ವಾಟ್ಸಾಪ್ ಮತ್ತು ಫೇಸ್ಬುಕ್: ಯಾರು ಹಿತವರು?

ಕನ್ನಡದಲ್ಲಿನ ತಂತ್ರಜ್ಞಾನ ಕುರಿತ ಬರಹಗಳು ಒಂದೋ ಮಾಹಿತಿಗೆ ಸೀಮಿತವಾಗಿರುತ್ತಿದ್ದವು ಅಥವಾ ಸ್ವಲ್ಪ ಮಟ್ಟಿಗೆ ವಿಜ್ಞಾನವು ಸಮಾಜದ ಮೇಲೆ ಮತ್ತು ರಾಜಕೀಯದ ಮೇಲೆ ಹೇಗೆ ಬದಲಾವಣೆಯ ಒತ್ತಡ ರೂಪಿಸುತ್ತವೆ ಎಂಬುದನ್ನು ತೋರಿಸುತ್ತಿದ್ದವು. ಶಿವ ವಿಶ್ವನಾಥನ್ ರ “ಪ್ರತಿಭೆಯ ಒಂದು ಪ್ರವಾಹ” ಎಂಬ ಅನುವಾದಿತ ಪುಸ್ತಕ ವಿಜ್ಞಾನ ಮತ್ತು ಚರಿತ್ರೆಯನ್ನು ಆಳವಾಗಿ, ತಾತ್ವಿಕವಾಗಿ ಶೋಧಿಸಿದ ಕೃತಿಯಾಗಿತ್ತು. ಈ ಕೆಳಗಿನ ಬರಹವು ನಮ್ಮ ಸಧ್ಯದ ತಂತ್ರಜ್ಞಾನ ಮತ್ತು ವ್ಯಕ್ತಿಗಳ ನಡುವಿನ ಘರ್ಷಣೆಯ ಆರಂಭಿಕ ಹಂತವನ್ನು ಸರಳವಾಗಿ ಗುರುತಿಸಿ, ಪರಿಣಾಮಗಳನ್ನು ಚರ್ಚಿಸುತ್ತದೆ. 

ಕಳೆದ ವಾರ ಭಾರತ ಮತ್ತು ವಿಶ್ವದೆಲ್ಲೆಡೆ ವಾಟ್ಸಾಪ್ ನ ಹೊಸ ಪ್ರೈವಸಿ ಪಾಲಿಸಿ ದೊಡ್ಡ ಸುದ್ದಿ ಮಾಡಿತು. ಇದಕ್ಕೆ ಬಹಳ ಜನರು ಗೊಂದಲ ಹಾಗು ಭಯದ ಪ್ರತಿಕ್ರಿಯೆ ನೀಡಿದ್ದೆ ಅಲ್ಲದೆ, ದಿಡೀರನೆ ತಮ್ಮ ಪ್ರೈವಸಿ, ಅಂದರೆ “ವೈಯುಕ್ತಿಕ ಗೌಪ್ಯತೆ” ಬಗ್ಗೆ ಕಾಳಜಿ ಹೊಂದಿ ವಾಟ್ಸಾಪ್ನಿಂದ ಹೊರ ಹೋಗ ತೊಡಗಿದರು. ಇದರ ಪರಿಣಾಮ ಹೇಗಿತ್ತೆಂದರೆ ಸ್ವತಃ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಒಂದು ತಪ್ಪು ಮಾಹಿತಿಗೆ (misinformation) ಬಲಿಯಾದ ವಾಟ್ಸಪ್ ಈ ವರ್ಷದ ಫೆಬ್ರುವರಿ ಒಳಗೆ ತರಬಯಸಿದ ಪಾಲಿಸಿಯನ್ನು ಮೇ ತಿಂಗಳವರೆಗೆ ಮುಂದೂಡಿದೆ.

ಇದುವರೆಗೆ ಎಂತಹ ಮಾಹಿತಿ ವಾಟ್ಸಾಪ್ ಸಂಗ್ರಹ ಮಾಡುತ್ತಿತ್ತು ಅಂತದ್ದೇ ಮಾಹಿತಿಯನ್ನು ಇನ್ನು ಮುಂದೆಯೂ ಈ ಪಾಲಿಸಿ ಜಾರಿಯಾದಾಗ ವಾಟ್ಸಪ್ ಸಂಗ್ರಹಿಸಲಿದೆ. ಅಲ್ಲದೆ ವಾಟ್ಸಾಪ್ ಇತ್ತೀಚೆಗೆ  ಪೇಮೆಂಟ್ ಗೇಟ್ ವೇ ಸೇವೆಯನ್ನು ಅಳವಡಿಸಿದೆ. ಮುಂದೆ ಜಾಹಿರಾತುಗಳನ್ನು ಕೂಡ ತರಲಿರುವ ಕಾರಣ ಸ್ವಲ್ಪ ಹೆಚ್ಚಿನ ಮಟ್ಟದ ಬಳಕೆದಾರರ ಮಾಹಿತಿಯನ್ನು ಸಂಗ್ರಹ ಮಾಡಲಿದೆ. ಇದಾಗಲೇ ವಾಟ್ಸಾಪ್ ಬಿಸಿನೆಸ್ ಅಕೌಂಟ್ ಗಳನ್ನೂ ಕೊಡುತ್ತಿದ್ದ ಕಾರಣ, ಬಹುತೇಕ ಅದೇ ರೀತಿಯಲ್ಲಿ ವಾಟ್ಸಾಪ್ ಬಳಕೆದಾರರ ಖರೀದಿ ಆಧಾರಿತ ಅಥವಾ ಖರೀದಿ ಸಂಬಂದಿ ಆಸಕ್ತಿಗಳ ಮಾಹಿತಿಯನ್ನು ಒಟ್ಟು ಮಾಡಲಿದೆ ಎಂದು ಊಹಿಸಬಹುದು. ಅಂತಹ ಸಮಯದಲ್ಲಿ ಟರ್ಮ್ಸ್ ಮತ್ತು ಕಂಡೀಷನ್ ಗಳನ್ನು  ಕಾನೂನಿನ ಚೌಕಟ್ಟಿನೊಳಗೆ ಮಾಡಲೇಬೇಕಾಗುತ್ತದೆ. ಆದ್ದರಿಂದಲೇ ವಾಟ್ಸಾಪ್ ನಿಗದಿತ ಸಮಯದೊಳಗೆ ಅವುಗಳನ್ನು ಒಪ್ಪದೇ ಹೋದರೆ ಆಪ್ ಕಾರ್ಯ ನಿರ್ವಹಣೆ ಮಾಡುದಿಲ್ಲ ಎಂಬ ಮಾಹಿತಿ ಕೊಟ್ಟಿತ್ತು. ಇದು ಹೇರಿಕೆಯ ಬದಲಾಗಿ, ಅವರಿಗಿರುವ ಒಂದು ಕಾನೂನು ಅನಿವಾರ್ಯತೆಯಾಗಿತ್ತು.

ಭಾರತೀಯ ವಾಟ್ಸಾಪ್ ಬಳಕೆದಾರರು ದಿಡೀರನೆ ಬಂದ, ಒಂದು ರೀತಿಯ ಹೇರಿಕೆಯ ಹಾಗೆ ಕಾಣುವ, ಈ ಪ್ರೈವಸಿ ಪಾಲಿಸಿ ಬಗ್ಗೆ ಭಯಗೊಂಡಿದ್ದರು. ಅದಕ್ಕೆ ಬಹುತೇಕ ಅಂತಾರಾಷ್ಟ್ರೀಯ ಮಾಧ್ಯಮಗಳು ಮೂಡಿಸಿದ ಭಯವನ್ನು ನಮ್ಮ ಭಾರತೀಯ ಮಾಧ್ಯಮಗಳು ಕೂಡ ಮೂಡಿಸಿದ್ದೆ ಕಾರಣವಾಗಿದೆ. ಆದರೆ ಭಾರತೀಯರ ಭಯದ ಹಿಂದೆ ಒಂದು ಸಣ್ಣ ತಪ್ಪು ಕಲ್ಪನೆ ಕೂಡ ನುಸುಳಿದೆ.

Courtecy: The Financial Express

ವಾಟ್ಸಾಪ್ ಇನ್ನು ಮುಂದೆ ನಿಮ್ಮ ವೈಯುಕ್ತಿಕ ಚಾಟ್  (ಮಾತುಕತೆ) ಮಾಹಿತಿಯನ್ನ ಕೂಡ ಬಳಸಲು ನಿಮ್ಮ ಅನುಮತಿ ಕೇಳಿದೆ ಎಂಬ ತಪ್ಪು ಕಲ್ಪನೆ ಇಂದು ಬಹಳ ಜನರಲ್ಲಿ ಮೂಡಿದೆ. ಖಂಡಿತ ಅದನ್ನು ವಾಟ್ಸಾಪ್ ಮಾಡುತ್ತಿಲ್ಲ. ಬದಲಾಗಿ ವಾಟ್ಸಾಪ್ ತನ್ನ ಬಳಿ ಇರುವ ಬಳಕೆದಾರರ ಸ್ವಭಾವದ ಮಾಹಿತಿಯನ್ನು ಫೇಸ್ಬುಕ್ ನೊಂದಿಗೆ ಹಂಚಿಕೊಳ್ಳಲಿದೆ. ಇದು ವಿದೇಶಗಳ ಹಾಗು ನಮ್ಮ ದೇಶದ, ಬಹಳಷ್ಟು ಪ್ರೈವಸಿ ಕಾಳಜಿ ಹೊಂದಿರುವ ಹಾಗು “ತಮ್ಮ ಡೇಟಾ ಮೇಲೆ ತಮಗೆ ಮಾತ್ರ ಹಕ್ಕಿರಲಿ” ಎಂದು ಬಯಸುವ ಜನರಿಗೆ ದಿಗಿಲು ಮೂಡಿಸಿದೆ.

ಇಂದಿನ ಸಾಮಾಜಿಕ ಜಾಲತಾಣಗಳು (Social Media) ಹಾಗು ಜಾಹೀರಾತು ಜಾಲಗಳ (Advertising Networks) ನಡುವಿನ ಸಂಬಂಧ ಬಹಳ ಶಕ್ತಿಶಾಲಿಯಾಗಿದ್ದು, ಅಪಾಯಕಾರಿಯಾಗಿ ಬೆಳೆಯುತ್ತಿದೆ. ನೀವು ದಿನವೂ ಬಳಸುವ ವೆಬ್ಸೈಟ್ ಗಳು ನಿಮ್ಮ ಅಂತರ್ಜಾಲದ ಮೇಲಿನ ಸ್ವಭಾವದ ಬಗ್ಗೆ ಮಾಹಿತಿ ಸಂಗ್ರಹಿಸುವ ಹತ್ತಾರು ಟ್ರಾಕರ್ ಗಳನ್ನು ಹೊಂದಿವೆ. ಮೊಬೈಲ್ ಆಪ್ ಗಳು ಹಲವಾರು ಸ್ವಭಾವದ ಮಾಹಿತಿ ಸಂಗ್ರಹಿಸುತ್ತವೆ. ಇಂಟರ್ನೆಟ್ ಮೇಲಿನ ಹುಡುಕು ತಾಣಗಳಲ್ಲಿನ ಚಟುವಟಿಕೆಗಳು ಇತ್ಯಾದಿ ಎಲ್ಲವೂ ಸೇರಿ, ನಿಮ್ಮ ಎಲ್ಲಾ ರೀತಿಯ ಸ್ವಭಾವ, ಇಷ್ಟಗಳು, ಬಳಕೆಯ ರೀತಿಗಳನ್ನು ಗ್ರಹಿಸಿ, ಅದನ್ನ ಮರುಬಳಕೆ ಮಾಡಬಲ್ಲ ರೀತಿಯ ಮಾಹಿತಿ ಆಗಿ ಪರಿವರ್ತನೆ ಮಾಡಿ ಸಂಗ್ರಹ ಮಾಡುತ್ತಿವೆ. ಆ ಮೂಲಕ ನೀವು ಏನನ್ನು ಬಯಸುವಿರಿ ಎಂದು ಅರಿತು ನಿಮಗೆ ತಮ್ಮ ಪಾಲುದಾರರ ಜಾಹಿರಾತು ತಲುಪಿಸಲು ಪ್ರಯತ್ನ ಪಡುತ್ತಿವೆ.

ಇಲ್ಲಿ ವೈಯುಕ್ತಿಕವಾದ ಯಾವ ತರದ ಮಾಹಿತಿ ಇದೆ?

ಒಂದು ಉದಾಹರಣೆಗೆ ಮೊನ್ನೆ ಅಮೆರಿಕಾದ FTC, ಫೆಡರಲ್ ಟ್ರೇಡ್ ಕಮಿಷನ್, ಫ್ಲೋ (Flo) ಎಂಬ ಆಪ್ ನ ವಿಚಾರಣೆ ಮುಗಿಸಿತು. ಇಂದಿನ ಆದುನಿಕ ಮಹಿಳೆಯರು ಬಳಸುವ ಈ ಪಿರಿಯಡ್ ಮತ್ತು ಒವುಲೇಷನ್ ಟ್ರಾಕರ್ ಆಪ್, ಅವರಿಗೆ ತಮ್ಮ ಮಾಸಿಕ ಚಕ್ರ, ಆರೋಗ್ಯ, ಮೂಡ್ (ಕೋಪ, ಅಸಹನೆ, ಸಮಾಧಾನ) ಇನ್ನಿತರೆ ಮಾಹಿತಿಗಳ ದಾಖಲಿಸಲು ಸಹಾಯಕವಾಗಿತ್ತು. ಆದರೆ ಅದು ಈ ಎಲ್ಲಾ ಮಾಹಿತಿಯನ್ನು ತನ್ನ ಬಳಕೆದಾರರ ಒಪ್ಪಿಗೆ ಪಡೆಯದೆ, ಮೂರನೇ ಜಾಹೀರಾತು ಸಂಸ್ಥೆಗಳ ಜೊತೆ ಹಂಚಿಕೊಂಡದ್ದು ಬಹಳ ಮಹಿಳೆಯರ ಸಿಟ್ಟಿಗೆ ಕಾರಣವಾಗಿದೆ. ಆದ್ದರಿಂದ ಈ ಸಂಸ್ಥೆ ಹಾಗು ಇನ್ನು ಹಲವು, ಈ ರೀತಿಯ “ಸೂಕ್ಷ್ಮ ಮತ್ತು ಅತಿ ವೈಯುಕ್ತಿಕ ಮಾಹಿತಿ” ಹಂಚಿಕೊಂಡ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ವಿಚಾರಣೆಗೆ ಒಳಗಾಗುತ್ತಿವೆ. ಅಲ್ಲಿಗೆ ನೀವು ನಿಮ್ಮ ಇತರೆ ಎಲ್ಲಾ ರೀತಿಯ ಆಪ್ ಗಳಿಂದ ಏನೆಲ್ಲಾ ಮಾಹಿತಿ ಸಂಗ್ರಹ ಮಾಡಲು ಸಾಧ್ಯವಿದೆ ಎಂದು ನಿಮ್ಮ ಸ್ವಂತ ಬಳಕೆಯ ಆಧಾರದ ಮೇಲೆ ಯೋಚಿಸಬಹುದು. ಅಂತರ್ಜಾಲ ಸಂಸ್ಥೆಗಳು ಈ ಎಲ್ಲ ರೀತಿಯ ಮಾಹಿತಿ ಬಳಸಿ ನಿಮ್ಮ ಇಷ್ಟ, ಕಷ್ಟಗಳ ಬಗೆಗಿನ ಊಹೆ ಮಾಡಬಲ್ಲ ಮತ್ತಷ್ಟು ಮಾಹಿತಿಯನ್ನು ತಯಾರಿಸಿ ಜಾಹಿರಾತುದಾರರಿಗೆ ಮಾರುವ ಕಾರಣ ನಿಮ್ಮ ಮಾಹಿತಿ ಅವರ ಸರಕಾಗಿದೆ! ಆದಕಾರಣ ನೀವು ಅವರ ಬಂಡವಾಳ ಹಾಗು ಸರಕು ಎರಡು ಆಗಿದ್ದೀರಿ.

ಹಾಗಿದ್ದರೆ ವಾಟ್ಸಾಪ್ ನಿಂದ ದೂರ ಹೋದಲ್ಲಿ ನಿಮ್ಮ ಮಾಹಿತಿ ಸುರಕ್ಷಿತವೇ?

ಖಂಡಿತ ಇಲ್ಲ! ಯಾಕೆಂದರೆ ಇಂದಿನ ಈ ದೊಡ್ಡ ವಿವಾದ ಹುಟ್ಟುವುದೇ ಎರಡು ಕಾರಣಕ್ಕೆ.

ಒಂದು, ವಾಟ್ಸಾಪ್ ಕಂಪನಿ ಹುಟ್ಟಿದ್ದೇ ತಾವು ಎಂದೂ ಜಾಹಿರಾತು ಹಾಕುವುದಿಲ್ಲ ಎಂಬ ಗುರಿಯೊಂದಿಗೆ. ಆದ್ದರಿಂದ ವಾಟ್ಸಾಪ್ ಅನ್ನು ಕೊಂಡುಕೊಂಡ ಫೇಸ್ಬುಕ್ ಅಂತಹ ನಿರ್ಧಾರಕ್ಕೆ ಬಂದದ್ದು ತಂತ್ರಜ್ಞಾನ ವಲಯದ ಜನರ ಸಿಟ್ಟಿಗೆ ಕಾರಣವಾಗಿದೆ.

ಹಾಗೆಯೇ ತಮ್ಮ ಮತ್ತು ಕುಟುಂಬದ, ಅದರಲ್ಲಿಯೂ ಮಕ್ಕಳ ಕ್ಷೇಮಕ್ಕಾಗಿ ಯಾವುದೇ ಸಾಮಾಜಿಕ ಜಾಲತಾಣಗಳ ಆಫ್ ಗಳ ಬಳಸದೆ, ಕೇವಲ ವಾಟ್ಸಾಪ್ ಅನ್ನು ಬಳಸುವ ವಿಶ್ವದ ಬಹಳ ಬಳಕೆದಾರರಿಗೆ ವಾಟ್ಸಾಪ್ ನ ಈ ನಿರ್ಧಾರ ಆಘಾತ ತಂದಿದೆ. ಅಂದರೆ, ತನ್ನ ಬಳಿ ಇರುವ, “ಜಾಹಿರಾತಿಗೆ ಬಳಕೆ ಆಗಬಲ್ಲ ಮಾಹಿತಿಯನ್ನ”  ಫೇಸ್ಬುಕ್ ಗೆ ಕೊಡುವ ಮೂಲಕ ಈ ಜಗತ್ತಿನ ಅತಿ ದೊಡ್ಡ ಜಾಹೀರಾತು ಜಾಲಕ್ಕೆ ಅವರನ್ನು ತಳ್ಳುವುದು, ಅವರಿಗೆ ಆಘಾತ ಮತ್ತು ಕೋಪ ಎರಡನ್ನೂ ಮೂಡಿಸಿದೆ.

Courtecy: The Netherland News Review

ಇಲ್ಲಿ ಫೇಸ್ಬುಕ್ ಯಾಕೆ ಮುಖ್ಯ?

ಇದುವರೆಗೆ ಎಲ್ಲಾ ತಯಾರಕರು  ಟಿವಿ, ಪತ್ರಿಕೆ ತರದ ಸಮೂಹ ಮಾಧ್ಯಮಗಳ ಅವಲಂಬಿಸಿದ್ದರು. ಆದರೆ ಅಂತರ್ಜಾಲ ಹಾಗು ಸಾಮಾಜಿಕ ಜಾಲತಾಣಗಳ ಆಗಮನದಿಂದ, ವಸ್ತುಗಳ ತಯಾರಕರು, ಇಂದು ಹೆಚ್ಚಿನ ಜನರನ್ನು ಇನ್ನು ನಿಖರವಾಗಿ ಅವುಗಳ ಮೂಲಕ ತಲುಪಲು ಸಾಧ್ಯ.

ಇಂದಿನ ಸಾಮಾಜಿಕ ಜಾಲತಾಣಗಳು ನಿಮ್ಮ ಡೆಮೊಗ್ರಾಫಿಕ್ ಮಾಹಿತಿ ಅಂದರೆ ನಿಮ್ಮ ಊರು, ವಯಸ್ಸು, ಲಿಂಗ, ಭಾಷೆ ಆಧಾರಿತವಾಗಿ ಜಾಹಿರಾತು ಕೊಡುವ ಹಂತವನ್ನು ದಾಟಿ ಮುಂದೆ ಹೋಗಿವೆ. ಅವು ಇಂದು ನಿಮ್ಮನ್ನು ತಲುಪಲು ಮೈಕ್ರೋ ಟಾರ್ಗೆಟಿಂಗ್ (Micro Targeting) ಹಾಗು ಟೇಲರ್ ಮೇಡ್ (Tailor made) ಜಾಹಿರಾತುಗಳ ಬಳಸುತ್ತವೆ. ಅಲ್ಲಿಗೆ ಅವು ಸಾಮಾಜಿಕ ಜಾಲತಾಣ ಹಾಗೂ ಅಂತರ್ಜಾಲದ ಮೇಲೆ ನೀವು ಕೊಟ್ಟ ನಿಮ್ಮ ಎಲ್ಲ ಲೈಕ್, ಡಿಸ್ಲೈಕ್, ರಿಯಾಕ್ಷನ್ ಹಾಗು ನೀವು ಶೇರ್ ಮಾಡುವ ಕಂಟೆಂಟ್ ಆಧಾರದ ಮೇಲೆ “ನಿಮ್ಮ ಸ್ವಭಾವ, ಬಳಕೆಯ ರೀತಿ, ಇಷ್ಟಗಳು, ಇಷ್ಟ ಇಲ್ಲದ ವಿಷಯಗಳ” ಬಗೆಗಿನ ಮಾಹಿತಿ ಹೊಂದಿವೆ.

ಅಲ್ಲದೆ ನಿಮ್ಮನ್ನು ಸಾಮಾಜಿಕ ಜಾಲತಾಣಗಳಲ್ಲಿ ತಲುಪಲು ಬಯಸುವ ತಯಾರಕರು, ನೀವು ಹಿಂದೆ ಖರೀದಿ ಮಾಡಿದ ಅಥವಾ ಖರೀದಿಸ ಬಯಸಿದ ವಸ್ತುಗಳ ಮತ್ತು ನಿಮ್ಮ ಆರ್ಥಿಕ ಮಾಹಿತಿಯನ್ನು ಕೂಡ ಈ ಅಂತರ್ಜಾಲ ಅಥವಾ ಸಾಮಾಜಿಕ ಜಾಲತಾಣ ಕಂಪನಿಗಳ ಜೊತೆ ಹಂಚಿಕೊಳ್ಳುತ್ತಿವೆ.

ಈ ಎಲ್ಲ ಮಾಹಿತಿ ನಿಮ್ಮ ಗುರುತಿನ ಜೊತೆ ಸಂಗ್ರಹಿಸಿದಾಗ, ನೀವು ವೈಯುಕ್ತಿಕವಾಗಿ ಯಾವ ಸರಕಿನ ಜಾಹೀರಾತು ಹಾಕಲು ಸೂಕ್ತರು ಎಂದು ನಿರ್ಧರಿಸಿ, ಸಾಮಾಜಿಕ ಜಾಲತಾಣಗಳು ನಿಮಗೆ ಜಾಹೀರಾತು ನೀಡಬಲ್ಲರು. ಇದರಿಂದ ತಯಾರಕರಿಗೆ ಜಾಹಿರಾತು ಖರ್ಚು ಕಡಿಮೆಯಾಗುತ್ತದೆ. ಕೋಟ್ಯಂತರ ಜನರಿಗೆ ಒಂದು ಜಾಹೀರಾತು ಹಾಕುವ ಬದಲು ಕೇವಲ ಖರೀದಿಸುವ ಆಸಕ್ತಿ ಮತ್ತು ಶಕ್ತಿಯಿರುವ ಸಾವಿರಾರು ಮಂದಿಗೆ ಮಾತ್ರ ಹಾಕಬಹುದು.

ಇದು ಕೇವಲ ಆನ್ಲೈನ್ ಗೆ ಮಾತ್ರ ಸೀಮಿತವೇ?

ಖಂಡಿತ ಇಲ್ಲ. ನಿಮ್ಮ ಇತರೆ ಡಿಸ್ಕೌಂಟ್, ಕೂಪನ್ ಕಾರ್ಡ್ ಗಳು, ನೀವು ಹೋಗುವ ಹೋಟೆಲ್ ಗಳು ಇಲ್ಲವೇ ಇತರೆ ಅಂಗಡಿಗಳು ಬಳಸುವ ಬೇರೆ ಬೇರೆ ಆಪ್ ಗಳು, ನಿಮ್ಮ ಫೋನ್ ನಂಬರ್ ಅಥವಾ ಬ್ಯಾಂಕಿಂಗ್ ಮಾಹಿತಿಯ ಆಧಾರದ ಮೇಲೆ ನಿಮ್ಮ ಖರೀದಿಯ ವಿವರ, ಹಣಕಾಸು ಸ್ಥಿತಿಯ ಮಾಹಿತಿಯನ್ನು ಇದೇ ರೀತಿಯಲ್ಲಿ ಮತ್ತೊಬ್ಬ ಆಸಕ್ತರಿಗೆ, ಅಂದರೆ ಫೇಸ್ಬುಕ್ ರೀತಿಯ ಕಂಪನಿಗಳಿಗೆ ಮಾರುತ್ತವೆ. ಅಲ್ಲಿಗೆ ಫೇಸ್ಬುಕ್ ತರದ ಕಂಪನಿಗಳಿಗೆ, ನೀವು ಅದರ ಬಳಕೆದಾರರು ಮಾತ್ರವೇ ಅಲ್ಲದೆ ಆದಾಯ ತರುವ ಅಸ್ತಿ ಕೂಡ. ಆದಕಾರಣ ಅದು ನಿಮ್ಮ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಎಲ್ಲಾ ಮೂಲಗಳಿಂದ ಸಂಗ್ರಹಿಸುತ್ತಲೇ ಇರುತ್ತದೆ. ಇಂದು ವಾಟ್ಸಪ್ ನಿಂದ ಕೂಡ ಅದನ್ನು ಸಂಗ್ರಹಿಸಲು ಹೊರಟಿದೆ.

Courtecy: MakeUseOf.com

ಇಲ್ಲಿ ಘೇಸ್ಬುಕ್ ಯಾಕೆ ಅಷ್ಟೊಂದು ಮುಖ್ಯ?

ಯಾಕೆಂದರೆ ಉಳಿದ ಯಾರಿಗೂ ನೀವು ಯಾರೆಂದು ನೇರವಾಗಿ ಗೊತ್ತಿಲ್ಲ. ನಿಮ್ಮನ್ನು ತಲುಪಲು ಸಾಧ್ಯವಿಲ್ಲ. ಆದರೆ ಫೇಸ್ಬುಕ್, ಗೂಗಲ್, ಅಮೆಜಾನ್ ಇತ್ಯಾದಿ ತರದ ಕಂಪನಿಗಳಿಗೆ ನೀವು ಯಾರು, ನಿಮ್ಮ ಹೆಸರು ವಿಳಾಸ ಏನೆಂದು ಗೊತ್ತಿದೆ. ಅವರಿಗೆ ನಿಮ್ಮ ಇಷ್ಟ ಏನು ಎಂದು ತಿಳಿದರೆ ನಿಮಗೆ ಜಾಹಿರಾತು ಕೊಡುವ ಮೂಲಕ ಉತ್ಪನ್ನಗಳ ಆಯ್ಕೆ ನಿಮ್ಮ ಮುಂದೆ ಇಡಬಲ್ಲರು.

ಆದರೆ ಇಂದು ಕೇವಲ ವಸ್ತುಗಳ ಮಾರುವ ಬದಲು ವಿಷಯಗಳ, ರಾಜಕೀಯ ಸಿದ್ಧಾಂತಗಳ ಕೂಡ ಮಾರುವ/ತಲುಪಿಸುವ ಜಾಹೀರಾತುದಾರರನ್ನು, ಅಂತರ್ಜಾಲದ ಕಂಪನಿಗಳು  ಸೆಳೆಯುತ್ತಿವೆ. ಈ ಕಂಪನಿಗಳ ಲಾಭದ ಆಸೆಗೆ ಅವರು ನಿಮ್ಮ ಗಮನವನ್ನು ಬಯಸುವ ಕಾರಣ ಜನರ ಮತ್ತು ಮಕ್ಕಳ  ಗಮನ ಎಡೆಬಿಡದೆ ಸೆಳೆಯಲಾಗುತ್ತದೆ. ಕೆಲವೊಮ್ಮೆ ಆನ್ಲೈನ್ ಗೇಮಿಂಗ್ ಇತ್ಯಾದಿ ತರದ ಉತ್ಪನ್ನಗಳಿಗೆ ನಿಮ್ಮ ಸಮಯ ಹಾಗು ಗಮನವೇ ಮುಖ್ಯ ಸರಕು. ನಿಮ್ಮ ಮಕ್ಕಳು ತಮ್ಮ ಓದುವ, ಕಲಿಯುವ, ಜನರೊಂದಿಗೆ ಬೆರೆಯುವ ಸಮಯದಲ್ಲಿ ತಪ್ಪು ಜಾಹಿರಾತುಗಳ  ಹಿಂದೆ ಹೋದಲ್ಲಿ ಅವರು ಆನ್ಲೈನ್ ಗೇಂ ಅಥವಾ ಮನೋರಂಜನೆಯ ಆಪ್ ಗಳ ದಾಸರಾಗಬಹುದು. ಈ ರೀತಿಯ ಅಭ್ಯಾಸಗಳು ಮಕ್ಕಳ ಅಥವಾ ಹಿರಿಯರ, ಯಾವುದೇ ಬಳಕೆದಾರರ, ದೈಹಿಕ ಅರೋಗ್ಯ, ಗಮನ, ಶ್ರದ್ದೆ ಇತ್ಯಾದಿಗೆ ಕೂಡ ಹಾನಿ ಮಾಡುತ್ತವೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಇಂದು ವಿಶ್ವದ ಎಲ್ಲೆಡೆ ಸುಳ್ಳುಸುದ್ದಿ, ತಪ್ಪು ಮಾಹಿತಿ ಹಾಗು ರಾಜಕೀಯ ವಾದಗಳ ಮತ್ತು ಕಾನ್ಸ್ಪಿರಸಿ ತಿಯರಿಗಳ ಹರಡಲು ಕೂಡಾ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ಹಾಗು ಅಂತರ್ಜಾಲ ಸಂಸ್ಥೆಗಳು ಪರೋಕ್ಷವಾಗಿ ಕಾರಣವಾಗಿವೆ. ಇವುಗಳಿಂದ ಸದ್ಯಕ್ಕೆ ಅಮೇರಿಕಾದ ರೀತಿಯ ಮುಂದುವರಿದ ದೇಶದಲ್ಲಿಯೇ ಪ್ರಜಾಪ್ರಭುತ್ವಕ್ಕೆ ಮತ್ತು ದೇಶದ ಜನ ಸಮುದಾಯದ ಭದ್ರತೆ, ಏಕತೆಗೆ ದೊಡ್ಡ ಮಟ್ಟದ ಹಾನಿಯಾಗಿದೆ. ಅದನ್ನು ನಾವು ಇದೆ ಸಮಯದಲ್ಲಿ ನೋಡುತ್ತಿದ್ದೇವೆ ಕೂಡ. ಅದು ಕೂಡ ವಾಟ್ಸಾಪ್ ನ ಈ ಹೊಸ ನಿರ್ಧಾರಗಳ ಮೇಲೆ ಜನರು ಗಮನ ಹರಿಸುವ ಹಾಗೆ ಮಾಡಿ, ಇಂದು ಬರಲಿರುವ ಪ್ರೈವಸಿ ಪಾಲಿಸಿ ಮೇಲೆ ಗಂಭೀರವಾಗಿ ಚಿಂತನೆ ಮಾಡಲು ಒಂದು ಕಾರಣವಾಗಿದೆ.

ಈ ಎಲ್ಲ ಕಾರಣಕ್ಕೆ, ಫೇಸ್ಬುಕ್ ಮತ್ತು ಇಂಟರ್ನೆಟ್ ನಿಂದ ದೂರವಿದ್ದು, ತಮ್ಮ ಮತ್ತು ಕುಟುಂಬದ ಮಾನಸಿಕ ಹಾಗು ದೈಹಿಕ ಅರೋಗ್ಯ ಬಯಸುವುದೇ ಅಲ್ಲದೆ ತಮ್ಮ ಸುತ್ತಲಿನ ಸಮುದಾಯದ ಅರೋಗ್ಯ ಬಯಸಿದ ಜನರಿಗೆ, ವಾಟ್ಸಾಪ್ ನಂತಹ ಮೆಸೇಜಿಂಗ್ ಆಪ್ ಗೆ ಕೂಡ ಜಾಹೀರಾತು ತರಲು ಹೊರಟಿರುವುದು, ಫೇಸ್ಬುಕ್ ಮೇಲೆ ಕೋಪವನ್ನು ಮೂಡಿಸಿದೆ.

ಇಲ್ಲಿ ವಾಟ್ಸಾಪ್ ಉತ್ತಮ ಎನ್ಕ್ರಿಪ್ಶನ್ ಹೊಂದಿದ ಕಾರಣ ನೀವು ವಾಟ್ಸಾಪ್ ನಲ್ಲಿ ಹಂಚಿಕೊಂಡ ಅತಿ ಸೂಕ್ಷ್ಮ ವೈಯುಕ್ತಿಕ ಮಾತುಕತೆಯ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಆದರೆ ನಿಮ್ಮ ಬಳಕೆಯ ಸ್ವಭಾವದ ಮಾಹಿತಿ ಫೇಸ್ಬುಕ್ ಗೆ ಕೊಟ್ಟು ಅಲ್ಲಿಂದ ನಿಮ್ಮ ಆಗಲೇ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ, ವಿಶ್ವದ ಅತಿದೊಡ್ಡ ಜಾಹೀರಾತು ಬಲೆಯನ್ನು ನಿಮ್ಮ ವಾಟ್ಸಾಪ್ ಗೆ ಫೇಸ್ಬುಕ್ ತರುತ್ತಿರುವುದೇ ಬಹಳ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಆಗಿದ್ದಲ್ಲಿ ನೀವು ಯೋಚಿಸಿ.

ನೀವು ಫೇಸ್ಬುಕ್ ಬಳಕೆದಾರರಾಗಿದ್ದಲ್ಲಿ ನಿಮಗಿರುವ ನಿಜವಾದ ತೊಂದರೆ ಏನು?

ಭಾರತದಲ್ಲಿ ವಾಟ್ಸಾಪ್ ಅಥವಾ ಫೇಸ್ಬುಕ್ ಅನ್ನು ನಾವು ತಪ್ಪಿಸಿಕೊಳ್ಳಲು ಸಾಧ್ಯವೇ?

ನಮ್ಮ ಅಸಂಖ್ಯಾತ, ಎಲ್ಲಾ ಆರ್ಥಿಕ ವರ್ಗದ, ಎಲ್ಲಾ ವಯಸ್ಸಿನ ಜನರು ಇಂದು ಸುಲಭವಾಗಿ ಬಳಸುವ ಈ ಆಪ್ ಗಳ ಬಳಕೆಯನ್ನು ತಗ್ಗಿಸಲು ಸಾಧ್ಯವೇ?

ಇಲ್ಲದಾದಲ್ಲಿ ಜನರಿಗೆ ಅರಿವು ಮೂಡುವವರೆಗೆ ಇವುಗಳ ಬಳಸುವ ಬಗೆ ಹೇಗೆ?

ಬಹುಶಃ ಉತ್ತರ, ಜವಾಬ್ದಾರಿಯುತವಾಗಿ ಬಳಸುವುದು, ಸತತವಾಗಿ ಅರಿವು ಮೂಡಿಸುವುದು, ಜೊತೆಗೆ ಇತರೇ ಒಳ್ಳೆಯ ಆಪ್ ಗಳಿಗೆ ಹೊಂದಿಕೊಳ್ಳುವುದು ಕೂಡ ಎಂದಾಗಿದೆ.

ಕೊನೆಗೆ ನಿಮ್ಮ ಬಗೆಗೆ ವ್ಯಾವಹಾರಿಕ ಅವಶ್ಯಕತೆಗಾಗಿ ಸಂಗ್ರಹಿತ ಮಾಹಿತಿಯನ್ನು ನೀವು ವಾಟ್ಸಾಪ್/ಫೇಸ್ಬುಕ್ ನಲ್ಲಿ ಡೌನ್ಲೋಡ್ ಮಾಡಿ ನೋಡಬಹುದು. ವಾಟ್ಸಾಪ್ ನಲ್ಲಿ ನೀವು ನಿಮ್ಮ ಅಕೌಂಟ್ ಇನ್ಫಾರ್ಮಶನ್ ಅನ್ನು ಕೇಳುವ ಆಯ್ಕೆ ಇದೆ. ಹಾಗೆಯೇ ಫೇಸ್ಬುಕ್ನಲ್ಲಿ ನಿಮ್ಮ ಆಫ್ಲೈನ್ ಆಕ್ಟಿವಿಟಿಸ್ ಮಾಹಿತಿ ಯಾವ ಇತರೆ ಆಪ್ ಅಥವಾ ಜಾಹೀರಾತುದಾರರು ಫೇಸ್ಬುಕ್ಗೆ ನಿಮ್ಮ ಬಗ್ಗೆ ಏನು  ಕಳಿಸಿದರು ಎಂದು ಹೇಳುತ್ತದೆ. ಹಾಗೆ ನಿಮ್ಮ ಸ್ವಂತ ಫೇಸ್ಬುಕ್ ಖಾತೆಯ ಯಾವ ತರದ ಆನ್ಲೈನ್ ಮಾಹಿತಿ ಫೇಸ್ಬುಕ್ ಜಾಹೀರಾತುದಾರರಿಗೆ ಕೊಡಲು ಸಂಗ್ರಹಿಸಿದೆ ಎಂದು ಕೂಡ ಲಭ್ಯವಿದೆ.

ಆದರೆ ನಿಮ್ಮ ಈ ಎಲ್ಲಾ ಮಾಹಿತಿಯನ್ನು ಈ ಕಂಪನಿಗಳು ಮಾರಿದಾಗ ಬರುವ ಮೂರನೇ ಸಂಸ್ಥೆಗಳು ಅದನ್ನು ಹೇಗೆ ಬಳಸುವರು ಮತ್ತು ಇನ್ನೂ ಹೆಚ್ಚಿನ ಯಾವ ಹೊಳಹುಗಳನ್ನು ಅವರು ಅದರಲ್ಲಿ ಕಾಣಬಲ್ಲರು? ಅದರ ಆಧಾರದ ಮೇಲೆ ಯಾವ ರೀತಿಯ ಜಾಹೀರಾತು ಮತ್ತು ವಿಷಯಗಳ ನಿಮ್ಮ ಗಮನ ಸೆಳೆಯಲು ಅಥವಾ ಓಲೈಸಲು ತಯಾರಿಸಬಲ್ಲರು? ಎಂಬುದು ಇಂದಿಗೆ ಸಾಮಾಜಿಕ ದೃಷ್ಟಿಯಿಂದ ಕಾಳಜಿ ಹಾಗೂ ಭಯ ಮೂಡಿಸುವ ವಿಷಯ ಆಗಿದೆ.

ಆದ್ದರಿನಿಂದ ಕೇವಲ ಹೆಚ್ಚಿನ ಅರಿವು ಮತ್ತು ಇವೆಲ್ಲವನ್ನೂ ಯೋಚಿಸಿ ನೀವು ಮಾಡುವ ಸರಿಯಾದ ಆಯ್ಕೆ, ದಿನ ನಿತ್ಯದ ಶಿಸ್ತಿನ ಆನ್ಲೈನ್ ಚಟುವಟಿಕಗಳು, ನಿಮ್ಮ ಪ್ರೈವಸಿ ಮಾತ್ರವಲ್ಲದೆ ನಿಮ್ಮ ಸ್ವಂತ ಮಾಹಿತಿ ಮೇಲಿನ ಹಕ್ಕನ್ನು ನಿಮಗೆ ಕೊಟ್ಟು, ನಿಮ್ಮನ್ನು ಮತ್ತು ನಿಮ್ಮ ಸುತ್ತಲಿನ ಜನರು ಹಾಗು ಸಮುದಾಯವನ್ನು ಕಾಪಾಡಬಲ್ಲವು.

ಕೊನೆಯದಾಗಿ ಸಿಗ್ನಲ್ ಅಥವಾ ಟೆಲಿಗ್ರಾಂ ಅಲ್ಲದೆ ಇನ್ನು ಇತರೆ ಆಯ್ಕೆಗಳು ನಮ್ಮ ಮುಂದಿವೆ. ಸಿಗ್ನಲ್ ಯಾವುದೇ ಟರ್ಮ್ಸ್ ಅಂಡ್ ಕಂಡೀಷನ್ ಹೊಂದಿಲ್ಲ. ಯಾಕೆಂದರೆ ಅದು ಯಾವುದೇ ಮಾಹಿತಿ ಸಂಗ್ರಹ ಮಾಡುವುದಿಲ್ಲ. ನಿಮಗೆ ಖಂಡಿತ ಪ್ರೈವಸಿ ಕೊಡುತ್ತದೆ.  ಆದರೆ ಫೇಸ್ಬುಕ್ ನ ಅಥವಾ ಅಂತಹ ಜಾಲತಾಣಗಳ ಬಳಕೆದಾರರು ಅದನ್ನು ಬಿಡದೆ ಸಿಗ್ನಲ್ ನಿಂದ ಪಡೆಯುವ ಲಾಭ ಬಹುತೇಕ ಶೂನ್ಯವೇ ಆಗಿದೆ.


  • WhatsApp is delaying by three months the rollout of a new policy that some critics said would turn over user data to Facebook. Users originally were set to opt in or out of the policy change on February 8 and will now not have to until May 15. WhatsApp said the delay is due to “confusion” and “misinformation” surrounding the new policy, which it said will “not expand our ability to share data with Facebook.”

Covery image courtecy: Daily Express, UK

ಪ್ರತಿಕ್ರಿಯಿಸಿ