ಮಾಧ್ಯಮಗಳಲ್ಲಿ ಮಹಿಳೆ: ಅಗೋಚರ ಅಡೆತಡೆ

1964ರ ಭಾರತ – ಪಾಕಿಸ್ತಾನ ಯುದ್ಧದ ವರದಿಗಾರಿಕೆ ಮಾಡಿದ್ದ ಪ್ರಭಾ ದತ್ ಹೊಸ ಮೇಲ್ಪಂಕ್ತಿ ಹಾಕಿದರು. ಆಗ, ಯುದ್ಧದ ವರದಿಗಾರಿಕೆಗೆ ಪ್ರಭಾ ದತ್ ಗೆ ಅವರು ಕೆಲಸ ಮಾಡುತ್ತಿದ್ದ `ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆ ಅವಕಾಶವನ್ನೇನೂ ನೀಡಿರಲಿಲ್ಲ. ಹೀಗಿದ್ದೂ ಪಟ್ಟು ಬಿಡದ ಪ್ರಭಾ ದತ್ ರಜೆ ಹಾಕಿ ರಣರಂಗಕ್ಕೆ ತೆರಳಿ ಸರಣಿ ವರದಿಗಳನ್ನು ಕಚೇರಿಗೆ ಕಳಿಸಿದ್ದರು. ಅವು ಉತ್ತಮ ಗುಣಮಟ್ಟದ್ದಾಗಿದ್ದರಿಂದ ಆ ಸರಣಿ ವರದಿಗಳನ್ನು ಕೈ ಬಿಡಲಾಗದೆ ಪ್ರಕಟಿಸಿದ್ದ ಪತ್ರಿಕೆ, ಸರಣಿಯ ಕೊನೆ ವರದಿಯ ಜೊತೆಗೆ ಮಿಲಿಟರಿ ಟ್ಯಾಂಕ್ ಮುಂದೆ ನಿಂತಿದ್ದ ಪ್ರಭಾದತ್ ಚಿತ್ರವನ್ನೂ ಪ್ರಕಟಿಸಿತ್ತು.

ದಕ್ಷಿಣ ಏಷ್ಯಾದ ಮಹಿಳಾ ಪತ್ರಕರ್ತರು (ಕೃಪೆ: Aman ki Asha)

ದಕ್ಷಿಣ ಏಷ್ಯಾದ ಮಹಿಳಾ ಪತ್ರಕರ್ತರು (ಕೃಪೆ: Aman ki Asha)

`ನಾನು ಹಾಗೂ ನನ್ನ ಸ್ನೇಹಿತರು ಹಾಕಿರುವುದು ಕಡಗ, ಬಳೆಯಲ್ಲ’ ಎಂಬಂಥ ಚಿತ್ರನಟ ಸುದೀಪ್ ಟ್ವೀಟ್ ಮೊನ್ನೆ ವಿವಾದ ಸೃಷ್ಟಿಸಿತು. ಬಳೆಯ ರೂಪಕವನ್ನು ಬಳಸುವುದು ಹೊಸದೇನಲ್ಲ. ಹೆಣ್ಣುಮಕ್ಕಳ ಕೈಗಳನ್ನು ಅಲಂಕರಿಸುವ ಬಳೆಗಳನ್ನು ತುಚ್ಛೀಕರಿಸುವ ರೀತಿಯಲ್ಲಿ `ನಾನೇನೂ ಬಳೆ ತೊಟ್ಟಿಲ್ಲ’ ಎಂದು ಹೇಳುತ್ತಾ ಪುರುಷರು ತಮ್ಮ ಗ್ರಹೀತ ಮೇಲ್ಮೆಯನ್ನು ಪ್ರದರ್ಶಿಸುವುದು ಮಾಮೂಲು. ಆದರೆ, `ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದ ಸಿದ್ಧರಾಮಯ್ಯನವರು ಕೈಗೆ ಬಳೆ ತೊಟ್ಟುಕೊಳ್ಳಲಿ’ ಎಂಬಂಥ ಹೇಳಿಕೆಯನ್ನು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರೂ ಈ ಹಿಂದೆ ನೀಡಿದ್ದು ದೊಡ್ಡ ವಿಪರ್ಯಾಸ. ಎಷ್ಟರ ಮಟ್ಟಿಗೆ ಪುರುಷ ಪಾರಮ್ಯ ಮನಸ್ಥಿತಿ ನಮ್ಮ ಸಮಾಜದಲ್ಲಿ ಅಂತರ್ಗತವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ನಾವು ಬಳಸುವ ಭಾಷೆಯಲ್ಲೇ ಹೆಣ್ಣಿನ ದ್ವಿತೀಯ ದರ್ಜೆ ಸ್ಥಾನಮಾನವನ್ನು ಸಮಾಜದಲ್ಲಿ ಪದೇ ಪದೇ ನೆನಪಿಸಿ ಪುಷ್ಟೀಕರಿಸಲಾಗುತ್ತಿರುತ್ತದೆ.

ಇಂತಹ ಭಾಷಾ ಬಳಕೆ ವಿರುದ್ಧ ಜನರನ್ನು ಸಂವೇದನಾಶೀಲರನ್ನಾಗಿಸುವುದು ಎಂದಿಗೆ? ಮಾಧ್ಯಮಗಳ ಪ್ರಸ್ತುತತೆ, ಹೊಣೆಗಾರಿಕೆ ಇಲ್ಲಿ ಮುಖ್ಯವಾಗುತ್ತದೆ. ಇಂತಹ ಮಾಧ್ಯಮ ರಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯವಾದರೂ ಎಷ್ಟರ ಮಟ್ಟಿಗೆ ಇದೆ?

ಹಿಂದೆಂದೂ ಕಾಣದ ಮಟ್ಟಿಗೆ ವೃತ್ತ ಪತ್ರಿಕೆಗಳು ಹಾಗೂ ಸುದ್ದಿ ವಾಹಿನಿಗಳ ಹೆಚ್ಚಳವನ್ನು ಇಂದು ನಾವು ಕಾಣುತ್ತಿದ್ದೇವೆ. ಹಾಗೆಯೇ ಸುದ್ದಿ ಮನೆಗಳಲ್ಲಿ ಮಹಿಳೆಯರ ಉಪಸ್ಥಿತಿಯೂ ಎದ್ದು ಕಾಣುತ್ತಿದೆ. ಕೆಲವು ರಾಷ್ಟ್ರೀಯ ಪತ್ರಿಕೆಗಳಲ್ಲದೆ ಪ್ರಾದೇಶಿಕ ಮಾಧ್ಯಮಗಳ ಆಡಳಿತ ಮಂಡಳಿಗಳಲ್ಲೂ ಮಹಿಳೆಯರು ಪ್ರಮುಖ ಪಾತ್ರಗಳನ್ನು ವಹಿಸುತ್ತಿರುವುದನ್ನೂ ಕಾಣುತ್ತಿದ್ದೇವೆ. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸೃಷ್ಟಿಯಾಗಿರುವ ಹಲವು ವಿಭಿನ್ನ ಹೊಸ ಮಾಧ್ಯಮಗಳಲ್ಲೂ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.

ಕೆಲವರಾದರೂ ಮಹಿಳೆಯರು ಇಂದು ಸಂಪಾದಕಿಯರಾಗಿದ್ದಾರೆ, ಅಂಕಣಕಾರರಾಗಿದ್ದಾರೆ. ಯುದ್ಧ ಸ್ಥಳಗಳಿಂದ ವರದಿ ಮಾಡಿದ್ದಾರೆ. ಹಲವು ಟಿವಿ ಸುದ್ದಿ ವಾಹಿನಿಗಳ ಮುಖವಾಣಿಗಳಾಗಿದ್ದಾರೆ. ಎಂದರೆ, ಮಾಧ್ಯಮ ಕ್ಷೇತ್ರವು ಪಾರಂಪರಿಕವಾಗಿಯೇ ಪುರುಷ ಕೋಟೆ ಎಂಬಂತಹ ಮಾತು ಅಪ್ರಸ್ತುತವಾಗುವಷ್ಟರ ಮಟ್ಟಿಗೆ ಮಹಿಳಾ ಗೋಚರತೆ ಎದ್ದು ಕಾಣಿಸುತ್ತಿದೆ. ಆದರೆ ಈ ಪರಿವರ್ತನೆ ಪೂರ್ಣವಾದದ್ದೇ ಅಥವಾ ಇನ್ನೂ ಅಂತರಗಳು, ಅಸಮತೋಲನಗಳು ಉಳಿದುಕೊಂಡಿವೆಯೆ? ಎಂಬುದು ಪ್ರಶ್ನೆ.

ಕಮಲಾ ಮಂಕೇಕರ್ (ಕೃಪೆ: The Hindu)

ಕಮಲಾ ಮಂಕೇಕರ್ (ಕೃಪೆ: The Hindu)

ಇತಿಹಾಸದತ್ತ ಕಣ್ಣು ಹಾಯಿಸಿದಲ್ಲಿ ಸ್ವಾತಂತ್ರ್ಯಾನಂತರ ಕಾಲದಲ್ಲಿ ದಿನಪತ್ರಿಕೆಗಳ ನ್ಯೂಸ್ ರೂಂಗಳಲ್ಲಿ ಮಹಿಳೆಯ ಉಪಸ್ಥಿತಿ ಇರಲಿಲ್ಲ. ಆದರೆ ರಾಷ್ಟ್ರಮಟ್ಟದ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಬೆರಳೆಣಿಕೆಯ ಹೆಸರುಗಳು ಕೇಳಿಬರುತ್ತವೆ. ಕಮಲಾ ಮಂಕೇಕರ್ ಅವರು 1949ರಲ್ಲಿಯೇ ದೆಹಲಿಯ “ ಟೈಮ್ಸ್ ಆಫ್ ಇಂಡಿಯಾ” ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯರಿಗೇ ಪ್ರತ್ಯೇಕ ಶೌಚಾಲಯ ಇರುವುದು ಸಾಧ್ಯವೇ ಇರಲಿಲ್ಲ. ಈಗ ಕೂಡ ಜಿಲ್ಲಾ ಮಟ್ಟಗಳಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತೆಯರಿಗೆ ಶೌಚಾಲಯ ಸಮಸ್ಯೆಗಳು ಬಗೆಹರಿದಿಲ್ಲ ಎಂಬುದು ಕಹಿ ವಾಸ್ತವ. ಕಮಲಾ ಮಂಕೇಕರ್ ಅವರಿಗೆ ಆಗ ಪತ್ರಿಕಾ ಸಂಸ್ಥೆಯ ಆಡಳಿತ ವರ್ಗದವರು ಬಳಸುತ್ತಿದ್ದ ಶೌಚಾಲಯದ ಬೀಗದ ಕೀ ನೀಡಲಾಗಿತ್ತಂತೆ. ಉಪಸಂಪಾದಕ ಕೆಲಸದ ಪಾಳಿಯನ್ನು ಕಡ್ಡಾಯವಾಗಿ ಮುಗಿಸಿ. `ಆ ನಂತರವಷ್ಟೇ ವರದಿಗಾರಿಕೆ ಕೆಲಸ ಮಾಡಬೇಕೆಂದರೆ ಮಾಡಿ’ ಎಂಬಂಥ ನಿರ್ದೇಶನವಿತ್ತು ಅವರಿಗೆ. ರಾಷ್ಟ್ರದ ಮೊದಲ ಸಂಸತ್ ನಲ್ಲಿದ್ದ 22 ಮಹಿಳಾ ಸಂಸತ್ ಸದಸ್ಯೆಯರ ಪೈಕಿ 10 ಮಂದಿಯ ಸಂದರ್ಶನ ಮಾಡಿದ್ದರು ಕಮಲಾ ಮಂಕೇಕರ್.

ಭಾರತದ 20ನೇ ಶತಮಾನದ ಪ್ರಮುಖ ದಶಕಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಅಮರವಾಗಿಸಿರುವುದು ಭಾರತದ ಪ್ರಥಮ ಮಹಿಳಾ ಪತ್ರಿಕಾ ಛಾಯಾಗ್ರಾಹಕಿ ಹೋಮೈ ವಾರಾವಲ್ಲಾ ಎಂಬುದು ಹೆಗ್ಗಳಿಕೆ. ಸ್ವಾತಂತ್ರ್ಯ ಪೂರ್ವ ಕಾಲದ 1940ರಿಂದ ಸ್ವಾತಂತ್ರ್ಯೋತ್ತರ ಕಾಲದ 1970ರವರೆಗೆ 30 ವರ್ಷಗಳ ಕಾಲ ದೆಹಲಿಯ ರಾಜಕೀಯ ಚಟುವಟಿಕೆಗಳ ಬದುಕನ್ನು ಕಪ್ಪು ಬಿಳುಪು ಛಾಯಾಚಿತ್ರಗಳಲ್ಲಿ ಹೋಮೈ ಸೆರೆಹಿಡಿದಿದ್ದಾರೆ. ಈಗಲೂ ಪತ್ರಿಕಾ ರಂಗದಲ್ಲಿ ಪತ್ರಿಕಾ ಛಾಯಾಗ್ರಾಹಕಿಯರ ಪ್ರಮಾಣ ಬೆರಳೆಣಿಕೆಯದು ಎಂಬುದನ್ನು ಗಮನಿಸಿದಲ್ಲಿ ಹೋಮೈ ಅವರ ಆ ಕಾಲದ ಸಾಧನೆ ಮಹತ್ವದ್ದು.

ಉಷಾ ರಾಯ್ ಅವರು ದೆಹಲಿಯ `ಟೈಮ್ಸ್ ಆಫ್ ಇಂಡಿಯಾ’ದಲ್ಲಿ 1964ರಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿದ ಏಕೈಕ ಮಹಿಳೆ. ಅದೇ ಸಂದರ್ಭದಲ್ಲಿ ಪ್ರಭಾ ದತ್ ಅವರು “ಹಿಂದೂಸ್ತಾನ್ ಟೈಮ್ಸ್”ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಭಾ ದತ್ ಅವರು ಖ್ಯಾತ ಪತ್ರಕರ್ತೆ ಬರ್ಕಾ ದತ್ ಅವರ ತಾಯಿ.

1964ರ ಭಾರತ – ಪಾಕಿಸ್ತಾನ ಯುದ್ಧದ ವರದಿಗಾರಿಕೆ ಮಾಡಿದ್ದ ಪ್ರಭಾ ದತ್ ಹೊಸ ಮೇಲ್ಪಂಕ್ತಿ ಹಾಕಿದರು. ಆಗ, ಯುದ್ಧದ ವರದಿಗಾರಿಕೆಗೆ ಪ್ರಭಾ ದತ್ ಗೆ ಅವರು ಕೆಲಸ ಮಾಡುತ್ತಿದ್ದ `ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆ ಅವಕಾಶವನ್ನೇನೂ ನೀಡಿರಲಿಲ್ಲ. ಹೀಗಿದ್ದೂ ಪಟ್ಟು ಬಿಡದ ಪ್ರಭಾ ದತ್ ರಜೆ ಹಾಕಿ ರಣರಂಗಕ್ಕೆ ತೆರಳಿ ಸರಣಿ ವರದಿಗಳನ್ನು ಕಚೇರಿಗೆ ಕಳಿಸಿದ್ದರು. ಅವು ಉತ್ತಮ ಗುಣಮಟ್ಟದ್ದಾಗಿದ್ದರಿಂದ ಆ ಸರಣಿ ವರದಿಗಳನ್ನು ಕೈ ಬಿಡಲಾಗದೆ ಪ್ರಕಟಿಸಿದ್ದ ಪತ್ರಿಕೆ, ಸರಣಿಯ ಕೊನೆ ವರದಿಯ ಜೊತೆಗೆ ಮಿಲಿಟರಿ ಟ್ಯಾಂಕ್ ಮುಂದೆ ನಿಂತಿದ್ದ ಪ್ರಭಾ?ದತ್ ಚಿತ್ರವನ್ನೂ ಪ್ರಕಟಿಸಿತ್ತು.

ಪ್ರಭಾ ದತ್ (ಅಂತರ್ಜಾಲ ಚಿತ್ರ)

ಪ್ರಭಾ ದತ್ (ಅಂತರ್ಜಾಲ ಚಿತ್ರ)

ಕನ್ನಡ ಪತ್ರಿಕಾ ಕ್ಷೇತ್ರವನ್ನು ತೆಗೆದುಕೊಂಡಲ್ಲಿ ಮುಖ್ಯವಾಹಿನಿಯ ಕನ್ನಡ ವೃತ್ತಪತ್ರಿಕಾ ಲೋಕಕ್ಕೆ ಮಹಿಳೆ ಪ್ರವೇಶ ಪಡೆದದ್ದೇ ಕಳೆದ ಶತಮಾನದ 70ರ ದಶಕದಲ್ಲಿ ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.
`ದಕ್ಷಿಣ ಭಾರತದಲ್ಲಿ ಪತ್ರಕರ್ತೆಯರ ಸಮಸ್ಯೆಗಳು ಹಾಗೂ ಭವಿಷ್ಯ’ ಕುರಿತಂತೆ 1980ರಲ್ಲಿ ಎರಡನೇ ಪತ್ರಿಕಾ ಆಯೋಗವು ವರದಿಯೊಂದನ್ನು ಸಿದ್ಧ ಪಡಿಸಿತ್ತು. ಈ ಅಪ್ರಕಟಿತ ವರದಿಯನ್ನು ಹಿರಿಯ ಪತ್ರಕರ್ತೆ ಆರ್. ಅಖಿಲೇಶ್ವರಿ ಅವರು ತಮ್ಮ `ವಿಮೆನ್ ಜರ್ನಲಿಸ್ಟ್ಸ್ ಇನ್ ಇಂಡಿಯಾ: ಸ್ವಿಮ್ಮಿಂಗ್ ಎಗೇನ್ಸ್ಟ್ ದಿ ಟೈಡ್’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಈ ವರದಿ, ಆ ಕಾಲದ ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳ ಪತ್ರಕರ್ತೆಯರ ಸ್ಥಿತಿಗತಿಯ ವಿವರಗಳನ್ನು ನೀಡುತ್ತದೆ.

ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಕೇರಳಗಳಲ್ಲಿ ನಡೆಸಲಾದ ಈ ಅಧ್ಯಯನದ ಪ್ರಕಾರ, ಸಂಪ್ರದಾಯಶೀಲ ದಕ್ಷಿಣ ಭಾರತದಲ್ಲಿ ಪತ್ರಕರ್ತೆಯರು ಬಹಳ ಅಪರೂಪವಾಗಿದ್ದರು. ನಗರಪ್ರದೇಶಗಳಲ್ಲಷ್ಟೇ ಕೆಲವು ಪತ್ರಕರ್ತೆಯರನ್ನು ಕಾಣಬಹುದಿತ್ತು. ಪತ್ರಕರ್ತೆಯರನ್ನು ವಿಚಿತ್ರವಾಗಿ ಕಾಣುವುದು ಮಾಮೂಲಾಗಿತ್ತು. ಪತ್ರಿಕೋದ್ಯಮ ಮಹಿಳೆಯರಿಗಲ್ಲ ಎಂದು ನಿರುತ್ತೇಜನಗೊಳಿಸುವ ವಾತಾವರಣವಿತ್ತು. ಇನ್ನು ಅವರನ್ನು ಸಮಾನರಾಗಿ ಪರಿಗಣಿಸುವುದಂತೂ ದೂರವೇ ಉಳಿದಿತ್ತು. ಮಹಿಳೆಗೆ ವರದಿಗಾರಿಕೆಗೆ ಅವಕಾಶ ನೀಡಿದರೂ ಅದು ಮಹಿಳೆ, ಮಕ್ಕಳು ಹಾಗೂ ಸಾಂಸ್ಕೃತಿಕ ಸಮಾರಂಭಗಳಿಗೆ ಸೀಮಿತವಾಗಿರುತ್ತಿತ್ತು. ಅಪರಾಧ, ರಾಜಕೀಯ ಅಥವಾ ಶಾಸನಸಭೆಗಳ ವರದಿಗಾರಿಕೆ ಅವಕಾಶ ಮಹಿಳೆಗೆ ಸಿಗುತ್ತಿರಲಿಲ್ಲ. ತನಿಖಾ ವರದಿಗಾರಿಕೆಯಂತೂ ದುರ್ಲಭವಾಗಿತ್ತು ಎಂದು ಈ ವರದಿ ಹೇಳಿದೆ ಹೀಗಿದ್ದೂ ಕೆಲವು ಮ್ಯಾಗ್ ಝೀನ್ ಗಳಲ್ಲಿ ಸಂಪಾದಕಿಯರು ಇದ್ದುದಕ್ಕೆ ಅವರಿಗಿದ್ದ ನೆಂಟಸ್ತಿಕೆಗಳು ಕಾರಣವಾಗಿದ್ದವು. ಶ್ರೀಮತಿ ಕೆ ಎಂ ಮ್ಯಾಥ್ಯೂ ಅವರು ಮಲಯಾಳಂ ಮಾಸಿಕ `ವನಿತಾ’ ಸಂಪಾದಕಿಯಾಗಿದ್ದರು. ಇದಕ್ಕೆ `ಮಲಯಾಳ ಮನೋರಮಾ’ ಮುಖ್ಯ ಸಂಪಾದಕ ಹಾಗೂ ಮಾಲೀಕ ಕೆ ಎಂ ಮ್ಯಾಥ್ಯೂ ಅವರು ಹೇಳಿದ್ದ ಮಾತುಗಳಿವು: `ಅವರು ಆ ಮ್ಯಾಗಝೀನ್ ನ ಸಂಪಾದಕಿ. ಏಕೆಂದರೆ ಅವರು ನನ್ನ ಪತ್ನಿ’.

ಈಗ ಈ ಪರಿಸ್ಥಿತಿ ಬದಲಾಗಿದೆ ಎನಿಸುತ್ತದೆಯೆ? ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಬಹುಶಃ ಈಗಲೂ ಈ ಮಾತುಗಳು ಪ್ರಸ್ತುತ ಎನಿಸುವಂತೆಯೇ ಇವೆ. “ಕೇವಲ ಎರಡು ಪತ್ರಿಕಾ ಸಂಸ್ಥೆಗಳು ಮಾತ್ರ ಮಹಿಳೆ ನೇಮಕಾತಿ ವಿಚಾರದಲ್ಲಿ ಪ್ರಬುದ್ಧ ದೃಷ್ಟಿಕೋನ ತೋರಿಸಿವೆ. ಅವು ಬೆಂಗಳೂರಿನ `ಡೆಕ್ಕನ್ ಹೆರಾಲ್ಡ್’ ಹಾಗೂ ಹೈದರಾಬಾದ್ ನ ತೆಲುಗು ದಿನಪತ್ರಿಕೆ `ಈನಾಡು’ ಎಂಬುದನ್ನೂ ಪತ್ರಿಕಾ ಆಯೋಗದ ಈ ವರದಿಯಲ್ಲಿ ಹೇಳಲಾಗಿದೆ.

ಪತ್ರಿಕಾ ಆಯೋಗವು ಈ ವರದಿ ಸಿದ್ಧಪಡಿಸಿದ ಸಂದರ್ಭದಲ್ಲಿ `ಡೆಕ್ಕನ್ ಹೆರಾಲ್ಡ್’ ನಲ್ಲಿ ಆಗ ಎಂಟು ಅಥವಾ ಒಂಬತ್ತು ಪತ್ರಕರ್ತೆಯರಿದ್ದರು.ಅವರಲ್ಲಿ ಇಬ್ಬರು ಮ್ಯಾಗ್ ಝೀನ್ ಸಂಪಾದಕರಾಗಿದ್ದರು. 1974ರಲ್ಲಿ ಆರಂಭವಾದ ತೆಲುಗು ದಿನಪತ್ರಿಕೆ ‘ಈ ನಾಡು’ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಪ್ರವೃತ್ತಿಗೆ ನಾಂದಿ ಹಾಡಿತು. ಆರಂಭದಲ್ಲಿ ಎಂಟು ಮಹಿಳಾ ಉಪಸಂಪಾದಕರಿದ್ದರು. ಐವರು ಜನರಲ್ ಡೆಸ್ಕ್ ನಲ್ಲಿದ್ದರು. ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತಾ ಮುದ್ರಣಗಳನ್ನು ಹೊರತರುವ ಹೊಣೆಗಾರಿಕೆಗಳನ್ನೂ ನಿಭಾಯಿಸುತ್ತಿದ್ದರು. ಇಂಗ್ಲಿಷ್ ಪತ್ರಿಕೆಗಳಲ್ಲೂ ಇಂತಹದೊಂದು ಅವಕಾಶ ಆಗ ಕಂಡುಬಂದಿರಲಿಲ್ಲ. ಸಮಾನ ಅವಕಾಶಗಳ ನೆಲೆಯಲ್ಲಿ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವ ಹಕ್ಕುಗಳ ಪ್ರತಿಪಾದಕರಾಗಿದ್ದರು ಈ ಮಹಿಳೆಯರು. ಆದರೆ ರಾತ್ರಿಪಾಳಿ ನಂತರ ಅವರಿಗೆ ಮನೆಗೆ ಹೋಗಲು ಕಚೇರಿ ವ್ಯಾನ್ ಒದಗಿಸುವ ವಿಶೇಷ ರಿಯಾಯಿತಿ ಬಗ್ಗೆ ಪುರುಷ ಸಹೋದ್ಯೋಗಿಗಳು ಪ್ರತಿರೋಧ ತೋರಿದ್ದರಿಂದ ಮಹಿಳೆಯರಿಗೆ ಬರೀ ಬೆಳಿಗ್ಗೆ ಹಾಗೂ ಮಧ್ಯಾಹ್ನದ ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲು ಹೇಳಲಾಯಿತು ಎಂಬುದನ್ನೂ ಈ ವರದಿಯಲ್ಲಿ ಹೇಳಲಾಗಿದೆ.

ಯುದ್ಧ ವರದಿಗಾರಿಕೆಯ ಸಂದರ್ಭದಲ್ಲಿ ಪ್ರಭಾ ದತ್ (ಕೃಪೆ: ಬರ್ಕಾ ದತ್)

ಯುದ್ಧ ವರದಿಗಾರಿಕೆಯ ಸಂದರ್ಭದಲ್ಲಿ ಪ್ರಭಾ ದತ್ (ಕೃಪೆ: ಬರ್ಕಾ ದತ್ ಟ್ವಿಟರ್)

ತೆಲುಗು ಹಾಗೂ ಕನ್ನಡದ ವೃತ್ತಪತ್ರಿಕೆಗಳಲ್ಲಿ ಪತ್ರಕರ್ತೆಯರನ್ನು ನೇಮಕ ಮಾಡಿಕೊಳ್ಳುವ ಪರಂಪರೆ ಕಳೆದ ನಾಲ್ಕು ದಶಕಗಳಿಂದಲೂ ಇದೆ. ನ್ಯೂಸ್ ಡೆಸ್ಕ್ ನಲ್ಲಿ ರಾತ್ರಿ ಪಾಳಿಗಳಲ್ಲಿ ಕೆಲಸ ನಿರ್ವಹಣೆ ಹಾಗೂ ಜಿಲ್ಲೆಗಳಲ್ಲಿ ವರದಿಗಾರ್ತಿಯರಾಗಿ ಕಾರ್ಯ ನಿರ್ವಹಿಸುವಂತಹ ಅವಕಾಶಗಳನ್ನು ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ನೀಡಿದ ಪತ್ರಿಕೆ “ಪ್ರಜಾವಾಣಿ.” ಆದರೆ, ಮಲಯಾಳಂ ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲಿ ಮಹಿಳೆಯರ ನೇಮಕಾತಿಗೆ ಅಲಿಖಿತ ನಿಷೇಧ ಇದೆ. ಸೈದ್ಧಾಂತಿಕ ಹಿನ್ನೆಲೆಯ ಕೆಲವು ಪತ್ರಿಕೆಗಳು ಮಹಿಳೆಯರನ್ನು ನೇಮಕ ಮಾಡಿಕೊಂಡರೂ ಅವರೆಲ್ಲಾ ಡೆಸ್ಕ್ ನಲ್ಲಿ ಕೆಲಸ ಮಾಡುವವರು. ತಮಿಳು ಪತ್ರಿಕೋದ್ಯಮದಲ್ಲಿ ಈಗಲೂ ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಪತ್ರಕರ್ತೆಯರಿದ್ದಾರೆ ಎಂಬುದು 2003ರಲ್ಲಿ ಪ್ರಕಟವಾದ ಪ್ರೆಸ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಸಿದ್ಧಪಡಿಸಿದ ವರದಿಯಲ್ಲಿ ದಾಖಲಾಗಿದೆ.

ಮುಖ್ಯವಾಹಿನಿಯ ಕನ್ನಡ ವೃತ್ತಪತ್ರಿಕೆಗಳಲ್ಲಿ 1980ರ ದಶಕದಲ್ಲಿ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟೇ ಇತ್ತು. ಅನೇಕ ಅಂಕಣಕಾರ್ತಿಯರು ಹಾಗೂ ಫ್ರೀಲಾನ್ಸ್ ಪತ್ರಕರ್ತೆಯರಿಗೂ ಕನ್ನಡ ಪತ್ರಿಕೆಗಳು ಈಚಿನ ದಿನಗಳಲ್ಲಿ ಅವಕಾಶಗಳನ್ನು ನೀಡಿವೆ. ಹೀಗಿದ್ದೂ ಕನ್ನಡ ಪತ್ರಿಕಾ ಲೋಕದಲ್ಲಿ ಸಂಖ್ಯೆಯ ದೃಷ್ಟಿಯಲ್ಲಿ ಪತ್ರಕರ್ತೆಯರ ಸಂಖ್ಯೆ ಬಹುಶಃ ಶೇ 20ನ್ನೂ ದಾಟಿಲ್ಲ ಎಂದೇ ಹೇಳಬೇಕು. ಅದರಲ್ಲೂ ಜಿಲ್ಲಾ ಮಟ್ಟಗಳಲ್ಲಿ ಪತ್ರಕರ್ತೆಯರ ಪ್ರಮಾಣ ತೀರಾ ಕಡಿಮೆ.

ಭಾರತದಲ್ಲಿ ಒಟ್ಟು 672 ಜಿಲ್ಲೆಗಳಿವೆ. ಆದರೆ ಜಿಲ್ಲೆಗಳಲ್ಲಿರುವ ಮಹಿಳಾ ವರದಿಗಾರರ ಪ್ರಮಾಣ ಅತ್ಯಲ್ಪ. ಸಮೀಕ್ಷೆಯೊಂದರ ಪ್ರಕಾರ ಜಿಲ್ಲಾ ಮಟ್ಟಗಳಲ್ಲಿರುವ ಅಕ್ರೆಡಿಟೆಡ್ ಪತ್ರಕರ್ತರ ಸಂಖ್ಯೆ 14,278. ಈ ಪೈಕಿ ಅಕ್ರೆಡಿಟೆಡ್ ಪತ್ರಕರ್ತೆಯರ ಸಂಖ್ಯೆ ಕೇವಲ 320. ಎಂದರೆ ಜಿಲ್ಲಾ ಪತ್ರಕರ್ತೆಯರ ಪ್ರಮಾಣ ಕೇವಲ ಶೇ 2.7. ಇಂತಹ ಸ್ಥಿತಿಯಲ್ಲಿ ನಗರ ಪ್ರದೇಶಗಳಿಂದ ಹೊರಗಿರುವ ಮಹಿಳೆಯರ ವಿಚಾರಗಳು ಸೂಕ್ತ ದೃಷ್ಟಿಕೋನಗಳಲ್ಲಿ ಪ್ರಸ್ತುತಿ ಪಡೆಯುವುದಾದರೂ ಹೇಗೆ?

ಮಹಿಳೆಯರನ್ನು ಉದ್ಯೋಗ ಸಂದರ್ಶನಕ್ಕೂ ಕರೆಯದೆ ಜಿಲ್ಲೆಗಳ ಸ್ಥಳೀಯ ಪತ್ರಿಕೆಗಳಲ್ಲಿ ತಾರತಮ್ಯ ಮಾಡಲಾಗುತ್ತದೆ. `ರಾತ್ರಿ ಬಹಳ ಹೊತ್ತಿನವರೆಗೆ ಕೆಲಸ ಮಾಡಬೇಕಾಗುತ್ತದೆ, ಆ ಕಾರಣಕ್ಕಾಗಿ ಹೆಣ್ಣುಮಕ್ಕಳು ಬೇಡ’ ಎಂಬಂತಹ ಧೋರಣೆಯ ಮೂಲಕ ಅವಕಾಶಗಳನ್ನೇ ನೀಡದಿರುವುದರ ಬಗ್ಗೆ ಒಂದೆರಡು ವರ್ಷಗಳ ಹಿಂದೆ ವಿಜಾಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ನಡೆದ ಮಾಧ್ಯಮ ಕಾರ್ಯಾಗಾರವೊಂದರಲ್ಲಿ ಅನೇಕ ಹೆಣ್ಣುಮಕ್ಕಳು ಹೇಳಿಕೊಂಡಿದ್ದರು.

ಈ ಪೂರ್ವಗ್ರಹಗಳ ವಿರುದ್ಧ ಸೆಣಸುವುದೇ ಮಹಿಳೆಯರಿಗೆ ಈ ವೃತ್ತಿಯಲ್ಲಿ ಮುಖ್ಯ ಸವಾಲು. ನಾನು ಚಿಕ್ಕಮಗಳೂರಿನಲ್ಲಿ ಪ್ರಜಾವಾಣಿ ? ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ಜಿಲ್ಲಾ ವರದಿಗಾರ್ತಿಯಾಗಿ 1980ರ ದಶಕದಲ್ಲಿ (ಸುದ್ದಿ ಚಾನೆಲ್ ಗಳು ಇಲ್ಲದ ದಿನಗಳು) ಕಾರ್ಯ ನಿರ್ವಹಿಸುತ್ತಿದ್ದಾಗಿನ ಸಂದರ್ಭದಲ್ಲೂ ಇಂತಹ ಕೆಲವು ಅನುಭವಗಳಾಗಿವೆ. ಜಿಲ್ಲೆಯಲ್ಲಿ ಮಹಿಳಾ ವರದಿಗಾರ್ತಿಗೆ ಒಟ್ಟಾರೆಯಾಗಿ ಸ್ನೇಹಪೂರ್ವಕ ವಾತಾವರಣವೇ ಇದೆ ಎನಿಸಿದರೂ ಅನುಮಾನ, ಸಂಶಯ, ಕುತೂಹಲಗಳಿಗೆ ಪಕ್ಕಾಗುವಂತಹ ಸಂದರ್ಭಗಳೂ ಇದ್ದವು.

ಕೃಪೆ: Deccan Herald

ಕೃಪೆ: Deccan Herald

ಒಮ್ಮೆ ವಿಭಿನ್ನ ರಾಜಕೀಯ ಪಕ್ಷಗಳ ಕಾರ್ಯಕರ್ತರ ಮಧ್ಯೆ ಸಂಭವಿಸಿದ ಘರ್ಷಣೆಯಿಂದಾಗಿ ಕಳಸ ಸಮೀಪದ ಗ್ರಾಮವೊಂದರಲ್ಲಿ ಮನೆಗಳು ಲೂಟಿಯಾಗಿದ್ದವು. ಈ ಸಂದರ್ಭದಲ್ಲಿ ಆ ಸ್ಥಳಕ್ಕೆ ಪತ್ರಕರ್ತರ ತಂಡವನ್ನು ಕರೆದೊಯ್ಯಲು ರಾಜಕೀಯ ಪಕ್ಷವೊಂದು ವ್ಯವಸ್ಥೆ ಮಾಡಿತ್ತು. ಪತ್ರಕರ್ತರ ತಂಡ ಜೀಪ್ ನಲ್ಲಿ ಕುಳಿತ ನಂತರ “ಪ್ರಜಾವಾಣಿ’ ಯವರೇ ಇಲ್ಲವಲ್ಲ ಎಂದು ಸ್ಥಳೀಯ ಪತ್ರಿಕೆಯ ಪತ್ರಕರ್ತರೊಬ್ಬರು ಹೇಳಿದರಂತೆ. ಅದಕ್ಕೆ ಆ ಪ್ರವಾಸದ ಸಂಘಟಕರು `ಪ್ರಜಾವಾಣಿ’ಯವರು ಲೇಡಿ ಅಲ್ಲವಾ? ಇಷ್ಟು ದೂರದ ಊರಿಗೆಲ್ಲಾ ಬರ್ತಾರಾ ಅಂತಾ ?’ ಎಂದರಂತೆ . ಅದಕ್ಕೆ `ಅವರು ಎಲ್ಲಾ ಪ್ರೆಸ್ ಟೂರ್ ಗಳಿಗೂ ಬರುತ್ತಾರೆ’ ಎಂದ ನಂತರವಷ್ಟೇ ಸಂಘಟಕರು ನನಗೆ ಫೋನ್ ಮಾಡಿ ನಾನು ತಕ್ಷಣ ಹೊರಟಿದ್ದಾಗಿತ್ತು.

ಮತ್ತೊಮ್ಮೆ ದೂರದ ಹಳ್ಳಿಯೊಂದರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಜ್ಯ ಸರ್ಕಾರದ ಸಚಿವರೊಬ್ಬರು ಕಾರ್ಯಕ್ರಮ ಮುಗಿದ ನಂತರ ನಮ್ಮ ( ಪತ್ರಕರ್ತರ) ಜೊತೆ ಅನೌಪಚಾರಿಕವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ““why should Prajavani strain a lady ?’ ಎಂದಿದ್ದರು. ಹೀಗೆ ನನಗೇ ವೈಯಕ್ತಿಕವಾಗಿ ವರದಿಗಾರ್ತಿಯ ಕೆಲಸ ಸಮಸ್ಯೆ ಆಗಿರದಿದ್ದರೂ, ಹೊರಗೆ ಓಡಾಡುವುದು ನನಗೆ ಅತ್ಯಂತ ಪ್ರಿಯವಾದ ಕೆಲಸವೇ ಆಗಿದ್ದರೂ ಸಮಾಜವೇ ಒಪ್ಪಿಕೊಳ್ಳಲು ಕಷ್ಟ ಪಡುತ್ತಿದ್ದ ಇಂತಹ ಕೆಲವು ಪ್ರಸಂಗಗಳು ಕಿರಿಕಿರಿ ಸೃಷ್ಟಿಸಿವೆ.

ಈ ಸಂದರ್ಭದಲ್ಲಿ “ ಮಹಿಳೆ ಯಾವ ಕೆಲಸ ಮಾಡಿದರೂ ತನ್ನ ಸಾಮಥ್ರ್ಯ ನಿರೂಪಣೆಗಾಗಿ ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಮಾಡಬೇಕು. ಅದೃಷ್ಟವಶಾತ್ ಇದೇನೂ ಕಷ್ಟವಲ್ಲ ` ಎಂಬಂತಹ ಕೆನಡಾದ ಒಟ್ಟಾವಾ ನಗರದ ಮೊದಲ ಮೇಯರ್ ಷಾರ್ಲಟೆ ಮಾತುಗಳು ನೆನಪಾಗುತ್ತವೆ.

ಎಲ್ಲಾ ಪತ್ರಿಕಾಲಯಗಳಲ್ಲಿ ತಾರತಮ್ಯ ರಹಿತ ಆದರ್ಶ ವಾತಾವರಣ ಇರುತ್ತದೆ ಎಂಬುದನ್ನು ನಿರೀಕ್ಷಿಸಲಾಗದು. ಅದರಲ್ಲೂ ಪುರುಷ ಮುಖ್ಯಸ್ಥರಿಂದ ತಾರತಮ್ಯ ಹಾಗೂ ಕಿರುಕುಳಗಳು ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹೆಚ್ಚು ಎಂಬುದು ಅಧ್ಯಯನಗಳಲ್ಲೂ ವ್ಯಕ್ತವಾಗಿದೆ. ಇಂಗ್ಲಿಷ್ ಮಾಧ್ಯಮಗಳಲ್ಲಿ ಕೆಲಸಮಾಡುವ ಮಹಿಳೆಯರಲ್ಲಿ ಇಂತಹ ದೂರುಗಳು ಕಡಿಮೆ. ಇದಕ್ಕೆ ಅಲ್ಲಿ ಪುರುಷ ಇರಲಿ, ಮಹಿಳೆ ಇರಲಿ ಅವರು ಸಾಮಾಜಿಕವಾಗಿ ಹೆಚ್ಚು ಮುಕ್ತವಾಗಿರುತ್ತಾರೆ. ದುಡಿಯುವ ಸ್ಥಳಗಳಲ್ಲಿನ ಈ ವ್ಯತ್ಯಾಸಕ್ಕೆ ಸಾಮಾಜಿಕ, ಸಾಂಸ್ಕೃತಿಕ ಭಿನ್ನತೆಗಳೂ ಕಾರಣ. ’10 ವರ್ಷಗಳಿಂದಲೂ ಪ್ರೆಸ್ ಕ್ಲಬ್ ಪತ್ರಿಕಾ ಗೋಷ್ಠಿಗಳಿಗೇ ಹೋಗುತ್ತಿದ್ದೇನೆ’ ಎಂಬುದು ಕನ್ನಡ ವೃತ್ತಪತ್ರಿಕೆಯೊಂದರ ವರದಿಗಾರ್ತಿಯೊಬ್ಬರ ಮಾತು. `ಅವಕಾಶಗಳನ್ನು ನೀಡಿದರಲ್ಲವೇ ನಾವೂ ನಮ್ಮ ಸಾಮಥ್ರ್ಯ ಪ್ರದರ್ಶಿಸಲು ಸಾಧ್ಯವಾಗುವುದು’ ಎಂಬುದು ಮತ್ತೊಬ್ಬ ಪತ್ರಕರ್ತೆಯ ಮಾತು.

ಶಬರಿಮಲೆ ವಿವಾದದ ಸಂದರ್ಭದಲ್ಲಿ ಕಣ್ಣೀರಿಡುತ್ತ ಕಾರ್ಯನಿರ್ವಹಿಸಿದ ಪತ್ರಕರ್ತೆ

ಶಬರಿಮಲೆ ವಿವಾದದ ಸಂದರ್ಭದಲ್ಲಿ ಕಣ್ಣೀರಿಡುತ್ತ ಕಾರ್ಯನಿರ್ವಹಿಸಿದ ಪತ್ರಕರ್ತೆ

ಅನುದ್ದೇಶಪೂರ್ವಕವಾದ ಸಣ್ಣ ತಪ್ಪುಗಳು ಘಟಿಸಿದರಂತೂ ಆಕೆ ಅಸಮರ್ಥಳು ಎಂಬಂತಹ ತೀರ್ಮಾನ ಬರೆದುಬಿಡಲಾಗುತ್ತದೆ.  ಪುರುಷರಿಗಿಂತ ಮಹಿಳಾ ವರದಿಗಾರರಿಗೆ ಬಿಬಿಸಿ ಯಂಥ ವಿಶ್ವಮಾನ್ಯ ಸಂಸ್ಥೆಯೂ ಕಡಿಮೆ ವೇತನ ನೀಡುತ್ತದೆ ಎಂಬುದು ಇತ್ತೀಚೆಗೆ ಸುದ್ದಿಯಾಗಿತ್ತು. ಹಲವು ನೆಲೆಗಳಲ್ಲಿ ಅತ್ಯಂತ ಪ್ರತಿಕೂಲ ಸನ್ನಿವೇಶಗಳಿರುವ ಸಂದರ್ಭಗಳಲ್ಲೂ ಕಾಶ್ಮೀರದಿಂದ ಅನೇಕ ಪತ್ರಕರ್ತೆಯರು ದಿಟ್ಟವಾಗಿ ವರದಿ ಮಾಡುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ಗಮನಿಸಿದ್ದೇವೆ.

ಕಳೆದ ವರ್ಷ (2018) ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಶಬರಿಮಲೆಗೆ ಹೆಣ್ಣುಮಕ್ಕಳ ಪ್ರವೇಶ ವಿಷಯಕ್ಕೆ ಸಂಬಂಧಿಸಿದ ವರದಿಗಾರಿಕೆ ಸಂದರ್ಭದಲ್ಲಿ ಅನೇಕ ವರದಿಗಾರ್ತಿಯರು ಹಲ್ಲೆ, ಆಕ್ರಮಣಗಳಿಗೂ ಗುರಿಯಾಗಬೇಕಾಯಿತು. ಮಹಿಳಾ ವರದಿಗಾರರನ್ನು ಕಳಿಸಬಾರದೆಂದು ಶಬರಿಮಲೆ ಕರ್ಮ ಸಮಿತಿಯು  ಮಾಧ್ಯಮ ಸಂಸ್ಥೆಗಳಿಗೆ ಪತ್ರ ಬರೆದಂತಹ ಬೆಳವಣಿಗೆಯೂ ನಡೆಯಿತು. ಎಂದರೆ ವರದಿಗಾರ್ತಿಯು ತನ್ನ ಕೆಲಸ ಮಾಡಲೂ ಅವಕಾಶವನ್ನು ನಿರಾಕರಿಸುವಂತಹ ಸ್ಥಿತಿ ಇದು.

ಇದು ಸಾಲದೆಂಬಂತೆ ಆನ್ ಲೈನ್ ನಲ್ಲಿ ಹಲವು ರೀತಿಯ ಬರಹ, ಮಾತುಗಳ ದೌರ್ಜನ್ಯವನ್ನೂ ಸಹಿಸಬೇಕಾದ ಸ್ಥಿತಿ ಪತ್ರಕರ್ತೆಯರಿಗಿದೆ. “ತಮಿಳುನಾಡಿನ ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನವರು ಅವಿದ್ಯಾವಂತರು, ಕೀಳುಮಟ್ಟದವರು . ಈ ಮಹಿಳೆಯೇನೂ ಭಿನ್ನರಲ್ಲ??.ಮಹಿಳೆಯರು ಬಾಸ್ ಜೊತೆ ಮಲಗದಿದ್ದರೆ ವರದಿಗಾರ್ತಿ, ನಿರೂಪಕಿ ಆಗಲಾರರು. ಹೀಗಿರುವಾಗ ಅವರು ರಾಜ್ಯಪಾಲರನ್ನು ಪ್ರಶ?ನಿಸುತ್ತಿದ್ದಾರೆ ` ಎಂಬಂಥ ಫೇಸ್ ಬುಕ್ ಬರಹವೊಂದನ್ನು ಹಂಚಿಕೊಂಡಿದ್ದ ತಮಿಳುನಾಡಿನ ಬಿಜೆಪಿ ನಾಯಕ ಎಸ್ ವಿ ಶೇಖರ್ ಅದು ವಿವಾದವಾಗುತ್ತಿದ್ದಂತೆ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದರು. ಇದಕ್ಕೂ ಮುಂಚೆ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆ ಲಕ್ಷ್ಮಿ ಸುಬ್ರಮಣಿಯನ್ ಅವಕ ಕೆನ್ನೆ ಸವರಿ ವಿವಾದಕ್ಕೀಡಾಗಿ ನಂತರ ಕ್ಷಮೆ ಯಾಚಿಸಿದ್ದರು.

ಪತ್ರಕರ್ತೆ ಲಕ್ಷ್ಮಿ ಸುಬ್ರಮಣ್ಯಂ

ಪತ್ರಕರ್ತೆ ಲಕ್ಷ್ಮಿ ಸುಬ್ರಮಣ್ಯಂ (ಕೃಪೆ: India Today)

ಜಮ್ಮು ಮತ್ತು ಕಾಶ್ಮೀರದಲ್ಲಿನ ಕಥುವಾದ ಬಾಲಕಿಯ ಅತ್ಯಾಚಾರದ ವಿರುದ್ಧ ಮಾತನಾಡಿದ್ದರಿಂದಾಗಿ, ಕೃತಕವಾಗಿ ಸೃಷ್ಟಿಸಿದ ಪೋರ್ನೊಗ್ರಾಫಿಕ್ ಕ್ಲಿಪ್ ಕಿರುಕುಳವನ್ನು ಎದುರಿಸಬೇಕಾಯಿತು ಪತ್ರಕರ್ತೆ ರಾಣಾ ಆಯುಬ್. ತಮ್ಮ ನಿರ್ಭೀತ ಬರಹಗಳಿಂದಾಗಿ ಗೌರಿ ಲಂಕೇಶ್ ಹತ್ಯೆಯಾಗಿ ಎರಡು ವರ್ಷಗಳಾಗಿವೆ. `ಗೌರಿ ಲಂಕೇಶ್ ಗೆ ಆದ ಗತಿಯೇ ನಿಮಗೂ ಆಗುವುದು’ ಎಂಬಂತಹ ಬೆದರಿಕೆಗಳನ್ನು ಅನೇಕ ಪತ್ರಕರ್ತೆಯರಿಗೆ ಒಡ್ಡಲಾಗಿದೆ.

ಪತ್ರಕರ್ತೆ ನೇಹಾ ದೀಕ್ಷಿತ್ ಅವರು `ಆಪರೇಷನ್ ಬೇಟಿ ಉಠಾವೊ’ ಲೇಖನವನ್ನು `ಔಟ್ ಲುಕ್’ ಪತ್ರಿಕೆಯಲ್ಲಿ ಪ್ರಕಟಿಸಿದ ನಂತರ ಕಿರುಕುಳಗಳಿಗೆ ಗುರಿಯಾದರು. 31 ಆದಿವಾಸಿ ಬಾಲಕಿಯರನ್ನು ಹಿಂದೂಗಳನ್ನಾಗಿಸಲು ಅಸ್ಸಾಂನಿಂದ ಪಂಜಾಬ್ ಹಾಗೂ ಗುಜರಾತ್ ಗೆ ಅಕ್ರಮ ಸಾಗಣೆ ಮಾಡಲು ಮಕ್ಕಳ ಹಕ್ಕುಗಳ ಕುರಿತಾದ ಎಲ್ಲಾ ಭಾರತೀಯ ಹಾಗೂ ಅಂತರರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂಬುದರ ತನಿಖಾ ವರದಿ ಇದು. ಈ ವರದಿ ಪ್ರಕಟವಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಮಾತುಗಳು, ಹಿಂಸೆಯ ಬೆದರಿಕೆಗಳಿಗೆ ನೇಹಾ ಗುರಿಯಾದರು. ನೇಹಾ ವಿರುದ್ದ ಗುವಾಹಟಿಯಲ್ಲಿ ಬಿಜೆಪಿ ಕಾರ್ಯಕರ್ತರು ಎಫ್ ಐಆರ್ ದಾಖಲಿಸಿದರು. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ವೈರತ್ವ ಬಿತ್ತಲಾಗುತ್ತಿದೆ ಎಂಬುದು ನೇಹಾ ವಿರುದ್ಧ ಮಾಡಲಾಗಿರುವ ಆರೋಪ. ಆಗ `ಔಟ್ ಲುಕ್’ ಮುಖ್ಯ ಸಂಪಾದಕರಾಗಿದ್ದ ಕೃಷ್ಣ ಪ್ರಸಾದ್ ಅವರನ್ನು ಏನೂ ವಿವರಣೆ ಇಲ್ಲದೆ ಬದಲಿಸಲಾಗಿತ್ತು.

ಫೀಲ್ಡ್ ವರ್ಕ್ ನಲ್ಲಿ ಒಡ್ಡಿಕೊಳ್ಳಬೇಕಾದ ಅಪಾಯಗಳ ಜೊತೆ ಜೊತೆಗೇ ಆನ್ ಲೈನ್ ಆಕ್ರಮಣಗಳೂ ಹೆಚ್ಚುತ್ತಿರುವಂತಹ ಇಂದಿನ ಸ್ಥಿತಿಗೆ ಈ ಪ್ರಕರಣಗಳು ದ್ಯೋತಕ. ಆನ್ ಲೈನ್ ನಲ್ಲೂ ಲಿಂಗಾಧಾರಿತ ಕಿರುಕುಳಗಳಿದ್ದು ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳನ್ನು ಪತ್ರಕರ್ತೆಯರಿಗೆ ಒಡ್ಡಲಾಗುತ್ತದೆ. ನಿಯಮಿತವಾಗಿ ಹಲವು ನೆಲೆಗಳಲ್ಲಿ ಅಡ್ಡಿ ಆತಂಕಗಳನ್ನು ಪತ್ರಕರ್ತೆಯರು ಎದುರಿಸುತ್ತಿದ್ದಾರೆ. ಇವು ಸಾಲದೆಂಬಂತೆ ಕೇರಳದ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಅವರ ರಾಜೀನಾಮೆಗೆ ಕಾರಣವಾದ ಸುದ್ದಿ ಪ್ರಸಾರ ಮಾಡಿದ್ದ ಮಂಗಳಂ ಟಿ.ವಿ.ಚಾನೆಲ್ , ಕಡೆಗೆ ಅದು `ಹನಿ ಟ್ರ್ಯಾಪ್ ` ಆಗಿತ್ತು ಎಂದು ಬಹಿರಂಗವಾಗಿ ಒಪ್ಪಿಕೊಂಡಿತ್ತು. ಕಳೆದ ಕೆಲವು ದಶಕಗಳಿಂದಷ್ಟೇ ಮಾಧ್ಯಮ ಲೋಕಕ್ಕೆ ಪ್ರವೇಶ ಪಡೆದಿರುವ ಮಹಿಳೆ ತನ್ನ ಸಂಕಲ್ಪ, ಪರಿಶ್ರಮ ಹಾಗೂ ವೃತ್ತಿಪರತೆಯಿಂದ ನ್ಯೂಸ್ ರೂಂ ಗಳಲ್ಲಿ ಇತ್ತೀಚಿನ ವರ್ಷಗಳಲ್ಲಷ್ಟೇ ಉನ್ನತ ಸ್ಥಾನಗಳಿಗೇರಿದ್ದಾಳೆ. ಇಂತಹ ಸಂದರ್ಭದಲ್ಲಿ `ಹನಿ ಟ್ರ್ಯಾಪ್’ ಗಾಗಿ ಪತ್ರಕರ್ತೆಯನ್ನು ಬಳಸಿದ್ದು ಕಳವಳಕಾರಿ ಬೆಳವಣಿಗೆ. ಮೌಲ್ಯಗಳ ಅಧಃಪತನದ ಸೂಚಕ ಇದು. ಪುರುಷರನ್ನು ಬಲೆಗೆ ಕೆಡವಲು ಮಹಿಳಾ ಪತ್ರಕರ್ತರನ್ನು ಬಳಸಿಕೊಳ್ಳಲಾಗುತ್ತದೆ ಎಂಬಂತಹ ಮಾತುಗಳಿಂದಾಗಿ ಪತ್ರಕರ್ತೆಯರ ಸಮುದಾಯ ಅವಮಾನ, ಅವಿಶ್ವಾಸ ಎದುರಿಸಬೇಕಾದ ಸ್ಥಿತಿ ಸೃಷ್ಟಿಯಾಗಿದ್ದು ದುರಂತ. ಸಂದರ್ಶನ ನೀಡಲು ಪತ್ರಕರ್ತೆಯರಿಗೆ ಅವಕಾಶ ನಿರಾಕರಿಸಿ, ಪುರುಷ ಪತ್ರಕರ್ತರನ್ನು ಕಳಿಸಿ ಎಂಬಂತಹ ಮಾತುಗಳನ್ನು ಪುರುಷ ರಾಜಕಾರಣಿಗಳಿಂದ ಕೇಳಿಸಿಕೊಳ್ಳಬೇಕಾದ ಸ್ಥಿತಿಯೂ ಕೇರಳದಲ್ಲಿ ಉಂಟಾದ ಬಗ್ಗೆ ಪತ್ರಕರ್ತೆಯರು ಬರೆದುಕೊಂಡಿದ್ದರು.

ಪತ್ರಕರ್ತೆ ಪ್ರಿಯಾ ರಮಣಿ

ಪತ್ರಕರ್ತೆ ಪ್ರಿಯಾ ರಮಣಿ

ಪ್ರಿಯಾ ರಮಣಿ ಸೇರಿದಂತೆ ಹಲವು ಪತ್ರಕರ್ತೆಯರ ಬರಹಗಳು ಮಾದ್ಯಮಲೋಕದ ಲೈಂಗಿಕ ಕಿರುಕುಳಗಳನ್ನು ಕಳೆದ ವರ್ಷ ಅನಾವರಣಗೊಳಿಸಿ ಭಾರತದಲ್ಲಿ `ಮೀ ಟೂ’ ಆಂದೋಲನಕ್ಕೆ ಬಲ ತುಂಬಿದವು. ಇದರಿಂದ ಪತ್ರಕರ್ತ, ಬರಹಗಾರ ಎಂ ಜೆ ಅಕ್ಬರ್ ಅವರು ತಮ್ಮ ಕೇಂದ್ರ ಸಚಿವ ಹುದ್ದೆ ಕಳೆದುಕೊಳ್ಳಬೇಕಾಯಿತು. ಈಗ ಅಕ್ಬರ್ ಹಾಕಿರುವ ಮಾನನಷ್ಟ ಮೊಕದ್ದಮೆಯನ್ನು ಪ್ರಿಯಾ ರಮಣಿ ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ. ಇಂತಹ ಬೆದರಿಕೆ, ಸಂಕಷ್ಟಗಳ ನಡುವೆಯೂ ಪತ್ರಕರ್ತೆಯರು ದಿಟ್ಟವಾಗಿ ಪ್ರತಿರೋಧ ತೋರುತ್ತಿದ್ದಾರೆ ಎಂಬುದು ದೊಡ್ಡ ಬೆಳವಣಿಗೆ.

ಮಹಿಳೆಯ ಪೂರ್ಣ ಪ್ರಮಾಣದ ನಿರ್ಭೀತ ಪಾಲ್ಗೊಳ್ಳುವಿಕೆ ಸಾಧ್ಯವಾಗಲು ಮಾಧ್ಯಮ ಸಂಸ್ಥೆಗಳ ಹಾಗೆಯೇ ಸಮಾಜದ ವ್ಯವಸ್ಥೆಗಳಲ್ಲೂ ಇನ್ನೂ ಪರಿವರ್ತನೆಯಾಗಿಲ್ಲ. ಆದರೆ, ಸಮಾನ ಅವಕಾಶಗಳನ್ನು ಸಕ್ರಿಯವಾಗಿ ಒದಗಿಸುವುದು ಒಳ್ಳೆಯ ಆಡಳಿತ ನಿರ್ವಹಣೆ ಹಾಗೂ ವಾಣಿಜ್ಯ ದೃಷ್ಟಿಯಿಂದಲೂ ಸೂಕ್ತವಾದುದು ಎಂಬುದನ್ನು ಮಾಧ್ಯಮ ಸಂಸ್ಥೆಗಳು ಇತ್ತೀಚೆಗೆ ಕಂಡುಕೊಳ್ಳುತ್ತಿವೆ.` ಅಪರಾಧ, ರಾಜಕೀಯ ವರದಿಗಾರಿಕೆ ಮಾಡದೆ ಇರುವುದರಿಂದ ಹೆಚ್ಚೇನೂ ಕಳೆದುಕೊಳ್ಳುವುದು ಇಲ್ಲ ` ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವ ಕೆಲವು ಪತ್ರಕರ್ತೆಯರು ತಾವೇ ಗಡಿರೇಖೆ ಎಳೆದುಕೊಳ್ಳುವುದೂ ಉಂಟು. ಮಹತ್ವಾಕಾಂಕ್ಷೆಗಳಿಗೆ ಕುಟುಂಬದ ಹೊಣೆಗಾರಿಕೆ ಅಡ್ಡಿಯಾಗುತ್ತದೆ ಎಂಬುದು ವಾಸ್ತವ. `ಸಮಯವನ್ನೆಲ್ಲಾ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ಕಳೆಯುವುದಾದಲ್ಲಿ ನಮ್ಮ ಮಕ್ಕಳ ಭವಿಷ್ಯ ನೋಡುವವರಾರು’ ಎಂಬುದು ಅನೇಕ ಪತ್ರಕರ್ತೆಯರ ಪ್ರಶ್ನೆ. ಕುಟುಂಬ ನಿರ್ವಹಣೆಯ ಹೆಚ್ಚಿನ ಹೊಣೆಗಾರಿಕೆಯನ್ನು ಹೆಣ್ಣುಮಕ್ಕಳೇ ಹೊರಬೇಕಾಗಿರುವ ಸ್ಥಿತಿ ಇನ್ನೂ ನಮ್ಮ ಸಮಾಜದಲ್ಲಿ ಬದಲಾಗಿಲ್ಲ. ಚೈಲ್ಡ್ ಕೇರ್ ಸೆಂಟರ್ ಗಳಿನ್ನೂ ಪತ್ರಿಕಾಲಯಗಳಲ್ಲಿ ಇಲ್ಲ.
.
1995ರಲ್ಲಿ ವಿಶ್ವಸಂಸ್ಥೆ ನಡೆಸಿದ ಬೀಜಿಂಗ್ ಮಹಿಳಾ ಸಮ್ಮೇಳನದಲ್ಲಿ ಹೊರಡಿಸಲಾದ ಬೀಜಿಂಗ್ ಘೋಷಣೆ ಹಾಗೂ ಕ್ರಿಯಾ ವೇದಿಕೆಯ ಸೆಕ್ಷನ್ ಜೆ , ಮಹಿಳೆ ಹಾಗೂ ಮಾಧ್ಯಮ ವಿಚಾರವನ್ನು ಸುದೀರ್ಘವಾಗಿ ಚರ್ಚಿಸಿದೆ. ಈ ಪ್ರಕಾರ ಮಹಿಳೆಯರು ಸಂವಹನ ( ಕಮ್ಯುನಿಕೇಷನ್) ವಲಯದಲ್ಲಿ ಹೆಚ್ಚು ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಾನಗಳಳ್ಲಿ ಹಾಗೂ ಮಾಧ್ಯಮ ನೀತಿ ರೂಪಿಸುವ ವಲಯಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಈಗಲೂ ಕಡಿಮೆ. ಮಾಧ?ಯಮಗಳಲ್ಲಿ ನಿರಂತರವಾಗಿ ಪ್ರತಿಬಿಂಬಿತವಾಗುತ್ತಿರುವ ಮಹಿಳೆಯ ನಕಾರಾತ್ಮಕ ಹಾಗೂ ಹೀನಾಯದ ಪ್ರತಿಮೆಗಳು ಮುಂದುವರಿದೇ ಇವೆ ಎಂಬುದನ್ನು ಇಲ್ಲಿ ಒತ್ತಿ ಹೇಳಲಾಗಿದೆ. ಈ ವಿಚಾರಗಳಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ. ಆದರೆ ಮಾಧ?ಯಮದಲ್ಲಿ ಸಾಕಷ್ಟು ಸಾಧ್ಯತೆಗಳಿವೆ ಎಂಬುದರತ್ತಲೂ ಇದು ಬೊಟ್ಟು ಮಾಡಿದೆ.

ಲಿಂಗತ್ವ ಸಮಾನತೆ ಹಾಗೂ ಮಹಿಳೆಯರ ಮಾನವ ಹಕ್ಕುಗಳ ಅಭಿವೃದ್ಧಿಗೆ ತುರ್ತಾಗಿ ಕ್ರಮವನ್ನು ಕೈಗೊಳ್ಳಲು ಬೇಕಾದ ಆದ್ಯತೆಯ ವಲಯವಾಗಿ ಮಾಧ್ಯಮವನ್ನು ಪರಿಗಣಿಸಬೇಕು ಎಂಬಂತಹ ಬೀಜಿಂಗ್ ಘೋಷಣೆಗೆ ಮುಂದಿನ ವರ್ಷಕ್ಕೆ (2020) 25 ವರ್ಷಗಳಾಗಲಿವೆ.

ಆದರೆ ಈ ನಿಟ್ಟಿನಲ್ಲಿ ಕನ್ನಡ ಪತ್ರಿಕೆಗಳ ಮಟ್ಟಿಗಂತೂ ಹೆಚ್ಚು ಪ್ರಗತಿ ಆಗಿಲ್ಲ. ಪತ್ರಿಕೆಗಳಲ್ಲಿ ಪತ್ರಕರ್ತೆಯರ ಬೈಲೈನ್ ಗಳು ಪುರುಷರಿಗೆ ಹೋಲಿಸಿದರೆ ಕಡಿಮೆ. ರಾಜಕೀಯ ಸ್ಟೋರಿಗಳನ್ನು ಮಾಡುವವರು ಪುರುಷರೇ. ವಿಜ್ಞಾನ, ರಾಜಕೀಯ, ಅಪರಾಧ, ನ್ಯಾಯಾಂಗ ವಿಷಯಗಳನ್ನು ನಿರ್ವಹಿಸುವವರು ಈಗಲೂ ಪುರುಷ ಪತ್ರಕರ್ತರೇ.. ಜೀವನ ಶೈಲಿ, ಶಿಕ್ಷಣ, ಆರೋಗ್ಯ ಪಾಲನೆಯಂತಹ ಸಾಫ್ಟ್ ಸ್ಟೋರಿಗಳು ಮಹಿಳೆಯರಿಗೆ ಎಂಬಂತಹ ಗಡಿರೇಖೆಯೂ ಕಾಣಿಸುತ್ತದೆ. ಕ್ರೀಡಾಪತ್ರಿಕೋದ್ಯಮದಲ್ಲಿ ಮಹಿಳೆಯರ ಪ್ರಾತಿನಿಧ್ಯವಂತೂ ಇಲ್ಲವೇ ಇಲ್ಲ ಎಂಬಂತಿದೆ..

ನ್ಯೂಸ್ ರೂಂಗಳ ಸಂಪಾದಕೀಯ ಸಭೆಗಳಲ್ಲಿ ಪಾಲ್ಗೊಳ್ಳುವ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟಿರುತ್ತದೆ. ಇನ್ನು ಕನ್ನಡ ಪತ್ರಿಕೆಗಳಲ್ಲಿ ವೃತ್ತಿಪರ ಮಹಿಳಾ ಕಾರ್ಟೂನಿಸ್ಟ್ ರನ್ನಂತೂ ಕಂಡೇ ಇಲ್ಲ ಎನ್ನುವ ಸ್ಥಿತಿ ಇದೆ.
ಲಿಂಗತಾರತಮ್ಯ ಎನ್ನುವುದು ಮಹಿಳೆಯರ ವೈವಿಧ್ಯಮಯ ದೃಷ್ಟಿಕೋನಗಳು ತರಬಹುದಾದ ವಿಷಯಶ್ರೀಮಂತಿಕೆಯನ್ನು ಇಲ್ಲವಾಗಿಸುತ್ತದೆ.

ಮಹಿಳಾ ದೃಷ್ಟಿಕೋನ ಎಂದಾಗ ಹಲವು ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಮಾಯಾ ಕಾಮತ್ ಅವರ ಒಂದು ಕಾರ್ಟೂನ್ ನೆನಪಾಗುತ್ತಿದೆ. ಮಹಿಳಾ ಮೀಸಲು ಮಸೂದೆ ಕುರಿತಾದ ಚರ್ಚೆ ಸಂದರ್ಭದಲ್ಲಿ ಮಾಯಾ ಅವರು ಬಿಡಿಸಿದ ಕಾರ್ಟೂನ್ ಅನನ್ಯವಾದದ್ದು. ಮಹಿಳೆಯರ ಗುಂಪು ನಿಂತಿರುವ ಕಾರ್ಟೂನ್ ಅದು. ಮಹಿಳೆಯೊಬ್ಬರು ಪ್ಲಕಾರ್ಡ್ ಹಿಡಿದಿದ್ದಾರೆ. ಅದರಲ್ಲಿರುವ ಮಾತು ಇದು : ಎ ವುಮನ್ಸ್ ಪ್ಲೇಸ್ ಈಸ್ ಇನ್ ದಿ ಹೌಸ್ . ಈ ಗುಂಪು ನಿಂತಿರುವುದು ಹೌಸ್ ಆಫ್ ಪಾರ್ಲಿಮೆಂಟ್ ಮುಂದೆ. ಹಳೆಯ ಸೆಕ್ಸಿಸ್ಟ್ ಗಾದೆಗೆ ಹೊಸ ತಿರುವು ನೀಡಿದ ಚಾಟೂಕ್ತಿ ಇದು. ಸಂಸತ್ತಿನ ಸದನದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳ ಪ್ರತಿಪಾದನೆ ಮಾಡುವ ವಿಚಾರ ಇದು. ಮಹಿಳೆಯು ವಿಚಾರಗಳನ್ನು ಪರಿಭಾವಿಸುವಾಗಿನ ಭಿನ್ನತೆಗೆ ಒಂದು ಉದಾಹರಣೆ ಇದು.

ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ


ಪ್ರತಿಕ್ರಿಯಿಸಿ