ಕಥೆ : ಏಪ್ರಿಲ್ ಫೂಲ್

ಅವತ್ತು ಎಪ್ರಿಲ್ 1, 2117
ಜರ್ನಲಿಸ್ಟ್ ಮೈತ್ರಿರಾವ್ ಆಗಷ್ಟೆ ಡ್ಯೂಟಿ ಮುಗಿಸಿ ಮನೆಗೆ ಬಂದಾಗ ಅವರ ಗಂಡ ರಾಮು ಚಪಾತಿ ಲಟ್ಟಿಸುತ್ತಿದ್ದ. ಮಗ ದೀಪು ಹಣೆಯ ಬೆವರು ಒರೆಸಿಕೊಳ್ಳುತ್ತ ಮುಸುರೆ ತಿಕ್ಕುತ್ತಿದ್ದ. ಮಗಳು ಸೋನಿ ತನ್ನ ರೂಮಿನಲ್ಲಿ ಪ್ಲೇ ಸ್ಟೇಷನ್ನಿನಲ್ಲಿ ವೈ ಸಿಟಿ ಗೇಮ್ ಆಡತೊಡಗಿದ್ದಳು. ಇವರನ್ನೆಲ್ಲ ನೋಡಿಯೂ ನೋಡದಂತೆ ತನ್ನ ಬ್ಯಾಗ್ ಟೇಬಲ್ ಮೇಲೆ ಎಸೆದು ಸೀದಾ ಬಾತ್ ರೂಮಿಗೆ ಹೋದರು. ತಣ್ಣೀರಲ್ಲಿ ಮಿಂದು ಬಂದು ಟಿವಿ ಆನ್ ಮಾಡಿ ಸಿಗರೇಟ್ ಹಚ್ಚಿದರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಸೋನಿ ಹಾಯ್ ಮಮ್ ಎನ್ನುತ್ತಾ ತಾಯಿ ಪಕ್ಕ ಕುಳಿತಳು. ಮಗಳ ಇಂಗಿತ ಅರ್ಥ ಮಾಡಿಕೊಂಡ ಮೈತ್ರಿರಾವ್ ಅವಳಿಗೂ ಒಂದು ಸಿಗರೇಟ್ ನೀಡಿದರು.
ರಾಮು ಅಡುಗೆ ಬಿಸಿ ಮಾಡುತೊಡಗಿದರೆ, ಮಗ ದೀಪು ಪಾತ್ರೆಗಳನ್ನು ತಾಯಿ ಮಗಳಿಬ್ಬರ ಮುಂದೆ ತಂದಿಟ್ಟು ಪ್ಲೇಟ್ ಹಚ್ಚತೊಡಗಿದ. ಮ್ಯಾಮ್ ಏನಿವತ್ತು ವಿಶೇಷ? ಮಗಳು ಆಮ್ಲೆಟ್ ಪೀಸ್ ಬಾಯಿಗೆ ಹಾಕಿಕೊಳ್ಳುತ್ತಾ ಕೇಳಿದಳು. ಪ್ರತಿ ದಿನವೂ ಊಟ ಮಾಡುವಾಗ ಅವತ್ತು ತಾನು ಸುದ್ದಿ ಮಾಡಿದ ವರದಿಗಳ ಬಗ್ಗೆ ಮಗಳಿಗೆ ಹೇಳುವುದು ರೂಢಿ. ಇದ್ಯಾವುದಕ್ಕೆ ಗಮನ ಕೊಡದ ಮಗ ವಾಸಿಂಗ್ ಮಷೀನ್ ಗೆ ಬಟ್ಟೆ ಹಾಕಲು ಹೋದ. ಅಪ್ಪ ಕೇಳಿಯೂ ಕೇಳಿಸಿಕೊಳ್ಳದಂತೆ ಅಡಿಗೆ ಬಡಿಸತೊಡಗಿದ.
***

ಅವತ್ತು ಮೈತ್ರಿರಾವ್ ಮೊದಲು ಸುದ್ದಿ ಮಾಡಲು ಹೋದದ್ದು ಟೌನಹಾಲ್ಗೆ. ಆಗಷ್ಟೆ ಪುರುಷ ರಕ್ಷಣಾ ವೇದಿಕೆ ಅಧ್ಯಕ್ಷ ಬಾಮಣ್ಣ ಭಾಷಣಕ್ಕೆ ನಿಂತಿದ್ದರು. ಹೆಂಡತಿ ಮತ್ತು ಅತ್ತೆಯಿಂದ ಸಾಕಷ್ಟು ಶೋಷಣೆಗೆ ಒಳಗಾಗಿ, ಮನೆಯಿಂದ ಹೊರಗೆ ದಬ್ಬಲ್ಪಟ್ಟ ನಂತರ ಬಾಮಣ್ಣನವರು ಈ ಸಂಘಟನೆಯನ್ನು ಕಟ್ಟಿಕೊಂಡಿದ್ದರು. ಅವರ ಬಾಯಿಂದ ಉದುರಿದ ಮಾತುಗಳ ಸಾರಾಂಶವಿಷ್ಟು. ಪುರುಷನೇ ಈ ಪ್ರಕೃತಿಗೆ ಪ್ರಧಾನ ಅಂತ ವೇದ ಕಾಲದಿಂದಲೂ ಹೇಳಿಕೊಂಡು ಬರಲಾಗಿದೆ. ಆದರೆ, ಇತ್ತೀಚೆಗೆ ಕಾಲ ಬದಲಾದಂತೆ ಮಹಿಳೆಯರೇ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡು ಅಮಾಯಕ ಪುರುಷರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸಂವಿಧಾನವನ್ನು ತಮಗೆ ಬೇಕಾದಂತೆ ಬದಲಾಯಿಸಿ ಎಲ್ಲ ಚರ ಮತ್ತು ಸ್ಥಿರಾಸ್ತಿಗಳನ್ನು ತಮ್ಮ ಹಿಡಿತದಲ್ಲಿ ಹಿಡಿದುಕೊಂಡಿದ್ದಾರೆ. ನಮ್ಮ ಪೂರ್ವಜ ಪುರುಷರು ಮಾಡಿದ ತಪ್ಪಿಗೆ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಎಲ್ಲ ಕಡೆಯೂ ಪುರುಷರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪುರುಷ ಶಿಶುಗಳ ಹತ್ಯೆ ನಡೆಯುತ್ತಿದೆ. ಸ್ತ್ರೀಯರು ಎಲ್ಲ ಪುರುಷರನ್ನು ಗುಲಾಮರಾಗಿ ಮಾಡಿಕೊಂಡು ಹಲವಾರು ತರಹದ ಹಿಂಸೆ ಕೊಡ್ತಿದ್ದಾರೆ. ಇವತ್ತು ಪುರುಷರು ಅಡುಗೆ ಮನೆಯಲ್ಲಿ ಬಂಧಿಯಾಗಿದ್ದಾರೆ. ಮೀಸೆ ಹೊತ್ತ ಗಂಡಸರು ಸ್ತ್ರೀಯರು ಹೆತ್ತುಕೊಟ್ಟ ಮಕ್ಕಳ ಮುಕುಳಿ ತೊಳ್ಕೊಂಡು ಜೀವನ ಸಾಗಿಸಬೇಕಾಗಿದೆ. ಜೀವನ ಪೂರ್ತಿ ಹೆಂಗಸರ ಜೀತ ಮಾಡಿಕೊಂಡು ನಮಗೂ ಸಾಕಾಗಿದೆ. ಸಮನಾಗಿಅಧಿಕಾರ ಮತ್ತು ಆಸ್ತಿ ಹಕ್ಕನ್ನು ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಹೀಗೆ ಬಾಮಣ್ಣಿಯವರು ಇನ್ನು ಏನೇನೋ ಒದರುತ್ತಲೇ ಇದ್ದರು. ಈ ಭಾಷಣದ ಪಾಯಿಂಟ್ಸ್ ಗಳನ್ನು ಟಿಪ್ಪಣೆ ಮಾಡಿಕೊಳ್ಳುತ್ತಿರುವಾಗಲೇ ಮೈತ್ರಿರಾವ್ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಲು ನಮ್ಮ ಕಚೇರಿಯಿಂದ ಮೆಸೆಜ್ ಬಂತು.
***

ಆಸ್ಪತ್ರೆ ಎಂದಿನಂತೆ ಜನರಿಂದ ಕಿಕ್ಕಿರಿದಿತ್ತು. ಬಹುತೇಕ ರೋಗಿಗಳು ತಮ್ಮ ಹೆಂಡಂದಿರ ದೈಹಿಕ ಹಲ್ಲೆಯಿಂದಾದ ಗಾಯಗಳನ್ನು ತೋರಿಸಿಕೊಳ್ಳಲು ಬಂದಿದ್ದರು. ಒಬ್ಬನಂತೂ ತನ್ನ ಮೈಮೇಲಿನ ಸುಟ್ಟ ಗಾಯಗಳನ್ನು ವೈದ್ಯರಿಗೆ ತೋರಿಸುತ್ತಾ ವಿಕಾರವಾಗಿ ಕಿರುಚುತ್ತಿದ್ದ. ವಧು ದಕ್ಷಿಣೆಗಾಗಿ ಆತನ ಹೆಂಡತಿ ಮತ್ತು ಆಕೆಯ ಮನೆಯವರು ತುಂಬಾ ಕ್ರೂರವಾಗಿ ವರ್ತಿಸಿದ್ದರ ಕುರುಹುಗಳಾಗಿ ಆತನ ಮೈಮೇಲೆ ಕೆಂಪು ಬಾಸುಂಡೆಗಳುರಾರಾಜಿಸುತ್ತಿದ್ದವು. ಇವೆಲ್ಲ ದಿನನಿತ್ಯದ ಸಂಗತಿಗಳೇ ಆದ್ದರಿಂದ ಮೈತ್ರಿ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಆಸ್ಪತ್ರೆಯ ಹಿಂದಿನ ಮೋರಿಗೆ ಹೋದರು.. ಅಲ್ಲಿ ಇನ್ನು ಬಲಿಯಬೇಕಿದ್ದ, ಬಲಿತು ಬಾಳ ಬೇಕಿದ್ದ ಪುರುಷ ಭ್ರೂಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಲವನ್ನು ಕಾಗೆ ಗೂಗಿಗಳು ಹೆಕ್ಕಿ ಹೆಕ್ಕಿ ತಿನ್ನುತ್ತಿದ್ದವು, ನಾಯಿ-ಹದ್ದುಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು, ಕೆಲವು ಭ್ರೂಣಗಳು ಒಣಗಿ ಕಪ್ಪಿಟ್ಟಿದ್ದವು. ಅವುಗಳ ಕೈ ಕಾಲುಗಳ ಸೊಟ್ಟಾಗಿ ಅಕರಾಳ ವಿಕರಾಳಗೊಂಡು ದುರ್ವಾಸನೆ ಸೂಸುತ್ತಿದ್ದವು. ಆಸ್ಪತ್ರೆಯಲ್ಲಿ ಪುರುಷ ಭ್ರೂಣ ಹತ್ಯೆ ನಡೆಯುತ್ತಿದೆ ಎಂಬ ಆರೋಪವಿತ್ತಾದರೂ ಅವುಕ್ಕೆ ಸಾಕ್ಷಿಯಿರಲಿಲ್ಲ. ಹೀಗಾಗಿ ಈ ಪ್ರಕರಣಕ್ಕೆ ಮಹತ್ವ ಪಡೆದುಕೊಳ್ಳುವ ಸಾದ್ಯತೆ ಇತ್ತು, ಮೈತ್ರಿರಾವ್ ಬರುವ ಮುಂಚೆಯೇ ಕೆಲವು ವರದಿಗಾರ್ತಿಯರು ಫೋಟೋ ಕ್ಲಿಕ್ಕಿಸುತ್ತಿದ್ದರು. ಮೈತ್ರಿರಾವ್ ಕೂಡ ಯಾವುದೇ ಭಾವನೆಗಳ ವಶಕ್ಕೆ ಈಡಾಗದೆ ವಸ್ತುನಿಷ್ಟ ಸುದ್ದಿಗಾಗಿ ಬೇಕಾದಂತೆ ನೋಟ್ಸ್ ಮಾಡಿಕೊಳ್ಳುತ್ತಿರುವಾಗಲೇ ಅವರಿಗೆ ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿಯ ಎಂಜಾಯ್ ಲಾಡ್ಜಗೆ ಹೋಗಲು ಸೂಚನೆ ಬಂತು.
***

ಎಂಜಾಯ್ ಲಾಡ್ಜನ ಮೆಟ್ಟಿಲೇರಿ ಒಳ ಬರುತ್ತಿರುವಾಗಲೇ ಪಿಎಸ್ಐ ರಮಣಿ ಒಂದಿಬ್ಬರು ಬಿಜಿನೆಸ್ ವುಮೆನ್ ಮತ್ತು ಸಪ್ಲೈ ಮಾಡುವ ಹುಡುಗರನ್ನೂ ವಿಚಾರಣೆ ನಡೆಸಿದ್ದರು. ರೂಮಿನಲ್ಲಿ ಬೆಡಶೀಟ್ ಬದಲಾಯಿಸಲುಬಂದಿದ್ದ ಈ ಹುಡುಗರ ಮೇಲೆಯೇ ಈ ಬ್ಯುಜಿನೆಸ್ ವುಮೆನ್ ರೇಪ್ ಅಟೆಂಪ್ಟ್ ಮಾಡಿದರು ಅನ್ನೋದು ಆ ಹುಡುಗರ ಆರೋಪ. ಹಂಗೇನಿಲ್ಲ, ನಾವು ಪ್ರೀತಿಯಿಂದ ಆಹ್ವಾನ ನೀಡಿದ್ದು ನಿಜ. ಪ್ರೀತಿಯಿಂದ ಕರೆದರೆ ಅದ್ಹೇಗೆ ರೇಪ್ ಆಗುತ್ತೆ ಅನ್ನೋದು ಆ ಆಂಟಿಗಳ ವಾದ. ಪಿಸ್ಐ ರಮಣಿಯವರು ಎರಡು ಪಾರ್ಟಿಯವರನ್ನು ಸಂಬಾಳಿಸಿ, ಆ ಹುಡುಗರಿಗೆ ಒಂದಿಷ್ಟು ಪರಿಹಾರ ಕೊಡಿಸಿ ಕಳಿಸುವಷ್ಟರಲ್ಲಿ ಸಾಕು ಬೇಕಾಯಿತು.
ಲಾಡ್ಜ್ ನಿಂದ ಹೊರ ಬರುತ್ತಿರುವಾಗ ಎದುರಿನ ಹಾದಿ ಬದಿಯಲ್ಲಿ ಹತ್ತಾರು ಹುಡುಗರು ಮೇಕಪ್ ಮಾಡಿಕೊಂಡೋ, ತಮ್ಮ ಕಟುಮಸ್ತಾದ ದೇಹವನ್ನು ಪ್ರದರ್ಶಿಸಿಕೊಂಡೋ ಅಡ್ಡಾಡುತ್ತಿದ್ದರು. ಈ ಮೇಲ್ಪ್ರಾಸ್ಟಿಟ್ಯೂಟ್ಸ್ ಹೈ ಸೊಸೈಟಿ ಹೆಂಗಸರು ಆಸೆಯಿಂದ ನೋಡುವುದು ಸಾಮಾನ್ಯ ಸಂಗತಿಯಾಗಿತ್ತು. ಮೈತ್ರಿರಾವ್ ಅವರತ್ತಲೂ ಒಂದಿಬ್ಬರು ಸನ್ನೆ ಮಾಡಿದರಾದರೂ ಕೆಲಸದ ಒತ್ತಡದಲ್ಲಿದ್ದ ಮೈತ್ರಿ ಅವರತ್ತ ಗಮನಹರಿಸದೆ ಕಚೇರಿಯತ್ತ ಹೋಗಲು ಕಾರ್ ಏರಿದಳು.
**
ಇವಿಷ್ಟನ್ನು ಮಗಳ ಮುಂದೆ ಹೇಳುತ್ತಿರುವಾಗ ಊಟ ಬಡಿಸುತ್ತಿದ್ದ ರಾಮುನ ಕಣ್ಣುಗಳು ತೇವ ತೇವ. ತಡೆದುಕೊಳ್ಳಲಿಕ್ಕಾಗದೇ ಆತನ ಒಂದೆರಡು ಕಣ್ಣಿರು ಹಣಿ ಡೈನಿಂಗ್ ಟೇಬಲ್ ಮೇಲೆ ಬಿದ್ದು, ಅವಮಾನವಾದಂತಾಗಿತಡೆದುಕೊಳ್ಳಲಾರದೆ ದುಖಃವೆಂಬುದು ಒತ್ತರಿಸಿಕೊಂಡು ಬಂದು ಆತ ಅಲ್ಲಿಂದ ಎದ್ದು ವರಾಂಡದಲ್ಲಿ ಕುಳಿತ. ಊಟ ಮುಗಿಸಿ ವರಾಂಡಕ್ಕೆ ಬಂದ ಮೈತ್ರಿರಾವ್, ಸಿಗಾರ್ ಹಚ್ಚುತ್ತಾ ಗಂಡನ ಕಡೆಯೊಮ್ಮೆ ನೋಡಿದರು. ರಾಮು, ಯಾವ ಸ್ಪಂದನೆಯನ್ನು ನೀಡದೇ ಸೊರ ಸೊರ ಎಂದು ಮೂಗು ಒರೆಸಿಕೊಳ್ಳುತ್ತಾ ಸೀದಾ ಬೆಡ್ ರೂಮಿಗೆ ಹೋಗಿ ಮಂಚದ ಮೇಲೆ ಮುದುಡಿಕೊಂಡು ಮಲಗಿದ. ಸ್ವಲ್ಪ ಹೊತ್ತು ಅದು ಇದು ಟಿವಿ ಚಾನಲ್ಗಳನ್ನು ಬದಲಿಸಿದ ಮೈತ್ರಿರಾವ್ ಸಾಕಾಗಿ ಎದ್ದು ಹೋಗಿ ರಾಮುನ ಪಕ್ಕಕ್ಕೆ ಮಲಗಿದರು. ಗಂಡನನ್ನು ತೆಕ್ಕೆಬಡಿದು ಒಂದು ಹೂ ಮುತ್ತು ನೀಡುವ ಯತ್ನ ಮಾಡಿದರು. ಆದರೆ ಇನ್ನು ಮುಸುಗುಡುತ್ತಲೇ ಇದ್ದ ರಾಮು, ಮುಟ್ಟಬೇಡಿ ನನ್ನ, ಹೋಗ್ರಿ ಆ ಕಡೆ ಎನ್ನುತ್ತಾ ಕೊಸರಿಕೊಂಡ.
ಮೈತ್ರಿರಾವ್ ಅವರಿಗೆ ತನ್ನ ತಪ್ಪಿನ ಅರಿವಾಗಲಿಲ್ಲ. ರಾಮುನ ಮುಖ ನೋಡಿದರಷ್ಟೆ. ಕಣ್ಣುಗಳು, ದಾರಾಕಾರವಾಗಿ ನೀರು ಉತ್ಪಾದಿಸುತ್ತಿದ್ದವು, ಮುಖದ ಮೇಲೆ ಉರಿ ಉರಿ ಬೆಂಕಿ.
ಯಾಕೆ ಚಿನ್ನಾ? ಏನಾಯ್ತು ನಿನಗೆ? ರಮಿಸಲು ನೋಡಿದಳು.
ಸ್ವಲ್ಪ ಹೊತ್ತು ಮೌನ.
ಏನೊಂದ್ರೆ, ಆ ಹಾಸ್ಪಿಟಲ್, ಹಿಂದೆ ಬಿಸಾಡಿದ್ದ ಶಿಶುಗಳು ಇನ್ನೂ ಬದುಕಿದ್ವಾ? ಕಣ್ಣೀರು ಉತ್ಪಾದನೆಯನ್ನು ನಿಯಂತ್ರಿಸಿಕೊಳ್ಳುತ್ತಾ ರಾಮು ಪ್ರಶ್ನಿಸಿದ.
ಇನ್ನು ನೀನು ಅದನ್ನೆ ತಲೆಲಿ ಇಟ್ಕೊಂಡು ಕೂತಿದ್ದಿಯಾ?
ನಿಮಗೆ ಗಂಡ್ಕುಲದ ಕಷ್ಟ ಏನು ಗೊತ್ತಾಗಬೇಕು? ನಿಮ್ಮ ಹೆಂಗಸರ ಬುದ್ಧಿನೇ ಇಷ್ಟು.
ಅಯ್ಯಯ್ಯೋ ನಾನು ನಿನ್ನ ಮುಂದೆ ಹೇಳಿ ತಪ್ಪ ಮಾಡಿಬಿಟ್ಟೆ ಕಣೋ. ದಯವಿಟ್ಟು ಅದನ್ನು ಮರೆತುಬಿಡು. ನನ್ನ ಕಷ್ಟ ಅರ್ಥ ಮಾಡ್ಕೋ. ನಾಳೆ ಬೆಳಗ್ಗೆ ಎಷ್ಟೊಂದು ಕೆಲಸ ಇದೆ ಗೊತ್ತಾ?
ಅದಕ್ಕೆ ನಾನೇನು ಮಾಡಬೇಕು. ಸುಮ್ನೆ ಬಿದ್ಕೊಳ್ಳಿ.
ಹಂಗಂದ್ರೆ? ನಿನ್ನನ್ನು ಕಟ್ಕೊಂಡಿರೋದು ಸುಮ್ನೆ ಬಿದ್ಕೊಳ್ಳಲ್ಲಾ, ಈಗ ನಂಗೆ ಬೇಕಾಗಿರೋದನ್ನ ಕೊಟ್ರೆ ಸರಿ,
ಇಲ್ಲಾಂದ್ರೆ ಅಷ್ಟೆ.
ಏನು? ಡೈವರ್ಸ್ ಕೊಡ್ತಿರಾ? ಕೊಡಿ. ನಿಮ್ಮ ಹೆಂಗಸರ ಬುದ್ಧಿನೆ ಇಷ್ಟು.
ಹಂಗೆನ್ನಬೇಡ ಕಣೋ, ಪ್ಲೀಸ್, ಒಂದೆ ಒಂದು ಸಲ, ಆಮೇಲೆ ಇಬ್ಬರಿಗೂ ಚನ್ನಾಗಿ ನಿದ್ರೆ ಬರುತ್ತೆ. ಹೂಂ ಅನ್ನು
ಸಾಕು, ಮೈತ್ರಿ ರಮಿಸುತ್ತಲೇ ಒಂದು ಉಪ್ಪ ಕೊಟ್ಟಳು,
ಸರಿರೀ ಸಾಕು, ಬೆಳಗ್ಗೆಯಿಂದ ಅಡಿಗೆಮನೆಯಲ್ಲಿ ಮಾಡಿ ಬೆನ್ನು ನೊಯ್ತಾ ಇದೆ. ಇವತ್ತ ಆಗಲ್ಲ, ಸುಮ್ನೆ ಬಿದ್ಕೊಳ್ಳಿ,
ಇದೆ ಕೊನೆ ಮಾತಾ?, ಸರಿ ಹಾಗಿದ್ರೆ, ಗಂಟು ಮೂಟೆ ಕಟ್ಟು, ತವರಮನೆಗೆ ಹೊರಡು ಅಷ್ಟೆ.
ಮಾತೆತ್ತಿದರೆ ತವರು ಮನೆ ಅಂತಿರಾ? ಎಷ್ಟು ಸೊಕ್ಕು ನಿಮಗೆ, ಅದು ನಿಮ್ಮ ತಪ್ಪಲ್ಲ, ನಿಮ್ಮ ಹೆಣ್ಕುಲದ ತಪ್ಪು. ಎಲ್ಲ ಅಧಿಕಾರ ಆಸ್ತಿ ನಿಮ್ಮ ಕೈಯಲ್ಲಿದೆ ಅದಕ್ಕೆ ಆಟ ಆಡಿಸ್ತಿದ್ದಿರಿ ನಮ್ಮನ್ನ, ಈ ಹೆಣ್ಕುಲದ ಸೊಕ್ಕನ್ನ ಆ ದೇವರು ಯಾವಾಗ ಮುರಿತಾನೋ,
ಯಾಕೋ ಮಗನೆ? ಹೆಂಗೈತೆ ಮೈಗೆ?, ಸುಮ್ಮನ ಇದ್ರ ಎಷ್ಟೊಂದು ಮಾತಾಡ್ತಿಯಲ್ಲ? ನಿಮ್ಮ ಗಂಡ್ಕುಲ ಏನು ಸಾಚಾನಾ? ಮೈತ್ರಿರಾವ್ ಅವರಿಗೂ ಈ ಸಲ ಸಿಟ್ಟು ನೆತ್ತಿಗೇರಿತು,
ಮೊದಲೆಲ್ಲ ನೀವು ಎಷ್ಟೊಂದು ಹಾರಾಡಿದ್ದಿರಿ, ನಮ್ಮಂಥ ಹೆಣ್ಣುಗಳಿಗೆ ಎಷ್ಟೊಂದು ಹಿಂಸೆ ಕೊಟ್ಟಿದ್ದಿರಿ, ಗೊತ್ತಾ? ಹೆಂಗಸರನ್ನ ಕಾಲ ಕಸದಂತೆ ಕಂಡಿದ್ದು ಇಷ್ಟು ಬೇಗ ಮರ್ತೊಯ್ತಾ? ಈಗ? ಮಾಡಿದ್ದೊಣ್ಣೋ ಮಾರಾಯ ಅಷ್ಟೆ.
ರಾಮು ಅದಕ್ಕೇನು ಮಾತಾಡಲಿಲ್ಲ. ಮುಸಿ ಮುಸಿ ಅಳ್ಳುತ್ತಿರುವುದು ಆ ನಿರವ ರಾತ್ರಿಯ ನಿಶಬ್ದದಲ್ಲಿ ವಿಕಾರ ಲಯದಲ್ಲಿ ಪಸರಿಸತೊಡಗಿತ್ತು. ಇವತ್ತು ಕೆಲಸ ಕೆಡ್ತು ಅಂತ ಗೊತ್ತಾದ ಮೈತ್ರಿರಾವ್ ಹಲ್ಲು ಮಸೆಯುತ್ತಲೇ ಮಗ್ಗಲು ಬದಲಿಸಿದಳು.
**

ಮೈತ್ರಿರಾವ್ ಅವರಿಗೆ ನಿದ್ರೆ ಹತ್ತಿ ಆಗಲೇ ಗೊರಕೆ ಸೌಂಡು ಶುರುವಾಗಿತ್ತು. ಆದ್ರೆ ರಾಮುಗೆ ಆ ಕಡೆ ಈ ಕಡೆ ಹೊರಾಳಿಡಿದ್ದೇ ಬಂತು. ಆತನಿಗೂ ಈಗ 46 ವಯಸ್ಸು. ಹುಟ್ಟಿನಿಂದ ಇವತ್ತಿನವರೆಗೆ ಅಡುಗೆ ಮನೆಯಲ್ಲಿ ಸವೆದದ್ದೆಬಂತು. ಮದುವೆಯಾಗುವ ಮುಂಚೆ ತವರುಮನೆಯಲ್ಲಿ. ಮದುವೆಯಾದ ಮೇಲೆ ಗಂಡನ ಮನೆಯಲ್ಲಿ. ಈ ಜಗತ್ತಿನಲ್ಲಿ ಮನುಷ್ಯ ಎಲ್ಲ ಪ್ರಾಣಿಗಳಿಗಿಂತ ಬುದ್ಧಿವಂತ ಎನಿಸಿಕೊಂಡವ. ಆದರೆ, ಏನು ಬಂತು, ದುಡಿಯೋದ್ರಲ್ಲೆ ಕಾಲ ಕಳಿಬೇಕು. ಪ್ರಕೃತಿಯಲ್ಲಿ ಯಾವುದೇ ಪ್ರಾಣಿ ಹೊಟ್ಟೆಪಾಡಿಗಾಗಿ ಇಷ್ಟೊಂದು ದುಡಿಯುವುದಿಲ್ಲ. ಮನುಷ್ಯನಾಗಿ ಹುಟ್ಟಲೇಬಾರದಿತ್ತು. ಕನಿಷ್ಟ ಗಿಳಿಯಾಗಿ ಹುಟ್ಟಬೇಕಿತ್ತು. ಗಿಳಿ ತನ್ನ ಸಂಗಾತಿಗೆ ಯಾವುದೇ ರೀತಿ ಕೆಲಸ ಹೇಳಲ್ಲ. ಹಣ್ಣು ತಿನ್ಕೊಂಡು, ಹಾರಾಡ್ಕೊಂಡು ಆರಾಮಾಗಿ ಇರ್ತವೆ. ಗಂಡಾಗಿ ಹುಟ್ಟಿ ಗಾಣದೆತ್ತಿನ ತರಹ ದುಡಿತಲೆ ಇರಬೇಕು. ಬದುಕೆಂದ್ರೆ ದುಡಿಯೋದಷ್ಟೆನಾ? ಒಮ್ಮೊಮ್ಮೆ ಸತ್ತು ಹೋಗಿ ಬಿಡಬೇಕು ಅನ್ಸುತ್ತೆ. ಆದರೆ, ಮಕ್ಕಳನ್ನು ನೋಡಿಕೊಳ್ಳೋರು ಯಾರು? ಅನ್ನು ಪ್ರಶ್ನೆ ದುತ್ತನೇ ಎದುರಾಗುತ್ತೆ, ಮರುಕ್ಷಣವೆ ಇದು ಕೇವಲ ಬದುಕಲಾ ನೆಪವಾ? ಅನ್ಸೋದು ಉಂಟು.
ನಾವು ಹಿಂದೆ ಈ ಹೆಂಗಸರನ್ನ ಗೋಳೋ ಹೋಯ್ಕೊಂಡಿದ್ದಿವಂತೆ. ನಮ್ಮ ಮುತ್ತಜ್ಜ ಹೆಮ್ಮೆಯಿಂದ ಹೇಳ್ತಾ ಇದ್ದ. ಆಗಿನ ಕಾಲದ ವರ್ಚಸ್ಸೇ ಬೇರೆ ಅಂತೆ. ಈ ಹೆಂಗಸರು ಕೂಂತಗ ಅಂದ್ರ ಕುಂತಗಬೇಕು, ನಿಂತಗೊ ಅಂದ್ರ ನಿಂತಗಬೇಕು. ಗಪ್ ಅಂತ ಗಂಡಸು ಬಾಯಿ ಬಿಟ್ರೆ ಹೆಂಗಸರು ಚುಪ್ಪಿರ್ತಿದ್ವು. ಯಾವುದಾದ್ರೂ ಹೆಂಗಸರು ಬಾಲ ಬಿಚ್ಚಿದ್ರೆ ತೊಗರಿ ಕಟ್ಟಿಗೆ ತುಗೊಂಡು ಮೈಯೆಲ್ಲ ಬಾಸುಂಡೆ ಬರೋ ಹಂಗೆ ಬಾರಿಸ್ತಿದ್ರಂತೆ. ಹಾಡುಹಗಲೇಕಲ್ಲು ಒಗೆದು ಸಾಯಿಸ್ತಿದ್ರಂತೆ, ಸಿಕ್ಕದ್ದನ್ನೆಲ್ಲ ತುಗೊಂಡು ಹೊಡಿತಿದ್ರು, ಸಿಗರೇಟ್ನಿಂದು ಸುಡೋರು, ಊಟ ಕೊಡ್ದೆ ಉಪಾಸ ಇಡೋರು, ಹೆಂಗಸ್ರಿಗೆ ಕೆಲಸ ಅಂದ್ರೆ ಕೆಲಸ, ಎದ್ದಾಗಿಂದ ಮಧ್ಯರಾತ್ರಿವರೆಗೆ ಕೆಲಸ. ರಾತ್ರಿನಾರ ಸುಮ್ನ ಮಲಗಾಕೆ ಬಿಡ್ತಿದ್ರಾ ಗಂಡಸ್ರು? ಅದು ಇಲ್ಲ. ಒಂದು ಹೆಂಗಸು ತಮ್ಮ ಜೀವನಪೂರ್ತಿ ಇನ್ನೊಬ್ಬ ಗಂಡಸನ್ನ ನೋಡುವಂತೆಯೇ ಇರಲಿಲ್ಲ. ಗಂಡ್ಸು ದಾರಿಯಲ್ಲಿ ಬರ್ತಾ ಇದ್ರೆ ಹೆಂಗಸರು ತಲೆ ತುಂಬಾ ಸರಗುಹೊಚ್ಕೊಂಡು, ಮುಖದ ತುಂಬಾ ಪರ್ದಾ ಎಳ್ಕೊಂಡು ದೂರ ನಿಂತು ದಾರಿ ಬಿಡಬೇಕಿತ್ತಂತೆ, ತಲೆಮೇಲಿನ ಸೆರಗ ತೆಗೆದ್ರೆ ಸೂಳೆ ಅಂತಿದ್ರು, ಗಂಡ ಸತ್ರೆ ಗಂಡನ ಚಿತೆಯಲ್ಲಿ ಹೆಂತಿನೂ ಸಾಯಬೇಕಿತ್ತು. ಇಲ್ಲಂದ್ರ ಅಕಿನ ತಲೆ ಬೋಳ್ಸೋರು, ಅಕಿ ಕುಂಕುಮ, ಬಳೆ ಎಲ್ಲ ಒಡೆದು ವಿರೂಪಗೊಳಿಸೋರು, ಗಂಡ ಸತ್ತ ವಿಧವೆಯರು ದೇವರ ಜಪ ಮಾಡ್ತಾ ರೂಮಿನಲ್ಲೆ ಕಾಲ ಕಳಿಬೇಕಿತ್ತು. ಅಕಸ್ಮಾತ್ ಬೇರೊಬ್ಬ ಗಂಡಸರನ್ನ ನೊಡಿದ್ರೆ ಸಾಕು ಕೊಡಲಿ ತುಗೊಂಡು ಕೊಲೆ ಮಾಡ್ತಿದ್ರು. ಕೇವಲ ಪರ ಪುರುಷನ ಜೊತೆ ಮಾತಾಡಿದ ಕಾರಣಕ್ಕೆ ತನ್ನ ತಾಯಿಗೆ ಅನೈತಿಕ ಸಂಬಂಧ ಐತೆಂತ ಸ್ವತಃ ಆಕೆಯ ಮಗನೇ ಕೊಲೆಮಾಡಿ ಅಟ್ಟಹಾಸ ಮೆರೆಯುತ್ತಿದ್ದ.
ಅಕಿ ಹುಟ್ಟಿದಾಗ ತಂದೆ ಆಶ್ರಯದಲ್ಲಿ, ದೊಡ್ಡವಳಾದಾಗ ಗಂಡನ ನೆರಳಲ್ಲಿ ಮುದುಕಿಯಾದಾಗ ಮಕ್ಕಳ ಆಶ್ರಯದಲ್ಲಿ ಬದುಕುಬೇಕು ಅನ್ನೋ ದುರಾಲೋಚನೆಯ ಗಂಡಸರು ಅದಕ್ಕಾಗಿ, ಮನುಶಾಸ್ತ್ರ, ವೇದ, ಪುರಾಣಗಳುಇಷ್ಟಿಷ್ಟು ದಪ್ಪದ ಗ್ರಂಥಗಳನ್ನು ಬರೆದು ಅವರ ಕುತಂತ್ರ ಮುಂದಿನ ಪೀಳಿಗೆಗೆ ಪಸರಿಸುವಂತೆ ಮಾಡಿದ್ದರಂತೆ. ಈ ದಪ್ಪದ ಪುಸ್ತಕಗಳೆಲ್ಲೆಲ್ಲ ಹೆಣ್ಣು ಕಪಟಿ, ಮೋಸಗಾತಿ, ಮಾಯೆ, ಅಬಲೆ ಅಂತ ಲೋಕದಲ್ಲಿ ಇರೋ ನೆಗೆಟಿವಗಳನ್ನೆಲ್ಲ ಹೆಣ್ಣಿಗೆ ಅಂಟಿಸಿಬಿಟ್ಟಿದ್ರು. ಗಂಡಿನ ಆಶ್ರಯವೇನಾದರೂ ತಪ್ಪಿ ಅಕಸ್ಮಾತ್ ಹೆಣ್ಣು ಬಿದಿ ಪಾಲಾದ್ರೆ ಆಕೆಯ ಪರಿಸ್ಥಿತಿಯಂತೂ ಹೇಳತೀರದಷ್ಟು ಭೀಕರವಾಗಿರುತ್ತಿತ್ತು. ಗುಂಪು ಗುಂಪಾಗಿ ಆಕೆ ಮೇಲೆ ಅತ್ಯಾಚಾರ ಮಾಡ್ತಿದ್ರು. ಒಂದೆರಡು ವರ್ಷದ ಹೆಣ್ಣು ಹಸುಗೂಸಿನ ಮೇಲೂ ಅತ್ಯಾಚಾರ ಮಾಡಿ ಧಕ್ಕಿಸಿಕೊಂಡ ಅತ್ಯಂತ ಹೀನ ಗಂಡ್ಕುಲವಿದು. ಅಕ್ಷರ ಇಲ್ಲದೆ, ಆಸ್ತಿ ಇಲ್ಲದೆ, ಜೀವನೋಪಾಯಕ್ಕೆ ಕೆಲಸ ಇಲ್ಲದೆ ಬೀದಿಪಾಲಾಗುತ್ತಿದ್ದ ಹೆಣ್ಣುಮಕ್ಕಳಿಗೆ ಬದುಕಲು ಆಗ ಎರಡೇ ದಾರಿ ಇದ್ವಂತೆ. ಒಂದು ಆಕೆ ಮೈ ಮಾರ್ಕೊಂಡೋ,…ಇಲ್ಲವೇ ಬೀಕ್ಷೆ ಬೇಡ್ಕೊಂಡು ಬದುಕಬೇಕಿತ್ತು. ಇಲ್ಲದಿದ್ದರೆ ನೇಣಿನ ಕುಣಿಕೆಯ ಗತಿ.
ಆದ್ರೆ ಕಾಲ ಒಂದೆ ತರಹ ಇರೋದಿಲ್ಲ ನೋಡಿ. ಕೆಲವು ದಿಟ್ಟತನದ ಮಹಿಳೆಯರು, ಜೀವಪರ ಪುರುಷರು ಸೇರಿ ಹೊರಾಟ ನಡೆಸಿದರು. ಅಟಲಿಸ್ಟ್ ಮಹಿಳೆಯರಿಗೆ ಶಿಕ್ಷಣವನ್ನಾದ್ರೂ ಕೊಡ್ಸಿ, ಎಂದು ದ್ವನಿ ಎತ್ತಿದರು. ಇವರಬೇಡಿಕೆಗೆ ಕ್ರಮೇಣ ಮನ್ನಣೆ ಸಿಗತೊಡಗಿತು. ಕೆಲವು ಗಂಡಸರು ತಮ್ಮ ಮುದ್ದಾದ ಹೆಂಡತಿಯರ ಮಾತಿನ ಮೋಡಿಗೆ ಸಿಕ್ಕು ಹೆಣ್ಣು ಮಕ್ಕಳಿಗೆ ಓದಿಸತೊಡಗಿದರು. ಕಡು ಕಷ್ಟದ ನಡುವೆಯೇ ಕೆಲವು ಹುಡಿಗಿಯರು ಕಷ್ಟಪಟ್ಟು ಅಭ್ಯಾಸ ಮಾಡತೊಡಗಿದರು. ಪುಸ್ತಕಗಳಿಗೆ ಅಂಟಿಕೊಂಡಿದ್ದ ದುಂಡು ದುಂಡು ಅಕ್ಷರಗಳನ್ನು ಪಟಪಟನೆ ಹೆಕ್ಕಿ ತಮ್ಮ ಎದೆಗೆ ಅಂಟಿಸಿಕೊಂಡ ಹುಡುಗಿಯರು ಹೊಸಕಾಲದ ಯುವತಿಯರಾಗಿ ಬದಲಾಗತೊಡಗಿದರು. ಜಗತ್ತಿನ ಆಗುಹೋಗುಗಳ ಬಗ್ಗೆ, ಪುರುಷನ ದುರಾಡಳಿತದ ಬಗ್ಗೆ ಅವರಿಗೆ ತಿಳುವಳಿಕೆ ಬರತೊಡಗಿತು. ಆಮೇಲೆ ಗುಟ್ಟಾಗಿ ಒಟ್ಟಾಗಿ ಮಹಿಳಾ ದೌರ್ಜನ್ಯದ ವಿರುದ್ಧ ಹೊರಾಡತೊಡಗಿದರು. ಉಪವಾಸ ಕುಳಿತರು, ಪ್ರತಿಭಟಿಸಿದರು. ಎದುರಾಡಿದರು. ಒದ್ದು ಬುದ್ಧಿ ಕಲಿಸತೊಡಗಿದರು.
ಆದರೂ ಮಹಿಳಾ ದೌರ್ಜನ್ಯ ಕಡಿಮೆಯಾಗುವ ಲಕ್ಷಣಗಳು ಕಾಣಲಿಲ್ಲ. ರಾಜಕೀಯ ಇಚ್ಚಾಸಕ್ತಿ ಬಲಿಯತೊಡಗಿ ಚುನಾವಣೆಗಳ ಕಣಕ್ಕೆ ದುಮುಕತೊಡಗಿದರು. ಅಲ್ಲಲ್ಲಿ ಗೆದ್ದರೂ ಕೂಡ. ಆದರೆ, ಆ ಗೆಲುವುಗಳು ಸಾಕಾಗುವುದಿಲ್ಲ ಎಂಬುದು ಮನದಟ್ಟಾಯಿತು. ಮಹಿಳೆಯರಿಗಾಗಿ ಮಹಿಳೆಯರಿಂದಲೇ ಮಹಿಳೆಯರಿಗೊಸ್ಕರ ಎಂಬ ದೇಯೋದ್ದೇಶ, ಭಾರತೀಯ ಪ್ರಮೀಳಾ ಪಕ್ಷ (ಬಿಪಿಪಿ) ಎಂಬ ರಾಷ್ಟ್ರೀಯ ಪಕ್ಷವನ್ನೇ ಕಟ್ಟಿದರು. ವ್ಯಾಪಕ ಪ್ರಚಾರ ಕಾರ್ಯಗಳು ನಡೆದವು. ಹೆಂಗೋ ಈ ಅಹಮ್ಮಿನ ಗಂಡಸರ ಕೈಯಲ್ಲಿದ್ದ ಪಕ್ಷಗಳು ಪರಸ್ಪರ ಕಚ್ಚಾಡಿಕೊಳ್ತಿದ್ವಲ್ವಾ? ಅವನೊಂದು ಇವನೊಂದು, ಮತ್ತೊಂದು ಮಗದೊಂದು ಪಕ್ಷಗಳಾಗಿ ಚೂರು ಚೂರಾಗಿದ್ದವಲ್ವಾ? ಪುರುಷರ ಮತಗಳು ಎಲ್ಲ ಕಡೆಯೂ ಹಂಚಿಕೆಯಾಗಿ ಎಲ್ಲ ಕಡೆಯೂ ಸಮಿಶ್ರ ಸರಕಾರಗಳೇ ಜೀವ ಪಡೆಯುತ್ತಿದ್ದವಲ್ವಾ. ಇವೆಲ್ಲ ಪ್ರಮಿಳೆಯರಿಗೆ ವರವಾದವು. ಗಂಡಸು ಮಂತ್ರಿಗಳ ಖುರ್ಚಿ ಯಾವತ್ತು ಸ್ಥಿರವಾಗಿರುತ್ತಿರಲಿಲ್ಲ. ಅಲ್ಲಾಡಿ, ಅಲ್ಲಾಡಿಸುವುದರಲ್ಲೇ ಗಂಡಸರ ಪಕ್ಷಗಳು ಮೈಮರೆತಿರುವಾಗ, ಈ ಹೆಂಗಸರಿಂದ ಸ್ಥಾಪಿಸಲ್ಪಟ್ಟಿದ್ದ ಬಿಪಿಪಿ ಆ ವರ್ಷ ಬಹುಮತ ಪಡೆದು ಸರ್ಕಾರವನ್ನು ರಚಿಸಿಯೇಬಿಟ್ಟಿತು.ಮೊದಮೊದಲು ಅಧಿಕಾರದ ಚುಕ್ಕಾಣಿ ಹಿಡಿದ ಪ್ರಮಿಳಾ ಮುಖಂಡರು ರಾಜ್ಯಾಡಳಿತ ರಚನಾತ್ಮಕವಾಗಿಯೇ ಇತ್ತು. ಗಂಡಸರು ಸಹ ಸಂತುಷ್ಟವಾಗಿಯೇ ಇಂಥ ಕಾಲ ಹಿಂದೆಯೂ ಇರಲಿಲ್ಲ, ಮುಂದೆಯೂ ಬರಲ್ಲ ಎಂದು ಹೋಗಿ ಬಂದಲ್ಲೆಲ್ಲ ಕೊಚ್ಚಿಕೊಳ್ಳುತ್ತಿದ್ದರು.
ಆದರೆ, ಅಧಿಕಾರವೇ ಹಾಗೆ. ಅದನ್ನು ದಕ್ಕಿಸಿಕೊಂಡವರೆಲ್ಲ ಬದಲಾಗಿ ಬಿಡುವುದು ಲೋಕ ರೂಢಿ. ಇದಕ್ಕೆ ಪ್ರಮಿಳೆಯರು ಹೊರತಾಗಲಿಲ್ಲ. ಅಧಿಕಾರದಿಂದಾಗಿ ಪ್ರಮಿಳೆಯರ ಒಳ ಮನಸ್ಸು ಸತ್ತುಹೋಗಿ ಕಳೆದುಕೊಂಡು ಅಲ್ಲಿ ರಾಜಕಾರಣದ ಕುಂತಂತ್ರಗಳು ಚಿಗಿತುಕೊಳ್ಳತೊಡಗಿದವು. ಕೆಲವು ಪ್ರಮಿಳೆಯರಂತೂ ಸಾವಿರಾರು ವರ್ಷಗಳಿಂದ ಹೆಣ್ಕುಲವನ್ನು ಹಿಂಸಿಸಿಕೊಂಡು ಬಂದ ಗಂಡ್ಕುಲವನ್ನು ಹದ್ದುಬಸ್ತಿನಲ್ಲಿಡಲೇಬಕು, ಇಲ್ಲದಿದ್ದರೆ ಅವರೆಲ್ಲ ಒಟ್ಟಾಗಿ ಮತ್ತೆ ಅಧಿಕಾರ ಹಿಡಿದರೆ ಇಡಿ ಹೆಣ್ಕುಲ ಮೊದಲಿನಂತೆ ಗುಲಾಮರಾಗಿ ಬದುಕಬೇಕಾಗುತ್ತದೆ ಎಂಬುದರ ಬಗ್ಗೆಯೇ ಯಾವಾಗಲೂ ಮನದಲ್ಲಿ ಮಂಡಿಗೆ ತಿಂತಿದ್ದರಂತೆ. ಇಂಥವರ ಒತ್ತಾಯದಿಂದಾಗಿ ಪುರುಷ ವಿರೋಧಿ ಕಾನೂನುಗಳು ಜಾರಿಗೊಳ್ಳತೊಡಗಿದವು. ಕ್ರಮೇಣ ಪುರುಷರನ್ನು ಆಸ್ತಿ, ಶಿಕ್ಷಣ, ಅಧಿಕಾರ, ಉನ್ನತ ಹುದ್ದೆಗಳಿಂದ ವಂಚಿತರನ್ನಾಗಿ ಮಾಡಲಾಯಿತು. ಪಿತೃಪ್ರಧಾನ ಕುಟುಂಬಗಳೆಲ್ಲವೂ ಮಾತೃ ಪ್ರಧಾನ ಕುಟುಂಬಗಳಾಗಿ ಬದಲಾದವು. ಉನ್ನತ ಶಿಕ್ಷಣವೇ ಇಲ್ಲದ ಪುರುಷರಿಗೆ ಉನ್ನತ ಹುದ್ದೆಗಳಾದರೂ ಹೇಗೆ ಸಿಕ್ಕಾವು? ಕ್ರಮೇಣ ಎಲ್ಲ ಉನ್ನತ ಹುದ್ದೆಗಳು ಮಹಿಳೆಯರ ಪಾಲಾದವು. ಆಸ್ತಿಯೂ ಇಲ್ಲದೆ, ನೌಕರಿಯೂ ಇಲ್ಲದ ಪುರುಷರು ಅಡುಗೆಮನೆಗೆ, ಪಾತ್ರೆ ತೊಳೆಯಲು, ಬಟ್ಟೆ ತೊಳೆಯಲು, ಮಕ್ಕಳ ಹೇಳೂ ಉಚ್ಚೆ ಬಳಿಯಲು ಸೀಮಿತರಾಗಬೇಕಾಯಿತು.
ದೊಡ್ದೊಡ್ಡ ಬಿಜಿನೆಸ್ ಮಾಡುತ್ತಿದ್ದ ಹೆಂಡಂದಿರು ತಮ್ಮ ವ್ಯವಹಾರಕ್ಕಾಗಿ ವಾರಗಟ್ಟಲೇ, ತಿಂಗಳುಗಳ ಗಟ್ಟಲೆ, ಮನೆಯಿಂದ ಗಂಡನಿಂದ ದೂರವಿರುವ ಪರಿಸ್ಥಿತಿ ಬಂತು. ಆಗ ಸಹಜವಾಗಿಯೇ ದೇಹದ ಹಸಿವಿನಿಂದಾಗಿ ಅವರಿಗೆ ಪರ ಪುರುಷರ ಕಡೆ ಲಕ್ಷ್ಯ ಹೊಗತೊಡಗಿತು. ಹಾಗೆ ಅಗತ್ಯವಿದ್ದವರಿಗೆ ಪುರುಷರನ್ನು ಸರಬರಾಜು ಮಾಡುವ ಘರವಾಲಾಗಳು, ಪುರುಷ ವೇಶ್ಯಾಗೃಹಗಳು ತಲೆಯೆತ್ತತೊಡಗಿದವು. ಕೆಲವು ದೈರ್ಯಸ್ಥ ಹುಡುಗರು ಇಂಥ ಮನೆಗಳ ಸಹವಾಸವೇ ಬೇಡವೆಂದು ಸ್ವತಂತ್ರವಾಗಿ ಬಿದಿ ಬದಿಯಲ್ಲೇ ನಿಂತು ವಯ್ಯಾರದಿಂದ ಬಿಜಿನೆಸ್ ವುಮನ್ ಗಳನ್ನು ಆಕರ್ಷಿಸಿ ಬಿಜಿನೆಸ್ ಮಾಡತೊಡಗಿದರು. ಹೀಗೆ ಮೈ ಮಾರುವವರನ್ನು, ತಲೆ ಹಿಡುಕರನ್ನುನೀತಿಗೆಟ್ಟವರೆನೆಂದು ಸಾರ್ವಜನಿಕವಾಗಿ ಛೀಮಾರಿ, ಹಾಕುವ, ಬಾರುಕೋಲಿನ ಏಟು ನೀಡುವ ಶಿಕ್ಷೆಗಳು ಜಾರಿಯಾಗತೊಡಗಿದವು. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವಂತೆ, ಈ ಹಿಂದೆ ಏನೆಲ್ಲ ತಾರತಮ್ಯವನ್ನು ಮಹಿಳೆಯರಿಗೆ ಮಾಡಲಾಗಿತ್ತೋ ಆ ಎಲ್ಲ ತಾರತಮ್ಯಗಳು ಪುರುಷರ ಮೇಲೂ ಹೇರಲ್ಪಡತೊಡಗಿದವು. ತನ್ನ ಪೂರ್ವಕಾಲದ ಪುರುಷರು ಸರಿಯಾಗಿದ್ದರೆ, ಈ ಪರಿಸ್ಥಿತಿ ಬರುತ್ತಲೇ ಇರಲಿಲ್ಲ. ತನ್ನ ಹಿರಿಕರು ಮಾಡಿದ ತಪ್ಪಿನಿಂದಾಗಿ ಇಂದು ಇಡಿ ಗಂಡ್ಕುಲವೇ ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ ಎಂದು ಬೇಸರದಿಂದ ರಾಮು ಮಗ್ಗಲು ಬದಲಿಸಿದ.
ಇವನ ಮಿಸುಕಾಟದಿಂದಾಗಿ ಮೈತ್ರಿರಾವ್ ಎಚ್ಚರವಾಗಿಬಿಟ್ಟಿತು. ಮರಳಿ ಯತ್ನವ ಮಾಡು ಅನ್ನುವ ತತ್ವದವರಾಗಿದ್ದ ಅವರು, ಮತ್ತೆ ನಿದ್ರೆ ಬರ್ತಿಲ್ವಾ ಚಿನ್ನಾ ಅನ್ನುತ್ತಾ ರಾಮುನನ್ನು ವಿಧವಿಧವಾಗಿರಮಿಸತೊಡಗಿದರಾದರೂ ರಾಮು ಅವರಿಗೆ ಮಣಿಯುವಂತೆ ಕಾಣಲಿಲ್ಲ. ಮೈತ್ರಿರಾವ್ ಅವರ ಹಿಡಿತದಿಂದ ಕೊಸರಿಕೊಂಡು ದೂರ ಸರಿದ ಮಲಗಿದ. ಈ ಅವಮಾನದಿಂದಾಗಿ ಕ್ರೋಧ ಹುಟ್ಟಿ, ತಲೆ ಸಿಡಿಯತೊಡಗಿಮೈತ್ರಿರಾವ್ ಅವರು ಛಟೀರನೇ ರಾಮುನ ಕೆನ್ನೆಗೆ ಬಾರಿಸಿಬಿಟ್ಟರು. ರಾಮು ಅದಕ್ಕೂ ಮರುಮಾತಾಡದೆ ತುಂಬಾ ಹೊಚ್ಚಿಕೊಂಡು ಮಲಗಿಬಿಟ್ಟ.
ನಿಂಗೆ ಸೊಕ್ಕು ನೆತ್ತಿಗೇರಿದೆ. ದುಡಿಯೋ ಹೆಂಡತಿ ಮೇಲೆ ಗೌರವವೇ ಇಲ್ಲ. ನಾನು ನಿನ್ನನ್ನು ಇಷ್ಟು ಲೂಜು ಬಿಡಬಾರದಿತ್ತು. ಬೇರೆ ಹೆಂಡಂದಿರ ತರಹ ನಿನ್ನನ್ನು ನಾಯಿ ತರಹ ನೊಡಿಕೊಳ್ಳಬೇಕಿತ್ತು. ತಪ್ಪ ಮಾಡಿಬಿಟ್ಟೆಹಾಗೆ ಹೀಗೆ ಅಂತ ಮೈತ್ರಿರಾವ್ ಅರ್ದಗಂಟೆ ಒದರಾಡುತ್ತಲೇ ಇದ್ದರು.
ಆಮೇಲೆ ಒಮ್ಮೆಲೆ ನೆನಪಾದವರಂತೆ ಒಮ್ಮೆಲೆ, ರಾಮು ಹೊದೆದುಕೊಂಡಿದ್ದ ರಗ್ಗನ್ನು ಜೋರಾಗಿ ಜಗ್ಗಿ. ನಿಮ್ಮಂಥ ಸೊಕ್ಕಿನ ಗಂಡಸರಿಂದಾಗಿಯೇ ಇಂದು ನಿಮ್ಮ ಗಂಡ್ಕುಲ ನಾಶ ಆಗ್ತಿದೆ ಗೊತ್ತಾ? ಒಂದು ತಿಳ್ಕೊ. ಹೆಣ್ಣಿಲ್ಲದೇ, ಈ ಜಗತ್ತು ನಡೆಯೋದಿಲ್ಲ. ಆದರೆ, ಗಂಡಿಲ್ಲದೇ ನಾವು ಲಕ್ಷಾಂತರ ವರ್ಷಗಳವರೆಗೆ ನಡೆಸಬಹುದು ಗೊತ್ತಾ ಅಂದ್ರು.
ರಾಮುನಿಗೆ ಒಮ್ಮೇಲೆ ಭಯ ಆವರಿಸಿತು. ಸುಮ್ಮನಿರಲಿಕ್ಕಾಗಲಿಲ್ಲ. ಪಟ್ಟನೆ ಎದ್ದು ಕುಳಿತು, ಅದ್ಹೇಗೆ ಸಾಧ್ಯ? ಪುರುಷನಿಲ್ಲದೇ ಪೃಕೃತಿ ಗರ್ಭ ಧರಿಸುವುದಾದರೂ ಹೇಗೆ?, ಮನುಷ್ಯ ಪಿಳಿಗೆ ಮುಂದುವರೆಯುವುದಾದರೆ ಹೇಗೆ?ಅಂದ.
ಈಗ ಇನ್ನೊಂದು ಐವತ್ತು ವರ್ಷ ತಡಿ ಕಣಮ್ಮಿ. ಎಲ್ಲ, ಯೋಜನೆ, ಕಾನೂನು ತರ್ತಿವಿ. ಆಗ ಕೋಟಿ ಮಹಿಳೆಯರಿಗೆ ಒಬ್ಬ ಗಂಡ್ಸು ಭೂಮಿ ಮೇಲೆ ಇರ್ತಾನಷ್ಟೆ.
ಅದ್ಹೇಗೆ? ರಾಮುನ ಮುಖ ಬೆವರತೊಡಗಿತು. ಸಾಧ್ಯನೆ ಇಲ್ಲ ಎನ್ನುತ್ತಾ ಜೋರಾಗಿ ಚೀರಿಬಿಟ್ಟ.
ಕೂಲ್, ತುಂಬಾ ಸರಳ,ಈಗ ನೋಡು. ಕೋಳಿ ಫಾರ್ಮ್ ನಲ್ಲಿ ಎಷ್ಟೊಂದು ಕೋಳಿಗಳಿರ್ತವೆ. ಒಂದೂ ಹುಂಜ ಇರಲ್ಲ. ದನಗಳ ಫಾರ್ಮನಲ್ಲಿ ಎಷ್ಟೊಂದು ಹಸುಗಳಿರ್ತವೆ. ಒಂದೂ ಹೋರಿ ಇರಲ್ಲ. ಆದ್ರೂ ಆ ಎಲ್ಲಹಸುವಿನ ಗರ್ಭದೊಳಗೆ ಕರು ಬರೋದು ಹೇಗೆ ಹೇಳು? ಅರ್ಥ ಆಯಿತಲ್ವಾ? ನೀವು ಹೀಗೆ ಸೊಕ್ಕ ತೋರ್ಸಿದರೆ ನಿಮಗೂ ಇದೇ ಪರಿಸ್ಥಿತಿ. .
ಅಂದ್ರೆ?
ಅಂದ್ರೆ, ಮಾತ್ರ ಸದೃಡವಾಗಿರೋ, ಹ್ಯಾಂಡಸಮ್ ಆಗಿರೋ ಗಂಡಸರನ್ನು ಫಾರ್ಮನಲ್ಲಿ ಸಾಕೋದು ಮತ್ತು ಅವರಿಂದ ಸ್ಪರ್ಮ್ ಕಲೆಕ್ಟ್ ಮಾಡೋದು. ಬೇಕಾದಾಗ ನಳಿಕೆ ಮೂಲಕ ಬಳಸಿಕೊಂಡು ಗರ್ಭ ಧರಿಸೋದುಅಷ್ಟೆ.
ಮೈತ್ರಿರಾವ್ ಹೇಳುತ್ತಲೇ ಇದ್ದರೆ, ರಾಮು ಅರಗಿಸಿಕೊಳ್ಳಲಾಗದೆ ಒಮ್ಮೇಲೆ ಕುಸಿದು ಬಿದ್ದು ಬಿಟ್ಟ.
**

ಮೈತ್ರಾದೇವಿ ಎದ್ದು ನೊಡಿದಾಗ ಜರ್ನಲಿಸ್ಟ್ ರಾಮು ಅವರು ಮಂಚದ ಕೆಳಗಡೆ ಬಿದ್ದಿದ್ದರು.
ರೀ ಏನಾಯ್ತು ರೀ ಎದ್ದು ಮೇಲೆ ಬನ್ನಿ ರೀ ಎಂದು ಮೈತ್ರಾ ಕರೆದರೂ ಅದಕ್ಕೆ ಉತ್ತರವಿಲ್ಲ.
ಕೊನೆಗೆ ಮೈತ್ರಾಳ ದಡಬಡಿಸಿ ಎದ್ದು ಹೋಗಿ ಒಂದು ಚರಗಿ ನೀರು ತಂದು ಅವರ ತಲೆಗೆ ಸುರಿದಳು. ಆದರೂ ಆತನಿಂದ ಯಾವ ಪ್ರತಿ ಸ್ಪಂದನೆಯೂ ಸಿಗದಿದ್ದರಿಂದ ಅವಳೆ ಅವನ ತೊಳು ಹಿಡಿದೆತ್ತಿ ಮಂಚದ ಮೇಲೆಕೂಡ್ರಿಸಿ ಸ್ವಲ್ಪ ಹೊತ್ತು ಆರೈಕೆ ಮಾಡಿದ ಮೇಲೆ ರಾಮು ಕಣ್ಣು ಪಿಳುಕಿಸಿದ.
ಏನಾಯ್ತು ರೀ ಅಂದು ಮೈತ್ರಾ ಅದೇ ರಾಗ ಎಳೆದಳು. ರಾಮು ನೀನು ಮೈತ್ರಿರಾವ್ ತಾನೆ? ನೀನು ನನ್ನ ಗಂಡ.. ಗಂಡ ನೀನು.
ಏನ್ರಿ ಇದು, ಏನ್ರಿ ಇದು ಏನೇನೋ ಬಡಬಡಿಸ್ತಿದ್ದಿರಲ್ಲ?
ನಾನು ಮೊದಲೇ ಹೇಳಿದೆ ನಮಗೆ, ಆ ಕಡೆ ಮಲಕ್ಕೋಬೇಡಿ. ಮೊನ್ನೆ ನನಗೂ ಕೂಡ ಅಲ್ಲೊಂದು ಕಾಗೆ ಹಾರಿ ಹೋದಂಗೆ ಆಗಿತ್ತು. ನನ್ನ ಮಾತು ಕೇಳಲ್ಲ ನೀವು. ಮನೆ ದೇವರನ್ನು ನೆನಪಿಸಿಕೊಳ್ಳಿ ಎಂದು ವಟ ವಟವಟಗುಡುತ್ತ ಜಗುಲಿ ಮುಂದಿನ ಅಂಗಾರ ತಂದು ಹಚ್ಚಿದಳು.
ಏಳಿ ಸ್ನಾನ ಮಾಡಿ ಪೂಜೆ ಮಾಡಿ. ಎಲ್ಲ ಸರಿ ಒಯ್ತದೆ ಅಂದಳು. ದೆವ್ವ ಗಿವ್ವ ಏನಿಲ್ಲ ಕಣೆ, ನಂಗೆ ಕನಸು ಬಿದ್ದಿತ್ತು.
ಅಯ್ಯೋಯ್ಯೋ ಕನಸಿಗೆ ಇಷ್ಟು ಹೆದರುಕೊಂಡ್ರಾ, ಕನಸಿನಲ್ಲಿ ದೆವ್ವ ಬಂದಿತ್ತಾ?
ಇಲ್ಲ, ಇಲ್ಲ, ನೀನು,..ನೀನೇ.. ನೀನೇ ನಂಗೆ ಹೆದರಿಸಿದ್ದು?
ಅಂದ್ರೆ ನಾನು ದೆವ್ವ ಆಗಿದ್ನಾ?
ಹಂಗಲ್ಲ. ತಡವರಿಸುತ್ತಲೇ ರಾಮು ಕನಸಲ್ಲಿ ಕಂಡ ಇಡೀ ಕಥೆಯನ್ನು ಹೇಳಿದ.
ಕಥೆ ಕೇಳಿದ ಮೈತ್ರಾ ಬಿದ್ದು ಬಿದ್ದು ನಗತೊಡಗಿದಳು. ಕರೆಕ್ಟು. ಹಂಗೆ ಆಗಬೇಕು ನಿಮ್ಮಂಥ ಗಂಡಸರಿಗೆ. ನಮ್ಮಂಥ ಹೆಂಗಸರನ್ನು ಎಷ್ಟೊಂದು ಗೊಳು ಹೋಯ್ಕೋತಿರಿ ಗೊತ್ತಾ? ನಮ್ಮ ಕೈಗೆ ಅಧಿಕಾರ ಸಿಗಲಿ ಹಂಗೆ ಮಾಡ್ತಿವಿನಾವು ಎಂದು ರಾಮುನ ಪರಿಸ್ಥಿತಿ ನೆನಪಿಸಿಕೊಂಡು ಮತ್ತೆ ನಗತೊಡಗಿದಳು
. ರಾಮು ಇನ್ನು ದುಗುಡಗೊಂಡ, ಅವನ ಕಣ್ಣಿನಗುಡ್ಡೆಗಳು ನೀರಿನಲ್ಲಿ ತೇಲುವ ಹಾಗೆ ಕಣ್ಣೀರಿನಿಂದ ಆವೃತಗೊಂಡು ಇನ್ನಷ್ಟೆ ಹನಿಯಾಗಿ ನೆಲಕ್ಕೆ ಬಿಳುವುದರಲ್ಲಿದ್ದವು. ಆತ ನಿಧಾನಕ್ಕೆ ಸರಿದು ಅವಳ ತೊಡೆ ಮೇಲೆಮಲಗಿದ.
ಮೈತ್ರಾ, ಅವರ ಕೈಗಳು ಅಚಾನಕ್ ಆಗಿ ಆತನ ಬೆನ್ನು ಸವರತೊಡಗಿದಾಗ ಒತ್ತರಿಸಿಕೊಂಡು ಅಳು ಬಂದು ಜೋರಾಗಿ ಅತ್ತುಬಿಟ್ಟ.
ಹುಚ್ರು ನೀವು. ಬರಿ ನಾವು ಹೆಂಗಸರು ಕನಸಲ್ಲಿ ಅಧಿಕಾರ ತೊಗೊಂಡಿದ್ದಕ್ಕ ಇಷ್ಟೆಲ್ಲ ಹೆದರ್ತಿರಲ್ಲ, ಅಕಸ್ಮಾತ್ ನಿಮ್ಮ ಕನಸು ಖರೆನ ಆಗಿಬಿಟ್ರ ಮುಂದ ಹ್ಯಾಂಗ ಅಂತಿನಿ. ಒಂದು ಮಾತು ತಿಳಕೋರಿ. ಗಂಡಸರು ಕೂಡಒಂದು ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟಿದೋರೆ. ಯಾವನೇ ಗಣಮಗ ಆಗಿದ್ರು ಆತ ಒಂದು ಹೆಣ್ಣಿನ ಕೂಸು ಆಗಿರ್ತಾನ. ಯಾವ ತಾಯಿನೂ ಹೆಣ್ಣಿಗೊಂದು ಗಂಡಿಗೊಂದು ಬೇಧ ಭಾವ ಮಾಡೂದಿಲ್ಲ. ಬೇಧಭಾವಮಾಡೋದೇನಿದ್ರು ನೀವು ಗಂಡಸರು ಮಾತ್ರ. ಅಕಸ್ಮಾತ್ ನಮ್ಮ ಪ್ರಮಿಳಾ ಪಾರ್ಟಿ ಏನಾದ್ರೂ ಅಧಿಕಾರಕ್ಕ ಬಂದ್ರ ಅದ್ರಿಂದ ಒಳ್ಳೆದ ಆಕೈತಿ, ನಿಜವಾದ ಸಮಾನತೆ ಬರ್ತೈತಿ. ಹೆಣ್ಣು ಅಂದ್ರ ಭೂಮಿ, ಹೆಣ್ಣು ಅಂದ್ರೆ ತಾಯಿ ಅನ್ನೋದು ತಿಳ್ಕಳ್ಳಿ ಎಂದಳು.
ರಾಮು ಈಗ ನಿಜವಾಗಿಯೂ ಮಗುವಾಗಿದ್ದ. ಹೊರಗೆ ಮಕ್ಕಳಿಬ್ಬರು ಬರುವ ಸಪ್ಪಳವಾಯ್ತು. ಅವರಿಗೆ ಅಪ್ಪನ ಪಜೀತಿಯನ್ನು ಹೇಳಬೇಕೆಂದಳು. ಈಗ ಸದ್ಯಕ್ಕೆ ಮತ್ತಷ್ಟು ಗೋಳಾಡಿಸುವುದು ಬೇಡವೆಂದುಕೊಂಡುರಾಮುನಿಗೆ ಜೊಗುಳದ ತಟ್ಟು ತಟ್ಟತೊಡಗಿದಳು.
***

ಪ್ರತಿಕ್ರಿಯಿಸಿ