ಮೊದಲಿಗೆ, ಸುಮಾರು ಮೂರು ನಾಲ್ಕು ದಶಕಗಳಿಂದ ಜಿ.ರಾಜಶೇಖರ್ ಅವರು ಸಾಹಿತ್ಯ-ಸಮಾಜ-ರಾಜಕೀಯವನ್ನು ಕುರಿತು ಮಂಡಿಸುತ್ತಿದ್ದ ತೀಕ್ಷ್ಣವಾದ ಹಾಗೂ ತೀವ್ರ ಒಳನೋಟದ ಬಿಡಿಬಿಡಿ ಬರಹಗಳು, ಭಾಷಣಗಳು ಹಾಗೂ ಚರ್ಚೆಗಳನ್ನು, ಒಂದು ಕಡೆ ತಂದು ಜಿ.ಆರ್. ರವರ ಒಟ್ಟು ಚಿಂತನಾಕ್ರಮವನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡಿದ ಅಭಿನವ ಪ್ರಕಾಶನದ ರವಿಕುಮಾರ್‍ರಿಗೆ ಅಭಿನಂದನೆ ಸಲ್ಲಬೇಕು. ತಮ್ಮ ವಿಚಾರಗಳನ್ನು ಅಪಾರ ಮುಕ್ತತೆ-ದೃಢವಾದ ನಂಬಿಕೆಯಿಂದ ಮಂಡಿಸಿದರೂ, ತಮ್ಮ ಬರಹ-ಅಭಿಪ್ರಾಯಗಳು ಅಳಿಸಲಾಗದ ಶಿಲಾಲೇಖಗಳಂತಾಗದೆ ನಿರಂತರ ವಾಗ್ವಾದಕ್ಕೆ ತೆರೆದುಕೊಂಡಿರಬೇಕು ಎಂಬ ನಂಬಿಕೆ ಅವರ ಇಲ್ಲಿನ ಬರಹಗಳಲ್ಲಿ ಕಾಣುತ್ತದೆ. ನಿಜವಾದ ಚಿಂತಕನಿಗೆ ತೆರೆದ ಮನಸ್ಸಿನಿಂದ ತನಗೆ ಸರಿಯೆನ್ನಿಸಿದ ವಿಚಾರಗಳನ್ನು ನಿರಂತರವಾಗಿ ಪ್ರತಿಪಾದಿಸುವುದು ಮುಖ್ಯವೇ ಹೊರತು, ವಿಚಾರಗಳನ್ನು ಪ್ರಕಟಿಸಿ ಅಧಿಕೃತಗೊಳಿಸುವುದರಲ್ಲಿ ಅವರಿಗೆ ನಂಬಿಕೆಯಿದ್ದಂತೆ ಕಾಣುತ್ತಿರಲಿಲ್ಲ. ಹಾಗಾಗಿಯೇ ಅವರು ಲಂಕೇಶ್ ಪತ್ರಿಕೆಯ ಬರಹಗಳು-ಪುಟ್ಟ ಪ್ರತಿಕ್ರಿಯೆಗಳು, ನೀನಾಸಂ-ಕೋಮುಸೌಹಾರ್ದವೇದಿಕೆಯ ಭಾಷಣಗಳಲ್ಲಿ ಪುತ್ತೂರಿನಂಥ ಸಣ್ಣಊರಲ್ಲಿ ನಡೆದ ಕೊಲೆ-ದೊಂಬಿಯಂಥ ದೈನಂದಿನ ಘಟನೆಗಳಿಂದ ಶುರು ಮಾಡಿ ಅಮೆರಿಕದ ಸಾಮ್ರಾಜ್ಯಶಾಹಿ ದಬ್ಬಾಳಿಕೆಯವರೆಗೆ ತೀವ್ರ ತಲ್ಲಣದಿಂದ ತಕ್ಷಣ ಪ್ರತಿಕ್ರಿಯಿಸುತ್ತಿದ್ದ ಕ್ರಮದಲ್ಲಿ ಸಮಾಜಕ್ಕೆ ಬೇಕಾದ ಚಿಕಿತ್ಸಕ ನೋಟದ ಜರೂರು ಎದ್ದು ಕಾಣುವುದೇ ಹೊರತು ವಿಚಾರಗಳ ಧೂಳೆಬ್ಬಿಸುವ ಸಿದ್ಧಾಂತಿಯ ಸೋಗಾಗಲೀ, ಸರಳವಾಗಿದ್ದನ್ನೂ ಸಮಸ್ಯಾತ್ಮಕಗೊಳಿಸುವ ಅಕೆಡೆಮಿಕ್ ಚಿಂತಕರ ಗಾಳಿ ಗುದ್ದಾಟವಾಗಲೀ ಕಾಣುವುದಿಲ್ಲ. ಹಾಗಾಗಿಯೇ ಇಲ್ಲಿನ ಬರಹಗಳಲ್ಲಿ, ವ್ಯವಸ್ಥೆಯ ಯಜಮಾನಿಕೆ ಹಾಗೂ ಸಿದ್ಧಾಂತಗಳ ನಿರಂಕುಶತೆಯನ್ನು ಎದುರಿಸುತ್ತ ನಮ್ಮ ಕ್ರಿಯೆ-ಆಲೋಚನೆ-ಸಂವೇದನೆಗಳಲ್ಲಿ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವ ಕುರಿತು ನಿರಂತರ ಎಚ್ಚರವಾಗಿರಬೇಕೆಂಬುದೇ ಮುಖ್ಯ ವಾದವಾಗಿದೆ.
ಇಲ್ಲಿ ಅಮೆರಿಕದ ರಾಕ್ಷಸ ನೀತಿಯಿಂದಾಗಿ ಜಾಗತಿಕಮಟ್ಟದಲ್ಲಿ ಅಧಿಕೃತವಾಗಿ/ವ್ಯವಸ್ಥಿತವಾಗಿ ಹಬ್ಬುತ್ತಿರುವ ರಾಜಕೀಯ ಹಿಂಸೆ, ದೇಶದೊಳಗೆ ಕೋಮುವಾದಿ ಶಕ್ತಿಗಳಿಂದ ಸಾಮಾನ್ಯವಾಗುತ್ತಿರುವ ಧಾರ್ಮಿಕ ಹಿಂಸೆ ಮತ್ತು ಅದರಿಂದ ಹುಟ್ಟಿದ ಅಸಹನೆ-ದ್ವೇಷಗಳನ್ನು ನಿರಂಬಳವಾಗಿ ಮುಂದುವರಿಸುತ್ತ ಅವುಗಳಿಗೆ ಪೂರ್ಣ ಸಹಕಾರವನ್ನು ನೀಡುತ್ತಿರುವ ನಾಗರಿಕ ಸಮಾಜದ ಹಿಂಸೆಗಳನ್ನು ವಿರೋಧಿಸುವ ಬರಹಗಳಿವೆ. ಮುಖ್ಯವಾಗಿ, ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ಕಾಣುವ ಘಟನೆಗಳ, ಆದರೆ ಅವುಗಳ ಸೂಕ್ಷ್ಮವಾದ ವಿವರಗಳ ಮೂಲಕವೇ ತಮ್ಮ ವಾದವನ್ನು ಬೆಳೆಸುವ ಕ್ರಮವನ್ನು ಮೊದಲ ಎರಡು ಭಾಗದ ಬರಹಗಳಲ್ಲಿ ಕಾಣಬಹುದು. ಅದರ ಮುಂದುವರಿಕೆಯಾಗಿಯೇ ರಾಷ್ಟ್ರ, ಧರ್ಮ, ಅಭಿವೃದ್ಧಿ, ವಿಜ್ಞಾನ, ವ್ಯವಸ್ಥೆ, ಪ್ರಭುತ್ವಗಳು ಮನುಷ್ಯ ಬದುಕಿನ ಇರಸ್ತಿಕೆಯನ್ನೇ ಹಿಂಸ್ರವಾಗಿಸಿರುವ, ಅಸಹನೀಯವಾಗಿಸಿರುವ ವಿವರಗಳನ್ನು ಕೊನೆಯ ಭಾಗದಲ್ಲಿ ಹಲವು ಸಾಹಿತ್ಯ ಕೃತಿಗಳ ವಿಶ್ಲೇಷಣೆಯ ಮೂಲಕ ಶೋಧಿಸುತ್ತಾರೆ. ಹಾಗೆ ನೋಡಿದರೆ ಜಿಆರ್ ಅವರು ಸಮಾಜವನ್ನು ಕದಡುವ ವಿದ್ಯಮಾನಗಳನ್ನು ವಿಶ್ಲೇಷಿಸುವ ಕ್ರಮ ಮತ್ತು ಬಹುಪಾಲು ಅದೇ ಹಿನ್ನೆಲೆಯಾಗಿರುವ ಸಾಹಿತ್ಯ ಕೃತಿಗಳನ್ನು ವಿಶ್ಲೇಷಿಸುವ ಕ್ರಮ ಮೇಲ್ನೋಟಕ್ಕೆ ಒಂದೇ ಆಗಿ ಕಂಡರೂ, ಅವರ ರಾಜಕೀಯ-ಸಾಮಾಜಿಕ ನಿಲುವುಗಳು ಕೃತಿವಿಮರ್ಶೆಯ ದೃಷ್ಟಿಯನ್ನು ಊನಗೊಳಿಸಿದಂತೆ ಕಾಣುವುದಿಲ್ಲ.
ಆಧುನಿಕ ಜಗತ್ತಿನಲ್ಲಿ ಪ್ರಭುತ್ವ, ನ್ಯಾಯವ್ಯವಸ್ಥೆ, ರಾಷ್ಟ್ರೀಯತೆ, ಬಂಡವಾಳಶಾಹಿ, ಜಾಗತೀಕರಣ, ಅಭಿವೃದ್ಧಿ, ವಿಜ್ಞಾನ,ಅಣುಶಕ್ತಿ-ಎಲ್ಲವುಗಳು ಸಹ ಹಿಂಸೆಯನ್ನು ಅಧಿಕೃತಗೊಳಿಸುವ,ನಿರ್ವಹಿಸುವ ವಿದ್ಯಮಾನಗಳಾಗಿ ಪರಿಣಮಿಸಿವೆ. ಅಷ್ಟೇ ಅಲ್ಲದೆ, ಇವೆಲ್ಲವುಗಳು ಹಿಂಸೆಗೆ ನ್ಯಾಯಬದ್ಧವಾದ ಪಾತ್ರವೊಂದನ್ನು ಕಲ್ಪಿಸಿ, ಅದಕ್ಕೆ ಎಲ್ಲಕ್ಕೂ ಅತೀತವಾದ ನೈತಿಕತೆ-ಸಮರ್ಥನೆಯನ್ನು ಸೃಷ್ಟಿಸಿವೆ ಎಂದು ಜಿಆರ್‍ರವರು ವಾದಿಸುತ್ತಾರೆ. ಅದಕ್ಕೆ ಪರ್ಯಾಯವಾಗಿ ಸದಾ ಪ್ರಶ್ನಿಸುವ, ಪ್ರತಿಭಟಿಸುವ, ವಾಗ್ವಾದಗಳಿಂದ ಜಾಗೃತಗೊಂಡ ಸಮಾಜವೊಂದು ಇರಬೇಕೆಂದು ಹಂಬಲಿಸುತ್ತಾರೆ. ಅಂಥ ಕ್ರಿಯಾಶೀಲ ಸ್ವಾಯತ್ತ ನಾಗರಿಕ ಸಮಾಜವನ್ನು, ಬಹುವಚನೀಯ ಭಾರತದ ಮಾದರಿಯನ್ನು ರಸೆಲ್‍ನಲ್ಲಿ, ಕೆ.ವಿ.ಸುಬ್ಬಣ್ಣನವರಲ್ಲಿ, ಅನಂತಮೂರ್ತಿಯವರ ವಾಗ್ವಾದಗಳಲ್ಲಿ ಕಾಣುತ್ತಾರೆ. ಆದರೆ ಹಿಂಸೆಯ ಸ್ವರೂಪಗಳು- ಅದರ ಪರಮಾಧಿಕಾರವನ್ನು ನಿರ್ವಚಿಸುವಾಗ ಕಾಣುವ ಸೂಕ್ಷ್ಮತೆ, ಅದಕ್ಕಿರುವ ಪರ್ಯಾಯಗಳನ್ನು ಶೋಧಿಸುವಾಗ ಕಾಣಿಸುವುದಿಲ್ಲ. ಅದಕ್ಕಾಗಿಯೇ ಏನೋ ‘ಗೋರಾ’ ಕೃತಿಯ ಚರ್ಚೆಯಲ್ಲಿ ಆನಂದಮೊಯಿಯ ಪಾತ್ರದ ಮಹತ್ವವನ್ನು, ‘ಗುಣಮುಖ’ನಾಟಕದಲ್ಲಿ ಅಲಾವಿಖಾನನ ಪಾತ್ರವನ್ನು ಅವರು ಹೆಚ್ಚು ಅಸ್ಥೆಯಿಂದ ಗಮನಿಸುವಂತೆ ಕಾಣುವುದಿಲ್ಲ. ಹಾಗಾಗಿಯೇ ಆಧುನಿಕ ಜಗತ್ತಿನ ಎಲ್ಲ ಹಿಂಸೆಯ ವಿಕಾರಗಳನ್ನು ಆತ್ಯಂತಿಕವಾಗಿ ವಿರೋಧಿಸಿದ ಗಾಂಧಿಯವರ ಪ್ರಸ್ತಾಪಗಳು ಅಲ್ಲಲ್ಲಿ ಕಾಣಿಸಿದರೂ ಅದನ್ನು ದೊಡ್ಡ ಪರ್ಯಾಯವೆಂಬಂತೆ ಕಾಣುವ ವಿಸ್ತಾರವಾದ ಬರಹಗಳು ಜಿಆರ್ ಅವರಲ್ಲಿ ಕಾಣಿಸದಿರುವುದು ಸೋಜಿಗವನ್ನುಂಟುಮಾಡುತ್ತದೆ.
ಸಹ್ಯಾದ್ರಿ ಆರ್ಟ್ ಕಾಲೇಜು , ಕುವೆಂಪು ಯುನಿವರ್ಸಿಟಿ ಶಿವಮೊಗ್ಗದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಇಂಗ್ಲೀಶ್ ಉಪನ್ಯಾಸಕರು .