ಒಂದಷ್ಟು ಹೊತ್ತು ಕತ್ತಲು ಕವಿಯುವಂತೆ ಮಾಡಿದ ಕವಿಗೆ ನಮಸ್ಕಾರ

ಹೊಸ ತಲೆಮಾರಿನ ಪ್ರಮುಖ ಕವಿಗಳಲ್ಲೊಬ್ಬರಾದ ಆರಿಫ್ ರಾಜಾ ಅವರ ಹೊಸ ಕವನ ಸಂಕಲನ “ನಕ್ಷತ್ರ ಮೋಹ” ದ ಕುರಿತಾಗಿ ಕನ್ನಡದ ಪ್ರಮುಖ ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ಅವರ ಅನಿಸಿಕೆಗಳು ನಿಮ್ಮ ಇಂದಿನ ಓದಿಗೆ …

ಈಗ ಕತ್ತಲಾಯಿತು. ಹೀಗೆ ಕತ್ತಲಾಗಿ ಎಷ್ಟೋ ಎಷ್ಟೋ ವರ್ಷ ವರ್ಷವಾಗಿತ್ತು. ಮತ್ತೆ ಬೆಳಕು ಹೊಳೆಯಾಗಿ ಹರಿದರೂ, ಬ್ಲೇಡು ಆಗಿ ಕತ್ತಲನ್ನು ಹರಿದರೂ, ಅಥವಾ ಮಾತಾಗಿ ಮಾಮೂಲು ಬೆಳಕಿನಲ್ಲಿ ಅಡ್ಡಾಡುವುದು ಶುರುವಾದರೂ ಒಂದಷ್ಟು ಹೊತ್ತು ಕತ್ತಲು ಕವಿಯುವಂತೆ ಮಾಡಿದ ಕವಿಗೆ ನಮಸ್ಕಾರ. ತುಂಬಿಕೊಂಡ ಕತ್ತಲಿನಲ್ಲಿ ನಕ್ಷತ್ರಗಳ ಬೆಳಕಿನಲ್ಲಿ ಇದು ಯಾವ ಮಬ್ಬು ಬೆಳಕೆಂದು ಅಚ್ಚರಿ. ಕವಿ ಭಾವದ ಆಕಾಶದ ಚುಕ್ಕೆಗಳ ಬೆಳಕೋ ಈ ಓದುಗ ಮನಸಿನ ನಕ್ಷತ್ರಗಳ ಮಿನುಗೋ? ಕವಿಯೂ ಒಂದು ನಕ್ಷತ್ರ, ಓದುಗ ಇನ್ನೊಂದು ನಕ್ಷತ್ರ. ನಕ್ಷತ್ರಗಳ ನಡುವೆ ಬೆಳಕಿನ ಸ್ಪರ್ಶ. ತಪ್ಪಿರಬೇಕು. ಬೆಳಕು ಬೆಳಕನ್ನು ಮುಟ್ಟುವುದಿಲ್ಲ, ಬೆರೆಯುತ್ತದೆ. ತಪ್ಪು. ಬೆರೆಯುವುದಕ್ಕೆ ಬೇರೆ ಬೇರೆ ಬೆಳಕಿಲ್ಲ. ಇರುವುದು ಒಂದೇ ಬೆಳಕು. ಅಲ್ಲ. ಇರುವುದು ಒಂದೇ ಕತ್ತಲು. ಮನಸಿನ ಕತ್ತಲು. ಕತ್ತಲೆಯೂ ಅದೇ, ಬೆಳಕೂ ಅದೇ. ಅಪರಿಮಿತದ ಈ ಕತ್ತಲಲ್ಲಿ ಹೆಸರಿರದ ಕೋಟಿ ಕೋಟಿ ಕೋಟಿ ನಕ್ಷತ್ರಗಳಲ್ಲಿ ಬರೀ ಇಪ್ಪತ್ತೇಳಕ್ಕೆ ಹೆಸರಿಟ್ಟು, ಲೋಕದ ಎಲ್ಲ ವ್ಯಾಪಾರ ಅರಿವಾಯಿತೆಂಬ ಪೊಳ್ಳು ಬೀಗು. ಹೀಗೆ ಅಕಸ್ಮಾತ್ತಾಗಿ ಒಳಗೂ ಕತ್ತಲೆ ಕವಿದಾಗ ಮಾತ್ರವೇ ಮನಸ್ಸೊಂದು ಸಮುದ್ರ, ಭಾವಗಳೆಲ್ಲ ಮಿನುಗು ಮೀನು ಚುಕ್ಕೆಗಳು; ಅಸಂಖ್ಯ ಮಿನುಗು ಚುಕ್ಕೆಗಳಿಗೆ ಹೆಸರೇ ಇಲ್ಲ, ನಮ್ಮೊಳಗಿನ ಭಾವಗಳಿಗೂ ಹೆಸರೇ ಇಲ್ಲ ಅನ್ನುವುದು ಕೂಡ ನಮಗೇ ಗೊತ್ತಾಗುವುದು.

ಎಷ್ಟೆಂದು ಹೆಸರಿಡುವುದು? ಲೋಕದಲ್ಲಿ ಎಷ್ಟು ಮನುಷ್ಯರಿದ್ದಾರೋ ಅಷ್ಟು ಹೆಸರು ಇಲ್ಲ ಅಲ್ಲವೇ? ನಕ್ಷತ್ರವನ್ನೂ ಮೀನನ್ನೂ ಒಟ್ಟಿಗೆ ತಂದಿಟ್ಟುಕೊಂಡ ಕನ್ನಡದ ಅಚ್ಚರಿ ಅದೇ. ಮಿನುಗು ಅನ್ನುವ ಮೂಲದಲ್ಲಿರುವುದು ಮೀನ್ ಅನ್ನುವ ಕೆಲಸದ ಪದ. ನಕ್ಷತ್ರದ ಇನ್ನೊಂದು ಹೆಸರು. ಮೀನು ನಕ್ಷತ್ರ ಎರಡೂ ಒಂದೇ ಅಂದರೆ ಮನಸ್ಸು ಆಕಾಶವೂ ಹೌದು, ಕಡಲೂ ಹೌದು. ಮಿನುಗುವ ನಕ್ಷತ್ರ, ನೀರಿನ ಆಕಾಶದಲ್ಲಿ ಮಿನುಗಿ ಈಜುವ ಭಾವ—ಎರಡೂ ಚಕಮಕಿಸುತ್ತಲೇ ಇರುತ್ತವೆ. ಇನ್ನೊಂದು ಜೀವದ ಕಣ್ಣಂಚಿನಲ್ಲಿ ಬೆಳಕಿನ ಗುಳ್ಳೆ ಮೂಡಿದ್ದು, ಮಿನುಗಿದ್ದು ಮಾತ್ರ ಕಾಣುತ್ತದೆ. ಹಾಗೆ ಕಂಡದ್ದನ್ನು ಹೇಳುವುದಕ್ಕೆ ಮಾತಿಲ್ಲ. ನಮ್ಮ ಕಣ್ಣಲ್ಲೂ ಬೆಳಕು ಹೊಳೆದು ಅದು ಇನ್ನೊಂದು ಕಣ್ಣಿಗೆ ತಲುಪಿ ಅರ್ಥವಾಗುವ ಪವಾಡ ನಡೆಯಬೇಕು.

ಬೆಳಕು, ಹೊಳೆ, ಮೀನು, ನಕ್ಷತ್ರ—ಯಾವುದು ನೀರು, ಯಾವುದು ಆಕಾಶ, ಯಾವುದು ಯಾವುದು? ಇದೇ ಅದು, ಅದೇ ಇದು. ಅಲ್ಲ, ಆ ಅದು ಬೇರೆ, ಈ ಇದು ಬೇರೆ. ಹಾಗೆ ಬೇರೆಬೇರೆಯಾದರೆ ಮಾತ್ರ ಮಾತು ಬೇಕು. ಒಂದಾಗುವ ಆಸೆ. ಒಂದಾದಾಗ ಮಾತು ಸೂತಕ. ಒಂದಾದದ್ದು ನನಗೂ ನಿಮಗೂ ಗೊತ್ತಾಗಬೇಕೆಂದಾಗ ಮಾತು ಬೇಕು. ಮಾತೆಂದರೆ ಬೇರೆ ಬೇರೆ. ನಕ್ಷತ್ರ ಬೇರೆ ಬೇರೆಯಾಗಿ ಕಂಡರೂ ಅವೆಲ್ಲವೂ ಒಂದೇ ಬೆಳಕು. ಬೆಳಕಿನಲ್ಲಿ ಕವಿ ಬೇರೆ, ಓದುಗರು ಬೇರೆ ಬೇರೆ. ಮಿನುಗಿ ಹೊಳೆಯುವ ಕತ್ತಲಲ್ಲಿ ಕವಿ, ಓದುಗ ಎಲ್ಲಾ ಒಂದೇ.

ಹಾಗಾಗಿ ಮೋಹ ಹುಟ್ಟುತ್ತದೆ. ಹೆಸರಿಲ್ಲದ್ದಕ್ಕೆಲ್ಲ ಹೆಸರಿಟ್ಟು ವಶಮಾಡಿಕೊಳ್ಳುವ ಮೋಹ. ನುಡಿ ಮೋಹ. ನುಡಿಯೆಂದರೇನು—ನಮಗೆ ಎಂದೆಂದೂ ಗೊತ್ತಿರದ, ಗೊತ್ತಾಗದ ಸಾವಿರ ಸಾವಿರ ಸಂಗತಿಗಳನ್ನು ನಮಗೆ ಗೊತ್ತಿರುವ ಹತ್ತಾರು ನುಡಿಗಳಲ್ಲಿ ಕಟ್ಟಿಹಾಕಿ ತಿಳಿದೆವೆಂದು ಬೀಗುವ ಕ್ರಿಯೆ. ಅನಾಥ ಮಗು ಕಂಡಿದ್ದೇವೆ, ಬೆಕ್ಕು ಸಾಕಿದ್ದೇವೆ, ಕೊಕ್ಕರೆ ನಡೆ ನೋಡಿದ್ದೇವೆ ನಕ್ಷತ್ರವೂ ಹಾಗೆ ಅಂದುಕೊಳ್ಳುವುದು ಮೊದಲ ಹೆಜ್ಜೆ. ಅನಾಥ ಮಗು, ತನ್ನ ಪರಿಚಿತ ವಲಯದಲ್ಲೇ ಸುತ್ತಾಡುವ ಬೆಕ್ಕು, ಕುಣಿದು ನಲಿವ ಕೊಕ್ಕರೆ ಎಲ್ಲಾ ನಾವೇ, ಏನೆಂದು ಹೆಸರಿಡುತ್ತೇವೋ ಅದೆಲ್ಲ ಹೆಸರಿಟ್ಟ ನಮ್ಮ ಮನಸಿನ ಭಂಗಿ. ಕವಿ ಹೀಗೆ ನುಡಿಮಿಂಚು ಮಿನುಗಿಸಿ ಓದುಗರನ್ನೂ ನಕ್ಷತ್ರಮೋಹಿಗಳನ್ನಾಗಿ ಮಾಡಿದ್ದು ಇಲ್ಲಿದೆ.

ಮೋಹದ ಇನ್ನೊಂದು ಲಕ್ಷಣ ಸಣ್ಣಗಾದರೂ ಸುಳಿಯುವ ಅಸೂಯೆ. ನಮಗೆ ಕಾಣಲಾಗದ್ದು, ಕೇಳಲಾಗದ್ದು ನಾಯಿಗೆ ಕಾಣುತ್ತದಾ, ಕೇಳುತ್ತದಾ? ವೇಷಾಂತರ ಮಾಡಿಕೊಂಡು ದೇವದೂತರ ಜೊತೆಯಲ್ಲಿ ಬಂದು ಇಬ್ಬನಿ ಪಾದದ ಹೆಜ್ಜೆ ಗುರುತು ಬಿಟ್ಟು ಹೋದ ನಕ್ಷತ್ರ ನಮಗೆ ಪತ್ತೆಯಾಗಲೆಂದು ನಾಯಿ ಬೊಗಳಿದ್ದು ಅರ್ಥವಾಗಲಿಲ್ಲವಾ? ಅಥವಾ ಈ ಭೂಮಿಯೇ ಉರಿದು ಉರುಳುವ ನಕ್ಷತ್ರಬೂದಿಯನ್ನು ತುಂಬುವ ಬಟ್ಟಲೋ? ನಾವೆಲ್ಲ ಬೂದಿಯಾದವರೋ?

ನಾವು ಬದುಕೆನ್ನುವುದು ಸಾವು. ಬರ್ದುಂಕು ಅಂದರೆ ಸಾವಿನಿಂದ ಆವೃತ್ತವಾದದ್ದು. ಮರ ಅಸ್ತಿಪಂಜರವಷ್ಟೇ, ಅದಕ್ಕೆ ತೂಗುಬಿದ್ದಿರುವ ಹುಲಿಯುಗುರು ಚಂದ್ರ. ಇದು ಕನಸೋ? ಕನಸು ಪರಚುವ ಬೆಕ್ಕು ಕೇಳುತ್ತದೆ. ಕೇಳುವುದು ಕೇಳಿ-ನಕ್ಷತ್ರಗಳ ಜೊತೆಯಲ್ಲಿ ಮಾನಸ ಕೇಳಿ, ನಕ್ಷತ್ರವು ಮಾನಸಗಳ್ಳಿ.

ನಕ್ಷತ್ರ ಕ್ಯಾನ್ಸರ್ ವಾರ್ಡಿನ ಕಿಟಕಿಯಿಂದ ರಾತ್ರಿ ಎರಡು ಗಂಟೆಯಲ್ಲಿ ಕಾಣುವ ನಕ್ಷತ್ರ. ‘ಬೆಳಕು ಹಿಂಡಿದೆ ಕಣ್ಣಲ್ಲಿ ಕತ್ತಲನ್ನಲ್ಲ ಕೀವು ಬೆಳಕಿನ ನಕ್ಷತ್ರ’.

ರಾತ್ರಿಯಲ್ಲಿ ಕೀವು ಬೆಳಕಿನ ನಕ್ಷತ್ರ ಕಳಚುವ ಮೌನ ಕಿಟಕಿ ಗಾಜನ್ನು ಬಡಿದು, ಜರಡಿ ಎದೆಯನ್ನು ಹಾಯ್ದು, ವಸಂತಕಾಲದಲ್ಲಿ ಕಸಾಯಿಖಾನೆಯಲ್ಲಿ ಹೂ ಅರಳಿದ ಹಾಗೆ, ಮೀನು ಗಾಳಿಗೆ ಹಾರಿ ರೆಕ್ಕೆ ಕೊನರಿದ ಹಾಗೆ, ‘ಕಡಲಿನೊಳಗೋಡೆಗಳಿಗೆ ತೂಗಿದ ಕಿನ್ನರಿಯ ತಂತಿಯಲಿ ಯಾರೋ ಮೀಟಿದ ಯುಗ ಯುಗಗಳ ಯುಗಳ ರಾಗ’. ಈ ಕನಸು ಮುರಿಯದಿರಲಿ.

ಮೊದಲಲ್ಲಿ ಎದುರಾಗುವ ಇಂಥ ನಾಲ್ಕು ಮಾತು ನಕ್ಷತ್ರಬಯಲ್ಲಿ ಸಂಚಾರ ಮಾಡುವುದಕ್ಕೆ ದಾರಿದೋರುಗಂಬಗಳ ಹಾಗಿವೆ. ಓದುಗರಾಗಿ ನಮಗೆಲ್ಲ ಪರಿಚಿತವಾಗಿರುವ ನೀಳ್ಗವಿತೆಗಳು ತೈಲಧಾರೆಯಂತೆ ಏಕಾಗ್ರವಾಗಿ ಒಂದು ಕಥೆಯನ್ನೋ, ಭಾವದ ವಿವಿಧ ಮಗ್ಗುಲನ್ನೋ ಎರೆಯುತ್ತವೆ. ಅರೀಫರ ಈ ಪುಸ್ತಕ ಅಂಥ ನೀಳ್ಗವಿತೆಯಲ್ಲ, ಮೂವತ್ತ ನಾಲ್ಕು ಸ್ವಸಂಪೂರ್ಣ ಭಾವ ಸಂಕೀರ್ಣ ಮಿನುಗುಗಳು. ಎಲ್ಲದರಲ್ಲೂ ನಕ್ಷತ್ರವು ರೂಪಕವಾಗಿದೆ, ವರ್ಣಿಸುವ ವಸ್ತುವನ್ನೂ ತನ್ನನ್ನೂ ಬೆಳಗಿಕೊಂಡಿದೆ. ಕವಿ ನುಡಿಗೆ ಪ್ರಚೋದನೆಯಾಗಿದೆ, ಅಪರೂಪಕ್ಕೆ ಕವಿ ನುಡಿಯನ್ನು ಆಲಿಸುವ ಜೀವವೂ ಆಗಿದೆ. ಸಂಖ್ಯೆ ಮೂವತ್ತನಾಲ್ಕಾದರೂ ಅವು ಮೀಟುವ ಭಾವಗಳು ಅಸಂಖ್ಯ. ಅಸಂಖ್ಯ ಯಾಕೆಂದರೆ ಭಾಷೆಯ ಸಹಜ ಗುಣ—ಪದಗಳೆರಡು ಜೊತೆಯಾದಾಗ ಹತ್ತಾರು ಭಾವಗಳು ಮನಸ್ಸಲ್ಲಿ ತಟಕ್ಕನೆ ಮಿಂಚುವುದು ಒಂದು: ಇನ್ನೊಂದು ಕಾರಣ ಕವಿಯು ಹಾಗೆ ಪದಗಳನ್ನು ಅನಿರೀಕ್ಷಿತವಾಗಿ ಜೋಡಿಸಿದಾಗ ಓದುಗರಾಗಿ ನಮ್ಮ ಮನಸ್ಸಿನಲ್ಲಿ ಉಳಿದುಕೊಂಡಿರುವ ಇತರ ಅಸಂಖ್ಯ ನುಡಿನೆನಪುಗಳು ಎಚ್ಚರಗೊಂಡು ಮರುಜೋಡಣೆಗೊಳ್ಳುವುದು. ಮಾನಸಗಳ್ಳಿ ಪಂಪನನ್ನು, ಹುಲಿ-ಬೆಕ್ಕುಗಳ ಜೊತೆಯು ಶಿಶುಗೀತೆ, ಬೆಕ್ಕಾದಂತೆ ಹುಲಿ ಅನ್ನುವ ಕುವೆಂಪು, ಮುಖಾಮುಖಿ, ಮತ್ತೊಂದು ಮುಖಾಮುಖಿಯ ತಿರುಮಲೇಶರ ರಚನೆಗಳನ್ನೂ, ಮೀನು ಹಾರಿದ್ದು ಕಡಲಿನೊಳಗೋಡೆಗಳಿಗೆ ತೂಗಿದ ಕಿನ್ನರಿ ತಂತಿ ಮೀಟಿದ್ದು, ಬೆಡಗಿನ ವಚನಗಳನ್ನೂ ಮೊಳೆಯದ ಅಲೆಗಳ ಮೂಕ ಮರ್ಮರವನ್ನೂ ನನ್ನೊಳಗೆ ತಡವಿ ಎಬ್ಬಿಸಿದವು. ಹೀಗಾದಾಗ ಓದುಗ ಮನಸ್ಸು ಭಾವಸಂಚಾರಕ್ಕೆ, ಕಾವ್ಯಮೀಮಾಂಸಕರನ್ನು ನೆನೆದರೆ ಭಾವವ್ಯಭಿಚಾರಕ್ಕೆ ತೊಡಗಿ ಅನೇಕ ಭಾವ-ಅರ್ಥಗಳ ಕೂಸುಗಳ ಕಲರವ ತುಂಬಿಕೊಳ್ಳುತ್ತದೆ. ಕವಿ ಅನಾಥನಲ್ಲ, ಓದುಗರೂ ಅನಾಥರಲ್ಲ—ನಮ್ಮ ನಮ್ಮ ಭಾಷೆ ತಿದ್ದಿದ ಕೂಸುಗಳು, ‘ನುಡಿ’ಎಂಬೊಡೆಯನ ಶರಣರು. ಇಂಥ ಭಾವ ತಂದುಕೊಡುವ ಕವಿ ಮುಖ್ಯ.

ಇನ್ನೊಂದು ನುಡಿಚೋದ್ಯವಿದೆ. ವರ್ಣಿಸಿದ ವಸ್ತು ಅರ್ಥವಾಗುವಷ್ಟೇ, ಕೆಲವೊಮ್ಮೆ ಅದಕ್ಕಿಂತ ಹೆಚ್ಚಾಗಿ, ವರ್ಣಿಸಿದ ಮನಸ್ಸು ಅನಾವರಣಗೊಳ್ಳುತ್ತದೆ. ಗಾಳಿ ಇದೆ ಎಂದು ಸಹಜವಾಗಿ ನಂಬಿದ ಹಾಗೆ ಪ್ರೀತಿ ಇದೆಯೋ ಇಲ್ಲವೋ ಎಂದು ನಂಬಲು ನಾನೂ ನನ್ನ ಜೊತೆಯವಳೂ ಈಗಿರುವ ಮನುಷ್ಯರ ಹಾಗೆ ಇದ್ದರೆ ಆಗದು, ಮರವೋ ಮುಂಗುರುಳೋ ಜ್ವರಬಂದ ಭೂಮಿಯ ಉಸಿರೋ ಆದರೆ ಮಾತ್ರ ನಕ್ಷತ್ರಕಂಪನ ಅರಿವಾದೀತು ಅನ್ನುವ ಬಯಕೆಯೊಂದು ವ್ಯಕ್ತವಾಗಿದೆ. ಹೆಸರಿಲ್ಲದ ತೀವ್ರ ಸಂವೇದನೆಗಳನ್ನು ಅನುಭವಿಸಲು ನಾವು ಬೆಳೆಸಿಕೊಂಡಿರುವ ‘ಮನುಷ್ಯತ್ವ’ವೇ ಅಡ್ಡಿ ಬಂದಿರಬಹುದು. ಮನುಷ್ಯತ್ವವೆನ್ನುವುದು ಒಂದು ಪದ, ನಾವೇ ಕಟ್ಟಿಕೊಂಡ ಭಾಷೆಯ ಪದ. ಇಂಥ ಪದಗಳೆಲ್ಲ ಸೇರಿ, ಅರ್ಥ ಅನರ್ಥಗಳ ರಾಶಿ ರಾಶಿಯಲ್ಲಿ ಸ್ಪಂದನವನ್ನೆಲ್ಲಿಂದ ಹುಡುಕುವುದು? ನಿಜವಾದ ಮುಕ್ತಿ ಎಂದರೆ ಶಬ್ದಮುಕ್ತಿ. ಅದೊಂದಾದರೆ ಎಲ್ಲ ಥರದ ಮುಕ್ತಿಗಳೂ ಸಿಕ್ಕಾವು. ಮರಕ್ಕೆ, ಜೀವವಿರದ ಮುಂಗುರುಳಿಗೆ, ಜ್ವರ ಬಂದ ಭೂಮಿಯ ಉಸಿರಿಗೆ ಶಬ್ದವಿಲ್ಲ, ಅರ್ಥವಿದೆ. ಅಯ್ಯೋ ಈ ಅರ್ಥವಿರದ ವಸ್ತು, ಸಂಗತಿಗಳನ್ನು ಗುರುತಿಸುವುದಕ್ಕೂ ಭಾಷೆ ಬೇಕಲ್ಲವೋ! ಹೇಳುವ ಆಸೆಯಿಂದಲೂ ಹೇಳಲಾಗದೆಂಬ ಇಕ್ಕಟ್ಟಿನಿಂದಲೂ ಬಿಡುಗಡೆ ಇಲ್ಲ.

ನಾವೇ ಕಟ್ಟಿಕೊಂಡ ಲೋಕ ನಮ್ಮನ್ನು ಜಗ್ಗಿ ಎಳೆದು ಕಟ್ಟಿಹಾಕಿಕೊಳ್ಳುತ್ತದೆ. ಆರಿಫ್‍ರ ನಕ್ಷತ್ರ ಯಾನ ನೆಲದ ಮಣ್ಣಿನಲ್ಲಿ ಬೇರಿಳಿಸಿದ್ದು.

ನಿನ್ನ ಮೊಲೆಗಳ ನಡುವೆ ಮುಖಹುದುಗಿಸಿ ಪುಟಿನೆಗೆದ ಮುದ್ದು ಮೊಲದಂತೆ ಎಚ್ಚರವಾಯಿತು ನಿಶಬ್ದ. ಆ ನಿಶ್ಶಬ್ದವನ್ನು ಚದುರಿಸಿಕೊಂಡು ಕೇಳುವ, ದೂರ ಕಾಡಿನಾಚೆಯಿಂದ ಬೂಟುಗಾಲಿನ ಕೋವಿ ಹೊತ್ತ ಗೆಳೆಯರು ತುಳಿವ ಎಲೆಯ ಸಪ್ಪಳ. ಬೇಟೆಯಾಡಿ ಹೂತು ಹಾಕಿದ ಹಾಗೆ ನಕ್ಷತ್ರಕ್ಕೆ ಹಾರಿ ಹೋದ ರುಜೆ ಹೀರುವ ನಕ್ಷತ್ರ ಪಕ್ಷಿ. ಮತ್ತೆ ಬರುವುದೋ ಕಾಳು ನೀರು ಅರಸಿ, ಜಾಗತೀಕರಣದ ತೋರುಗಾಜೊಳಗೆ ತಬ್ಬಲಿಯಾಗಿ ತೂಗುಬೀಳುವುದಕ್ಕೆ ಅನ್ನುವ ಚಿತ್ರಗಳಿರುವ ಕವಿತೆ ಎದುರಾಗುತ್ತದೆ. ಒಂದೊಂದೂ ಚಿತ್ರವನ್ನು ನಿಧಾನವಾಗಿ ಮನಸ್ಸಿಗೆ ಇಳಿಸಿಕೊಂಡರೆ ‘ಚಿಗರಿಗಂಗಳ ಚೆಲುವೆ’ಯ ಮಗು ಈ ಕವಿತೆ ಅನ್ನಿಸಿಬಿಡುತ್ತದೆ. ಹಾಗೆ ನಕ್ಷತ್ರ-ನಗರ ಕವಿತೆಗಳು ನಕ್ಷತ್ರ ಯಾನದ ಮುಖ್ಯ ಲಕ್ಷಣ. 8, 12, 18, 23, 28, ನೆಯ ಸಂಖ್ಯೆಯ ಕವಿತೆಗಳು ನಮ್ಮ ಕಾಲದ ನಗರಚಿತ್ರಗಳು. ಅತ್ಯಾಚಾರಕ್ಕೆ ಗುರಿಯಾದ ನಗರವೇ 8ನೆಯ ಕವಿತೆಯನ್ನು ನಿರೂಪಿಸುತ್ತದೆ; ನಗರದ ಅಸಂಖ್ಯಾತರ ಬದುಕಿನ ಸಾಮಾನ್ಯ ಚಿತ್ರಗಳ ಮೂಲಕ ಶಹರವನ್ನೂ ಶಹರದ ನಿಸರ್ಗವನ್ನೂ ತೋರುವ 12ನೆಯ ಕವಿತೆ; ಊರೊಳಗೆ ಹರಿಯುವ ಕೊಳಕು ನದಿಯನ್ನೂ, ಶಹರ ಬಿಟ್ಟು ತೆರಳುವ ಉಗ್ರಗಾಮಿ ಹೋರಾಟಗಾರ ಮತ್ತು ಹೊಟ್ಟೆ ಪಾಡಿಗೆ ಗುಳೆಹೋಗುವ ಕೆಲಸಗಾರ, ಸ್ಲೀಪರ್ ಬೋಗಿಯಲ್ಲಿ ಆರಾಮ ಮಲಗಿದ ಸವತಿ ಮಕ್ಕಳು ಎಲ್ಲವೂ ನಕ್ಷತ್ರಗಳೇ ಎಂಬ ‘ನಕ್ಷತ್ರ ಯಾತ್ರಿಕ’ರ ವರ್ಣನೆ ಕಟ್ಟಿಕೊಡುವ 18ನೆಯ ಕವಿತೆ, ನಗರ ಬದುಕಿನಿಂದ ದೂರವಾಗಿ ಏಕಾಂತ ಅರಸಿ ಹೊರಟ ಪ್ರೇಮಿಗಳ ಸಾಕ್ಷಿಯಾಗಿರುವ ನಕ್ಷತ್ರವಿರುವ 23ನೆಯ ಕವಿತೆ, ಶಹರ-ನಿಸರ್ಗ-ನಾಯಿಸಾವುಗಳನ್ನು ಒಟ್ಟಾಗಿ ರಚಿಸುವ 28ನೆಯ ಕವಿತೆ ಇವನ್ನೆಲ್ಲ ಒಂದು ಸರಣಿಯಾಗಿ ಓದಿಕೊಂಡರೆ ನಕ್ಷತ್ರಗಳು ತಗಡಿನ ಚೂರುಗಳು ಕೂಡ ಅಲ್ಲ ಅನ್ನುವ ಹಾಗೆ ಮಾಡಿಟ್ಟುಕೊಂಡಿರು ನಮ್ಮ ಬದುಕಿನ ಬಗ್ಗೆ ವಿಷಾದವನ್ನೂ ವಿಮರ್ಶೆಯನ್ನೂ ಕಾಣಬಹುದು. ನಕ್ಷತ್ರ ರೂಪಕಗಳು ಇರಬಹುದಾಗಿದ್ದ ಸಾಧ್ಯತೆಯನ್ನು ಸೂಚಿಸುವ ಕುರುಹುಗಳಾಗಬಹುದು.

‘ನಾನು’ ಮತ್ತು ‘ಅವಳ’ ಆಪ್ತತೆ, ಅಂತರಗಳ ಮಾತೂ ಇಲ್ಲಿನ ಪ್ರೀತಿ ಕವಿತೆಗಳಲ್ಲಿ ಮಿನುಗುತ್ತವೆ; ಹಾಗೇ ನಕ್ಷತ್ರವೇ ‘ಅವಳು’ ಆಗುವುದಿದೆ. ಆದರೂ ಅವಳಿಗಿಂತ ಅವಳನ್ನು ಕುರಿತು ಹೇಳುವ ‘ಅವನು’ ಮಾತ್ರವೇ ಮುಖ್ಯವಾದನೋ ಅಂತಲೂ ಅನ್ನಿಸುತ್ತದೆ. 11, 13, 14, 23, 24, 25, 26 ಕವಿತೆಗಳ ಸರಣಿಯಲ್ಲಿ ಕೊನೆಯದು ನಿರಾಳವಾಗಿ ಮೂಡಿಕೊಳ್ಳುವ ಚಿತ್ರವಿವರಗಳಿಂದ ತುಂಬ ಚೆನ್ನಾಗಿದೆ ಅನ್ನಿಸಿತು. ಭಾಷೆ, ಮಾತು, ಕವಿತೆಗಳ ನಕ್ಷತ್ರಧ್ಯಾನವೂ ಇಲ್ಲಿದೆ. ಕವಿತೆ 14, 15, 16 ಮತ್ತು 19 ಇಂಥವು. ‘ನೀನು-ನಾನು ಜೊತೆಗೂಡಿದರೆ ಪ್ರೀತಿ ಮತ್ತು ಮೌನ; ಬೇರ್ಪಟ್ಟರೆ ಮಾತು ಮತ್ತು ಪ್ರಳಯ’ ಎಂದು ಶುರುವಾಗುವ ಕವಿತೆಯಲ್ಲಿ ನೀನು ಅನ್ನುವುದನ್ನು ಮನುಷ್ಯ ನೀನು/ಅವಳು ಅಂತಲೂ ನೋಡಬಹುದು, ಅಥವ ನಾನಲ್ಲದ ಮಿಕ್ಕೆಲ್ಲಕ್ಕೂ ವಿಸ್ತರಿಸಿಕೊಳ್ಳಬಹುದು. ‘ಒಂದೊಂದು ಸುಳ್ಳು ಸಹ ನಮ್ಮನು ಒಂದೊಂದು ಹೆಜ್ಜೆ ಬೆಳಕಿನಿಂದ ದೂರ ಒಯ್ಯುವುದು’ ಅನ್ನುವ ಅರಿವು ಕೇವಲ ಭಾಷೆಗೆ ಸಂಬಂಧಿಸಿದ್ದಲ್ಲವೋ, ಇರುವ-ಇಲ್ಲದಿರುವ ಸ್ಥಿತಿಗಳ ಆಯ್ಕೆಯೋ ಅನ್ನಿಸುವುದೂ ಉಂಟು. ತೇಜಗೆಟ್ಟ ಮಾತು, ಮುಖ, ಕಣ್ಣು, ತುಟಿ, ನಕ್ಷತ್ರ ಎಲ್ಲ ಒಂದೇ ಅನ್ನುವ ಸೂಕ್ತಿ ಮೂಡುತ್ತದೆ. ಜೋಡಿ ತಾರೆಗಳು ಜೊತೆಗೇ ಗಿರಕಿ ಹೊಡೆಯಬೇಕು, ತಪ್ಪಿಸಿಕೊಳ್ಳುವಂತಿಲ್ಲ ಗುರುತ್ವಕೇಂದ್ರದಿಂದ ಅನ್ನುವ ಮಾತು ವ್ಯಕ್ತಿಗಳಿಗೆ ಮಾತ್ರವಲ್ಲ ಮಾತು-ಮೌನ-ನುಡಿ-ನಿಶ್ಶಬ್ದಗಳ ತುಯ್ತಕ್ಕೂ ವ್ಯಕ್ತಿ-ಊರುಗಳ ಸೆಳೆತ ಬಿಗಿತಕ್ಕೂ ಅನ್ವಯವಾದೀತು.

ಪ್ರತಿಯೊಂದೂ ಮುಖ/ಯಾಕೋ ಇದ್ದಂತೆ ಇರುವುದಿಲ್ಲವಿಲ್ಲಿ/ಬಂಡೆಗಲ್ಲಿನ ಹಾಗೆ ಎಲ್ಲವೂ/ಒಳಗಿಂದೊಳಗೆ ಪುಡಿಗಟ್ಟಿ ಬಿಡುತ್ತದೆ/ ಸುಮುಹೂರ್ತದಲಿ ಮಣ್ಣಾಗಿ ಸ್ಪೋಟಗೊಳ್ಳುತ್ತದೆ’ ಎಂದು ಆರಂಭಗೊಳ್ಳುವ 19ನೆಯ ಸಂಖ್ಯೆಯ ರಚನೆ ಈ ಕವಿತೆ ಮಾಲಿಕೆಯ ಪದಕದ ಹಾಗೆ ಅನ್ನಿಸಿತು. ‘ಶವಮುಖದ ಹಾಳು ಬಾವಿಯಿಂದ/ಖಾಲಿ ಕೊಡ ಸೇದಿ ಸೇದಿ ಸಾಕಾಗಿದೆ’. ಆ ಶವ ಮುಖ ಇರುವುದೂ ಬೆಲೆ ಚೀಟಿ ಅಂಟಿಸಿಕೊಂಡು ಗ್ಯಾಲರಿಯಲ್ಲಿ ಹರಾಜಿಗಾಗಿ. ಭಾವ ತುಂಡಾಗಿದಿದ್ದರೆ ಅನ್ನುವ ಆಸೆ ಹುಟ್ಟುತ್ತದೆ. ಪರಿಚಿತ ಭಾವದ ಅಲೆಗಳು ತುಂಡಾದಾಗ ನಕ್ಷತ್ರಗಳ ಜೊತೆ ಮಾತು ಶುರುವಾಗಬಹುದು. ‘ಗೋರಿ ತೋಳಗಳು’ ನಮ್ಮ ಹೆಸರು ಊಳಿಡುವವರೆಗೆ, ‘ಒಂದೊಂದು ಹನಿ ನಕ್ಷತ್ರ ಬೆಳಕು ನಮ್ಮೊಳಗೆ ಇಳಿವವರೆಗೆ’ ಮುಂದುವರೆಯಬಹುದು. ಆದರೆ ಹಾಗೆ ಒಳಾಂತರಿಕ್ಷದಲ್ಲಿ ಮೂಡಿದ ಮಾತಿನ ಗರಿ ಹಕ್ಕಿಯನ್ನು ಆಕಾಶದಲ್ಲೇ ಬಿಟ್ಟು ನಮ್ಮತ್ತ ತೇಲುತ್ತಾ ಬರುತ್ತದೆ. ಯಾಕೆ ಹೀಗೆ ಗೊತ್ತಿಲ್ಲ. ಹೊಳೆದ ಮಾತಿನ ಹಚ್ಚಡದಲ್ಲಿ ನಾಲ್ಕು ನೂಲು ಕೈಯಲ್ಲಿ ಉಳಿಯುವ ಹಾಗೆ ನುಡಿಪಕ್ಷಿಯ ಗರಿಯೊಂದು ಮಾತ್ರ ನಮಗೆ ಇಲ್ಲಿ ದೊರೆತೀತು. ಇದು ಕವಿತೆಯ ಒಂದು ಮುಖ. ನೆಲಕ್ಕೆ ಬಿದ್ದ ಬೀಜ ಸದಾ ಆಕಾಶಮುಖಿ. ಆ ಮುಖಕ್ಕೆ ಕನಸೋ, ಕನಸೇ ಆ ಮುಖವೋ? ‘ಈ ಭೂಮಿ ಆ ಬಾನು ಹಡೆದ ಚಂಚಲ ಕನಸು ನಿನ್ನ ಮುಖ’ ಅನ್ನುವ ಮಾತೇನೋ ಇದೆ. ಕಾಣುವ ಮುಖ ಒಂದು, ಕಾಣದಿರುವ ಇನ್ನೊಂದು ಮುಖವಿದೆ ಅನ್ನುವ ಊಹೆ, ನಂಬಿಕೆ, ವಿಶ್ವಾಸ ಏನನ್ನೋಣ? ಮುಖಗಳ ಪದರಗಳಾಚೆ ಇರುವ ಯಾವ ಆಸಿಡ್ಡೂ ಎರಚಿರದ ಆ ಮುಖ ನೋಡಬಹುದೇ ಅನ್ನುವ ಹಂಬಲ, ನೀನೇ ಅದನ್ನು ತೋರಬೇಕು ಅನ್ನುವ ಕೋರಿಕೆ. ಆ ಮುಖ ನೋಡಬೇಕು ಅನ್ನುವುದಕ್ಕೆ ನೆತ್ತರಿಗೆ ಇಳಿದ ನಕ್ಷತ್ರದಾಣೆ ಇದೆ.

ಅವಳು-ನಕ್ಷತ್ರ-ಮಾತು-ಅರ್ಥ-ಸಾವು-ಊರು, ಇದೆಯೆಂದು ಭಾಸವಾಗುವ ನಿಜದ ಮುಖ ನೋಡಬೇಕೆಂಬ, ನೋಡಿದ್ದನ್ನು ಹೇಳಬೇಕೆಂಬ ಹಂಬಲ ಎಲ್ಲವೂ ಬಿಡಿಸಲಾಗದ ಹಾಗೆ ಹೆಣೆದುಕೊಂಡಿರುವ ಕವಿತೆ ಇದು. ಮುಖ್ಯವಾದ ಕವಿತೆಗಳೆಲ್ಲ ಹಾಗೇ. ಒಂದಲ್ಲ ಹಲವು ಸಂಗತಿಗಳನ್ನು ಬಿಡಿಸಿ ಬೇರ್ಪಡಿಸಲಾಗದ ಹಾಗೆ ಹೇಳುತ್ತವೆ.

ಆರಿಫ್ ರಾಜಾ

ಆರಿಫ್ ಕವಿತೆಗಳೇ ಹಾಗೆ. ಕನ್ನಡದಲ್ಲಿ ಇರುವ ಬೆರಳೆಣಿಕೆಯಷ್ಟು ಕಾವ್ಯಮೋಹೀ ನಿಜಕವಿಗಳಲ್ಲಿ ಒಬ್ಬರು ಆರಿಫ್. ಎಲ್ಲ ಒಳ್ಳೆಯ ಕವಿಗಳ ಒಳ್ಳೆಯ ಕವಿತೆಗಳೂ ಹೀಗೆ ಕೇವಲ ಅರ್ಥವನ್ನು ಹೇಳುವ ರಚನೆಗಳಾಗದೆ, ಸುಳ್ಳು ಸಾಮಾಜಿಕ ನಿಲುವಿನ ಭಂಗಿಗಳಾಗದೆ, ಹೇಳಲಾಗದ್ದನ್ನು ಆದರೆ ಹೇಳಲೇಬೇಕಾದ್ದನ್ನು ಹೇಳುವ ಹಟತೊಟ್ಟು ಅರ್ಧ ಆಕಾರ ಪಡೆಯುತ್ತವೆ; ಇತರ ಮನಸುಗಳ ಸಾವಧಾನ ಓದಿನಲ್ಲಿ ಉಸಿರು ತಳೆದು ಅಂಬೆಗಾಲಿಟ್ಟು ಬೇರೆಯದೇ ಇನ್ನೊಂದು, ಇನ್ನೂ ಹತ್ತು ಆಕಾರ ಪಡೆದು ಅಲ್ಲಿಂದ ಮತ್ತೆ ಹಲವು ಮನಸುಗಳಿಗೆ ಸಾಗುತ್ತವೆ. ಇಂಥ ಕವನಗಳ ಸಂಖ್ಯೆ ಯಾವುದೇ ಭಾಷೆಯಲ್ಲೂ ಕಡಮೆ. ಅದು ಇರಬೇಕಾದದ್ದೇ ಹಾಗೆ. ಪ್ಲಾಸ್ಟಿಕ್ಕಿನ ಹಾಗೆ ಹೊನ್ನು ಕೂಡ ಸುಲಭ ಲಭ್ಯತೆಗೆ ಒಗ್ಗದು, ಒಗ್ಗಬಾರದು. ಹೀಗಾಗುವುದಕ್ಕೆ ಕವಿ ತನ್ನದೇ ಭಾಷೆಯನ್ನು, ಭಾಷಾ ವೈವಿಧ್ಯಗಳನ್ನು ರೂಪಿಸಿಕೊಳ್ಳಬೇಕು. ಅತ್ಯುತ್ತಮವಾದ ಅದುರನ್ನು ಪಡೆಯುವುದಕ್ಕೆ ಹೇರಳವಾಗಿ ಕಲ್ಲು ಮಣ್ಣನ್ನೂ ಅಗೆದು ರಾಶಿಹಾಕಬೇಕು. ಕನ್ನಡದ ನವೋದಯ ಕವಿಗಳು ಒಬ್ಬೊಬ್ಬರೂ ತಮ್ಮದೇ ಭಾಷೆಯನ್ನೂ, ವಿವಿಧ ವಿಷಯಗಳಿಗೆ ತಕ್ಕ ಹಾಗೆ ನುಡಿ ಬಗೆಗಳನ್ನೂ ಕಟ್ಟಿಕೊಳ್ಳುವ ಶ್ರಮದಲ್ಲಿ ಮುಳುಗಿದ್ದರು. ಆರಿಫ್‍ರ ಈ ಸಂಕಲನದಲ್ಲಿ ಕವಿ ಭಾಷೆ ಹಾಗೆ ಇನ್ನೂ ವರ್ಕ್ ಇನ್ ಪ್ರೋಗ್ರೆಸ್ ಅನ್ನಿಸುವ ಹಾಗಿದೆ. ‘ಒಂದು’, ‘ಗಳು’ ಇಂಥ ಪ್ರಯೋಗಗಳು ಅನಗತ್ಯವಾಗಿ ಅಭ್ಯಾಸಬಲದಿಂದ ಬಂದವೇನೋ ಎಂದು ಕೆಲವೊಮ್ಮೆ ಅನಿಸುತ್ತದೆ. ಕವಿತೆಯಲ್ಲಿ ಅನಗತ್ಯವಾದ ಪದವಿರಬಾರದು ಅನ್ನುವುದು ಈ ಓದುಗನ ನಿರೀಕ್ಷೆ. ನುಡಿ ಚಿತ್ರಗಳನ್ನು ಜೋಡಿಸಿ ಭಾವಗಳ ವಿಹಾರವನ್ನು ಓದುಗರಿಗೆ ಬಿಡುವ ಆರಿಫ್ ಕ್ರಮ ಒಳ್ಳೆಯದೇ. ನುಡಿ ಜೋಡಣೆಯ ಹೊಸ ಬಗೆಗಳ ಅನ್ವೇಷಣೆಯೂ ಬೇಕು ಅನಿಸುತ್ತದೆ. ಕೇವಲ ದುಗುಡ, ದುಃಖ, ದುಮ್ಮಾನ, ವಿಷಾದ, ಸಮಾಜಮುಖೀ ಚಿಂತನೆಗಳಷ್ಟೇ ಕಾವ್ಯವಸ್ತುವಸ್ತುವೆಂಬ ಭ್ರಮೆಯನ್ನು ಕಳಚಿಕೊಂಡು ನಮ್ಮ ಕವಿಗಳು ದಿನ ನಿತ್ಯದ ಬದುಕಿನ ಸಕಲ, ಸಕಲವೆಂದರೆ ಕುರ್ಚಿಯ ಮೇಲಿನ ಧೂಳಿನ ಕಣದಿಂದ ಹಿಡಿದು ಕಲ್ಪಿತ ಪರಮಾತ್ಮನವರೆಗೆ ಎಲ್ಲವನ್ನೂ ಕವಿತೆಯ ಮಾಧ್ಯಮದ ಮೂಲಕವೇ ಹೇಳುತ್ತೇವೆ ನಮಗಿರುವುದು ಅದೊಂದೇ ಭಾಷೆ ಅನ್ನುವ ಕೆಚ್ಚು ಪಡೆಯಬೇಕು ಅನ್ನಿಸುತ್ತದೆ. ಇಂಥ ಕವಿಗಳು ಕನ್ನಡದಲ್ಲಿ ಬಂದಾರು ಅನ್ನುವ ಭರವಸೆ ಮೂಡಿಸುತ್ತಿರುವ ಕೆಲವೇ ಕವಿಗಳಲ್ಲಿ ಆರಿಫ್ ಒಬ್ಬರು.

ಈ ಸಂಕಲನದಲ್ಲಿ ನಕ್ಷತ್ರರೂಪಕ ಮಾಲಿಕೆ ಇದೆ. ಹೊಸಗನ್ನಡದಲ್ಲಿ ‘ಏಕ ವಿಷಯ’ ಕವನ ಸಂಕಲನಗಳು–ಸೂರ್ಯನನ್ನು ಕುರಿತು, ನೀರನ್ನು ಕುರಿತು, ರೊಟ್ಟಿಯನ್ನು ಕುರಿತು–ಬಂದಿವೆ. ಅವಕ್ಕೆಲ್ಲ ವಿಷಯದ ಬಂಧ ಇರುವ ಹಾಗೆಯೇ ಏಕತಾನತೆಯ ಅಪಾಯವೂ ಇರುತ್ತದೆ. ಒಂದೊಂದು ಕವಿತೆಯೂ ಸ್ವಸಂಪೂರ್ಣವಾಗಿದ್ದೂ ಮತ್ತೆ ಹಲವದರ ಜೊತೆಗೆ ನಂಟಸ್ತಿಕೆ ಬೆಳೆಸಿಕೊಳ್ಳುವುದಿರುತ್ತದೆ. ಮಿಶ್ರವಿಷಯ ಕವನ ಸಂಕಲ ಒಳ್ಳೆಯದೋ, ಏಕವಿಷಯದ್ದೋ ಹೇಳಲಾರೆ. ಅದು ಕವಿಯ ಆಯ್ಕೆ. ಓದುಗರ ಆಯ್ಕೆಯೆಂದರೆ ಕವಿ ನೀಡಿರುವ ಅನುಕ್ರಮವನ್ನು ಬಿಟ್ಟು ತಮಗೆ ಬೇಕಾದ ಕ್ರಮದಲ್ಲಿ ಓದಿಕೊಳ್ಳುವ ಸ್ವಾತಂತ್ರ್ಯ. ಆರಿಫ್‍ರ ಈ ಜೋಡಣೆಯಲ್ಲಿ ನನಗೆ ಎದ್ದು ಕಂಡ ನಾಲ್ಕು ವಿಷಯ ಪ್ರಸ್ತಾಪಿಸಿದ್ದೇನೆ. ಇನ್ನೂ ಹಲವು ನಿಮ್ಮ ಓದಿಗೆ ಹೊಳೆದಾವು. ನಕ್ಷತ್ರಗಳೆಂದರೆ ಕೇವಲ ನಕ್ಷತ್ರಗಳಲ್ಲ ಎಂದು ಅವನ್ನೇ ಅದಕ್ಕೂ ಇದಕ್ಕೂ ಎದಕ್ಕೂ ಬಳಸಿಕೊಂಡಿರುವ ಆರಿಫ್ ಕವಿತೆ ಇಲ್ಲಿ ಅವರ ಉಳಿದೆರಡು ಸಂಕಲನಗಳಿಗಿಂತ ಬೇರೆ ಅನ್ನಿಸುತ್ತದೆ. ಹಳೆಯವರೆಡು ಏನು, ಯಾಕೆ ವಿಶಿಷ್ಟ ಅನ್ನುವುದನ್ನು ಕನ್ನಡದ ಮುಖ್ಯ ವಿಮರ್ಶಕರು ಗುರುತಿಸಿದ್ದಾರೆ. ಓದುಗನಾಗಿ ನನ್ನನ್ನು ಸೆಳೆದ ಬಿಡಿ ನಕ್ಷತ್ರಗಳ ಬೆಳಕನ್ನು ಕುರಿತು ಇಷ್ಟು ಮಾತು ಬರೆದಿದ್ದೇನೆ. ಈ ಅಪೂರ್ಣ ಮಾತು ನಿಮ್ಮ ಓದಿನ ಸ್ಪಂದನದ ಜೊತೆ ಬೆರೆತು ಪೂರ್ಣವಾಗುವತ್ತ ಹೆಜ್ಜೆ ಹಾಕಿಯಾವು ಎಂದು ಹಾರೈಸಿಕೊಳ್ಳುತ್ತೇನೆ. ನಕ್ಷತ್ರ ಹಾರಕ್ಕೆ ಈ ಪದ-ಕ ಜೋಡಿಸುವುದಕ್ಕೆ ಅವಕಾಶ ಕೊಟ್ಟ ಕವಿ ಆರಿಫ್ ರಾಜಾ ಅವರ ಔದಾರ್ಯಕ್ಕೆ ಕೃತಜ್ಞ.

ಪ್ರತಿಕ್ರಿಯಿಸಿ