ಜಾತಿಯ ವಸ್ತು ಹಿಂದಿ ಚಿತ್ರಗಳಲ್ಲಿ ಬಹುಮಟ್ಟಿಗೆ ನಿಷಿದ್ಧವೆಂಬಷ್ಟು ಮಟ್ಟಿಗೆ ಅಸ್ಪೃಷ್ಯವಾಗಿ ಉಳಿದಿದೆ. ಅದರ ಬದಲು ಸಮಸ್ಯೆಗಳನ್ನು “ವರ್ಗ”ದ ಆಯಾಮದಿಂದಲೇ ನೋಡುವ ಜಾಣತಂತ್ರವೊಂದನ್ನೂ ರೂಪಿಸಿಕೊಳ್ಳಲಾಗಿದೆ. ಜಾತಿ ಮತ್ತು ವರ್ಗಗಳಲ್ಲಿ ಅನೇಕ ಬಗೆಯ ಸಾಮ್ಯತೆಯೂ ಇದೆ; ವರ್ಗ ತಾರತಮ್ಯವನ್ನು ಪಾರಂಪರಿಕವಾಗಿ ಉಳಿಸಿಕೊಳ್ಳುವ ಮಾರ್ಗವಾಗಿ ಜಾತಿಯ ಉಗಮವಾಯಿತು ಎಂದೂ ಕೆಲವರು ವಾದಿಸುತ್ತಾರೆ. ಹಾಗಿದ್ದರೂ ಇವೆರಡೂ ಇಲ್ಲಿಯ ಸಂದರ್ಭದಲ್ಲಿ ಭಿನ್ನವಾಗಿರುವುದು ಮತ್ತು ಭಾರತೀಯ ಅಸ್ಮಿತೆಗೆ ಮುಖ್ಯವಾಗಿರುವುದು ನನ್ನ ಮಟ್ಟಿಗಂತೂ ಒಡೆದು ಕಾಣುವ ಸತ್ಯ. ಬಹುಷಃ ಒಬ್ಬ ವಿದೇಶಿಯನ ಕಣ್ಣಿಗೆ ಇದು ಇನ್ನೂ ನಿಚ್ಚಳವಾಗಿಯೇ ಕಾಣುತ್ತದೆ ಎನ್ನಿಸುತ್ತದೆ.
ಈ ಚಿತ್ರ, ೨೦೧೨ರಲ್ಲಿ ಬಿಡುಗಡೆಯಾದ ಅನುರಾಗ್ ಕಶ್ಯಪ್ ರ ಸಿನೆಮಾ ಗ್ಯಾಂಗ್ಸ್ ಆಫ್ ವಸೆಪುರ್ ನ ಪ್ರಸಿದ್ಧಿಯಲ್ಲಿ ಸ್ವಲ್ಪ ನೆನೆದಂತಿದೆ. ಇದರ ನಿರ್ದೇಶಕ, ಹಾಗೆಯೇ ಮುಖ್ಯಭೂಮಿಕೆಯಲ್ಲಿರುವ ರೀಚಾ ಛಡ್ಡ ಮತ್ತು ಪಂಕಜ್ ತ್ರಿಪಾಟಿ ಕೂಡಾ ಗ್ಯಾಂಗ್ಸ್.. ಚಿತ್ರದಲ್ಲಿ ಭಾಗಿಯಾಗಿದ್ದರು. ಆ ಚಿತ್ರವೂ ವಾರಣಾಸಿಯಲ್ಲಿಯೇ ಚಿತ್ರಿತವಾದದ್ದು ಎಂಬುದನ್ನೂ ನಾವು ನೆನಪಿಟ್ಟುಕೊಳ್ಳಬೇಕು. ಮಸಾನ್ ಚಿತ್ರ ಹಲವು ದೃಷ್ಟಿಗಳಿಂದ ಮುಖ್ಯವಾದದ್ದು. ಮೇಲ್ನೋಟಕ್ಕೆ ಬೇರೆ ಬೇರೆಯಾದ್ದೆಂದು ಕಾಣುವ ಎರಡು ಕಥಾ ಎಳೆಗಳು – ಒಂದು ಕಡೆ ಅಂತರ್ಜಾತೀಯ ಪ್ರೇಮ ಮತ್ತು ಇನ್ನೊಂದು ಕಡೆ ಜೋಡಿಯೊಂದು ಕೈಗೊಳ್ಳುವ ಸಣ್ಣ ಲೈಂಗಿಕ ಸಾಹಸದ ಸಮಯದಲ್ಲಿ ಪೋಲೀಸರು ರೇಡ್ ಮಾಡಿ ಹುಡುಗ ಆತ್ಮಹತ್ಯೆ ಮಾಡಿಕೊಂಡು, ಹುಡುಗಿ ಮತ್ತವಳ ಕುಟುಂಬ ಸಾಮಾಜಿಕ ಹಿಂಸೆಗೆ ಗುರಿಯಾಗುವ ಎರಡು ಎಳೆಗಳು ಮಸಾನ್ ನಲ್ಲಿದೆ. ಎರಡೂ ಕತೆಗಳು ವಾರಣಾಸಿಯ ಘಾಟ್ ಗಳ ಸುತ್ತಲೇ ಘಟಿಸುವ ಕತೆಗಳು ಒಂದು ಹಂತದಲ್ಲಿ, ಸ್ವಲ್ಪ ಕೃತಕವೆನ್ನಿಸಿದರೂ ಮೋಹಕವಾದ ಬಗೆಯಲ್ಲಿ ಪರಸ್ಪರ ಸಂಧಿಸುತ್ತವೆ. ವಾರಣಾಸಿ (ಕನಿಷ್ಟ ಸಿನೆಮಾಗಳಲ್ಲಾದರೂ) ಒಂದು ಬಗೆಯ ಸೆಳೆತವನ್ನುಂಟುಮಾಡುವ ಊರು. ಮಸಾನ್ ಚಿತ್ರದ ಸಿನೆಮಾಟೋಗ್ರಫಿ ಸಾಧಾರಣವಾಗಿದ್ದರೂ, ರಾತ್ರಿಯ ವೇಳೆ ಚಿತೆಗಳು ಹೊತ್ತಿ ಉರಿಯುವ ದೃಶ್ಯಗಳು ಪರಿಣಾಮಕಾರಿಯಾಗಿವೆ.
ಕೆಲವು ಚಲನಚಿತ್ರಗಳನ್ನು ಹೊರತುಪಡಿಸಿದರೆ, ಜಾತಿಯ ವಸ್ತು ಹಿಂದಿ ಚಿತ್ರಗಳಲ್ಲಿ ಬಹುಮಟ್ಟಿಗೆ ನಿಷಿದ್ಧವೆಂಬಷ್ಟು ಮಟ್ಟಿಗೆ ಅಸ್ಪೃಷ್ಯವಾಗಿ ಉಳಿದಿದೆ. ಅದರ ಬದಲು ಸಮಸ್ಯೆಗಳನ್ನು “ವರ್ಗ”ದ ಆಯಾಮದಿಂದಲೇ ನೋಡುವ ಜಾಣತಂತ್ರವೊಂದನ್ನೂ ರೂಪಿಸಿಕೊಳ್ಳಲಾಗಿದೆ. ಜಾತಿ ಮತ್ತು ವರ್ಗಗಳಲ್ಲಿ ಅನೇಕ ಬಗೆಯ ಸಾಮ್ಯತೆಯೂ ಇದೆ; ವರ್ಗ ತಾರತಮ್ಯವನ್ನು ಪಾರಂಪರಿಕವಾಗಿ ಉಳಿಸಿಕೊಳ್ಳುವ ಮಾರ್ಗವಾಗಿ ಜಾತಿಯ ಉಗಮವಾಯಿತು ಎಂದೂ ಕೆಲವರು ವಾದಿಸುತ್ತಾರೆ. ಹಾಗಿದ್ದರೂ ಇವೆರಡೂ ಇಲ್ಲಿಯ ಸಂದರ್ಭದಲ್ಲಿ ಭಿನ್ನವಾಗಿರುವುದು ಮತ್ತು ಭಾರತೀಯ ಅಸ್ಮಿತೆಗೆ ಮುಖ್ಯವಾಗಿರುವುದು ನನ್ನ ಮಟ್ಟಿಗಂತೂ ಒಡೆದು ಕಾಣುವ ಸತ್ಯ. ಬಹುಷಃ ಒಬ್ಬ ವಿದೇಶಿಯನ ಕಣ್ಣಿಗೆ ಇದು ಇನ್ನೂ ನಿಚ್ಚಳವಾಗಿಯೇ ಕಾಣುತ್ತದೆ ಎನ್ನಿಸುತ್ತದೆ. ಮೊದಲು ವಿದೇಶಿಯನೊಬ್ಬ ಭಾರತಕ್ಕೆ ಬಂದಾಗ (ಹಿಂದಿ ಚಿತ್ರಗಳಂತೆಯೇ) ಜನರು ಜಾತಿಯ ಬಗ್ಗೆ ಮಾತನಾಡುವುದನ್ನು ತಪ್ಪಿಸಿಕೊಳ್ಳುತ್ತಾರೆ. ಸ್ವಲ್ಪ ಕಾಲ ಇಲ್ಲಿ ಕಳೆದ ಬಳಿಕ, ಜಾತಿ ಎನುವುದು ಭಾರತದ ಆಳಾದಲ್ಲಿ ಎಷ್ಟು ಮುಖ್ಯವಾಗಿ ಬೇರುಬಿಟ್ಟಿರುವ ಸಂಗತಿಯಾಗಿದ್ದು, ಅದನ್ನು ಹಾಗೆಂದು ಒಪ್ಪಿಕೊಳ್ಳದಿರುವುದು ಮೂರ್ಖತನವಾಗಿ, ಆಶ್ಚರ್ಯಕರವಾಗಿ ಕಾಣಿಸುತ್ತದೆ. ಜಾತಿಯ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ಕೂಡಲೇ ಜಾತಿ ಮಾಯವಾಗಿಬಿಡುವುದಿಲ್ಲ. ಬದಲು, ಜಾತಿ ಮತ್ತು ಅದರಿಂದ ಉಧ್ಭವವಾಗುವ ಇತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ, ಪರಿಹರಿಸುವ ಸಾಧ್ಯತೆಗಳು ಇನ್ನೂ ಮಸುಗಾಗುತ್ತ ಎಲ್ಲವೂ ಮತ್ತಷ್ಟು ಕ್ಲಿಷ್ಟವಾಗುತ್ತದೆ.
ಈ ಚಿತ್ರದಲ್ಲಿ ನಿರೂಪಿತವಾಗುವ “ಜಾತಿ”ಯ ಆಯಾಮ ಬೇರೆಯದ್ದೇ ಆದ ಒಂದು ಕಾರಣಕ್ಕೆ ವಿಶಿಷ್ಟವಾಗಿದೆ. ಅಲೆಮಾರಿಗಳೂ ಆಗಿರುವ, ಸ್ವಲ್ಪ ಮಟ್ಟಿಗೆ ನೆಲೆನಿಲ್ಲುವ ಜನಾಂಗವೂ ಆದ “ಡೋಮ್” ಸಮುದಾಯದ ಬಗ್ಗೆ ಈ ಚಿತ್ರವಿದೆ. ಉಪಖಂಡದಾದ್ಯಂತ ಹರಡಿಕೊಂಡಿರುವ ಈ ಡೋಮ್ ಗಳಲ್ಲಿಯೇ ಒಂದು ನಿರ್ಧಿಷ್ಟ ಬಗೆಯ ಡೋಮ್ ಗಳನ್ನು ಈ ಚಿತ್ರ ತನ್ನ ಪಾತ್ರಗಳಾಗಿ ಆಯ್ದುಕೊಂಡಿದೆ. ವಾರಣಾಸಿಯ ಈ ಡೋಮ್ ಗಳು ಪಾರಂಪರಿಕವಾಗಿ ಹೆಣಸುಡುವ ಕಸುಬನ್ನು ಮಾಡಿಕೊಳ್ಳುತ್ತ ಬಂದವರು. ಈ ಡೋಮ್ ಜನ, ಹೆಸರೇ ಸೂಚಿಸುವಂತೆ ಡಕ್ಕೆ, ಡೋಲುಗಳನ್ನು ಬಡಿಯುವುದೂ ಸೇರಿದಂತೆ ಅನೇಕ ಬಗೆಯ ಕಸುಬುಗಳನ್ನು ಮಾಡುತ್ತ ಬಂದವರು. ಆದರೆ ಈ ಡೋಮ್ ಗಳು, ಎಲ್ಲ ವಿಧವಾಗಿಯೂ- ಅಂದರೆ ಜಾತಿ, ವರ್ಗಗಳೆರಡರ ಆಯಾಮದಲ್ಲಿಯೂ ಅತ್ಯಂತ ನೀಚಸ್ತರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. (ಈ ಸಿಕ್ಕಿಹಾಕಿಕೊಳ್ಳುವಿಕೆಯ ಚಿತ್ರಣ ಒಂದರ್ಥದಲ್ಲಿ ಈ ಚಿತ್ರದ ಮೆಸೆಜ್ ಕೂಡಾ ಹೌದು). ಈ ಚಿತ್ರದಲ್ಲಿ ನಿರೂಪಗೊಳ್ಳ್ಳುವ ಪಾತ್ರಗಳ ಸತ್ಯವನ್ನೇ ಹಿಂಬಾಲಿಸುವುದಾದರೆ, ಆಧುನಿಕತೆ ಬೆಳೆದಂತೆಲ್ಲ ಈ ಜನರು ಅನುಭವಿಸುತ್ತ ಬಂದ ಹಿಂಸೆ, ದಮನಗಳು ಹೆಚ್ಚಾಗುತ್ತ ಹೋದವೇ ಹೊರತು ಕಡಿಮೆಯಾಗಲಿಲ್ಲ. ಹಿಂದೆ ಅವರು ಅನುಭವಿಸಿದ್ದ ಅರೆ-ಧಾರ್ಮಿಕ ಗೌರವವೂ ಆಧುನಿಕ ವಾರಣಾಸಿಯಲ್ಲಿ ಸುಟ್ಟುಹೋಗುತ್ತ ಬಂದಿತು.
ಈ ಸಮುದಾಯದ ಹುಡುಗ ತನ್ನ ಬೇಗೆಗಳಿಂದ ಪಾರಾಗಲು, ಎಲ್ಲ ಕಾಲಕ್ಕೂ ಎಲ್ಲರೂ ಆಯ್ದುಕೊಂಡ ಹಾದಿಯಾದ, ವಿದ್ಯಾರ್ಜನೆಯನ್ನು ಆಶ್ರಯಿಸುತ್ತಾನೆ. ತನ್ನ ಗೆಳತಿಯ ಜೊತೆಗಿನ ಪ್ರೇಮಪ್ರಕರಣವೂ ಸಹ “ಓಡಿಹೋಗುವ” ಸರಳೀಕೃತ ಸ್ವೀಕೃತ ಬಂಧದಲ್ಲಿಯೇ ಇದೆ. ಆದರೆ ದುರಾದೃಷ್ಟದ ಅಂತಿಮ ಧಾಳಿಯಲ್ಲಿ ಅವನ ಪ್ರೇಯಸಿ ಅಫಘಾತಕ್ಕೀಡಾಗಿ, ಅವಳ ಹೆಣ ಈ ಹೆಣಸುಡುವ ಮನುಷ್ಯನ ಮಗನಿಗೇ ಗ್ರಾಹಕವಾಗಿ ಬರುತ್ತದೆ. ಅದರ ಜೊತೆಗೆ ನಡೆಯುವ ಇನ್ನೊಂದು ಪ್ಲಾಟ್ ನಲ್ಲಿ, ಕಳೆದ ಬಾರಿ ವಿಮರ್ಷಿಸಲಾದ ಮರಾಠೀ ಚಿತ್ರ ಕೋರ್ಟ್ ನಲ್ಲಿ ಆಗುವ ಹಾಗೆ “ಆತ್ಮಹತ್ಯೆಗೆ ಪ್ರಚೋದನೆ” ಎಂಬ ಐ.ಪಿ.ಸಿ ಯ ೩೦೯ನೇ ಅಂಶ ಇಲ್ಲಿಯೂ ಚಿಕಿತ್ಸೆಗೆ ಒಳಪಡುತ್ತದೆ. ಆದರೆ ಅದು ಈ ಚಿತ್ರದ ಕೇಂದ್ರವಾಗುವುದಿಲ್ಲ. ಆದರೆ ಒಬ್ಬ ಕ್ರೂರಿಯಾದ ಪೋಲಿಸ್ ಅಧಿಕಾರಿ ತನ್ನ ಬಲಿಗಳನ್ನು ಸುಲಿಯಲು ಬಳಸುವ ಒಂದು ಮಾರ್ಗವಾಗಿ ಅದು ಚಿತ್ರಿಸಲ್ಪಟ್ಟಿದೆ. ಹಾಗೆಯೇ ಮತೊಮ್ಮೆ, ಚಿತ್ರದ ವಸ್ತು ಸರಳವಾಗಿ ಊಹೆಮಾಡಬಹುದಾದ ಪಾತಳಿಯ ಮೇಲೆಯೇ ಮುಂದುವರೆಯುತ್ತದೆ. ಅದು ಬ್ಲಾಕ್‌ಮೇಲ್, ಅದರಿಂದ ತಂದೆಯ ಬವಣೆ, ಕೆಲಸದ ಸ್ಥಳದಲ್ಲಿ ಅವನು ಅನುಭವಿಸಬೇಕಾಗುವ ಸಂಕಷ್ಟ ಹಾಗೂ ಕಡೆಗೆ ಕಡಿಮೆ ಸಂಬಳ ದೊರಕುವ ಕೆಲಸಕ್ಕೆ ನೂಕಲ್ಪಡುವ ಅಂತ್ಯ.
ಕೋರ್ಟ್ ನಂತೆ ಈ ಚಿತ್ರ ತಾನು ನಿರೂಪಿಸುವ ಕಥಾವಳಿಗಳನ್ನು ದೂರದಲ್ಲಿ ನಿಂತು ಪರಿವೀಕ್ಷಿಸುವುದಿಲ್ಲ. ಅಥವಾ ಘಟನೆಗಳನ್ನು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸುವುದೂ ಇಲ್ಲ ಮತ್ತು ಅವುಗಳ ಮುಖಬೆಲೆಯನ್ನು ಅಪಮೌಲ್ಯಮಾಡಿಯೂ ನೋಡುವುದಿಲ್ಲ. ಚಿತ್ರದಲ್ಲಿ ಸ್ಟೀರಿಯೋಟಿಪಿಕಲ್ ಆದ ತಲೆಮಾರುಗಳ ಸಂಘರ್ಷವೂ ಇಲ್ಲ. ಹೆಣಸುಡುವವನಿಗೆ ತನ್ನ ಜಾತಿಯ ಸಂಕಷ್ಟಗಳ ಬಗೆ ಅರಿವಿದೆ. (ಉತ್ತಮವಾಗಿ ಚಿತ್ರಿತವಾದ ದೃಶ್ಯವೊಂದರಲ್ಲಿ ಅವನೇ ಇದನ್ನು ಬಿಡಿಸಿಡುತ್ತಾನೆ) ಮತ್ತು ತನ್ನ ಮಗನಿಗೆ ಈ ಸ್ಥಿತಿಯಿಂದ ಪಾರಗಲು ಬೇಕಾದ ಎಲ್ಲ ಸಹಾಯಗಳನ್ನೂ, ಪ್ರೋತ್ಸಾಹವನ್ನೂ ಅವನೇ ಕೊಡುತ್ತಾನೆ. ಹುಡುಗಿಯ ನಡೆಯಿಂದ ಅವರಿಬ್ಬರ ಮೇಲೂ ಎರಗಿದ ದುರಂತವನ್ನು ಅವಳ ತಂದೆ ಒಂದು ಬಗೆಯ ಸಮಚಿತ್ತ, ವಾಸ್ತವತೆಯಲ್ಲಿಯೇ ಎದುರಿಸುತ್ತಾನೆ. ಮಗಳ ಬಗ್ಗೆ ಸಹಜ ಉದಾರತೆ ಮತ್ತು ವಾತ್ಸಲ್ಯದಲ್ಲಿಯೇ ತನ್ನ ಸಂಕಟವನ್ನು ಅವನು ಎದುರಿಸುತ್ತಾನೆ. ಮಸಾನ್ ನಲ್ಲಿರುವ ಪೋಲೀಸ್ ಕೂಡಾ ಇಂಥ ಸಂದರ್ಭಗಳು ಸೃಷ್ಟಿಸುವ ವಿಲನ್ ಆಗಿದ್ದಾನೆಯೇ ಹೊರತು ವ್ಯಕ್ತಿಯಾಗಿ ದುಷ್ಟನಂತೆ ವಿಜೃಂಭಿಸುವುದಿಲ್ಲ. ಈ ಅರ್ಥದಲ್ಲಿ ಭ್ರಷ್ಟತೆ ಇಲ್ಲಿರುವುದು ಸಮಾಜದಲ್ಲಿಯೇ ಹೊರತು ವ್ಯಕ್ತಿಗಳಲ್ಲಿ ಅಲ್ಲ.
ಈ ಚಿತ್ರ ಒಂದು ಜಂಟಿ ನಿರ್ಮಾಣದಲ್ಲಿ ತಯಾರಾದದ್ದು. ಚಿತ್ರದ ಸಂಗೀತ ಸಂಯೋಜಕ ಫ್ರೆಂಚ್ ಆಗಿದ್ದು, ಹಾಡುಗಳನ್ನು ಸಂಯೋಜಿಸಿದ್ದು ದೆಹಲಿ ಮೂಲದ ಒಂದು ರಾಕ್ ಬ್ಯಾಂಡ್ ಎಂದು ನನ್ನ ತಿಳುವಳಿಕೆಗೆ ಬಂದಾಗ ನನಗೆ ಇದೊಂದು ಅಸಮರ್ಪಕ ಮತ್ತು ಕೆಟ್ಟದಾದ ಹೊಂದಾಣಿಕೆ ಎನ್ನಿಸಿತ್ತು. ಆದರೆ ನನ್ನ ಎಣಿಕೆ ತಪ್ಪಾಯಿತು. ಹಿನ್ನೆಲೆ ಸಂಗೀತ ವೈಶಿಷ್ಟ್ಯಪೂರ್ಣವಾಗಿ ಮಧುರವಾಗಿದ್ದು , ಇಂಡಿಯನ್ ಓಶಿಯನ್ ಪ್ರೊಡ್ಯೂಸ್ ನ ಸಂಗೀತ ಭಾರತೀಯ ಸಂಗೀತ ಪರಂಪರೆಗೆ ಗೌರವಪೂರ್ವಕವಾಗಿದೆ. ಸಂಗೀತ, ಈ ಚಿತ್ರದ ಮಟ್ಟಿಗೆ ಬಹಳ ಅಗತ್ಯವಾದ ಅಂಶ- ಕಾರಣ, ಅತ್ಯುತ್ತಮ ಮಟ್ಟದ ಕಾವ್ಯವನ್ನು ಬಳಸಿಕೊಳ್ಳುವ ಚಿತ್ರದಲ್ಲಿ, ಸಂಗೀತ ಸಾಧಾರಣಮಟ್ಟದ್ದಾಗಿಬಿಟ್ಟಾಗ, ಸಾಧಾರಣವಾದ ಹುಡುಗ-ಹುಡುಗಿಯ ಪ್ರಣಯ ಕತೆಗಳು ಪೇಲವವಾಗಿ ಮಲಗಿಬಿಡುತ್ತವೆ. ನಟರೆಲ್ಲರ ಅಭಿನಯ ಉತ್ತಮೇ ಆಗಿದ್ದು, ಹಿರಿಯ ಕಲಾವಿದರಾದ ಸಂಜಯ್ ಮಿಶ್ರಾ ಮತ್ತು ಭೂಪೇಶ್ ಸಿಂಘ್- ಹುಡುಗಿ ಮತ್ತು ಹುಡುಗರ ತಂದೆಯರಾಗಿಹೋಗಿದ್ದಾರೆ. ತುಂಬ ಮಟ್ಟಿಗೆ ಸಪ್ಪೆಯಾಗಿ ನಡೆಯುವ ಚಲನಚಿತ್ರಕ್ಕೆ, ರೇಲ್ವೇ ನೌಕರನಾಗಿ ಪಂಕಜ್ ತ್ರಿಪಾಟಿಯ ಅಭಿನಯದಿಂದ ಸ್ವಲ್ಪ ಮಟ್ಟಿಗಿನ ರಸಪ್ರಾಪ್ತಿಯಾಗಿದೆ.
ಆದರೆ ಚಿತ್ರಕತೆಯ ಬಗ್ಗೆ ನನಗೆ ಕೆಲವು ತಕರಾರುಗಳಿವೆ. ಕೋರ್ಟ್ ನ ಬಗ್ಗೆ ಅಂತರಾಷ್ಟ್ರೀಯ ವಿಮರ್ಷಕರು ಕೇವಲ ಹೊಗಳಿಕೆಗಳನ್ನೇ ಪಟ್ಟಿಮಾಡಿದರು. ವರುಣ್ ಗ್ರೋವರ್ ಬರೆದ ಈ ಸ್ಕ್ರಿಪ್ಟ್ ನಲ್ಲಿ ಹೊಸತನವಿದ್ದರೂ ಕೂಡಾ, ಅದು ಹಿಂದಿ ಚಿತ್ರಗಳ ಮಟ್ಟಿಗಷ್ಟೇ ಹೊಸತು ಎನ್ನಬಹುದು. ಜಾತಿಯ ಸಮಸ್ಯೆಗಳು ಮತ್ತು ಸಂಘರ್ಷಗಳನ್ನು ವಸ್ತುವಾಗಿ ಆಯ್ದುಕೊಂಡ ಒಂದು ತಮಿಳು ಚಿತ್ರವಾಗಿದ್ದಿದ್ದರೆ, ಅದರ ನಿರ್ವಹಣೆಯ ರೀತಿ ಇದಕ್ಕಿಂತ ಭಿನ್ನ ಮತ್ತು ಹೆಚ್ಚು ಪ್ರಾಮಾಣಿಕವಾಗಿರುತ್ತಿತ್ತು. ಅದರ ಜೊತೆಗೇ ಈ ಚಿತ್ರದ ಚಿತ್ರಕತೆಯಲ್ಲೊಂದು “ಕೃತಕತೆ” ಇದೆ. ಕೋರ್ಟ್ ನಂತೆಯೇ ಇದೂ ಕೂಡಾ ಸ್ಪಷ್ಟವಾಗಿ, ಎಚ್ಚರಿಕೆಯಿಂದ ಬರೆದ ಚಿತ್ರಕತೆ ಹೊಂದಿದ ಸಿನೆಮಾ. ಆ ಎಚ್ಚರಿಕೆಯು ಚಿತ್ರದ ಆಕಾರ, ರೂಪ ಮತ್ತು ನಿರ್ಧಿಷ್ಟತೆಗೆ ಹೆಚ್ಚಿನ ಗಮನ ಕೊಡುತ್ತ, ಕಥನವನ್ನು ಸ್ವಲ್ಪ ಮಟ್ಟಿಗೆ ಕಡೆಗಣಿಸುತ್ತದೆ. ಎರಡು ಎಳೆಗಳನ್ನು ಕೂಡಿಸುವುದು ಈ ಸ್ವರೂಪಕ್ಕೆ ಅನಿವಾರ್ಯವೇ ಹೊರತು ವೀಕ್ಷಕನಿಗೆ ಅದರಲ್ಲಿ ಅಷ್ಟು ಆಸಕ್ತಿ ಇಲ್ಲ. ರೂಪದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಚಿತ್ರ ಅಸಾಧ್ಯವಾದ ಕಾಕತಾಳೀಯತೆಗಳನ್ನು ಸೃಷ್ಟಿಸುತ್ತದೆ. (ಒಂದು ಕಡೆಯ ಪ್ರೇಮಕತೆಯಲ್ಲಿ ದುರಂತವನ್ನು ಮೂಡಿಸಿದರೆ, ಇನ್ನೊಂದು ಕಡೆ ಅದೃಷ್ಟದ ಮೂಲಕ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿ ಸಂತಸವನ್ನು ತರುವ ಮೂಲಕ ತಕ್ಕಡಿ ಸಮವಾಗುತ್ತದೆ) ಹಾಗೆಯೇ ಅಂತ್ಯದಲ್ಲಿ, ಅದು ಕ್ಲೀಷೆಯ “ಸುಖಾಂತ”ವನ್ನು ತರದೇ ಇದ್ದರೂ ನಂಬಲು ಸುಲಭವಲ್ಲದ ಒಂದು ರಮ್ಯತೆಯನ್ನು ಚಿತ್ರಕ್ಕೆ ನೀಡುತ್ತದೆ. ಇವತ್ತಿಗೂ ನನ್ನಿಷ್ಟದ ಚಲನಚಿತ್ರಗಳಲ್ಲಿ ಒಂದಾಗಿರುಚ, ೨೦೦೪ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ ಕಾದಲ್ ಕೂಡಾ ಇದೇ ಬಗೆಯ ಸಾಮಾಜಿಕ ಅಂಶಗಳನ್ನು ಚರ್ಚಿಸಿ ಚಿತ್ರಿಸಿತ್ತು. ಆದರೆ ಅದು ಆಕಾರದ ಕುರಿತು ತೀರಾ ಚಿಂತಿಸದೇ ತನ್ನ ಕಥನದಲ್ಲಿಯೇ ಹೆಚ್ಚು ನೈಜತೆಯನ್ನು ಸೃಜಿಸಿತ್ತು.
ಇಂಗ್ಲೀಷಿ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಡೇವಿಡ್ ತನ್ನ ವೃತ್ತಿ ಜೀವನದಲ್ಲಿ ಈಗಾಗಲೇ ಸಂಶೋಧಕ, ಪ್ರಾಧ್ಯಾಪಕ, ಪತ್ರಕರ್ತ ಹೀಗೆ ಹಲವು ಪಾತ್ರಗಳನ್ನ ಅಭಿನಯಿಸಿದ್ದರೂ ತನ್ನನ್ನು ‘ಆಲೋಚನೆಯ ಹುಳ’ (thinking reed) ಎಂದಷ್ಟೇ ಕರೆದುಕೊಳ್ಳುತ್ತಾರೆ. ಮೂಲತಃ ಇಂಗ್ಲೇಂಡಿನವರು. ಬದುಕಿನ ಹೆಚ್ಚಿನ ಭಾಗ ಕಳೆದದ್ದು ಫ್ರಾನ್ಸಿನಲ್ಲಿ. ಸದ್ಯ ಬೆಂಗಳೂರು ವಾಸಿ.