ಕಾವ್ಯಜೋಗಿ ಎಸ್. ಮಂಜುನಾಥ್

ನಮ್ಮ ಸಮಕಾಲೀನ ಕನ್ನಡ ಸಾಹಿತ್ಯ ಲೋಕ ಎಷ್ಟು ಶಿಥಿಲವಾಗಿದೆ ಎಂದರೆ, ಈ ಶಿಥಿಲತೆಗೆ ಕಾರಣವಾಗಿರುವ ಸಾಹಿತ್ಯೇತರ ಅಂಶಗಳನ್ನು ಗಮನಿಸಿದಾಗ ಈ ಸಾಹಿತ್ಯದ ಸಾವಯತೆಯೇ ಒಮ್ಮೊಮ್ಮೆ ಪ್ರಶ್ನಾರ್ಹವೆನಿಸಿಬಿಡುತ್ತದೆ. ಎಸ್. ಮಂಜುನಾಥ್ ಅಸುನೀಗಿದ ಜನವರಿ 31ರ ಆ ಸಂಜೆ (ಅಂದು ವರಕವಿ ಬೇಂದ್ರೆಯವರ ಹುಟ್ಟು ಹಬ್ಬವೂ ಆಗಿದ್ದು ಎಂಥ ಸೋಜಿಗ!) ನಾನು ನನ್ನ ಹತ್ತಾರು ಸಾಹಿತ್ಯ ಮಿತ್ರರಿಗೆ ‘ಸಮಕಾಲೀನ ಕನ್ನಡ ಕಾವ್ಯದ ಅತ್ಯುತ್ತಮ ಧ್ವನಿ ಇನ್ನಿಲ್ಲ’ ಎಂಬ ಸಂದೇಶ ಕಳಿಸಿದೆ. ಕೆಲವೇ ಕ್ಷಣಗಳಲ್ಲಿ ನಮ್ಮ ಹಿರಿಯ ಸಾಹಿತಿ ಚಂಪಾರಿಂದ ಕರೆ ಬಂತು. ಅವರು ಕೇಳಿದ ಪ್ರಶ್ನೆ: ‘ಈ ಎಸ್. ಮಂಜುನಾಥ್ ಯಾರು? ಎಲ್ಲಿಯವರು? ಅವರೇನು ಬರೆದಿದ್ದಾರೆ?’

ಇದು ಕನ್ನಡ ಸಾಹಿತ್ಯಲೋಕದ ಇಂದಿನ ದುರಂತ. ಮಂಜುನಾಥ್ ಬಲಿಯಾದದ್ದೂ ಇಂತಹ ದುರಂತದ ಒಂದು ಪರಿಣಾಮವೇ ಎಂದು ನಾನು ಭಾವಿಸಿದ್ದೇನೆ. ನಮ್ಮ ಪತ್ರಿಕೆಯ ಮಹಾ ಅಭಿಮಾನಿಯಾಗಿದ್ದ ಮಂಜುನಾಥ್ ಈ ಪತ್ರಿಕೆಗಾಗಿ ಹಲವು ಲೇಖನಗಳನ್ನು ಬರೆದುಕೊಟಿದ್ದನ್ನೂ, ಅವರ ಹಲವಾರು ಪದ್ಯಗಳು ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನೂ ಓದುಗರು ಗಮನಿಸಿರಬಹುದು. ಅವರಿಗೆ ನಮ್ಮ ಪತ್ರಿಕೆಯ ‘ನುಡಿ ನಮನ’ವಾಗಿ ‘ದ ಹಿಂದೂ’ ಗಾಗಿ ಆ ಪತ್ರಿಕೆಯವರ ಕೋರಿಕೆಯ ಮೇರೆಗೆ ಮಂಜುನಾಥ್ ಬಗ್ಗೆ ನಾನು ಬರೆದ ಒಂದು ಶ್ರದ್ಧಾಂಜಲಿ ಲೇಖನದ (ಅದು ಆ ಪತ್ರಿಕಯೆ 10.2.2017ರ ‘ಫ್ರೈಡೇ ರಿವ್ಯೂ’ ಪುರವಣಿಯಲ್ಲಿ ಪ್ರಕಟವಾಗಿದೆ) ಪೂರ್ಣ ಕನ್ನಡ ರೂಪವನ್ನು ಇಲ್ಲಿ ನೀಡುತ್ತಿದ್ದೇನೆ.-ಲೇ.

ಎಸ್.ಮಂಜುನಾಥರೊಂದಿಗೆ ಒಮ್ಮೆ ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಾ, ನಿಮ್ಮ ಕಾವ್ಯ ಶಿನ್ಜುನ ಮಾಂಸದಂಗಡಿ ಇದ್ದಂತೆ ಎಂದೆ. ಸ್ವಲ್ಪ ಗಾಬರಿಯಿಂದಲೂ, ಸ್ವಲ್ಪ ಕುತೂಹಲದಿಂದಲೂ ಅವರು ‘ಹಾಗೆಂದರೇನು?’ ಎಂದು ಪ್ರಶ್ನಿಸಿದರು. ನಾನು ಆಗ ತಾನೇ ಓದಿದ್ದ ಆ ಜೆನ್ ಕಥೆಯನ್ನು ಅವರಿಗೆ ಹೇಳಿದೆ. ಜೆನ್ ಗುರು ಶಿನ್ಜು ಒಂದು ಮಾಂಸದಂಗಡಿ ಇಟ್ಟಿದ್ದಾನೆ. ಗಿರಾಕಿಗಳು ಬಂದು ಒಳ್ಳೆಯ ಮಾಂಸ ಕೊಡು ಎಂದು ಕೇಳಿದಾಗಲೆಲ್ಲ ಆತ ನಿರ್ಲಿಪ್ತನಾಗಿ ಹೇಳುವುದು ಒಂದೇ ಮಾತು. ‘ಇಲ್ಲಿರುವುದರಲ್ಲಿ ಯಾವುದನ್ನಾದರೂ ತೆಗೆದುಕೊಳ್ಳಿ. ಇಲ್ಲಿರುವುದೆಲ್ಲ ಒಳ್ಳೆಯದೇ!’ ಮಂಜುನಾಥರ ಮುಖ ಅರಳಿತು. ಅವರು ತಮ್ಮ ಕಾವ್ಯದ ಬಗ್ಗೆ ಎಷ್ಟೇ ವಿಶ್ವಾಸ ಮತ್ತು ಹೆಮ್ಮೆಗಳನ್ನು ಹೊಂದಿದ್ದರೂ ಅವರ ಒಳಗೊಂದು ನೋವು ಹಾವಿನಂತೆ ಸರಿದಾಡುತ್ತಿತ್ತು. ಅದು ತಾನು ತುಂಬ ಒಳ್ಳೆಯ ಕಾವ್ಯವನ್ನೇ ಬರೆದಿದ್ದರೂ ಅದನ್ನು ಹಾಗೆ ಯಾರೂ ಗುರುತಿಸುತ್ತಿಲ್ಲ ಎಂಬ ನೋವು. ಹಾಗಾಗಿಯೋ ಏನೋ ಅವರು ಹೇಳಿದರು, ‘ ಅಲ್ಲಾ ನೀವು ನನ್ನ ಕಾವ್ಯದ ಬಗ್ಗೆ ತಕರಾರುಗಳನ್ನೂ ಮಾಡುತ್ತೀರಿ. ಹೀಗೂ ಹೇಳುತ್ತೀರಲ್ಲ?’ ನಾನು ಹೇಳಿದೆ: ‘ನಿಮ್ಮ ಅಂಗಡಿಯಲ್ಲಿರುವುದೆಲ್ಲ ಒಳ್ಳೆಯದೇ ಅಂದರೆ, ಬೇರೆ ಅಂಗಡಿಗಳಲ್ಲಿ ಅದಕ್ಕಿಂತ ಒಳ್ಳೆಯದಿಲ್ಲ ಅಂತಲ್ಲವಲ್ಲ? ಅಲ್ಲದೆ ನೀವು ಅತ್ಯುತ್ತಮವಾದದ್ದನ್ನು ಬರೆದುಬಿಟ್ಟಿದ್ದೀರಿ ಎಂದೂ ಅಲ್ಲವಲ್ಲ?’ ತನ್ನ ಕಾವ್ಯದ ಬಗ್ಗೆ ಸದಾ ವಿಶ್ವಾಸ ಮತ್ತು ಹೆಮ್ಮೆಗಳನ್ನು ಹೊಂದಿದ್ದ ಮಂಜುನಾಥ್ ಏನೋ ಯೋಚಿಸಿ ಹೇಳಿದರು, ‘ಹಾಗಾದರೆ ನೀವೇಕೆ ನನ್ನ ಕಾವ್ಯದ ಬಗ್ಗೆ ಒಂದು ಲೇಖನ ಬರೆಯಬಾರದು? ನನಗೂ ಸಹಾಯವಾದೀತು.’

ನಾನು ಹೇಳಿದೆ, ‘ನಿಮಗೆ ಗೊತ್ತಿರಬಹುದು ಮಂಜುನಾಥ್, ನಾನು ವೃತ್ತಿಪರ ವಿಮರ್ಶಕನಲ್ಲ. ಈವರೆಗೆ ನಾನಾಗಿ ನಾನು ಯಾವ ಸಾಹಿತ್ಯ ವಿಮರ್ಶೆಯನ್ನೂ ಬರೆದಿಲ್ಲ. ಅವರಿವರು ನಿರ್ದಿಷ್ಟ ಸಂದರ್ಭಗಳಿಗಾಗಿ ಕೇಳಿದರೆಂದು ಮಾತ್ರ ಬರದಿರುವುದು. ಆಯಿತು ಈಗ ನೀವು ಕೇಳಿದಿರೆಂದು ಬರೆಯುವೆ. ಆದರೆ ಕೊನೆಯಲ್ಲಿ, ಮಂಜುನಾಥ್ ಕೇಳಿದರು ಎಂದಷ್ಟೇ ಇದನ್ನು ಬರೆದಿರುವೆ ಎಂದು ಹಾಕಬೇಕಾಗುತ್ತದೆ!’ ಎಂದೆ. ಒಂದು ಕ್ಷಣ ತಡವರಿಸಿದ ಮಂಜುನಾಥ್, ‘ಅಯ್ಯೋ! ಹಾಗೆ ಮಾತ್ರ ಮಾಡಬೇಡಿ’ ಎಂದು ನಕ್ಕರು. ಮಹಾ ಸ್ವಾಭಿಮಾನಿ ಆತ.
ಆದರೆ ಅನತಿ ಕಾಲದಲ್ಲೇ ಮಂಜುನಾಥ್ ನನ್ನನ್ನು ತಮ್ಮ ಬಲೆಗೆ ಕೆಡವಿಕೊಂಡರು. 2005ರಲ್ಲಿ ಪ್ರಕಟವಾದ ಅವರ ಕವನ ಸಂಕಲನ ‘ಕಲ್ಲ ಪಾರಿವಾಳಗಳ ಬೇಟ’ದ ಬಿಡುಗಡೆ ಸಮಾರಂಭವನ್ನು ತಮ್ಮೂರು ಕೆ.ಆರ್. ನಗರದಲ್ಲಿ ಏರ್ಪಡಿಸಿದ್ದ ಅವರು ಅದರ ಆಹ್ವಾನ ಪತ್ರಿಕೆಯಲ್ಲಿ ಅಧ್ಯಕ್ಷತೆ ನನ್ನದೆಂದು ಅಚ್ಚು ಹಾಕಿಸಿ ಆಹ್ವಾನಿಸಿದರು. ಸ್ನೇಹಕ್ಕೆ ಕಟ್ಟು ಬಿದ್ದು ನಾನು ಹೋದೆ. ಪುಸ್ತಕ ಬಿಡುಗಡೆಗೆ ಜಯಂತ್ ಕಾಯ್ಕಿಣಿ ಬಂದಿದ್ದ ನೆನಪು. ಅಂದು ಕೂಡ ನಾನು ಹೇಳಿದ್ದು ನನ್ನ ಅದೇ ಮಾತುಗಳನ್ನೇ. ಆದರೆ ಬೇರೆ ನುಡಿಗಟ್ಟಿನಲ್ಲಿ. ನಾನು ಹೇಳಿದ್ದಿಷ್ಟು: ‘ಮಂಜುನಾಥ್ ನಮ್ಮ ನಡುವಿನ ಅಪರೂಪದ ಅಪ್ಪಟ ಕವಿ. ಅವರ ಮನಸ್ಸಿನಲ್ಲಿ ಕವಿತೆ ಬಿಟ್ಟು ಇನ್ನೇನೂ ಹುಟ್ಟದ ಸ್ಥಿತಿಯನ್ನು ಅವರು ತಲುಪಿದ್ದಾರೆ. ನೀವು ಕುವೆಂಪು ಅವರ ಕಾವ್ಯರಾಶಿಯಲ್ಲಿ ಹತ್ತಾರು ಹುಸಿ ಕವನಗಳನ್ನು ಹುಡುಕಬಹುದು. ಹಾಗೇ ಬೇಂದ್ರೆ ಕಾವ್ಯ ರಾಶಿಯಲ್ಲೂ ನಾಲ್ಕಾರು ಹುಸಿ ಕವನಗಗಳು ಕಂಡಾವು. ಆದರೆ ಮಂಜುನಾಥ್ ಬರೆದುದರಲ್ಲಿ ಒಂದೂ ಹುಸಿ ರಚನೆಯೆಂಬುದಿಲ್ಲ. ಪ್ರಯತ್ನದಲ್ಲಿ ಕೆಲವು ಸೋತಿರಬಹುದು; ಕೆಲವು ಗೆದ್ದಿರಬಹುದು. ಆದರೆ ಯಾವುವೂ ಕವನದ ಹೊರತಾಗಿ ಇನ್ನೇನೂ ಆಗಲು ಹೊರಟಂತೆ ಕಾಣುವುದಿಲ್ಲ’
ಇದು ಕೆಲವರಿಗೆ ತುಂಬ ದುಸ್ಸಾಹಸದ ಮಾತಾಗಿ ಕಂಡಿದ್ದು ನಿಜ. ಆದರೆ ನಾನು ಮಂಜುನಾಥರ ಆವರೆಗಿನ ಸುಮಾರು ಇಪ್ಪತ್ತು ವರ್ಷಗಳ ಕಾವ್ಯ ತಪಸ್ಸನ್ನು ತುಂಬ ಹತ್ತಿರದಿಂದ ಕಂಡಿದ್ದೆ. ‘ಎಲ್ಲವನ್ನೂ ಮುಟ್ಟಿ ಜುಮ್ಮೆನಿಸಿಕೊಂಡು/ ಎಲ್ಲವೂ ತಾನೇ ಆಗಿ ನಕ್ಕು ಕಂಡು / ಜಗದ ನೆದರೇ ಇಲ್ಲದ ಉಡಾಳ ಹುಡುಗನ ಹಾಗೆ / ನಡೆದು ಹೋಗುತ್ತಿದೆ ಸೀಟಿ ಹಾಕಿಕೊಂಡು’ ಎಂದು ತಮ್ಮ ಅಂದಿನ ಕವಿತೆಯನ್ನು ತಾವೇ ವರ್ಣಿಸಿಕೊಳ್ಳಬಲ್ಲಷ್ಟು ಆತ್ಮವಿಶ್ವಾಸವನ್ನು ಅವರಿಗೆ ನೀಡಿದ್ದ ಹಲವು ಕವಿತೆಗಳನ್ನು ಹೊತ್ತಿದ್ದ ಈ ಐದನೇ ಕವನ ಸಂಕಲನದ ಮುನ್ನ ಅವರು ‘ಸುಮ್ಮನಿರುವ ಸುಮ್ಮಾನ’ ಹೆಸರಿನಲ್ಲಿ ತಾವೋ ಕವಿತೆಗಳನ್ನು ಅನುವಾದಿಸಿ, ನಂತರ ‘ಬಾಹುಬಲಿ’, ‘ನಂದ ಬಟ್ಟಲು’ ಹಾಗೂ ‘ಮೌನದ ಮಣಿ’ ಎಂಬ ಕವನ ಸಂಕಲನಗಳ ಮೂಲಕ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದರು. ಮೇಲೆ ಉಲ್ಲೇಖಿಸಿದ ಅವರ ಕವಿತೆಯೇ ಸೂಚಿಸುವಂತೆ, ಜಗತ್ತನ್ನು ಇಡಿಯಾಗಿ ಗ್ರಹಿಸಿ, ಮುಟ್ಟುವ, ರೋಮಾಂಚನಗೊಳ್ಳುವ ಕಾವ್ಯ ಸಿದ್ಧಿಯನ್ನು ಅವರು ಪಡೆದಿದ್ದರು. ಅವರು ಯಾವಾಗಲೂ ಪ್ರತಿಪಾದಿಸುತ್ತಿದ್ದ, ‘ತಾನು ಬಳಸುವ ಭಾಷೆಯನ್ನು ಮತ್ತು ತಾನು ಮುಟ್ಟ ಬಯಸುವ ಮನಸ್ಸನ್ನು ಕಿಂಚಿತ್ತಾದರೂ ಹಿಗ್ಗಿಸದ್ದನ್ನು ಕವಿತೆ ಎಂದು ಕರೆಯಲಾಗದು’ ಎಂಬ ಮಾತಿಗೆ ಹಲವು ಸ್ತರಗಳ ಪ್ರಾತ್ಯಕ್ಷಿಕೆಗಳಂತಿದ್ದವು ಅವರ ಕವನಗಳು ಈಗ. ಅವರ ಈ ಬೆಳವಣಿಗೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆ.
*** *** ***
ನಾನು ಮತ್ತು ಮಂಜುನಾಥ್ ಮುವ್ವತ್ತು ವರ್ಷಗಳ ಗೆಳೆೆಯರು. ಅವರು ನನಗಿಂತ ಎಂಟು ವರ್ಷ ಚಿಕ್ಕವರು. ಆದರೆ ನಾನಾಗಲೀ ಅವರಾಗಲೀ ಎಂದಾದರೂ ಈ ವಯಸ್ಸಿನ ಅಂತರದಲ್ಲಿ ಮಾತಾಡಿದ ನೆನಪು ನನಗಿಲ್ಲ. ಏಕೆಂದರೆ ನಾವು ಸೇರಿದಾಗಲೆಲ್ಲ ಬಹುಪಾಲು ಮಾತನಾಡುತ್ತಿದ್ದುದು ಸಾಹಿತ್ಯದ ಬಗ್ಗೆಯೇ; ನಿರ್ದಿಷ್ಟವಾಗಿ ಕಾವ್ಯದ ಬಗ್ಗೆಯೇ. ನಾನು ವಯಸ್ಸಿನಲ್ಲಿ ಹಿರಿಯನಾದರೂ, ಕಾವ್ಯ ಕುರಿತ ಅವರ ಶ್ರದ್ಧೆ, ಪರಿಶ್ರಮ, ಅರಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬದ್ಧತೆ ನನ್ನಲ್ಲಿ ಅವರ ಬಗ್ಗೆ ಗೌರವಪೂರ್ಣ ಪ್ರೀತಿ ಹುಟ್ಟಿಸಿತ್ತು. ಹಾಗೇ ನನ್ನ ಬಗ್ಗೆಯೂ ಅವರಿಗೆ ವಿಶೇಷ ಪ್ರೀತಿ-ಅದರಗಳಿದ್ದಂತಿತ್ತು. ಅವರಿನ್ನೂ ತಮ್ಮ ಮೊದಲ ಕವನ ಸಂಕಲನ ‘ಹಕ್ಕಿ ಪಲ್ಟಿ’ ಪ್ರಕಟಿಸಿದ್ದಾಗ ಅವರನ್ನು ನಾನು 1987ರಲ್ಲಿ ಮಹಾ ಘಟಾನುಘಟಿಗಳೊಂದಿಗೆ-ಎಚ್. ಎಸ್. ಶಿವಪ್ರಕಾಶ್, ಸುಬ್ರಾಯ ಚೊಕ್ಕಾಡಿ, ಸ. ಉಷಾ, ಎಚ್. ಗೋವಿಂದಯ್ಯ ಮುಂತಾದವರೊಂದಿಗೆ-ಮಂಗಳೂರು ಆಕಾಶವಾಣಿಯ ರಾಜ್ಯೋತ್ಸವ ಕವಿಗೋಷ್ಠಿಗೆ ಆಹ್ವಾನಿಸಿದ್ದೆ. (ಇದಕ್ಕಾಗಿ ಮಂಜುನಾಥರ ಹೆಸರಿಗೆ ನನ್ನ ಮೇಲಧಿಕಾರಿಗಳಿಂದ ಅನುಮೋದನೆ ಪಡೆಯಲು ಪಟ್ಟ ಪಾಡಿನ ಕಥೆ ಬೇರೆಯೇ ಇದೆ!) ಆಗ ನಾನು ಅಲ್ಲಿ ಸಾಹಿತ್ಯ ವಿಭಾಗದ ಕಾರ್ಯಕ್ರಮ ನಿರ್ವಾಹಕನಾಗಿದ್ದೆ. ಅವರ ‘ಹಕ್ಕಿ ಪಲ್ಟಿ’ಯ ಬಹಳ ಪದ್ಯಗಳು ನಡೆಯಲು ಕಲಿಯುವ ಮಗುವೊಂದರ ತಿಪ್ಪ ತಿಪ್ಪ ಹೆಜ್ಜೆಗಳಂತಿದ್ದರೂ, ಅಲ್ಲಿ ಕನ್ನಡ ಕಾವ್ಯಕ್ಕೆ ಹೊಸ ಸಂವೇದನೆಯೊಂದನ್ನು ನೀಡಬಲ್ಲ ‘ಅಸಲಿಯತ್ತಿನ’ ಕವಿಯೊಬ್ಬನನ್ನು ನಾನು ಗುರುತಿಸಿದ್ದೆ. ‘ಹಕ್ಕಿ ಪಲ್ಟಿ’ ಪದ್ಯದ ‘… ಮರು ಕ್ಷಣ ಈ ಪ್ರಶ್ನೆ : ಏನಾದರೂ ಆಗಬೇಕೇಕೆ / ಹಕ್ಕಿಪಲ್ಟಿಯಂಥ ಘಟನೆಗಳ ಗಮನಿಸಲು ಶಕ್ಯವಿದ್ದರೆ ಸಾಲದೆ / ಇನ್ನುಳಿದಂತೆ ನಾವು ಆಗಲೆಳೆಸುವುದೆಲ್ಲ ಜಗಮೆಚ್ಚುಗೆಗಲ್ಲವೆ?’ ಎಂಬ ಸಾಲುಗಳು ನನ್ನನ್ನು ಹಿಡಿದು ನಿಲ್ಲಿಸಿದ್ದವು. ಇಲ್ಲಿನ ತನ್ನನ್ನು ತಾನು ಹೊಸದಾಗಿ ನೋಡಿಕೊಳ್ಳುವ ಪರಿ ಮತ್ತು ಧೈರ್ಯ ಬೆರಗು ಹುಟ್ಟಿಸಿತ್ತು. ಮತ್ತು ಕವನ ಸಂಕಲನಕ್ಕೆ ಈ ಪದ್ಯದ ಶೀರ್ಷಿಕೆಯನ್ನು ಕೊಡುವಲ್ಲಿ ಕೆಲಸ ಮಾಡಿದ ಅವರ ಕವಿಮನಸ್ಸಿನ ಸ್ವರೂಪವೂ ನನ್ನಲ್ಲಿ ಕುತೂಹಲಹುಟ್ಟಿಸಿತ್ತು. ಈ ಬಗ್ಗೆ ನನಗೆ ಈಗಲೂ ಹೆಮ್ಮೆ ಇದೆ.
ಅಂದು ಕವಿಗೋಷ್ಠಿಯ ನಂತರ ಗೋಷ್ಠಿಯ ಕೆಲವು ಕವಿಗಳು ಮತ್ತು ನನ್ನ ಇತರ ಕೆಲವು ಗೆಳೆಯರೂ ಸೇರಿ ನಡೆಸಿದ ‘ಭೋಜನ ಕೂಟ’ದ ಮಾತುಕತೆಯಲ್ಲಿ ಅವರಾಡಿದ ಈ ಒಂದು ಮಾತು ನನ್ನನ್ನು ಸೆಳೆಯಿತು. ‘ಕಾವ್ಯಕ್ಕೆ ಕಾವ್ಯವಾಗುವ ಗುರಿ (function) ಬಿಟ್ಟರೆ ಬೇರೆ ಗುರಿ ಇಲ್ಲ; ಇರಬಾರದು’. ಅದು ‘ಬಂಡಾಯ’ದ ಉಬ್ಬರದ ಕಾಲ. ಕಾವ್ಯಕ್ಕೆ ಸಾಮಾಜಿಕ ಕಳಕಳಿ ಮುಖ್ಯ, ಅದು ಜನಪರವಾಗಿರಬೇಕು, ಜೀವಪರವಾಗಿರಬೇಕು ಇತ್ಯಾದಿ ಘೋಷಣೆಗಳೂ, ನಂಬಿಕೆಗಳೂ, ಒತ್ತಾಯಗಳೂ ಪ್ರಚಲಿತವಾಗಿದ್ದ ಕಾಲ. ಈ ಪ್ರವಾಹದ ವಿರುದ್ಧ ಸೆಟೆದು ಈಜಬಯಸುವ ಈ ಕಿರಿಯನ ಕಾವ್ಯಬದ್ಧತೆ ನನ್ನನ್ನು ಸೆಳೆಯಿತು. ನಾನವರಿಗೆ ಹೇಳಿದ್ದೆ: ‘ನೀವು ಪ್ರವಾಹದ ವಿರುದ್ಧ ಈಸಿ ಜಯಿಸಬೇಕಾದರೆ, ಮೊದಲು ನಿಮ್ಮ ಕಾವ್ಯ ನವ್ಯದ ಜಟಿಲತೆಗಳನ್ನು ಬಿಟ್ಟು ಹೊರಬರಬೇಕಿದೆ.’ ಏಕೆಂದರೆ ಆವರೆಗಿನ ಅವರ ಕವಿತೆಗಳ ಭಾಷೆ ಒಡೆದು ಹೋದಂತಿದ್ದು, ಅವರ ಲೋಕ ಗ್ರಹಿಕೆಯ ಪ್ರಕ್ರಿಯೆಯಲ್ಲಿ ಕೆಲವು ಕಂದಕಗಳು ಕಾಣುತ್ತಿದ್ದವು. ಇದರ ಫಲವಾಗಿ ಅವರ ಹಲವು ಕವನಗಳನ್ನು ಅವಿಶದತೆ ಆವರಿಸಿದಂತಿತ್ತು.

ಅಂದು ನನ್ನ ಆ ಮಾತಿಗೆ ಅರ್ಧ ಸಮ್ಮತಿಯ ತಲೆಯಾಡಿಸಿದ್ದ ಮಂಜುನಾಥ್ಗೆ ನಂತರದ ದಿನಗಳಲ್ಲಿ ಅದು ಪೂರ್ತಿ ಮನವರಿಕೆಯಾದಂತೆ (ಅದನ್ನು ಅವರು ನಂತರದ ತಮ್ಮ ‘ಬಾಹುಬಲಿ’ ಸಂಕಲನದ ಮುನ್ನಡಿಯಲ್ಲಿ ಬರೆದುಕೊಂಡಿದ್ದಾರೆ) ತಮ್ಮ ಕಾವ್ಯ ಗುರುವನ್ನು ಬದಲಾಯಿಸಿಕೊಂಡರು. ಯು. ಆರ್ ಅನಂತಮೂರ್ತಿಯವರನ್ನು ಬಿಟ್ಟು ಪು.ತಿ.ನ. ಬಳಿಗೆ ಹೋದರು. (ನಂತರ ಇದನ್ನು ಅವರು ನನ್ನ ಬಳಿ ತೋಡಿಕೊಂಡಿದ್ದು ಹೀಗೆ : ‘ಅಲ್ಲಾ ನೋಡಿ ನಾಗಭೂಷಣ್ ಈ ನವ್ಯದವರ ಸಣ್ಣತನ. ಅನಂತಮೂರ್ತಿ ಎಂದೂ ನನಗೆ, ನೋಡಯ್ಯಾ ಮೈಸೂರಿನಲ್ಲಿ ಕುವೆಂಪು, ಪುತಿನರಂತಹ ದೊಡ್ಡ ಕವಿಗಳಿದ್ದಾರೆ. ಅವರನ್ನೂ ನೋಡಿ ಮಾತಾಡಿಸಿಕೊಂಡು ಬಾ ಅಂತ ಎಂದೂ ಹೇಳಲಿಲ್ಲ!’) ಪು.ತಿ.ನ., ಅವರಿಗೆ ‘ದೇಶೀಯತೆ, ಪ್ರಸನ್ನತೆ ಮತ್ತು ವಿಶದತೆ’ ಎಂಬ ಕಾವ್ಯ ಕುರಿತ ಅವರ ಮೂರು ಮುಖ್ಯ ಪಾಠಗಳನ್ನು ಹೇಳಿದರು. ಅದರ ಪರಿಣಾಮಗಳನ್ನು ನಾವು ಅವರ ಮುಂದಿನ ಸಂಕಲನಗಳಲ್ಲಿ ಮಸುಕುಮಸುಕಾಗಿಯಾದರೂ ಕಾಣಬಹುದು.

ಜೊತೆಗೆ ತಾವೋ ಪದ್ಯಗಳ ಅನುವಾದದ ಮೂಲಕ ಗಳಿಸಿದ ಹೊಸ ಲೋಕದೃಷ್ಟಿ ಮತ್ತು ಭಾಷಾ ಕೌಶಲ್ಯವನ್ನೂ. ಆ ಮೂಲಕ ಅವರು ವಿಶೇಷವಾಗಿ ಮನಗಂಡದ್ದು, ಈ ಭೂಮಿಯೇ ಆಕಾಶವನ್ನು ಸೃಷ್ಟಿಸಿರುವುದು ಎಂಬ ಸತ್ಯವನ್ನು. ಹಾಗಾಗಿಯೇ ‘ಬಾಹುಬಲಿ’ ಸಂಕಲನದ ‘ಸೇಬು’ ಎಂಬ ಕವನದ ಅವರ ‘ಅವಳನ್ನೂ ಅವಳ ಹಲ್ಲನ್ನೂ / ನಾಲಗೆ ಎಂಜಲನ್ನೂ ದೇವರೇ ಮಾಡಿದ \ ದುಂಡಗೆ ಫಳ ಫಳ ಹೊಳೆವ \ ರಸಭರಿತ ಕೆಂಪು ಫಲ / ಈ ಸೇಬನ್ನೂ / ಆದರೂ ದೇವರು ಮಾಡಿದ ಹಣ್ಣಿಗೆ ಬೆಲೆಯಿಲ್ಲ / ಅವಳು ಕಚ್ಚಿದ ಸೇಬಿಗೆ ಸಾಟಿಯಿಲ್ಲ’ ಎಂಬ ಹಾಗೂ ‘ನಂದಬಟ್ಟಲು’ ಸಂಕಲನದ ‘ವಸ್ತು’ ಕವನದ ‘ವಸ್ತುಗಳ ಜೀವ ಯಾರಿಗೆ ಕಾಣುವುದು? / ಬಲ್ಲವರು ಕಣ್ಣಲ್ಲಿ ಅದ ಭೋಗಿಸುವರು / ಅವರು ಕಣ್ಣು ಹೊರಳಿಸಲು ಬೇಸರಗೊಂಡಪ್ಸರೆಯರು / ಮರಳಿ ನಮ್ಮ ಪಾಲಿಗೆ ವಸ್ತುಗಳಾಗುವರು‘ ಎಂಬ ಲೌಕಿಕ-ಅಲೌಕಿಗಳನ್ನು ಏಕತ್ರಗೊಳಿಸುವ ಅದ್ಭುತ ಸಾಲುಗಳು ಸೃಷ್ಟಿಯಾದದ್ದು.

ಹೀಗೆ ‘ಮಾತು ಮಂತ್ರ ಕವಿತೆಯೆಂಬೆಲ್ಲ ಕರಣಗಳಿಂದ / ನಿನ್ನಾಕೃತಿಯ ತಡವಲು ಹವಣಿಸುತ್ತಿರುವ / ಮೂಕ ಮಕ್ಕಳು ನಾವು -ನುಡಿಯೇ / ನಿನ್ನ ಸುಳಿವೆಂತು ದೊರಕೀತು ನಮಗೆ?’ ಎಂದು ಆರ್ತಿಸುತ್ತಾ ಕಾವ್ಯವನ್ನು ಅದರ ಇಡಿತನದಲ್ಲಿ ಪಡೆಯಲು ಹವಣಿಸಿದ ಮಂಜುನಾಥ್, ಆ ಸುಮಾರು ಇಪ್ಪತ್ತು ವರ್ಷಗಳಲ್ಲಿ ಕಾವ್ಯಜೋಗಿಯಂತೆ ತಮ್ಮ ಕವನಗಳನ್ನು ಕೇಳಬಯಸುವವವರ ಮನ-ಮನೆಗಳಿಗೆಲ್ಲ ತಿರುಗಿದರು. ನಾವಿದ್ದೆಡೆಯಲ್ಲೆಲ್ಲ ಬಂದು ದಿನಗಟ್ಟಲೆ ಠಿಕಾಣಿ ಹೂಡಿ ದಣಿವರಿಯದೆ ಕವಿತೆಗಳನ್ನು ಓದುತ್ತಿದ್ದರು. ಹೋದ ಮನೆಗಳ ಮಕ್ಕಳನ್ನೂ ಬಿಡದೆ ಕವಿತೆ ಹಂಚುತ್ತಿದ್ದರು. (ಅವರ ‘ಬಾಹುಬಲಿ’ ಮತ್ತು ‘ನಂದಬಟ್ಟಲು’ಗಳಲ್ಲಿ ಮಕ್ಕಳನ್ನುದ್ದೇಶಿಸಿ ಬರೆದ ಕವಿತೆಗಳು ಇವೆ) ಆಗಲೇ ಅವರು ‘ಸಂತಸದಲ್ಲಿರುವ ಮನುಷ್ಯನತ್ತ / ಬಿಡದೆ ಮುಗುಳ್ನಗಬೇಕು /ಹಾಡಿಗಾಗಿ ಹಾತೊರೆದವನ /ಬಳಿ ಹೋಗಿ ಹಾಡಬೇಕು / ಕವಿತೆಗಾಗಿ ಹಸಿದವನ ಬಾಗಿಲ / ನಡುರಾತ್ರಿಯಲ್ಲಿ ತಟ್ಟಬೇಕು’ ಎಂದು ಬರೆದದ್ದು. (‘ಕಲ್ಲ ಪಾರಿವಾಳಗಳ ಬೇಟ’)

ಎಂಥ ಹುಚ್ಚಿದು! ಆಗಲೇ ನಾವು ‘ಮಂಜುನಾಥ್ ತಿಂದುಂಡು ಹಾಸಿ ಹೊದೆಯುವುದೆಲ್ಲ ಕಾವ್ಯವನ್ನೇ!’ ಎಂದು ಹಾಸ್ಯ ಮಾಡುತ್ತಿದ್ದುದು. ಆದರೆ ಈ ಹುಚ್ಚು ಒಮ್ಮೊಮ್ಮೆ ಮೇರೆ ಮೀರುತ್ತಿತ್ತು. ಅದು ಅವರ ತಮ್ಮ ಕವಿತೆಗಳನ್ನು ಓದಿ ಸುಮ್ಮನಾಗದೆ ತಮ್ಮದೇ ಕಾವ್ಯ ಮೀಮಾಂಸೆಯ ಬಗ್ಗೆ ಗಂಟೆಗಟ್ಟಲೆ ಕೊರೆಯಲು. ಶುರುಮಾಡಿದಾಗ. ಅದು ಹಲವರಿಗೆ ಅವರ ಕಾವ್ಯದ ಸಮರ್ಥನೆಯಂತೆಯೂ ಕೇಳಿಸತೊಡಗಿತ್ತು. ಅದಕ್ಕೆ ಕಾರಣವೂ ಇತ್ತು. ನಾನು ನನ್ನ ಈ ಲೇಖನದ ಆರಂಭದಲ್ಲಿ ಸೂಚಿಸಿದಂತೆ, ತಮ್ಮ ಕಾವ್ಯವನ್ನು, ಅದರ
ಅನನ್ಯತೆಯನ್ನು ಯಾರೂ ಗುರುತಿಸುತ್ತಿಲ್ಲ ಎಂಬ ನೋವು ಅವರನ್ನು ತೀವ್ರವಾಗಿ ಕಾಡತೊಡಗಿತ್ತು. ಸಹಜವಾಗಿಯೇ ಅವರ ಕವನಗಳನ್ನು ಮೆಚ್ಚಿ, ಪ್ರೋತ್ಸಾಹಿಸಿ, ತಮ್ಮ ಪತ್ರಿಕೆಯಲ್ಲಿ ವೇದಿಕೆ ಒದಗಿಸಿ ಅವರಲ್ಲಿ ಹೆಮ್ಮೆ (ಮತ್ತು ಸ್ವಲ್ಪ ಹಮ್ಮೂ) ಹುಟ್ಟಿಸಿದ್ದ ಪಿ. ಲಂಕೇಶ್ರ ಹಠಾತ್ ನಿಧನ ಅವರನ್ನು ಕಂಗೆಡಿಸಿತ್ತು. ಅವರಿಗೆ ಕಾವ್ಯಕ್ಷೇತ್ರದ ಯಾವ ಸಾರ್ವಜನಿಕ ಮಾನ್ಯತೆಗಳೂ-ಸಾಂಸ್ಕೃತಿಕ ಉತ್ಸವಗಳ ಅಥವಾ ಅಕಾಡೆಮಿಗಳ ಕವಿ ಗೋಷ್ಠಿಗಳಾಗಲೀ, ಪುರಸ್ಕಾರಗಳಾಗಲೀ-ಸಿಕ್ಕಿರಲಿಲ್ಲ. ದೊರೆತ ಏಕೈಕ ಮಾನ್ಯತೆಯಾಗಿದ್ದ ಪುತಿನ ಪ್ರಶಸ್ತಿಯನ್ನೂ ಇನ್ನೋರ್ವ ಕವಿಯೊಂದಿಗೆ ಹಂಚಿ ಕೊಡಲಾಗಿತ್ತು. ಇದಕ್ಕೆಲ್ಲ ಮುಖ್ಯ ಕಾರಣ, ಕಾವ್ಯ ಎಂದರೇನು ಎಂಬ ಪ್ರಶ್ನೆ ಕುರಿತ ಅವರ ವ್ರತನಿಷ್ಠೆಯ ಕಟುನಿಷ್ಠುರ ಎಂಬಂತಹ ನಿಲುವು. ಈ ವ್ರತನಿಷ್ಠೆ ಒಮ್ಮೊಮ್ಮೆ ಮಾತಿನ ‘ಹದ’ ತಪ್ಪಿ ದೊಡ್ಡವರ (ಉದಾ: ಕುವೆಂಪು) ಕಾವ್ಯವನ್ನೂ ಎದುರು ಹಾಕಿಕೊಂಡು ಮಂಜುನಾಥ್ ಅನುಚಿತವಾಗಿ ಸಾಹಿತ್ಯ ಕ್ಷೇತ್ರದ ಸಾಮಾಜಿಕ ನ್ಯಾಯವಾದಿಗಳ ಬಹಿಷ್ಕಾರಕ್ಕೂ ಒಳಗಾದದ್ದುಂಟು. ಮಂಜುನಾಥ್ಗೆ ಸ್ಥಳೀಯವಾದ ಕಾವ್ಯ ರಸಿಕ ಗೆಳೆಯರ ಒಂದು ಸಣ್ಣ ಗುಂಪಿನ ಅಭಯವಿತ್ತಾದರೂ ಒಳ್ಳೆಯದನ್ನು ಬರೆದವನ ಸಹಜ ದೊಡ್ಡ ನಿರೀಕ್ಷೆಗಳೂ ಅವರಲ್ಲಿದ್ದವು. ಅವರೂ ಉಪ್ಪು ಹುಳಿ ಖಾರ ಉಣುವ ಹುಲು ಮಾನವರೇ ತಾನೆ? ಆದರೆ ಸಾಹಿತ್ಯ ಕ್ಷೇತ್ರದ ಪಾರುಪತ್ತೇದಾರರ ಕೆಟ್ಟ ಕಣ್ಣು ಅವರ ಮೇಲೆ ಬಿದ್ದಂತಿತ್ತು. ಅದರಿಂದ ಅವರು ಹಲವು ಬಾರಿ ‘ಖಿನ್ನತೆ’ಗೆ ಜಾರುತ್ತಿದುದನ್ನು ನಾನು ಬಲ್ಲೆ.

ಈ ಸಂದರ್ಭದಲ್ಲೇ, ಅವರ ಕಾವ್ಯದ ನಿರ್ಣಾಯಕ ಸಾಲುಗಳೆಂದು ಇತ್ತೀಚೆಗೆ ಕೆಲವರು ಉಲ್ಲೇಖಿಸುವ ‘ಭಕ್ತಿ’ ಎಂಬ ಕವನದ ‘ಮಾನಿನಿಯ ಮೊಲೆ ಹಿಡಿದ ಹಸ್ತಗಳಿಂದ / ನಿನ್ನ ಅಡಿ ಮುಟ್ಟಿರುವೆ / ಆ ಪುಲಕ ನಿನ್ನಡಿಯ ಮಿಡುಕಿಸಲಿ’ ಮುಂತಾದ ಸಾಲುಗಳು ಅವರಿಂದ ಹೊರಬಂದುದು. ಇವು ನನ್ನ ಪ್ರಕಾರ ಮಂಜುನಾಥರ ನಿಜ ಸಾಲುಗಳಲ್ಲ. ಅವರೆಂದೂ ಇಷ್ಟು ಒರಟಾದ ಸಾಲುಗಳನ್ನು ಬರೆಯುವವರಲ್ಲ. (ನನ್ನ ಕವಿಪತ್ನಿ ಸವಿತಾ ಪ್ರಕಾರ ಮಂಜುನಾಥ್ ನಮ್ಮ ಮನೆಗೆ ಬಂದಿದ್ದಾಗ ಅವಳ ‘ದೇವರಿಗೆ’ ಪದ್ಯವನ್ನೋದಿ ಅದರಿಂದ ಸ್ಪೂರ್ತಿಗೊಂಡು ಆ ಪದ್ಯವನ್ನು ಈ ‘ಹೊಸ’ ರೀತಿಯಲ್ಲಿ ಬರೆದದ್ದು.) ನನ್ನ ಊಹೆಯ ಪ್ರಕಾರ ಅವರು ಈ ಸಾಲುಗಳನ್ನು ಬರೆದದ್ದು ಕನ್ನಡ ಕಾವ್ಯ ಕ್ಷೇತ್ರದ ‘ಪ್ರತಿಷ್ಠಿತ’ರನ್ನು ಮೆಚ್ಚಿಸಲು; ಎಚ್ಚರಿಸಲು! ಸಹಜವಾಗಿಯೇ ಅವರೆಲ್ಲರೂ ಆ ಸಾಲುಗಳನ್ನೋದಿ ‘ಪುಲಕ’ಗೊಂಡರು. ಅದರ ಬಗ್ಗೆ, ಅವರ ಬಗ್ಗೆ ತಂತಮ್ಮ ‘ಗುಂಪು’ಗಳಲ್ಲಿ ಮಾತಾಡಿಕೊಂಡರು, ಅಲ್ಲಿಲ್ಲಿ ನಾಲ್ಕು ಸಾಲು ಬರೆದರು ಕೂಡ. ಆಗಲೇ ಮಂಜುನಾಥ್ಗೆ ಬೆಂಗಳೂರಿನ ಪ್ರಕಾಶಕರೂ ಸಿಕ್ಕಿದ್ದು! ಅವರೆಲ್ಲ ಕವಿಯನ್ನು ಸ್ವಲ್ಪಕಾಲ ಮೆರೆಸಿ, ನಂತರ ಇಂತಹುದೇ ಇನ್ನಿತರ ಕೆಲಸಗಳ ಮಧ್ಯೆ ಮರೆತರು. ಆಗಲೇ ಸ್ವಲ್ಪ ಕಾಲ ಮಂಜುನಾಥ್ ನಮ್ಮಿಂದ ಮರೆಯಾಗಿ ಬೆಂಗಳೂರಿನ ತಾರಾ ಲೇಖಕರ ಬಿಸಿ ಸಹವಾಸದಲ್ಲಿ ಮೈಮರೆತಿದ್ದುದು! ಎಚ್ಚರವಾದೊಡನೆ ಅದೆಲ್ಲ ಕನಸೆಂಬಂತೆ ಅವರು ತಮ್ಮೂರು ಕೆ.ಆರ್. ನಗರಕ್ಕೆ ವಾಪಸ್ ಬಂದರು. ತಮ್ಮನ್ನು ತಾವು ಮತ್ತೆ ಹುಡುಕಿಕೊಳ್ಳುವಂತೆ ‘ಬೆಟ್ಟ ಬಳಿಗೆ ಬಂದಂತಿರುವ / ಹೊಳೆ ಸಾಗಿ ಅದನು ಮುಟ್ಟಿದಂತಿರುವ / ಪೊದೆಗಳೆಲ್ಲವೂ ಮಣಿಯನೆಣಿಸುವ / ತೋಪಿನ ಮರಗಳೆಲ್ಲವು ಮುನಿಗಳಾಗುವ / ಒಡೆದ ಮಣಿಗಳು ಇಡಿಯಾಗುವ’ ‘ಜಪದ ಕಟ್ಟೆ’ಯಲ್ಲಿ ಪಟ್ಟಾಗಿ ಕೂತು ತಮ್ಮ ಆತ್ಮಚರಿತ್ರಾತ್ಮಕ ಕಾವ್ಯ ‘ಜೀವಯಾನ’ ಬರೆದರು.

‘ಜೀವಯಾನ’ ಮಂಜುನಾಥರ ಒಟ್ಟೂ ಕಾವ್ಯದ ವ್ಯಕ್ತಿತ್ವವನ್ನು ಬಿಚ್ಚಿಟ್ಟ ಕಾವ್ಯ. ಅವರು ಆಗಾಗ ತಮ್ಮ ಬಾಲ್ಯದ ಬದುಕಿನ ಅನಿಶ್ಚಿತತೆ ಮತ್ತು ಕಷ್ಟ ಕಾರ್ಪಣ್ಯಗಳ ಬಗ್ಗೆ ಹೇಳುತ್ತಿದ್ದರಾದರೂ, ಅವರ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿದ್ದ ಸ್ವಾಭಿಮಾನ ಅದನ್ನೆಲ್ಲ ವಿವರವಾಗಿ ಹೇಳಲು ಬಿಡುತ್ತಿರಲಿಲ್ಲ. ಅದೆಲ್ಲ ‘ಜೀವಯಾನ’ದಲ್ಲಿ ಅಗಲಿಕೆ, ಹಸಿವು, ಕೆಟ್ಟ ಕನಸು, ಕನವರಿಕೆಗಳ ರೂಪದಲ್ಲಿ ಸ್ಫೋಟಗೊಂಡಿವೆೆ. ಅದರಲ್ಲಿ ಅಲ್ಲಲ್ಲಿ ಕೇಳುವ ವ್ಯಕ್ತಿತ್ವ ಒಡೆವ ಆತಂಕದ ಆರ್ತನಾದಗಳು ಹೃದಯ ಕಲಕುತ್ತವೆ. ಮೂಲತಃ ಮಂಜುನಾಥ್ ಕುಟುಂಬದ ವ್ಯಕ್ತಿ. ಅದರ ಛಿದ್ರೀಕರಣ ಅವರ ವ್ಯಕ್ತಿತ್ವದ ಛಿದ್ರೀಕರಣವೇ ಆಗಿದೆ. ಅವರ ಈ ಮೊದಲ ಸಂಕಲನಗಳಲ್ಲೂ ಅವರು ಬಾಲಕರಿದ್ದಾಗ ಅವರ ಕುಟುಂಬ ಎದುರಿಸಿದ ದುರಂತದ ಒಂದೆರಡು ಬಿಡಿ ಚಿತ್ರಗಳಿವೆಯಾದರೂ, ‘ಜೀವಯಾನ’ದಲ್ಲಿ ಈ ದುರಂತ ಒಂದು ಅಖಂಡ ಕಾವ್ಯವಾಗಿ ಹೆಪ್ಪುಗಟ್ಟಿ ಓದುಗರನ್ನು ತಲ್ಲಣಗೊಳಿಸುತ್ತದೆ. ‘ಒತ್ತುತಿದೆ ಹಾರೆ ಎದೆಯೊಳಗಿನ್ನೂ’ ಎಂಬ ಭಾಗ ಈ ಇಡೀ ಕಾವ್ಯದ ಕೇಂದ್ರ ರೂಪಕವಾಗಿ ನಮ್ಮ ಎದೆಯನ್ನೂ ಇರಿಯುತ್ತದೆ. ಅವರ ಒಟ್ಟೂ ಕಾವ್ಯದ ಕೇಂದ್ರದಲ್ಲಿ ಇರುವುದು ಹಲವು ರೀತಿಗಳಲ್ಲಿ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿರುವ ಈ ‘ಜೀವಯಾನದ’ದ ಮಂಜುನಾಥ್ ಎಂಬ ಮಗು ಎಂಬುದು ನಮಗೆ ಈ ಇರಿತದ ನೋವಿನಲ್ಲಿ ಅರಿವಿಗೆ ಬರುತ್ತದೆ. ಅವರ ಇಡೀ ಕಾವ್ಯ ಒಂದು ವಿಚಿತ್ರ meloncholyಯನ್ನು ಪಡೆದುಕೊಂಡುಬಿಡುತ್ತದೆ. ಈ ಬಿಂದುವಿನಲ್ಲಿ ಮಂಜುನಾಥ್ ಒಬ್ಬ ಪೂರ್ಣ ಕವಿಯಾಗಿ ನಮ್ಮನ್ನು ತಾಕುತ್ತಾರೆ. ಈ ಪೂರ್ಣತೆಯ ಸಾಧನೆ ಹಿಂದೆ ಅವರು ಪುತಿನ ವ್ಯಸನದ ನಂತರ ಹಿಂಬಾಲಿಸಿದ್ದ ಅಲ್ಲಮ ಮತ್ತು ಕುಮಾರವ್ಯಾಸರ ವ್ಯಾಪಕ ಓದು ಇತ್ತೆಂಬುದೂ ನಿಜ.

ಹಾಗಾಗಿಯೇ ನಂತರದ ಅವರ ‘ಮಗಳು ಸೃಜಿಸಿದ ಸಮುದ್ರ’ ಮತ್ತು ‘ಬೊಗಸೆ ಜಲ ಒಂದು ಬೀಜಕ್ಕಾಗಿ’ ಎಂಬ ಸಂಕಲನಗಳ ಕವಿತೆಗಳು ಹೆಚ್ಚು ಆತ್ಮೀಯವೂ, ಸರಳವೂ, ಸಮಾಧಾನದವೂ ಆಗಿ ಕಾಣುತ್ತವೆ. ಪುತಿನ ಹೇಳಿದ ದೇಶೀಯತೆ, ಪ್ರಸನ್ನತೆ ಮತ್ತು ವಿಶದತೆಗಳು ಇಲ್ಲಿ ಪೂರ್ಣವಾಗಿ ಫಲಿಸಿವೆ. ಈ ಫಲಿತಗಳ ಮಾರ್ದನಿಯಂತೆ ‘ಮಗಳು ಸೃಜಿಸಿದ ಸಮುದ್ರ’ಕ್ಕೆ ‘ಕೊಟ್ಟ ಕುದುರೆಯನೇರಿ…’ ಎಂಬ ಒಂದು ಹೊಸ ಮನವರಿಕೆಯನ್ನು ಸೂಚಿಸುವಂತಿರುವ ಮುನ್ನುಡಿಯಲ್ಲಿ ‘ನನ್ನ ಕವಿತೆಯ ಪರಿವಾರ ಈಗ ಬಹಳ ಪುಟ್ಟದು. ದೊಡ್ಡ ಜಗತ್ತಿಗೋಸ್ಕರ ಬರೆಯುತ್ತಿದ್ದೇನೆ ಎಂದು ಭಾವಿಸುವುದು ಕಡಿಮೆ. ನಾನು ಒಂದು ಪುಟ್ಟ ಪದ್ಯ ಬರೆದರೆ ಮೊದಲು ಅದನ್ನು ನನ್ನ ಈ ಪುಟ್ಟ ಜಗತ್ತಿನಲ್ಲಿ ಚಲಾವಣೆಗೆ ಬಿಡುತ್ತೇನೆ. ಅಲ್ಲಿ ಅದು ಒಂದು ಶಬ್ದ, ಒಂದು ಸಾಲು ಅಥವಾ ಒಂದು ಭಾವನೆಯಲ್ಲಿ ಸಿದ್ಧಿಸಿಕೊಂಡು ಮರಳಿದದಷ್ಟಕ್ಕೆ ನನ್ನ ಕವಿತೆ ಲೋಕಕ್ಕೆ ಸಂಪೂರ್ಣ ಪ್ರಕಟವಾಯಿತು ಎಂದು ತೃಪ್ತನಾಗಿಬಿಡುತ್ತಿದ್ದೇನೆ, ಈಚೀಚೆಗೆ.’ ಎಂದು ಬರೆಯುತ್ತಾರೆ. ನಾನು ಮತ್ತು ಮಂಜುನಾಥ್ ಇತ್ತೀಚಿನ ದಿನಗಳಲ್ಲಿ ಮುಖತಃವೋ ಅಥವಾ ದೀರ್ಘ ದೂರವಾಣಿ ಮಾತುಕತೆಗಳಲ್ಲೋ (ಕರೆ ಬಹುಪಾಲು ಬರುತ್ತಿದ್ದುದು ಅವರ ಕಡೆಯಿಂದಲೇ) ಚರ್ಚಿಸುತ್ತಿದ್ದ ಗಾಂಧೀಜಿಯ ‘ಹಿಂದ್ ಸ್ವರಾಜ್’ನಿಂದ ಪಡೆದ ಅರಿವು ಇದು. ತೃಪ್ತಿಯ ಹುಡುಕಾಟ ಎಂಬುದು ಹಪಾಹಪಿಯಾಗಿ ಬೆಳೆಯದೆ ಸಂತೃಪ್ತಿಯಾಗಿ ಕೊನೆಗೊಳ್ಳುವುದು ‘ನೆರೆಹೊರೆ’ ಎಂಬ ಪರಿಕಲ್ಪನೆ ಇದ್ದಾಗ ಎಂಬುದೇ ಸ್ವರಾಜ್ಯದ ತಳಹದಿಯ ತತ್ವ. ಮಂಜುನಾಥರ ಕಾವ್ಯ ಮೀಮಾಂಸೆ ಹೀಗೆ ಸ್ವರಾಜ್ಯ ತತ್ವದಲ್ಲಿ ತನ್ನ ಸಾರ್ಥಕತೆ ಕಂಡುಕೊಳ್ಳತೊಡಗಿತ್ತು. ಇತ್ತೀಚೆಗೆ ಈ ಬಗ್ಗೆ ‘ಹೊಸ ಮನುಷ್ಯ’ಕ್ಕಾಗಿ ಮೂರ್ನಾಲ್ಕು ಅದ್ಭುತ ಲೇಖನಗಳನ್ನೂ ಅವರು ಬರೆದಿದ್ದರು. ಹಾಗಾಗಿಯೇ ಅವರೀಗ ಯಾವ ಸಂಕೋಚಗಳೂ ಇಲ್ಲದೆ ರಾಜಕೀಯ-ಸಾಮಾಜಿಕ ಎನ್ನಬಹುದಾದ ಪದ್ಯಗಳನ್ನೂ ಬರೆದರು. ಅದೂ ನಾನು ಸಂಪಾದಿಸುವ ‘ಹೊಸ ಮನುಷ್ಯ’ ಎಂಬ ಸಮಾಜವಾದಿ ಮಾಸಿಕಕ್ಕಾಗಿ ಬರೆದ ‘ಅತಿ ಶ್ರೀಮಂತನ ಊಟದ ಮೇಜು’, ‘ಅಧಿಕಾರ’ ‘ನಾಯಕ’ ಮುಂತಾದವನ್ನು ಗಮನಿಸಬಹುದು. (ನೋಡಿ: ಬೊಗಸೆ ಜಲ ಒಂದು ಬೀಜಕ್ಕಾಗಿ’) ಅಲ್ಲದೆ ‘ಹೊಸ ಮನುಷ್ಯ’ಕ್ಕಾಗಿಯೇ ಸಾಮಾಜಿಕ-ರಾಜಕೀಯ ವಿಷಯಗಳನ್ನು ಕುರಿತ ವಿಶೇಷ ಲೇಖನಗಳನ್ನೂ ಬರೆದರು.

ಹೀಗೆ ತಮ್ಮ ಕಾವ್ಯಕರ್ಮ ಮತ್ತು ತತ್ವದ ಒಂದು ಪೂರ್ಣ ಸುತ್ತು ಮುಗಿಸಿದ್ದ ಮಂಜುನಾಥ್ರ ಕವಿ ಜೀವ ನಿರಾಳವಾಗುತ್ತಿರುವಾಗಲೇ ಅವರು ಹಠಾತ್ತನೇ ನಮ್ಮನ್ನಗಲಿ ಹೋಗಿದ್ದಾರೆ. ಇತ್ತೀಚೆಗೆ ತಾನೇ ತಮ್ಮ ಹುಟ್ಟೂರು ತಾಳಗುಪ್ಪಕ್ಕೆ ಬಂದು ಅಲ್ಲಿನ ಪರಿಸರದಲ್ಲಿನ ತನ್ನ ಬಾಲ್ಯದ ನೆನಪುಗಳನ್ನೊಮ್ಮೆ ನವೀಕರಿಸಿಕೊಂಡು, ನೆನಪಿಗಾಗಿ ಅಲ್ಲಿಂದ ಕಲ್ಲೊಂದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ಮಗುತನದ ಮಂಜುನಾಥ್ ತಮ್ಮೀ ಭೇಟಿಯ ಬಗ್ಗೆ ನನ್ನೊಂದಿಗೆ ಮನದುಂಬಿ ಮಾತಾಡಿ ತೃಪ್ತಿಪಟ್ಟಿದ್ದರು. (ಅವರು ಈ ಹಿಂದೆ ಅಲ್ಲಿ ತಾವು ಓದಿದ ಕನ್ನಡ ಶಾಲೆಯ ಬಗ್ಗೆ ಒಂದು ಭವಪೂರ್ಣ ಲೇಖನವೊಂದನ್ನು ‘ಹೊಸ ಮನುಷ್ಯ’ ಪತ್ರಿಕೆಗಾಗಿ ಬರೆದುಕೊಟ್ಟಿದ್ದರು.) ಅವರು ಆಕಾಶವಾಣಿಯ ರಾಷ್ಟ್ರೀಯ ಕವಿಗೋಷ್ಠಿಗೆಂದು ಸಂಸಾರ ಸಮೇತ ವಾರಾಣಾಸಿಗೆ ಹೋಗಿ ಬಂದ ನಂತರದಲ್ಲೇ ಆಸ್ಪತ್ರೆ ಸೇರಿ, ನಾವೆಲ್ಲ ಅವರು ಅಲ್ಲಿಂದ ಹೊರಬರುವುದನ್ನು ಕಾಯುತ್ತಿರುವಂತೆಯೇ ಬಾರದ ಊರಿಗೆ ತೆರಳಿಬಿಟ್ಟಿದ್ದಾರೆ. ಅವರು ವಾರಾಣಾಸಿಗೆ ಹೋಗುವ ಮುನ್ನ ನನಗೆ ಕರೆ ಮಾಡಿದ್ದರು. ನಾನು ಯಾವುದೋ ಒಂದು ಸಭೆಯಲ್ಲಿದ್ದ ಕಾರಣ ‘ನಾನು ಆ ಮೇಲೆ ಮಾತಾಡುತ್ತೇನೆ’ ಎಂದೆ. ಆದರೆ ಅವರು ಮತ್ತೆ ಕರೆಗೆ ಸಿಗಲೇ ಇಲ್ಲ! ಸಿಕ್ಕಿದ್ದರೆ ನಾನು ಅವರಿಗೆ ‘ಈ ರಾಷ್ಟ್ರೀಯ ಕವಿಗೋಷ್ಠಿ ಎಂಬುದೆಲ್ಲ ಈಗ ಬರಿ ಬುರ್ನಾಸು’ ಎಂದು ಹೇಳಿ, ವಾರಾಣಾಸಿಗೆ ಹೋಗದಂತೆ ಸೂಚಿಸುತ್ತಿದ್ದೆ. ಏಕೆಂದರೆ ಆ ಹೊತ್ತಿಗಾಗಲೇ ಅವರ ಆರೋಗ್ಯ ಸೂಕ್ಷ್ಮವಾಗಿತ್ತು. ನಿರಂತರ ಚಿಕಿತ್ಸೆಯಲ್ಲಿದ್ದರು. ಆದರೆ ಆ ಕುಟುಂಬದ ಮನುಷ್ಯ ತನ್ನ ಕುಟುಂಬದ ಸಮ್ಮುಖದಲ್ಲಿ ರಾಷ್ಟ್ರೀಯ ಕವಿಗೋಷ್ಠಿಯಲ್ಲಿ ಭಾಗವಹಿಸುವ ಆಳದಲ್ಲೆಲ್ಲೋ ಇನ್ನೂ ಉಳಿದುಕೊಂಡಿದ್ದ ಸುಪ್ತ ಆಸೆಯನ್ನು ತಣಿಸಿಕೊಳ್ಳಲೆಂದೋ ಅಥವಾ ತನ್ನನ್ನು ಸಾಕಿ ಬದುಕುಳಿಸಿದ ‘ಚಿಕ್ಕಿ’ಯ(ಸಾಕು ತಾಯಿ) ಕಾಶಿ ಯಾತ್ರೆಯ ಆಸೆಯನ್ನು ನೆರವೇರಿಸುವ ಪವಿತ್ರ ಕರ್ತವ್ಯಕ್ಕಾಗಿಯೋ ಅಲ್ಲಿಗೆ ಹೋಗಿ ಅಲ್ಲಿ ಮಸಣ ಕಾಯುವವನಿಗೆ ಪ್ರಿಯರಾದವರಂತೆ ಅವನ ಕೈ ತುತ್ತಾದರು. ಆದರೆ ಕನ್ನಡದ ಕಾವ್ಯಾಭಿಮಾನಿಗಳು ಇನ್ನೂ ಹಲವು ವರ್ಷಗಳ ಕಾಲ ಓದಿ, ಚರ್ಚಿಸಿ ಆನಂದಿಸುವಷ್ಟು ಕಾವ್ಯರಾಶಿಯನ್ನು ಅವರು ಬಿಟ್ಟು ಹೋಗಿದ್ದಾರೆ. ಅದೇ ಸದ್ಯಕ್ಕೆ ನಮ್ಮ ಸಮಾಧಾನ. ಇಷ್ಟಂತೂ ನಿಜ: ಮಂಜುನಾಥ್ ನಮ್ಮ ನಡುವೆ ಈಗಲೂ ಬದುಕಿದ್ದಾರೆ.

ಮಂಜುನಾಥ್ ಸಾವು-ಬದುಕುಗಳ ನಡುವೆ ತುಯ್ಯುತ್ತಾ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದ ದಿನಗಳುದ್ದಕ್ಕೂ ನನ್ನನ್ನು ಇರಿಯುತ್ತಿದ್ದುದು, ಅವರು ನಮ್ಮ ‘ಹೊಸ ಮನುಷ್ಯ’ ಪತ್ರಿಕೆಯ ಹೋದ ವರ್ಷದ ವಿಶೇಷಾಂಕಕ್ಕಾಗಿ ಕಳಿಸಿದ್ದ, ಇವರಂತೆಯೇ ಆಸ್ಪತ್ರೆಯ ಹಾಸಿಗೆಯಲ್ಲಿ ಸಾವು ಬದುಕುಗಳ ನಡುವೆ ತುಯ್ಯುತ್ತಾ ಮಲಗಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರನ್ನು ನೋಡಲು ಕವಿ ಗೋಪಾಲಕೃಷ್ಣ ಅಡಿಗರು ಬಂದು ಭೇಟಿಯಾದ ಸಂದರ್ಭವನ್ನನುಸರಿಸಿ ಅವರು ಬರೆದಿದ್ದ ಈ ಪುಟ್ಟ ಪದ್ಯ:

ಅವನ ಹಾಸಿಗೆ ಮೇಲೆ ಹದ್ದು
ಹಾರಾಡುವಾಗಲೂ
ಕವಿತೆಯ ಸಾಲೊಂದ ಧ್ಯಾನಿಸುವುದು
ಆಶ್ಚರ್ಯವೆನಿಸಿದರು ಸಹಜ
ತಳದಲ್ಲಿ ಕೊನೆಗುಟುಕು ಗಂಜಿ ಇರುವರೆಗೆ
ಕವಿತೆಯಭಿವ್ಯಕ್ತಿ ಅಂಥವರಿಗೆ-
ಜೀವನ ಪ್ರೀತಿಗೆ ವ್ಯಂಗ್ಯಕ್ಕೆ
ವಿಷಾದಕ್ಕೆ ಮರುಕಕ್ಕೆ ಎಲ್ಲಾ

ಹಾಗಿಲ್ಲದಿನ್ಹೇಗೆ?
ಕವಿತೆಯಂಥಾ ಕವಿತೆ-ಅದು
ಒಂದುಸಿರ ಹೆಚ್ಚಿಸದಿದ್ದರೆ?

(ಅಡಿಗರು ‘ಶಾಂತವೇರಿಯವರನ್ನು ‘ಹೇಗಿದ್ದೀಯಾ ಗೋಪಾಲ್?’ ಎಂದು ಕೇಳಿದ್ದಕ್ಕೆ ಗೌಡರು ಅಡಿಗರ ಕವಿತೆಯೊಂದರ ಸಾಲನ್ನೇ ಹಿಡಿದು,;ಕುಟುಕು ಕುಟಿಕಿನ ಸಫಲ ನಾಟ್ಯ’ ಎಂದರಂತೆೆ!)

~~~~~~

* ರಾಯಚೂರು ಸಾಹಿತ್ಯ ಸಮ್ಮೇಳನದ ಬಗ್ಗೆ ನಾನು ಬರೆದ ಒಂದು ಲೇಖನಕ್ಕೆ ಎಸ್. ಮಂಜುನಾಥ್ ಈ-ಮೇಲ್ ಮೂಲಕ ಬರೆದ ಪ್ರತಿಕ್ರಿಯೆ ಹೀಗಿತ್ತು:

ನಾಗಭೂಷಣ್,
ನಿಮ್ಮ ಬರಹ ಸ್ವಲ್ಪ ಆಕ್ರೋಶದಿಂದ ಕೂಡಿದ್ದರೂ ಸರಿಯಾಗಿದೆ. ಈ ಬರಗೂರು ಅತ್ಯಂತ ಜಡ ಬರಹಗಾರ. ಸಿದ್ಧಲಿಂಗಯ್ಯ, ಚಂಪಾ ಎಷ್ಟು ವರ್ಷಗಳ ಹಿಂದೆ ಪೆನ್ನು ಹಿಡಿದು ಕಾಗದದ ಮೇಲೆ ಏನಾದರೂ (ಸಾಹಿತ್ಯವೆಂಬುದನ್ನು) ಬರೆದಿದ್ದರೋ ಸಂಶೋಧಿಸಬೇಕು. ಈಗ ಕನ್ನಡದಲ್ಲಿ ಬರೆದು ಸಾಹಿತಿಯಾಗುವ ಅಗತ್ಯವೂ ಕಾಣುತ್ತಿಲ್ಲ. ಬರೀ ಧೂಳೆಬ್ಬಿಸಿದರೆ ಸಾಕು! ಪ್ರಗತಿಪರ ಎಂದು ಅವರು ಭಾವಿಸುವ ಸರಳೀಕೃತ ವಿಚಾರಗಳನ್ನು ಪತ್ರಿಕೆಗಳಲ್ಲಿ ಕಾರಿಕೊಂಡರೆ ಆತ ಮಹಾನ್ ಸಾಹಿತಿಯಾದಾನು!
Poetry makes nothing happen-ಎನ್ನುತ್ತಾನೆ ಆಡೆನ್. ನೇರವಾಗಿ ಸಮಾಜವನ್ನು ಸಾಹಿತ್ಯ ತಿದ್ದಲಾರದು, ಮತ್ತು ಅದು ಅದರ ಕಾರ್ಯವೂ ಅಲ್ಲ. (ಈಗಿನ ಕನ್ನಡ ಸಾಹಿತಿಗಳು ಯಾರಿಗೆ ಓಟು ಹಾಕಬೇಕು ಎಂದೂ ಹೇಳುವವರಾಗಿದ್ದಾರೆ!) ಸಂವೇದನೆಯ ಆಳಕ್ಕಿಳಿದು ಅದು ಪ್ರಭಾವಿಸಬಲ್ಲುದಾದರೆ, ಎಷ್ಟು ಕಿಂಚಿತ್ ಬದಲಾವಣೆ ಓದುಗರಲ್ಲಿ ಸಾಧ್ಯವಾಗುವುದೋ ಅಷ್ಟೇ ಸಾಹಿತ್ಯದ ಭಾಗ. ಆದರೆ ಈಗ ಈ ಡೆಮಾಕ್ರಸಿಯಲ್ಲಿ ಸಾಹಿತಿಗೆ ವಿಧಾನಸೌಧ ನೆರೆಮನೆ. ಯಾವ ಜವಾಬ್ದಾರಿಯೂ ಇಲ್ಲದ ಪದವಿ ಅವರ ಪಾಲಿಗೆ.
ಹಾಗಾಗಿ ಜನಕ್ಕೂ ಸಾಹಿತಿ ಯಾರು, ಏನು, ವೈಚಾರಿಕ ಪುಡಾರಿ ಯಾರು ಎಂಬ ಅರಿವೂ ಮಸಕಾಗಿದೆ.
-ಮಂ.

ಚಿತ್ರಗಳು : ಸಚ್ಚಿದಾನಂದ , ಅವಧಿ 

5 comments to “ಕಾವ್ಯಜೋಗಿ ಎಸ್. ಮಂಜುನಾಥ್”
 1. ನಾ ಕಂಡ ಬುದ್ಧನು ಖಾವಿ ಬಟ್ಟೆ ತೊಟ್ಟಿಲ್ಲ ತತ್ವದಿಂದೆ ಬಿದ್ದಿಲ್ಲ ಕಂಡಿದ್ದೆಲ್ಲವು ಕವಿತೆ ಆದದ್ದು ಅದರೊಳಗಿನ ಜೀವಯಾನದ ಅಣತೆ, ಅವರೆ !! ಜೀವಯಾನದ ಮಂಜುನಾಥ್ ನನ್ನ ಗುರುಗಳು!!

 2. ಕವಿಯೊಬ್ಬನ ಹ್ರದಯದಾಳಕ್ಕಿಳಿದು ಭಾವಸೇತುವೆ ನಿರ್ಮಿಸಿದ ಕವಿಮನದ ಲೇಖ[ಕ]ನಿಗೆ ಿಇದೋ ವಂದನೆ.

 3. ಎಸ್.ಮಂಜುನಾಥರ ಕಾವ್ಯ ಕಳಕಳಿ,ಅವರ ಕಾವ್ಯಮೀಮಾಂಸೆಯ ಸೂಕ್ಷ್ಮತೆ ಮತ್ತು ಕಾವ್ಯಯಾನದ ಹಲವು ಸ್ತರಗಳನ್ನು ಈ ಲೇಖನದಲ್ಲಿ ಗುರುತಿಸಿದ ಡಿ ಎಸ್ ನಾಗಭೂಷಣ ಸರ್ ಗೆ ಅಭಿನಂದನೆಗಳು.

  ಮಧು ಬಿರಾದಾರ.

  ಕರ್ನಾಟಕ ಕೇಂದ್ರೀಯ
  ವಿಶ್ವವಿದ್ಯಾಲಯ,ಕಲಬುರಗಿ.

 4. ಶ್ರೀಯುತ ನಾಗಭೂಷಣ್,
  ‌‌‌‌ ಕವಿ ಮಂಜುನಾಥ್ ಅವರ ಕುರಿತು ನೀವು ಬರೆದ ಲೇಖನ ಓದಿದೆ. ಬರಹಗಳು ದಾಖಲೆಯಾಗಿ ಉಳಿಯುವುದರಿಂದ ಕೆಲವು ವಿಷಯಗಳಲ್ಲಿ ಸ್ಪಷ್ಟನೆ ನೀಡುವುದು ಅಗತ್ಯವೆನ್ನಿಸಿ ಇದನ್ನು ಬರೆಯುತಿದ್ದೇನೆ.
  ‘ಭಕ್ತಿ’ ಕವಿತೆ ಯಾರಿಂದಲೋ ಪ್ರೇರೇಪಿಸಲ್ಪಟ್ಟದ್ದಾಗಲಿ,‌ ಯಾರಿಗಾಗಿಯೋ ಬರೆದದ್ದಾಗಲೀ ಅಲ್ಲ. ಸ್ವತಃ ಮಂಜುನಾಥ್ ಅವರಿಗೆ ಆ ಕವಿತೆ ಬಹಳ ಇಷ್ಟವಾದದ್ದು. ಅವರು ಕವಿತೆ ಬರೆದದ್ದು ತಮಗೋಸ್ಕರವೇ. ಏಕೆಂದರೆ ಕವಿತೆ ತಾನಾಗಿ ‘ಉಂಟಾಗ’ಬೇಕು ಮತ್ತು ಅದನ್ನು ‘ಆಗಿಸ’ಲಿಕ್ಕೆ ಬರುವುದಿಲ್ಲ ಎನ್ನುವುದು ಅವರ ನಿಲುವು.
  ಇತ್ತೀಚಿನ ವರ್ಷಗಳಲ್ಲಿ ‌ತಮ್ಮನ್ನು ಯಾರೂ ಸರಿಯಾಗಿ ಗುರುತಿಸುತ್ತಿಲ್ಲ ಎನ್ನುವ ಅಸಮಾಧಾನವೇನೂ ಅವರಿಗಿರಲಿಲ್ಲ. ತಾವು ಬರೆಯುತ್ತಿರುವುದು ಶುದ್ಧ ಕವಿತೆ ಎನ್ನುವ ಸ್ಪಷ್ಟತೆ ಅವರಿಗಿತ್ತು. ಕವಿತೆ ಪ್ರಕಟಗೊಳ್ಳಲು ತಮ್ಮನ್ನು ಆರಿಸಿಕೊಂಡಿರುವ ಬಗೆಗೆ ಸಂತೋಷವೇ ಇತ್ತು. ಋತುಮಾನದಲ್ಲಿಯೇ ಇರುವ ಆಕಾಶವಾಣಿ ಸಂದರ್ಶನವನ್ನು ಕೇಳಿದಲ್ಲಿ ನಿಮಗೂ ಅದರ ಅರಿವಾಗುತ್ತದೆ.
  ವಾರಾಣಸಿ‌ಯ ಕವಿಗೋಷ್ಠಿಗೆ‌ ಹೋಗಲು ಮಂಜುನಾಥ್‌ರವರು ಅಷ್ಟೇನೂ ಉತ್ಸುಕರಾಗಿರಲಿಲ್ಲ. ಪ್ರಸಿದ್ಧ ಕಥೆಗಾರರಾದ ಅಬ್ದುಲ್ ರಶೀದ್ ಅವರ ಬಳಿ ಆರೋಗ್ಯ ಸರಿಯಿಲ್ಲದುದರಿಂದ ಹೋಗದೇ ಇರಬಹುದೇ ಎಂದು ಕೇಳಿದ್ದರೂ ಸಹ. ಆದರೆ ಆಕಾಶವಾಣಿಯವರು ಪುನಃ ಹೊಸದೊಂದು process ಶುರುಮಾಡಬೇಕಾಗುವುದರಿಂದ ತೊಂದರೆಯಾಗುತ್ತದೆ ಹೋಗಿಬನ್ನಿ ಎಂದು ರಶೀದ್ ಅವರು ಹೇಳಿದ್ದರಿಂದ ನಾವು ಕಾಶಿಗೆ ಹೋಗಬೇಕಾಯಿತು. ಈ ವಿಷಯದಲ್ಲಿ ರಶೀದ್ ಅವರಿಗೂ ನೋವಿದೆ.
  ಕವಿ ಮಂಜುನಾಥ್ ಅವರು ಯಾವುದೇ‌ ಪ್ರಶಸ್ತಿಯ ‌ಆಯ್ಕೆಗಾಗಿ ತಮ್ಮ ಪುಸ್ತಕವನ್ನು ತಾವೇ ಕಳುಹಿಸುವುದು‌ ಅವಮಾನ ಎಂದೇ ಭಾವಿಸಿದವರು. ಪ್ರಶಸ್ತಿ , ಫಲಕಗಳ ಬಗೆಗೆ ಈಚೆಗೆ ಅವರ ಅನಿಸಿಕೆ ಬೇರೆಯದೇ ಆಗಿತ್ತು. ಈಚಿನ ವರ್ಷ ಗಳಲ್ಲಿ ನೀವು ಅವರನ್ನು ಮುಖತಃ ಭೇಟಿಯಾಗಿದ್ದು ಕಡಿಮೆಯಾದುದರಿಂದ ನಿಮ್ಮ ಅರಿವಿಗೆ ಅದು ಬಂದಿರಲಿಕ್ಕಿಲ್ಲ.
  ನನ್ನ ಪ್ರತಿಕ್ರಿಯೆಗೆ ಬೇಸರಿಸಿಕೊಳ್ಳಬೇಡಿ. ನಮ್ಮ ಮೊದಲ ಭೇಟಿಯಲ್ಲಿ ನೀವು ನನಗಿಂತಲೂ ಮೊದಲಿನಿಂದಲೇ ಅವರ ಅಭಿಮಾನಿ ಎಂದು ಹೇಳಿದ್ದನ್ನು ನಾನು ಮರೆತಿಲ್ಲ.
  ಧನ್ಯವಾದಗಳು
  ‌ ‌ ‌ ‌ – ಸವಿತಾ ಮಂಜುನಾಥ್

ಪ್ರತಿಕ್ರಿಯಿಸಿ