ಕನ್ನಡ ಕಾವ್ಯ ಪ್ರಪಂಚದಲ್ಲಿಯೇ ಅತ್ಯಂತ ವಿಶಿಷ್ಟ ಧ್ವನಿಯಾಗಿ ಹೊರಹೊಮ್ಮಿದ ಮಹಾನ್ ಪ್ರತಿಭೆಯೆಂದರೆ ಎ.ಕೆ. ರಾಮಾನುಜನ್ ತಮ್ಮ ಸಮಕಾಲೀನ ಕಾಲಘಟ್ಟದಲ್ಲಿ ಅತ್ಯಂತ ವೈವಿಧ್ಯಮಯವಾದ ಆಸಕ್ತಿಗಳನ್ನು ಪೋಷಿಸಿಕೊಂಡು ತಮ್ಮನ್ನು ತಾವು ನೆಲದ ಹರವಿಗೆ ಚಾಚಿಕೊಳ್ಳುವಂತೆ ಹವಣಿಸಿಕೊಂಡವರು ಇವರು. ಭಾಷಾವಿಜ್ಞಾನ, ಭಾಷಾಂತರ, ಜಾನಪದ, ಆಧುನಿಕ ಕವಿತೆ ಹೀಗೆ ಒಂದೊಂದು ಪ್ರಕಾರಗಳೂ ಒಂದೊಂದು ನಡುಗಡ್ಡೆಗಳಾಗಿ ರೂಪುಗೊಳ್ಳುತ್ತಿದ್ದ ಸ್ಥಿತ್ಯಂತರ ಕಾಲಘಟ್ಟದಲ್ಲಿ ಅನ್ಯ ಅನ್ಯವಾಗಿ ನೋಡದೆ ಅನ್ಯೋನ್ಯವಾಗಿ ಈ ಪ್ರಕಾರಗಳೊಂದಿಗೆ ಕರುಳು ಬಳ್ಳಿಯ ಸಂಬಂಧವನ್ನು ವಿಶಿಷ್ಟವಾಗಿ ಸಂಯೋಜಿಸಿದವರು ಇವರು. ಇಂಗ್ಲಿಷಿನ ಜ್ಞಾನವ್ಯಾಪ್ತಿಗೆ ಸಂಪೂರ್ಣವಾಗಿ ಭಿನ್ನವಾದ ಹಾಗೂ ಅನ್ಯಾದೃಶವೂ, ಅಪೂರ್ವವೂ ಆದ ಅನುಭವ ಪ್ರಪಂಚವನ್ನು ಇಂಗ್ಲಿಷಿಗೆ ಪರಿಚಯಿಸುವ ಸಂದರ್ಭದಲ್ಲಿಯೂ ಗರಿಷ್ಠ ಮಟ್ಟದಲ್ಲಿ ಸಮಕಾಲೀನರಾಗಿದ್ದರು ಎಂಬುದೇ ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಇದು ಭಾರತೀಯ ವಾಙ್ಮಯಕ್ಕೂ ಇಂಗ್ಲಿಷಿನ ಭೌತಿಕತೆಗೂ ನಡುವೆ ನಡೆಸಿದ ಕಸಿ ಪ್ರಕ್ರಿಯೆಯೆಂದೇ ನನ್ನ ನಂಬಿಕೆ. ಆದುದರಿಂದಲೂ ರಾಮಾನುಜನ್ ಪ್ರಮುಖ ಇಂಗ್ಲಿಷ್ ಲೇಖಕರಾಗಿಯೂ ಹೊರಹೊಮ್ಮಲು ಸಾಧ್ಯವಾಯಿತು.ಇವರ ಗದ್ಯ ಬರವಣಿಗೆಯಲ್ಲಂತೂ ವಿಷಯವೊಂದರ ಸಮಗ್ರ ಹಾಗೂ ಸಂವೇದನಾಶೀಲ ಮರುದನಿ ಎಂಥವರನ್ನು ಬೆರಗುಗೊಳಿಸುತ್ತದೆ. ಇವುಗಳ ಆಳ-ಅಗಲಗಳು, ಆಯಾ ಭಾಷೆಗೆ ಮಾತ್ರ ವಿಶಿಷ್ಟವಾದ ಸಂಗತಿಗಳು, ಭಾಷೆಗೂ ಜನಪದಕ್ಕೂ ಇರುವ ಅನ್ಯೋನ್ಯ ಸಂಬಂಧ, ಇವುಗಳೆಲ್ಲವನ್ನೂ ಆಧುನಿಕತೆಯ ದರ್ಶನ ಪ್ರಜ್ಞೆಯಿಂದ ಕಂಡು ಪರಂಪರೆಯನ್ನು ಅರ್ಥೈಸುವ ಕ್ರಮವು ಸಾರ್ವಕಾಲಿಕ ಸತ್ಯಗಳಾಗಿ ರೂಪಾಂತರಗೊಳ್ಳುವುದನ್ನು ಗಮನಿಸಬೇಕು.
ಒಂದು ಸಾಲನ್ನು ಹಲವಾರು ಪದಪುಂಜಗಳಾಗಿ ಒಡೆದು ಅದನ್ನು ವಿಭಿನ್ನ ಸಾಲುಗಳಲ್ಲಿ ಹರಡುವಂತೆ ಮಾಡಿ ಪ್ರತಿಯೊಂದು ಸಾಲೂ ತನ್ನ ಮುಂದಿನ ಸಾಲಿನ ಪದದೊಡನೆ ಜೈವಿಕವಾಗಿ ಮಿಳಿತವಾಗುವ ಪ್ರಕೃತಿ ನಿಜಕ್ಕೂ ವಿಶೇಷವಾದದ್ದು. ಬಿಡಿಬಿಡಿಯಾಗಿ ಪದಗಳನ್ನು ಇಡುತ್ತಲೇ ಇಡಿಯಾಗಿ ರೂಪುಗೊಳ್ಳುವ ಜೈವಿಕ ಮಾಲೆಯದು. ಇದನ್ನು ಪಕ್ಕದಲ್ಲಿಡಲು ಇವರು ಒಪ್ಪುವುದಿಲ್ಲ. ಬದಲಿಗೆ ಅದು ಕೆಳಗೇ ಇರಬೇಕು. ಪದದೊಂದಿಗೆ ಪದವನ್ನು ಇಟ್ಟು ಸುಮ್ಮನೆ ಆಡಂಬರವಾಗುವುದು ಇವರಿಗೆ ಹಿಡಿಸದ ಉಜ್ಜುಗ.
ಭಾರತೀಯ ಜಾನಪದದ ಮೂಲ-ಚೂಲಗಳನ್ನು ಕುರಿತು ರಾಮಾನುಜನ್ ಹಚ್ಚಿಕೊಂಡಷ್ಟು ಅವರ ಕಾಲದ ಲೇಖಕರು ಅದರಲ್ಲಿಯೂ ಸೃಜನಶೀಲ ನವ್ಯ ಲೇಖಕರು ಹಚ್ಚಿಕೊಂಡಿದ್ದು ಕಡಿಮೆಯೇ. ಜಾನಪದದ ಪ್ರೇರಣೆಯಲ್ಲಿ ಸೃಜನಶೀಲ ಸಾಹಿತ್ಯವನ್ನು ಕೆಲವರು ಸೃಜಿಸಿರಬಹುದು. ಆದರೆ ಜಾನಪದದ ಸಂಗ್ರಹ, ವಿಶ್ಲೇಷಣೆ, ಸಂಯೋಜನೆಗಳಲ್ಲಿ ರಾಮಾನುಜರದ್ದು ಎದ್ದುಕಾಣುವ ಪ್ರತಿಭೆ.
ಇನ್ನು ಅವರ ಕಾವ್ಯಕ್ಕೆ ಬರುವುದಾದರೆ ಈಗಾಗಲೇ ಅನೇಕ ವಿಮರ್ಶಕರು ಗುರುತಿಸಿರುವಂತೆ ಅವರ ಕವಿತೆಯ ಶಿಲ್ಪ ಅತ್ಯಂತ ವಿಶಿಷ್ಟವಾದದ್ದು. ತಮ್ಮ ಸಮಕಾಲೀನ ಮಹಾನ್ ಪ್ರತಿಭೆಗಳ ಪ್ರಭಾವಲಯಕ್ಕೆ ಸಿಕ್ಕಿಕೊಳ್ಳದಂತೆ ತಮ್ಮದೇ ಆದ ಅನನ್ಯವಾದ ಧ್ವನಿಯಾಗಿ ಉಳಿದುಕೊಂಡದ್ದು ಇವರ ಕಾವ್ಯದ ತಾಳಿಕೆಯನ್ನು ಹೆಚ್ಚಿಸಿತು ಎಂದೇ ನನ್ನ ಭಾವನೆ. ಒಂದು ಸಾಲನ್ನು ಹಲವಾರು ಪದಪುಂಜಗಳಾಗಿ ಒಡೆದು ಅದನ್ನು ವಿಭಿನ್ನ ಸಾಲುಗಳಲ್ಲಿ ಹರಡುವಂತೆ ಮಾಡಿ ಪ್ರತಿಯೊಂದು ಸಾಲೂ ತನ್ನ ಮುಂದಿನ ಸಾಲಿನ ಪದದೊಡನೆ ಜೈವಿಕವಾಗಿ ಮಿಳಿತವಾಗುವ ಪ್ರಕೃತಿ ನಿಜಕ್ಕೂ ವಿಶೇಷವಾದದ್ದು. ಬಿಡಿಬಿಡಿಯಾಗಿ ಪದಗಳನ್ನು ಇಡುತ್ತಲೇ ಇಡಿಯಾಗಿ ರೂಪುಗೊಳ್ಳುವ ಜೈವಿಕ ಮಾಲೆಯದು. ಇದನ್ನು ಪಕ್ಕದಲ್ಲಿಡಲು ಇವರು ಒಪ್ಪುವುದಿಲ್ಲ. ಬದಲಿಗೆ ಅದು ಕೆಳಗೇ ಇರಬೇಕು. ಪದದೊಂದಿಗೆ ಪದವನ್ನು ಇಟ್ಟು ಸುಮ್ಮನೆ ಆಡಂಬರವಾಗುವುದು ಇವರಿಗೆ ಹಿಡಿಸದ ಉಜ್ಜುಗ. ಆದುದರಿಂದಲೇ ಕುಂಟೋಬಿಲ್ಲೆ ಸಂಕಲನದಲ್ಲಿ `ಜಿಗುಪ್ಸೆ’ ಎನ್ನುವ ಪದ್ಯವನ್ನು ಬರೆಯುತ್ತಾ ಹೀಗೆ ಹೇಳಿದ್ದಾರೆ:
ಮೈ ತುಂಬ
ಬರೀ ಮೈಯ್ಯಿ
ನಾಟಕದ ತುಂಬ
ಬರೀ ನಾಟಕ
ಪದ್ಯದ ತುಂಬ
ಪದ ಪದ ಪದ
ಅಂತ ಅವನಿಗೆ
ಜಿಗುಪ್ಸೆ
ಇದು ರಾಮಾನುಜನ್ನರ ಕಾವ್ಯಶಿಲ್ಪಕ್ಕೆ ಅವರು ನೀಡಿರುವ ಉತ್ತರವೆಂದು ತಿಳಿಯಬಹುದು. ಒಂದರಲ್ಲಿ ಇನ್ನೊಂದನ್ನು ಕಲ್ಪಿಸುವುದು ಹಾಗೂ ಇನ್ನೊಂದರಲ್ಲಿ ಮತ್ತೊಂದನ್ನು ಮುಂದುವರೆಸುವುದು ಇವರಿಗೇ ಇರುವ ಸ್ವೋಪಜ್ಞ ಕಲಾವಂತಿಕೆಯೆಂದು ಮನಗಾಣಬೇಕಾಗಿದೆ. ಆದುದರಿಂದಲೇ ಕೇವಲ ಕಣ್ಣಿಗೆ ಕಾಣುವುದನ್ನು ಮಾತ್ರ ಕಾಣಿಸುವುದು, ಇವರಿಗೆ ಒಗ್ಗದ ಸಂಗತಿ. ನಾವು ಕಂಡ ದೃಶ್ಯವನ್ನು ಪ್ರತಿಮಾತ್ಮಕವಾಗಿ ಮುಂದುವರಿಸಿಕೊಂಡು ಹೋಗುವುದು ಹಾಗೂ ಅದರಲ್ಲಿ ಅಂತರ್ಗತವಾಗಿರುವ ಸಂಕೀರ್ಣ ನೆಲೆಗಳನ್ನು ತಲುಪುವುದು ಇವರ ಕವಿತೆಯ ಲಕ್ಷಣವೆಂದು ತಿಳಿದಿದ್ದೇನೆ. ಹಾಗಾಗಿಯೇ `ಮತ್ತು ಇತರ ಪದ್ಯಗಳು’ ಸಂಕಲನದಲ್ಲಿ ಇವರಾಡಿದ ಮಾತು ಮುಖ್ಯವೆನಿಸುತ್ತದೆ.
ಕಣ್ಣೆದುರಿಗೆ ಪ್ರತ್ಯಕ್ಷ
ವಾದದ್ದನ್ನು
ನೋಡು
ವುದಕ್ಕೆ ಎರಡು ಕಣ್ಣು
ಸಾಲದು ಸ್ವಾಮೀ
ಅದೃಷ್ಟ
ಬೇಕು
ಇಲ್ಲಿ ಕವಿತೆಯು ಕೇವಲ ಒಂದು ಸಾಲಿನ ಹೇಳಿಕೆಯಷ್ಟೆ. ಆದರೆ ಅದು ಕವಿತೆಯಾಗಿ ರೂಪು ಪಡೆದದ್ದು ರಾಮಾನುಜನ್ನರ ಪ್ರತಿಭೆಯಿಂದ. ಮೊದಲು ಸತ್ಯವೊಂದು ಕಣ್ಣೆದುರಿಗೆ ಪ್ರತ್ಯಕ್ಷವಾಗುತ್ತದೆ. ಅಲ್ಲಿಗೆ ನಿಲ್ಲಿಸಿ, ನಂತರ ಅದನ್ನು ಮುಂದುವರೆಸಿ ಪ್ರತ್ಯಕ್ಷವಾದದ್ದನ್ನು ನೋಡು ಎಂಬಲ್ಲಿ ಮತ್ತೆ ನಿಲ್ಲುತ್ತದೆ. ಇಲ್ಲಿ ಆಕಸ್ಮಿಕವಾಗಿ ಪ್ರತ್ಯಕ್ಷವಾಗುವ ಸಂಗತಿಯು ನಾವು ಅದನ್ನು ನೋಡಬೇಕಾದ ಅನಿವಾರ್ಯತೆಯ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗಿದೆ. ಅಲ್ಲಿಂದ ಮುಂದಿನ ಲಂಘನ ಇದಕ್ಕೆ ಎರಡು ಕಣ್ಣು ಎಂದು ನಿಂತುಬಿಡುತ್ತದೆ. ಅಂದರೆ ಇದನ್ನು ಒಂದೇ ರೀತಿಯಲ್ಲಿ ಕಂಡಷ್ಟೇ ಪರಿಭಾವಿಸಬೇಕಾಗಿಲ್ಲ. ಎರಡು ರೀತಿಯಲ್ಲಿ ಎರಡು ಕಣ್ಣಿನ ನೋಟವಾಗಿ ನೋಡಬೇಕೆಂಬ ಸಲಹೆ ನೀಡುತ್ತಲೇ ಈ ಎರಡು ಕಣ್ಣುಗಳ ಮೂಲಕ ಮಾತ್ರ ನೋಡಿದರೆ ಸಾಲದು ಎಂದು ತಿಳಿಸುತ್ತಾ ಗೋಚರತೆಗೆ ಅಗೋಚರ ಪ್ರಜ್ಞೆಯನ್ನು ಆರೋಪಿಸುತ್ತದೆ. ಹಾಗಾದರೆ ಕಂಡ ಸತ್ಯವನ್ನು ಕಾಣಬೇಕಾದರೆ ಏನು ಮಾಡಬೇಕು ಎಂದು ಕೇಳಿಕೊಳ್ಳುವುದಾದರೆ ಪದ್ಯ ಅದೃಷ್ಟ ಬೇಕು ಎಂಬ ಉತ್ತರವನ್ನು ನೀಡುತ್ತದೆ. ನಾವಿಲ್ಲಿ ಅದೃಷ್ಟ ಎಂಬ ಪದವನ್ನು Luck ಎಂದು ಪರಿಭಾವಿಸಿಕೊಂಡರೆ ಇಡೀ ಕವಿತೆಯ ಮೂಲಧ್ವನಿಗೆ ಪೆಟ್ಟಾಗಿ ಬಿಡಬಹುದು. ಇದನ್ನು ಅಗೋಚರ ಎಂಬ ಅರ್ಥದಲ್ಲಿ ಪರಿಭಾವಿಸಿದರೆ ಮಾತ್ರ ಇದರ ಸಾರ್ಥಕ್ಯ ಮೂಡುವುದು. ಅಂದರೆ ಕಣ್ಣೆದುರೇ ಕಂಡ ಸತ್ಯವನ್ನು ಅದರ ಕಾಣದ ಮುಖದ ಮೂಲಕ ಪರಿಭಾವಿಸುವುದಾದರೆ ಅದರ ತೀವ್ರತೆ ನಮಗೆ ಮನದಟ್ಟಾಗುವುದೇ ಹೊರತು ಅದನ್ನು ಇದ್ದ ಹಾಗೇ ನೋಡಿದರೆ ಏನೂ ಪ್ರಯೋಜನವಿಲ್ಲ. ಎಂಬುದೇ ಕವಿತೆಯ ಮುಖ್ಯ ಆಶಯ.
ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವೆಂದರೆ ರಾಮಾನುಜನ್ನರ ಅತ್ಯಂತ ಸರಳ ಸಾಲಿನಂತೆ ಕಾಣುವ ನೋಟವೊಂದು ತನ್ನ ವಿಘಟಿತ ಸಾಲುಗಳ ಮೂಲಕ ಪಡೆದುಕೊಳ್ಳುವ ಅಪರೂಪದ ದರ್ಶನವೊಂದು ತಿಳಿಯಬೇಕಾದ ದಾರಿಯನ್ನು ಮಾತ್ರ ಇಲ್ಲಿ ಕಾಣಿಸಲಾಗಿದೆ. ಸರಳದಂತೆ ಕಾಣುವ ಎಷ್ಟೋ ಸಾಲುಗಳು ಅದರ ಅಂತರಾಳದಲ್ಲಿ ಹಲವು ನಿಗೂಢತೆಗಳನ್ನು ಬಚ್ಚಿಟ್ಟುಕೊಂಡಿದೆ. ಇದನ್ನು ತಿಳಿಯಲು ರಾಮಾನುಜನ್ನರಿಗೆ ಇದ್ದಂತೆ ಏಕಕಾಲಕ್ಕೇ ವಿದೇಶೀಯವೂ ಪರಿಪೂರ್ಣ ಸ್ವದೇಶಿಯೂ ಆದ ಪ್ರಜ್ಞೆಯ ಅವಶ್ಯಕತೆಯಿದೆ. ಇದರಲ್ಲಿ ಒಂದನ್ನೊಂದು ಪ್ರವೇಶಿಸಿಯೂ ಇದೆ ಹಾಗೂ ಪ್ರಭಾವಿಸಿಯೂ ಇದೆ.
ಹೀಗೆ ರಾಮಾನುಜನ್ನರ ಮಾತುಗಳು ಬಿಡಿಬಿಡಿಯಾಗಿ ಹಲವು ಸಾಲುಗಳಲ್ಲಿ ಸ್ವತಂತ್ರ ಪದಪುಂಜಗಳಂತೆ ವಿಶ್ರಾಂತಿ ಪಡೆಯುತ್ತವೆ ಹಾಗೂ ತಾವು ತಂಗಿದ್ದ ಸ್ಥಳದಿಂದಲೇ ಮತ್ತೊಮ್ಮೆ ಹುಟ್ಟಿ ಅದನ್ನು ಇನ್ನೊಂದು ಸಾಲಿನಲ್ಲಿ ತಂಗುವಷ್ಟು ಶಕ್ತಿಸಂಚಯನವನ್ನು ದೊರಕಿಸಿಕೊಟ್ಟು ಮೆಲ್ಲಗೆ ದಾಟಿಸಿಬಿಡುತ್ತದೆ. ಹೀಗೆ ಸಾಗಿದ ಸಾಲುಗಳು ತನ್ನ ಹಿಂದಿನ ಸಾಲುಗಳನ್ನು ಒಡಲಲ್ಲಿ ತುಂಬಿಕೊಂಡು ಜೀವನದಿಯಂತೆ ಹರಿಯುತ್ತಿರುತ್ತದೆ. ಈ ಅವರೋಹಣ ಪ್ರಕ್ರಿಯೆಯಲ್ಲಿ ಆರೋಹಣೆಗೊಳ್ಳುವ ಅಂಶಗಳು ಯಾವುವು ಎಂದು ಸದಾ ನಾನು ತಲೆಕೆಡಿಸಿಕೊಳ್ಳುತ್ತಲೇ ಪ್ರಶ್ನಿಸಿಕೊಳ್ಳುತ್ತಲೇ ಸಾಗುತ್ತಿದ್ದೇನೆ. ಆ ಮೂಲಕ ರಾಮಾನುಜನ್ ಕಟ್ಟಿಕೊಂಡಿರುವ ಮೀಮಾಂಸಾ ಲಕ್ಷಣಗಳು ಯಾವುದಿರಬಹುದೆಂಬ ಹುಡುಕಾಟದ ಒಂದಷ್ಟು ಭಾಗವನ್ನು ಪ್ರಸ್ತುತ ಪ್ರಬಂಧದಲ್ಲಿ ಮಾಡಲಾಗಿದೆಯೆಂದು ತಿಳಿಯಲಾಗಿದೆ.
ಅಪರಿಚಿತ ಭಾಷಾವಲಯದಿಂದ ದೂರವಿರುವ ರಾಮಾನುಜನ್ನರ ಕವಿತೆ ಜಿಗಣೆಯಂತಹ ನಡಿಗೆಯನ್ನು ರೂಢಿಸಿಕೊಂಡಿದೆ. ಜಿಗಣೆಯೊಂದು ಮೊದಲು ತನ್ನನ್ನು ತಾನು ಸಮಗ್ರವಾಗಿ ಎತ್ತಿಕೊಂಡು ಮತ್ತೆ ಮುಂದೆ ಸಾಗಿ ಮತ್ತೆ ದೂರವಾಗಿ ಮತ್ತೆ ಒಂದಾಗಿ ಎರಡೂ ತುದಿಗಳೂ ಅಂಟಿಕೊಳ್ಳದೆ ಹೇಗೆ ಚಲಿಸಲಾರದೋ ಅಂತೆಯೇ ರಾಮಾನುಜನ್ನರ ಕವಿತೆ ಬಿಡಿಯಿಂದ ಇಡಿಗೆ ಚಲಿಸುತ್ತಿರುತ್ತದೆ.
ನನಗೆ ಅನ್ನಿಸುವ ಮಟ್ಟಿಗೆ ರಾಮಾನುಜನ್ನರ ಈ ವಿಘಟಿತ ಸಾಲುಗಳು ಸಂಘಟಿತ ಪ್ರತಿಮೆಗಳಾಗಿ ಪ್ರತಿರೂಪವನ್ನು ಹೊಂದಿ ಅನೇಕ ಅರ್ಥ ಸಾರ್ಥಕ್ಯತೆಗಳಲ್ಲಿ ಮರುಹುಟ್ಟು ಪಡೆಯುತ್ತಿರುತ್ತದೆ. ದೀರ್ಘ ಸಾಲುಗಳೂ, ಭಾರವಾದ ಭಾಷೆ, ಅಪರಿಚಿತ ಭಾಷಾವಲಯದಿಂದ ದೂರವಿರುವ ರಾಮಾನುಜನ್ನರ ಕವಿತೆ ಜಿಗಣೆಯಂತಹ ನಡಿಗೆಯನ್ನು ರೂಢಿಸಿಕೊಂಡಿದೆ. ಜಿಗಣೆಯೊಂದು ಮೊದಲು ತನ್ನನ್ನು ತಾನು ಸಮಗ್ರವಾಗಿ ಎತ್ತಿಕೊಂಡು ಮತ್ತೆ ಮುಂದೆ ಸಾಗಿ ಮತ್ತೆ ದೂರವಾಗಿ ಮತ್ತೆ ಒಂದಾಗಿ ಎರಡೂ ತುದಿಗಳೂ ಅಂಟಿಕೊಳ್ಳದೆ ಹೇಗೆ ಚಲಿಸಲಾರದೋ ಅಂತೆಯೇ ರಾಮಾನುಜನ್ನರ ಕವಿತೆ ಬಿಡಿಯಿಂದ ಇಡಿಗೆ ಚಲಿಸುತ್ತಿರುತ್ತದೆ. ಇದನ್ನು ನಾನು ಪದವನ್ನು ತುಂಡರಿಸುವ ಪ್ರಕ್ರಿಯೆಯಾಗಿ ನೋಡದೇ ಮೇಲಿನಿಂದ ಕೆಳಕ್ಕೆ ಹೇಗೆ ಕಾವ್ಯದ ಶಿಲ್ಪವು `ಕಟ್ಟುವ ಪ್ರಕ್ರಿಯೆಯಾಗಿ’ ರೂಪುಗೊಳ್ಳುತ್ತದೆ ಎಂದು ನೋಡಲು ಬಯಸುತ್ತೇನೆ. ಇದನ್ನೇ ನಾನು ‘ಅವರೋಹಣ ಪ್ರಜ್ಞೆ’ ಎಂದು ಕರೆದಿರುವುದು. ಇದು ಏರುವ ಪ್ರಕ್ರಿಯೆಯಲ್ಲ ಬದಲಿಗೆ ಇಳಿಯುವ ಪ್ರಕ್ರಿಯೆ. ಪದ್ಯ ಹೇಗೂ ಮೇಲಿನಿಂದ ಕೆಳಗೆ ಇಳಿಯುತ್ತ ಇಳಿಯುತ್ತ ಒಂದು ಸಮಗ್ರ ಕಟ್ಟೋಣವಾಗುವುದು ನನ್ನ ಮಾತಿಗೆ ಹೆಚ್ಚು ಇಂಬು ಕೊಡುವ ಸಂಗತಿಯಾಗಿದೆ.
ನಾನೀಗ ಮಾತನಾಡಲು ಹೊರಟಿರುವುದು ರಾಮಾನುಜನ್ನರ ಬಂದು ವಿಶಿಷ್ಟವಾದ ಕವಿತೆಯೊಂದನ್ನು ಕುರಿತು. ಬಿಡಿಬಿಡಿಯಾಗಿ ರೂಪುಗೊಂಡು ಇಡಿಯಾಗಿ ವಿಸ್ತರಿಸಿಕೊಳ್ಳುವ ಅವರ ಕಾವ್ಯದ ಮುಂದುವರೆದ ಹಾಗೂ ಅಂತಿಮ ತುರೀಯ ಸ್ಥಾನಕ್ಕೆ ತಲುಪಿದ ಸಂಗತಿಯೊಂದನ್ನು ಕುರಿತು. ಇವರ ಒಟ್ಟಂದದ ಕಾವ್ಯಭಾಷೆ ಹಾಗೂ ಕಾವ್ಯಲಯದ ಎಚ್ಚರಿಕೆಯಿಂದ ಕಟ್ಟುತ್ತಾ ಹೋದ ಕಾವ್ಯ ನಿರ್ಮಿತಿಯೊಂದು ಹೇಗೆ ಅಮೂರ್ತವಾಗಿ ಒಡಮೂಡುತ್ತಲೇ ಸಮಗ್ರ ‘ಪದಸೂತಕ’ದಿಂದ ಬಿಡುಗಡೆ ಹೊಂದಿ ಬ್ರಹ್ಮಜ್ಞಾನದ ಪರಿನಿರ್ವಾಣದಲ್ಲಿ ಒಡಮೂಡಿದೆ ಎಂಬುದನ್ನು ಗಮನಿಸುವುದೇ ಆಗಿದೆ.
ಆರಂಭದಿಂದಲೂ ಕಾವ್ಯಶಿಲ್ಪ ಹಾಗೂ ಸಂವಿಧಾನದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ ನಮ್ಮ ರಾಮಾನುಜನ್ನರು ನಿರಂತರ ಕ್ರಿಯಾಶೀಲತೆಯನ್ನು ಕಾಯ್ದುಕೊಂಡವರು. ಕನ್ನಡದಲ್ಲಿ ಕೇವಲ ಮೂರೇ ಮೂರು ಕವನ ಸಂಕಲನವನ್ನು ಹೊರತಂದರೂ ಆಧುನಿಕ ಕನ್ನಡ ಕಾವ್ಯ ಪ್ರಪಂಚದಲ್ಲಿ ತಮ್ಮದೇ ಆದ ಸ್ಥಾನವನ್ನು ರೂಪಿಸಿಕೊಂಡವರು ಇವರು.
ಬ್ರಹ್ಮಜ್ಞಾನ : ಒಂದು ನಿಶ್ಶಬ್ದ ಸಾನೆಟ್ಟು
U-UU, U-U -U
UU U-U -UU
-U UUU -UU
U-U UU-U UU
– -U UUUUU
– UU -UU-
U UUU -UU-U
UU-U, -UUU,
-U UUU – –
UUU -U U-U
-U-U UU-
UUUU? -U, UUU
– -UUU -U
UUU -U-UU?
UU – – U –
ಪದ ನಿರ್ಮಿತಿಯ ಸೋಪಾನಗಳಲ್ಲಿ ಹತ್ತುವುದಕ್ಕಿಂತ ಇಳಿದು ಆಳಕ್ಕೆ ಜಿನುಗುವ ರಾಮಾನುಜನ್ನರ ಪದ್ಯಗಳು ಒಟ್ಟಂದದಲ್ಲಿ ಆಳವಾದ ಸಂವೇದನೆಗಳನ್ನು ಒಳಗೊಂಡಿದೆ. ನಾನೀಗ ಮಾತನಾಡಲು ಹೊರಟಿರುವುದು ಕಾವ್ಯಭಾಷೆ ಹಾಗೂ ಕಾವ್ಯಲಯದ ಮೂಲಕ ಧ್ಯಾನಸ್ಥ ಸ್ಥಿತಿಯನ್ನು ತಲುಪಿರುವ ಬಗೆಗೆ, ಧ್ಯಾನ ರಾಮಾನುಜನ್ನರ ಕೆಲವು ಕವಿತೆಗಳ ಸ್ಥಾಯೀಭಾವ. ಅವರು ಸೃಜಿಸುವ ಪ್ರತಿಮೆಗಳ ಹಿಂದೆ ಅಸಾಧಾರಣವಾದ ಸಿದ್ಧತೆಯಿರುವುದು ಎದ್ದುಕಾಣುತ್ತದೆ.
1990ರಲ್ಲಿ ಕನ್ನಡದಲ್ಲಿ ರಾಮಾನುಜನ್ ತಮ್ಮ ಮೂರನೆಯ ಹಾಗೂ ಕೊನೆಯ ಕವನ ಸಂಕಲನವನ್ನು ಪ್ರಕಟಿಸಿದರು. ಅದರ ಹೆಸರು ಕುಂಟೋಬಿಲ್ಲೆ. ಆಗ ಅವರಿಗೆ 61 ವರ್ಷಗಳು. ಅದಾದ ಮೂರು ವರ್ಷಗಳಲ್ಲಿ ಅವರು ಕೊನೆಯುಸಿರೆಳೆದರು. ಈ ಸಂಕಲನದ ಕಟ್ಟಕಡೆಯ ಕವಿತೆಯೇ “ಬ್ರಹ್ಮಜ್ಞಾನ : ಒಂದು ನಿಶ್ಶಬ್ದ ಸಾನೆಟ್ಟು”. ರಾಮಾನುಜನ್ನರ ಸಮಗ್ರ ಕಾವ್ಯ ನಿರ್ಮಿತಿಯ ಇತಿಹಾಸದಲ್ಲಿ ; ಅಷ್ಟೇ ಯಾಕೆ ಕನ್ನಡ ಕಾವ್ಯಪ್ರಪಂಚದಲ್ಲಿಯೇ ಇದುವರೆಗೂ ಕೇವಲ ಛಂದಸ್ಸಿನ ಮಾತ್ರೆಗಳ ಮೂಲಕವೇ ಕವಿತೆಯೊಂದು ಸಿದ್ಧಗೊಂಡಿರುವುದು ಇದೇ ಮೊದಲು. ಕೇವಲ ಲಘು-ಗುರುಗಳ ವಿನ್ಯಾಸದ ಮೂಲಕ ಒಂದು ಇಡೀ ಪದ್ಯವನ್ನು ಕಟ್ಟುವುದರ ಮೂಲಕ ರಾಮಾನುಜನ್ ಅನನ್ಯ ಸಾಧನೆ ಮಾಡಿದ್ದಾರೆ. ಹಾಗಾಗಿಯೇ ನಾನು ಈ ಲೇಖನದ ಶೀರ್ಷಿಕೆಯನ್ನು “ಕನ್ನಡ ಕಾವ್ಯ ಸಾತತ್ಯದಲ್ಲಿ ಅನೂಹ್ಯ ಪ್ರಯೋಗ” ಎಂದು ಕರೆದಿದ್ದೇನೆ. ಮೇಲುನೋಟಕ್ಕೆ ಲಘು-ಗುರುಗಳ ಮೇಳದಂತೆ ಕಾಣುವ ಈ ಪದ್ಯವು ನಿಜಕ್ಕೂ ಬ್ರಹ್ಮಜ್ಞಾನ ಸಾಧನೆಯ ಪರಿಭಾಷೆಗೆ ಹತ್ತಿರಕ್ಕೆ ನಿಲ್ಲುವ ತಾಂತ್ರಿಕ ಸಿದ್ಧಿಯನ್ನು ಹಾಗೂ ಅದೃಶ್ಯ ಅನುಭವವನ್ನು ಅಮೂರ್ತವಾಗಿ ಕಟ್ಟಿಕೊಡುವುದರ ಮೂಲಕ ಅತ್ಯುತ್ತಮವಾದ ಅನುಸಂಧಾನವನ್ನು ಮಾಡಿದೆ ಎಂದು ಪ್ರಸ್ತುತ ಲೇಖನವು ನಂಬಿದೆ. ಈ ಕವಿತೆಯನ್ನು ರಾಮಾನುಜನ್ ಸಾನೆಟ್ಟಿನಲ್ಲಿ ಬರದಿರುವುದು ಮತ್ತೂ ಒಂದು ವಿಶೇಷವಾದ ಸಂಗತಿಯಾಗಿದೆ.
ಬ್ರಹ್ಮಜ್ಞಾನ ಎಂಬ ಶುದ್ಧಾಂಗವಾಗಿ ಭಾರತೀಯವಾದ ವಸ್ತುವೊಂದನ್ನು ರಾಮಾನುಜನ್ ಸಾನೆಟ್ ಎನ್ನುವ ವಿದೇಶೀ ದೇಹದಲ್ಲಿ ಹುದುಗಿಸಿ ನೋಡಿದ್ದಾರೆ. ಅಂದರೆ ಸಾನೆಟ್ನ ದೇಹದಲ್ಲಿ ಬ್ರಹ್ಮಜ್ಞಾನದ ಜೀವವನ್ನು ಪುಟಿದೇಳುವಂತೆ ಮಾಡಿದ್ದಾರೆ. ಬಹುಶಃ ಆತ್ಮರತಿಯನ್ನು ಮೀರಿ ನಿಂತು ಮಮಕಾರವನ್ನು ತೊರೆದ ಮನಸ್ಥಿತಿಗೆ ಮಾತ್ರ ಬ್ರಹ್ಮಜ್ಞಾನ ಪ್ರಾಪ್ತವಾಗುವುದರಿಂದ ಇವೆಲ್ಲವನ್ನು `ತೊರೆಯುವ ಪ್ರಕ್ರಿಯೆ’ಯ ಭಾಗವಾಗಿ ಸಾನೆಟ್ ಎನ್ನುವ ರೂಪದ ಒಳಗೆ ಬ್ರಹ್ಮಜ್ಞಾನದ ನಿರಾಕಾರವನ್ನು ಕಾಣಲು ಪ್ರಯತ್ನಿಸಿದ್ದಾರೆ. ಪರಕೀಯವೊಂದನ್ನು ಸ್ವಕೀಯಗೊಳಿಸುತ್ತಾ ಅದರಲ್ಲೇ ಪರಮಾನಂದದ ದರ್ಶನವನ್ನು ಕಾಣುವ ಬಗೆ ಹೇಗೆ ಎಂಬುದನ್ನು ಕವಿತೆ ಪ್ರಾಯೋಗಿಕವಾಗಿ ಪರೀಕ್ಷಿಸುವಂತೆ ಕಾಣುತ್ತಿದೆ.
ತಾಂತ್ರಿಕವಾಗಿ ಸಾನೆಟ್ಟಿನ ಸಾಧನೆ ಹಾಗೂ ಲಂಘನೆ
ಮೊದಲಿಗೆ ಛಂದಶ್ಶಾಸ್ತ್ರದ ಪ್ರಾಥಮಿಕ ವಿಷಯಗಳನ್ನೂ, ಸಾನೆಟ್ಟಿನ ತಾಂತ್ರಿಕ ವಿವರಗಳನ್ನೂ ಗಮನಿಸೋಣ. ನಂತರ ರಾಮಾನುಜನ್ನರು ಹೇಗೆ ಈ ನಿಯಮಗಳಾಚೆ ತಮ್ಮ ಪದ್ಯದ ಅಸ್ಮಿತೆಯನ್ನು ಕಂಡುಕೊಂಡಿದ್ದಾರೆ ಎಂದು ತಿಳಿಯೋಣ. ಕುಂಟೋಬಿಲ್ಲೆ ಸಂಕಲನದಲ್ಲಿರುವ “ಬ್ರಹ್ಮಜ್ಞಾನ; ಒಂದು ನಿಶ್ಶಬ್ದ ಸಾನೆಟ್ಟು” ಎಂಬ ಅಕ್ಷರರಹಿತ ಪದ್ಯದಲ್ಲಿ ಇರುವುದು ನಾದ ಮಾತ್ರ. “ನಾದವೊಂದೇ ಬ್ರಹ್ಮಜ್ಞಾನವೊಂದೇ ಇಲ್ಲಿ ಸಾಧನೆ ಮಾಡುವ ಹಾದಿ ಒಂದೇ” ಎಂಬ ಶಿಶುನಾಳ ಶರೀಫರ ಮಾತನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಈ ನಾದ ಚಾಕ್ಷುಷವೂ ಹೌದು, ಅಗೋಚರವೂ ಹೌದು ಮತ್ತು ಅನಿರ್ವಚನೀಯವೂ ಹೌದು ಅಮೂರ್ತವೂ ಹೌದು.
ಛಂದಸ್ಸಿನಲ್ಲಿ ಲಘುವು ಹೃಸ್ವವನ್ನು ಗುರುವು ದೀರ್ಘವನ್ನು ಪ್ರತಿನಿಧಿಸುವುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ಒಂದು ಮಾತ್ರೆಯಲ್ಲಿ ಮೂಡುವ ಲಘುವಿಗೂ, ಎರಡು ಮಾತ್ರೆಯಲ್ಲಿ ಮೂಡುವ ಗುರುವಿಗೂ ಅದರದ್ದೇ ಆದ ಸ್ಥಾನಮಾನವಿದೆ.
ಇನ್ನು ಸಾನೆಟ್ಟಿನ ತಾಂತ್ರಿಕ ವಿವರಗಳ ಕಡೆ ಗಮನ ಹರಿಸುವುದಾದರೆ ಭಾವಗೀತೆಯ ಒಂದು ಉಪಪ್ರಕಾರವಾದ ಸಾನೆಟ್ಟು ಕನ್ನಡದಲ್ಲಿ ಈಗಗಾಲೇ ಅಷ್ಟಷಟ್ಪದಿ, ಸುನೀತ, ಚತುರ್ದಶಪದಿ ಮುಂತಾದ ಹೆಸರುಗಳಿಂದ ಪ್ರಸಿದ್ಧವಾಗಿರುವುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ತಾಂತ್ರಿಕವಾಗಿ ಇದರಲ್ಲಿ 14 ಸಾಲುಗಳು ಇರಲೇಬೇಕು. ಪ್ರಾಸ ಮತ್ತು ಆಲೋಚನೆಗಳ ಆಧಾರದ ಮೇಲೆ ಅಷ್ಟಪದಿ (8 ಸಾಲು) + ಷಟ್ಪದಿ (6 ಸಾಲು) ಸೇರಿ ಅಷ್ಟಷಟ್ಪದಿಯು ರೂಪುಗೊಂಡಿದೆ.
ಇಟಲಿಯ ಪ್ರಸಿದ್ಧ ಕವಿ ಪೆಟ್ರಾರ್ಕನ್ ಯಶಸ್ವಿಯಾಗಿ ಬಳಸಿದನಾದ್ದರಿಂದ ಪೆಟ್ರಾರ್ಕನ್ ಸಾನೆಟ್ ಎಂದೇ ಹೆಸರಾಗಿ ಸರ್ರೆಯ ಸಾನೆಟ್ ಇಂಗ್ಲಿಷ್ ಸಾನೆಟ್ ಆಗಿ, ಶೇಕ್ಸ್ಪಿಯರನ ವಿಶಿಷ್ಟ ರಚನೆಗಳು ಶೇಕ್ಸ್ಪಿಯರನ್ ಸಾನೆಟ್ಗಳಾಗಿ ಪ್ರಸಿದ್ಧಿ ಪಡೆದಿವೆ. ಪೆಟ್ರಾರ್ಕನ್ನನದು ಅಷ್ಟಪದಿ ಮತ್ತು ಷಟ್ಪದಿ ಸೇರಿದ ಸಾನೆಟ್ ಆದರೆ ಸರ್ರೆ ಮತ್ತು ಶೇಕ್ಸ್ಪಿಯರರ ಸಾನೆಟ್ಟುಗಳಲ್ಲಿ ಮೂರು ಚೌಪದಿಗಳು + ಒಂದು ದ್ವಿಪದಿ ಸೇರಿದ್ದಾಗಿತ್ತು. ಕನ್ನಡದಲ್ಲಿ ಈ ಸಾನೆಟ್ಟಿನ ಕ್ಷೇತ್ರದಲ್ಲಿ ನಿಯಮಬದ್ಧವಾಗಿ ಈ ಹಿಂದೆ ಗೋವಿಂದ ಪೈಗಳು, ಕುವೆಂಪು, ಮಾಸ್ತಿ, ಬೇಂದ್ರೆ, ಬಿ.ಸಿ. ರಾಮಚಂದ್ರ ಶರ್ಮ, ಚೆನ್ನವೀರ ಕಣವಿ, ಎಚ್.ಎಸ್. ವೆಂಕಟೇಶ್ ಮೂರ್ತಿ ಮುಂತಾದವರು ಕೃಷಿ ಮಾಡಿದ್ದಾರೆ.
ರಾಮಾನುಜನ್ನರ ಈ ಬ್ರಹ್ಮಜ್ಞಾನ ಕವಿತೆಯಲ್ಲಿ ಎರಡು ಚೌಪದಿಗಳು ಅಂದರೆ 4 + 4 ಸಾಲುಗಳು ಬಂದ ನಂತರ ಎರಡು ತ್ರಿಪದಿಗಳು ಬಂದಿವೆ. ಅಂದರೆ 4 + 4 + 3 +3 ಸಾಲುಗಳು. ಪ್ರತಿಯೊಂದು ಸಾಲಿನಲ್ಲೂ ಕನಿಷ್ಟ 10 ಮಾತ್ರೆಗಳು ಇವೆ.ಮೊದಲ ಪ್ಯಾರಾದ ನಾಲ್ಕು ಸಾಲುಗಳಲ್ಲಿ 12 + 10 + 10 + 11 ಮಾತ್ರೆಗಳಿದ್ದರೆ ಎರಡನೆಯ ಪ್ಯಾರಾದಲ್ಲಿ 10 + 10 + 11 + 10 ಮಾತ್ರೆಗಳಿವೆ. ಇನ್ನುಳಿದ ಎರಡು ಪ್ಯಾರಾಗಳ ಪ್ರತಿಯೊಂದು ಸಾಲಿನಲ್ಲೂ ಹತ್ತು ಹತ್ತು ಮಾತ್ರೆಗಳಿವೆ.
ಆದರೆ ರಾಮಾನುಜನ್ ಇಲ್ಲಿನ ನಿಯಮವನ್ನು ಸ್ವಲ್ಪ ಸಡಿಲಿಸಿ ಅದನ್ನು ಮೀರಿ ನಿಲ್ಲುತ್ತಾರೆ. ಅವರಿಗೆ ನಿಯಮಗಳಲ್ಲಿ ನಂಬಿಕೆಯಿಲ್ಲ. ಬದಲಿಗೆ ಸಾಕ್ಷಾತ್ಕಾರದಲ್ಲಿ ನಂಬಿಕೆಯಿದೆ. ರಾಮಾನುಜನ್ನರ ಈ ಬ್ರಹ್ಮಜ್ಞಾನ ಕವಿತೆಯಲ್ಲಿ ಎರಡು ಚೌಪದಿಗಳು ಅಂದರೆ 4 + 4 ಸಾಲುಗಳು ಬಂದ ನಂತರ ಎರಡು ತ್ರಿಪದಿಗಳು ಬಂದಿವೆ. ಅಂದರೆ 4 + 4 + 3 +3 ಸಾಲುಗಳು. ಪ್ರತಿಯೊಂದು ಸಾಲಿನಲ್ಲೂ ಕನಿಷ್ಟ 10 ಮಾತ್ರೆಗಳು ಇವೆ.
ಮೊದಲ ಪ್ಯಾರಾದ ನಾಲ್ಕು ಸಾಲುಗಳಲ್ಲಿ 12 + 10 + 10 + 11 ಮಾತ್ರೆಗಳಿದ್ದರೆ ಎರಡನೆಯ ಪ್ಯಾರಾದಲ್ಲಿ 10 + 10 + 11 + 10 ಮಾತ್ರೆಗಳಿವೆ. ಇನ್ನುಳಿದ ಎರಡು ಪ್ಯಾರಾಗಳ ಪ್ರತಿಯೊಂದು ಸಾಲಿನಲ್ಲೂ ಹತ್ತು ಹತ್ತು ಮಾತ್ರೆಗಳಿವೆ.
ವಿಶೇಷವೆಂದರೆ ಇಡೀ ಪದ್ಯದ ಪ್ರತಿಯೊಂದು ಸಾಲಿನಲ್ಲೂ 10 ಮಾತ್ರೆಗಳು ಇದ್ದೇ ಇದ್ದು ಮೊದಲ ಸಾಲಿನಲ್ಲಿ 2 ಮಾತ್ರೆಗಳು, 4 ಹಾಗೂ 7ನೇ ಸಾಲುಗಳಲ್ಲಿ ಒಂದೊಂದು ಮಾತ್ರೆಗಳು ಹೆಚ್ಚುವರಿಯಾಗಿವೆ. ಅತ್ಯಂತ ವಿಶೇಷವಾದ ಸಂಗತಿಯೆಂದರೆ 12 ಮತ್ತು 14 ನೆಯ ನಿಣರ್ಾಯಕ ಸಾಲುಗಳಲ್ಲಿ ಒಂದೊಂದು ಪ್ರಶ್ನಾರ್ಥಕ ಚಿಹ್ನೆಯು ಹೆಚ್ಚುವರಿಯಾಗಿದ್ದು ಕವಿತೆಯ ತಾಕರ್ಿಕತೆಗೆ ವಿಶೇಷ ಪ್ರಶ್ನೆಯನ್ನು ಹುಟ್ಟುಹಾಕಿರುವುದನ್ನು ವಿಶ್ಲೇಷಣೆಯ ಭಾಗದಲ್ಲಿ ಗಮನಿಸೋಣ.
ಇಡೀ ಪದ್ಯ ಸಾನೆಟ್ಟಿನ ಸಾಂಪ್ರದಾಯಿಕ ರಾಚನಿಕ ಪ್ರಕ್ರಿಯೆಗೆ ವಿರುದ್ಧವಾಗಿದೆ. ಎಂಟು ಸಾಲುಗಳ ಒಂದು ಪ್ಯಾರಾ ನಂತರ ಆರು ಸಾಲುಗಳ ಒಂದು ಪ್ಯಾರಾ ಕೂಡ ಇಲ್ಲಿಲ್ಲ ಅಥವಾ ಮೂರು ಚೌಪದಿಗಳು ಬಂದು ನಂತರ ಒಂದು ದ್ವಿಪದಿಯೂ ಇಲ್ಲಿಲ್ಲ. ಬದಲಿಗೆ ಸಾನೆಟ್ಟಿನ ನಿಯಮಗಳನ್ನು ಮುರಿದು ಕಟ್ಟಿದ ನಾಲ್ಕು ನಾಲ್ಕು ಸಾಲಿನ ಎರಡು ಪ್ಯಾರಾಗಳು ನಂತರ ಮೂರು ಮೂರು ಸಾಲಿನ ಎರಡು ಪ್ಯಾರಾಗಳು.
ನನಗೀಗ ಈ ಪದ್ಯವನ್ನು ಅರ್ಥಮಾಡಿಕೊಳ್ಳಲು ಒಂದು ಹೊಸ ಯೋಚನೆಯೊಂದು ಹೊಳೆಯುತ್ತಿದೆ. ನಾವೀಗ ಈ ಇಡೀ ಪದ್ಯವನ್ನು ಗುರು-ಶಿಷ್ಯರ ಸಂಬಂಧದಲ್ಲಿ ಇಟ್ಟು ನೋಡುತ್ತಿರುವುದರಿಂದ ನಾಲ್ಕು ಸಾಲಿನ ಚೌಪದಿಯು ತ್ರಿಪದಿಗೆ ಇಳಿದಿರುವುದು ನಮಗೆ ಚಕ್ಷುಷವಾದ ಅನುಭವವನ್ನು ಉಂಟುಮಾಡುತ್ತಿದೆ. ಕವಿತೆಯ ಆಂತರ್ಯದಲ್ಲಿ ಈ ಸಾಲುಗಳು ದ್ವಿಪದಿಯಾಗಿ ನಂತರ ಏಕಪದಿಯಾಗಿ ನಂತರ ಏಕಪದವಾಗಿ ಕಡೆಗೆ “ನಿಶ್ಶಬ್ದದ” ಕಡೆಗೆ ಚಲಿಸುವ ಪ್ರಕ್ರಿಯೆಯಲ್ಲಿ ಏನಾದರೂ ಇದೆಯೋ ಎನ್ನುವ ಅನುಮಾನವನ್ನು ಕವಿತೆಯ ಶಿಲ್ಪ ಬಿತ್ತುತ್ತಿದೆ. ಹಾಗೆಯೇ ಗುರುವೊಬ್ಬನ ಪಾದದ ಗುರುತೂ ಕೂಡ ಇದೇ ಅವರೋಹಣ ಪ್ರಜ್ಞೆಯನ್ನು ಆಹ್ವಾನಿಸಿಕೊಂಡಂತೆಯೂ ಗ್ರಹಿಸಬಹುದು.
ಹೌದು, ಆಧುನಿಕ ಪೂರ್ವ ಕನ್ನಡ ಸಾಹಿತ್ಯವು ಸಂಪೂರ್ಣವಾಗಿ ಛಂದಸ್ಸಿನ ಬಂಧದಲ್ಲಿಯೇ ತಮ್ಮನ್ನು ತಾವು ಹುದುಗಿಸಿಟ್ಟುಕೊಂಡಿದ್ದು ಸರ್ವವಿಧಿತವೆ. ಆದರೆ ಛಂದಸ್ಸಿನ ಮೂಲಮಾತೃಕೆಯ ನಿಯಮಗಳಿಗೆ ಗುರು-ಲಘುಗಳ ಸಂಯೋಜನೆಯಲ್ಲಿ ಮಾತು ಅನಿವಾರ್ಯವಾಗಿತ್ತು. ನೇರವಾಗಿ ಕಂಡ ಮಾತಿಗೆ ಲಯವನ್ನು ಹುಡುಕುತ್ತಿದ್ದ ನಾವು, ಪದ್ಯಜಾತಿಗಳಿಗೆ ಛಂದಸ್ಸಿನ ಲಕ್ಷಣಗಳನ್ನು ಪ್ರಸ್ತಾರ ಹಾಕುವುದರ ಮೂಲಕ ಹುಡುಕುತ್ತಿದ್ದ ಸಂಪ್ರದಾಯವಾದಿ ಮನಸ್ಸುಗಳಿಗೆ ಈ ಗಣಪ್ರಸ್ತಾರವೇ ಒಂದು ಕವಿತೆಯೆಂದು ಒಪ್ಪಿಕೊಳ್ಳಲು ಮಾತ್ರ ಕಷ್ಟವಾಯಿತು ಎಂಬ ದ್ವಂದ್ವವನ್ನು ನಾವು ನಿರಾಕರಿಸಲಾದೀತೇ?
ಕವಿತೆಯ ವಿಶ್ಲೇಷಣೆ
ನಾವೀಗ ಛಂದಶ್ಶಾಸ್ತ್ರದ ತಾಂತ್ರಿಕ ವಿವರಗಳನ್ನು ಗಮನಿಸಿದ್ದುದರ ಉದ್ದೇಶ ಆ ತಾಂತ್ರಿಕ ವಿವರಗಳನ್ನು ಕವಿತೆ ಹೇಗೆ ಮೆಟ್ಟಿ ನಿಲ್ಲುತ್ತದೆ ಎಂದು ತಿಳಿಯಲು ಸಹಕಾರಿಯಾಗಿದೆ. ರಾಮಾನುಜನ್ನರ ಕವಿತೆಯನ್ನು ಹೀಗೆ ಪರಿಭಾವಿಸಿದರೆ ಹೇಗೆ? -ಲಘುವಿಗೆ ದೀರ್ಘದ ತಾಳಿಕೆಯಿಲ್ಲ. ದೀರ್ಘಕ್ಕೆ ಲಘುವಾಗುವ ಅಪೇಕ್ಷೆಯಿಲ್ಲ. ಒಂದು ಮಾತ್ರೆಗೆ ನಿಲುಕುವ ಲಘುವು ಹೃಸ್ವವಾಗಿ ತನ್ನ ಅಸ್ಮಿತೆಯನ್ನು ಕಂಡುಕೊಂಡರೆ ಎರಡು ಮಾತ್ರೆಯಲ್ಲಿ ಗರಿಗೆದರಿ ನಿಲ್ಲುವ ಗುರುವಿಗೆ ಈ ಲಘುವನ್ನೇ ಅಪೋಷಣೆಗೈದು ತನ್ನನ್ನು ಗುರುತರವಾಗಿ ರೂಪಿಸಿಕೊಳ್ಳಲು ಹವಣಿಸುತ್ತಿರುವಂತೆ ತೋರುತ್ತದೆ. ಆದರೆ ಅಷ್ಟಾದರೂ ಗುರುವಿಗೆ ಗುರುವಾಗಿ ಮಾತ್ರ ಉಳಿಯಲು ಅರ್ಹತೆಯಿದೆಯೇ ಹೊರತು ಅದನ್ನು ಮೀರಿ ಬೆಳೆಯುವ ಅವಕಾಶವಿಲ್ಲ.
ಲಘುವಿಗೆ ದೀರ್ಘದ ತಾಳಿಕೆಯಿಲ್ಲ. ದೀರ್ಘಕ್ಕೆ ಲಘುವಾಗುವ ಅಪೇಕ್ಷೆಯಿಲ್ಲ. ಒಂದು ಮಾತ್ರೆಗೆ ನಿಲುಕುವ ಲಘುವು ಹೃಸ್ವವಾಗಿ ತನ್ನ ಅಸ್ಮಿತೆಯನ್ನು ಕಂಡುಕೊಂಡರೆ ಎರಡು ಮಾತ್ರೆಯಲ್ಲಿ ಗರಿಗೆದರಿ ನಿಲ್ಲುವ ಗುರುವಿಗೆ ಈ ಲಘುವನ್ನೇ ಅಪೋಷಣೆಗೈದು ತನ್ನನ್ನು ಗುರುತರವಾಗಿ ರೂಪಿಸಿಕೊಳ್ಳಲು ಹವಣಿಸುತ್ತಿರುವಂತೆ ತೋರುತ್ತದೆ. ಆದರೆ ಅಷ್ಟಾದರೂ ಗುರುವಿಗೆ ಗುರುವಾಗಿ ಮಾತ್ರ ಉಳಿಯಲು ಅರ್ಹತೆಯಿದೆಯೇ ಹೊರತು ಅದನ್ನು ಮೀರಿ ಬೆಳೆಯುವ ಅವಕಾಶವಿಲ್ಲ.
ರಾಮಾನುಜನ್ನರ ಬ್ರಹ್ಮಜ್ಞಾನವನ್ನು ಕುರಿತ ಈ ಪದ್ಯದಲ್ಲಿರುವ ಲಘು-ಗುರುಗಳನ್ನು, ಶಿಷ್ಯ-ಗುರುವಿನ ಸಂಬಂಧದಲ್ಲಿ ಇಟ್ಟು ನೋಡಲು ಈ ಪ್ರಬಂಧವು ಬಯಸುತ್ತದೆ. ಬ್ರಹ್ಮಜ್ಞಾನದ ಅತ್ಯಂತ ಪ್ರಮುಖ ಪಾತಳಿಯಾದ ಈ ಲಘು-ಗುರುಗಳ ಸಂಬಂಧವು ಗುರು-ಶಿಷ್ಯರ ಸಂಬಂಧಕ್ಕೆ ಬಡ್ತಿಹೊಂದಿ ಒಂದನ್ನೊಂದು ಪ್ರಭಾವಿಸುವ, ಅನುಸರಿಸುವ ಕಾಯಕದಲ್ಲಿ ತೊಡಗಿದ್ದರೂ ಅನನ್ಯವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಸಾಗುತ್ತದೆ. ಇಲ್ಲಿ `ಗುರು’ವನ್ನು `ಗುರು’ವೆಂತಲೂ `ಲಘು’ವನ್ನು ಶಿಷ್ಯನೆಂತಲೂ ಪರಿಭಾವಿಸಿದರೆ ಶಿಷ್ಯನು ತಾನು ರೂಪುಗೊಳ್ಳಬೇಕಾದ ಹಾದಿಯಲ್ಲಿ ಈ ಗುರುವನ್ನು ಅನುಸರಿಸುವನಾದರೂ ಕ್ರಮೇಣ ತನ್ನದೇ ಆದ ಹಾದಿಯನ್ನು ಕಂಡುಕೊಂಡಾಗ ಮಾತ್ರ ಆತ ಜ್ಞಾನಿಯಾಗುತ್ತಾನೆ. ಗುರುವಿನ ಪದತಳದಲ್ಲಿ ಕೂತು ಪರಂಪರೆಯನ್ನು ಅಂಧಾನುಕರಣೆಯಿಂದ ಮುಂದುವರೆಸುವವನಿಗೆ ದಾಸ್ಯದ ಸೆಳೆತವಿರುತ್ತದೆಯೇ ಹೊರತು ಅನುಭಾವದ ಸಮ್ಮೇಳನವಿರುವುದಿಲ್ಲ. ಹಾಗೆಯೇ ಶಿಷ್ಯನನ್ನು ಸರ್ವಾಂಗೀಣವಾಗಿ ಬೆಳೆಯಲು ಬಿಡುವುದು ಗುರುವಿನ ಗುರುತರ ಜವಾಬ್ದಾರಿಯೇ ಹೊರತು ತನ್ನ ಬಾಲಂಗೋಚಿಯಾಗಿ ಅನುಯಾಯಿಯಾಗಿ ನಿಯಂತ್ರಿಸುವುದು ಆತನ ಸೀಮಿತ ಬೌದ್ಧಿಕತೆಯನ್ನು ಪ್ರತಿಬಿಂಬಿಸುತ್ತದೆಯೇ ಹೊರತು ಅವನ ವಿಶಾಲವಾದ ಮನಸ್ಥಿತಿಯನ್ನು ಬಿಂಬಿಸುವುದಿಲ್ಲ ಅಲ್ಲವೇ?
ಈ ಕವಿತೆಯ ಶೀರ್ಷಿಕೆಯನ್ನು ಮೊದಲು ನಾವು ಖಚಿತಪಡಿಸಿಕೊಳ್ಳಬೇಕು. `ಬ್ರಹ್ಮಜ್ಞಾನ; ಒಂದು ನಿಶ್ಶಬ್ದ ಸಾನೆಟ್ಟು’ ಬ್ರಹ್ಮಜ್ಞಾನವೆನ್ನುವುದು ಅನುಭವಕ್ಕೆ ಬರುವುದೇ ಹೊರತು ವ್ಯಾಖ್ಯಾನಕ್ಕೆ ದಕ್ಕುವುದಿಲ್ಲ. ಗುರುವನ್ನು ಅನುಸರಿಸಿದ ಶಿಷ್ಯನೊಬ್ಬ ತನ್ನ ವಿಶಿಷ್ಟ ಪ್ರತಿಭೆಯಿಂದ ಆತ್ಮಸಾಕ್ಷಾತ್ಕಾರದ ಹಂತಕ್ಕೆ ನಡೆಯುತ್ತಾ ನಡೆಯುತ್ತಾ ಈ ಶಬ್ದಸೂತಕವನ್ನು ಕಳೆದುಕೊಂಡು ನಿಶ್ಶನಾಗಬೇಕಾಗುತ್ತದೆ.
ಇಲ್ಲಿ ನಿಶ್ಶಬ್ದ ಎನ್ನುವ ಪದ ಎರಡು ಭೂಮಿಕೆಗಳಲ್ಲೂ ವಿಸ್ತರಿಸಿಕೊಂಡಿದೆ. ಮೊದಲನೆಯದು Silence, ಮೌನ ಎನ್ನುವ ಅರ್ಥವನ್ನು ನೀಡಿದರೆ ಇನ್ನೊಂದು `ಪದರಹಿತ’, ಶಬ್ದವೇ ಇಲ್ಲದ ನಾದಮಯ ಸ್ಥಿತಿಯನ್ನು ಅನಾವರಣಗೊಳಿಸಿದೆ. ಈ ಕವಿತೆ ಯಾವ ಪದಗಳನ್ನೂ ಬಳಸದೆ ಕೇವಲ ಮಾತ್ರೆಗಳಲ್ಲಿ ತನ್ನನ್ನು ತಾನು ಕಂಡುಕೊಂಡಿರುವುದರಿಂದ ಈ ಪದದ ಔಚಿತ್ಯವನ್ನು ನಾವು ಮನಗಾಣಬೇಕು. ನಿಜವಾಗಿಯೂ ಮೌನವಾಗಲೀ, ಧ್ಯಾನವಾಗಲೀ, ಬ್ರಹ್ಮಜ್ಞಾನವಾಗಲೀ `ನಿಶ್ಶಬ್ದ’ವಾಗಿರಲೇಬೇಕು. ಅದು ಮಾತಿಗೆ ನಿಲುಕದ್ದಾಗಿರಬೇಕು. ಅನುಭವಕ್ಕೆ ಬರುವಂತಿರಬೇಕು. ಬ್ರಹ್ಮಜ್ಞಾನವನ್ನು ಮಾತಿನಲ್ಲಿ ವಿವರಿಸಿ ಹೇಳಿಬಿಟ್ಟಿದ್ದರೆ ಕವಿತೆಯ ಬಂಧದಲ್ಲಿ ಈಗಿರುವಷ್ಟು ಬಿಗಿ ಇರುತ್ತಿರಲಿಲ್ಲ ಎಂದೇ ನನ್ನ ಭಾವನೆ.
ಏಕಕಾಲಕ್ಕೆ ಬ್ರಹ್ಮಜ್ಞಾನವು ಕಾಣುವಂತೆಯೂ, ತೋರದಂತೆಯೂ, ದರ್ಶನವಾಗುವಂತೆಯೂ ಅಮೂರ್ತವಾಗಿರುವಂತೆಯೂ, ತನ್ನನ್ನು ತಾನು ಪ್ರಕಟಪಡಿಸಿಕೊಂಡರೂ ವಿವರಣೆಗೆ ದಕ್ಕದಂತೆಯೂ, ಮುಂದುವರೆಯುತ್ತಿರುವಂತೆ ಕಂಡರೂ ತಟಸ್ಥವಾಗಿರುವಂತೆ ಭಾಸವಾಗುವ, ತಟಸ್ಥವೆಂದುಕೊಂಡರೆ ಚಲನಶೀಲವೆಂದು ತೋರುವ ಈ ಇಡೀ ಪ್ರಕ್ರಿಯೆಯು ಬ್ರಹ್ಮಜ್ಞಾನವನ್ನು ಕುರಿತ ಅತ್ಯಂತ ಸಮರ್ಥ ಅನುಸಂಧಾನವೆನ್ನುವುದು ಕವಿತೆಯ ಒಡಲೇ ಸ್ಪಷ್ಟಪಡಿಸುವುದಿಲ್ಲವೇ?
ಬ್ರಹ್ಮಜ್ಞಾನ ಮತ್ತು ನಿಶ್ಶಬ್ದಗಳು ಹೇಗೆ ಸಂವಾದಿಯಾದವು ಎಂದು ಕಂಡ ಬಳಿಕ ಈ ಸಾನೆಟ್ಟು ಎಂಬ ಪದದ ಕಡೆ ನಮ್ಮ ಗುರಿ ಚಲಿಸಬೇಕಿದೆ. ಈಗಾಗಲೇ ತಿಳಿಸಿದಂತೆ ಈ ಸಾನೆಟ್ಟು ದೇಹವಾದರೆ ಬ್ರಹ್ಮಜ್ಞಾನ ಇದರೊಳಗಿನ ಆತ್ಮ. ಬ್ರಹ್ಮಜ್ಞಾನ ಅಂತರಂಗವಾದರೆ ಈ ಸಾನೆಟ್ಟು ಇದರ ಮೇಲುಹೊದಿಕೆ. ಈ ಸಾನೆಟ್ಟು ಪರಕೀಯವೂ ಹೌದು. ಆಕೃತಿಯೂ ಹೌದು. ಬ್ರಹ್ಮಜ್ಞಾನವೇನೂ ಸಂಪೂರ್ಣವಾಗಿ ಭಾರತೀಯರ ಆಸ್ತಿಯೇನೂ ಅಲ್ಲ ನಿಜ. ಆದರೆ ಭಾರತೀಯರಿಗೆ ಅದು ಎಟುಕಬೇಕಾದ ಅನಿವಾರ್ಯ ನೆಲೆ. ಮುಟ್ಟಲು ತವಕಿಸುವ ಪರವಸ್ತು. ಹೊಂದಲು ತಪಸುವ ಪರಮಪದ. ಅನುಭವಕ್ಕೆ ದೊರಕಲೇಬೇಕಾದ ಅನುಭಾವ. ಹೀಗೆ ವಿದೇಶೀ ದೇಹವಾದ ಸಾನೆಟ್ಟಿನಲ್ಲಿ ಗರಿಷ್ಟ ಮಟ್ಟದಲ್ಲಿ ಶೇಖಡಾ ನೂರಕ್ಕೆ ನೂರು ಭಾರತೀಯವಾದ ಬ್ರಹ್ಮಜ್ಞಾನವನ್ನು ಇಟ್ಟು ನೋಡಿರುವುದು ಇವೆರಡರ ನಂತರದಲ್ಲಿ ಹುಟ್ಟಿಕೊಳ್ಳುವ ಹೊಸ ಎಚ್ಚರವನ್ನು ಕಾಯ್ದುಕೊಳ್ಳಲು ಮಾಡಿದ ಪ್ರಯತ್ನದಂತೆ ಕಾಣುವುದಿಲ್ಲವೇ?
ಎಲ್ಲೋ ಒಂದು ಕಡೆ ಆಧುನಿಕ ಶಿಕ್ಷಣ ಕ್ರಮದ ಪರಮಗುರಿಯೂ ಇದೇ ರೀತಿಯಲ್ಲಿ ಇಂಗ್ಲಿಷಿನ ಒಡಲಿನಲ್ಲಿ ದೇಶೀಯ ಪರಂಪರೆಗಳನ್ನು ಹುದುಗಿಸಿ ನಡೆಸಿದ ಪ್ರಯೋಗಕ್ಕೆ ಪ್ರತಿಯಾಗಿ ಕವಿ ಈ ಸನ್ನಿವೇಷವನ್ನು ಇಟ್ಟು ಮಾಡಿದ ಈ ಪ್ರಯೋಗ ಭಾಷಾ ಸಂಕರಕ್ಕೆ ತಲೆಬಾಗಿದ ಶಿಕ್ಷಣಪದ್ದತಿಯ ಒಂದು ಉದಾಹರಣೆಯಂತೆ ತೋರುವುದಿಲ್ಲವೇ?
ಈ ಕವಿತೆ ಬ್ರಹ್ಮಜ್ಞಾನ ಹೊಂದಬೇಕಾದರೆ ಗುರು-ಲಘುಗಳ ಸಮ್ಮೇಳವು ಅತ್ಯಗತ್ಯ ಎಂದು ನಂಬಿರುವಂತೆ ತೋರುತ್ತದೆ. ನಮ್ಮ ಅನಿಸಿಕೆಯಂತೆ ಇಲ್ಲಿನ ಗುರು, ಗುರುವಾಗಿ ಮತ್ತು ಲಘು ಶಿಷ್ಯನಾಗಿ ಕಾಣಿಸಿಕೊಳ್ಳುತ್ತಾನೆ. ಈ ಗುರು-ಶಿಷ್ಯರ ನಿರಂತರ ತಪಸ್ಸಿನಲ್ಲಿಯೇ ಈ ಬ್ರಹ್ಮಜ್ಞಾನದ ನಡೆ ಅಥವಾ ಗುರಿಯೇನಾದರೂ ಇರಬಹುದೇ? ಬ್ರಹ್ಮಜ್ಞಾನವನ್ನು ಸಾಧಿಸುವುದು ಕೇವಲ ಗುರುವಿನ ಗುರುತರವಾದ ಜವಾಬ್ದಾರಿಯೋ ಅಥವ ಶಿಷ್ಯನ ಪರಮವಿದ್ಯೆಯ ಆಕಾಂಕ್ಷೆಯೋ ಅಥವ ಇವರಿಬ್ಬರ ಕೊಡು-ಕೊಳ್ಳುವಿಕೆಯ ಪರಿಣಾಮದಿಂದ ಉದ್ಭವಿಸಿದ ಸತ್ಯವೋ? ಇದನ್ನು ಸಾಧಿಸಿದವರು ಗುರು ಮತ್ತು ಶಿಷ್ಯರಲ್ಲಿ ಯಾರು ಮತ್ತು ಹೇಗೆ ಎಂದು ಈ ಕವಿತೆ ಚಿತ್ರಿಸುವುದಾದರೂ ಹೇಗೆ?
ಇಡೀ ಪದ್ಯದಲ್ಲಿ ಹರಡಿಕೊಂಡಿರುವುದು ಲಘುವೇ. ಅಂದರೆ ಶಿಷ್ಯನೇ. 80 ಲಘುಗಳು ಇಲ್ಲಿವೆ. ಆದರೆ ಗುರುವಿರುವುದು 32 ಮಾತ್ರ. ಮಾತ್ರೆಗಳಲ್ಲಿ ಗಣನೆಗೆ ತೆಗೆದುಕೊಂಡರೆ ಶಿಷ್ಯನ ಸ್ಥಾನದಲ್ಲಿ ಏರಿಕೆಯೇನೂ ಇಲ್ಲ. ಆದರೆ ಗುರುವಿನ ಸ್ಥಾನ ದುಪ್ಪಟ್ಟಾಗುತ್ತದೆ. ಅಂದರೆ 80 ಲಘುವಿನ ಮಾತ್ರೆಗಳ ಸಂಖ್ಯೆ 80 ಆದರೆ 32 ಗುರುವಿನ ಮಾತ್ರೆಯ ಬೆಲೆ 64ಕ್ಕೆ ಏರುತ್ತದೆ. ಅಷ್ಟಾದರೂ ಗುರುವಿಗೆ ಇಡೀ ಪದ್ಯದಲ್ಲಿ ಶಿಷ್ಯನಷ್ಟು ಹರಡಿಕೊಳ್ಳುವ ಗುಣವಿಲ್ಲ. ಲಘುವಿನಿಂದ ಆರಂಭವಾಗಿ ಲಘುವಿನಿಂದಲೇ ತುಂಬಿಹೋಗಿ ಲಘುವಿನಿಂದಲೇ ಕೊನೆಯಾಗುವ ಈ ಕವಿತೆಯ ಪ್ರಮುಖ ನಾಯಕ ಶಿಷ್ಯನೇ.
ಈ ಪದ್ಯದ ಕಟ್ಟುವಿಕೆ ಮೇಲಿಂದ ಕೆಳಗಡೆ ಬರುತ್ತದೆಯಾದ್ದರಿಂದ ಇದು ಆರೋಹಣವಾಗುವ ಕವಿತೆಯಲ್ಲ. ಅವರೋಹಣವಾಗುವ ಕವಿತೆ ಎಂದರೆ ಆಳಕ್ಕೆ ಇಳಿಯುವ ಕವಿತೆ. ಒಂದೊಂದೇ ಮೆಟ್ಟಿಲು ಇಳಿಯುತ್ತಾ ಇಳಿಯುತ್ತಾ ಬ್ರಹ್ಮಜ್ಞಾನಕ್ಕೆ `ಏರಬೇಕು’ ಎನ್ನುವ ನಮ್ಮ ಸಾಂಪ್ರದಾಯಿಕ ನಂಬಿಕೆಯನ್ನು ಮುರಿಯುವ ಕವಿತೆಯ ಶಿಲ್ಪವು ಅದಕ್ಕಾಗಿ `ಇಳಿಯಬೇಕು’ ಎನ್ನುವ ನೂತನ ದರ್ಶನವನ್ನು ಒದಗಿಸುತ್ತದೆ. ಬ್ರಹ್ಮಜ್ಞಾನವನ್ನು ಇಷ್ಟೊಂದು ಆಳಕ್ಕೆ ಇಳಿಸುವುದು ಸಾಧ್ಯವಾದದ್ದು ರಾಮಾನುಜನ್ನರಿಗೆ ಇದ್ದ ಜನಪದ ಪ್ರಜ್ಞೆಯಿಂದ ಮಾತ್ರ ಎಂಬುದು ವಿಶೇಷವಾದ ಸಂಗತಿ. ಇದು ಕೇವಲ ಬೆಳಕಾಗುವ ಪ್ರಕ್ರಿಯೆ ಮಾತ್ರವಲ್ಲ. ಬಯಲಾಗುವ ಪ್ರಕ್ರಿಯೆ. ಯಾಕೆಂದರೆ ಬ್ರಹ್ಮಜ್ಞಾನಕ್ಕೆ ಯಾವುದೇ ನಿಶ್ಚಿತವಾದ ನಿಯಮಗಳಿಲ್ಲ. ಪೂರ್ಣದಲ್ಲಿ ಪೂರ್ಣವಾಗಿ ಲೀನವಾದರೆ ಮಾತ್ರ ಪೂರ್ಣತ್ವ ಲಭಿಸುವ ಪರಿಭಾವವದು. ಇಲ್ಲಿ ನುಡಿಗೆ ಎಡೆಯಿಲ್ಲ. ನಾದಕ್ಕೆ ಮಾತ್ರ ಸ್ವಾದವಿದೆ. ನಮ್ಮ ಯಾನ ಮೌನದೆಡೆಗೆ ಸಾಗಿದರೆ ಮಾತ್ರ ಬ್ರಹ್ಮಜ್ಞಾನ ಸಿಗುವುದು.
ಗುರು-ಶಿಷ್ಯರ ಸಾಕ್ಷಾತ್ಕಾರದ ದಾರಿಯಲ್ಲಿ ಅಂತಿಮ ಸತ್ಯವು ಪ್ರಾಪ್ತವಾಯಿತೇ ಎಂಬ ಪ್ರಶ್ನೆ ವಾಚಕರನ್ನು ಬಡಿದೆಬ್ಬಿಸುತ್ತದೆ. ಏಕೆಂದರೆ ಈ ಪ್ರೆಶ್ನೆ ಎದ್ದಿರುವುದನ್ನು ರಾಮಾನುಜನ್ 12ನೆಯ ಸಾಲಿನಲ್ಲಿ ಪ್ರಶ್ನಾರ್ಥಕ ಚಿಹ್ನೆಯೊಂದನ್ನು ಇಡುವುದರ ಮೂಲಕ ಸ್ಫೋಟಗೊಳಿಸಿದ್ದಾರೆ. ಇದು ಇಡೀ ಪ್ರಕರಣವನ್ನು ಅನುಮಾನದಿಂದ ನೋಡುವಂತೆ ಪ್ರೇರೇಪಿಸುತ್ತದೆ. ಸಾಧನೆಯನ್ನು ಪ್ರಶ್ನಾರ್ಥಕವಾಗಿ ಕಂಡಂತಿದೆ. ಈ ಪ್ರಶ್ನೆಯನ್ನು ಕೇಳದೇ ಹೋಗಿದ್ದರೆ ಬ್ರಹ್ಮಜ್ಞಾನವನ್ನು ತಲುಪಲು ಸುಲಭದ ಮಾರ್ಗವಿದೆಯೆಂದು ತೋರಿಸುವಂತೆ ಇರುತ್ತಿತ್ತು. ಹೀಗೆ ಮಾಡದೇ ರಾಮಾನುಜನ್ನರು ಬ್ರಹ್ಮಜ್ಞಾನದ ಸುಸಂಗತಿಯನ್ನು ಸಾಧಿಸಲು ಸಾಧ್ಯವಿರುವ ಎಡೆಗಳಲ್ಲಿ ಈ ಪ್ರೆಶ್ನೆಯನ್ನು ಬಿತ್ತುವ ಮೂಲಕ ಪ್ರಶ್ನಾತೀತ ವಿದ್ಯಾಭ್ಯಾಸ ಕ್ರಮದ ಸೋಲನ್ನು ಮತ್ತು ಈ ವಿದ್ಯಾ ಸಮಾಜದ ಐಬುತನವನ್ನು ಅನಾವರಣ ಗೊಳಿಸಿದೆ.
ಈ ಕವಿತೆಯ ಅತ್ಯಂತ ಸ್ವಾರಸ್ಯವಿರುವುದೇ ಇಲ್ಲಿ. ಈ ಗುರು-ಶಿಷ್ಯರ ಸಾಕ್ಷಾತ್ಕಾರದ ದಾರಿಯಲ್ಲಿ ಅಂತಿಮ ಸತ್ಯವು ಪ್ರಾಪ್ತವಾಯಿತೇ ಎಂಬ ಪ್ರಶ್ನೆ ವಾಚಕರನ್ನು ಬಡಿದೆಬ್ಬಿಸುತ್ತದೆ. ಏಕೆಂದರೆ ಈ ಪ್ರೆಶ್ನೆ ಎದ್ದಿರುವುದನ್ನು ರಾಮಾನುಜನ್ 12ನೆಯ ಸಾಲಿನಲ್ಲಿ ಪ್ರಶ್ನಾರ್ಥಕ ಚಿಹ್ನೆಯೊಂದನ್ನು ಇಡುವುದರ ಮೂಲಕ ಸ್ಫೋಟಗೊಳಿಸಿದ್ದಾರೆ. ಇದು ಇಡೀ ಪ್ರಕರಣವನ್ನು ಅನುಮಾನದಿಂದ ನೋಡುವಂತೆ ಪ್ರೇರೇಪಿಸುತ್ತದೆ. ಸಾಧನೆಯನ್ನು ಪ್ರಶ್ನಾರ್ಥಕವಾಗಿ ಕಂಡಂತಿದೆ. ಈ ಪ್ರಶ್ನೆಯನ್ನು ಕೇಳದೇ ಹೋಗಿದ್ದರೆ ಬ್ರಹ್ಮಜ್ಞಾನವನ್ನು ತಲುಪಲು ಸುಲಭದ ಮಾರ್ಗವಿದೆಯೆಂದು ತೋರಿಸುವಂತೆ ಇರುತ್ತಿತ್ತು. ಹೀಗೆ ಮಾಡದೇ ರಾಮಾನುಜನ್ನರು ಬ್ರಹ್ಮಜ್ಞಾನದ ಸುಸಂಗತಿಯನ್ನು ಸಾಧಿಸಲು ಸಾಧ್ಯವಿರುವ ಎಡೆಗಳಲ್ಲಿ ಈ ಪ್ರೆಶ್ನೆಯನ್ನು ಬಿತ್ತುವ ಮೂಲಕ ಪ್ರಶ್ನಾತೀತ ವಿದ್ಯಾಭ್ಯಾಸ ಕ್ರಮದ ಸೋಲನ್ನು ಮತ್ತು ಈ ವಿದ್ಯಾ ಸಮಾಜದ ಐಬುತನವನ್ನು ಅನಾವರಣ ಗೊಳಿಸಿದೆ.
ಈ ಪ್ರಶ್ನೆ ಒಡಮೂಡಿದ್ದು ಯಾರಿಗೆ? ಖಂಡಿತವಾಗಿಯೂ ಶಿಷ್ಯನಿಗೆ, ಯಾಕೆಂದರೆ ಪ್ರಶ್ನಾರ್ಥಕ ಚಿಹ್ನೆ ಇರುವುದು ಲಘುವಿನ ಮುಂದೆಯೇ ಹೊರತು ಗುರುವಿನ ಮುಂದಲ್ಲ. ಗುರು-ಶಿಷ್ಯರ ಸಂಬಂಧದ ಸಾಧನೆಯಲ್ಲಿ ಅನಿವಾರ್ಯವಾಗಿ ಗುರುವನ್ನು ಮೀರಿಸಿದ ಶಿಷ್ಯ ಹೀಗೆ ಗುರುವನ್ನು ಮೀರಿಸಿದ್ದು ಸರಿಯೇ ಎಂದು ಪ್ರಶ್ನೆ ಹಾಕಿಕೊಂಡಿರಬಹುದು. ಇದು ಶಿಷ್ಯ ಕೇಳಿಕೊಂಡ ಪ್ರಶ್ನೆಯೆಂದು ಬಗೆಯುವುದು ಒಂದು ಕ್ರಮವಾದರೆ ಗುರುವಿನ ಹಿಂದೆ ಈ ಪ್ರಶ್ನೆಯಿರುವುದರಿಂದ ಗುರುವಿಗೆ ಈ ಹಿಂದೆ ನನಗ್ಯಾಕೆ ಈ ಬ್ರಹ್ಮಜ್ಞಾನ ಪ್ರಾಪ್ತವಾಗಲಿಲ್ಲ ಎಂಬ ಪ್ರಶ್ನೆ ಮೂಡಿದ್ದಿರಬಹುದು ಎಂಬ ಅನುಮಾನವೂ ಬರುವಂತಿದೆ. ಈ ಪ್ರಶ್ನೆ ಆತ್ಮಗತದಂತೆ ಸಣ್ಣಗೆ ಕೇಳಿಕೊಂಡಂತೆಯೂ ಅದಕ್ಕೆ ಉತ್ತರ ಹುಡುಕುವುದು ಪ್ರತಿಯೊಬ್ಬ ಓದುಗರ ಆದ್ಯಕರ್ತವ್ಯವೆಂದೂ ಈ ಪ್ರಬಂಧ ಕಲ್ಪಿಸಿಕೊಳ್ಳುತ್ತದೆ.
ಈ ಹಿಂದಿನಂತೆಯೇ ಬ್ರಹ್ಮಜ್ಞಾನದ ಸಾಕ್ಷಾತ್ಕಾರಕ್ಕೆ ಈಗ ಗುರು-ಶಿಷ್ಯರಿಬ್ಬರೂ ನಾಮುಂದು-ತಾಮುಂದು ಎಂದು ಒಂದೊಂದೇ ಮಾತ್ರೆಯ ಮೂಲಕ ಚಲಿಸುತ್ತಿರುವಂತೆ ತೋರುತ್ತಿಲ್ಲವೇ? ಇದೇನು ಆರೋಗ್ಯಕರ ಸ್ಪರ್ಧೆಯೇ ? ಇಲ್ಲಿಂದ ಸಾಗಿದ ಗುರು-ಶಿಷ್ಯರಲ್ಲಿ ಬಹುಶಃ ಶಿಷ್ಯನೇ ಈ ಬ್ರಹ್ಮಜ್ಞಾನವನ್ನು ಸಂಪಾದಿಸಿರಬಹುದೇ? ಹದಿನಾಲ್ಕನೆಯ ಅಥವಾ ಕೊನೆಯ ಮೆಟ್ಟಿಲಿನ ಮೇಲೆ ನಿಂತು ತನ್ನ ಅಂತಿಮ ಪಾದವನ್ನು ಇಡುವ ಸಂದರ್ಭದಲ್ಲಿಯೂ ಶಿಷ್ಯನಿಗೆ ಮತ್ತೆ ಈ ಪ್ರಶ್ನೆ ಮೂಡಿತೇ? ಅಥವಾ ಬ್ರಹ್ಮಜ್ಞಾನವನ್ನು ಹೀಗೆ ಪ್ರಶ್ನೆಯ ಮೂಲಕವೂ ಆರ್ಜಿಸಿಕೊಳ್ಳಲು ಸಾಧ್ಯವೇ ಅಥವಾ ಪ್ರಶ್ನೆಯ ಮೂಲಕವೂ ಈ ಪರಮಸ್ಥಿತಿಗೆ ನಮ್ಮನ್ನು ನಾವು ಅರ್ಪಿಸಿಕೊಳ್ಳಬಹುದೇ ? ಅಥವಾ ಬ್ರಹ್ಮಜ್ಞಾನದ ಇಡೀ ಪ್ರಕ್ರಿಯೆಯೇ ಪ್ರಶ್ನಾರ್ಥಕವೇ? ಇದು ಯೋಚಿಸಲೇಬೇಕಾದ ಕ್ರಮ. ಹೀಗೆ ಗುರು-ಲಘುಗಳ ಸಂಯೋಜನ ಮಾತ್ರದಿಂದಲೇ ಹುಟ್ಟಿಕೊಳ್ಳುವ ಸತ್ಯ ಸಾದೃಶ್ಯವೇ ಅಥವಾ ಅದೃಶ್ಯವೇ? ಎಂಬ ಪ್ರಶ್ನೆಯನ್ನು ಈ ಕವಿತೆ ಅತ್ಯಂತ ಸಾರ್ಥಕವಾಗಿ ಓದುಗರಲ್ಲಿ ಒಡಮೂಡುವಂತೆ ಕವಿತೆಯ ಕಟ್ಟುವಿಕೆಯಿದೆ.
ಇದನ್ನೆ ಅವರು ಈ ಹಿಂದೆ ಇನ್ನೊಂದು ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದರು. ಬಿಂದುವಿನಲ್ಲಿ ಸಿಂಧುವನ್ನು ಹುಡುಕುವುದು ಅವರ ಕಾವ್ಯದ ಪ್ರಧಾನ ಲಕ್ಷಣ. ಚಿಕ್ಕದನ್ನು ಹೇಳುವಾಗಲೂ ಅತ್ಯಂತ ದೊಡ್ಡ ಮನಸ್ಥಿತಿಯನ್ನು ಹೊಂದಿದ್ದರೆ ಮಾತ್ರ ನಮಗೆ ಬೃಹತ್ತು ಲಭಿಸುತ್ತದೆ. ಯಾವುದೇ ಪರಮಪದವಿಯನ್ನು ಹುಡುಕಬೇಕಾದರೆ ಹೊಂದಬೇಕಾದರೆ ಸಾವಕಾಶ ಬೇಕು. ಸ+ಅವಕಾಶವೂ ಬೇಕು ಹಾಗೂ ಸಾವಕಾಶವೂ ಬೇಕು. ಯಾವುದನ್ನು ಕೂಡ ಅವಸರದಿಂದ ಪಡೆಯಲು ಸಾಧ್ಯವಿಲ್ಲ. ಅದು ಇನ್ನೇನೋ ಆಗಿ ಸಿಗುತ್ತದೆ. ಅದು ಪಥವೊಂಧರ ನಿರ್ಮಾಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಇನ್ನೊಂದರಲ್ಲಿ ತನ್ನನ್ನು ತಾನು ಹುದುಗಿಸಿಕೊಳ್ಳಲು ಹಾತೊರೆಯುತ್ತದೆ ಅದಕ್ಕೆ ಅವರು ಹೀಗೆ ಹೇಳಿದ್ದರು ;-
ಅವಸರಕ್ಕೆ ಬಯಲು
ಹುಡುಕಿದರೆ ಇನ್ನು ಸಿಕ್ಕುವುದು
ಬಯಲಲ್ಲಿ ಆಲಯ
ಎಂಬ ಮಾತನ್ನು ನೆನಪಿಸಿಕೊಂಡು ಈ ಪ್ರಬಂಧವನ್ನು ಮುಗಿಸುತ್ತೇನೆ.
ರಾಮಾನುಜನ್ನರಿಗೆ ಈ ವಿಶ್ಲೇಷಣೆ ಒಗ್ಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಕವಿತೆಯೊಂದು ನನ್ನಲ್ಲಿ ಇಷ್ಟೆಲ್ಲ ಕೆರಳಿಸಿದ್ದು ಮಾತ್ರ ನೂರಕ್ಕೆ ನೂರು ಸತ್ಯ. ನಾನಿದನ್ನು ಬರೆಯಲೋ ಬೇಡವೋ ಎಂದು ಯೋಚಿಸುವಾಗಲೂ ನನಗೆ ದಾರಿ ತೋರಿದ್ದು ಸ್ವತಃ ರಾಮಾನುಜನ್ ಅವರೇ. ಅವರ `ಪದ್ಯದ ಮಾತು ಬೇರೆ’ ಪದ್ಯದ ಈ ಸಾಲುಗಳನ್ನು ಒಮ್ಮೆ ನೋಡಿ ಇದು ಅವರ ಇದೇ ಕುಂಟೋಬಿಲ್ಲೆ ಕವನ ಸಂಕಲನದಲ್ಲೇ ಇದೆ.
ಪದ್ಯದ ಮಾತು ಬೇರೆ
ಅದು ಕುದುರಿ ಬಿಟ್ಟರಂತೂ
ಅಪಾರ್ಥ ಮಾಡಿಕೊಂಡರೆ
ಅದೂ ಒಂದು ತರಹದ ಅರ್ಥವೇ ಅನ್ನಿಸಿಬಿಡುತ್ತೆ.
ಪದ್ಯದಲ್ಲಿ ಅನರ್ಥ ವ್ಯರ್ಥ ಸಾರ್ಥ ಅನಿಸಿದರೆ
ಅವೆಲ್ಲ ನಿರರ್ಥಕದ ಕಲ್ಲುಮಣ್ಣಿನ ಗಣಿ
ಯಲ್ಲಿ ಸಿಕ್ಕಿದ ಅರ್ಥ
ಸೋಸಿಕೊಳ್ಳುವ ಬೇರೆ ಬೇರೆ ತಂತ್ರ
ಎಲ್ಲವೂ ಸಮರ್ಥ ಸುಳ್ಳು ಕೂಡ ನಿಜ
ಪದವೇ ಪದಾರ್ಥ
ಅದರ ಮಣ್ಣಿನಲ್ಲಿ ಚಿನ್ನದ ಕಣ
ಕಲ್ಲಿನಲ್ಲಿ ಬೆಳ್ಳಿಯ ನರ.
`ಬ್ರಹ್ಮಜ್ಞಾನ ಒಂದು ನಿಶ್ಶಬ್ದ ಸಾನೆಟ್ಟು’ ಪದ್ಯವೂ ಕೂಡ ನನ್ನಲ್ಲಿ ಇಳಿದೂ ಇಳಿದೂ ನನ್ನ ಕಲ್ಲುಮಣ್ಣಿನ ಗಣಿಯಲ್ಲಿ ಅನೇಕ ಕಾಲ ಸಿಕ್ಕಿಹಾಕಿಕೊಂಡು ಒದ್ದಾಡುತ್ತಲೇ ವಿವಿಧ ತಂತ್ರಗಳಲ್ಲಿ ತನ್ನನ್ನು ತಾನು ಸೋಸಿಕೊಂಡು ಈಗ ಹೀಗೆ ಬಿಡಿಸಿಕೊಂಡು ನಿಮ್ಮ ಮುಂದೆ ನಿಂತಿದೆ. ಇದೇ ಅರ್ಥ ಎಂಬ ಹುಂಬುತನ ನನ್ನಲ್ಲಿಲ್ಲ. ಆದರೇ ರಾಮಾನುಜನ್ನರೇ ಹೇಳಿದ ಹಾಗೆ ‘ಪದವೇ ಪದಾರ್ಥ’. ಪದ ಬೇರೆ ಅಲ್ಲ ಹಾಗೂ ಪದದ ಅರ್ಥ ಅಥರ್ಾತ್ ಪದಾರ್ಥ ಬೇರೆ ಅಲ್ಲ. ಅದು ಅನ್ಯೋನ್ಯ ಸಂಬಂದವನ್ನು ಉಳ್ಳ ಸಮರ್ಥ ಎಂದೇ ನನ್ನ ತಿಳುವಳಿಕೆ.
ಪದ್ಯದ ಬಗ್ಗೆ ಕಡೆಯಲ್ಲಿ ಒಂದು ಮಾತನ್ನು ಹೇಳಲೇಬೇಕು. ಸಾಮಾನ್ಯವಾಗಿ ಯಾವ ಕವಿತೆಯನ್ನೂ ಬರೆದ ಕಾಲದ ಬಗ್ಗೆ ನಮೂದಿಸದ ರಾಮಾನುಜನ್ ಅವರು ಕಡೆಯಲ್ಲಿ ಈ ಕವಿತೆ ಬರೆದ ದಿನಾಂಕವನ್ನು ಸಹಿತ ಪದ್ಯದಂತೆಯೇ ಅಮೂರ್ತವಾಗಿ ಕಟ್ಟಿಕೊಟ್ಟಿದ್ದಾರೆ ಅದು UU – – U –
ಇದರಲ್ಲಿರುವ – – ಅನ್ನು ಸಾವಿರದ ಒಂಬೈನೂರು ಎಂದು ತಿಳಿಯುವುದರಿಂದ ಇಲ್ಲಿನ ಗುರುಗಳನ್ನು ಬೆಸವೆಂತಲೂ ಲಘುವನ್ನು ಸಮವೆಂತಲೂ ಭಾವಿಸಬಹುದು. ಕುಂಟೋಬಿಲ್ಲೆ ಸಂಕಲನವನ್ನು ರಾಮಾನುಜನ್ ಹೊರತಂದಿದ್ದು ಜುಲೈ 1990. ಆದುದರಿಂದ ಬಹುಶಃ ಈ ಪದ್ಯ 1989ರಲ್ಲಿ ಅಥವಾ 80ರ ದಶಕದಲ್ಲಿ ಬರೆದಿರಬಹುದು ಎಂದೆನಿಸುತ್ತದೆ. ಯಾಕೆಂದರೆ 1,9,9 ಬೆಸಸಂಖ್ಯೆ 8 ಸಮಸಂಖ್ಯೆಯಲ್ಲವೇ (ಇದು ತಪ್ಪಾಗಿದ್ದರೂ ನಷ್ಟವಿಲ್ಲ. ಆದರೆ ಕ್ರಮ ಮಾತ್ರ ಸರಿ ಎಂದು ನನ್ನ ನಂಬಿಕೆ.)
ರಾಮಾನುಜನ್ ರೇಖಾ ಚಿತ್ರ : ಮಹಂತೇಶ್ ದೊಡ್ಡಮನಿ
ಕನ್ನಡ ಸಾಹಿತ್ಯ, ಹಸ್ತಪ್ರತಿ, ಚರಿತ್ರೆ, ಕಲೆ, ವಾಸ್ತುಶಿಲ್ಪಗಳಿಗೆ ಸಂಬಂಧಿಸಿದಂತೆ 50 ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳನನ್ನು ಬರೆದಿದ್ದಾರೆ . ಇತಿಹಾಸ ದರ್ಪಣ ತ್ರೈಮಾಸಿಕದ ಸಹ ಸಂಪಾದಕರು .
UU – – U – is not date, but his name:
ಎಕೆರಾಮಾನುಜನ್. moreover, most hypothesis here are baseless guesses. Absolutely baseless.
if it is base less then what is your interpretation? ಅಪಾರ್ಥವೂ ಕೂಡ ಒಂದು ಅರ್ಥವೇ ಅಲ್ಲವೇ?
ಈ ಕವಿತೆಯ ಜಿಜ್ಞಾಸೆ ನನಗೇನೋ ಅದ್ಭುತ ಎನಿಸಿತು.