ಬುತ್ತಿ : ನೀರು ಕಲಕಿತು, ಬಿಂಬಗಳೂ ಕಲಕಿದವು

ಕನ್ನಡದ ಬಹುಮುಖ್ಯ ಕತೆಗಾರರು ಎಂದು ಗುರುತಿಸಿಕೊಂಡಿರುವ ಅಮರೇಶ ನುಡಗೋಣಿಯವರ ಆತ್ಮಕಥನ ’ಬುತ್ತಿ’ ಸ್ವಲ್ಪ ಸಮಯದ ಹಿಂದೆ ಬಿಡುಗಡೆಯಾಗಿದೆ. ಡಾ. ನಾಗಣ್ಣ ಕಿಲಾರಿಯವರು ಈ ಕೃತಿಯ ಕುರಿತು ಬರೆದ ಪರಿಚಯಾತ್ಮಕ ಲೇಖನ ಇಲ್ಲಿದೆ.

ಇದು ಸಾಹಿತಿಯ ನೆನಪುಗಳ ಬುತ್ತಿ. ನಮ್ಮ ನಡುವೆಯೇ ಒಬ್ಬ ಕಥೆಗಾರನ ರೂಪಿಸಿದ ಪರಿಸರದ ಕತೆ. ಅನುಭವಗಳನ್ನು ತುಂಬಿ ಪರಿಸರ ಲೇಖಕನ ಒಳಗೆ ಉಸಿರಾಡುವ ಪರಿಯನ್ನು ಅಮರೇಶ್ ನುಡೋಣಿ ಅವರು ತಮ್ಮ ಬಾಲ್ಯದ ಒಡನಾಟಗಳನ್ನು, ಸಂಗತಿಗಳನ್ನು, ಘಟನೆಗಳನ್ನು ಚಿತ್ರಿಸುವುದರ ಮೂಲಕ ಹೂವು ಅರಳುವಂತೆ ಬಿಚ್ಚಿಟ್ಟಿದ್ದಾರೆ. ಬುತ್ತಿಯನ್ನು ಕುರಿತು ವಿವೇಚಿಸುವಾಗ ನನಗೆ ಗಂಗಾಧರ ಚಿತ್ತಾಲರ “ತಾಯಿ” ಕವಿತೆಯ ಮೂಲಕ ಪ್ರವೇಶ ಪಡೆಯಬಹುದೆಂದು ತೀವ್ರವಾಗಿ ಅನ್ನಿಸಿದ್ದುದರಿಂದ, ಆಯ್ದ ಕೆಲವು ಸಾಲುಗಳನ್ನು ಗಮನಿಸಬಹುದಾಗಿದೆ.ಇದು ಸಾಹಿತಿಯ ನೆನಪುಗಳ ಬುತ್ತಿ. ನಮ್ಮ ನಡುವೆಯೇ ಒಬ್ಬ ಕಥೆಗಾರನ ರೂಪಿಸಿದ ಪರಿಸರದ ಕತೆ. ಅನುಭವಗಳನ್ನು ತುಂಬಿ ಪರಿಸರ ಲೇಖಕನ ಒಳಗೆ ಉಸಿರಾಡುವ ಪರಿಯನ್ನು ಅಮರೇಶ್ ನುಡೋಣಿ ಅವರು ತಮ್ಮ ಬಾಲ್ಯದ ಒಡನಾಟಗಳನ್ನು, ಸಂಗತಿಗಳನ್ನು, ಘಟನೆಗಳನ್ನು ಚಿತ್ರಿಸುವುದರ ಮೂಲಕ ಹೂವು ಅರಳುವಂತೆ ಬಿಚ್ಚಿಟ್ಟಿದ್ದಾರೆ. ಬುತ್ತಿಯನ್ನು ಕುರಿತು ವಿವೇಚಿಸುವಾಗ ನನಗೆ ಗಂಗಾಧರ ಚಿತ್ತಾಲರ “ತಾಯಿ” ಕವಿತೆಯ ಮೂಲಕ ಪ್ರವೇಶ ಪಡೆಯಬಹುದೆಂದು ತೀವ್ರವಾಗಿ ಅನ್ನಿಸಿದ್ದುದರಿಂದ, ಆಯ್ದ ಕೆಲವು ಸಾಲುಗಳನ್ನು ಗಮನಿಸಬಹುದಾಗಿದೆ.

…ಹರಿಯುತ್ತಲೇ ಇದೆ ನೀರು ಹಿತ್ತಲ ತುಂಬ

ದೊಟ್ಟೆಯಿಂದೆತ್ತಿ ತೊಟ್ಟಿಗೆ ಚೆಲ್ಲಿ ಸುರುವುದು

ಟಿಸಿಲು ಟಿಸಿಲಾಗಿ ತೋಡುಗಳುದ್ದ ಹರಿದೋಡಿ

ಪಾತಿಪಾತಿಗೆ ಹಾಯ್ಸಿ ತೋಕಿದ್ದು

ಸಜ್ಜಿಗೆ, ತುಳಸಿಗೆ, ನಿತ್ಯ ಪುಷ್ಪಕ್ಕೆ ಅಕ್ಕರೆಯಿಂದ

ಚೊಂಬಿನಡಿ ಕೈ ಹಿಡಿದು ತುಂತುರಿಸಿ ಹನಿಸಿದ್ದು,

ನೆನೆಸುತ್ತಲೇ ಇದೆ

ಕೈಕಾಲ್ಗೆ ಮೆತ್ತಿದ ಒದ್ದೆ ಮಣ್ಣು, ನೀರುಂಡು

ಹಸುರಿಸಿದ ಆ ಮಣ್ಣ ತೇವು ತಂಪು

ಕೆಸರ ಕಸುವಿಗೆ ಹಿಗ್ಗಿ ಗೊನೆ ಹಿಡಿದ ಹೊಂಬಾಳೆ

ಬಚ್ಚಲ ರೊಚ್ಚೆಯಲ್ಲಿ ಕರ್ರಗೆ ಸೊಕ್ಕಿ ಹಬ್ಬಿದ ಬಸಳೆ

ಗರಿಚವರ ಬೀಸಿ, ಹಿಂಡಿಗೆ ಜೋತು, ಎತ್ತರಕೆ

ತೂಗಿ ತೊನೆಯುವ ತೆಂಗು

ಸುತ್ತಲೂ

ಬೆಳೆವ ಗಿಡಬಳ್ಳಿಗಳ ಮೈರಸದ ಸರಬರ

ಸದ್ದು ಸೊಗಸು

ಮಧ್ಯದಲ್ಲೇ ತಾಯಿ!

… … …

ಕಮ್ಮಿ ಎನಿಸಲೇ ಇಲ್ಲ ಯಾವ ನೆಮ್ಮದಿಗು ಉಂಡಷ್ಟು ದಿನ

ಆ ಕೈಯ ಮಮತೆಯ ಅನ್ನ!

ಇಂದುಗೂ ಅದೇ ಕಣ್ಣಕಾವಲ ನೆನಪು, ಅದೇ ನೀರುಂಡ ಮಣ್ಣತಂಪು ಬದಲಾವಣೆಗಳು ಊಡಿತ್ತಿದೆ ತಾಯಿಬೇರು…

– ಗಂಗಾಧರ ಚಿತ್ತಾಲ ಅವರ ‘ತಾಯಿ’ ಕವಿತೆಯ ಆಯ್ದ ಭಾಗ.

‘ಬುತ್ತಿ’ ಅಮರೇಶ ನುಗಡೋಣಿ ಇವರ ಬಾಲ್ಯಕಾಲದ ಅನುಭವ ಕಥನ ಓದಿದಾಗ ಗಂಗಾಧರ ಚಿತ್ತಾಲರ ‘ತಾಯಿ’ ಕವಿತೆ ನೆನಪಾಯಿತು. ಲೇಖಕನನ್ನು ರೂಪಿಸಿದ ಬೆಳೆಸಿದ ಸಂಗತಿಗಳು ಬೆಳೆದ ಪರಿಸರದಲ್ಲಿ ಇರುತ್ತವೆ. ಉಳಿದವರಿಗೆ ಅದು ಸಾಮಾನ್ಯ ಪರಿಸರವೇ, ಲೇಖಕನಿಗೆ ಅಲ್ಲಿಂದಲೇ ಅಸಮಾನ್ಯ ‘ಹರಿತು’ ಸರಬರಾಜು ಆಗುತ್ತಿರುತ್ತದೆ. ಅನುಭವದ ನೆನಪುಗಳೇ ಲೇಖಕನ ತಾಯಿಯೆಂದು ಕಾಣುತ್ತದೆ. ಹಾಗಾಗಿ ಲೇಖಕನ ಬಾಲ್ಯಕಾಲದ ಬದುಕಿಗೆ ಸಿಕ್ಕ ಪರಿಸರವೇ ಬಹು ಮುಖ್ಯವಾದದ್ದು. ತಮಗೆ ದೊರೆತ, ಅನುಭವಕ್ಕೆ ಸಿಕ್ಕಿದ್ದನ್ನು ವಾದವಿಲ್ಲದೆ ಮಂಡಿಸುವ ವಿಶಿಷ್ಟವಾದ ಗುಣ ಅಮರೇಶ ನುಗಡೋಣಿ ಅವರಿಗೆ ಇದೆ. ನುಗಡೋಣಿ ಪರಿಸರ, ಒಡನಾಟ, ಮಮತೆ, ಸಂಪರ್ಕದ ಹತ್ತಾರು ಸಂಗತಿಗಳನ್ನು ಹೇಳುತ್ತಿದ್ದರೂ ಇಂದಿನ ಪರಿಣಾಮವನ್ನು ಸಹ ವಿವೇಚನೆಗೆ ದಾರಿಯನ್ನು ಮೂಡಿಸುತ್ತಾರೆ. ತಾವು ಕಳೆದ ಬಾಲ್ಯದ ಊರು ಮತ್ತು ತಾವು ಸದ್ಯ ದೂರವಾದ ದಿನದಿಂದ, ಅಂದರೆ ಉದ್ಯೋಗದ ನಿಮಿತ್ತವಾಗಿ ಬೇರೊಂದು ಪರಿಸರದಲ್ಲಿ ಕಳೆದ ಮೂವತ್ತು ವರ್ಷ ಮಮತೆಯಿಂದ ಕಾಡುವ ತಾಯಿಯಂತೆ ನುಗಡೋಣಿ ಕಾಡುತ್ತಲೇ ಇದೆ. ಈ ಅವಧಿಯಲ್ಲಿ ಉಂಟಾದ ಬದಲಾವಣೆಗಳು. ಕಾಲ ಮತು ಪರಿಸರದ ದೂರ. ಹಾಗೆ ನೋಡಿದರೆ ಈ ಎರಡು ಕೂಡ ಲೇಖಕನಿಗೆ ದೂರವೇ ಅಲ್ಲ. ಹಳ್ಳಿ ಎರಡನ್ನು ಆವರಿಸಿರುವ ಬಳ್ಳಿಯೇ ಆಗಿರುತ್ತಾನೆ ಬರಹಗಾರ. ಈ ಮಾತು ನುಗುಡೋಣಿ ಅವರ ವಿಚಾರದಲ್ಲೆ ಹೆಚ್ಚು ಸರಿ. ಅವರ ಕತೆಗಳು ಮೈದಾಳುವುದು ನುಗಡೋಣಿಯಿಂದಲೇ. ಜಗತ್ತನ್ನು ಅರ್ಥೈಸುವ, ಕಾಣುವುದು ಮನಸ್ಸನ್ನು ಕಲಕುವುದು ನುಗಡೋಣಿಯ ಮೂಲಕವೇ. ಅದೇನೆ ಇರಲಿ ಕಾಲಘಟ್ಟಗಳು ಸೃಷ್ಟಿಸುತ್ತಿರುವ ಸ್ಥಿತ್ಯಂತರದ ಎಷ್ಟೊಂದು ವಸಂತಗಳು ಉರುಳಿವೆ. ಲೋಕದ ಬದುಕಿನ ಎಷ್ಟೆಲ್ಲ ಬದಲಾವಣೆಗಳು ಸೃಷ್ಟಿಯ ಕ್ರಿಯೆಯು ನಿರಂತರವಾದದ್ದು. ಇದು ವ್ಯಷ್ಟಿಯೂ ಹೌದು ಸಮಷ್ಟಿಯೂ ಹೌದು. ಇಂತಹ ತುಯ್ತದಲ್ಲೇ ಲೇಖಕನ ಯಾತ್ರೆ ವಿಶಿಷ್ಟವಾದದ್ದು. ಹಾಗಾಗಿಯೇ ಕವಿ ಚಿತ್ತಾಲರಿಗೆ ‘ತಾಯಿ’ಯ ಎಲ್ಲ ಅಂಶಗಳು ಚಿತ್ತಾಲರಿಗೆ ಮಾತ್ರ ಅನುಭವಕ್ಕೆ ಬರುವುದು. ಕತೆಗಾರ ನುಗಡೋಣಿಯವರಿಗೆ, ಈ ಜಗತ್ತಿನ ಮಾನವೀಯ ಬದುಕಿಗೆ, ನೆಮ್ಮದಿಗೆ ಬೇಕಾದ ಬುತ್ತಿ ನುಗಡೋಣಿಯಿಂದಲೇ ಸಿಗುತ್ತಿರುವುದು. ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಬರೆಯುತ್ತಿದ್ದರೂ ನುಗಡೋಣಿಯಿಂದ ಪಡೆದ ಬುತ್ತಿಯೇ. ಅಮ್ಮ ಕಟ್ಟಿದ ಬುತ್ತಿ, ಹತ್ತಾರು ಆಟ, ಒಡನಾಡಿಗಳಿಂದ ಪಡೆದ ಅನುಭವದ ಬುತ್ತಿ, ಊರಿನ ಹಳ್ಳ, ಯಲ್ಲಪ್ಪ, ಹೊಲ, ನುಗಡೋಣಿ ಬಸವ, ಎತ್ತು, ಹಸು, ಬಾಲ್ಯಕಾಲದ ಸಂಗಾತಿ ಸೈಕಲ್, ಹೀಗೆ ಹತ್ತಾರು ಬಗೆಯ ರೋಟ್ಟಿ-ಪಲ್ಯ ಒಳಗೊಂಡದ್ದಾಗಿದೆ ಸಮೃದ್ಧ ಬುತ್ತಿ.

ಬುತ್ತಿ ಬಾಲ್ಯಕಾಲದ ಅನುಭವ ಕಥನ. ಇದನ್ನು ಬರೆಯುತ್ತಿರುವ ಲೇಖಕರು ಕನಿಷ್ಠ ಇಪ್ಪತ್ತೈದು ವರ್ಷಗಳ ಹಿಂದಿನ ಅನುಭವದ ಲಯಗಳನ್ನು ಕಟ್ಟಿಕೊಟ್ಟಿದ್ದಾರೆ. ಇದು ದಿನಚರಿಯ ಮಾದರಿಯಲ್ಲ. ದಿನಚರಿಯ ಮಾರಿಯ ಬರವಣಿಗೆಯು ಅನುಭವ ಕಥನವಾಗುವುದು ಕಷ್ಟವೇ. ಯಾಂತ್ರಿಕವಾದ ಮಂಡನೆ ಆಗುವ ಸಾಧ್ಯತೆಯೇ ಹೆಚ್ಚು. ನುಗಡೋಣಿಯವರು ಬರವಣಿಗೆಯಲ್ಲಿ ಸ್ವತಹ ತಾವು ಕಳೆದುಹೋಗುವ ಕ್ರಮವೊಂದಿದೆ. ಅವರ ಅತ್ಯುತ್ತಮವಾದ ಬರವಣಿಗೆಯಲ್ಲಿ ಅವರು ಕಾಣೆಯಾಗುತ್ತಾರೆ. ಅದು ಇಲ್ಲವಾಗುವ ಧ್ಯಾನಸ್ಥ ಸ್ಥಿತಿ. ಸಾಧು, ಸಂತರು, ತತ್ವಪದಕಾರರು, ಸೂಫಿಗಳ ಕಥನ ಅಥವಾ ಹೇಳಿಕೆಯ ನಿರೂಪಣೆಯ ಕ್ರಮ. ಬುತ್ತಿ ಬಾಲ್ಯಕಾಲದ ಆಯ್ದ ಘಟನೆಗಳನ್ನು ನಿರೂಪಿಸುತ್ತಿದ್ದರೂ ಲೇಖಕರು ಇಲ್ಲವಾಗಿ ಘಟನೆಗಳು ಮುನ್ನೆಲೆಗೆ ಬರುವ ಒಂದು ಕ್ರಮವೇ ವಿಶಿಷ್ಟವಾದುದು. ಇಲ್ಲಿನ ಭಾಗಗಳನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ಪತ್ರಿಕೆಗಳಿಗೆ ಬರೆವುಗಳಾಗಿವೆ.

ಅಮರೇಶ ನುಗಡೋಣಿ ಇವರ ಬದುಕು ಅರಳಿದ್ದು ಮತ್ತು ವಿಸ್ತರಣೆ ಪಡೆದುಕೊಳ್ಳುತ್ತಿರುವ ನಿರಂತರವಾಗಿರುವುದು ನುಗಡೋಣಿ ಎಂಬ ಪುಟ್ಟ ಹಳ್ಳಿಯಿಂದಲೇ  ಎಂಬುದು ಬೇರೆ ಹೇಳಬೇಕಿಲ್ಲ. ಹಾಗಾಗಿ ನುಗಡೋಣಿ ಅವರ ಮನೋಲೋಕವೇ. ಪಂಪನಿಗೆ ಬನವಾಸಿ, ಕುವೆಂಪುವಿಗೆ ಮಲೆನಾಡು, ಬೇಂದ್ರೆಗೆ ಸಾಧನಕೇರಿ, ಕಂಬಾರರಿಗೆ ಶಿವಾಪುರ…. ಇರುವ ಹಾಗೆ, ಅಮರೇಶ ನುಗಡೋಣಿಯವರಿಗೆ ‘ನುಗಡೋಣಿ’. ಲೇಖಕನಿಗೆ ಇಂತಹದೊಂದು ಸೂಜಿಗಲ್ಲು ಇರುತ್ತದೆ. ಅದು ಲೇಖಕನ ಒಳಗೆ ನಿರಂತರವಾಗಿರುತ್ತದೆ. ಅದರ ಸೆಳೆತದಲ್ಲಿ ಲೇಖಕ ಉಸಿರಾಡುತ್ತಿರುತ್ತಾನೆ. ಲೇಖಕ ಅದರ ಮೊರೆತವನ್ನು ಮಗುವಾಗಿ, ತಾಯಿಯಾಗಿ ಅನುಭವಿಸುತ್ತಾನೆ. ಅದು ತಿಳಿವಿನ ಧ್ಯಾನವೇ ಆಗಿರುತ್ತದೆ. ಅದೊಂದು ಲೇಖಕನ ಅಕ್ಷಯ ನಿಧಿ.

ಲೇಖಕ ಕೇವಲ ವರ್ತಮಾನದ ದಂದುಗದಲ್ಲಿ ಕೊಚ್ಚಿಹೋಗುವವನಲ್ಲ. ಮೂರು ಕಾಲಗಳ ಒಡಲಿನಲ್ಲಿ ಅವನ ಶ್ವಾಸಕೋಶಗಳಿರುತ್ತವೆ. ವರ್ತಮಾನದ ಹುದುಲಲಿ ಭೂತಕಾಲದ ಬ್ರೂಣ ಗೂಡುಗಳು ಕಾಡುತ್ತಿರುತ್ತವೆ. ಭವಿಷತ್ತಿನ ಪ್ರೀತಿಯ ಧಣಿ ಹೆಜ್ಜೆ ಹೆಜ್ಜೆಗೂ ಎಚ್ಚರಿಸುತ್ತಿರುತ್ತಾನೆ. ಲೇಖಕ ಸಮಸ್ತ ನ್ಯಾಯಕಾರನಾಗಿರುತ್ತಾನೆ. ಅಂತಹ ಲೇಖಕ ಕಾಲಗಳನ್ನು ಮೀರಿ ವಿವೇಚನಾತ್ಮಕವಾಗಿ ಸದಾ ಬದುಕುತ್ತಾನೆ. ಬುತ್ತಿಯಲ್ಲಿ ಅತ್ಯಂತ ಸರಳ ನಿದರ್ಶನ ಕಾಣುವುದಾದರೆ : ಎತ್ತಿ ಆಡಿಸಿದ ಯಲ್ಲಪ್ಪ ಮತ್ತು ನನ್ನ ಆಷಾಡದ ಗಾಳಿ ಈ ಎರಡು ಅಧ್ಯಾಯಗಳಲ್ಲಿ ವಯಕ್ತಿಕ ಮತ್ತು ವಯಕ್ತಿಕವಾದದ್ದಲ್ಲ ಎಂಬ ಪರದೆಯನ್ನು ನಾಶಮಾಡಿದ್ದಾರೆ. ಇವರ ಬರವಣಿಗೆಯ ಅಂತಸ್ಥವೇ ಅಂತಹದೊಂದು ಮಾನವೀಯತೆಯನ್ನು ತುಂಬಿಕೊಂಡಿರುವುದೇ ಆಗಿದೆ.

ಹಳ್ಳಿಗಳು ಒಂದರ್ಥದಲ್ಲಿ ಸಮೃದ್ಧವಾದ ಅನುಭವವನ್ನು ನೀಡುವ ಗಣಿಗಳೇ. ಜೀವನದ ಅನನ್ಯವಾದ ಸ್ಪಂದನೆ ಅಪೂರ್ವವಾದ ಮಹಾಕಾವ್ಯದ ಸೃಷ್ಟಿಶೀಲ ಪುನರ್‍ಲಯಗಳ ಸಂಕೀರ್ಣ ಮೊತ್ತವೇ ಆಗಿರುತ್ತದೆ. ನೆನೆದಷ್ಟು ನೆನಪಿನ ಸುರುಳಿ ಮತ್ತೆ ಮತ್ತೆ ಹೊಸತಾಗಿ ಅನಾವರಣಗೊಳ್ಳುವ ಗುಣ ಇರುತ್ತದೆ. ಲೇಖಕನನ್ನು ಬೆಳೆಸುತ್ತ ತಾನೂ ಬೆಳೆಯುತ್ತ ಅರಳುವ ಗುಣ ಪಡೆದುಕೊಂಡಿರುವುದು.

ನುಗಡೋಣಿಯವರ ಕಥೆಗಳನ್ನು ಆಪ್ತತೆಯಿಂದ ಓದುಗರಿಗೆ ಪರಿಚಿತವಾದ ಊರೇ, ಇವರ ಬಾಲ್ಯದ ಊರು. ಅದೇ ಅವರ ಕಥಗಳ ಊರೂ ಸಹ. ಕಥೆಯ ಸೃಜನಶೀಲ ಚೌಕಟ್ಟಿನಲ್ಲಿ ಹೇಳಾಲಾಗದ, ಹೇಳಿದರೆ ಮತ್ತೊಂದು ಆಯಾಮಪಡೆದುಕೊಳ್ಳುವ ನಿಮಿತ್ತವಾಗಿ ಹಾಗೂ ಹೇಳಬೇಕಾದ ಬಾಲ್ಯದ ಬದುಕಿನ ಅನುಭವದ ಆಘಾತಗಳನ್ನು ಮಾತ್ರ ತುಂಬ ಪ್ರೀತಿಯಿಂದ ಆಯ್ದು ಕಟ್ಟಿಕೊಟ್ಟಿದ್ದಾರೆ. ಇದು ಇವರ ಅನುಭವ ಕಥನವಾಗುತ್ತಿರುವಂತೆಯೇ ಊರಿನ ಕಥನವೂ ಆಗುತ್ತದೆ. ಆ ಊರು ಮುಂದುವರೆದು ಭಾರತದ ಯಾವುದೇ ಗ್ರಾಮವಾಗಬಲ್ಲದು. ಹಾಗಾಗಿ ಯಾವುದೋ ಒಂದನ್ನು ಪರಿಚಯಿಸುವ ಮುಖವಾಡ ಅಥವಾ ಜಾಹಿರಾತಿನಪ್ರಜ್ಷೆಯಂತೆ ಖಂಡಿತ ಅಲ್ಲ. ಭಾರತದ ಗ್ರಾಮ ಬದುಕಿನ ಕಥನವೇ. ಮಂಡನೆಯ ಅನನ್ಯತೆ ಅದು ನುಗಡೋಣಿಯವರು ಮಾತ್ರ ಹೇಳಬಹುದಾದ, ಹೇಳಿದ ಕಥನವೇ ಆಗಿದೆ. ಬಾಲ್ಯದ ಪರಿಸರದಿಂದ ದೂರ ನಿಂತು ‘ತಿಟ್ಟತ್ತಿ ತಿರುಗಿ’ ನೋಡಿದಾಗ ಸಿಕ್ಕುವ ದರ್ಶನವೇ ‘ಬುತ್ತಿ’. ಆ ಬುತ್ತಿಯನ್ನೇ ತಾವು ಪಡೆದು ಉಂಡದ್ದು. ಓದುಗನಿಗೆ ‘ಕಥೆ’ಗಳ ಮೂಲಕ ಒಂದು ಕಕ್ಕುಲಾತಿಯಲ್ಲಿ ಹೇಳುತ್ತಲೇ ಇದ್ದಾರೆ. ಹಾಗಾಗಿ ಇದು ನುಗಡೋಣಿ ಬುತ್ತಿ.

ಗ್ರಾಮಗಳು ಸಾಮಾನ್ಯವಾಗಿ ಒಕ್ಕಲುತನವನ್ನ ಅವಲಂಬಿತವಾಗಿಯೇ ಬದುಕಿವೆ. ಹಾಗಾಗಿ ಅವು ಗ್ರಾಮಗಳು. ಮಕ್ಕಳು ಬೆಳಗಿನ ಜಾವ ಬೇಗನೆ ತಂಪೊತ್ತಿನಲ್ಲಿ ಕೆಲಸ ಸಾಗುವದೆಂದು ಹೊಲಕ್ಕೆ ಹೋಗುತ್ತಾರೆ. ಅಮ್ಮ ಅಥವಾ ಹೆಣ್ಣುಮಕ್ಕಳು ಮನೆ ಮಂದಿಗೆ ಬೇಕಾಗುವ ರೊಟ್ಟಿ-ಬುತ್ತಿ-ಅಡಿಗೆ ಮಾಡುತ್ತಾರೆ. ಅಪ್ಪ ತುಸು ವಯಸ್ಸಾಗಿದ್ದರೆ ಅಥವಾ ಮಕ್ಕಳು ಕೈಗೆ ಬಂದರೆ ಅಪ್ಪ ಬುತ್ತಿಯನ್ನು ದುಡಿಯುವವರಿಗೆ ತರುವುದು ಸಾಮಾನ್ಯ. ಅಂತೆ ನುಗಡೋಣಿಯವರ ತಾಯಿ ಕಳುಹಿಸುತ್ತಿದ್ದ ಬುತ್ತಿಯ ವೈವಿಧ್ಯತೆ “ಬುತ್ತಿಯಲ್ಲಿ ರೊಟ್ಟಿ ಪಲ್ಲೆಯೇ ಇರುತ್ತಿತ್ತೇ ಹೊರತು ಅನ್ನ ಇರುತ್ತಿರಲಿಲ್ಲ. ಜೋಳದ ರೊಟ್ಟಿ, ಮುಂಗಾರಿನ ಜೋಳದ ಕೆಂಪು ರೊಟ್ಟಿ, ಸಜ್ಜೆಯ ತುಸು ಹಸಿರು ರೊಟ್ಟಿ ಹೀಗೆ ಬೇರೆ ಬೇರೆ ರೊಟ್ಟಿಗಳು ಕಾಲವನ್ನು ಅವಲಂಬಿಸಿರುತ್ತಿದ್ದವು. ಮುಂಗಾರಿನ ದಿನಗಳಾದರೆ ಮುಂಗಾರಿನ ಬೆಳೆಯ ರೊಟ್ಟಿಗಳು. ಹಿಂಗಾರಿನ ದಿನಗಳಾದರೆ ಬಿಳಿ ಜೋಳದ ರೊಟ್ಟಿಗಳು ಬುತ್ತಿಯಲ್ಲಿರುತ್ತಿದ್ದವು. ಅಕ್ಕಿ ಅನ್ನ, ನವಣೆ ಅನ್ನ, ಜೋಳದ ಅನ್ನವೂ ಬುತ್ತಿಯಲ್ಲಿರುತ್ತಿತ್ತು. ಈ ಅನ್ನಗಳು ಬುತ್ತಿಗಾಗಿ ಕಟ್ಟುತ್ತಿರಲಿಲ್ಲ. ಮನೆಗಳಲ್ಲಿ ಉಣ್ಣಲು ಅನ್ನಗಳನ್ನು ಸಿದ್ದಪಡಿಸುತ್ತಿದ್ದರು. ಯಾಕೆಂದರೆ ಯಾವುದೇ ಅನ್ನಕ್ಕೆ ನೀರುಬ್ಯಾಳೆ ಮಜ್ಜಿಗೆ, ಹಾಲು ಮೊಸರು ಇದ್ದರೆ ಉಣ್ಣಲು ರುಚಿ… ಬದನೆಕಾಯಿ ಪಲ್ಲೆ, ಚೌಳೆಕಾಯಿ ಪಲ್ಲೆ, ಈರೆಕಾಯಿ, ತುಪ್ರೆಕಾಯಿ, ಚಳ್ಳಂಬ್ರಿಕಾಯಿ ಪಲ್ಲೆಗಳನ್ನು ಮಾಡುತ್ತಾರೆ. ಇದರ ಜೊತೆಗೆ ಹಸಿ ಮೆಣಸಿನಕಾಯಿಯ ಕೆಂಪು ಚಟ್ನಿ ಇರುತ್ತದೆ. ಇದಿಲ್ಲದಿದ್ದರೆ ಬಡವ ಬಲ್ಲಿದವ ಎಂಬ ತಾರತಮ್ಯವಿಲ್ಲದೆ ಎಲ್ಲರ ಮನೆ-ಗುಡಿಸಲುಗಳಲ್ಲಿ ರೊಟ್ಟಿಯ ಜೊತೆ ತಿನ್ನಲು ಪುಂಡಿ ಪಲ್ಲೆ ಮಾಡುತ್ತಾರೆ. ನೂರು ಕೂರಿಗೆ ಭೂಮಿ ಇದ್ದವರ ಮನೆಯಲ್ಲಿಯೂ ಈ ಪುಂಡಿಪಲ್ಲೇ ಮಾಡುತ್ತಾರೆ. ಹಾಸಿ-ಹೊದೆಯಲು ಇಲ್ಲದವರೂ ಈ ಪುಂಡಿ ಪಲ್ಲೆಯನ್ನು ತಿನ್ನುತ್ತಾರೆ. ಈ ಪುಂಡಿ ಪಲ್ಲೆ ಬಿಸಿಲು ನಾಡಿನ ನಮ್ಮ ಕಡೆ ಜಾಸ್ತಿ. ಉಳಿ ಇರುವುದರಿಂದ ಬಹಳ ಜಲ್ದಿ ಕೆಡುವುದಿಲ್ಲ. ಬುತ್ತಿಗಂತೂ ಇದನ್ನು ಮಾಡುತ್ತಾರೆ…… ಈ ಪುಂಡಿ ಪಲ್ಲೆ ರೊಟ್ಟಿ ಊಟ ಎಂದರೆ ಈ ಕಾಲದಲ್ಲೂ ಜನರಿಗೆ ಪ್ರಾಣ ಎಂದು ನಂಬಿದ್ದೇನೆ. ಈ ಊಟದಲ್ಲಿ ಹಸಿ ಎಳೆಯ ಮೆಣಸಿನಕಾಯಿ ಇಲ್ಲ ಉಪ್ಪು ತುಂಬಿದ ಹಸಿಮೆಣಸಿನ ಕಾಯಿಗಳನ್ನು ಎಣ್ಣೆಯಲ್ಲಿ ಕರಿದು ತಿನ್ನುವುದು ರೂಡಿ’ü ಇದು ಬುತ್ತಿ.  ಇಂತಹ ಬುತ್ತಿ ಕಳುಹಿಸುವ ಅಮ್ಮನೇ ಮನೆ ಕೆಲಸ ಮುಗಿಸಿ ಹೊಲದ ಕಡೆ ಬಂದರೆ ಸುಮ್ಮನಿರುವ ಜೀವವಲ್ಲ. ಏನಾದರೊಂದು ಮಾಡುತ್ತಲೇ ಇರುವ ಜೀವ. ತೋಟದಲ್ಲಿ ಕಳೆ ಕೀಳುವ ಅಥವಾ ತೋಟಕ್ಕೆ ಸಂಬಂಧಿಸಿದ ಏನಾದರೊಂದು ಕೆಲಸ ಇದ್ದೇಯಿರುತ್ತದೆ. ದುಡಿಯುವ ಕೈಗೆ ಕೆಲಸ ಇದ್ದೇಯಿರುತ್ತದೆ. ಹಾಗೆಯೇ ಮನೆಯ ಕಡೆ ಮರಳುವಾಗಲೂ ಸಹ ಬರೀಗೈಯಲ್ಲಿ ಮರಳುವುದಿಲ್ಲ. ಉಡಿಯಲ್ಲಿ ಅಗತ್ಯ ಪದಾರ್ಥಗಳೊಂದಿಗೆ ಮರಳುವುದ ರೂಢಿ.

ಬುತ್ತಿಯ ಸಮೃದ್ಧತೆಯಂತೆಯೇ ತೋಟವೂ ಸಮೃದ್ಧವೇ. ಹಸಿಮೆಣಸಿನಕಾಯಿ, ಬದನೆಕಾಯಿ, ಚವಳೆಕಾಯಿ, ಉಳ್ಳಾಗಡ್ಡೆ, ಬೆಂಡೆಕಾಯಿ, ಈರೆಕಾಯಿ, ತುಪ್ರೆಕಾಯಿ, ಹಾಗಲಕಾಯಿ, ಕುಂಬಳಕಾಯಿ, ಸವತೆಕಾಯಿ, ಬುಡಮೆಕಾಯಿ, ಹೆಸರು, ಹಲಸಂದೆ, ಶೇಂಗಾ, ಬೋರೆ ಹಣ್ಣ, ಅಕ್ಕರಿಕೆ, ಕುಸುಬೆ, ಗೂಳಿ, ಕಡಲೆಕಾಯಿ, ಎಳೆಯ ಸೀತನಿ ಇಂತಹ ಇನ್ನೂ ಹತ್ತಾರು ಬೆಳೆವ ನೆಲದಲ್ಲಿ ಅಮ್ಮ ಹರಿದಾಡುತ್ತಾಳೆ ಮಡಿಲ ಉಡಿಯೊಂದಿಗೆ. ಹಾಗೆಯೆ ಚೆಂಡು ಹೂ, ಮಲ್ಲಿಗೆ, ಸೇವಂತಿಗೆ ಹೂಗಳು. ನೆಲದ ಮಡಿಲಿಂದ ಅರಳಿದರೆ, ಅಮ್ಮ ಇವೆಲ್ಲವನ್ನು ಮನೆಯ ಮಕ್ಕಳು, ಮೊಮ್ಮಕ್ಕಳಿಗಾಗಿ ಉಡಿಯ ತುಂಬ ಈ ಎಲ್ಲ ಸಂಪತ್ತನ್ನು ತುಂಬಿ ತರುತ್ತಿದ್ದಳು ಎಂಬ ವಿವರಣೆಯನ್ನು ಓದುವಾಗ ಯಾವ ದೈವ ಸಂಭೂತರೂ ಅಮ್ಮನ ಮುಂದೆ ಕುಬ್ಜರೇ. ಆಯಾ ಪದಾರ್ಥಗಳನ್ನು ಉಡಿಗಾಗಿಕೊಂಡು ಬರುವ, “ಅಮ್ಮನ ಉಡಿಯಲ್ಲಿ ಈಚಲು ಹಣ್ಣ, ಡಬ್ಬಗಳ್ಳಿ ಹಣ್ಣುಗಳು ಮಾತ್ರ ಇರುತ್ತಿರಲಿಲ್ಲ” ಎನ್ನುತ್ತಾರೆ. ಇದಲ್ಲದೆ ಸೀತಾಫಲ, ಹಸಿಗೆಣಸು, ಹಸಿಗೆಜ್ಜರಿಯಂತಹ ಪದಾರ್ಥಗಳನ್ನು ಮನೆಯ ದವಸ – ಧಾನ್ಯಗಳನ್ನು ಕೊಟ್ಟು ತಾಯಿ ಪಡೆಯುತ್ತಿದ್ದರು. ಇದೆಲ್ಲವೂ ಅಮ್ಮ ನುಗಡೋಣಿ ನೆಲದಿಂದ ಪಡೆದು ನೀಡಿದ ಬುತ್ತಿಯೇ ಆಗಿದೆ. ಆದರೆ ಇವತ್ತು ಕರಿದ ಪದಾರ್ಥಗಳ, ನಗರ ಜೀವನದ ಯಾಂತ್ರಿಕತೆಯು ಇದೆಲ್ಲವನ್ನು ಹಿಂದೊಗೆದಿದೆ. “ರೊಟ್ಟಿಯನ್ನು ಕಂಡರೆ ಶಿವನನ್ನು ಕಂಡಷ್ಟು ಖುಷಿಯಾಗುವ” ಅಮರೇಶ ನುಗಡೋಣಿಯವರು ಪ್ರಸ್ತುತದೊಂದಿಗೆ ನೆನೆದು ಸಹಜವಾಗಿಯೇ ಬೇಸರಗೊಳ್ಳುತ್ತಾರೆ. ಆ ಬಾಲ್ಯದ ದಿನಗಳು ದವಾಖಾನೆಯ ಮುಖನೋಡದಂತೆ ಆರೋಗ್ಯಗೊಳಿಸಿದ ಔಷಧಿಗಳಾಗಿವೆ. ಹಾಗೆಯೇ “ಈಗಲೂ ಅಮ್ಮನ ಉಡಿಯ ತಿನಿಸುಗಳು ಕನಸಿನಲ್ಲಿ ಮೂಡಿಬರುತ್ತವೆ”. ಎಂತೊಬ್ಬರಿಗೂ ಬರಲೇಬೇಕು.

ಅಮ್ಮನ ಬುತ್ತಿಯ ವೈವಿಧ್ಯತೆಯಷ್ಟೇ ಬಾಲ್ಯದ ಆಟಗಳು ಸಹ ಅಷ್ಟೇ ಅಪೂರ್ವ. ಬೇರೊಂದು “ಊರುಗಳಲ್ಲಿ ಓದುತ್ತಿದ್ದ ನಮ್ಮೂರ ಹುಡುಗರು, ಸೂಟಿ ಬಿಟ್ಟರೆ ಸಾಕು ಊರಿಗೆ ಬಂದೇ ಉಸಿರುಬಿಡುತ್ತಿದ್ದರು”. ಯಾಕೆಂದರೆ ತಿನ್ನುವ ಪದಾರ್ಥಗಳು ಮತ್ತು ಆಟಗಳು ಈ ಎರಡೂ ಬಾಲ್ಯಕಾಲಕ್ಕೆ ಮುಖ್ಯವಾದವು. ಅನುಭವ ಅಥವ ಬೆಳವಣಿಗೆಯ ಅಂಶಗಳು ಸಹ ಇದರೊಂದಿಗೆಯೇ ದೇಹ ಮತ್ತು ಮನಸ್ಸನ್ನು ಬೆಳೆಸುತ್ತವೆ. ಮಂಡಾಳ ಒಗ್ಗರಣೆ, ಮಿರ್ಚಿ ಮತ್ತು “ಹೊಲದ ಬೆಳೆಗಳಲ್ಲಿ ಸಿಗುವ ಹಸಿಪದಾರ್ಥಗಳನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಹೆಸರು, ಹಲಸಂದಿಕಾಯಿ, ಸವತೆ, ಬುಡುಮೆಕಾಯಿ, ಉಳ್ಳಾಗಡ್ಡಿ ಹಸಿತೊಪ್ಪಲು, ಕುಸುಬೆ ಪಲ್ಲೆ ಹೀಗೆ ಮುಂತಾದವುಗಳನ್ನು ತಿಂದುಂಡು, ತುಂಗಭದ್ರೆಯ ಕಾಲುವೆಯಲ್ಲಿ ಹರಿಯುವ ನೀರನ್ನು ಬೊಗಸೆಯಲ್ಲಿ ಎತ್ತಿಕುಡಿದು ತೇಗುವುದು”. ಇದು ಒಂದು ಬಗೆಯಾದರೆ ಮತ್ತೊಂದು ಆಟದ ಜಗತ್ತು. ಇನ್‍ಸ್ಟಾಪ್ (ಸ್ಟಾಪ್) ಆಟ, ಗಿಲ್ಲಿ-ದಾಂಡು, ಬಟ್ಟೆಚೆಂಡಿನಾಟ, ಕಬ್ಬಡಿ, ಲಗೋರಿ, ಕುಸ್ತಿ, ಹೈಜಂಪ್, ಲಾಂಗ್‍ಜಂಪ್, ಗಿಡಮಂಗಿ ಆಟ, ಈಜಾಟ ಅಂದರೆ ಮುಟ್ಟಾಟ, ಇವು ಬಾಲ್ಯದ ಹಗಲು-ರಾತ್ರಿಗಳನ್ನು ಅತ್ಯಂತ ಚಟುವಟಿಕೆಯಿಂದ ಇಡುತ್ತಿದ್ದವು. ಸಂಜೆಯಾದರೆ ಹಳ್ಳದ ಬಯಲಿನಲ್ಲಿ ರಮ್ಯ ಜಗತ್ತೊಂದು ಬಿಚ್ಚಿಕೊಳ್ಳುತ್ತದೆ. “ಯಾವ ಊರಿನಲ್ಲಿ ಹಳ್ಳ ಇರುತ್ತದೋ ಆ ಊರಿನ ಸಮಸ್ತ ಜನರ ನಂಟು ಹಳ್ಳದ ಜತೆಗಿರುತ್ತದೆ.” ಮರಳಿನಲ್ಲಿನ ಆಟಗಳು ಮುಗಿದ ಮೇಲೆ ಗುಂಪು ಗುಂಪು ಕುಂತಲ್ಲಿಯೇ ಹತ್ತಾರು ನಮ ನಮೂನೆಯ ಕಥೆಗಳು ಬಿಚ್ಚಿಕೊಳ್ಳುತ್ತವೆ. ಈ ಬಾಲ್ಯಕಾಲದಲ್ಲಿ ದಣಿವು ಎನ್ನುವುದೇ ಇರುವುದಿಲ್ಲವೇನೋ, ಅಥವಾ ದಣಿವೂ ಕೂಡ ಒಂದು ಸುಖವೇ ಇರಬೇಕು.

ನನ್ನ ಆಷಾಡದ ಗಾಳಿ, ಒಂದು ಭಯಾನಕ ಕಾಲ್ನಡಿಗೆ, ಆಕಳು ಸಂತೆ ಸೇರಲಿಲ್ಲ, ಎತ್ತಿ ಆಡಿಸಿದ ಯಲ್ಲಪ್ಪ, ಸೀತಾಫಲ ತಂದದ್ದು ಸೇರಿದಂತೆ ಇಪ್ಪತ್ತು ಅಧ್ಯಾಯಗಳಿವೆ. ಈ ಮೇಲೆ ಸೂಚಿಸಿದ ಐದು ಅಧ್ಯಾಯಗಳು ವಯಕ್ತಿಕ ಅನುಭವದ ಪಾಠಗಳು ಮಾತ್ರವಾಗದೆ ಅವರ ವ್ಯಕ್ತಿತ್ವವನ್ನು ಕ್ಷಣಕಾಲ ನಡುಗಿಸಿ ದೀರ್ಘಕಾಲ ಕಾಡುವ ಘಾಡತೆಯ ಇನ್ನೊಂದು ನೆಲೆಯಿದೆ ಈ ಭಾಗಗಳನ್ನು ಓದುವಾಗ ಒಂದೊಂದು ಭಿನ್ನ ಮತ್ತು ಪರಿಣಾಮಕಾರಿಯಾದ ಕಥೆಯನ್ನು ಓದಿದ ಅನುಭವದ ಬಿಸಿ ತಾಗುತ್ತದೆ. ಇಂತಹ ಸಮೃದ್ಧ ಜೀವನಾನುಭವದ ಲೋಕದಲ್ಲಿ ಕುವೆಂಪು ಅವರ ಕಾದಂಬರಿಗಳನ್ನು ಓದುವ ಅದೃಷ್ಟ ಆಕಸ್ಮಿಕವಾಗಿ ಸಾಧ್ಯವಾಗಿರುವುದು ಕೂಡ ಕಥೆಗಾರನಾಗಿ ಬೆಳೆಯಲು ಮತ್ತು ದೃಷ್ಟಿಗೆ ಹೊಸ ಕಸುವನ್ನು ನೀಡಿದೆಯೆಂದು ಕಾಣುತ್ತದೆ. ತನ್ನೂರಿಗೆ ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಓದುತ್ತ ಕಾನೂರನ್ನೇ ತನ್ನೂರಿಗೆ ತಂದುಕೊಂಡದ್ದು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಓದುವ ಉತ್ಸಾಹ ಈ ಜನ್ಮದಲ್ಲಿ ‘ಬತ್ತಲಾರದ ಗಂಗೆ’ಯನ್ನು ತುಂಬಿಕೊಂಡ ಲೇಖಕರು ಓದುವ ಸುಖದಲ್ಲಿ ನುಗುಡೋಣಿಯನ್ನು ಜೀವಂತ ಗುರುತಿಸಿಕೊಳ್ಳುವರು.

ಬುತ್ತಿ ಮತ್ತು ಪದಾರ್ಥಗಳು, ಆಟಗಳು, ಆಚರಣೆಗಳು, ರಾಜಕಾರಣಕ್ಕೆ ವಸ್ತುವಾಗುತ್ತಿರುವ ಹಸು, ಯಲ್ಲಪ್ಪನಂತಹ ನಂಬಿಗಸ್ತನ… ಇದೆಲ್ಲ ಈಗ ನೆನೆದರೆ ತಲ್ಲಣಗೊಳಿಸುತ್ತಿದೆ ಜೀವ. ಕಾಲ ತುಂಬಾ ಭಿನ್ನವಾದದ್ದನ್ನು ಈ ಕಾಲ ಸೃಷ್ಟಿಸುತ್ತಿದೆ. ಇಂದಿನ ಮಕ್ಕಳಿಗೆ ಸಿಗುತ್ತಿರುವ ಪಾಠಗಳು, ಯಾರದೋ ಗೇಟು ಕಾಯುವ ಕೂಲಿ ಇದೆಲ್ಲ ಸಂತೋಷದ ಬದಲು ಒಣ ಕರ್ತವ್ಯವಾಗಿದೆ. ಅದು ನಂಬಿದ ಕೃಷಿ, ಯಾಂತ್ರಿಕವಾದ ಕರ್ತವ್ಯ. ಇಂದಿನ ವಿಷಮತೆಯೇ ಅಥವಾ ಈ ಕಾಲಗಟ್ಟ ಎದುರಿಟ್ಟ ಘಟನೆಗಳೇ ಹಿಂದಿನ ನೆನಹುಗಳ ಬಾಳಿನ ಬುತ್ತಿಯನ್ನು ಹೆಣೆಯಲು ಸಾದ್ಯವಾಗಿರುವುದು. ಒಟ್ಟಾರೆ ಹಳ್ಳಿಯೊಂದು ತನ್ನ ತಾಯಿಗುಣದ ಬದುಕಿಗೆ ಎದುರಾಗುತ್ತಿರುವ ತಲ್ಲಣಗಳನ್ನು ಈ “ಬುತ್ತಿ”ಯಲ್ಲಿ ದಾಖಲಿಸಿಯೂ ಇದ್ದಾರೆ.

ಕೃತಿಯಲ್ಲಿ ಬರುವ ವ್ಯಕ್ತಿಗಳೆಲ್ಲರೂ ತೀರ ಹತ್ತಿರದವರು. ಹಳ್ಳಿಯ ಬದಿಕಿನಲ್ಲಿ ಸಹಜವಾಗಿಯೇ ಒಡನಾಡಿಗಳು. ಉತ್ತರ ಕರ್ನಾಟಕದ ಬಯಲ ವೈವಿದ್ಯವೇ ಅನನ್ಯವಾದದ್ದು. ಅಮ್ಮನ ಬುತ್ತಿ, ಊರು ಬಳಸಿ ನಡೆದ ಹಳ್ಳ, ಯಲ್ಲಪ್ಪ, ಎತ್ತುಗಳು, ಹಸು, – ಇವೆಲ್ಲ ಗಾಢ ಸಂಪರ್ಕದ ಚೈತನ್ಯಗಳೇ ಆಗಿವೆ. ಓದುಗರಿಗೆ ಮಲೆನಾಡಿನ ಚಿತ್ರಗಳು, ಹಳ್ಳಿಯ ಹತ್ತು ಸಮಸ್ತರು, ಹಳ್ಳಿಯ ಚಿತ್ರಗಳು – ನೆನಪಾಗುತ್ತವೆ. ಆದರೆ ನುಗಡೋಣಿಯವರು ಈ ಲೇಖನಗಳ ಮಾಲೆಯ ಒಳಗೆ ಹೂವಿನ ಹಾರದ ಒಳಗೆ ದಾರ ಇರುವಂತೆ ಬಾಲ್ಯದ ಬದುಕಿನ ಅಪೂರ್ವವಾದ ಸೂತ್ರದೊಂದಿಗೆ ಬರೆದಿದ್ದಾರೆ. ಬದುಕಿನ ಅನುಭವದ ಆಘಾತಗಳನ್ನು ಧ್ಯಾನಸ್ಥವಾಗಿ ಸವಿದು ಅನಾವರಣಗೊಳಿಸಿದ್ದಾರೆ. ಬಯಲ-ಬದುಕಿನ ಹೊಸ ವಿಲಾಸವಿದೆ. ಚದುರಂಗದ ಚಲನೆಯಿದೆ. ಬಾಲ್ಯದ ಬದುಕಿನ ಮಿಡಿತಗಳನ್ನು ಓದುಗರಿಗೆ ಮುಟ್ಟಿಸಿದ್ದಾರೆ. ಅಮ್ಮ ಕಟ್ಟುವ ಬುತ್ತಿ ಒಂದು ಮಮತೆಯ ಚೌಕಟ್ಟು ಇರುತ್ತದೆ. ಮಕ್ಕಳನ್ನು ಬೆಳೆಸುವ ಅನ್ಯನ್ಯವಾದ ಪ್ರೀತಿಯೊಂದಿಗೆ. ಅಮರೇಶ ನುಗಡೋಣಿ ಅವರ ಈ ‘ಬುತ್ತಿ’ ಅವರೇ ತುಂಬ ಎಚ್ಚರಿಕೆಯಿಂದ ಆಯ್ಕೆ, ಹೇಳಬೇಕಾದ ಒಂದು ಚೌಕಟ್ಟಿನಲ್ಲಿ ಬುತ್ತಿಯನ್ನು ನಮ್ಮ ಮುಂದಿಟ್ಟಿದ್ದಾರೆ. ಮಿತಿ ಎನಿಸಲಾಗದಂತೆ ಇರುವ ಬುತ್ತಿಯಿದು.

 “ದಾವ್ ಒಂದು ಬಾವಿ

ಸೇದಿದಷ್ಟುಒದಗುತ್ತದೆ

ಅದು ಶಾಶ್ವತ ತೆರವು

ತಳ ತೋರದಂತೆ ತುಂಬಿರುತ್ತದೆ

ದಾವ್‍ದ ಜಿಂಗ್ ಹೇಳುವ ಬಾವಿ, ಅಮರೇಶ್ ನುಗಡೋಣಿ ಅವರಿಗೆ ಬಾಲ್ಯ ಕಾಲದ ನುಗಡೋಣಿಯೇ ಆಗಿದೆ. ಆದು ನುಗಡೋಣಿಯವರ ಸೃಜನಶೀಲತೆಯ ಬಾವಿ. ನಮ್ಮೊಳಗಿನ ಬಾವಿಯ ನೀರು ನಮ್ಮ ಬಾಯಾರಿಕೆಯನ್ನು ತಣಿಸಿದ, ತೇವಗೊಳಿಸಿದ ಭಾವ ಆವರಿಸದೆ ಇರಲಾರದು.

One comment to “ಬುತ್ತಿ : ನೀರು ಕಲಕಿತು, ಬಿಂಬಗಳೂ ಕಲಕಿದವು”
  1. ವಂದನೆಗಳು ಋತುಮಾನಕ್ಕೆ ಋತುಮಾನದಲ್ಲಿ ಕಾವ್ಯ ಮನೆಯ ಎರಡನೆ ಪುಸ್ತಕದ ಪರಿಚಯ ಇದು. # ಕಾವ್ಯ ಮನೆ.

ಪ್ರತಿಕ್ರಿಯಿಸಿ