ಪುಸ್ತಕ ಪರೀಕ್ಷೆ : ಬಸವರಾಜ ವಿಳಾಸ

ವಿಕಾಸ ನೇಗಿಲೋಣಿಯವರ ಎರಡನೇ ಕಥಾ ಸಂಕಲನದ ಒಂದು ಅವಲೋಕನ

ಕತೆಗಳು ಕತೆಗಾರನ ಧೋರಣೆಯ ಹಂಗಿನಲ್ಲಿ ಬೆಳೆಯಬಾರದು. ಕತೆಗಳು ಸೈದ್ದಾಂತಿಕ ವ್ಯೂಹದಲ್ಲಿ ಸಿಲುಕಿ ಬುದ್ಧಿ ಗಮ್ಯವಾಗದೆ ಹೃದಯ ಗಮ್ಯವಾಗಬೇಕು ಎನ್ನುವ ಮಾತುಗಳನ್ನು ಕತೆಗಾರ ವಿಕಾಸ್ ನೇಗಿಲೋಣಿ ತಮ್ಮ ಮೊದಲ ಮಾತುಗಳಲ್ಲಿ ಬರೆಯುತ್ತಾರೆ. ಇದಕ್ಕೆ ಪೂರಕವಾಗಿ ಲಂಕೇಶರ ” ನನ್ನ ಕತೆಗಳು ನನ್ನಿಂದ ಹೆಚ್ಚುಹೆಚ್ಚು ಮುಕ್ತವಾಗಿರಬೇಕು. ಜೀವನದ ಮರ್ಜಿಯಿಂದ ತನ್ನ ರೂಪ ನಿರ್ವಹಿಸಿಕೊಳ್ಳುವಂತಾಗಬೇಕು ಅಂತ ನಂಬಿರುವವನು ನಾನು” ಎನ್ನುವ ಮಾತನ್ನೂ ಉಲ್ಲೇಖಿಸಿದ್ದಾರೆ. ಈ ಸಂಕಲನದ ಕತೆಗಳು ಈ ನಿಲುವಿಗೆ ಹೊಂದಿಕೊಂಡಂತೆಯೇ ಇವೆ. ಇಲ್ಲಿನ ಯಾವುದೇ ಕತೆಗಳಲ್ಲಿ  ಇಸಮ್‍ಗಳು ನುಸುಳುವುದಿಲ್ಲ. ಇಲ್ಲಿನ ಅನೇಕ ಕತೆಗಳನ್ನು ಕತೆ ಓದುವ ಸುಖಕ್ಕಾಗಿಯೇ ಓದಬೇಕು. ಹಾಗಂತ ಸಾಮಾಜಿಕ ಬದಲಾವಣೆಗೆ ಇವರ ಕತೆಗಳು ಸ್ಪಂದಿಸುವುದಿಲ್ಲವೆಂದಲ್ಲ. ಬದುಕಿನಲ್ಲಾದ ಪಲ್ಲಟಗಳನ್ನು ಗ್ರಹಿಸುವುದರ ಮೂಲಕ ಸೂಕ್ಷ್ಮವಾಗಿ ಇವುಗಳನ್ನು ಹಿಡಿದಿಡುವ ಪ್ರಯತ್ನವನ್ನೂ ಇಲ್ಲಿನ ಕೆಲವು ಕತೆಗಳು ಮಾಡಿವೆ. ಕತೆ ಹೇಳುವ ಶೈಲಿ ಮತ್ತು ಭಾಷೆ ಇವರಿಗೆ ಸಿದ್ಧಿಸಿದೆ. ಪಾತ್ರಗಳ ಮನದ ಭಾವದ ಕೆತ್ತನೆಯ ಕುಸುರಿ ಕೆಲಸವನ್ನೂ ಇವರು ಸಮರ್ಪಕವಾಗಿಯೇ ಮಾಡುತ್ತಾರೆ. ಇಷ್ಟಿದ್ದರೂ ಇಡಿ ಕಥಾ ಸಂಕಲನದಲ್ಲಿ ಮನದಲ್ಲಿ ಅಚ್ಚಳಿಯದಂತೆ ಉಳಿಯುವ ಪಾತ್ರಗಳಾಗಲಿ, ಸನ್ನಿವೇಶಗಳಾಗಲೀ ಇಲ್ಲದೇ ಇರುವುದು ಇದರ ಒಂದು ದೊಡ್ಡ ಕೊರತೆ ಎಂದೇ ಹೇಳಬಹುದು. ಬೌದ್ಧಿಕ ವಾದ ವಿವಾದಗಳ ಮೂಲಕ ಬದುಕನ್ನು ಶೋಧಿಸುವ ದಾರಿಯನ್ನು ಬಿಟ್ಟುಕೊಟ್ಟು ಹೃದಯ ಸಂವೇದ್ಯದ ಮೇಲೆ ನಿಂತಿರುವ ಕತೆಗಳು ಭಾವ ತೀವ್ರತೆಯನ್ನು ಹುಟ್ಟಿಸುವಲ್ಲಿ ವಿಫಲವಾದರೆ ಬಹುಶಃ ಈ ಕೊರತೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಭಾವ, ಬುದ್ಧಿಗಳೆರಡೂ ಒಂದು ಹದದಲ್ಲಿ ಬೆರೆತ ಕತೆಗಳು ಮನದಲ್ಲಿ ನಿಲ್ಲಬಲ್ಲವು ಅನಿಸುತ್ತದೆ. ಆದ್ದರಿಂದ ’ಅವರವರ ಭಾಗ’, ’ಗಡ್ದದ ಲಕ್ಷ್ಮಮ್ಮ’, ’ಕತ್ತಲು ಬಾರದು ಬೆಳಕು ಇರುವೆಡೆಗ” ಯಂತಹ ಕತೆಗಳು ಉಳಿದವುಗಳಿಗಿಂತ ಹೆಚ್ಚು ಯಶಸ್ವಿಯಾದವು ಎನಿಸುತ್ತದೆ. ಇನ್ನು ’ಮಂಗನ ಕಾಯಿಲ” ಕತೆ ತನ್ನ ವಿಷಿಷ್ಟ ವಸ್ತುವಿನಿಂದಾಗಿಯೇ ಅಪರೂಪವೆನಿಸಿಕೊಳ್ಳುತ್ತದೆ.  ’ಒಂದು ನಡುಗಡ್ಡೆ, ಎರಡು ಜಗತ್ತು, ಮೂರು ಏಕಾಂತ ಹಾಗೂ ಹುಲಿರಾಯನಂತೆ ಅತಿಥಿ’ ಎನ್ನುವ ಕತೆ ತನ್ನ ಪ್ರತಿಮಾತ್ಮಕತೆಯಿಂದಾಗಿ ಕತೆಗಿಂತ ಹೆಚ್ಚಾಗಿ ಕಾವ್ಯದ ವಸ್ತುವಾಗಿ ಸಾರ್ಥಕವಾಗಬಹುದಿತ್ತು ಅನಿಸುತ್ತದೆ.

ಬಹುತೇಕ ಎಲ್ಲ ಕತೆಗಳು  ಮುಕ್ತಾಯವಾಗುವುದು ನಿಜವಾಗಿ ಮುಕ್ತಾಯವಾಗ ಬೇಕಾದ ಒಂದು ಅಥವಾ ಎರಡು ಹಂತದ ಮೊದಲು ಅನಿಸುತ್ತವೆ. ಇವು ಕತೆಯ ಶೇಷಭಾಗವನ್ನು ನಮ್ಮ ಊಹೆಯ ಮೆಲುಕಿಗೆ ಉಳಿಸಿ ಹೋದರೂ ಯಾಕೋ ಅಪೂರ್ಣವೆನ್ನುವ ಭಾವವನ್ನು ಉಳಿಸಿ ಬಿಡುತ್ತವೆ. ಹೊಟ್ಟೆ ತುಂಬುವುದಕ್ಕಿಂತ ಸ್ವಲ್ಪ ಮೊದಲೆ ಊಟ ಮುಗಿಸಿ ಎದ್ದು ಬಿಟ್ಟಂತೆ. ಅನೇಕ ಕತೆಗಳು ತುಂಬ ಸಂಕ್ಷಿಪ್ತವಾಗಿದ್ದಕ್ಕೆ ಇದು ಒಂದು ಕಾರಣವಿರಬಹುದು. ಕತೆಯ ಪಾತ್ರಗಳು ಅನುಭವದ ಆಘಾತಕ್ಕೆ ತಮ್ಮನ್ನು ಮತ್ತಷ್ಟು ಒಡ್ದಿಕೊಳ್ಳುವ ಅವಶ್ಯಕತೆ ಇತ್ತು ಎನ್ನುವುದು ಇಲ್ಲಿನ ಅನೇಕ ಕತೆಗಳನ್ನು ಓದಿದಾಗ ಅನಿಸದೇ ಇರದು.

ಈ ಕಥಾ ಸಂಕಲನ ಒಟ್ಟು ಹದಿನಾರು ಕತೆಗಳಿಂದ ಕೂಡಿದ್ದು ಕೆಲವು ಕತೆಗಳ ಸ್ಥೂಲ ನೋಟ ಹಾಗೂ ವಿಶ್ಲೇಷಣೆಃ

ಅವರವರ ಭಾಗಃ ಈ ಕತೆ ತಾಯಿ ಮಕ್ಕಳ ಸಂಬಂಧವನ್ನು ಶೋಧಿಸುತ್ತದೆ. ಮಧ್ಯ ವಯಸ್ಸಿನಲ್ಲಿಯೇ ಗಂಡನನ್ನು ಕಳೆದು ಕೊಂಡು ಮಕ್ಕಳನ್ನು ಸಾಕಿದ ತಾಯಿಗೆ, ಮಕ್ಕಳ ಮದುವೆಯ ನಂತರ ಅವರು ತನ್ನ ಕೈಯಿಂದ ಜಾರುತ್ತಿರುವುದು ಖೇದವನ್ನುಂಟು ಮಾಡುತ್ತದೆ. ಸೊಸೆಯ ಅಕಸ್ಮಾತ್ ಸಾವಿನ ನಂತರವಾದರೂ ಮಗ ತನ್ನ ಕೈಗೆ ಇಡಿಯಾಗಿ ಸಿಗಬಹುದು ಎಂದು ಆಶಿಸಿದವಳಿಗೆ ನಿರಾಸೆಯಾಗುತ್ತದೆ. ಮುಂದೆ ಮಕ್ಕಳು ಆಸ್ತಿ ಪಾಲು ಮಾಡಿಕೊಳ್ಳುವ ಸಮಯದಲ್ಲಿ ಮನೆಯಲ್ಲಿನ ಎಲ್ಲ ವಸ್ತುಗಳನ್ನೂ, ಕೊಟ್ಟಿಗೆಯ ದನಕರುಗಳನ್ನೂಸಹಿತ ಇದು ತನಗೆ ಇದು ತನಗೆ ಎಂದು ಪೈಪೊಟಿಗೆ ಬಿದ್ದವರಂತೆ ಮಕ್ಕಳಿಬ್ಬರು ಪಾಲು ಮಾಡಿಕೊಂಡರೂ ತಾಯಿಯನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಒಂದೊಂದೆ ನೆಪ ಹೇಳಿ ತಾಯಿಯನ್ನು ಇನ್ನೊಬ್ಬನತ್ತ ದಾಟಿಸಲು ನಾಜುಕಾಗಿ ಯತ್ನಿಸುತ್ತಾರೆ. ಮನುಷ್ಯನ ಸ್ವಾರ್ಥವನ್ನು ಸೂಕ್ಷ್ಮವಾಗಿ ಕತೆ ಬಿಚ್ಚಿಡುತ್ತದೆ. ಅದೇ ಸಮಯದಲ್ಲಿ ತಾಯಿಯ ಸಂಗಡ ಜಗಳವಿದ್ದರೂ ಮದುವೆಯಾಗಿ ಹೊಸಿಲು ದಾಟಿ ಹೋದ ಮಗಳು ಮನೆಯ ಆಸ್ತಿಯಲ್ಲಿ ತನ್ನ ಪಾಲನ್ನು ನಿರಾಕರಿಸಿಯೂ ತಾಯಿಯನ್ನು ತನ್ನ ಮನೆಗೆ ಸ್ವಾಗತಿಸುತ್ತಾಳೆ. ಇದು ಕತೆಗೆ ಭಾವನಾತ್ಮಕ ಆಯಾಮವನ್ನು ನೀಡುವುದಲ್ಲದೆ ಸ್ವತಃ ಎರಡು ಮಕ್ಕಳ ತಾಯಿಯಗಿರುವ ಮಗಳು ತಾಯ್ತನದ ಕರುಳ ಮಮತೆಯನ್ನು ವ್ಯಕ್ತ ಪಡಿಸುವ ಬಗೆಯೂ ಅನನ್ಯವಾಗಿ ಮೂಡಿದೆ.

ಗಡ್ಡದ ಲಕ್ಷ್ಮಮ್ಮಃ  ಕುಗ್ರಾಮದ ಒಂದರ ಪಕ್ಕದ ರಸ್ತೆಯಲ್ಲಿ ಹಾದು ಹೋಗುವ ಖಾಸಗಿ ಬಸ್ಸಿನ ಏಜೆನ್ಸಿಯನ್ನು ಪಡೆದ ಪ್ರಭುಗಳು ತಮ್ಮ ಊರನ್ನು ಮಹಾ ನಗರ ಬೆಂಗಳೂರಿಗೆ ಜೋಡಿಸುವ ಕಾಯಕದಲ್ಲಿ ವ್ಯಾಪಾರದ ಅನೇಕ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾರೆ. ಕೃಷಿ ಕಾರ್ಮಿಕರು ಊರು ತೊರೆದು ನಗರ ಸೇರುತ್ತಿರುವ ಇಂದಿನ ನಮ್ಮ ವಿದ್ಯಮಾನವನ್ನು ಸೂಕ್ಶ್ಮವಾಗಿ ಮತ್ತು ಅಷ್ಟೇ ಸಂಕ್ಷಿಪ್ತವಾಗಿ ಕಟ್ಟಿಕೊಡುತ್ತಲೇ ನಗರದ ಸೌಂದರ್ಯ ಉದ್ದಿಮೆಯನ್ನು ಪ್ರಭುಗಳು ತಮ್ಮ ಹೆಂಡತಿ ಲಕ್ಷ್ಮಿಯ ಮೂಲಕ ಹಳ್ಳಿಗೆ ಬರ ಮಾಡಿಕೊಂಡಾಗ ಆ ಊರಿನ ಹೆಣ್ಣು ಮಕ್ಕಳ ಬದುಕಿನಲ್ಲಿ ಉಂಟಾಗುವ ಹೊಸ ಉತ್ಸಾಹವನ್ನೂ ಅಷ್ಟೆ ಸೂಕ್ಶ್ಮವಾಗಿ ಕತೆ ನಿರೂಪಿಸುತ್ತದೆ. ಪ್ರಭುಗಳೇ ಹುಟ್ಟು ಹಾಕಿದ ಇಂತಹ ಬದಲಾವಣೆಯಿಂದ ಉಂಟಾದ ವ್ಯಾಪಾರಿಕ ಸ್ಪರ್ಧೆಯಲ್ಲಿ ಪ್ರಭುಗಳು ಸೋಲುತ್ತಾರೆ. ತನ್ನದೇ ಸೌರ್ದರ್ಯ ಉದ್ದಿಮೆಯಲ್ಲಿ ಪರಿಣತಳಾದ ಅವರ ಮಡದಿಯೂ ಕೊನೆಗೆ ಅವರನ್ನು ತೊರೆದು ನಗರ ಸೇರುತ್ತಾಳೆ. ಇಲ್ಲಿ ಪ್ರಭುಗಳು ಸ್ಥಾಪಿತ ವ್ಯವಸ್ಥೆಯ ಸಂಕೇತವಾದರೆ ನಗರ ಸೇರುವ ಅಲ್ಲಿನ ಕೂಲಿಕಾರರು ಸಮಾಜದ ದಮನಿತರ ಸಂಕೇತ ಹಾಗೂ ಲಕ್ಷ್ಮಿ ಅಬಲೆಯರೆಂದು ಪರಿಗಣಿಸಲ್ಪಟ್ಟ ಸ್ತ್ರೀ ಸಮೂಹದ ಸಂಕೇತವನ್ನಾಗಿ ನಾವು ನೋಡಿದಾಗ ನಗರ ಸಂಪರ್ಕ ತಂದ ಹೊಸ ಅವಕಾಶದಿಂದ ಅವರು ಎಂಪವರ್ ಆಗುವುದನ್ನು ಮತ್ತು ಹಳ್ಳಿಯಲ್ಲಿನ ಸ್ಥಾಪಿತ ವ್ಯವಸ್ಥೆ ಸೋಲುವುದನ್ನೂ ಪ್ರಭುಗಳ ಸೋಲಿಗೆ ಸಮೀಕರಿಸ ಬಹುದಾಗಿದೆ. ಯಾವುದೇ ಸೈದ್ದಾಂತಿಕ ನಿಲುವು ಅಥವಾ ಅಜೆಂಡಾವನ್ನು ವ್ಯಕ್ತ ಪಡಿಸದೆ ಯಾವ ಧೋರಣೆಯ ಹಂಗೂ ಇಲ್ಲದೆ ಕತೆ ಸಹಜವಾಗಿ ಮೂಡಿ ಬಂದಿದೆ.

ಕತ್ತಲು ಬಾರದು ಬೆಳಕು ಇರುವೆಡೆಗೆಃ ಬೆಂಗಳೂರಿನಲ್ಲಿ ವಾಸಿಸುವ ಕೊಳೆಗೇರಿ ಬದುಕನ್ನು ಅನಾವರಣ ಮಾಡುವ ಕತೆ. ಗಂಡನ ವಿಪರೀತವಾದ ಕುಡಿತದಿಂದ ಅವನ ಹೆಂಡತಿ ರೋಸಿ ಯಾರದೋ ಜೊತೆ ಓಡಿ ಹೋದಳೊ ಅಥವಾ ಹೊರಗೆ ಹೋದವಳು ಕೊಲೆಯಾದಳೊ ಎಂಬ ಸತ್ಯ ಬಯಲಾಗದೆ ಒಟ್ಟಿನಲ್ಲಿ ಒಂದು ದಿನ ಕಾಣೆಯಾಗುತ್ತಾಳೆ. ತಾಯಿಯನ್ನು ಕಳೆದುಕೊಂಡ ಹದಿ ಹರೆಯದ ಚನ್ನಮ್ಮ ಅಪ್ಪನ ರಕ್ಷೆಯಲ್ಲಿ ಬೆಳೆಯುತ್ತಾಳೆ. ಅಪ್ಪ ಅಂಡವ ಸರಾಯಿ ಕುಡಿದು ಬಂದು ರಾತ್ರಿಯೆಲ್ಲ ರಂಪ ಮಾಡಿದರೂ ಬೆಳಗಾಗುತ್ತಲೇ ಕರುಣಾಮಯಿಯಾಗಿ ಮಗಳ ಇಚ್ಚೆಯನ್ನು ನಡೆಸಿಕೊಡುವ ವಿಚಿತ್ರ ಮನುಷ್ಯ. ಚನ್ನಮ್ಮ ಕಷ್ಟ ಪಟ್ಟು ಓದುತ್ತಾಳೆ. ಯಾರ‍್ಯಾರದೋ ಸಹಾಯದಿಂದ ಹೊಲಿಗೆ ಕಲಿಯತೊಡಗುತ್ತಾಳೆ. ಅವಳಿಗೆ ಹೊಲಿಗೆ ಕಲಿಸುವ ಮಧ್ಯ ವಯಸ್ಸಿನ ಅವಿವಾಹಿತ ಮಹಿಳೆ ಫಿಲೋಮಿನಾ ಅವಳ ತಂದೆಯ ಬದುಕಿನಲ್ಲಿ ಕಾಲಿಡುತ್ತಾಳೆ. ಚನ್ನಮ್ಮ ಇದನ್ನು ಸಹಿಸದವಳಾಗುತ್ತಾಳೆ. ಅಪ್ಪನ ಪ್ರೀತಿಯನ್ನು ಕಳೆದುಕೊಳ್ಳುತ್ತಿರುವ ನೋವೇ, ಅಥವಾ ತನ್ನದೇ ಟೀಚರ್ ಅಪ್ಪನನ್ನು ಗಾಳಕ್ಕೆ ಬೀಳಿಸಿದ ಹೊಟ್ಟೇ ಕಿಚ್ಚೇ ಎನ್ನುವುದು ತಿಳಿಯದಿದ್ದರೂ ಫಿಲೋಮಿನಾಳನ್ನು ದ್ವೇಷಿಸತೊಡಗುತ್ತಾಳೆ. ಇಬ್ಬರೂ ತಮ್ಮ ತಮ್ಮ ದಾರಿಯಿಂದ ಇನ್ನೊಬ್ಬರನ್ನು ಹೊರತಳ್ಳುವ ಉಪಾಯ ಮಾಡುತ್ತಾರೆ. ಚನ್ನಮ್ಮ ಹೊಲಿಗೆಗೆ ಬಟ್ಟೆ ಒದಗಿಸುವ ಮಾರ್ವಾಡಿ ಅಂಗಡಿಯನ್ನು ಮಧ್ಯ ರಾತ್ರಿಯ ಸಮಯದಲ್ಲಿ ತನ್ನ ಪ್ರಿಯಕರನೊಡನೆ ಹೊಕ್ಕು ಕಳ್ಳತನ ಮಾಡುವ ಮತ್ತು ಆ ಕಳ್ಳತನದ ಆಪಾದನೆಯನ್ನು ಫಿಲೋಮಿನಾಳ ಮೆಳೆ ಹೊರೆಸುವ ಯೋಜನೆ ಹಾಕುತ್ತಾಳೆ ಮತ್ತು ಆ ದಿಕ್ಕಿನಲ್ಲಿ ಕಾರ್ಯಗತಳಾಗುತ್ತಾಳೆ. ಅದರಲ್ಲಿ ಅವಳು ಗೆಲ್ಲುವಳೋ ಅಥವಾ ಸೋಲುವಳೋ ಎನ್ನುವ ಪ್ರಶ್ನೆಯನ್ನು ಕತೆ ಹಾಗೆಯೇ ಉಳಿಸುತ್ತದೆ. ದಿನವೂ ರಾತ್ರಿ ಕುಡಿದು ಬಂದು ಹೆಂಡಂದಿರನ್ನು ಹೊಡೆಯುವ ಗಂಡಂದಿರು ಮತ್ತೆ ಅವೆಲ್ಲವನ್ನೂ ಮರೆತು ಒಂದೇ ಹಾಸಿಗೆಯಲ್ಲಿ ಮಲಗಿ ಮಕ್ಕಳ ಹುಟ್ಟಿಸುವ ನಿತ್ಯದ ರೂಢಿ, ಇದ್ದಕ್ಕಿದ್ದಂತೆ ಮನೆಗೆ ಹೊಸ ಹೆಂಡಂದಿರನ್ನು ಕರೆತರುವದು, ಯಾವ ಸುಳಿವೂ ಇಲ್ಲದೆ ಗಂಡನನ್ನು ಬಿಟ್ಟು ಯಾರ ಜೊತೆಯೋ ಓಡಿ ಹೋಗುವ ಹೆಂಗಸರು ಹೀಗೆ ಸರಿ ತಪ್ಪು, ನೈತಿಕ ಅನೈತಿಕಗಳ ನಡುವಿನ ಗೆರೆಯನ್ನೇ ಅಳಿಸಿ ಹಾಕಿದ ಬದುಕಿನ ಚಿತ್ರಣವನ್ನು ಕೊಡುವ ಕತೆ ಚನ್ನಮ್ಮ ಮಾಡುವ ಅಂಗಡಿಯ ಕಳ್ಳತನ ಸರಿಯೋ ತಪ್ಪೋ ಎನ್ನುವ ನೈತಿಕ ಪ್ರಶ್ನೆಯನ್ನೇ ಅಪ್ರಸ್ತುತಗೊಳಿಸುತ್ತದೆ.

ಕಥಾ ಸಂಚಲನಃ ಗೆಳೆಯನ ಪ್ರಿಯಕರೆಯ ಮೇಲೆ ಬಲತ್ಕಾರ ಮಾಡಿದ ವಸ್ತುವನ್ನೇ ಕತೆಯಾಗುಳ್ಳ, ಅದೇ ಗೆಳೆಯನೇ ಬರೆದ ಕತೆಯನ್ನು ಬಲತ್ಕಾರ ಮಾಡಿದ ವ್ಯಕ್ತಿಯೇ ಓದುವಂತಾಗಿ ಅವನು ತಳಮಳದಲ್ಲಿ ಬಳಲುವಂತಾಗುವ ವಸ್ತುವುಳ್ಳ ಕತೆ ಸ್ವಲ್ಪ ವಿಭಿನ್ನವಾಗಿದೆ. ಕತೆಯಲ್ಲಿ ನೈತಿಕತೆಯ ಆಯಾಮವನ್ನು ಇನ್ನಷ್ಟು ಶೋಧಿಸುವ ಅವಕಾಶವಿದ್ದರೂ ಬಲತ್ಕಾರದ ಘಟನೆಯ ಗುಟ್ಟು ಹೇಗೆ ಬಯಲಾಯಿತು ಎಂದು ಶೋಧಿಸುವತ್ತಲೇ ಕತೆಗಾರರು ಒತ್ತು ಕೊಟ್ಟಿದ್ದರಿಂದ ಕತೆ ಆ ಕುತೂಹಲವನ್ನು ಮಾತ್ರ ತಣಿಸಿ ಕೊನೆಗೊಳ್ಳುತ್ತದೆ. ಪಾತ್ರಗಳಾವವೂ ಮೈದುಂಬಿಕೊಳ್ಳುವುದಿಲ್ಲ.

ಚಿದಂಬರ ರಹಸ್ಯಃ ತಾನು ಪ್ರೀತಿಸಿದ್ದ ತನ್ನೂರಿನ ಬಂಗಾರಿ ಎಂಬ ಚಲುವೆ ಬೇರೆಯವನ ಪಾಲಾಗುವುದನ್ನು ತಿಳಿದ ಚಿದಂಬರ ಮಾನಸಿಕ ಅಸ್ವಸ್ಥನಾಗುತ್ತಾನೆ. ಅವಳ ಮದುವೆಯನ್ನು ತಪ್ಪಿಸುವ ಸಲುವಾಗಿ ತನಗೂ ಅವಳಿಗೂ ಸಂಬಂಧವಿತ್ತೆಂದು ಇಲ್ಲ ಸಲ್ಲದ ಮಾತಾಡಿ ಊರೆಲ್ಲ ಗುಲ್ಲೆಬ್ಬಿಸುತ್ತಾನೆ. ಇದಕ್ಕೆ ಸೊಪ್ಪು ಹಾಕದೆ ಅವಳ ಮದುವೆ ನಡೆಯುತ್ತದೆ. ಕಾಲಾಂತರದಲ್ಲಿ ಅವನು ಸರಿಯಾಗಿ, ಮದುವೆ ಮಾಡಿಕೊಂಡು ಸಂಸಾರ ನಡೆಸಿದರೂ ಆಗಾಗ ಈ ಅಸ್ವಸ್ಥತೆ ಅವನನ್ನು ಕಾಡುತ್ತಿರುತ್ತದೆ. ತನ್ನ ಮಧ್ಯ ವಯಸ್ಸಿನ ಇಂತಹ ಒಂದು ಅಸ್ವಸ್ಥತೆಯ ಸಮಯದಲ್ಲಿ ಮತ್ತೆ ಅವಳ ದಾಂಪತ್ಯ ಬದುಕಿನಲ್ಲಿ ಪ್ರವೇಶಿಸಲು ಪ್ರಯತ್ನಿಸಿ ಅವಳ ಬದುಕನ್ನು ನರಕ ಮಾಡುತ್ತಾನೆ. ಇದು ಅವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ದುರಂತದಲ್ಲಿ ಕೊನೆಯಾಗುತ್ತದೆ.

ತಾನು ಮಾಡಿರದ ತಪ್ಪಿಗೆ ಅಮಾಯಕ ಹೆಣ್ಣೊಬ್ಬಳು ಬದುಕಿನ ತುಂಬೆಲ್ಲ ಪಡುವ ಪಾಡನ್ನು ಕತೆ ಸಶಕ್ತವಾಗಿ ಕಟ್ಟಿ ಕೊಡುತ್ತದೆ. ಮಾನಸಿಕವಾಗಿ ಅಸ್ವಸ್ಥನಾದ ಚಿದಂಬರನನ್ನೇ ಕೇಂದ್ರವಾಗುಳ್ಳ ಕತೆ ಎಲ್ಲಿಯೂ ಅವನನ್ನು ಖಳನನ್ನಾಗಿ ಚಿತ್ರಿಸುವುದಿಲ್ಲ. ಆದ್ದರಿಂದ ಒಂದು ಪ್ರಮಾಣದ ಅನುಕಂಪವನ್ನು ಆ ಪಾತ್ರವೂ ಬೇಡುತ್ತದೆ. ಆದರೆ ಬಂಗಾರಿಗಾದ ಅನ್ಯಾಯವನ್ನು ಕಿಂಚಿತ್ತೂ ಹಗುರ ಮಾಡದಂತೆ ಕತೆ ರಚಿತವಾಗಿರುವುದು ಸಮಾಧಾನ ತರುತ್ತದೆ ಮತ್ತು ಕೊನೆಗೂ ಅವಳ ದುರಂತವೇ ನಮ್ಮ ಮನಸ್ಸಿನಲ್ಲುಳಿಯುತ್ತದೆ.

ಮಂಗನ ಕಾಯಿಲೆಃ ಇದು ದೇವ – ಮಾನವ ಸಂಘರ್ಷದ ವಸ್ತುವುಳ್ಳ ಕತೆ. ಕೇಶವ ಬಾಗಿಲ್ತಾಯರಿಗೆ ತಮ್ಮ ಬಾಳೆಯ ತೋಟವೆನ್ನೆಲ್ಲ ನಾಶ ಮಾಡಿ ತಾವು ಊರು ಬಿಟ್ಟು ಪರ ಊರಲ್ಲಿ ದೈನ್ಯದಿಂದ ಬದುಕುವಂತೆ ಮಾಡಿದ ಮಂಗಗಳ ಕುಲದ ಮೇಲೆಯೇ ದ್ವೇಷ ಪ್ರಾರಂಭವಾಗುತ್ತದೆ. ಮಂಗಗಳನ್ನು ಹುಡುಕಿಕೊಂಡು ಬೆನ್ನೆತ್ತಿ ಹೋಗಿ ಓಡಿಸತೊಡಗುತ್ತಾರೆ. ಮಂಗಗಳು ಆಂಜನೇಯನ ಪ್ರತಿರೂಪವೆಂದು ನಂಬಿ ಪೂಜಿಸುವ ಸಂಪ್ರದಾಯದ ನಮ್ಮ ಸಮಾಜದಲ್ಲಿ, ಇವುಗಳಿಗೆಲ್ಲ ಹನುಮನ ಶಾಪ ಕಾರಣವೆಂದು ನಂಬಿ ತನ್ನಿಂದ ನಡೆದಿರಬಹುದಾದ ತಪ್ಪಿಗೆ ಪ್ರಾಯಶ್ಚಿತ್ಯ ಮಾಡಿಕೊಳ್ಳುವುದೋ ಅಥವಾ ಅಂಜನೇಯ ದೇವರಿಗೆ ಹರಕೆ ಹೊತ್ತುಕೊಳ್ಳುವುದೋ ಸಂಪ್ರದಾಯ. ಆದರೆ ಬಗಿಲ್ತಾಯರು ಇದಕ್ಕೆ ವ್ಯತಿರಕ್ತವಾಗಿ ಆಂಜನೇಯ ದೇವರ ಮೇಲೆಯೇ ದ್ವೇಷ ಸಾಧಿಸ ಹೊರಡುತ್ತಾರೆ. ವಿಪರ್ಯಾಸವೆಂಬಂತೆ ವೇದಾಧ್ಯಯನ ಮಾಡಿದ ಅವರ ಮಗ ಆಂಜನೇಯ ದೇವರ ದೇವಸ್ಥಾನದಲ್ಲಿ ಅರ್ಚಕನಾಗುತ್ತಾನೆ ಮತ್ತು  ಆ ದೇವರ ಸನ್ನಿಧಿಯಲ್ಲಿ ಎಲ್ಲಿಲ್ಲದ ಮನಃಶಾಂತಿ ಪಡೆಯುತ್ತಾನೆ. ಆದರೆ ಒಂದೇ ಮನೆಯಲ್ಲಿ ಆಂಜನೇಯನ ಪರಮ ಭಕ್ತನಾದ ಮಗ ಮತ್ತು ಹನುಮ ದ್ವೇಷಿಯಾದ ಅಪ್ಪ ಸಾಮರಸ್ಯದಿಂದಲೇ ಬದುಕುತ್ತಿರುತ್ತಾರೆ. ಒಮ್ಮೆ ಮಗನ ಅನುಪಸ್ಥಿತಿಯಲ್ಲಿ ದೇವಸ್ಥಾನದ ಆಂಜನೇಯನಿಗೆ ಪೂಜೆ ಮಾಡಬೇಕಾದ ಅನಿವಾರ್ಯತೆ ಬಾಗಿಲ್ತಾಯರಿಗೆ ಬಂದು ತೀರುತ್ತದೆ. ಹಾಗ ಪೂಜೆ ಮಾಡುವ ಸಂದರ್ಭದಲ್ಲಿ  ಬಾಗಿಲ್ತಾಯರು ಕುದಿದು ಹೋಗುತ್ತಾರೆ ಮತ್ತು ಪ್ರತೀಕಾರದ ಛಲದಿಂದ ಹನುಮನ ವಿಗ್ರಹವನ್ನು ಹೊಳೆಗೆ ಎಸೆದು ಬಿಡುತ್ತಾರೆ. ಆ ವಿಗ್ರಹವನ್ನು ಬೆನ್ನತ್ತಿ ಹೋಗಿ ಅದೇ ಹೊಳೆಯ ನೀರಿನಲ್ಲಿ ಬಳಿದು ಹೋಗುತ್ತಾರೆ.

ಬಾಗಿಲ್ತಾಯರು ಮಂಗಗಳನ್ನು ಬೆನ್ನತ್ತಿ ಹೋದಂತೆ ಆಂಜನೇಯನ ವಿಗ್ರಹವನ್ನೂ ಬೆನ್ನತ್ತಿ ಹೋಗಿ ತಾವೇ ಸಾವು ತಂದು ಕೊಂಡರೋ ಅಥವಾ ಆಂಜನೇಯನೇ ಸೇಡು ತೀರಿಸಿ ಕೊಂಡನೋ ಎನ್ನುವದು ಸಂದಿಗ್ಧವಾಗಿಯೇ ಇದ್ದು ಬಿಡುತ್ತದೆ.

ಅಪರೂಪದ ವಸ್ತುವುಳ್ಳ ಈ ಕತೆ ಕುತೂಹಲವನ್ನು ಹೆಚ್ಚಿಸುತ್ತಲೇ ಓದಿಸಿಕೊಂಡು ಹೋಗುತ್ತದೆ.

ನಿಮಗೂ ಗೊತ್ತಿರಬಹುದುಃ  ಕಂಪ್ಯೂಟರ್ ಯುಗ ಕಾಲಿಡುತ್ತಲೇ ಅದಕ್ಕೆ ಹೊಂದಿಕೊಳ್ಳಲಾಗದೆ ಆಫೀಸಿನಲ್ಲಿ ನಿರುಪಯುಕ್ತ ವ್ಯಕ್ತಿಯಾದವ ಅನುಭವಿಸುವ ಅವಮಾನ, ತಣ್ಣನೆಯ ಕ್ರೌರ್ಯವನ್ನು ಆ ವ್ಯಕ್ತಿಯ ಕೆಲಸವನ್ನು ಕಸಿದುಕೊಳ್ಳುವುದಕ್ಕೆ ಪರೋಕ್ಷವಾಗಿ ಕಾರಣನಾದ ಕಥಾನಾಯಕ ರಾಜೀವಾಕ್ಷನ ಮೂಲಕ ಕತೆ ನಿರೂಪಿಸುತ್ತ ಹೋಗುತ್ತದೆ. ಹಳ್ಳಿಯಿಂದ ರಾಜೀವಾಕ್ಷನೂ ನಗರದ ಅನಾಪ್ತತೆಯ ಧಾವಂತ ಬದುಕಿಗೆ ಹೊಂದಿಕೊಳ್ಳಲಾರದವನು. ಸಂಗಡ ಪದ್ಮನಾಭಯ್ಯನ ಕೆಲಸ ಕಸಿದುಕೊಂಡವ ತಾನು ಎನ್ನುವ ಅಪರಾಧ ಪ್ರಜ್ಞೆಯೂ ಅವನನ್ನು ಅತೀವವಾಗಿ ಕಾಡುವುದನ್ನು ಕತೆ ಅತ್ಯಂತ ಸೂಕ್ಷ್ಮ ತರದಲ್ಲಿ ನಿರೂಪಿಸುತ್ತದೆ.

ಬಸವರಾಜ ವಿಳಾಸಃ ಬೆಂಗಳೂರಿನ ಮಾಲೊಂದರಲ್ಲಿ ತಾನು ಕಂಡು ಮೋಹಗೊಂಡ ಹುಡುಗಿ ಮೈ ಮಾರಿಕೊಳ್ಳುವ ವೇಶ್ಯೆ ಎನ್ನುವದನ್ನು ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಬಸವರಾಜ  ಅರಗಿಸಿ ಕೊಳ್ಳದವನಾಗಿ ಅನುಭವಿಸುವ ಮಾನಸಿಕ ಹಿಂಸೆ ಕತೆಯ ವಸ್ತು. ಕತೆಯ ನಿರೂಪಣೆಯಲ್ಲಿ ಆಪ್ತತೆ ಇದೆಯಾದರೂ ಮನಸ್ಸಿನ ಮೇಲೆ ಆಳವಾದ ಪರಿಣಾಮ ಮಾಡುವದರಲ್ಲಾಗಲಿ ಅಥವಾ ಹೊಸ ಅನುಭವ ನಿಡುವುದರಲ್ಲಾಗಲಿ ಈ ಕತೆ ಸಫಲವಾಗಿಲ್ಲ ಅನಿಸುತ್ತದೆ.

ಪ್ರತಿಕ್ರಿಯಿಸಿ