Africa Kills Her Sun

ನೈಜೀರಿಯಾದ ಕವಿ, ಕಾದಂಬರಿಕಾರ ಕೆನ್ ಸಾರೊ-ವಿವ ( Ken Saro – Wiwa, 1941-1995), ಬಹುರಾಷ್ಟ್ರೀಯ ಬಲಾಢ್ಯ ತೈಲ ಕಂಪನಿ ಡಚ್ ರಾಯಲ್ ಷೆಲ್ (Shell) ವಿರುದ್ಧ ಪ್ರಬಲ ಪರಿಸರ ಹೋರಾಟಗಾರ ಕಟ್ಟಿದ ಕಟ್ಟಾಳು, ಅದಕ್ಕಾಗಿಯೇ ಜೀವ ತೆತ್ತ ಹುತಾತ್ಮ. ನೈಜೀರಿಯದ ಸೇನಾಡಳಿತ ಮತ್ತು ಆಂಗ್ಲೋ – ಡಚ್ ದೈತ್ಯ ತೈಲ ಸಂಸ್ಥೆ ರಾಯಲ್ ಷೆಲ್ ಕಂಪನಿಗಳು ಶಾಮೀಲಾಗಿ ನೈಜೀರಿಯದ ಭೂಮಿ, ಜೀವ ಸಂಕುಲ, ನದ-ನದಿಗಳನ್ನು ಕಲುಷಿತಗೊಳಿಸುತ್ತ, ಸಮುದಾಯಗಳ ಬದುಕನ್ನು ದುರ್ಭರಗೊಳಿಸತೊಡಗಿದಾಗ ಅಲ್ಲಿನ ಸ್ಥಾನಿಕ ‘ಒಗೋನಿ’ ಬುಡಕಟ್ಟು ಪ್ರತಿರೋಧ ಒಡ್ಡತೊಡಗಿತು. ಆಗಷ್ಟೇ ಶಿಕ್ಷಣ ಮುಗಿಸಿ, ಇಬಾದನ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದ ತರುಣ ಕೆನುಲೆ ಬೀಸನ್‌ ಸಾರೊ-ವಿವ ಬೇರೆ ಬೇರೆ ಕೆಲಸ ಮಾಡುತ್ತ ಪೂರ್ಣಾವಧಿ ಬರಹಗಾರರಾಗಲು ಕೊನೆಗೆ ಎಲ್ಲ ವೃತ್ತಿಗಳಿಗೂ ನಮಸ್ಕಾರ ಹೇಳಿದರು. ಆಗ ಬರೆದ ‘ ಸಾಂಗ್ಸ್ ಇನ್ ದ ಟೈಮ್ ಆಫ್ ವಾರ್’, ‘ಸೋಷ ಬಾಯ್’ ಹೆಸರು ತಂದುಕೊಟ್ಟವು. ಲೇಖಕ ಮತ್ತು ಪತ್ರಕರ್ತರಾಗಿ ಸಮಾಜದಲ್ಲಿ ಕಂಡ ಲೋಪದೋಷಗಳು ಹಾಗೂ ತಮ್ಮ ಅಲ್ಪಸಂಖ್ಯಾತ ಬುಡಕಟ್ಟು ‘ಒಗೋನಿ’ (ಅಂದಿಗೆ ಐದು ಲಕ್ಷ ಜನಸಂಖ್ಯೆಯ) ಸಮುದಾಯದ ಮೇಲೆ ನಡೆಯುತ್ತಿದ್ದ ನಿರಂತರ ದಬ್ಬಾಳಿಕೆಗಳು ಕೆನ್‌ರನ್ನು ಹೋರಾಟ-ಚಳವಳಿಗಳ ಬದುಕಿಗೆ ದೂಡಿದವು. ಷೆಲ್ ಕಂಪನಿ ವಿರುದ್ಧ ರೂಪಿಸಿದ ಸ್ಥಳೀಯ ಹೋರಾಟವು ಅಂತಾರಾಷ್ಟ್ರೀಯ ಪರಿಸರ ಆಂದೋಲನವಾಗಿ ಬದಲಾಯಿತು. ಷೆಲ್ ಅಂತಾರಾಷ್ಟ್ರೀಯ ನೆಲೆಯಲ್ಲಿ ಛೀ ಮಾರಿ ಹಾಕಿಸಿಕೊಂಡು ತಲೆ ತಗ್ಗಿಸಿತು. ಸೇನಾಡಳಿತ ರಚಿಸಿದ ಷಡ್ಯಂತ್ರದಲ್ಲಿ ಕೆನ್‌ರನ್ನು ಸಿಲುಕಿಸಿ 1994ರಲ್ಲಿ ಬಂಧಿಸಲಾಯಿತು. ಸರ್ವಾಧಿಕಾರಿಯ ಒಕ್ಕಣ್ಣಿನ ನ್ಯಾಯ ವ್ಯವಸ್ಥೆಯಲ್ಲಿ ಏಕಪಕ್ಷೀಯ ವಿಚಾರಣೆ ನಡೆಸಿ ಅವರಿಗೆ ಮತ್ತು ಅವರ ಸಂಗಾತಿಗಳಿಗೆ ಮರಣದಂಡನೆ ವಿಧಿಸಲಾಯಿತು. ಕೆನುಲೆ ಅವರ ಮರಣದ ಬಳಿಕ ತಮ್ಮ ಹೋರಾಟ, ಸಾಹಿತ್ಯ ಮತ್ತು ವಿಚಾರಗಳಿಂದಾಗಿ ದಿನೇ ದಿನೇ ಜನ ಮಾನಸವನ್ನು ಇನ್ನಷ್ಟು, ಮತ್ತಷ್ಟು ವ್ಯಾಪಿಸುತ್ತಿದ್ದಾರೆ. ಕೆನ್ ಹೆಸರಿನಲ್ಲಿ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಪರಿಸರ ಪ್ರಶಸ್ತಿಗಳನ್ನು ಕೂಡ ಸ್ಥಾಪಿಸಲಾಗಿದೆ. ಇಪ್ಪತ್ತನೆಯ ಶತಮಾನದ ಎರಡನೆಯ ಭಾಗದಲ್ಲಿ ಆಫ್ರಿಕನ್ ಸಾಹಿತ್ಯ, ಜೀವಸಂಕುಲಗಳ ಉಳಿವಿನ ಹೋರಾಟದ ಮಾತುಕತೆಯಲ್ಲಿ ಕೆನುಲೆ ಬೀಸನ್ ಸಾರೊ-ವಿವ ಹೆಸರು ಮೊದಲ ಸ್ಥಾನದಲ್ಲಿರುತ್ತದೆ. ವಂಗಾರಿ ಮಥಾಯಿ ಇನ್ನೊಂದು ಹೆಸರು.

“ಓಗೋನಿ ಜನರು ತಮ್ಮ ಪೀಡಕರನ್ನು ಎದುರಿಸಲು ಅನುವು ಮಾಡಿಕೊಡಲು ನಾನು ಬರಹಗಾರನಾಗಿ ನನ್ನ ಪ್ರತಿಭೆಯನ್ನು ಬಳಸಿದ್ದೇನೆ. ನಾನು ರಾಜಕಾರಣಿಯಾಗಿ ಅಥವಾ ಉದ್ಯಮಿಯಾಗಿ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ನನ್ನ ಬರಹಗಳು ಅದನ್ನು ಮಾಡಿದೆ. ನೈತಿಕ ಗೆಲುವು ನನ್ನದಾಗಿದೆ ಎಂದು ಭಾವಿಸುತ್ತೇನೆ. ಮೌನವು ದೇಶದ್ರೋಹವಾಗುತ್ತದೆ, ಓಗೊನಿ ಕಥೆಯನ್ನು ಹೇಳಲೇಬೇಕಿದೆ .. “ – ಕೆನ್ ಸಾರೋ ವಿವಾ

ತೀಕ್ಷ್ಣ ಸಾಮಾಜಿಕ ಮತ್ತು ರಾಜಕೀಯ ಟೀಕೆಯನ್ನು ಒಳಗೊಂಡಿರುವ ಕೆನ್ ಸಾರೊ-ವಿವ ಅವರ “ಆಫ್ರಿಕಾ ಕಿಲ್ಸ್ ಹರ್ ಸನ್” ಸಣ್ಣ ಕಥೆ ನಿಮ್ಮ ಓದಿಗೆ ..


ಕೆನ್ ಸಾರೋ ವಿವಾರ ಈ ಕಥೆಯನ್ನು ಆಧರಿಸಿ 2019 ರಲ್ಲಿ ಪ್ರದರ್ಶಿಸಲಾದ ನಾಟಕದ ಒಂದು ದೃಶ್ಯ


ಪ್ರೀತಿಯ ಜೋಲೆ,

ಈ ಪತ್ರವನ್ನು ನೋಡಿ ನಿನಗೆ ಅಚ್ಚರಿಯಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಿನ್ನ ಸುಂದರ ಪ್ರಪಂಚಕ್ಕೆ ಗುಡ್‌ ಬೈ ಹೇಳದೆ ಹೋಗುವುದು ನನ್ನಿಂದ ಸಾಧ್ಯವಿಲ್ಲ. ಅನಿವಾರ್ಯವಾಗಿಯಾದರೂ ನೀನು ಆ ಪ್ರಪಂಚದಲ್ಲಿ ಬದುಕಲೇ ಬೇಕಿದೆ. ಎರಡು ಮೂರು ವಾರಗಳ ಹಿಂದೆ ಅದ್ಭುತವಾದ ಕ್ಷಣಗಳನ್ನು ಸಾಧಿಸಿದ ನಂತರ, ಈಗಿನ ನನ್ನ ಈ ಭಾವ ಕರುಣಾಜನಕ ಎಂದು ನನ್ನ ಸಹದ್ಯೋಗಿಗಳಾದ ಸುಜಾನ್ ಮತ್ತು ಜಿಂಬಾಗೆ ಅನ್ನಿಸಿದಂತೆ ಕೆಲವರಿಗೆ ಅನ್ನಿಸಬಹುದು. ಅದೇನೆ ಇರಲಿ ನನ್ನ ಮಟ್ಟಿಗೆ ಈ ಪತ್ರ ಒಂದು ಸಂಭ್ರಮಾಚರಣೆ. ನನ್ನ ವೃತ್ತಿ ಹಾಗೂ ನನ್ನ ಪಾಲಿಗೆ ಉಳಿದಿರುವ ನಾಳಿನ ಮುಂಜಾವಿನ ಹೊರತಾಗಿ ಪ್ರೀತಿಯಿಂದ ಧ್ಯಾನಿಸುವ ಆಚರಣೆ.

ಹರೆಯದಲ್ಲಿ ನಾವು ಒಟ್ಟಾಗಿ ಕಳೆದ ಸಂತೋಷದ ಕ್ಷಣಗಳನ್ನು ಎಂದಿನಿಂದಲೂ ಕಾಪಿಟ್ಟುಕೊಂಡಿದ್ದೇನೆ. ಆಗ ಜಗತ್ತು ಹೊಸದಾಗಿತ್ತು. ಹೊಂಗನಸಿನ ಮೀನುಗಳು ಹೊನ್ನಿನ ಹೊಂಡದಲ್ಲಿ ಈಜುತ್ತಿದ್ದವು. ನಾವು ಆಗ ಹಂಚಿಕೊಂಡ ಪ್ರೀತಿಯಲ್ಲಿಯೇ ನನ್ನ ಸಂತೋಷವಿದೆ. ಬಿರುಗಾಳಿಯಲ್ಲಿ ಮುಳುಗೆದ್ದ ನನ್ನ ಜೀವನದಲ್ಲಿ ಅದೇ ನನ್ನ ಪಾಲಿನ ತಂಗುದಾಣ. ಒಂಟಿ ಎನಿಸಿದಾಗಲೆಲ್ಲ, ಸಂಘರ್ಷ, ನೋವುಗಳ ನಡುವೆ ನಲುಗಿದಾಗಲೆಲ್ಲ ಆ ಪ್ರೀತಿಯೇ ನನ್ನ ಆಸರೆಯಾಗಿದೆ. ಅದೇ ನನ್ನ ಕೈಹಿಡಿದು ನಡೆಸಿದೆ.

ನಮ್ಮ ಪ್ರೀತಿ ಎಂದೂ ಪರಿಪೂರ್ಣವಾಗಲಿಲ್ಲ. ನೀನು ನನ್ನನ್ನು ನೋಡದೆ ಹತ್ತು ವರ್ಷಗಳಾಗಿರಬಹುದು ಎಂದು ನಿನಗೆ ಆಶ್ಚರ್ಯವಾಗಬಹುದು. ನನಗಿನ್ನೂ ನಿನ್ನ ನೆನಪಿದೆ. ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ನಾಳೆಯ ಮುಂಜಾವಿಗೆ ಮುನ್ನಿನ ಈ ರಾತ್ರಿ ನಿನ್ನನ್ನು ನೆನಪಿಸಿಕೊಳ್ಳುತ್ತಿರುವುದು ಸಕಾರಣವಾಗಿದೆ. ನಿನ್ನ ಹತ್ತಿರ ಒಂದು ಸಣ್ಣ ಸಹಾಯ ಕೇಳಲು ಈ ಪತ್ರ ಬರೆಯುತ್ತಿದ್ದೇನೆ. ಅದಕ್ಕಿಂತ ಮುಖ್ಯವಾಗಿ ನನ್ನ ಮನಸಿನ ಹೊರೆಯನ್ನೆಲ್ಲ ನಿನ್ನ ಬಳಿ ಹೇಳಿ ಹಗುರಾಗಿದ್ದೇನೆ ಎನ್ನುವ ಭಾವದಿಂದಾಗಿ, ನಾಳಿನ ಬೆಳಗಿನ ಘಟನೆಗಳು ಅದಕ್ಕೆ ಸಾಕ್ಷಿಯಾಗುವ ಸಾವಿರಾರು ಪ್ರೇಕ್ಷಕರಿಗೆ ಅನ್ನಿಸುವಂತೆ ನನಗೂ ಆಹ್ಲಾದಕರ ಅನ್ನಿಸುತ್ತದೆ.

ಈ ಪತ್ರ ನಿನ್ನ ಕೈಸೇರುತ್ತದೆ ಎಂದು ಗೊತ್ತು. ಏಕೆಂದರೆ ಇದಕ್ಕಾಗಿ ಜೈಲಿನ ಸಿಬ್ಬಂದಿಗೆ ಕೈತುಂಬ ಲಂಚ ಕೊಟ್ಟಿದ್ದೇನೆ. ನಾಳೆ ನಮಗೆ ಗುಂಡು ಹಾರಿಸುವ ಕ್ಷಣದಲ್ಲಿ ಅವನು ನಮ್ಮೊಂದಿಗಿರುತ್ತಾನೆ. ಅವನು ಕೂಡ ಬಹುತೇಕರಂತೆ ಈ ನರಕ ಸದೃಶ ಲೋಕದಲ್ಲಿ ತನಗೆ ವಹಿಸಿದ ಪಾತ್ರವನ್ನು ನಿರ್ವಹಿಸುತ್ತಾ ಬದುಕಬೇಕಿದೆ. ಒಂದಿಷ್ಟೂ ಆಸಕ್ತಿಯಿಂದ ಕೂಡಿರದ, ಅರ್ಥವಾಗದ ಜೀವನವನ್ನು ಸಾಗಿಸಲು ಈ ಕೆಲಸವನ್ನೇ ಕಡಿಮೆ ಲಂಚಕ್ಕೆ ಇನ್ನೂ ಹಲವು ವರ್ಷಗಳವರೆಗೆ ಮಾಡುತ್ತಾ ಹೋಗುತ್ತಿರುವುದು ನನಗೆ ಕಾಣುತ್ತಿದೆ. ಅವನ ಅಜ್ಞಾನವನ್ನು ನೋಡಿ ಅಯ್ಯೋ ಪಾಪ ಅನ್ನಿಸುತ್ತದೆ. ಅವನು ಹೀಗೆ ತೃಪ್ತಿಯಿಂದಿರುವುದನ್ನು ನೋಡಿ ಅಸೂಯೆಯಾಗುವುದಿಲ್ಲ. ನಾಳೆ ಬೆಳಿಗ್ಗೆ ಅವನು ಈ ಪತ್ರ ಹಾಗೂ ಲಂಚವನ್ನು ಜೇಬಿನಲ್ಲಿಟ್ಟುಕೊಂಡು, ನಮ್ಮನ್ನು ಅಂದರೆ ಸುಜಾನ್, ಜಿಂಬಾ ಮತ್ತು ನನ್ನನ್ನು ಕರೆಯುತ್ತಾನೆ. ಎಂದಿನಂತೆ ನಮ್ಮ ಹೆಸರುಗಳನ್ನು ತಪ್ಪಾಗಿ ಕರೆಯುತ್ತಾನೆ. ಅವನು ಯಾವಾಗಲೂ ಸುಜಾನ್‌ನನ್ನು ʼಸಾಜಿಮ್‌ʼ ಅಂತಲೂ ಜಿಂಬಾನನ್ನು ʼಸಾಂಬಾʼ ಅಂತಲೂ ಕರೆಯುತ್ತಾನೆ. ಅದೇನು ಮುಖ್ಯವಲ್ಲ. ಅವನು ಕರೆದಾಗ ನಾವು ವಿಧೇಯವಾಗಿ ನಮ್ಮ ಸಾವಿನತ್ತ ಹೆಜ್ಜೆ ಹಾಕುತ್ತೇವೆ. ನಡೆಯುತ್ತಾ ಅವನ ಮೂರ್ಖತನವನ್ನು ನೋಡಿ ನಗುತ್ತೇವೆ. ಮತ್ತೊಬ್ಬ ಕಳ್ಳ ಆ ಹೈಕೋರ್ಟ್‌ ನ್ಯಾಯಾಧೀಶನನ್ನು ನೋಡಿ ಹೀಗೆ ನಕ್ಕಿದ್ದೆವು.

ಪತ್ರಿಕೆಯಲ್ಲಿ ನೀನಿದನ್ನು ನೋಡಿರಬೇಕು. ಈ ಸುದ್ದಿ ವರದಿಯಾಗಿದ್ದ ಪತ್ರಿಕೆಯನ್ನು ನಾವು ನೋಡಿದೆವು. ನಮ್ಮ ಲಂಚ ತೆಗೆದುಕೊಳ್ಳುವ ಜೈಲಿನ ಕಾವಲುಗಾರ ಆ ಪತ್ರಿಕೆಯನ್ನು ನಮಗೆ ಒದಗಿಸಿದ್ದಕ್ಕೆ ಅವನಿಗೆ ಥ್ಯಾಂಕ್ಸ್‌ ಹೇಳಬೇಕು. ದೇಶದ ಬಗ್ಗೆ ಯಾವುದೇ ಭಾವನೆಗಳಿಲ್ಲದ, ನೀಚತನ ತುಂಬಿರುವ, ಮತ್ತೊಬ್ಬರ ಸಾವನ್ನು ಸಂಭ್ರಮಿಸುವಂತಹ ಜನರಲ್ಲದೆ ಹೋಗಿದ್ದರೆ ಕೆಲವು ಪ್ರಶ್ನೆಗಳನ್ನು ಕೇಳಬಹುದಿತ್ತು. ನಿಸ್ಸಂಶಯವಾಗಿ ಹಲವರು ತಮ್ಮ ಮನೆಗಳ ಸುರಕ್ಷಿತ ಸವಲತ್ತುಗಳ ನಡುವೆ ಕುಳಿತು ಬಿಯರ್‌ ಕುಡಿಯುತ್ತಾ ಯರೋಪ್‌, ಅಮೆರಿಕಾ ತಿರಸ್ಕರಿಸಿದ ಮಾಲುಗಳನ್ನು ತಮ್ಮಲ್ಲಿ ತುಂಬಿಸಿಕೊಳ್ಳುತ್ತಾ, ಬೇಸರ ಹುಟ್ಟಿಸುವ, ಅಗ್ಗದ ಟಿವಿ ಕಾರ್ಯಕ್ರಮಗಳನ್ನು ನೋಡುತ್ತಾ ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ತಮ್ಮ ಆತ್ಮಸಾಕ್ಷಿಯನ್ನು ಬಿಯರ್‌ ಬಾಟಲಿಗಳಲ್ಲಿ ಕರಗಿಸಿಬಿಡುತ್ತಾರೆ. ಪ್ರಶ್ನೆಗಳನ್ನು, ಉತ್ತರಗಳನ್ನು ಮತ್ತು ಆತ್ಮಸಾಕ್ಷಿಯನ್ನು ನುಂಗಿಕೊಂಡು ಕೊಳೆತುನಾರುತ್ತಿರುವ ಚರಂಡಿಯೊಳಗೆ ಹರಿಯಿಸಿಬಿಡುತ್ತಾರೆ. ಹಾಗೆ ಅದನ್ನು ಮರೆತೂಬಿಡುತ್ತಾರೆ.

ಆ ಹೈಕೋರ್ಟ್‌ ನ್ಯಾಯಾಧೀಶ ಎಂದಿಗೂ ಮರೆಯಲಾರ, ಬೇಕಾದ್ರೆ ಬೆಟ್‌ ಕಟ್ಟುವೆ. ಅದನ್ನವನು ತನ್ನ ಜೀವಮಾನದುದ್ದಕ್ಕೂ ನೆನಪಿಡಬೇಕು. ಆ ಮೊದಲನೇ ದಿನ ಅವನನ್ನು ಗಮನವಿಟ್ಟು ನೋಡಿದ್ದೆ. ಅವನ ಮುಖದಲ್ಲಿ ಎದ್ದುಕಾಣುತ್ತಿದ್ದ ಆಘಾತ, ನಂಬಲಾಗುತ್ತಿಲ್ಲ ಎನ್ನುವ ಭಾವವನ್ನು ವಿವರಿಸಲಾರೆ. ಅವನ ಕನ್ನಡಕ ಮೇಜಿನ ಮೇಲೆ ಬಿತ್ತು. ಬಹಳ ಕಷ್ಟಪಟ್ಟು ಶಾಂತಚಿತ್ತನಾದ. ಆರೋಪಿಗಳ ತಪ್ಪು ಸಾಬೀತಾದರೆ ಮರಣದಂಡನೆಯೇ ಶಿಕ್ಷೆ ಎಂದು ಗೊತ್ತಿದ್ದೂ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ‘ಆದಷ್ಟು ಬೇಗ ನಮಗೆ ಮರಣದಂಡನೆ ವಿಧಿಸಿ’ ಎಂದು ಕೇಳುತ್ತಿದ್ದುದು ಅವನ ಅನುಭವದಲ್ಲೇ ಇದು ಮೊದಲನೇ ಸಲ ಇರಬೇಕು.

ನಾನು, ಸುಜಾನ್, ಜಿಂಬಾ ಹೀಗೆ ಮಾಡಬೇಕು ಎಂದು ಬಹಳ ಎಚ್ಚರಿಕೆಯಿಂದ ಅಭ್ಯಾಸ ಮಾಡಿದ್ದೆವು. ಪ್ರಾಸಿಕ್ಯೂಟರ್‌ಗಳು ನಮ್ಮ ಮೇಲಿನ ಕೇಸನ್ನು ಸಿದ್ಧಪಡಿಸುತ್ತಿರುವಾಗ ನಾವು ಜೈಲಿನಲ್ಲಿದ್ದೆವು. ಆಗಲೇ ನಾವು ಸುದೀರ್ಘ ವಿಚಾರಣೆ ನಡೆಸುವುದಕ್ಕಾಗಲಿ, ನಮ್ಮಲ್ಲಿ ಒಬ್ಬನನ್ನು ಬಿಡುಗಡೆ ಮಾಡುವುದು, ಒಬ್ಬನಿಗೆ ಜೀವಾವಧಿ ಶಿಕ್ಷೆ ಕೊಡುವುದು, ಮತ್ತೊಬ್ಬನಿಗೆ ಮರಣದಂಡನೆ ವಿಧಿಸುವುದು ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಶಿಕ್ಷೆ ವಿಧಿಸಬಹುದಾದ ಸಾಧ್ಯತೆಗಳಿಗಾಗಲಿ ಅವಕಾಶ ಕೊಡಬಾರದು ಎಂದು ನಿರ್ಧರಿಸಿದ್ದೆವು.

ಅದೇ ರೀತಿ ಕರಿಕೋಟಿನ ವಕೀಲರು ಕೇವಲ ತಮ್ಮ ಸಂತೋಷಕ್ಕಾಗಿ ವಾದಮಾಡುತ್ತಾ, ಹಾಸ್ಯಾಸ್ಪದವಾಗಿ ಅಡ್ಡಾಡುತ್ತಾ ನಿಷ್ಪ್ರಯೋಜಕ ವಾದವಿವಾದದಲ್ಲಿ ತೊಡಗಿಸಿಕೊಳ್ಳುವುದು ನಮಗೆ ಬೇಕಿರಲಿಲ್ಲ. ನಾವು ಸಾವನ್ನು ಆಯ್ಕೆ ಮಾಡಿಕೊಂಡಿದ್ದೆವು. ಎಷ್ಟೇ ಆಗಲಿ, ನಾವು ಶಸ್ತ್ರಸಜ್ಜಿತ ದರೋಡೆಕೋರರು, ಡಕಾಯಿತರು ಎಂದು ನಮಗೆ ಗೊತ್ತಿತ್ತು. ಕಾನೂನಿಗೆ ತನ್ನನ್ನು ತಾನು ನಿಷ್ಪ್ರಯೋಜಕ ಎಂದು ನಿರೂಪಿಸುವ ಅವಕಾಶ ಕೊಡುವುದು ನಮಗೆ ಬೇಕಿರಲಿಲ್ಲ. ನಮ್ಮ ಆತ್ಮಸಾಕ್ಷಿಗೆ, ನಮ್ಮ ವೃತ್ತಿಗೆ, ನಮ್ಮ ದೇಶಕ್ಕೆ ಮತ್ತು ಮನುಕುಲಕ್ಕೆ ನಾವು ಪ್ರಾಮಾಣಿಕರಾಗಿದ್ದೆವು.

ʼಈ ಕೂಡಲೇ ನಮಗೆ ಮರಣದಂಡನೆಯನ್ನು ವಿಧಿಸಿ. ತಡಮಾಡದೆ ನಮ್ಮನ್ನು ಫೈರಿಂಗ್‌ ಸ್ಕ್ವ್ಯಾಡ್‌ ಮುಂದೆ ಕಳುಹಿಸಿ,ʼ ಎಂದು ಒಟ್ಟಾಗಿ ಕೂಗಿಕೊಂಡೆವು. ನ್ಯಾಯಾಧೀಶರು ತಮಗಾದ ಆಘಾತದಿಂದ ಚೇತರಿಸಿಕೊಂಡು ʼಕೋರ್ಟಿಗೆ ತೊಂದರೆ ನೀಡುತ್ತಿದ್ದಾರೆ. ಅವರನ್ನು ಕರೆದುಕೊಂಡು ಹೋಗಿ,ʼ ಎಂದು ಆಜ್ಞೆಯಿತ್ತರು.

ನಾವು ನಮ್ಮ ಬೇಡಿಕೆಯನ್ನು ಬದಲಿಸಬಹುದೇನೋ ಎಂದು ಅವರು ನೋಡಲು ಬಯಸಿದಂತಿತ್ತು. ಆದರೆ ನಾವು ನಮ್ಮ ನಿಲುವನ್ನು ಬದಲಿಸಲಿಲ್ಲ. ಮಾರನೆಯ ದಿನ, ಮತ್ತೆ ನಮ್ಮನ್ನು ಕರೆತಂದಾಗ ಅದನ್ನೇ ಗಟ್ಟಿದನಿಯಲ್ಲಿ ಹೇಳಿದೆವು. ನಾವು ಲೂಟಿ ಮಾಡಿದೆವು, ಕೊಲೆ ಮಾಡಿದೆವು, ನಾವು ತಪ್ಪಿತಸ್ಥರು ಎಂದೆವು. ನ್ಯಾಯಾಧೀಶನಿಗೆ ಕೈಕಾಲು ಕಟ್ಟಿಹಾಕಿದಂತಾಗಿ ಅವನೇನು ಮಾಡಬೇಕಿತ್ತೋ ಅದನ್ನೇ ಮಾಡಿದ. ನಾವು ಅವನನ್ನು ತನ್ನ ವೃತ್ತಿಗೆ, ದೇಶದ ಕಾನೂನಿಗೆ, ನ್ಯಾಯ ಎನ್ನುವುದಿದ್ದರೆ ಅದಕ್ಕೆ ಪ್ರಾಮಾಣಿಕವಾಗಿರುವಂತೆ ಒತ್ತಡ ಹೇರಿದ್ದೆವು. ಅದೇನು ಸಣ್ಣ ಸಾಧನೆಯಲ್ಲ. ಇಡೀ ಕೋರ್ಟ್‌ ಹಾಲ್‌ ಸ್ತಬ್ಧವಾಯಿತು; ನಾವು ನಗುತ್ತಾ ಕೋರ್ಟಿನಿಂದ ಹೊರನಡೆದಾಗ ನಮ್ಮ ಕಾವಲುಗಾರರಿಗೆ ಅಚ್ಚರಿಯಾಯಿತು. ʼಎಮ್ಮೆ ಚರ್ಮದ ಕ್ರಿಮಿನಲ್‌ಗಳು,ʼ ʼದರೋಡೆಕೋರರುʼ ಎಂದು ನಾವು ಕೋರ್ಟಿನಿಂದ ಹೊರಬರುತ್ತಿದ್ದಂತೆ ಹೇಳುತ್ತಿರುವುದು ಕಿವಿಗೆ ಬಿತ್ತು. ನಮಗಾಗಿ ಕಾಯುತ್ತಿದ್ದ ಬ್ಲಾಕ್‌ ಮರಿಯಾ ಹತ್ತಲು ಬರುತ್ತಿದ್ದಂತೆ ಪ್ರೇಕ್ಷಕರಲ್ಲೊಬ್ಬ ನಮ್ಮ ಮೇಲೆ ಉಗುಳಿದ!

ನಾನು ಡಕಾಯಿತ ಎನ್ನುವುದನ್ನು ಒಪ್ಪಿಕೊಂಡೆ. ನಾನು ಯಾಕೆ ಹೀಗೆ ಮಾಡಿದೆ ಅಂತ ನೀನು ಕೇಳಬಹುದು. ವರ್ಷಗಳ ನಂತರ ಹ್ಯಾಂಬರ್ಗ್‌ನ ಸೇಂಟ್‌ ಪೌಲಿಯಲ್ಲಿ ನಮ್ಮ ಹಡಗು ನಿಂತಾಗ ನಾನು ಭೇಟಿಯಾದ ಸುಂದರ ಯುವ ವೇಶ್ಯೆಯ ಕತೆಯನ್ನು ಮತ್ತೆ ಹೇಳುವುದರೊಂದಿಗೆ ಈ ಪ್ರಶ್ನೆಗೆ ಉತ್ತರಿಸುತ್ತೇನೆ. ನನ್ನ ಗೆಳೆಯರಿಗೆ ಈ ಕತೆಯನ್ನು ಬೇಕಾದಷ್ಟು ಸಲ ಹೇಳಿದ್ದೇನೆ. ಆ ಘಟನೆಯ ನಂತರ, ಅವಳು ಆ ಜಾಗದಲ್ಲಿ ಯಾಕಿದ್ದಾಳೆ ಎಂದು ಕೇಳಿದೆ. ಕೆಲವು ಹುಡುಗಿಯರು ಆಫೀಸುಗಳಲ್ಲಿ ಸೆಕ್ರೆಟರಿಗಳಾಗಬೇಕು ಅಂದುಕೊಳ್ಳುತ್ತಾರೆ. ಕೆಲವರು ನರ್ಸ್‌ ಆಗಬೇಕು ಎಂದುಕೊಳ್ಳುತ್ತಾರೆ. ನಾನು ವೇಶ್ಯಾವೃತ್ತಿಯನ್ನು ಆಯ್ಕೆ ಮಾಡಿಕೊಂಡೆ ಅಂದಳು.

ಅವಳ ಪ್ರಾಮಾಣಿಕತೆ ನನ್ನ ಮನಸ್ಸನ್ನು ತಟ್ಟಿತು. ಅವಳು ನನ್ನನ್ನು ಯೋಚನೆಗೆ ಹಚ್ಚಿದಳು. ನಾನು ಈ ಮರ್ಚೆಂಟ್‌ ನೇವಿ ಕೆಲಸ ಮಾಡುತ್ತಿರುವುದು ಆಯ್ಕೆಯಿಂದಲೋ ಅಥವಾ ಶಾಲೆ ಬಿಟ್ಟ ನಂತರ ಸಿಕ್ಕ ಮೊದಲ ಕೆಲಸ ಅಂತಲೋ? ಮನೆಗೆ ಹಿಂತಿರುಗಿದ ಮೇಲೆ ಹಡಗಿನ ಕೆಲಸ ಬಿಟ್ಟೆ. ಸೇಂಟ್‌ ಪೌಲಿಯ ಆ ವೇಶ್ಯೆಗೆ ಧನ್ಯವಾದ ಹೇಳಬೇಕು. ಆಮೇಲೆ ರಕ್ಷಣಾ ಸಚಿವಾಲಯದಲ್ಲಿ ಗುಮಾಸ್ತನಾಗಿ ಸೇರಿದೆ.

ಅಲ್ಲಿಯೇ ರಾಷ್ಟ್ರದ ಖಜಾನೆಯ ಬಹಿರಂಗ ಲೂಟಿಯನ್ನು ಮುಖಾಮುಖಿಯಾದದ್ದು. ನನ್ನಲ್ಲಿ ಅದು ಹುಟ್ಟುಹಾಕಿದ ಭಾವನೆಗಳನ್ನು ಹೇಸಿಗೆಯನ್ನು ವ್ಯಕ್ತಪಡಿಸದೆ ವಿವರಿಸುವುದು ಸಾಧ್ಯವಿಲ್ಲ. ಪ್ರತಿಯೊಬ್ಬರು ಆ ಲೂಟಿಯ ಭಾಗವಾಗಿದ್ದರು. ಯಾರಿಗೂ ದೂರು ಸಲ್ಲಿಸಲು ಸಾಧ್ಯವಿರಲಿಲ್ಲ. ಯಾರಿಗೆಲ್ಲ ಈ ಕುರಿತು ದೂರು ನೀಡಿದೆನೋ ಅವರೆಲ್ಲ ನನಗೆ ಹೇಳಿದ್ದು: ʼಅವರನ್ನು ಮಣಿಸಲು ಸಾಧ್ಯವಿಲ್ಲದಿದ್ದರೆ, ಅವರೊಂದಿಗೆ ಕೈಜೋಡಿಸು.ʼ ಅವರ ಗುಂಪು ಸೇರುವುದು ನನ್ನಿಂದ ಸಾಧ್ಯವಿರಲಿಲ್ಲ. ಅವರನ್ನು ಮಣಿಸಲು ಅವರ ವಿರುದ್ಧ ಯುದ್ಧಸಾರಿದೆ. ಸ್ವಲ್ಪ ಸಮಯದಲ್ಲೇ ಅವರು ನನ್ನನ್ನು ಪಕ್ಕಕ್ಕೆ ಸರಿಸಿಬಿಟ್ಟರು. ಕೆಲಸದಿಂದ ವಜಾಮಾಡಿಬಿಟ್ಟರು. ಅವರೊಂದಿಗೆ ಕೈಜೋಡಿಸದೆ ನನಗೆ ಬೇರೆ ದಾರಿ ಇರಲಿಲ್ಲ. ನನ್ನ ಆಯ್ಕೆಯನ್ನು ಮಾಡಿಕೊಳ್ಳಲೇಬೇಕಾಯಿತು. ನಾನು ಶಸ್ತ್ರಸಜ್ಜಿತ ಡಕಾಯಿತನಾದೆ. ಅದು ʼನನ್ನ ಆಯ್ಕೆʼ ಎನ್ನುವುದೇ ನನ್ನ ಉತ್ತರ. ಅದರ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ.

ಅದು ಅಪಾಯಕಾರಿ ಎಂದು ನನಗೆ ಗೊತ್ತಿತ್ತೇ? ಕೆಲವು ಹುಡುಗಿಯರು ಸೆಕ್ರೆಟರಿಗಳಾಗಲು ಬಯಸಿದರೆ ಕೆಲವರು ವೇಶ್ಯೆಯರಾಗುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವು ಗಂಡಸರು ಸೈನಿಕರು, ಪೊಲೀಸರು ಆಗಬೇಕೆಂದುಕೊಳ್ಳುತ್ತಾರೆ. ಮತ್ತೆ ಕೆಲವರು ಡಾಕ್ಟರ್‌ಗಳು, ಲಾಯರ್‌ಗಳು; ನಾನು ಕಳ್ಳನಾಗಬೇಕು ಅಂದುಕೊಂಡೆ. ಪ್ರತಿ ವೃತ್ತಿಗೂ ಅದರದೇ ಆದ ತೊಡಕುಗಳಿವೆ. ಟ್ಯಾಕ್ಸಿ ಚಾಲಕ ರಸ್ತೆಯಲ್ಲಿ ಸಾಯಬಹುದು; ವ್ಯಾಪಾರಸ್ಥ ವಿಮಾನ ಅಪಘಾತದಲ್ಲಿ ಸಾಯಬಹುದು; ಕಳ್ಳ ಫೈರಿಂಗ್‌ ಪಡೆ ಎದುರು ಸಾಯಬಹುದು. ಅದೆಲ್ಲ ದೊಡ್ಡ ವಿಷಯವೇ ಅಲ್ಲ. ನನ್ನನ್ನು ಕೇಳಿದರೆ, ಮದ್ಯಪಾನದ ವ್ಯಸನಕ್ಕೆ ತುತ್ತಾಗಿ ಯಕೃತ್ತಿನ ಸಮಸ್ಯೆಯಿಂದ ನರಳಿ ಸಾಯುವುದಕ್ಕಿಂತ ನಾನು ಆಯ್ಕೆ ಮಾಡಿಕೊಂಡ ಸಾವು ಹೆಚ್ಚು ನಾಟಕೀಯವೂ, ಗುಣಾತ್ಮಕವೂ, ಸರಾಗವೂ ಆದದ್ದಾಗಿದೆ. ಹೌದಲ್ಲವೇ?

ಕಳ್ಳತನ ಸಮಾಜವಿರೋಧಿ ಕೃತ್ಯ ಅನ್ನುತ್ತಿಯಾ ಅಲ್ಲವೇ? ಕಾನೂನನ್ನು ಮುರಿಯುವ ಕೃತ್ಯ. ಇದಕ್ಕೆ ಸಾಕ್ಷ್ಯ ಒದಗಿಸಲು ಬಯಸುವುದಿಲ್ಲ. ಆದರೆ ನೀನೇ ಸುಮ್ಮನೆ ಯೋಚಿಸಿ ನೋಡು, ಎಲ್ಲ ಪ್ರದೇಶಗಳಲ್ಲಿ ಎಷ್ಟು ಜನ ಗಂಡಸರು, ಹೆಂಗಸರು ಒಂದಲ್ಲ ಒಂದು ರೀತಿಯಲ್ಲಿ ಕಾನೂನನ್ನು  ಬಾಗಿಸುವಲ್ಲಿ ಇಲ್ಲವೇ ಮುರಿಯುವಲ್ಲಿ ನಿರತರಾಗಿದ್ದಾರೆ. ಸೆಪ್ಟಂಬರ್‌ ೧೯ನೇ ತಾರೀಖಿನ ʼದ ಗಾರ್ಡಿಯನ್‌ʼ ಪತ್ರಿಕೆ ನೋಡು. ಅದರಲ್ಲಿ ನಾವು ನ್ಯಾಯಾಧೀಶರಿಗೆ ಮಾಡಿದ ಮನವಿಯ ಬಗ್ಗೆ ವರದಿಯಾಗಿದೆ. ಅದರಲ್ಲಿ ಸರ್ಕಾರಿ ಅಧಿಕಾರಿಯೊಬ್ಬ ಏಳು ಮಿಲಿಯನ್‌ ಕದ್ದ ಕತೆಯೂ ಇದೆ. ಅವನು ಸಮಾಜವಿರೋಧಿ ಅಲ್ಲವೇ? ಅವನಂತಹವರು ಎಷ್ಟು ಜನ ನಿನಗೆ ಗೊತ್ತು? ಇನ್ನೂ ಎಷ್ಟೋ ಮಂದಿ ಹಾಗೆ ಪತ್ತೆಯಾಗದೆ ಉಳಿದಿಲ್ಲವೇ? ನನ್ನ ವೃತ್ತಿ ಸಮಾಜವಿರೋಧಿ ಎನ್ನುವುದಾದರೆ ನಾನು ಒಳ್ಳೆಯ ಕಂಪನಿಯಲ್ಲೇ ಇದ್ದೇನೆ. ಆ ಕಂಪನಿಯಲ್ಲಿ ದೇಶದ ರಾಷ್ಟ್ರಪತಿಗಳು, ವ್ಯಾವಹಾರಿಕ ಸಂಸ್ಥೆಗಳು, ಸರ್ಕಾರದ ವಿವಿಧ ಹುದ್ದೆಗಳಲ್ಲಿ ಇರುವವರು, ಗಂಡಸರು, ಹೆಂಗಸರು ಇದ್ದಾರೆ. ಒಂದೇ ವ್ಯತ್ಯಾಸ ಎಂದರೆ ಅದಕ್ಕಾಗಿ ಬೆಲೆ ತೆರಲು ನಾನು ಸಿದ್ಧನಿದ್ದೇನೆ. ಉಳಿದವರು ಸಿದ್ಧವಿಲ್ಲ. ಗೊತ್ತಾಯ್ತಾ?

ನೀನು ಅರ್ಥಮಾಡಿಕೊಳ್ಳಲಿ ಎಂದೋ ಇಲ್ಲ ಕರುಣೆ ತೋರಿಸಲಿ ಎಂದೋ ಎಂದಿಗೂ ಬಯಸುವುದಿಲ್ಲ. ಇದ್ದದ್ದನ್ನು ಇದ್ದಂತೆ ಹೇಳುತ್ತಿದ್ದೇನೆ. ಗೊತ್ತಾಯ್ತಾ? ಶಸ್ತ್ರಸಜ್ಜಿತ ದರೋಡೆಯು ಸಮಾಜದ ಕಲ್ಮಷಗಳಿಗೆ ವಿಶೇಷ ಸಂರಕ್ಷಣೆಯಿದ್ದಂತೆ. ನನ್ನಷ್ಟು ಓದಿದವರು ಯಾರೂ ಡಕಾಯಿತರಾಗುವುದಿಲ್ಲ ಎಂದು ನೀನು ಹೇಳಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ಇದನ್ನು ಮಾಡುವವರು ಚೆನ್ನಾಗಿ ತರಬೇತಿ ಪಡೆದ ಸುಶಿಕ್ಷಿತರು. ಅವರು ಈ ವೃತ್ತಿಗೊಂದು ರೊಮ್ಯಾಂಟಿಕ್‌ ಗುಣವನ್ನು ತಂದುಕೊಡುತ್ತಾರೆ. ಈ ವೃತ್ತಿಪರತೆಯು ಅಂತಿಮವಾಗಿ ಸಮಾಜಕ್ಕೆ ಲಾಭವನ್ನು ತಂದುಕೊಡುತ್ತದೆ. ಇಲ್ಲ, ನಾನು ಹುಚ್ಚನಲ್ಲ. ನಿಜವಾಗಿ ಹೇಳುತ್ತಿದ್ದೇನೆ. ಒಂದು ಕಾಲದಲ್ಲಿ ಆಫ್ರಿಕನ್‌ ದೇಶವು ಅರೆ ವಿದ್ಯಾವಂತ ರಾಜಕಾರಣಿಗಳಿಂದ ಹಾಳಾಗುತ್ತಿತ್ತು. ಇಂದು ಸುಶಿಕ್ಷಿತರು, ಒಳ್ಳೆಯ ತರಬೇತಿ ಪಡೆದ ಮಂದಿ ಆ ಕೆಲಸವನ್ನು ಮಾಡುತ್ತಿದ್ದಾರೆ. ನೋಡು ಎಷ್ಟು ಚೆನ್ನಾಗಿ ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಟೀಕೆಯನ್ನು ಕೇಳಿಯೂ ನನ್ನ ಆತ್ಮ ನೆಮ್ಮದಿಯಿಂದ ನಿದ್ರಿಸುತ್ತದೆ. ಅರ್ಥವಾಯಿತಾ?

ನಿದ್ದೆ ಬಗ್ಗೆ ಹೇಳುತ್ತಿದ್ದೆ ಅಲ್ಲವೇ, ಈ ಚಳಿಯಲ್ಲಿ, ಜೈಲಿನ ಒರಟು ನೆಲದಲ್ಲಿ ಸುಜಾನ್, ಜಿಂಬಾ ಗೊರಕೆ ಹೊಡೆಯುತ್ತಾ ಮಲಗಿರುವುದನ್ನು ನೀನು ನೋಡಬೇಕು. ಇಡೀ ಜೀವನವೇ ಈ ಗೊರಕೆಯ ಮೇಲೆ ನಿಂತಿದೆ ಎನ್ನುವಂತೆ ಮಲಗಿದ್ದಾರೆ. ಇವರೀಗ ಮಲಗಿರೋ ರೀತಿ ನೋಡಿದರೆ ನಾಳೆ ಫೈರಿಂಗ್‌ ಪಡೆಗೆ ಎದೆಯೊಡ್ಡಲಿರುವವರು ಇವರೇ ಎನ್ನುವುದನ್ನು ನಂಬುವುದು ಕಷ್ಟ. ಇವರು ಅಪ್ರತಿಮ ಧೈರ್ಯಶಾಲಿಗಳು. ಅಪರೂಪದ ಲೆಫ್ಟಿನೆಂಟ್‌ಗಳು. ನಾಳೆಯೇ ಅವರ ಬದುಕಿನ ಕೊನೆ. ಇನ್ನು ಮುಂದೆ ಅವರ ಸಾಮರ್ಥ್ಯಗಳಿಂದ ಸಮಾಜಕ್ಕೆ ಉಪಯೋಗವಿಲ್ಲ ಎನ್ನುವುದು ಬೇಸರದ ಸಂಗತಿ. ಸುಜಾನ್ ಮುಂದೊಂದು ದಿನ ಸೇನೆಯ ಉತ್ತಮ ಜನರಲ್‌ ಆಗಿರುತ್ತಿದ್ದ. ಇದಿ ಅಮೀನ್‌ *ಉಗಾಂಡದ ಮಿಲಿಟರಿ ಅಧಿಕಾರಿ ಮತ್ತು ರಾಷ್ಟ್ರಾಧ್ಯಕ್ಷನಾಗಿದ್ದವನು ಅಥವಾ ಬೊಕಾಸ್ಸಾ *ಮಿಲಿಟರಿ ಅಧಿಕಾರಿ ಮತ್ತು ಮಧ್ಯ ಆಪ್ರಿಕಾದ ರಾಷ್ಟ್ರಾಧ್ಯಕ್ಷನಾಗಿದ್ದವನು  ಅವರಂತೆ ನಮ್ಮ ದೇಶದ ರಾಷ್ಟ್ರಾಧ್ಯಕ್ಷ ಕೂಡ ಆಗುತ್ತಿದ್ದ. ಯರೋಪಿಯನ್ನರು ಮತ್ತು ಅಮೆರಿಕನ್ನರಿಗೆ ಅವನು ಆಫ್ರಿಕಾವನ್ನು ಅವನತಿಯತ್ತ ತಳ್ಳಲು ಕೈಜೋಡಿಸಬಲ್ಲ ಉಪಯುಕ್ತ ಗೆಳೆಯನಂತೆ ಕಂಡಿರುತ್ತಿದ್ದ.

ಜಿಂಬಾ ಅದ್ಭುತ ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಆಗಿರುತ್ತಿದ್ದ. ಅವನು ಪೊಲೀಸರ ವಿಧಾನಗಳನ್ನು ಬಹಳ ಚೆನ್ನಾಗಿ ಅರಿತಿದ್ದ! ನಿನಗೆ ಗೊತ್ತಾ, ಸುಜಾನ್ ನಮ್ಮ ದೇಶದ ಹೆಮ್ಮೆಯ ಸೈನ್ಯದಿಂದ ವಜಾಗೊಳಿಸಲಾದ ಸಾರ್ಜೆಂಟ್‌. ಜಿಂಬಾ ಪೊಲೀಸ್‌ ಇಲಾಖೆಯಲ್ಲಿ ಕಾರ್ಪೊರಲ್‌ ಆಗಿದ್ದವನು. ನಾವು ಭೇಟಿಯಾದಾಗ ನಮ್ಮ ಕೌಶಲಗಳಿಂದಾಗಿ ಅದ್ಭುತ ತಂಡವಾಗಿ ಒಟ್ಟಾಗಿ ಕೆಲಸ ಮಾಡಲು ಒಂದೇ ಬಗೆಯ ಕಾರಣಗಳನ್ನು ಹೊಂದಿದ್ದೆವು. ನಾವೆಲ್ಲ ಈಗ ಅತಿಹೆಚ್ಚು ಭದ್ರತೆಯಿರುವ ಜೈಲಿನೊಳಗಿನ ಡೆತ್‌ ಸೆಲ್‌ನೊಳಗಿದ್ದೇವೆ. ಇವರಿಬ್ಬರೂ ತಮ್ಮ ಬದುಕಿನ ಕಡೆಯ ಕ್ಷಣಗಳನ್ನು ಈ ಜೈಲಿನ ತಣ್ಣಗಿನ, ಗಬ್ಬುನಾರುತ್ತಿರುವ ನೆಲದ ಮೇಲೆ ಮಲಗಿ ಗೊರಕೆ ಹೊಡೆಯುತ್ತಾ ಕಳೆಯುತ್ತಿದ್ದಾರೆ. ಅವರಿಬ್ಬರೂ ಜೀವನವನ್ನು ಹೀಗೆ ತಿರಸ್ಕಾರ ಭಾವದಿಂದ ನೋಡುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ. ಅವರ ಈ ಶೈಲಿಯೇ ಇತಿಹಾಸವನ್ನು ಸೃಷ್ಟಿಸುತ್ತದೆ. ಮತ್ತಾವುದೋ ಕಾಲದಲ್ಲಿ ಮತ್ತಾವುದೋ ದೇಶದಲ್ಲಿ ಅವರು ಸರ್‌ ಫ್ರಾನ್ಸಿಸ್‌ ಡ್ರೇಕ್‌* ಇಂಗ್ಲೀಷ್‌ ನಾವಿಕ , ಕಾರ್ಟೆಸ್‌*ಸಾಂಪ್ರದಾಯಿಕ ರಾಜಪ್ರಭುತ್ವದಲ್ಲಿ ಸಲಹೆ ನೀಡುವ ಸಮಾಲೋಚನಾ ಸಂಸ್ಥೆ(ಪೋರ್ಚುಗಲ್‌), ಅಸೆಂಬ್ಲಿ ಆಫ್‌ ಎಸ್ಟೇಟ್ಸ್‌ ಜನರಲ್‌(ಫ್ರಾನ್ಸ್‌) , ಸರ್‌ ವಾಲ್ಟರ್‌ ರಾಲಿ* ಇಂಗ್ಲೀಷ್‌ ರಾಜನೀತಿಜ್ಞ ಆಗಿದ್ದಿರಬಹುದು. ಅವರು ಸಾಮ್ರಾಜ್ಯಗಳನ್ನು ಕಟ್ಟಿ ಪ್ರಸಿದ್ಧರಾಗಿರಬಹುದು. ಈಗ ಇಲ್ಲಿ, ನಮ್ಮ ಬದುಕೊಂದು ಕೊನೆಯಿಲ್ಲದ ದುರಂತವಾಗಿದೆ. ಹೀರೊಗಳಂತೆ ಮೆರೆಯುವುದು ನಮ್ಮ ಭಾಗ್ಯದಲ್ಲಿಲ್ಲ. ನಾವು ಈ ಜೌಗು ಅರಣ್ಯದಲ್ಲಿ ತೆವಳುತ್ತಿರುವ ಸಹಸ್ರಪದಿಗಳು. ಹಾಗಾಗಿ ಸುಜಾನ್‌ ಮತ್ತು ಜಿಂಬಾ ಮೂಕಹಕ್ಕಿಗಳಾಗಿಯೇ ಸಾಯುತ್ತಾರೆ. ನೋಡಿದೆಯಾ?

  ನಾವೆಂದೂ ಯಾರನ್ನೂ ಕೊಲ್ಲುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆವು. ಹಾಗೆಂದೂ ಮಾಡಲಿಲ್ಲ ಕೂಡ. ನಮ್ಮನ್ನೀಗ ಆರೋಪಿಗಳು ಎಂದು ಬಂಧಿಸಲಾಗಿರುವ ಪ್ರಕರಣದಲ್ಲೂ ನಾವು ಕೊಲೆ ಮಾಡಿಲ್ಲ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ತನ್ನ ಪಾಲಿನ ಕೆಲಸವನ್ನು ಸರಿಯಾಗಿ ಮಾಡಿದ್ದರೆ ಎಲ್ಲವೂ ಸರಿಯಾಗಿ ನಡೆದಿರುತ್ತಿತ್ತು. ಅವನು ಕೂಡ ಇದರ ಭಾಗವಾಗಿದ್ದ. ಪ್ರತಿಯೊಂದು ಕಳ್ಳತನದಲ್ಲಿ ಪೊಲೀಸರು ಭಾಗಿಗಳಾಗುತ್ತಿದ್ದರು. ಅವರಿಗೆ ಎಲ್ಲ ಗ್ಯಾಂಗುಗಳು ಪರಿಚಿತ. ನಾವು ಪೊಲೀಸರೊಂದಿಗೆ ಶಾಮೀಲಾಗದಿದ್ದರೆ ನಮ್ಮ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗುವುದು ಸಾಧ್ಯವಿರಲಿಲ್ಲ. ಸುಜಾನ್, ಜಿಂಬಾ ಮತ್ತು ನಾನು ನಮ್ಮ ಗ್ಯಾಂಗಿನ ಲೀಡರ್‌ಗಳು. ನಾವು ನೇರವಾಗಿ ʼಕಾರ್ಯಾಚರಣೆʼಗಳಲ್ಲಿ ಭಾಗವಹಿಸುತ್ತಿರಲಿಲ್ಲ. ನಮ್ಮ ಹುಡುಗರು ಇದನ್ನು ಮಾಡುತ್ತಿದ್ದರು. ಆವತ್ತು ಕೂಡ ಅವರೇ ಹೋಗಿದ್ದರು. ಪೊಲೀಸ್ ಸೂಪರಿಂಟೆಂಡೆಂಟ್ ಸಂಬಳ ಹೊತ್ತೊಯ್ಯುತ್ತಿದ್ದ ವಾಹನದಿಂದ ಪೊಲೀಸ್‌ ಬೆಂಗಾವಲು ವಾಹನಗಳನ್ನು ದೂರವಿಡಬೇಕಿತ್ತು. ಯಾವುದೋ ಕಾರಣದಿಂದಾಗಿ ಅವನು ಅದನ್ನು ಮಾಡಲಾಗಲಿಲ್ಲ. ಪೊಲೀಸಿನವನೊಬ್ಬ ನಮ್ಮ ಹುಡುಗರತ್ತ ಗುಂಡು ಹಾರಿಸಿದ. ಇದಕ್ಕೆ ಪ್ರತಿಯಾಗಿ ಹುಡುಗರು ಪೊಲೀಸನವನನ್ನು, ಕಂಪನಿಯ ಭದ್ರತಾ ಸಿಬ್ಬಂದಿಯವನನ್ನು ಕೊಂದರು. ಹುಡುಗರು ಹಣವನ್ನೇನೋ ಲಪಟಾಯಿಸಿದರು. ಆದರೆ ಪೊಲೀಸಿನವನನ್ನು ಕೊಂದಿದ್ದು ನಮ್ಮ ಒಪ್ಪಂದಕ್ಕೆ ವಿರುದ್ಧವಾಗಿತ್ತು. ಪೊಲೀಸರಿಗೆ ತಮ್ಮ ಸಿಬ್ಬಂದಿಯ ಕೊಲೆಯನ್ನು ಸಹಿಸುವುದು ಸಾಧ್ಯವಿರಲಿಲ್ಲ. ಅವರು ಹಣವನ್ನೆಲ್ಲ ತೆಗೆದುಕೊಂಡು ಹುಡುಗರ ಬೆನ್ನುಹತ್ತಿದರು. ಅವರನ್ನು ಬಂಧಿಸಲು ನಾವು ಒಪ್ಪಲಿಲ್ಲ. ಹುಡುಗರು ಆಜ್ಞೆಯಂತೆ ವರ್ತಿಸಿದ್ದರು. ನಾವು ಹುಡುಗರ ಬದಲಿಗೆ ಶರಣಾದೆವು.

ಪೊಲೀಸರು ನಮ್ಮನ್ನು ಬಂಧಿಸಿದರು. ಇದೊಂದು ದೊಡ್ಡ ಸುದ್ದಿಯಾಯಿತು. ಹುಡುಗರು ಮುಂದೇನು ಮಾಡಬೇಕು ಅಂತ ನಿರ್ಧಾರ ತೆಗೆದುಕೊಂಡಿರುತ್ತಾರೆ. ಪೊಲೀಸ್‌ ಸೂಪರಿಂಡೆಂಟ್‌ಗೆ ಏನಾಯಿತು ಗೊತ್ತಿಲ್ಲ. ಅವನು ತನ್ನ ಪಾಡನ್ನು ತಾನೇ ನೋಡಿಕೊಳ್ಳುತ್ತಾನೆ. ನಾನು ರಕ್ತ ಹರಿಸಿಲ್ಲ ಎಂದು ಗೊತ್ತಾಯಿತಲ್ಲ? ನಿನಗಿದು ಸಮಾಧಾನ ಕೊಡಬಹುದು. ನಾನು ಕೊಲೆ ಮಾಡಲಿಲ್ಲ. ಕದ್ದದ್ದನ್ನು ನನ್ನ ಹತ್ತಿರವೇ ಇಟ್ಟುಕೊಳ್ಳಲಿಲ್ಲ. ಶ್ರೀಮಂತರಿಂದ ಕದ್ದದ್ದನ್ನು ಗ್ಯಾಂಗಿನವರೆಲ್ಲ ಹಂಚಿಕೊಳ್ಳುತ್ತಿದ್ದೆವು. ನಮ್ಮ ಗ್ಯಾಂಗಿನಲ್ಲಿ ಇದ್ದವರೆಲ್ಲ ಬಡವರು. ಸುಜಾನ್‌, ಜಿಂಬಾ ಮತ್ತು ನಾನು ಕೂಡ ಶ್ರೀಮಂತರಲ್ಲ.

ಅನೇಕರು ನಾವು ನಮ್ಮ ಬದುಕಿನ ಬಗ್ಗೆ ಬೇಜವಾಬ್ದಾರಿತನದಿಂದ ಇದ್ದೇವೆ, ಅಸಡ್ಡೆಯಿಂದ ಇದ್ದೇವೆ ಎಂದು ದೂರುತ್ತಾರೆ. ನಾವು ನಮ್ಮ ವೃತ್ತಿಯನ್ನು ಆಯ್ಕೆಮಾಡಿಕೊಂಡೆವು ಅಂದೆನಲ್ಲ ನಾವು ಮಾಡುತ್ತಿರುವುದಕ್ಕೂ ಜಗತ್ತಿನಾದ್ಯಂತ ಉಳಿದವರು ಮಾಡುತ್ತಿರುವುದಕ್ಕೂ ಏನೂ ವ್ಯತ್ಯಾಸ ಕಾಣುತ್ತಿಲ್ಲ. ಇದನ್ನು ನಮ್ಮ ನಿದ್ರಿಸುತ್ತಿರುವ ಕಾಮ್ರೇಡುಗಳಿಗೆ ಹೇಳುತ್ತಿದ್ದೇನೆ. ಬದುಕಿನ ಎಲ್ಲ ರಂಗಗಳಲ್ಲಿ ಅಂದರೆ ರಾಜಕೀಯ, ವಾಣಿಜ್ಯ ಮತ್ತಿತರ ವೃತ್ತಿಗಳಲ್ಲಿ ಕಳ್ಳತನ ಎನ್ನುವುದು ಇದ್ದೇಇದೆ. ಇದು ಕಾಲದಿಂದಲೂ ಹೀಗೆ ನಡೆಯುತ್ತಾ ಬಂದಿದೆ. ಹಿಂದಿನ ದಿನಗಳಲ್ಲಿ ನಮ್ಮ ಪೂರ್ವಜರು ತಮ್ಮ ಬಂಧುಗಳನ್ನು ಮಣಿಗಳು, ಕನ್ನಡಿಗಳು, ಮದ್ಯ, ತಂಬಾಕಿನಂತಹ ವಸ್ತುಗಳಿಗಾಗಿ ಗುಲಾಮರಾಗಿ ಮಾರಿಬಿಡುತ್ತಿದ್ದರು. ಇಂದಿನ ದಿನಗಳಲ್ಲೂ ಇದು ಹಾಗೇ ಇದೆ. ಆದರೆ ವಸ್ತುಗಳು ಕಾರುಗಳು, ರೇಡಿಯೋಗಳು, ಬ್ಯಾಂಕ್‌ ಅಕೌಂಟುಗಳಾಗಿ ಬದಲಾಗಿದೆ. ಏನೂ ಬದಲಾಗಿಲ್ಲ. ಮುಂದೆಯೂ ಬದಲಾಗುವುದಿಲ್ಲ. ಜೋಲೆ, ಇದು ನಾಳೆಯಾಚೆಗೂ ಬದುಕಬೇಕು ಎನ್ನುವವರ ಸಮಸ್ಯೆ.

ಹುಂಜ ಕೂಗುತ್ತಿದೆ. ಬೆಳಕು ಹರಿಯಲಿದೆ. ಸಾಂಕೇತಿಕವಾಗಿ ಮಾತನಾಡುತ್ತಿಲ್ಲ. ಈ ಕೋಣೆಯಲ್ಲಿ ನಾನು ಬರೆಯಲು ಹಚ್ಚಿಟ್ಟುಕೊಂಡಿರುವ ಮೊಂಬತ್ತಿಯ ಬೆಳಕನ್ನು ಬಿಟ್ಟು ಎಲ್ಲ ಕಡೆಯೂ ಕತ್ತಲೆಯಿದೆ. ಸುಜಾನ್, ಜಿಂಬಾ ಮತ್ತು ಜೈಲಿನ ಕಾವಲುಗಾರ ಇನ್ನೂ ಮಲಗಿದ್ದಾರೆ. ಕಾವಲುಗಾರ ರಾತ್ರಿಯಿಡೀ  ನಿದ್ದೆ ಮಾಡುತ್ತಾನೆ. ಅವನಿಂದ ನಮಗೇನೂ ತೊಂದರೆಯಿಲ್ಲ. ನಾವು ಬಯಸಿದ್ದರೆ ಇಲ್ಲಿಂದ ತಪ್ಪಿಸಿಕೊಂಡು ಹೋಗಬಹುದಿತ್ತು. ಅದು ನಮಗೆ ಅನಗತ್ಯ ಅನ್ನಿಸಿತು. ಜೀವನವೆನ್ನುವ ಹೊರೆಯಿಂದ ಮುಕ್ತಿ ನೀಡುವಂತಹ ಘಟನೆ ಈ ಬೆಳಿಗ್ಗೆ ನಡೆಯಲಿದೆ.

ಕಾವಲುಗಾರ ಹಾಗೂ ನೀವು ಜೈಲಿನಲ್ಲಿರುವ ಜೀವಂತ ವ್ಯಕ್ತಿಗಳು. ನೀವು ಸೆರೆಯಲ್ಲಿದ್ದೀರಿ ಎನ್ನುವುದೇ ನಿಮಗೆ ಗೊತ್ತಿಲ್ಲದಿರುವುದರಿಂದ ನೀವು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಸಂತೋಷ ಅಜ್ಞಾನದಿಂದ ಉಂಟಾದದ್ದು. ಆ ಅಜ್ಞಾನವೇ ನಿಮ್ಮನ್ನು ಜೈಲಿನೊಳಗೆ ಇರಿಸಿದೆ. ಅದೇ ನಿಮ್ಮ ಜೀವನ. ಈ ರಾತ್ರಿ ಕರಗಿ ದಿನ ಹುಟ್ಟುತ್ತಿದ್ದಂತೆ ಸುಜಾನ್, ಜಿಂಬಾ ಮತ್ತು ನಾನು ಸ್ವತಂತ್ರರಾಗುತ್ತೇವೆ. ಸುಜಾನ್ ಮತ್ತು ಜಿಂಬಾ ಯಾವುದೇ ಕುರುಹನ್ನು ಉಳಿಸಿಹೋಗುತ್ತಿಲ್ಲ. ನಾನು ಕನಿಷ್ಠ ಈ ಪತ್ರವನ್ನು ಬಿಟ್ಟು ಹೋಗುತ್ತಿದ್ದೇನೆ. ಇದನ್ನು ಮುಂದಿನ ಪೀಳಿಗೆಯವರಿಗಾಗಿ ಉಳಿಸಿ.

ಜೋಲೆ, ನಾನು ಕೂಗಾಡುತ್ತಿರುವೆನಾ? ನಿನ್ನೆದುರು ಕಹಿಧ್ವನಿಯಲ್ಲಿ ಮಾತಾಡುತ್ತಿರುವೆನಾ? ನಾನು ಸಾಯಲಿದ್ದೇನೆ ಎನ್ನುವ ಕಾರಣಕ್ಕಾಗಿ ಹೀಗೆ ಮಾತಾಡುತ್ತಿದ್ದೇನೆ ಎನ್ನಬೇಡ. ಮತ್ತೊಮ್ಮೆ ಯೋಚಿಸಿದರೆ ನಿನಗಿದು ಅರ್ಥವಾಗುತ್ತದೆ. ಸಾವನ್ನು ಇಷ್ಟು ಹತ್ತಿರದಿಂದ ನೋಡುತ್ತಿರುವುದು ನನ್ನನ್ನು ಸೂಕ್ಷ್ಮವಾಗಿಸಿರಬಹುದೇ? ಈ ವಿಷಯಗಳನ್ನು ಮನಸ್ಸಿನಲ್ಲಿ ಹಲವು ಬಾರಿ ಚಿತ್ರಿಸಿಕೊಂಡಿದ್ದೇನೆ. ಇವುಗಳ ಬಗ್ಗೆ ಎಂದೂ ಮಾತಾಡಿಲ್ಲ, ಚರ್ಚಿಸಿಲ್ಲ.

ಇನ್ನು ಕೆಲವೇ ಗಂಟೆಗಳಲ್ಲಿ ನಮ್ಮನ್ನು ಕರೆಯುತ್ತಾರೆ. ಉಳಿದವರೊಂದಿಗೆ ಬ್ಲಾಕ್‌ ಮರಿಯಾ ಎನ್ನುವ ಶೋಚನಿಯ ಸ್ಥಿತಿಯಲ್ಲಿರುವ ಲಾರಿಯನ್ನು ಹತ್ತುತ್ತೇವೆ. ಶೋಚನೀಯವಾದದ್ದೆಲ್ಲ ಹೇಗೆ ನಮ್ಮೊಂದಿಗೆ ಸಂಬಂಧ ಹೊಂದಿದೆ ಗಮನಿಸು. ಬ್ಲಾಕ್‌ ಶೀಪ್‌, ಬ್ಲಾಕ್‌ ಮರಿಯಾ, ಬ್ಲಾಕ್‌ ಡೆತ್‌, ಬ್ಲಾಕ್‌ ಲೆಗ್‌, ಬ್ಲಾಕ್‌ ಹೋಲ್‌ ಆಫ್‌ ಕಲ್ಕತ್ತಾ (ಕಪ್ಪು ಸೆರೆಮನೆ).. ಬ್ಲಾಕ್‌ ಮರಿಯಾ ನಮ್ಮನ್ನು ಸಮುದ್ರದ ದಂಡೆಗೆ ಇಲ್ಲವೇ ಸ್ಟೇಡಿಯಂಗೆ ಕರೆದೊಯ್ಯುತ್ತದೆ. ಸ್ಟೇಡಿಯಂಗೆ ಕರೆದೊಯ್ಯುತ್ತಾರೆ ಎಂದು ನನಗೆ ಖಂಡಿತವಾಗಿ ಗೊತ್ತು. ಆದರೂ ಸಮುದ್ರದ ದಂಡೆಗೆ ಕರೆದೊಯ್ಯಲಿ ಎಂದು ಬಯಸುತ್ತೇನೆ. ಮತ್ತೊಮ್ಮೆ ಸಮುದ್ರವನ್ನು ನೋಡಬಹುದು. ಮರ್ಚೆಂಟ್‌ ನೇವಿ ಕೆಲಸ ಮಾಡಿದಂದಿನಿಂದ ಸಮುದ್ರದ ಬಗ್ಗೆ ಏನೋ ಪ್ರೀತಿ. ಅದರ ವಿಸ್ತಾರ, ಅಗಾಧತೆ, ಶಕ್ತಿ, ಊಹಿಸಲಸಾಧ್ಯವಾದ ಅದರ ಆಳ ಎಂದರೆ ಪ್ರೀತಿ. ನಮಗೆ ಗುಂಡು ಹಾರಿಸಿದ ನಂತರ ನಮ್ಮ ದೇಹಗಳನ್ನು ಸಮುದ್ರದೊಳಗೆ ಎಸೆಯಬಹುದು. ನಮ್ಮನ್ನು ಶಾರ್ಕ್‌ಗಳು ತಿನ್ನಬಹುದು. ಜಪಾನಿನ ಇಲ್ಲವೇ ರಷ್ಯಾದ ಮೀನುಗಾರ ಅದನ್ನು ಹಿಡಿದು ಶೈತ್ಯೀಕರಣ ಪೆಟ್ಟಿಗೆಗಳಲ್ಲಿಟ್ಟು, ಪ್ಯಾಕ್‌ ಮಾಡಿ ಭಾರತೀಯ ವ್ಯಾಪಾರಿಗಳಿಗೆ ಮಾರಬಹುದು. ಹೀಗೆ ನಮ್ಮ ಜನ ಲಾಭ ಮಾಡಿ ಇನ್ನೊಂದಿಷ್ಟು ದಿನ ಬದುಕಲು ನಾನು ಸಹಾಯ ಮಾಡಬಹುದು. ಆದರೆ ಅವರು ಹಾಗೆ ಮಾಡುವುದಿಲ್ಲ.

ತಮಾಷೆಯನ್ನು ಇಷ್ಟಪಡುವ ನಿರುದ್ಯೋಗಿಗಳಿಗೆ ಈ ದೃಶ್ಯ ತೋರಿಸಲು, ಅವರನ್ನು ಅಪಾಯವನ್ನು ಮೈಮೇಲೆ ಎಳೆದುಕೊಳ್ಳದಂತೆ ತಡೆಯಲು, ಯೋಚಿಸದಿರುವಂತೆ ಮಾಡಲು, ಸದಾ ನಗುತ್ತಾ, ಕುಣಿಯುತ್ತಿರುವಂತೆ ಮಾಡಲು ಅವರು ನಮ್ಮನ್ನು ಸ್ಟೇಡಿಯಂಗೆ ಕರೆದೊಯ್ಯುತ್ತಾರೆ ಎಂದು ನನಗೆ ಖಚಿತವಾಗಿ ಗೊತ್ತು.

ಈಗ ಹಾಕಿಕೊಂಡಿರುವ ಗಲೀಜು ಬಟ್ಟೆಗಳಲ್ಲೇ ಅಲ್ಲಿಗೆ ಹೋಗುತ್ತೇವೆ. ನಮ್ಮ ಯಾವುದೇ ವಸ್ತುಗಳನ್ನು ಕಳೆದೊಂದು ತಿಂಗಳಿಂದ ತೊಳೆದಿಲ್ಲ. ಕಟ್ಟಿಹಾಕುವುದು ಅಗತ್ಯವೇನೋ ಎನ್ನುವಂತೆ ನಮ್ಮನ್ನು ಕಂಬಕ್ಕೆ ಕಟ್ಟಿಹಾಕುತ್ತಾರೆ. ನಾವು ತಪ್ಪಿಸಿಕೊಳ್ಳಬೇಕು ಎಂದುಕೊಂಡರೂ ಕೂಡ, ಎಲ್ಲಿಗೆ ಓಡಿಹೋಗುವುದು? ಕಣ್ಣಿಗೆ ಕೂಡ ಬಟ್ಟೆ ಕಟ್ಟುತ್ತಾರೆ ಅನ್ನಿಸುತ್ತದೆ. ಸುಜಾನ್ ಮತ್ತು ಜಿಂಬಾ ಕಣ್ಣಿಗೆ ಬಟ್ಟೆ ಕಟ್ಟಿಸಿಕೊಳ್ಳುವುದಿಲ್ಲವಂತೆ. ಅದನ್ನು ನಾನೂ ಒಪ್ಪುತ್ತೇನೆ. ನನ್ನತ್ತ ಗುಂಡು ಹಾರಿಸುವವರನ್ನು ನೋಡಬೇಕು. ಬಂದೂಕಿನ ನಳಿಗೆಯ ತೂತನ್ನು ಧೈರ್ಯವಾಗಿ ದಿಟ್ಟಿಸಬೇಕು. ತೆರೆದ ಆಕಾಶ, ಸೂರ್ಯ, ಹಗಲಿನ ಬೆಳಕನ್ನು ನೋಡಬೇಕು. ನಮ್ಮ ಸಾವಿಗೆ, ವಿಮೋಚನೆಗೆ, ಸ್ವಾತಂತ್ರ್ಯಕ್ಕೆ ಹರ್ಷೋದ್ಗಾರ ಮಾಡುವ ದೇಶದ ಜನರನ್ನು ನೋಡಬೇಕು.

ಸ್ಟೇಡಿಯಂ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಹಲವರು ಜಾಗ ಸಿಗದೆ ಮರಗಳ ಮೇಲೆ, ಸುತ್ತಲಿರುವ ಮನೆಗಳ ಬಾಲ್ಕನಿಗಳಲ್ಲಿ ನಿಂತು ನಮ್ಮನ್ನು ನೋಡುತ್ತಾ ಈ ಉಚಿತ ಪ್ರದರ್ಶನವನ್ನು ಆನಂದಿಸುತ್ತಾರೆ.

ಆಮೇಲೆ ಪಾದ್ರಿ ನಮಗಾಗಿ ಪ್ರಾರ್ಥಿಸಲು ಇಲ್ಲವೇ ನಮಗೇನಾದರೂ ಕಡೆಯ ಆಸೆಗಳಿವೆಯೇ ಎಂದು ಕೇಳಲು ನಮ್ಮ ಬಳಿಬರುತ್ತಾನೆ. ಸುಜಾನ್ ಹೇಳಿದ ಆಗ ಅವನು ಸಿಗರೇಟ್‌ ಕೇಳುತ್ತಾನಂತೆ. ಖಂಡಿತವಾಗಿ ಅವನಿಗೆ ಸಿಗರೇಟು ಕೊಡುತ್ತಾರೆ. ಗುಂಡು ಅವನನ್ನು ನೆಲಕ್ಕುರುಳಿಸುವ ಮುನ್ನ ಅವನು ಸಿಗರೇಟು ಸೇದುತ್ತಿರುವುದು ನನಗೆ ಕಾಣುತ್ತಿದೆ. ಜೀವನದಲ್ಲಿ ಅಲ್ಲಿಯವರೆಗೂ ಆನಂದಿಸಿದ ಉಳಿದೆಲ್ಲ ಸಂಗತಿಗಳಿಗಿಂತ ಆ ಸಿಗರೇಟನ್ನು ಹೆಚ್ಚು ಆನಂದದಿಂದ ಸೇದುತ್ತೇನೆ ಎಂದು ಅವನು ಹೇಳಿದ. ಜಿಂಬಾ ತನ್ನ ತಿರಸ್ಕಾರವನ್ನು ಸೂಚಿಸಲು ಮೌನವಾಗಿ ಇರುತ್ತೇನೆ ಎಂದ. ʼವಂಚಕ, ವ್ಯಭಿಚಾರಿ ನರಕಕ್ಕೆ ಹೋಗುʼ ಎಂದು ಪಾದ್ರಿಯನ್ನು ನೋಡಿ ಅರಚುತ್ತೇನೆ. ಪ್ರೇಕ್ಷಕರಿಗೂ ಕೇಳಿಸಲಿ ಎಂದು ಸಾಧ್ಯವಾದಷ್ಟು ದೊಡ್ಡ ದನಿಯಲ್ಲಿ ಅರಚುತ್ತೇನೆ. ಅಲ್ಲೊಂದು ಮೈಕ್‌ ಇದ್ದಿದ್ದರೆ ಇಡೀ ಸ್ಟೇಡಿಯಂಗೆ ಅಲ್ಲ ಇಡೀ ದೇಶಕ್ಕೆ ಕೇಳಿಸುವಂತೆ ಹೇಳಬಹುದಿತ್ತು! ಆಗ ಆ ಪಾದ್ರಿಯನ್ನು ನೋಡಿ, ಅವನನ್ನು ಕಳುಹಿಸಿದವರನ್ನು ನೋಡಿ ನಗುತ್ತಿದ್ದರು.

ಪಾದ್ರಿ ನಮ್ಮ ಆತ್ಮಗಳಿಗಾಗಿ ಪ್ರಾರ್ಥಿಸುತ್ತಾನೆ. ಆದರೆ ಅವನು ಪ್ರಾರ್ಥಿಸಬೇಕಿರುವುದು ನಮಗಲ್ಲ. ದಿನವೂ ಹಿಂಸೆಯಲ್ಲಿ ನರಳುತ್ತಾ ಜೀವನ ಕಳೆಯುತ್ತಿರುವವರಿಗಾಗಿ ಪ್ರಾರ್ಥಿಸಬೇಕು. ಅವನ ಪ್ರಾರ್ಥನೆಯ ನಡುವೆ ಗುಂಡು ಹಾರುತ್ತದೆ. ಅಲ್ಲಿ ಸ್ಮಶಾನ ಮೌನ ಆವರಿಸುತ್ತದೆ. ಬದುಕಿನಿಂದ ಸಾವಿನೆಡೆಗಿನ ಪರಿವರ್ತನೆ. ಇವುಗಳ ನಡುವಿನ ವ್ಯತ್ಯಾಸ ಬಹಳ ಸೂಕ್ಷ್ಮ. ಸ್ಟೇಡಿಯಂನಲ್ಲಿ ಉಸಿರಾಡುತ್ತಿರುವ ಜನ ಹಾಗೂ ಹುಳಗಳಿಗೆ ಆಹಾರವಾಗಲಿರುವ ನಮ್ಮ ನಡುವಿನ ವ್ಯತ್ಯಾಸ ಬಹಳ ತೆಳುವಾದದ್ದು. ಅದು ಬದುಕನ್ನು ಓಡಾಡುತ್ತಿರುವ ಸಾವಿನಂತಾಗಿಸಿದೆ. ದಿನದಿಂದ ದಿನಕ್ಕೆ ಮಂಕಾಗುತ್ತಿರುವ ಈ ಜಗತ್ತಿನಿಂದ, ಅರ್ಥಹೀನ ಅಸ್ತಿತ್ವದಿಂದ ಬಿಡುಗಡೆ ಹೊಂದಲು ನನಗಂತೂ ಖುಷಿಯಾಗುತ್ತಿದೆ. ಸುಜಾನ್ ಮತ್ತು ಜಿಂಬಾನನ್ನು ಮಿಸ್‌ ಮಾಡಿಕೊಳ್ಳುತ್ತೇನೆ. ಇಂತಹ ಸಂಭಾವಿತರನ್ನು ಹೀಗೆ ಕೊಲ್ಲುತ್ತಿರುವುದನ್ನು ನೋಡಲು ನಾಚಿಕೆಯಾಗುತ್ತಿದೆ. ನನ್ನ ಪ್ರೀತಿಯ ಹುಡುಗಿ, ನಿನ್ನನ್ನು ಕೂಡ ಮಿಸ್‌ ಮಾಡ್ಕೋತಿನಿ. ಆದರೆ ಇದ್ಯಾವುದೂ ಅಲ್ಲಿನ ಪ್ರೇಕ್ಷಕರ ಮೇಲೆ ಪರಿಣಾಮ ಬೀರುವುದಿಲ್ಲ.

ಅವರೆಲ್ಲ ಈಗಷ್ಟೇ ಯಾವುದೋ ಫುಟ್‌ಬಾಲ್‌ ಆಟ ನೋಡಿ ಮುಗಿಸಿದವರಂತೆ ಸ್ಟೇಡಿಯಂನಿಂದ, ಮರಗಳಿಂದ, ಬಾಲ್ಕನಿಗಳಿಂದ ಇಳಿದು ಹೊರಟು ಹೋಗುತ್ತಾರೆ. ತಮ್ಮ ಶನಿವಾರದ ಸಂಜೆಗಳಿಗೆ ಸಾಕಾಗುವಷ್ಟು ಕತೆಗಳನ್ನು ತುಂಬಿಕೊಳ್ಳುತ್ತಾರೆ. ದರಿದ್ರದವರು!

ನಮ್ಮನ್ನು ಜೀವನದಿಂದ ಮುಕ್ತಗೊಳಿಸಿದವರು ನಮ್ಮ ದೇಹಗಳನ್ನು ಬಿಚ್ಚಿ ಲಾರಿಯೊಳಗೆ ಎಸೆಯುತ್ತಾರೆ. ಅಲ್ಲಿಂದ ನಮ್ಮನ್ನು ಸ್ಮಶಾನಕ್ಕೆ ತರುತ್ತಾರೆ. ಇದರಷ್ಟು ಅಸಹ್ಯದ ಕೆಲಸ ಇನ್ನೊಂದಿಲ್ಲ. ಮಿಲಿಯನ್‌ ಡಾಲರ್‌ಗಳನ್ನು ಕೊಟ್ಟರೂ ನಾನೀ ಕೆಲಸ ಮಾಡಲಾರೆ. ಕೆಲವು ದಟ್ಟದರಿದ್ರರು ತಿಂಗಳ ಕೊನೆಯಲ್ಲಿ ಸಿಗುವ ಕೆಟ್ಟ ಸಂಬಳಕ್ಕಾಗಿ ಈ ಕೆಲಸ ಮಾಡುತ್ತಾರೆ. ತಮ್ಮ ದೇಹ ಮತ್ತು ಆತ್ಮವನ್ನು ಉಳಿಸಿಕೊಳ್ಳಲು ಸಂಬಳದೊಂದಿಗೆ ಲಂಚವನ್ನು ಪಡೆಯುತ್ತಾರೆ. ಅವರನ್ನು ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ ಗೊತ್ತಾ?

ದಿನಪತ್ರಿಕೆಗಳು ಪ್ರಾಮಾಣಿಕವಾಗಿ ಗುಂಡುಹಾರಿಸಿದ್ದರ ಕುರಿತು ದಾಖಲಿಸುತ್ತವೆ. ಜಾಗ ಉಳಿದಿದ್ದಲ್ಲಿ ಬೆಳಗಿನ ತಿಂಡಿಯ ಜೊತೆ ಆಸ್ವಾದಿಸಲು ನಮ್ಮ ಫೋಟೊವನ್ನು ಪ್ರಕಟಿಸುತ್ತದೆ.

ವ್ಯಕ್ತಿಯೊಬ್ಬ ಪಾದ್ರಿಗೆ ವರ್ಷಗಳಿಂದ ತನ್ನ ಸಂಗಾತಿಯಂತಿದ್ದ ಊರುಗೋಲನ್ನು ತನ್ನೊಂದಿಗೆ ಮಣ್ಣು ಮಾಡಬೇಕೆಂದು ಕೇಳಿಕೊಂಡಿದ್ದನೆಂದು ಬಹಳ ದಿನಗಳ ಹಿಂದೆ ದಿನಪತ್ರಿಕೆಯಲ್ಲಿ ಓದಿದ್ದ ನೆನಪು. ಅವನು ತನ್ನ ಸಾವಿನಲ್ಲೂ ತನ್ನ ಪ್ರೀತಿಯ ಊರುಗೋಲನ್ನು ಬಿಡಲಿಲ್ಲ ಎನ್ನುವಂತೆ ಚಿತ್ರಿಸಲಾಗಿತ್ತು. ನಿಜವಾದ ಸ್ನೇಹವದು. ಜೋಲೆ, ನನ್ನದು ಅಂತಹ ಫೋಟೊ ಎಲ್ಲಾದರೂ ಕಂಡಲ್ಲಿ ಅದನ್ನು ಕತ್ತರಿಸಿ ಇಟ್ಟುಕೊ.

ಅದನ್ನು ಶಿಲ್ಪಿಗೆ ಕೊಟ್ಟು ಆ ಫೋಟೊದಲ್ಲಿರುವಂತೆ ನನ್ನದೊಂದು ಕಲ್ಲಿನ ಪ್ರತಿಮೆ ಮಾಡಲು ಹೇಳು. ಸಾಧ್ಯವಾದಷ್ಟು ಅವನು ನಾನು ಇರುವಂತೆಯೇ ಕೆತ್ತಬೇಕು. ಈ ವಿಷಯದಲ್ಲಿ ನಾನು ರಾಜಿಯಾಗುವುದಿಲ್ಲ. ಅದಕ್ಕಾಗಿಯೇ ಬ್ಯಾಂಕಿನಲ್ಲಿ ಒಂದು ಸಣ್ಣ ಮೊತ್ತವನ್ನು ಇಟ್ಟಿದ್ದೇನೆ. ಅದನ್ನು ನಿನಗೆ ನೀಡಲು ಈಗಾಗಲೇ ಬ್ಯಾಂಕಿಗೆ ಹೇಳಿದ್ದೇನೆ…

ಸಮಯ ಮುಗಿಯುತ್ತಾ ಬಂತು ಜೋಲೆ. ಸುಜಾನ್‌ ಮತ್ತು ಜಿಂಬಾ ಎದ್ದರು. ನಾನು ರಾತ್ರಿಯಿಡಿ ಮಲಗೇ ಇಲ್ಲ ಎಂದು ಅವರಿಗೆ ಅಚ್ಚರಿ. ಭೂಮಿಯ ಮೇಲಿನ ನನ್ನ ಕಡೆಯ ರಾತ್ರಿಯಲ್ಲಿ ನನಗಾಗಿ ಕನಿಷ್ಠ ಒಳ್ಳೆಯ ನಿದ್ದೆಯನ್ನಾದರೂ ಮಾಡಬೇಕಿತ್ತು ಅಂತ ಸುಜಾನ್‌ ಹೇಳುತ್ತಿದ್ದಾನೆ. ಇನ್ನು ಕೆಲವೇ ಗಂಟೆಗಳಲ್ಲಿ ಚಿರನಿದ್ರೆಗೆ ಜಾರುವುದಿಲ್ಲವೇ? ಎಂದು ಅವನನ್ನು ಕೇಳಿದೆ. ನನ್ನ ಪ್ರಕಾರ ಇದು ನಾವು ಎಚ್ಚರವಾಗಿ ಇರಬೇಕಾದ ರಾತ್ರಿ. ಸುಜಾನ್, ಜಿಂಬಾ ಇದನ್ನು ಒಪ್ಪುವುದಿಲ್ಲ. ಅವರಿಬ್ಬರೂ ಎದ್ದು ನಿಂತು, ಆಕಳಿಸುತ್ತಾ, ಕಣ್ಣುಜ್ಜುತ್ತಾರೆ. ಆಮೇಲೆ ನನ್ನ ಸುತ್ತುವರಿದು ಕೂರುತ್ತಾರೆ. ನಾನೇನು ಬರೆದಿದ್ದೇನೋ ಅದನ್ನು ಓದು ಎನ್ನುತ್ತಾರೆ. ನಾನು ಓದಲಾರೆ ಎಂದೆ. ಪ್ರೇಮ ಪತ್ರ! ಅದೂ ಸಾಯೋ ಹೊತ್ತಲ್ಲಿ! ನನಗೆ ಹುಚ್ಚು ಹಿಡಿದಿರಬೇಕು ಎಂದು ಸುಜಾನ್ ಹೇಳುತ್ತಿದ್ದಾನೆ. ಜಿಂಬಾ ನನಗೆ ಸಾವಿನ ಬಗ್ಗೆ ಭಯವಾಗಿರಬೇಕು ಎಂದು ಅವನು ಹೇಳಿದ್ದು ನಿಜವೇ ಎಂದು ತಿಳಿಯಲು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ನನಗೆ ಹುಚ್ಚೂ ಹಿಡಿದಿಲ್ಲ, ಭಯವೂ ಆಗುತ್ತಿಲ್ಲ ಅಂದೆ. ನನ್ನ ಬಾಲ್ಯದ ಗೆಳತಿಗೆ ಈ ವಿಶೇಷ ರಾತ್ರಿಯ ಬಗ್ಗೆ ನನಗೇನನ್ನಿಸುತ್ತಿದೆ ಎಂದು ಹೇಳುತ್ತಿದ್ದೇನೆ. ಅವಳಿಗೊಂದು ವಿಶೇಷ ಕೆಲಸವನ್ನು ವಹಿಸುತ್ತಿದ್ದೇನೆ. ನನಗೊಬ್ಬಳು ಗೆಳತಿ ಇರುವ ವಿಷಯ ಅವರಿಗೆ ಹೇಳೇ ಇಲ್ಲವಲ್ಲ ಎಂದು ಜಿಂಬಾ ಕೇಳುತ್ತಿದ್ದಾನೆ. ಈ ಕ್ಷಣದವರೆಗೂ ಅವಳು ಮುಖ್ಯ ಎಂದು ಅನ್ನಿಸಿರಲೇ ಇಲ್ಲ ಎಂದು ಹೇಳಿದೆ.

ಅವಳನ್ನು ಕಳೆದ ಹತ್ತು ವರ್ಷಗಳಿಂದ ನೋಡೇ ಇಲ್ಲ. ಈ ವಿಶೇಷ ರಾತ್ರಿ ಅವಳಿಗೆ ಪತ್ರ ಬರೆದದ್ದರ ಉದ್ದೇಶ ನಾವು ಕೋರ್ಟಿನೊಳಗೆ, ಹೊರಗೆ ಮಾಡಿದ್ದನ್ನು ಯಾರಾದರೂ ಹತ್ತಿರದವರೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿದ್ದು. ಅವರು ಅದನ್ನು ಉಳಿದವರಿಗೆ ತಲುಪಿಸಬೇಕು ಅನ್ನಿಸಿತು.

ಸುಜಾನ್ ನಾನು ಹೇಳಿದ್ದಕ್ಕೆ ತನ್ನ ಸಂಪೂರ್ಣ ಸಹಮತಿಯಿದೆ ಎಂದ. ತನ್ನ ಆಲೋಚನೆಗಳನ್ನು ಬರೆದಿಡಬೇಕು. ಕಾಗದವಿದೆಯೇ? ಎಂದು ಕೇಳಿದ. ಇಲ್ಲ ಅಂದೆ. ಸಮಯ ಮುಗಿಯುತ್ತಾ ಬಂತು. ಬೆಳಗಾಗುತ್ತಿದೆ ನಾನಿನ್ನೂ ನನ್ನ ಪತ್ರವನ್ನು ಮುಗಿಸಿಲ್ಲ. ಇನ್ನೊಂದು ಸ್ವಲ್ಪ ಹೊತ್ತು ನನ್ನ ಪಾಡಿಗೆ ನನ್ನ ಬಿಡುವಿರಾ? ಎಂದೆ. ಈ ಪತ್ರವನ್ನು ಮುಗಿಸಿ ಲಕೋಟೆಯೊಳಗೆ ಹಾಕಿ ನಮ್ಮ ಜೈಲಿನ ಕಾವಲುಗಾರನಿಗೆ ಕೊಡಬೇಕು. ಅವನು ನಿದ್ದೆಯಿಂದ ಎದ್ದು ತನ್ನ ಅಧಿಕೃತ ಕಠೋರ ಪಾತ್ರ ವಹಿಸಲು ಬರುವ ಮುನ್ನ ಇದನ್ನು ಮಾಡಬೇಕು.

ಜಿಂಬಾ ಮತ್ತು ಸುಜಾನ್ ಒಳ್ಳೆಯವರು. ʼನಿನ್ನ ಹುಡುಗಿಗೆ ಮಕ್ಕಳನ್ನು ಹೆತ್ತು ಈ ಕಠೋರ ಜಗತ್ತಿಗೆ ತರಬೇಡ,ʼ ಅಂತ ಹೇಳು ಎಂದ ಸುಜಾನ್.‌ ಜಿಂಬಾ ಸಂಪೂರ್ಣ ಅಪರಿಚಿತನಾದ ಅವನಿಗಾಗಿ ಒಂದೆರೆಡು ಕಣ್ಣಹನಿ ಹನಿಸಲು ಹೇಳು ಎಂದ. ಪತ್ರವನ್ನು ಮುಗಿಸಲು ನನ್ನನ್ನು ಒಂಟಿಯಾಗಿ ಬಿಟ್ಟು ಅವರಿಬ್ಬರು ನಗುತ್ತಾ ಕೋಣೆಯ ಮೂಲೆ ಸೇರಿದರು.

ಹ್ಞಾಂ, ನನ್ನ ಪ್ರತಿಮೆಯ ಬಗ್ಗೆ ಹೇಳುತ್ತಿದ್ದೆ. ನನ್ನ ಶವವಂತೂ ನಿನಗೆ ಸಿಗುವುದಿಲ್ಲ. ಆದರೂ ನನ್ನ ಸಮಾಧಿಯನ್ನು ಕಟ್ಟಿಸಿ ಆ ಪ್ರತಿಮೆಯನ್ನು ಅಲ್ಲಿಡು. ಈಗ ನನ್ನ ಪತ್ರದ ಮುಖ್ಯಭಾಗ ನನ್ನ ಗೋರಿಯ ಮೇಲೆ ಬರೆಸಬೇಕಾದ ಬರಹದ ವಿಷಯಕ್ಕೆ ಬರುತ್ತೇನೆ.

ಅದರ ಬಗ್ಗೆ ಯೋಚಿಸಿದ್ದೇನೆ. ಹರ್ಷೋದ್ಗಾರ ಮಾಡುತ್ತಿರುವ ಗುಂಪಿನೆದುರು ಗುಂಡುಹಾರಿಸಿ ಕೊಲ್ಲಲಾದ ಕಳ್ಳನ ಬಗ್ಗೆ ಏನು ಹೇಳುತ್ತಿಯಾ? ಅವನು ದಾರಿ ತಪ್ಪಿದ ಒಳ್ಳೆಯ ವ್ಯಕ್ತಿ ಎಂದೇ? ಈ ಸಾವು ಅವನಿಗೆ ತಕ್ಕನಾದದ್ದು ಎಂದೇ? ಅವನು ಪುಂಡ ಎಂದೇ? ತುಂಟ ಮಗುವಿನಂತಹವನು ಎಂದೇ? ಕೊಲೆಗಾರನಿಗೆ ವಿಧಿಸಿದ ಶಿಕ್ಷೆ ಸಾಕಾಗಲಿಲ್ಲ ಎಂದೇ? ʼಇಲ್ಲಿ ಮಲಗಿದ್ದಾನೆ ನೋಡಿ X. ಇವನು ವ್ಯಾನನ್ನು ದೋಚಿ, ಅದರ ಬೆಂಗಾವಲು ಪಡೆಯವರನ್ನು ಕೊಂದಿದ್ದಕ್ಕೆ ಸಾರ್ವಜನಿಕವಾಗಿ ಗುಂಡು ಹಾರಿಸಿ ಕೊಲ್ಲಲಾಯಿತು. ಇವನು ಎಲ್ಲ ಕಳ್ಳರಿಗೂ, ಕಳ್ಳರಾಗಬೇಕು ಎಂದುಕೊಂಡವರಿಗೂ ಮಾದರಿ.ʼ

ಯಾರು ಇಂತಹ ಗೋರಿಬರಹಕ್ಕೆ ಮಹತ್ವ ನೀಡುತ್ತಾರೆ? ಅವರಿಗಿದು ತಮಾಷೆ ಅನ್ನಿಸಬಹುದು. ಇಲ್ಲ, ಹೀಗೆ ಮಾಡಿದರೆ ಉಪಯೋಗವಿಲ್ಲ. ಬೇರೆ ಏನಾದರೂ ಅರ್ಥಪೂರ್ಣವಾಗಿರುವಂತದ್ದನ್ನು ಮಾಡಬೇಕು. ಏನಾದರೂ ನಿಗೂಢವಾದದ್ದು ಅಥವಾ ಸಾರ್ವಜನಿಕವಾಗಿ ಗುಂಡು ಹೊಡೆಸಿಕೊಂಡು ಸಾಯುವುದನ್ನು ಆಯ್ಕೆ ಮಾಡಿಕೊಂಡ ವ್ಯಕ್ತಿಗೆ ತಕ್ಕನಾದಂತಹದ್ದನ್ನು ಯೋಚಿಸಬೇಕು.

ನಾನಿದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದೇನೆ ಎಂದಲ್ಲ. ಮುಂದಿನ ಒಂದೆರೆಡು ಗಂಟೆಗಳಲ್ಲಿ ಸಾಯಲಿರುವಾಗ ಇದರ ಬಗ್ಗೆ ಚಿಂತಿಸಬೇಕಿಲ್ಲ. ನಾನೀಗ ಅದ್ಭುತ ಒಡನಾಡಿಗಳೊಂದಿಗೆ ಇದ್ದೇನೆ. ಹಿಂಸೆಯ, ಕೊಲೆಯ, ಜೀವನವನ್ನು ಕಡೆಗಣಿಸಲಾಗಿರುವ ಇತಿಹಾಸದಲ್ಲಿ ದಾಖಲಾಗಲಿದ್ದೇನೆ. ನೋವಿನಲ್ಲಿ ಸಂತೋಷ ಪಡುವುದು -ಸ್ಯಾಡಿಸಂ. ಇದು ಸರಿಯಾದ ಪದವೇ? ಇಂತಹ ಜಗತ್ತನ್ನು ಬಿಟ್ಟು ಹೋಗುತ್ತಿದ್ದೇನೆ ಎಂದು ಸಂತೋಷ ಪಡಬೇಕು. ಆದರೆ ಗೋರಿಬರಹ ಬರೆಸದೆ ಹೋಗಬಾರದು.

ಬಹಳ ವರ್ಷಗಳ ಹಿಂದೆ ದಿನಪತ್ರಿಕೆಯಲ್ಲಿ ಓದಿದ್ದು ನೆನಪಾಗುತ್ತಿದೆ. ನಾನಾಗ ಸಣ್ಣವನು. ಆಫ್ರಿಕನ್‌ ನಾಯಕನೊಬ್ಬ ಲೆಫ್ಟಿನೆಂಟ್‌ ಒಬ್ಬನ ಸಮಾಧಿಯ ಮೇಲೆ ನಿಂತು ಕಣ್ಣಿರಿಡುತ್ತಾ, ‘Africa kills her sons’ ಎಂದು ಹೇಳಿದ್ದು ವರದಿಯಾಗಿತ್ತು. ಆ ಮಾತಿನರ್ಥ ಏನಿರಬಹುದು ಎಂದು ಬಹಳ ಯೋಚಿಸಿದೆ ಹೊಳೆಯಲಿಲ್ಲ. ಆ ಮಾತಿನ ರಹಸ್ಯವನ್ನು ಬಿಡಿಸಲಾಗಲಿಲ್ಲ. ಇವತ್ತು, ಈ ಕ್ಷಣ ಆ ಮಾತು ನೆನಪಾಗುತ್ತಿದೆ. ಅವನ ಮಾತನ್ನು ಇಲ್ಲಿ ಎರವಲು ಪಡೆಯುತ್ತಿದ್ದೇನೆ. ಇದನ್ನೇ ನನ್ನ ಗೋರಿಯ ಮೇಲೆ ಹೀಗೆ ಬರೆಸುತ್ತೇನೆ: ʼAfrica Kills Her Sun.ʼ ಒಳ್ಳೆಯ ಗೋರಿಬರಹ ಅಲ್ಲವೇ? ನಿಗೂಢವಾಗಿದೆ. ಆಹ್‌, ಪ್ರತಿಭೆಯ ಮಿಂಚು ಹೊಳೆಸಿದ ಸಾಲು. ನೀವು ನನ್ನ ಮಾತನ್ನು ಒಪ್ಪುತ್ತೀರಿ ಎನ್ನುವ ನಂಬಿಕೆಯಿದೆ. ʼAfrica Kills Her Sun!ʼ ಅದಕ್ಕೆ ಅಲ್ಲವೇ ಆಫ್ರಿಕಾವನ್ನು ಕಗ್ಗತ್ತಲೆಯ ಖಂಡ ಎನ್ನುವುದು?

ನನ್ನ ಪ್ರೀತಿಯ ಹುಡುಗಿ, ಇದರೊಂದಿಗೆ ಪತ್ರವನ್ನು ಮುಗಿಸುತ್ತಿದ್ದೇನೆ. ನನ್ನ ಹೃದಯವೀಗ ಕೋಣೆಯೊಳಗೆ ನುಸುಳುತ್ತಿರುವ ಬೆಳಕಿನಂತೆ ಹಗುರಾಗಿದೆ. ಕಾವಲುಗಾರ ಬೀಗದ ಕೈ ಕೀಲಿಯೊಳಗೆ ಹಾಕಿ ತಿರುಗಿಸುತ್ತಿರುವ ಸದ್ದು ಕೇಳಿಸುತ್ತಿದೆ. ಸ್ವಲ್ಪ ಹೊತ್ತಿನಲ್ಲೇ ಅವನು ನಮ್ಮನ್ನು ಕರೆಯುತ್ತಾನೆ. ನಮ್ಮ ಸಮಯ ಮುಗಿಯಿತು. ನನ್ನ ಸಮಯ ಮುಗಿಯಿತು. ನನ್ನ ಹೃದಯದಾಳದ ಪ್ರೀತಿ ನಿನಗಾಗಿ. ಗುಡ್‌ಬೈ.

ಎಂದೆಂದಿಗೂ ನಿನ್ನವನು,

ಬಾನಾ


ಕೆನ್ ಸಾರೋ ವಿವಾ ಬದುಕಿನ ಕುರಿತಾದ ಸಾಕ್ಷಚಿತ್ರ


ಅನುವಾದ : ಹೇಮಾ .ಎಸ್  ಕನ್ನಡ ಉಪನ್ಯಾಸಕಿ. ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’, ಅಕಿರಾ ಕುರುಸೋವಾ ಆತ್ಮಕತೆಯ ಅನುವಾದ “ನೆನಪಿನೋಣಿಯಲ್ಲಿ” ಪ್ರಕಟಿತ ಪುಸ್ತಕಗಳು.

ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://razorpay.me/@ruthumanatrust

Download RUTHUMANA App here :

** Android *** : https://play.google.com/store/apps/details?id=ruthumana.app ** iphone ** : https://apps.apple.com/in/app/ruthumana/id1493346225

 

ಪ್ರತಿಕ್ರಿಯಿಸಿ