ಕಾವ್ಯಾ ಕಡಮೆಯವರ ಹೊಸ ಕಾದಂಬರಿ ’ಮಿಥ್ಯ ಸುಖ’ ಜೀರುಂಡೆ ಪ್ರಕಾಶನದಿಂದ ಪ್ರಕಟವಾಗಿದೆ. ಈ ಕಾದಂಬರಿಯ ಮೊದಲ ಅಧ್ಯಾಯ ಋತುಮಾನದ ಓದುಗರಿಗಾಗಿ.
ಅಧ್ಯಾಯ 1
ಬರೀಬೇಕಂತೆ. ಬರೆದು ಹಗುರಾಗಬೇಕಂತೆ. ಇಷ್ಟೆಲ್ಲ ನರಳೋಕೇನಿದೆ? ಎಲ್ಲರೂ ಕಂಡದ್ದೇ. ಎಲ್ಲರೂ ಅನುಭವಿಸೋದೇ. ಬದುಕು ಅಂದ್ರೆ ಇಂಥವೆಲ್ಲ ಇರದೇ ಇರತದೇನು? ಬರೀಬೇಕು. ಕೋಣೆಯಿದೆ. ಏಸಿ ಇದೆ. ಹಿಮ ಸುರಿಯೋ ದೇಶವೇ ಖರೇ. ಆದರೇನಂತೆ? ಪಾದಕ್ಕೆ ಒಂಚೂರೂ ತಂಪು ತಾಕದಂತೆ ತೊಡಲು ಸಾಕ್ಸ್ ಇದೆ. ಸಾಲೊಲ್ಲ ಅಂತ ಮನೆಯಲ್ಲಿ ಮಾತ್ರ ಧರಿಸೋ ಹತ್ತಿಯಂಥ ಚಪ್ಪಲಿಯಿದೆ. ಥರ್ಮಸ್ಸಲ್ಲಿ ಬಿಸಿ ಬಿಸಿ ಕಾಫಿಯಿದೆ. ತೊಟ್ಟಿದ್ದು ನೋಡಿದ್ರೆ ಮಕಮಲ್ಲಿನದೇ ಅಂಗಿ. ಮಿರಮಿರ ಮಿಂಚತದೆ. ಕೂತು ಬರೀತಿರೋದು ಗ್ರನೈಟಿನ ಕೌಂಟರ್ ಟಾಪ್ ಮೇಲೆ. ರೀಸೆಸ್ ಲೈಟುಗಳಾವೃತ ಬೆಳಕಿನರಮನೆಯಲ್ಲಿ ಮಧ್ಯರಾತ್ರಿಯೂ ಥಳಥಳ ಹೊಳೆಯುತಿರೋ ಅಡುಗೆಮನೆ.
ಮೇಲೊಂದು ಕೋಣೆಯಿದೆ. ನನ್ನ ಸ್ಟಡಿ ಅಂತ ಆ ಕೋಣೆಯ ಹೆಸರು. ಅದೇನು ಲೈಟಿಂಗೋ ಸುಡುಗಾಡೋ ಅಲ್ಲಿ ಕಾಲಿಟ್ಟೊಡನೆ ನನಗೆ ನಿದ್ರೆ ಆವರಿಸಿಬಿಡುತ್ತದೆ. ಅದಕ್ಕೇ ನನ್ನ ಬರೆವಣಿಗೆಯೆಲ್ಲ ಇಲ್ಲಿ, ಈ ಕಿಚನ್ ದ್ವೀಪದ ಮೇಲೆ.
ಅದೇನು ಶಾಪವೋ ದೇವರೇ ಬಲ್ಲ, ಹೊರಗೆ ಸೂರ್ಯ ಉರಿಯುವಾಗ ನನ್ನಿಂದ ಒಂದಕ್ಷರ ಹುಟ್ಟೊಲ್ಲ. ಅವನು ನಡೆಯಬೇಕು ಮುಖಾ ತಗೊಂಡು ಭೂಮಿಯ ಅತ್ತ ಕಡೆಯ ಬೆಳಗಿಸಲು. ಆಗ ನನ್ನೊಳಗಿಂದ ಬುಳಬುಳನೆ ಅಕ್ಷರಗಳು ಮೂಡಬೇಕು ಹೀಗೆ ಕಾಗದದಲ್ಲಿ.
ಅದಕ್ಕೇ ನಾನು ಆಫೀಸಿನಿಂದ ಬಂದವಳು ಸಂಜೆಯಿಡೀ ದೆವ್ವ ಹೊಕ್ಕವರಂತೆ ಮುಸುಕು ಹೊದ್ದು ಮಲಗಿಯೇ ಇರುತ್ತೇನೆ ಸೋಫಾದ ಮೇಲೆ. “ಮುರ್ಸಂಜೆ ಹೊತ್ತು ಹೆಣ ಮಲಗಿದ ಹಾಗೆ ಮಲಗಿ ನನ್ನ ಪ್ರಾಣಾ ಕಳೀತಾಳೆ” ಅಂತ ಬೈದುಕೊಳ್ಳುತ್ತಲೇ ಮಗುವಿಗೆ ತುತ್ತು ತಿನ್ನಿಸುತ್ತಾನೆ ನನ್ನ ಗಂಡ. ಇವಳೊಂದು ಸರೀ ಇದ್ದಿದ್ದರೆ… ಅಂತ ದಣಿದ ಅವನ ಮನಸ್ಸು ಎಷ್ಟು ಉತ್ಕಟವಾಗಿ ಬಯಸುತ್ತದೋ, ಚೂರು ಆ ಧ್ವನಿ ಇಲ್ಲೆಲ್ಲ ಆವಿಯಾಗಿ, ಗಾಳಿಯಲ್ಲಿ ಸೇರಿ ನನ್ನ ಕರಣವನ್ನು ಅವನಾಡದೇ ತಲುಪುತ್ತದೆ.
ಅದಕ್ಕೆ ನಾನೇನು ಮಾಡಲಿ? ಮಗು ಊಟ ಮಾಡದೇ ಮಲಗಿದರೆ ನನಗೇನೂ ಮಹಾ ಫರಕ್ ಬೀಳುವುದಿಲ್ಲ. ಅವರವರ ಹೊಟ್ಟೆಗೆ ಅವರವರು ತಿನ್ನಬೇಕು. ಹೊಟ್ಟೆ ಭಣಭಣ ಎನ್ನುವಾಗ ಪ್ರಪಂಚದ ಯಾವ ಪ್ರಾಣಿ ತಾನೇ ಸುಮ್ಮನಿರುತ್ತದೆ? ಒಂದ್ಹೊತ್ತು ಉಪವಾಸ ಕೆಡವಿದರೆ ಎಲ್ಲರೂ ದಾರಿಗೆ ಬರುತ್ತಾರೆ ಅನ್ನೋದು ನನ್ನ ಫಿಲಾಸಫಿ. ಸುಹಾಸನದು ಹಾಗಲ್ಲ.
“ಅದೆಂಥಾ ಮಾತಾಡ್ತೀಯೇ ಮಾರಾಯ್ತಿ? ಇಷ್ಟು ಮುದ್ದಾದ ಮಗು ಕೊಟ್ಟಿದ್ದಾನೆ ದೇವರು. ಏನೇನೂ ಊನವಿಲ್ಲದ ಹಾಗೆ! ಎಲ್ಲ ಸರೀ ಇದೆ ಅಂತ ಇಷ್ಟು ಸೊಕ್ಕು ನಿನಗೆ. ಏನೋ ಕೈಯಲ್ಲಿ ತಿನ್ನೋಕೆ ಅವನಿಗೆ ಬೇಜಾರು. ಒಂದ್ಹೊತ್ತು ನಾವೇ ತಿನ್ನಿಸಿಬಿಟ್ಟರೆ ನಮ್ಮ ಕೈಯ್ಯೇನು ಬಿದ್ದು ಹೋಗುತ್ತದಾ? ಇನ್ನೂ ಐದು ವರ್ಷ ಬಿಟ್ಟರೆ ತಿನ್ನಿಸ್ತೀನಿ ಅಂತ ಕರೆದರೂ ಅವನು ಬರ್ತಾನೆ ಅಂದುಕೊಂಡಿದೀಯಾ?” ಅಂತ ಪಿರಪಿರ ಮಾಡ್ತಾನೆ ಅನ್ನ-ಬೇಳೆಯ ತುತ್ತನ್ನು ನಮ್ಮಜ್ಜಿಯ ಶೈಲಿಯಲ್ಲಿ ಗುಂಡು ಕಟ್ಟುತ್ತ.
ಐದು ವರ್ಷದ ಲೋಲ ಕೂಡ ಅವರಪ್ಪನ ಮಾತಿಗೆ ತನ್ನ ಗುಂಡು ತಲೆಯನ್ನು ಹೌದೌದು ಎಂಬಂತೆ ಉದ್ದುದ್ದಕ್ಕೆ ಆಡಿಸುತ್ತ ತುತ್ತಿಗೆ ಬಾಯಿ ತೆರೆಯುವುದಿಲ್ಲ ಎಂಬಂತೆ ಮುದ್ದುಗರೆಯುತ್ತಾನೆ. “ತಿನ್ನೋ ಜಾಣ. ಆ ಅನ್ನು ಬಹದ್ದೂರ್” ಎನ್ನುತ್ತ ಸುಸ್ತಿನಲೇ ಅಂಗಲಾಚುತ್ತಾನೆ ಅವರಪ್ಪ.
ಏನಾದರೂ ಮಾಡಿಕೊಂಡು ಹೋಗಿ, ಈ ಗಂಡಸು ಜಾತಿಯಿಂದ ನನಗೆ ಸುಖ ಇಲ್ಲ ಎನ್ನುತ್ತ ಸೋಫಾದ ಮೇಲೆಯೇ ಮಗ್ಗಲು ಬದಲಿಸುತ್ತೇನೆ ನಾನು. ಧಾರವಾಡದ ಲಡಕಾಸಿ ಕಾಲೇಜೊಂದರಲ್ಲಿ ಬಿ.ಎ ಓದಿರುವ ನಾನು, ಮತ್ತು ಇನ್ನೂ ಒಂದಕ್ಷರ ಹುಟ್ಟಿಸೋಕೂ ಕಲಿಯದ ಈ ನನ್ನ ಹೊಟ್ಟೆಕೂಸು, ಗಣಿತಶಾಸ್ತ್ರದಲ್ಲಿ ಪಿಎಚ್‍ಡಿ ಮಾಡಿರುವ ನನ್ನ ಗಂಡನನ್ನು ಅಂತೂ ಈ ಸ್ಥಿತಿಗೆ ತಂದಿಟ್ಟಿದ್ದೇವೆ.
“ಬರೀತೀನಿ ಬರೀತೀನಿ ಅಂತ ಕಡೆದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಹೀಗೆ ಮಾಡಿದ್ರೆ ಹೇಗೆ ನಡೆಯುತ್ತೆ ವಾಣಿ? ಬರೆಯೋದೊಂದು ಅಷ್ಟು ದೊಡ್ಡ ವಿಷಯ ಆಗಬೇಕಾ? ದಿನವೂ ಒಂದಿಷ್ಟು ಹೊತ್ತು ಅಂತ ಪಕ್ಕಕ್ಕೆ ಎತ್ತಿಟ್ಟು, ಸದ್ದಿಲ್ಲದೇ ಪುಸ್ತಕ ಪ್ರಕಟಿಸ್ತಾ ಇರ್ತಾರಪ್ಪ ಎಲ್ಲರೂ. ನಿನ್ನ ಹಾಗೆ ಮಾಡೋರನ್ನ ಎಲ್ಲೂ ನೋಡಿಲ್ಲ ನಾನು” ಅಂತ ತುಸು ತಗ್ಗಿದ ದನಿಯಲ್ಲೇ ದಾಟಿಸುತ್ತಾನೆ ನನಗೆ.
“ಹೂಂ, ಅವರೆಲ್ಲರ ಜೊತೆ ಹೋಗಿ ಸಂಸಾರ ಮಾಡೀ ನೋಡು ನೀನು” ಅಂತ ಹರಿಹಾಯುತ್ತೇನೆ.
“ಛೇ, ಆಡಬಾರದ ಒಂದು ಮಾತು ಆಡಿ ಬಿತ್ತು ಇವತ್ತು ಸೆಕ್ಸಿಗೆ ಕತ್ತರಿ” ಅನ್ನೋ ಮಾತು ಆಡದೇ ಅವನ ಮುಖದ ಮೇಲೆ ಬರೆದಿದೆ.
ಇವತ್ತು ಕೊಟ್ಟರೆ ಹೇಗೆ? ಅಂದುಕೊಳ್ಳುತ್ತೇನೆ ನಾನು. ಒಟ್ಟಿನಲ್ಲಿ ಇವನ ವ್ಯಾಕರಣ ಕೆಡಿಸಬೇಕು. ಅಂದುಕೊಂಡಿದ್ದನ್ನೆಲ್ಲ ಉಲ್ಟಾ ಮಾಡಬೇಕು.
ಹೀಗೆ ಸಂಜೆಯೆಲ್ಲಾ ಮಲಗಿ ನಸುಕಿಗೆದ್ದು ಏನೋ ಬರೆಯೋದಿದೆ ಅಂತ ದೆವ್ವದ ಹಾಗೆ ಕತ್ತಲು ನೋಡುತ್ತ ಕೂತು ನಂತರ ಏಳಕ್ಕೆ ಬೇಗಬೇಗನೆ ಮಧ್ಯಾಹ್ನದೂಟಕ್ಕೆ ಡಬ್ಬ ಕಟ್ಟಿಕೊಂಡು, ಲೋಲನನ್ನು ಡೇಕೇರಿನ ಹೊಸ್ತಿಲಲ್ಲಿ ಹಾಲಿನವನು ಇಟ್ಟು ಹೋಗೋ ಹಾಲಿನ ಪ್ಯಾಕೆಟ್ ಥರ ಬಿಟ್ಟು, ನಾನು ಓಡುತ್ತೋಡುತ್ತಲೇ ಎಡಿಸನ್ನಿನ ಟ್ರೇನ್ ಸ್ಟೇಷನ್ ತಲುಪಿ, ಒಂಬತ್ತೂಕಾಲಿನ ಟ್ರೇನು ಹಿಡಿದು ಬಿಟ್ಟರೆ- ನನ್ನ ದಿನದ ಒಂದು ಪ್ರಹರ ಮುಗಿದ ಹಾಗೆ.
ನ್ಯೂಯಾರ್ಕಿನ ‘We know’ ಎಂಬ ಸಂಸ್ಥೆಯಲ್ಲಿ ನಾನು ಕಮ್ಯುನಿಟಿ ಎಂಗೇಜ್ಮೆಂಟ್ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡುತ್ತೇನೆ. ಮುಖ್ಯವಾಗಿ ದಕ್ಷಿಣ ಏಷ್ಯಾದ ಭಾಷೆಗಳ ಕ್ಲಯಂಟ್‍ಗಳಿಗೆ ಭಾಷಾಂತರ ಮತ್ತು ಸಂವಾದಗಳಲ್ಲಿ ಸಹಾಯ ಮಾಡುವುದು ನನ್ನ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆ. ಸಮುದಾಯ ಆಧಾರಿತ ಸ್ವಯಂಸೇವಾ ಸಂಸ್ಥೆಯಾದ ವೀ ನೋ, ಮಹಿಳೆಯರ-ಮಹಿಳೆಯರಿಂದ-ಮಹಿಳೆಯರಿಗಾಗಿ ಎಂಬ ಧ್ಯೇಯವನ್ನಿಟ್ಟುಕೊಂಡು ಹತ್ತು ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು.
ಇಲ್ಲಿ ಕೆಲಸಕ್ಕೆ ಸೇರುವ ಮೊದಲು ನಾನು ಎಡಿಸನ್ನಿನ ಗ್ರಂಥಾಲಯವೊಂದರಲ್ಲಿ ವಾಲಂಟಿಯರಿಂಗ್ ಮಾಡುತ್ತಿದ್ದೆ. ಅಲ್ಲಿನ ಗ್ರಂಥಪಾಲಕಿ ಕ್ರಿಸ್ಟೀನಾರ ದೆಸೆಯಿಂದ ಅಂತೂ ಇಲ್ಲಿ, ಈ ನ್ಯೂಯಾರ್ಕ್ ಎಂಬ ಶಹರದ ಮಿಡ್‍ಟೌನ್-ಮ್ಯಾನ್‍ಹ್ಯಾಟನ್ ಎಂಬ ಸ್ವಪ್ನಸೃಷ್ಟಿಯ ಟರ್ಟಲ್ ಬೇ ಪ್ರದೇಶದಲ್ಲಿ, ಎಂಟುನೂರು ಎಂಬ ಸಂಖ್ಯೆಯಿಂದ ಮಾತ್ರ ಗುರುತಿಸಿಕೊಂಡು, ಮುಗಿಲೆತ್ತರ ತಲೆಯೆತ್ತಿ ನಿಂತಿರುವ ಕಟ್ಟಡದ ಇಪ್ಪತ್ತೆರಡನೆಯ ಮಹಡಿಯ ಆಫೀಸೊಂದರಲ್ಲಿ ನನಗೂ ಹೇಳಿಕೊಳ್ಳಲು ‘ಕೆಲಸ’ ಎಂಬೋದೊಂದಿದೆ.
ಅದಕ್ಕಿಂತ ಮೊದಲು, “ಅಮೆರಿಕದಲ್ಲಿದ್ದೂ ಜಾಬ್ ಮಾಡಲ್ವಾ?” ಅಂತ ಯಾರಾದರೂ ಕಡೆಯ ಶಬ್ದವನ್ನು ನಾಸಿಕದಿಂದ ಎಳೆದು ಕೇಳಿದಾಗ ಮುಖಕ್ಕೆ ತಣ್ಣೀರುಗ್ಗಿದಂತೆನಿಸಿ ಆ ಕಾರಣಕ್ಕಾಗಿಯೇ ಯಾರಿಗೋ ಕ್ಷಮೆ ಕೇಳಬೇಕೇನೋ ಎಂಬಂತೆ ದನಿ-ದೇಹ-ಮನಸ್ಸುಗಳು ತಗ್ಗಿಹೋಗುತ್ತಿದ್ದವು. ಈಗ ಹಾಗಾಗಲ್ಲ. “ಫಕ್ ಯೂ, ಐ ಹ್ಯಾವ್ ಅ ಜಾಬ್ ನೌ” ಎಂಬ ಮಾತು ಮನಸ್ಸಿನಲ್ಲಿ ಮೂಡುತ್ತದೆ.
ನ್ಯೂಯಾರ್ಕಿನ ಅಸಂಘಟಿತ ಮಹಿಳೆಯರನ್ನೆಲ್ಲ ಒಗ್ಗೂಡಿಸುವುದು ನಮ್ಮ ಸಂಸ್ಥೆಯ ಒತ್ತಾಸೆ. ಎಪ್ಪತ್ತರ ದಶಕದಲ್ಲಿ ಆಂಜಲಾ ಡೇವಿಸ್ ಜೊತೆಗೆ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಅಮ್ಯಾಂಡಾ ಪೊಲಾಕ್ ಎಂಬ ಹಿರಿಯ ಮಹಿಳೆ ತಮ್ಮ ನಿವೃತ್ತಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಈ ಸಂಸ್ಥೆಯನ್ನು ಶುರು ಮಾಡಿದ್ದಾರೆ. ಇಲ್ಲಿ ಬಂದು ಸೇರಿರುವ ಒಂದು ವರ್ಷದಲ್ಲಿ, ಈ ರೀತಿಯ ಸೇವಾ ಸಂಸ್ಥೆಯನ್ನೂ ವ್ಯವಹಾರ ಚಾತುರ್ಯದಿಂದ ನಡೆಸುವ ವೈಖರಿ ಕಂಡು ಬೆರಗಾಗಿದ್ದೇನೆ. ಸಾವಿರದೈನೂರು ಚದರಡಿಯ ಈ ಆಫೀಸಿನ ವಿಸ್ತಾರಕ್ಕೆ ಅಮ್ಯಾಂಡಾ ಪ್ರತಿ ತಿಂಗಳು ಭರಿಸುವ ಬಾಡಿಗೆಯ ಮೊತ್ತ ಊಹಿಸಿ ಸ್ವತಃ ಸುಹಾಸನೇ ಬೆವರೊರೆಸಿಕೊಂಡಿದ್ದ.
ನನ್ನ ಈ ಕೆಲಸವನ್ನು, ಕೆಲಸ ಅಂತ ಕರೆಯಲೂ ಅವನಿಗೆ ತಕರಾರಿದೆ.
“ನಿನ್ನ ಬಾಸು ಮಹಾ ಚಾಲಾಕಿ. ತನ್ನ ಇಳಿಗಾಲದ ಖಯಾಲಿಗಾಗಿ ನಿಮ್ಮೆಲ್ಲರ ಬಳಿ ಬಿಟ್ಟಿ ದುಡಿಸಿಕೊಳ್ತಾಳೆ. ಅಲ್ಲ ಕಣೇ, ನನ್ನ ಸಂಬಳದ ಹತ್ತರಲ್ಲಿ ಒಂದು ಭಾಗವೂ ನಿನ್ನ ಈ ಕೆಲಸದಿಂದ ಗಿಟ್ಟೋದಿಲ್ಲ. ಆರೋಗ್ಯ ವಿಮೆಯನ್ನು ಕೂಡ ಒದಗಿಸೋದಿಲ್ಲ ಅವಳು. ಸುಮ್ಮನೇ ದಿನವೂ ಟ್ರೇನಿಗೆ ದುಡ್ಡು ದಂಡ. ಅದನ್ನು ಕೆಲಸ ಅನ್ನೋದಕ್ಕಿಂತ ಹವ್ಯಾಸ ಅನ್ನೋದೇ ಸೂಕ್ತ” ಎನ್ನುತ್ತಾನೆ ಸುಹಾಸ ಆಗಾಗ ಲಹರಿ ಬಂದಾಗ.
ಅವನಿಗೆ ತೊಂಡೆಕಾಯಿ ಇಷ್ಟವಾಗುವುದಿಲ್ಲ. ಇಂಥ ಮಾತನಾಡಿದ ಮುಂದಿನ ಎರಡೂ ದಿನಗಳು ನಮ್ಮ ಮನೆಯಲ್ಲಿ ತೊಂಡೆಕಾಯಿಯದೇ ಸಾರು, ಪಲ್ಯ ಎಲ್ಲ.
ಹಾಗೆಲ್ಲ ನಾನೂ ಸುಮ್ಮನಿರುವ ಪೈಕಿಯಲ್ಲ. “ಅಲ್ವೋ ಇಷ್ಟೆಲ್ಲ ಮಾತನಾಡತೀಯಲ್ಲ, ಲೋಲ ಕಾಲೇಜಿಗೆ ಅಂತ ಅತ್ತ ಕಡೆ ನಡೆದಮೇಲೆ ನಾನು ನಿನ್ನನ್ನ ಬಿಡದೇ ಇರ್ತೀನಿ ಅಂದುಕೊಂಡಿದೀಯಾ?” ಅಂತ ದಬಾಯಿಸುತ್ತೇನೆ. ಅದಕ್ಕವನು, “ಹೂಂ ಬಿಡೂವಂತಿ. ಆ ಪಲ್ಯದ ತಪಲೆ ಸರಿಸು ಈ ಕಡೆ” ಅಂತ ಮರು ನುಡಿಯುತ್ತಾನೆ. ಅಷ್ಟಷ್ಟು ದಿನಕ್ಕೆ ನಾನು ಬಿಡ್ತೀನಿ ಬಿಡ್ತೀನಿ ಅಂತ ಹಾರಾಡುವುದೂ, ಅದಕ್ಕೆ ಅವನು, “ಬಿಡೋಕೆ ಅದೇನು ಹೂಸಾ?” ಅಂತ ನನ್ನನ್ನು ಇನ್ನಷ್ಟು ರೊಚ್ಚಿಗೆಬ್ಬಿಸುವುದೂ ನಡೆಯುತ್ತಲೇ ಇರುತ್ತದೆ.
ಅಮೆರಿಕದ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅವನಿಗೆ ಗಣಿತಶಾಸ್ತ್ರದಲ್ಲಿ ಡಾಕ್ಟರೇಟ್ ಇದೆ. ನನಗೆ ನೋಡಿದರೆ ಹದಿಮೂರರಲ್ಲಿ ಆರು ಕಳೆದರೆ ಎಷ್ಟಾಗುತ್ತದೆ ಅಂತ ಥಟ್ಟನೆ ಕೇಳಿದರೆ ಬೆರಳುಗಳಲ್ಲಿ ಎಣಿಸಿ ನೋಡದೇ ಹೇಳಲು ಬರುವುದಿಲ್ಲ. “ಸರೀ ಇದೆ ನಮ್ಮ ಜೋಡಿ. ಅಲ್ಲ, ಲೋಕದಲ್ಲಿ ಸಮತೋಲನ ಅನ್ನೋದೊಂದು ಇರಬೇಕು ಅಂತಾರಲ್ಲ” ಅಂತ ಗಟ್ಟಿಯಾಗಿ ನಗುತ್ತೇನೆ ನಾನು. “ಹೂಂ, ಸಣ್ಣ ಪಟ್ಟಣದಲ್ಲಿ ಬೆಳೆದ ಹುಡುಗಿಯರು ಗಂಡನ ಮಾತು-ಗೀತು ಕೇಳ್ಕೊಂಡು, ಲಕ್ಷಣವಾಗಿ ಅಡುಗೆ-ಗಿಡುಗೆ ಮಾಡ್ಕೊಂಡು ಇರ್ತಾರೆ ಅಂತ ನಂಬಿಕೊಂಡಿದ್ದೆನಲ್ಲ. ಸರೀ ಆಯ್ತು ನಂಗೆ” ಅಂತ ಅವನೂ ನಗುವಿನ ಜೊತೆಗೆ ದನಿಗೂಡಿಸುತ್ತಾನೆ. ಅದೇನೋ, ಈ ಹದಿಮೂರು ವರ್ಷಗಳಲ್ಲಿ ಇದೇ ಅಂತ ಬೆರಳಿಟ್ಟು ವಿವರಿಸಲಾಗದ ಸಖ್ಯ ನಮ್ಮ ನಡುವೆ ಬೆಳೆದು ಬಂದಿದೆ.
ಸುಹಾಸನೂ ನ್ಯೂಯಾರ್ಕಿನಲ್ಲಿಯೇ ಕೆಲಸ ಮಾಡುವುದು. ಅವನು ದಿನವೂ ಏಳು ಅಂದರೆ ತನ್ನ ಆಫೀಸಿನಲ್ಲಿರಬೇಕಾಗುತ್ತದೆ. ಹೀಗಾಗಿ ಅವನು ಮುಂಜಾನೆ ಆರರ ಟ್ರೇನು ತೆಗೆದುಕೊಳ್ಳುತ್ತಾನೆ. ನ್ಯೂಯಾರ್ಕಿನ ದಕ್ಷಿಣ ಭಾಗದಲ್ಲಿರುವ ವಾಲ್‍ಸ್ಟ್ರೀಟಿನ ಪ್ರಸಿದ್ಧ ಹೆಡ್ಜ್ ಫಂಡ್ ಕಂಪನಿಯೊಂದರಲ್ಲಿ ಅವನು ಸಂಶೋಧನಾ ಘಟಕದ ಮುಖ್ಯಸ್ಥ. ಈ ಕಂಪನಿ ನಮ್ಮಿಬ್ಬರಿಗಷ್ಟೇ ಅಲ್ಲ, ಚೂರು ಎಚ್ಚರ ವಹಿಸಿ ಖರ್ಚು ಮಾಡಿಕೊಂಡಿದ್ದರೆ ಲೋಲ ಕೂಡ ಒಂದು ಪೈಸೆ ದುಡಿಯದೇ ತನ್ನಿಡೀ ಬದುಕು ನಡೆಸಿಬಿಡಬಹುದು, ಅಷ್ಟು ವರಮಾನ ನೀಡುತ್ತದೆ.
ನ್ಯೂಯಾರ್ಕಿನಿಂದ ಒಂದು ಘಂಟೆ ದೂರದಲ್ಲಿರುವ ನ್ಯೂಜೆರ್ಸಿಯ ಎಡಿಸನ್ ಅನ್ನೋ ಪ್ರಾಂತ್ಯದಲ್ಲಿ ನಾವು ನಿವಾಸಗೊಂಡಿದ್ದೇವೆ. ಬೆಳೆಯುವ ಮಗುವಿಗೆ ಉಸಿರಾಡಲು ಶುದ್ಧ ಗಾಳಿ ಬೇಕು, ಸಂಜೆಯ ಹೊತ್ತು ಅವನು ನಿರಾತಂಕವಾಗಿ ರಸ್ತೆಯಲ್ಲಿ ಸೈಕಲ್ ಹೊಡೆಯುವಂತಿರಬೇಕು ಎಂಬುದೆಲ್ಲ ಹೀಗೆ ಉಪನಗರ ಪ್ರದೇಶದಲ್ಲಿ ನಾವು ಮನೆ ಮಾಡಲು ಕೊಟ್ಟುಕೊಂಡ ಕಾರಣಗಳೇ ಆದರೂ; ಈ ಮನೆಗಳ ಎತ್ತರೆತ್ತರ ಚಾವಣಿಗಳ- ಅಲ್ಲಿಂದ ಇಳಿಬಿಟ್ಟಿರೋ ಶಾಂಡಲಿಯರ್ ದೀಪಗಳ- ಇಲೆಕ್ಟ್ರಿಕ್ ಫೈರ್‍ಪ್ಲೇಸುಗಳ ಆಕರ್ಷಣೆಯಿಂದ ಮತ್ತು ಆ ಮೂಲಕ ನಾವಿಬ್ಬರೂ ಬಾಲ್ಯದಲ್ಲಿ ದೂರದಿಂದ ಮಾತ್ರ ಕಂಡಿದ್ದ ‘ಆ ಇನ್ನೊಂದು ಲೋಕ’ಕ್ಕೆ ಸೇರುವ ಹುರುಪಿನಿಂದ, ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂಬುದೇ ಹೆಚ್ಚು ಸೂಕ್ತವೇನೋ.
***
“ವಾಣಿ, ಅಮ್ಯಾಂಡಾ ಅರ್ಧ ಘಂಟೆಯಿಂದ ನಿನ್ನ ಹಾದಿ ಕಾಯ್ತಿದಾಳೆ ನೋಡು.”
ಇಂದು ಆಫೀಸಿನಲ್ಲಿ ಕಾಲಿಡುವ ಪುರುಸೊತ್ತಿಲ್ಲದೇ ಸ್ವಾಗತ-ಡೆಸ್ಕಿನಲ್ಲಿ ಜ್ಯೂಲಿಯಾ ತಡೆದು ನುಡಿದಳು.
“ಕ್ಲಯಂಟ್ ಅದಾರೇನು?”
“ಹೂಂ ಯಾರೋ ನಿಮ್ಮವರೇ ಅದಾರೆ ನೋಡು.”
ಕಂದು ಚರ್ಮದ ಯಾರನ್ನೇ ಕಂಡರೂ ನಿಮ್ಮವರು ಅಂತ ಕಣ್ಣು ಮಿಟುಕಿಸುವ ಜ್ಯೂಲಿಯಾಳಿಗೆ ಒಂದು ಐ-ರೋಲ್ ಕೊಟ್ಟೆ.
“ಬಣ್ಣ ಒಂದೇ ಅಂದ ತಕ್ಷಣ ನಾವೆಲ್ಲ ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು ಅಂದುಕೊಂಡೆಯಾ?”
ನಕ್ಕಳು ಜ್ಯೂಲಿಯಾ.
“ಹೂಂ, ನನ್ನ ಮನೆಯಾಗೂ ಮೂವರು ಅದಾರೆ, ನಿನ್ನ ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು. ಹಡಿಪ್ಪಾ!” ಅಂತ ಎರಡೂ ತೋರು ಬೆರಳುಗಳನ್ನೆತ್ತಿ ಒಮ್ಮೆ ಕುಣಿಸಿದಳು. ಜ್ಯೂಲಿಯಾಳ ಗಂಡ ಶಿಕಾಗೋದಲ್ಲಿ ಬೆಳೆದ ಒಬ್ಬ ಪಂಜಾಬಿ. ಅವಳ ಇಬ್ಬರೂ ಮಕ್ಕಳು ಗಂಡನ ಬಣ್ಣ-ಲಕ್ಷಣಗಳನ್ನೇ ಹೋಲುತ್ತವೆ ಅನ್ನೋದು ಅವಳ ತಕರಾರು.
“ಅದೇನೋ ಟೀಕಿ-ಟಾಕಾ ಮಸಾಲಾ ಅಂತ ತಯಾರಿಸಿದ್ದ ಹರ್ಷೀಲ್ ನಿನ್ನೆ. ಮಧ್ಯಾಹ್ನ ಜೊತೆಗೆ ತಿನ್ನೋಣ” ಅಂದಳು.
“ಯಪ್! ಲೇಟರ್” ಅಂತಂದು ಓಡುನಡಿಗೆಯಲ್ಲಿ ಅಮ್ಯಾಂಡಾಳ ಆಫೀಸಿನೆಡೆಗೆ ನನ್ನ ನೋಟ್ ಪುಸ್ತಕ-ಪೆನ್ನುಗಳನ್ನು ಹೊಂದಿಸಿಕೊಳ್ಳುತ್ತ ನಡೆದೆ. ಅಂಥ ಗಡಿಬಿಡಿಯಲ್ಲೂ ಎಲ್ಲೆಲ್ಲೂ ಬೆಳಕೇ ಬೆಳಕಾಗಿರುವ ಭವ್ಯ ಒಳಾಂಗಣ ನನ್ನ ಒಳಗನ್ನು ಪ್ರಶಾಂತಗೊಳಿಸಿತು. ಅಮೃತಶಿಲೆಯ ನೆಲಹಾಸಿನ ಮೇಲೆ ನಡೆವಾಗ ನನ್ನ ಹೀಲ್ಸಿನ ಶಬ್ದದಿಂದಲೇ ಒಳಗಿರುವವರಿಗೆ ನನ್ನ ಆಗಮನದ ನಿರೀಕ್ಷೆಯುಂಟಾಗಬಹುದು ಅಂದುಕೊಂಡೆ. ನನ್ನ ಊಹೆ ಸುಳ್ಳಾಗಲಿಲ್ಲ. ಅಮ್ಯಾಂಡಾಳ ಕೋಣೆಯ ಅರ್ಧ ತೆರೆದಿದ್ದ ಡಚ್ ಡೋರ್‍ನ ಮುಂದೆ ನಾನು ನಿಂತಿದ್ದೇ ಒಳಗಿದ್ದ ಮೂವರೂ ನನ್ನತ್ತ ಮುಖ ತಿರುಗಿಸಿದರು.
“ಇವಳ ಬಗ್ಗೆಯೇ ನಾನು ಹೇಳ್ತಿದ್ದಿದ್ದು” ಅಂದಳು ಅಮ್ಯಾಂಡಾ, ಇಲ್ಲಿಗೆ ತನ್ನ ಜವಾಬ್ದಾರಿ ಮುಗಿಯಿತು ಎಂಬ ಗತ್ತಿನಲ್ಲಿ. ಅವಳ ಮುಂದೆ ನೀಲಿ ಬಣ್ಣ ಹೊದಿಸಿದ ಕುರ್ಚಿಗಳ ಮೇಲೆ ಆಸೀನರಾದವರು ಮೊದಲ ನೋಟಕ್ಕೆ ತಾಯಿ ಮಗಳ ಹಾಗೆ ಕಂಡರು. ಇಬ್ಬರೂ ಹಿಜಾಬ್ ಧರಿಸಿದ್ದರು. ಹಿರಿಯ ಮಹಿಳೆ ಕಂದು ಬಣ್ಣದ ಅಬಾಯಾ ತೊಟ್ಟಿದ್ದಳು. ಸುಮಾರು ನಲವತ್ತೈದರ ಪ್ರಾಯ ಅನ್ನಬಹುದು. ಚಿಕ್ಕವಳು ಜೀನ್ಸ್ ಮತ್ತು ಕಡು ನೀಲಿ ವರ್ಣದ ಉದ್ದ ತೋಳಿನ ಕುರ್ತಾದಲ್ಲಿದ್ದಳು. ಅದೇನೋ ಅವಳ ಮುಖದ ರೇಖೆಗಳಲ್ಲೇ, ಹುಬ್ಬೆತ್ತರಿಸಿ ನನ್ನನ್ನು ಕಂಡ ಚೂಪಿನಲ್ಲೇ ಈ ಹುಡುಗಿ ಅಮೆರಿಕದಲ್ಲಿಯೇ ಬೆಳೆದವಳು ಎಂಬುದು ವಿದಿತವಾಗುತ್ತಿತ್ತು. ದೇಹಭಾಷೆಯಲ್ಲೂ ಅಷ್ಟೇ. ತಾಯಿ ಚೂರು ಗೂನು ಬಾಗಿಸಿ ಕುಳಿತಿದ್ದಾರೆ. ಮಗಳದು ಹಾಗಲ್ಲ, ನೇರವಾಗಿ ನಿಂತ ಹೆಗಲು, ಗೆರೆ ಕೊರೆದಂತೆ ಕತ್ತು, ಗದ್ದ. ಇರಬಹುದು ಹದಿನಾರೋ, ಹದಿನೇಳೋ. ಎಳೆಯ ವಯಸ್ಸು.
ನಾನು ಹಲೋ ಹೇಳುತ್ತ ಒಳ ಧಾವಿಸಿದಂತೆ ತಾಯಿ ಮೊದಲೇ ನನ್ನ ಪರಿಚಯ ಇರುವವಳಂತೆ ಎದ್ದು ನಿಂತಳು.
“ಅಸ್ಸಲಾಮ್-ಅಲೈಕುಮ್.”
“ಹಾಯ್… ಐ ಮೀನ್… ವಾಅಲೈಕುಮು ಸಲಾಮ್” ಅಂದೆ ನಾಲಗೆ ಕಚ್ಚಿಕೊಳ್ಳುತ.
“ರೊಹಿಂಗಾ?”
“ಸಾರಿ?”
“ರೊಹಿಂಗಾ?”
“ಅಲ್ಲ.”
ಹೆಂಗಸಿನ ಮುಖದ ಮೇಲೆ ನಿರಾಸೆ ಮೂಡಿತು.
“ಸುನ್ನಿ?”
“ಸಾರಿ. ಅಲ್ಲ” ಅಂದೆ ನಗುತ್ತ.
ಅಮ್ಯಾಂಡಾಳನ್ನೊಮ್ಮೆ ಕೆಕ್ಕರಿಸಿ ನೋಡಿದೆ. ಅವಳೂ ಇವರಿಗೆ, “ನಿಮ್ಮವಳೇ ಒಬ್ಬಳು ಬರುತ್ತಾಳೆ” ಅಂತ ಹೇಳಿಟ್ಟಿದ್ದು ಸ್ಪಷ್ಟವಿತ್ತು. ಚಿಕ್ಕವಳು ದೊಡ್ಡವಳಿಗೆ ಉಡಾಫೆಯಲ್ಲಿ ನಸುನಗುತ್ತ ಏನನ್ನೋ ಹೇಳಿದಳು. ನನಗೆ ತಿಳಿಯದ ಭಾಷೆಯದು. ಉರ್ದು ಅಲ್ಲ. ಅರೇಬಿಕ್ ಅಲ್ಲ. ಟರ್ಕಿಶ್? ನೋ. ಚೂರು ಬೆಂಗಾಲಿಯ ಒತ್ತುಗಳಿವೆ, ಆದರೆ ಬೆಂಗಾಲಿ ಖಂಡಿತ ಅಲ್ಲ. ಚೂರು ಪೂರ್ವಕ್ಕೆ… ಬರ್ಮಿಸ್? ನೋ. ಇನ್ನೊಂಚೂರು ದಕ್ಷಿಣಕ್ಕೆ… ಮಲಯ? ಎಲ್ಲೋ ದೂರದಲ್ಲಿ ಹೌದು. ಭಾಷೆಯಲ್ಲಲ್ಲ, ಉಚ್ಚಾರದಲ್ಲಿ ಮಲೇಶಿಯಾದ ರಾಷ್ಟ್ರಭಾಷೆಯ ಸರಾಗತೆಯಿದೆ. ಆದರೆ ಊಹೂಂ, ಅದೂ ಅಲ್ಲ. ಇನ್ನೊಂಚೂರು ಉತ್ತರಕ್ಕೆ… ಅಲ್ಲೇನು ಬರುತ್ತದೆ? ಥಾಯ್‍ಲ್ಯಾಂಡ್‍ನ ಥಾಯ್? ಲಾವೊಸ್‍ನ ಲಾವೋ? ಕಾಂಬೋಡಿಯಾದ ಖಮೆರ್? ಊಹೂಂ, ಇನ್ನೂ ಉತ್ತರ… ಬರ್ಮಾ? ಚಿತ್ತಗಾಂಗ್? ಹೌದು, ಚಿತ್ತಗಾಂಗಿಯನ್‍ಗೆ ಹತ್ತಿರವಾದ ಭಾಷೆ. ಯಾವುದದು? ರೊಹಿಂಗ್ಯಾ?
ಓಹ್! ರೊಹಿಂಗ್ಯಾ. ರೊಹಿಂಗ್ಯನ್ ಮಾತನಾಡುತ್ತಿದ್ದಾರೆ ಇವರಿಬ್ಬರೂ. ಚಿಕ್ಕವಳ ಸಯ್-ಫ್-ಸ್ಸ್-ಹ್-ಕಾರದ ಒತ್ತುಗಳ ಸೂಕ್ಷ್ಮದಲ್ಲಿ ನನಗದು ತಿಳಿಯಿತು. ತಾಯಿ “ರೊಹಿಂಗಾ?” ಅಂತ ಮೊದಲು ಕೇಳಿದ ಪ್ರಶ್ನೆ ಈಗ ಅರ್ಥವಾಯಿತು.
ಅವಳು ಸರಿಯಾಗಿ ತಾಯಿಗೆ ಏನು ಹೇಳಿದಳು ಅಂತ ಮಾತ್ರ ಅರ್ಥವಾಗಲಿಲ್ಲ. ಆದರೆ ಅವರ ಸಲಿಗೆಯಲ್ಲಿ ಅದೊಂದು ಹಗುರ ಮಾತುಕತೆ ಅನ್ನೋದು ಸ್ಪಷ್ಟವಿತ್ತು.
“ಏನೀಗ ನಿನ್ನನ್ನ ಮಾತನಾಡಿಸುವವರೆಲ್ಲ ಇಸ್ಲಾಮ್ ಪಂಥಕ್ಕೆ ಸೇರಿದವರೇ ಆಗಿರಬೇಕೇನು?” ಅಂತ ತಾಯಿಯ ಕಾಲೆಳೆದಿರಬೇಕು ಚಿಕ್ಕವಳು. ಅದಕ್ಕೆ ಅಮ್ಮ, “ಹಂಗಲ್ಲ ಕಣೇ, ಮತ್ತೆ ಈ ಬಿಳೀ ಹೆಂಗಸು ಹಂಗೇ ಹೇಳಿದಳಲ್ಲವಾ ಮುಂಚೆ?” ಅಂದಿರಬೇಕು. ಇಬ್ಬರ ಸಂಭಾಷಣೆ ಮತ್ತು ದೇಹಭಾಷೆಗಳಲ್ಲಿ ಒಂದು ನಿರಮ್ಮಳ ಸ್ನೇಹವಿದೆ.
ಅಮ್ಯಾಂಡಾಳೇ ಮಾತು ಶುರು ಮಾಡಿದಳು.
“ವಾಣಿ, ತೊಗೋ ಈ ಹೊಸ ಕೇಸು ನಿನಗೆ. ಇವರು ದೂರದ ಟೆಕ್ಸಸ್ ರಾಜ್ಯದಿಂದ ಬಂದಿದಾರೆ, ಫೋರ್ಟ್ ವರ್ಥ್ ಊರಿನಿಂದ. ಅಮಾನಾ ಮತ್ತು ಝಹ್ರಾ. ಝಹ್ರಾ ಈಗ ಎರಡು ತಿಂಗಳ ಗರ್ಭಿಣಿ. ಅವಳಿಗೆ ಮಗು ಬೇಡವಂತೆ. ಟೆಕ್ಸಸ್ಸಿನಲ್ಲಿ ಅಬಾರ್ಷನ್ ನಿಷೇಧವಿದೆ. ಅದಕ್ಕೇ ಅವರ ಸಾಮಾಜಿಕ ಕಾರ್ಯಕರ್ತೆ ನ್ಯೂಯಾರ್ಕಿನ ಫ್ಲೈಟು ಹತ್ತಿಸಿದ್ದಾಳೆ. ಅವರಿಗೆ ಏನೂ ತೊಂದರೆಯಾಗದ ಹಾಗೆ ಪ್ರೊಸೀಜರ್ ಮುಗಿಸಿಕೊಂಡು ಹೋಗುವ ಹಾಗೆ ನೋಡಿಕೋ. ವೈದ್ಯಕೀಯ ವಿವರಗಳೆಲ್ಲ ಇಮೇಲ್‍ನಲ್ಲಿದೆ” ಎಂದವಳೇ, ತಾಯಿ-ಮಗಳನ್ನುದ್ದೇಶಿಸಿ, “ಚಿಂತೆ ಬೇಡ, ಯೂ ಆರ್ ಇನ್ ಗುಡ್ ಹ್ಯಾಂಡ್ಸ್” ಅಂತ ಆಶ್ವಾಸನೆ ಕೊಟ್ಟಳು.
ಝಹ್ರಾ. ಕಾಂತಿಯುಕ್ಕುವ ಹೂವಿನ ಹೆಸರು. ಇಷ್ಟು ಚಿಕ್ಕ ವಯದಲ್ಲಿ ಗರ್ಭಿಣಿಯೇ? “ದಯವಿಟ್ಟು ಬನ್ನಿ” ಎನ್ನುತ್ತ ಅವರಿಬ್ಬರನ್ನೂ ಅಮ್ಯಾಂಡಾಳ ಆಫೀಸಿನಿಂದ ಪಕ್ಕದ ಮೀಟಿಂಗ್ ಕೋಣೆಗೆ ಕರೆದೊಯ್ದೆ.
ಕಳೆದೊಂದು ವರ್ಷದಲ್ಲಿ ಇಂಥ ಹತ್ತಾರು ಕೇಸುಗಳನ್ನು ನಿರ್ವಹಿಸಿ ಗೊತ್ತಿದ್ದರಿಂದ ಒಂದು ಕೋಣೆಯಿಂದ ಇನ್ನೊಂದಕ್ಕೆ ನಡೆಯುವಾಗಲೇ ತಲೆಯಲ್ಲಿ ಮುಂದಿನ ಕ್ರಮಗಳೆಲ್ಲ ಪಟ್ಟಿಯಾಗುತ್ತ ಹೋದವು. ಬ್ರೂಕ್ಲಿನ್‍ನಲ್ಲಿರುವ ವಿಮೆನ್ ಕೇರ್ ಆಸ್ಪತ್ರೆಯಲ್ಲಿ ಪ್ರಕ್ರಿಯೆ ನಡೆಯುತ್ತದೆ. ಅಲ್ಲಿನ ನಮ್ಮ ಸಂಪರ್ಕ-ಸೇತು ಸೂಸನ್‍ಳಿಗೆ ವಿವರಗಳನ್ನು ಕಳಿಸಬೇಕು. ಬ್ರೂಕ್ಲಿನ್ನಿನ ಕ್ವಾಲಿಟಿ-ಇನ್ ಎಂಬ ಹೊಟೇಲಿನಲ್ಲಿ ಕೋಣೆ ಕಾದಿರಿಸಬೇಕು. ಝಹ್ರಾಳ ಆರೋಗ್ಯ ವಿಮೆಯ ವಿವರಗಳನ್ನು ತಿಳಿದುಕೊಂಡು, ವಿಮೆ ಕಂಪನಿಯವರು ಎಷ್ಟು ಹಣ ಭರಿಸುತ್ತಾರೆ, ಮಿಕ್ಕ ಶುಲ್ಕ ಎಲ್ಲಿಂದ ಭರ್ತಿಯಾಗುತ್ತದೆ ಎಂಬುದನ್ನೆಲ್ಲ ಪರಿಹರಿಸಬೇಕು. ಸಾಮಾನ್ಯವಾಗಿ ಹೀಗೆ ಬೇಡದ ಗರ್ಭ ತೆಗೆಸುವುದಕ್ಕಾಗಿಯೇ ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸುವವರಿಗೆ ಪ್ರಾಯೋಜಕತ್ವದ ಅಗತ್ಯವಿದ್ದೇ ಇರುತ್ತದೆ. ನಮ್ಮ ಪ್ರಾಯೋಜಕರ ಪಟ್ಟಿಯಿಂದ ಸೂಕ್ತವಾದವರನ್ನು ಆಯ್ಕೆ ಮಾಡಿಕೊಂಡು ಅವರನ್ನು ಸಂಪರ್ಕಿಸಬೇಕು. ಮತ್ತು ಮುಖ್ಯವಾಗಿ…
ಮುಖ್ಯವಾಗಿ ಈಕೆಯ ಮಾನಸಿಕ ಆರೋಗ್ಯ ಈ ಸಂದರ್ಭದಲ್ಲಿ ಹದಗೆಡದಂತೆ ಎಚ್ಚರವಹಿಸಬೇಕು. ಉಳಿದದ್ದಕ್ಕೆಲ್ಲ ಜನ ಸಿಗುತ್ತಾರೆ. ಆದರೆ ಇದು, ಈ ಆಪ್ತ ಮಾತುಕತೆ, ಈ ಸಾಂತ್ವನ, ಈ ಪಾಪಪ್ರಜ್ಞೆಯ ನಿವಾರಣೆ ನನ್ನ ಜವಾಬ್ದಾರಿ. ಎಷ್ಟೋ ಸಲ ಬಗಲಲ್ಲೊಂದು ಹಸುಗೂಸನ್ನು ಎತ್ತಿಕೊಂಡು ಅಬಾರ್ಷನ್‍ಗೆ ಬಂದ ಹೆಂಗಸರು ಪ್ರಕ್ರಿಯೆಗಾಗಿ ಒಳಗೆ ಹೋದಾಗ ನಾನು ಹೊರಗೆ ಅವರ ಮಗುವನ್ನೆತ್ತಿಕೊಂಡು ಕುಳಿತಿದ್ದಿದೆ. ಒಳಗೆ ಹೋದ ಹೆಂಗಸಿನ ಗಂಡನಿಂದಲೋ, ಮನೆಯವರಿಂದಲೋ ಬರುವ ನಿರಂತರ ಕರೆಗಳನ್ನು ಉತ್ತರಿಸಿ, ಅವರ ಬೆದರಿಕೆಗಳಿಗೂ ಆತಂಕಗಳಿಗೂ ಕಿವಿಯಾಗಿದ್ದಿದೆ. ಕೆಂಟಕಿ, ಲುಯಿಸಿಯಾನಾ, ಐಡಹೋ, ಟೆನೆಸ್ಸಿ ಮುಂತಾದ ರಾಜ್ಯಗಳಿಂದ ರಾತ್ರೋರಾತ್ರಿ ವಿಮಾನವೇರುತ್ತಿದ್ದ ಕೆಲವು ಹೆಂಗಸರಂತೂ ಅವರ ಮನೆಯವರಿಗೂ ತಿಳಿಸದೇ ಬಂದಿರುತ್ತಿದ್ದರು.
ನನ್ನ ಸುಪರ್ದಿಗೆ ಬಂದಾಗಿನಿಂದ ಮರಳಿ ಅವರೂರಿನ ಫ್ಲೈಟು ಹತ್ತಿಸುವ ತನಕ ಇವರನ್ನು ಹೂವಿನ ಹಾಗೆ ನೋಡಿಕೊಳ್ಳಬೇಕಾಗುತ್ತದೆ. ಕೆಲವರಂತೂ ಇದೇ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದವರು. ಮನೆಯಲ್ಲಿ ಚಿಕ್ಕ ಮಕ್ಕಳನ್ನು ಬಿಟ್ಟು ಬಂದವರು. ಅವರ ಕಣ್ಣುಗಳು ದಿಕ್ಕು ತಪ್ಪಿಸಿಕೊಂಡ ಬೆಕ್ಕಿನ ಹಾಗೆ ಹಂದಾಡುವುದನ್ನು ನಾನು ಕಂಡಿದ್ದೇನೆ. ಪರ ಊರಿನಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನುವ ನಿರಂತರ ಎಚ್ಚರ, ದೇಹದಲ್ಲಾಗುವ ದಿಢೀರ್ ಬದಲಾವಣೆಗಳು, ತಮ್ಮ ಗ್ರಾಮೀಣ ಭಾಷೆಯೊತ್ತಿನಿಂದಲೇ ಆವಾಹಿಸಿಕೊಂಡ ಕೀಳರಿಮೆ… ಈ ಹೆಣ್ಣುಗಳನ್ನು ಹೈರಾಣು ಮಾಡಿರುತ್ತವೆ.
ಅಮಾನಾಳಿಗೆ ಇಂಗ್ಲೀಷ್ ಬರುತ್ತಿರಲಿಲ್ಲ. ಹಿಂದಿ, ಬೆಂಗಾಲಿ, ಉರ್ದು… ನನಗೆ ಬರುತ್ತಿದ್ದ ಯಾವ ಭಾಷೆಯ ಪರಿಚಯವೂ ಅವಳಿಗಿರಲಿಲ್ಲ. ಝಹ್ರಾ ಸೊಗಸಾದ ಇಂಗ್ಲೀಷ್ ಮಾತನಾಡುತ್ತಿದ್ದಳು. ಮೀಟಿಂಗ್ ಕೋಣೆಯ ನಿರಾತಂಕದ ವಾತಾವರಣ ಅಮಾನಾಳಿಗೆ ಚೂರು ಬಲ ಕೊಟ್ಟಿತೇನೋ. ನಿರಂತರವಾಗಿ ರೊಹಿಂಗ್ಯನ್‍ನಲ್ಲಿ ಬಡಬಡಿಸುತ್ತಲೇ ಇದ್ದಳು. ನಡುವೊಮ್ಮೆ ತನ್ನ ಅಬಾಯಾದ ಒಳಪದರದಲ್ಲೇ ಕಣ್ಣೊರೆಸಿಕೊಂಡಳು. ನನಗೆ ಅವಳ ಸಂಕಟದ ಮೂಲ ಅರ್ಥವಾಯಿತು.
“ಹನ್ಯುದಾ ನೊಯಿ” ಅಂದೆ. ಇಬ್ಬರೂ ನನ್ನನ್ನು ಪೆಕರಳಂತೆ ನೋಡಿದರು. ನನ್ನ ಪ್ರಕಾರ ಹಾಗೆಂದರೆ ರೊಹಿಂಗ್ಯನ್ ಭಾಷೆಯಲ್ಲಿ, “ಅಳಬೇಡಿ” ಅಂದಹಾಗೆ. ಝಹ್ರಾಳಂತೂ ಕಿಸಕ್ಕನೆ ಒಮ್ಮೆ ನಕ್ಕೂ ಬಿಟ್ಟಳು. ನಿಘಂಟಿನಲ್ಲಿ ಓದಿದ ಪದಗಳನ್ನು ಅಂದಾಜಿನ ಮೇಲೆ ಬಳಸುವ ನನಗೆ, ಅವರ ಆಡುಭಾಷೆಯ ಜೊತೆಗೆ ಸ್ಪರ್ಧೆ ಸಾಧ್ಯವೇ? ನನ್ನ ಪ್ರಯತ್ನ ಬಿಟ್ಟುಕೊಟ್ಟೆ.
ಅದೇಕೋ ಧಾರವಾಡದಲ್ಲಿರುವ ನಮ್ಮಮ್ಮನ ನೆನಪಾಯಿತು. ಈ ಶನಿವಾರ ರಾತ್ರಿ ಮಾತಾಡಬೇಕು ಅಂದುಕೊಂಡೆ. ನನಗಿಲ್ಲಿ ರಾತ್ರಿ ಹತ್ತೂವರೆ ಅಂದರೆ ಧಾರವಾಡದಲ್ಲಿ ಮುಂಜಾನೆ ಎಂಟು ಘಂಟೆ. ಅಪ್ಪ-ಅಮ್ಮ ಇಬ್ಬರೂ ಎದ್ದಿರುತ್ತಾರೆ. ಎಂಟು ಅಂದರೆ ಅಪ್ಪ ಹಾಲು ತರಲು ಹೋಗಿರುತ್ತಾರೆ. ಸ್ವಲ್ಪ ಕಾಲ ಅಮ್ಮನ ಹತ್ತಿರ ಮಾತ್ರ ತಡೆಯಿಲ್ಲದೇ ಮಾತನಾಡಬಹುದು ಅಂತ ಆಸೆಯಾಯಿತು. ನಂತರ ಅಪ್ಪನೂ ಸೇರಿಕೊಂಡಾರು.
“ಇಸ್ಲಾಮ್‍ನಲ್ಲಿ ಇಂಥವೆಲ್ಲ ಹರಾಮ್ ಅಂತ ನಮ್ಮಮ್ಮನ ಚಿಂತೆ. ಈಗ ಅಲ್ಲಾಹ್ ನಮ್ಮನ್ನ ಕ್ಷಮಿಸ್ತಾನಾ ಅಂತ ನಿರಂತರವಾಗಿ ಒಂದಿಲ್ಲೊಂದು ಹರಕೆ ಹೊತ್ತುಕೊಳ್ತಾನೇ ಇದಾಳೆ. ನನ್ನನ್ನೂ ಬೈತಾಳೆ, ನನ್ನ ಶಾಲೆಯನ್ನ ಬೈತಾಳೆ, ನನ್ನ ಬಾಯ್‍ಫ್ರೆಂಡನ್ನ, ಈ ದೇಶವನ್ನ, ಟೆಕ್ಸಸ್‍ನ ಬೇಸಿಗೆಯನ್ನ ಎಲ್ಲರನ್ನೂ ಉಗಿದು ಉಪ್ಪಿನಕಾಯಿ ಹಾಕಿಯಾಗಿದೆ ಈ ಎರಡು ವಾರದಲ್ಲಿ. ನಾವು ರಕಾಯಿನಿನಲ್ಲೇ ಇದ್ದಿದ್ದರೆ ಖಂಡಿತ ಇಂಥ ಪರಿಸ್ಥಿತಿ ಬರ್ತಿರಲಿಲ್ಲ ಅಂತಿದ್ದಳು ನಿನ್ನೆ.”
ಅದುಮಿಟ್ಟಿದ್ದ ಝಹ್ರಾಳ ಕೋಪ ಒಂದು ಹೊರದಾರಿಯನ್ನು ಅರಸುತ್ತಿತ್ತೇನೋ.
“ಹಾಗಂತ ರಕಾಯಿನ್‍ಗೆ ವಾಪಸ್ ಹೋಗೋಕಾಗುತ್ತಾ? ನಮ್ಮಮ್ಮನಿಗೆ ಇನ್ನೂ ಬರ್ಮಾನೇ ತನ್ನ ದೇಶ ಅಂತ ಭ್ರಮೆ. ಜೋಗುಳವಾಗಿಯೂ ಆ ದೇಶದ ರಾಷ್ಟ್ರಗೀತೆಯನ್ನೇ ಹಾಡಿ ಬೆಳೆಸಿದ್ದಾಳೆ ನನ್ನನ್ನ. ಆ ದೇಶ ನಮಗೆ ಕೊಟ್ಟ ಕಾಣ್ಕೆಗಳನ್ನೆಲ್ಲ ಅನುಭವಿಸಿದ ಮೇಲೆಯೂ ಈಕೆಯದು ಈ ವರಸೆ. ಒಂದಲ್ಲಾ ಒಂದು ದಿನ ಜಗತ್ತಿನೆಲ್ಲೆಡೆ ಹಂಚಿ ಹೋಗಿರುವ ರೊಹಿಂಗ್ಯಾ ಸಮುದಾಯದವರೆಲ್ಲ ರಕಾಯಿನ್‍ನಲ್ಲೇ ಸೇರುತ್ತೇವೆ ಅಂತ ಕನಸು ಕಾಣುತಾಳೆ. ನಮ್ಮ ಸಮುದಾಯದ ಜನರ ನರಮೇಧ ನಡೆದಾಗ ನಾನಿನ್ನೂ ಸಣ್ಣವಳು. ನನಗೆ ಅದೇನೂ ನೆನಪಿಲ್ಲ. ಆದ್ರೆ ಸ್ವಲ್ಪ ಕಾಲ ನಮ್ಮ ಸಂಸಾರ ಬಾಂಗ್ಲಾದೇಶದ ವಸಾಹತು ಕಾಲೋನಿಯಲ್ಲಿತ್ತಂತೆ. ಅಲ್ಲಿಂದ ಮಲೇಶಿಯಾಕ್ಕೆ ವಲಸೆ ಹೋದರಂತೆ. ನಮ್ಮಪ್ಪ ಕಟ್ಟುಮಸ್ತಾದ ಆಳು. ನಮ್ಮ ಅದೃಷ್ಟಕ್ಕೆ ಮಲೇಶಿಯಾದ ಪಹರೆ-ಸೈನಿಕನೊಬ್ಬನ ಸ್ನೇಹ ಸಂಪಾದಿಸಿಕೊಂಡು ಚೂರು ಪಾರು ಇಂಗ್ಲೀಷ್ ಕಲಿತಿದ್ದ. ಹೀಗಾಗಿ ಅಮೆರಿಕ ನಮ್ಮ ಸಂಸಾರವನ್ನು ಒಳಬಿಟ್ಟುಕೊಂಡಿದೆ” ಎಂದು ನನ್ನ ಬಳಿ ಹೇಳಿ ಪುನಃ ಅವರಮ್ಮನನ್ನು ಮನೆಭಾಷೆಯಲ್ಲಿ ದಬಾಯಿಸಿದಳು. ಅವರಮ್ಮನೂ ಸುಮ್ಮನೆ ಕೂಡಲಿಲ್ಲ. ಮಗಳಿಗಿಂತ ದೊಡ್ಡ ಪ್ರವರ ಒಪ್ಪಿಸಿದರು ಆಕೆ.
“ಅಪ್ಪ ಅಕಸ್ಮಾತ್ತಾಗಿ ಕಲಿತ ಎರಡು ಇಂಗ್ಲೀಷ್ ಪಾಠಗಳ ದೆಸೆಯಿಂದ ನಾವಿಲ್ಲಿ ಬರೋದಕ್ಕಾಯಿತು. ನಿನ್ನ ಬಂಧುವರ್ಗದವರೆಲ್ಲ ಇನ್ನೂ ವಸಾಹತಿನಲ್ಲೇ ಕೊಳೀತಾ ಬಿದ್ದಿಲ್ವಾ ಅಂದೆ ನಮ್ಮಮ್ಮನಿಗೆ” ಅಂದಳು ಝಹ್ರಾ. ಚೂರು ತಡೆದು, “ಅಲ್ಲ ನೀನೇ ಹೇಳು ವಾಣಿ, ರಕಾಯಿನ್‍ನಲ್ಲೇ ಇದ್ದಿದ್ದರೆ ಇಷ್ಟು ಹೊತ್ತಿಗೆ ಹುಡುಗಿಗೆ ಮದುವೆ ಮಾಡಿ ಬಿಟ್ಟಿರುತ್ತಿದ್ದೆವು, ಆಗ ಇಂಥ ಸಮಸ್ಯೆ ಉದ್ಭವಿಸುತ್ತಲೇ ಇರಲಿಲ್ಲ ಅಂತ ತಾಯಿಯಾದವಳು ಹೇಳಿದರೆ, ನಾನದನ್ನು ಕೇಳಿಕೊಂಡು ಸುಮ್ಮನೇ ಕುಳಿತಿರಬೇಕಾ?”
ನನಗೆ ಅವರ ಸಂಸಾರದ ಒಳಗುಟ್ಟುಗಳನ್ನೆಲ್ಲ ಬಗೆಯಲು ಕುತೂಹಲವಿತ್ತು ನಿಜ, ಆದರೆ ಸಮಯವಿರಲಿಲ್ಲ. ಒಂದಿಷ್ಟು ಅರ್ಜಿಪತ್ರಗಳಿಗೂ, ದಾಖಲಾತಿ ಪತ್ರಗಳಿಗೂ ಸಹಿ ಹಾಕಿಸಿಕೊಳ್ಳಬೇಕಿತ್ತು. ಆಫೀಸಿನ ಪ್ರಮಾಣಾಧಿಕಾರಿ ಲಿಂಡ್ಸಿಯನ್ನು ಬರಹೇಳಿ ಅವಳ ಸಮ್ಮುಖದಲ್ಲಿ ಝಹ್ರಾಳ ಸಹಿ ತೆಗೆದುಕೊಂಡೆ.
ಕಾಗದ ಪತ್ರದ ಮೇಲೆ ಝಹ್ರಾಳ ವಯಸ್ಸು ಹದಿನೇಳು ಅಂತಿದ್ದಿದ್ದು ಕಂಡು ಎದೆ ಧಸಕ್ಕೆಂದಿತು. ನಾನು ಹದಿನೇಳರಲ್ಲಿ ಹೇಗಿದ್ದೆ ಎಂಬುದರತ್ತ ಮನಸ್ಸು ನೆಟ್ಟೆ. ನನಗೆ ಹದಿನೇಳಾದಾಗ ಅಮ್ಮನಿಗೆ ಮೂವತ್ತೈದು. ಈಗ ನನಗೂ ಮೂವತ್ತೈದು. ನನಗೂ ಅಮ್ಮನ ವಯಸ್ಸಿಗೇ ಮಗಳೊಬ್ಬಳು ಹುಟ್ಟಿದ್ದರೆ, ಈಗ ಝಹ್ರಾಳ ವಯಸ್ಸಿನವಳಿರುತ್ತಿದ್ದಳು ಎಂಬುದು ತಿಳಿದು ಜೀವ ಕನಲಿತು. ಅಲ್ಲಿಂದ ಮುಂದೆ ಅಮಾನಾರನ್ನು ಹೆಚ್ಚೇ ಮೃದುವಾಗಿ ನಡೆಸಿಕೊಂಡೆ.
ಮುಂದಿನ ಅರ್ಧ ಘಂಟೆಯಲ್ಲಿ ಎಲ್ಲ ವ್ಯವಸ್ಥೆಗಳೂ ಫೋನಿನ ಮುಖಾಂತರವೇ ಆದವು. ಟ್ಯಾಕ್ಸಿಗೆ ಹಣ ಕೊಟ್ಟು, ರಶೀದಿಯನ್ನು ಇಸಿದುಕೊಂಡು ಅವರಿಬ್ಬರನ್ನೂ ಬೀಳ್ಕೊಟ್ಟೆ. “ಕಾಳಜಿ ವಹಿಸಿ ಆಯ್ತಾ. ನಿಮ್ಮನ್ನ ಸೂಸನ್ ಎಂಬುವವಳು ಸಂಜೆ ಹೋಟೆಲಿಗೇ ಬಂದು ಭೇಟಿಯಾಗ್ತಾಳೆ. ನಾಳೆ ನಾನು ಆಸ್ಪತ್ರೆಗೇ ಬರ್ತೀನಿ. ಹುಶಾರಾಗಿರು. ವಿಶ್ರಾಂತಿ ತೊಗೊಳ್ಳಿರಿ ಇಬ್ಬರೂ. ನಿಮ್ಮಮ್ಮನ್ನ ಗೋಳು ಹೊಯ್ಕೋಬೇಡ. ಏನಿದ್ರೂ ಫೋನು ಮಾಡು” ಅಂತ ಹೇಳುತ್ತ ಕೈಬೀಸಿದೆ. ಝಹ್ರಾ ಚೆಲುವಾಗಿ ನಕ್ಕಳು. ಅಮಾನಾ ದೃಷ್ಟಿ ತಪ್ಪಿಸಿದರು.
***
ಮಿಥ್ಯಸುಖ ಕಾದಂಬರಿಯನ್ನು ಜೀರುಂಡೆ ಪ್ರಕಾಶನ ಪ್ರಕಟಿಸಿದೆ.
ಪುಟಗಳು: 304
ಬೆಲೆ 365/-
ಲೇಖಕರು: ಕಾವ್ಯಾ ಕಡಮೆ
ಪ್ರತಿಗಳಿಗಾಗಿ ಸಂಪರ್ಕಿಸಿ: 97422 25779