ಹಿಂದಿ ಹೇರಿಕೆ: ಹುಸಿಪ್ರಚಾರವೇ ಅಥವಾ ವಾಸ್ತವವೇ?

“ಹಿಂದಿ ಹೇರಿಕೆ” ಅಥವಾ “ಹಿಂದಿ ಸಾರ್ವಭೌಮತ್ವ” ಕೇವಲ ವಿರೋಧ ಪಕ್ಷಗಳು ಸೃಷ್ಟಿಸಿದ ವದಂತಿಯೇ ಅಥವಾ ಕನ್ನಡಿಗರು ವ್ಯಕ್ತ ಪಡಿಸುತ್ತಿರುವ ಹುಸಿ ಕಳಕಳಿಯೇ? ಅಥವಾ ಇದು ದಿನದಿಂದ ದಿನಕ್ಕೆ ಹೆಚ್ಚು ಗಂಭೀರವಾಗುತ್ತಿರುವ, ಐದು ಕೋಟಿ ಕನ್ನಡಿಗರು ತಮ್ಮ ರಾಜ್ಯದಲ್ಲಿಯೇ ಪರಕೀಯರೆನಿಸದ ಹಾಗೆ ಕೇಂದ್ರ ಸರ್ಕಾರವು ತಕ್ಷಣ ತಿದ್ದುಪಡಿಸಿಕೊಳ್ಳುವಂತೆ ಸಾರುತ್ತಿರುವ ವಾಸ್ತವವೇ?

ಬಹಳ ಸಮಯಗಳಿಂದ “ಹಿಂದಿ ಹೇರಿಕೆ” ಎಂಬ ವಿಷಯದ ಕುರಿತಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ . ಅಷ್ಟೇ ಅಲ್ಲದೆ ಕೆಲವು ಜನಪ್ರಿಯ ಸುದ್ದಿ ವಾಹಿನಿಗಳು ಮತ್ತು ಮಿಂದಾಣಗಳು ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ವ್ಯಾಪಕವಾದ ವಾಗ್ವಾದಗಳು ಕೂಡಾ ನಡೆದಿವೆ .

ನಾನೂ ಕೂಡ ಈ ಕುರಿತಾಗಿ ಬಹಳ ಮುಂಚೆಯೇ ಬರೆಯಬೇಕೆಂದುಕೊಂಡಿದ್ದೆ. ಆದರೆ ಈ ಸ್ಥಿತಿ ಸ್ವಲ್ಪ ತಿಳಿಯಾಗುವವರೆಗೆ ಮತ್ತು ನನಗೆ ಇನ್ನಷ್ಟು ಸಾಕ್ಷ್ಯಗಳು ದೊರೆಯುವವರೆಗೆ ಕಾಯಬೇಕೆಂದು ನಿರ್ಧರಿಸಿದೆ. ಏಕೆಂದರೆ ತಟಸ್ಥರಾಗಿ ಹಾಗೂ ಹೊಸತಾಗಿ ನೋಡುವುದರಿಂದ ಮಾತ್ರ ಇಲ್ಲಿ ಸಮಸ್ಯೆಗಳು ಇರುವವೇ ಎಂದು ಅರ್ಥವಾಗುವುದು ಮತ್ತು ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಬೇರಿನಿಂದ ಪರಿಶೀಲಿಸಿ ಈ ಕುರಿತ ತೊಂದರೆಗಳನ್ನೆಲ್ಲ ನಿವಾರಿಸಲು ಸಾಧ್ಯವಾಗುವುದು. ಮತ್ತು ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ನನಗೆ ಈ ವಿ‍ಚಾರವನ್ನು ವಿವಿಧ ದೃಷ್ಟಿಕೋನಗಳಿಂದ ವಿಶ್ಲೇಷಣೆ ಮಾಡಬೇಕಿತ್ತು. ಅದರಲ್ಲೂ ವಿಶೇಷವಾಗಿ ಜನ ಸಾಮಾನ್ಯರ, ನ್ಯಾಯಯುತ ಪ್ರಜೆಗಳ ಹಾಗೂ ತೆರಿಗೆದಾರರ ದೃಷ್ಟಿಕೋನದಿಂದ ನೋಡಿ ಈ ಸಮಸ್ಯೆಯ ತೀವ್ರತೆಯನ್ನು ಅಳೆಯಬೇಕಿತ್ತು.

ಮುಂದುವರೆಯುವುದಕ್ಕೂ ಮುನ್ನ, ಕೆಲವು ಸಾಮನ್ಯ ಸ್ಪಷ್ಟನೆಗಳನ್ನು ನೀಡಿಬಿಡುತ್ತೇನೆ. ನಾನು ಹೆಮ್ಮೆಯಿಂದ ಮರಾಠಿ ಮಾತನಾಡುವ ಒಬ್ಬ ಭಾರತೀಯ ಪ್ರಜೆ. ಎಲ್ಲ ಭಾಷೆಗಳ ಕುರಿತು ಗೌರವ ಹಾಗೂ ಪ್ರೀತಿಯಿದ್ದು, ಈಗ ಕರ್ನಾಟಕದಲ್ಲಿ ನೆಲಿಸಿದ್ದೇನೆ. ಮನೆಯಲ್ಲಿ ಮರಾಠಿ ಮಾತನಾಡುವ ನಾನು, ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೊಂದಿಗೆ ಹಿಂದಿಯನ್ನೂ ಒಂದು ಭಾಷಾವಿಷಯವಾಗಿ ಕಲಿತಿದ್ದೇನೆ. ಮತ್ತೆ ಮರಾಠಿ ಹಿಂದಿಗೆ ಬಹಳ ಹತ್ತಿರವಾಗಿದ್ದು ಒಂದೇ ಲಿಪಿಯನ್ನು (ದೇವನಾಗರಿ) ಬಳಸುತ್ತದೆ. ಹೀಗಾಗಿ ಯಾವುದೇ ರೀತಿಯ ಹಿಂದಿ ಹೇರಿಕೆ ನನಗೆ ವೈಯಕ್ತಿವಾಗಿ ಬೀರುವ ಪರಿಣಾಮ ಕ್ಷುಲ್ಲಕ.

ನಾನು ಹಿಂದಿ ಚಲನಚಿತ್ರ, ದಾರವಾಹಿ ಹಾಗೂ ಪುಸ್ತಕಗಳ ವಿಮರ್ಶೆ ಮತ್ತು ಶಿಫಾರಸು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ. ಹಿಂದಿ ಚಿತ್ರ “ಕಿಸ್ಸಾ ಕುರ್ಸಿ ಕಾ”ದ ವಿಮರ್ಶೆ ಇಲ್ಲಿದೆ.

http://guruprasad.net/posts/kissa-kursi-ka-a-humorous-take-on-indira-gandhi-the-emergency/

ಹಿಂದಿ ದಾರವಾಹಿ “ಫ್ಲಾಪ್ ಶೋ”ದ ವಿಮರ್ಶೆ ಮತ್ತು ಶಿಫಾರಸು:

http://guruprasad.net/posts/flop-show-tv-series-by-jaspal-bhatti/

ಹಿಂದಿ ದಾರವಾಹಿ “ಸಂವಿಧಾನ್”ದ ವಿಮರ್ಶೆ ಮತ್ತು ಶಿಫಾರಸು:

http://guruprasad.net/posts/tv-series-samvidhaan-making-constitution-india/

ಹಿಂದಿ ಪುಸ್ತಕ “ಡರ್ ಡರ್ ಗಂಗೆ”ಯ ಪ್ರಚಾರ:

https://www.facebook.com/photo.php?fbid=10203859604119764&set=a.1770961003064.221799.1510418566&type=3&theater

ಈ ಸ್ಪಷ್ಟನೆಗಳನ್ನು ನೀಡಲು ಕಾರಣವೆಂದರೆ ನಾನು ಹಿಂದಿಯ ಕುರಿತಾಗಿ ಸ್ವಲ್ಪ ಪಕ್ಷಪಾತಿಯಾಗಿದ್ದಲ್ಲಿ ಅದಕ್ಕೆ ಕಾರಣ ಈ ಮೇಲೆ ಹೇಳಿದ ಅಂಶಗಳು (ಹಿಂದಿ ನನ್ನ ಮಾತೃಭಾಷೆಗೆ ಹತ್ತಿರವಾದದ್ದು). ಇದನ್ನು ಹೇಳಿಯೂ ಈ ವಿಶ್ಲೇಷಣೆಯಲ್ಲಿ ನನ್ನ ಎಲ್ಲ ಪೂರ್ವಗ್ರಹಗಳನ್ನು ಬದಿಗಿಟ್ಟು ಸಾಧ್ಯವಾದಷ್ಟು ತಟಸ್ಥವಾಗಿರಲು ಪ್ರಯತ್ನಿಸಿದ್ದೇನೆ.

ಈಗ ಒಂದಿಷ್ಟು ಅಂಕಿ ಅಂಶಗಳು ಮತ್ತು ವಾಸ್ತವಾಂಶಗಳನ್ನು ನೋಡೋಣ.

೧೯೫೬ರ ರಾಜ್ಯ ಮರುವಿಂಗಡನಾ ಕಾಯ್ದೆ (States Reorganization Act) ಯ ಅನುಸಾರವಾಗಿ ಕರ್ನಾಟಕ ರಾಜ್ಯ ಭಾಷೆಯನ್ನೇ ಆಧರಿಸಿ ರೂಪಿಸಿರುವ ರಾಜ್ಯವಾಗಿದೆ.

ನಾನು ಈ ಮುಂಚೆ ಭಾಷೆಯನ್ನಾಧರಿಸಿ ರಾಜ್ಯಗಳನ್ನು ರೂಪಿಸಿದ ಕುರಿತಾಗಿ ನನ್ನ ಕೆಲವು ಲೇಖನಗಳಲ್ಲಿ ವಿವರಿಸಿದ್ದೇನೆ.

ಆಂಧ್ರಪ್ರದೇಶ ರಾಜ್ಯಕ್ಕಾಗಿ ಪೊಟ್ಟಿ ಶ್ರೀರಾಮುಲು ಅವರ ಉಪವಾಸ:

http://guruprasad.net/posts/a-fast-that-changed-the-map-of-india/

ಭಾಷೆಯ ಆಧಾರದ ಮೇಲೆ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳ ಹುಟ್ಟು:

http://guruprasad.net/posts/1st-may-1960-formation-maharashtra-gujarat-states/

ಹೀಗೆ, ಕರ್ನಾಟಕ ರಾಜ್ಯವನ್ನು ಎಲ್ಲ ಕನ್ನಡ ಮಾತನಾಡುವ ಜಿಲ್ಲೆಗಳನ್ನು ಒಂದು ರಾಜ್ಯವನ್ನಾಗಿಸುವುದರೊಂದಿಗೆ ರೂಪುಗೊಳಿಸಿ, ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ರೂಪಿಸಲಾಯಿತು. ಸರಳವಾಗಿ ಹೇಳುವುದಾದರೆ, ಕರ್ನಾಟಕ ಎಂದು ಕರೆಲ್ಪಡುವ ಈ ರಾಜ್ಯದ ಪರಿಧಿಯೊಳಗೆ ಒಬ್ಬ ವ್ಯಕ್ತಿ ಕೇವಲ ಕನ್ನಡವನ್ನು ಅರಿತಿದ್ದು ಯಾವುದೇ ವ್ಯಾಪಾರ, ವಹಿವಾಟು, ಸರಕಾರೀ ಅಧಿಕಾರಿಗಳೊಂದಿಗೆ ಸಂಪರ್ಕ ನಡೆಸಲು ಸಾಧ್ಯ. ಹೀಗಾಗಿ ಕರ್ನಾಟಕದ ೬.೫ ಕೋಟಿ ಜನರಲ್ಲಿ ೫ ಕೋಟಿ ಜನಕ್ಕೆ ಕನ್ನಡದ ಹೊರತಾಗಿ ಯಾವುದೇ ಭಾಷೆ ತಿಳಿದಿಲ್ಲ, ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ. ಇದು ಯಾರಿಗೂ ಅಚ್ಚರಿ ಏನೂ ಹುಟ್ಟಿಸಬೇಕಿಲ್ಲ, ಏಕೆಂದರ ಹೇಗೆ ಉತ್ತರ ಪ್ರದೇಶದ ಹಳ್ಳಿಗರಿಗೆ ಹಿಂದಿ ಮಾತ್ರ ಗೊತ್ತಿರುವುದೋ ಹಾಗೆಯೇ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಒಬ್ಬ ವ್ಯಕ್ತಿಗೆ ಕೇವಲ ಕನ್ನಡ ಮಾತ್ರ ತಿಳಿದಿರುತ್ತದೆ. ಹೀಗಾಗಿ ಕೇವಲ ಕನ್ನಡ ಗೊತ್ತು ಎನ್ನುವ ಕಾರಣಕ್ಕಾಗಿ ಈ ಕರ್ನಾಟಕದಲ್ಲಿಯೇ ನೆಲೆಸಿದ ಜನಸಾಮಾನ್ಯರಿಗೆ ಯಾವುದೇ ಸೌಲಭ್ಯ ನಿರಾಕರಿಸದಂತೆ ಹಾಗೂ ಇವರು ಯಾವುದೇ ತಾರತಮ್ಯ ಅನುಭವಿಸದಂತೆ ನೋಡಿಕೊಳ್ಳುವ ಭರವಸೆ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ.

ಆದರೆ ಈ ಭರವಸೆಯನ್ನು ನಿಜಕ್ಕೂ ಕಾಯ್ದುಕೊಳ್ಳಲಾಗುತ್ತಿದೇಯೇ?

ನಾನು ಹೌದೆಂದೇ ಭಾವಿಸಿದ್ದೆ,ಇದನ್ನು ಅಲ್ಲಗೆಳೆಯುವ ಹಲವು ಕುತೂಹಲಕಾರಿ ಸಾಕ್ಷ್ಯಗಳು ಸಿಗುವುದಕ್ಕೂ ಮುನ್ನ.

“ಭಾರತೀಯ ಅಂಚೆ” ಎಂದು ಕರೆಯಲ್ಪಡುವ, ಭಾರತದ ಎಲ್ಲ ರಾಜ್ಯಗಳ ತೆರಿಗೆದಾರರ ಹಣದಿಂದ ನಡೆಯುತ್ತಿರುವ ಸಂಸ್ಥೆಯೊಂದಿಗೆ ಪ್ರಾರಂಭಿಸುತ್ತೇನೆ.

ನನ್ನ ಕರ್ನಾಟಕದ ಗೆಳೆಯರೊಬ್ಬರು ಕನ್ನಡದಲ್ಲಿ ಒಂದು ಪತ್ರ ಕಳಿಸಿ ೨೦ ದಿನವಾದರೂ ಯಾವುದೇ ಉತ್ತರ ಬಂದಿರಲಿಲ್ಲ. ಭಾರತೀಯ ಅಂಚೆಯ ಅಧಿಕೃತ ಟ್ವಿಟ್ಟರ್ ಖಾತೆಗೆ ಅವರು ತಮ್ಮ ಕಾಳಜೆಯನ್ನು ಟ್ವೀಟ್ ಮಾಡಿದಾಗ, ಅವರಿಗೆ ಸಿಕ್ಕ ಉತ್ತರವು ಸೇವೆಯನ್ನು ನಿರಾಕರಿಸುವುದಷ್ಟೇ ಆಗಿರದೆ, ಅಧಿಕಾರಿಯು ಅವರಿಗೆ “Use google translator” ಎಂದು ಹಿಂದಿ/ಇಂಗ್ಲಿಷ್‍ಗೆ ಅನುವಾದಿಸಲು ಹೇಳಿದ್ದಾಗಿತ್ತು.

ಉಲ್ಲೇಖ:https://www.facebook.com/photo.php?fbid=10210166246861891&set=a.1770961003064.221799.1510418566&type=3&theater

ಆದರೆ ನನಗೆ ಚೆನ್ನಾಗಿ ನೆನಪಿರುವಂತೆ ನನ್ನ ಬಾಲ್ಯದ ಸಮಯದಲ್ಲಿ, ೧೯೯೦ರ ದಶಕದಲ್ಲಿ, ಕನ್ನಡದಲ್ಲಿ ಬರೆದ ವಿಳಾಸವನ್ನು ಕನ್ನಡದಲ್ಲಿಯೇ ಹೊಂದಿದ ಪತ್ರಗಳನ್ನು ಕಳುಹಿಸುತ್ತಿದ್ದುದು ಬಹಳ ಸಾಮಾನ್ಯವಾಗಿ ಕಾಣಸಿಗುತ್ತಿತ್ತು. ವಿಶೇಷವಾಗಿ ದೂರದರ್ಶನ ಇತ್ಯಾದಿ ನಡೆಸುತ್ತಿದ್ದ ಕನ್ನಡ ಸ್ಪರ್ಧೆಗಳಲ್ಲಿ. ಇದು ಸಹಜವಾಗಿ ಒಪ್ಪಿತವೂ, ಸ್ವೀಕಾರಾರ್ಹವೂ ಆಗಿತ್ತು. ಏಕೆಂದರೆ ಕನ್ನಡ ಭಾರತದ ಅಧಿಕೃತ ಭಾಷೆಗಳಲ್ಲಿ ಒಂದು. ಹೀಗಿರುವಾಗ ಈ ರೀತಿ ಕನ್ನಡದಲ್ಲಿ ಪತ್ರ ಮತ್ತು ವಿಳಾಸ ಬರೆದಿರುವವರೊಬ್ಬರಿಗೆ ಸೇವೆಯನ್ನು ನಿರಾಕರಿಸುವುದು, ಮತ್ತು ಅನುವಾಗಿಸಲು ಗೂಗಲ್ ಟ್ರಾನ್ಸ್ಲೇಟರ್ ಬಳಸುವಂತೆ ಹೇಳುವುದು ಸಂಬಂಧಿತ ಅಧಿಕಾರಿಗಳ ಸಾರ್ವಭೌಮ ಧೋರಣೆಯನ್ನು ತೋರಿಸುತ್ತದೆ .

ಈಗ, ಭಾರತೀಯ ಸ್ಟೇಟ್ ಬಾಂಕ್‍ನ ಉದಾಹರಣೆಯನ್ನು ನೀಡುತ್ತೇನೆ. ಇದು ಭಾರತ ಸರ್ಕಾರದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು (Public Sector Bank) ಬ್ಯಾಂಕ್ ಆಗಿದ್ದು ಭಾರತದ ಎಲ್ಲ ರಾಜ್ಯಗಳ ತೆರಿಗೆದಾರರ ಹಣದಿಂದ ನಡೆಯುತ್ತದೆ.

ಕರ್ನಾಟಕ SBI ಗ್ರಾಹಕರೊಬ್ಬರು ಬ್ಯಾಂಕಿಗೆ ತಮ್ಮ ಕಳಕಳಿಯೊಂದನ್ನು ಕಳುಹಿಸಿದಾಗ, ಅವರಿಗೆ ಸಹಾಯ ನೀಡುವಂತಾಗಲು ತಮ್ಮ ಕಳಕಳಿಯನ್ನು ಹಿಂದಿ ಅಥವಾ ಇಂಗ್ಲಿಷಿನಲ್ಲಿ ಬರೆಯಲು ಕೇಳಲಾಯಿತು.

ಉಲ್ಲೇಖ:https://www.facebook.com/photo.php?fbid=10210681205055524&set=a.1770961003064.221799.1510418566&type=3&theater

ಇದು ಕೇವಲ ಆಶ್ಚರ್ಯಕಾರಿಯಷ್ಟೇ ಅಲ್ಲ, ಗರ್ವ ಮತ್ತು ಸಾಮ್ರಾಜ್ಯಶಾಹಿ ಮನೋಭಾವದ ಉತ್ತರವಾಗಿದೆ. ಡಿಜಿಟಲ್ ಇಂಡಿಯಾ, ನಗದು ರಹಿತ ಅರ್ಥವ್ಯವಸ್ಥೆ, ಬ್ಯಾಂಕಿಂಗ್ ಸೌಕರ್ಯಗಳನ್ನೆಲ್ಲ ಮುಂದೂಡುವುದರೊಂದಿಗೆ ಕರ್ನಾಟಕದಲ್ಲಿ ನೆಲೆಸಿರುವ ಕೇವಲ ಕನ್ನಡವನ್ನಷ್ಟೇ ಅರಿತ ೫ ಕೋಟಿ ಜನಕ್ಕೆ ಸರಿಯಾದ ಬ್ಯಾಂಕ್ ಸೌಕರ್ಯಗಳು ಕೇವಲ ಹಿಂದಿ ಅಥವಾ ಇಂಗ್ಲಿಷ್ ಬಾರದೆನ್ನುವ ಕಾರಣಕ್ಕೆ ಲಭ್ಯವಾಗದಿದ್ದಲ್ಲಿ, ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಹಿಂದಿ/ಇಂಗ್ಲಿಷ್ ಸಾಮ್ರಾಜ್ಯಶಾಹಿಯಿಂದ ಬದಲು ಮಾಡಿದ್ದಷ್ಟೇ ಎಂದು ಯೋಚಿಸಬೇಕಾಗುತ್ತದೆ; ಜನಸಾಮಾನ್ಯರು ತಾರತಮ್ಯಕ್ಕೊಳಗಾಗಿ, ಸೇವೆಗಳಂದ ವಂಚಿತರಾಗುತ್ತಿರುವ ಈ ಸನ್ನಿವೇಶದಲ್ಲಿ.

ಇದೇ ಸಮಯದಲ್ಲಿ ಇನ್ನೊಂದು ವಿವಾದವಾಯಿತು, ಆದರೆ ತಮಿಳುನಾಡಿನಿಂದ. ರಾಜ್ಯದ ಭಾರತೀಯ ಪ್ರಜೆಯೊಬ್ಬರಿಗೆ ತಮಿಳಿನಲ್ಲಿ ನೀಡಿದ್ದಾರೆನ್ನುವ ಕಾರಣಕ್ಕೆ RTI ಕೋರಿಕೆಯೊಂದನ್ನು ನಿರಾಕರಿಸಲಾಯಿತು.

ಉಲ್ಲೇಖ:https://www.facebook.com/photo.php?fbid=10212612993949039&set=a.1770961003064.221799.1510418566&type=3&theater

ಇದು ಆಘಾತಕಾರಿ ಸಂಗತಿ. ಏಕೆಂದರೆ ಬೇರೆಲ್ಲ ದೇಶಗಳು ತಮ್ಮದಲ್ಲದ ಹೆಚ್ಚು ಬಾಷೆಗಳಿಗೆ ತೆರೆದುಕೊಳ್ಳುತ್ತ, ಎಲ್ಲರನ್ನೊಳಗೊಳ್ಳುತ್ತಿರುವಾಗ, ಇಲ್ಲಿ ನಮ್ಮ ವೈವಿಧ್ಯತೆಯ ಕುರಿತು ಹೆಮ್ಮೆ ಹೊಂದಿರುವ ಭಾರತದಲ್ಲಿ ೨೨ ಅಧಿಕೃತ ಭಾಷೆಗಳನ್ನು ಹೊಂದಿದ್ದು, ಈ ರೀತಿ ತಮಿಳುನಾಡಿನ ಒಬ್ಬ ತಮಿಳನ್ನಷ್ಟೇ (ಇದು ಕೇವಲ ೨೨ ಅಧಿಕೃತ ಭಾಷೆಗಳಲ್ಲೊಂದಷ್ಟೇ ಅಲ್ಲ, ಶಾಸ್ತ್ರೀಯ ಭಾಷೆಯಾಗಿಯೂ ಷೋಷಿಸಲ್ಪಟ್ಟಿದೆ) ಅರಿತ ಪ್ರಾಮಾಣಿಕ ತೆರಿಗೆದಾರ, ಕೇವಲ ಹಿಂದಿ ಅಥವಾ ಇಂಗ್ಲಿಷ್ ಅರಿಯದ್ದಕ್ಕಾಗಿ, ತನ್ನ RTI ಕೋರಿಕೆಯ ನಿರಾಕರಣೆಯನ್ನು ಕಾಣಬೇಕಾದ ಅನ್ಯಾಯ ನಡೆಯುತ್ತಿದೆ.

ಇದು ಕೇವಲ ಮಂಜುಗಡ್ಡೆಯ ತುದಿಯಷ್ಟೇ. ಹಿಂದಿಯ ಬದಲಾಗಿ ಕನ್ನಡವನ್ನು ಅರಿತಿದ್ದಕ್ಕಾಗಿ ಕನ್ನಡಿಗರಿಗೆ ಸರ್ಕಾರಿ ಸೇವೆಗಳು ನಿರಾಕಾರಿಸಲ್ಪಟ್ಟಿರುವುದು ಲೆಕ್ಕವಿಲ್ಲದಷ್ಟು ನಡೆದಿದೆ. ಹಲವು ಗ್ರಾಹಕರು ಬ್ಯಾಂಕುಗಳು ಕನ್ನಡದಲ್ಲಿ ಜಮಾ ಮತ್ತು ವಾಪಾಸಾತಿ ಅರ್ಜಿಗಳನ್ನು ನೀಡುವುದನ್ನು ನಿಲ್ಲಿಸಿ ನಿಧಾನವಾಗಿ ಹಿಂದಿಯ ಅರ್ಜಿಗಳನ್ನು ಸೇರಿಸುತ್ತಿವೆಯೆಂದು ದೂರಿದ್ದಾರೆ. ಈ ಮೂಲಕ ಬ್ಯಾಂಕುಗಳು ತಮ್ಮೊಡನೆ ವಹಿವಾಟು ನಡೆಸಲು ಎಲ್ಲ ಗ್ರಾಹಕರಿಗೆ ಹಿಂದಿ/ಇಂಗ್ಲಿಷ್ ತಿಳಿದಿರಬೇಕೆಂದು ಅಪೇಕ್ಷಿಸುತ್ತಿವೆ.

ಬರೀ ಕನ್ನಡ ಅರಿತಿದ್ದು ಹಿಂದಿ ಅರಿಯದ್ದಕ್ಕಾಗಿ ಕರ್ನಾಟಕದ ಜಿಲ್ಲೆಯೊಂದರ ಹಳ್ಳಿಗರಿಗೆ ಬ್ಯಾಂಕ್ ಅಧಿಕಾರಿಯೊಬ್ಬರು ಸೇವೆಯನ್ನು ನಿರಾಕರಿಸಿದ್ದಲ್ಲದೇ, ಒರಟಾಗಿ ವರ್ತಿಸಿದರೆಂದು ದೂರಿದ ವಾರ್ತೆಯೊಂದು ಇಲ್ಲಿದೆ.

ಉಲ್ಲೇಖ: http://newsable.asianetnews.tv/karnataka/if-you-dont-know-hindi-get-out-of-the-bank-bank-employee-to-a-mandya-farmer

ಈಗ “ಜಾಹೀರಾತು”ಗಳತ್ತ ಗಮನ ಹರಿಸೋಣ.

ಜಾಹೀರಾತುಗಳ ಉದ್ದೆಶವಾದರೂ ಏನು?

ಉತ್ತರ: ಯಾವುದಾದರೂ ಸಂಗತಿಯೊಂದರ (ಉತ್ಪನ್ನ, ಸೇವೆ, ನೀತಿ, ಯೋಜನೆ ಇತ್ಯಾದಿ) ಕುರಿತಾಗಿ ಉದ್ದಿಷ್ಟ ಗುಂಪುಗಳಿಗ ಅರಿವು ನೀಡುವುದು.

ಮುಂದಿನ ಪ್ರಶ್ನೆ: ಕನ್ನಡ ವಾರ್ತಾ ಪತ್ರಿಕೆಗಳನ್ನು ಓದುವವರು ಯಾರು? ಕನ್ನಡಿಗರು, ಸರಿ.

ಹೀಗಾಗಿ, ಒಂದು ಕನ್ನಡ ವಾರ್ತಾಪತ್ರಿಕೆಯಲ್ಲಿ, ಯಾವುದಾದರೂ ಸಂಗತಿಯ ಕುರಿತು, ಉದ್ದೇಶಿತ ಜನತೆಗೆ ತಲುಪುವಂತೆ, ಅರಿವು ಮೂಡಿಸುವ ಸಲುವಾಗಿ ಯಾರಾದಾರೂ ಜಾಹೀರಾತು ನೀಡುವುದಿದ್ದರೆ ಯಾವ ಭಾಷೆಯನ್ನು ಬಳಸಬೇಕು? ಕನ್ನಡ? ಸರಿ.

ಆದರೆ ಕನ್ನಡ ವಾರ್ತಾಪತ್ರಿಕೆಗಳಲ್ಲಿ ಭಾರತೀಯ ರೈಲ್ವೆ ಪ್ರಕಟಿಸುವ ಜಾಹೀರಾತುಗಳು ವಿಚಿತ್ರವಾಗಿವೆ, ಏಕೆಂದರೆ ಅವು ಹಿಂದಿಯಲ್ಲಿ ಪ್ರಕಟಿಸಲ್ಪಡುತ್ತವೆ. ಜಾಹೀರಾತುಗಳನ್ನು ಪ್ರಕಟಿಸಲು ತೆರಿಗೆದಾರರ ಕೋಟಿಗಟ್ಟಲೆ ಹಣ ವ್ಯಯವಾಗುತ್ತದೆ. ಆದರೆ ಅವುಗಳು ಹಿಂದಿಯಲ್ಲಿ ಪ್ರಕಟವಾಗುತ್ತಿರುವುದನ್ನು ನೋಡಿದರೆ ಒಂದು, ಸರ್ಕಾರಕ್ಕೆ ಜಾಹೀರಾತಿನ ನಿಜವಾದ ಉದ್ದೇಶದ (ಅರಿವು ಮೂಡಿಸುವುದರ) ಕುರಿತು ಯಾವುದೇ ಯೋಚನೆಯಿಲ್ಲ. ಜೊತೆಗೆ ಇದು ಕನ್ನಡಿಗರನ್ನು ತಮ್ಮದೇ ದೇಶದಿಂದ ದೂರವಾಗಿಸುವ ಸಾರ್ವಭೌಮ ಧೋರಣೆಯನ್ನೂ ತೋರಿಸುತ್ತದೆ. ಏಕೆಂದರೆ ಈ ಜಾಹೀರಾತುಗಳ ಮೂಲಕ ಸರ್ಕಾರ ಏನನ್ನು ಹೇಳುತ್ತಿದೆ ಇಂದು ಅವರಿಗೆ ತಿಳಿಯಲಾಗದು.

ಈ ತರಹದ ಕನ್ನಡ ವಾರ್ತಾಪತ್ರಿಕೆಯಲ್ಲಿ ಬರುವ ಹಿಂದಿ ಜಾಹೀರಾತೊಂದರ ಉದಾಹರಣೆ ಇಲ್ಲಿದೆ:

ಉಲ್ಲೇಖ:https://www.facebook.com/photo.php?fbid=10212250927937615&set=a.1693754712955.215173.1510418566&type=3&theater

ಇಲ್ಲಿ ಸರ್ಕಾರ ರೈಲ್ವೆಯಲ್ಲಿ ನಗದುರಹಿತ ವಹಿವಾಟಿನ ಸೌಕರ್ಯದ ಕುರಿತು ವಿವರಿಸಲು ಪ್ರಯತ್ನಿಸುವ ಜಾಹೀರಾತೊಂದಿದೆ. ಆದರೆ ೯೫% ಓದುಗರಿಗೆ ಇದು ಮುಟ್ಟಲಾರದು, ಏಕೆಂದರೆ ಕನ್ನಡ ವಾರ್ತಾಪತ್ರಿಕೆಯಲ್ಲಿ ಪ್ರಕಟವಾಗಿರುವ ಜಾಹೀರಾತು ಸಂಪೂರ್ಣವಾಗಿ ಹಿಂದಿಯಲ್ಲಿದೆ.

ಇದು ಕರ್ನಾಟಕದ ಬಸ್ಸೊಂದರ ಮೇಲಿರುವ ಆದಾಯ ತೆರಿಗೆ ಸಂಬಂಧಿತ ಜಾಹೀರಾತು. ಆದರೆ ಮತ್ತೆ ಇದು ೯೫% ಜನರನ್ನು ತಲುಪುವುದಿಲ್ಲ ಏಕೆಂದರೆ ಇದು ಸಂಪೂರ್ಣವಾಗಿ ಹಿಂದಿಯಲ್ಲಿದೆ. ಜಾಹೀರಾತಿನಲ್ಲಿ ಬಳಸಿರುವ ಚಿತ್ರವನ್ನು ನೋಡಿದರೆ, ಬಹುತೇಕ ಕನ್ನಡಿಗರು ಜೇನು ನೊಣಗಳನ್ನು ನಾಶವಾಗದಂತೆ ರಕ್ಷಿಸುವ ಸರ್ಕಾರದ ಕಾರ್ಯಕ್ರಮ ಎಂದು ಭಾವಿಸಿಯಾರು.

ಇಲ್ಲಿ ಸರ್ಕಾರಿ ಯೋಜನೆಯೊಂದರ ಕುರಿತ ಜಾಹೀರಾತಿದೆ. ಮತ್ತೊಮ್ಮೆ, ೯೫% ಜನರಿಂದ ನಿರ್ಲಕ್ಷಿಸಲ್ಪಡುತ್ತದೆ. ಏಕೆಂದರೆ ಇದು ಸಂಪೂರ್ಣವಾಗಿ ಹಿಂದಿಯಲ್ಲಿದೆ.

ಇಲ್ಲಿ ಕರ್ನಾಟಕದ ಥಳಥಳಿಸುವ ಫಲಕಗಳಲ್ಲಿ ಹಾಕಿರುವ ಸ್ವಚ್ಚ ಭಾರತ ಕುರಿತಾದ ಜಾಹೀರಾತೊಂದಿದೆ, ಆದರೆ ಸಂಪೂರ್ಣ ಹಿಂದಿಯಲ್ಲಿ. ಹಾಗಾಗಿ ಇದು ಪರಿಣಾಮಕಾರಿಯಾಗಿರದೇ ಹಣ ವ್ಯಥಾ ಪೋಲಾಗುತ್ತಿದೆ. ಹಾಗೂ ಜನಸಾಮಾನ್ಯರಿಗೆ ಹೀಗೆ ತಮ್ಮದೇ ಸರ್ಕಾರ ಏನು ಹೇಳುತ್ತಿದೆಯೆಂದು ತಿಳಿಯದೇ ಇದು ಸ್ಥಳೀಯರನ್ನು ಪರಕೀಯರನ್ನಾಗಿಸುವ ಹಿಂದಿ ಸಾರ್ವಭೌಮ ಮಾನೋಭಾವ ಎಂದು ಎನಿಸಬಹುದು. (ಕೆಳಗೆ ಅಂಗಡಿಗಳ ಮೇಲೆ ಕನ್ನಡದ ಫಲಕಗಳನ್ನು ನೋಡಿ ಇದು ಕರ್ನಾಟಕವೇ ಎಂದು ಖಾತ್ರಿ ಮಾಡಿಕೊಳ್ಳಬಹುದು)

ಹೀಗೆ ಸರ್ಕಾರ ಕೋಟ್ಯಂತರ ರೂಪಾಯಿ ತೆರಿಗೆದಾರರ ಹಣದೊಂದಿಗೆ ಕರ್ನಾಟಕದಾದ್ಯಂತ ಜಾಹೀರಾತುಗಳನ್ನು ಪ್ರಕಟಿಸಿ, ಅವು ಹಿಂದಿಯಲ್ಲಿದ್ದಿದುದರಿಂದ ಯಾವುದೇ ಪರಿಣಾಮ ಬೀರದ ಹಲವು ನಿದರ್ಶನಗಳಿವೆ. ಮತ್ತು ನಾನು ಮೊದಲು ಹೇಳಿದಂತೆ ಈ ರೀತಿಯ ಧೋರಣೆ ಬಹುಕಾಲ ತೋರಲ್ಪಟ್ಟಾಗ ಇದು ಪರಕೀಯತೆಯ ಭಾವನೆ ಮತ್ತು ಸರ್ಕಾರ ಸಾಮ್ರಾಜ್ಯಶಾಹಿಯಾಗಿ ವರ್ತಿಸುತ್ತಿದೆ ಎಂಬ ಭಾವನೆಗಳಿಗೆ ಎಡೆಯಾಗುತ್ತದೆ.

.

ಈಗ ಇತ್ತೀಚಿನ ಮತ್ತು ಅತ್ಯಂತ ಬಿಸಿಯಾದ ವಿವಾದದತ್ತ ಗಮನ ಹರಿಸೋಣ: ಹೆದ್ದಾರಿ ಮೈಲಿಗಲ್ಲುಗಳ ವಿವಾದ.

.

ಕೆಲವು ತಿಂಗಳ ಹಿಂದೆ, ಇದ್ದಕ್ಕಿದ್ದಂತೆ ಸರ್ಕಾರವು, ಸ್ಥಳೀಯ ಭಾಷೆ+ಇಂಗ್ಲಿಷ್ ಸೂತ್ರ ಇರುವ, ದಕ್ಷಿಣ ಭಾರತದ ಹೆದ್ದಾರಿ ಮೈಲಿಗಲ್ಲುಗಳ್ಳಲ್ಲಿ ಹಿಂದಿಯನ್ನು ಸೇರಿಸಲು ಪ್ರಾರಂಭಿಸಿತು. ಹಿಂದಿಯನ್ನು ಸೇರಿಸುವುದಷ್ಟೇ ಆಗಿದ್ದರೆ ಸಮಸ್ಯೆ ಆಗಿರುತ್ತಿರಲಿಲ್ಲ. ಆದರೆ ಹಲವೆಡೆ ಹಿಂದಿಯನ್ನು ಸೇರಿಸುವ ಸಲುವಾಗಿ ಕನ್ನಡವನ್ನು ತೆಗೆಯುವ ಕೆಲಸವಾಯಿತು. ಶುರುವಿನಲ್ಲಿ, ನಾನು ಇವು ಕೇವಲ ಗಾಳಿಸುದ್ದಿಗಳೆಂದು ಇದರ ಕುರಿತು ಸಂದೇಹ ಹೊಂದಿದ್ದೆ. ಆದರೆ ತದನಂತರ ಬಿಜೆಪಿ ಎಂಪಿಗಳು ತಮ್ಮದೇ ಪಕ್ಷದ ಕೇಂದ್ರ ಸಚಿವರಿಗೆ ಕಾಳಜಿಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದಾಗ ನನಗೆ ಇದು ನಿಜವಾದ ಹಾಗೂ ಗಂಭೀರವಾದ ವಿಷಯವೆಂದು ಅರಿವಾಯಿತು. ಇದು ಪ್ರಚಲಿತ ಬಿಜೆಪಿ ಎಂಪಿ ಆದ ಕರ್ನಾಟಕದ ಪ್ರತಾಪ್ ಸಿಂಹ ಅವರು ಕನ್ನಡದ ಬದಲಾಗಿ ಹಿಂದಿಯನ್ನು ಸೇರಿಸಿದ್ದನ್ನು ಪ್ರಶ್ನಿಸುವ ಟ್ವೀಟ್.

ಟ್ವೀಟ್: https://twitter.com/mepratap/status/877759522336460801

ಈ ಸಮಸ್ಯೆಯ ವಿಚಾರಗಳನ್ನು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ಒಡಿಶಾದಲ್ಲಿಯೂ ಎತ್ತಿ ತೋರಿಸಲಾಗಿತ್ತು. ಒಡಿಶಾದ ಮುಖ್ಯಮಂತ್ರಿಯವರು ಹೆದ್ದಾರಿ ಮೈಲಿಗಲ್ಲುಗಳಲ್ಲಿ ಒಡಿಶಾ ತೆಗೆದು ಹಿಂದಿ ಸೇರಿಸುತ್ತಿರುವ ಕುರಿತಾಗಿ ಅತೃಪ್ತಿ ವ್ಯಕ್ತ ಪಡಿಸಿದ್ದರ ಕುರಿತಾದ ವರದಿ ಇಲ್ಲಿದೆ.

ಉಲ್ಲೇಖ:https://www.facebook.com/photo.php?fbid=10212490838335225&set=a.1770961003064.221799.1510418566&type=3&theater

ಈ ರೀತಿಯಾಗಿ ಕನ್ನಡವನ್ನು(ಅಥವಾ ಸ್ಥಳೀಯ ಭಾಷೆಯನ್ನು) ತೆಗೆದು ಹಾಕಿಯಾದರೂ ಹಿಂದಿಯನ್ನು ಸೇರಿಸುವ ಪ್ರಯತ್ನ ಹೆದ್ದಾರಿಯ ಮೈಲಿಗಲ್ಲುಗಳಷ್ಟೇ ಸೀಮಿತವಾಗಿರದೇ PSU ಬ್ಯಾಂಕುಗಳಲ್ಲಿ ಕೂಡ ಕೈಗೊಳ್ಳಲಾಯಿತು.

ಎಸ್‍ಬಿಐ ಕರ್ನಾಟಕದಾದ್ಯಂತ ಇರುವ ತನ್ನ ಎಟಿಎಂಗಳಲ್ಲಿ ಕನ್ನಡವನ್ನು ತೆಗೆದು ಹಾಕಿ ಹಿಂದಿಯನ್ನು ಸೇರಿಸಿದ ಉದಾಹರಣೆ ಇಲ್ಲಿದೆ. ನಂತರ ಸಾಮಾಜಿಕ ಮಾಧ್ಯಮದಲ್ಲಿಯ ಚಳುವಳಿಗಳ ಒತ್ತಡದಿಂದ ಮತ್ತೆ ಕನ್ನಡವನ್ನು ಸೇರಿಸಬೇಕಾಯಿತು.

ಉಲ್ಲೇಖ:https://www.facebook.com/photo.php?fbid=10212696327592328&set=a.1770961003064.221799.1510418566&type=3&theater

.

ಕನ್ನಡವನ್ನು ತೆಗೆದು ಹಿಂದಿಯನ್ನು ಕರ್ನಾಟಕದಲ್ಲಿ ತೂರುವ ಈ ಪ್ರಯತ್ನಗಳು ನಡೆದಂತೆಯೇ ಜನ ಸಿಟ್ಟಿಗೆದ್ದು #StopHindiImposition, #StopHindiImperialism ಇತ್ಯಾದಿ ಟ್ಯಾಗ್‍ಗಳೊಂದಿಗೆ ಚಳುವಳಿಗಳನ್ನು ನಡೆಸುತ್ತಿರುವಾಗ, ಇದಕ್ಕೆ ಸಮಾನಾಂತರವಾಗಿ ಕೇಂದ್ರ ಸರ್ಕಾರ ನೀಡುತ್ತಿದ್ದ ಹೇಳಿಕೆಗಳು, ಕೈಗೊಳ್ಳುತ್ತಿದ್ದ ಕ್ರಮಗಳು ಉರಿಯುತ್ತಿದ್ದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದವು.

.

ಉದಾಹರಣೆಗೆ, ಸರ್ಕಾರದ ಭಾಷಾ ನೀತಿಯ ಕುರಿತು ಪ್ರಶ್ನಿಸಿದಾಗ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಯೋಜನೆಗಳು ಹಿಂದಿಯಲ್ಲಿ ಕೈಗೊಂಡಾಗಲೇ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿಕೆ ನೀಡಿದರು. ಈ ಮೂಲಕ ಬಹುಶಃ ಕರ್ನಾಟಕದ ರೈತರು, ಡಿಜಿಟಲ್ ಇಂಡಿಯಾದ ಕ್ರಾಂತಿಯ ಭಾಗವಾಗಲು – ಅದು ಹಿಂದಿಯಲ್ಲಿ ಕಾರ್ಯಗತವಾಗುವುದರಿಂದ, ಮೊದಲು ಹಿಂದಿಯನ್ನು ಕಲಿಯಬೇಕು ಎಂದು ಸೂಚಿಸಿದರು. ಇನ್ನೊಂದೆಡೆ ಬಿಜೆಪಿ ವಕ್ತಾರ ಮತ್ತು ವಕೀಲರೊಬ್ಬರು ಎಲ್ಲ ದಕ್ಷಿಣ ಭಾರತದ ಶಾಲೆಗಳಲ್ಲಿ ಹಿಂದಿ ಕಲಿಕೆ ಕಡ್ಡಾಯ ಮಾಡುವಂತೆ ಸುಪ್ರೀಂ ಕೋರ್ಟಿನಲ್ಲಿ PIL ಸಲ್ಲಿಸಿದರು.

ಉಲ್ಲೇಖ:https://www.facebook.com/photo.php?fbid=10212326802874441&set=a.1770961003064.221799.1510418566&type=3&theater

.

ಕನ್ನಡದ ವಾರ್ತಾ ಪತ್ರಿಕೆಗಳು ಈ ಆರೋಪಿಸಲಾಗಿರುವ ಹಿಂದಿ ಹೇರಿಕೆಯ ವಿರುದ್ಧ ದಾಳಿಯನ್ನು ಪ್ರಬಲವಾಗಿಸಿದವು ಮತ್ತು, ಕೇಂದ್ರ ಸರ್ಕಾರವು ಹಿಂದಿಯನ್ನು ಒತ್ತಾಯದಿಂದ ಜನಸಾಮಾನ್ಯರಿಗೆ ತುರುಕಿ ವಿನಾ ಕಾರಣ ಭಾರ ಹೇರುತ್ತಿದೆ ಎನ್ನುವಂತಹ, ಈ ಕೆಳಗಿನ ರೀತಿಯ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದವು.

ಇಷ್ಟೆಲ್ಲ ಸಾಮಾಜಿಕ ಸಂಘರ್ಷ ಮತ್ತು ಚಳುವಳಿಗಳ ಹೊರತಾಗಿಯೂ, ಕೇಂದ್ರ ಸಚಿವರುಗಳ ಇತ್ತೀಚಿನ ಹೇಳಿಕೆಗಳು ಕೂಡ ಸಾಂತ್ವನ ನೀಡುವಂತಿಲ್ಲ. ಏಕೆಂದರು ಅವರು ಹಿಂದಿ ರಾಷ್ಟ್ರೀಯ ಭಾಷೆ ಎನ್ನುವ ಹುಸಿ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹರಡುವಂತೆ ಕಾಣುತ್ತಿದೆ (ವಾಸ್ತವದಲ್ಲಿ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆಯಿಲ್ಲ). ಜೊತೆಗೆ ಹಿಂದಿಯನ್ನು ರಾಷ್ಟ್ರೀಯತೆಯೊಂದಿಗೆ ಬೆರೆಸಲಾಗುತ್ತಿದೆ (ಹಿಂದಿ ತಿಳಿಯದವರು ಕಡಿಮೆ ರಾಷ್ಟ್ರಭಕ್ತರು ಎಂದು ಸೂಚಿಸುವಂತೆ). ಮತ್ತು ಹಿಂದಿಯೇ ಭಾರತವನ್ನು ಸಮೃದ್ಧಿಯತ್ತ ಕೊಂಡೊಯ್ಯಬಹುದೆಂದು ಹೇಳುತ್ತಿದ್ದಾರೆ, ಆದರೆ ವಾಸ್ತವದಲ್ಲಿ ಹಿಂದಿ ಭಾಷಿಗರಲ್ಲದ ರಾಜ್ಯಗಳು ಇತರ ರಾಜ್ಯಗಳಿಗಿಂತ ಮುಂದಿದ್ದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ.

ಹಾಗೆಂದು ಇಡೀ ಬಿಜೆಪಿ ಹೀಗೆ ಹೇಳಿಕೆಗಳನ್ನು ನೀಡಿ ಕನ್ನಡಿಗರನ್ನು ಪರಕೀಯರಾಗಿಸುತ್ತಿದೆ ಎಂದೇನಲ್ಲ. ನಾನು ಈ ಮುಂಚೆ ಟ್ವೀಟ್ ಒಂದರಲ್ಲಿ ತೋರಿಸಿದಂತೆ, ಬಿಜೆಪಿಯಲ್ಲಿ ತಮ್ಮ ಪಕ್ಷದ್ದೇ ಕೇಂದ್ರ ನಾಯಕತ್ವವನ್ನು ಈ ಕುರಿತಾಗಿ ಪ್ರಶ್ನಿಸಿದ ಎಂಪಿಗಳಿದ್ದಾರೆ, ಪ್ರತಾಪ್ ಸಿಂಹರಂತೆ.

ಬಿಜೆಪಿ ಎಂಪಿ ಪ್ರತಾಪ್ ಸಿಂಹ ಅವರು ಈ ಕುರಿತು ಕಾಳಜಿ ವ್ಯಕ್ತಪಡಿಸಿದ ಇನ್ನೊಂದು ಉದಾಹರಣೆ ಇಲ್ಲಿದೆ.

ದೊಡ್ಡ ಹೆಸರಿದ್ದು ಬಿಜೆಪಿಯ ಬೆಂಬಲಿಗರಾದಂತಹ ಮೋಹನ್‍ದಾ‍ಸ್‍ ಪೈ ಅಂತಹವರು ಸರ್ಕಾರವನ್ನು ಈ ತರಹದ “ಭಾಷಾ ಹೇರಿಕೆ”ಯ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದ್ದಿದೆ.

ಇ ಕುರಿತು ಧ್ವನಿ ಇತ್ತಿರುವ ಇನ್ನೊಬ್ಬ ಬಿಜೆಪಿ ನಾಯಕರೆಂದರೆ ಕರ್ನಾಟಕದ ಬಹು ಪ್ರಚಲಿತ ಎಂಎಲ್‍ಎ ಸಿಟಿ ರವಿ.

.

“ಹಿಂದಿ ಹೇರಿಕೆ”ಯ ಕುರಿತು ಚಳುವಳಿಯೊಂದರಲ್ಲಿ ಬಿಜೆಪಿ ಎಂಎಲ್‍ಎ ಸಿಟಿ ರವಿ ಅವರು ಭಾಗವಹಿಸಿದ ಉದಾಹರಣೆ ಇಲ್ಲಿದೆ. ನಂತರದಲ್ಲಿ ಕೇಂದ್ರದ ನಿಲುವು ಬಿಗುವಾದಾಗ ಮೆಟ್ರೋ ವಿಷ್ಯದಲ್ಲಿ ಅವರೂ ಗೊಂದಲಮಯವಾದ ಹೇಳಿಕೆಗಳನ್ನು ನೀಡಿದರು .

ಟ್ವೀಟ್: https://twitter.com/CTRavi_BJP/status/765148884872011777

.

ಈಗ ನಾವು ಇಡೀ ವಿಶ್ಲೇಷಣೆಯನ್ನು ಸಾರಾಂಶಗೊಳಿಸೋಣ:

  • ನಾವು ಭಾರತೀಯ ಅಂಚೆ, ಎಸ್‍ಬಿಐನಂತಹ PSU ಬ್ಯಾಂಕುಗಳು, ಮಂಡ್ಯದ ಬ್ಯಾಂಕ್ ಅಧಿಕಾರಿ, ಸರ್ಕಾರಿ ಯೋಜನೆಯಾದ RTI ಇತ್ಯಾದಿ ಹಲವು ಸರ್ಕಾರಿ ಸಂಸ್ಥೆಗಳ ಉದಾಹರಣೆಗಳಲ್ಲಿ ನೋಡಿದಂತೆ, ಕರ್ನಾಟಕದಲ್ಲಿ ನೆಲೆಸಿ ಹಿಂದಿ/ಇಂಗ್ಲಿಷ್ ಬದಲಾಗಿ ಕನ್ನಡ ಗೊತ್ತಿರುವ ಕಾರಣದಿಂದಾಗೆ ಸೇವೆ ನಿರಾಕರಿಸಲ್ಪಟ್ಟ ಕೆಲವು ಅಥವಾ ಹಲವು ನಿದರ್ಶನಗಳಿವೆ.
  • ನಾವು ಕನ್ನಡ ದಿನಪತ್ರಿಕೆಗಳಲ್ಲಿ ಭಾರತೀಯ ರೈಲ್ವೆಯ ಜಾಹೀರಾತುಗಳಲ್ಲಿ, ಸರ್ಕಾರಿ ಆದಾಯ ತೆರಿಗೆ ವಿಭಾಗದ ಜಾಹೀರಾತುಗಳಲ್ಲಿ, ಜನಕಲ್ಯಾಣ ಯೋಜನೆಗಳ ವಿಭಾಗಗಳ, ಸ್ಚಚ್ಛ ಭಾರತ ಅಭಿಯಾನದ ಜಾಹೀರಾತುಗಳಲ್ಲಿ ನೋಡಿದಂತೆ, ತಮ್ಮದೇ ಸರ್ಕಾರ ಏನು ಹೇಳುತ್ತಿದೆಯೆಂದು ತಿಳಿಯದೆಯೆ ಕರ್ನಾಟಕದ ಜನಕ್ಕೆ ಪರಕೀಯತೆಯ ಭಾವನೆ ಮೂಡುತ್ತಿರಬಹುದು. ಈ ರೀತಿಯ ಜಾಹೀರಾತುಗಳು ಸಾರ್ವಭೌಮ ಧೋರಣೆಯನ್ನು ತೋರಿಸುವುದಲ್ಲದೇ, ಇದು ಜನತೆಯ ಹಣವನ್ನು ಪೋಲು ಮಾಡುವಂತೆ ಕೆಲಸ ಮಾಡುತ್ತಿದೆ.
  • ನಾವು ಎಟಿಎಂಗಳಲ್ಲಿ, ಹೆದ್ದಾರಿಯ ಮೈಲಿಗಲ್ಲುಗಳಲ್ಲಿ ಕನ್ನಡವನ್ನು ತೆಗೆದು ಹಿಂದಿಯನ್ನು ಸೇರಿಸುತ್ತಿರುವಾಗ ಕನ್ನಡಿಗರಲ್ಲಿ ಸರ್ಕಾರ ಪ್ರಾದೇಶಿಕ ಭಾಷೆಯನ್ನು ಕುಂದಿಸಿಯೂ ಹಿಂದಿಯನ್ನು ತೂರಿಸಲು ಪ್ರಯತ್ನಿಸುತ್ತಿದೆ ಎಂಬ ಕಾರಣಕ್ಕಾಗಿ ಪರಕೀಯತೆಯ ಭಾವ ಮೂಡುತ್ತಿರುವಂತಿದೆ.
  •  ನಾವು ಸರ್ಕಾರ ರೂಪಿಸಿರುವ ನೀತಿಗಳಲ್ಲಿ ಹಾಗೂ ಕೇಂದ್ರ ಸಚಿವರುಗಳ ವಿವಾದಾತ್ಮಕ ಹೇಳಿಕೆಗಳಲ್ಲಿ ನೋಡಿರುವಂತೆ, ಸರ್ಕಾರ ಹಿಂದಿಯನ್ನು ಹೇರಲು ಸುಳ್ಳುಗಳನ್ನು (ಬಾರತಕ್ಕಿ ರಾಷ್ಟ್ರೀಯ ಭಾಷೆ ಇಲ್ಲದಿರುವಾಗಲೂ ಹಿಂದಿ ರಾಷ್ಟ್ರೀಯ ಭಾಷೆಯೆಂದು) ಹೇಳಿಯಾದರೂ ಪ್ರಯತ್ನಿಸುತ್ತಿದೆ ಎನ್ನುವ ಭಾವನೆ ಮೂಡಿರುವಂತಿದೆ. ಹಿಂದಿ ಮಾತ್ರ ಪ್ರಗತಿಯತ್ತ ಕೊಂಡೊಯ್ಯಬಹುದೆಂದು ದಾರಿತಪ್ಪಿಸುವ ಹೇಳಿಕೆ ನೀಡಿಯಾದರೂ, ಹಿಂದಿಯನ್ನು ರಾಷ್ಟ್ರೀಯತೆ/ರಾಷ್ಟ್ರಭಕ್ತಿಗೆ ತಳಕು ಹಾಕಿ, ನಾವು ನೋಡಿರುವಂತೆ ಈಗಾಗಲೇ ಸಂಘರ್ಷಗಳು ಹುಟ್ಟಿರುವ ವಿಚಾರಗಳಲ್ಲಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
  • ಕೊನೆಯದಾಗಿ ಬಿಜೆಪಿಯೊಳಗೆಯೇ ಈ ವಿಚಾರವಾಗಿ, ಕರ್ನಾಟಕದ ಕೆಲ ಬಿಜೆಪಿ ನಾಯಕರು ಕೇಂದ್ರ ಬಿಜೆಪಿಯನ್ನು ಪ್ರಶ್ನಿಸುವ ಮೂಲಕ, ಸಂಘರ್ಷ ಮೂಡಿದೆಯನ್ನುವ ಕಾರಣವಾಗಿ ಇದು ವಿರೋಧ ಪಕ್ಷ ಹೀಗೆಯೇ ಹುಟ್ಟಿಸಿದ ಯಾವುದೋ ವಿಷಯವಾಗಿರದೇ ನಿಜವಾದ ಸಮಸ್ಯೆಗಳಾಗಿದ್ದು, ಕರ್ನಾಟಕದ ಜನಕ್ಕೆ ಇದು ಪರಿಣಾಮ ಬೀರುತ್ತಿರುವುದರಿಂದಲೇ ಬಿಜೆಪಿ ನಾಯಕರು ಈ ಕುರಿತು ಧ್ವನಿ ಎತ್ತಿದ್ದಾರೆಂದು ಕಾಣಿಸುತ್ತಿದೆ.

ಹೀಗೆ ನಾವು ಇಡೀ ಸನ್ನಿವೇಶವನ್ನು ವಿವಿಧ ಉದಾಹರಣೆ ಹಾಗೂ ದೃಷ್ಟಿಕೋನಗಳಿಂದ ವಿಶ್ಲೇಷಿಸಿದ ನಂತರ ನಮ್ಮ ಮುಂದೆ ದೊಡ್ಡ ಪ್ರಶ್ನೆ ಉಳಿದಿರುತ್ತದೆ.

ಈ “ಹಿಂದಿ ಹೇರಿಕೆ” ಅಥವಾ “ಹಿಂದಿ ಸಾರ್ವಭೌಮತ್ವ” ಕೇವಲ ವಿರೋಧ ಪಕ್ಷಗಳು ಸೃಷ್ಟಿಸಿದ ವದಂತಿಯೇ ಅಥವಾ ಕನ್ನಡಿಗರು ವ್ಯಕ್ತ ಪಡಿಸುತ್ತಿರುವ ಹುಸಿ ಕಳಕಳಿಯೇ?

ಅಥವಾ ಇದು ದಿನದಿಂದ ದಿನಕ್ಕೆ ಹೆಚ್ಚು ಗಂಭೀರವಾಗುತ್ತಿರುವ, ಐದು ಕೋಟಿ ಕನ್ನಡಿಗರು ತಮ್ಮ ರಾಜ್ಯದಲ್ಲಿಯೇ ಪರಕೀಯರೆನಿಸದ ಹಾಗೆ ಕೇಂದ್ರ ಸರ್ಕಾರವು ತಕ್ಷಣ ತಿದ್ದುಪಡಿಸಿಕೊಳ್ಳುವಂತೆ ಸಾರುತ್ತಿರುವ ವಾಸ್ತವವೇ?

ಪ್ರಶ್ನೆಯನ್ನು ಸರಳ ಪದಗಳಲ್ಲಿ ಹೇಳುವುದಾದರೆ:

ಇದು ಹಿಂದಿ ಹೇರಿಕೆ ಅಥವಾ ಹಿಂದಿ ಸಾರ್ವಭೌಮತ್ವವಾ?

ಇದು ವಾಸ್ತವವಾ ಅಥವಾ ಹುಸಿ ಪ್ರಚಾರವಾ?

ನಿರ್ಧಾರವನ್ನು ನಾನು ಓದುಗರಿಗೆ ಬಿಟ್ಟಿದ್ದೇನೆ.


ಅನುವಾದ : ಸುಬ್ರಮಣ್ಯ ಹೆಗಡೆ
ಮೂಲತಃ ಶಿರಸಿಯವರಾದ ಸುಬ್ರಹ್ಮಣ್ಯ ಹೆಗಡೆ ಈಗ ತಿರುವನಂತಪುರಂನಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಅನುಸಂಧಾನ ಕೇಂದ್ರದಲ್ಲಿ ಭೌತಶಾಸ್ತ್ರದ ಸಂಶೋಧನಾ ವಿದ್ಯಾರ್ಥಿ. ಆಗೀಗ ಕವಿತೆಗಳನ್ನು ಬರೆಯುತ್ತಾರೆ. ಬ್ಲಾಗಿಗ.

One comment to “ಹಿಂದಿ ಹೇರಿಕೆ: ಹುಸಿಪ್ರಚಾರವೇ ಅಥವಾ ವಾಸ್ತವವೇ?”
  1. Very good and detailed writing on current issue. This is the time for Central Govt to understand fact that langauge liberty is one of top most important and unity in divercity. Other wise one day this will be a big matter of concern to republic of India.

ಪ್ರತಿಕ್ರಿಯಿಸಿ