ದಯವಿಟ್ಟು ಗಮನಿಸಿ : ಒಂದು ಪ್ರತಿಕ್ರಿಯೆ

ಕನ್ನಡಲ್ಲಿ ಇತ್ತೀಚೆಗೆ ಬಿಡುಗಡೆಯಾದ ಚಲನಚಿತ್ರ “ದಯವಿಟ್ಟು ಗಮನಿಸಿ”ಯ ಬಗ್ಗೆ ವಿವೇಕ್ ಪ್ರಕಾಶ್ ತಮ್ಮ ಅನಿಸಿಕೆಯನ್ನಿಲ್ಲಿ ದಾಖಲಿಸಿದ್ದಾರೆ .

ದಯವಿಟ್ಟು ಗಮನಿಸಿ ಮೊದಲು ನನ್ನ ಗಮನ ಸೆಳೆದದ್ದು ಅದರ ಶೀರ್ಷಿಕೆಯಿಂದ. ಇದಾದ ನಂತರ ಕೇಳ್ಪಟ್ಟ ಹಾಡು “ಸಂಚಾರಿ…”. ಒಬ್ಬ ಯುವಕ ಕೆಂಪು ಬ್ಯಾಗೊಂದನ್ನು ಜತೆಯಲ್ಲಿಟ್ಟುಕೊಂಡು ದೇಶಾಂತರ ತಿರುಗುವ ಹಾಡು. ಹಾಡು ತುಂಬಾ ಹಿಡಿಸಿತ್ತು. ಇದರಲ್ಲಿ ಅವನು ಹಿಡಿದು ನಡೆಯುವ ಬ್ಯಾಗು ಅವನ ಮನಸ್ಸಿನ ಭಾರವನ್ನು ಜೊತೆಯಲ್ಲಿ ಒಯ್ಯುತ್ತಿರವ ಪ್ರತೀಕ ಎಂದು ನನಗನ್ನಿಸಿತ್ತು. ಬಹಳ ವರ್ಷಗಳ ಹಿಂದೆ ಮಣಿರತ್ನಂ ಅವರ “ಅಲೈಪಾಯದೇ” ಎಂಬ ತಮಿಳು ಚಿತ್ರದಲ್ಲಿ ಬರುವ “ಎವನೋ ಒರುವನ್ ವಾಸಿಕ್ಕಿರಾನ್…” ಎಂಬ ವಿರಹ ಗೀತೆಯಲ್ಲಿ ನಾಯಕನಾದವನು ಇದೇ ರೀತಿಯ ಬ್ಯಾಗೊಂದನ್ನು ಬೆನ್ನಿಗೆ ಕಟ್ಟಿಕೊಂಡು ಪ್ರೇಯಸಿಯನ್ನು ನೋಡಲು ಹೋಗುತ್ತಿದ್ದುದು ನೆನಪಿಗ ಬಂತು. ಅದಲ್ಲದೇ “ವೈಲ್ಡ್” ಎಂಬ ರೀಸ್ ವಿದರ್-ಸ್ಪೂನ್ ಅವರ ಇಂಗ್ಲೀಷ್ ಚಿತ್ರದಲ್ಲೂ ಈ ರೀತಿಯ ಬ್ಯಾಗನ್ನು ಪ್ರತೀಕವಾಗಿ ನೋಡಿದ್ದಿದೆ. ಸಂಚಾರಿ ಹಾಡಿನ ಒಟ್ಟು ಭಾವ ಇಷ್ಟವಾಗಿದ್ದೂ ಇದೇ ಸೂಕ್ಷ್ಮತೆಯ ಕಾರಣದಿಂದ. ಆದರೆ ಈ ಹಾಡಿನಲ್ಲಿರು ಸೂಕ್ಷ್ಮತೆ ಸಿನಿಮಾದಲ್ಲಿ ಕಾಣುವುದಿಲ್ಲ. ಅಲ್ಲಲ್ಲಿ ಪಾತ್ರಗಳ inconsistency ಸಿನಿಮಾದ ಒಟ್ಟು ಭಾವದ ಜತೆಯಲ್ಲಿ ಹೊಂದುವುದಿಲ್ಲ. ಯಾವ ಜಗತ್ತಿಗೆ ನಿರ್ದೇಶಕ ನಮ್ಮನ್ನು ಒಯ್ಯಲು ಯತ್ನಿಸುತ್ತಿದ್ದಾನೆ ಎಂಬುದು ಸಿನಿಮಾ ಶುರುವಾದ ಕೆಲವು ಕ್ಷಣಗಳಲ್ಲಿಯೇ ತಿಳಿಯುತ್ತದೆ. ಅಸಂಗತವಾದ ಕೆಲವು ಪಾತ್ರಗಳ ಮೂಲಕ ಬದುಕಿನ ಸಂಕೀರ್ಣತೆಯನ್ನು ಹೇಳುವ ಪ್ರಯತ್ನ ಕಳೆದ ವಾರ ಬಿಡುಗಡೆಗೊಂಡಿರುವ ’ದಯವಿಟ್ಟು ಗಮನಿಸಿ’ ಚಿತ್ರ ಮಾಡುತ್ತದೆ. ಅಪಾರವಾದ ಅನುಭವವಿರುವ ಕಲಾವಿದರೂ ಚಿತ್ರದಲ್ಲಿದ್ದಾರೆ. ಆದರೆ ಪ್ರೇಕ್ಷಕನಿಗೆ ಚಿತ್ರದ ಒಳಗೆ ಪ್ರವೇಶ ಕೊಡಿಸಲು ನಿರ್ದೇಶಕರು ಸ್ವಲ್ಪ ಮಟ್ಟಿಗೆ ಸೋತಿದ್ದಾರೆ. ಈ ಲೇಖನ ಚಿತ್ರ ಮಾಡಿರುವವರ ಬುಧ್ಧಿವಂತಿಕೆ ಹಾಗೂ ಪರಿಶ್ರಮವನ್ನು ಖಂಡಿತವಾಗಿಯೂ ಕಡೆಗಣಿಸುತ್ತಿಲ್ಲ ಬದಲಾಗಿ ಒಬ್ಬ ಪ್ರೇಕ್ಷಕನಾಗಿ ನನ್ನ ಪ್ರಾಮಾಣಿಕ ಪ್ರತಿಕ್ರಿಯೆ ಅಷ್ಟೇ.

ಮೊದಲನೇ ಅಧ್ಯಾಯ ಜಯಂತ್ ಕಾಯ್ಕಿಣಿ ಅವರ ಪ್ರಸಿದ್ಧ ಸಣ್ಣ ಕಥೆ ’ಕನ್ನಡಿ ಇಲ್ಲದ ಊರಲ್ಲಿ’ಯನ್ನು ಆಧರಿಸಿರುವ ಕಥೆ. ಅದೊಂದು ದಟ್ಟವಾದ ಅನುಭವ ಕೊಡುವ ಕಥೆ. ಅಸಹಾಯಕ ತಂದೆ ಹಾಗು ಆತ ಮಗಳಿಗಾಗಿ ಹುಡುಕುವ ಒಬ್ಬ ಮಧ್ಯವಯಸ್ಕ ವ್ಯಕ್ತಿಯ ನಡುವಿನ ಮೌನದ ಕಥೆ. ಆ ಕಥೆ ಓದಿದಾಗಿನಿಂದ ಇಂದಿಗೂ ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದಿರುವ ಘಟನೆಯೆಂದರೆ – ವಯೋವೃದ್ಧ ತಂದೆಯು ಸತ್ಯಜಿತನಿಗೆ ‘’Medical reports suggest that her virginity is intact.’’ ಎಂದು ಹೇಳಿದಾಗ ಸತ್ಯಜಿತ ಮನಸ್ಸಿನಲ್ಲಿ ಮರುಕ್ಷಣ ಹುಟ್ಟುವ ಪ್ರಶ್ನೆ ಏನೆಂದರೆ ಅವರು ಈ ಮಾತನ್ನು ಇಂಗ್ಲೀಷಿನಲ್ಲೇ ಯಾಕೆ ಹೇಳಿದರು ಎಂದು. ಇಂದಿಗೂ ಸತ್ಯಜಿತನ ಮನಸ್ಸಿನ ಆ ಪ್ರಶ್ನೆ ವಿಸ್ಮಯ ಹುಟ್ಟಿಸುತ್ತದೆ. ’ದಯವಿಟ್ಟು ಗಮನಿಸಿ’ ಚಿತ್ರದಲ್ಲಿ ಸತ್ಯಜಿತನ ಈ ತುಮುಲ ಕಾಣಿಸುವುದಿಲ್ಲ. ಕಥೆಯಲ್ಲಿ ಮನುಷ್ಯ ಸಹಜವಾದ ಹಿಂಜರಿಕೆಯಲ್ಲಿ ಹೇಳಿದ ವಿಷಯವು ಚಿತ್ರದಲ್ಲಿ ತಂದೆ ‘’She is still a virgin!” ಎಂದು ಕೂಗುತ್ತಾನೆ. ಮಧ್ಯಮ ವರ್ಗದ ಯಾವ ತಂದೆ ತನ್ನ ಮಗಳ virginity ಬಗೆಗೆ ಹೀಗೆ ಅಪರಿಚಿತನ ಎದುರು ಕೂಗುತ್ತಾನೆ? ಆ ಮಾತಿನ ಹಿಂದಿರುವ ವೇದನೆ ಹಾಗು ಹಿಂಜರಿಕೆಯನ್ನು ಗುರುತಿಸುಲ್ಲಿ ನಿರ್ದೇಶಕರು ಅದ್ಭುತವಾಗಿ ಸೋತಿದ್ದಾರೆ. ವರ್ಷಗಳ ಮಟ್ಟಿಗೆ ಕಾಡುವ ಹಾಗೆ ಮಾಡಬಹುದಾಗಿದ್ದ ಅಂಶವನ್ನು ಕೇವಲ ನಗಿಸುವುದಕ್ಕಾಗಿ ಉಪಯೊಗಿಸಲಾಗಿದೆ. ಈ ಕಥೆಯು ಅವರ ಸ್ವಂತದ್ದಾಗಿದ್ದರೆ ಅವರ ಇಷ್ಟ ಎನ್ನಬಹುದಾಗಿತ್ತು. ಆದರೆ ಇದೊಂದು ಈಗಾಗಲೇ ಇರುವ ಕೃತಿಯನ್ನು ಆಧರಿಸಿರುವ ಅಧ್ಯಾಯ. ಮೂಲ ಕಥೆಯ ಆರ್ದ್ರತೆಯನ್ನು ತೆರೆದಿಡುವುದು ಚಿತ್ರದ ಮೂಲಭೂತ ಕರ್ತವ್ಯ. ಅದು ಸಾಧ್ಯವಾಗಿಲ್ಲ. ಅದಾಗಲೇ ಕೆಟ್ಟಿರುವ ಕಥೆಯ ಮೌನವನ್ನು ಇನ್ನೂ ಕೆಡಿಸುವುದು ಕೃತಕವಾದ ಕರಾವಳಿ ಕನ್ನಡ ಹಾಗೂ ನಟನೆ. ಇದೇ ಅಧ್ಯಾಯದಲ್ಲಿ ಸತ್ಯನಾರಾಯಣ ತಾನು ಬೆಂಗಳೂರನ್ನೇ ಮದುವೆಯಾಗಿದ್ದೀನಿ ಎಂದು ಹೇಳುತ್ತಾನೆ. ಅದು ತುಂಬಾ ಹಿಡಿಸಿದ ಮಾತು. ಆದರೆ ಒಂದು ನಗರದ ಜತೆಗೆ ಅವನಿಗಿರಬಹುದಾದ ಸೂಕ್ಷ್ಮ ಸಂಬಂಧವನ್ನು ಇನ್ನೂ ಸ್ವಾರಸ್ಯಕರವಾಗಿ ಚಿತ್ರಿಕೆಯಲ್ಲಿ ಹಿಡಿಯಬಹುದಾಗಿತ್ತೇನೋ.

ಈ ಚಿತ್ರ ಅಸ್ತಿತ್ವದ ಬಗ್ಗೆ ಮಾತನಾಡುತ್ತದೆ. ಯಾವುದನ್ನು ಹುಡುಕಿ ನಾವು ಹೋಗುತ್ತೇವೆ ಹಾಗು ನಮ್ಮನ್ನು ಏನು ಹುಡುಕಿ ಬರುತ್ತದೆ ಹಾಗು ಇನ್ನು ಹಲವು ವಿಷಯಗಳನ್ನು ಸಿನಿಮಾ ಪ್ರಸ್ತಾಪಿಸುತ್ತದೆ. ಆದರೆ ತೀರಾ ಸರಳವಾದ ಹಿನ್ನೆಯನ್ನು ಈ ಪಾತ್ರಗಳು ಹೊಂದಿವೆ. ಹೀಗೇ ಒಂದು ಕಥೆಯಲ್ಲಿ ಒಬ್ಬ ಸಾಫ್ಟ್-ವೇರ್ ವರ್ಗದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವನು ಮನೆಗೆ ಹೋದಾಗ ಹೆಂಡತಿ ಬಾಗಿಲು ತೆಗೆಯುವುದಿಲ್ಲ. ಇದು ವಾರಗಟ್ಟಲೆ ನಡೆಯುತ್ತದೆ, ಆದರೆ ಒಂದು ದಿನ ಧಿಡೀರ್ ಅಂತ ಗಂಡ ”What the fuck is wrong with you?” ಅಂತ ಚೀರುತ್ತಾನೆ. ಸಹಜವಾಗಿಯೇ ಮೊದಲ ಬಾರಿ ಮನೆಗೆ ಸೇರಿಸದೇ ಇದ್ದಾಗ ಬರಬೇಕಿದ್ದ ಕೋಪ ಅವನಿಗೆ ಎಷ್ಟೋ ದಿನಗಳ ನಂತರ ಬರುತ್ತದೆ. ಈ ರೀತಿಯ ಅಸಹಜ ನಡೆಗಳಿಂದ ಪಾತ್ರಗಳು ಹತ್ತಿರವಾಗುವುದಿಲ್ಲ. ಒಂದು ವಾರದ ಮಟ್ಟಿಗೆ ಪ್ರಾಕ್ಸಿ ಹಾಕಿ ಬರಲು ಹೋಗುವ ಸಣ್ಣ ಕಳ್ಳನೊಬ್ಬ ತಿರುಗಿ ಬಂದಾಗ ಆತನ ಹುಡುಗಿಯ ಮದುವೆ ನಡೆಯುತ್ತಿರುತ್ತದೆ. ಆಗ ಅವನು ಆ ಹುಡುಗಿಯದೇ ತಪ್ಪು ಎನ್ನುವ ಹಾಗೆ ತನ್ನ ಸ್ನೇಹಿತನ ಜೊತೆಗೆ ಮಾತನಾಡುತ್ತಾನೆ. ಈ ಹಂತದಲ್ಲಿ patriarchal ಕಥೆ ಎಂದೂ ಅನಿಸುತ್ತದೆ. ಎಲ್ಲ ಕಡೆ ಸಿನಿಮಾದ ಬಗ್ಗೆ realistic ಸಿನಿಮಾ ಎಂಬ ಹಣೆಪಟ್ಟಿ ಕೊಡಲು ಯತ್ನಿಸಿದ್ದಾರೆ. ಆದರೆ ಚಿತ್ರದ ಬರವಣಿಗೆಯಲ್ಲಿ ಯಾವ realistic ಗುಣಗಳೂ ಕಾಣುವುದಿಲ್ಲ. ಗಣಪತಿ ಫಂಕ್ಷನ್ಗಾಗಿ ಹಾಡು ಕಲಿಸುವ ಹುಡುಗಿ “ನಿಮ್ಮದು ಜ್ಯೂನಿಯರ್ ಸೀನಿಯರ್ ಆಗಿದಿಯಾ? ಯಾವುದಾದರೂ ಸಂಗತಿ ಗೊತ್ತಾ?” ಎಂದು ಕೇಳುವುದು ತೀರಾ ಹಾಸ್ಯಾಸ್ಪದ.

ತುಂಬಾ ಅಸಹಜ ಎನಿಸುವ ಇನ್ನೊಂದು ಅಧ್ಯಾಯ ಜಾತಿ ಮತ್ತು ಧರ್ಮಗಳ ತಿರುಳನ್ನು ಅರಿಯಲು ಹೊರಡುವ ಯುವಕನದ್ದು. ಮನೆಯಲ್ಲಿ ತನ್ನ ಪ್ರೀತಿಯನ್ನು ಜಾತಿಯ ಹೆಸರಿನಲ್ಲಿ ಬಲಿ ಕೊಟ್ಟ ತಂದೆ ತಾಯಂದಿರನ್ನು ಧಿಕ್ಕರಿಸಿ ಹೊರಬರುವ ಒಬ್ಬ rational ಹಾಗೂ idealistic ಯುವಕ ಒಬ್ಬ ವೇಶ್ಯೆಯನ್ನು ಯಾಕೆ ಒಪ್ಪುವುದಿಲ್ಲ ಎನ್ನುವುದು ತಿಳಿಯಲಿಲ್ಲ. ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಬಂದ ಇದೇ ವ್ಯಕ್ತಿಯು ಆ ವೇಶ್ಯೆಯ ಗ್ರಾಹಕನೊಬ್ಬನ ಹಿಂದೆ ಹೋಗಿ ಬುದ್ಧಿ ಹೇಳುವಾಗ “ನೀನು ನಮ್ಮವನು ಅಂತ ಹೇಳ್ಕೊಳೋಕೆ ನಾಚಿಕೆ ಆಗ್ತಿದೆ” ಅಂತಾನೆ. ಇಲ್ಲಿ ಅವನಿಗೆ ನಾಚಿಕೆ ಹುಟ್ಟಿಸಿದ ವಿಷಯ ಯಾವುದು? ವೇಶ್ಯಾವಾಟಿಕೆ ವೃತ್ತಿಯೋ? ಅಥವ ತನ್ನವನು ಎನಿಸಿಕೊಂಡವನು ವೇಷ್ಯೆಯ ಬಳಿ ಹೋದದ್ದೋ?. ಈ ರೀತಿಯ ಹಲವು inconsistency ಗಳಿಂದ ಪಾತ್ರಗಳು ಮತ್ತೆ ದೂರವಾಗುತ್ತವೆ.ಯಾವ ಕಟ್ಟುಪಾಡುಗಳಿಂದ ತಪ್ಪಿಸಿಕೊಂಡು ಬಂದಿರುತ್ತಾನೋ ಮತ್ತೆ ಅದೇ ರೀತಿಯ ಕಟ್ಟುಪಾಡುಗಳನ್ನು ತನ್ನನ್ನು ಮಾತನಾಡಿಸಲು ಬರುವ ಭಕ್ತರ ಮೇಲೆ ಹೇರುತ್ತಾ ಬರುವ ಈ ವ್ಯಕ್ತಿಯ motive ತುಂಬಾ ಜಾಳಾಗಿ ಕಾಣುತ್ತದೆ. ಈ ಪಾತ್ರವು “Ship of Theseus”ನ ನೀರಜ್ ಕಬಿಯ ಪಾತ್ರದಿಂದ ಹೊಮ್ಮಿರಬಹುದೆಂಬ ಅನುಮಾನವೂ ಬಂತು.  ಎಂ.ಎನ್.ಸಿ. ಒಂದರಲ್ಲಿ ಮದುವೆಯಾದವನ ಹಿಂದೆ ಬೀಳುವ ಒಬ್ಬ ಮಾಡರ್ನ್ ಹುಡುಗಿಯನ್ನು ಕೊನೆಯ ಅಧ್ಯಾಯದ ನಾಯಕ ಕೆಟ್ಟದಾಗಿ ಸಂಭೋಧಿಸುತ್ತಾನೆ. ಆದರೆ ಅವನು ಆ ಮಾತುಗಳನ್ನು ಆಡುವುದಕ್ಕೆ ಇರುವ ಹಿನ್ನೆಲೆ ಕಾಣುವುದೇ ಇಲ್ಲ. ಇಷ್ಟರ ಮೇಲೆ ಆ ಹುಡುಗಿ ಹೇಳುವ ವಿಷಯಗಳು ಹೊಸದಲ್ಲ, ನಾವು ಆಗಾಗ್ಗೆ ಫೇಸ್-ಬುಕ್ ಹಾಗೂ ಅಲ್ಲಿಲ್ಲಿ ಕೇಳಿಸಿಕೊಳ್ಳುವ ವಿಷಯಗಳೇ. ಆ ಹುಡುಗಿ ನಾಯಕನನ್ನು ಹೇಗೋ ಕ್ಷಮಿಸುತ್ತಾಳೆ ಆದರೆ ಅವಳ ಮಾತುಗಳಿಂದ ಇವನಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದೂ ಸಹ ಸರಿಯಾಗಿ ಬಿಂಬಿಸಿಲ್ಲ. ಇದೇ ಅಧ್ಯಾಯದಲ್ಲಿ ಬರುವ ಒಬ್ಬ ಕ್ಯಾಬ್ ಚಾಲಕ ತಾನು ಹಾಡುಗಾರ ಎಂದು ಹೇಳಿ ಅವನು ಹಾಡಿರುವ ಒಂದು ಹಾಡನ್ನು ಹಾಕುತ್ತಾನೆ. ಇವನು ಇಮ್ತಿಯಾಝ್ ಅಲಿಯ “ತಮಾಷಾ” ಚಿತ್ರದಲ್ಲಿ ವೇದ್ (ರಣಬೀರ್ ಕಪೂರ್) ರಿಕ್ಷಾ ಒಂದರಲ್ಲಿ ಕುಳಿತಾಗ ಅವನಿಗೆ ವಿಸ್ಮಯಕಾರಯಾಗಿ ಕಾಣುವ ದೆಹಲಿ ನಗರದಲ್ಲಿ ಕಳೆದುಹೋಗಿರುವ ರಿಕ್ಷಾ ಚಾಲಕನ ಹಾಡುಗಾರಿಕೆಯ ಹಾಗೆ ನನಗೆ ಮಾತ್ರ ಕಂಡನೋ ಅಥವ ಬೇರೆಯವರಿಗೂ ಕಂಡನೋ ಎಂಬುದು ಅನುಮಾನಿಸಬೇಕಾದ ವಿಷಯ. ಇಷ್ಟರ ಮೇಲೆ “ಬುರುಡೀ ಬುದ್ಧಿ..” ಹಾಡನ್ನು ಬಳಸಲಷ್ಟೇ ಆ ಚಾಲಕನನ್ನು ಇಲ್ಲಿ ಇಡಲಾಗಿದೆ.

ಇವೆಲ್ಲದರ ನಡುವೆ ಸಿನಿಮಾ ಮುಗಿಯುವ ಹಂತದಲ್ಲಿ ನಿರ್ದೇಶಕರು ಈ ನಾಲ್ಕೂ ಕಥೆಗಳ ನಾಯಕರ ಬದುಕನ್ನು ಸಣ್ಣ ಕೊಂಡಿಯ ಮೂಲಕ ಸೇರಿಸಲು ಹೋಗುತ್ತಾರೆ. ಅದು ನಿಜಕ್ಕೂ ಸಮರ್ಪಕವಾಗಿ ಮೂಡಿಬಂದಿಲ್ಲ ಹಾಗು ಆ ನಾಲ್ಕೂ ಪಾತ್ರಗಳು ಒಬ್ಬರಿಗೊಬ್ಬರು ಸಂಬಂಧಿಸಬೇಕಾಗಿಯೂ ಇಲ್ಲ. ಇದಕ್ಕಿಂತಲೂ ಅಸಮರ್ಪಕವೆನಿಸಿದ್ದು ನಾಲ್ಕೂ ಪಾತ್ರಗಳ ಕಡೆಯ ನಿರ್ಧಾರಗಳು. ಯಾಕೆ ಅವರೆಲ್ಲರೂ ಎಲ್ಲ ಬಿಟ್ಟು ಹೋಗಲು ನಿರ್ಧರಿಸುತ್ತಾರೆ? ಹಾಗಾದರೆ ಬದುಕಿನಲ್ಲಿ ಇರುವ ಕಷ್ಟ ಕೋಟಲೆಗಳಿಂದ ಸುಮ್ಮನೆ escape ಆಗುತ್ತಿರುವುದೇ ಬದುಕಾ? ತನ್ನ ಗಂಡನನ್ನು ಧ್ವೇಷಿಸುವ ಹೆಂಡತಿಯ ಸಿಟ್ಟಿಗೂ ಒಂದು ಬಲವಾದ ಕಾರಣವಿದೆ, ಅವಳ ಮುಂದಿನ ಜೀವನದ ಕಥೆಯೇನು? ಸತ್ಯನಾರಾಯಣನಿಗೆ ಮದುವೆಯಾಗು ಎಂದು ಪೀಡಿಸಿದ ತಂದೆಯ ದುಗುಡ ಏನಾಯಿತು? Open end ಅನ್ನುವ ಹೆಸರಿನಲ್ಲಿ ಏನು ಬೇಕಾದರೂ ಮಾಡುವುದಕ್ಕಾಗುವುದಿಲ್ಲ. ಬೇರೆ ಯಾವುದೇ open ended ಸಿನಿಮಾಗಳನ್ನು ನೀವು ನೋಡಿದರೆ ಅದು ಶುರುವಾದ ಸ್ಥಿತಿಗೂ ಮುಗಿಯುವ ಸ್ಥಿತಿಗೂ ಮಧ್ಯದಲ್ಲಿ ಅಗಾಧವಾದ ಸ್ಥಿತ್ಯಂತರಣ ಆಗಿರುತ್ತದೆ. ಈ ಚಿತ್ರದಲ್ಲಿ ಆ ಸ್ಥಿತ್ಯಂತರಣ ಕಾಣುವುದಿಲ್ಲ. ಯಾಕೆ ಕಾಣುವುದಿಲ್ಲವೆಂದರೆ ಯಾವುದೇ ಪಾತ್ರಕ್ಕೂ ಗಟ್ಟಿಯಾದ ಹಿನ್ನೆಲೆಯಿಲ್ಲದ ಕಾರಣದಿಂದ. ಗಟ್ಟಿಯಾದ ಹಿನ್ನೆಲೆಯಿದ್ದಿದ್ದರೆ ಚಿತ್ರದಲ್ಲಿ ಪಾತ್ರಗಳು ಮಾಡಿದ ನಿರ್ಧಾರಗಳು ಬದಲಾಗುತ್ತಿತ್ತೇನೋ, ಬಹುಶಃ. ಬರವಣಿಗೆ ಹಾಗೂ ದೃಶ್ಯ ಜೋಡಣೆಯಿಂದ ಚಿತ್ರ ಸೋತಿದೆ. ಬರವಣಿಗೆಯಲ್ಲಿ ತುಂಬಾ superficial ಆಗಿ ವಿಷಯಗಳನ್ನು ತೇಲಿಸಿಕೊಂಡು taken for granted ಎನ್ನುವ ಹಾಗಾಗಿದೆ, ಅರ್ಧ ಘಂಟೆಯ ಅಧ್ಯಾಯದಲ್ಲಿ ಸಾಕಷ್ಟು ಹೇಳಬಹುದು. ಇದಕ್ಕೆ ದಕ್ಷ ಉದಾಹರಣೆ ’ಬಾಂಬೆ ಟಾಕೀಸ್’. ಸ್ಥಿತ್ಯಂತರಣಕ್ಕೆ ಒಂದು ಅದ್ಭುತ ಉದಾಹರಣೆ “A Separation”. ಸಿನಿಮಾ ಶುರುವಾದಾಗ ಆ ಕುಟುಂಬದ ಪರಿಸ್ಥಿತಿ ಹಾಗೂ ಮುಗಿದಾಗ ಇರುವ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿ ನೋಡಿ.

ಎಲ್ಲ ಕಥೆಗಳೂ ಗಂಡಸರ ಪಾತ್ರಗಳ ಸುತ್ತಲೇ ಸುತ್ತುತ್ತದೆ. ಪ್ರೀತಿಸಿ ಮದುವೆಯಾದ ಒಬ್ಬಳು ಮದುವೆಯಾದ ಮೇಲೆ ಅದೇ ಪ್ರಿಯತಮ/ಗಂಡನಿಗೆ “ನನ್ನ ಜೊತೆಗೆ ಸ್ವಲ್ಪ ಟೈಂ ಸ್ಪೆಂಡ್ ಮಾಡು..” ಎಂದು ಅವಲತ್ತುಕೊಳ್ಳುವದರ ಹಿಂದೆ ಇರುವ ಕಾರಣ ಆ ದೊಡ್ಡ ನಗರದ ಕ್ರೌರ್ಯ. ಅದು ತುಸು ಕಡಿಮೆಯೇ ಕಾಣುತ್ತದೆ. ಆ ಹೆಂಡತಿಯ ಸಿಟ್ಟು ನನಗೆ ಒಪ್ಪುವಂತಾಗಿತ್ತು. ಅದು ನಿಜವಾದ ಸಿಟ್ಟು ಹಾಗೂ ಆಕ್ರೋಶ. ಹಾಗೆ ಹೆಂಡತಿಯ ಸಿಟ್ಟು ನಿಜವಾದ್ದು ಎಂದು ಅನಿಸಿದ ಕ್ಷಣದಲ್ಲಿಯೇ ಆ ಅಧ್ಯಾಯದ ಮುಖ್ಯ ಪಾತ್ರಧಾರಿಯ ನಡೆ ಹಾಗೂ ಆಯ್ಕೆಗಳು pointless ಅನಿಸಿಬಿಟ್ಟಿತು.

ಸಿನಿಮಾದ ನಂತರ ನೆನಪಿನಲ್ಲಿ ಉಳಿಯುವುದು ರಾಜೇಶ್ ನಟರಂಗ ಅವರ ನಟನೆ. ಗಟ್ಟಿಯಾದ ಬರವಣಿಗೆ ಇಲ್ಲದೆಯೂ ಸಹ ಅವರ ಪಾತ್ರವನ್ನು ಅತ್ಯಂತ ನಾಜೂಕಿನಿಂದ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಕಡ್ಡಿಪುಡಿಯ ಗಾಳಿ, ಕೆಂಡಸಂಪಿಗೆಯ ಅಧಿಕಾರಿ ಹಾಗು ಈ ಚಿತ್ರದ ಸತ್ಯನಾರಾಯಣ. ರಾಜೇಶ್ ನಿಜಕ್ಕು ಒಬ್ಬ ಒಳ್ಳೆಯ ಕಲಾವಿದ. ಅವರ ಪಾತ್ರ ಪೋಷಣೆಗೆ ಬೇಕಾಗಿದ್ದ ಸಾಮಗ್ರಿಗಳು ಚಿತ್ರಕಥೆಯಲ್ಲಿ ದೊರೆತಿದ್ದರೆ ಇನ್ನು ನೋಡಲು ಖುಷಿಯಿರುತ್ತಿತ್ತು. ಗುಲ್ಝಾರ್ ಅವರು ಒಮ್ಮೆ ಹೇಳಿದ್ದರು “Films are made on two tables. Writing and editing.” ಎಂದು. ಆದರೆ ದಯವಿಟ್ಟು ಗಮನಿಸಿ ಚಿತ್ರ ಎರಡೂ ಟೇಬಲ್-ನಲ್ಲಿ ಮೂಡಿಬಂದಿಲ್ಲ. ಆದರೆ ಒಂದು ಒಳ್ಳೆಯ ಚಿತ್ರವಾಗುವ ಎಲ್ಲಾ ಲಕ್ಷಣಗಳೂ ಇದರಲ್ಲಿತ್ತು. ನಾಲ್ಕೂ ಕಥೆಯ ಯಾವುದೇ ಮಹಿಳಾ ಪಾತ್ರಧಾರಿಗಳನ್ನೂ ಸಮರ್ಪಕವಾಗಿ ನಡೆಸಿಕೊಂಡಿಲ್ಲದೇ ಇರುವುದು ಬೇರೆಯೇ ವಿಷಯ. ಎಲ್ಲ ಕಥೆಗಳೂ ಗಂಡಸರ ಪಾತ್ರಗಳ ಸುತ್ತಲೇ ಸುತ್ತುತ್ತದೆ. ಪ್ರೀತಿಸಿ ಮದುವೆಯಾದ ಒಬ್ಬಳು ಮದುವೆಯಾದ ಮೇಲೆ ಅದೇ ಪ್ರಿಯತಮ/ಗಂಡನಿಗೆ “ನನ್ನ ಜೊತೆಗೆ ಸ್ವಲ್ಪ ಟೈಂ ಸ್ಪೆಂಡ್ ಮಾಡು..” ಎಂದು ಅವಲತ್ತುಕೊಳ್ಳುವದರ ಹಿಂದೆ ಇರುವ ಕಾರಣ ಆ ದೊಡ್ಡ ನಗರದ ಕ್ರೌರ್ಯ. ಅದು ತುಸು ಕಡಿಮೆಯೇ ಕಾಣುತ್ತದೆ. ಆ ಹೆಂಡತಿಯ ಸಿಟ್ಟು ನನಗೆ ಒಪ್ಪುವಂತಾಗಿತ್ತು. ಅದು ನಿಜವಾದ ಸಿಟ್ಟು ಹಾಗೂ ಆಕ್ರೋಶ. ಹಾಗೆ ಹೆಂಡತಿಯ ಸಿಟ್ಟು ನಿಜವಾದ್ದು ಎಂದು ಅನಿಸಿದ ಕ್ಷಣದಲ್ಲಿಯೇ ಆ ಅಧ್ಯಾಯದ ಮುಖ್ಯ ಪಾತ್ರಧಾರಿಯ ನಡೆ ಹಾಗೂ ಆಯ್ಕೆಗಳು pointless ಅನಿಸಿಬಿಟ್ಟಿತು.

ಈ ಸಿನಿಮಾ ನೋಡಿದವರು ಹಾಗೂ ನೋಡದೇ ಇರುವವರೆಲ್ಲರೂ ಇದೇ ತರಹದ ಪ್ರಯತ್ನವನ್ನು ಇನ್ನೂ ದಕ್ಷವಾಗಿ ಮಾಡಿರುವ ಸಿನಿಮಾಗಳನ್ನು ನೋಡಿ. ಅರ್ಜೆಂಟೀನಾದ “Wild Tales”, ನಮ್ಮದೇ “Bombay Talkies”, ಜಗತ್ತಿನ ಶ್ರೇಷ್ಠ ನಿರ್ದೇಶಕರ ಕಿರುಚಿತ್ರಗಳ ಸಮಾಗಮ “To Each His Own Cinema”, ಹಿಂದಿಯ “ದಸ್ ಕಹಾನಿಯಾ” ಚಿತ್ರದಲ್ಲಿ ಬರುವ ರೋಹಿತ್ ರಾಯ್ ಅವರ “ರೈಸ್ ಪ್ಲೇಟ್” ಹಾಗೂ ಮೇಘನಾ ಗುಲ್ಝಾರ್ ಅವರ “ಪೂರನ್ ಮಾಸೀ”… ಹೀಗೇ ಹಲವು ಪ್ರಯತ್ನಗಳು ಹಿಂದೆಯೇ ಆಗಿವೆ. ಇದೆಲ್ಲದರ ಜತೆಗೆ ದಯವಿಟ್ಟು ಗಮನಿಸಿ ಕೂಡಾ ನೋಡಿ.

ಪ್ರತಿಕ್ರಿಯಿಸಿ