ಸಂಸ್ಕೃತಿಗಳು ನಾವು ನಕಾಶೆಯ ಮೇಲೆ ಎಳೆದ ಗೆರೆಗಳ ಮಧ್ಯೆ ಬಂಧಿಯಾಗಿಲ್ಲ : ಟಿ ಎಂ . ಕೃಷ್ಣ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕಾರ ಭಾಷಣ

chintana-tmdivderspaನಾನೊಬ್ಬ ಸಂಗೀತಗಾರ, ಭಾರತದ ಸುಪ್ರಸಿದ್ಧ ಸಂಗೀತ ಪ್ರಕಾರಗಳಲ್ಲೊಂದಾದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನ ಅಭ್ಯಾಸ ಮಾಡೋನು, ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದೋನು. ನನಗೆ ತಿಳುವಳಿಕೆ ಬಂದಾಗಿನಿಂದಲೂ ಈ ಸಂಗೀತ ಜಗತ್ತಿನ ಭಾಗವಾಗಿಯೇ ನನ್ನನ್ನ ನಾನು ಗುರುತಿಸಿಕೊಂಡವನು. ಹಲವಾರು ಬ್ಯಾಹ್ಮಣರಂತೆ ಈ ಸಂಗೀತವನ್ನ ಚಿಕ್ಕ ವಯಸ್ಸಿನಿಂದಲೂ ಅಭ್ಯಾಸ ಮಾಡುತ್ತಾ ಬಂದು 22ನೇ ವಯಸ್ಸಿಗೆ ಕೇವಲ ಯಶಸ್ಸನ್ನೇ ಗುರಿಯಾಗಿಸಿಕೊಂಡು ವೃತ್ತಿ ಆರಂಭಿಸಿದವನು‌. ಒಂದಷ್ಟು ಅಸಹಜ ಘಟನೆಗಳು,ಸಂದರ್ಭಗಳು ನನ್ನನ್ನು ಸಂಗೀತವನ್ನ ಕಲಿಯೋದು, ಹಾಡೋದನ್ನು ಹೊರತುಪಡಿಸಿ ಅದರಾಚೆಗೂ ಹರಡಿರಬಹುದಾದ ಸಂಗೀತದ ಬದುಕನ್ನು ಶೋಧಿಸುವಂತೆ ಮಾಡಿದವು.

ಹಾಗಾದರೆ ಈ ಸಂಗೀತ ಅಂದರೆ ಏನು? ಅಂದರೆ ಅದರ ಇತಿಹಾಸ, ಉದ್ದೇಶ?

ಪ್ರಶ್ನೆಗಳು ಶುರುವಾದಂತೆ ಅದು ನನ್ನನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡಿತು. ನಾನ್ಯಾರು? ಸಮಾಜದಲ್ಲಿ ನಾನು ಎಲ್ಲಿ ನಿಂತಿದ್ದೇನೆ? ನನ್ನ ಸಂಗೀತ ಕೇಳಿ ಪ್ರತಿ ಘಳಿಗೆಯನ್ನೂ ಆಸ್ವಾದಿಸಿ ಚಪ್ಪಾಳೆ ತಟ್ಟುವ ಜನ ಯಾರು? ಬರಬರುತ್ತಾ ಸಂಗೀತ ಅನ್ನೋದು ಕೇವಲ ಲಯ ಮತ್ತು ಮಾಧುರ್ಯವಲ್ಲ, ಬದಲಿಗೆ ಅದು ಮೇಲ್ಜಾತಿಯವರ ಧರ್ಮ, ಶಾಸ್ತ್ರ, ಆಚಾರಗಳನ್ನ ಒಳಗೊಂಡಿದೆ, ನನ್ನ ಜಾತಿಯನ್ನು ನಮ್ಮದೆಂದು ಆಚರಿಸುತ್ತಾ, ಸಂರಕ್ಷಿಸುತ್ತಾ, ಕಾಪಾಡಿಕೊಳ್ಳುತ್ತಾ ನನ್ನದಲ್ಲದ ಜಾತಿಯನ್ನು ಅಂದರೆ ಭಾರತದ ಜಾತಿ ವ್ಯವಸ್ಥೆಯ ತಳಮಟ್ಟದಲ್ಲಿರುವವರನ್ನು ನನ್ನದರಿಂದ ಸಂಪೂರ್ಣವಾಗಿ ವಂಚಿತರನ್ನಾಗಿಸುವ ವಿಧಾನ ಇದು ಅನ್ನಿಸತೊಡಗಿತು.

tm-krishna-759divderspaಒಂದು ಅಮೂಲ್ಯವಾದ, ರಸಾಸ್ವಾದದ ಅನುಭವ ಕೂಡ ರಾಜಕೀಯ ಮತ್ತು ಸಾಮಾಜಿಕ ಟೀಕೆ-ಟಿಪ್ಪಣಿಯ ಭಾಗವಾಗಬಹುದು. ಇದು ತಪ್ಪು ಎಂದು ನನಗೆ ಸ್ಪಷ್ಟವಾಗಿ ಅನ್ನಿಸಿತು. ಇದು ಸಮಾಜ ಮತ್ತು ಕಲೆ ಎರಡಕ್ಕೂ ಆಗಬಹುದಾದ ಮೋಸ. ಆದ್ದರಿಂದ ಈ ಸ್ಥಾಪಿತ ನಿಯಮವನ್ನ ವಿರೋಧಿಸಬೇಕು ಎಂದು ಅಂದುಕೊಂಡೆ.

ಮೇಲ್ಜಾತಿಗೆ ಸೇರಿದವನಾಗಿದ್ದುದು ನನ್ನ ಈ ಕೆಲಸವನ್ನು ಸುಲಭವಾಗಿಸಿತು. ನನ್ನ ಜೀವನದ ಭಾಗವೇ ಆಗಿದ್ದ ಕಲೆಯನ್ನ ಪ್ರಬಲ ಭಾರತೀಯ ಸಂಸ್ಕೃತಿಯ ಭಾಗವನ್ನಾಗಿ ನೋಡಲಾಗುತ್ತಿತ್ತು. ಮತ್ತೊಂದನ್ನು ಆಳುವ ಸಂಸ್ಕೃತಿ ತನ್ನನ್ನ ತಾನೇ ಬಲಿಷ್ಠನೆಂದು ಕರೆದುಕೊಳ್ಳಬಹುದು, ಆದರೆ ಅದು ತನ್ನನ್ನು ಸಂಸ್ಕೃತಿಯೆಂದು ಕರೆದುಕೊಳ್ಳಲು ಸಾಧ್ಯವಿಲ್ಲ. ತೀರಾ ಕಡೆಗಣಿಸಲ್ಪಟ್ಟ ಜಾತಿಗೂ ತನ್ನದೇ ಆದ ಮಹತ್ವದ ಕಲೆ ಅನ್ನುವುದಿರುತ್ತದೆ ಮತ್ತು ಇದೇ ಇಲ್ಲಿನ ವಿವಿಧತೆಯನ್ನು ಪ್ರತಿಬಿಂಬಿಸುತ್ತದೆ. ಆಧಿಕಾರ ಎಂಬುದಕ್ಕೆ ಎತ್ತೆತ್ತರದ ಕೋಟೆಗಳಿರಬಹುದು, ಆದರೆ ಸಂಸ್ಕೃತಿಗೆ ಸಮಾನ ರಂಗಸ್ಥಳವಿದೆ. ಎತ್ತರದ ಕೋಟೆಗಳನ್ನ ಕೆಡವಿಹಾಕಿ, ಕಡೆಗಣಿಸಲ್ಪಟ್ಟ ಕಲಾ ಪರಂಪರೆಗಳನ್ನ ರಂಗದ ಮಧ್ಯಕ್ಕೆ ಕರೆತರಬೇಕಾದ ಅಗತ್ಯವಿದೆ.

ಸಮಾಜದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪತ್ತು ಮುಕ್ತವಾಗಿ, ಗೌರವಯುತವಾಗಿ, ಪ್ರೀತಿಪೂರ್ವಕವಾಗಿ ಎಲ್ಲರಿಗೂ ಸಮಾನವಾಗಿ ದೊರಕಬೇಕೆಂದು ಗಣತಂತ್ರ ವ್ಯವಸ್ಥೆ ಹೇಳುತ್ತದೆ. ಇದು ಸಮಾಜದ ಸ್ವಾಸ್ಥ್ಯ ಕಾಪಾಡುವುದರ ಜೊತೆಗೆ ಒಬ್ಬರನ್ನೊಬ್ಬರು ಒಳಗೊಳ್ಳುವ,ಒಪ್ಪಿಕೊಳ್ಳುವ ಮನೋಭಾವನೆಯನ್ನು ಬೆಳೆಸುತ್ತದೆ.

ಸಂಸ್ಕೃತಿಗಳು ನಾವು ನಕಾಶೆಯ ಮೇಲೆ ಎಳೆದ ಗೆರೆಗಳ ಮಧ್ಯೆ ಬಂಧಿಯಾಗಿಲ್ಲ. ಸಂಕೀರ್ಣವಾದ ಆದರೆ ಅಷ್ಟೇ ಸುಂದರವಾದ ಈ ಭೂಮಿಯ ಮೇಲೆ ಪ್ರತಿಯೊಬ್ಬನ  ಸುಖ-ದುಃಖಗಳೂ ಒಂದೇ ತೆರನಾದುದು ಎಂದು ಜಗತ್ತಿಗೆ ತಿಳಿಸಿಕೊಟ್ಟಿದ್ದೇ ಕಲೆ. ಆದರೆ ಈ ಏಕತೆ ನಿಜಕ್ಕೂ ಅನುಭವಕ್ಕೆ ದೊರಕುವಂತಾಗಬೇಕೆಂದರೆ ನಾವು ಕಲಾ ಪರಂಪರೆಯನ್ನು ಸಮಾಜದ ರಾಜಕೀಯ ವ್ಯವಸ್ಥೆಯಿಂದ ಬೇರ್ಪಡಿಸಬೇಕಾಗಿದೆ .

Tm1ಈ ದಿಶೆಯಲ್ಲಿ ನನ್ನ ಪ್ರಯಾಣ ಈಗಷ್ಟೇ ಆರಂಭವಾಗಿದೆ ಮತ್ತು ಎಚ್ಚರಿಕೆಯನ್ನು ಕಾಪಾಡಿಕೊಳ್ಳುತ್ತ ನಿರಂತರ ಕಲಿಕೆಯೊಂದಿಗೆ ಮುಂದುವರಿಯಲಿದೆ. ಕಲೆ ಯಾವುದೇ ನಿಬಂದನೆಗಳಿಲ್ಲದೆ ಜೀವನಕ್ಕೆ ಅಂಟಿಕೊಂಡಿದೆಯೆಂಬುದನ್ನು ಈ ಪ್ರಶಸ್ತಿ ನನಗೆ ಮತ್ತೊಮ್ಮೆ ಖಾತ್ರಿಪಡಿಸಿದೆ. ನನ್ನ ಹಲವಾರು ಸಹ ಪ್ರಯಾಣಿಕರ ಮಾರ್ಗದರ್ಶನ ಮತ್ತು ಪ್ರೋತ್ಸಾಹವಿಲ್ಲದಿದ್ದರೆ ಇಲ್ಲಿಗೆ ಬಂದು ನಿಲ್ಲಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಇದು ನನ್ನ ಹೆಸರಿಗೆ ಬಂದ ಪ್ರಶಸ್ತಿಯಿರಬಹುದು ಆದರೆ ಇತರರಂತೆ ನನ್ನನ್ನೂ ತನ್ನ ಭವ್ಯತೆಯನ್ನು ಅನುಭವಿಸುವುದಕ್ಕಾಗಿ ಬೆಳೆಸಿ ಮುನ್ನಡೆಸುವುದರ ಜೊತೆಗೇ ಬದುಕಿನ ಭವ್ಯತೆಯನ್ನು ಅನುಭವಿಸಲು ಅಸಂಖ್ಯಾತ ಬಾಗಿಲುಗಳನ್ನು ತೆರೆದಿಟ್ಟ ಉದಾತ್ತವಾದ ಸಂಗೀತ ಪರಂಪರೆಗೆ ಈ ಪ್ರಶಸ್ತಿ ಸಲ್ಲುತ್ತದೆ.

ಕರ್ನಾಟಕ ಸಂಗೀತದ ಹಾಡೊಂದರ ಕೆಲ ಸಾಲುಗಳೊಂದಿಗೆ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ. ಆ ಹಾಡಿನ ಕುರಿತು ಒಂದಿಷ್ಟು.

ಹತ್ತೊಂಭತ್ತನೇ ಶತಮಾನದಲ್ಲಿ ತಮಿಳಿನ ಸಂಯೋಜಕರಾದ ಗೋಪಾಲಕೃಷ್ಣ ಭಾರತಿಯವರು ದಲಿತ ಸಂತ ನಂದನಾರ್‌ರ (6ರಿಂದ 7ನೇ ಶತಮಾನ) ಹೋರಾಟವನ್ನು ವಿವರಿಸುವ ಗೀತನಾಟಕವೊಂದನ್ನು ಸಂಯೋಜಿಸಿದರು. ನಾನೀಗ ಹಾಡಲಿರುವುದು ಆ ನಾಟಕದಿಂದ ಆಯ್ದುಕೊಂಡ ಹಾಡು. ಇದರಲ್ಲಿ ನಂದನಾರ್ ತನ್ನ ಹಾಡಿನ ಮೂಲಕ ಶಿವನನ್ನು ಸ್ತುತಿಸುವುದಕ್ಕಾಗಿ ದೇವಾಲಯದೊಳಕ್ಕೆ ಪ್ರವೇಶವನ್ನು ಬೇಡುತ್ತಾನೆ. 20ನೇ ಶತಮಾನದ ಮೊದಲ ಭಾಗದವರೆಗೂ ಹಿಂದೂ ದೇವಾಲಯಗಳಿಗೆ ದಲಿತರ ಪ್ರವೇಶ ನಿಷಿದ್ಧವಾಗಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ. ಇಂದು ಇಪ್ಪತ್ತೊಂದನೇ ಶತಮಾನದಲ್ಲಿ ದಲಿತರು ಪ್ರವೇಶಿಸಲು ಅಪೇಕ್ಷಿಸುತ್ತಿರೋದು ಯಾವತ್ತೂ ಅವರದ್ದಾಗದ ದೇವಾಲಯಗಳಿಗಲ್ಲ, ಬದಲಿಗೆ ಅವಕಾಶಗಳ, ಹಕ್ಕುಗಳ ಮತ್ತು ಅಧಿಕಾರ ಹಂಚಿಕೆಯ ಉಚ್ಛಶ್ರೇಣಿಗಳಿಗೆ. ಇಂದು ನಂದನಾರರು ಬಲಿಷ್ಠರಾಗಿದ್ದಾರೆ, ಒಗ್ಗೂಡಿಕೊಂಡಿದ್ದಾರೆ, ತಮ್ಮ ಹಕ್ಕುಗಳ ಕುರಿತು ಅರಿವುಳ್ಳವರಾಗಿದ್ದಾರೆ ಮತ್ತು ಇನ್ನಷ್ಟು ಬಲಿಷ್ಠರಾಗಲು,ಪರಿಣಾಮಕಾರಿಯಾಗಲು ಹೊರಟಿದ್ದಾರೆ. ಜಗತ್ತಿನಾದ್ಯಂತ ಕಡೆಗಣಿಸಲ್ಪಟ್ಟ ಸಮುದಾಯಗಳಿಗೆ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಕ್ಕುಗಳನ್ನೂ ಒಳಗೊಂಡತೆ ಸಮಾನವಾಗಿ ಗೌರವಯುತವಾಗಿ ಬದುಕುವ ಹಕ್ಕನ್ನು ಒದಗಿಸಲು ನಡೆಯುವ ಹೋರಾಟಗಳಿಗೆ ಇಂದಿಗೂ ಎದುರಾಗುವುದು ಮುಚ್ಚಿದ ಬಾಗಿಲುಗಳೇ.

ವರುಗಲಾಮೋ ಅಯ್ಯಾ…
ವರುಗಾಲಾಮೋ ಅಯ್ಯಾ ಉಂಡನ್ ಅರಿಗಿಲ್  ನಿನ್ರು ಕೊಂಡಾಡವುಂ ಪಾಡವುಂ ಅಂಗೆ

(ಓ ನನ್ನ ದೇವರೇ ನನಗೆ ನಿನ್ನ ಬಳಿ ನಿಂತು ನಿನ್ನನ್ನು ಸ್ತುತಿಸಿ ಕೊಂಡಾಡಲು ಅನುಮತಿ ಸಿಗಬಹುದೇ ? )

ಭಾಷಣದ ವೀಡಿಯೋ .  ಇದನ್ನು ಎಸ್  ಹರಿಹರನ್ ಅವರ ಯೂ ಟ್ಯೂಬ್ ಚಾನೆಲ್‌ನಿಂದ  ಬಳಸಿಕೊಳ್ಳಲಾಗಿದೆ 

divderspa‘ವರುಗಲಾಮೋ’ ಹಾಡನ್ನು ತಮಿಳಿನಲ್ಲಿ 1942ರಲ್ಲಿ ತೆರೆಕಂಡ  ‘ನಂದನಾರ್’ ಚಲನಚಿತ್ರದಲ್ಲೂ ಬಳಸಿಕೊಳ್ಳಾಗಿದೆ . ಈ ಹಾಡಿನ ಪೂರ್ಣ ವೀಡಿಯೋವನ್ನು ಇಲ್ಲಿ ನೋಡಬಹುದು .  
divderspa

ಅನುವಾದ : ಚಿನ್ಮಯ ಹೆಗ್ಡೆ 

ಚಿತ್ರ : ಇಂಡಿಯನ್ ಎಕ್ಸ್‌ಪ್ರೆಸ್

3 comments to “ಸಂಸ್ಕೃತಿಗಳು ನಾವು ನಕಾಶೆಯ ಮೇಲೆ ಎಳೆದ ಗೆರೆಗಳ ಮಧ್ಯೆ ಬಂಧಿಯಾಗಿಲ್ಲ : ಟಿ ಎಂ . ಕೃಷ್ಣ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕಾರ ಭಾಷಣ”
  1. Great song, Especially one sung in the film. Thanks for introducing this. 🙂 Please leave the translation of some of the crucial lines from the speech as simple as possible.

    Say this line “A culture which dominates can call itself powerful; it cannot call itself culture.” could have been translated better. (Please take this as a suggestion not as a review of the quality of translation)

  2. Excellent…. Really very very touching speech. Hope his and all our aspirations regarding the achievement of political, economical and cultural equity among society will grow and sustain…..

ಪ್ರತಿಕ್ರಿಯಿಸಿ