ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಇನ್ನಷ್ಟು ರಾಜಶೇಖರರ ಚಿಂತನೆಗಳು

headernotext (3)divderspaದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಿಯ ಪ್ರಶ್ನೆ (ಸಾಕ್ಷಿ ೨೯) 

ತನ್ನ ಈ ದೀರ್ಘ ಪ್ರಬಂಧಕ್ಕೆ ಅಗತ್ಯವಾದ ನುಡಿಕಟ್ಟುಗಳನ್ನು ತಾನೇ ಅನ್ವೇಷಿಸಿ, ಅವುಗಳ ಅರ್ಥವನ್ನು ವಿವರಿಸಿ ಬರೆದ ಪ್ರಬುದ್ದ ಲೇಖನವಿದು. ಬಹುಶಃ ಒಂದು ಸರಕಾರ, ಯುನಿವರ್ಸಿಟಿ, ಸಮೂಹ ಮಾಧ್ಯಮಗಳಾದ ಪ್ರೆಸ್, ರೇಡಿಯೋ, ಟಿ. ವಿ. ಗಳಂತಹ ಬೃಹತ್ ಸಂಸ್ಥೆಗಳು ನಡೆಸಬಹುದಾದಂತಹ ಕೆಲಸವನ್ನ್ಜು ಒಬ್ಬನೇ ವ್ಯಕ್ತಿ, ತನ್ನ ಪರಿಮಿತ ಸಮಯ, ಆರ್ಥಿಕ ಬಲಗಳೊಂದಿಗೆ ಓಡಿಯಾಡಿ, ಮಾಹಿತಿ – ಆಕರಗಳನ್ನು ಸಂಗ್ರಹಿಸಿ, ಒಂದು ಧ್ಯಾನದಂತೆ ಬರೆದ ಮೇರು ಕೃತಿ ಇದು. ಎಲ್ಲೂ ಒಪ್ಪಂದವನ್ನು ಮಾಡಿಕೊಳ್ಳದ, ಒಂದು ಸೈದ್ಧಾಂತಿಕ ತಳಹದಿಯಲ್ಲಿ ರೂಪಿತವಾದ ಈ ಲೇಖನ ಸಾಕಷ್ಟು ಚರ್ಚೆಗೆ ಗುರಿಯಾಗಿ, ಈಗ ಹಳತಾಗ ಬೇಕಿದ್ದರೂ, ಹಾಗಾಗದೆ ಇನ್ನೂ ತನ್ನ ಹೊಸತನವನ್ನು ಉಳಿಸಿಕೊಂಡಿದೆ. ಭಾರೀ ಭೂಮಾಲಿಕ, ಸಣ್ಣ ಹಿಡುವಳಿದಾರ, ರೈತ, ಕೃಷಿಕೂಲಿ, ಕಾರ್ಮಿಕರೆಂದು ಹೆಸರಿಸುವುದರಿಂದ ಆರಂಭಿಸಿ, ಲೇಖನಕ್ಕೆ ಉಪಯೋಗಿಸಿದ ಶಬ್ದಗಳ ಸಾಂದರ್ಭಿಕ ಅರ್ಥವ್ಯಾಪ್ತಿಯನ್ನು ವಿವರಿಸಿ ಬರೆದ ಈ ಮೂಲ ಲೇಖನ, ಲಿಬರಲ್ ಚಿಂತಕರನ್ನು ಆರಂಭದಲ್ಲೇ ನೆಲೆಯಿಲ್ಲದಂತೆ ಮಾಡುತ್ತದೆ. ಕೆಲವೊಮ್ಮೆ ಖಾರವಾಗಿ, ಖಂಡತುಂಡ ಮಾತುಗಳಲ್ಲಿ, ಒಮ್ಮೊಮ್ಮೆ ವ್ಯಂಗ್ಯವಾಗಿ, ಆದರೆ ಎಲ್ಲೂ ಮೂಲ ದ್ರವ್ಯವನ್ನು ಬಿಟ್ಟುಕೊಡದೆ ಸಾಗುವ ಈ ಬರಹ, ಗಾಲ್‍ಬ್ರೈತ್ ನ ‘ಇಂಡಿಯದಲ್ಲಿ ಸೋಮಾರಿಗೂ , ದುಡಿಯುವವನಿಗೂ ಸ್ಪಷ್ಟವಾದ ವಿಭಜನೆಯಿಲ್ಲ’- ಎನ್ನುವ ಪ್ರಸಿದ್ದ ಮಾತನ್ನು ಗಾಳಿಗೆ ತೂರುತ್ತದೆ. ಇದೂ ಅಲ್ಲದೆ (೧) ದುಡಿಯುವ ಕೈಗಳು ಅಗತ್ಯಕ್ಕಿಂತ ಹೆಚ್ಚು, (೨) ವರ್ಷದ ಎಲ್ಲಾ ದಿನಗಳಲ್ಲಿ ದುಡಿಯುವುದಿಲ್ಲ (೩) ಒಬ್ಬ ಮಾಡಬಹುದಾದ ಕೆಲಸವನ್ನು ಇಬ್ಬರು ಅಥವ ಹೆಚ್ಚು ಜನರು ಮಾಡುವುದು – ಎನ್ನುವ ನಿರುದ್ಯೋಗ ಸ್ವರೂಪದ ವಿಶ್ಲೇಷಣೆಗಿಂತ ಬೇರೆಯೇ ಆದದ್ದನ್ನು ರಾಜಶೇಖರ್ – ಮಂಡಿಸುತ್ತಾರೆ.

raj2ಒಂದು ಧ್ಯಾನದಂತೆ ಆರಂಭವಾಗುವ ಬರಹ, ಥಟ್ಟನೆ ನಮ್ಮನ್ನು ಆವರಿಸಿಬಿಡುತ್ತದೆ.

“….ಕೃಷಿಕಾರ್ಮಿಕರ ಮಟ್ಟಿಗೆ ಕನಿಷ್ಟ ದಿನಕೂಲಿ ಎಂಬುದು ಅರ್ಥಹೀನವಾದದ್ದು, ಶಬ್ದಗಳನ್ನು ಅವುಗಳ ಅರ್ಥನಿಖರತೆಯ ಬಗ್ಗೆ ಯೋಚಿಸದೆ, ಈ ಸಂದರ್ಭದಲ್ಲಿ ಈ ಶಬ್ದಕ್ಕೆ ನಾನು ಕೊಡುವ ಅರ್ಥ ಇದು – ಎಂದು ಡಿಫೈನ್ ಮಾಡದೆ, ಉಪಯೋಗಿಸಿದಾಗ ಶಬ್ದ ಹೇಳಹೊರಟ ಸತ್ಯ ಹೇಗೆ ಮರೆಯಾಗಿಬಿಡುತ್ತದೆ – ಎಂಬುದಕ್ಕೆ ಇದು ಒಂದು ಉದಾಹರಣೆ. ಮಾತಿಗೆ ಮತ್ತು ಯೋಚಿಸುವುದಕ್ಕೆ ನಮಗಿರುವುದು ಇದೊಂದೇ ಭಾಷೆಯಾದ್ದರಿಂದ ಭಾಷೆಯ ಅರ್ಥನಿಖರತೆಯನ್ನು ವ್ರತದಂತೆ ಕಾಪಾಡಿಕೊಂಡು ಬರಬೇಕಾದ ಅಗತ್ಯ ಎಂದಿಗಿಂತಲೂ ಈಗ ಹೆಚ್ಚು….’

ಇಲ್ಲಿ ‘ಭಾಷೆಗೆ ಕೇವಲ ಅಭಿವ್ಯಕ್ತಿ ಮಾಧ್ಯಮವಾಗಿ ನೆಲೆ ಇರುವುದಲ್ಲ. ರಾಜಕೀಯ ಪ್ರತಿಕ್ರಿಯೆಯಾಗಿಯೂ ಅದಕ್ಕೊಂದು ಆಯಾಮವಿದೆ’ ಎನ್ನುವ ಗ್ರಾಮ್‍‌ಸ್ಕಿಯ ಚಿಂತನೆಗೆ ಹತ್ತಿರವಾಗಿ ರಾಜಶೇಖರ್ ಯೋಚಿಸುತ್ತಾರೆ.

‘ಕಾಗದದ ಮೇಲೆ ಕಾರಿಕೊಂಡದ್ದು, ಮೈಕಿನ ಮುಂದೆ ಉಗುಳಿದ್ದು, ಮೊದಲು ಸುಳ್ಳಾದದ್ದು ನಂತರ ಭ್ರಮೆಯಾಗುತ್ತದೆ. ಸುಳ್ಳಿನ ಬಲೆಯಲ್ಲಿ ಬಿದ್ದ ಪೆದ್ದನಂತೆ ಬಲೆ ಬೀಸಿದ ಫಟಿಂಗನೂ ತನ್ನ ಜಾಲದಲ್ಲಿ ತಾನೇ ಸಿಕ್ಕಿಕೋಳ್ಳುತ್ತಾನೆ. ದೇಶವೇ ಇಂತಹ ಸುಳ್ಳಿನ ಬಲೆಯೊಳಗೆ ಸಿಕ್ಕಿ ಒದ್ದಾಡುತ್ತಿರುವ ದುರಂತ ಈಗ ನಮ್ಮ ಕಣ್ಣೆದುರಿಗೆ ನಡೆಯುತ್ತಿರುವಂತದ್ದು….’

‘…ಕರ್ನಾಟಕ ಭೂ ಶಾಸನದಿಂದ ನಮ್ಮ ಕೃಷಿವ್ಯವಸ್ಥೆಯ ಮೂಲಭೂತ ವೈರುದ್ಯ ಕೊನೆಗೊಳ್ಳುವುದಿಲ್ಲ. ಭೂ ಸುಧಾರಣೆಯಿಂದ ಭೂಮಿ ಪಡೆಯುವ ಒಕ್ಕಲುಗಳಲ್ಲಿಯೂ ಬಹುಪಾಲು ಬಡರೈತರೇ, ಭೂಮಿ ಪಡೆದ ಇವರು ಸಣ್ಣ ಹಿಡುವಳಿದಾರರಾಗುತ್ತಾರೆ; ಅಂದರೆ ಇಲ್ಲಿ ಆಸ್ತಿಯ ಹಸ್ತಾಂತರವಾಗುತ್ತದೆಯೇ ಹೊರತು ಆಸ್ತಿಯ ವಿತರಣೆಯಾಗುವುದಿಲ್ಲ. ಇವರೂ, ಇತರ ಕುಟುಂಬದವರೂ ಕೃಷಿ ಕೆಲಸದಲ್ಲಿ ಭಾಗವಹಿಸಿದರೂ (ಗೇಣಿಗೆ ಭೂಮಿ ಕೊಟ್ಟ ಸಣ್ಣ ಹಿಡುವಳಿದಾರ ಇಷ್ಟನ್ನೂ ಮಾಡದೆ ಕೂತು – ಗೇಣಿ ತಿನ್ನುತ್ತಾನೆ ಎನ್ನುವುದನ್ನು ನಾವು ಮರೆಯಕೂಡದು) ಕೃಷಿಕೂಲಿಗಳನ್ನು ಇವರೂ ಬಳಸಬೇಕಾಗುತ್ತದೆ. ಗೇಣಿ ಪದ್ದತಿ- ಅದು ಭಾರೀ ಭೂಮಾಲಿಕ, ಮಧ್ಯಮ ರೈತ, ಸಣ್ಣ ಹಿಡುವಳಿದಾರ – ಯಾರಿಗೇ ಸಂಬಂಧಿಸಿರಲಿ ಒಂದು ಪಾಳೆಯಗಾರೀ ಅವಶೇಷ. ಇಡೀ ದೇಶದಲ್ಲೇ ಈಗ ಕೃಷಿಯ ಅರ್ಥವ್ಯವಸ್ಥೆ ಪಾಳೆಯಗಾರೀವ್ಯವಸ್ಥೆಯಿಂದ ಬಂಡವಾಳಶಾಹೀ ವ್ಯವಸ್ಥೆಯತ್ತ ಹೊರಳಿಕೊಳ್ಳುತ್ತಿದೆ.” ನಮ್ಮ ಹಳ್ಳಿಗಳ ಭೂಹೀನ ಕೃಷಿ ಕಾರ್ಮಿಕರನ್ನು, ಬಡ ರೈತರನ್ನು, ಭೂ ಸುಧಾರಣಾ ಕಾನೂನಿನಿಂದ ನಿರ್ಗತಿಕರಾದವರನ್ನು ನಮ್ಮ ಅರ್ಥವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವಂತೆ ಮಾಡುವ, ಮನುಷ್ಯ ಯೋಗ್ಯ ಬದುಕಿನ ಕನಿಷ್ಠ ಅಗತ್ಯಗಳನ್ನಾದರೂ ಅವರು ಪಡೆಯುವಂತೆ ಮಾಡುವ ಯಾವ ಮಾರ್ಗವೂ ಇಲ್ಲವೇ? ಪ್ರಸ್ತುತ ರಾಜಕೀಯ ಆರ್ಥಿಕ ವ್ಯವಸ್ಥೆಯಲ್ಲಿ ಈ ಪ್ರಶ್ನೆಗಳಿಗೆ ಪರಿಹಾರವಿಲ್ಲ.

‘ಈ ನೆಲದ ದರಿದ್ರರು ಸದಾ ಹೀಗೆಯೇ ಇತಿಹಾಸದ ಗತಿಗೆ ಅನ್ಯರಾಗಿ, ನಿಶ್ಚಲ ಇದ್ದು ಬಿಡುತ್ತಾರೆಯೇ? ಈ ವ್ಯವಸ್ಥೆವೂ ನಿಂತಿರುವುದು ತಮ್ಮ ದುಡಿಮೆಯ ಮೇಲೆ ಎಂಬುದನ್ನು ತಿಳಿಯದೆ ಹೋಗುತ್ತಾರೆಯೇ? ಈ ಪ್ರಶ್ನೆಗಳಿಗೆ ನನ್ನ ಉತ್ತರಗಳೇನು ಎಂದು ಯಾರಿಗೂ ಹೊಳೆಯಬಹುದಾದ್ದು – ಎಂದು ಓದುಗನನ್ನು ಚಿಂತನೆಗೆ ಹಚ್ಚಿ ಅತ್ಯಂತ ಮೌಲಿಕವಾದ ಬರಹವನ್ನು ನಿಲ್ಲಿಸಿಬಿಡುತ್ತಾರೆ. ಅವರು ನೀಡುವ ತಾತ್ವಿಕ ಹೊಳಪು ಮಾತ್ರ ಅನನ್ಯವಾದದ್ದು – ಎಂದೇ ನನ್ನೆಣಿಕೆ.’

ಬಹುಶಃ ರಾಜಶೇಖರ್ ಬೇರೇನನ್ನೂ ಬರೆಯದೆ. ‘ದಕ್ಷಿಣ ಕನ್ನಡದಲ್ಲಿ ಭೂಮಿಯ ಪ್ರಶ್ನೆ ‘ಮತ್ತು’ಕಾಗೋಡು ಸತ್ಯಾಗ್ರಹ’-ಎರಡೇ ಲೇಖನಗಳನ್ನು ಬರೆಯುತ್ತಿದ್ದರೂ ಪ್ರಬುದ್ದ ಲೇಖಕರ ಸಾಲಿಗೆ ಎಂದೋ ಸೇರಿಬಿಡುತ್ತಿದ್ದರು.

_DSC7753 (1280x854)divderspaಜನ್ನನ ಯಶೋಧರ ಚರಿತೆಯ ಬಗ್ಗೆ ರಾಜಶೇಖರ್ ಬರೆದ ಲೇಖನ ಅವರ ಚಿಂತನೆಯ ಪ್ರಬುದ್ದತೆಯ ಬಗ್ಗೆ ಒಂದು ಶ್ರೇಷ್ಠ ನಿದರ್ಶನ.(ರುಜುವಾತು – ೬)

ಎಲ್ಲ ಶ್ರೇಷ್ಠ ಸಾಹಿತ್ಯ ಕೃತಿಗಳಂತೆ ಯಶೋಧರ ಚರಿತೆಯೂ ತನ್ನ ಕಾಲ, ದೇಶದ ಚೌಕಟ್ಟನ್ನು ಮೀರಿ ಮನುಷ್ಯನ ಅದೃಷ್ಟದ ಬಗ್ಗೆ ಚಿಂತಿಸುತ್ತದೆ. ಕಾವ್ಯದಲ್ಲಿ ಕವಿ ಮನುಷ್ಯಾನುಭವದ ಬಗ್ಗೆ ಎತ್ತುವ ನೈತಿಕ ಪ್ರಶ್ನೆಗಳು, ಅವನು ಅವುಗಳಿಗೆ ಜೈನಧರ್ಮ ರೀತ್ಯಾ ಒದಗಿಸುವ ಉತ್ತರಗಳಿಂದ ಹೆಚ್ಚು ಮುಖ್ಯವಾಗಿವೆ. ಮಾತ್ರವಲ್ಲ. ಕಾವ್ಯದ ಅನುಭವ ಮತ್ತು ಅದು ಪ್ರತಿಪಾದಿಸುವ ಜೈನ ಧಾರ್ಮಿಕ ನಂಬಿಕೆ ಇವೆರಡರ ನಡುವೆ ಅರ್ಥಪೂರ್ಣವಾದ ಸಂವಾದವೂ ಕವಿಗೆ ಸಾಧ್ಯವಾಗಿದೆ. ಕಾವ್ಯದ ಈ ಡಯಲೆಕ್ಟಿಕ್ ಬಹುರೂಪಿಯಾಗಿದೆ.ಪ್ರವೃತ್ತಿ – ಸಂಸ್ಕಾರ, ದೇಹ – ಆತ್ಮ. ಇಂದ್ರಿಯಾನುಭವ – ಜಿತೇಂದ್ರಿಯತ್ವ, ದಾಂಪತ್ಯ – ಹಾದರ, ವ್ಯಕ್ತಿ- ಸಮಾಜ… ಹೀಗೆ ಹಲವು ದ್ವಂದ್ವಗಳನ್ನು ಅದು ಒಳಗೊಂಡಿದೆ.

‘…ಅಮೃತಮತಿ, ಅಷ್ಟವಂಕನನ್ನು ಮೋಹಿಸುವ ವರ್ಣನೆ – ಕಾವ್ಯದಲ್ಲಿ ಪಡೆದುಕೊಂಡಿರುವ ಸಂಕೀರ್ಣ ವಿನ್ಯಾಸಗಳನ್ನು ಗಮನಿಸದೆ ಈ ಕೃತಿಯ ಬಹುತೇಕ ವಿಮರ್ಶಕರು ಆಕೆಯದು ಅನೈತಿಕ ರತಿ ಎಂಬ ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ.

ರಾಜಶೇಖರ್ ಇದನ್ನು ಅಲ್ಲಗಳೆಯಲು ಬಳಸುವ ತರ್ಕ – ನಿಜವಾಗಿಯೂ ವಿಮರ್ಶೆಯಲ್ಲಿ ಒಂದು ಮಹತ್ವದ ಮಜಲು. ಅವರು ಕಾವ್ಯದ ಅರ್ಥವ್ಯಾಪ್ತಿಯನ್ನು ಬೇರೆಯೇ ಆಯಾಮಕ್ಕೆ ಒಯ್ಯುತ್ತಿದ್ದಾರೆ – ಎಂದನಿಸ್ತದೆ.

‘…ಆದರೆ ಕಾವ್ಯದಲ್ಲಿ ಈ ಅಭಿಪ್ರಾಯಗಳನ್ನು ಸಮರ್ಥಿಸಲು ಹೇಗೋ, ಹಾಗೆಯೇ ಅವುಗಳನ್ನು ಅಲ್ಲಗಳೆದು ತದ್ವಿರುದ್ಧವಾದ ನಿಲುವನ್ನು ತಳೆಯಲು ಸಾಕಷ್ಟು ಆಧಾರಗಳಿವೆ;ಕಾವ್ಯದ ವಿನ್ಯಾಸವೇ ಹಾಗಿದೆ. ಅಮೃತಮತಿಯದ್ದು ಕೇವಲ ಇಂದ್ರಿಯಗಳು ಮಾತ್ರ ಜೀವಂತವಾಗಿರುವ ಪ್ರಾಣಿಜೀವವಲ್ಲ. ಅವಳ ಪ್ರವೃತ್ತಿಗೆ ತನ್ನದೇ ಆದ ತಾರ್ಕಿಕ ಹಿನ್ನೆಲೆಯಿದೆ. ಒಮ್ಮೆ ಅಷ್ಟವಂಕನನ್ನು ಮೋಹಿಸಿದ ಮೇಲೆ, ಅವಳಿಗೆ ಗಂಡನನ್ನು ನೋಡುವ, ಮಾತನಾಡುವ, ಮುದ್ದಿಸುವ ಮೊದಲಿನ ಸ್ಥಿತಿ ಮತ್ತೆ ಮರುಕಳಿಸದು. ಆಷ್ಟವಂಕನ ಬಳಿ ಸಾರುವಾಗ ಹೂ,ಗಂಧ, ವೀಳಯಗಳನ್ನು ಒಯ್ದಿದ್ದಳು ಎಂಬ ವಿವರದಲ್ಲಿ ಅವಳ ಮೋಹ ಇಂದ್ರಿಯಗಳ ವ್ಯಭಿಚಾರವನ್ನು ಮೀರಿದ ಒಲವಿನ ಶೃಂಗಾರದ ಧ್ವನಿಯನ್ನು ಪಡೆದುಕೊಳ್ಳುತ್ತದೆ.’

‘…ಆಷ್ಟವಂಕನಿಂದ ಬಾಸುಂಡೆ ಬರುವಂತೆ ಹೊಡೆಸಿಕೊಂಡೂ, ಅವನಲ್ಲಿಯೇ ತನ್ನ ಪ್ರೀತಿ ಸಾರುವ ಅಮೃತಮತಿ, ತನ್ನ ಗಂಡ ನೈದಿಲೆ ಹೂವಿನಲ್ಲಿ ನೆಪಕ್ಕೆ ಹೊಡೆದರೂ ಅವಳು ಮೂರ್ಛೆ ಹೋಗುತ್ತಾಳೆ. ಅಮೃತಮತಿಯ ಪ್ರವೃತ್ತಿ ಕಾಮ ಮಾತ್ರವಲ್ಲ. ಅದು ಸಕಲೇಂದ್ರಿಯಗಳ ಅನುಭವವನ್ನು ಇಷ್ಟಪಟ್ಟು ಅದಕ್ಕೆ ಹಾತೊರೆಯುವಂಥದ್ದು. ಆದರೆ ಅವಳು ಬಾಳಿದ ಸಂಸ್ಕೃತಿಯ ಆವರಣ ಇದಕ್ಕೆ ತದ್ವಿರುದ್ಧವಾದ ನಿಗ್ರಹವನ್ನು ಬೋಧಿಸುತ್ತದೆ.’

… ಯಶೋಧರ ಕಾವ್ಯದ ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿತುಕೊಳ್ಳಲು, ಜೈನ ಧರ್ಮದ ಆಂತರಿಕ ವೈರುಧ್ಯಗಳನ್ನು ಗುರುತಿಸಬಹುದಾಗಿದೆ. ಜೈನ ಧರ್ಮವೂ ಬೌದ್ದ ಧರ್ಮದಂತೆಯೇ ಹಿಂದೂ ಧರ್ಮದ ವಿರುದ್ದವಾಗಿ ಬಂಡಾಯದ ರೀತಿಯಲ್ಲಿ ಹುಟ್ಟಿದ್ದು ಐತಿಹಾಸಿಕ ಸಂಗತಿಯಾಗಿದೆ. ಇವು ತಮ್ಮ ಹುಟ್ಟಿನಲ್ಲಿ ಸಮಾನತೆ, ಅಹಿಂಸೆ ಮತ್ತು ನಾಸ್ತಿಕತೆಯ ಮೌಲ್ಯಗಳನ್ನು ಎತ್ತಿ ಹಿಡಿದುವು. ಆದರೆ ಇದೇ ಸಮಯದಲ್ಲಿ ಉತ್ತರ ಭಾರತದಲ್ಲಿ ಆಸ್ತಿಯ ಖಾಸಗೀ ಒಡೆತನ, ನೀರಿನ ಹಕ್ಕು, ಗುಲಾಮರ ನೇಮಕ, ದೇಶೀಯ ವಾಣಿಜ್ಯ, ಲೇವಾದೇವಿ – ಇವು ಖಚಿತ ರೂಪ ಪಡೆದುಕೊಳ್ಳುತ್ತಿದ್ದವು.raj3

ಆಸ್ತಿಯ ಒಡೆತನ, ಸಮಾನತೆ, ಮುಕ್ತವಾದ ಗಂಡು-ಹೆಣ್ಣಿನ ಸಂಬಂಧ ಪಾಪಪ್ರಜ್ಞೆ ಬಾಧಿಸದ ಹಾಡು ಕುಣಿತ, ಸುಂದರ ಬದುಕಿನ ಗುಡ್ಡಗಾಡಿನ ಪಂಗಡಗಳನ್ನು ಕ್ರೂರವಾಗಿ ಹತ್ತಿಕ್ಕಿ, ಅರಸೊತ್ತಿಗೆ ತಲೆಎತ್ತುತ್ತಿದ್ದ ಕಾಲವೂ ಅದಾಗಿತ್ತು. ಪಂಗಡಗಳ ಮೇಲೆ ಅರಸೊತ್ತಿಗೆಗಳು ನಡೆಸುತ್ತಿದ್ದ ಕ್ರೂರ ದಬ್ಬಾಳಿಕೆಗಳನ್ನು ಎರಡೂ ಧರ್ಮಗಳು ಖಂಡಿಸಲಿಲ್ಲ.ಇದರಿಂದಾಗಿ ಅವರ ಅಹಿಂಸೆ, ಅಪರಿಗ್ರಹಗಳು ಅಮೂರ್ತ ಮೌಲ್ಯಗಳಾದುವು. ಬಹುಶಃ ಇದು ಎಲ್ಲ ಕಾಲದ ಆದರ್ಶಗಳ ದುರ್ದೈವ. ಯಶೋಧರ ಚರಿತೆಯಲ್ಲಿ ನಾವು ಕಾಣುವುದು ಈ ವೈರುಧ್ಯದ ಚಿತ್ರಣವನ್ನೇ.’

ಹಕ್ಲ್ಸೆಯ ಮೂಲಭೂತ ಚಿಂತನೆಗಳಲ್ಲಿ ಒಂದು-‘ಸತ್ಯ ಮಹತ್ತಾದದ್ದು ಅದಕ್ಕಿಂತಲೂ ಮುಖ್ಯವಾಗಿ ಸತ್ಯದ ಬಗ್ಗೆ ಮೌನವಾಗಿರುವುದು’. ಆದರೆ ಸತ್ಯದ ಬಗ್ಗೆ ಮೂಕಪ್ರೇಕ್ಷಕವಾದ ಬೌದ್ದ, ಜೈನ ಧರ್ಮಗಳೆರಡೂ ಇಂಡಿಯಾದಲ್ಲಿ ನೆಲಕಚ್ಚಿದುವು. ಒಬ್ಬ ಬೌದ್ದಿಕನ ಸಾಕ್ಷಿ ಪ್ರಜ್ಞೆಯಿಂದ ಆತನ ಜವಾಬ್ದಾರಿ ಬೇರೆಯಾದ ಫಲವಿದು. ಆದ್ದರಿಂದ ರಾಜಶೇಖರ ಈ ಮೌನವನ್ನು ‘ದುರ್ದೈವ’ ಎಂದಿರಬೇಕು.

 

ಸತ್ತವರ ನೆರಳು- ನಾಟಕದ ತತ್ವಗಳು (ಸಾಕ್ಷಿ – ೨೭)

ಇಲ್ಲಿ ಒಟ್ಟು ನಾಟಕದ ತತ್ವಗಳ ಬಗ್ಗೆ ಅತ್ಯಂತ ಗಾಢವಾದ ಮತ್ತು ನಿರ್ಭೀತವಾದ ಹೇಳಿಕೆಗಳನ್ನು ರಾಜಶೇಖರ್ ಕೊಡುತ್ತಾರೆ.

…ಸತ್ತವರ ನೆರಳು ನಾಟಕದ ತಾತ್ವಿಕ ಧೋರಣೆಗಳನ್ನು ತಿರಸ್ಕರಿಸಲು ಕಾರಣ, ಆ ಧೋರಣೆಗಳನ್ನು ರೂಪಿಸಿದ ಜೀವನಾನುಭವ ಅಖಂಡವಲ್ಲದ್ದು ಎಂಬುದು. ಕಳೆದ ನೂರು ವರ್ಷಗಳಲ್ಲಿ ಈ ದೇಶದ ಆರ್ಥಿಕ, ಸಾಮಾಜಿಕ ಬದಲಾವಣೆಗಳಿಂದ ನೆಲ ಕಳೆದುಕೊಂಡ, ಉದ್ಯೋಗ ಕಳೆದುಕೊಂಡ , ಹೊತ್ತಿನ ಊಟದ ಖಾತ್ರಿ ಇಲ್ಲದ, ಬರೇ ಹಸಿವು ನಿಶ್ಯಕ್ತಿಗಳಿಂದ ಹುಳ ಸತ್ತಂತೆ ಸಾಯುವ ಅಸಂಖ್ಯ ಭಾರತೀಯರು ಒಂದು ಕ್ಷಣ ತಮ್ಮ ಮತ್ತು ತಮ್ಮ ಪರಿಸರದ ಬಗ್ಗೆ ಸ್ಪಷ್ಟವಾಗಿ ಯೋಚಿಸಬಲ್ಲರಾದರೆ ಆಗ ಅವರಿಗೆ ಮಠದ ಬಗ್ಗೆ, ಶ್ರದ್ಧೆಯ ಬಗ್ಗೆ , ರಾಜಕೀಯದ ಬಗ್ಗೆ ಏನು ಅನ್ನಿಸೀತು? ಸದ್ಯದ ಭಾರತದಲ್ಲಿ ಬರೆಯುವ ಲೇಖಕ ಹೀಗೆ ಯೋಚಿಸಿದಾಗ ಮಾತ್ರ ಆತ ವರ್ತಮಾನಕ್ಕೆ ಪೂರ್ಣವಾಗಿ ಸ್ಪಂದಿಸಬಲ್ಲ. ಆಗ ಅಸಮಾನ ವ್ಯವಸ್ಥೆಯೊಂದರಲ್ಲಿ ಮೇಲು ಜಾತಿಯ ಮೇಲು ವರ್ಗಗಳವರ ಶ್ರದ್ಧೆಯ ಮಿತಿ, ಮಠದ ಮಿತಿ, ಅನುಭವದ ಮಿತಿ, ವ್ಯಕ್ತಿಗಳ ಸಾತ್ವಿಕತೆಯ ಮಿತಿ ಗೊತ್ತಾಗುತ್ತದೆ.’ಇದೊಂದು ಆರೋಗ್ಯಪೂರ್ಣವಾದ ನಿಲುವು. ಅವರ ಇತ್ತೀಚಿಗಿನ ಲೇಖನಗಳನ್ನು ಮಠದ ಬಗ್ಗೆ ನಿರ್ದಾಕ್ಷಿಣ್ಯವಾಗಿ ಬರೆದು ಬಲಪಂಥೀಯರ ಕೆಂಡದ ಕಣ್ಣುಗಳನ್ನು ಎದುರಿಸಬೇಕಾಗಿ ಬಂದದ್ದು; ತನ್ನ ಈ ನಿಲುವಿನಿಂದ. ಆದರೆ ಪ್ರಗತಿಪರ ಚಿಂತಕರೂ , ರಾಜಶೇಖರ್ ಅಗತ್ಯಕ್ಕಿಂತ ಹೆಚ್ಚು ಪ್ರತಿಕ್ರಯಿಸುತ್ತಿದ್ದಾರೋ ಏನೋ’ – ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದು ಅವರು ಮತ್ತೆ ಮತ್ತೆ ತಮ್ಮ ಒಟ್ಟು ಧೋರಣೆಗಳನ್ನು ಒಂದರ ಹಿಂದೆ ಇನ್ನೊಂದು ಲೇಖನಗಳಲ್ಲಿ ಸ್ಪಷ್ಟವಾಗಿ ಮತ್ತೂ ಸ್ಪಷ್ಟವಾಗಿ ಹೇಳ ಹೋದದ್ದರಿಂದ. ರಾಜಶೇಖರ್ ಗೆ ಸತ್ಯವನ್ನು ತಿಳಿ ಹೇಳುವ ಸೌಜನ್ಯವಿದೆ, ಬರಹಗಳನ್ನು ಕೆಚ್ಚೆದೆಯಿಂದ ಬರೆದು ಪ್ರಕಟಿಸುವ ಧೈರ್ಯವಿದೆ. ಅಂತೆಯೇ ನಿದ್ದೆ ಬಂದಂತೆ ನಟಿಸುವವರನ್ನು ಕೆಣಕಿ ಎಬ್ಬಿಸಿ ಮಾತಿನಲ್ಲಿ ಗುದ್ದಾಡುವ ಛಲವಿದೆ.

_DSC7787 (1280x854)divderspaಚಿತ್ತಾಲರ ಕೊನೆಯ ಪದ್ಯಗಳು :(ರುಜುವಾತು ೨೭)

ಚಿತ್ತಾಲರ ಕವನಗಳ ಬಗ್ಗೆ ಬಂದ ವಿಮರ್ಶೆಗಳು ವಿರಳ; ಬಂದವುಗಳಲ್ಲಿಯೂ ಬೌದ್ದಿಕ ಕಸರತ್ತು ಬಹಳ. ಅವರ ಅಂತಃಸತ್ವವನ್ನು ಮುಟ್ಟಲು ಯತ್ನಿಸಿದವು ಇಲ್ಲವೆಂದೇ ಅನ್ನಬೇಕು. ಗುಣವಾಗದ ರೋಗವೊಂದರಿಂದ ಕಾಡಿಸಿಕೊಂಡು ದಾರುಣವಾಗಿ ನರಳುತ್ತಿದ್ದ ಚಿತ್ತಾಲರ ಎಡಪಂಥೀಯ ಒಲವು** ಅವರ ದ್ವಂದ್ವಗಳು, ಅವರ ಸವಾಲುಗಳು, ಎಲ್ಲವನ್ನೂ ವಿಶಿಷ್ಟವಾದ ರೀತಿಯಲ್ಲಿ ಸೆರೆಹಿಡಿ** ರಾಜಶೇಖರ್ ಬರಹ ; ಒಂದು ಆಪ್ತ ಗ್ರಹಿಕೆ.

‘…ಚಿತ್ತಾಲರ ಪದ್ಯಗಳು ಅನುಭವವನ್ನು ಹಸಿಹಸಿಯಾಗಿ ಹೇಳುವುದಿಲ್ಲ; ಬದಲು ನೆನಪಿನಲ್ಲಿ ಮೂಡಿದ ಅನುಭವವನ್ನು ಧೇನಿಸುತ್ತದೆ.’ – ಗಂಗಾಧರ ಚಿತ್ತಾಲರ ಒಟ್ಟು ಒಟ್ಟು ಬರಹಕ್ಕೆ ಮುನ್ನುಡಿಯಂತಿದೆ.

ಚಿತ್ತಾಲರ ಕಡೆಯ ಪದ್ಯಗಳಲ್ಲಿ ದೇವರ ಭರವಸೆಯಿಲ್ಲ. ಅದಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಈ ಪದ್ಯಗಳಲ್ಲಿ ಸಮಾಜವೂ ಇಲ್ಲ. ಚಿತ್ತಾಲರು ಶಬ್ದಗಳನ್ನು ಅವುಗಳ ಪ್ರಾಥಮಿಕ ಅರ್ಥಕ್ಕೋಸ್ಕರ ಮಾತ್ರ ಉಪಯೋಗಿಸುತ್ತಾರೆ. ಬಳಕೆ ಮತ್ತು ಸಂಪ್ರದಾಯದಿಂದ ಶಬ್ದಗಳು ಪಡೆಯುವ ಧ್ವನಿಯನ್ನು ಅವರು ಉದ್ದೇಶಪಟ್ಟು ದೂರವಿರಿಸುತ್ತಾರೆ. ಮಾತಿನ ಶಕ್ತಿಯಲ್ಲೇ ವಿಶ್ವಾಸ ಕಳೆದುಕೊಂಡು ಹತಾಶರಾದ ಕವಿ – ಅವರು. ಆದರೆ ಕವಿಯ ಕಷ್ಟವೆಂದರೆ ಮಾತು ನಿರರ್ಥಕವೆನಿಸಿದಾಗಲೂ ಅದನ್ನು ಬಿಟ್ಟು ಬೇರೆ ಗತಿ ಇಲ್ಲದಿರುವುದು. ತನ್ನ ನೋವನ್ನು ಮಾತುಗಳಲ್ಲಿ ಸಮರ್ಥವಾಗಿ ಬಣ್ಣಿಸುವ ಪ್ರಯತ್ನ ವ್ಯರ್ಥವೆಂದು ಗೊತ್ತಿದ್ದರೂ

ಚಿತ್ತಾಲರು ಮತ್ತೆ ಮತ್ತೆ ಶಬ್ದಗಳ ಮೊರೆ ಹೋಗುತ್ತಾರೆ.

ಮುಂದೆ ರಾಜಶೇಖರ್ ಒಂದು ಗಂಭೀರವಾದ ಸಮಸ್ಯೆಯನ್ನು ಎತ್ತಿಕೊಂಡು ವಿಮರ್ಶೆಯಲ್ಲೇ ಒಂದು ಹೊಸ ಮಜಲನ್ನು ತಡವುತ್ತಾರೆ.

‘ಪ್ರತ್ಯಕ್ಷ ಎನಿಸುವಷ್ಟು ನಿಖರ ಅನುಭವ ಗೋಚರವಾದದ್ದಕ್ಕೆ ಚಹರೆಯೇ ಇಲ್ಲದಿರುವುದು ಚಿತ್ತಾಲರ ನಿಜವಾದ ಸಮಸ್ಯೆ. ಆದರೆ ಚಿತ್ತಾಲರು ಈ ಸಮಸ್ಯೆಯನ್ನು ಬಗೆಹರಿಸಲು ಸುಲಭದ ಉಪಾಯಗಳನ್ನು ಬಳಸುವುದಿಲ್ಲ ತನ್ನ ತಾತ್ವಿಕತೆ ಮತ್ತು ತನ್ನ ಕಾವ್ಯದ ಭಾಷೆ ಎರಡರಲ್ಲೂ ಚಿತ್ತಾಲರು ಯಾವ ನಂಬಿಕೆಯ ಊರುಗೋಲೂ ಇಲ್ಲದ ಅಪ್ಪಟ ನಾಸ್ತಿಕರು. ದೇವರಲ್ಲಿ ನಂಬಿಕೆ ಇಟ್ಟವನಿಗೆ ವ್ಯಕ್ತಪಡಿಸಲು ಭಾಷೆ ಸಿದ್ಧವಾಗಿದೆ. ಭಾಷೆ ಕೈಕೊಡುವುದು ನಾಸ್ತಿಕನಿಗೆ ಮಾತ್ರ. ಧರ್ಮ, ಸಂಸ್ಕೃತಿ ಮತ್ತು ಭಾಷೆಯ ಆಸರೆ ಚಿತ್ತಾಲರ ಪಾಲಿಗೆ ಇಲ್ಲ’-ಎನ್ನುವ ಅಭಿಪ್ರಾಯಕ್ಕೆ ಬರುತ್ತಾರೆ.

ಮನುಷ್ಯ ಬುದ್ಧಿಯಿದ್ದ ಪ್ರಾಣಿ. ಬುದ್ಧಿ ಸಮಸ್ಯೆಗಳನ್ನು ಲೀಲಾಜಾಲವಾಗಿ ಬಿಡಿಸುವುದೇನೋ ನಿಜ; ಆದರೆ ಅದೇ ಬುದ್ಧಿ ಅನಾಯಾಸವಾಗಿ ನಿಷ್ಠುರ ಸಮಸ್ಯೆಗಳನ್ನು ನಿರ್ಮಿಸಲೂಬಹುದು – ಅಲ್ಲವೇ?

ಮುಂದುವರೆಯುವುದು ….

(* ಈ ಲೇಖನವನ್ನು ಪುತ್ತೂರು ಕನ್ನಡ ಸಂಘದಿಂದ ೨೦೦೨ರಲ್ಲಿ  ಪ್ರಕಟಿತ ಎಂ . ರಾಜಗೋಪಾಲ್ ಅವರ   “ಧ್ಯಾನ, ಮಾತು ಮತ್ತು ಧ್ವನಿ” ಕೃತಿಯಿಂದ ಆಯ್ದುಕೊಳ್ಳಲಾಗಿದೆ . )

ಪ್ರತಿಕ್ರಿಯಿಸಿ