ನೀ ಹೆಂಡತಿಯಾದರೆ
ಸೀತಾಳೆ ಮರಕ್ಕೆ
ಸುತ್ತು ಬರುವುದು
ಸುಖಾ ಸುಮ್ಮನೆ
ನಿಲ್ಲಿಸಬೇಕಾದೀತು ಎಂದಿದ್ದ.
ಕೆಂಪೆಂದರೆ ಮುಟ್ಟು,
ಮುಟ್ಟೆಂದರೆ ಮುಟ್ಟಬೇಡ
ಚಿತ್ರದ ತುಂಬಾ ಗೀಚಿದ
ವಕ್ರ ವಕ್ರ ರೇಖೆ,
ಸೀತಾಳೆ ಮರ ಸ್ಟ್ರೈಟು
ಮೈನೆರೆದ ಹೆಣ್ಣಿಗಿಂತಲೂ
ಹೆಚ್ಚು ತಳುಕು..
ಕಾಲೆಡವಿ ಬಿದ್ದ ದಿಟ್ಟ ಆಸೆ
ಗಳ ಬಗ್ಗೆ ಓದಬಾರದಂತೆ,
‘ನೀವ್ ಬಿಡಿ, ಅತಿ ಬುದ್ದಿವಂತರು’
ಎಂಬ ಸವೆದ ಮಾತುಗಳು ಬೇರೆ.
ಕಳೆದ ಕಸ್ತೂರಿಯ
ಇರಿದ ಕಾವೇರಿಯ
ನಡುವೆ
ತನ್ನನ್ನು ಇನ್ನೊಬ್ಬರ
ಯೋನಿಯೊಳಗೆ ಸೇರಿಸಿ
ತೃಪ್ತಿಯ ನಿಟ್ಟುಸಿರು ಬಿಟ್ಟು
ಅಪರಾಧ ಹೊರಿಸುವುದೂ
ಒಂದು ಬಗೆಯ ರೋಗ.
ಇದು ಸೀತಾಳೆ ಮರದ ತೊಗಟೆಗೆ ಗೊತ್ತು.
ರಕ್ತ ಹರಿಯುವ ಮೊದಲೇ ಗಾಯವಾರಿಸುವ ತಾಕತ್ತು
ಒಂದು ಬಾರಿ ನೂರಡಿ ಆಳದಲ್ಲಿ
ದೀಪ ಸಿಕ್ಕೀತೆಂದರೆ
ಸತ್ಯವೂ ಸುಳ್ಳು,
ಮೂರ್ತವೂ ಅಮೂರ್ತ
ಮಾತನಾಡುವ ಮೊದಲೇ
ವೇಷಗಾನ
ನಮ್ಮಲ್ಲಿ ಹೆಣ್ಣು ದೇವರೆಂದರೆ
ಕೈಮುಗಿಯ ಬೇಕೆನಿಸುವ ದೇವತೆಯಲ್ಲ.
ಕೈ ಮುಗಿದು ಅಂಗಲಾಚುವಂತೆ ಮಾಡುವ ಮಾರಿಯಮ್ಮ.
ಚಿತ್ರ : ಸ್ನೇಹಜಯ ಕಾರಂತ
ಪುತ್ತೂರಿನ ಸಹಮತ ಸಂಗೀತ – ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಕವಯಿತ್ರಿ . ಸೂಫಿ ಸಂಗೀತದಲ್ಲಿ ಆಸಕ್ತಿ . ಡೇವಿಡ್ ಓಬೆನ್ ಅವರ ‘ ಪ್ರೂಫ್ ‘ . ರಾಮಚಂದ್ರ ದೇವ ಅವರ ‘ ಹುಲಿಯ ಕತೆ ‘ ನಾಟಕಗಳನ್ನು ನಿರ್ದೇಶಿಸಿದ್ದಾರೆ .