ಭಾರತೀಯ ಇತಿಹಾಸವನ್ನುತಿರುಚುತ್ತಿರುವಲ್ಲಿಹಾಗೂಏಕಪಕ್ಷೀಯವಾಗಿಪರಿಷ್ಕರಿಸುತ್ತಿರುವಲ್ಲಿಸಾಮಾಜಿಕಮಾಧ್ಯಮಗಳ ಪಾತ್ರದ ಬಗ್ಗೆ… ಕೆಲನಿರೂಪಣೆಗಳನ್ನುತಿರುಚುವಲ್ಲಿಸಾಮಾಜಿಕಮಾಧ್ಯಮಗಳಪಾತ್ರಹಾಗೂಎಲ್ಲವನ್ನೂಪೂರ್ವಗೃಹೀತ ಕಣ್ಣುಗಳಲ್ಲಿನೋಡುತ್ತಿರುವಬಗ್ಗೆನಿಮ್ಮಅಭಿಪ್ರಾಯ ಏನು?
ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿರುವ ಯುವ ಭಾರತೀಯರು ಇತಿಹಾಸವನ್ನು ಹೇಗೆ ನೋಡುತ್ತಾರೆನ್ನುವುದು ಪಕ್ಷ ರಾಜಕೀಯದ ಕೆಲಸವಾಗುತ್ತಿದ್ದು, ಇದು ಕಾಂಗ್ರೆಸ್ ವರ್ಸಸ್ ಬಿಜೆಪಿ ಎನ್ನುವಂತಾಗಿದೆ. ನಿಜ ಹೇಳಬೇಕೆಂದರೆ ಇದರ ಮೂಲ ಅಪರಾಧಿ ಕಾಂಗ್ರೆಸ್. ಏಕೆಂದರೆ ಸೋನಿಯಾ, ರಾಹುಲ್ ಹಾಗೂ ರಾಜೀವ್ ಗಾಂಧಿಯವರ ಕಾಂಗ್ರೆಸ್ ಚಿತ್ರಿಸಿದ ಆಧುನಿಕ ಭಾರತದ ಇತಿಹಾಸದಲ್ಲಿ, ಮಹಾತ್ಮ ಗಾಂಧಿಯವರನ್ನು ಹೊರತುಪಡಿಸಿ, ಎಲ್ಲ ಮಹಾನ್ ನಾಯಕರು ಒಂದೇ ಕುಟುಂಬದವರಾಗಿದ್ದರು. ಇಲ್ಲಿ ಮೊದಲು ನೆಹರೂ ಇದ್ದರು, ನಂತರ ಇಂದಿರಾ ಮತ್ತು ರಾಜೀವ್, ಮತ್ತು ಈಗ ಇಲ್ಲಿ ಸೋನಿಯಾ ಇದ್ದಾರೆ. ಅವರು ಹತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಅಧಿಕಾರದಲ್ಲಿದ್ದರು – ೨೦೦೪ರಿಂದ ೨೦೧೪ರವರೆಗೆ. ಅಲ್ಲದೆ, ನೀವು ಐತಿಹಾಸಿಕವಾಗಿ ನೋಡಿದಾಗ, ಸಾಮಾಜಿಕ ಮಾಧ್ಯಮ ಕ್ರಿಯಾಶೀಲವಾದದ್ದು ೨೦೧೧ರ ಆಸುಪಾಸಿನಲ್ಲಿ, ಇದು ಕಾಂಗ್ರೆಸ್ ಕಳಂಕಿತವಾಗುತ್ತಿದ್ದ ಕಾಲ. ಏನಾಯಿತೆಂದರೆ, ಅವರು(ಯುವ ಭಾರತೀಯರು) ಪರ್ಯಾಯ ನಾಯಕರಿಗಾಗಿ ಹುಡುಕಾಟ ನಡೆಸಿದ್ದಾರೆ
ಹೀಗೆ ಕಾಂಗ್ರೆಸ್ ಇತಿಹಾಸವನ್ನು ತಪ್ಪಾಗಿ ನಿರೂಪಿಸಿದ್ದರ ಪರಿಣಾಮವಾಗಿ, ಸೋನಿಯಾ ಮತ್ತು ರಾಹುಲ್ ಗಾಂಧಿಯವರೊಡನೆ ಸೇರಿಸಬಾರದಂತಹ(ಇವರಿಗೆ ನೆಹರೂ ಯಾವುದಕ್ಕೋಸ್ಕರ ಶ್ರಮಿಸಿದರೆಂದು ಎಂದೂ ತಿಳಿದಿರಲಿಲ್ಲ) ಮಹಾನ್ ನಾಯಕರಾಗಿದ್ದ, ಜವಾಹರಲಾಲ್ ನೆಹರೂ ಕೂಡ ಕಳಕಿಂತರಂತಾಗಿಬಿಟ್ಟರು. ಸೋನಿಯಾ ಗಾಂಧಿಯವರ ಅಡಿಯಲ್ಲಿ, ಕಾಂಗ್ರೆಸ್ ಅತ್ಯುತ್ತಮ ಕಾಂಗ್ರೆಸ್ಸಿಗರಾಗಿದ್ದವರ ಬಗ್ಗೆ ಹಾಗೂ ಅಂತಹವರ ಕೊಡುಗೆಗಳ ಬಗ್ಗೆ ಮಾತನಾಡಲೇ ಇಲ್ಲ. ಸರ್ದಾರ್ ಪಟೇಲ್ ಒಬ್ಬ ಮಹಾನ್ ಕಾಂಗ್ರೆಸ್ಸಿಗರಾಗಿದ್ದರು. ಅಂತೆಯೇ ರಾಜಾಜಿ, ಕಾಮರಾಜ್, ಸುಭಾಷ್ ಚಂದ್ರ ಬೋಸ್. ಹಾಗಾಗಿ ಗೋಪಾಲ್ ಗಾಂಧಿ ಹೇಳುವಂತೆ, ಕಾಂಗ್ರೆಸ್ ಪಟೇಲರನ್ನು ಬಿಟ್ಟುಕೊಟ್ಟಿತು, ಇದು ಬಿಜೆಪಿ ಪಟೇಲರನ್ನು ತನ್ನವರಂತೆ ಬಿಂಬಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಪಟೇಲರು ಎಂದೂ ಬಿಜೆಪಿಯ ಅಥವಾ ಸಂಘ ಪರಿವಾರದ ಅಥವಾ ಆರ್‍ಎಸ್ಸೆಸ್‍ನ ಭಾಗವಾಗಿರಲಿಲ್ಲ – ಅವರು ಜೀವನಪರ್ಯಂತ ಕಾಂಗ್ರೆಸ್ಸಿಗರಾಗಿದ್ದರು. ಈ ರೀತಿ ಶುರುವಾಯಿತು – ಮೂಲ ಅಪರಾಧಿ ಕಾಂಗ್ರೆಸ್ ಆದರೆ ನಂತರ ಸಾಮಾಜಿಕ ಮಾಧ್ಯಮದ ತಿರುಚುವಿಕೆಗಳು ಭಿನ್ನ ದಿಕ್ಕಿನಲ್ಲಿ ಸಾಗಿದವು; ‘ನೆಹರೂ ಹೊರತಾಗಿ ಯಾರಾದರೂ ಇರಲಿ’ ಎನ್ನುವಂತಾಯಿತು. (ಕಥನ ಈ ದಿಕ್ಕಿನತ್ತ ತಿರುಗಿತು) ‘ಪಟೇಲ್ ಮಹಾನ್ ನಾಯಕರಾಗಿದ್ದರು, ಆದರೆ ನೆಹರೂ ಅವರನ್ನು ಮೂಲೆಗೆ ತಳ್ಳಿದರು. ವಾಸ್ತವವಾಗಿ ಪಟೇಲರು ಪ್ರಧಾನಮಂತ್ರಿಯಾಗಲು ಬಯಸಿರಲಿಲ್ಲವಾದರೂ ಗಾಂಧಿ ಪಟೇಲರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕಿತ್ತು. ನೆಹರೂ ಮತ್ತು ಪಟೇಲರು ಸಹಭಾಗಿಗಳಾಗಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದರು. ನೆಹರೂ ಪ್ರಧಾನಮಂತ್ರಿಯಾಗಿದ್ದಾಗ ಪಟೇಲರು ಉಪಪ್ರಧಾನಿಯಾಗಿದ್ದರು. ಆದರೆ ಸಾಮಾಜಿಕ ಮಾಧ್ಯಮವು, ಪಟೇಲರು ಪ್ರಧಾನ ಮಂತ್ರಿಗಳಾಗಿದ್ದರೆ ಭಾರತ ಮಹಾನ್ ದೇಶವಾಗಿರುತ್ತಿತ್ತು ಎನ್ನುವ ಆಲೋಚನೆಯಲ್ಲಿ ಸಿಲುಕಿ ಹಾಕಿಕೊಂಡಿತು. ಇದು ಮುಂದುವರೆದು, ಬಹುಶಃ ನೆಹರೂ ಬೋಸರವರ ಹತ್ಯೆಗೈದರು – ಎಲ್ಲ ರೀತಿಯ ಆಲೋಚನೆಗಳು, ಎಲ್ಲವೂ ಸತ್ಯದಿಂದ ಬಹಳ ದೂರವಾದಂತವು(ನಗುತ್ತ)! ನಿಧಾನವಾಗಿ ನೀವು ಹುಸಿ ಸಿದ್ಧಾಂತಗಳ, ವ್ಯಂಗ್ಯೋಕ್ತಿ, ಗಾಸಿಪ್, ಮತಿವಿಕಲ್ಪದ ಹಾಗೂ ಸಂಪೂರ್ಣ ಹುಚ್ಚುತನದ ಜಗತ್ತನ್ನು ಪ್ರವೇಶಿಸುತ್ತೀರಿ. ಹಾಗೂ ಸಂಗತಿಗಳು ಇನ್ನೂ ಹೆಚ್ಚುಹೆಚ್ಚು ತಿರುಚಲ್ಪಡುತ್ತಿವೆ.
ನೆಹರು ಅವರ ಮುಖಕ್ಕೆ ಮಸಿ ಬಳಿಯುವ ಕೆಲಸ ಇತ್ತೀಚೆಗೆ ಸಾಮಾನ್ಯವಾಗಿದೆ. ಈ ಬಗೆಯ ಕೆಲವು ವಿಡಿಯೋಗಳು ಬಹುಸಂಖ್ಯಾತ ನೋಡುಗರನ್ನ ಸೆಳೆಯುತ್ತದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಮೇ ೧೫ರಂದು ಪ್ರಕಟವಾಗಿರುವಂತೆ " ಯು ಟ್ಯೂಬಿನಲ್ಲಿ ನೆಹರೂ ಎಂದು ಹುಡುಕಿದಾಗ ಅವರ ತೇಜೋವಧೆ ಮಾಡುವ ದಂಡು ದಂಡು ವೀಡಿಯೊಗಳು ಕಾಣಸಿಗುತ್ತದೆ. ನೆಹರೂವನ್ನು "ಹಿಂದೂಸ್ತಾನ್ ಕಾ ಸಬ್ಸೆ ಅಯ್ಯಶ್ ಆದ್ಮಿ" ಎಂದು ಬಿಂಬಿಸುವ ವಿಡಿಯೋವನ್ನ ೪೦,೧೬,೬೪೦ ಬಾರಿ ನೋಡಲಾಗಿದೆ. ಈ ಬಗೆಯ ಕತೆಗಳು ಅವರ ತೇಜೋವಧೆಗೆ ಬೇಕಾದ ಅಡಿಪಾಯವನ್ನ ಹಾಕುತ್ತೆ- ನೆಹರೂವನ್ನು ಮುಸ್ಲಿಂ , ಪಾಶ್ಚಿಮಾತ್ಯ ,.. ಎಂದು ಕಳಂಕ ಹಚ್ಚುವುದು. ಅವರನ್ನು ಕಾಮುಕ ಎಂದು ಸಾಬೀತುಮಾಡಲು ಯತ್ನಿಸುವುದು. ನೆಹರೂ ಅವರ ತೇಜೋವಧೆಗೆ ಅವರು ಜಾಕ್ವಲಿನ್ ಕೆನಡಿ, ಮೃಣಾಲಿನಿ ಸಾರಾಭಾಯಿ , ಏರ್ಪೋರ್ಟ್ ಅಕ್ಕರೆಯಿಂದ ತಮ್ಮ ತಂಗಿಯನ್ನು ಅಪ್ಪಿಕೊಂಡ ದೃಶ್ಯ, ಮಹಿಳೆಯೊಬ್ಬರ ಸಿಗರೇಟ್ ಹಚ್ಚುತ್ತಿರುವ ದೃಶ್ಯವನ್ನ ಬಳಸಿಕೊಳ್ಳಲಾಗಿದೆ.
ಇದುಒಂದುದೇಶವಾಗಿನಮಗೆಇತಿಹಾಸದಜ್ಞಾನವಿಲ್ಲದಿರುವುದರಿಂದ – ನಾವುಇತಿಹಾಸವನ್ನುಗಂಭೀರವಾಗಿಕಲಿಯಬೇಕಾದಾಗಕಲಿಯದಿರುವುದರಿಂದ – ಆಗಿದ್ದೆಂದುನಿಮಗೆಅನ್ನಿಸುತ್ತದೆಯಾ? ಅಥವಾ, ಹೀಗಿರಬಹುದಾ, ಇಂಜಿನಿಯರಿಂಗ್ಕಾಲೇಜುಗಳಲ್ಲಿಮಾನವೀಯವಿಷಯಗಳನ್ನುಗಂಭೀರವಾಗಿಭೋದಿಸದೆಉಂಟಾಗುವತಪ್ಪುಕಲ್ಪನೆಗಳಿಂದಲಾ?
ಅದು ಒಂದು ಕಾರಣ. ಎರಡನೇ ಕಾರಣವೆಂದರೆ, ಕಾಂಗ್ರೆಸ್ ಇತಿಹಾಸದ ಒಂದು ಕಥನವನ್ನು ಮಾತ್ರ ಪ್ರಸ್ತುತಪಡಿಸಿದ್ದು. ಮೂರನೆಯ ಕಾರಣವೆಂದರೆ, ವಿದ್ಯಾವಂತ, ತಂತ್ರಜ್ಞಾನ ಲೋಕದಲ್ಲಿರುವ ಭಾರತದ ಯುವಕರಿಗೆ(ವಿಶೇಷವಾಗಿ ಪುರುಷರು, ನನ್ನ ಪ್ರಕಾರ) ಒಂದು ವಿಚಿತ್ರವಾದ ಮಾನಸಿಕ ಗುಣವಿದೆ; ಅವರು ಭಾರತವು ಮಹಾನ್ ದೇಶವಾಗಬೇಕೆಂದು – ಒಂದು ಸೂಪರ್ ಪವರ್ – ಹಾಗೂ ಭಾರತಕ್ಕೆ ಅಷ್ಟು ಪ್ರಶಂಸೆ ಮತ್ತು ಗೌರವ ಸಿಗಲಿಲ್ಲವೆಂದು ಅಳಲುತ್ತಾರೆ. ಈ ಅಸಮಾಧಾನ – ಭಾರತ ತಾನು ಅರ್ಹವಾದಷ್ಟು ಪಡೆಯುತ್ತಿಲ್ಲ ಎನ್ನುವುದು – ಒಂದೆರಡು ಸ್ವರೂಪಗಳನ್ನು ತಾಳುತ್ತದೆ. ಒಂದು ನೀವು ಭಾರತವು ಹಿಂದೆ ಮಹಾನ್ ದೇಶವಾಗಿತ್ತೆನ್ನುತ್ತೀರಿ – ನಾವು ಶೂನ್ಯವನ್ನು ಆವಿಷ್ಕರಿಸಿದೆವೆಂದು ಹಾಗೂ ನಾವು ಪ್ಲಾಸ್ಟಿಕ್ ಸರ್ಜರಿ ಕಂಡುಹಿಡಿದಿದ್ದೆವೆಂದು – ಅಥವಾ ಪಾಪಿ ನೆಹರೂ ಒಬ್ಬರಿಲ್ಲದಿದ್ದರೆ ಭಾರತ ಮಹಾನ್ ದೇಶವಾಗುತ್ತಿತ್ತೆಂದು ಹೇಳುತ್ತೀರಿ. ಇವತ್ತಿನ ಸಮಸ್ಯೆಗಳನ್ನು ನೀವು ಎಂದೋ ಗತಿಸಿದ ಮನುಷ್ಯನ ಮೇಲೆ ಆರೋಪಿಸುತ್ತೀರಿ. ಎಪ್ಪತ್ತು ವರ್ಷಗಳ ಹಿಂದೆ ಏನಾಯಿತೋ ಅದು ಇಂದಿನ ಭಾರತ ಮಹಾನ್ ಆಗದಿರಲು ಕಾರಣ!
ಇದು ಒಂದು ಪ್ರಶ್ನೆಯನ್ನೇಳಿಸುತ್ತದೆ, ಇಷ್ಟೆಲ್ಲಾ ವರ್ಷಗಳು ನೀವು ಏನು ಮಾಡುತ್ತಿದ್ದಿರಿ? (ನಗುತ್ತಾ). ಹಾಗಾಗಿ ಯುವ ಭಾರತೀಯರು ಹೊಂದಿರುವ ಮಾನಸಿಕ ಸ್ಥಿತಿ ಬಹು ವಿಚಿತ್ರವಾದದ್ದು – ತಮ್ಮ ದೇಶ ಮಹಾನ್ ಆಗಬೇಕೆಂದು ಅವರು ತೀವ್ರವಾಗಿ ಬಯಸುವುದು. ನೋಡಿ, ಅವರು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ನೌಕರಿಗಳಲ್ಲಿರುತ್ತಾರೆ, ನಾನು ಬೆಳೆಯುತ್ತಿದ್ದಾಗಿನ ಸಕಾಲಕ್ಕಿಂತ ಹೆಚ್ಚು ಗೋಳೀಕೃತ ಸನ್ನಿವೇಶದಲ್ಲಿ ಅವರು ಬದುಕುತ್ತಿದ್ದಾರೆ. ನಾನು ಬೆಳೆದದ್ದು ಡೆಹ್ರಾಡೂನ್‍ನಲ್ಲಿ, ಓದಿದ್ದು ದೆಹಲಿಯಲ್ಲಿ, ನಾನು ಮೊದಲು ವಿದೇಶಕ್ಕೆ ಪಯಣಿಸಿದಾಗ ನನಗೆ ೩೦ ವರ್ಷ – ಈಗ ಈ ಯುವ ಭಾರತೀಯರು ಬೇರೆ ಜನರೊಂದಿಗೆ ಓಡಾಡುತ್ತಿದ್ದಾರೆ, ಹಾಗೂ ಅವರು ಹೇಳುವುದು ಒಬ್ಬ ಫ್ರೆಂಚ್ ನನಗಿಂತ ಏಕೆ ಉತ್ತಮನಾಗಿರಬೇಕು ಅಥವಾ ಒಬ್ಬ ಚೈನಾದವನೇಕೆ ಹೆಚ್ಚು ಗೌರವ ಗಳಿಸಬೇಕು – ಇದು ನೆಹರೂರವರಿಂದಲೇ ಇರಬೇಕು. ಹಾಗಾಗಿ ನೀವು ಹೇಳುವುದು ಸರಿ – ಭಾಗಶಃ ಇದು ಮಾನವೀಯ ವಿಷಯಗಳ ಶಿಕ್ಷಣದ ಗುಣಮಟ್ಟ ಉತ್ತಮವಾಗಿಲ್ಲದಿರುವುದರಿಂದ, ಭಾಗಶಃ ಕಾಂಗ್ರೆಸ್ ಪಕ್ಷವು ತಾನೇ ತಿರುಚಲ್ಪಟ್ಟ ಇತಿಹಾಸವನ್ನು ಮಂಡಿಸಿದ್ದರಿಂದ, ಹಾಗೂ ಭಾಗಶಃ ಇದು ಯುವ ಭಾರತೀಯರಲ್ಲಿರುವ ಒಂದು ಬಗೆಯ ಹತಾಶೆಯಿಂದ; ನಮ್ಮ ಇಂದಿನ ದೌರ್ಭಾಗ್ಯಕ್ಕೆ ಇನ್ನೊಬ್ಬರನ್ನು ದೂರುವ ಮನಸ್ಥಿತಿ. ಸಾಮಾಜಿಕ ಮಾಧ್ಯಮವು ನಿಮ್ಮ ಹತಾಶೆಯನ್ನು ಹೊರಗೆಡುವ ಹಾಗೂ ನಿಮ್ಮ ಸ್ವಂತ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅನುವು ಮಾಡುವ ಒಂದು ಮಾರ್ಗ – ನೀವು ನಿಮ್ಮದೇ ಭವಿಷ್ಯದ, ನಿಮ್ಮ ಸಮುದಾಯದ, ದೇಶದ ಭವಿಷ್ಯದ ಜವಾಬ್ದಾರಿಯನ್ನು ಸ್ವಂತ ಹೊರುವುದಿಲ್ಲ; ನೀವು ಸಮಸ್ಯೆಗಳನ್ನು ಬೇರೆ ಯಾರ ಮೇಲಾದರೂ ದೂರುತ್ತೀರಿ. ಇದು ಒಂದು ವಿಚಿತ್ರ ವಿದ್ಯಮಾನ – ಆಹ್ಲಾದಕರವಲ್ಲದ್ದು.
ಬಹಳವಾಗಿ. ನೆಹರೂ – ಗಾಂಧಿ ಕುಟುಂಬದ ಕಾರಣದಿಂದ, ಆದರೆ ಗಾಂಧಿ ಏಕೆಂದು ಅರ್ಥವಾಗುವುದು ಕಷ್ಟ. ಗಾಂಧಿಯನ್ನು ಮೆಚ್ಚುವಂತಹ ಇನ್ನೂ ಹಲವರಿದ್ದಾರೆ; ಇದು ಹೆಚ್ಚು ಸಂಕೀರ್ಣವಾಗಿದೆ. ಮೆಚ್ಚುವವರು ಬಹಳಷ್ಟು ಮಂದಿಯಾದರೆ, ನಿಂದಿಸುವವರೂ ಬಹಳಷ್ಟು ಮಂದಿ. ಭಾಗಶಃ ಇದು ಎಲ್ಲವನ್ನು ಒಮ್ಮೆಯೇ ಬದಲಾಯಿಸಬೇಕೆನ್ನುವ ಯುವಕರ ಚಿಂತನೆಗಳಿಂದಾಗುತ್ತಿರಬಹುದು. ಗಾಂಧಿ ಅಹಿಂಸೆಯನ್ನು, ಹೊಂದಾಣಿಕೆಯನ್ನು ನಂಬಿದ್ದರು, ಒಂದೊಂದೇ ಹೆಜ್ಜೆಯಿಡುತ್ತ ಸಾಗುವುದನ್ನು ನಂಬಿದ್ದರು. ಸಶಸ್ತ್ರ ಕ್ರಾಂತಿಯು ನಮಗೆ ಒಂದು ಮಹಾನ್, ವೈಭವಯುತ ದೇಶ ನೀಡಿರುತ್ತಿತ್ತೆಂದು ನೀವು ನಂಬುತ್ತೀರಿ, ಆದರೆ ಸತ್ಯವಾಗಿ ರಾಷ್ಟ್ರಗಳು ಸಶಸ್ತ್ರ ಸಂಘರ್ಷಗಳಿಂದ ಸ್ವಾತಂತ್ರ್ಯ ಪಡೆದಾಗಲೆಲ್ಲ, ಅದು ಇನ್ನಷ್ಟು ತೊಂದರೆ, ಹಿಂಸೆ, ಪ್ರತಿಹಿಂಸೆಗೆ ದಾರಿಮಾಡಿದೆ – ಹಿಂಸೆಯ ಸರಣಿಗಳಿಗೆ. ಗಾಂಧಿಯ ದರ್ಶನವು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವಂತದ್ದಾಗಿತ್ತು – ಮುಸ್ಲಿಮರೊಟ್ಟಿಗೆ, ಮಹಿಳೆಯರೊಟ್ಟಿಗೆ ಸಾಗುವುದು, ದಲಿರ ವಿಮೋಚನೆ. ಗಾಂಧಿ, ಅಂಬೇಡ್ಕರ್, ಪಟೇಲ್, ನೆಹರೂ, ಬೋಸ್ ಇವರೆಲ್ಲ ಒಟ್ಟಿಗೆ ಪೂರಕವಾದ ಪಾತ್ರಗಳನ್ನು ವಹಿಸಿದ್ದರೆಂದು ನಾವು ಮರೆಯುತ್ತಿದ್ದೇವೆ ಎನ್ನುವುದು ನನ್ನ ಅನಿಸಿಕೆ. ಅವರಲ್ಲಿ ಭಿನ್ನಾಭಿಪ್ರಾಯಗಳಿದ್ದಿರಬಹುದು… ನೋಡಿ, ಯಾವುದೇ ಸಂದರ್ಭದಲ್ಲಾಗಲಿ, ಗೆಳೆಯರ ನಡುವೆ ಭಿನ್ನಾಭಿಪ್ರಾಯಗಳಿರುತ್ತವೆ – ಯಾವುದೇ ಯಶಸ್ವಿ ಕಂಪನಿಯನ್ನು ತೆಗೆದುಕೊಳ್ಳಿ, ಇನ್ಫೋಸಿಸ್ ಎನ್ನೋಣ, ನಾರಾಯಣ ಮೂರ್ತಿ, ನಿಲೇಕಣಿ, ಗೋಪಾಲಕೃಷ್ಣನ್ ಅವರಲ್ಲಿ ಭಿನ್ನಾಭಿಪ್ರಾಯಗಳಿದ್ದವೆಂದು ನಾನು ನಿಶ್ಚಯವಾಗಿ ಹೇಳಬಲ್ಲೆ, ಆದರೆ ಅವರಿಗೆ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿತ್ತು. ಹಾಗೂ ಇದುವೇ ಅಂದಿನ ಕಾಂಗ್ರೆಸ್ ಪಕ್ಷದ ಹಿರಿಮೆಯಾಗಿತ್ತು.
ಬೋಸ್, ಕಾಂಗ್ರೆಸ್ ಅನ್ನು ತೊರೆದ ಮೇಲೆಯೂ ಗಾಂಧಿಯನ್ನು ಮೆಚ್ಚುತ್ತಿದ್ದರು. ಹಿಂಸೆ ಅಥವಾ ಅಹಿಂಸೆಯ ಪ್ರಶ್ನೆಯಲ್ಲಿ ಅವರಿಗೆ ಭಿನ್ನ ನಿಲುವಿತ್ತು. ಹಾಗಾಗಿ ಅವರು ಕಾಂಗ್ರೆಸ್ ಬಿಟ್ಟು ಜಪಾನಿಗೆ ತೆರಳಿದರು, ಜಪಾನಿನ ಸರ್ಕಾರದ ಬೆಂಬಲದೊಂದಿನೆ ಇಂಡಿಯನ್ ನ್ಯಾಶನಲ್ ಆರ್ಮಿ ಅನ್ನು ನಡೆಸಿದರು. ಅವರು ತಮ್ಮ ಸೈನ್ಯದ ದಳಗಳಿಗೆ ನೀಡಿದ ಹೆಸರಾದರೂ ಏನು? ಗಾಂಧಿ ದಳ, ನೆಹರೂ ದಳ ಹಾಗೂ ಮೌಲಾನಾ ಆಜಾದ್ ದಳಗಳೆಂದು. ನಾಲ್ಕನೇ ದಳವೊಂದಕ್ಕೆ ಅವರದ್ದೇ ಹೆಸರನ್ನಿಟ್ಟುಕೊಂಡರು. ಅವರು ಅದಕ್ಕೆ ಸಾವರ್ಕರ್ ಅಥವಾ ಗೋಲ್ವಾಳ್‍ಕರ್ ಹೆಸರಿಡಲಿಲ್ಲ. ಇದಲ್ಲದೆ, ಅವರು ಆಜಾದ್ ಹಿಂದ್ ಫೌಜ್‍ನಿಂದ ಮಾಡಿದ ಬಾನುಲಿ ಬಿತ್ತರಗಳಲ್ಲಿ ಗಾಂಧೀಜಿಯವರನ್ನು ಮೊದಲ ಬಾರಿಗೆ ‘ದೇಶದ ಪಿತಾಮಹ’ ಎಂದು ಕರೆದರು. ಅವರು ತಮ್ಮ ಬಿತ್ತರವನ್ನು ಸಿಂಗಾಪುರ್, ಮಲಯಾ ಅಥವಾ ಬ್ಯಾಂಕಾಕ್‍ನಲ್ಲಿ ಪ್ರಾರಂಭಿಸಿದ್ದರು, ‘ದೇಶದ ಪಿತಾಮಹ’ರನ್ನುದ್ದೇಶಿಸುವ ಮೂಲಕ. ಗಾಂಧಿ ಪೂನಾದ ಜೈಲಿನಲ್ಲಿದ್ದರು, ಅವರಿಗೆ ಅದನ್ನು ಕೇಳಲಾಗಲಿಲ್ಲ. ಆದರೆ ಬೋಸ್ ಮೊದಲು ವಂದಿಸುವುದು ಅವರನ್ನು. ಅಂತೆಯೇ, ನೆಹರೂ ಮತ್ತು ಪಟೇಲ್ ಒಟ್ಟಿಗೆ ಕೆಲಸ ಮಾಡಿದರು. ಮತ್ತೊಂದು ವಿಚಿತ್ರ ಸಂಗತಿಯೆಂದರೆ ನೆಹರೂ ಅವರನ್ನು ಹಳಿಯಲು ಇವರು ಏನನ್ನು ಬೇಕಾದರೂ ಉಪಯೋಗಿಸುತ್ತಾರೆ, ಮೊದಲು ಪಟೇಲರನ್ನು ಉಪಯೋಗಿಸಿದರು, ಮತ್ತು ನಂತರ ಬೋಸರನ್ನು. ಆದರೆ, ವಾಸ್ತವದಲ್ಲಿ ಬೋಸ್ ಮತ್ತು ಪಟೇಲರು ಪರಸ್ಪರ ದ್ವೇಷಿಸುತ್ತಿದ್ದರು! ಬೋಸರನ್ನು ಕಾಂಗ್ರೆಸ್‍ನ ಅಧ್ಯಕ್ಷತೆಯಿಂದ ವಜಾಗೊಳಿಸಿದ್ದು ಪಟೇಲರು.
ಹಾಗಾಗಿ ಈ ನಿಲುವುಗಳು ವೈರುಧ್ಯಗಳನ್ನುಳ್ಳದ್ದು – ಇವರು ಅಂದಿನ ಸಂಕೀರ್ಣತೆಯನ್ನು ಅರ್ಥ ಮಾಡಿಕೊಂಡಿಲ್ಲ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಗಾಂಧಿ, ನೆಹರೂ, ಅಂಬೇಡ್ಕರ್, ಪಟೇಲರಂತರವರ ಮುಂದಿದ್ದ ಕಾರ್ಯದ ಕಠಿಣತೆಯನ್ನು ಅವರು ಗುರುತಿಸುತ್ತಿಲ್ಲ – ವಿಭಿನ್ನ ರೀತಿಯ ಜನರನ್ನು ಒಟ್ಟಿಗೆ ತರುವುದು, ಪ್ರಜಾಸತ್ತೆಯ ನೆನಪೇ ಇಲ್ಲದ ಸಮಾಜಕ್ಕೆ, ಆಯ್ಕೆಯ ಸ್ವಾತಂತ್ರ್ಯವನ್ನೇ ಅರಿಯದಿದ್ದ ಸಮಾಜಕ್ಕೆ ಪ್ರಜಾಪ್ರಭುತ್ವದ ಆಕಾರ ನೀಡುವುದು, ಗಾಢವಾಗಿ ಪುರುಷಪ್ರಧಾನವಾಗಿದ್ದ ಸಮಾಜದಲ್ಲಿ ಮಹಿಳೆಯರಿದೆ ಸಮಾನ ಹಕ್ಕುಗಳನ್ನು ನೀಡುವುದು, ಜಾತಿ ಭೇದದ ವಿರುದ್ಧ ಕನಿಷ್ಟ ಪಕ್ಷ ಹೋರಾಡುವುದು, ದಲಿತರ ಹಾಗೂ ಆದಿವಾಸಿಗಳ ಕುರಿತು ಸಕಾರಾತ್ಮಕ ಕಾರ್ಯಗಳನ್ನು ನಡೆಸುವುದು.. ಇದೊಂದು ಅಸಾಧಾರಣ ಸಾಧನೆ. ಅಂದರೆ, ನೀವು ನಮ್ಮ ಸುತ್ತಲಿನ ದೇಶಗಳನ್ನು ನೋಡಿದರೆ, ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ನೇಪಾಳ ಹೇಗೆ ಇವೆಯೆಂದು, ಈ ದೇಶವನ್ನು ನಿರ್ಮಿಸುವುದರಲ್ಲಿ ನೆಹರೂ ಹಾಗೂ ಪಟೇಲರ ಪಾತ್ರವನ್ನು ನೀವು ಪ್ರಶಂಸಿಸುತ್ತೀರಿ.
ಚಿತ್ರ : ರಾಜೇಶ್ ಸುಬ್ರಮಣಿಯನ್, ಆನಂದ್ ಮುರಳಿ (ಫ್ಯಾಕ್ಟರ್ ಡೈಲಿ )
ನನಗನ್ನಿಸುವ ಹಾಗೆ, ಇದು ಕೇವಲ ಇತ್ತೀಚಿಗಷ್ಟೇ ಸತ್ಯ ಹಾಗೂ ಇದನ್ನುಂಟು ಮಾಡಿದ್ದು ಸಾಮಾಜಿಕ ಮಾಧ್ಯಮ. ಸಾಮಾಜಿಕ ಮಾಧ್ಯಮವು ಈ ಕಪ್ಪು ಬಿಳುಪಿನ ಗ್ರಹಿಕೆಯನ್ನು ಸೃಷ್ಟಿಸಿದೆ. ಸೂಕ್ಷ್ಮತೆಯೇ ಇಲ್ಲವಾಗಿದೆ. ನಾನು ಮೊದಲೇ ಹೇಳಿದಂತೆ, ಭಾರತದ ಇತಿಹಾಸವನ್ನು ತಿರುಚುವ ಪ್ರಯತ್ನದಲ್ಲಿ ಕಾಂಗ್ರೆಸ್ ಮೂಲ ಅಪರಾಧಿ, ಹಾಗೂ ನಂತರ ಇದನ್ನು ಇನ್ನೂ ದೂರಕ್ಕೆ ಕೊಂಡೊಯ್ಯಲಾಯಿತು. ಆದರೆ ನೀವು ಹೇಳುವ ಈ ಬಗೆಯ ಬೈನರಿ ಚಿಂತನೆಯನ್ನು ಹುಟ್ಟಿಸುವಲ್ಲಿ, ಬಿಜೆಪಿಯ ಕಿಡಿಗೇಡಿಗಳು ಮೂಲ ಅಪರಾಧಿಗಳಾಗಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆಂದು ನಿರ್ಧರಿಸಿದ ನಂತರ ಮಾಡಲಾದ ಟ್ವಿಟ್ಟರ್ ಹಾಗೂ ಇತರ ಸಾಮಾಜಿಕ ಮಾಧ್ಯಮ ಸೇನೆಗಳು ನಡೆಸಿದ ಕಾರ್ಯಾಚರಣೆ ಬಹಳ ಕಹಿಯಾದದ್ದು. ಈ ಸೈಬರ್ ಗೂಂಡಾಗಳ ಗ್ರಹಿಕೆಯಲ್ಲಿ ನೀವು ನರೇಂದ್ರ ಮೋದಿಯವರನ್ನು ಬೆಂಬಲಿಸದಿದ್ದರೆ ಗಾಂಧಿ ಕುಟುಂಬದ ಚಮಚಾಗಳಾಗಿರುತ್ತಿದ್ದಿರಿ. ಇಡೀ ಸನ್ನಿವೇಶ ಬಹಳ ಕಪ್ಪು ಬಿಳುಪಿನಂತಾಗಿತ್ತು. ವಾಸ್ತವದಲ್ಲಿ, ನೀವು ನರೇಂದ್ರಮೋದಿಯವರನ್ನು ಬೆಂಬಲಿಸದವರಾಗಿ, ಕಾಂಗ್ರಸ್ ಪಕ್ಷವನ್ನೂ ಟೀಕಿಸುವವರಾಗಿರಬಹುದು, ನೀವು ಕೆಲವು ಆಯ್ದ ಪ್ರಶಂಸೆಯನ್ನೂ ಮೋದಿಯವರ ಬಗೆಗೆ ಹೊಂದಿದ್ದಿರಬಹುದು. ಆದರೆ ಇವೆಲ್ಲ ಸೂಕ್ಷ್ಮತೆಗಳು ಕಳೆದು ಹೋಗಿದ್ದವು. ಮೋದಿ ತಾವು ಪ್ರಧಾನಿಯಾಗ ಬಯಸುತ್ತೇನೆಂದು ನಿರ್ಧರಿಸಿ ೨೦೧೩ರಲ್ಲಿ ಜೊತೆ ತಂದ ಸೈಬರ್ ಸೇನೆಯಿದೆಯಲ್ಲ, ಅದೊಂದು ವ್ಯವಸ್ಥೆಯ ಕಾರ್ಯಾಚರಣೆ. ಇವತ್ತಿಗೂ, ಅದನ್ನು ಪ್ರಧಾನ ಮಂತ್ರಿಯ ಕಛೇರಿ(ಪಿಎಂಒ)ಯಿಂದ ಮಾರ್ಗದರ್ಶಿಸಲಾಗುತ್ತಿದೆ. ಇವತ್ತಿಗೂ ಪಿಎಂಒ ಇದನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಕಾರ್ಯಾಚರಣೆ ಸಫಲವೂ ಆಗಿದೆ.
ನೋಡಿ, ಬಹಳ ಮಂದಿ ನರೇಂದ್ರ ಮೋದಿಯವರಿಗೆ ಓಟು ನೀಡಿದ್ದು ಹಿಂದುತ್ವವನ್ನು ನಂಬಿ ಅಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷದ ಕುರಿತಾಗಿ ಅವರಲ್ಲಿ ಮೂಡಿದ್ದ ಹೇಸಿಗೆಯಿಂದ. ಮೋದಿ ತಮ್ಮ ಒಡೆದು ಆಳುವ ರೀತಿಯಿಂದ ಹೊರಬಂದಿದ್ದಾರೆಂದೂ, ಗುಜರಾತ್‍ನ ಕೋಮು ಗಲಭೆಯನ್ನು ಇತಿಹಾಸದಲ್ಲಿಟ್ಟು ಮುಂದೆ ಬಂದಿದ್ದಾರೆಂದೂ, ಅವರು ಅಭಿವೃದ್ಧಿಪರ ವ್ಯಕ್ತಿ, ಅವರು ಉದ್ಯೋಗ, ಅವಕಾಶಗಳು, ಬೆಳವಣಿಗೆಯನ್ನು ತಂದಾರು… ಹಾಗೂ ಇವೆಲ್ಲದರ ಜೊತೆಗೆ ಅವರು ವಿಮೋಚಕರೆನ್ನುವಂತಹ ಚಿತ್ರಣವಿದ್ದು, ಯಾರೇ ಅವರ ಬಗ್ಗೆ – ಟೀಕಿಸುವುದು ಅಥವಾ ಎದುರಾಳಿಯಾಗುವುದು ಹಾಗಿರಲಿ – ಸ್ವಲ್ಪವೇ ಸಂಶಯವನ್ನು ಕಾಯ್ದಿರಿಸಿದ್ದರೂ ಅವರು ಕಾಂಗ್ರೆಸ್‍ನ ಚಮಚಾಗಳಾಗಿ ವ್ಯಾಖ್ಯಾನಿಸಲ್ಪಡುತ್ತಿದ್ದರು. ಹಾಗೂ ಇದು ಚರ್ಚೆಯನ್ನು ಅಶ್ಲೀಲವೂ, ಚಾರಿತ್ರ್ಯರಹಿತವೂ ಆಗಿಸಿ ಕೀಳಾಗಿಸಿದವು. ಹಾಗೂ ಇವೆಲ್ಲವೂ ಶುರುವಾದದ್ದು ಅಲ್ಲಿ(೨೦೧೩ರಲ್ಲಿ). ನರೇಂದ್ರ ಮೋದಿಯವರಿಗೆ ಶಾಸನಗಳನ್ನು ಅಂಗೀಕೃತವಾಗಿಸುವಲ್ಲಿ ಯಾಕಿಷ್ಟು ಕಷ್ಟವಾಗುತ್ತಿದೆ? ಯಾಕೆಂದರೆ ಅವರು ವಿರೋಧಿಗಳನ್ನು, ತಮ್ಮ ಪ್ರಚಾರದ ಸಮಯದಲ್ಲಿ ಎಲ್ಲ ರೀತಿಯ ಹೆಸರುಗಳಿಂದಲೂ ಕರೆದರು. ಇದನ್ನು ಅವರ ಟ್ವಿಟ್ಟರ್ ಸೇನೆಯು – ಬಹಳ ಕಾಳಜಿ ಮೂಡುವಂತೆ, ಕಾಡುವ ರೀತಿಯಲ್ಲಿ – ಸಾಧ್ಯವಾಗಿಸಿ, ಮುಂದಕ್ಕೆ ಒಯ್ದವು. ಎಲ್ಲ ಬಗೆಯ ಸೂಕ್ಶ್ಮತೆಗಳು ಹಾಗೂ ಸಂಕೀರ್ಣತಗಳು ಕಾಣೆಯಾದವು.
ಪ್ರತಿ ವ್ಯಕ್ತಿಯೂ ಒಳ್ಳೆಯ ಹಾಗೂ ಕೆಟ್ಟ ಗುಣಗಳ ಮಿಶ್ರಣವಾಗಿರುತ್ತಾರೆ. ಹಾಗೆಯೇ, ಪ್ರತಿಯೊಂದು ಸಾಮಾಜಿಕ ಪ್ರಕ್ರಿಯೆ – ಉದಾಹರಣೆಗೆ, ಸ್ಮಾರ್ಟ್‍ಫೋನ್‍ಗಳು – ಕೆಲವು ಒಳಿತನ್ನು,ಕೆಲ ಕೆಡುಕನ್ನೂ ತರುತ್ತದೆ. ಇತಿಹಾಸ ಮತ್ತು ಸಮಾಜ ಈ ರೀತಿಯ ಸಂಕೀರ್ಣತೆ ಹಾಗೂ ಸೂಕ್ಷ್ಮತೆಯ ಕುರಿತಾಗಿವೆ; ಅಪರೂಪಕ್ಕೆ ಮಾತ್ರ ಸಂಗತಿಗಳು ಕಪ್ಪು ಬಿಳುಪಾಗಿರುತ್ತವೆ. ಹಿಟ್ಲರ್ ನಿಸ್ಸಂಶಯವಾಗಿ ಕರಾಳ ಹಾಗೂ ದುಷ್ಟನಾಗಿದ್ದ, ಆದರೆ ಇದು ಬಹಳ ವಿರಳ. ಬಹುತೇಕ ಐತಿಹಾಸಿಕ ವ್ಯಕ್ತಿಗಳು ಹೀಗಲ್ಲ – ಅವರು ಎಲ್ಲ ರೀತಿಯ ವಿಚಾರಗಳ ಸಂಯೋಜನೆಯಾಗಿರುತ್ತಾರೆ. ಅವರು ಕೆಲವೊಮ್ಮೆ ಧೈರ್ಯಶಾಲಿಯಾಗಿರಬಹುದು, ಕೆಲವು ಸಂದರ್ಭಗಳಲ್ಲಿ ಹೇಡಿಗಳಾಗಿರಬಹುದು, ಕೆಲವೊಮ್ಮೆ ದೂರದೃಷ್ಟಿಯುಳ್ಳವರೂ ಕೆಲವೊಮ್ಮೆ ಅವಕಾಶವಾದಿಗಳೂ ಆಗಿರಬಹುದು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಎಲ್ಲ ಸೂಕ್ಷ್ಮತೆಗಳು ಕಳೆದು ಹೋಗುತ್ತವೆ.
ಆದರೆ ಇದೇ ಸಂದರ್ಭದಲ್ಲಿ ಯುವ ಭಾರತೀಯರೀಗೆ ಇತಿಹಾಸದಲ್ಲಿ ಆಸಕ್ತಿ ಇದೆಯೆಂದೂ ನಾನು ಹೇಳಬಯಸುತ್ತೇನೆ. ಅವರು ಗಂಭೀರ, ಆಲೋಚನೆಗಳುಳ್ಳ ಬರಹಗಳನ್ನು ಓದಬಯಸುತ್ತಾರೆ, ಆದರೆ ಸಾಮಾಜಿಕ ಮಾಧ್ಯಮ ನಮ್ಮ ದೇಶದ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ಉತ್ತಮ ವಿಧಾನವಲ್ಲ. ೧೪೦ ಅಕ್ಷರಗಳಲ್ಲಿ ನಿಮಗೆ ಯಾವುದರ ಸತ್ಯವೂ ದೊರೆಯಲಾರದು. ಈ ಸಂದರ್ಭ ಕೊನೆಯಾಗುತ್ತದೆ ಹಾಗೂ ಸಮತೋಲನ ಮರಳುತ್ತದೆ ಎಂದು ಆಶಿಸಬಹುದಷ್ಟೇ, ಆದರೆ ಹೀಗೆ ಚಿಂತನ ಹಾಗೂ ಚರ್ಚೆಗಳನ್ನು ಧೃವೀಕರಿಸುತ್ತಿರುವುದು ಬಹಳವೇ ಹಾನಿ ಉಂಟುಮಾಡುವಂತಹದ್ದು.
ಆತನನ್ನು ಆರಾಧಿಸುತ್ತಾರೆಂಬುದು ನಿಜವೇನು? ಇದು ನನ್ನ ಅರಿವಿಗೆ ಬಂದಿರಲಿಲ್ಲ… ನೋಡಿ, ಗೋಡ್ಸೆ ಒಬ್ಬ ಸಂಕೀರ್ಣ ಹಾಗೂ ಸಿಡುಕಿನ ಯುವಕನಾಗಿದ್ದ. ಅವನು ಆರ್‍ಎಸ್ಸೆಸ್ ಸೇರಿ ಅದನ್ನು ತೊರೆದ, ನಂತರ ಹಿಂದೂ ಮಹಾಸಭಾ ಸೇರಿದ, ಆತ ಅಲ್ಲಿಯೂ ಅತೃಪ್ತನಾಗಿದ್ದ. ಆತ ಹಿಂದೂ ಶ್ರೇಷ್ಠತೆಯ ಪ್ರತಿಪಾದಕನಾಗಿದ್ದ. ೧೯೪೦ರ ದಿನಗಳ ಆತನ ಬಹುತೇಕ ಬರಹಗಳಲ್ಲಿ – ಆತ ೧೯೪೦ರ ದಿನಗಳಲ್ಲಿ ಒಂದು ಪತ್ರಿಕೆಯನ್ನು ಸಂಪಾದಿಸುತ್ತಿದ್ದ – ಆತ ಮುಸ್ಲಿಮರನ್ನು ಹೀಗೆಳೆಯುತ್ತ ಹಿಂದೂಗಳನ್ನು ವೈಭವೀಕರಿಸುತ್ತಿದ್ದ. ವಿಭಜನೆಯ ನಂತರ ಗಾಂಧಿಯ ಕುರಿತಾದ ಆತನ ಮುಖ್ಯ ಟೀಕೆಯೆಂದರೆ, ಗಾಂಧಿ ಭಾರತದಲ್ಲಿ ಮುಸ್ಲಿಮರು ಶಾಂತಿಯಲ್ಲಿ ಹಾಗೂ ಮರ್ಯಾದಯುತವಾಗಿ ಬದುಕಲೆಂದು ಬಯಸಿದ್ದು. ಹಾಗಾಗಿ ಇದೊಂದು ಮೂಲಭೂತವಾದ, ವೈಚಾರಿಕ ಸಂಘರ್ಷ. ಒಂದು ಕಡೆಯಲ್ಲಿ ಗಾಂಧಿ ಹಾಗೂ ನೆಹರೂ ‘ಪಾಕಿಸ್ತಾನ ತನ್ನ ಅಲ್ಪಸಂಖ್ಯಾತರನ್ನು ಹೇಗೇ ನಡೆಸಿಕೊಳ್ಳಲಿ, ಭಾರತದಲ್ಲಿ ಹಿಂದೂ ಮುಸ್ಲಿಮ್ ಸಿಖ್ ಕ್ರಿಶ್ಚಿಯನ್ ಎಲ್ಲರೂ ಸಮಾನರು, ಅಂತೆಯೇ ಪುರುಷ ಮತ್ತು ಮಹಿಳೆ, ದಲಿತ ಮತ್ತು ಬ್ರಾಹ್ಮಣ ಎಲ್ಲರೂ ಸಮಾನರು’ ಎಂದು ಹೇಳುತ್ತಿದ್ದರು. ಇದು ಬಹಳ ದೂರದೃಷ್ಟಿಯುಳ್ಳ ನಡೆ. ಆದರೆ ಹಿಂದುತ್ವದ ಮನೋಭಾವ ಪ್ರತೀಕಾರದ್ದಾಗಿತ್ತು. ‘ಹಿಂದೂಗಳನ್ನು ಪಾಕಿಸ್ತಾನದಲ್ಲಿ ಕೆಟ್ಟದಾಗಿ ನಡೆಸಿಕೊಂಡಲ್ಲಿ ನಾವು ಭಾರತದಲ್ಲಿ ಒಬ್ಬ ಮುಸ್ಲಿಮರನ್ನೂ ಬದುಕಲು ಬಿಡಲಾರೆವು’ ಎನ್ನುವುದಾಗಿತ್ತು.
ಹಾಗೂ ಈ ಸಂಘರ್ಷ ಮುಂದುವರೆಯುತ್ತಿದೆ.. ಇದು ಭಾರತೀಯರು ಮಾಡಿಕೊಳ್ಳಬೇಕಾದಂತಹ ಆಯ್ಕೆ. ನೀವು ಬಯಸುವುದು ಎಲ್ಲರನ್ನೊಳಗೊಳ್ಳುವ, ಸಹಿಷ್ಣು ಸಮಾಜವನ್ನೋ ಅಥವಾ ಹಿಂದು ಪಾಕಿಸ್ತಾನವನ್ನೋ? ಪಾಕಿಸ್ತಾನ ತನ್ನ ಅಲ್ಪಸಂಖ್ಯಾತರನ್ನು ಹಿಂಸಿಸಿದಂತೆ, ಹೊರಗೆಸೆದಂತೆ, ಪಾಕಿಸ್ತಾನವು ಕ್ರಿಶ್ಚಿಯನ್ನರನ್ನು ನಡೆಸಿಕೊಳ್ಳುತ್ತಿರುವಂತೆ, ಅಲ್ಲಿ ಶಿಯಾಗಳು ಎರಡನೇ ದರ್ಜೆಯ ಸ್ಥಾನಮಾನ ಹೊಂದಿರುವಂತೆ(ವಿಪರ್ಯಾಸವೆಂದರೆ ಜಿನ್ನಾ ಶಿಯಾ ಆಗಿದ್ದರು) – ನೀವು ಆ ಮಾರ್ಗದಲ್ಲಿ ಸಾಗಲು ಬಯಸುತ್ತೀರಾ?
ಆದರೆ ಗೋಡ್ಸೆಯನ್ನು ವೈಭವೀಕರಿಸಲಾಗುತ್ತಿದೆಯೆಂದು ನನಗೆ ಆಶ್ಚರ್ಯವಾಗುತ್ತದೆ.
ಬೋಸ್ ಒಬ್ಬ ಕುತೂಹಲಕಾರಿ, ವರ್ಚಸ್ವಿ ವ್ಯಕ್ತಿ; ಅವರ ಸಾವಿನ ಬಗ್ಗೆ ರಹಸ್ಯವಿದೆ ಹಾಗೂ ಅವರು ಬ್ರಿಟಿಷ್ ಗುಪ್ತಚರರ ವ್ಯಾಪ್ತಿಯಿಂದ ಹೊರಗುಳಿದ ಬಗ್ಗೆ ರೋಮಾಂಚನವಿದೆ. ಹಾಗೂ ಅವರು ಒಬ್ಬ ದೊಡ್ಡ ದೇಶಪ್ರೇಮಿಯಾಗಿದ್ದರು. ಮುಂಚೆ ಬೆಂಗಾಲಿಗಳಿಗೆ ಹೀರೋ ಆಗಿದ್ದ ಅವರು ಈಗ ಬಂಗಾಳವನ್ನು ಮೀರಿದ್ದಾರೆ. ಅವರನ್ನು ಮೆಚ್ಚುವ ಜನ ಎಲ್ಲ ಕಡೆಯಿದ್ದಾರೆ. ಆದರೂ, ಅವರಲ್ಲಿ ಕೆಲವು ಅಹಿತಕಾರಿ ಗುಣಗಳಿದ್ದವು, ಉದಾಹರಣೆಗೆ ಅವರೊಬ್ಬ ಸರ್ವಾಧಿಕಾರಿಯಾಗಿದ್ದರು; ಭಾರತಕ್ಕೆ ೨೦ ವರ್ಷಗಳ ಸರ್ವಾಧಿಕಾರ ಅಗತ್ಯವಿದೆಯೆಂದು ಅವರು ನಂಬಿದ್ದರು. ಆದರೆ ಅವರು ಮಹಾನ್ ದೇಶಪ್ರೇಮಿಯಾಗಿದ್ದರು, ಹಾಗೂ ಅವರು ಹಿಂದೂ ಮುಸ್ಲಿಮ್ ಸಾಮರಸ್ಯದಲ್ಲಿ ಮತ್ತು ಸ್ತ್ರೀ ವಿಮೋಚನೆಯಲ್ಲಿ ಸಂಪೂರ್ಣವಾಗಿ ನಂಬಿಕೆಯಿಟ್ಟಿದ್ದರು. ಈ ಎರಡು ಸಂಗತಿಗಳು ಅವರ ಅತಿ ಮುಖ್ಯ ಸಾಧನೆಗಳು, ಇವು ಆರ್‍ಎಸ್ಸೆಸ್ ಅಭಿಮತಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದ್ದವು. ಆರ್‍ಎಸ್ಸೆಸ್‍ಗೆ ಮಹಿಳೆಯರ ನಿಜವಾದ ಸಮಾನತೆಯಲ್ಲಿ ನಂಬಿಕೆಯಿಲ್ಲ; ಮಹಿಳೆಯರಿಗೆ ಸಮಾಜದಲ್ಲಿ ಅವರದ್ದೇ ಸ್ಥಾನವಿದೆಯೆಂದು ಅವರು ನಂಬುತ್ತಾರೆ – ಮನೆಯೊಳಗಡೆ, ಕುಂಟುಬವನ್ನು ಬೆಳೆಸುತ್ತಿರುವಲ್ಲಿ. ಹಾಗೂ ಆರ್‍ಎಸ್ಸೆಸ್‍ನ ಮತ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರನ್ನು ಎರಡನೇ ದರ್ಜೆಯ ನಾಗರೀಕರನ್ನಾಗಿ ನೋಡುವುದಾಗಿದೆ. ಆರ್‍ಎಸ್ಸೆಸ್‍ನ ಸರ್ವೋಚ್ಛ ನಾಯಕ, ಯಾರ ಪುಸ್ತಕವನ್ನು ಅವರು ಇನ್ನೂ ಬೈಬಲ್ಲಿನಂತೆ ಕಾಣುತ್ತಾರೋ, ವಾದಿಸಿದ್ದು ಭಾರತಕ್ಕೆ ಮೂರು ಅಪಾಯಗಳಿದೆಯೆಂದು – ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಕಮ್ಯುನಿಸ್ಟರು. ಹಾಗಾಗಿ ಅವರಿಗೆ ಭಾರತದ ಕುರಿತು ಬಹಳ ವಾಲಿದ ನಿಲುವಿತ್ತು (ಬೋಸ್ ಈ ನಿಲುವುಗಳನ್ನು ಹೊಂದಿರಲಿಲ್ಲ).
ನನಗೆ ಕೆಲಮಟ್ಟಿಗೆ ಇದರಲ್ಲಿ ಸಹಮತವಿದೆ. ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುತ್ತಿದ್ದ ಮಾರ್ಕಿಸ್ಟ್ ಗುಂಪುಗಳಿದ್ದವೆನ್ನುವುದು ಸತ್ಯ. ಇದು ಕಮ್ಯುನಿಸ್ಟ್ ಪಾರ್ಟಿಯು(ಸಿಪಿಐ) ಇಂದಿರಾ ಗಾಂಧಿಯವರ ಬಹುಮತವನ್ನು ಉಳಿಸಲೆಂದು ಸದನದಲ್ಲಿ ಅವರ ಬೆಂಬಲಕ್ಕೆ ನಿಂತ ಕಾಲದಲ್ಲಿ ಶುರುವಾದದ್ದು. ಇದಕ್ಕೆ ಪ್ರತಿಯಾಗಿ ಇಂದಿರಾ ಗಾಂಧಿಯವರು ಸಿಪಿಐ ಇತಿಹಾಸಜ್ಞರಿಗೆ ಐಸಿಎಚ್‍ಆರ್, ಎನ್‍ಸಿಇಆರ್‍ಟಿ ಇತ್ಯಾದಿಗಳ ನಿಯಂತ್ರಣವನ್ನು ನೀಡಿದರು. ಭಾಗಶಃ ಇದು ಸತ್ಯ ಹಾಗೂ ಇದಕ್ಕೆ ಸವಾಲೊಡ್ಡಬೇಕು. ಈ ಚರ್ಚೆಯನ್ನು ಮುಕ್ತಗೊಳಿಸಬೇಕಿದೆ. ನಾನು ಭಾರತದಲ್ಲಿ ಸಂಪ್ರದಾಯಬದ್ಧ ಬುದ್ಧಿಜೀವಿಗಳು ಏಕಿಲ್ಲವೆಂದು ಹಾಗೂ ಏಕೆ ಇವರ ಅಗತ್ಯವಿದೆಯೆಂದು ಕ್ಯಾರವಾನ್‍ನಲ್ಲಿ ಒಂದು ದೀರ್ಘ ಪ್ರಬಂಧವನ್ನು ಬರೆದಿದ್ದೆ. ಆರೋಗ್ಯಕರ ಪ್ರಜಾಸತ್ತೆ ಹಾಗೂ ಮಂಥನಕ್ಕೆ ಎಡ, ಉದಾರವಾದಿ ಹಾಗೂ ಸಾಂಪ್ರದಾಯಿಕ ಆಲೋಚನೆಗಳ ಅಗತ್ಯವಿದೆ. ವೈವಿಧ್ಯಮಯ ಬೌದ್ಧಿಕ ಮಾರ್ಗಗಳ ಅಗತ್ಯವಿದೆ. ಭಾರತದ ಸಮಸ್ಯೆಯೆಂದರೆ ನಮ್ಮಲ್ಲಿ ಸಂಪ್ರದಾಯಬದ್ಧ ಬುದ್ಧಿಜೀವಿಗಳಿಲ್ಲ, ಹಾಗೂ ಎಲ್ಲಿಯವರೆಗೆ ಆರ್‍ಎಸ್ಸೆಸ್ ಬಲ ಪಂಥೀಯ ಪ್ರಾತಿನಿಧ್ಯತೆಯನ್ನು ಹೊಂದಿರುತ್ತದೋ ಅಲ್ಲಿಯವರೆಗೆ ಇದು ಸಾಧ್ಯವೂ ಇಲ್ಲ – ಏಕೆಂದರೆ ಆರ್‍ಎಸ್ಸೆಸ್ ಆಳದಲ್ಲಿ ಬೌದ್ಧಿಕತೆಯ ವಿರೋಧಿ.
ಬೇರೆ ಯಾವುದೇ ಪ್ರಜಾಸತ್ತಾತ್ಮಕ ದೇಶವಿರಲಿ – ಇಂಗ್ಲೆಂಡ್‍ನಲ್ಲಿ, ಅಮೇರಿಕಾದಲ್ಲಿ, ಜರ್ಮನಿಯಲ್ಲಿ – ಆಧುನಿಕ, ಚಿಂತನಶೀಲ, ಬಲಪಂಥೀಯ ಬುದ್ಧಿಜೀವಿಗಳಿದ್ದಾರೆ. ಇವರು ಆಳವಾದ ಸಂಶೋಧನೆಗೆಯ್ಯುತ್ತಾರೆ, ಸಾಂಪ್ರದಾಯಿಕ ಮೌಲ್ಯಗಳಾದ ಕುಟುಂಬ, ಸಮುದಾಯ, ಸೌಜನ್ಯ, ಸೌಂದರ್ಯದ ಬಗೆಗಳು, ಶಾಸ್ತ್ರೀಯ ಕಲೆ ಹಾಗೂ ಶಾಸ್ತ್ರೀಯ ಸಂಗೀತವನ್ನೇಕೆ ಪ್ರೋತ್ಸಾಹಿಸಬೇಕು… ಇತ್ಯಾದಿ ವಿಷಯಗಳ ಕುರಿತು ಮಾತನಾಡುತ್ತಾರೆ. ಆದರೆ ಸ್ಮೃತಿ ಇರಾನಿ ನಿಮ್ಮ ಶಿಕ್ಶಣ ಮಂತ್ರಿಯಾದಲ್ಲಿ, ಅಥವಾ ಅನುಪಮ್ ಖೇರ್ ನಿಮ್ಮ ಅತಿಮುಖ್ಯ ವಕ್ತಾರರಾದಲ್ಲಿ, ಬುದ್ಧಿಜೀವಿಗಳು ದೊರಕಲಾರರು. ನಿಮಗೆ ಸಾಮಾಜಿಕ ಮಾಧ್ಯಮದ ಅತಿರೇಕದ ವ್ಯಕ್ತಿಗಳಷ್ಟೇ ದೊರೆಯಬಲ್ಲರು.
ಆ ಆರೋಪ ಭಾಗಶಃ ಸತ್ಯ, ಬೌದ್ಧಿಕ ಮಂಥನಗಳಲ್ಲಿ ಎಡ ಪಂಥೀಯರು ಕಪಿಮುಷ್ಟಿ ಹೊಂದಿದ್ದು, ಬಲ ಪಂಥೀಯರಷ್ಟೇ ಅಲ್ಲದೇ ಉದಾರವಾದಿಗಳನ್ನೂ ಹತ್ತಿಕ್ಕಿದ್ದು. ಈಗ ಅದು ಮುಕ್ತಾವಾಗುತ್ತಿದೆ ಹಾಗೂ ಇದು ಒಳ್ಳೆಯದು. ಆದರೆ ಬೌದ್ಧಿಕ ಕೆಲಸವು ಶ್ರಮದಾಯಕವಾದದ್ದು. ಇದು ಸಾಮಾಜಿಕ ಮಾಧ್ಯಮಗಳ ೧೪೦ ಅಕ್ಷರಗಳಂತಲ್ಲ, ದೂರದರ್ಶನದಲ್ಲಿ ಕಾಣಿಸಿಕೊಂಡಂತಲ್ಲ, ಅಂಕಣಗಳನ್ನು ಬರೆದಂತೆಯೂ ಅಲ್ಲ. ಬುದ್ಧಿಜೀವಿಯಾಗಿ ನೀವು ಗುರುತಿಸಲ್ಪಡಬೇಕಾದರೆ, ನೀವು ಗಂಭೀರ ಪ್ರಬಂಧಗಳನ್ನು ಹಾಗೂ ಪುಸ್ತಕಗಳನ್ನು ಬರೆಯಬೇಕಾಗುತ್ತದೆ. ಆದರೆ ಯಾವುದೇ ಬಲಪಂಥೀಯ ಅಥವಾ ಬಿಜೆಪಿ ಸಮರ್ಥಕರು ಇದನ್ನು ಮಾಡಲು ಸಿದ್ಧರಿಲ್ಲ. ಭಾರತದ ಬಲಪಂಥೀಯ ಬುದ್ಧಿಜೀವಿಗಳು ಆಲಸಿಗಳು ಇಲ್ಲವೇ ಸ್ವಮತಾಂಧರು. ಬೌದ್ಧಿಕ ಕೆಲಸ ಶ್ರಮದಾಯಕವಾದದ್ದು – ಇದಕ್ಕೆ ಆಲೋಚನೆ, ಸಂಶೋಧನೆ, ಅವಲೋಕನ, ತಪ್ಪುಗಳನ್ನು ತಿದ್ದಿಕೊಳ್ಳುವ ಗುಣ, ನಮ್ಮ ಗ್ರಹಿಕೆಗಳನ್ನು ವಿಸ್ತರಿಸಿಕೊಳ್ಳಬಲ್ಲ ಮನಸ್ಥಿತಿ, ಭಿನ್ನ ಧ್ವನಿಗಳನ್ನು ಕೇಳಬೇಕಾದ ಗುಣ.. ಇವೆಲ್ಲವೂ ಬೇಕು. ನನ್ನ ಪ್ರತಿಯೊಂದು ಪುಸ್ತಕ ರಚಿಸಲು ಐದಾರು ವರ್ಷಗಳೇ ಹಿಡಿಯುತ್ತವೆ.
ಬಲಪಂಥೀಯರಿಗೆ ಮಾದರಿಯಾಗಬಲ್ಲವರೆಂದರೆ ರಾಜಗೋಪಾಲಾಚಾರಿಯವರು. ಅವರು ಸ್ವತಂತ್ರತಾ ಪಕ್ಷವನ್ನು ಸ್ಥಾಪಿಸಿದರು, ಸರ್ಕಾರದ ಪಾತ್ರವನ್ನು ಕನಿಷ್ಟತಮವಾಗಿಸುವುದರಲ್ಲಿ ನಂಬಿಕೆಯಿಟ್ಟಿದ್ದರು, ಅವರು ಕುಟುಂಬ, ಸಮುದಾಯ ಹಾಗೂ ಸಂಪ್ರದಾಯಗಳ ಪ್ರಾಮುಖ್ಯದಲ್ಲಿ ನಂಬಿಕೆಯಿಡುತ್ತಲೇ ಗಹನವಾದ ಚಿಂತಕರಾಗಿದ್ದರು. ರಾಜಾಜಿ ನಿಮಗೆ ಸ್ಪೂರ್ತಿಯನ್ನು ನೀಡಬಹುದು, ಆದರೆ ಗೋಡ್ಸೆ ಅಥವಾ ಗೋಲ್ವಾಳ್‍ಕರ್ ನೀಡಲಾರರು. ಹಾಗಾಗಿ ಒಟ್ಟಿನಲ್ಲಿ ಇದುವೇ ನಮ್ಮ ದುರಂತ. ಒಬ್ಬ ಉದಾರವಾದಿಯಾಗಿರುವ ನಾನು, ಬಲಪಂಥೀಯ ಬೌದ್ಧಿಕ ಚಿಂತಕರನ್ನು ಸ್ವಾಗತಿಸಿಯೇನು, ಏಕೆಂದರೆ ಅವರು ಮಂಥನವನ್ನು ವಿಸ್ತರಿಸಬಲ್ಲರು, ಅದನ್ನು ಹೆಚ್ಚು ವೈವಿಧ್ಯಮಯವಾಗಿ ಹಾಗೂ ಸೃಜನಶೀಲವಾಗಿಸಬಲ್ಲರು. ಆದರೆ ಆರ್‍ಎಸ್ಸೆಸ್ ವಿಶ್ವವಿದ್ಯಾನಿಲಯಗಳನ್ನು, ಶಿಕ್ಷಣ ಸಂಸ್ಥೆಗಳನ್ನು, ಸಾಂಸ್ಕೃತಿಕ ಸಂಘಟನೆಗಳನ್ನು, ಮ್ಯೂಸಿಯಮ್ ಮತ್ತು ಅಕಾಡೆಮಿಗಳನ್ನು ನಿಯಂತ್ರಿಸುತ್ತಿದ್ದರೆ ನಿಮಗೆ ತೃತೀಯ ದರ್ಜೆಯ ವಿಷಯಗಳಷ್ಟೇ ಸಿಗಬಲ್ಲವು.
ಹಾಗಾದರೆ ನೀವು ರೋಮಿಲಾ ಥಾಪರ್ ಅವರಿಗೆ ಸವಾಲೊಡ್ಡಲು ದೀನ್‍ನಾಥ್ ಬಾತ್ರ ಇದ್ದರೆಸಾಲದೆಂದು ಹೇಳುತ್ತಿದ್ದೀರೇನು?
ಹೌದು, ನಿರ್ದಿಷ್ಟವಾಗಿ. ನಮ್ಮಲ್ಲಿ ಉತ್ತಮ ಬಲಪಂಥೀಯ ಇತಿಹಾಸಕಾರರಿದ್ದರು, ಜಾದುನಾಥ್ ಸರ್ಕಾರರಂತೆ. ಅವರು ಕಠಿಣ ಶ್ರಮವಹಿಸುತ್ತಿದ್ದರು, ಸಂಪ್ರದಾಯಗಳ ಮುಂದುವರಿಕೆಯಲ್ಲಿ ನಂಬಿಕೆಯಿರಿಸಿದ್ದರು, ಆದರೆ ಅತ್ಯುತ್ತಮ ವಿದ್ವಾಂಸರಾಗಿದ್ದರು. ಆದರೆ ದೀನನಾಥ್ ಬಾತ್ರ ಅವರು ರೋಮಿಲಾ ಥಾಪರ್ ಅವರಿಗೆ ಸವಾಲೊಡ್ಡಬಲ್ಲರೆಂದು ನೀವು ಭಾವಿಸಿದಲ್ಲಿ, ನಿಮಗೆ ಹೆಚ್ಚೆಚ್ಚು ಕೀಳಾದ ಚರ್ಚೆಗಳಷ್ಟೇ ದೊರಯಬಲ್ಲವು.
ಕೃಪೆ :ಫ್ಯಾಕ್ಟರ್ ಡೈಲಿ . (ಸಂಪಾದಕರ ಅನುಮತಿ ಪಡೆದು ಈ ಸಂದರ್ಶನವನ್ನು ಬಳಸಿಕೊಳ್ಳಲಾಗಿದೆ )
ಪ್ಯಾಕ್ಟರ್ ಡೇಲಿ ಯಲ್ಲಿ ಕಲ್ಚರಲ್ ಎಡಿಟರ್ ಆಗಿರುವ ಇವರು ಮೂಲತಃ ಲೇಖಕರು. ಟೆಲಿಗ್ರಾಫ್, ಡಿ ಎನ್ ಎ ಮತ್ತು ಟೈಮ್ಸ್ ಆಫ್ ಇಂಡಿಯಾ ಮುಂತಾದ ಪ್ರಮುಖ ಪತ್ರಿಕೆಗಳ ಸಂಪಾದಕೀಯ ವಿಭಾಗದಲ್ಲಿ ೧೫ ವರುಷ ಕೆಲಸ ಮಾಡಿದ ಅನುಭವವಿದೆ.