೆಗೆ ತುಂಬಾ ನಿರಾಶೆಯಿತ್ತು) ಮಹಿಳೆಯರ ಹಕ್ಕಿಗೆ ಅವಕಾಶ ಕಲ್ಪಿಸಿಕೊಡಬಹುದು. ನಾನು ಮಾನವ ಜನಾಂಗದ ಅರ್ಧದಷ್ಟು ಜನರ ನ್ಯಾಯಕ್ಕಾಗಿ ಬಲವಾಗಿ ಒತ್ತಾಯಿಸುತ್ತೇನೆ. ಎಂದು ಪತ್ರವನ್ನು ಮುಗಿಸುತ್ತಾಳೆ.
ವೂಲ್ಸ್‌ಟನ್‌ಕ್ರಾಫ್ಟ್ ಅವರ ಚಿಂತನೆಗಳಲ್ಲಿ ಆರಂಭದಲ್ಲಿ ತೀವ್ರವಾದ ಕೋಪ ಕಾಣುತ್ತದೆ. ಅದಕ್ಕೆ ಆಕೆ ಬದುಕಿದ್ದ ೧೮ನೇ ಶತಮಾನದ ಸಮಾಜದಲ್ಲಿದ್ದ, ಅಷ್ಟೇ ಅಲ್ಲ ಈಗಲೂ ಇರುವ ತಾರತಮ್ಯಗಳು ಕಾರಣ. ಇಂದು ಅಮೇರಿಕದಲ್ಲಿ ತುಂಬಾ ಸಕ್ರಿಯವಾಗಿರುವ ಟೀ ಪಾರ್ಟಿ ಚಳುವಳಿಯಲ್ಲೂ ಈ ಕೋಪವನ್ನು ಕಾಣಬಹುದು. ಆ ಚಳುವಳಿಯ ಹಿಂದಿನ ಬೌದ್ಧಿಕ ಚಿಂತನೆಯನ್ನು ಕುರಿತಂತೆ ನಮಗೆ ಹಲವು ಆಕ್ಷೇಪಗಳಿರಬಹುದು, ತೊಂದರೆಯಿಲ್ಲ. ಆದರೆ ಆ ಜನ ಕೋಪದಿಂದ ವರ್ತಿಸುತ್ತಿದ್ದಾರೆ ಅನ್ನುವ ಕಾರಣಕ್ಕೆ ಆ ಚಳುವಳಿಯನ್ನು ವಿರೋಧಿಸುವುದು ಸರಿಯಲ್ಲ. ಯಾಕೆಂದರೆ ಅವರ ಕೋಪ ಸಕಾರಣವಾಗಿಯೇ ಇರಬಹುದು. ಆದರೆ ಆ ಕೋಪದ ಬೆನ್ನಲ್ಲೇ ಕಾಣಿಸಿಕೊಳ್ಳುವ ಅತಾರ್ಕಿಕತೆಯನ್ನು, ಯಾವುದೇ ಪ್ರಾಯೋಗಿಕ, ಅನುಭವಜನ್ಯ ಆಧಾರವಿಲ್ಲದೆ ಕೋಪಿಸಿಕೊಳ್ಳುವುದನ್ನು ಅಥವಾ ವೈಚಾರಿಕ ಹಾಗೂ ತಾರ್ಕಿಕತೆಯ ಆಧಾರವಿಲ್ಲದೆ ಕೋಪವನ್ನು ಸಮರ್ಥಿಸಿಕೊಳ್ಳುವುದನ್ನು ಒಪ್ಪಿಕೊಳ್ಳಬೇಕಾಗಿಲ್ಲ.
ನ್ಯಾಯದ ಪರಿಕಲ್ಪನೆಯ ಈ ದೃಷ್ಟಿಕೋನದಲ್ಲಿ ವೈಚಾರಿಕತೆಗೆ, ವಿಶೇಷವಾಗಿ ಜನರ ವೈಚಾರಿಕತೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಇದು ಅತ್ಯಂತ ಪ್ರಶಂಸನೀಯ. ನನ್ನ ಪುಸ್ತಕದಲ್ಲಿ ನಾನು ಇದನ್ನೇ ಪ್ರಯತ್ನಿಸಿದ್ದೇನೆ. ಈ ದೃಷ್ಟಿಕೋನವು ರೂಪುಗೊಂಡಿದ್ದು ಯುರೋಪಿನ ಜ್ಞಾನೋದಯ (European enlightenment) ಕಾಲದಲ್ಲಿ. ಈ ದೃಷ್ಟಿಕೋನದ ಪ್ರಕಾರ ಒಂದು ಸಮಾಜ ಸುಸಂಸ್ಕೃತವಾಗಲು ಹಾಗೂ ಸ್ವೀಕಾರಾರ್ಹವಾಗಲು ಒಂದು ಸುಸಂಬದ್ಧವಾದ ವೈಚಾರಿಕತೆ ತುಂಬಾ ಸಹಕಾರಿ. ಇದು ಸರಿಯಾದ ನಿಲುವು. ಆದರೆ ಈ ನಿಲುವಿನ ಪ್ರತಿಪಾದಕರು ಒಂದಂಶವನ್ನು ಗಮನಿಸುವುದಿಲ್ಲ. ಅದೇನೆಂದರೆ, ಐರೋಪ್ಯ ಜ್ಞಾನೋದಯದ ಕಾಲದಲ್ಲಿ ತಾರ್ಕಿಕತೆಯನ್ನು ಪೂರ್ಣವಾಗಿ ಒಪ್ಪಿಕೊಂಡಿದ್ದವರಲ್ಲೂ ಒಮ್ಮತವಿರಲಿಲ್ಲ. ವಾಸ್ತವವಾಗಿ ಅವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಅದನ್ನು ಯಾರೂ ಅಷ್ಟಾಗಿ ಗಮನಿಸಿಲ್ಲ. ಹಲವು ಗುಂಪುಗಳು ಜ್ಞಾನೋದಯ ಸಿದ್ಧಾಂತದ ಮೂಲಭೂತ ತತ್ತ್ವಗಳನ್ನು ಪ್ರತಿಪಾದಿಸುತ್ತಿದ್ದವು. ಆ ಗುಂಪುಗಳ ಪ್ರಮುಖ ದಾರ್ಶನಿಕರಲ್ಲೇ ನ್ಯಾಯದ ಕಲ್ಪನೆಯನ್ನು ಕುರಿತು ಎರಡು ವಿಭಿನ್ನ ಧಾರೆಗಳಿದ್ದವು. ಅವುಗಳಲ್ಲಿ ಒಂದು ಧಾರೆ ಕುಂದುಕೊರತೆಗಳಿಲ್ಲದ, ಪರಿಪೂರ್ಣವೂ, ನಿಷ್ಪಕ್ಷಪಾತವೂ ಆಗಿರುವ ಸಾಮಾಜಿಕ ವ್ಯವಸ್ಥೆಯನ್ನು ಗುರುತಿಸುವುದಕ್ಕೆ ಹೆಚ್ಚು ಒತ್ತು ನೀಡಿತ್ತು. (ಇದು ಭಾರತದ ನ್ಯಾಯ-ನೀತಿಯ ಕಲ್ಪನೆಗಿಂತ ಭಿನ್ನ. ಈ ವಿಷಯದಲ್ಲಿ ಗೊಂದಲ ಬೇಕಾಗಿಲ್ಲ.) ನ್ಯಾಯಯುತವಾದ ಸಂಸ್ಥೆಗಳನ್ನು ಮತ್ತು ಆಚರಣೆಗಳನ್ನು ರೂಪಿಸಬೇಕು ಎನ್ನುವುದು ಈ ಚಿಂತನಾ ಕ್ರಮದ ಮೂಲತತ್ತ್ವವಾಗಿತ್ತು. ಅದೇ ನ್ಯಾಯಸಿದ್ಧಾಂತದ ಕರ್ತವ್ಯ ಎಂದು ಈ ದೃಷ್ಟಿಕೋನ ಭಾವಿಸಿತ್ತು.
ಪರಿಪೂರ್ಣವಾದ, ನ್ಯಾಯಯುತ ಸಾಮಾಜಿಕ ವ್ಯವಸ್ಥೆ ಹೇಗಿರಬೇಕೆಂಬುದರ ಬಗ್ಗೆಯೇ ಇದು ತನ್ನೆಲ್ಲಾ ಗಮನವನ್ನು ಕೇಂದ್ರಿಕರಿಸಿತ್ತು. ಪರಿಪೂರ್ಣವಾದ ನ್ಯಾಯಿಕ ಸಂಸ್ಥೆಯ ಲಕ್ಷಣಗಳನ್ನು ಗುರುತಿಸುವುದೇ ನ್ಯಾಯ ಸಿದ್ದಾಂತದ ಏಕೈಕ ಕರ್ತವ್ಯವೆಂದು ಅದು ಭಾವಿಸುತ್ತದೆ. ಈ ರೀತಿಯಲ್ಲಿ ನ್ಯಾಯವನ್ನು ಅರ್ಥಮಾಡಿಕೊಳ್ಳುವ ಮಾರ್ಗದ ವಿಭಿನ್ನ ಚಿಂತನೆಗಳು ಬೇರೆ ಬೇರೆ ರೀತಿಯಲ್ಲಿ ಒಂದು ಕಲ್ಪಿತ ಸಾಮಾಜಿಕ ಒಪ್ಪಂದದ ಸುತ್ತ ತನ್ನ ಚಿಂತನೆಯನ್ನು ಹೆಣೆದಿವೆ. ಒಂದು ಸಾರ್ವಭೌಮ ಪ್ರಭುತ್ವದಡಿಯಲ್ಲಿ ಬರುವ ಜನರೆಲ್ಲಾ ಈ ಕಲ್ಪಿತ ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆಂದು ಭಾವಿಸಿಕೊಳ್ಳಲಾಗಿದೆ. ೧೭ನೇ ಶತಮಾನದಲ್ಲಿ ಈ ವಿಚಾರಧಾರೆಗೆ ಬಹುದೊಡ್ಡ ಕೊಡುಗೆ ನೀಡಿದ್ದು ಥಾಮಸ್ ಹಾಬ್ಸ್. ನಂತರದಲ್ಲಿ ಜಾನ್ ಲಾಕ್, ಜಾನ್ ರಾಟೆನ್‌ಸೊ ಮತ್ತು ಇಮ್ಯಾನ್ಯುಯೆಲ್ ಕಾಂಟ್ ಈ ವಿಚಾರಧಾರೆಯ ಪ್ರಮುಖ ಪ್ರತಿಪಾದಕರು. ಸಮಕಾಲೀನ ರಾಜಕೀಯ ತತ್ತ್ವಶಾಸ್ತ್ರವನ್ನು ಸಾಮಾಜಿಕ ಒಪ್ಪಂದ ಸಿದ್ಧಾಂತ ಪ್ರಬಲವಾಗಿ ಪ್ರಭಾವಿಸಿದೆ.
ಈಗ ನಮ್ಮ ನಡುವಿನ ಅತ್ಯಂತ ಪ್ರಮುಖ ಮತ್ತು ಪ್ರತಿಭಾವಂತ ದಾರ್ಶನಿಕ ಜಾನ್ ರಾಲ್ಸ್ (ಇವರು ಪ್ರಯೋಜಕತಾವಾದಿ ಸಿದ್ಧಾಂತಕ್ಕೆ ಪರ್ಯಾಯ ಸಿದ್ಧಾಂತವನ್ನು ಬೆಳೆಸಿದರು). ಇವರು ೧೯೭೧ರಲ್ಲಿ ಈ ವಿಚಾರಧಾರೆ ಕುರಿತು ಥಿಯರಿ ಆಫ್ ಜಸ್ಟಿಸ್ ಎನ್ನುವ ಶ್ರೇಷ್ಠ ಕೃತಿಯೊಂದನ್ನು ಪ್ರಕಟಿಸಿದರು. ಅದರಲ್ಲಿ ಅವರು ಸಾಮಾಜಿಕ ಒಪ್ಪಂದ ಸಿದ್ಧಾಂತದಲ್ಲಿನ ನ್ಯಾಯದ ಪರಿಕಲ್ಪನೆಯನ್ನು ಅತ್ಯಂತ ನಿಖರವಾಗಿ ನಿರೂಪಿಸಿದರು. ಸಮಕಾಲೀನ ಸಿದ್ಧಾಂತಗಳಲ್ಲಿ ಮಂಡಿಸಲಾಗಿರುವ ನ್ಯಾಯಸಿದ್ಧಾಂತದ ತತ್ತ್ವಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಒಪ್ಪಂದ ಸಿದ್ಧಾಂತದಿಂದ ಸ್ಫೂರ್ತಿ ಪಡೆದಿವೆ. ಅವು ಸಂಸ್ಥೆಗೆ ಇರಬೇಕಾದ ಆದರ್ಶಗಳನ್ನು ಹುಡುಕುವುದಕ್ಕೆ ತಮ್ಮೆಲ್ಲ ಗಮನವನ್ನು ಕೇಂದ್ರೀಕರಿಸಿವೆ. ಈ ಮಾತು ರೋನಾಲ್ಡ್ ಡ್ವಾರ‍್ಕಿನ್, ಡೇವಿಡ್ ಗೋಚಿ ಮತ್ತು ಇನ್ನೂ ಹಲವು ಚಿಂತಕರಿಗೆ ಅನ್ವಯಿಸುತ್ತದೆ. ಥಾಮಸ್ ನಗೆಲ್ ಅವರಲ್ಲಿಯೂ ಇದು ಕಂಡುಬರುತ್ತದೆ. ಅವರೆಲ್ಲರ ನಡುವೆ ತೀರಾ ಮೂಲಭೂತವಾದ ಭಿನ್ನಾಭಿಪ್ರಾಯಗಳೂ ಇವೆ. ನ್ಯಾಯಯುತ ಸಮಾಜ ಅಂದರೇನು, ಅನ್ನುವುದನ್ನು ಕುರಿತಂತೆ ತೀರಾ ವಿಭಿನ್ನವಾದ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವುದೇ ನ್ಯಾಯ ಸಿದ್ದಾಂತದ ಉದ್ದೇಶ.
ಅದೇ ಕಾಲಘಟ್ಟದಲ್ಲಿ ಸಾಮಾಜಿಕ ಒಪ್ಪಂದ ಸಿದ್ಧಾಂತಕ್ಕೆ ತದ್ವಿರುದ್ಧವಾದ ಹಲವು ಜ್ಞಾನೋದಯ ಸಿದ್ಧಾಂತಗಳಿದ್ದವು. ಅವುಗಳ ನಡುವೆಯೂ ಮೂಲಭೂತ ಭಿನ್ನಾಭಿಪ್ರಾಯಗಳಿದ್ದವು. ಪರಸ್ಪರ ಭಿನ್ನವಾದ ದೃಷ್ಟಿಕೋನಗಳನ್ನು ಹೊಂದಿದ್ದವು. ಆದರೆ ಅವುಗಳ ನಡುವೆ ಒಂದು ಸಮಾನ ಆಸಕ್ತಿಯಿತ್ತು. ಅವರೆಲ್ಲರಿಗೂ ಜನರ ಬದುಕು ಪ್ರಭಾವಕ್ಕೊಳಗಾಗುವ ವಿಭಿನ್ನ ಬಗೆಗಳನ್ನು ಅರ್ಥಮಾಡಿಕೊಳ್ಳುವ ಹಾಗೂ ಅವುಗಳನ್ನು ತುಲನಾತ್ಮಕವಾಗಿ ನೋಡುವ ಒಂದು ಸಮಾನ ಉದ್ದೇಶವಿತ್ತು. ಅವರಿಗೆ ಜನರು ಹಾಗೂ ಸರ್ಕಾರದ ನಡುವಿನ ಒಪ್ಪಂದ ಮಾತ್ರವಲ್ಲ, ಜೊತೆಗೆ ಅದು ವಾಸ್ತವದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದೂ ಮುಖ್ಯವಾಗಿತ್ತು. ಅವರು ಜನರ ವಾಸ್ತವ ನಡತೆ, ಪರಸ್ಪರ ಒಡನಾಟ, ಹಾಗೂ ಇತರ ಪ್ರಮುಖ ಅಂಶಗಳು ಜನರ ಬದುಕಿನ ಮೇಲೆ ಬೀರುವ ಪ್ರಭಾವವನ್ನು ಗಮನಿಸುತ್ತಿದ್ದರು. ಅಂದರೆ ವಿಭಿನ್ನ ಅಂಶಗಳು ಸಮಾಜದಲ್ಲಿನ ಆಗುಹೋಗುಗಳನ್ನು ಹೇಗೆ ಪ್ರಭಾವಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದೂ ಈ ಸಿದ್ದಾಂತಗಳಿಗೆ ಮುಖ್ಯವಾಗಿತ್ತು.
ಸಾಮಾಜದಲ್ಲಿನ ಅನ್ಯಾಯವನ್ನು ಗುರುತಿಸುವುದರ ಜೊತೆಗೆ, ಅದನ್ನು ನಿರ್ಮೂಲನೆ ಮಾಡಲು ಸಾಧ್ಯವೇ ಹಾಗೂ ಎಷ್ಟರಮಟ್ಟಿಗೆ ಸಾಧ್ಯ ಅನ್ನುವುದನ್ನು ತಿಳಿದುಕೊಳ್ಳುವುದು ಅವರಿಗೆ ಮುಖ್ಯವಾಗಿತ್ತು. ಇದು ಅವರಿಗೆ ನ್ಯಾಯದ ಸಿದ್ಧಾಂತವನ್ನು ಕಟ್ಟುವುದರ ಹಿಂದಿನ ಅತ್ಯಂತ ಮುಖ್ಯವಾದ ಉದ್ದೇಶವಾಗಿತ್ತು. ಇವು ಸಾಮಾಜಿಕ ಒಪ್ಪಂದ ಸಿದ್ಧಾಂತದ ಅಜೆಂಡ (ಕಾರ್ಯಸೂಚಿ)ಗಳಿಗಿಂತ ತುಂಬಾ ಭಿನ್ನವಾಗಿದ್ದವು.
ಇನ್ನು ೧೮ರಿಂದ ೧೯ನೇ ಶತಮಾನಕ್ಕೆ ಬಂದರೆ, ಜಾನ್ ಸ್ಟುವಾರ್ಟ್ ಮಿಲ್, ಕಾರ್ಲ್ ಮಾರ್ಕ್ಸ್ ಮುಂತಾದವರ ದೃಷ್ಟಿಕೋನ ಸಂಪೂರ್ಣವಾಗಿ ಬೇರೆಯಾಗಿತ್ತು. ಅನ್ಯಾಯಗಳನ್ನು ಗುರುತಿಸುವುದರಲ್ಲಿ ಅವರೆಲ್ಲರಿಗೂ ಆಳವಾದ ಕಾಳಜಿಯಿತ್ತು. ಆದರೆ ಅವರ ಚಿಂತನೆಗಳಲ್ಲಿ ತುಂಬಾ ವ್ಯತ್ಯಾಸವಿತ್ತು. ಯಾವೆಲ್ಲ ವಿಚಾರಗಳನ್ನು ಅನ್ಯಾಯ ಎಂದು ಪರಿಗಣಿಸಬೇಕು ಎನ್ನುವುದರ ಬಗ್ಗೆ ಅವರಲ್ಲಿ ಒಂದು ಸಹಮತವೂ ಇತ್ತು. ಈ ಅನ್ಯಾಯಗಳನ್ನು ತೊಡೆದು ಹಾಕಲು ಸಾಧ್ಯವೇ ಮತ್ತು ಎಷ್ಟರ ಮಟ್ಟಿಗೆ ಸಾಧ್ಯ ಎನ್ನುವ ಕಾರ್ಯಸೂಚಿ ನ್ಯಾಯ ಸಿದ್ಧಾಂತಕ್ಕೆ ಸೇರಿಕೊಂಡಿತು. ಇದು ಸಾಮಾಜಿಕ ಒಪ್ಪಂದದ ಸಿದ್ದಾಂತದ ಅಜೆಂಡಾಗಿಂತ ಭಿನ್ನವಾಗಿತ್ತು. ಈ ಪರ್ಯಾಯ ದೃಷ್ಟಿಕೋನವು ರಾಲ್ಸ್‌ನಂತೆ ಒಂದು ಪರಿಪೂರ್ಣವಾದ ನ್ಯಾಯಯುತ ಸಮಾಜ ಹೇಗಿರುತ್ತದೆ ಎಂಬ ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತಿರಲಿಲ್ಲ. ಬದಲಾಗಿ ಪರಿಹರಿಸಬಹುದಾದ ಅನ್ಯಾಯಗಳು ಯಾವುವು ಮತ್ತು ಅವುಗಳನ್ನು ಸುಮರಾಗಿ ಎಲ್ಲರೂ ಒಪ್ಪಿಕೊಳ್ಳುವಂತೆ ಹೇಗೆ ಪರಿಹರಿಸಬಹುದು ಎನ್ನುವುದು ಅವರಿಗೆ ಮುಖ್ಯವಾಗಿತ್ತು.
ಸಾಮಾಜಿಕ ಒಪ್ಪಂದ ಸಿದ್ಧಾಂತಕ್ಕೆ ಹಲವು ಮಿತಿಗಳಿದ್ದವು. ಅದರಲ್ಲಿ ಒಂದು ಮಿತಿಯನ್ನು ಗಮನಿಸೋಣ. ಸಾಮಾಜಿಕ ಒಪ್ಪಂದ ಸಿದ್ದಾಂತದ ಪ್ರಕಾರ ಎಲ್ಲರೂ ಒಂದಿಷ್ಟು ನಿರ್ದಿಷ್ಟ ನ್ಯಾಯ ತತ್ತ್ವಗಳ ಸಮೂಹವನ್ನು ಒಪ್ಪಿಕೊಳ್ಳುತ್ತಾರೆ. ಅವುಗಳ ಆದ್ಯತೆಗಳ ಬಗ್ಗೆ ಸರಿಯಾಗಿ ಯೋಚಿಸುವ ಎಲ್ಲಾ ಜನರಲ್ಲಿಯೂ ಒಂದು ಸಹಮತವಿರುತ್ತದೆ ಎಂದು ಅದು ನಂಬಿತ್ತು. ವಾಸ್ತವದಲ್ಲಿ ಹೀಗೆ ನಂಬಿಕೊಳ್ಳುವುದಕ್ಕ್ಕೆ ಯಾವ ಸಮರ್ಥನೆಯೂ ಇಲ್ಲ. ಅದು ಸಂಭವನೀಯವೂ ಅಲ್ಲ. ಆದರೆ ಸಾಮಾಜಿಕ ಸಂಸ್ಥೆಗಳು ಹೊಂದಿರಬೇಕಾದ ಹಲವು ಆದರ್ಶಗಳನ್ನು ಪಟ್ಟಿಮಾಡುವುದು ಸಾಮಾಜಿಕ ಒಪ್ಪಂದ ಸಿದ್ಧಾಂತದ ಮುಖ್ಯ ಉದ್ದೇಶವಾಗಿರುವುದರಿಂದ ಹೀಗೆ ಭಾವಿಸಿಕೊಳ್ಳುವುದು ಅದಕ್ಕೆ ತೀರಾ ಅವಶ್ಯಕವಾಗಿತ್ತು. ಭಿನ್ನಾಭಿಪ್ರಾಯಗಳು ಸ್ವಾಭಾವಿಕೆ. ಅವನ್ನು ನಿರ್ಲಕ್ಷಿಸುವುದು ಸಮರ್ಥಿನೀಯವಲ್ಲ. ಆದರೂ ಹಾಗೆ ಮಾಡುವುದು ಅದಕ್ಕೆ ಅನಿವಾರ್ಯವಾಗಿತ್ತು. ಅದಕ್ಕೆ ಎಲ್ಲರಲ್ಲೂ ಒಮ್ಮತವಿದೆ ಎಂದು ಭಾವಿಸಿಕೊಳ್ಳುವ ತುರ್ತಿತ್ತು.
ಹೆಚ್ಚಿನ ಸಮಕಾಲೀನ ನ್ಯಾಯ ಸಿದ್ಧಾಂತಗಳಲ್ಲಿ ನಾವು ಮೇಲೆ ಚರ್ಚಿಸಿರುವಂತಹ ಪೆಡಸುತನ ಕಂಡುಬರುತ್ತದೆ. ಆದರೆ ಇದಕ್ಕೆ ಪರ್ಯಾಯವಾಗಿ ರೂಪುಗೊಂಡಿರುವ ಸಾಮಾಜಿಕ ಆಯ್ಕೆ ಸಿದ್ಧಾಂತದಲ್ಲಿ ಹೀಗಾಗುವುದಿಲ್ಲ. ಅಲ್ಲಿ ಪರಸ್ಪರ ಸಹಮತವಿಲ್ಲದ ಹಲವು ತತ್ವಗಳು ಒಟ್ಟಿಗೆ ಇರುವುದಕ್ಕೆ ಅವಕಾಶವಿದೆ. ಅವುಗಳನ್ನೆಲ್ಲಾ ವಿಮರ್ಶಾತ್ಮಕವಾಗಿ ಪರಿಶೀಲಿಸಿ ಅವುಗಳಿಗೆ ಒಂದು ಸ್ಥಾನವನ್ನು ಕಲ್ಪಿಸಲಾಗಿರುತ್ತದೆ. ಹೀಗೆ ಗಮನಕ್ಕೆ ಬರುವ ಎಲ್ಲ ತತ್ತ್ವಗಳನ್ನೂ ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕಾದದ್ದು ತುಂಬಾ ಮುಖ್ಯ. ಸೂಕ್ತ ಅಧಾರವಿಲ್ಲದ ಕೆಲವನ್ನು ತಿರಸ್ಕರಿಸಬಹುದು. ವಿಭಿನ್ನ ಆದ್ಯತೆಗಳನ್ನು ಇಟ್ಟುಕೊಂಡಿರುವ, ವಿಭಿನ್ನ ನಿಲುವಿರುವ ಹಲವು ತತ್ತ್ವಗಳು ಉಳಿದುಕೊಳ್ಳುವ ಸಾಧ್ಯತೆಯಿದೆ. ಅವಕ್ಕೆ ವೈಚಾರಿಕ ಸಮರ್ಥನೆ ಇರಬೇಕು ಅಷ್ಟೆ.
ಜನರಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ತೊಡೆದುಹಾಕಿಬಿಟ್ಟರೆ ಸಾಕು. ಎಲ್ಲರೂ ಒಂದು ನಿಷ್ಪಕ್ಷಪಾತ ಚಿಂತನಾಕ್ರಮ ಸಾಧ್ಯ ಎಂದು ಒಪ್ಪಿಕೊಂಡುಬಿಡುತ್ತಾರೆ ಎಂದು ಭಾವಿಸುವುದು ಬೋಳೆತನ ಎಂದು ನನಗನ್ನಿಸುತ್ತದೆ. ಸ್ವಹಿತಾಸಕ್ತಿಗಳು ನಮ್ಮ ತೀರ್ಮಾನವನ್ನು ಪ್ರಭಾವಿಸುವುದು ನಿಂತ ಕೂಡಲೆ ಜನ ತಮ್ಮಷ್ಟಕ್ಕೆ ತಾವೇ ಸಮಾಜದ ಮೂಲಭೂತ ಸಂಸ್ಥೆಗಳನ್ನು ಕಟ್ಟುವುದಕ್ಕೆ ಸಂಬಂಧಿಸಿದ ಕೆಲವು ನಿರ್ದಿಷ್ಟ ನಿಯಮಗಳು ಅಥವಾ ತತ್ತ್ವಗಳನ್ನು ಒಪ್ಪಿಕೊಂಡುಬಿಡುತ್ತಾರೆ. ನಂತರ ಮೂಲಭೂತ ವ್ಯವಸ್ಥೆಯನ್ನು ಕಟ್ಟುವ ಕೆಲಸ ಮುಂದುವರಿಯುತ್ತದೆ ಎಂದು ಭಾವಿಸುವುದು ನನಗೆ ಬಾಲಿಶವೆನಿಸುತ್ತದೆ.
ನಿಜ, ನಮ್ಮ ವೈಯಕ್ತಿಕ ಹಿತಾಸಕ್ತಿಗಳ ಕಾರಣದಿಂದಾಗಿ ನಾವು ಎಷ್ಟೊ ವಿಚಾರಗಳನ್ನು ಒಪ್ಪುವುದಿಲ್ಲ. ಇದು ಕಾಂಟ್ ಮತ್ತು ಆಡಂ ಸ್ಮಿತ್ ಅವರ ವಿಷಯದಲ್ಲೂ ನಿಜ. ಅದರೆ ನಮ್ಮ ಭಿನ್ನಾಭಿಪ್ರಾಯಕ್ಕೆ ವೈಯಕ್ತಿಕ ಆಸಕ್ತಿಗಳಷ್ಟೇ ಕಾರಣವಲ್ಲ. ನಮ್ಮ ವಿಭಿನ್ನ ದೃಷ್ಟಿಕೋನಗಳಿಂದಾಗಿಯೂ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತವೆ. ಅವು ನಿಷ್ಪಕ್ಷಪಾತ ಚಿಂತನೆಯನ್ನು ಕುರಿತ ನಮ್ಮ ಗ್ರಹಿಕೆಯನ್ನು ಪ್ರಭಾವಿಸುತ್ತವೆ.
ಈಗ ಒಂದು ಉದಾಹರಣೆಯನ್ನು ಇಟ್ಟುಕೊಂಡು ನ್ಯಾಯದ ಪರಿಕಲ್ಪನೆಯನ್ನು ಚರ್ಚಿಸುತ್ತೇನೆ. ಒಂದು ಕೊಳಲಿಗಾಗಿ ಮೂರು ಮಕ್ಕಳು ಪೈಪೋಟಿ ನಡೆಸುತ್ತಿದ್ದಾರೆ. ಆ ಸಂದರ್ಭದಲ್ಲಿ ನಾವು ನ್ಯಾಯ ತೀರ್ಮಾನ ಮಾಡಬೇಕು. ಆ ಮೂವರಲ್ಲಿ ಮೊದಲನೆಯವಳ ಹೆಸರು ’ಎ’ ಅಂದರೆ ಆನ್ ಅಂತ ಇಟ್ಟುಕೊಳ್ಳೋಣ. ಆ ಕೊಳಲು ತನಗೇ ಸೇರಬೇಕು ಎಂದು ಆಕೆ ವಾದಿಸುತ್ತಾಳೆ. ಏಕೆಂದರೆ ಮೂವರಲ್ಲಿ ಆಕೆಗಷ್ಟೇ ಕೊಳಲು ನುಡಿಸುವುದಕ್ಕೆ ಬರುವುದು. ಇದನ್ನು ಉಳಿದಿಬ್ಬರೂ ಒಪ್ಪಿಕೊಳ್ಳುತ್ತಾರೆ. ಇದಿಷ್ಟೇ ಮಾಹಿತಿ ಆಧರಿಸಿ ನೀವು ತೀರ್ಮಾನ ತೆಗೆದುಕೊಳ್ಳಬೇಕಾದರೆ ನೀವು ಸಲೀಸಾಗಿ ಕೊಳಲನ್ನು ’ಎ’ ಗೆ ಕೊಟ್ಟುಬಿಡುತ್ತೀರಿ. ಇನ್ನೊಂದು ಸನ್ನಿವೇಶವನ್ನು ಗಮನಿಸೋಣ. ಈಗ ’ಬಿ’ ಮೊದಲು ಮಾತನಾಡುತ್ತಾಳೆ. ಆಕೆಯ ಹೆಸರು ಬಾಬ್ ಅಂತ ಇಟ್ಟುಕೊಳ್ಳೋಣ. ಆಕೆ ತಾನು ತುಂಬಾ ಬಡವಳು ಮತ್ತು ತನ್ನ ಬಳಿ ಆಡಲು ಯಾವುದೇ ಆಟಿಕೆಗಳಿಲ್ಲ. ಆದರೆ ಆನ್ ಮತ್ತು ಕಾರ‍್ಲಾ ಬಳಿ ತುಂಬಾ ಆಟಿಕೆಗಳಿವೆ. ಹಾಗಾಗಿ ಈ ಕೊಳಲು ಸಿಕ್ಕರೆ ತನಗೆ ಆಟವಾಡಲು ಒಂದು ಆಟಿಕೆ ಸಿಕ್ಕಂತಾಗುತ್ತದೆ ಎನ್ನುತ್ತಾಳೆ. ಇದಿಷ್ಟೇ ನಿಮಗೆ ಲಭ್ಯವಿರುವ ಮಾಹಿತಿಯಾದರೆ ನೀವು ಕೊಳಲನ್ನು ಬಾಬ್‌ಗೆ ಕೊಡಬೇಕು ಎಂದು ವಾದಿಸುತ್ತೀರಿ. ಇನ್ನು ಮೂರನೆಯ ಪರ್ಯಾಯ ದೃಶ್ಯದಲ್ಲಿ ಮೊದಲು ’ಸಿ’ ಅಂದರೆ ಕಾರ‍್ಲಾ ಮಾತನಾಡುತ್ತಾಳೆ. ಈ ಕೊಳಲನ್ನು ತಯಾರಿಸಲು ಅವಳು ಹಲವು ದಿನಗಳಿಂದ ತುಂಬಾ ಕಷ್ಟಪಟ್ಟಿದ್ದಾಳೆ. ಆನ್ ಮತ್ತು ಬಾಬ್ ಅಲ್ಲಿಗೆ ಬರುವ ಕೆಲವೇ ಕ್ಷಣಗಳ ಮೊದಲು ಅವಳು ಅದನ್ನು ಪೂರ್ಣಗೊಳಿಸಿದ್ದಾಳೆ. ಈಗ ಆನ್ ಮತ್ತು ಬಾಬ್ ಅದನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ತಾನು ಒಪ್ಪುವುದಿಲ್ಲ ಎನ್ನುತ್ತಾಳೆ. ಆ ಕೊಳಲನ್ನು ತಯಾರಿಸಿದ್ದೇ ಅವಳು ಮತ್ತು ಅವರು ಅವಳಿಂದ ಅದನ್ನು ಕಸಿಯಲು ಪ್ರಯತ್ನಿಸುತ್ತಿದ್ದಾರೆ. ಅದನ್ನು ಅವಳಿಗೇ ಕೊಡಬೇಕು ಎಂದು ಹೇಳಲು ನಿಮ್ಮ ಬಳಿ ಬಲವಾದ ಸಮರ್ಥನೆಯಿದೆ. ಜೊತೆಗೆ ರಾಜಕೀಯವಾಗಿ ಮತ್ತು ಕಾನೂನಿನ ದೃಷ್ಟಿಯಿಂದ ಸರಿ. ಆದರೆ ನೈತಿಕವಾಗಿ ಮತ್ತು ರಾಜಕೀಯ ದರ್ಶನದ ದೃಷ್ಟಿಯಿಂದ ನಾವೇನು ಮಾಡುತ್ತೇವೆ ಎನ್ನುವುದು ಬಹಳ ಮುಖ್ಯವಾದ ಪ್ರಶ್ನೆ. ಯಾರ ಬೇಡಿಕೆಯನ್ನೂ ತಕ್ಷಣವೇ ತಳ್ಳಿಹಾಕಲು ಸಾಧ್ಯವಿಲ್ಲ.
ಒಬ್ಬ ನ್ಯಾಯಪರನಾದ ತೀರ್ಪುಗಾರ ಪೋಟಿಯಲ್ಲಿರುವ ಮೂರು ಮಂದಿಯ ಬೇಡಿಕೆಯನ್ನೂ ಅಳೆದು ನೋಡಬೇಕು. ಸುಮ್ಮನೆ ಯಾಂತ್ರಿಕವಾಗಿ ಯಾವುದೋ ಒಂದು ತತ್ತ್ವಕ್ಕೆ ಆದ್ಯತೆ ನೀಡಿ ಉಳಿದೆರಡನ್ನು ತಿರಸ್ಕರಿಸುವುದಕ್ಕೆ ಸಾಧ್ಯವಿಲ್ಲ. ವಾಸ್ತವ ಪರಿಸ್ಥಿತಿಯನ್ನು ಹಾಗೂ ಅದರ ತೀವ್ರತೆಯನ್ನು ಪರಿಗಣಸಿದ ಮೇಲೆ ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಕೆಲವು ಸನ್ನಿವೇಶಗಳಲ್ಲಿ ಹಲವು ವಿಭಿನ್ನ ಅಭಿಪ್ರಾಯಗಳ ನಡುವೆಯೂ ಒಂದು ತೀರ್ಮಾನಕ್ಕೆ ಬರುವುದಕ್ಕೆ ಕಷ್ಟವಾಗುವುದಿಲ್ಲ. ಆದರೆ ಕೆಲವು ಸನ್ನಿವೇಶದಲ್ಲಿ ಅದು ದೊಡ್ಡ ಸವಾಲಿನ ವಿಷಯವಾಗಬಹುದು.
ಈಗಷ್ಟೇ ಚರ್ಚಿಸಿದ ಕೊಳಲು ಹಾಗೂ ಮೂರು ಮಕ್ಕಳ ಸನ್ನಿವೇಶದಲ್ಲಿ ಯಾವುದು ನ್ಯಾಯಯುತ ಎಂದು ನಿರ್ಧರಿಸುವುದು ಒಂದು ಸವಾಲಿನ ವಿಷಯವಾಗಿದೆ. ಆದರೆ ವಿಭಿನ್ನ ಅಭಿಪ್ರಾಯಗಳನ್ನು ಒಪ್ಪಿಕೊಂಡ ಮಾತ್ರಕ್ಕೆ ಬಿಕ್ಕಟ್ಟು ಉಂಟಾಗುತ್ತದೆ ಎಂದೇನು ಭಾವಿಸಬೇಕಾಗಿಲ್ಲ. ಈ ಮೂರು ಮಕ್ಕಳ ಉದಾಹರಣೆಯಲ್ಲಿ ಕೊಳಲನ್ನು ಮಾಡಿದ ಹುಡುಗಿ ಕವಿಯತ್ರಿಯೂ ಆಗಿರಬಹುದು ಅಥವಾ ಅವಳಿಗಷ್ಟೇ ಕೊಳಲು ನುಡಿಸುವುದಕ್ಕೆ ಬರಬಹುದು. ಅಥವಾ ಬಾಬ್ ತೀರಾ ಬಡತನದಲ್ಲಿದ್ದು ಆತನಿಗೆ ಸಹನೀಯವಾಗಿ ಬದುಕಲು ಒಂದು ಆಟಿಕೆ ಅನಿವಾರ್ಯವಾಗಿ ಬೇಕಾಗಿರಬಹುದು. ನ್ಯಾಯದ ತೀರ್ಮಾನದಲ್ಲಿ ಬಡತನದ ಮುಂದೆ ಉಳಿದ ವಾದಗಳು ಗೌಣವಾಗುತ್ತವೆ.
ಕೆಲವು ಸನ್ನಿವೇಶಗಳಲ್ಲಿ ವಿಭಿನ್ನ ಚಿಂತನೆಗಳಿದ್ದೂ ಮತ್ತು ಅವುಗಳ ಕಾಳಜಿ ಬೇರೆಯಾಗಿದ್ದಾಗಲೂ ಪರಸ್ಪರ ಒಮ್ಮತದ ನಿರ್ಧಾರ ಸಾಧ್ಯವಾಗಬಹುದು. ಅಂದರೆ ವಿಭಿನ್ನ ವ್ಯಕ್ತಿಗಳಿಂದ ಅಥವಾ ಒಬ್ಬನೇ ವ್ಯಕ್ತಿಯಿಂದ ಸೂಚಿಸಲ್ಪಡುವ ವಿಭಿನ್ನ ನಿಷ್ಪಕ್ಷಪಾತ ತೀರ್ಮಾನಗಳನ್ನು ಕುರಿತಂತೆಯೂ ಸಹಮತ ಸಾಧ್ಯ. ಈ ಮಕ್ಕಳ ನಿದರ್ಶನದಲ್ಲಿ ನಾನು ಕೂಡ ಮೂರು ನಂಬಿಕೆಗಳನ್ನೂ ಪುರಸ್ಕರಿಸುತ್ತೇನೆ. ಬಡತನ ನಿವಾರಣೆ ತುಂಬಾ ಮುಖ್ಯ ಅನ್ನುವುದನ್ನು ನಂಬುತ್ತೇನೆ. ಜೊತೆಗೆ ಜನ ಏನನ್ನಾದರೂ ಸಾಧಿಸುವ ದೃಷ್ಟಿಯಿಂದ ಸಕ್ರಿಯವಾಗಿ ಇರಬೇಕಾದದ್ದೂ ಮುಖ್ಯ ಎಂಬುದನ್ನೂ ಒಪ್ಪುತ್ತೇನೆ. ಹಾಗೆಯೇ ವಸ್ತುಗಳು ಸದ್ಭಳಕೆಯಾಗಬೇಕು ಅನ್ನುವ ಕಾರಣದಿಂದ ಒಂದು ವಸ್ತುವನ್ನು ಸರಿಯಾಗಿ ಬಳಸಿಕೊಳ್ಳುವರಿಗೆ ಸೇರಬೇಕೆಂಬುದನ್ನು ಒಪ್ಪಿಕೊಳ್ಳುತ್ತೇನೆ.
ಸ್ವಾತಂತ್ರ್ಯವಾದಿ ಸಿದ್ಧಾಂತಿಗಳಿಗೆ (ಲಿಬರ‍್ಟೇರಿಯನ್‌ಗೆ) ವಾಸ್ತವದಲ್ಲಿ ಮಾರ್ಕ್ಸ್‌ವಾದಿಗಳೊಂದಿಗೆ, ಕಾರ್ಮಿಕರ ಹಕ್ಕು ಪ್ರತಿಪಾದಕರೊಂದಿಗೆ ಹಲವು ವಿಷಯದಲ್ಲಿ ಭಿನ್ನಾಭಿಪ್ರಾಯವಿದ್ದರೂ ಕೊಳಲನ್ನು ತಯಾರಿಸಿದವರಿಗೇ ಕೊಡಬೇಕು ಅನ್ನುವುದರಲ್ಲಿ ಅಂತಹ ಸಮಸ್ಯೆಯೇನಿಲ್ಲ. ಆದರೆ ಸ್ವತಃ ಮಾರ್ಕ್ಸ್‌ಗೇ ಈ ಬಗ್ಗೆ ಸಮಸ್ಯೆಯಿತ್ತು. ೧೮೭೫ರಲ್ಲಿ ಮಾರ್ಕ್ಸ್ ತನ್ನ ಕೊನೆಯ ಬರಹ ಇನ್ ದ ಕ್ರಿಟೀಕ್ ಆಫ್ ಗೋಥಾ ಪ್ರೋಗ್ರಾಂ ಪ್ರಕಟಿಸಿದ. ಅದರಲ್ಲಿ ಮಾರ್ಕ್ಸ್ ಶ್ರಮವನ್ನು ಆಧರಿಸಿದ ಹಕ್ಕು ಹಾಗೂ ಅವಶ್ಯಕತೆಯನ್ನು ಆಧರಿಸಿದ ಹಕ್ಕು ಎರಡೂ ಬೇರೆ ಅನ್ನುತ್ತಾನೆ. ಅಂತಿಮವಾಗಿ ಅವಶ್ಯಕತೆಯನ್ನು ಆಧರಿಸಿದ ಹಕ್ಕಿನ ಬೇಡಿಕೆಗೆ ಆದ್ಯತೆ ನೀಡಬೇಕು ಎನ್ನುತ್ತಾನೆ. ಎರಡು ಹಕ್ಕುಗಳ ನಡುವಿನ ಬೇಧವನ್ನು ಕಾರ್ಮಿಕ ಪಕ್ಷ ಗಮನಿಸುವುದಿಲ್ಲ ಎಂದು ಅವನು ಟೀಕಿಸುತ್ತಾನೆ. ನ್ಯಾಯದ ಪರಿಕಲ್ಪನೆಯಲ್ಲಿ ಕೆಲವೊಮ್ಮೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭಗಳೂ ಎದುರಾಗುತ್ತವೆ. ಕೆಲವು ಸಮಸ್ಯೆಗಳಿಗೆ ಸುಲಭವಾದ ಪರಿಹಾರ ಸಿಕ್ಕಿಬಿಡುತ್ತವೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಕಠಿಣವಾಗಿರುತ್ತವೆ.
ವಿಶ್ಲೇಷಿಸುವ ಉದ್ದೇಶದಿಂದ ಇಲ್ಲಿರುವ ಮೂಲಭೂತ ವಿಷಯ ತುಂಬಾ ಸರಳ. ಒಂದು ಸಂಪೂರ್ಣವಾದ ನ್ಯಾಯ ಸಿದ್ಧಾಂತವು ಒಂದು ನಿರ್ಧಾರಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ಪರ್ಯಾಯ ಮಾರ್ಗಗಳ ಮೌಲ್ಯವನ್ನು ನಿಷ್ಕರ್ಷೆಮಾಡಬೇಕು. ಆದರೆ ಎಲ್ಲಾ ಪರ್ಯಾಯಗಳನ್ನು ಕುರಿತು ನಿರ್ಧಾರ ತೆಗೆದುಕೊಳ್ಳದೇ ಇರಬಹುದು. ಅದು ಕೆಲವು ಸಾಧ್ಯತೆಗಳ ಬಗ್ಗೆ ಯಾವುದೇ ಸಂದಿಗ್ಧಗಳಿಲ್ಲದೆ ನಿರ್ಧಾರಗಳನ್ನು ತಿಳಿಸುತ್ತದೆ. ಆದರೆ ಉಳಿದ ವಿಷಯಗಳಲ್ಲಿ ಅದು ಏನೂ ಹೇಳದೇ ಇರಬಹುದು. ಹಾಗಾಗಿ ಕೆಲವು ಸಾಧ್ಯತೆಗಳ ಆದ್ಯತೆಯನ್ನು ನಿರ್ಧರಿಸುವುದಕ್ಕೆ ನೆರವಾಯಿತು ಅನ್ನುವ ಕಾರಣಕ್ಕೆ ಒಂದು ಸಿದ್ದಾಂತವಾಗಬೇಕಾಗಿಲ್ಲ. ಕಾಂಡರ್‌ಸೆಟ್ ಹಾಗೂ ಆಡಂ ಸ್ಮಿತ್ ಗುಲಾಮಗಿರಿಯನ್ನು ನಿರ್ಮೂಲನ ಮಾಡುವುದರಿಂದ ಸಮಾಜದಲ್ಲಿ ಅನ್ಯಾಯ ಕಡಿಮೆಯಾಗುತ್ತದೆ ಎಂದು ವಾದಿಸಿದರು. ಅಂದರೆ ಗುಲಾಮಗಿರಿ ಇಲ್ಲದ ಜಗತ್ತು ಗುಲಾಮಗಿರಿ ಇರುವ ಜಗತ್ತಿಗಿಂತ ಉತ್ತಮ ಎಂದು ಶ್ರೇಣೀಕರಿಸಲು ಸಾಧ್ಯ ಎಂದು ನಿರ್ಧರಿಸಬಹುದು. ಗುಲಾಮಗಿರಿ ಇಲ್ಲದ ಜಗತ್ತಿನ ನ್ಯಾಯ ಹೆಚ್ಚು ಉತ್ತಮವಾದದ್ದು ಎಂದಷ್ಟೇ ಅದು ಹೇಳುತ್ತದೆ. ಆದರೆ ಎಲ್ಲಾ ಸಾಮಾಜಿಕ ಸಂಸ್ಥೆಗಳು ಸೃಷ್ಟಿಸುವ ಎಲ್ಲಾ ಅನ್ಯಾಯಗಳ ವಿಷಯದಲ್ಲಿ ಆ ಸಿದ್ಧಾಂತ ಪರಿಹಾರವನ್ನು ಸೂಚಿಸುತ್ತಿಲ್ಲ. ಜಗತ್ತು ಎದುರಿಸುವ ಉಳಿದ ಎಲ್ಲಾ ಆಯ್ಕೆಗಳನ್ನು ಕುರಿತಂತೆ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳದೆ ಒಂದು ವ್ಯವಸ್ಥೆಯಾಗಿ ಗುಲಾಮಗಿರಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಎಲ್ಲಾ ಅನ್ಯಾಯಗಳನ್ನು ಪರಿಹರಿಸಬೇಕು. ಅದು ಸಾಧ್ಯವಾಗದೇ ಹೋದರೆ ಯಾವುದಕ್ಕೂ ಪರಿಹಾರ ಸಾಧ್ಯವಿಲ್ಲ ಅನ್ನುವಂತಹ ಜಗತ್ತಿನಲ್ಲಿ ನಾವಿಲ್ಲ. ಕೆಲವು ಅನ್ಯಾಯಗಳನ್ನು ಪರಿಹರಿಸಿ ಮನುಷ್ಯನ ಬದುಕನ್ನು ಸುಧಾರಿಸಬಹುದು. ಇದು ನನ್ನ ಐಡಿಯಾ ಆಫ್ ಜಸ್ಟಿಸ್‌ನಲ್ಲಿ ಪ್ರತಿಪಾದಿಸುತ್ತಿರುವ ಸಿದ್ಧಾಂತಕ್ಕೂ ಸಾಮಾಜಿಕ ಒಪ್ಪಂದ ಹಾಗೂ ರಾಲ್ಸ್‌ನ ಜಸ್ಟಿಸ್ ಆಸ್ ಫೇರನೆಸ್ ಸಿದ್ದಾಂತಗಳಿಗೂ ಇರುವ ಮೊದಲ ವ್ಯತ್ಯಾಸ. ನಮ್ಮ ನಡುವೆ ಇರುವ ಮೊದಲ ಮಹತ್ವದ ವ್ಯತ್ಯಾಸವೆಂದರೆ ನಾವು ಬಯಸುವಂಥದ್ದು ಮಾತ್ರ ಇರುವ ಮತ್ತು ನಮಗೆ ಇಷ್ಟವಿಲ್ಲದ್ದು ಇಲ್ಲದಿರುವ ಜಗತ್ತಿನಲ್ಲಿ ನಾವು ಬದುಕುತ್ತಿಲ್ಲ ಎನ್ನುವುದು.
ಜಾನ್ ರಾಲ್ಸ್ ಒಬ್ಬ ಗೆಳೆಯರಾಗಿ ಮತ್ತು ಒಬ್ಬ ಗುರುವಾಗಿ ನನ್ನನ್ನು ಅನನ್ಯವಾಗಿ ಪ್ರಭಾವಿಸಿದ್ದಾರೆ. ಅವರಿಂದ ನಾನು ತುಂಬಾ ಕಲಿತಿದ್ದೇನೆ. ಆದರೆ ಸಾಂಪ್ರದಾಯಿಕ ಅರ್ಥದಲ್ಲಿ ಅವರು ನನ್ನ ಗುರುವಾಗಿರಲಿಲ್ಲ. ನಾನು ಅವರೊಂದಿಗೆ ತರಗತಿಗಳನ್ನು ತೆಗೆದುಕೊಂಡಿದ್ದೇನೆ. ಅವರಿಗೆ ನನ್ನ ಈ ನಿಲುವಿನೊಂದಿಗೆ ಸಹಮತವಿಲ್ಲ. ಅದರೂ ನನ್ನ ಪುಸ್ತಕವನ್ನು ನಾನು ಅವರಿಗೆ ಅರ್ಪಿಸಿದ್ದೇನೆ. ನಾನು ಈ ಪುಸ್ತಕವನ್ನು ಮುಗಿಸಲೇಬೇಕೆಂದು ರಾಲ್ಸ್ ತುಂಬಾ ಕಾತುರರಾಗಿದ್ದರು. ಅದಕ್ಕಾಗಿ ಅವರಷ್ಟು ನನ್ನನ್ನು ಉತ್ತೇಜಿಸಿದವರು ಮತ್ಯಾರಿಲ್ಲ. ನಾನು ಈ ವಿಷಯದ ಬಗ್ಗೆ ಈಗಾಗಲೇ ಏಳೆಂಟು ಲೇಖನಗಳನ್ನು ಜರ್ನಲ್ ಆಫ್ ಫಿಲಾಸಫಿಯಲ್ಲಿ ಪ್ರಕಟಿಸಿದ್ದೆ. ಹಾಗಾಗಿ ನಾನು ಅವರನ್ನು ವಿಮರ್ಶಾತ್ಮಕವಾಗಿ ನೋಡುತ್ತೇನೆಂಬುದು ಅವರಿಗೆ ತಿಳಿದಿತ್ತು. ನನ್ನ ಪುಸ್ತಕದ ಬಗ್ಗೆ ಅವರಿಗೆ ಯಾವ ಭ್ರಮೆಗಳೂ ಇರಲಿಲ್ಲ. ಹಾಗಿದ್ದಾಗ್ಯೂ ತತ್ತ್ವಶಾಸ್ತ್ರದ ಲೇಖನಗಳ ಸಂಗ್ರಹ ತರಬೇಡ. ಆ ಲೇಖನಗಳಲ್ಲಿ ನೀನು ಒಬ್ಬ ಅರ್ಥಶಾಸ್ತ್ರಜ್ಞನ ರೀತಿಯಲ್ಲಿ ಮಾತನಾಡಿದ್ದೀಯ. ಅದು ತತ್ತ್ವಶಾಸ್ತ್ರವನ್ನು ಕುರಿತು ಮಾತನಾಡಲು ಸೂಕ್ತವಾದ ಕ್ರಮವಲ್ಲ. ಅದರಿಂದ ಅಂತಹ ಪ್ರಯೋಜನವಿಲ್ಲ. ನೀನು ಹೆಚ್ಚು ಸುಸಂಗತವಾದ ಒಂದು ಪುಸ್ತಕವನ್ನು ಬರೆಯಬೇಕು ಎನ್ನುವ ಹೆಚ್ಚು ಉಪಯುಕ್ರವಾದ ಸಲಹೆ ನೀಡಿದ್ದರು.
ನ್ಯಾಯಕ್ಕೆ ಸಂಬಂಧಿಸಿದಂತೆ ಹಲವು ತತ್ತ್ವಗಳು ಚಾಲ್ತಿಯಲ್ಲಿವೆ. ಹಾಗಾಗಿ ನ್ಯಾಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೂ ನ್ಯಾಯವನ್ನು ಆಧರಿಸಿಯೇ ಪರಿಹಾರ ಕಂಡುಕೊಳ್ಳಲು ನಮಗೆ ಸಾಧ್ಯವಿಲ್ಲ. ಉದಾಹರಣೆಗೆ ಮೇಲಿನ ಸ್ತರದವರಿಗೆ ೪೦% ತೆರಿಗೆ ಹಾಕುವುದಕ್ಕಿಂತ ೩೫% ತೆರಿಗೆ ಹಾಕುವುದು ಹೆಚ್ಚು ನ್ಯಾಯಯುತವಾ? ಕೇವಲ ನ್ಯಾಯವನ್ನು ಆಧರಿಸಿಯೇ ಇದಕ್ಕೆ ಉತ್ತರವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಿದ್ದಾಗ್ಯೂ ನಾವು ಜೀವಿಸುತ್ತಿರುವ ಈ ಜಗತ್ತಿನಲ್ಲಿ ಕೆಲವು ಸೂಚಿಗಳನ್ನು ಸ್ಪಷ್ಟವಾಗಿ ಅನ್ಯಾಯ ಎಂದು ಗುರುತಿಸಬಹುದು. ಉದಾಹರಣೆಗೆ ೧೮ನೇ ಶತಮಾನದಲ್ಲಿ ಗುಲಾಮಗಿರಿ, ಮಹಿಳೆಯರ ತೀವ್ರ ದಮನ, ಅಥವಾ ಅಸಹಾಯಕರಾಗಿರುವ ಕಾರ್ಮಿಕರ ಶೋಷಣೆ, ಅಥವಾ ಈ ಜಗತ್ತಿನ ಜನರನ್ನು ಕುರಿತು ವೈದ್ಯಕೀಯ ಕ್ಷೇತ್ರ ತೋರುತ್ತಿರುವ ನಿರ್ಲಕ್ಷ್ಯ, ಮತ್ತು ಆಫ್ರಿಕಾ ಹಾಗೂ ಏಷ್ಯಾದ ಹಲವು ಭಾಗಗಳಲ್ಲಿ ಜನರು ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗಿರುವುದು ಅಥವಾ ಅಮೇರಿಕೆಯ ಹಲವು ಭಾಗಗಳು ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಸಾರ್ವತ್ರಿಕ ಆರೋಗ್ಯ ವಿಮೆಯ ಸೌಲಭ್ಯ ಇಲ್ಲದಿರುವುದು (ಈಗ ಅಮೇರಿಕೆಯಲ್ಲಿ ಅದು ಬದಲಾಗುತ್ತಿರಬಹುದು), ಸಮಕಾಲೀನ ಜಗತ್ತಿನ ಹಲವೆಡೆ ಪ್ರಚಲಿತದಲ್ಲಿರುವ ಕ್ರೂರವಾದ ಹಿಂಸೆ, ಅಷ್ಟೇ ಅಲ್ಲ ಹಿಂಸೆಯ ನಿರಂತರ ಬಳಕೆ, ಕೆಲವೊಮ್ಮ ಜಾಗತಿಕ ವ್ಯವಸ್ಥೆಯ ಆಧಾರಸ್ತಂಬಗಳ ಎನಿಸಿಕೊಂಡಿರುವ ದೇಶಗಳೇ ಹೀಗೆ ಮಾಡುತ್ತಿರುವುದು, ಇತ್ಯಾದಿ. ಇಂತಹ ಸಮಸ್ಯೆಗಳನ್ನು ತೊಡೆದು ಹಾಕುವುದಕ್ಕೆ ಸಂಬಂಧಿಸಿದಂತೆ ತಾರ್ಕಿಕವಾಗಿ ಒಮ್ಮತಕ್ಕೆ ಬರಬಹುದು ಎಂದು ನನಗೆ ಗಾಢವಾಗಿ ಅನ್ನಿಸುತ್ತದೆ. ಇಂದು ಕ್ಷಾಮವನ್ನು ಸಂಪೂರ್ಣವಾಗಿ ತೊಡೆದುಹಾಕಲಾಗಿದೆ. ಅದು ನಿಜವಾಗಿಯೂ ಸಂಭ್ರಮಿಸಬೇಕಾದ ವಿಚಾರ. ಆದರೆ ಭಾರತದಲ್ಲಿ ಕ್ಷಾಮ ಇಲ್ಲದಿದ್ದರೂ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದ ಪರಿಪೂರ್ಣ ಬೆಳವಣಿಗೆಯನ್ನು ಕುಂಠಿತಗೊಳಿಸುವ, ನಿತ್ರಾಣಗೊಳಿಸುವ ಹಸಿವೆ ನಿರಂತರವಾಗಿ ಇದೆ. ಮತ್ತು ಜನ ಅದನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದಾರೆ. ಹಸಿವನ್ನು ತೊಡೆದು ಹಾಕುವುದಕ್ಕೆ ಸಂಬಂಧಿಸಿದಂತೆ ವೈಚಾರಿಕವಾಗಿ ಒಂದು ಒಮ್ಮತಕ್ಕೆ ಬರಬಹುದು ಎಂದು ನನಗನ್ನಿಸುತ್ತದೆ.
ನಾನು ಈ ತನಕ ಸಾರ್ವಜನಿಕವಾಗಿ ನ್ಯಾಯ ವಿತರಣೆಯನ್ನು ಕುರಿತು ಚರ್ಚಿಸುತ್ತಿದ್ದೆ. ಈಗ ಅದನ್ನು ಬಿಟ್ಟು ಮುಂದೆ ಹೋಗೋಣ. ಈಗ ಜನರ ಪಾಲ್ಗೊಳ್ಳುವಿಕೆಯ ಬಗ್ಗೆ ಗಮನಿಸೋಣ. ನ್ಯಾಯಕ್ಕಾಗಿನ ಒತ್ತಾಯವನ್ನು ಕುರಿತ ಸಾರ್ವಜನಿಕ ಚರ್ಚೆಯಲ್ಲಿ ಯಾರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು? ಸಾಮಾಜಿಕ ಒಪ್ಪಂದದ ಪರಂಪರೆಯಲ್ಲಿ ಈ ಸಾಮಾಜಿಕ ಒಪ್ಪಂದದಲ್ಲಿ ಭಾಗಿಗಳಾದವರ ಅಭಿಪ್ರಾಯವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಯಾಕೆಂದರೆ ಒಂದು ಸ್ವತಂತ್ರ ರಾಷ್ಟ್ರದೊಳಗಷ್ಟೇ ಸಾಮಾಜಿಕ ಒಪ್ಪಂದ ಜಾರಿಯಾಗುವುದಕ್ಕೆ ಸಾಧ್ಯ ಎಂದು ಈ ಸಿದ್ಧಾಂತ ಭಾವಿಸುತ್ತದೆ. ಇವುಗಳನ್ನು ಥಾಮಸ್ ಹಾಬ್ಸ್ ೧೭ನೇ ಶತಮಾನದಲ್ಲಿಯೇ ಪರಿಣಾಮಕಾರಿಯಾಗಿ ಗುರುತಿಸಿದ್ದನು. ನಂತರ ೧೮, ೧೯, ೨೦ ಮತ್ತು ಈಗ ೨೧ನೇ ಶತಮಾನದ ರಾಜಕೀಯ ದರ್ಶನಗಳಲ್ಲಿ ಇದನ್ನು ತೀವ್ರವಾಗಿ ಮುಂದುವರಿಸಿದ್ದಾನೆ. ಇದರಿಂದಾಗಿ ಸಾಮಾಜಿಕ ಒಪ್ಪಂದದ ಸಂಪ್ರದಾಯದಲ್ಲಿ ಚರ್ಚೆಯು ಒಂದು ನಿರ್ದಿಷ್ಟ ದೇಶದ ಪ್ರಜೆಗಳ ಅಥವಾ ಸದಸ್ಯರ ಅಭಿಪ್ರಾಯಕ್ಕಷ್ಟೇ ಸೀಮಿತವಾಗಿರುತ್ತದೆ. ಈ ಪ್ರಜೆಗಳು ಆ ನಿರ್ದಿಷ್ಟ ಸರ್ವತಂತ್ರ ಸ್ವತಂತ್ರ ರಾಷ್ಟ್ರದ ಮೌಲ್ಯಗಳಿಗೆ ಹೊಂದಿಕೆಯಾಗುವಂತಹ ಮಾದರಿ ಸಂಸ್ಥೆಗಳನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ತೊಡಗಿರುತ್ತಾರೆ. ರಾಲ್ಸ್ ತನ್ನ ನಂತರದ ಕೃತಿ ’ದ ಲಾಸ್ ಆಫ್ ಪೀಪಲ್ಸ್’ನಲ್ಲಿ ಜನರ ಕಾನೂನನ್ನು ಜಾರಿಗೊಳಿಸುವುದನ್ನು ಕುರಿತು ಪರಿಶೀಲಿಸುತ್ತಾನೆ. ಅಂದರೆ ದೇಶಗಳ ನಡುವಿನ ಸಂಬಂಧವನ್ನು ಕುರಿತು ಚಿಂತಿಸುತ್ತಾನೆ. ಅದರಲ್ಲಿ ಅವನು ನ್ಯಾಯದ ಪರಿಕಲ್ಪನೆಯನ್ನು ತರುವುದಿಲ್ಲ. ಕೇವಲ ಮಾನವತಾವಾದವನ್ನು ಕುರಿತು ಮಾತ್ರ ಮಾತನಾಡುತ್ತಾನೆ. ನ್ಯಾಯ ಎನ್ನುವುದು ದೇಶಕ್ಕೆ ಸಂಬಂಧಿಸಿದ್ದು. ಥಾಮಸ್ ನೆಗೆಲ್ ಕೂಡ ಇದನ್ನು ತನ್ನ ಲೇಖನದಲ್ಲಿ ನಿರೂಪಿಸುತ್ತಾನೆ. ಅದು ತುಂಬಾ ಉಲ್ಲೇಖಿತವಾಗಿರುವ ಲೇಖನ. ಇದು ನಾನು ಅವರೊಂದಿಗೆ ತರುತ್ತಿರುವ ಸ್ಮರಣ ಸಂಚಿಕೆಯಲ್ಲಿಯೂ ಸೇರ್ಪಡೆಯಾಗಿದೆ. ನ್ಯಾಯವನ್ನು ಕುರಿತಂತೆ ಪುಸ್ತಕವನ್ನು ನಾನು ರಚಿಸಲೇ ಬೇಕೆಂಬುದು ನನಗೆ ಮನದಟ್ಟಾಗಿದೆ. ಜಾಗತಿಕ ನ್ಯಾಯ ಎನ್ನುವುದು ಒಂದು ಮರೀಚಿಕೆ. ಅದೊಂದು ಭ್ರಮೆ. ಏಕೆಂದರೆ ಅದಕ್ಕೆ ಒಂದು ಸರ್ವತಂತ್ರ ಸ್ವತಂತ್ರ ರಾಷ್ಟ್ರ ಬೇಕು. ನಮ್ಮಲ್ಲಿ ಅಂತಹ ಸರ್ವತಂತ್ರ ಸ್ವತಂತ್ರ ರಾಷ್ಟ್ರವಿಲ್ಲ. ಇದು ಹಾಬ್ಸ್‌ನಲ್ಲಿ ಇರುವ ಒಂದು ವಿವಾದಾತ್ಮಕ ಅಂಶ. ಅದು ನೆಡ್, ಕಾಂಡರ್‌ಸೇ, ಮೇವೂಲ್ಫ್ ಅವರ ಅಭಿಪ್ರಾಯವಲ್ಲ. ಜಾಗತಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಒಕ್ಕೊರಲಿನ ದನಿಗಳು ಎಲ್ಲೆಡೆಯಿಂದ ಬರುತ್ತಿರುವಾಗ ಒಂದು ದೇಶದೊಳಗೆ ವಿಭಿನ್ನ ವರ್ಗಗಳ ನಡುವೆ ಯಾವುದಾದರೊಂದು ರೀತಿಯಲ್ಲಿ ನಿಷ್ಟಕ್ಷಪಾತತೆಯನ್ನು ನೆಲೆಗೊಳಿಸಬೇಕು. ನಿಷ್ಪಕ್ಷಪಾತತೆಯ ಕಲ್ಪನೆಯನ್ನು ಒಂದು ರಾಷ್ಟ್ರದ ಜನರಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುವುದನ್ನು ನಾನು ಪರಿಮಿತ ನಿಷ್ಪಕ್ಷಪಾತತೆ ಎಂದು ನನ್ನ ಪುಸ್ತಕದಲ್ಲಿ ಕರೆದಿದ್ದೇನೆ.
ಮೇಲೆ ಹೇಳಿರುವ ಪರಿಮಿತ ನಿಷ್ಪಕ್ಷಪಾತತೆಯ ನಿಲುವು ೨೫೦ ವರ್ಷಗಳಿಗಿಂತ ಹಿಂದೆ ೧೭೫೯ರಲ್ಲಿ ಆಡಂ ಸ್ಮಿತ್ ತನ್ನ ಥಿಯರಿ ಆಫ್ ಮಾರಲ್ ಸೆಂಟಿಮೆಂಟ್ಸ್ ಕೃತಿಯಲ್ಲಿ ವ್ಯಕ್ತಪಡಿಸಿರುವ ಮುಕ್ತ ನಿಷ್ಪಕ್ಷಪಾತತೆಯ ದೃಷ್ಟಿಕೋನಕ್ಕೆ ವ್ಯತಿರಿಕ್ತವಾಗಿದೆ. ಆಡಂ ಸ್ಮಿತ್‌ರನ್ನು ಅರ್ಥಶಾಸ್ತ್ರಜ್ಞರು ಮತ್ತು ತತ್ತ್ವಶಾಸ್ತ್ರಜ್ಞರು ಇಬ್ಬರೂ ಕಡೆಗಣಿಸಿದ್ದಾರೆ. ಈ ಕೃತಿಯಲ್ಲಿ ಮಾತ್ರವಲ್ಲ ಸ್ಮಿತ್ ತನ್ನ ದ ವೆಲ್ತ್ ಆಫ್ ನೇಷನ್ ಕೃತಿಯಲ್ಲಿ, ಲೆಕ್ಚರ‍್ಸ್ ಇನ್ ಜೂರಿಸ್ ಪ್ರೂಡೆನ್ಸ್, ಮುಂತಾದ ಬರಹಗಳಲ್ಲಿ ತಮ್ಮ ಸಮೀಪದಲ್ಲಿರುವ ಹಾಗೂ ದೂರದಲ್ಲಿರುವ ಎಲ್ಲರ ನಿಷ್ಪಕ್ಷಪಾತವಾದ ಅಭಿಪ್ರಾಯಗಳಿಗೆ ಗಮನ ಕೊಡಲು ಒಬ್ಬ ನಿಷ್ಪಕ್ಷಪಾತಿಯಾದ ಪ್ರೇಕ್ಷಕನ ಅವಶ್ಯಕತೆಯಿದೆ ಒಂದು ಒತ್ತಿ ಹೇಳುತ್ತಾನೆ. ಅದನ್ನು ನಾನು ಮುಕ್ತ ನಿಷ್ಪಕ್ಷಪಾತತೆ ಎಂದು ಕರೆಯುತ್ತೇನೆ. ವೈಚಾರಿಕತೆ ಎಲ್ಲೆಡೆಯಿಂದ ಬರುತ್ತಿದೆ ಎನ್ನುತ್ತೇನೆ. ನ್ಯಾಯಕ್ಕೆ ನಿಷ್ಪಕ್ಷಪಾತವಾದ ಪರಿಗಣನೆ ಬೇಕೇಬೇಕು ಎನ್ನುವುದನ್ನು ಸ್ಮಿತ್ ಮನಗಂಡಿದ್ದ. ಅದಕ್ಕಾಗಿ ನಾವು ರಾಷ್ಟ್ರಗಳ ಸೀಮೆಗಳನ್ನು ಮೀರಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದ.
ನ್ಯಾಯವನ್ನು ಕುರಿತ ಸಾರ್ವಜನಿಕ ತಾರ್ಕಿಕತೆಯು ರಾಷ್ಟ್ರ ಅಥವಾ ಪ್ರಾಂತ್ಯಗಳ ಸೀಮೆಗಳನ್ನು ದಾಟಿ ವಿಸ್ತಾರಗೊಳ್ಳಬೇಕು ಎನ್ನುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ನಮ್ಮ ಕ್ರಿಯೆಗಳು ಉಳಿದ ಜನರ ಹಿತಾಸಕ್ತಿಗಳ ಪ್ರಸ್ತುತತೆ ಮೇಲೆ ಪರಿಣಾಮ ಬೀರುತ್ತವೆ. ಎರಡನೆಯದಾಗಿ, ನಮ್ಮ ಸಂಕುಚಿತ ಮನೋಭಾವ ಸ್ಥಳೀಯ ಸಮುದಾಯದ ಮೌಲ್ಯಗಳು ಮತ್ತು ನಂಬಿಕೆಗಳಿಂದ ರೂಪುಗೊಂಡಿರುತ್ತದೆ. ಈ ಸಂಕುಚಿತ ಮನೋಭಾವವನ್ನು ತೊರೆಯಲು ಅವಶ್ಯಕವಾದ ಸೂಕ್ತ ತತ್ತ್ವಗಳನ್ನು ನಾವು ಹುಡುಕಾಡುವ ಸಂದರ್ಭದಲ್ಲಿ ಉಳಿದ ಜನರ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳ ಪ್ರಸ್ತುತತೆಯನ್ನು ಗಮನಿಸಿಕೊಳ್ಳಬೇಕು. ಜನರ ಹಿತಾಸಕ್ತಿಗಳು ಪರಸ್ಪರ ಅವಲಂಬಿತವಾಗಿದೆ ಎನ್ನುವ ವಾಸ್ತವಾಂಶ ಜಾಗತಿಕ ನ್ಯಾಯಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಕೈಗೆತ್ತಿಕೊಳ್ಳುವಂತೆ ಸ್ಮಿತ್‌ನನ್ನು ಪ್ರೇರೇಪಿಸಿತು. ಇದರ ಜೊತೆಗೆ ಕೋಪದ ಪ್ರದರ್ಶನ ಮತ್ತು ಅದರ ಉಪಶಮನದ ಬಗ್ಗೆಯೂ ಸ್ಮಿತ್ ಸಾಕಷ್ಟು ವಿವರವಾಗಿ ಚರ್ಚಿಸಿದ್ದಾನೆ. ಸ್ಮಿತ್‌ನ ಇಂತಹ ವಿಚಾರಗಳನ್ನು ಅವನು ಮುಕ್ತ ಮಾರುಕಟ್ಟೆಯ ಪ್ರವರ್ತಕ ಎನ್ನುವ ಕಾರಣಕ್ಕೆ ಯಾರೂ ಗಂಭೀರವಾಗಿ ಅಧ್ಯಯನ ಮಾಡಿಲ್ಲ. ಗುಲಾಮರ ಬೌದ್ಧಿಕ ಸಾಮರ್ಥ್ಯಕ್ಕಿಂತ ಬಿಳಿಯರ ಬೌದ್ಧಿಕ ಸಾಮರ್ಥ್ಯ ಶ್ರೇಷ್ಠ ಎನ್ನುವ ಕಲ್ಪಿತ ಸತ್ಯದ ಸೋಗು ಅವನನ್ನು ಸಿಕ್ಕಾಪಟ್ಟೆ ಕೆರಳಿಸುತ್ತಿತ್ತು. ಹಾಗಾಗಿ ಇಡೀ ಆಫ್ರಿಕಾದಲ್ಲಿ ನ್ಯಾಯ ಎನ್ನುವುದನ್ನು ತುಚ್ಛ, ನೀಚ, ಬಿಳಿ ಯಜಮಾನರು ಅರ್ಥಮಾಡಿಕೊಳ್ಳುವುದಕ್ಕೆ ಅಸಮರ್ಥರು. ಆದರೆ ಆಫ್ರಿಕೆಯ ಎಲ್ಲಾ ನೀಗ್ರೋಗಳು ನ್ಯಾಯದ ಬೇಡಿಕೆಗಳೇನು ಎನ್ನುವುದನ್ನು ಅತ್ಯಂತ ಸೂಕ್ಷ್ಮವಾಗಿ, ಅತ್ಯುನ್ನತ ಮಟ್ಟದಲ್ಲಿ ಅರ್ಥಮಾಡಿಕೊಳ್ಳಬಲ್ಲರು. ಎಂದು ತನ್ನ ಭಾಷಣವೊಂದರಲ್ಲಿ ಹೇಳಿದ್ದ. ಆಗ ಎಲ್ಲರೂ ನೀಗ್ರೋ ಎನ್ನುವ ಪದವನ್ನೇ ಬಳಸುತ್ತಿದ್ದರು. ಹಾಗಾಗಿ ಸ್ಮಿತ್ ಕೂಡ ಅದನ್ನೇ ಬಳಸುತ್ತಾನೆ. ಇದು ತುಂಬಾ ಸಾಮಾನ್ಯೀಕರಣಗೊಂಡಿರುವ ಹೇಳಿಕೆ. ಆದರೆ ಇದು ಸ್ಮಿತ್‌ನಲ್ಲಿದ್ದ ಸಾತ್ವಿಕ ಕೋಪದಿಂದ ಮೂಡಿ ಬಂದಿರುವ ಹೇಳಿಕೆ. ಅತ್ಯಂತ ಕಾಳಜಿ ತುಂಬಿರುವ ಒಂದು ವಿದೇಶೀ ದೃಷ್ಟಿಕೋನಕ್ಕೆ ಅವಕಾಶ ಮಾಡಿಕೊಡದೇ ಇರುವುದು ನಮ್ಮಲ್ಲಿರುವ ಮೇಲರಿಮೆಯ ಮನೋಭಾವವನ್ನು ವ್ಯಕ್ತಪಡಿಸುತ್ತದೆ ಎಂದು ಸ್ಮಿತ್ ಭಾವಿಸಿದ್ದ. ಈ ಮಾತುಗಳನ್ನು ಅವನು ಆಡಿದ ಸಂದರ್ಭದಲ್ಲಿ ಬ್ರಿಟನ್ ತಾನು ವಿಶ್ವದ ಕೇಂದ್ರ ಎಂದು ಭಾವಿಸಿತ್ತು. ಹಾಗಾಗಿ ಅವನು ಏನನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಎನ್ನುವುದು ಸ್ಪಷ್ಟ. ಅಷ್ಟೇ ಅಲ್ಲ ಬ್ರಿಟಿಷರಲ್ಲಿ ತಾವು ಐರಿಶ್ ಜನರಿಗಿಂತ ಶ್ರೇಷ್ಠ ಎಂಬ ಭಾವನೆಯಿತ್ತು. ಅದನ್ನೂ ಸ್ಮಿತ್ ಲೇವಡಿ ಮಾಡುತ್ತಿದ್ದ.
ಪರಸ್ಪರ ಅವಲಂಭನೆಗೆ ಸಂಬಂಧಿಸಿದಂತೆ ಸ್ಮಿತ್ ೧೮ನೇ ಶತಮಾನದ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಟೀಕಿಸುತ್ತೇನೆ. ಅದನ್ನು ಅತ್ಯಂತ ಅನ್ಯಾಯದ ಆಳ್ವಿಕೆ ಎಂದು ಟೀಕಿಸುತ್ತಾನೆ. ಮುಂದುವರಿದು ಬ್ರಿಟಿಷರು ಯಾವುದೇ ದೇಶವನ್ನು ಆಳಲು ತೀರಾ ಅಸಮರ್ಥರು ಎನ್ನುತ್ತಾನೆ. ಇಂದು ಪರಸ್ಪರ ಅವಲಂಭಿತ ಜಗತ್ತಿನಲ್ಲಿ ನಮ್ಮ ಆಸಕ್ತಿಗಳೂ ಪರಸ್ಪರ ಅವಲಂಭಿಸಿರುತ್ತದೆ ಎಂದು ಭಾವಿಸುವುದು ತುಂಬಾ ಮುಖ್ಯ. ಉದಾಹರಣೆಗೆ ಇಂದು ನಾವು ಎದುರಿಸುತ್ತಿರುವ ಸವಾಲುಗಳಾದ ಜಾಗತಿಕ ಭಯೋತ್ಪಾದನೆ ಅಥವಾ ಜಾಗತಿಕ ತಾಪಮಾನದ ಹೆಚ್ಚಳ ಅಥವಾ ಆರ್ಥಿಕ ಬಿಕ್ಕಟ್ಟು ಇವೆಲ್ಲವೂ ಪರಸ್ಪರ ಅವಲಂಬಿತ ವಿಚಾರಗಳು. ನ್ಯಾಯಕ್ಕೆ ಸಂಬಂಧಿಸಿದಂತೆ ದೇಶದೊಳಗಿನ ಒತ್ತಾಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನಮ್ಮ ಆಸಕ್ತಿಗಳಿಗೆ ಸಂಬಂಧಿಸಿದಂತೆ ಕೇವಲ ರಾಷ್ಟ್ರಮಟ್ಟದಲ್ಲಿ ಚರ್ಚೆ ಮತ್ತು ಸಂವಾದ ನಡೆದರೆ ಸಾಲುವುದಿಲ್ಲ. ಔಷಧಗಳು ದೇಶದಿಂದ ದೇಶಕ್ಕೆ ರಫ್ತಾಗುವಂತೆ, ಏಡ್ಸ್ ಮತ್ತು ಇತರ ಸಾಂಕ್ರಾಮಿಕ ರೋಗಗಳು ಕೂಡ ದೇಶದಿಂದ ದೇಶಕ್ಕೆ ಚಲಿಸುತ್ತವೆ. ಪರಸ್ಪರ ಒಂದನ್ನೊಂದು ಅವಲಂಬಿಸಿರುವ ಜಾಗತಿಕ ಆಸಕ್ತಿಗಳನ್ನು ಸಂಕುಚಿತ ಮನೋಭಾವವನ್ನು ಮೀರಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ನಿಷ್ಪಕ್ಷಪಾತತೆಯ ಬೇಡಿಕೆಗಳನ್ನು ತೆರೆದ ಮನಸ್ಸಿನಿಂದ ಪರಿಶೀಲಿಸಬೇಕು. ಅದು ತುಂಬಾ ಅವಶ್ಯಕ. ಇದನ್ನು ನಾವು ಒಪ್ಪಿಕೊಳ್ಳಬೇಕು. ಆಗ ಸಂಕುಚಿತ ಪ್ರವೃತ್ತಿಯಿಂದ ತಪ್ಪಿಸಿಕೊಳ್ಳಬಹುದು. ನ್ಯಾಯದ ಬೇಡಿಕೆಯ ಚರ್ಚೆ ಒಂದು ನಿರ್ದಿಷ್ಟ ಪ್ರಾಂತ್ಯ, ದೇಶ ಅಥವಾ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಲ್ಲಿ, ಹಲವು ವಿಚಾರ ಪ್ರಚೋದಕ ಉತ್ತಮ ಪ್ರತಿವಾದಗಳು ಸಂವಾದದಲ್ಲಿ ಸೇರಿಕೊಳ್ಳದೇ ಇರಬಹುದು. ಕೇವಲ ಸ್ಥಳೀಯ ಸಂಸ್ಕೃತಿಗೆ ಮಾತ್ರ ಸೀಮಿತವಾಗುವ ಸಂವಾದದಲ್ಲಿ ಅವು ನಿರ್ಲಕ್ಷ್ಯಕ್ಕೆ ಒಳಗಾಗಬಹದು. ಆದರೆ ಅವು ನಿಷ್ಪಕ್ಷಪಾತವಾಗಿ ಪರಿಗಣಿಸಬೇಕಾದ ಉತ್ತಮವಾದ ವಾದಗಳಾಗಿರಬಹುದು. ಸ್ಮಿತ್ ಅವರ ಬುದ್ಧಿವಾದವನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗಾಗಿ ಭಾರತೀಯ, ಚೀನೀ, ಜಪಾನೀ ಮತ್ತು ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದ ಚಿಂತನೆಗಳಲ್ಲಿ ನಾವು ತೆಗೆದುಕೊಳ್ಳಬಹುದಾದ್ದು ಏನಿದೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ. ಜೂರಿಸ್ ಪ್ರೂಡೆನ್ಸ್ ಮತ್ತು ರಾಜಕೀಯ ಚಿಂತನೆಯಲ್ಲಿ ಸಂಕುಚಿತ ಪ್ರವೃತ್ತಿಯನ್ನು ತೊರೆಯಬೇಕು ಎನ್ನುವುದರ ಬಗ್ಗೆ ಸ್ಮಿತ್ ತುಂಬಾ ಕಾಳಜಿ ಹೊಂದಿದ್ದ. ತನ್ನ ದ ಥಿಯರಿ ಆಫ್ ಮಾರಲ್ ಸೆಂಟಿಮೆಂಟ್ಸ್ ಕೃತಿಯಲ್ಲ್ಲಿ ಒಂದು ನಿರ್ದಿಷ್ಟ ಸಮಾಜಕ್ಕೆ ಮಾತ್ರ ಸೀಮಿತವಾಗುವ ಚರ್ಚೆಗಳು ಎಷ್ಟು ಸಂಕುಚಿತ ಪ್ರವೃತ್ತಿಯವಾಗಿರುತ್ತದೆ ಎನ್ನುವುದಕ್ಕೆ ಹಲವು ಉದಾಹರಣೆಗಳನ್ನು ನೀಡುತ್ತಾನೆ.
ನವಜಾತ ಶಿಶುವಿನ ಹತ್ಯೆ ಪ್ರಾಚೀನ ಗ್ರೀಸಿನ ಎಲ್ಲಾ ರಾಜ್ಯಗಳಲ್ಲಿಯೂ ಆಚರಣೆಯಲ್ಲಿತ್ತು. ಅತ್ಯಂತ ನಾಗರಿಕರು ಹಾಗೂ ಸುಸಂಸ್ಕೃತರು ಎನಿಸಿಕೊಂಡಿದ್ದ ಅಥೆನ್ಸಿನ ನಾಗರಿಕರಲ್ಲಿಯೂ ಈ ಆಚರಣೆಯಿತ್ತು. ನಿರಂತರವಾಗಿ ಸಾಗಿಬಂದಿದ್ದ ಈ ಆಚರಣೆ ಆ ಹೊತ್ತಿಗಾಗಲೇ ರೂಢಿಗತ ಆಗಿಬಿಟ್ಟಿತ್ತು. ಈ ಅನಾಗರಿಕ, ಬರ್ಬರ ಆಚರಣೆಯನ್ನು ರೂಢಿಯಲ್ಲಿದ್ದ ನಂಬಿಕೆಗಳು ಮಾತ್ರವಲ್ಲ ಹೆಚ್ಚು ನ್ಯಾಯಯುತವೂ, ನಿಖರವೂ ಆದ ತಾತ್ವಿಕ ಸಿದ್ದಾಂತಗಳೂ ಒಪ್ಪಿಕೊಂಡಿದ್ದವು. ಅರಿಸ್ಟಾಟಲ್ ಕೂಡ ನ್ಯಾಯಾಧೀಶರು ಹಲವು ಸಂದರ್ಭಗಳಲ್ಲಿ ಶಿಶುಹತ್ಯೆಯನ್ನು ಉತ್ತೇಜಿಸಬೇಕು ಎನ್ನುವ ಅರ್ಥದಲ್ಲಿ ಮಾತನಾಡುತ್ತಾನೆ. ಅಡಂ ಸ್ಮಿತ್ ಹೇಳುವಂತೆ ತನ್ನ ಬರಹಗಳುದ್ದಕ್ಕೂ ಮಾನವಕುಲವನ್ನು ಕುರಿತ ಅಸೀಮ ಪ್ರೀತಿಯನ್ನು ತೋರುವ ಪ್ಲೇಟೋ ಕೂಡ ಇಂತಹ ಹೀನಾಯ ಆಚರಣೆಯನ್ನು ಎಲ್ಲೂ ವಿರೋಧಿಸುವುದಿಲ್ಲ.. ಸ್ಮಿತ್ ಹೇಳುವುದೇನೆಂದರೆ, ಆ ಕಾಲದ ಚಿಂತಕರೆಲ್ಲರಿಗೂ ಸ್ಪಷ್ಟವಾಗಿ ಯೋಚಿಸಲು ಬರುತ್ತಿತ್ತು. ಆದರೆ ಅವರಿಗೆ ಶಿಶುಹತ್ಯೆ ಇಲ್ಲದಿರುವ ಸಮಾಜದ ಪರಿಚಯ ಇರಲಿಲ್ಲ. ವಾಸ್ತವವಾಗಿ ಆ ಕಾಲದಲ್ಲಿಯೂ ಶಿಶುಹತ್ಯೆ ಇಲ್ಲದ ಹಲವು ಸಮಾಜಗಳು ಇದ್ದವು. ಈ ರೂಢಿಗತ ಆಚರಣೆಯನ್ನು ಬದಲಾಯಿಸಿದರೆ ಏನಾಗಬಹುದು ಎನ್ನುವುದಕ್ಕೆ ಅವರಲ್ಲಿ ಒಂದು ತೀರಾ ಸಾಮಾನ್ಯವಾದ ಊಹೆ ಕೂಡ ಇರಲಿಲ್ಲ. ಆದರೆ ಇಲ್ಲಿ ನನಗೆ ಕೌತುಕದ ವಿಷಯವೆಂದರೆ ಅರಿಸ್ಟಾಟಲ್ ಮತ್ತು ಪ್ಲೇಟೋ ಇಬ್ಬರೂ ಹಲವು ವಿಷಯಗಳಲ್ಲಿ ಊಹಾತ್ಮಕವಾದ ವಾದಗಳನ್ನು ಮಾಡುತ್ತಾರೆ. ಆದರೆ ಶಿಶುಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರವಾದ ಊಹೆಯೂ ಅವರ ಬರಹಗಳಲ್ಲಿ ಕಾಣುವುದಿಲ್ಲ. ವಿಷಾದದ ಸಂಗತಿಯೆಂದರೆ, ಸ್ಮಿತ್ ಪ್ರಸ್ತಾಪಿಸುವ ಶಿಶುಹತ್ಯೆಯ ಆಚರಣೆ ಸಮಕಾಲೀನ ಸಮಾಜದಲ್ಲಿಯೂ ಇದೆ. ಸ್ಮಿತ್ ತೋರುವ ಎಷ್ಟೋ ಕಾಳಜಿಗಳು ಇಂದಿಗೂ ನಮಗೆ ಪ್ರಸ್ತುತವಾಗಿವೆ. ಸ್ಮಿತ್‌ನ ಸಾರ್ವತ್ರಿಕ ಹೇಳಿಕೆ ಒಂದು ಶಿಕ್ಷೆ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದಾ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾದರೆ ಉಳಿದವರಿಗೆ ಅದು ಹೇಗೆ ಕಾಣುತ್ತದೆ ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಇಂದಿಗಿಂತ ತುಂಬಾ ಭಿನ್ನವಾಗಿರುವ ಆಚರಣೆಗಳನ್ನು ದೂರದಲ್ಲಿ ನಿಂತು ನೋಡುವುದರಿಂದ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗಬಹುದು. ಉದಾಹರಣೆಗೆ ಆಫ್ಗಾನಿಸ್ತಾನದ ಆಚರಣೆಯಲ್ಲಿರುವ ವ್ಯಭಿಚಾರಿ ಹೆಣ್ಣನ್ನು ಕಲ್ಲು ಹೊಡೆದು ಕೊಲ್ಲುವ ಪದ್ದತಿ, ಚೀನಾ, ಕೊರಿಯಾ ಮತ್ತು ಭಾರತದ ಹಲವು ಭಾಗಗಳಲ್ಲಿ ಕಂಡುಬರುವ ಹೆಣ್ಣು ಭ್ರೂಣಹತ್ಯೆ, ಚೀನಾ ಮತ್ತು ಅಮೆರಿಕೆಯಲ್ಲಿ ವಿಧಿಸುವ ಮರಣದಂಡನೆಯ ಶಿಕ್ಷೆ ಮುಂತಾದವನ್ನು ಹೊರಗಿನಿಂದ ನೋಡುವುದರಿಂದ ಒಳ್ಳೆಯದಾಗಬಹುದು. ಈ ದೇಶಗಳಿಗೆ ಹೋಲಿಸಿದಾಗ ಮಾನವ ಹಕ್ಕುಗಳಿಗೆ ಸಂಬಂಧಿಸಿದ ನಿಲುವಿನಿಂದಾಗಿ ಅಮೇರಿಕಾ ಭಿನ್ನವಾಗಿ ಕಾಣಬಹುದು. ಕುತೂಹಲದ ಅಂಶ ಅಂದರೆ ಅತಿ ಹೆಚ್ಚು ಮರಣದಂಡನೆ ನೀಡುವ ನಾಲಕ್‌ಉ ದೇಶಗಳಲ್ಲಿ ಚೀನಾ, ನಂತರ ಇರಾನ್, ನಂತರ ಸೌದಿ ಅರೇಬಿಯಾ ಮತ್ತು ನಂತರ ಅಮೇರಿಕ ಬರುತ್ತದೆ.
ಅಮೇರಿಕೆಯಲ್ಲಿ ಇಂದಿನ ಕೆಲವು ಚರ್ಚೆಗಳನ್ನು ಕುರಿತಂತೆ ಹಲವು ನಿಲುವುಗಳು ಕಾಣಿಸಿಕೊಳ್ಳುತ್ತಿವೆ. ಉದಾಹರಣೆಗೆ ಒಬ್ಬ ವ್ಯಕ್ತಿಯು ತನ್ನ ಎಳೆಹರೆಯದಲ್ಲಿ ಒಂದು ಅಪರಾಧ ಅಥವಾ ಕೊಲೆ ಮಾಡಿದರೆ, ಅವರಿಗೆ ಮರಣದಂಡನೆ ವಿಧಿಸುವುದು ಎಷ್ಟು ಸೂಕ್ತ ಎಂದು ಅಮೆರಿಕೆಯ ಉಚ್ಛನ್ಯಾಯಾಲಯ ಪ್ರಶ್ನಿಸಿತು. ಒಬ್ಬ ಅಪ್ರಾಪ್ತವಯಸ್ಕನನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ. ಅವನು ವಯಸ್ಕನಾಗುವ ತನಕ ಕಾಯಬೇಕು. ಅವನು ವಯಸ್ಕನಾದ ಕೂಡಲೆ ಅವನನ್ನು ಹಿಡಿದು ಗಲ್ಲಿಗೇರಿಸುತ್ತಾರೆ ಅಥವಾ ಇಲೆಕ್ಟ್ರೋಕ್ಯೂಟ್ ಮಾಡುತ್ತಾರೆ. ಹೀಗೆ ಮಾಡುವುದರಿಂದ ನ್ಯಾಯವನ್ನು ಒದಗಿಸಲಾಗಿದೆ ಅಂತ ಅಮೇರಿಕೆಯಲ್ಲಿ ಅಂದುಕೊಳ್ಳಬಹುದು. ಆದರೆ ಇಲ್ಲಿ ನ್ಯಾಯದ ಕೆಲವು ಅಂಶಗಳನ್ನು ಗ್ರಹಿಸಿದಂತೆ ಕಾಣುವುದಿಲ್ಲ. ಯುರೋಪ್, ಬ್ರೆಜಿಲ್, ಭಾರತ, ಜಪಾನ್ ಮುಂತಾದ ಪ್ರಪಂಚದ ಉಳಿದ ದೇಶಗಳಲ್ಲಿ ಇಂತಹ ಪ್ರಕರಣಗಳನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂದು ಕೇಳಿ ತಿಳಿದುಕೊಳ್ಳುವುದರಿಂದ ಅನುಕೂಲವಿದೆ.
ಆಡಂ ಸ್ಮಿತ್ ಪ್ರಕಾರ ದೂರದ ದನಿಗಳನ್ನು ಕೇಳಿಸಿಕೊಳ್ಳುವುದು ತುಂಬಾ ಮುಖ್ಯ. ಇದು ನಿಷ್ಪಕ್ಷಪಾತವಾದ ನ್ಯಾಯದ ದೃಷ್ಟಿಯಿಂದ ತುಂಬಾ ಮುಖ್ಯವಾದ ಅಭ್ಯಾಸ. ಅಂದ ಮಾತ್ರಕ್ಕೆ ಹೊರಗಿನಿಂದ ಬರುವ ಪ್ರತಿಯೊಂದು ವಾದವನ್ನೂ ಗೌರವಿಸಬೇಕಾದ ಅವಶ್ಯಕತೆಯೇನಿಲ್ಲ. ಅಪ್ರಾಪ್ತ ವಯಸ್ಸಿನಲ್ಲಿ ಎಸಗುವ ಅಪರಾಧಕ್ಕೆ ಅವರು ಪ್ರಾಪ್ತವಯಸ್ಕರಾದ ಕೂಡಲೆ ಅವರನ್ನು ಗಲ್ಲಿಗೇರಿಸಬಾರದು ಎಂದು ಸುಪ್ರೀಂ ಕೋರ್ಟಿನ ಐದು ನ್ಯಾಯಾಧೀಶರಲ್ಲಿ ಒಬ್ಬರು ತೀರ್ಮಾನಿಸಿದರು. ಆದರೆ ಉಳಿದ ನಾಲ್ಕು ಜನರು ಅದಕ್ಕೆ ವಿರುದ್ಧವಾಗಿ ತೀರ್ಮಾನಿಸಿದರು. ಆದರೆ ಇಲ್ಲಿ ತುಂಬಾ ಮುಖ್ಯವಾಗುವ ಅಂಶ ಅಮೆರಿಕದ ನ್ಯಾಯಾಲಯಗಳ ಚಿಂತನೆ ಬದಲಾಗಿದೆ ಎನ್ನುವುದು. ಉಚ್ಛನ್ಯಾಯಾಲಯದ ಆಗಿನ ಮುಖ್ಯ ನ್ಯಾಯಾಧೀಶ ರಾಬರ‍್ಟ್ ಅಮೇರಿಕೆಯವರು ಉಳಿದ ಕಡೆಗಳಿಂದ ಬರುವ ಅಭಿಪ್ರಾಯಗಳನ್ನು ಆಲಿಸಬಾರದು ಏಕೆಂದರೆ ಇದು ನಿರ್ದಿಷ್ಟವಾಗಿ ಅಮೆರಿಕೆಯ ವಿಚಾರ ಎಂದು ಹೇಳಿಕೆ ನೀಡಿದರು. ಇದು ನೇರವಾಗಿ ಸ್ಮಿತ್ ದೃಷ್ಟಿಕೋನದ ವಿರುದ್ಧದ ನಿಲುವು.
ನಾವು ನಮ್ಮ ಮುಂದಿರುವ ವಾದಗಳಲ್ಲಿ ಹಲವನ್ನು ಅಥವಾ ಎಲ್ಲವನ್ನೂ ತಿರಸ್ಕರಿಸಬಹುದು. ಅದರೂ ಕೆಲವು ನಿರ್ದಿಷ್ಟ ಪ್ರಕರಣಗಳನ್ನು ಮರುಪರಿಶೀಲಿಸಬೇಕಾಗಬಹುದು. ಅವು ಒಂದು ದೇಶದ ಸಂಸ್ಕೃತಿಯಲ್ಲಿ ಬೇರೂರಿರುವ ಅನುಭವಗಳು ಹಾಗೂ ಸಂಪ್ರದಾಯಗಳೊಂದಿಗೆ ತೆಕ್ಕೆಹಾಕಿಕೊಂಡಿರುತ್ತವೆ. ಹಾಗಾಗಿ ಹಿಂದೆ ತಿರಸ್ಕರಿಸಿದ್ದ ವಾದಗಳ ಮರುಪರಿಶೀಲನೆ ಅವಶ್ಯಕವಾಗಬಹುದು. ಬೇರೆ ದೇಶಗಳಿಂದ ಬರುವ ವಿಚಾರಗಳಲ್ಲಿ ನಮಗೆ ಮುಖ್ಯವಾಗಬೇಕಾದದ್ದು ಅಲ್ಲಿಯ ಅಭಿಪ್ರಾಯಗಳಾಗಲಿ ಅಥವಾ ತೀರ್ಮಾನಗಳಾಗಲಿ ಅಲ್ಲ. ನಮಗೆ ಮುಖ್ಯವಾಗಬೇಕಾದದ್ದು ಅವುಗಳ ಹಿಂದಿನ ವೈಚಾರಿಕತೆ. ತನ್ನ ’ನಿಷ್ಪಕ್ಷಪಾತ ನೋಡುಗನ’ ಕಲ್ಪನೆಯನ್ನು ರೂಪಿಸುವಾಗ ಆಡಂ ಸ್ಮಿತ್ ಈ ಅಂಶಕ್ಕೆ ತುಂಬಾ ಒತ್ತು ಕೊಡುತ್ತಾನೆ. ಸ್ಮಿತ್ ಒದಗಿಸುವ ನೆಲೆಗಟ್ಟನ್ನು ಇಟ್ಟುಕೊಂಡು ನ್ಯಾಯವನ್ನು ವಿಶ್ಲೇಷಿಸುವಾಗ ಇಂತಹ ಮುಕ್ತ ದೃಷ್ಟಿಕೋನ ಬಹುದೊಡ್ಡ ಪಾತ್ರವಹಿಸುತ್ತದೆ. ನಾನು ನನ್ನ ಕೃತಿಯಲ್ಲಿ ಇದನ್ನು ಪ್ರಸ್ತುತಪಡಿಸಲು ಪ್ರಯತ್ನಿಸಿದ್ದೇನೆ.
ಅನುವಾದ : ಶೈಲಜಾ ಟಿ. ಎಸ್ . ವೇಣುಗೋಪಾಲ್
ಪ್ರಸಿದ್ದ ಅರ್ಥಶಾಸ್ತ್ರಜ್ಞ. ಮಾನವ ಕಲ್ಯಾಣ ಅರ್ಥಶಾಸ್ತ್ರ (welfare economics) ಮತ್ತು ಸಾಮಾಜಿಕ ಆಯ್ಕೆಗಳ ಪ್ರತಿಪಾದನೆ (social choice theory)ಗಳಲ್ಲಿ ಮಾಡಿರುವ ಮಹತ್ವದ ಕೆಲಸಕ್ಕೆ ವಿಶ್ವಮಾನ್ಯರಾಗಿದ್ದಾರೆ. 1998ರ ವರ್ಷದ ನೊಬೆಲ್ ಪ್ರಶಸ್ತಿ ಹಾಗೂ ೧೯೯೯ರ ವರ್ಷದಲ್ಲಿನ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ ‘ಭಾರತ ರತ್ನ’ವೂ ಸೇರಿದಂತೆ ವಿಶ್ವದಾದ್ಯಂತ ಅನೇಕ ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ.