ಋತುಮಾನ ಪುಸ್ತಕ ೧೩ : ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಮತ್ತು ರೋಮಿಲಾ ಥಾಪರ್ ನಡುವಿನ ಅರ್ಥಪೂರ್ಣ ಸಂಭಾಷಣೆಯ ’ ಭಾರತವೆಂಬ ಪರಿಕಲ್ಪನೆ’
ಹತ್ತಾರು ಚಿಂತನಾರ್ಹ ವಿಚಾರಗಳನ್ನು ಒಳಗೊಂಡಿರುವ ಈ ಅರ್ಥಪೂರ್ಣ ಸಂಭಾಷಣೆಯಲ್ಲಿ, ಹಳೆಯ ಗೆಳತಿಯರಿಬ್ಬರು ಭಾರತವೆಂಬ ಪರಿಕಲ್ಪನೆಯ ಇತಿಹಾಸವನ್ನು ಹಲವು ಚಾರಿತ್ರಿಕ ತಿರುವುಗಳು, ಉಪಾಖ್ಯಾನಗಳು ಮತ್ತು ಅವಲೋಕನಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಈ ನೆಲದ ಬಗ್ಗೆ ಅಪಾರ ಕನಸು, ದೂರದೃಷ್ಟಿಗಳನ್ನು ಹೊಂದಿದ್ದ, ಆದರೆ ದನಿಯಾಗದ ಜನರ ಕನಸುಗಳು ಮತ್ತು ಮಾತುಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಾ, ಭಾರತೀಯತೆಯೆಂಬ ಅಸ್ಮಿತೆಯು ಬೆಳೆದುಬಂದ ಪರಿಯನ್ನು ಪ್ರಸ್ತುತಪಡಿಸುವುದೇ ಈ ಸಂಭಾಷಣೆಯ
ಕೇಂದ್ರಬಿಂದು.
ಸಂಸ್ಕೃತಿಗಳು ತಮ್ಮನ್ನು ತಾವು ವ್ಯಾಖ್ಯಾನಿಸಲು ಮತ್ತು ಪ್ರತಿಪಾದಿಸಲು ಪ್ರಯತ್ನಿಸಿದ ಸಂದರ್ಭಗಳಲ್ಲೆಲ್ಲಾ ಸವಾಲಾಗಿ ಬಂದ ಮೂಲಭೂತವಾದ ಮತ್ತು ಬಹಿಷ್ಕರಿಸುವ ಪ್ರವೃತ್ತಿಗಳ ಬಗ್ಗೆ ಇತಿಹಾಸಕಾರರಾದ ರೋಮಿಲಾ ಥಾಪರ್ ಮತ್ತು ಖ್ಯಾತ ಥಿಯರಿಸ್ಟ್ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಈ ಚರ್ಚೆಯಲ್ಲಿ ಬೆಳಕು ಚೆಲ್ಲಿದ್ದಾರೆ. ಜೊತೆಗೇ ಸರ್ವರನ್ನೂ ಒಳಗೊಳ್ಳುವಿಕೆಯ ಮನೋಭಾವವನ್ನು ಸಮರ್ಥವಾಗಿ ಮೂಡಿಸುವ ನಿಟ್ಟಿನಲ್ಲಿ ಮತ್ತು ಈ ದೇಶದ ಸಂಕೀರ್ಣ ಇತಿಹಾಸವನ್ನು ಸರಿಯಾಗಿ ಅರ್ಥೈಸುವಲ್ಲಿ ಶೈಕ್ಷಣಿಕ ವ್ಯವಸ್ಥೆಯ ಮಹತ್ತರ ಪಾತ್ರದ ಬಗ್ಗೆಯೂ ಇವರಿಬ್ಬರು ಅರ್ಥಪೂರ್ಣವಾಗಿ ಮಾತಾಡಿದ್ದಾರೆ.