ನನಗಾಗ ಸುಮಾರು ಆರು ವರ್ಷ ಇರಬೇಕು. ಆಜ್ಜಿ ಕತೆ ಹೇಳ್ತಾ ಇದ್ರು.ಅವರು ಯಾವಾಗ್ಲೂ ದೇವರ ಕತೆಗಳನ್ನೇ ಹೇಳ್ತಾ ಇದ್ದಿದ್ದು. ” ಸತ್ಯ ಹರಿಶ್ಚಂದ್ರ, ಸಂತ ಸಕ್ಕು ಬಾಯಿ…’ ಹೀಗೆ. ಎಲ್ಲಾ ಕತೆಯಲ್ಲೂ ಅಪರಿಮಿತ ನೋವು, ದುಃಖ ಮತ್ತೆ ಕಣ್ಣಿರು ತುಂಬಿರ್ತಾ ಇತ್ತು. ಒಳ್ಳೆ ಜನ ಇನ್ನೇನು ಪ್ರಾಣ ಬಿಡಬೇಕು ಅನ್ನೋವಾಗ ದೇವರು ಬಂದು ವರಕೊಡ್ತಿದ್ದ.
ನನ್ನಲ್ಲಿ ನೂರಾರು ಪ್ರಶ್ನೆ ಹುಟ್ಟಿಕೊಳ್ತಾ ಇತ್ತು. ಯಾಕೆ ದೇವರು ಮುಂಚೆ ಬರಬಾರ್ದು? ಯಾಕೆ ದೇವರು ಕುಚೇಲನಿಗೆ ಮುಂಚೆನೇ ಊಟ ಕೊಡ್ಲಿಲ್ಲ, ಹೀಗೆ ನೂರಾರು ಪ್ರಶ್ನೆಗಳು. ಒಂದಿನ ಅವರು ’ ದ್ರೌಪದಿ ವಸ್ತ್ರಾಫಹರಣ’ದ ಕತೆ ಹೇಳೋವಾಗ ದುಶ್ಶಾಸನ ಸೀರೆ ಎಳೆಯೋವಾಗ ನಾನು ’ ಪೆಟ್ಟಿಕೋಟ್ ಏನಾಯ್ತು” ಅಂತ ಕೇಳಿಬಿಟ್ಟೆ.
ಮುಗೀತು ಕತೆ.ಬಾಯಿಮೇಲೆ ಏಟು ಬಿತ್ತು. ಮನೆಯವರೆಲ್ಲಾ ತಲೆಹರಟೆ ಅಂತ ಬೈದು ದೇವರ ಕತೆಯಲ್ಲಿ ಪ್ರಶ್ನೆ ಕೇಳ್ಬಾರ್ದು ಅಂತ ಹೆದರಿಸಿದ್ರು. ದೇವರನ್ನ ಪ್ರಶ್ನೆ ಮಾಡಿದ್ರೆ ಪಾಪ ಸುತ್ತಿಕೊಳ್ಳತ್ತೆ ತಪ್ಪಾಯ್ತು ಅನ್ನು, ಅಂದ್ರು. ದೊಡ್ಡವರ ಅಸಮಧಾನಕ್ಕೆ ಹೆದರಿದ್ದರಿಂದ ಪ್ರಶ್ನೆ ಕೇಳುವುದನ್ನು ಕಡಿಮೆ ಮಾಡಿದರೂ ಪ್ರಶ್ನೆಗಳು ಮನಸ್ಸಿನಲ್ಲಿ ತಲೆಯೆತ್ತುವುದೇನೂ ನಿಲ್ಲಲಿಲ್ಲ.
ಬಾಲ್ಯ ಮುಗಿದು ಹದಿವಯಸ್ಸಿಗೆ ಬಂದಾಗ ಪ್ರಶ್ನಿಸುವುದು ಅದರಲ್ಲೂ ಆಸ್ತಿಕತೆಗೆ ಸಂಬಂಧಪಟ್ಟ ಯಾವುದೇ ವಿಷಯದ ಬಗ್ಗೆ ಪ್ರಶ್ನಿಸುವುದು ಅಪರಾಧದಂತೆ ಪರಿಗಣಿಸ್ಪಡುತ್ತದೆ ಎಂದು ಮನವರಿಕೆಯಾಯಿತು.
ಬೆಳೀತಾ ಬೆಳೀತಾ ನಿಧಾನವಾಗಿ ಕಲಿತುಕೊಂಡೆ. ದೇವರ ಬಗ್ಗೆ ಬರುವ ಎಲ್ಲಾ ಸಂಶಯಗಳನ್ನೂ ಮನಸ್ಸಿನ ಒಳಗೆ ಇಟ್ಟು ಆಶಾಢಭೂತಿಯಂತೆ ಪೂಜೆ, ಭಜನೆ,ಪ್ರಸಾದ, ಆರತಿಯಲ್ಲಿ ಭಾಗವಹಿಸುವುದನ್ನು ಕಲಿತೆ.
ಆದರೆ ಅಷ್ಟಕ್ಕೆ ಮನಸ್ಸಿಗೆ ತೃಪ್ತಿ ಆಗಿರಲಿಲ್ಲ. ಸಿಕ್ಕಸಿಕ್ಕಲ್ಲೆಲ್ಲಾ ಆ ಪ್ರಶ್ನೆಗಳಿಗೆ ಉತ್ತರ ಹುಡುಕತೊಡಗಿದೆ. ಬರಹಗಳಲ್ಲಿ, ಕಾವ್ಯಗಳಲ್ಲಿ, ಉಪನ್ಯಾಸಗಳಲ್ಲಿ, ಜೊತೆಯವರೊಂದಿಗೆ ಬಿಸಿ ಬಿಸಿ ಚರ್ಚೆಗಳಲ್ಲಿ.ಎಲ್ಲೂ ಸಮಾಧಾನಕರ ಉತ್ತರ ಸಿಗಲಿಲ್ಲ. ಹೇಗೆ ಸಿಕ್ಕುತ್ತದೆ? ಪ್ರಶ್ನೆ ಕೇಳುವುದೇ ತಪ್ಪು ಎಂಬ ಭಾವನೆ ಇರುವಾಗ? ಸಿಕ್ಕಿದ್ದೊಂದೇ ; ಭವಿಷ್ಯದ ಭಯವಿಲ್ಲದಿದ್ದರೆ ದೇವರ ಅಗತ್ಯವಿಲ್ಲ. ಭಯವೇ ದೇವರ ಅಸ್ಥಿತ್ವದ ನಂಬಿಕೆಯ ಬುನಾದಿ.
ಇಲ್ಲಾ ಒಂಟಿತನದ ಭಯ . ನಂಬುವುದಿಲ್ಲವಾದರೆ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಒಂಟಿಯಾಗಲು ಸಿದ್ಧರಿರಬೇಕು. ಸಮುದಾಯದಿಂದ ನಿಧಾನವಾಗಿ ಹೊರತಳ್ಳಲ್ಪಡಬೇಕಾಗುತ್ತದೆ. ಅದನ್ನು ತಪ್ಪಿಸಿಕೊಳ್ಳಲು ಜನ ದೇವರಲ್ಲಿ ನಂಬಿಕೆ ಇಡುತ್ತಾರೆ.
ನನಗೆ ಎರಡರ ಭಯವೂ ಇರಲಿಲ್ಲ. ಭಯಕ್ಕಿಂತ ತೀವ್ರವಾದ ತಡೆಯಲಾಗದ ಕುತೂಹಲವಿತ್ತು. ದೇವರ ಅಸ್ತಿತ್ವದ ಮೇಲಿನ ಸಂಶಯ ಆ ಕುತೂಹಲವನ್ನು ಎಬ್ಬಿ ಹೊರತೆಗೆದು ಪೋಷಿಸುತ್ತಿತ್ತು.
ಮನೆಯಲ್ಲಿ ಯಾರೂ ಇಲ್ಲದಾಗ ಹೆಣ್ಣುಮಕ್ಕಳು ಮುಟ್ಟಬಾರದ ಸಾಲಿಗ್ರಾಮವನ್ನು ದೇವರಪೆಟ್ಟಿಗೆಯಿಂದ ತೆಗೆದು ಮುಟ್ಟಿ ನೋಡಿದ್ದೇನೆ. ಮುಟ್ಟಾದಾಗ ತುಲಸಿಗಿಡದಿಂದ ಎಲೆಕಿತ್ತು ತಿಂದು ನೋಡಿದ್ದೇನೆ. ದೇವರ ಬಗೆಗಿನ ನನ್ನ ಕಲ್ಪನೆ ನನ್ನನ್ನು ಹೆಸರಿಸಿದ್ದಂತೆ ಹೆದರಿಸಿದ್ದ ಹಾಗೆ ಬೆಂಕಿ ಭುಗಿಲ್ ಎಂದು ನನ್ನನೇನು ಸುಟ್ಟು ಹಾಕಿಬಿಡಲಿಲ್ಲ.
ಇನ್ನೂ ಬೆಳೆದು ಪದವಿಗಳನ್ನು ಗಳಿಸಿ ಒಂದು ವಿಷಯವನ್ನು ತಾರ್ಕಿಕವಾಗಿ ಯೋಚಿಸಿ ಅರಿತುಕೊಳ್ಳುವ ತರಬೇತಿ ಪಡೆದ ಮೇಲೆ ನನಗಂತೂ ಸರ್ವದುಃಖ ಪರಿಹಾರನೆಂಬ ಜಗನ್ನಾಯಕನ ಅಸ್ಥಿತ್ವ ಯಾವ ಕೋನದಿಂದ ನೋಡಿದರೂ ಅಸಂಬದ್ಧವಾಗಿಯೇ ಕಾಣುತ್ತದೆ.
ನಾನು ಓದಿದ ಪುಸ್ತಕಗಳಲ್ಲಿ ನನಗೆ ದೇವರ ಬಗ್ಗೆ ಮೊದಲು ದೊರೆತ ಅತ್ಯಂತ ಸರಳ ಮನಮುಟ್ಟುವ ನಿರೂಪಣೆ ಸಾಮರ್ಸೆಟ್ ಮಾಮ್‍ನ ಸಣ್ಣ ಕತೆ ’ ದ ಜಡ್ಜ್‍ಮೆಂಟ್ ಸೀಟ್’ನಲ್ಲಿತ್ತು. ಅದನ್ನು ಓದಿದಾಗ ನನಗೆ ನನ್ನ ಸಂಶಯಗಳಿಗೆ ಲೇಖಕರು ಮಾರ್ದನಿ ಕೊಡುತ್ತಿದ್ದಾರೆಂದೆನ್ನಿಸಿತು.ಆಗ ನನಗೆ ನನ್ನ ಮನಸ್ಸಿನಲ್ಲಿರುವ ನನ್ನ ದೇವರ ಚಿತ್ರ ಸ್ಪಷ್ಟವೆನಿಸತೊಡಗಿತು.
” ಸರ್ವಶಕ್ತನೂ ಪೂರ್ಣಕರುಣಾಮಯಿಯೂ ಒಮ್ಮೆಲೇ ಎರಡೂ ಆಗಿರುವ ದೇವರಿರಲು ಸಾಧ್ಯವೇಇಲ್ಲ. ಯಾಕಂದರೆ ಜಗತ್ತಿನಲ್ಲಿ ಯಾತನೆಯಿದೆ”
ಹುಟ್ಟಿದ ಮಗುವಿನಿಂದ ಹಿಡಿದು ಸಾಯಲಿರುವ ಮುಪ್ಪಿನ ಮುದುಕರಿಗೂ ಯಾತನೆ ಕಾಡಬಲ್ಲದು. ಎಲ್ಲಿದ್ದಾನೆ ಕರುಣಾಮಯಿ? ಈ ಪ್ರಶ್ನೆಗೆ ಸಾವಿರಾರು ಉತ್ತರಗಳನ್ನು ಕೊಡುತ್ತಾರೆ. ಹಿಂದಿನ ಮುಂದಿನ ಜನ್ಮಗಳು , ಪಾಪ ಪುಣ್ಯಗಳನ್ನು ಕೂಡಿ ಕಳೆದು ಬರುವ ಮೊತ್ತಾ…ಹೀಗೆ ಬಹಳಷ್ಟು ಪಲಾಯನಕಾರೀ ಉತ್ತರಗಳು. ಅದನ್ನು ವಿವರಿಸಲು ಕಠಿಣ ಗ್ರಂಥಗಳು, ಅವುಗಳ ಟಿಪ್ಪಣಿಗಳು.
ಸರಳವಾಗಿ ಒಂದೇ ಪ್ರಶ್ನೆ. ಜಗತ್ತು ಶುರುವಾದಾಗಲೇ ಯಾರಿಗೂ ಕೆಟ್ಟ ಬುದ್ಧಿ ಇರದಂತೆ ಸರ್ವಶಕ್ತ ಪೂರ್ಣಕರುಣಾಮಯಿಯಾದ[ರೆ] ಭಗವಂತ ಯಾಕೆ ಸೃಶ್ಟಿಸಲಿಲ್ಲ? ನನ್ನ ಮಗು ಕೆಟ್ಟ ಕೆಲಸ ಮಾಡುತ್ತಿದ್ದರೆ ನಾನು ಅದು ಕೆಟ್ಟ ಕೆಲಸ ಮಾಡಿದ ಮೇಲೆ ಶಿಕ್ಷಿಸಲು ಬಯಸುತ್ತೀನೋ ಅಥವಾ ನಾನು ಸರ್ವಶಕ್ತಳಾದಲ್ಲಿ ಮಗುವಿಗೆ ಕೆಟ್ಟ ಕೆಲಸ ಮಾಡುವ ಬುದ್ಧಿಯೇ ತೋರದಂತೆ ನೋಡಿಕೊಳ್ಳುತ್ತಿದ್ದೆನೋ?
ನನಗಿಂತ ಆ ದೇವರ ಹೃದಯ ಕೇಡೆ? ಅವನು ನನಗಿಂತ ಕರುಣಾಹೀನನೇ?
ಆದರೆ ನನ್ನ ಸುತ್ತಮುತ್ತ ಸಾವಿರಾರು ದೇವಸ್ಥಾನಗಳಿವೆ. ಕೋಟ್ಯಾಂತರ ಜನ ತೀರ್ಥಯಾತ್ರೆಮಾಡಿ ದರ್ಶನಕ್ಕಾಗಿ ಅಲೆದಾಡುತ್ತಾರೆ. ಪೂಜೆಪುನಸ್ಕಾರಗಳಲ್ಲಿ, ಹಬ್ಬಹರಿದಿನಗಳಲ್ಲಿ, ಶಿಲ್ಪಶಾಸನಗಳಲ್ಲಿ, ಸಂಗೀತಸಾಹಿತ್ಯದಲ್ಲಿ ದೇವರು ಮೈದೋರಿ ಕಣ್ಣುಮಿಟುಕಿಸಿ ನಗುತ್ತಾನೆ. ಅವನನ್ನು ನೀನಿಲ್ಲ ಎನ್ನುವುದು ಅಷ್ಟು ಸುಲಭವಲ್ಲ.
ನೀನಿರಬೇಕಿಲ್ಲ ಎನ್ನಬಹುದು. ನೀನಿದ್ದು ಸಾಧಿಸಿರುವುದೇನು ಎನ್ನಬಹುದು.
ಅವನಿಲ್ಲ ಎಂದು ವಾದಿಸಿದ ಬಿಸಿರಕ್ತ ವಯಸ್ಸಾದಂತೆ ಸೋತು ನಿನ್ನ ಅಗತ್ಯ ನನಗಿಲ್ಲ, ಇಲ್ಲವೇ ಇಲ್ಲ ಆದರೆ ನೀನು ಮತ್ತೆಲ್ಲರಿಗೂ ಬೇಕಾಗಿರುವುದರಿಂದ ಅವರು ನಿನ್ನನ್ನು ಉಳಿಸಿ ಬೆಳಸುತ್ತಿದ್ದಾರೆ, ಎನ್ನಬೇಕಾಗುತ್ತಿದೆ.
ಈಗ ಸಧ್ಯಕ್ಕೆ ದೇವರು ಮಚ್ಚು ಕತ್ತಿಗಳಲ್ಲಿ ಬಾಂಬು ವಿಸ್ಫೋಟಗಳಲ್ಲಿ ಹಿಂಸೆ ರಕ್ತಪಾತಗಳಲ್ಲಿ ಭ್ರಷ್ಟಾಚಾರದ ಹಣದಹೊಳೆಯಲ್ಲಿ ತೇಲಾಡುತ್ತಿದ್ದಾನೆ. ಮೈಮೇಲೆ ಧರಿಸಿರುವ ಚಿನ್ನ ವಜ್ರವೈಢೂರ್ಯಾದಿಗಳು ಯಾವ ಹೇಸಿಗೆಯ ಕೆಲಸದಿಂದ ಗಳಿಸಿದ ಜನರ ಕೊಡುಗೆ ಎಂದು ಕೇಳದೆ ಬಾಯಿ ಮುಚ್ಚಿ ಧರಿಸುತ್ತಾನೆ. ಮೆರೆಸುತ್ತಾನೆ. ಅವನ ಹೆಸರಿನಲ್ಲಿ ರಕ್ತದೋಕುಳಿಯಾಗುತ್ತಿದೆ; ಬಡಬಗ್ಗರ ಅಬಲರ ಅತ್ಯಾಚಾರವಾಗುತ್ತಿದೆ.
ಅವನ ತಲೆಹಿಡುಕರು ಕಾವಿ ತೊಟ್ಟು ಅದೆಲ್ಲಾ ಅವನ ಲೀಲಾವಿನೋದ ಎನ್ನುತ್ತಿದ್ದಾರೆ.
ಇದು ಲೀಲೆಯಾದರೆ ಇನ್ನು ಪ್ರಳಯ ಯಾವುದು?
ಅಂಥ ದೇವರು ನನಗೆ ಬೇಡವೇ ಬೇಡ. ಮತ್ತೆಲ್ಲರಿಗೂ ಏಕೆ ಬೇಕು?
ದೇವರು ಎಂಬ ನಾಮಪದದೊಟ್ಟಿಗೆ ಈ ಸ್ವಾಮ್ಯಸೂಚಕ ಸರ್ವನಾಮ ’ನನ್ನ’ ಸೇರಿಸಿರುವುದೇ ಅವನ ಅಸ್ತಿತ್ವದ ಬಗ್ಗೆ ಸಂಶಯಕ್ಕೆ ಬುನಾದಿ. ಸರ್ವಾಂತರ್ಯಾಮಿ ಸರ್ವಜನಹಿತರಕ್ಷಕನಾದರೆ ನನ್ನವ ಹೇಗಾಗುತ್ತಾನೆ? ’ನನ್ನ’ ಇದ್ದ ಮೇಲೆ ’ನಿನ್ನ’ ಇರಬೇಕಾಗುತ್ತದೆ. ಅಲ್ಲವೇ? ಮಾತ್ರ ಭಾಗಶಃ ಜಗತ್ತಿಗೆ ಒಡೆಯನಾದರೆ ಅದಕ್ಕೆ ದೇವರೇ ಯಾಕಾಗಬೇಕು? ಅಮೆರಿಕದ ಪ್ರಧಾನಿಯಾಗಬಹುದು. ಅಂಬಾನಿಯಾಗಬಹುದು. ನನ್ನ ದೇವರು ನಿನಗೆ ಒಡೆಯನೆಂದರೆ ನೀವು ತಲೆ ಒಡೆಯಲು ಮುಂದಾಗುತ್ತೀರಿ, ನಿಮ್ಮ ದೇವರು ನನ್ನ ಸಲಹುತ್ತಾನೆಂದರೆ ನಾವು ತ್ರಿಶೂಲ ಝಳಪಿಸುತ್ತೇವೆ.
ಇದು ತರಲೆಯಲ್ಲ. ತರ್ಕವಲ್ಲ. ನೋವು. ಸತ್ಯ. ಸತ್ಯ ಆದುದರಿಂದ ನೋವು. ಮಾನವನ ಕ್ರೂರತೆಯನ್ನು ಕೊಂಚಮಟ್ಟಿಗೆ ಹಿಡಿದಿಟ್ಟುರಿವುದೇ ದೈವನಂಬಿಕೆ ಎನ್ನುತ್ತಾರೆ. ಹಿಡಿದಿಟ್ಟ ಕ್ರೌರ್ಯವೇ ಇಷ್ಟರಮಟ್ಟಿಗೆ ಇದ್ದರೆ ಆ ನಂಬಿಕೆಯನ್ನು ಅಳಿಸಿಹಾಕಿ ಪರೀಕ್ಷಿಸುವ ಎದೆ ಯಾರಿಗಿದೆ?
ನನಗೆ ಬೇಕಿಲ್ಲದ ದೇವರು ಗೆದ್ದು ನನ್ನನ್ನು ಅಪಹಾಸ್ಯಮಾಡುವಂತಿದೆ. ಹೊಟ್ಟೆಗಿಲ್ಲದವರು ಅವರ ಮಕ್ಕಳಿಗಿಲ್ಲದಿದ್ದರೂ ಅವನಿಗೆ ಕೊಡುವ ಹರಕೆ ದೇಣಿಗೆಗಳಿಂದ ಮತ್ತೂ ಸಿರಿವಂತನಾಗಿ, ಇತರ ಸಿರಿವಂತರಿಗೆ ಬೇಗ ದರ್ಶನ ಕೊಡುತ್ತಾ ಮೆರೆದಾಡುತ್ತಿದ್ದಾನೆ. ದೇವರು ಯಾರವನಾದರೇನು ಹಣಕ್ಕೆ ಕುಣಿಯುವುದು ಸುಳ್ಳಲ್ಲ.
ಆ ದೇವರಂಥಾ ದೇವರು ನನ್ನವನಲ್ಲವೇ ಅಲ್ಲ.
ಫ಼್ರೆಂಚ್ ಭಾಷೆಯ ಉಪಾದ್ಯಾಯಿನಿ. ಬರೆಯುವುದು, ಭಾಷಾಂತರ ಮಾಡುವುದು ಇವು ನನ್ನ ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .