ಸತ್ತವನು ಮನುಷ್ಯ

 kathana

s1 ಮಟಮಟ ಮಧ್ಯಾಹ್ನ. ಭೂಮಿಯ ಮೇಲೆ ನಡೆಯುತ್ತಿರುವ ಘಟನೆಗಳಿಂದ ಕೋಪಗೊಂಡು ಸುಟ್ಟು ಬಿಡುವನಂತೆ ಸೂರ್ಯ ಬೆಂಕಿ ಉಗುಳುತ್ತಿದ್ದ. ನಗರದ ಮಾರುಕಟ್ಟೆ ಹೊರಗಡೆ ತಣ್ಣಗಿದ್ದಂತೆ ಕಂಡರು ಒಳಗೊಳಗೆ ಚುರುಕಾಗಿ ಚಟುವಟಿಕೆಗೆಯಿಂದ ಕೂಡಿತ್ತು. ವ್ಯವಹಾರಸ್ಥರಿಗೆ ಚಳಿಯೇನು? ಮಳೆಯೇನು? ಬಿಸಿಲೇನು? ಅನತಿ ದೂರದಲ್ಲಿ ಬಿರುಬಿಸಿಲಿಗೆ ಬಾಯಾರಿದ ಕಾಗೆಯೊಂದು ನೀರು ಸಿಗದೆ ಹೃದಯ ಕರಗುವಂತೆ ಅರಚುತ್ತಿತ್ತು. ಜಗತ್ತಿನಲ್ಲಿನ ಒಳ್ಳೆತನದಂತೆ ನೀರಿನ ಮರೀಚಿಕೆಯು ಕಾದ ರಸ್ತೆ ಮೇಲುಗಡೆ ಅಲ್ಲಲ್ಲಿ ಕಾಣುತ್ತಿತ್ತು.

ಅಂತಹ ಮಧ್ಯಾಹ್ನದ ಹೊತ್ತಿನಲ್ಲಿ ಮಾರುಕಟ್ಟೆಯ ಮಧ್ಯದಲ್ಲಿ ಮನುಷ್ಯನೊಬ್ಬ ಸತ್ತು ಬಿದ್ದಿದ್ದ. ಸಂಪೂರ್ಣ ಬೆತ್ತೆಲೆಯಾಗಿದ್ದ ಅವನ ದೇಹವ ಮೊದಮೊದಲಿಗೆ ಕಂಡವರು, ಅಮಲೇರಿದ ಕುಡುಕನೋ, ಹುಚ್ಚನೋ, ಬಿಸಿಲಿನ ತಾಪಕ್ಕೆ ತಲೆ ಸುತ್ತಿಯೋ, ಹಸಿದು ಪ್ರಜ್ಞೆ ತಪ್ಪಿಯೋ ಬಿದ್ದಿರಬೇಕು ಎಂದು ನಿರ್ಲಕ್ಷಿಸಿದರು. ಈ ನಗರದಲ್ಲಿ, ಅದೂ ಈ ಮಾರುಕಟ್ಟೆಯಲ್ಲಿ ಬಿದ್ದವರ ಬಗ್ಗೆ ತಲೆ ಕೆಡಸಿಕೊಳ್ಳಲು ಯಾರಿಗೆ ಸಮಯವಿದೆ ಹೇಳಿ? ಕಂಡವರು ಕಾಣಲೇ ಇಲ್ಲವೇನೋ ಎಂಬಂತೆ, ತುಂಬಾ ಗಡಿಬಿಡಿಯಲ್ಲಿರುವಂತೆ ನಟಿಸುತ್ತಾ ಮುಂದೆ ಹೋಗುತ್ತಿದ್ದರು.

ಯಾವಾಗ ಹದ್ದುಗಳು ನೆಲಕ್ಕೆ ಬಿದ್ದ ಮನುಷ್ಯನ ಮೇಲೆರಗಿದರು ಮಿಸುಗಾಡದೆ ಇದ್ದಿದ್ದು ಕಂಡು, ಕೆಲವರು ಅವನು ಸತ್ತಿರಬೇಕೆಂದು ತಾವು ವ್ಯಾಪಾರ ಮಾಡುತ್ತಾ ಕೂತ ಸ್ಥಳದಲ್ಲಿಂದಲೇ ಅಂದಾಜಿಸಿದರು. ವ್ಯಾಪಾರ ಮಾಡಲು ಬಂದವರು ತಲೆಯಲ್ಲಿ ಸಣ್ಣ ಪ್ರಶ್ನೆಯೊಂದಿಗೆ, ಗೊಂದಲದಿಂದಲೇ ಮುಂದಿನ ಅಂಗಡಿಗೆ ನಡೆಯುತ್ತಿದ್ದರು. ಇನ್ನು ಕೆಲವರು ಗಮನಿಸಿದರೂ ಗಮನಿಸದಂತೆ ಸುಮ್ಮನಿದ್ದು ಬಿಟ್ಟರು. ಅನತಿ ದೂರದಲ್ಲಿ ಪುಟ್ಟ ಗೂಡಂಗಡಿಯಲ್ಲಿ ಕೂತ ಮುದುಕ ‘ಹೇ… ಹೇ…’ ಎಂದು ಕೂಗುತ್ತ ಕೈಗೆ ಸಿಕ್ಕ ಕಲ್ಲೋ, ಮತ್ತೊಂದನು ಎಸೆದು ಹದ್ದುಗಳ ಓಡಿಸುವ ವ್ಯರ್ಥ ಪ್ರಯತ್ನ ಮಾಡಿದ.

ಸ್ವಲ್ಪ ಹೊತ್ತು ಕಳೆದಂತೆ ಮಾರುಕಟ್ಟೆಯ ಅನೇಕರಿಗೆ ಅವನು ಸತ್ತಿದ್ದಾನೆ ಎಂದರಿವಾಯಿತು. ತೀರ ಹತ್ತಿರದಲ್ಲೆ ಅಂಗಡಿ ಇಟ್ಟುಕೊಂಡವರು ಉಭಯ ಸಂಕಟದಲ್ಲಿ ಕೂತಲ್ಲೇ ಮಿಸುಗಾಡಿದರು. ಇದೊಳ್ಳೆ ಪ್ರಾಣಸಂಕಟ ಶುರುವಾಯಿತಲ್ಲ ಎಂದು ತಮ್ಮಲ್ಲೇ ತಾವು ಮುಲುಕಾಡಿದರು.

ಕೊನೆಗೆ ಅನೇಕರಲ್ಲಿ ಅವನ ಜಾತಿ-ಧರ್ಮದ ಬಗ್ಗೆ ಜಿಜ್ಞಾಸೆ ಶುರುವಾಯಿತು. ಪಾಪ ಸತ್ತವನು ನಮ್ಮ ಜಾತಸ್ಥನಾಗಿದ್ದರೆ? ಬೇರೆಯವರು ಯಾರು ಮುಟ್ಟದೆ ನಮಗೆಲ್ಲಾ ಅವಮಾನವಲ್ಲವೇ? ಎಂದು ಪಿಸುಪಿಸು ಮಾತುಗಳು ಶುರುವಾದವು. ಅಂತಿಮವಾಗಿ ತಡೆಯಲಾರದೆ ಕೆಲವರು ಹೋಗಿ ಸುಡುಸುಡು ಬಿಸಿಲಲ್ಲೇ ಮೃತನ ಬೆತ್ತಲೆ ದೇಹದಲ್ಲಿ ಜುಟ್ಟು, ಜನಿವಾರ, ಉಡುದಾರ, ತಾಯ್ತ ಮುಂತಾದ ಜಾತಿ, ಧರ್ಮದ ಚಿಹ್ನೆಗಳಗೆ ಹುಡುಕಾಡಿದರು. ಯಾವುದು ಕಾಣದೆ ಕೊಂಚ ನಿರಾಸೆ, ಕೊಂಚ ನಿರಾಳತೆ ಅನುಭವಿಸುತ್ತಾ ಹಿಂದಿರುಗಿದರು.

ಸ್ವಲ್ಪ ಸಮಯ ನಂತರ ಮತ್ತೊಂದು ಗುಂಪು ಬಂದು ಅವನ ಜನನಾಂಗವನ್ನು ಸೂಕ್ಷ್ಮವಾಗಿ ಗಮನಿಸಿ ಸುನತಿಯಾಗಿದೆಯಾ? ಹಚ್ಚೆ ಅಥವಾ ಬೇರೆಯಾವುದಾದರು ಧಾರ್ಮಿಕ ಚಿಹ್ನೆಗಳಿವೆಯೇ ಎಂದು ಹುಡುಕಾಡಿದರು. ಅದ್ಯಾವುದು ಸಿಗದೆ ನಿರಾತಂಕವಾಗಿ ಮರಳಿದರು.man_dying_against_a_tree-1446146022m

ಹೀಗೆ… ಬೇರೆ ಜಾತಿ, ಧರ್ಮವರು ಬಂದು ಅವರವರ ಹುಡುಕಾಟ ನಡೆಸಿ ನಿರಾಶೆಯಿಂದ, ಸಮಾಧಾನದಿಂದ ಮರಳಿದರು. ಕೆಲವು ಪುಂಡರು ಸತ್ತು ಬಿದ್ದವನು ನಮ್ಮವನೇನಾದರು ಆಗಿದ್ದರೆ ಗಲಭೆ ಎಬ್ಬಿಸಿ ಒಂದಿಷ್ಟು ಜನರ ಹಣಿಯಬಹುದಿತ್ತಲ್ಲ, ಒಂದಿಷ್ಟು ಅಂಗಡಿಗಳ ದೋಚಬಹುದಿತ್ತಲ್ಲ ಎಂದು ಹಳಹಳಿಸಿದರು.

ಅಷ್ಟರಲ್ಲಿ ಯಾರೋ ಪುಢಾರಿಗಳಿಗೆ, ರಾಜಕಾರಣಿಗಳಿಗೆ, ಧಾರ್ಮಿಕ ಮುಖಂಡರಿಗೆ, ಧಾರ್ಮಿಕ ಗುರುಗಳಿಗೆ ವಿಷಯ ತಲುಪಿಸಿದರು. ಸತ್ತವನು ಯಾವ ಧರ್ಮದವನು? ಎಡ ಪಂಥದವನೇ? ಬಲ ಪಂಥದವನೇ? ಅಥವಾ ನಡು ಪಂಥದವನೇ? ಯಾವ ಪಕ್ಷದ ಬೆಂಬಲಿಗ? ಯಾವ ಸಂಘಟನೆಗೆ ಸೇರಿದವನು? ಯಾವ ಸಿದ್ಧಾಂತದ ಅನುಯಾಯಿ? ಎಂಬುದು ಬಗೆಹರಿಯದೆ ಯಾರು ಅಂತಹ ಆಸಕ್ತಿ ತೋರಿಸಲಿಲ್ಲ. ಎಲ್ಲರೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋದರು.

ಸುದ್ದಿ ಮಾಧ್ಯಮಗಳಿಗೆ ಇದೊಂದು ಸುದ್ದಿಯೇ ಅಲ್ಲ. ಅಲ್ಲ ಇಂತಹ ಸುದ್ದಿಗಳನ್ನ ಯಾರು ಗಮನಿಸುತ್ತಾರೆ? ಟಿಆರ್ಪಿ ರೇಟಿಂಗ್ ಸಿಗುತ್ತೆ? ಎಂಬ ಲೆಕ್ಕಾಚಾರದ ಚಿಂತೆ ಅವರದು. ಚಾನಲ್’ಗಳ ಬಾಸ್’ಗಳಂತು ಹದ್ದಿನ ಕಣ್ಣಿಂದ ಪ್ರತಿಯೊಂದು ಸುದ್ಧಿಯ ಪ್ರಸಾರ ಮತ್ತು ರೇಟಿಂಗ್ ಗಮನಿಸುತ್ತಿರುತ್ತಾರೆ. ಸುದ್ಧಿ ಸಂಪಾದಕರು ಎಲ್ಲದಕ್ಕೂ ಹಣ, ಜಾಹಿರಾತು, ಲಾಭದ ಜೊತೆ ಸಮೀಕರಣ ಮಾಡಿಯೇ ನೋಡಬೇಕು.

ಇನ್ನೂ ನಗರದ ಪಾಲಿಕೆ ಅಧಿಕಾರಗಳು ಸಂಬಂಧ ಪಟ್ಟ ಸಿಬ್ಬಂದಿಗಳಿಗೆ, ಇಲಾಖೆ ಹುಷಾರಾಗಿ ವರ್ತಿಸಲು ಮೌಖಿಕ ಸೂಚನೆ ಕೊಟ್ಟರು. ಏನಾದರೂ ಎಡವಟ್ಟಾಗಿ ತಮ್ಮ ಕಂಠಕ್ಕೆ ಬಂದು ಸುತ್ತಿಕೊಂಡರೆ ಎಂಬ ಆತಂಕ ಅವರದು. ನಿರ್ವಹಿಸಲಾಗದ ನಗರದ ಕಸದ ಸಮಸ್ಯೆ ಜೊತೆ ಇನ್ನೊಂದು ಸಮಸ್ಯೆ ಅವರಿಗೆ ಬೇಕಾಗಿಲ್ಲ.

ಪೋಲಿಸ್ ಇಲಾಖೆಗೆ ಕಂಪ್ಲೇಂಟ್, ಕರೆ ಬರದೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಹಾಗಾಗಿ ಸುದ್ದಿ ತಿಳಿದರು ಜಾಣ ಮೌನವಹಿಸಿದರು. ಅವರವರ ಗಡಿ ವ್ಯಾಪ್ತಿಗಳ ಪಾಲನೆ ಅವರದು. ನ್ಯಾಯಾಲಯಗಳಿಗೆ ಇದರ ಸುಳಿವು ಸಿಗಲಿಲ್ಲ. ಬಗೆಹರಿಯದ ಲಕ್ಷಲಕ್ಷ ಕೇಸ್ಗಳಿರುವಾಗ ಅವರಿಗೆ ಈ ತರಹದ ವಿಷಯಗಳ ಬಗ್ಗೆ ಸ್ವಯಂ ಆಸಕ್ತಿಯಿಂದ ತಿಳಿದುಕೊಳ್ಳವ ವ್ಯವಧನವಿರಲಿಲ್ಲ.

*

ಹೀಗೆ ಸತ್ತವನು ಕೇವಲ ಮನುಷ್ಯನಾಗಿದ್ದರಿಂದ ಇನ್ನೂ ಅವನ ಹೆಣ ಮಾರುಕಟ್ಟೆಯ ಮಧ್ಯದಲ್ಲಿಯೇ ಬಿದ್ದಿದೆ. ಅದರ ಇರುವಿಕೆ ಮತ್ತು ಅದರಿಂದ ಹೊರಡುತ್ತಿರು ಗಬ್ಬು ನಾತವ ಎಲ್ಲರೂ ನಿರ್ಲಕ್ಷಿ ತಮ್ತಮ್ಮ ಕೆಲಸಕಾರ್ಯ, ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿದ್ದಾರೆ. ನೀವೇನಾದರು ಮಾರುಕಟ್ಟೆಯ ಕಡೆ ಹೋದರೆ ಎಲ್ಲರಂತೆ ನೀವು ಗಮನಿಸದಂತೆ ಇದ್ದುಬಿಡಿ. ಯಾಕೆ ಇಲ್ಲಸಲ್ಲ ತೊಂದರೆಗಳ ಮೈಮೇಲೆ ಎಳೆದುಕೊಳ್ಳುತ್ತೀರಿ?!

ಚಿತ್ರ – ಅಂತರ್ಜಾಲ

divderspa

ಪ್ರತಿಕ್ರಿಯಿಸಿ