ಜನಸಾಮಾನ್ಯರಿಗೆ ಸ್ತ್ರೀವಾದ – ಭಾಗ ೮ : ಎಚ್. ಎಸ್. ಶ್ರೀಮತಿ

ಸ್ತ್ರೀವಾದವನ್ನು ಕುರಿತು ಎರಡು ಬಲವಾದ ಅಪಕಲ್ಪನೆಗಳಿವೆ.ಒಂದು: ಇದು ಹೆಂಗಸರ ಪರವಾಗಿ ನಡೆಸುವ ವಕೀಲಿ ಚಿಂತನೆ ಎಂಬುದು. ಎರಡು: ಇದು ಗಂಡಸರನ್ನು ಮಟ್ಟಹಾಕಿ ಮೂಲೆಗೆ ತಳ್ಳಿಬಿಡುವ ಹುನ್ನಾರ ಎಂಬುದು.

ಹಾಗಾಗಿಯೇ, ಸ್ತ್ರೀವಾದವನ್ನು ಕುರಿತ ಯಾವುದೇ ಬಗೆಯ ಮಾತುಕತೆ,ಚರ್ಚೆ ಬಂದರೂ ಅಲ್ಲಿ ಎರಡು ಬಣಗಳು ಒಡೆದು ನಿಲ್ಲುತ್ತವೆ. ಮಾತುಕತೆ ನಾಲ್ಕು ಮಂದಿ ಸ್ನೇಹಿತರ ನಡುವೆ ನಡೆಯುತ್ತಿದ್ದರೂ ಅಷ್ಟೆ. ಸೆಮಿನಾರು, ಕಾನ್ನರೆನ್ನು ಎಂಬ ದೊಡ್ಡ ಹೆಸರಿನ ಶೈಕ್ಷಣಿಕ ಸಭೆಯಾದರೂ ಅಷ್ಟೆ. ಸ್ತ್ರೀವಾದ ಎಂಬ ಚಿಂತನೆಯು ಏನು ಹೇಳುತ್ತಿದೆ ಎಂಬುದನ್ನು ಸರಿಯಾಗಿ ಪರಿಚಯಿಸುವ ಹಂತವನ್ನು ತಲುಪುವುದೇ ಕಷ್ಟ ಎಂಬ ರೀತಿಯಲ್ಲಿ ಮಾತುಕತೆಗಳು ದಿಕ್ಕುತಪ್ತಿರುತ್ತವೆ. ಕೊನೆಗೂ ಗಂಡುಹೆಣ್ಣುಗಳ ಪೈಕಿ ಯಾರು ಬಲಾಡ್ಯರು, ಯಾರು ದುರ್ಬಲರು, ಯಾರದು ತಪ್ಪು ಯಾರದು ಸರಿ ಎಂಬ ಜಿದ್ದಿಗೆ ಬೀಳುತ್ತವೆ. ಬಿರುಸಿನ ಮಾತಿಲ್ಲದಾಗಲೂ ಸಹಕಾರ, ಹೊಂದಾಣಿಕೆ, ಪ್ರೇಮ ಪ್ರೀತಿ ಮುಂತಾದ ಮಾತುಗಳನ್ನು ಅಡ್ಡಾದಿಡ್ಡಿಯಗಿ, ಏಕಪಕ್ಷೀಯವಾಗಿ ಬೆಳೆಸುತ್ತಾ ಕೊನೆಗೂ ಸಮಾಜವು ಬದಲಾಗಬೇಕು ಎಂಬ ಒಂದು ಅಮೂರ್ತ,ಅಸಂಗತ ನಿರ್ಣಯಗಳನ್ನು ಹೇಳಿಕೊಳ್ಳುತ್ತಾ ಚದುರಿ ಹೋಗುತ್ತೇವೆ. ಗಂಡಸರು ಹೆಂಗಸರು ಎಂಬ ಭೇದವೇ ಇಲ್ಲದೆ ಎಲ್ಲರೂ ಮಾತುಕತೆಗಳನ್ನು ಹೀಗೆಯೇ ಮುಂದುವರೆಸುತ್ತಾರೆ.
ಸ್ತ್ರೀವಾದವು ನಿಜವಾಗಿ ಬಯಸುವುದು ಗಂಡುಹೆಣ್ಣುಗಳಿಬ್ಬರ ಸಂಬಂಧಗಳು ಸುಸಂಗತವಾಗಿ, ಆರೋಗ್ಯಕರವಾಗಿ ಇರಬೇಕು ಎಂಬುದೇ ಆಗಿದೆ. ಇಂಥ ಸಂಬಂಧವು ಇಬ್ಬರನ್ನೂ ವ್ಯಕ್ತಿಗಳಾಗಿ ಸ್ವತಂತ್ರರನ್ನಾಗಿಯೂ, ಪರಸ್ಪರ ಸೌಹಾರ್ದವಾಗಿಯೂ ಉಳಿಸುತ್ತದೆ ಮತ್ತು ಇಬ್ಬರ ಬದುಕಿನಲ್ಲೂ ಆನಂದವು ನೆಲೆಗೊಳ್ಳಲು ನೆರವಾಗುತ್ತದೆ.

ಸದ್ಯದ ಗಂಡುಹೆಣ್ಣುಗಳ ಸಾಮಾಜಿಕ ಬದುಕು ಎಲ್ಲಿಯೋ ಹಳಿತಪ್ಪಿ ಶ್ರೇಣೀಕರಣದ ಸಂಬಂಧಗಳದ್ದಾಗಿ ಇಬ್ಬರನ್ನೂ ಬೇರೆಬೇರೆ ಬಗೆಗಳಲ್ಲಿ ದಣಿಸುತ್ತದೆ. ಹೀಗೇಕಾಯಿತು ಎಂಬುದರಿಂದ ತೊಡಗಿ, ಏನು ಮಾಡಿದರೆ ನಮ್ಮ ಬದುಕುಗಳು ನಮಗೆ ನಮ್ಮದಾಗಿ ದೊರಕಬಹುದು ಎಂಬ ಪ್ರಶ್ನೆಗಳನ್ನು ಬಿಡಿಸುವುದೇ ಸ್ತ್ರೀವಾದಿ ಚಿಂತನೆ, ವಿಶಾಲ ಅರ್ಥದ ಮಾನವತಾವಾದ, ಗಂಡುಹೆಣ್ಣುಗಳ ಸಂಬಂಧವನ್ನು ದಿಕ್ಕು ತಪ್ಪಿಸಿದ ಮುಖ್ಯ ಸಂಗತಿಯೇ ಲಿಂಗತ್ವದ ಪರಿಕಲ್ಪನೆ. ಯಾವುದೋ ಹಂತದಲ್ಲಿ ಯಾವುದೋ ಕಾರಣದಲ್ಲಿ ಹೆಣ್ಣನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಅವಕಾಶ ಗಂಡಸಿಗೆ ಲಭ್ಯವಾದುದೇ ಇಬ್ಬರ ಬದುಕನ್ನೂ ವಿಕೃತವಾಗಿಸಿದ ಹಂತ. ಇದನ್ನು ನಿರಂತರವಾಗಿಸಿ ಬಿಡುವ ತಂತ್ರಗಾರಿಕೆಯಾಗಿ ಈ ಲಿಂಗತ್ವ ಪರಿಕಲ್ಪನೆ ಗಂಡಸಿಗೆ ಅದು ಹೇಗೆ ಹೊಳೆಯಿತೋ,ಹೇಗೆ ಜಾರಿಗೊಂಡಿತೋ ವಿವರಿಸಿಕೊಳ್ಳುವುದು ಸುಲಭವಲ್ಲ. ಆದರೆ ಇದನ್ನು ವಿವರಿಸಿಕೊಂಡಲ್ಲದೆ ಸಿಕ್ಕುಗೊಂಡಿರುವ ನಮ್ಮ ಬದುಕುಗಳು ಹಸನಾಗಲಾರವು. ಸ್ತ್ರೀವಾದವು ದಿನನಿತ್ಯದ ನಮ್ಮ ಸಂಗತಿಗಳನ್ನು ವಿವರಿಸಿಕೊಳ್ಳುವ ಮೂಲಕವೇ ಅದು ಸಿಕ್ಕುಗೊಂಡ ಬಗೆಯನ್ನು, ಜೊತೆಗೇ ಆ ಸಿಕ್ಕನ್ನು ಬಿಡಿಸುವ ಅಗತ್ಯವನ್ನು, ಅದರ ವಿಧಾನವನ್ನೂ ಶೋಧಿಸುತ್ತದೆ.

ಸ್ತ್ರೀವಾದದ ಇತಿಹಾಸ , ಪರಿಕಲ್ಪನೆ ಮತ್ತು ಪ್ರಸ್ತುತತೆಯನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಎಚ್. ಎಸ್ . ಶ್ರೀಮತಿ ಯವರು ವಿಸ್ತಾರವಾಗಿ ಇಲ್ಲಿ ಮಾತಾಡಿದ್ದಾರೆ . ಇದು ಮುಂದೆ ಋತುಮಾನದಲ್ಲಿ ಹಲವು ಕಂತುಗಳಲ್ಲಿ ಪ್ರಕಟವಾಗಲಿದೆ . ನೋಡಲು ಅತ್ಯಂತ ಸಾಮಾನ್ಯದ್ದಾಗಿ ಕಾಣುವ, ಆದರೆ ಅತ್ಯಂತ ಗಂಭೀರವಾದ ಈ ಸೂಕ್ಷ್ಮ ವಿಷಯಗಳನ್ನು ವಿವರಿಸುವ ಮೂಲಕವೇ ಸ್ತ್ರೀವಾದ ಎಂಬ ಚಿಂತನೆಯನ್ನು ಪರಿಚಯಿಸುವ ಉದ್ದೇಶ ಇಲ್ಲಿನ ಮಾತುಗಳಿಗಿದೆ. ಸಮಾಜವು ಬದಲಾಗಬೇಕು ಎಂದರೆ ಸ್ತ್ರೀವಾದವು ನಮ್ಮ ಜೀವನ ವಿಧಾನ ಎನಿಸಬೇಕು. ಮನೆ ಎಂಬ ಖಾಸಗಿವಲಯದಿಂದ ತೊಡಗಿ ಸಾರ್ವಜನಿಕ ವಲಯದ ಎಲ್ಲೆಡೆಗಳಲ್ಲಿ ಗಂಡುಹೆಣ್ಣುಗಳಾಗಿ ನಮ್ಮ ನಡೆನುಡಿ, ವರ್ತನೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವ, ಲಿಂಗತ್ವದ ಕಾರಣವಾಗಿ ಬರುವ ತಾರತಮ್ಯಗಳ ಬಗೆಗೆ ಜಾಗ್ರತರಾಗಿ ಪ್ರವರ್ತಿಸುವ ಸಾಮಾಜಿಕ ಅಭ್ಯಾಸಗಳನ್ನು ಕೂಡಿಸಿಕೊಳ್ಳುವದೇ ಮೊದಮೊದಲಿಗೆ ಕಷ್ಟವೆನಿಸಬಹುದು. ಆದರೆ ಇದು ನಮ್ಮ ಸಹಜ ಜೀವನಶೈಲಿಯಾಗಿ ನೆಲೆಗೊಳ್ಳಬೇಕು. ಗಂಡುಹೆಣ್ಣುಗಳಿಬ್ಬರೂ ಈ ಬಗ್ಗೆ ಜಾಗ್ರತರಾಗುವಲ್ಲಿ ಸ್ತ್ರೀವಾದವು ನೆರವಾಗಿ ನಿಲ್ಲಲು ಬಯಸುತ್ತದಷ್ಟೆ.


ಭಾಗ ೧ : https://ruthumana.com/2019/08/03/sthreevada-hs-shreemati-part-1/
ಭಾಗ ೨ : https://ruthumana.com/2019/08/13/sthreevada-hs-shreemati-part-2/
ಭಾಗ ೩ : https://ruthumana.com/2019/09/02/sthreevada-hs-shreemati-part-3/
ಭಾಗ ೪ : https://ruthumana.com/2019/09/19/sthreevada-hs-shreemati-part-4/
ಭಾಗ ೫ : https://ruthumana.com/2019/10/13/sthreevada-hs-shreemati-part-5/
ಭಾಗ ೬ : https://ruthumana.com/2019/11/21/sthreevada-hs-shreemati-part-6/
ಭಾಗ ೭ : https://ruthumana.com/2019/12/17/sthreevada-hs-shreemati-part-7/

One comment to “ಜನಸಾಮಾನ್ಯರಿಗೆ ಸ್ತ್ರೀವಾದ – ಭಾಗ ೮ : ಎಚ್. ಎಸ್. ಶ್ರೀಮತಿ”
  1. Pingback: ಜನಸಾಮಾನ್ಯರಿಗೆ ಸ್ತ್ರೀವಾದ – ಭಾಗ ೧೨ : ಎಚ್. ಎಸ್. ಶ್ರೀಮತಿ – ಋತುಮಾನ

ಪ್ರತಿಕ್ರಿಯಿಸಿ