ಕಿ. ರಂ. ನಾಗರಾಜ ಕೊನೆಯ ಉಪನ್ಯಾಸ’ – ‘ಜೋಗಿ’ ಕವಿತೆಯ ಗ್ರಹಿಕೆಯ ವಿಭಿನ್ನ ನೆಲೆಗಳು


ಕಿ. ರಂ. ಬರೆದಿದ್ದರೆ ಹಲವು ಸಂಪುಟಗಳೇ ಆಗಿರುತಿದ್ದವು . ಆದರೆ ಬರೆದದ್ದು ಕಡಿಮೆ . ಉಪನ್ಯಾಸಗಳಲ್ಲೇ ತಾವು ಹೇಳಬಯಸಿದ್ದನ್ನು ಹೇಳುತ್ತಾ ಹೋದರು . ಕಾವ್ಯ ಅವರ ಆಸಕ್ತಿಯಷ್ಟೇ ಅಲ್ಲದೆ ಬದುಕನ್ನೂ ಕಾವ್ಯವನ್ನು ಒಂದೇ ಎಂದು ಕಂಡವರು . ನಾಡಿನ ಹಲವು ಬಗೆಯ ಚಳುವಳಿಗಳ ಸಂಗಾತಿ ಕೂಡ ಆದರು. ಆಗಸ್ಟ್ ೭, ೨೦೧೦ರಂದು ಸಂಚಯ ಮತ್ತು ಸುಚಿತ್ರಾ ಕಲಾಕೇಂದ್ರ ಏರ್ಪಡಿಸಿದ್ದ ‘ಸಾಹಿತ್ಯ ಸಂಜೆ’ ಕಾರ್ಯಕ್ರಮದಲ್ಲಿ ನೀಡಿದ ಉಪನ್ಯಾಸ ಇದು . ಈ ಉಪನ್ಯಾಸ ನೀಡಿದ ಕೆಲವೇ ಗಂಟೆಗಳಲ್ಲಿ ಕಿ.ರಂ. ಕಾಲವಶವಾದರು. ಋತುಮಾನದ ದಾಖಲೀಕರಣಕ್ಕೆ ಇದನ್ನು ಒದಗಿಸಿದವರು ‘ಸಂಚಯ’ದ ಸಂಪಾದಕರೂ ಆಗಿರುವ ಡಿ . ವಿ . ಪ್ರಹ್ಲಾದ್ .  ಟಿ.ಎನ್.ವಾಸುದೇವಮೂರ್ತಿ ‘ಸಂಚಯ’ಕ್ಕಾಗಿ ಮಾಡಿಕೊಟ್ಟ ಬರಹರೂಪ ಇಲ್ಲಿದೆ . ವಿಡಿಯೋದಲ್ಲಿ ಧ್ವನಿ ಅಷ್ಟು ಸ್ಪಷ್ಟವಾಗಿಲ್ಲದಿರುವಿದರಿಂದ ಈ ವಿಡಿಯೋಗೆ ಕನ್ನಡದಲ್ಲೇ ಸಬ್ ಟೈಟಲ್ಸ್ ಕೂಡ ಅಳವಡಿಸಲಾಗಿದೆ . 

ಕನ್ನಡದಲ್ಲಿ ಮಹತ್ವದ ಧೀಮಂತರೂ, ಜೀನಿಯಸ್‌ಗಳೂ ಕೆಲವರಿದ್ದಾರೆ. ಅಂಥವರಲ್ಲಿ, ನಮ್ಮೆಲ್ಲರಿಗೂ ಗೊತ್ತಿರುವಂತೆ ಬೇಂದ್ರೆಯವರು ಬಹುಮುಖ್ಯರು. ಬೇಂದ್ರೆ ಕನ್ನಡ ಚೈತನ್ಯವನ್ನು ಅನೇಕ ಬಗೆಗಳಲ್ಲಿ ರೂಪಿಸಿದವರು. ನಾವೆಷ್ಟೇ ವಿಮರ್ಶಿಸಲಿ, ಪ್ರಶ್ನಿಸಲಿ, ಟೀಕಿಸಲಿ, ಅಂತಹ ಪ್ರತಿಭೆಗಳನ್ನು ರಿಪ್ರೆಸ್ ಮಾಡಲಿ, ಅವರು ಕೇಳುಗರ, ಓದುಗರ ಮನಸ್ಸಿನಲ್ಲಿ ಇದ್ದೇ ಇರುತ್ತಾರೆ. ಬೇಂದ್ರೆ, ಕುವೆಂಪು, ಅಡಿಗ, ಕಾರಂತರಂತಹ ಲೇಖಕರಿಗೆ ಬೇರೆ ಬೇರೆ ರೀತಿಯಲ್ಲಿ ಎಷ್ಟೇ ಪ್ರಶ್ನೆಗಳನ್ನು ಹಾಕಿದರೂ ಮತ್ತೆ ಮತ್ತೆ ನಮ್ಮನ್ನು ಆಹ್ವಾನಿಸುವ ಶಕ್ತಿ ಅವರ ಪ್ರತಿಭೆಗಿದೆ. ತಮ್ಮ ಕೃತಿಗಳನ್ನು ಹೇಗೆ ಓದಬೇಕು ಎಂದು ಇವರ್‍ಯಾರೂ ಹೇಳಿಕೊಡುವುದಿಲ್ಲ; ಹೇಳಿಕೊಟ್ಟೂ ಇಲ್ಲ.

ಕಾವ್ಯವನ್ನು ತಿಳಿಯುವುದೆಂದರೆ ಏನು? ಮನುಷ್ಯಜೀವಿತ ಹಾಗು ಸುತ್ತಣ ಜಗತ್ತು ಇವುಗಳನ್ನು ಕುರಿತು ಹೇಗೆ ಯೋಚಿಸಬೇಕು ಅಥವಾ ಹೇಗೆಲ್ಲ ಯೋಚಿಸಬಹುದು ಎಂದು ಲೇಖಕರು ಹೇಳುತ್ತಾರೆ. ಈ ಕಾರಣಕ್ಕಾಗಿಯೇ ಅವರನು ಸೃಜನಶೀಲರು. ಲೋಕವನ್ನು ನೋಡುವ ಕ್ರಮದಲ್ಲಿಯೇ ವಿಶಿಷ್ಟ ಒಳನೋಟಗಳನ್ನು ಇಂತಹ ಜೀನಿಯಸ್‍ಗಳು ಹೊಂದಿರುತ್ತಾರೆ. ಅಂತಹ ಶಕ್ತಿಯನ್ನು ಅಥವಾ ಪ್ರತಿಭೆಯನ್ನು ಗುರುತಿಸುವುದು ಹೇಗೆ? ಅದಕ್ಕೆ ನಮ್ಮ ಸುತ್ತ ಅವರ ಕೃತಿಗಳಿವೆ, ಅವರ ಅನೇಕ ನೆನಪುಗಳಿವೆ; ಆ ನೆನಪುಗಳು ಕೇವಲ ಮೇಲ್ಪದರವಲ್ಲ. ಮಧುರಚೆನ್ನ-ಬೇಂದ್ರೆಯವರ ನೆನಪುಗಳು ಅನೇಕ ರೀತಿಯಲ್ಲಿ ಹರಡಿಕೊಂಡಿವೆ. ಹಾಗೆಯೇ ಬಿಎಂಶ್ರೀ-ಬೇಂದ್ರೆಯವರ ಸಂಬಂಧದ ನೆನಪುಗಳೂ ಅಸಂಖ್ಯವಿದೆ. ತಮ್ಮ ಈ ಬಗೆಯ ಕ್ರಿಯಾಶೀಲತೆಗಳಿಂದಲೇ ಈ ಜೀನಿಯಸ್‍ಗಳು ಮತ್ತೆ ಮತ್ತೆ ನಮಗೆ ನೆನಪಾಗುತ್ತಾರೆ.

ಈ ದಿನ ನನ್ನ ಉದ್ದೇಶವಿದ್ದುದು ‘ಜೋಗಿ’ ಕವಿತೆಯ ಗ್ರಹಿಕೆಯ ವಿಭಿನ್ನ ನೆಲೆಗಳನ್ನು ಕುರಿತು ವಿಚಾರ ಮಾಡುವುದು. ನಾನು ಜೀನಿಯಸ್ ಎಂದು ಯಾರನ್ನು ಕರೆದೆನೋ, ಅವನಿಗೆ ಎಲ್ಲಾ ಕಾಲವೂ, ಎಲ್ಲ ಯುಗಗಳೂ ಒಂದೇ ಕಾಲ, ಕವಿಯನ್ನು ನಾನು ಗ್ರಹಿಸುವುದು ಹೀಗೆ. ಕವಿ ಯಾವ ಕಾಲದವನು ಎನ್ನುವುದು ನನಗೆ ಮುಖ್ಯವಲ್ಲ, ಅದೊಂದು ಕಾಲಬದ್ಧವಾದ ಯೋಚನೆಯಲ್ಲ. ಎಲ್ಲ ಕವಿಗಳೂ ಎಲ್ಲ ಕಾಲದವರೇ; ಅಥವಾ ಎಲ್ಲ ಕವಿಗಳೂ ಎಲ್ಲ ಕಾಲಕ್ಕೂ ಸಲ್ಲುತ್ತಾರೆ. ಒಬ್ಬ ಕವಿ ಆ ಕಾಲದವನು, ಈ ಕಾಲದವನು, ಆ ಶತಮಾನ, ಈ ಶತಮಾನ ಇತ್ಯಾದಿಯೆಲ್ಲ ಅಧ್ಯಯನಶೀಲ ವಿಂಗಡಣೆಯೇ ವಿನಃ ಅದರಿಂದ ಕಾವ್ಯವನ್ನು ಗ್ರಹಿಸಲು ಹೆಚ್ಚಿನ ಲಾಭವೇನೂ ಆಗಲಾರದೆಂಬುದು ನನ್ನ ವೈಯಕ್ತಿಕ ನಂಬಿಕೆ.

ಬೇಂದ್ರೆ ಒಂದು ಕಾಲಕ್ಕೆ ಸೇರಿದವರು ಹಾಗೂ ಆ ಕಾಲವನ್ನು ನಿರಂತರವಾಗಿ ಮೀರುವ ಪ್ರಯತ್ನವನ್ನು ತಮ್ಮ ಕೃತಿಗಳ ಮೂಲಕ ತೋರಿಸಿದವರು. ಕಾಲವನ್ನು ಕುರಿತ ಅವರ ಕಾಣ್ಕೆ ಎಷ್ಟು ಸ್ತರಗಳಲ್ಲಿದೆ ಎನ್ನುವುದನ್ನು ಪಟ್ಟಿ ಮಾಡಿ ಹೇಳಲು ಬರುವುದಿಲ್ಲ. ಕಾಲವನ್ನೇ ಕುರಿತ ಅವರ ಧ್ಯಾನ ‘ಹಕ್ಕಿ ಹಾರುತಿದೆ ನೋಡಿದಿರಾ’ ಪದ್ಯವನ್ನೂ ಒಳಗೊಂಡಂತೆ ಎಷ್ಟೆಷ್ಟು ಸ್ತರಗಳಲ್ಲಿ ಕಾಣುತ್ತದೆ ಎಂಬುದು ಸಾಮಾನ್ಯ ಗ್ರಹಿಕೆಗೆ ನಿಲುಕುವಂಥದಲ್ಲ. ಬೇಂದ್ರೆ ಗುರುವೇ ಇಲ್ಲದ ಚೈತನ್ಯ ಅಥವಾ ಯಾರನ್ನು ಬೇಕಾದರೂ ಗುರುವಾಗಿ ಸ್ವೀಕರಿಸಬಲ್ಲ ಚೈತನ್ಯ. ಇವತ್ತು ಒಬ್ಬನನ್ನು ಕರೆದುಕೊಂಡು ಹೋಗಿ ನಿಲ್ಲಿಸಿದರೂ ಅವರನ್ನು ಗುರುವನ್ನಾಗಿ ಸ್ವೀಕರಿಸಬಲ್ಲರು. ಅರವಿಂದ, ಶ್ರೀರಾಮಕೃಷ್ಣ ಮೊದಲಾದ ಗುರುಪರಂಪರೆಗಳನ್ನು ಅವರು ಪ್ರಸ್ತಾಪಿಸುತ್ತಾರಾದರೂ ಅವರು ಯಾರನ್ನು ಬೇಕಾದರೂ ಗುರುವನ್ನಾಗಿ ಆವಾಹಿಸಿಕೊಳ್ಳಬಲ್ಲರು. ಹಾಗೆಯೇ ಯಾವ ಗುರುಪರಂಪರೆಗೂ ಸಿಲುಕದ ನೆಲೆಯಲ್ಲಿ ಅವರ ಆಲೋಚನೆಗಳಿವೆ.

ಬೇಂದ್ರೆಯನ್ನು ಮೇಲಿಂದ ಮೇಲೆ ಓದಬೇಕೆಂದು ನಾವೇಕೆ ಭಾವಿಸುತ್ತೇವೆ? ಪ್ರಕೃತಿಯನ್ನು, ಮನುಷ್ಯ ಪ್ರಕೃತಿಯನ್ನು ಗ್ರಹಿಸುವ ರೀತಿಯನ್ನೇ ಬದಲಿಸಿದ ಕವಿ ಅವರು. ಈ ನೆಲೆಯನ್ನು ಬೇಂದ್ರೆಯವರ ಅಷ್ಟೂ ಕವಿತೆಗಳಲ್ಲಿ ನೋಡಬಹುದು ಎಂದು ನಾನು ಧೈರ್ಯವಾಗಿ ಹೇಳಬಲ್ಲೆ.

ನಾವು ನೋಡುವ ಕ್ರಮವನ್ನೇ ಪಲ್ಲಟಿಸಿದ ಕವಿಗಳಲ್ಲಿ ಬೇಂದ್ರೆ ತುಂಬ ಮುಖ್ಯರು. ಬೇಂದ್ರೆಯವರ ಕಾವ್ಯ ಯಾವ ತತ್ವಕ್ಕೂ ಬದ್ಧವಾದದ್ದಲ್ಲ. ಹಾಗೆ ಬದ್ಧಗೊಳಿಸುವ ಅನೇಕ ಪ್ರಯತ್ನಗಳೇನೋ ನಡೆದಿರಬಹುದು. ಇಡೀ ಯೂನಿವರ್ಸ್ – ಯಾವುದನ್ನು ನಾವು ವಿಶ್ವ ಎಂದು ಕರೆಯುತ್ತೇವೋ – ಅದೇ ಒಂದು ತತ್ವ. ಈ ಅನಂತವಿಶ್ವನನ್ನು ಪರಿಭಾವಿಸುವ ಅನೇಕ ಉಪಕ್ರಮಗಳು ಅವರ ಸೃಜನಶೀಲತೆಯಲ್ಲಿ ಮೈಪಡೆದಿವೆ. ಈ ಸೃಷ್ಟಿಯಿಂದ ಏನನ್ನು ಹೇಳಬೇಕು ಎನ್ನುವುದಲ್ಲ, ಬದಲಿಗೆ ಈ ಸೃಷ್ಟಿಯಲ್ಲೇ ಒಂದು ದೃಷ್ಟಿಯಿದೆ ಎಂಬ ಅಸಾಮಾನ್ಯ ತಿಳುವಳಿಕೆ ಅವರದು. ಇಲ್ಲಿ ವಿಶ್ವಸೃಷ್ಟಿ ಕೇವಲ ಕಾವ್ಯಾನುಭವಕ್ಕೆ ಮಾತ್ರ ಒದಗಿ ಬರದೆ ಒಂದು ಸಂಸ್ಕೃತಿತತ್ವವಾಗಿ ಬೇಂದ್ರೆಯಲ್ಲಿ ಮೈದೆಳಿದಿದೆ. ಬೇಂದ್ರೆಯ ಒಟ್ಟು ಚೈತನ್ಯದ ನೆಲೆಯೇ ಹಾಗಿದೆ. ಅವರ ‘ಉಯ್ಯಾಲೆ’ ಸಂಕಲನದ ‘ಅಲ್ಲಮಪ್ರಭು’ ಪದ್ಯದಲ್ಲಿ ‘ಶೂನ್ಯದಲ್ಲಿ ಹುಟ್ಟುಗಟ್ಟಿತ್ತು ಹದುಳದೊಂದು ಹುಣ್ಣಿಮೆ’ ಎಂಬ ಸಾಲಿದೆ. ‘ಹುಟ್ಟುಗಟ್ಟಿತ್ತು’ ಎಂದುದಕ್ಕೆ ಎರಡು ಅರ್ಥಗಳಿವೆ. ಒಂದು, ಜೇನು ಹುಟ್ಟು; ಇನ್ನೊಂದು ಹುಟ್ಟುಗಟ್ಟುವುದು, ಜನಿಸುವುದು. ಬಹಳ ಮುಖ್ಯವಾದ ಮತ್ತೊಂದು ಪದ್ಯವನ್ನು ನಾನು ಪ್ರಾಸಂಗಿಕವಾಗಿ ಓದುತ್ತೇನೆ. ಸೃಷ್ಟಿಯ ಮಾತು ಬಂದದ್ದರಿಂದ ಅದಕ್ಕೆ ಸಂವಾದಿಯಾಗಿ ಅಂಥದೊಂದು ಕವಿತೆಯನ್ನು ಓದುವ ಪ್ರಯತ್ನ ಮಾಡುತ್ತೇನೆ. ಈ ಕವಿತೆಯ ಹೆಸರು ‘ಪ್ರಳಯ ಸೃಷ್ಟಿ’; ಅವರ ಆರಂಭ ಕಾಲದ ಕವಿತೆ ಇದು. ನಾನು ಯಾವುದನ್ನು ವಿಶ್ವತತ್ವ ಎಂದು ಹೇಳಿದೆನೋ ಆ ತತ್ವಕ್ಕೆ ಪೂರಕವಾದ ಪದ್ಯವಿದು. ಈ ಪದ್ಯವನ್ನು ಗಮನಿಸಿದರೆ ನಾನು ಈ ಹಿಂದೆ ಹೇಳಿದ ಹಿನ್ನಲೆಯಲ್ಲಿ ನೀವೂ ಯೋಚಿಸಲು ಸಾಧ್ಯವಾದೀತು. ಪ್ರಳಯವಿಲ್ಲದೆ ಸೃಷ್ಟಿಯಿಲ್ಲ; ಹಾಗೆಯೇ ಸೃಷ್ಟಿ ಮತ್ತೆ ಹೊಸ ಅವಸ್ಥಾಂತರಗಳನ್ನು ಪಡೆಯುತ್ತದೆ:

ಹೊಗೆಮೋಡ ಹಿಂಜಿ, ಕಣ್ಮರೆಯಾಗುವಂತೆ, ನೆನೆ-

ಸಿದ ರೂಪ ಹುಡಿಯಾಗುತಿದೆ;

ಇದನ್ನು ವ್ಯಾಖ್ಯಾನ ಮಾಡಬೇಕು ಅಂತ ಇಷ್ಟ ಆದರೂ ವ್ಯಾಖ್ಯಾನ ಮಾಡಬಾರದು ಅನ್ನಿಸುತ್ತದೆ..

ಮಬ್ಬು ಕವಿದು ಬರುತಿದೆ;

ಸ್ವಪ್ನಲೋಕದೊಳು ಆಕಾರ ಪ್ರಳಯವಿರುವಂತೆ

ಸ್ವಪ್ನದಲ್ಲಿ ಏನೋ ಆಕಾರ, ಮರುಗಳಿಗೆಯೇ ಅದು ಪ್ರಳಯವಾಗುತ್ತಿರುತ್ತದೆಯಲ್ಲ! ಪ್ರಳಯವಾಗುತ್ತಲೇ ಸ್ವಪ್ನ ಮುಂದುವರೆಯುತ್ತದೆ, ಅದೂ ಮತ್ತೆ ಪ್ರಳಯವಾಗುತ್ತಿರುತ್ತದೆ. ಬೆಳಗಾಗೆದ್ದು ಮತ್ತೆ ಸ್ವಪ್ನವನ್ನು ನೆನೆಸಿಕೊಂಡಾಗ ಅದು ಮತ್ತೆ ರೂಪು ಪಡೆಯುತ್ತದೆ, ಅದೂ ಮತ್ತೆ ಪ್ರಳಯವಾಗುತ್ತದೆ.

ತುಂಬಿದೆ ನಿರಾಕಾರ ತಮ, ಚಿತ್ತ ಘನ

ನಿಬಿಡವನ; ಹೊತ್ತು ಗೊತ್ತಿಲ್ಲ; ಮಿಸುಗುಡದೆ ಮನ

ತನ್ನ ನುಂಗಿದೆ ತಾನು, ಯಾವ ಲೋಕವೊ ಇದಿರು?

ಸೃಷ್ಟಿಯಿಲ್ಲದ ದೃಷ್ಟಿ, ಚಿತ್ರ! ನಿಶ್ಚಿತ್ರ. ಇರು

ವೆನೋ ನಾನು? ಇಹುದೇನು? ಬರಿಬಯಲ ನಿರ್ವಚನ!

ಈಗ ಕಾಣುತ್ತಿದೆ, ಮತ್ತೆ ನಮ್ಮ ಕಣ್ಣೆದುರಿಗೇ ಲಯವಾಗುತ್ತಿದೆ. ಪ್ರಳಯವೆಂದರೆ ಲಯ. ಮನಸ್ಸಿನಲ್ಲಿ ಎಡೆಬಿಡದೆ ಆಕಾರ ಬರುತ್ತಿದೆ, ಮತ್ತೆ ಆಕಾರ ಹೋಗುತ್ತಿದೆ. ಆಕಾರ ಹೋಗದೇ ಮತ್ತೊಂದು ಬರುವಂತಿಲ್ಲ. ಲಯವಾಗದೇ ಮತ್ತೊಂದು ಉದಿತವಾಗುವಂತಿಲ್ಲ. ಕ್ಷಣದ ಲಯದೊಂದಿಗೆ ಕ್ಷಣದ ಉದಯ. ನಾನು ಕಂಡ ರೂಪ ಲಯವಾಗಿ ಮತ್ತೊಂದನ್ನು ಕಾಣುತ್ತಿದ್ದೇನೆಯೇ ವಿನಃ ಅಖಂಡವಾದ ಕಾಣುವಿಕೆ ಇಲ್ಲ ಇಲ್ಲಿ!

ಇದೊಂದು ಸಾನೆಟ್. ಇದರ ಎರಡನೆಯ ಭಾಗ ಹೀಗಿದೆ;

ಮರಣಮೂರ್ಛಿತ ದೇಹಕುಸಿರು ಹುಟ್ಟಿದ ಹಾಗೆ

ಸ್ಪಂದಿಸುವುದಿದೊ ತಮವು; ದಿವ್ಯಶಾಲಗ್ರಾಮ

ಶಿಲೆಯೊಳುದಿಸಿದ ಕೊಳಲ ಕೃಷ್ಣಮೂರ್ತಿಯ ಮಧುರ

ಮುರಲಿನಾದವು ಕಣದಗಣ ಕುಣಿಸುತಿದೆ ಸೋಗೆ

‘ದಿವ್ಯಶಾಲಗ್ರಾಮ ಶಿಲೆಯೊಳು ಉದಿಸಿದ ಕೊಳಲ ಕೃಷ್ಣಮೂರ್ತಿಯ ಮಧುರ ಮುರಲಿನಾದ…’ ಮತ್ತೆ ಆ ಶಿಲೆ ಲಯವಾಗದೆ ಕೃಷ್ಣಮೂರ್ತಿಯ ಉದಯವಾಗುವಂತಿಲ್ಲ. ಶಾಲಗ್ರಾಮದ ಸೆರೆಯನ್ನು ಬಿಡಿಸಿದಾಗ ಅಲ್ಲಿ ಕೊಳಲ ಕೃಷ್ಣಮೂರ್ತಿ ಬರುವುದು. ಕೊಳಲು ಎಂದೊಡನೆಯೇ ನಮ್ಮ ಗ್ರಹಣೇಂದ್ರಿಯಕ್ಕೆ ಸಂಬಂಧಿಸಿದ ಧ್ವನಿ ಎಂಬುದೂ ಕೇಳಿಸುತ್ತಿದೆ. ಹಾಗೆಯೇ ಶಾಲಗ್ರಾಮ ಶಿಲೆಯೊಳುದಿಸಿದ ಕೊಳಲ ಕೃಷ್ಣಮೂರ್ತಿಯ ಮಧುರ ಮುರಲೀ ನಾದವು ‘ಕಣದಗಣ ಕುಣಿಸುತಿದೆ ಸೋಗೆ’… ಎಂಬಲ್ಲಿ ಒಂದು ಡಾನ್ಸ್ ಕೂಡ ಆರಂಭವಾಗಿಬಿಟ್ಟಿತು. ‘ಕುಣಿಸುತಿದೆ ಸೋಗೆ’ಎನ್ನುವಲ್ಲಿ ನವಿಲಿನ ಚಿತ್ರವೂ ಬಂದಿತು. ಕಲ್ಲಾಗಿ ಇದ್ದದ್ದು ಈಗ ಮೂರ್ತಿಯಾಗಿ, ಕೃಷ್ಣಮೂರ್ತಿಯಾಗಿ, ‘ಕೊಳಲ ಮುರಳೀನಾದವಾಗಿ ಕುಣಿಸುತಿದೆ ಸೋಗೆ ನವಿಲಂತೆ, ಸುತ್ತ ಕಣ್ಣೋಕಣ್ಣು’. ‘ಹೊಗೆಮೋಡ ಹಿಂಜಿ ಕಣ್ಮರೆಯಾಗು’ವಂತಹ ಕ್ಷಣಭಿನ್ನವಾದ ಸ್ಥಿತಿ ಬೇರೆ. ಆ ಸ್ಥಿತಿಯಿಂದ ಈಗ ಬೇರೆ ಮತ್ತೊಂದು ಸ್ಥಿತಿ ಉಂಟಾಗುತ್ತದೆ.

ನವಿಲಂತೆ, ಸುತ್ತು ಕಣ್ಣೋ ಕಣ್ಣು! ಚಿರವಿಧುರ

ಪೂರ್ವವಧು ಪಡೆದಂತೆ, ಮನವೆ ಮಂಗಲಧಾಮ!

ಇಷ್ಟೆಲ್ಲ ಎಲ್ಲಿ ಆಗುತ್ತಿದೆ? ಬೇರೆಲ್ಲೂ ಅಲ್ಲ – ‘ಮನವೆ ಮಂಗಲಧಾಮ’. ಸೃಷ್ಟಿ ಪ್ರಳಯಗಳು ಕ್ಷಣಭಿನ್ನವಾಗಿ ಮನದಲ್ಲೇ ಆಗುತ್ತಿವೆ. ಈ ಕವಿತೆಗೆ ಅರ್ಥ ಹೇಳಲು ಬರುವುದಿಲ್ಲ. ನಮ್ಮ ಕಣ್ಣೆದುರಿಗೇ ಸಂಭವಿಸುವ ಪ್ರಳಯ-ಸೃಷ್ಟಿಗಳನ್ನು ಪರಿಭಾವಿಸುವ ಈ ವಿಶ್ವಸೃಷ್ಟಿಯಲ್ಲಿಯೇ ಒಂದು ದೃಷ್ಟಿ ಇದೆ. ಆದ್ದರಿಂದಲೇ ಬೇಂದ್ರೆಯವರ ಯಾವುದೇ ಕವಿತೆಯಲ್ಲಿಯೂ ಲೋಕವನ್ನು ಈ ರೀತಿ ಪಲ್ಲಟಿಸುವ ಕ್ರಮವನ್ನು ಕಾಣಬಹುದು. ಅಥವಾ ನಮ್ಮ ನೋಡುವಿಕೆಯ ಕ್ರಮವನ್ನೇ ಸಂಪೂರ್ಣ ಭಿನ್ನಗೊಳಿಸುವ ಶಕ್ತಿ ಅವರ ಕವಿತೆಗಳಿಗಿದೆ.

ಕವಿತೆಯನ್ನು ಓದುವ ಬಹಳಷ್ಟು ಜನ ಸಾಮಾನ್ಯವಾಗಿ ತಮಗೆ ಕಂಡ ಜಗತ್ತನ್ನು ಕವಿತೆಯಲ್ಲಿ ಹೆಚ್ಚು ಸ್ಪಷ್ಟವಾಗಿ ನೋಡಲು ಬಯಸುತ್ತಾರೆ. ತಾವು ಪ್ರತಿನಿತ್ಯ ನೋಡುವ ತಮ್ಮದೇ ಆದ ಲೋಕವನ್ನು, ಆ ಕವಿತೆಯೊಳಗೆ ಆ ರೀತಿ ಕ್ಲಾರಿಫೈ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ಕಾವ್ಯಾನುಭವ ಹಾಗಲ್ಲ. ನಾವು ಕಂಡ ಲೋಕವನ್ನು ಆ ರೀತಿ ಸ್ಪಷ್ಟೀಕರಿಸಲು ಕವಿತೆ ಏಕೆ ಬೇಕು? ನಾವೇ ಕುಳಿತು ಸ್ಪಷ್ಟಗೊಳಿಸಿಕೊಳ್ಳಬಹುದಲ್ಲ! ಅದಕ್ಕೆ ಕವಿತೆಯ ಬೆಂಬಲ ಏಕೆ ಬೇಕು? ಆ ಬೆಂಬಲದ ನೆರವಿನಿಂದ ನಾವು ನಮಗೆ ಆಗುವ ಅನುಭವಗಳನ್ನು ಕವಿಯೂ ಪುರಸ್ಕರಿಸುತ್ತಿದಾನೆ ಎಂದು ತಿಳಿಯುತ್ತೇವೆ.

ಮೇಲಿನ ಕವಿತೆಯಲ್ಲಿ ಪ್ರತಿಕ್ಷಣವೂ ಪ್ರಳಯವಿದೆ, ಆ ಪ್ರಳಯವನ್ನು ಬೆಂಬೆತ್ತಿ ಸೃಷ್ಟಿಯಾಗುತ್ತಿದೆ, ಮತ್ತೆ ಪ್ರಳಯ ಬರುತ್ತಿದೆ, ಮತ್ತೆ ಸೃಷ್ಟಿಯಾಗುತ್ತಿದೆ ಎಂಬ ಕಲ್ಪನೆ ಇದೆಯಲ್ಲ, ಅದು ಇಲ್ಲವಾಗುತ್ತದೆ. ಏಕೆಂದರೆ ನಮ್ಮ ಮನಸ್ಸಿನಲ್ಲಿ ಒಂದು ಪರ್ಮನೆನ್ಸ್‌ನ (ಶಾಶ್ವತೆಯ) ಕಲ್ಪನೆ ಇದೆ. ನಾವು ಪ್ರಳಯದ ಸೃಷ್ಟಿಗೆ ಹೆದರುತ್ತೇವೆ. ಮುಂದೆಂದೋ ಪ್ರಳಯ ಸಂಭವಿಸುವುದೆಂದು ನವೀನ ಭವಿಷ್ಯಕಾರರು ಮಾತನಾಡುತ್ತಿದರೆ ನಾವು ಆತಂಕದಿಂದ ಅದನ್ನು ಎದುರು ನೋಡುತ್ತಿರುತ್ತೇವೆ. ಆದರೆ ಈ ದಿನ ಪ್ರಳಯವಾಗಾದೆ ನಾಳೆ ಎಂಬುದು ಇಲ್ಲವಲ್ಲ! ಈ ಕ್ಷಣ ಪ್ರಳಯವಾಗದೇ ಮುಂದಿನ ಕ್ಷಣವೇ ಇಲ್ಲ. ಈ ಹಿನ್ನಲೆಯಲ್ಲಿ, ಈ ಪದ್ಯ ಹುಟ್ಟು ಸಾವುಗಳ ಪ್ರಶ್ನೆಯನ್ನು ಕುರಿತು, ಸೃಷ್ಟಿ-ಲಯಗಳ ಕುರಿತು, ಮನಸ್ಸಿನಲ್ಲೇ ಸಂಭವಿಸುವ ದೊಡ್ಡ ಪ್ರಳಯವನ್ನು ಕುರಿತು ಚರ್ಚಿಸುತ್ತದೆ. ಮನಸ್ಸಿನ ಪ್ರಳಯಕ್ಕಿಂತ ಮಿಗಿಲಾದ ಮತ್ತೊಂದು ಪ್ರಳಯವಿಲ್ಲ. ಮುಂದೊಮ್ಮೆ ಸಂಭವಿಸಲಿರುವ ದೊಡ್ಡ ಪ್ರಳಯವನ್ನು ನಾವು ಆತಂಕದಿಂದ ಎದುರು ನೋಡುತ್ತಿರುವೆವು. ಅದಕ್ಕೇ ವಿಪರೀತವಾದ ಕ್ಷೇಮವನ್ನು, ಸೌಖ್ಯವನ್ನು ಹೊಂದಲು ಆಸಕ್ತರಾಗಿರುವೆವು. ಅದೇ ತುಂಬ ಪಾಸಿಟಿವ್ ಆದ ನೆಲೆ ಎಂದು ತಿಳಿದಿರುವೆವು. ಅಥವಾ ಹಾಗೆ ತಿಳಿಯಬೇಕು ಎಂಬ ಆಶಾವಾದಕ್ಕಾದರೂ ನಾವು ಬದ್ಧರಾಗಿರುವೆವು. ಆ ಆಶಾವಾದ ಇಲ್ಲಿಯೂ ಇದೆ. ಆದರೆ ಇಲ್ಲಿ ಒಂದು ವಿಶಿಷ್ಟ ಬಗೆಯ ಸೃಜನಶೀಲತೆಯಾಗಿ ಪರಿಣಮಿಸಿದೆ. ‘ಶಾಲಗ್ರಾಮ’ ‘ಕೃಷ್ಣಮೂರ್ತಿ’ಯಾಗತಕ್ಕದ್ದು; ಬರೀ ಶಾಲಗ್ರಾಮಕ್ಕೆ ಅರ್ಥವಿಲ್ಲ. ನೇಚರ್ ಆಗಿದ್ದದ್ದು ಕಲ್ಚರ್ ಆಗತಕ್ಕದ್ದು. ಕಲ್ಲು ನೇಚರ್‌ನಲ್ಲಿ ಇದ್ದೆ ಇದೆ;  ಆದರೆ ಅದು ‘ಕೃಷ್ಣಮೂರ್ತಿ’ಯಾಗುವುದು, ಕೊಳಲ ಗಾನವನ್ನು ನುಡಿಸುವುದು, ಮತ್ತೆ ಅದು ಸೋಗೆಯಾಗಿ, ನವಿಲಂತೆ ಕುಣಿದು ಸಹಸ್ರ ಕಣ್ಣುಗಳಾಗಿ ಪರಿಣಮಿಸುವ ಪ್ರಕ್ರಿಯೆ ಇದೆಯಲ್ಲ, ಅದುವೆ ಆ ವಿಶಿಷ್ಟ ಬಗೆಯ ಸೃಜನಶೀಲತೆ. ಈ ಪರಿಣಾಮಗಳಿಗೆ ಲಯವಿಲ್ಲವೇ ಎಂದರೆ, ಅದಕ್ಕೂ ಲಯವಿದೆ. ‘ಚಿರವಿಧುರ ಪೂರ್ವವಧು ಪಡೆದಂತೆ ಮನವೆ ಮಂಗಲಧಾಮ’… ಇದು ಬೇಂದ್ರೆಯ ಪ್ರಳಯಸೃಷ್ಟಿಯ ಕಲ್ಪನೆ.

‘ಶೂನ್ಯದಲ್ಲಿ ಹುಟ್ಟುಗಟ್ಟಿತ್ತು ಹದುಳದೊಂದು ಹುಣ್ಣಿಮೆ…’ ‘ಹದುಳ’ ಎಂಬುದು ಬೇಂದ್ರೆ ಮೇಲಿಂದಮೇಲೆ ಬಳಸುವ ಬಹಳ ಮುಖ್ಯವಾದ ಒಂದು ಪರಿಕಲ್ಪನೆ. ಅದಕ್ಕೆ ಕ್ಷೇಮ, ಸಮಾಧಾನ, ಸೌಖ್ಯ ಇತ್ಯಾದಿ ಅರ್ಥಗಳುಂತು. ಹೀಗಾಗಿ ಇದನ್ನು ಓದಿದಂತೆಲ್ಲ ಮತ್ತೆ ಭಿನ್ನವಾದ ಓದು ಬೇಕು ಎನಿಸುತ್ತದೆಯಲ್ಲ ಏಕೆ? ಈ ಪ್ರಶ್ನೆಯನ್ನೇ ಈ ದಿನ ನಾನು ಮುಖ್ಯವಾಗಿ ಚರ್ಚಿಸಬೇಕು ಎಂದು ಯೋಚಿಸುತ್ತಿರುವುದು. ನಾನೂ ೪೫-೫೦ ವರ್ಷಗಳಿಂದ ಈ ಕವಿತೆಯನ್ನು ಓದುತ್ತಲೇ ಇದ್ದೇನೆ. ನಾನು ಕಳೆದ ೫೦ ವರ್ಷಗಳಿಂದಲೂ ಓದುತ್ತಿರುವ ‘ಜೋಗಿ’ ಕವಿತೆಯನ್ನು ತುಂಬ ಮುಗ್ಧತೆಯಿಂದ ಓದಿದ ಕಾಲವೂ ಇತ್ತು. ತಡವರಿಸುತ್ತಾ, ನನಗೆ ನಾನೆ ಗೊಂದಲಕ್ಕೆ ಗುರಿಯಾಗುತ್ತಾ, ಬೇಕೆಂದೇ ಅನೇಕ ಓದುಗಳಿಗೆ ಅದನ್ನು ಒಳಪಡಿಸುತ್ತಲೂ ಓದಿದ್ದೇನೆ. ಅದು ಯಾವುದೇ ಕವಿತೆ ಇರಲಿ; ಎಲ್ಲರಿಗೂ ಪರಿಚಿತವಾದ ‘ಬೆಳದಿಂಗಳ ನೋಡಾ’ ಕವಿತೆಯನ್ನೇ ತೆಗೆದುಕೊಳ್ಳಿ; ಅದನ್ನು ಮತ್ತೆ ಓದಿದಾಗ ಇದು ಈಗಾಗಲೇ ಓದಿದ ಹಾಗಿಲ್ಲವಲ್ಲ ಎನಿಸುತ್ತೆ. ಅಥವಾ ಇದುವರೆಗೂ ಓದಿದ ರೀತಿಯಲ್ಲೇ ಓದಿದರೆ ಮತ್ತೆ ಏಕೆ ಓದಬೇಕು? ಅದಕ್ಕೆ ಆಗಲೇ ಒಂದು ಗ್ರಹಿಕೆ ಸಿದ್ಧಗೊಂದಿದೆ ಎಂದಾಗುತ್ತದೆ. ‘ಮಂಕುತಿಮ್ಮನ ಕಗ್ಗ’ದ ನಾಲ್ಕು ಸಾಲನ್ನು ನಾವೀಗಾಗಲೇ ಓದಿಬಿಟ್ಟಿದ್ದೇವೆ. ಈಗ ಅದನ್ನು ಎಷ್ಟು ಓದಿದರೂ ಅಷ್ಟೇ; ಅದು ಮತ್ತೇನೂ ಆಗಲಾರದು. ಓದುಗರಾಗಲಿ, ವಿಮರ್ಶಕರಾಗಲಿ ‘ಜೋಗಿ’ ಕವಿತೆಯ ‘ಸಿಗ್ನಿಫಿಕೆನ್ಸ್ ಇದು’ ಅಂತ ಹೇಳಿದ ಮೇಲೆಯೂ ಬೇರೆ ಬೇರೆಯ ನೆಲೆಗಳನ್ನು ಕವಿತೆ ಸೂಚಿಸುತ್ತಲೇ ಇರುವುದಲ್ಲ ಏಕೆ? ಅವರು ಸಾಮಾನ್ಯ ಓದುಗರಾದರೂ ಸಹ ಬೇರೆ ಬೇರೆಯ ನೆಲೆಗಳನ್ನು ಈ ಕವಿತೆ ಸೂಚಿಸುತ್ತಲೇ ಇರುತ್ತದೆ. ಓದುಗರಲ್ಲಿ ‘ಸಾಮಾನ್ಯ ಓದುಗರು’ ಎಂಬುವವರು ಇರುವುದಿಲ್ಲ; ನನ್ನ ಪ್ರಕಾರ ಎಲ್ಲ ಓದುಗರೂ ವಿಶೇಷ ಓದುಗರೇ, ಕನ್ನಡ ಬಲ್ಲವರೆಲ್ಲ ವಿಶೇಷ ಓದುಗರೇ. ಇರಲಿ… ಈಗ ‘ಜೋಗಿ’ ಪದ್ಯದ ಈ ಪಂಕ್ತಿಗೆ ಒಂದು ಅರ್ಥಕೊಟ್ಟುಬಿಟ್ಟರೆ ಅಲ್ಲಿಗೆ ಮುಗಿಯಿತೆ?

ಊರ ತುದಿಯ ಆ ಮೂರು ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ

ಹಳ್ಳ ಅಡಗಿ ಹರಿದಲ್ಲಿ, ತುಡುಗು-ದನ ತೊಂಡು ಮೇಯುವಲ್ಲಿ

ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ

ಇರುಳು ಅಂತನs ಹಗಲs ಗೂಕತಾವ ಅಲ್ಲಿ ಜೋಡಗೂಗಿ

ಇದಕ್ಕೆ ಈಗಾಗಲೇ ಏನೇನೋ ಅರ್ಥಗಳನ್ನು ನೀಡಲಾಗಿದೆ. ‘ಊರು’ ಎಂದ ತಕ್ಷಣ ಒಂದರ್ಥ, ‘ಮೂರು ಬಟ್ಟೆ’ ಎಂದಾಕ್ಷಣ ಒಂದು ನಿರ್ದಿಷ್ಟಗೊಳಿಸಿದ ಅರ್ಥ – ಹೀಗೆ ಹೇಳುತ್ತ ಹೋಗುವುದು… ಹೀಗೆ ಮಾಡಿದಂತೆಲ್ಲ ಕವಿತೆಯನ್ನು ಒಂದು ನಿರ್ದಿಷ್ಟ ಕಂಡೀಷನ್‌ಗೆ ಒಳಪಡಿಸಿದಂತಾಗುತ್ತದೆ. ಈ ಕವಿತೆಯನ್ನು ಸುಮತೀಂದ್ರ ನಾಡಿಗ, ಕೀರ್ತಿನಾಥ ಕುರ್ತಕೋಟಿ, ಎಚ್.ಎಸ್.ರಾಘವೇಂದ್ರರಾವ್, ಆರ್.ಜೆ.ಕುಲಕರ್ಣಿ, ಶಂಕರಮೊಕಾಶಿ ಪುಣೇಕರ್, ಲಂಕೇಶ್ ಹೀಗೆ ಅನೇಕರು ಎಡತಾಕಿದ್ದಾರೆ. ಇನ್ನೂ ಅನೇಕರಿದ್ದಾರೆ. ನಾನೂ ನನ್ನ ತಾರುಣ್ಯದಲ್ಲಿ ಈ ಕವಿತೆಯನ್ನು ಬಹಳ ಸಕ್ಸಫುಲ್ ಆಗಿ ಓದಬೇಕು ಎಂದು ಹಟಮಾಡಿ ನನ್ನ ಮನಸ್ಸಿಗೆ ಯಶಸ್ವಿ ಎನ್ನಿಸುವಂತೆ ಪ್ರೆಸೆಂಟ್ ಮಾಡಿದ್ದಿದೆ. ಈಗಲೂ ಒಂದು ತರಗತಿಯಲ್ಲಿ ಇದನ್ನು ಪ್ರಿಸ್ಕ್ರೈಬ್ ಮಾಡಿದರೆ ಆ ವಿದ್ಯಾರ್ಥಿಗಳಿಗೆ ಸಮ್ಮತವಾಗುವ ರೀತಿಯಲ್ಲಿ ಹೇಳಬಲ್ಲೆ, ಹೇಳಿಯೂ ಇದ್ದೇನೆ. ಆದರೆ ಅವೆಲ್ಲವನ್ನೂ ಈಗ ನಾನು ಮನಸ್ಸಿನಿಂದ ದೂರ ಇಟ್ಟರೆ ಏನಾಗುತ್ತದೆ ಎಂದು ನೋಡುತ್ತಿದ್ದೇನೆ.

ಈ ಕವಿತೆಯನ್ನು ಪೂರ್ತಿ ಅರ್ಥೈಸಿಕೊಳ್ಳಲೇಬೇಕು ಎಂಬ ಹಟವೇಕೆ? ಈ ಲೋಕದಲ್ಲಿ ನಾವು ಎಲ್ಲವನ್ನೂ ಅರ್ಥೈಸಿಕೊಂಡೇ ಇದ್ದೇವೆಯೇ? ಅರ್ಥವೆಂದರೆ ಏನು? ಬೇಂದ್ರೆಯವರೇ, ‘ಅರ್ಥವೆಂದರೆ ಬೆದರು ಬೊಂಬೆ ಇದ್ದ ಹಾಗೆ’ ಎಂದು ಒಂದೆಡೆ ಹೇಳುತ್ತಾರೆ. ಮನೆ ಕಟ್ಟಿದಾಗ ಅಥವಾ ಹೊಲಗದ್ದೆಗಳಲ್ಲಿ ಬೆದರು ಬೊಂಬೆಗಳನ್ನು ನಿಲ್ಲಿಸಿರುತ್ತಾರಲ್ಲ ಆ ರೀತಿ. ಕವಿತೆಯ ಸಿಗ್ನಿಫಿಕೆನ್ಸ್ ಎಂದು ನಾವು ಏನನ್ನು ಕರೆಯುತ್ತೇವೆಯೋ ಅದು ಅರ್ಥವನ್ನು ಯಾವಾಗಲೂ ಮುಂದಕ್ಕೆ ಹಾಕುತ್ತಿರುತ್ತದೆ. ಈಗ ನಾನು ನಿಮಗೆಲ್ಲ ಕನ್ವಿನ್ಸಿಂಗ್ ಎನ್ನುವಂತಹ ಒಂದು ಅರ್ಥವನ್ನು ಕೊಡಬಹುದು, ಆಗ ‘ಜೋಗಿ’ಯನ್ನು ಗ್ರಹಿಸುತ್ತಿರುವ ನಿಮ್ಮನ್ನೆಲ್ಲ ಒಂದು ಅರ್ಥಕ್ಕೆ ಲಗತ್ತಿಸಿರುತ್ತೇನೆ, ಕಂಡೀಷನ್ ಮಾಡುತ್ತಿರುತ್ತೇನೆ. ಈ ಪದ್ಯದ ಯಾವ ಸಾಲನ್ನಾದರೂ ತೆಗೆದುಕೊಳ್ಳಬಹುದು, ಇದನ್ನು ಇದೇ ತರಹ ಓದಬೇಕು ಎಂದೇನಿಲ್ಲ. ಇಲ್ಲಿ ‘ತೊಗಲ ಬಾವಲಿ’ ಎಂದೊಡನೆ ಅದು ಅಶುಭ, ಸಾವಿನ ಸಂಕೇತ ಎಂದುಬಿಡುವುದು; ‘ಚೀರತಾವ ಭರ್ತಿ ಹಗಲಿನೊಳಗ’ ಅಥವ ‘ಬೇವು’ – ಇವಕ್ಕೆಲ್ಲ ನಿಷೇಧದ ಅರ್ಥವೊಂದನ್ನು ಹೇಳಿಬಿಡುವುದು; ‘ಅರಳಿ’ ಬಂದೊಡನೆ ಸಮೃದ್ಧಿಯ ಅರ್ಥ ಹೇಳುವುದು; ‘ಗೂಬೆ’ ಬಂದ ತಕ್ಷಣ ಅಪಶಕುನ ಎನ್ನುವುದು; ‘ಕೋಗಿಲೆ’ ಎಂದೊಡನೆಯೆ ಜೀವಚೈತನ್ಯ ಎಂದುಬಿಡುವುದು… ಇದೇಕೆ ಹೀಗೆ! ‘ಕೋಗಿಲೆ’ ಎಂದರೆ ಜೀವಚೈತ್ಯನ್ಯ ಎಂದು ಎಲ್ಲಾದರೂ ಇದೆಯೇ? ಲೋಕದಲ್ಲಿ ಕೋಗಿಲೆ ಎಂಬುದಿದೆ, ಗೂಬೆ ಎಂಬುದಿದೆ… ಆದರೆ ಅವಕ್ಕೆಲ್ಲ ಶುಭ, ಅಶುಭ ಎಂಬ ಅರ್ಥಗಳನ್ನು ಲಗತ್ತಿಸಿ ಸಿದ್ಧ ಸಮಯಗಳನ್ನು ಹಾಕಿಕೊಂದು ನಮಗೆ ತೃಪ್ತಿ ಬರುವ ರೀತಿಯಲ್ಲಿ ಒಂದು ಕವಿತೆಯನ್ನು ಅರ್ಥೈಸುತ್ತೇವೆ. ‘ಹುತ್ತ’ ‘ಏಳೆಡೆಯ ಹಾವು’ ಇವುಗಳನ್ನೆಲ್ಲ ನೆಗೆಟಿವ್ ಆಗಿ ಯೋಚಿಸುವುದು… ಇನ್ನೊಂದು ಕಡೆ ಅದಕ್ಕೆ ಎದುರಾಗಿ ಪಾಸಿಟಿವ್ ಅರ್ಥದಲ್ಲಿ ಯೋಚನೆ ಮಾಡುವುದು… ಇವೆಲ್ಲ ನಡೆಯುತ್ತಿರುತ್ತದೆ. ಆದರೆ ಪದ್ಯದಲ್ಲಿ ಏನಾಗುತ್ತದೆ? ಸಾವಿನ ನೆಲೆಯನ್ನು ಮೀರಿ ಜೀವಚೈತನ್ಯದೆಡೆಗೆ ಚಲಿಸುವ, ಬರಡಿನಿಂದ ಸಮೃದ್ಧಿಯ ಕಡೆಗೆ ಚಲಿಸುವ ಎಂಬೆಲ್ಲ ಅರ್ಥಸಮೂಹ ಹೊರಡುತ್ತದೆ. ಇದನ್ನೆಲ್ಲಾ ಗಮನಿಸದಿದ್ದರೆ, ಓದುಗನಿಗೇ ಒದಗುವ ನಿರ್ದಿಷ್ಟಾನುಭವಕ್ಕೆ ಈಗಾಗಲೇ ಸಿದ್ಧಗೊಂಡ ಅರ್ಥವನ್ನು ಆರೋಪಿಸಿದಂತಾಗುತ್ತದೆ.

ಆದ್ದರಿಂದ ‘ಜೋಗಿ’ಯನ್ನು ನಾನು ಒಂದು ‘ರಹಸ್ಯ ಪಠ್ಯ’ ಎಂದು ಕರೆಯುತ್ತೇನೆ. ಒಂದೆಡೆ ಬೇಂದ್ರೆ ಹೇಳುತ್ತಾರೆ: ‘ಇದು ಮಂತ್ರ, ಅರ್ಥಕ್ಕೊಗ್ಗದ ಶಬ್ದಗಳ ಪವಣಿಸುವ ತಂತ್ರ’. ಇದು ಅವರ ಪ್ರಸಿದ್ಧವಾದ ‘ಗಾರುಡಿಗ’ ಎಂಬ ಕವಿತೆಯ ಸಾಲು. ಮಂತ್ರಕ್ಕೆ ಹೇಗೆ ಅರ್ಥವಿಲ್ಲವೋ ಹಾಗೆ, ‘ದೃಗ್ಬಂಧ ದಿಗ್ಬಂಧ ಪ್ರಾಣದ ಕೆಚ್ಚನು ಕಿಚ್ಚು ಹೊತ್ತಿಸಿದೆ ಲೀಲೆಯಲಿ ಅನಾಯಾಸ’. ನಾನೀಗ ಪ್ರಶ್ನೆ ಮಾಡಿದೆನಲ್ಲ, ಆ ಎಲ್ಲ ವ್ಯಾಖ್ಯಾನಗಳಿಗೆ ಅರ್ಥವಿಲ್ಲ ಎಂದಲ್ಲ. ಅದೂ ಕವಿತೆಯ ಒಂದು ಗ್ರಹಿಕೆಯೇ. ಅನೇಕ ವಿಮರ್ಶಕರು ಆ ಪದ್ಯಕ್ಕೆ ಬಹಳ ಚೆನ್ನಾಗಿಯೇ ಎದುರಾಗಿದ್ದಾರೆ, ಗುದ್ದಾಡಿದ್ದಾರೆ. ಆದರೆ ಮತ್ತೆ ಮತ್ತೆ ಈ ಹೊತ್ತಿಗೂ ಆ ಪ್ರಶ್ನೆ ನಮಗೆ ಏಳುತ್ತಲೇ ಇರುತ್ತದೆ. ಯಾರಾದರೂ ‘ಜೋಗಿ’ಯನ್ನು ವಿವರಿಸಬೇಕೆಂದು ನನ್ನನ್ನು ಕೇಳಿದರೆ ಅದರ ಬಗ್ಗೆ ಹೀಗೆಲ್ಲ ಹೇಳುವುದಿಲ್ಲ; ಸಮಂಜಸವಾಗಿ, ಹೇಳಬೇಕಾದ ರೀತಿಯಲ್ಲೇ ಹೇಳುತ್ತೇನೆ. ಆದರೆ ಇಲ್ಲಿ ಹೇಳುತ್ತಿಲ್ಲ. ಏಕೆಂದರೆ ಈ ಪ್ರಶ್ನೆ ಇಲ್ಲಿ ಎದುರಾಗಿದೆಯಲ್ಲ, ಏನು ಮಾಡಲಿ? ಇಲ್ಲಿ ಕುಳಿತಿರುವ ಒಬ್ಬೊಬ್ಬರೂ ತಮ್ಮದೇ ಆದ ಗ್ರಹಿಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಇದು ಬೇಂದ್ರೆಯವರ ಸ್ವಕೀಯ ಜೀವನಕ್ಕೆ ಸಂಬಂಧಿಸಿದ್ದು ಎಂಬಂತೆಯೂ ಮಾತನಾಡಬಹುದು. ಭಾವ ಸಂದರ್ಭಸೂಚಿಯಲ್ಲಿ ಅಂತಹ ಮಾತನ್ನು ಬೇಂದ್ರೆಯವರೇ ಹೇಳಿಬಿಡುತ್ತಾರೆ: ‘ನನ್ನ ಬದುಕಿನ ಕಾಳರಾತ್ರಿಯಲ್ಲಿ ಆದ ಒಂದು ಅನುಭವ’ ಎನ್ನುತ್ತಾರೆ. ಅಥವಾ ‘ಧಾರವಾಡದ ಸುತ್ತಲಿನ ನಿಸರ್ಗದ ಮಾಯೆಯಿಂದಲೂ, ಒಳಜೀವನದ ಕುದಿತದಿಂದಲೂ ಉದಿತವಾದ ಕವಿತೆ’ ಎನ್ನುತ್ತಾರೆ. ‘ಒಳಜೀವನದ ಕುದಿತ’ ಎಂಥದು ಎಂದು ನಮಗೆ ಗೊತ್ತಿಲ್ಲ. ಇಲ್ಲಿ ಕುಳಿತಿರುವ ನನಗೆ ‘ಧಾರವಾಡದ ಸುತ್ತಲಿನ ನಿಸರ್ಗದ ಮಾಯೆ’ಯೂ ಗೊತ್ತಿಲ್ಲ. ಅದನ್ನು ಬಗೆಯುತ್ತಾ ಹೋದರೆ ಅದು ಬೇರೆಯದೇ ಅದೊಂದು ಲೋಕವಾಗಿ ಬಿಡುತ್ತದೆ.

ಅಲ್ಲದೆ, ಇದರಲ್ಲಿ ವ್ಯಾಪಕವಾದ ಭೌಗೋಳಿಕ ವಿವರಗಳಿವೆ, ಕೆಲವು ಮಿಥ್‌ಗಳು, ಪ್ರತೀಕಗಳಿವೆ. ಏಳು ಹೆಡೆಯ ಸರ್ಪದ ಚಿತ್ರವಿದೆ, ಕೋಗಿಲೆಯಿದೆ, ಸ್ಥಳೀಯ ದೇವರುಗಳ ವಿವರಗಳಿವೆ, ಕಾಳಮ್ಮನ ಹೊಲವಿದೆ, ಆಚರಣೆಗಳ ಲೋಕವೊಂದಿದೆ, ಇನ್ನೂ ಅನೇಕ ವಿವರಗಳಿವೆ. ಇಲ್ಲಿ ಬಳಕೆಯಾಗಿರುವ ಒಂದೊಂದು ವಿವರವೂ ಸಹ ಏನೇನನ್ನನ್ನೋ ಹೇಳುತ್ತಿರುತ್ತದೆ. ಹಾಗಾಗಿ ಈ ಒಂದೊಂದು ವಿವರವೂ ಹೊಸ ಓದಿಗೆ ಮತ್ತೆ ಮತ್ತೆ ಆಹ್ವಾನ ಕೊಡುತ್ತದೆ. ಇದೊಂದೇ ಅಲ್ಲ, ಯಾವುದೇ ಶ್ರೇಷ್ಠ ಕವಿತೆ ಕೂಡ ಹೊಸ ಓದಿಗೆ ಮತ್ತೆ ಮತ್ತೆ ಆಹ್ವಾನ ಕೊಡುತ್ತದೆ. ಒಂದು ಪೀಳಿಗೆಗೆ ಕೊಟ್ಟ ಅನುಭವಕ್ಕಿಂತ ಮತ್ತೊಂದು ಪೀಳಿಗೆಗೆ ಬೇರೊಂದು ಅನುಭವ ಆಗುತ್ತದೆ. ಇವತ್ತಿನ ತರುಣ ತರುಣಿಯರಿಗೆ ಇದು ಯಾವ ರೀತಿಯ ಅನುಭವ ಕೊಡುವುದೆಂದು ನಾನು ಹೇಗೆ ಹೇಳಲಿ? ಇಡೀ ಕವಿತೆ ಒಂದು ಅಸಾಧ್ಯತೆಯ ಕುರಿತು ಮಾತನಾಡುತ್ತದೆ. ಈ ಕವಿತೆಯನ್ನು ‘ಜೋಗಿ’ ಎಂದು ಏಕೆ ಹೆಸರಿಸಲಾಗಿದೆ? ಇದು ಯಾವುದನ್ನು ಕುರಿತು ಏನನ್ನು ಹೇಳುತ್ತಿದೆ? ಇಲ್ಲಿನ ಎಲ್ಲ ಉಪಾಯಗಳು (ಡಿವೈಸಸ್) ಏಕೆ ಇಷ್ಟೆಲ್ಲ ಮಾಂತ್ರಿಕತೆಯನ್ನು ತೋರುತ್ತಿವೆ? ನಾನೇ ಒಮ್ಮೆ ಪೂರ್ತಿ ಕವಿತೆಯನ್ನು ಓದಿ ಬಿಡುತ್ತೇನೆ:

ಊರ ತುದಿಯ ಆ ಮೂರು ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ

ಹಳ್ಳ ಅಡಗಿ ಹರಿದಲ್ಲಿ, ತುಡುಗು-ದನ ತೊಂಡು ಮೇಯುವಲ್ಲಿ

ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ

ಇರುಳು ಅಂತನs ಹಗಲs ಗೂಕತಾವ ಅಲ್ಲಿ ಜೋಡಗೂಗಿ

ಅದನ ದಾಟಿ ಆ ಮಸಣವಾಟಿ, ಎಡಕಾಗಿ ಅದರ ಆಚೆ

ಕಾಮ ತನ್ನ ಹಚ್ಚಂಗಿ ಹಾಸಿಧಾಂಗಿಲ್ಲಿ ನೀರ ಪಾಚಿ

ಹೊಚ್ಚಿ ಹೊಂಡವನು ಮೆಚ್ಚ ಮಾಡತಾವೊ ಕಂಡ ಕಣ್ಣುಗಳಿಗೆ

ಪಾಚಿ ಸರಿಸಿದಾಗ ಕಪ್ಪು ನೀರು ಕರಿತಾಪ ಒಳಗ ಬಳಿಗೆ.

ಇದಕ್ಕೆಲ್ಲ ವ್ಯಕ್ತಿನಿಷ್ಟವಾದ ಏನೋ ಒಂದು ಅರ್ಥವನ್ನು ಕೊಡಲು ಬರುವುದಿಲ್ಲ. ಅದು ಕಪ್ಪು ನೀರು ಹೌದು, ‘ಕರಿತಾವ ಒಳಗ ಬಳಿಗೆ’ ಎನ್ನುವಲ್ಲಿ ಆಕರ್ಷಣೆಯೂ ಇದೆ. ಇಲ್ಲಿ ಕಪ್ಪು ಎಂದೊಡನೆ ‘ಡೆತ್’ ಎಂದುಬಿಡಲು ಆಗುವುದಿಲ್ಲ. ಅದಕ್ಕೆ ಒಂದು ಆಕರ್ಷಣೆಯೂ ಉಂಟು.

ಅದರ ಮುಂದ ಗವಿಗುಡ್ಡ ಅಡ್ಡ ಬರತsದ ನಮ್ಮ ಬಲಕ

ಆ ಪದಗಳೂ ಹಾಗೆಯೇ ಇವೆ. ಬಲಕ ಎಂದರೆ ನಮ್ಮ ಬಲಗಡೆಗೆ, ಹಾಗೆಯೇ ನಮಗೊಂದು ಶಕ್ತಿಯಾಗಿಯೂ ಬರುತ್ತಿದೆ.

ಅತ್ತತ್ತ ಹರುಹಿ ಹತ್ತೊತ್ತಿ ಬಂದ ಕಾಳಮ್ಮಗಿರುವ ಹೊಲಕ

ಆ ಹೊಲದ ನಟ್ಟನಡುವಿರುವ ಹುಣಿಸಿಮರ ಏರಿ ನೋಡಿದಾಗ

ಹತ್ತಗಿಡದ ಗುಂಪೊಂದು ಕಾಣತದ ಸಣ್ಣ ಏರಿಮ್ಯಾಗ

‘ಹುಣಿಸಿ’ ಎಂದೊಡನೆ ನಾವು ಯಾವುದೋ ಬೇರೆಯದೊಂದು ಕಲ್ಪನೆ ಕೊಟ್ಟು, ಹುಣಸೆ ಮರ ಇಂಥದಕ್ಕೆ ಸಂಕೇತ ಎಂದು ಹೇಳಿಬಿಡುತ್ತೇವೆ. ಹುಣಸೆ ಮರವೂ ಎಲ್ಲ ಮರಗಳ ತರಹ ಒಂದು ಮರವೇ. ಇಲ್ಲಿ ಹಲಸಿನ ಮರವೂ ಬರುತ್ತದೆ, ಅತ್ತಿ, ಅರಳಿ ಮರಗಳೂ ಬರುತ್ತವೆ. ‘ಜೋಗಿ’ ಪದ್ಯಕ್ಕೆ ತನ್ನದೇ ಆದ ಒಂದು ಸಸ್ಯಪ್ರಪಂಚವಿದೆ. ಅದಕ್ಕೆ ತನ್ನದೇ ಆದ ಪ್ರಾಣಿಪ್ರಪಂಚವಿದೆ, ತನ್ನದೇ ಆದ ಮನುಷ್ಯಪ್ರಪಂಚವಿದೆ, ಅದಕ್ಕೆ ತನ್ನದೇ ಆದ ಆಚರಣೆಯ ಪ್ರಪಂಚವಿದೆ.

ಅಲ್ಲಿ ತೊಗಲಬಾವಲೀ ಚೀರತಾವ ಭರತಿ ಹಗಲಿನೊಳಗ

ಹಿಂಡು ಪಾರಿವಾಳ ಹೊಕ್ಕು ಹೊರಡುತಾವ ಮತ್ತ ಒಳಗ ಹೊರಗ.

ಅಲ್ಲಿ ಹಬ್ಬಿ ಹರುಹ್ಯsದ ಬೇವಿಗೇ ಸುತ್ತ ಅಮೃತ ಬಳ್ಳಿ

ಹಾಲ ಸುರವತಾವ ಆಲ ಅಲ್ಲಿ ಅಲ್ಲಾಡತಾವ ಅಳ್ಳಿ

ಇಲ್ಲಿ ಹಾಲು ಸುರಿಸುವ ಆಲವೂ ಇದೆ, ತೊನೆದಾಡುವ ಅರಳಿಯೂ ಇದೆ. ಒಂದಕ್ಕೊಂದಕ್ಕೆ ಜೊತೆಯಾಗುತ್ತಿದೆ, ಎದುರಾಗುತ್ತಿದೆ, ಒಂದರ ಜೊತೆ ಒಂದು ತಳುಕು ಹಾಕಿಕೊಂಡಿದೆ.

ಅತ್ತಿಗಿಡಕ ಹತ್ಯಾವ ಹಲಸಿನ್ಹನಂಗ ಬುಡಕು ಕೆಂಪು ಹಣ್ಣು

ಜೇನು ತುಂಬಿ ತೊಟಗುಟ್ಟತಾವ, ಅದ ಬಯಸತಾವ ಕಣ್ಣು

ಈ ತೋಪಿನ್ಯಾಗ ಬೆಳದsದ ಹ್ಯಾಂಗೋ ಮೂಲ್ಯಾಗ ತಪ್ಪಿ ಮಾವು

ಅದರಡಿಗೆ ಹುತ್ತ, ಅದರಾಗ ಐತೆ ಒಂದೇಳ ಹೆಡೆಯ ಹಾವು

ಇದಕ್ಕೆ ಕಲಾವಿದ ಎಸ್.ಜಿ.ವಾಸುದೇವ್ ಅವರು ಬಹಳ ಅದ್ಭುತವಾದ ಚಿತ್ರವನ್ನು, ಮತ್ತೆ ಮತ್ತೆ ಕನಸಿನಲ್ಲಿ ಬರುವ ಚಿತ್ರವನ್ನು ಬಿಡಿಸಿದ್ದಾರೆ. ಈಗ ಅದು ವಿದೇಶದ ಯಾವುದೋ ಭಾಗವದಲ್ಲಿದೆ ಎಂದು ಕೇಳಿದೆ. ‘ಅದರಡಿಗೆ ಹುತ್ತ, ಅದರಾಗ ಐತೆ ಒಂದೇಳ ಹೆಡೆಯ ಹಾವು.’ ಇಲ್ಲಿರುವ ‘ಏಳು ಹೆಡೆಯ ಹಾವು’ ಒಂದು ಮಿಥ್.

ಆ ಮಾವಿನೊಳಗ ಈ ಸುಗ್ಗಿಯೊಳಗ ಬಂದsದ ಕೋಗಿಲೊಂದು

ತನ್ನ ಜೋಡಿ ಕರೆದ್ಹಾಂಗ ಕರೀತsದ ನನ್ನ ಬಾರs ಅಂದು

ಕೂಗೇ ಕೂಗತsದ ಕೂಗೇ ಕೂಗತsದ ಗಿರಣಿ ಕೆರೆಯೊ ಹಾಂಗ

ತೆರೆಪು ಇಲ್ಲ ಒಂದಳತಿ ಕೂಗತsದ ಬ್ಯಾಸರಿಲ್ಲಧಾಂಗ

‘ತನ್ನ ಜೋಡಿ ಕರೆದ್ಹಾಂಗ ಕರೀತsದ ನನ್ನ ಬಾರs ಅಂದು’ – ಇಲ್ಲಿ ಒಂದು ಹೆಣ್ಣಿನ ಪ್ರವೇಶವಾಗುತ್ತದೆ ಎಂದು ಅನೇಕ ವಿಮರ್ಶಕರು ಸೂಚಿಸುತ್ತಾರೆ. ಪ್ರವೇಶವಾಗಲೂಬಹುದು, ಆಗದೆಯೂ ಇರಬಹುದು! ‘ತನ್ನ ಜೋಡಿ ಕರೆದ್ಹಾಂಗ ಕರೀತsದ ನನ್ನ ಬಾರs ಅಂದು’ – ಎಂದೊಡನೆಯೆ ಅದು ಹೆಣ್ಣಿನ ಕರೆಯೇ ಆಗಿರಬೇಕೇಕೆ? ಇನ್ನು ‘ಗಿರಣಿ’ ಎಂದರೆ ನಮ್ಮ ಕಡೆಯ ಗಿರಣಿಯಲ್ಲ. ಉತ್ತರ ಕರ್ನಾಟಕದಲ್ಲಿ ಹಕ್ಕಿಗಳು ಬಂದು ಕಾಳುಗಳನ್ನು ತಿನ್ನದಿರಲಿ ಎಂದು ಸದಾಕಾಲ ಶಬ್ದ ಮಾಡುವ ಒಂದು ಸಾಧನವಿರುತ್ತದೆ. ಅದನ್ನು ಗಿರಣಿ ಎಂದು ಕರೆಯಲಾಗಿದೆ.

ತಿಳಿಯದ್ಯಾವುದೋ ಕಂಪು ಎಳೀತsದ ತುಂಬಿ ಹುಚ್ಚು ಆಗಿ

ಎಚ್ಚರಿಲ್ಲದs ಎತ್ತೊ ತಿರಗತಾವ ದಿಕ್ಕು ತೋರದಾಗಿ

ಬಂತು ಸುಗ್ಗಿ ಬಂದsದ ಸುಗ್ಗಿ ಬರತsದ ಸುಗ್ಗಿ ಎಂದು

ಕುಹೂ ಅನ್ನತದ ಕುಹೂ ಅನ್ನತದ ಕುಹೂಕ್ಕುಹೂ ಅಂದು

ತಾರ ಪಂಚಮದಾಗ ಕೋಗಿಲಾ ಕೂಗತsದೊ ಜೋಗಿ

ಯಾವ ಬಣ್ಣ ಅದಕಾವ ಕಣ್ಣು ನಾ ನೋಡಲೇನು ಹೋಗಿ?

ತೋಟವೆಲ್ಲ ಹೂವಾಗಿ ನಿಂತು ತೊಂಗೆಲ್ಲ ಗೊಂಚಲಾಗಿ

ಪಾಡು ಆಗತಾವ, ಹಣ್ಣು ಆಗತಾವ ಅದರ ಲಯಕ ತೂಗಿ.

ಮುಂಜಾವ ತೊಟ್ಟು, ಇರು ಹಂಗು ಬಿಟ್ಟು ಬರಿ ಹಾಂಗ ಕೂಗತsದೋ

ತಲಿ ಕಾವಿನೊಳಗ ಇಮ್ಮಾವಿನೊಳಗ ಬಿಸಿಗಾಲ ನೂಗತsದೋ

ಕೊಳಲ ನುಡಿಸಿಧಾಂಗ ಕುಹೂಹುಹೂಹೂ ಉಲಿತsದೋ ಜೋಗಿ

ಬೇರೆ ಕೆಲಸದಾಗ ಮನಸು ತೊಡಗದೋ ನೋಡಲೇನು ಹೋಗಿ?

 – ಎಷ್ಟೆಲ್ಲ ಪ್ರಶ್ನೆಗಳಿವೆ, ಇವಕ್ಕೆಲ್ಲ ಒಂದು ಉತ್ತರವೇ? ಅಥವಾ ಉತ್ತರಗಳ ಒಂದು ದೊಡ್ಡ ವಲಯವೇ?

ಬಂದೆ ಜೋಗಿ ಬಾ, ಬಾರೋ ಜೋಗಿ ಬಾ, ಏನು ಹೊತ್ತು ಬಂದಿ

ನೀನೆ ಹೇಳಿದಾ ನಾಮ ಜಪಿಸುವಾಗ ಬಂತೋ ಸುಗ್ಗಿ ಸಂಧಿ

ತಲೆಯ ಯಾವುದೋ ನಾಡಿಯೊಳಗ ಸುರುವಾತು ಸುಗ್ಗಿ ಸೊಲ್ಲು

ಮುಂದೆ ಕೇಳಿದರ ಅದs ತುಂಬಿತೋ ಮೂಲೆ ಮೂಲೆಯಲ್ಲು.

ಗುಡಿಗೆ ನಾನು ಹೊರಟಾಗ ಕರೀತsದ ಕುಹೂಕ್ಕುಹೂ ಎಂದು

ಮನದ ಜಪದ ನಡುನಡುವೆ ನುಡೀsತsದ ಓಂಕುಹೂ ಎಂದು

ಕನಸಿನೊಳಗ ನಾ ಸ್ವರಾ ಕೇಳಿ, ಮಾಮರಾ ಆಗತೇನೋ

ಅಂತ ಭ್ರಮಾ ಆಗ್ಯsದ ಮನಕ ನೀ ಬಂದೆ ಜೋಗಿ ಏನೋ!

ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೊ ಏನೋ

ಯಾಕ ಹೀಂಗ ಆಸರಂತ ಕೂಗತದ ಏನು ಇದಕೆ ಬ್ಯಾನ್ಯೋ?

ಸುತ್ತು ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕs

ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs

ಇಷ್ಟೆಲ್ಲ ಚಿತ್ರಗಳಿದ್ದೂ ಒಂದು ನಿರ್ಣಯಕ್ಕೆ ಬರಲಾಗುವುದಿಲ್ಲ, ಏಕೆ? ರಹಸ್ಯಮಯತೆ ಈ ಕವಿತೆಯಲ್ಲಿ ಕೊನೆಗೂ ರಹಸ್ಯವಾಗಿಯೇ ಉಳಿದಿದೆಯೇ? ಅಥವಾ ರಹಸ್ಯ ಎನ್ನುವುದೇ ಈ ಕವಿತೆಯ ವಸ್ತುವೇ? ಅಥವಾ ವಿಶ್ವಸೃಷ್ಟಿಯಲ್ಲಿರತಕ್ಕ ರಹಸ್ಯಮೂಲಗಳನ್ನು ಕುರಿತು ಪ್ರಶ್ನೆಗಳನ್ನು ಎತ್ತುವುದು ಈ ಕವಿತೆಯ ಉದ್ದೇಶವೇ?

ರಹಸ್ಯಮಯತೆ ಎಂಬುದು ಬಗೆಹರಿಯಲೇಬೇಕು ಎಂಬುದೆಲ್ಲಿದೆ? ಪದ್ಯದಲ್ಲಿ ತೋರಿಕೆಗೆ ಎಲ್ಲ ಬಗೆಯ ಚಿತ್ರಗಳೂ ಕಾಣುತ್ತಿವೆ. ಆದರೆ ಅಂತಿಮವಾಗಿ ಇದು ಇನ್‌ಅಕ್ಸೆಸಿಬಲ್ (ಹಿಡಿಯಲಾಗದುದು). ಇದನ್ನು ಅಕ್ಸೆಸಿಬಲ್ ಮಾಡಿಕೊಳ್ಳುವುದು ಸುಲಭ; ಅದನ್ನು ಮಾಡಿಕೊಳ್ಳಬಹುದು ಎಂದು ಮೊದಲೇ ನಾನು ಹೇಳಿದ್ದೇನೆ. ಆದರೆ ಅದು ನನಗೆ ಬೇಡ. ಅದನ್ನೆಲ್ಲ ಕನ್ನಡ ವಿಮರ್ಶಾ ಪರಂಪರೆ ಈಗಾಗಲೇ ಮಾಡಿದೆ. ಈ ಪದ್ಯಕ್ಕೆ ಎಷ್ಟು ರೀಡಬಿಲಿಟಿ (ಓದುವ ಸಾಧ್ಯತೆ) ಇದೆಯೋ ಅದನ್ನು ಈ ಪದ್ಯವು ಅಷ್ಟೇ ಅನ್‌ರೀಡಬಲ್ ಮಾಡಿಬಿಡುತ್ತದೆ. ಪಾಸಿಟಿವ್ ಅರ್ಥವನ್ನಾದರೂ ಕೊಡಬಹುದು, ನೆಗೆಟಿವ್ ಅರ್ಥಬೇಕಾದರೂ ಕೊಡಬಹುದು. ಅಲ್ಲಮ ‘ಗುಹೇಶ್ವರ’ ಎಂದೊಡನೆ ಪಾಸಿಟಿವ್ ಅರ್ಥಕೊಡುತ್ತೇವೆ, ಇನ್ನೆಲ್ಲೋ ‘ಗವಿ’ ಬಂದರೆ ನೆಗೆಟಿವ್ ಅರ್ಥ ಕೊಡುತ್ತೇವೆ. ಬೇಂದ್ರೆಯ ಒಂದು ಸಾಲು ತುಂಬ ಚೆನ್ನಾಗಿದೆ – ‘ಮನದ ಮಗಳಾದ ನುಡಿ ಹುರುಳಿನಲಿ ನೋಯುತಿದೆ.’ ನುಡಿಗೆ ಸತ್ವವಿದೆ, ಹುರುಳಿದೆ, ಆದರೂ ಏಕೋ ನೋಯುತಿದೆ. ‘ಹಾಡು ನೆಲೆಗಾಣದಲೆ ನವೆಯುತಿಹುದು’. ಹಾಡೆಂದರೆ ಸಂತೋಷವಲ್ಲ, ಅದು ನವೆಯುತ್ತಿದೆ. ನುಡಿಯು ಅರ್ಥವನ್ನು ಕೊಟ್ಟಿತು; ಹಾಗೆ ಅರ್ಥ ಕೊಟ್ಟರೂ ಒಳಗೆ ಅದಕ್ಕೆ ಬಹಳ ಯಾತನೆ. ಅರ್ಥವನ್ನು ಪಡೆಯುವುದು ಸುಖವಲ್ಲ, ತೃಪ್ತಿಯಲ್ಲ, ಬದಲಿಗೆ ಅರ್ಥವನ್ನು ಪಡೆಯುವುದೆಂದರೆ ಅದು ನಮ್ಮಲ್ಲೇ ಉಂಟುಮಾಡಿಕೊಳ್ಳುತ್ತಿರುವ ಯಾತನೆ. ಏಕೆಂದರೆ ಒಂದು ಪದ್ಯಕ್ಕೆ ಸಮೃದ್ಧವಾದ ಪೊಗದಸ್ತಾದ, ಠಾಕುಠೀಕಾದ ಅರ್ಥವನ್ನು ಹೇಳಿಬಿಡಬೇಕು ಅನ್ನುವ ಆತುರದಲ್ಲಿ ನಾವಿರುತ್ತೇವೆ. ಇನ್ನೊಂದೆಡೆ ಬೇಂದ್ರೆ ‘ಮಾತಿನ ಬಲೆಯೊಳಗೆ ಅರ್ಥದ ಇಲಿ’ ಎಂದು ತಮಾಷೆ ಮಾಡುತ್ತಾರೆ. ಮಾತೇ ಸಿಕ್ಕಿಹಾಕಿಸುವ ಬಲೆ ಇದ್ದ ಹಾಗೆ. ಈ ಬಲೆಯಲ್ಲಿ ಸಿಕ್ಕಿಕೊಂಡು ನರಳುವುದು ಅರ್ಥದ ಇಲಿಯಂತೆ!

‘ಅರ್ಥ’ ಎಂದರೆ ನಮ್ಮ ಮಾಮೂಲಿಯಾದ ಲೆಕ್ಸಿಕಲ್ ‘ಅರ್ಥ’ ಎಂದು ನಾವು ತಿಳಿದಿದ್ದೇವೆ. ಆದ್ದರಿಂದ ಕವಿಯಾದವನು ಶಬ್ದವನ್ನು ಅರ್ಥದ ಬಂಧನದಿಂದ ಪಾರು ಮಾಡಿತ್ತಿರುತ್ತಾನಂತೆ. ಹಾಗೆ ಪಾರಾದಾಗಲೇ ಶಬ್ದವು ಭಾವರೂಪಕ್ಕೆ ಸಿದ್ಧವಾಗುವುದು. ನಾವಾದರೂ ಮತ್ತೆ ಅದಕ್ಕೆ ಒಂದು ಅರ್ಥವನ್ನು ಹೇಳಿ ಅರ್ಥದ ಬಂಧನದಲ್ಲಿ ಶಬ್ದವನ್ನು ಮತ್ತೆ ಮತ್ತೆ ಸಿಕ್ಕಿಸುತ್ತಿರುತ್ತೇವೆ. ಕವಿಯ ಕೆಲಸ ಅರ್ಥದ ಬಂಧನದಿಂದ ಮಾತನ್ನು ಪಾರು ಮಾಡುವುದು. ಅದಕ್ಕೆ ಅರ್ಥ ಬಂದೊಡನೆ ನಾವು ಅದನ್ನು ಮತ್ತೆ ಬಂಧನದಲ್ಲಿ ಸಿಲುಕಿಸುತ್ತೇವೆ. ಬೇಂದ್ರೆ ಅನೇಕ ಪ್ರಭಾವಗಳಿಗೆ ಒಳಗಾದವರಾದರೂ ಅವನ್ನೆಲ್ಲ ಮೀರುವ ಬೌದ್ಧಿಕತೆಯನ್ನು ಅವರ ಕಾವ್ಯ ತಂತಾನೆ ನಿರ್ಮಿಸಿಕೊಂದಿದೆ. ಬೇಂದ್ರೆ ಕಾವ್ಯದ ಬೌದ್ಧಿಕತೆಯನ್ನು ಈಗಾಗಲೇ ಸಿದ್ಧವಾಗಿರುವ ಯಾವುದೇ ಬೌದ್ಧಿಕತೆಯೊಂದಿಗೆ ಸಮೀಕರಿಸಲಾಗದು. ಇದು ಅವರದ್ದೇ ಆದ ಕ್ರಿಯಾವಿಧಾನವಾಗಿದೆ. ‘ಹಕ್ಕಿ ಹಾರುತಿದೆ ನೋಡಿದಿರಾ’ ಕವಿತೆ ಬೇಂದ್ರೆ ಕಾಲವನ್ನು ಕುರಿತು ವಿವೇಚಿಸಲು ತಾನೇ ನಿರ್ಮಿಸಿಕೊಂಡ ಬೌದ್ಧಿಕತೆ ಹಾಗು ತಾತ್ವಿಕತೆಯಾಗಿದೆ. ‘ಏಳು ಕನ್ನಿಕೆಯರು’ ಮೊದಲಾದ ಪದ್ಯಗಳಲ್ಲಿಯೂ ಇದನ್ನೇ ನಾವು ನೋಡುವುದು.

ಇಡೀ ‘ಜೋಗಿ’ ಪದ್ಯದಲ್ಲಿ ಯಾವ ಚಿತ್ರ ಭೀಕರ, ಯಾವುದು ಸೌಮ್ಯ ಎಂದು ಹೇಳುವಂತಿಲ್ಲ. ಅವರ ಯಾವುದೇ ಕವಿತೆಯಲ್ಲಾದರೂ ಒಂದು ಭಯಾನಕತೆ ಇದೆ, ಒಂದು ಘರ್ಷಣೆ ಇದೆ, ಈ ಘರ್ಷಣೆಯೇ ಅವರಿಗೆ ಒಂದು ಬಗೆಯ ಕವಚ. ಬೇಂದ್ರೆಯವರ ಬಹಳ ಪ್ಲೆಸೆಂಟ್ ಎನ್ನುವಂತಹ ಕವಿತೆಗಳೂ ಕೂಡ ಭೀಕರ ವಾಸ್ತವದ ಒಡಲಿನಿಂದಲೇ ಹುಟ್ಟಿದವು. ಅವರ ಪ್ರ್‍ಏಮ ಕವಿತೆಗಳನ್ನೇ ನೋಡಿ. ‘ನಾನು ಬಡವಿ’, ‘ಬಿಸಿಲುಗುದುರೆ’ಯಂತಹ ಪದ್ಯಗಳು ಪ್ಲೇನ್ ಆದ, ಸರಳವಾದ ಪದ್ಯಗಳು ಎನ್ನುವಂತಿಲ್ಲ.

‘ಹಳ್ಳದ ದಂಡ್ಯಾಗ

ಮೊದಲೀಗೆ ಕಂಡಾಗ

ಏನೊಂದು ನಗಿ ಇತ್ತ,

ಏಸೊಂದು ನಗಿ ಇತ್ತ,

ಹಾರೀಕಿ ನಗಿ ಇತ್ತ.,’

ಮೂರು ಸಾಲುಗಳಾಗುತ್ತಲೇ ಪದ್ಯ ಬೇರೆಯದೇ ಆಗುತ್ತದೆ. ‘ಬಡತನದ ಬಲಿಯಾಗ ಬಾಳ್ವೆಯ ಕೊಲಿಯಾಗ ಸುಟ್ಟ ಹಪ್ಪಳಧಾಂಗ..’ ಒಂದು ಪ್ರೇಮಜೀವನಕ್ಕೆ ದುರಂತವನ್ನು ಎದುರಾಗಿಸುವುದೇ ಬಡತನ. ಹಾಗಾಗಿ ಅವರು ಬಹಳ ಆರಾಮವಾದ (ಕೆ.ಎಸ್.ನ. ಥರದ) ‘ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ’ ಎಂಬ ಪದ್ಯವನ್ನು ಬರೆಯಲಾರರು. ಇದು ತಮಾಷೆಯ ಮಾತಲ್ಲ. ಗಂಭೀರವಾಗಿ ಹೇಳುತ್ತಿದ್ದೇನೆ. ‘ನಾನು ನನ್ನ ಶಾರದೆ, ಪಗಡೆಯಾಡಬಾರದೆ’ ಎಂಬ ಸಾಲುಗಳನ್ನು ಬೇಂದ್ರೆಯವರೆಂದಿಗೂ ಬರೆಯುವುದಿಲ್ಲ, ಬರೆಯಲಾರರೂ ಕೂಡ. ಯಾವ ಟೆನ್ಷನ್‌ಗಳೂ ಇಲ್ಲದ, ‘ದಿಲ್ಲಗಿ’ ಎನ್ನುತ್ತೇವಲ್ಲ, ಅಂತಹ ಪದ್ಯಗಳನ್ನು ಬೇಂದ್ರೆಯಲ್ಲಿ ನೋಡಬೇಕು ಎಂದರೆ ಅಂತಹ ಯಾವ ಪದ್ಯವೂ ಅವರಲ್ಲಿಲ್ಲ. ಪ್ರೇಮಕವಿತೆ ಎಂದರೇನು? ಎಂದು ಇಂತಹ ಸಂದರ್ಭಗಳಲ್ಲೇ ನಾವು ಯೋಚಿಸಬೇಕಿರುವುದು. ‘ಲೋಕದಲ್ಲಿ ಅಂತಹ ಆರಾಮವಾದ ಪ್ರೇಮವಿಲ್ಲವೇ?’ ಎಂದರೆ, ಬೇಂದ್ರೆಯ ಪ್ರಕಾರ – ಅಥವಾ ನನ್ನ ಪ್ರಕಾರವೇ – ಅಂತಹ ಪ್ರೇಮವಿಲ್ಲ. ಕಠೋರ ವಾಸ್ತವದ ಪ್ರಪಂಚದಲ್ಲಿ ನಿಂತೇ ಬೇಂದ್ರೆ ಪ್ರೇಮವನ್ನು, ಭಕ್ತಿಯನ್ನು, ಧರ್ಮವನ್ನು ನೋಡುವುದು. ಅವರು ನೋಡುವ ಕ್ರಮವೇ ಅದು. ಅದಕ್ಕೇ ಅವರು ಅದನ್ನು ಬರೀ ಪ್ರೇಮವೆನ್ನದೆ ‘ಪ್ರೇಮತತ್ವ ದರ್ಶನ’ ಎಂದು ಕರೆಯುತ್ತಾರೆ. ಕಾಮ ಅವರ ಪಾಲಿಗೆ ‘ಮೈಗಾವು’, ‘ಬಾವು’; ಕಾಮವೆಂದರೆ ಸೆಲೆಬ್ರೇಷನ್ (ಸಂಭ್ರಮ) ಆಗುವುದಿಲ್ಲ. ‘ಏಳು ಕನ್ನಿಕೆಯರು’ ಥರದ ಪದ್ಯಗಳನ್ನು ನೀವೇ ಗಮನಿಸಿ. ಅದರಲ್ಲಿಯೂ ಅವರು ಗಂಡು ಹೆಣ್ಣುಗಳ ಸಂಬಂಧ ಸೂಕ್ಷ್ಮಗಳನ್ನು ಕುರಿತೇ ಮಾತಾನಾಡುತ್ತಿರುವುದು. ‘ಏಳು ಕನ್ನಿಕೆಯರು’… ಅವರು ಬೀಳುಕನ್ನಿಕೆಯರಲ್ಲ, ಏಳು ಕನ್ನಿಕೆಯರು, ಎಬ್ಬಿಸುವ ಕನ್ನಿಕೆಯರು…

ನಿದ್ದೆಗಡಲಿನಲ್ಲಿ ನಾನು

ಎದ್ದೇಳುತಲಿದ್ದೆನಾಗ

ಏಳು ಕನ್ನಿಕೆಯರು ಬಂದು

ಏಳು ಎಂದು ಎಂದರೋ – ಏಳು ಎಂದು ಎಂದರು

ನಿಂತೆ ನಡುವೆ ಗೊಮ್ಮಟನೊಲು

ನಿಂತವರು ಒರಗಿ ಸುತ್ತು

ದೀಪಮಾಲೆ ಕಂಬದಲ್ಲಿ

ದೀಪದ ಕುಡಿ ಕುಡಿಯಲೋ – ದೀಪದ ಕುಡಿ ಕುಡಿಯೊಲು

ಅಡಿಮುಡಿಗಳ ತುಟಿಕಟಿಗಳ

ಮಿಡಿದು ಹಿಡಿದು ನೋಡುತಿರಲು

ಮರ್ಮ ಕೆಣಕಿ ನೋಡಿದಂತೆ

ಕರ್ಮ ಕುದಿಗೆ ಬಂದಿತೋ – ಕರ್ಮ ಕುದಿಗೆ ಬಂದಿತು

‘ಜೋಗಿ’ ಪದ್ಯದಲ್ಲಿ ಯಾವ ರಹಸ್ಯಮಯತೆಯ ಕುರಿತ ಪ್ರಶ್ನೆಗಳಿವೆಯೋ ಹಾಗೆಯೇ ಇಲ್ಲೂ ಗಂಡು ಹೆಣ್ಣಿನ ಸಂಬಂಧದ ಹಲವು ಸ್ತರಗಳನ್ನು ಕಾಣಬಹುದು. ಅಥವಾ ಇದು ನಿದ್ದೆಯಲ್ಲೇ ನಡೆಯುತ್ತಿರುವ ಒಂದು ಸಂವಾದವಿದ್ದೀತೇ? ಅಥವಾ ಕನಸಿನ ಅನಂತರದ ಎಚ್ಚರದ, ನಿದ್ದೆಯೂ ಅಲ್ಲದ, ಎಚ್ಚರವೂ ಅಲ್ಲದ ಯಾವುದೋ ಯೋಗದಿಂದೆದ್ದ ಮಾತಿದ್ದೀತೇ?

ಕಲ್ಲು, ಗೊಂಬೆ, ಕೂಸುಗಳನು

ಎಲ್ಲ ನಂಬಿ, ನೆನೆದುಕೊಂಡೆ

ತಳವು ಕಾದ ಬೆಣ್ಣೆಯಂತೆ –

ಒಳಗೆ ಪ್ರಾಣ ಕರಿಗಿತೊ – ಒಳಗೆ ಪ್ರಾಣ ಕರಗಿತು

ನಡುಕ ಮಿಡುಕು ತೋರಗೊಡದೆ

ಅಡಕದಿಂದ ನಿಂತೆ ತಪಕೆ;

ಗೆದ್ದೆನೇನೊ ಎನ್ನುವಂತೆ

ಇದ್ದೆನೊಮ್ಮೆ ಮನದೊಳೋ – ಇದ್ದೆನೊಮ್ಮೆ ಮನದೊಳು

ಬೊಟ್ಟು ನೀರು ಬಿಡದ ಹಾಗೆ

ಬಟ್ಟೆಯಂತೆ ಹಿಂಡುತಿರಲು

ತೊಡೆಯ ಮೀಂಟಿ ಬಿಟ್ಟಳಾಗ

ಕಡೆಗೆ ಅವರೊಳೊಬ್ಬಳೋ – ಕಡೆಗೆ ಅವರಳೊಬ್ಬಳು

ಅಯ್ಯೋ ಎಂದು ತಿಲಿಯದಾಗಿ

ಮೈಯೆ ಬಾಯಿ ಬಿಟ್ಟ ಹಾಗೆ

ಬೆವರು ಬಂದ ಮೈಯ ತುಂಬ

ನವಿರಮುಳ್ಳು ನಿಂತಿತೋ – ನವಿರಮುಳ್ಳು ನಿಂತಿತು

ಸ್ವರಕೆ ಸ್ವರವು ಕೂಡಿಕೊಂಡು

ಹರಕೆ ಬರುತಲಿತ್ತು ಹಾಡಿ

ಡೊಳ್ಳುಬಿದ್ದ ತಂತಿಯಿಂದ

ಜೊಳ್ಳುನಾದವೆದ್ದಿತೋ – ಜೊಳ್ಳುನಾದವೆದ್ದಿತು

ಬೆಳಕಿನ ಕುಡಿ ಆರುವಂತೆ

ಚಳಕದ ಕನ್ನೆಯರು ಹಾರೆ,

ಹೇಡಿ ಮಣ್ಣ ಕಂಬದಂತೆ

ಗಾಡಿಯಳಿದು ಬಿದ್ದೆನೋ – ಗಾಡಿಯಳಿದು ಬಿದ್ದೆನು

ಏಳು ಕನ್ನಿಕೆಯರು ಬಂದು

ಬೀಳು ಎಂದು ಎನ್ನಲಿಲ್ಲ

ಸ್ಪರ್ಶ ಸ್ಪರ್ಶದಿಂದ ಮಾತ್ರ

ಹರ್ಷ ಹೆಪ್ಪು ಹೊಂದಿತೋ – ಹರ್ಷ ಹೆಪ್ಪು ಹೊಂದಿತು

ರಸವು ವಿರಸವಾಯಿತಂದು

ಹೊಸ ಸಮರಸ ಕೂಡಿದಾಗ

ಏಳು ಕನ್ನಿಕೆಯರೆ, ಬಂದು

ಆಳ ಮುಳುಗಿ ನೋಡಿರೇ – ಆಳ ಮುಳಿಗಿ ನೋಡಿರಿ

ಒಂದು ಕಾಲದಲ್ಲಿ ಒಂದು ಪದವನ್ನೂ ಬಿಡದಂತೆ ಇಂತಹ ಪದ್ಯಗಳನ್ನು ವಿಶ್ಲೇಷಣೆ ಮಾಡುತ್ತಿದ್ದೆ. ಹಲವು ಅರ್ಥಗಳಲ್ಲಿ ವಿವರಿಸುತ್ತಿದ್ದೆ. ಮುಂದೆ ಎರಡು ಪದ್ಯಗಳನ್ನು ಓದುತ್ತೇನೆ, ಆಮೇಲೆ ಇನ್ಯಾರಾದರೂ ಪದ್ಯವನ್ನು ಓದಿ ಮುಕ್ತಾಯ ಮಾಡಬಹುದು. ಇದೊಂದು ಜೋಡಿಕವಿತೆ – ‘ಮರೆಯುವಿಯೋ ಅರಿಯುವಿಯೋ’ ಹಾಗೂ ‘ಎಲ್ಲಿರುವೆ ರಾಜಗಾಂಭೀರಾ’. ಇದಕ್ಕೆ ಅವರೇ ಬರೆದಿರುವ ಭಾವಸಂದರ್ಭಸೂಚಿಯನ್ನು ಓದುತ್ತೇನೆ: ‘ಸತೀ ಎಂಬ ಒಂದು ಅರ್ಧಲಿಖಿತ ನಾಟಕದ ಎರಡು ಗೀತಗಳು’. ಆ ಅರ್ಧಲಿಖಿತ ನಾಟಕಗಳು ನಮಗೇನೂ ಸಿಕ್ಕಿಲ್ಲ; ‘ತುಮ್ ತುಮ್ ತುಂಬಿ ಬಂದಿತ್ತ ತಂಗೀ’ ಪದ್ಯವನ್ನು ‘ತಲೆದಂಡ’ ನಾಟಕಕ್ಕೆ ಬರೆದ ಹಾಡು ಎನ್ನುತ್ತಾರಲ್ಲ ಹಾಗೆ. ಪಾಟಲೀಪುತ್ರದ ರಾಜನೊಬ್ಬ ಮುನ್ನೂರು ಹೆಣ್ಣುಗಳನ್ನು ಮದುವೆಯಾಗಿ ವೈಶಾಲಿಯ ವಿರಕ್ತಶ್ರೇಷ್ಠಿ ಧ್ಯಾನಗುಪ್ತನ ಸತಿಯನ್ನು ಅರಮೆನೆಗೆ ಆಮಂತ್ರಿಸುತ್ತಾನೆ. ಅರಮನೆಯ ಸೆರೆಮನೆಯಲ್ಲಿದ್ದ ಆ ಮುನ್ನೂರು ಹೆಂಗೆಳೆಯರು ‘ರಾತ್ರಿಗೀತ’ ‘ಉದಯಗೀತ’ಗಳಾಗಿ ಹೇಳುವ ಎರಡು ಹಾಡುಗಳು ಇವು. ಮೊದಲನೆಯದು ರಾತ್ರಿಗೀತ. ಇದು ಎಲ್ಲ ಸೇರಿ ಹಾಡುವ ಒಂದು ಕೋರಸ್, ಒಂದು ಸಮೂಹಗಾನ, ಒಂದು ಪೆಥಾಸ್, ವಿಷಾದದ ಗೀತೆ.

ರಾತ್ರಿಗೀತ

ಎಲ್ಲಿ ಮರೆಯುವಿಯೋ | ಇಲ್ಲ ಅರಿಯುವಿಯೋ | ನಮ್ಮನ್ನ |       ||ಪಲ್ಲವಿ||

ಮನದನ್ನ, ಬಲುಚೆನ್ನ, ಮಿದುಚೆನ್ನ, ಸವಿಜೊನ್ನ, / ಬೆರೆಯುವಿಯೊ ನಮ್ಮನ್ನ      ||ಅ.ಪಲ್ಲವಿ||

ಹೃದಯ ಪಂಜರದಲ್ಲಿ ಗಿಳಿಯಾದೆವೆಂದೆವು / ಮಧುರ ಮೋಹನ ತೇಜಾ |ರಾಜ|

ನವರತ್ನ ಸಾರದ ಭವದ ಕಾಂತಾರದಿ ತೊರೆಯುವಿಯೊ ನಮ್ಮನ್ನ

ಎಲ್ಲಿ ಮರೆಯುವಿಯೋ ಇಲ್ಲ ಅರಿಯುವಿಯೋ ನಮ್ಮನ್ನ

ಮೊದಲ ಸೋಂಕಿಗೆ ಇನ್ನೂ ನೆನವು ನವಿರಾಗುತಿದೆ

ಮದನ ಸುಂದರರೂಪಾ | ಭೂಪಾ |

ಯುಗ ಆಗಿ ಹೋದವು, ನಗೆಗೂಡಿ ಮತ್ತೊಮ್ಮೆ/ ಕರೆಯುವಿಯೊ ನಮ್ಮನ್ನ

ಇರುಳು ಮುಸುಕಲು, ಬಂದು, ನೆರಳು ನೆರೆದಿಹೆವಿಲ್ಲಿ.

ಕರುಣಿ ಬಾರೈ ಮಾರಾ | ನೀರಾ | ಚೆಲುವ ಗೊಂಬೆಗಳಲ್ಲಿ

ಒಲುಮೆಯುಸಿರನು ತುಂಬಿ ಪೊರೆಯುವಿರೊ ನಮ್ಮನ್ನಾ

ಉದಯಗೀತ

ಎಲ್ಲಿರುವೆ ರಾಜಗಂಭೀರಾ – ನೀರಾ

ಹಾಳು ದೇಗುಲದಲ್ಲಿ ಗಾಳಿ ಗೋಳಿಡುವೊಲು ಉಸಿರಿಡುತಿದೆ ಜೀವಾ;

ಕಲ್ಲು ಗೋಡೆಯು ಕೂಡ ಸೊಲ್ಲುಗೊಡುತಲಿದೆ…

ಬೆಳಕ ಬೇಡುತಲಿದೆ, ಗಾಳಿ ಕಾಣದೆ ಬಾಡಿ ಬಳ್ಳಿಯಾಗಿಹ ಜೀವಾ;

ಮಲ್ಲಿಗೆಯಾದೆದೆ ಮೊಗ್ಗೆಯಾಗಿಯೆ ಇದೆ…

ಮುಗಿಲ ಚಿಕ್ಕೆಗಳೆಲ್ಲಾ ಮೊಗ ಕೆಳಗೆ ಹಾಕಿವೆ

ನೀರ ನೆರಳೊಲು ಜೀವ; ಅಲ್ಲಾಡುತಿವೆ ಎನುತ ‘ಅಮಾವಾಸ್ಯೆ ಹರುಹಿದೆ’…

ಕಾಣದ ವಸ್ತುವ ಕಾಣಬೇಕೆಂಬಾಸೆ ಮಿತಿಯ ಮೀರಿದೆ ಜೀವಾ,

ನಲ್ಲ, ನೀರಡಿಸಿದೆ, ಕಾವೇರಿ ಆರಿದೆ…

ತನ್ನ ಒಡವೆಯೆ ತನಗೆ ಎರವಾಗೆ ಹೊರತಾಗೆ

ನಿರ್ಜೀವವೀ ಜೀವ; ಇಲ್ಲಿ ರಂಭೆಯರೆಲ್ಲಾ ನಂಬಿ ಕುಳಿತಿಹರಲ್ಲೋ

ಎಲ್ಲಿರುವೆ ರಾಜಗಾಂಭೀರಾ – ನೀರಾ

ಹೆಣ್ಣುಗಳ ದಯನೀಯ ಸ್ಥಿತಿಯ ಒಂದು ರಾತ್ರಿಯ ಗೀತೆ. ಅಂದರೆ ಬೇಂದ್ರೆಯವರ ಪ್ರೇಮಗೀತೆಗಳಾಗಲಿ, ವಿರಹಗೀತೆಗಳಾಗಲಿ, ಯೌವನದ ಚೆಲ್ಲಾಟದ ಗೀತೆಗಳಾಗಲಿ, ಹದಿಹರೆಯದ ವಿಭಿನ್ನ ಅಭಿವ್ಯಕ್ತಿಗಳಾಗಲಿ ಎಂದಿಗೂ ಏಕೋದ್ದೇಶದಿಂದ ಕೂಡಿರುವುದಿಲ್ಲ. ‘ಜೋಗಿ’ ಪದ್ಯದಲ್ಲಿಯಂತೆಯೇ ಇಲ್ಲಿಯೂ ಆಗಿದೆ. ಅಂದರೆ, ಇಡೀ ಸೃಷ್ಟಿಯಲ್ಲಿ ಹರಡಿಕೊಂಡಿರುವ ವಿರೋಧಗಳೇ ಅವರ ಕಾವ್ಯದ್ರವ್ಯದ ಜೀವಾಳವಾಗಿದೆ. ‘ಜೋಗಿ’ಯಲ್ಲಿ ಪ್ರತಿಮೆಗಳು ಒಂದರಳಗೊಂದು ಹೆಣೆದುಕೊಂಡಿರಿವುದು ಒಂದರ ಜೊತೆಗೆ ಒಂದನ್ನು ಕಾಂಟ್ರಾಸ್ಟ್ ಮಾಡಲು ಎಂದು ಸುಲಭವಾಗಿ ಹೇಳಿಬಿಡಬಹುದು. ಈವರೆಗೆ ಓದಿದ ಎಲ್ಲ ಪದ್ಯಗಳೂ ಬೇರೆ ಬೇರೆ ಕಾಲಗಳಲ್ಲಿನ ಮನಸ್ಸಿನ ಭಿನ್ನ ಅವಸ್ಥೆಗಳನ್ನು ಕಾಣಿಸುತ್ತಿವೆ. ಇವು ಲೋಕವನ್ನು ನೋಡುತ್ತಿರುವ ನಮ್ಮ ಮನಸ್ಸಿನ ಭಿನ್ನ ಅವಸ್ಥೆಗಳು. ಜೀವತೈತನ್ಯದ ಚಿಮ್ಮುವಿಕೆಯೊಂದನ್ನೇ ಇಲ್ಲಿ ಮಾತನಾಡುತ್ತಿಲ್ಲ. ‘ಏಳು ಕನ್ನಿಕೆಯರ’ಲ್ಲಿ ಜೀವಚೈತನ್ಯದ ಚಿಮ್ಮುವಿಕೆಯೂ ಉಂಟು ಮತ್ತು ಅದರ ಶ್ರಿಂಕ್ ಆಗುವಿಕೆಯೂ ಉಂಟು. ‘ಅರಿಯುವಿಯೋ, ಮರೆಯುವಿಯೋ’ನಲ್ಲಿ ಅವರಲ್ಲೇ ಇರಬಹುದಾದ ಕಾಣಬೇಕೆಂಬಾಸೆಯೂ ಇದೆ, ಕಾಣದೆ ಹೋದ ವಾಸ್ತವವೂ ಇದೆ.

ಪ್ರಕೃತಿಯ ವಿವರಗಳಿರಲಿ, ಕಾಲದ ಕಲ್ಪನೆ ಇರಲಿ, ಮನುಷ್ಯನ ಮನಸ್ಸಿನ ಹಲವು ಸ್ತರಗಳಿರಲಿ, ಅಲ್ಲೆಲ್ಲ ಜೀವಚೈತನ್ಯದ ಸಾವೂ ಇದೆ. ಸಾವು ಎಂದರೆ ಮರೆವು ಎಂದರ್ಥ. ಚೈತನ್ಯ ಹಾಗೂ ಆ ಚೈತನ್ಯದ ಇಲ್ಲವಾಗುವಿಕೆ. ಮಹತ್ವದ ಕವಿಗಳು ಭಾಷೆಯ ಒಂದು ಮುಕ್ತ ವಲಯವನ್ನು ಆವರಿಸಿರುತ್ತಾರೆ. ಅರ್ಥಕ್ಕೇ ಬದ್ಧವಾದ ಶಬ್ದಗಳನ್ನು ಅವರು ಆಯ್ಕೆ ಮಾಡಿಕೊಳ್ಳುವುದಿಲ್ಲ. ಅರ್ಥಕ್ಕಿಂತ ಭಿನ್ನವಾದ ಒಂದು ಅರ್ಥವಲಯವನ್ನು, ಮುಕ್ತಾರ್ಥ ವಲಯವನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸುವುದು. ಮುಕ್ತವಾದ ಭಾಷಾ ವಲಯದ ನೆರವಿನಿಂದ ಕವಿಯು ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸುವನು. ಹೀಗಾಗಿ ಬೇಂದ್ರೆಯವರ ಕವಿತೆಗೆ ಅಸಾಧ್ಯವೂ ಒಂದು ವಸ್ತುವೇ. ಅಸಾಧ್ಯವನ್ನು ಸಾಧ್ಯ ಮಾಡುವ ಒಂದು ಸಂಘರ್ಷದ ಮುಖಾಮುಖಿಯೇ ಅವರ ಕಾವ್ಯದ ಮುಖ್ಯವಾದ ಲಕ್ಷಣ. ಆದ್ದರಿಂದಲೇ ಅವರ ಕವಿತೆಗಳಲ್ಲಿ ಮೇಲಿಂದ ಮೇಲೆ ಪ್ರಶ್ನೆಗಳನ್ನು ಕಾಣುವುದು. ಬೇಂದ್ರೆಯ ಕವಿತೆ ಎಂದಿಗೂ ಎಕ್ಸ್‌ಪ್ಲಿಸಿಟ್ ಅಲ್ಲ. ಅವರ ಕವಿತೆಯನ್ನು ಪೂರ್ಣಪ್ರಮಾಣದಲ್ಲಿ ತಿಳಿದುಬಿಟ್ಟೆವು ಎನ್ನುವಂತಿಲ್ಲ. ಇದು ಕೂಡ ಅಲ್ಲಮಪ್ರಭುವಿನಂತೆ; ಅವನನ್ನು ನಾವು ಎಷ್ಟೇ ಅರ್ಥೈಸಿದರೂ ಮತ್ತೆ ಅವನು ಅರ್ಥಕ್ಕೆ ಪಂಥಾಹ್ವಾನ ನೀಡುತ್ತಾನೆ. ‘ಎತ್ತಣ ಮಾಮರ ಎತ್ತಣ ಕೋಗಿಲೆ’ ಎಂದಾಗ ಆ ಸಂಬಂಧವನ್ನು ಒಮ್ಮೆಲೆ ಹೇಳಿಬಿಡಲಾಗುವುದೇ? ಅಲ್ಲಿ ಒಂದಲ್ಲ, ಹತ್ತಾರು ಸಂಬಂಧಗಳಿವೆ. ‘ಘನತರ ಚಿತ್ರದ ರೂಹ ಬರೆಯಬಹುದಲ್ಲದೆ ಪ್ರಾಣವ ಬರೆಯಬಹುದೇ ಅಯ್ಯಾ?’ಎಂದು ಅಲ್ಲಮ ನೇರವಾಗಿ ಕೇಳುತ್ತಾನೆ. ‘ದಿವ್ಯಾಗಮಂಗಳು ಹೇಳಿದ ಕ್ರಿಯೆಯಲ್ಲಿ ದೀಕ್ಷೆಯ ಮಾಡುಬಹುದಲ್ಲದೆ ಭಕ್ತಿಯ ಮಾಡಬಹುದೇ ಅಯ್ಯಾ?’ ಅಲ್ಲಮ ಇಂತಹ ಪ್ರಶ್ನೆಗಳನ್ನು ಏಕೆ ಕೇಳುತ್ತಾನೆ? ಅಂತಹ ಪ್ರಶ್ನೆಗಳು ಇರುವುದರಿಂದ ತಾನೆ? ಎಲ್ಲರೂ ‘ಭಕ್ತಿಯ ಮಾಡಬಹುದು’ ಎನ್ನುತ್ತಾರೆ. ಆದರೆ ಅಲ್ಲಮ ಅದನ್ನು ಪ್ರಶ್ನಿಸುತ್ತಾನೆ. ನಮಗಾದರೂ ಅದಕ್ಕೊಂದು ಉತ್ತರ ಬೇಕು. ಕವಿತೆ ಇರುವುದು ಉತ್ತರಗಳನ್ನು ಕಂಡುಕೊಳ್ಳಲು ಅಲ್ಲ. ಕವಿತೆಯನ್ನು ನಾವು ಅನುಭವಿಸಬಹುದೇ ವಿನಃ ಉತ್ತರಗಳನ್ನು ನೀಡಲು ಅದೊಂದು ಒಗಟಲ್ಲ. ಅದು ನೇರವಲ್ಲ, ಎಕ್ಸ್‌ಪ್ಲಿಸಿಟ್ ಅಲ್ಲ. ಸಂದಿಗ್ಧತೆ ಅದರ ಮುಖ್ಯ ಗುಣ. ಅದು ಯಾವುದೇ ಇಂಟರ್‌ಪ್ರಿಟೇಷನ್‌ಅನ್ನು ಇನ್ನೊಂದು ಇಂಟರ್‌ಪ್ರಿಟೇಷನ್‌ ಆಗಿ ಮಾಡುತ್ತದೆ. ವ್ಯಾಖ್ಯಾನಗಳು ಇರುವುದು ಒಂದಲ್ಲ, ಹಲವು. ಹೀಗೆ ಕವಿತೆಯಲ್ಲಿ ತೊಡಗುವಂತೆ ಮಾಡುವುದು ಮುಖ್ಯ.

ಆದ್ದರಿಂದ ಇಲ್ಲಿ ಕುಳಿತು ನನ್ನ ಮಾತುಗಳನ್ನು ಕೇಳುತ್ತಿದ್ದೇವೆ ಎಂದು ನೀವು ಅಂದುಕೊಂಡಿದ್ದರೂ ನಾನು ಹಾಗೆ ಭಾವಿಸಿಲ್ಲ. ನಾನು ನನ್ನ ಜೊತೆಗೇ ಮಾತನಾಡುತ್ತಿದ್ದೇನೆ, ನೀವೆಲ್ಲ ಅದನ್ನು ಒಂಚೂರು ಓವೆರ್‌ಹಿಯರ್ ಮಾಡುತ್ತಿರುವಿರಿ ಎಂದೇ ತಿಳಿಯುತ್ತೇನೆ. ಅಲ್ಲವೇ ಮತ್ತೆ? ನೀವೇ ಗಮನಿಸಿ: ಈ ಕವಿತೆಯ ಬಗ್ಗೆ ನಿಮ್ಮಗೆಲ್ಲರಿಗೂ ನಿಮ್ಮನಿಮ್ಮದೇ ಆದ ಒಂದು ಅರ್ಥ ಅಥವಾ ಒಂದು ಸಿಗ್ನಿಫಿಕೆನ್ಸ್ ಅನ್ನು ಪಡೆಯಲು, ಮಹತ್ವವನ್ನು ತಿಳಿಯಲು ಈ ಕವಿತೆ ನೆರವಾಗಿಲ್ಲವೇ? ಹಿಂದೆಲ್ಲ ಬೇಂದ್ರೆಯವರ ಕವಿತೆಯ ಬಗ್ಗೆ ಮಾತನಾಡಿ, ಕಡೆಗೆ ಅವರ ಬಗ್ಗೆ ಒಂದೆರಡು ಟೀಕೆಯ ಮಾತನ್ನಾಡಿ ಮುಗಿಸುವುದೇ ವಿಮರ್ಶೆ ಎಂದು ಭಾವಿಸಿದ್ದಂತೆ ನಾನು ಭಾವಿಸಿಲ್ಲ… ಪರವಾಗಿಲ್ಲ, ಎಲ್ಲೋ ಆರೋಗ್ಯ ತಪ್ಪಿದೆ ಅನ್ನಿಸಿತ್ತು; ಆದರೆ ಈಗ…! (ಆಶ್ಚರ್ಯ ವ್ಯಕ್ತಪಡಿಸುತ್ತಾ) ಇದು ನಿಜ… ನಮ್ಮಲ್ಲಿ ಆ ತರಹದ ವಿಚಾರಗಳುಂಟು… ಕವಿತೆಯನ್ನು ನಾವೆಲ್ಲ ಥೆರಪಿ ಎಂದೂ ಕರೆಯುವುದುಂಟು…

ಸಬ್‌ಟೈಟಲ್ಸ್ ಮತ್ತು ಇಡೀ ಲೇಖನವನ್ನು ಟೈಪಿಸಿ ಕೊಟ್ಟವರು ಶ್ರೀಕಾಂತ್  ಚಕ್ರವರ್ತಿ  

ಪ್ರತಿಕ್ರಿಯಿಸಿ