ಬಳ್ಳಾರಿ ಜಿಲ್ಲೆಯ ಬೊಮ್ಮನಹಳ್ಳಿ ತಾಲೂಕಿನ ಬಸವೇಶ್ವರ ಸರ್ಕಲ್ ಮುಂದಿನ ಬಸ್ ಸ್ಟಾಪಿನಲ್ಲಿ ಸುಮಾರು ಐವತ್ತಾರು ವರುಷದ ಮುನ್ನಿ ಅಲಿಯಾಸ್ ಆಮೀನಾಬಿ ತನ್ನ ಒಂಭತ್ತು ವರುಷದ ಮೊಮ್ಮಗಳು ಯಮುನಿಯ ಪುಟ್ಟ ಕೈಬೆರಳುಗಳನ್ನು ಹಿಡಿದುಕೊಂಡು ತನ್ನೂರಾದ ಸಣ್ಣಳ್ಳಿಯ ಗಾಡಿಗಳಿಗೆ ಕಾಯುತ್ತ ನಿಂತಿದ್ದಳು. ದಟ್ಟೈಸಿದ್ದ ಮಳಿ ಮಾಡುಗಳು ಇನ್ನೇನು ಆಕಾಶದ ಕೊಂಬೆಗಳಿಂದ ಜಾರಿ ಬಿದ್ದೇಬಿಡುತ್ತೇವೆಂಬ ಅವಸರದಲ್ಲಿ ದಟ್ಟೈಸಿದ್ದವು. ಅವುಗಳ ಸ್ವಾಗತಕ್ಕೆಂಬಂತೆ ಮಳಿಗಾಳಿ ಸುಯ್ಯೆಂದು ಧೂಳು, ಮರದೆಲೆಗಳನ್ನು ಚೆಲ್ಲುತ್ತ ಊರ ತುಂಬಾ ಪ್ರದಕ್ಷಿಣೆ ಹಾಕುವಂತಿತ್ತು. ದಿನಾ ದಿನ ಐದು ನಿಮಿಷಕ್ಕೊಂದೊಂದು ಗಾಡಿ ಇರುತ್ತಿದ್ದ ಈ ಬಸ್ಟಾಪಿನಲ್ಲಿ ಇವತ್ಯಾಕೋ ಇಟತ್ತನ ಆದ್ರೂ ಗಾಡಿಗಳ ಸುದ್ದಿಯಿಲ್ಲದಿದ್ದಾಗ ಏನೋ ನೆನಪಿಸಿಕೊಂಡವಳಂತೆ ತನ್ನ ಕೈಹಿಡಿದುಕೊಂಡಿದ್ದ ಮೊಮ್ಮಗಳಿಗೆ ‘ಯಮುನವ್ವ… ಬೇ ಯಮನವ್ವ. ನಿನಿಗೆ ಹವಾಯಿ ಚಪ್ಪಲಿ ಮತ್ತೆ ಫ್ರಾಕ್ ಬೇಕಂತ ಕೇಳಿದ್ಯಲಲೆ. ನಡಿ ಇಲ್ಲೇ ನೂರೆಜ್ಜಿ ನಡ್ಕಂಡೋಗಿ ಶೇಟಿ ಅಂಗಡ್ಯಾಗ ತಗಂಬರಣ್ ಬಾರಬೆ’ ಎಂದು ಬಿಟ್ಟಾಗ ಯಮುನಿಯ ಕಣ್ಣುಗಳು ಹೊಳೆದಿದ್ದವು. ಕಟ್ರಗುಳ್ಳಿ ಕಲ್ಲು ಎಂದು ಯಮುನಿಯ ಬಾಯಲ್ಲಿ ನಾಮಕರಣ ಮಾಡಿಸಿಕೊಂಡಿದ್ದ ಟಾರು ರೋಡಿನ ಒತ್ತುವ ಹರಳುಗಳನ್ನು ಬರಿಗಾಲಲ್ಲಿ ತುಳಿಯುತ್ತ ಅಜ್ಜಿ ಮೊಮ್ಮಗಳಿಬ್ಬರು ಬಟ್ಟೆಯಂಗಡಿಗೆ ಕಾಲಿಟ್ಟರು. ಕಸಬರಿಗೆಯಲ್ಲಿ ಕಸವಡೆದು ಬಯಲುಸೀಮೆಯ ಮಳೆಯ ಕಂತ್ರಾಟ ಗೊತ್ತಿದ್ದ ಅಂಗಡಿಯ ಹುಡುಗ ಯಾವುದಕ್ಕೂ ಇರಲಿ ಎಂದು ಅಂಗಡಿ ಮುಂದಿನ ಬಯಲಿಗೆ ನಾಲ್ಕು ಚೊಂಬು ನೀರುಗ್ಗುವ ಶಾಸ್ತ್ರ ಮಾಡುತ್ತಿದ್ದ. ಶೇಟಿ ಲಕ್ಷ್ಮಿ ಫೋಟೋಗೆ ಊದಿನಕಡ್ಡಿ ಬೆಳಗಿ ಕೈಮುಗಿಯುವ ತರಾತುರಿಯಲ್ಲಿದ್ದವನು ಇವರನ್ನು ನೋಡಿ ಐದು ಮಿನಟ್ ಕೂತ್ಗಳ್ರಿ ಎಂದು ತನ್ನ ಪೂಜಾ ಸಿದ್ಧತೆಯನ್ನು ಮುಂದುವರೆಸಿದ. ಇವರು ಬೇರೆ ಆಯ್ಕೆಯೇ ಇಲ್ಲದಂತೆ ಕಾಯುತ್ತ ನಿಂತರು. ‘ಇಬೆ ಅಲ್ನೋಡು. ಆತ ಅಜ್ಜ ಕೆಮ್ಮಿದಂಗ ಕೆಮ್ಮಕತ್ತನ…’ ಎಂದು ಯಮುನಿ ಅಂಗಡಿಯ ಮುಂದೆ ಹಾದುಹೋಗುತ್ತಿರುವವನನ್ನ ತೋರಿಸಿದಳು. ಅವನು ತನ್ನ ಗಂಡನಂತೆಯೇ ಲುಂಗಿ, ತುಂಬು ತೋಳಿನ ಬನಿಯನ್ ಧರಿಸಿದ್ದ. ಚೌಕಳಿ ಇದ್ದ ಹಸಿರು ಟವಲ್ಲನ್ನು ಬಲಹೆಗಲಿಗೆ ಹಾಕಿಕೊಂಡಿದ್ದ. ಬಿಳೆಕೂದಲಿನ ರಾಶಿಯಿಂದ ಆತನ ನಡುನೆತ್ತಿ ಕಾಣಿಸುತ್ತಿತ್ತು. ಜೋರಾಗಿ ಕೆಮ್ಮುತ್ತಿದ್ದ. ಮುನ್ನಿಗೆ ಗಂಡನ ನೆನಪಾಯಿತು. ಈಚೆಗೆ ಒಂದು ತಿಂಗಳಿಂದ ಗೂರಿಕೊಂಡುಬಿಟ್ಟಿದ್ದ. ಯಾಕೋ ಮೊನ್ನೆಯಿಂದ ಅವಳ ಬಲಗಣ್ಣು ಹೊಡೆದುಕೊಳ್ಳುತ್ತಿತ್ತು. ಕನಸಿನಲ್ಲಿ ಸತ್ತ ಪೂರ್ವಜರೆಲ್ಲರೂ ಬಂದು ಸಿವಿ ಊಟ ತಿನ್ನಿಸಿ ಹೋಗುವ ಅಪಶಕುನದ ಕನಸುಗಳು ಬೀಳುತ್ತಿದ್ದವು. ಸಿಹಿ ಊಟವನ್ನು ಇಷ್ಟ ಪಡುತ್ತಿದ್ದರೂ ಪೂರ್ವಜರು ಬಂದು ತಿನಿಸಿದಾಗ ಅದು ಸಾವಿನ ಸೂಚನೆಯಂತೆ ಎಂದು ನಂಬಿಸಿಕೊಂಡು ಬಂದಿದ್ದರು. ಯಾಕೋ ತನ್ನ ಗಂಡ ಉಳಿಯುವುದಿಲ್ಲ ಎನಿಸಿಬಿಟ್ಟಿತ್ತು. ಅವನನ್ನು ಕಂಡಾಗಲೆಲ್ಲ ಸಣ್ಣಗಿನ ಸಂಕಟವೊಂದು ಹೊಟ್ಟೆಯಲ್ಲಿ ಮಿಸುಕಾಡಿ ಕಣ್ಣಲ್ಲಿ ನೀರುತುಂಬಿಕೊಳ್ಳುತ್ತಿದ್ದವು. ಆಗೆಲ್ಲ ಊರಿನ ಡಾಕ್ಟರಮ್ಮ ನೆನಪಾಗುತ್ತಿದ್ದಳು.
ಸಣ್ಣಳ್ಳಿ ಸಣ್ಣಳ್ಳಿ ಎಂದು ಕರೆಸಿಕೊಳ್ಳುತ್ತಿದ್ದುದು ಒಂದು ಪ್ರೈವೆಟಾಸ್ಪತ್ರಿ ಬಂದಿದ್ದೆ ಅದರ ಹಿಂದೆ ಪ್ರೈವೆಟ್ ಸಾಲಿ, ಕೊರಿಯರ್ ಅಂಗಡಿ, ಪಾರ್ಕು, ಥಿಯೇಟರ್ರು ಎಲ್ಲ ಒಂದರ ಹಿಂದೆ ಒಂದು ಪಟಪಟಪಟ ಎಂದು ಸಿನಿಮಾದಲ್ಲಿ ಒಂದು ಹಾಡಿನಲ್ಲಿಯೇ ಬಡವನಿದ್ದ ನಾಯಕನಟ ಶ್ರೀಮಂತನಾಗಿಬಿಡುತ್ತಾನಲ್ಲ ಹಾಗೆ ಬೆಳೆದುಬಿಟ್ಟಿತ್ತು. ‘ಸುಡುಗಾಡಿ ಸಣ್ಣಳ್ಳಿ’ ಎಂದು ನಗಾಡಿಕೊಳ್ಳುತ್ತಿದ್ದ ಜನ ‘ಊರಿಂದ ಯಾವಾಗ ಬಂದ್ಯೆ?’ ಎಂದು ಕೇಳುವ ಪ್ರಶ್ನೆಗಳಲ್ಲಿ ತನ್ನ ಸಣ್ಣಳ್ಳಿ ದಿಢೀರನೆ ಊರಾಗುತ್ತಿರುವುದು ಮುನ್ನಿಯ ಅರಿವಿಗೆ ಬಂದಿತ್ತು. ಅದು ಅವಳಲ್ಲಿ ಸ್ವಲ್ಪ ಮಟ್ಟಿಗಿನ ಹೆಮ್ಮೆಯನ್ನೂ ಮೂಡಿಸಿತ್ತು. ಹೀಗಾಗತೊಡಗಿದ ಕೂಡಲೇ ಮುನ್ನಿ ಅಳಿಯನ ಊರು ಇಟಗಿಗೋ, ಗಂಡನ ಅಕ್ಕನೂರು ಬೊಮ್ಮನಹಳ್ಳಿಗೋ ಹೋಗುವಾಗ ಇದ್ದುದರಲ್ಲಿಯೇ ಹೊಸ ಸೀರೆಯುಟ್ಟು, ತಲೆಯನ್ನು ನೀಟಾಗಿ ಬಾಚಿ ನಡುಬೈತಲೆ ತಗೆದು ಮುಖಕ್ಕೊಂಚೂರು ಪೌಡರ್ ಹಚ್ಚಿ ಬೂದಿಬುಕ್ಕಾಗಿಲ್ಲವೆಂದು ಸೀರೆಯ ಸೆರಗಿನಿಂದ ಒರೆಸಿಕೊಂಡು ನಡುಮನಿಯ ದೇವರ ಕೋಣೆಗೆ ಮುಖತೋರಿಸಿ ಮನೆಬಿಡುತ್ತಿದ್ದಳು.
ಗುಡಿಸಲು, ತಗಡಿನ ಮನಿ, ತೊಲಿ ಕಂಬದ ಮನಿಗಳೇ ಹೆಚ್ಚಾಗಿದ್ದ ಸಣ್ಣೂರಿನಲ್ಲಿ ಡಾಕ್ಟರು ಮೊದಲ ಬಾರಿಗೆ ಎರಡಂತಸ್ತಿನ ಸಿಮೆಂಟಿನ ಮನಿ ಎಬ್ಬಿಸಿಬಿಟ್ಟಿದ್ದರು. ಅಲ್ಲೇ ಕೆಳಗಿನ ಮಹಡಿಯಲ್ಲಿ ಕ್ಲಿನಿಕ್ಕು, ಪಕ್ಕದಲ್ಲೇ ಮೆಡಿಕಲ್ ಶಾಪು ತೆರೆದು ಗಂಡ ಹೆಣ್ತಿ ಇಬ್ರು ಡಾಕ್ಟರಿಕಿ ಮಾಡಿಕೊಂಡಿದ್ದರು. ನೋಡು ನೋಡುತ್ತಿದ್ದಂತೆಯೇ ಇವರಿಬ್ಬರ ಕೈಗುಣ ಪಕ್ಕದ ಇಟಿಗಿಗೂ ಗೊತ್ತಾಗಿ ಅಲ್ಲಿಯ ಜನರು ಇಲ್ಲಿಗೂ ಬರತೊಡಗಿ ಸಣ್ಣೂರಿನ ದೊಡ್ಡಾಸ್ಪತ್ರೆ ಅಂತ ಹೆಸರಾಗಿತ್ತು. ಮಗಳನ್ನು ದೂರದೇಶದ ಆಸ್ಟ್ರೇಲಿಯಾದಲ್ಲೆಲ್ಲೋ ಕಲಿಯಲು ಬಿಟ್ಟಿದ್ದರು. ಮೊದಲೆಲ್ಲ ನೆಗಡಿ, ಕೆಮ್ಮು, ಜ್ವರದ ಸಣ್ಣ ಸಣ್ಣವುಗಳಿಗೂ ಇಟಿಗಿಗೋ, ಬೊಮ್ಮನಹಳ್ಳಿ ತಾಲೂಕಿಗೊ ಹೋಗಬೇಕಾಗಿತ್ತು. ಒಮ್ಮೊಮ್ಮೆ ಹಳ್ಳಿಯಲ್ಲೇ ಇದ್ದು ಇದ್ದು ಮನಿಯ ಕಿರಿಕಿರಿ ಪಿರಿಪಿರಿ ಸಹಿಸಿಕೊಳ್ಳಲಾಗದೆ ಮುನ್ನಿ ಒಮ್ಮೊಮ್ಮೆ ಜ್ವರ ಎಂದು ಮುದುರಿಕೊಂಡು ಮಲಗಿಕೊಂಡು ಮೆಟೆಡಾರಿನಲ್ಲಿ ಇಟಿಗಿ, ಬೊಮ್ಮನಹಳ್ಳಿಗೆ ಪ್ರಯಾಣಬೆಳೆಸುತ್ತಿದ್ದಳು. ಇದನ್ನು ಗಮನಿಸಿದ್ದ ಮುನ್ನಿಯ ಗಂಡ ‘ಹೊಂಟ್ಲು ನೋಡು ಕುಣುಕಲುಗಿತ್ತಿ. ಸುಳ್ಳಾ ನಾಟ್ಕ ಇಕಿದು… ರಮುಣಿ. ಊರ ರಮುಣಿ’ ಎಂದು ಬೊಮ್ಮನಹಳ್ಳಿಯ ತನ್ನ ಅಕ್ಕನ ಹತ್ತಿರ, ಒಮ್ಮೊಮ್ಮೆ ತನ್ನ ಬಳಿಯೇ ಗೊಣಗಿಕೊಂಡರೂ ಮುನ್ನಿ ಕಿವಿಗೆ ಹಾಕಿಕೊಂಡಿರಲಿಲ್ಲ. ಮೊದಲ ಮಗ ಯಾವಳನ್ನೋ ಓಡಿಸಿಕೊಂಡು ಹೋಗಿಬಂದಿದ್ದ. ರಾತ್ರೋ ರಾತ್ರಿ ತಮ್ಮ ಪಿಂಜಾರ ಜಾತಿಗೆ ಹಾಕಿಕೊಂಡಿದ್ದರು. ನಡುವಿನ ಮಗಳನ್ನ ಇಟಿಗಿಗೆ ಕೊಟ್ಟಿತ್ತು. ಕೊನೆಯ ಮಗ ಎಗ್ ರೈಸ್ ಅಂಗಡಿ ಇಟ್ಟಿದ್ದ. ಸಣ್ಣಳ್ಳಿ ಸರ್ಕಲ್ ಬಳಿಯೇ ಮುನ್ನಿಯ ಮನೆ ಇದ್ದದ್ದರಿಂದ ವ್ಯಾಪಾರ ಜೋರಾಗಿಯೇ ನಡೆಯುತ್ತಿತ್ತು. ಉಳ್ಳಾಗಡ್ಡಿ, ಟಮಾಟಿ ಹೆಚ್ಚಿಡುವುದು. ಅನ್ನ ಮಾಡಿಡುವುದು. ಆಮ್ಲೆಟ್ ಹಾಕಿಕೊಡುವುದು. ತತ್ತಿ ಕುಚ್ಚಿಡುವುದು. ತಾಟು ನೀರಲ್ಲೆದ್ದಿಕೊಡುವುದು ಮುನ್ನಿಯ ಪ್ರಪಂಚಕ್ಕೆ ಸೇರಿಕೊಂಡಿತ್ತು. ಮುನ್ನಿಯ ಗಂಡ ದಿನ ಬೆಳಿಗ್ಗೆ ಬೊಮ್ಮನಳ್ಳಿಯಿಂದ ವೋಲ್ ಸೇಲಿನ ಲೆಕ್ಕದಲ್ಲಿ ತತ್ತಿ ಟ್ರೇ, ಕೋಳಿ ಮಾಂಸವನ್ನು ಟೆಂಪೋದಲ್ಲಿ ಮನೆಗೆ ತರುತ್ತಿದ್ದ. ಹೀಗಿರುವಾಗ ಗಂಡನ ಆರೋಗ್ಯ ಕೈಕೊಡುತ್ತ ಹೋದಂತೆ ಮುನ್ನಿ ಬೊಮ್ಮನಳ್ಳಿಗೋಗಿ ವೋಲ್ ಸೇಲಿನಲ್ಲಿ ತರುವ ಕೆಲಸವನ್ನು ಜಾಣತನದಿಂದ ತನ್ನ ತೆಕ್ಕೆಗೆ ತೆಗೆದುಕೊಂಡುಬಿಟ್ಟಿದ್ದಳು. ಕೊನೆಯ ಮಗ ವಲಿ ಬೆಳಿಗ್ಗೆ ಐಸ್ ಮಾರುವ, ಚೀಟಿ ಕಟ್ಟಿಸಿಕೊಳ್ಳುವ, ಊರುಡುಗರ ಜೊತೆ ಸೇರಿ ಕ್ರಿಕೆಟ್ ಆಡುವ ಹುಡುಗುಬುದ್ಧಿಯಿಂದ ತಾಯಿಯನ್ನ ತಡೆಯುವ ಮನಸ್ಸಾಗುತ್ತಿರಲಿಲ್ಲ. ಆಗೆಲ್ಲ ಮುನ್ನಿ ಬೆಳಿಗ್ಗೆಯೇ ಎದ್ದು ಚಾ ಕುಡಿದು, ನೀರು ವೊಯ್ದುಕೊಂಡು ಇಟಿಗಿಗೆ ಹೋಗಿ ಮಗಳ ಮಾತಾಡಿಸಿಕ್ಯಂಡು ಅಲ್ಲಿಂದ ಬೊಮ್ಮನಳ್ಳಿಗೋಗಿ ಗಂಡನ ಅಕ್ಕನ ಮನೆಯಲ್ಲಿ ಸಂಪತ್ತು ಹರಟೆ ಹೊಡೆದು, ಬಟ್ಟೆ ಹಿಂಡಿಕೊಟ್ಟು, ಚಾ ಕುಡಿದು, ಮುಸಿರಿ ತಿಕ್ಕಿಟ್ಟು ತತ್ತಿ, ಕೋಳಿ ಮಾಂಸ ತಗಂಡು ನಾಕು ಗಂಟೆಗೆಲ್ಲ ಮೆಟೆಡಾರು ಹಿಡಿದು ಮನೆ ತಲುಪುತ್ತಿದ್ದಳು.
ಅವತ್ತೊಂದು ದಿನ ಊರಿನ ಡಾಕ್ಟರು ಸತ್ತ ಸುದ್ದಿ ಬೆಳಿಗ್ಗೆಗೆಲ್ಲ ಊರ ತುಂಬಾ ಹರಡಿತ್ತು. ತನ್ನ ಎಷ್ಟೋ ಜರವನ್ನ ಹೋಗಲಾಡಿಸಿದ ಕೈಗುಣದ ಡಾಕ್ಟ್ರು ಸತ್ತರೆಂದು ಕೇಳಿದ್ದೆ ಮುನ್ನಿಗೆ ಸಂಕಟವಾಗಿತ್ತು. ಮಕಕ್ಕೆ ನೀರು ಚಿಮುಕಿಸಿಕೊಂಡವಳೇ ಚಾ ಕೂಡ ಕುಡಿಯದೆ ಕೈಯಲ್ಲೆರಡು ಊದಿನಕಡ್ಡಿ ಹಿಡಿದು ಆಸ್ಪತ್ರಿ ಮನಿ ಮುಂದಿದ್ದಳು. ಪೆಂಡಾಲು, ಖುರ್ಚಿ ಯಾವುದೂ ಇರಲಿಲ್ಲ. ಊರಿನ ಜನಕ್ಕೆ ಕಡೆ ಸಲ ಮಕ ನೋಡಾಕೆ ಬಿಟ್ಟಿದ್ದರು. ಮೆಟ್ಟಿಲುಹತ್ತಿ ಮೊದಲಸಲ ಅವರ ಮನೆಗೆ ಹೋಗುವ ಅವಕಾಶ. ಡಾಕ್ಟರಮ್ಮ ಎದೆಯೊಡೆದುಕೊಂಡು ಆಡಿಂಗನ ಮಾಡಿ ಅಳುತ್ತಿರಬಹುದೆಂದು ಊಹಿಸಿದ ಮುನ್ನಿಗೆ ಡಾಕ್ಟರಮ್ಮನನ್ನ ನೋಡಿ ಆಶ್ಚರ್ಯವಾಗಿತ್ತು. ಡಾಕ್ಟ್ರಮ್ಮ ಬಿಳಿ ಬಣ್ಣದ ಚೂಡಿ ಧರಿಸಿದ್ದಳು. ಕೂದಲು ಸ್ವಲ್ಪ ಕೆದರಿತ್ತು. ಅವಳು ಅಳುತ್ತಿರಲಿಲ್ಲ. ‘ಗಂಡನಿಗೆ ಬಂದಿರುವುದು ಕೇವಲ ಯಕಶ್ಚಿತ್ ಸಾವು ಅಷ್ಟೇ. ಸರಿಹೋಗಿಬಿಡುತ್ತಾನೆ’ ಎಂದು ದುಃಖತಪ್ತ ಊರಿನ ಜನರನ್ನೆಲ್ಲ ಸಮಾಧಾನ ಪಡಿಸುವಂತಿತ್ತು. ಆಕೆಯೇ ಎಲ್ಲರಿಗು ಅಳಬೇಡಿ ಎಂದು ಕೈಮುಗಿಯುತ್ತಿದ್ದಳು. ಮುನ್ನಿಗೆ ಡಾಕ್ಟ್ರಮ್ಮನ ನೋಡಿ ಖುಷಿ ಆಗಿತ್ತು. ಮುನ್ನಿ ಮತ್ತು ಡಾಕ್ಟ್ರಮ್ಮನ ಕಣ್ಣುಗಳು ಒಮ್ಮೆ ಸಂಧಿಸಿದವು. ಅಂತಹ ದುಃಖದ ಸಮಯದಲ್ಲೂ ಒಂದು ವಿಷಾದ ತುಂಬಿದ ಮುಗುಳ್ನಗೆ ಅವರ ಮುಖದಲ್ಲಿ ಕಂಡು ಮರೆಯಾಯಿತು. ಆದರೂ ಊರವರೆಲ್ಲರೂ ಮಾತಾಡಿಕೊಳ್ಳುವಂತೆ ‘ಅದೆಷ್ಟು ಗಟ್ಟಿಗಿತ್ತಿಬೇ ಅಕಿ. ಅಂತ ಬಂಗಾರದಂತ ಗಣಮಗ ಸತ್ತಾಗ ಒಂದನಿ ಕಣ್ಣೀರ್ ಸತೆ ಹಾಕ್ಲಿಲ್ಲ ನೋಡು. ಅದೆಂತ ಕಲ್ಲು ರುದಯಾನಾ ಏನ’ ಎಂತಲೋ ‘ತೀರಾ ಈಟ್ರ ಮಟ ಜುಗ್ಗತನ ಮಾಡ್ಬಾರ್ದು. ಭಾಳ ಜುಗ್ಗಿ ನೋಡಾಕಿ. ಗಂಡ ಸತ್ತಾಗ ಮನಿ ಮುಂದ ಒಂದು ಪೆಂಡಾಲ್ ಹಾಕ್ಸಣ ಅಂತಂದ್ರ… ಸುಮ್ನ ಅದಕ್ಕಿದಕಾಂತ ಉದ್ರಿ ಖರ್ಚು ಬ್ಯಾಡಂತ ಕಡ್ಡಿ ತುಂಡ್ ಮಾಡಿದಂಗ ಹೇಳಿ ಬಿಟ್ಳಂತ ನೋಡು ಭಪ್ಪರೇ ಹೆಣುಮಗಳು’ ಎಂಬ ಮೂದಲಿಕೆಗಳು ಅವಳನ್ನ ಬಿಟ್ಟಿರಲಿಲ್ಲವಾದರೂ ಅವನ್ನೆಲ್ಲ ಡಾಕ್ಟ್ರಮ್ಮ ಕಸದ ಬುಟ್ಟಿಗೆ ಎಸೆದವಳಂತೆ ಎಸೆದು ಹಗುರಾಗಿಬಿಟ್ಟಿದ್ದಳು. ಡಾಕ್ಟ್ರಮ್ಮ ಇಂದೂ ಕೂಡ ನೆನಪಾಗಿದ್ದಳು. ಇದ್ದರ ಹಂಗಿರಬೇಕು ನೋಡು ಹೆಣುಮಗಳು ಎನಿಸಿತ್ತು. ಡಾಕ್ಟ್ರಮ್ಮನಂತೆ ಆಗಾಗ ನೆನಪಾಗುತ್ತಿದ್ದವಳು ಗಾಯಿತ್ರಿ.
ತನಗೆ ಓದು ಬರಾ ಎಲ್ದು ತಲಿಗಿ ಹತ್ಲಿಲ್ಲ. ಪಕ್ಕದೋಣಿಯ ಕಿರಾಣಿ ಅಂಗಡಿ ಶೆಟ್ರು ಮನಿ ಹುಡುಗಿ ಗಾವಿತ್ರಿ ಹೆಂಗೆಂಗೋ ಸೈನಾಕದುಕಲಿಸಿಕೊಟ್ಟಿದ್ಲು. ‘ಆಮಿನಾಬಿ…ಆಮಿನಾಬಿ…ಆಮಿನಾಬಿ…ಆಮಿನಾಬಿ…ಆಮಿನಾಬಿ…ಆಮಿನಾಬಿ…ಆಮಿನಾಬಿ………’ ಎಂದು ತನ್ನ ನಿಜದ ಹೆಸರನ್ನು ಸಮಯ ಸಿಕ್ಕಾಗಲೆಲ್ಲ ತನ್ನ ಮೊಮ್ಮಕ್ಕಳ ನೀಲಿ ಲೆಡ್ಡಿನಿಂದ ರಾಮಕೋಟಿಯ ಹಾಗೆ ತನ್ನ ಸೊಟ್ಟಂಬಟ್ಟ ಅಕ್ಷರಗಳಿಂದ ಬರೆಯುತ್ತಿದ್ದಳು. ಅವಳು ಕಲಿತ ನಾಕಕ್ಷರ ಅಂದರೆ ಅವೆ… ಕಲಿತಾಗ ಮುನ್ನಿ ಅದೆಷ್ಟು ಖುಷಿಪಟ್ಟಿದ್ದಳು. ‘ಮೂಲಿಮನಿ ಶೆಟ್ರು ಗಾವಿತ್ರಿ ಸೈನು ಕಲಿಸಿಕೊಟ್ಟಳೆ. ಒಳ್ಳೆ ಹುಡುಗಿ. ಆಮಿನಕ್ಕ…ನೀನು ಎಲ್ಲೆ ಆದ್ರು ಎಬ್ಬೆಟ್ ಒತ್ತಬ್ಯಾಡೆ. ಈ ಎಸ್ರು ತಿದ್ದಿ ತಿದ್ದಿ ಬರ್ದು ಕಲಿ… ಎಲ್ಲೆ ವೋಗ್ಲಿ ಇದೇ ಸೈನ್ ಮಾಡು ಅಂದಳೆ. ದೇವ್ರಂತ ಹುಡುಗಿ’ ಅಂತೆಲ್ಲ ಹೊಗಳಿದ್ದಳು. ಕಲಿತ ಸೈನನ್ನು ಪ್ರತಿ ತಿಂಗಳಿಗೊಮ್ಮೆ ನ್ಯಾಯಬೆಲೆ ಅಂಗಡಿಗಳ ರುಜು ಪುಸ್ತಕದಲ್ಲಿ ಸಹಿ ಮಾಡಲು ಮದುವೆಗೆ ಹೊರಟಂತೆ ಗತ್ತಿನಿಂದ ತಯಾರಾಗಿ ಹೋಗಿ ಸಹಿ ಮಾಡಿ ಬರುತ್ತಿದ್ದಳು. ಅಕ್ಷರ ಕಲಿಸಿದ್ದ ಗಾಯಿತ್ರಿಯ ಮೇಲೆ ತುಂಬಾ ಅಭಿಮಾನ ಮತ್ತು ಅಕ್ಕರೆ ಇತ್ತು. ಗಾಯಿತ್ರಿಯ ಮದುವೆಗೆ ತಾನೆ ಎಲೆಯಡಿಕಿ ಚೀಲದಲ್ಲಿ ಕೂಡಿಕ್ಕಿದ್ದ ಹಣದಿಂದ ತನ್ನ ಸೊಸೆಯೊಂದಿಗೆ ಸೀರೆ ಮುಯ್ಯಿ ಮಾಡಿ ಉಂಡು ಬಂದಿದ್ದಳು. ಮದುವೆ ಆರತಕ್ಷತೆ ದಿನ ಮುಯ್ಯಿ ಕೊಡುವಾಗ ತೆಗೆಸಿಕೊಂಡಿದ್ದ ಫೋಟೋವನ್ನ ಶೆಟ್ರ ಬಳಿ ಬೇಡಿ ಇನ್ನೊಂದು ಕಾಪಿ ತೊಳೆಸಿ ತನ್ನ ಮದುವೆ ಸೀರೆ ಇಟ್ಟಿದ್ದ ಟ್ರಂಕಿನಲ್ಲಿ ಜೋಪಾನವಾಗಿಟ್ಟುಕೊಂಡಿದ್ದಳು. ಗಾಯಿತ್ರಿ ಏನೆಲ್ಲಾ ಆಗಬಹುದಿತ್ತು. ಹಠ ಹಿಡಿದು ದೂರದ ಕೊಟ್ಟೂರಿನ ಕಾಲೇಜಿನಲ್ಲಿ ಟೀಚರಿಕೆ ಓದಿದ್ದಳು. ಮನೇಲಿ ಒಳ್ಳೆ ಸಂಬಂಧ ಬಂತು ಅಂತ ಯಾವುದನ್ನು ಲೆಕ್ಕಿಸದೆ ಮದುವೆ ಮಾಡಿಕೊಟ್ಟಿದ್ದರು. ಗಂಡ ದೂರದ ಬಾಂಬೆನಾಗೆ ಅದೆಂತದೋ ಇಂಜಿನಾರ್ ಕೆಲಸ ಅಂತೆ. ಮುನ್ನಿಗೆ ಇಂಜಿನಿಯರ್ ಎನ್ನಲು ಬರದಿದ್ದಾಗ ಇಂಜಿನಾರ್ ಇಂಜಿನಾರ್ ಇಂಜಿನಾರ್ ಎಂದು ತನ್ನ ತೊಡರ ಬಡರಾ ನಾಲಿಗೆಯಲ್ಲಿ ಹತ್ತಾರು ಬಾರಿ ಹೇಳಿಕೊಂಡಿದ್ದಳು. ಹೀಗೆ ಕಡೇಪಕ್ಷ ಒಳ್ಳೇಮನೆಗೆ ಸೊಸಿಯಾಗ್ಯರೆ ಹೋದ್ಲು ಅಂತ ಖುಷಿಪಡುವುದರೊಳಗೆ ಮೂರನೇ ವರ್ಷ ಗಂಡ ಯಾವುದೋ ಆಕ್ಸಿಡೆಂಟಿನಲ್ಲಿ ತೀರಿಕೊಂಡಿದ್ದರಿಂದ ವಾಪಸ್ಸು ಊರಿಗೆ ಬಂದಿದ್ದಳು. ಒಬ್ಬಳೇ ಮಗಳಾದ್ದರಿಂದ ತಂದೆತಾಯಿಗೂ ಸಹಾಯವಾಗುವಂತಿತ್ತು. ಎಗ್ ರೈಸ್ ಅಂಗಡಿ ಅಂತಾದ ಮೇಲೆ ಶೆಟ್ರು ಮನಿಗೆ ಹೋಗೋದು ಕಡಿಮಿ ಆದ್ರೂ ಆಗಾಗ ಹೋದಾಗ ಗಾವಿತ್ರಿ ಎಷ್ಟು ಬೇಕೋ ಅಷ್ಟೇ ಮಾತಾಡಿಸಿ ಕೋಣೆ ಸೇರಿಕೊಂಡುಬಿಡುತ್ತಿದ್ದಳು.
ಶೇಟಿ ಪೂಜೆ ಮುಗಿಸಿ ಏನು ಬೇಕೆಂದು ವಿಚಾರಿಸಿದ. ‘ಬೇ ಯವ್ವಾ… ಮಹಾಯಾನ ಧಾರಾವಾಹಿನಾಗ ಸಣ್ಣುಡುಗಿ ಭೂಮಿ ಹಾಕ್ಯಂಡಿತ್ತಲ್ಲ ನೀಲಿ ಬಣ್ಣದ್ ಲಂಗ ಕೊಡಿಸ್ಬೇವ!!!’ ಎಂದು ಗೋಗರೆಯಿತು. ಶೇಟಿ ಅದೇ ಡಿಸೈನಿನ ತಿಳಿಗುಲಾಬಿ ಬಣ್ಣದ, ಕಣಗಿಲೆ ಹೂವಿನ ಚಿತ್ತಾರವಿದ್ದ ಲಂಗ ತೋರಿಸಿ ‘ಇದು ತಗೋ ಸುಂದ್ರಿ. ಇದು ಭಾಳ ಹುಡ್ಗಿರ್ ತಗೊಂಡ್ ಒಕ್ಕರ. ನಿನಿಗೆ ಚಂದ ಕಾಂತತಿ’ ಎಂದಾಗ ಯಮುನಿ ಅವನ ಮಾತಿಗೆ ಕಿಂಚಿತ್ ಕವಡೆಕಾಸಿನ ಬೆಲೆಯನ್ನೂ ಕೊಡದೆ ‘ನಂಗಾ ಅದಾ ನೀಲಿ ಬಣ್ಣದ ಲಂಗಾನ ಬೇಕ್ ಒಗಾತಗ. ಅದ ಕೊಡ್ಸು ಇಲ್ಲಂದ್ರ ನಾ ವಲ್ಯ’ ಎಂದು ಮುನ್ನಿಯ ಕೆಂಪು ಸೀರೆ ಹಿಡಿದು ಜಗ್ಗಿದಳು. ‘ಇಕಿ ಇಡಿದಿದ್ದ ಹಠ. ಇಕಿ ಕಾಲಗ ಸಾಕಾಗೋಗ್ಯೆತಿ. ಆ ನೀಲಿದಾ ಕೊಟ್ಟುಬಿಡಪಾ ಆತಗೋಗ್ಲಿ’
‘ಅದಕ್ಕ ಐವತ್ ರುಪೆ ಜಾಸ್ತಿಯಕ್ಕೆತಿ ನೋಡಕಾ ಯಕ’
‘ಏನ್ಮಾಡದೆ ಯಣ್ಣ ಅದ್ನ ಕೊಡು. ಕೂಸಿಗಿಂತ ಎಚ್ಚಿನದು ಏನೈತಿ’ ಎಂದು ಕೊಂಡುಕೊಂಡಳು.
‘ಮತ್ ಬ್ಯಾರೆ ಸೀರಿ ಗೀರಿ ಬೇಕೆನವ?’
‘ಮಾಯಾನಾ ದಾರವಾಯಿದಾಗ ಹೀರೋಯಿನಿ ಆಕ್ಯಂಡು ಬರ್ತೇತಲ್ಲ ದೊಡ್ಡ ಅಂಚಿನ ಕೆಂಪು ದಡಿ ಸೀರಿ ಐತೆನಣ?’
‘ಡಿಟ್ಟೋ ಹಂಗೆ ಇರಾಂಗಿಲ್ಲ. ಸಣ್ಣದ್ರಾಗ ಸ್ವಲ್ಪೇ ಸ್ವಲ್ಪು ಡಿಸೈನ್ ಬ್ಯಾರೆ ಇರತೇತಿ’ ಎಂದು ಒಳಗಡೆ ಹೋಗಿ ಸಣ್ಣ ಏಣಿ ತಂದು ಮೇಲೆ ಹತ್ತಿ ಸಣ್ಣ ಪ್ಲಾಸ್ಟಿಕ್ ಬ್ಯಾಗಡಿ ಕವರಲ್ಲಿ ಮಡಸಿಟ್ಟಿದ್ದ ಸೀರೆಗಳನ್ನು ಹರವಿದ. ಒಂದೊಂದೆ ತುಸು ತುಸುವೇ ಆಚೆತೆರೆದು ನೋಡಿದಳು. ಸಮಾಧಾನವಾಗಲಿಲ್ಲ. ಮಹಾನದಿ ದಾರವಾಯಿಯ ಮನೋಹರಿ ಉಡುವ ರೇಶ್ಮಿ ಸೀರಿ ಇದರಂತೆಯೇ ಇದ್ದರು ಏನೋ ತುಸು ಕಡಿಮೆ ಬಿದ್ದಂತೆನಿಸಿ, ಅದೇ ಹೊತ್ತಿಗೆ ಗಂಡ ಹಾಸಿಗಿ ಹಿಡಿದು ಬಿದ್ದಾಗ ಹೊಸ ಸೀರಿ ತಗಂಡ್ರೆ ತನ್ನ ಹಿರಿ ಸೊಸಿಯೇ ಆಡಿಕ್ಯಾಂತಳೆ ಎಂದು ನೆನಪಾಗಿ ಬ್ಯಾಡ ಬ್ಯಾಡವೆಂದು ಮೊಮ್ಮಗಳ ಲಂಗದ ದುಡ್ಡು ಕೊಟ್ಟು ಹೊರಬಂದಳು. ಮೂವತ್ತು ಹೆಜ್ಜಿ ದೂರದಾಗೆ ಚಪ್ಪಲಿ ಅಂಗಡಿ ಇತ್ತು. ಅಲ್ಲಿ ಯಮುನಿ ಕೇಳಿದ ಕಪ್ಪು ಬಣ್ಣದ ಹೈ ಹೀಲಿನ ನಮೂನಿ ಇರುವ ಚಪ್ಪಲಿ ಕೊಡಿಸಿದಳು. ಮುನ್ನಿ ಅದನ್ನು ಕೈಯಲ್ಲಿ ಹಿಡಿದುಕೊಂಡವಳೇ ಎರಡೆರಡು ಬಾರಿ ಸವರಿ ಖುಷಿಪಟ್ಟಳು. ಆಗಾಗ ತಾನು ಕೆಲಸ ಮಾಡುವ ಫಾತಿಮಾಳ ಮನಿಯಾಗೆ ಚಾನೆಲ್ ಚೇಂಜ್ ಮಾಡುವಾಗ ಧುತ್ತೆಂದು ಪ್ರತ್ಯಕ್ಷವಾಗಿಬಿಡುವ ಬೆಕ್ಕಿನ ನಡಿಗೆಯ ಸುಂದರಿಯರು ನೆನಪಾದರು. ಅಂತಹ ಸುಂದರಿಯರು ತೊಡುವ ಚಪ್ಪಲಿಯನ್ನು ಇಟ್ಟಿರುವ ಅಂಗಡಿಯವನ ಬಳಿ ಜಾಸ್ತಿ ಚೌಕಾಸಿ ಮಾಡಲು ಮನಸಾಗದೆ ಅಲ್ಲಿಯೇ ಯಮುನಿಯ ಪುಟ್ಟ ಪಾದಗಳಿಗೆ ತೊಡಿಸಿ ಅವಳ ಕಿರುಬೆರಳು ಹಿಡಿದು ಮತ್ತೆ ಬಸ್ ಸ್ಟ್ಯಾಂಡಿಗೆ ನಡೆದಳು.
ದಾರಿಯಲ್ಲಿ ಕೊಳ್ಳದೆ ಬಿಟ್ಟು ಬಂದ ಸೀರೆಯ ನೆನಪಿಯಿತು. ಮಹಾಯಾನ ಧಾರವಾಹಿ ಕಿರುತೆರೆಯ ದಿಗ್ಗಜರೆಂದೇ ಖ್ಯಾತರಾದ ಜಾನಕಿರಾಮರ ನಿರ್ದೇಶನದಲ್ಲಿ ಮೂಡಿಬರುತ್ತಿದ್ದ ಮಧ್ಯಮವರ್ಗದ ಹೆಣ್ಣುಮಗಳ ಕಥೆ. ಆ ಧಾರಾವಾಹಿಯನ್ನು ಇಡೀ ಸಣ್ಣಳ್ಳಿಯ ಜನರೆಲ್ಲಾ ರಾತ್ರಿ ಒಂಭತ್ತು ಗಂಟೆಗೆ ತಪ್ಪದೆ ನೋಡುತ್ತಿದ್ದರು. ಮುನ್ನಿಯೂ ಅರ್ಧ ಗಂಟೆ ಬಿಡುವು ಮಾಡಿಕೊಂಡು ಪಕ್ಕದ ಓಣಿಯಲ್ಲಿ ಬೇರೆ ಮನೆ ಮಾಡಿಕೊಂಡಿದ್ದ ತನ್ನ ಹಿರಿಸೊಸೆಯ ಮನೆಗೆ ನೋಡಲು ಹೋಗುತ್ತಿದ್ದಳು. ಕಥಾನಾಯಕಿ ಮನೋಹರಿ ನೃತ್ಯಗಾತಿ. ಮಧ್ಯಮವರ್ಗದ ಈ ನಾಟ್ಯಸರಸೋತಿಯನ್ನು ಶ್ರೀಮಂತ ಕುಟುಂಬದ ನೃತ್ಯಕಾರನೊಬ್ಬ ಪ್ರೀತಿಸಿ ಮದುವೆಯಾಗುತ್ತಾನೆ. ಪ್ರೀತಿಗೆ ಕೊರತೆಯಿಲ್ಲವೆಂಬಂತಿದ್ದ ಇಬ್ಬರ ಸುಖ ಬಾಳುವೆಯಲ್ಲಿ ಈರ್ಷೆ ಮನೆಮಾಡುತ್ತದೆ. ದುರಾದೃಷ್ಟವೆಂಬಂತೆ ವೃತ್ತಿಯಲ್ಲಿ ಅವಳಿಗೆ ಸಿಕ್ಕಷ್ಟು ಮನ್ನಣೆ ಅವನಿಗೆ ದೊರೆಯದೆ ಸಂಸಾರ ಕುದಿಯುವ ಪಾತ್ರೆಯಾಗುತ್ತದೆ. ಮನೋಹರಿ ಒಮ್ಮೆ ನೃತ್ಯ ಕಚೇರಿ ಮುಗಿಸಿಬಂದಾಗ ಮನೆಯಲ್ಲಿ ಅವನು ಹೆಣವಾಗಿದ್ದಾನೆ. ಅವನನ್ನು ಮನೋಹರಿಯೇ ಕೊಂದಿದ್ದಾಳೆ ಎಂಬ ಆರೋಪ ಬಂದಿದೆ. ಕೋರ್ಟಿನ ಅಂಗಳದಲ್ಲಿರುವ ಕೇಸನ್ನು ಲಾಯರ್ ಜಾನಕಿರಾಮರು ಹೇಗೆ ವಾದಿಸಿ ಮನೋಹರಿಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂದು ಇಡೀ ಸಣ್ಣಳ್ಳಿಗೆ ಸಣ್ಣಳ್ಳಿಯೇ ಕುತೂಹಲದಿಂದ ಆಗಾಗ ಬಿಡುವಿನ ವೇಳೆಯಲ್ಲಿ ಧಾರಾವಾಹಿಯ ಕಥೆಯನ್ನ ಚರ್ಚಿಸುತ್ತದೆ.
ಇದೆ ವೇಳೆಗೆ ಮುನ್ನಿಗೆ ಮಾದೇವಿ ನೆನಪಾಗುತ್ತಾಳೆ. ಮಾದೇವಿ ಸಣ್ಣಳ್ಳಿಯಿಂದ ಸ್ವಲ್ಪ ದೂರದ ಜನತಾ ಮನೆಯಲ್ಲಿ ವಾಸಿಸುವ ಊರ ಧಣಿ ಕಿರಾಣಿ ಅಂಗಡಿ ಶೆಟ್ರು, ಮಸೀದಿ ಮನಿ ಇಮಾಮ್ ಸಾಬಿ, ಮೊನ್ನೆ ಮೊನ್ನೆ ಊರಿಗೆ ಬಾಡಿಗೆ ಬಂದು ಏಸುವಿನ ಭಜನೆ ಹಾಡುವ ಪೀಟರಪ್ಪ, ಪೊಲೀಸ ರಾಮಪ್ಪ ಎಲ್ಲರೂ ಅವಳ ಪಾದಸೇವಕರನ್ನಾಗಿ ಮಾಡಿಕೊಂಡಿದ್ದ ಮಾದೇವಿ ಊರು ಬಿಟ್ಟು ತೊಲಗಿದ್ದು ಬಗೆಹರಿಯದಂತಿತ್ತು. ಸಣ್ಣಳ್ಳಿಯ ಜನರೆಲ್ಲರೂ ಮೂದೇವಿ ತೊಲಗಿದ್ದೆ ಭೇಷಾತು ಎಂದು ಮಾತಾಡಿಕೊಂಡರು. ಅವಳು ಮನೆಬಿಟ್ಟಾಗ ಕೆಲವರು ಅವಳ ಮನೆ ಹೊಕ್ಕು ತಲಾಷಿ ನಡೆಸಿದಾಗ ಅವಳ ಸೀರೆಗಳು, ಅವಳು ಓದುತ್ತಿದ್ದ ಕತಿ, ಕಾದಂಬರಿ ಬುಕ್ಕಾ, ಕ್ವಾಣಿಯ ತುಂಬಾ ಅಂಟಿಸಿಕೊಂಡಿದ್ದ ಮಾದಪ್ಪನ ಫೋಟೋಗಳು ಎಲ್ಲ ಇದ್ದಂಗೆ ಇದ್ವಂತೆ… ಅಷ್ಟೆಲ್ಲ ಓದಿಕೊಳ್ಳುತ್ತಿದ್ದ ಮಾದೇವಿ, ಊರ ಬಡವರಿಗೆ ಜಡ್ಡು ಜಪತ್ತು ಅಂತ ಬಂದಾಗ ತನ್ನ ಕೈಯಾಗಿದ್ದ ರೊಕ್ಕ ಪಕ್ಕ ಎಲ್ಲ ಕೊಟ್ಟುಬಿಡುತ್ತಿದ್ದ ಮಾದೇವಿ, ಅದ್ಯಾವುದೋ ಊರುಗಳಿಗೆ ಹೋಗಿ ಅದೇನೇನೋ ಘೋಷಣೆ ಕೂಗುತ್ತಿದ್ದ, ಹೋರಾಟ ಮಾಡುತ್ತಿದ್ದ ಮಾದೇವಿ ಇಂದು ಹೀಗೆ ಊರಿಂದ ಪರಾರಿಯಾಗಿ ಎಲ್ಲಿಗೆ ಹೋದಳು? ಅವಳ ಮನೆಯ ಪೋಟೋದಲ್ಲಿದ್ದ ಮಾದಪ್ಪ ಯಾರು? ಮಾದಪ್ಪನ ಹತ್ರಕ ಹೋಗ್ಯಾಳೆ ಅಂತ ಮಾತಾಡಿಕೊಂಡ ಜನರ ಮಾತುಗಳು ಮಾದೇವಿಯನ್ನ ಇನ್ನಷ್ಟು ನಿಗೂಢಳನ್ನಾಗಿ ಮನೋಹರಿಗಿಂತಲೂ ರೋಚಕವನ್ನಾಗಿ ಮಾಡುತ್ತಿತ್ತು.
ಯಮುನಿಗೆ ಬಟ್ಟಿ, ಚಪ್ಪಲಿ ಕೊಡಿಸಿ ಅವರ ಅಕ್ಕಂದಿರಿಗೆ ಏನೂ ತಕಂಡಿಲ್ಲ ಅಂದ್ರೆ ರೊಳ್ಳಿ ತಗಿತಾರೆ ಅಂದುಕಂಡು ಅವರಿಗೆ ಬ್ರೆಡ್ಡಿನ ಪೌಂಡು, ನಾಲ್ಕು ಕುರ್ ಕುರೆ ಪಾಕೇಟು ಬ್ಯಾಗಿಗೆ ಹಾಕಿಕೊಂಡಳು. ಹಿರಿ ಮಗನಿಗೆ ಆದ ಐದು ಹೆಣ್ಣುಮಕ್ಕಳನ್ನಾದ್ರೂ ಭೇಷಿ ಓದಿಸ್ಬೇಕು. ಮಗನಿಗೆ ಗಂಡುಮಗನ ಆಸೆಬಿಡಿಸಿ ಸೊಸಿಗೆ ಆಪರೇಷನ್ ಮಾಡಿಸ್ಬಕು… ಯಾರ್ದ ಆದ್ರೂ ಕೂಸು ಕೂಸಾ ಅಲ್ಲೇನು? ಎಂದೆಲ್ಲ ಯೋಚಿಸುತ್ತ ಸರ್ಕಲ್ ಮುಟ್ಟುವುದರೊಳಗೆ ಖಾಲಿ ಮೆಟಡೋರ್ ನಿಂತಿತ್ತು. ‘ ಬೇ ನಾನ್ ಕಿಟಕಿ ಹತ್ರ ಕುಂದುರ್ತಿನ…’ ಎಂದು ರಾಗವೆಳೆದಳು. ‘ನನಿಗೆ ವಾಂತಿ ಆಕ್ಕೆತಿ. ನನ್ ಮ್ಯಾಗ್ ಕುಂದಿರಿಸಿಕ್ಯಾಂತಿನಂತೆ. ಇಕ ಸೀಟಿಡಿ ವೋಗು’ ಎಂದು ಮುಂದೆ ಬಿಟ್ಟಳು. ಥಟ್ಟನೆ ಗಂಡನ ನೆನಪಾಯಿತು. ನೆನಪಾದವಳೇ ಒಂದು ಕ್ಷಣ ಬೇಸರ ಮುತ್ತಿಕೊಂಡು ಆಕಾಶದ ಮಳೆಮೋಡಗಳಂತೆ ಅವಳ ಮುಖ ಕಪ್ಪಿಟ್ಟಿತು… ಅಲ್ಲೇ ಬಸ್ಟಾಪಿನ ಪಕ್ಕ ಇದ್ದ ಪಾನ್ ಶಾಪಿನಲ್ಲಿ ಗಂಡನಿಗಿಷ್ಟವಾದ ಅಂಬಾಡಿ ಎಲಿ ಕೊಂಡುಕೊಂಡು ತನ್ನ ಕುಣಿಕೆ ಚೀಲದಲ್ಲಿ ಇಟ್ಟುಕೊಂಡಳು. ಭಾರವಾದ ಮನಸ್ಸಿನಿಂದ ಮೆಟಡಾರ್ ಹತ್ತಿದಾಗ ಯಮುನಿ ಕಿಟಕಿ ಪಕ್ಕವೇ ಝ್ಹ್ಯಾಂಡ ಊರಿದ್ದಳು. ಮುನ್ನಿ ಹತ್ತುತ್ತಲೇ ಸೀಟಿನ ಬಳಿ ಹೋಗಿ ‘ಸುಬ್ಬಿ ಅಂದ್ರ ಓ ಅಂತಿ ನೋಡ್’ ಎಂದು ಸ್ವಾಟಿಗೆ ತಿವಿದು ಅವಳ ಪಕ್ಕವೇ ಕೂತಳು. ಸೀಟಿನ ಹಿಂದಿನ ಕಂಬಿಗೆ ಆತುಕೊಂಡು ಹೊರಗೆ ನೋಡಿದಳು. ಅವಳ ಬಲಗಣ್ಣು ಹೊಡೆದುಕೊಳ್ಳುತ್ತಿತ್ತು. ಹೊಟ್ಟೆಯಲ್ಲಿ ಯಾವುದೋ ಸಂಕಟ ಹಿಂಡುತ್ತಿತ್ತು.
ಮೆಟಡಾರ್ ಬೊಮ್ಮನಹಳ್ಳಿ ಬಿಟ್ಟಿತು. ನೂರು ಮೀಟರ್ ದೂರ ಸಾಗುವುದೇ ತಡ ಮಳೆ ಹನಿಗಳು ಬೀಳುವುದಕ್ಕೆ ಸುರುವಾದವು. ಮಳೆಹನಿಗಳು ಸಾಲಿ ಬಿಟ್ಟ ಮೇಲೆ ಮನಿಗೋಡಿ ಹೋಗುವ ಮಕ್ಕಳಂತೆ ರಭಸದಿಂದ ಕಿಟಕಿಯ ಗಾಜಿಗೆ ಢಿಕ್ಕಿ ಹೊಡೆಯುತ್ತಿದ್ದವು. ರೋಡು, ಮೆಟಡಾರ್ ಎಲ್ಲವು ತೋಯಿಸಿಕೊಂಡು ಹಗುರಾಗಿ ಮಣ್ಣ ಗಂಧವನ್ನು ಹೊತ್ತು ತರುತ್ತಿದ್ದ ಗಾಳಿಯನ್ನು ಭರಪೂರವೆಂಬಂತೆ ಒಮ್ಮೆ ಒಳಗೆಳೆದುಕೊಂಡಳು. ದಾರಿ ಸಾಗಿದಂತೆ ಬರುತ್ತಿದ್ದ ತಂಪು ಗಾಳಿಗೆ ನಿದ್ದೆ ಹೋದಳು.
ಹುಟ್ಟಿದಾಗಿನಿಂದ ರೊಟ್ಟಿ ಬಡಿ, ಗಂಡನ ಪಡಿ, ಮಕ್ಕಳ ಹಡಿ ಕೊನಿಗೊಂದಿನ ಎಲ್ಲಾ ಬಿಟ್ಟು ಮಣ್ಣಿಗೆ ನಡಿ ಎಂಬಂತಿದ್ದ ತನ್ನ ಬದುಕು ಹಾದು ಹೋಯಿತು. ಕನಸಿನಲ್ಲಿ ತನ್ನ ಗಂಡ ಸರಿಹೋದಂತೆ, ಮಗಳು ಅಳಿಯರ ಜಗಳ ತಹಬಂದಿಗೆ ಬಂದಂತೆ, ಕೊನೇಮಗ ದೊಡ್ಡ ಶ್ರೀಮಂತ ಆದಂತೆ, ಮಾದೇವಿಗೆ ಮಾದಪ್ಪ ಸಿಕ್ಕುಬಿಟ್ಟಂತೆ, ಮನೋಹರಿ ನಿರಪರಾಧಿ ಎಂದು ಸಾಬೀತಾದಂತೆ, ಡಾಕ್ರಮ್ಮನ ದೊಡ್ಡಾಸ್ಪತ್ರೆಗೆ ಮತ್ತೆ ಮೊದಲಿನಂತೆ ಜನ ಬರಲು ಶುರುವಾದಂತೆ, ಗಾವಿತ್ರಿ ಕೆಲಸಕ್ಕೆ ಹೋಗಲು ಶುರುಮಾಡಿಕೊಂಡಂತೆ ಎಲ್ಲರ ಬದುಕು ಹಸನಾದಂತೆ ಕನಸು ಕಾಣುತ್ತಿರುವಾಗ ಯಮುನಿಗೆ ‘ಯವ್ವಬೆ ಊರು ಬಂತ್ ಎದ್ದಾಳ… ಬೆ ಯುವ…’ ಜಗ್ಗಾಡಿದಂತೆ ಅನಿಸಿದಾಗ ಎಚ್ಚರವಾಯಿತು. ‘ಊರು ಇಷ್ಟ್ ಜಲ್ದಿ ಬಂತಾ?’ ಎಂದು ತುಸು ಬೇಸರದಲ್ಲಿ ಗಾಳಿಗೆ ಕೆದರಿದ್ದ ಅವಳ ಕೂದಲನ್ನ ಹಿಂದೆ ಮಾಡಿ ಕೆಳಗಿಳಿಯುವ ಮುಂಚೆ ಮೆಟಡಾರ್ ಸೀಟುಗಳನ್ನು ನೋಡಿದಳು. ಅಲ್ಲಿನ್ನೂ ಮನೋಹರಿ, ಮಾದೇವಿ, ಗಾಯಿತ್ರಿ, ಮಗಳು, ಸೊಸಿ, ಐದು ಮಂದಿ ಹೆಣ್ಣು ಮೊಮ್ಮಕ್ಕಳು, ಡಾಕ್ಟ್ರಮ್ಮ ಎಲ್ಲರೂ ಕೂತಂತೆ ಕಂಡಿತು. ತಾನು ಯಾವುದೋ ಭ್ರಮೆಯಲ್ಲಿದ್ದಂತೆ ಭಾಸವಾಗತೊಡಗಿತು. ಇಳಿದ ಕೂಡಲೇ ಅವಳ ಮನಿ ಕಾಣುತ್ತಿತ್ತು. ಜನರು ನೆರೆದಿದ್ದರು. ಮನೆ ಮುಂದೆ ಪೆಂಡಾಲು ಹಾಕುತ್ತಿದ್ದರು. ಮುನ್ನಿಗೆ ಭಯವಾಗಹತ್ತಿತು. ಇವಳನ್ನ ಕಂಡ ಉಳಿದ ನಾಲ್ವರು ಮೊಮ್ಮಕ್ಕಳು ಕಣ್ಣೊರೆಸಿಕೊಳ್ಳುತ್ತಾ ಇವಳತ್ತಲೇ ಓಡಿ ಬರತೊಡಗಿದರು. ಮುನ್ನಿ ಒಮ್ಮೆ ಮೆಟಡೋರನ್ನ ನೋಡಿದಳು. ಸೀಟುಗಳು ಖಾಲಿಯಾಗಿದ್ದವು. ಬಂದವರ ಮುಂದೆಲ್ಲ ಆಡಿಂಗನ ಮಾಡಿಕೊಂಡು ಅಳುವಷ್ಟು ಶಕ್ತಿ ತನಗಿಲ್ಲವೇ ಇಲ್ಲ… ಅದೇ ಭಯದಲ್ಲಿ ಭಾರವಾದ ಹೆಜ್ಜೆ ಹಾಕತೊಡಗಿದಳು. ಕಾಲುಗಳು ನಡುಗುತ್ತಿದ್ದವು. ಅವಳ ಮನೆಯಿಂದ ಆಗಲೇ ಜನರ ಅಳು ಶುರುವಾಗಿತ್ತು. ಮುಂದೆ ಓಡಿ ಹೋಗುತ್ತಿದ್ದ ಯಮುನಿಯ ಹೈ ಹೀಲ್ಸಿನ ಟಕು ಟಕು ಶಬ್ದ ಸ್ಪಷ್ಟವಾಗಿ ಕೇಳಿಸುತ್ತಿತ್ತು…
–
ವೃತ್ತಿಯಿಂದ ಅಧ್ಯಾಪಕ. ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಆಸಕ್ತಿಯ ವಿಷಯಗಳು. ಕಥೆ ಮತ್ತು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.