ಸೇವಿಂಗ್ ಸಫಾ ಅನುವಾದ : ಪುಸ್ತಕ ಪರಿಚಯ

“ಡೆಸರ್ಟ್ ಫ್ಲವರ್” ಕೃತಿಯ ಮೂಲಕ ಹಾಗೂ ತನ್ನ ಮಾಡೆಲಿಂಗ್ ನ ಪ್ರಸಿದ್ಧಿಯನ್ನು ಬಳಸಿ ಮಹಿಳೆಯರ ಒಳಿತಿಗೋಸ್ಕರ ದುಡಿದ ಸೊಮಾಲಿಯಾದ ಮಾಡೆಲ್ ವಾರಿಸ್ ಡಿರಿ ಯವರ ಪುಸ್ತಕ “Saving Safa” ಕನ್ನಡಕ್ಕೆ ಅನುವಾದವಾಗಿದೆ. ಈ ಬಹುಚರ್ಚಿತ ಮತ್ತು ಅಪರೂಪದ ಪುಸ್ತಕದ ಕುರಿತು ಸೌಮ್ಯಾ ಕೋಡೂರು ಪರಿಚಯಾತ್ಮಕವಾಗಿ ಬರೆದಿದ್ದಾರೆ. 

“ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ ;
ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ ;
ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ ;
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ !”

ಹೆಣ್ಣು – ಹೊನ್ನು – ಮಣ್ಣುಗಳನ್ನು ಕುರಿತಂತೆ ಅಲ್ಲಮನ ವಿಚಾರವಿದು. ಆದರೆ ಈ ಮೂರೂ ವಿಷಯಗಳು ಎಲ್ಲಾ ಕಾಲ – ದೇಶಗಳಲ್ಲೂ ಹೆಣ್ಣು’ಚಂಚಲತೆ’ಗೆ ರೂಪಕವೆಂಬಂತೆ ‘ವ್ಯವಸ್ಥೆ’ಯೊಂದರಿಂದ ಚಿತ್ರಿಸಲ್ಪಟ್ಟಿರುವುದು ಹೊಸದೇನಲ್ಲ. ಹಾಗೆಯೇ ಇವುಗಳನ್ನು ವಶಪಡಿಸಿಕೊಳ್ಳಲೋ ಅಥವಾ ತನ್ನ ಅಂಕೆಯಲ್ಲಿರಿಸಿಕೊಳ್ಳಲೋ ಒಂದಲ್ಲಾ ಒಂದು ರೀತ್ಯಾ ಪ್ರಯತ್ನಗಳು ಅವ್ಯಾಹತವಾಗಿ ನಡೆದುಬರುತ್ತಿರುವುದು ಸಹ ಈಗಾಗಲೇ ಚರ್ಚೆಗೊಳಪಟ್ಟಿರುವ ವಿಷಯಗಳೇ. ಹಾಗೆ ನೋಡಿದರೆ ಮಾನವ ನಾಗರಿಕತೆಗಳ ಏಳು ಬೀಳಿನಲ್ಲಿ ನಿರಂತರವಾಗಿ ಶೋಷಣೆಗೆ ತುತ್ತಾದವರು ದಲಿತರು ಹಾಗೂ ಮಹಿಳೆಯರೇ. ಒಂದರ್ಥದಲ್ಲಿ ಹೆಣ್ಣು ಸಹ ದಲಿತಳೇ ಎನ್ನುವುದು ಅಷ್ಟೇ ಸತ್ಯ.

ಹೆಣ್ಣಿನ ಮೇಲಿನ ದೌರ್ಜನ್ಯಗಳು, ಶೋಷಣೆಗಳು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಪದ್ಧತಿಯ ಹೆಸರಿನಲ್ಲಿ, ರೂಢಿ-ಸಂಪ್ರದಾಯಗಳ ಸೋಗಿನಲ್ಲಿ ಸಂಬಂಧಪಟ್ಟ ಸಮುದಾಯಗಳ ‘ಅನನ್ಯತೆ’ಯಾಗಿ ಇಂದಿಗೂ ಆಚರಣೆಯಲ್ಲಿವೆ. (ಬಹುತೇಕ ಸಂಪ್ರದಾಯಗಳು ಹೆಣ್ಣಿನಿಂದಲೇ ಜೀವಂತವಾಗಿರುವುದು ಎಂಬುದು ಬೇರೆ ಬಗೆಯದೇ ಚರ್ಚೆ…) ಅಂತಹ ಶೋಷಣೆಯ ಭಾಗವಾಗಿ ಆಫ್ರಿಕಾದ ಸೋಮಾಲಿಯಾ, ಇಥಿಯೋಪಿಯಾ ಮೊದಲಾದ ದೇಶಗಳಲ್ಲಿ ರೂಢಿಯಲ್ಲಿರುವ ಒಂದು ಆಚರಣೆ “ಯೋನಿ ಛೇದನ ಕ್ರಿಯೆ” (Female Genital Mutilation – FGM).

ಈ ಅಮಾನವೀಯ, ಅವೈಜ್ಞಾನಿಕ ಕ್ರಿಯೆಯನ್ನು “Desert Flower”ಎಂಬ ತನ್ನ ಆತ್ಮಕಥನದ ಮೂಲಕ ಜಗತ್ತಿನೆದುರು ನಿರ್ಭೀಡೆಯಿಂದ ಬಿಚ್ಚಿಟ್ಟವಳು ಸೋಮಾಲಿಯನ್ ನ ‘ಡಾರೋಡ್’ ಬುಡಕಟ್ಟಿಗೆ ಸೇರಿದ ವಾರಿಸ್ ಡಿರೆ ಎಂಬ ದಿಟ್ಟ ಹೆಣ್ಣು.

1998ರಲ್ಲಿ ಬಿಡುಗಡೆಯಾದ ಈ ಕೃತಿ ಜಗತ್ತಿನ 85ಕ್ಕೂ ಅಧಿಕ ಭಾಷೆಗಳಿಗೆ ಅನುವಾದವಾಗಿ, 2009ರಲ್ಲಿ Desert Flower ಎಂಬ ಹೆಸರಲ್ಲೇ ಚಲನಚಿತ್ರವಾಗಿ  ಹಾಲಿವುಡ್ ನ ಬೃಹತ್ ಪರದೆಯ ಮೇಲೆ ಜನಪ್ರಿಯತೆ ಕಂಡದ್ದು ಇಂದು ಇತಿಹಾಸ. ”ಮರುಭೂಮಿಯ ಹೂ” ಎಂಬ ಶೀರ್ಷಿಕೆಯಡಿಯಲ್ಲಿ ಡಾ. ಎನ್.ಜಗದೀಶ್ ಕೊಪ್ಪ ಈ ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೂ ಸಹ 2013ರಲ್ಲಿ ಪರಿಚಯಿಸಿದ್ದಾರೆ.

ಸ್ವತಃ ‘ಯೋನಿಛೇದನ’ಕ್ಕೆ ಒಳಗಾಗಿ, 60ವರ್ಷದ ವೃದ್ಧನೊಂದಿಗೆ ವಧುದಕ್ಷಿಣೆಯ ಕಾರಣಕ್ಕಾಗಿ ಹೆತ್ತವರು ಆಕೆಯ ಮದುವೆಗೆ ಮುಂದಾದಾಗ ಅದನ್ನು ನಿರಾಕರಿಸಿ ಹುಟ್ಟಿದೂರಿನಿಂದ ದೂರವಾಗಿ ವಾರಿಸ್ ಯೂರೋಪ್ ಸೇರುತ್ತಾಳೆ. ಮುಂದೆ ಜನಪ್ರಿಯ ಮಾಡೆಲ್ ಆಗಿ , ನಟಿಯಾಗಿ, ಬರಹಗಾರ್ತಿಯಾಗಿ, ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ ಬೆಳೆದು ‘Desert Flower Foundation’ ಕಟ್ಟಿ ಬೆಳೆಸಿ, ವಿಶ್ವಸಂಸ್ಥೆಯ ನೆರವಿನೊಂದಿಗೆ FGM ನ ನಿರ್ಮೂಲನೆಗೆ ಟೊಂಕಕಟ್ಟಿ ನಿಂತ ಪರಿ ಮೈನವಿರೇಳಿಸುವಂಥದ್ದು. ಇವೆಲ್ಲಾ ವಿವರಗಳು ಆಕೆಯ ‘Desert Flower’ ಎಂಬ ಆತ್ಮಕತೆಯಲ್ಲಿವೆ.

ವಾರಿಸ್ ಕೇವಲ ಜನಪ್ರಿಯತೆಗೆ ಜೋತುಬಿದ್ದು ತನ್ನ ಆತ್ಮಕಥೆಯನ್ನಾಗಲೀ ಅಥವಾ ಚಲನಚಿತ್ರ ನಿರ್ಮಾಣಕ್ಕಾಗಲೀ ಮುಂದಾಗಲಿಲ್ಲ. ಜನಪ್ರಿಯ ಮಾಧ್ಯಮವೊಂದರ ಮೂಲಕ FGM ನಂತಹ ಹೇಯ,ಅಮಾನವೀಯ ಆಚರಣೆಯನ್ನು ಜಗತ್ತಿನೆದುರು ತೆರೆದಿಟ್ಟು ಅದರ ಸಂಪೂರ್ಣ ನಿರ್ಮೂಲನೆಗಾಗಿ ತನ್ನ ಬದುಕನ್ನೇ ವಾರಿಸ್ ಇಡಿಯಾಗಿ ಮೀಸಲಿಟ್ಟಳು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಸ್ವತಃ ಈ ಕ್ರಿಯೆಗೊಳಪಟ್ಟು ಆ ನರಕದಿಂದ ಪಾರಾಗಿ ಮಾಡೆಲ್ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿದ (ಒಂದು ಕಾಲಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ರೂಪದರ್ಶಿ ಎಂಬುದು ಆಕೆಗಿದ್ದ ಬೇಡಿಕೆಗೆ ಸಾಕ್ಷಿ) ಆಕೆಗೆ ತನ್ನೊಬ್ಬಳ ಬಿಡುಗಡೆ ಮಾತ್ರ ಬೇಕಿರಲಿಲ್ಲ. ತಾನು ಅನುಭವಿಸಿದ ನೋವನ್ನೇ ಉಂಡು ಪ್ರತಿನಿತ್ಯ ಪ್ರಾಣಕಳೆದುಕೊಳ್ಳುತ್ತಿರುವ ತನ್ನ ಪರಿಸರದ ಹಾಗೂ ಪ್ರಪಂಚದ ಬೇರೆ ಭಾಗಗಳಲ್ಲೂ ನರಳುತ್ತಿರುವ ಅಂತಹ ‘ಹೆಣ್ಣು ಸಮುದಾಯ’ವೊಂದರ ಸಂಪೂರ್ಣ ಬಿಡುಗಡೆಯೇ ಆಕೆಯ ಮುಖ್ಯ ಕಾಳಜಿಯಾಗಿತ್ತು.

ಬಹುಶಃ ತನ್ನಿಂದ ಇದು ಸಾಧ್ಯವಾಗಬಹುದು ಎಂಬುದು ಆಕೆಗೆ ತಾನು ಮನೆ ಮಠ ಬಿಟ್ಟು ಗುರಿಯೇ ಇಲ್ಲದೆ ಹೊರಟು ನಿಂತಾಗಲೂ ಅನಿಸಿರಲಿಕ್ಕಿಲ್ಲ. ಆದರೆ ಭವಿಷ್ಯದಲ್ಲಿ ವಾರಿಸ್ ‘Desert Flower Foundation’ ನ್ನು ಸ್ಥಾಪಿಸಿ ಇಟ್ಟ ದಿಟ್ಟ ಹೆಜ್ಜೆ ಆಕೆಯ ನಿರೀಕ್ಷೆಗೂ ಮೀರಿ ಸಾಕಾರಗೊಂಡಿತ್ತು. ಈ ಪಯಣದಲ್ಲಿ ಆಕೆ ಅನುಭವಿಸಿದ ಅವಮಾನ, ನಿಂದನೆ, ವೈಯಕ್ತಿಕ ಬದುಕಿನ ಸೋಲುಗಳು, ಕೊಲೆಬೆದರಿಕೆಗಳು – ಅವ್ಯಾವುದನ್ನೂ ಆಕೆ ಲೆಕ್ಕಿಸದೆ ಮುನ್ನಡೆದದ್ದು “ಆನೆ ನಡೆದದ್ದೇ ಹಾದಿ” ಎಂಬಂತೆ.

ತನ್ನ ಜೀವನಾಧಾರಿತ “Desert Flower” ಚಿತ್ರ(2009)ದಲ್ಲಿ ತನ್ನದೇ ಬಾಲ್ಯದ (ವಾರಿಸ್ ಳ 4ನೇ ವಯಸ್ಸಿನ) ಪಾತ್ರವನ್ನು ನಿರ್ವಹಿಸಿದ ಜಿಬೌಟಿಯ “ಸಫಾ ನೂರ್ ಇಡ್ರಿಸ್” (ಈ ಕೃತಿ ರಚನೆಯ ಸಂದರ್ಭದಲ್ಲಿ ಸಫಾಳಿಗೆ 7 ವರ್ಷ)ಳನ್ನು ಆಕೆಯ ಪೋಷಕರು ತಾವು Desert Flower Foundation ಸಂಸ್ಥೆಯೊಂದಿಗೆ ಮಾಡಿಕೊಂಡ ‘ಒಪ್ಪಂದ’ವನ್ನು ಮುರಿದು ‘ಯೋನಿ ಛೇಧನ’ದಂತಹ ಭೀಕರ ಕ್ರಿಯೆಗೆ ಒಳಪಡಿಸಲು ಮುಂದಾದಾಗ ಆಕೆಯನ್ನು ಸೇಫ್ ಮಾಡಲು ಹಾಗೂ ಅವಳ ಕುಟುಂಬದವರ ಮನಪರಿವರ್ತನೆಗಾಗಿ ವಾರಿಸ್ ಮಾನಸಿಕವಾಗಿ ಹೆಣಗಾಡುವ ಕತೆಯೇ ‘ಸಫಾ’ ಕೃತಿಯ ವಸ್ತು.

“ಸಫಾ ಒಬ್ಬಳನ್ನು ಈ ಕ್ರಿಯೆಯಿಂದ ಪಾರು ಮಾಡಿದರೆ ಎಲ್ಲಾ ಹೆಣ್ಣುಮಕ್ಕಳನ್ನು ತಾನು ಉಳಿಸಿದಂತಾಗುತ್ತದೆಯೇ?” ಎಂಬ ಪ್ರಶ್ನೆ ಸಾಕಷ್ಟು ಬಾರಿ ವಾರಿಸ್ ಳನ್ನು ತಾಕಲಾಟಕ್ಕೆ ಒಳಗು ಮಾಡಿದ್ದಿದೆ. ಅಂತಹ ಸಂದರ್ಭದಲ್ಲಿ ಅವಳ ಸ್ನೇಹಿತೆ ಜೋನಾ ಹೇಳುವ – “ಒಂದು ಜೀವವನ್ನು ಉಳಿಸುವ ಕಾರ್ಯವು ಇಡೀ ಮನುಕಲವನ್ನೇ ಉಳಿಸುವುದಕ್ಕೆ ಸಮಾನ ವಾರಿಸ್” ಎಂಬ ಮಾತುಗಳು ಆಕೆಯನ್ನು ಮತ್ತೆ ಕ್ರಿಯಾಶೀಲಳನ್ನಾಗಿಸಿ ಪ್ರಚಂಡ ಆತ್ಮಶಕ್ತಿಯೊಂದಿಗೆ ಕಾರ್ಯಪ್ರವೃತ್ತಳನ್ನಾಗುವಂತೆ ಮಾಡುತ್ತವೆ.

ಜೋನಾಳ ಮಾತಿನಿಂದ ವಾರಿಸ್ ಪ್ರೇರಣೆಗೊಳ್ಳುವುದು ಕೃತಿಯ ಕೊನೆಯವರೆಗೂ (ವೈಯಕ್ತಿಕವಾಗಿ ಆಕೆಯ ಬದುಕಿನುದ್ದಕ್ಕೂ) ಕಾಣುತ್ತದೆ. ತನ್ನದೇ ಮಗಳಾದ ಸಫಾಳನ್ನು FGM ಗೆ ಬಲಿಕೊಡದಂತೆ ಸಫಾಳ ತಂದೆ ಇಡ್ರಿಸ್ ನ ಮನವೊಲಿಸುವ ಸಂದರ್ಭದಲ್ಲಿ ಕಾಕತಾಳೀಯವೆಂಬಂತೆ ಘಟಿಸುವ (ಜೀರುಂಡೆಯೊಂದನ್ನು ವಾರಿಸ್ ರಕ್ಷಿಸುವ) ಘಟನೆಯಲ್ಲಿಯೂ ಆಕೆಯ ಕಾಳಜಿ ಇಡ್ರಿಸ್ ನಿಗೆ ಮನವರಿಕೆಯಾಗಿ ಆತ ಹೀಗೆ ಹೇಳುತ್ತಾನೆ. “ನೀನು ಎಲ್ಲರಿಗೂ ನೆರವಾಗುತ್ತಿಯಲ್ಲವೇ, ಅಷ್ಟಕ್ಕೂ ಅದೊಂದು ಯಕಃಶ್ಚಿತ್ ಹುಳುವಾಗಿತ್ತು”.

ಅದಕ್ಕೆ ವಾರಿಸ್ ಳ ಉತ್ತರ – “ಜೀವನವೆಂಬುದು ಅಮೂಲ್ಯವಾದದ್ದು. ಅದನ್ನು ನಾವು ಗೌರವಿಸದಿದ್ದರೆ ಸೃಷ್ಟಿಯ ಪುಟ್ಟ ವ್ಯವಸ್ಥೆಯೊಂದು ಅಲುಗಾಡಿಹೋಗುತ್ತದೆ. ಪ್ರಾಣಹೋಗುವಂತೆ ಕೈಕಾಲುಗಳನ್ನು ಬಡಿಯುತ್ತಿದ್ದರೂ ಆ ಹುಳಕ್ಕೆ ಸಾಯುವ ಇಚ್ಚೆಯೇನೂ ಇರಲಿಲ್ಲ ಇಡ್ರಿಸ್. ಉಸಿರಾಡುತ್ತಿರುವ ಯಾವ ಜೀವಿಯೂ ಸಾಯಲಾಗಲೀ, ದುಃಖದಿಂದಿರಲಾಗಲೀ ಬಯಸುವುದಿಲ್ಲ. ವಿಷಯವು ಅದೆಷ್ಟು ಸರಳವಾಗಿದೆ ನೋಡು. ನನ್ನ ಹೋರಾಟವೂ ಈ ಉದ್ಧೇಶವನ್ನಿಟ್ಟುಕೊಂಡೇ ಶುರುವಾಗಿದ್ದು. ನಾನು ಮಾಡುತ್ತಿರುವುದೂ ಇದನ್ನೇ ಇಡ್ರಿಸ್. ಏನನ್ನೂ ಅರಿಯದ ಮುಗ್ಧ ಲಕ್ಷಾಂತರ ಹೆಣ್ಣುಮಕ್ಕಳು ಈ ಯೋನಿಛೇದನವೆಂಬ ಸಂಪ್ರದಾಯದ ಕ್ರೌರ್ಯಕ್ಕೆ ಸಿಕ್ಕಿ ಹೇಳಹೆಸರಿಲ್ಲದಂತೆ ಕೊನೆಯಾಗುತ್ತಿದ್ದಾರೆ. ತಮ್ಮದಲ್ಲದ ತಪ್ಪಿಗೆ, ಧರ್ಮ-ಕಟ್ಟುಪಾಡುಗಳ ಹೆಸರಿನಲ್ಲಿ ಅದೆಷ್ಟೋ ಮಕ್ಕಳು ದುರ್ಮರಣಕ್ಕೀಡಾಗುವುದಲ್ಲದೆ, ಸಾಯುವವರೆಗೂ ನೋವಿನಿಂದ ನರಳುತ್ತಲೇ ಇದ್ದಾರೆ. ಯಾಕೆಂದು ನನಗೆ ಹೇಳುತ್ತಿಯಾ ಇಡ್ರಿಸ್ ?” (ಪುಟ 265, 266)

ಯೋನಿಛೇದನ ಹಾಗೂ ಇಂಥದ್ದೇ ಅನೇಕ ಆಚರಣೆಗಳನ್ನು ತಮ್ಮ ಧರ್ಮವೇ ವಿಧಿಸಿದ ಪವಿತ್ರಕಾರ್ಯವೆಂದು ನಂಬಿದ ಇಡ್ರಿಸ್ ನಂತಹ ಲಕ್ಷಾಂತರ ಮಂದಿ ನಮ್ಮ ನಡುವೆಯೇ ಇದ್ದಾರೆ. ತನ್ನ ಮಗಳ ಯೋನಿಛೇದನದ ನಾಟಕೀಯ ರೂಪವನ್ನು ತೆರೆಯ ಮೇಲೆ ನೋಡಿದಾಗಲೇ ಆತನಿಗೆ ಆ ಪದ್ಧತಿಯ ಅಮಾನುಷತೆ ಅರ್ಥವಾದದ್ದು. ಇಡ್ರಿಸ್ ನ ತಾಯಿಯ ಸಂಪಾದನೆ ಯೋನಿಛೇದನದಿಂದಲೇ ಆಗುತ್ತಿತ್ತು ಎಂಬುದು ಆತನಿಗೆ ಗೊತ್ತಿದ್ದರೂ ಅದು ಇಷ್ಟು ಅಮಾನುಷವಾದದ್ದು ಎಂದು ಗೊತ್ತಾದದ್ದು ತನ್ನ ಮಗಳ ‘ಅಭಿನಯ’ ನೋಡಿಯೇ ಎನ್ನುವುದು ಸೋಜಿಗವನ್ನುಂಟುಮಾಡುತ್ತದೆ.

ತಾನು ಇದುವರೆಗೂ ಬದುಕು ನಡೆಸಿದ್ದು ತನ್ನ ತಾಯಿಯ ಇಂತಹ ಸಂಪಾದನೆಯ ಹಣದಲ್ಲಿ ಎನಿಸಿದಾಗ ಹೇಗಾಗಿರಬೇಡ ಆತನಿಗೆ? ತನ್ನ ಹೆಂಡತಿಯೂ ಇದೇ ಪದ್ಧತಿಗೊಳಗಾದವಳಾದರೂ ಒಮ್ಮೆಯೂ ಆಕೆಯ ನೋವನ್ನು ತಾನೆಂದೂ ಕೇಳಿದವನಲ್ಲ ಎಂಬುದು ಇಡ್ರಿಸ್ ನಿಗೆ ನೆನಪಾಗಿ ತನ್ನ ಪ್ರೀತಿಯ ‘ಚೆರಿ’ಯನ್ನು ನೆನೆದು ದುಃಖಿಸುತ್ತಾನೆ, ತನ್ನ ಬಗ್ಗೆಯೇ ಅಸಹ್ಯ ಪಡುತ್ತಾನೆ.

ಕೊನೆಗೆ ತಾನೂ ಈ ಆಚರಣೆಯ ವಿರುದ್ಧ ತನ್ನ ಮಗಳ ಮೂಲಕವೇ ಅರಿವು ಮೂಢಿಸಲು Desert Flower Foundationಗೆ ನೆರವಾಗುವ ಇಡ್ರಿಸ್  ನ ಮನಃಪರಿವರ್ತನೆಯೊಂದಿಗೆ ಕಾದಂಬರಿ ಅಂತ್ಯವಾಗುತ್ತದೆ.

                                                            ———————

ಆದರೆ ಹೆಣ್ಣಿನ ‘ಪಾವಿತ್ರ್ಯತೆ’ ಆಕೆಯ ಯೋನಿಯಲ್ಲಿ ಅಡಗಿದೆ ಎಂದೇ ಭಾವಿಸಿರುವ ಸಮುದಾಯ, ವ್ಯವಸ್ಥೆಗಳು ಅದನ್ನು ಕಾಪಾಡುವ ಸಲುವಾಗಿ ಹೆಣ್ಣಿನ ಮೇಲೆ ಹೇರುವ ಕ್ರೂರ ಅಮಾನವೀಯ ಆಚರಣೆಗಳು ಇಂದಿಗೂ ಜೀವಂತವಾಗಿರುವುದು ನಾಗರಿಕ ಸಮಾಜ ಗಂಭೀರವಾಗಿ ಚಿಂತಿಸಬೇಕಿರುವ ವಿಷಯ. ಅತ್ಯಾಚಾರದಂತಹ ವಿಷಯಗಳು ಸಹ ಇದರ ವ್ಯಾಪ್ತಿಯಲ್ಲೇ ಬರುತ್ತವೆ.

ಸೋಮಾಲಿಯಾ, ಇಥಿಯೋಪಿಯ, ಇರಿಟ್ರಿಯಾದಂತಹ ರಾಷ್ಟ್ರಗಳಲ್ಲಿ ಮುಸಲ್ಮಾನ ಹಾಗೂ ಅಲ್ಲಲ್ಲಿ ಕ್ರೈಸ್ತ ಸಮುದಾಯಗಳಲ್ಲಿ ”ಹೆಣ್ಣೊಬ್ಬಳು ತನ್ನ ವಿವಾಹವಾಗುವವರೆಗೂ ಕನ್ಯೆಯಾಗಿಯೇ ಇರಬೇಕು ಮತ್ತು ಆ ಮೂಲಕವಾಗಿ ತನ್ನ ‘ಪಾವಿತ್ರ್ಯತೆ’ಯನ್ನು ಮುಂದೆ ಬರಲಿರುವ ತನ್ನ ಪತಿಗಾಗಿ ಉಳಿಸಿಕೊಳ್ಳಬೇಕು’ ಎಂಬ ಉದ್ದೇಶದಿಂದಾಗಿಯೇ ಆಚರಣೆಯಲ್ಲಿರುವ ಪದ್ಧತಿ ಈ “ಯೋನಿ ಛೇದನ”.

ಈ ಕ್ರಿಯೆಯಲ್ಲಿ ಅನೇಕ ಬಗೆಗಳಿದ್ದು ಸಫಾ ವಾಸವಿದ್ದ  ಬಲ್ಬಾಲಾದಲ್ಲಿ ಆಚರಣೆಯಲ್ಲಿದ್ದ ‘ಫರೌನಿಕ್ ಮ್ಯುಟಿಲೇಷನ್’ FGMನಲ್ಲೇ ಅತೀ ಭಯಂಕರವಾದ ವಿಧಾನ. ಹಳೆಯ ತುಕ್ಕು ಹಿಡಿದ ರೇಜರ್ ಬ್ಲೇಡಿನಿಂದ ಹೆಣ್ಣಿನ ಗುಪ್ತಾಂಗದ ‘ಕ್ಲಿಟೋರಸ್’ ಎಂಬ ಬಹುಮುಖ್ಯವಾದ ಭಾಗವನ್ನು ಅನಸ್ತೇಸಿಯಾದ ಸಹಾಯವಿಲ್ಲದೆ ಕತ್ತರಿಸಿ ಹಾಕಿ, ಪೊದೆಗಳಿಂದ ತೆಗೆದ ಮುಳ್ಳುಗಳಿಂದ ಹಸಿಯಾದ ಗಾಯವನ್ನು ಕೇವಲ ಮೂತ್ರ ವಿಸರ್ಜನೆ ಹಾಗೂ ಮಾಸಿಕ ಋತುಸ್ರಾವಕ್ಕೆ ಅನುಕೂಲವಾಗುವಷ್ಟು ಮಾತ್ರ ಬಿಟ್ಟು ಹೊಲಿಗೆ ಹಾಕುವ ಅಮಾನುಷ ಪದ್ಧತಿ.

ಈ ಅವೈಜ್ಞಾನಿಕ ಕ್ರಿಯೆಯಲ್ಲಿ ಬದುಕುಳಿದವರು ಮಾತ್ರ ನಿಜಕ್ಕೂ ಆ ಜನರ ನಂಬಿಕೆಯ ಪ್ರಕಾರವೇ ಹೇಳುವುದಾದರೆ “ದೇವರಿಗೆ ಪ್ರಿಯರಾದವರು” ಎಂಬುದು ಅಕ್ಷರಶಃ ಸತ್ಯ. ಬದುಕುಳಿದವರ ಬದುಕಾದರೂ ಯಾವ ಬಗೆಯಲ್ಲೂ ಸಹ್ಯವಾಗಿರುವುದಿಲ್ಲ. ಮಾಸಿಕ ಋತುಸ್ರಾವ, ಮದುವೆಯ ನಂತರದ ಆಕೆಯ ಲೈಂಗಿಕ ಬದುಕು, ಗರ್ಭಧಾರಣೆ, ಹೆರಿಗೆ – ಈ ಎಲ್ಲಾ ಹಂತಗಳಲ್ಲೂ ಆಕೆ ಸಾವಿನ ಮನೆಯ ಕದ ತಟ್ಟಿಯೇ ಬರುತ್ತಾಳೆ. ಹಿಂತಿರುಗಿ ಬಾರದಿರುವ ಸಂದರ್ಭಗಳೇ ಹೆಚ್ಚು….!

ಈ ಕ್ರಿಯೆಗೆ ಒಳಗಾಗದ ಹೆಣ್ಣು “ಅಪವಿತ್ರ”ಳಾಗಿ ಉಳಿಯುತ್ತಾಳೆ ಎಂದು ಕುರಾನ್ ಹಾಗೂ ಬೈಬಲ್ ನಲ್ಲಿ ಹೇಳಲಾಗಿದೆ ಎಂದು ನಂಬಿ 4 ರಿಂದ 14ರ ವಯಸ್ಸಿನ ನಡುವಿನ ಹೆಣ್ಣುಮಕ್ಕಳನ್ನು (ಕೆಲವೊಮ್ಮೆ ಹುಟ್ಟಿದ ಕೆಲವೇ ತಿಂಗಳಲ್ಲಿ) ಈ ಹೇಯ ಪದ್ಧತಿಗೆ ಬಲಿಕೊಡಲಾಗುತ್ತದೆ. ಯೋನಿಛೇಧನಕ್ಕೆ ಒಳಗಾದ ಹೆಣ್ಣಷ್ಟೇ ಪವಿತ್ರಳು ಎಂಬ ನಂಬಿಕೆ ಹಾಗೂ ಅಂತಹ ಹೆಣ್ಣು ಮಕ್ಕಳಿಂದ ವರವಾಗಿ ಬರುವ ವಧುದಕ್ಷಿಣೆಯಿಂದಾಗಿ ತಮ್ಮ ಕಿತ್ತು ತಿನ್ನುವ ಬಡತನ ದೂರಾಗಿ ಬಿಡುತ್ತದೆ ಎಂಬ ಭ್ರಮೆಯಲ್ಲಿ ಸ್ವತಃ ಪೋಷಕರೇ ಮುಂದೆ ನಿಂತು ಈ ಕ್ರಿಯೆಯನ್ನು ನೆರವೇರಿಸುವುದು ಧರ್ಮವೆಂಬ ಅಫೀಮು ಮನುಷ್ಯ ಕುಲವನ್ನು ಯಾವ ಮಟ್ಟಿಗೆ  ‘ಅಮಲಿನಲ್ಲಿಡುತ್ತದೆ’ ಎಂದು ಆಶ್ಚರ್ಯವಾಗುತ್ತದೆ.

ಇದಕ್ಕೆ ಪೂರಕವಾಗಿ ಮತ್ತೊಂದು ಅಂಶವನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. 2018ರಲ್ಲಿ ಪ್ರಕಟವಾದ ‘ಗುರುಪ್ರಸಾದ್ ಕಾಗಿನೆಲೆ’ಯವರ ‘ಹಿಜಾಬ್’ ಕಾದಂಬರಿಯಲ್ಲಿ – “ಸೊಮಾಲಿಯಾ, ಅಲ್ಲಿನ ಆಂತರಿಕ ಕಲಹ, ಹೆಣ್ಣು ಜನನಾಂಗ ಊನ, ಅವರ ಬಸಿರು, ಅವರ ಹೆರಿಗೆಗಳು, ಅವರ ನಾಟಿ ವೈದ್ಯಪದ್ಧತಿಗಳು, ಸಿಸೇರಿಯನ್ ಸೆಕ್ಷನ್ ಬಗ್ಗೆ ಅವರ ನಂಬಿಕೆಗಳು, ಅವರ ಜನಪದ……..” (ಪುಟ-105) (ಸಮಾಜಮುಖಿಯಲ್ಲಿ ಹಿಜಾಬ್ ಕಾದಂಬರಿಗೆ ಶಶಿಕುಮಾರ್ ಅವರು ಬರೆದ ರಿವ್ಯೂ ಆಧರಿಸಿ) ಎಂಬ ಮಾತುಗಳಲ್ಲಿ ಸೋಮಲಿಯನ್ನರಲ್ಲಿದ್ದ FGM ಕುರಿತ ಉಲ್ಲೇಖವನ್ನು ಕಾಣಬಹುದು.

ವಿಶೇಷವೆಂದರೆ ಅವರಿಗೆ ಸಿ-ಸೆಕ್ಷನ್ ಕುರಿತಂತೆಯೂ ಸಹ ಇರುವ ಅಪನಂಬಿಕೆಗಳ ಬಗ್ಗೆ ಹಿಜಾಬ್ ಕಾದಂಬರಿ ಗುರುತಿಸುತ್ತದೆ. – “ಹೊಟ್ಟೆ ಕುಯ್ದು ಮಗುವನ್ನು ಹೊರತೆಗೆಯುವುದಕ್ಕೆ(ಸಿಸೇರಿಯನ್ ಸೆಕ್ಷನ್ ಅಥವಾ ಸಿ-ಸೆಕ್ಶನ್)ಗೆ ಇಸ್ಲಾಂನಲ್ಲಿರುವ ನಿಷೇಧ; ಅದರಿಂದಾಗಿ ಫಾದುಮಾ ಹಸನ್, ರುಖಿಯಾ ಅಬೂಬಕರ್ ರಂತಹ ಸೊಮಾಲಿ ಬಸುರಿಯರ ಪ್ರಾಣ ಉಳಿಸಲು ರಾಧಿಕಾಗೆ ಸಿಸೇರಿಯನ್ ಸೆಕ್ಷನ್ ಮಾಡಬೇಕಾದ ಅನಿವಾರ್ಯತೆ; ಅದಕ್ಕೆ ಈ ಸೊಮಾಲಿ ಮಹಿಳೆಯರು ಹಾಗೂ ಅವರ ಗಂಡಂದಿರು ತೋರುವ ಪ್ರತಿರೋಧ, ಆನಂತರ ಮಗುವನ್ನು ಹೆತ್ತ ತಾಯಂದಿರ ನಿಗೂಢ ಆತ್ಮಹತ್ಯೆ” (ಹಿಜಾಬ್ ರಿವ್ಯೂ) ಎಂಬ ಮಾತುಗಳು FGM ನಂತರವೂ ಆ ಹೆಣ್ಣುಗಳು ಅನುಭವಿಸುವ ನರಕಯಾತನೆಯನ್ನು ಬಿಚ್ಚಿಡುತ್ತವೆ.

ಸಿಸೇರಿಯನ್ ಕುರಿತು ಸಹ ಈ ಸಮುದಾಯಗಳಲ್ಲಿರುವ ನಂಬಿಕೆಗಳಿಂದಾಗಿ ಎಷ್ಟೋ ಹೆಂಗಸರು ಈ ವಿಧಾನದ ಹೆರಿಗೆಯ ನಂತರ ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗುವುದನ್ನು ಸಹ ಇಲ್ಲಿ ಗಮನಿಸಬೇಕು. ಈ ದೃಷ್ಟಿಯಲ್ಲಿ ‘ಹಿಜಾಬ್ ‘ ಕಾದಂಬರಿ ‘Desert Flower’ ಹಾಗೂ ‘Saving Safa’ದ ಮುಂದುವರಿದ ಭಾಗವೆಂಬಂತೆ ಕಾಣುತ್ತದೆ.

ಒಟ್ಟಾರೆ FGM ನಿಂದ ಬದುಕುಳಿದರೂ ಸಹ ಆ ಹೆಣ್ಣಿನ ಮುಂದಿನ ಬದುಕು ಅನಿಶ್ಚಿತತೆಯ ಮೇಲೇ ನಿಂತಿರುತ್ತದೆ. “ವಿಶ್ವಸಂಸ್ಥೆಯ ಅಧ್ಯಯನದ ಪ್ರಕಾರ ವಿಶ್ವದಾದ್ಯಂತ 150 ಮಿಲಿಯನ್ ಹೆಣ್ಣುಮಕ್ಕಳು ಈ FGM ಎಂಬ ಅಮಾನುಷ ಸಂಪ್ರದಾಯದಿಂದ ಬಾದಿತರಾಗಿದ್ದಾರೆ” ಹಾಗೂ “ಪ್ರತೀ ವರ್ಷವೂ 3 ಮಿಲಿಯನ್ ಗಿಂತಲೂ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು FGM ಮಾತ್ರದಿಂದಲೇ ವಿಶ್ವದಾದ್ಯಂತ ಸಾವಿಗೀಡಾಗುತ್ತಾರೆ. ಅಂದರೆ ಸುಮಾರು 8000ದಷ್ಟು ಹೆಣ್ಣುಮಕ್ಕಳು ಪ್ರತಿನಿತ್ಯವೂ ಸಾವಿನ ಕದ ತಟ್ಟಿ ಬರುತ್ತಿದ್ದಾರೆ” ಎಂಬ ವಿವರಗಳು ‘ಸಫಾ’ ಕೃತಿಯ ಪುಟ 236ರಲ್ಲಿ ದೊರೆಯುತ್ತವೆ.

ಬಹುಶಃ ವಾರಿಸ್ ಳ ಪ್ರಯತ್ನಕ್ಕೆ ವಿಶ್ವಸಂಸ್ಥೆಯ ಬೆಂಬಲ ಸಿಕ್ಕ ಮೇಲೆ ಈ ಪ್ರಮಾಣ ಇಳಿಮುಖಗೊಂಡಿರಬಹುದಾದರು ಸಂಪೂರ್ಣ ನಿರ್ಮೂಲನೆಯಂತೂ ಇಂದಿಗೂ ಸಾಧ್ಯವಾಗಿಲ್ಲ. ಇವೆಲ್ಲವನ್ನೂ ನೋಡುವಾಗ ಆಫ್ರಿಕಾ ಅಕ್ಷರಶಃ ಕಗ್ಗತ್ತಲೆಯ ಖಂಡವೇ ಎನಿಸಿಬಿಡುತ್ತದೆ. ಆಫ್ರಿಕಾ ಮಾತ್ರವಲ್ಲ ಜಗತ್ತಿನ ಯಾವುದೇ ರಾಷ್ಟ್ರವಾದರೂ ಅಷ್ಟೇ, ಅಲ್ಲಿ ವಾಸಿಸುವ ಸಮುದಾಯಗಳು ಕಾನೂನು ಕಟ್ಟಳೆಗಳನ್ನು ಪರಿಪಾಲಿಸುವುದಕ್ಕಿಂತಲೂ ಹೆಚ್ಚು ತಮ್ಮ ನಂಬಿಕೆ ಆಚರಣೆಗಳಿಗೆ ಮೊದಲ ಪ್ರಾಶಸ್ತ್ಯ ಕೊಡುತ್ತಾರೆ ಎಂಬುದು ತೆರೆದ ಸತ್ಯ.

                                                          —————————

ಭಾರತದ ಸಂದರ್ಭದಲ್ಲಿ ‘ಪಾವಿತ್ರ್ಯತೆ’ ‘ಅಪಾವಿತ್ರ್ಯತೆ’ ಗಳನ್ನು ನೋಡುವುದಾದರೆ, ಪುರಾಣಗಳಲ್ಲಿ ವಿವಾಹ ಪೂರ್ವದಲ್ಲಿ ಪಡೆದುಕೊಳ್ಳುತ್ತಿದ್ದ ‘ಕಾನೀನ’ ಶಿಶುಗಳೇ ‘ಪವಿತ್ರಾತ್ಮ’ ರಾಗಿ ಅವರಿಂದಲೇ ಭಾರತದ ಶೇಷ್ಠ ಧಾರ್ಮಿಕ ,ಪುರಾಣ ಗ್ರಂಥಗಳು ರಚನೆಯಾಗಿರುವುದು ಕೂತೂಹಲಕಾರಿಯಾದದ್ದು. ಗಮನಿಸಲೇಬೇಕಾದ ಮತ್ತೊಂದು ಅಂಶವೆಂದರೆ – (ನನ್ನ ಓದಿನ ಮಿತಿಯಲ್ಲಿ) ಹಾಗೆ ‘ಕಾನೀನ ಶಿಶು’ವಾಗಿ ಜನಿಸಿದವೆಲ್ಲಾ ‘ಗಂಡು ಸಂತಾನವೇ’!!! (ಅದರಲ್ಲಿ ಕುಲದ ಪ್ರಶ್ನೆಯ ಚರ್ಚೆ ಬೇರೆ. ಉದಾಹರಣೆಗೆ ಕರ್ಣ) ಕಾನೀನ ಶಿಶುವಾಗಿ ಹೆಣ್ಣು ಮಗುವೊಂದು ಹುಟ್ಟಲೇ ಇಲ್ಲವೇ ? ಹುಟ್ಟಿದ್ದರೂ ಅದರ ಪರಿಸ್ಥಿತಿಯಾದರೂ ಹೇಗಿರುತ್ತಿತ್ತು?

ಮಹಾಭಾರತದಲ್ಲಿ ಬರುವ ‘ಮಾಧವಿ’ ಈ ಸಂದರ್ಭಕ್ಕೆ ತಟ್ಟನೆ ನೆನಪಾಗುತ್ತಾಳೆ. ಕುರುಡು ಗುರುಭಕ್ತಿಗೆ ಗಂಟುಬಿದ್ದವನೊಬ್ಬ, ದಾನದ ಕುರುಡು ಪ್ರತಿಷ್ಠೆಗೆ ಬಿದ್ದ ಮತ್ತೊಬ್ಬ… ಇಬ್ಬರೂ ಸೇರಿ ಹೆಣ್ಣೊಬ್ಬಳ ‘ಕನ್ಯತ್ವ’ದ ವರವನ್ನೇ ಮುಂದಿಟ್ಟುಕೊಂಡು (‘ವರ’ ಎನ್ನುವುದನ್ನು ಸಹ ಇಲ್ಲಿ ಅನುಮಾನಿಸಲೇಬೇಕಿದೆ) ನಡೆಸುವ ‘ಅತ್ಯಾಚಾರಗಳು'(ಮಾಧವಿಗಾದದ್ದು ಅತ್ಯಾಚಾರವಲ್ಲದೆ ಮತ್ತೇನು?) ಈ ‘ಮಣ್ಣಿನ ರಾಜಕಾರಣ’ದಲ್ಲಿ ಪಾವಿತ್ರ್ಯತೆಯ ಸ್ಪರ್ಶವನ್ನು ಪಡೆದುಕೊಳ್ಳುವುದು ಸೋಜಿಗವನ್ನುಂಟುಮಾಡುತ್ತದೆ.

ಗಂಡು ತಾನಾಗಿ ನಿಂತು ಇಂತಹ ಕೆಲಸಗಳನ್ನು ಮಾಡಿಸಿದಾಗ ಅದು ಪವಿತ್ರದ ಕೆಲಸವಾಗಿಬಿಡುತ್ತದೆ ಹಾಗೂ ಸಹಜವಾಗಿಯೇ ಆ ಹೆಣ್ಣುಪವಿತ್ರಳಾಗಿ ಪೂಜಿಸಲ್ಪಡುತ್ತಾಳೆ, ಪಾತಿವ್ರತ್ಯಕ್ಕೆ ‘ಐಕಾನ್’ ಆಗಿಬಿಡುತ್ತಾಳೆ. ಆದರೆ ಹೆಣ್ಣೇ ಇಂತಹದ್ದೊಂದು ಆಯ್ಕೆಗೆ ಮುಂದಾದಾಗ ಅದು ಬೇರೆಯದ್ದೇ ಸ್ವರೂಪವನ್ನು ಪಡೆದುಕೊಂಡುಬಿಡುತ್ತದೆ. {ಇಂತಹ ಪವಿತ್ರ ಅಪವಿತ್ರ ಎಂಬ ಹೆಣ್ಣುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ… ಅಹಲ್ಯೆ, ತುಳಸಿ (ಬೃಂದೆ) ಇತ್ಯಾದಿ…}

ಒಂದು ‘ಧರ್ಮ’ದ ಆವರಣದಲ್ಲಿ ‘ಅಪವಿತ್ರಳಾದಾಳು’ ಎಂಬ ಶಂಕೆಯಲ್ಲಿ ಯೋನಿಛೇದನ ಮಾಡಿ ಹೊಲಿಗೆ ಹಾಕಿದರೆ, ಇನ್ನೊಂದು ಧರ್ಮದ ಆವರಣದಲ್ಲಿ ‘ಪವಿತ್ರಕಾರ್ಯ’ದ ನೆಪದಲ್ಲಿ ಸ್ವತಃ ತಾವೇ ಮುಂದೆ ನಿಂತು ಅತ್ಯಾಚಾರವೇ ಎನ್ನಬಹುದಾದ ದುರಂತಕ್ಕೆ ತಳ್ಳುವುದು….. ಈ ಎರಡೂ ಸಂದರ್ಭಗಳಲ್ಲಿ ಈ ‘ಪವಿತ್ರ ಕಾರ್ಯಗಳ’ ಮುಂದಾಳತ್ವ ವಹಿಸುವುದು ಅದೇ ಹೆಣ್ಣನ್ನು ಹೆತ್ತವರು ಎಂಬುದು ಗಮನಾರ್ಹ. ಇದನ್ನು ವ್ಯಕ್ತಪಡಿಸುವುದಾದರು ಯಾವ ಪರಿಭಾಷೆಯಲ್ಲಿ ಎನ್ನುವುದೇ ಪ್ರಶ್ನೆಯಾಗಿ ಉಳಿದು ಬಿಡುತ್ತದೆ.

‘ವ್ಯವಸ್ಥೆ’ ಕಟ್ಟಿಕೊಂಡ ಪವಿತ್ರ – ಅಪವಿತ್ರಗಳೆಂಬ ಧಾರ್ಮಿಕ ಪರಿಕಲ್ಪನೆಗಳ ನಾಟಕಗಳಲ್ಲಿ ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತಳಾಗುವುದು ಮಾತ್ರ ಅಂತಿಮವಾಗಿ ಹೆಣ್ಣೇ. ತನ್ನಿಚ್ಛೆಯಂತೆ ಬದುಕುವ, ಹೆರುವ ಅಥವಾ ಹೆರದಿರುವ… ಹೀಗೆ ಯಾವ ಆಯ್ಕೆಗಳನ್ನೂ ಸ್ವತಂತ್ರವಾಗಿ ತೆಗೆದುಕೊಳ್ಳಲಾಗದ ಸ್ಥಿತಿ ಇಂದಿಗೂ ಮುಂದುವರಿದಿರುವುದು ವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲದೆ ಮತ್ತೇನು ?

                                                           ————————

ಇಂತಹ ಜಟಿಲ ವ್ಯವಸ್ಥೆಯೊಳಗೂ ಸೋಮಾಲಿಯಾದಂತಹ ಮರುಭೂಮಿಯಲ್ಲಿ ಅಕ್ಷರಶಃ ‘ಅರಳಿದ ಹೂವು’ ವಾರಿಸ್’ ಎಂಬ ದಿಟ್ಟ ಹೋರಾಟಗಾರ್ತಿ. ‘ವಾರಿಸ್’ ಹೆಸರಿನ ಅರ್ಥವೇ ‘ಮರುಭೂಮಿಯ ಹೂವು’ ಎಂದು ಹಾಗೂ ‘ಸಫಾ’ ಎಂದರೆ ‘ಪರಿಶುದ್ಧತೆಯ ಪ್ರತೀಕ’ ಎಂದು. ಕಾಕತಾಳೀಯವೆಂಬಂತೆ ಈ ಎರಡೂ ಪಾತ್ರಗಳು ತಮ್ಮ ವ್ಯವಸ್ಥೆಯನ್ನು ‘ಮೀರುವುದರ’ ಮೂಲಕ ಸಾರ್ಥಕತೆ ಪಡೆದುಕೊಳ್ಳುತ್ತವೆ.

ತನಗೊದಗಿದ ಸ್ಥಿತಿ, ತನ್ನ ಪರಿಸರದಲ್ಲಿ ನರಳುತ್ತಿರುವ ಬೇರೆ ಯಾವ ಹೆಣ್ಣುಮಗಳಿಗೂ ಒದಗಬಾರದೆಂದು ಕ್ಷಣ ಕ್ಷಣವೂ ತುಡಿವ ವಾರಿಸ್ ಳ ಹಂಬಲದಿಂದಾಗಿ FGMನಿಂದ ಪಾರಾದ ಕೂಸು ಸಫಾ ಹಾಗೂ ಸಫಾಳಂತಹ ಲಕ್ಷಾಂತರ ಹೆಣ್ಣುಮಕ್ಕಳು. ಸಫಾಳನ್ನು ಸೇಫ್ ಮಾಡಲು ವಾರಿಸ್ ಪ್ರಯತ್ನಿಸುವ ಪ್ರತಿ ಯತ್ನವೂ FGM ನ ನಿರ್ಮೂಲನೆಯ ಕುರಿತ ಆಕೆಯ ಅಪಾರ ಬದ್ಧತೆಗೆ ಸಾಕ್ಷಿಯಾಗಿದೆ. ತನ್ನ ನಂತರ ಈ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವಂತೆ ಸಫಾ ಹಾಗೂ ಇನಾಬ್ ಳನ್ನು ಪ್ರೇರೇಪಿಸುವ, ವಿಶೇಷವಾಗಿ ಸಫಾಳ ತಂದೆ ಇಡ್ರಿಸ್ ನ ಮನಸ್ಸನ್ನು ಧಾರ್ಮಿಕ ಮೂಲಭೂತವಾದದಿಂದ ಹೊರತರುವ ವಾರಿಸ್ ಳ ಆತ್ಮಶಕ್ತಿ ನಿಜಕ್ಕೂ ಹೆಣ್ಣು ಸಮುದಾಯವೊಂದರ ಕುರಿತ ಆಕೆಯ ಅಪಾರ ಕಾಳಜಿಗೆ ಸಾಕ್ಷಿಯಾಗಿ ಉಳಿದುಬಿಡುತ್ತದೆ.

7 comments to “ಸೇವಿಂಗ್ ಸಫಾ ಅನುವಾದ : ಪುಸ್ತಕ ಪರಿಚಯ”
  1. ಬಹಳ ಹಿಂದೆ ಆ ಪುಸ್ತಕ ಓದಿ , ತಳಮಳಗಳಿಂದ ಹೊರ ಬರಲು ಕಷ್ಟಪಟ್ಟದ್ದ.ಈಗ ನಿನ್ನ ಬರಹ ಓದಿದ ಮೇಲೆ ಮತ್ತೆಲ್ಲಾ ಪುನರಾವರ್ತನೆ ಆಯಿತು.ಒಳ್ಳೆಯ ಚಿಂನಾರ್ಹ ಬರಹ ಸೌಮ್ಯ.ನಿನ್ನ ಸಾಹಿತ್ಯಕ ಕೆಲಸ ಹೀಗೆ ಮುಂದುವರಿಯಲಿ

      • ಸೌಮ್ಯಾ….
        ನಿಧಾನವಾಗಿ ಎಲ್ಲವನ್ನೂ ಓದಿದೆ.. ಮೊದಲ ವಿಮರ್ಶಾ ಲೇಖನ ತುಂಬ ಸಶಕ್ತವಾದ ರೀತಿಯಲ್ಲಿ ನೀರೂಪಿತವಾಗಿದೆ‌. ನಿನ್ನೊಳಗಿನ ತೀವ್ರತೆ ಪರಿಣಾಮಕಾರಿಯಾಗಿ ಪ್ರಕಟವಾಗಿದೆ. ಓದುವಾಗ ಓದುಗ ಎಲ್ಲೂ ಮೈಮರೆಯದಂತೆ ವಿಚಾರ ವಿವೇಚನೆ ನಡೆದಿದೆ.

        ಯೋನಿಚ್ಛೇದನ ಸ್ಪಷ್ಟವಾಗಿ ಹೆಣ್ಣುಮಕ್ಕಳ ಲೈಂಗಿಕ ಹಕ್ಕಿನ ದಮನವೇ ಆಗಿದೆ. ಇತ್ತೀಚೆಗೆ ಇರಾಕ್ ನಲ್ಲಿ ಅಟ್ಟಹಾಸಗೈದ ಇಸಿಸ್ ಉಗ್ರರೂ ಕೂಡ ಅಲ್ಲಿನ ಹೆಣ್ಣುಮಕ್ಕಳ ಯೋನಿಚ್ಛೇದನಕ್ಕೆ ಫತ್ವಾ ಹೊರಡಿಸಿದ್ದನ್ನು ಅನೇಕ ಮಾದ್ಯಮಗಳು ವರದಿ ಮಾಡಿದ್ದಾಗ ದಿಗ್ಭ್ರಾಂತನಾಗಿದ್ದೆ. ಇನ್ನು ಇದನ್ನು ಎದುರುಗೊಳ್ಳುವ ಅನುಭವಿಸುವ ಹೆಣ್ಣಿನ ತಳಮಳಗಳು ಎಂಥವಿರಬಹುದು? ಇಂಥದ್ದೇ ನಾನಾ ರೀತಿಯಲ್ಲಿ ಪ್ರಪಂಚದ ನಾನಾ ಜನಾಂಗಗಳಲ್ಲಿ ಇದ್ದೇ ಇದೆ. ಇದು ಹೆಣ್ಣಿನ ಪಾವಿತ್ರ್ಯ ಅಡಗಿರುವುದೇ ಆಕೆಯ ಯೋನಿಯಲ್ಲಿ ಎಂದು ಭಾವಿಸಿರುವ ತಲೆತಿರುಕ ಪುರುಷ ಸೃಷ್ಠಿತ ಮಿತ್ ಗಳ ಕ್ರೂರ ನಿರೂಪಣೆಗಳು. ನಮ್ಮಲ್ಲಿ ಹೆಣ್ಣುಮಕ್ಕಳಿಗೆ ಕಬ್ಬಿಣದ “ಕಾಚಾ” ಹಾಕಲಾಗುತ್ತಿತ್ತು. ಹೆಚ್ಚಿನ ಓದಿಗಾಗಿ ಬೇಕಿದ್ದರೆ ತಾಫಿ ಧರ್ಮರಾವು ಅವರ ‘ಕಬ್ಬಿಣದ ಕಾಚಾಗಳು’ ಕೃತಿ ಓದಬಹುದು. ಇಂಥಹಾ ಅಮಾನವೀಯ ಪದ್ಧತಿಯ ಮೂಲಕ ಆಕೆಯನ್ನು ಎಷ್ಟು ಕ್ರೂರವಾಗಿ ಈ ವ್ಯವಸ್ಥೆ ಹತ್ತಿಕ್ಕಿದೆ? ಮತ್ತು ಹತ್ತಿಕ್ಕಲು ಸೃಷ್ಟಿಸಿಕೊಂಡ ಮಿತ್ ಗಳು ಮತ್ತು ಪದ್ಧತಿ ವಿಧಾನಗಳು ಎಷ್ಟು ಅಮಾನುಷ ಬರ್ಬರತೆಯಿಂದ ಕೂಡಿವೆ ಎಂಬುದನ್ನು ಓದಿದರೆ ಮನಸು ಮುದುಡಿಹೋಗುತ್ತದೆ. ಹೆಂಡತಿಯನ್ನು ಒಳಗೆ ಕೂಡಿ ಹಿತ್ತಿಲು ಮುಂಚೆ ಬಾಗಿಲಿಗೆ ಬೀಗ ಜಡಿದು ಹೋಗುವ ಪದ್ಧತಿ, ಯೋನಿಗೆ ವಂಕಿ ತೊಡಿಸುವುದು, ಪರದಾ ಹಾಕಿಸುವುದು, ಇಂತವೆಲ್ಲ ಪುರುಷ ಪ್ರಧಾನ ವ್ಯವಸ್ಥೆ ಎಸಗಿದ, ಎಸಗುತ್ತಿರುವ ದೌರ್ಜನ್ಯಗಳೇ‌.. ಇಂಥವುಗಳ ಭಂಜನೆಯ ಹಾದಿ ಸುಲಭವಲ್ಲ. ವಾರಿಸ್ ಡಿರಿ ನಿಜಕ್ಕೂ ಒಬ್ಬ ಸಾಹಸೀ ಹೆಣ್ಣು.

        ಇನ್ನು ‘ವರ’ ಎಂಬ ಬಗ್ಗೆ ನೀನು ವ್ಯಕ್ತಪಡಿಸಿರುವ ಅನುಮಾನ ಸರಿಯಾಗೇ ಇದೆ. ಇದು ನನ್ನ ಬಹು ದಿನದ ನಿಲುವೂ ಹೌದು. ‘ವರದಿಂದ’ ಅವನು ಹುಟ್ಟಿದ ಇವಳು ಹುಟ್ಟಿದಳು ಎಂಬುವೆಲ್ಲಾ ಪುರುಷರಿಂದಾದ ಲೈಂಗಿಕ ದೌರ್ಜನ್ಯವನ್ನು ಮುಚ್ಚಿಡುವ, ಹೆಣ್ಣಿನ ಪಾವಿತ್ರ್ಯವನ್ನು ವೈಭವೀಕರಿಸು ವ್ಯವಸ್ಥಿತ ಹುನ್ನಾರಗಳು. ‘ವರ’ ಎಂಬ ಒಂದು ಪದಕ್ಕೆ ಎಂಥಾ ಶಕ್ತಿಯಿದೆ ನೋಡು…? ಎಲ್ಲವನ್ನೂ ಹೇಗೆ ಒಂದು ಪದ ಸುಲಭವಾಗಿ ಸಮಾಧಿ ಮಾಡಿಬಿಡುತ್ತದೆ..!

        ನಿನ್ನ ಲೇಖನ ಓದುತ್ತಾ ನನಗನ್ನಿಸಿದ ಪ್ರತಿಕ್ರಿಯೆ ಬರೆದಿದ್ದೇನೆ. ಹೆಚ್ಚಿನ ವಿಚಾರ ಚರ್ಚಿಸೋಣ. ಬರಹ ಹೀಗೇ ಮುಂದುವರೆಯಲಿ. ಇವೆಲ್ಲವೂ ದಾಖಲಾಗಬೇಕು..

          • Dear Soumya
            It’s true that women are no less suffered as DALITHAS
            One can overpower the thrust of Gold or Lust but it’s difficult to overpower the thurst of Rights
            Men decides themselves that it’s their Birthright to excercise power over women
            Let’s hope for the best for better life of women
            Keep writing such articles to touch the heart of the people
            All the best

  2. ಪುಸ್ತಕ ಪರಿಚಯ ಚೆನಾಗಿದೆ. ಸ್ವಲ್ಪ ವಿಮರ್ಶಾತ್ಮಕವಾಗಿ ಬರೆಯಲು ಪ್ರಯತ್ನಿಸಬೇಕು. ಓದು ಬರೆಹ ಎಂದಿಗೂ ನಿಲ್ಲದಿರಲಿ. ಖುಷಿಯಾಯಿತು ಸೌಮ್ಯ

  3. Bahala uttamawaada ullekhana. Intaha lekhanadindaagi kinchittaadaroo samudaayagalu badalaagali endu aashiste. Bengaloorige bandage banni. Shubhawaaagali gb

ಪ್ರತಿಕ್ರಿಯಿಸಿ