ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಕಾರಂತರ ಕುರಿತು ರಾಜಶೇಖರ

headernotext (2)divderspa

ಬಹುಶಃ ಶಿವರಾಮ ಕಾರಂತರ ನಂತರ(ಅವರ ಜೀವಿತದ ಅವಧಿಯಲ್ಲೂ) ಅವರಷ್ಟೇ ನಿರ್ಭೀತವಾಗಿ ಬರೆಯುತ್ತಿರುವವರು ರಾಜಶೇಖರ್ ಮಾತ್ರ ಎಂದೆನಿಸುತ್ತದೆ. ಎಡಪಂಥೀಯ ಧೋರಣೆಗಳನ್ನು ತ್ಯಜಿಸಿದ್ದರೂ ಒಟ್ಟಾರೆಯಾಗಿ ಅವರ ನಿಲುವು ಆರೋಗ್ಯಪೂರ್ಣವಾಗಿ ಒಟ್ಟು ಬದುಕಿಗೆ ಒಪ್ಪವಾಗಿ ಇಡುವಲ್ಲಿ ‘ಎಡ’ ಲೇಖಕರ ಓದು ಭದ್ರಬುನಾದಿಯನ್ನು ಒದಗಿಸಿದೆ – ಎಂದೂ ಅನ್ನಿಸ್ತದೆ. ಅವರೇ ವ್ಯಕ್ತಪಡಿಸುವಂತೆ ‘ಇಸಂ’ಗಳ ಹಂಗಿನಿಂದ ಮುಕ್ತವಾಗಿ ಸೃಜಿಸುತ್ತಿದ್ದಾರೆ ಎನ್ನುವಾಗಲೂ ಈ ಮಾತು ನಿಜ.

ರಾಜಶೇಖರ್ – ಏನು ಹೇಳಬೇಕೋ, ಅದರ ಬಗ್ಗೆ ಆಳವಾಗಿ ಧ್ಯಾನಿಸಿ, ಅದನ್ನು ಚುಟುಕಾಗಿ ಮತ್ತು ಅರ್ಥಪೂರ್ಣವಾಗಿ ಹೇಳಬಲ್ಲ ಅದ್ಭುತ ಪ್ರತಿಭೆಯ ಚಿಂತಕ. ಕೇವಲ ಮಾತಿನ ಮೋಡಿಯಲ್ಲಿ ಚದುರಿಹೋಗುವ ಅನಂತಮೂರ್ತಿಯವರಿಗೆ ಈ ಸತ್ಯ ಹಿಡಿಸಲಿಕ್ಕಿಲ್ಲ. ಅವರ ಧೋರಣೆಗಳಲ್ಲಿರುವ ಅಸ್ಪಷ್ಟತೆಯೂ, ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ, ವಿಭೀಷಣಾಯ ಸ್ವಸ್ತಿ – ಮಾದರಿಯಲ್ಲಿ ಎಲ್ಲೆಲ್ಲಿಯೂ ಸಲ್ಲುವ ಚಟವೂ ಅದಕ್ಕೆ ಕಾರಣವಿರಬಹುದು.

ಲಂಕೇಶ ಪತ್ರಿಕೆ ಮತ್ತು ಅಲ್ಲೊಮ್ಮೆ ಇಲ್ಲೊಮ್ಮೆ ಪ್ರಕಟವಾಗುತ್ತಿರುವ ಬರಹಗಳನ್ನುಹೊraj1ರತಾಗಿಯೂ, ಇವರು ಬರೆದ ಲೇಖನಗಳ ತಳಹದಿಯಲ್ಲಿ, ಅದರಲ್ಲೂ ಮುಖ್ಯವಾಗಿ ಸಂದರ್ಶನ, ನಾಟಕ, ಕಾವ್ಯಗಳ ವಿಮರ್ಶೆಗಳಲ್ಲಿ ಅವರ ಚಿಂತನೆಗಳ ಜಾಡನ್ನು ಗಮನಿಸಬಹುದಾಗಿದೆ. ವಿಮರ್ಶೆ ಅನ್ನುವುದು ಒಂದು ಸೃಷ್ಟಿ ಕ್ರಿಯೆ; ಜ್ಞಾನದ ಕವಲು; ಲೇಖನದ-ಮಾತಿನ ಪ್ರಕ್ರಿಯೆಯ ಪ್ರಧಾನ ಧಾರೆಯಲ್ಲೇ ಪ್ರವಹಿಸುವಂತಹದು.ಅವರು ಅತ್ಯಂತ ಗೌರವಿಸುವ ಕಾರಂತರೊಂದಿಗಿನ ಸಂದರ್ಶನದಲ್ಲಿ ಇದು ವ್ಯಕ್ತವಾಗುತ್ತದೆ.(ರುಜುವಾತು ೩೧-೩೨)

‘ಕರ್ನಾಟಕದ ಕೆಲವು ಪರಿಸರವಾದೀ ಸಂಘಟನೆಗಳಿಗೆ ಪಶ್ಚಿಮದ ಹಣಕಾಸು ಬರುವುದನ್ನು ಕಾರಂತರು ನಿರಾಕರಿಸಿದ್ದಾರೆ. ತನ್ನ ಇನ್ನೂರು ವರ್ಷಗಳ ವಸಾಹತುಶಾಹೀ, ವರ್ಣಭೇದ, ಜನಾಂಗದಭೇದ, ಆರ್ಥಿಕ ದರೋಡೆ, ಅಣ್ವಸ್ತ್ರ ಪ್ರಯೋಗಗಳ ಪಾಪಗಳನ್ನು ಮುಂದರಿಸಿಕೊಂಡು ಹೋಗುವ ಪಶ್ಚಿಮದ ಹೊಸ ಹುನ್ನಾರ- ಈ ನೆರವು. ಇದರ ಬಗ್ಗೆ ಕಾರಂತರ ನಿರ್ಲಕ್ಷ್ಯದ ಧೋರಣೆ ನನ್ನ ವಿರೋಧವಿದೆ…

ಈ ಸಂದರ್ಶನದಲ್ಲಿ ಕಾರಂತರು ಸಾಮ್ರಾಜ್ಯಶಾಹೀ ಎನ್ನುವುದೇ ಇಲ್ಲ – ಎಂದು ಹೇಳಿದ್ದಾರೆ. ಈ ಅಭಿಪ್ರಾಯಕ್ಕೆ ಕೂಡ ನನ್ನ ವಿರೋಧವಿದೆ. ನಾಝಿಗಳ ಜನಾಂಗ ಹತ್ಯೆ, ಮುಸ್ಸೋಲಿನಿಯ ಫ್ಯಾಸಿಸಂ ಮತ್ತು ಸ್ಟಾಲಿನನ ಕೂಡುದೊಡ್ಡಿಗಳ ಹಾಗೆ ಪಶ್ಚಿಮದ ಸಾಮ್ರಾಜ್ಯಶಾಹೀ ಕೂಡಾ ಇಪ್ಪತ್ತನೆಯ ಶತಮಾನದ ದೊಡ್ದ ಕಳಂಕ. ಈ ಶತಮಾನದ ಮುಖ್ಯ ಘಟನೆಗಳನ್ನು ಎರಡು ಮಹಾಯುದ್ಧಗಳು, ಹಿರೋಷಿಮ ನಾಗಸಾಕಿ, ವಿಯಟ್ನಾಂ ಯುದ್ಧ, ಲ್ಯಾಟಿನ್ ಅಮೇರಿಕದಲ್ಲಿ ಅಮೇರಿಕದ ಹಸ್ತಕ್ಷೇಪ, ಪ್ಯಾಲೆಸ್ತೀನ್ ಮತ್ತು ದ. ಆಫ್ರಿಕದ ಜನತೆಯ ಹೋರಾಟಗಳು, ಬಹುರಾಷ್ಟ್ರೀಯ ಕಂಪನಿಗಳ ನಿರ್ಲಜ್ಜ ನಡವಳಿಕೆಗಳು – ಇವನ್ನೆಲ್ಲ ಮರೆತರೆ ಮಾತ್ರ ಪಶ್ಚಿಮದ ಸಾಮ್ರಾಜ್ಯಶಾಹೀ- ಎಂಬುದು ಇಲ್ಲವೇ ಇಲ್ಲ – ಇದು ರಾಜಶೇಖರ್ ನಿಲುವು, ಅವರ ಹೇಳಿಕೆಗಳಲ್ಲಿ ಸ್ಪಷ್ಟತೆ ಮತ್ತು ದೃಢತೆ ಇದೆ. ಚೋಮ್‌ಸ್ಕಿ, ತನ್ನ ಪ್ರಸಿದ್ಧ ಲೇಖನವೊಂದರಲ್ಲಿ ‘ಸಮಾಜವಾದದ ಆರ್ಥಿಕ ಮಾದರಿ ಒಂದು ದೊಡ್ಡ ದುರಂತ. ಆದರೆ ಪಾಶ್ಚಿಮಾತ್ಯ ಆರ್ಥಿಕ ತಳಹದಿ ಅದಕ್ಕಿಂತಲೂ ಭಯಾನಕವಾದ ಸೋಲು- ಎಂದು ಬರೆದಿದ್ದಾನೆ. ಈ ಎರಡು ಹೇಳಿಕೆಗಳ ಸಾಮ್ಯ ಬೆರಗುಗೊಳಿಸುತ್ತದೆ.’

_DSC7795 (1280x828)divderspaರಾಜಶೇಖರ್-ಮುಂದರಿಸಿ, ‘ಕಾರಂತರ ‘ಚಿಗುರಿದ ಕನಸು’ವಿನ ನಾಯಕ, ಹೃದಯವಂತಿಕೆಯ ತರುಣ. ದೆಹಲಿಯಿಂದ ತನ್ನ ಮೂಲದ ಹಳ್ಳಿಗೆ ಹಿಂದಿರುಗಿ ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲಿ ಕೃಷಿಮಾಡಿ ಅದರಲ್ಲಿ ಸಫಲನಾಗುತ್ತಾನೆ. ಆ ತರುಣ ಕಾಡು ಕಡಿದು ಗದ್ದೆ ಮಾಡುತ್ತಾನೆ. ಕಾರಂತರ ಪ್ರಕಾರ – ಇದು ವ್ಯಕ್ತಿಯೊಬ್ಬನ ಶ್ರಮ ಮತ್ತು ಧೀರೋದಾತ್ತತೆಗಳಿಂದ ಸಾಕಾರವಾಗುವ ಕನಸು. ಆದರೆ ವಾಸ್ತವದಲ್ಲಿ ಇದು ಭಾರತದ ಹೊಸ ಭೂಮಾಲಿಕ ಭಂಡವಾಳಶಾಹಿಯ ಕನಸು. ಕಾರಂತರ ನಾಯಕ ಹೃದಯವಂತಿಕೆಯ ತರುಣ. ಆದರೆ ದೇಶದ ಭೂಮಾಲಿಕ ಭಂಡವಾಳಶಾಹೀ ಕೃಷಿಯಲ್ಲಿ ಸಾಧಿಸಿದ ಆಧುನಿಕೀಕರಣದಲ್ಲಿ ದೇಶಾದ್ಯಂತ ಲಕ್ಷಾಂತರ ಸಣ್ಣ ರೈತರು ತಮ್ಮ ಭೂಮಿ ಕಳಕೊಂಡು ಕೃಷಿಕೂಲಿಗಳಾಗಿದ್ದಾರೆ. ಇದು ಕಠೋರ ಸತ್ಯ. ಕಾದಂಬರಿಯ ನಾಯಕ ಚರಿತ್ರೆಯ ಶಕ್ತಿಗಳಿಂದ ಬಾಧಿತನಾಗದ ಆರ್ಟಿಸ್ಟೋಕ್ರಿಟಿಕ್ ಪಾತ್ರ. ಕಾರಂತರ ಮನಸ್ಸಿನಲ್ಲಿರುವ ಆದರ್ಶದ ಪಾತ್ರವೇ, ಹೋರತು ಈ ನಾಡಿನ ಚರಿತ್ರೆಗಳಲ್ಲಿ ಬೇರು ಇರುವವನಲ್ಲ’ – ಎಂಬ ನಿರ್ಣಯಕ್ಕೆ ಬರುತ್ತಾರೆ.

ಇಲ್ಲಿ ಅಪ್ರಸ್ತುತವಲ್ಲದ, ಕು. ಶಿ. – ಕಾರಂತರನ್ನು ಸಂದರ್ಶಿಸಿದ ವೇಳೆ – ಕಾರಂತರ ಅಭಿಪ್ರಾಯವನ್ನು ನಮೂದಿಸುವುದು ಅಗತ್ಯ ಎಂದೆನಿಸುತ್ತದೆ. ‘ಕಲಾಕಾರ, ಒಬ್ಬ ವ್ಯಕ್ತಿ, ಒಂದು ಮತ, ಒಂದು ಮಾತು – ಇವುಗಳನ್ನು ನೋಡಿದಾಗ, ಕೇಳಿದಾಗ ಅನುಭವಿಸಿದಾಗ ತನಗೆ ಎನನ್ನಿಸ್ತದೋ, ಅದನ್ನು ಬರೆಯುತ್ತಾನೆ.ಇದು ಪುನಃ ಸೃಷ್ಟಿ’. ರಾಜಶೇಖರ್ ಇದನ್ನು ನಿರಾಕರಿಸುತ್ತಾ, ‘ಇಲ್ಲಿ ಒಂದು ಬೋಳುಗುಡ್ಡವಿದೆ. ಅಲ್ಲಿ ಒಬ್ಬ ಮನುಷ್ಯನಿದ್ದಾನೆ’ – ಎನ್ನುವ ಕಾರಂತರ ಗ್ರಹಿಕೆಯಲ್ಲಿ ಚರಿತ್ರೆ ಮಾತ್ರ ನಾಪತ್ತೆ. ಇದು ಒಂದು ಮಿಥ್. ಚರಿತ್ರೆಯನ್ನು ಹೊರಗಿಟ್ಟಿರುವ ಬೂರ್ಜ್ವಾ ಮಿಥ್. ರಾಜೀವ ಗಾಂಧಿ ಹೆಗ್ಡೆಗಳು – ಜನತೆಯ ಬಗ್ಗೆ, ನಂಜುಂಡಸ್ವಾಮಿ, ಸುಂದರೇಶ್- ರೈತರ ಬಗ್ಗೆ, ಚಿದಾನಂದಮೂರ್ತಿ – ಕನ್ನಡಿಗರ ಬಗ್ಗೆ, ಪರಿಸರವಾದಿಗಳು- ‘ ಮನುಕುಲ’ ಮತ್ತು ನಿಸರ್ಗದ ಬಗ್ಗೆ ಮಾತಾನಾಡುವುದು, ತನ್ನ ಮೌಲ್ಯಗಳೇ ಎಲ್ಲ ಕಾಲದ ಎಲ್ಲ ಜನರ ಮೌಲ್ಯಗಳು ಎಂದು ಚಿತ್ರಿಸಲು, ಬೂರ್ಜ್ವಾ ರಾಜಕೀಯ ಉಪಯೋಗಿಸುವ ಮಿಥ್…‘ ಎಂದು ಬರೆಯುತ್ತಾರೆ.

ಚೋಮ್‌ಸ್ಕಿ ಇಂತಹ ಮಿಥ್ ಗಳ ಬಗ್ಗೆ ಖಾರವಾಗಿ, ‘ಸ್ಲೋಗನ್ನುಗಳನ್ನು ಸೃಷ್ಟಿಸುವುದೇನೂ ಕಷ್ಟದ ಕೆಲಸವಲ್ಲ. ಆದರೆ ಬದುಕಿನ ಸೂಕ್ಷ್ಮವಾದ ಆಯ್ಕೆಗಳು ಎದುರಾದಾಗ ಇವು ಏನು ಉಪಯುಕ್ತವಾಗಲಾರವು’- ಎಂದು ವ್ಯಕ್ತಪಡಿಸುತ್ತಾನೆ.

ಸಾಕ್ಷಿ ೩೮ರಲ್ಲಿ ರಾಜಶೇಖರ್ ಬರೆದ ‘ಕಾರಂತರು ಮತ್ತು ಕಮ್ಯುನಿಸ್ಟರು’ – ಅವರ ವಿದ್ವತ್ ಪೂರ್ಣವಾದ ಬರಹ. ಅಡಿಗರ ಮತ್ತು ಕಾರಂತರ ಚಿಂತನೆಗಳ ವಿವಿಧ ಕೋನಗಳ, ಆಯಾಮಗಳ ಬಗ್ಗೆ ಸಾಮಾನ್ಯ ಓದುಗನ ಕಣ್ಣು ತೆರೆಯಿಸುವ ಲೇಖನವಿದು.

‘ಎಲ್ಲ ಶ್ರೇಷ್ಠ ಲೇಖಕರೂ ತಮ್ಮ ಸಂಸ್ಕ್ರತಿಯ ಜೊತೆ ಪ್ರೀತಿ – ದ್ವೇಷಗಳ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಎಲ್ಲ ಜೀವಂತ ಸಂಬಂಧಗಳೂ ನಮ್ಮ ಕುಟುಂಬ, ಮನೆ, ಊರು, ಉದ್ಯೋಗ ಇವುಗಳ ಜೊತೆ ನಾವಿಟ್ಟುಕೊಳ್ಳುವ ಪ್ರೀತಿ – ದ್ವೇಷಗಳ ಸಂಬಂಧಗಳೇ ತಾನೇ. ಸಂಸ್ಕೃತಿಯ ಜೊತೆ ಇಂತಹ ಸಂಬಂಧ ಇಟ್ಟುಕೊಳ್ಳುವುದು,ಬುದ್ಧಿ, ಭಾವನೆಗಳಲ್ಲಿ ವಿಶೇಷ ಜಾಗೃತಿಯನ್ನು ಸದಾ ಕಾಪಾಡಿಕೊಳ್ಳುವ ಮನಸ್ಸುಗಳಿಗೆ ಮಾತ್ರ ಸಾಧ್ಯ. ಅಡಿಗರ ಕಾವ್ಯದಲ್ಲಿ ಇಂತಹ ಸಂಬಂಧವನ್ನು ಕಾಣುತ್ತೇವೆ. ಕುವೆಂಪು – ಅವರ ಕಾದಂಬರಿಗಳಲ್ಲಿ ಇದನ್ನು ಕಾಣುತ್ತೇವೆ. ಕಾರಂತರಲ್ಲೂ ಇದು ವಿಶೇಷವಾಗಿ ಎದ್ದು ಕಾಣುತ್ತದೆ. ಈ ಜಾಗೃತಿ ಕಾಣದಾದಾಗ ಪ್ರಾಚೀನತೆಯ ಆರಾಧನೆಯ ಸುಳ್ಳುಸಾಹಿತ್ಯ ಹುಟ್ಟಬಹುದಾದಂತೆ, ಅರಗಿಸಿಕೊಳ್ಳದ ಪ್ರಗತಿಶೀಲತೆಯ ಸುಳ್ಳು ಸಾಹಿತ್ಯವೂ ಬರಬಹುದು’ – ಎನ್ನುತ್ತಾರೆ.

karanta3

ಚಿತ್ರ : ಯಜ್ಞ , ಮಂಗಳೂರು

divderspverticleಕಾರಂತರನ್ನು ಒಂದು ಮಟ್ಟದಲ್ಲಿ ಒಪ್ಪಿಕೊಳ್ಳುತ್ತಲೇ ಅವರ ಮಿತಿಯನ್ನು ಹೇಳಲು ಹಿಂಜರಿಯದ ರಾಜಶೇಖರ್, ಲೇಖನವನ್ನು ಮುಂದರಿಸಿ… ‘ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ದೇಶದಲ್ಲಿ ನಡೆದ ಎಲ್ಲ ಔದ್ಯಮೀಕರಣ, ಕೃಷಿ ಬೆಳವಣಿಗೆ, ನೀರಾವರಿ ಯೋಜನೆ, ಸಾರಿಗೆ, ಶಕ್ತಿ ಉತ್ಪಾದನೆಗಳ ಮೇಲೆ ಹೂಡಿದ ಅಪಾರ ಬಂಡವಾಳದ ಫಲ, ಮೇಲ್ವರ್ಗಕ್ಕೆ ಮಾತ್ರ ದೊರಕಿ, ಬಡವ-ಶ್ರೀಮಂತರ ನಡುವೆ, ಹಳ್ಳಿ-ಪಟ್ಟಣಗಳ ನಡುವೆ, ಅಂತರ ದಿನೇ ದಿನೇ ಹೆಚ್ಹುತ್ತಿರುವ ಪರಿಸ್ಥಿತಿಯಲ್ಲಿ ಕಾರಂತರು ಪ್ರತಿಪಾದಿಸುವ ‘ಮೊದಲು ಉತ್ಪನ್ನ – ನಂತರ ಹಂಚಿಕೆ’ ಎನ್ನುವ ಮಾತು – ಅರ್ಥವಿಲ್ಲದ್ದು. ಯಾವ ವ್ಯವಸ್ಥೆಯಲ್ಲೂ ಉತ್ಪನ್ನ ಮತ್ತು ಹಂಚಿಕೆ, ಬೇರ್ಪಡಿಸಲಾರದ ವಿಷಯಗಳು. ಯಾವ ಸಮಾಜದ ಉತ್ಪನ್ನವೂ ತಕ್ಕ ಕಾಲದಲ್ಲಿ ತಕ್ಕ ರೀತಿಯಲ್ಲಿ ಹಂಚಲು ಬರುವ ಅವತಾರ ಪುರುಷನಿಗೋಸ್ಕರ ಕಾಯುತ್ತಾ ಕೂಡುವುದಿಲ್ಲ’ – ಎಂದು ಕೊಂಚ ವ್ಯಂಗ್ಯವಾಗಿ ನುಡಿಯುತ್ತಾರೆ. ಪ್ರಬಂಧವನ್ನು ಮುಂದರಿಸಿ, ‘…ಅಡಿಗರಂತೆ ಕಾರಂತರೂ, ಮಾರ್ಕ್ಸ್ ವಾದ, ಸಮಾಜವಾದಗಳ ಬಗ್ಗೆ ತಮ್ಮ ತಾರುಣ್ಯದ ಕೆಲಕಾಲ ಒಲವುಳ್ಳವರಾಗಿದ್ದರು. ನೆಹರು ಯುಗದ ಬೂಟಾಟಿಕೆಯ ಸಮಾಜವಾದ ಮತ್ತು ಅದಕ್ಷ ಸರ್ಕಾರೀಕರಣ, ಎಂಥಾ ದಗಾಕೋರರೂ ತಾವು ಸಮಾಜವಾದಿಗಳೆಂದು ಜನರನ್ನು ನಂಬಿಸುವ ವಾತಾವರಣ, ಸಮಾಜವಾದದ ಶೋಷಣೆ ಮತ್ತು ಸ್ವಾರ್ಥ ಸಾಧನೆ, ರಶ್ಯಾ ಮೈತ್ರಿ ಮತ್ತು ಕಪ್ಪು ಹಣ, ಕಾಳಸಂತೆಯ ಕಾರುಬಾರುಗಳನ್ನು ಜೊತೆ ಜೊತೆಯೇ ಪೋಷಿಸಬಲ್ಲ, ಬಣ್ಣ ಬಣ್ಣದ ಮಾತಿನ ಬೆಲೂನುಗಳನ್ನು ಜನರಿಗೆ ಹಂಚಿ ತಮ್ಮ ಸ್ವಂತಕ್ಕೆ ಮಾತ್ರ ಧನ, ಕನಕ, ವಸ್ತು , ವಾಹನದ ನಿಜವಾದ ಆಸ್ತಿಯನ್ನೇ ಹೇರಳವಾಗಿ ಮಾಡಿಕೊಂಡ ನಾಯಕ ಗಣ – ಈ ರಾಜಕೀಯ ಸಂದರ್ಭ -ಇಬ್ಬರನ್ನೂ ಸಮಾಜವಾದದ ಶತ್ರುಗಳನ್ನಾಗಿ ಮಾಡಿತು’ ಎನ್ನುವ ನಿರ್ಣಯಕ್ಕೆ ಬರುತ್ತಾರೆ.

ಒಂದು ಮಾನವ ಸಮಾಜದಲ್ಲಿ ಬದುಕಿ ಇತರ ವ್ಯಕ್ತಿಗಳ ಇರುವಿಕೆಯನ್ನು, ಅವರ ಅನುಭವಗಳನ್ನು ಅವು ತಮ್ಮ ಜೀವನ ವಿಧಾನದಿಂದ ನೇರ ವಿರುದ್ಧ ದಿಕ್ಕಿನಲ್ಲಿವೆ – ಎನ್ನುವ ಕಾರಣಕ್ಕಾಗಿ ಅವುಗಳ ‘ಸ್ಥಿತಿ’ಯನ್ನೇ ಅಲ್ಲಗೆಳೆಯುವ ಬೌದ್ಧಿಕ, ನಿಜವಾಗಿಯೂ ಬೆಳೆದಿರುವುದಿಲ್ಲ. ಇಂತಹ ಅಚಾತುರ್ಯವನ್ನು ರಾಜಶೇಖರ್ ಎಂದೂ ಪ್ರದರ್ಶಿಸುವುದಿಲ್ಲವಾದ್ದರಿಂದ, ತಮ್ಮ ಚಿಂತನೆಗಳ ನೇರದಲ್ಲಿಲ್ಲದ ಕಾರಣಕ್ಕೆ ಕಾರಂತ, ಅಡಿಗರನ್ನು ದ್ವೇಷಿಸುವುದಿಲ್ಲ. ಅವರಿಬ್ಬರನ್ನೂ ಗೌರವಿಸಿ, ಅವರ ಕಾಣ್ಕೆಗಳನ್ನು ಕೊಂಡಾಡುತ್ತಾರೆ. ಅಂತೆಯೇ ಭಿನ್ನಾಭಿಪ್ರಾಯಗಳನ್ನು ಯಾವುದೇ ಮುಲಾಜಿಲ್ಲದೆ ಸಕಾರಣವಾಗಿ ಹೇಳಬಲ್ಲ ಧೈರ್ಯವೂ ಅವರಿಗಿದೆ. ಇದರಿಂದ, ‘ಅಡಿಗರ ಕಾವ್ಯದ ಮನೋಧರ್ಮ’ ಮತ್ತು ‘ಕಾರಂತರು ಮತ್ತು ಕಮ್ಯುನಿಸ್ಟರು’ ಮಾದರಿಯ ಉಚ್ಚಮಟ್ಟದ ಪ್ರಬಂಧಗಳನ್ನು ಬರೆಯಲು ಸಾಧ್ಯವಾಯಿತು, ಎಂದು ತೋರುತ್ತದೆ.

ಕಾರಂತರ ಬಗ್ಗೆ ತಮ್ಮ ಲೇಖನವನ್ನು ಮುಂದರಿಸಿ, ‘…ನಮ್ಮ ಸಾಂಸ್ಕೃತಿಕ, ಸಾಮಾಜಿಕ ಸನ್ನಿವೇಶದ ಎಲ್ಲ ವೈರುಧ್ಯಗಳನ್ನೂ ಕಾರಂತರು ಗಮನಿಸುವುದರಿಂದ ಸಂಸ್ಕೃತಿಯ ಜೊತೆ ಪ್ರೀತಿ, ಕುತೂಹಲಗಳಿಂದ ನೋಡಿದ ಇನ್ನೊಬ್ಬ ಲೇಖಕ ಕನ್ನಡದಲ್ಲಿಲ್ಲ. ಎಲ್ಲಿ ನಿಜವಾದ ಪ್ರೀತಿ ಇರುತ್ತದೋ, ಅಲ್ಲಿ ನಿಜವಾದ ಆಸಕ್ತಿಯೂ ಇರುತ್ತದೆ, ಈ ಬದುಕು ಯಾಕೆ ಹೀಗಿದೆ ಎನ್ನುವ ಸಿಟ್ಟೂ ಇರುತ್ತದೆ. ಈ ನಾಡಿನ ಜನ ಹೇಗೆ ಬದುಕುತ್ತಾರೆ, ಏನನ್ನು ಉಣ್ಣುತ್ತಾರೆ, ಹೇಗೆ ತಮ್ಮ ಅನ್ನ ಸಂಪಾದಿಸುತ್ತಾರೆ, ಹೇಗೆ ಪ್ರೀತಿಸುತ್ತಾರೆ, ಯಾವ ವಿಷಯದ ಬಗ್ಗೆ ಯೋಚಿಸುತ್ತಾರೆ ಎಂದು ಗೊತ್ತಿಲ್ಲದ ಜನ, ಬಲ, ಎಡ, ಲೋಹಿಯಾವಾದಿ, ಕಮ್ಯುನಿಸ್ಟ್ -ಯಾರೇ ಆಗಿರಲಿ -ಏನು ಪ್ರಯೋಜನ?‘ ಎಂದು ಖಂಡತುಂಡವಾಗಿ ಪ್ರಶ್ನಿಸುತ್ತಾರೆ.

‘ಇಸಂ’ಗಳಿಂದ ಭ್ರಮನಿರಸನ ಹೊಂದುತ್ತಿರುವ ವೇಳೆಗಷ್ಟೇ ಬರೆದ ಈ ಲೇಖನದಲ್ಲಿ ರಾಜಶೇಖರ್ ಒಬ್ಬ ಧ್ಯಾನಿಯಂತೆ ಈ ಪ್ರಶ್ನೆಗಳನ್ನು ತನಗೇ ಹಾಕಿಕೊಳ್ಳುತ್ತಾರೇನೋ ಅನ್ನುವ ಗುಮಾನಿ – ನನ್ನದು. ಜನರ ಬಗ್ಗೆ ಪ್ರೀತಿ – ಕುತೂಹಲ, ಕಾರಂತರಿಗಿದ್ದಂತೆ, ರಾಜಶೇಖರ್ ಗೂ ಅದೇ ಮಟ್ಟದಲ್ಲಿರುವುದರಿಂದ, ಅವರಿಗೆ ಕಾರಂತರು ಹೆಚ್ಚು ಅರ್ಥವಾಗುತ್ತಾರೆ, ಆಪ್ತವಾಗುತ್ತಾರೆ. ಇದರಿಂದಾಗಿಯೇ ಕಾರಂತರ ಬಗ್ಗೆ ಪ್ರಾಯಶಃ ಬೇರೆ ಯಾವ ಪ್ರಬುದ್ಧ ಲೇಖಕರಿಗಿಂತಲೂ ರಾಜಶೇಖರ್ ಸಂದರ್ಶನ ಮತ್ತು ಲೇಖನಗಳು ಹೆಚ್ಚು ವಸ್ತುನಿಷ್ಟವಾಗಿವೆ ಮತ್ತು ಅರ್ಥಪೂರ್ಣವಾಗಿವೆ ಎಂದೆನಿಸುತ್ತದೆ.

ಮುಂದುವರೆಯುವುದು ….

(* ಈ ಲೇಖನವನ್ನು ಪುತ್ತೂರು ಕನ್ನಡ ಸಂಘದಿಂದ ೨೦೦೨ರಲ್ಲಿ  ಪ್ರಕಟಿತ ಎಂ . ರಾಜಗೋಪಾಲ್ ಅವರ   “ಧ್ಯಾನ, ಮಾತು ಮತ್ತು ಧ್ವನಿ” ಕೃತಿಯಿಂದ ಆಯ್ದುಕೊಳ್ಳಲಾಗಿದೆ . )

One comment to “ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಕಾರಂತರ ಕುರಿತು ರಾಜಶೇಖರ”
  1. ತುಂಬಾ ಒಳ್ಳೆಯ ಪ್ರಯತ್ನ. ಋತುಮಾನ ಋತುಚಕ್ರವಾಗಿರಲಿ.ಎಲ್ಲ ‘ಇಸಂ’ಗಳ ಒಳ-ಹೊರಗುಗಳ ಬೆರಗನ್ನು ಓದುಗರ ಒರೆಗೆ ಹಚ್ಚುವ ಕಾಯಕ ನಿಮ್ಮದಾಗಲಿ ಎಂದು ಹರಸುವೇ

ಪ್ರತಿಕ್ರಿಯಿಸಿ