ರಾಜೇಂದ್ರ ಪ್ರಸಾದ್ ಕಾವ್ಯದ ಅಸಲು ಕಸುಬು ಮತ್ತು ಸಾಮಾಜಿಕ ಬದ್ಧತೆ

ಋತುಮಾನ ಆಂಡ್ರಾಯ್ಡ್ ಆ್ಯಪ್‌ ಈಗ ಲಭ್ಯ.  ಈ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ

 

ರಾಜೇಂದ್ರ ಪ್ರಸಾದ್ ಇದುವರೆಗೆ ಭೂಮಿಗಂಧ (2006), ಒಂದಿಷ್ಟು ಪ್ರೀತಿಗೆ (2013), ಚಂದ್ರ ನೀರ ಹೂ (2013), ಕೋವಿ ಮತ್ತು ಕೊಳಲು (2014) ಕವನ ಸಂಕಲನಗಳನ್ನು ಪ್ರಕಟಿಸಿದ್ದು ಇದೀಗ ಲಾವೋನ ಕನಸು (2016) ಹೊರತಂದಿದ್ದಾರೆ. ಇವರ ಕವಿತೆಗಳು ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡು ಪ್ರಸಿದ್ಧಿ ಪಡೆದಿವೆ. ಕೋವಿ ಮತ್ತು ಕೊಳಲು ಸಂಕಲನಕ್ಕೆ ಕಾವ್ಯ ಓದುಗರಾದ ಟೀನಾ ಶಶಿಕಾಂತ್ ಹಿನ್ನುಡಿ ಬರೆದಿದ್ದು ಇವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧರಾಗಿರುವ ಬಗೆಯನ್ನು ತಿಳಿಸುತ್ತದೆ.

 

ಇಪ್ಪತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಹೆಚ್ಚು ಬಳಕೆಗೆ ಬಂದ ಕಂಪ್ಯೂಟರ್, ಇಂಟರ್ನೆಟ್, ಮತ್ತು ಸಾಮಾಜಿಕ ಜಾಲತಾಣಗಳು ಇಪ್ಪತೊಂದನೆಯ ಶತಮಾನದ ಆದಿ ಭಾಗದಲ್ಲಿ ಜೀವನದ ಭಾಗವಾಗಿಬಿಟ್ಟವು. ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ ರಾಜ್ಯ ಮಟ್ಟದ ಕನ್ನಡ ದಿನಪತ್ರಿಕೆಗಳು ವಾರಕ್ಕೊಮ್ಮೆ ತಮ್ಮ ಪುರವಣಿಗಳಲ್ಲಿ ಐದಾರು ಜನ ಕವಿಗಳ ರಚನೆಗಳನ್ನು ಮಾತ್ರ ಪ್ರಕಟಿಸಲು ಸಾಧ್ಯವಿತ್ತು. ಹೊಸ ಕವಿಗಳ ಕವಿತೆಗಳು ಈ ಪತ್ರಿಕೆಗಳಲ್ಲಿ ಜಾಗ ಪಡೆಯುವುದು ಅಷ್ಟು ಸುಲಭಸಾಧ್ಯವಿರಲಿಲ್ಲ. ಇ-ಪತ್ರಿಕೆಗಳು ಮತ್ತು ಸಾಮಜಿಕ ಜಾಲತಾಣಗಳು ಶುರುವಿಟ್ಟ ಮೇಲೆ ಕನ್ನಡದಲ್ಲಿ ಬರೆಯುತ್ತಿದ್ದ ಯುವ ಕವಿಗಳು ಮತ್ತು ಹೊಸಕವಿಗಳಿಗೆ ಪ್ರಕಟಣೆಯ ಕೊರತೆಯನ್ನು ನೀಗಿಸುವ ಮುಕ್ತ ಅವಕಾಶ ದೊರೆಯಿತು. ರಾಜೇಂದ್ರ ಪ್ರಸಾದ್ ಈ ಅವಕಾಶವನ್ನು ಪರಿಣಾಮಕಾರಿಯಾಗಿ ಸದುಪಯೋಗ ಪಡಿಸಿಕೊಂಡವರಲ್ಲಿ ಪ್ರಮುಖರಾಗಿ ಕಾಣುತ್ತಾರೆ.

 

ವ್ಯಕ್ತಿಯ ಮನಸ್ಸು ಮತ್ತು ವ್ಯಕ್ತಿತ್ವ ಕಂಪ್ಯೂಟರ್ಗೆ ನೀಡುವ ಇನ್ಪುಟ್ನಂತೆ ಅವನ ಆಸಕ್ತಿ, ಓದು, ಆಲೋಚನೆಗಳನ್ನು ಅವಲಂಬಿಸಿದ್ದರೂ ಮನಸ್ಸಿನ ಕಾರ್ಯಕ್ಷಮತೆ-ಕಾರ್ಯಪಟುತ್ವ ಮತ್ತು ಸ್ಫುರಣೆಯ ಪ್ರೇರಣೆ ಆತನ ಹಿಡಿತದಲ್ಲಿರುವುದಿಲ್ಲ. ವ್ಯಕ್ತಿಯ ವೈಯಕ್ತಿಕವಾದ ಮತ್ತು ಅವನ ಒಳಜಗತ್ತಿಗೆ ಸೇರಿದ ಈ ಅಂಶಗಳನ್ನು ಒಳಗೊಂಡಿರುವುದರಿಂದ ಬರೆವಣಿಗೆ ಮಾಡುವುದು ಸುಲಭಸಾಧ್ಯ ಅಥವಾ ಕಷ್ಟಸಾಧ್ಯ ಎಂಬುದು ವ್ಯಕ್ತಿಯ ಒಳಶಕ್ತಿಗೆ ಸೇರಿದ ವಿಷಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ.

ದಿನಿತ್ಯದ ಹಸಿ ಹಸಿ ಸಂಗತಿಗಳಿಗೆ ಪ್ರತಿಕ್ರಿಯೆ ದಾಖಲಾಗುವ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಬರಹಗಳೂ ಅಷ್ಟೇ ಹಸಿ ಹಸಿಯಾಗಿರಲು ಸಾಧ್ಯ. ಯಾವುದೇ ಕ್ರಿಯಾಶೀಲ ಬರಹವೊಂದು ಅಗಾಧ ತನ್ಮಯತೆ ಮತ್ತು ತೀವ್ರತೆಯನ್ನು ಬೇಡುತ್ತದೆ. ಯಾವ ಒಂದು ಸಾಲನ್ನೂ ಹರಿಬಿರಿಯಲ್ಲಿ ಬರೆಯಲು ಸಾಧ್ಯವಿಲ್ಲ. ಮನಸ್ಸನ್ನು ಕಾಡಿದ ಸಂಗತಿಯೊಂದನ್ನು ರೂಪಕದ ಭಾಷೆಯಲ್ಲಿ ಹೇಳಿಕೊಳ್ಳಬೇಕಾದರೆ ಅ ಸಂಗತಿ ಮನಸ್ಸನ್ನು ಕದಡಿ ಆ ಕುರಿತು ಸುಪ್ತ ಮನಸ್ಸು ಚಿಂತನೆ ನಡೆಸಿರಬೇಕಿರುತ್ತದೆ. ಹಾಗೆ ಆದಲ್ಲಿ ಮಾತ್ರ ಅನುಭವಕ್ಕೆ ಪೂರಕವಾದ/ಹತ್ತಿರವಾದ ಚಿತ್ರಗಳು ತೋಚುತ್ತವೆ. ಈ ಚಿತ್ರಗಳು ಬರೆಯಹೊರಟವನ ಭಾವಚಿಂತನೆಯ ನೆಲೆಗಟ್ಟು ತಾತ್ವಿಕ ಆಯಾಮವಾಗಿ ತೋರಿ ಪರಿಣಾಮಕಾರಿಯಾಗಿ ಬಿಂಬಿತವಾಗುವಂತಿದ್ದಲ್ಲಿ ಓದುಗರೊಡನೆ ಮಾತನಾಡಬಲ್ಲವಾಗಿರುತ್ತವೆ. ಈ ಕ್ರಿಯೆ ವ್ಯಕ್ತಿಯ ಮನಸ್ಸು ಕ್ರಿಯಾಶೀಲವಾಗುವ, ಕಾರ್ಯನಿರ್ವಹಿಸುವ, ಗ್ರಹಿಸುವ, ಚಿಂತಿಸುವ ಮತ್ತು ಮಂಡಿಸುವ ಕಾರ್ಯಕ್ಷಮತೆ-ಕಾರ್ಯಪಟುತ್ವಗಳಿಗೆ ಸಂಬಂಧಪಟ್ಟಿರುತ್ತದೆ. ವ್ಯಕ್ತಿಯ ಮನಸ್ಸು ಮತ್ತು ವ್ಯಕ್ತಿತ್ವ ಕಂಪ್ಯೂಟರ್ಗೆ ನೀಡುವ ಇನ್ಪುಟ್ನಂತೆ ಅವನ ಆಸಕ್ತಿ, ಓದು, ಆಲೋಚನೆಗಳನ್ನು ಅವಲಂಬಿಸಿದ್ದರೂ ಮನಸ್ಸಿನ ಕಾರ್ಯಕ್ಷಮತೆ-ಕಾರ್ಯಪಟುತ್ವ ಮತ್ತು ಸ್ಫುರಣೆಯ ಪ್ರೇರಣೆ ಆತನ ಹಿಡಿತದಲ್ಲಿರುವುದಿಲ್ಲ. ವ್ಯಕ್ತಿಯ ವೈಯಕ್ತಿಕವಾದ ಮತ್ತು ಅವನ ಒಳಜಗತ್ತಿಗೆ ಸೇರಿದ ಈ ಅಂಶಗಳನ್ನು ಒಳಗೊಂಡಿರುವುದರಿಂದ ಬರೆವಣಿಗೆ ಮಾಡುವುದು ಸುಲಭಸಾಧ್ಯ ಅಥವಾ ಕಷ್ಟಸಾಧ್ಯ ಎಂಬುದು ವ್ಯಕ್ತಿಯ ಒಳಶಕ್ತಿಗೆ ಸೇರಿದ ವಿಷಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ.

 

ಸಾಮಾಜಿಕ ಜಾಲತಾಣಗಳಲ್ಲಿ ದಾಖಲಾಗುವ ಅಭಿಪ್ರಾಯ/ಬರಹಗಳು ವೈಯಕ್ತಿಕವಾಗಿದ್ದರೂ ಸಮಾಜದ ಆಗುಹೋಗುಗಳನ್ನು ಕುರಿತಿರುತ್ತವೆ. ಕವಿ ತನ್ನ ವೈಯಕ್ತಿಕ ಜೀವನಾನುಭವದಿಂದ ಪಡೆಯುವ ಭಾವಚಿಂತನೆಯನ್ನು ಸಾಮಾನ್ಯೀಕರಿಸುವ ಮೂಲಕ ಸಾರ್ವತ್ರೀಕರಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾನೆ. ತನ್ನ ವೈಯಕ್ತಿಕ ಜೀವನಾನುಭವದಿಂದ ಪಡೆಯದ ಭಾವಚಿಂತನೆಯ ವಸ್ತು ವಿಷಯಗಳನ್ನು ನಿರೂಪಿಸುವ ಸಂದರ್ಭದಲ್ಲೂ ಆತ ವಸ್ತುನಿಷ್ಟತೆಯನ್ನು ಮೆರೆಯದೆ ವ್ಯಕ್ತಿನಿಷ್ಟತೆಯನ್ನೆ ತಾಳಬೇಕಾಗುತ್ತದೆ, ಓದುಗನ ಅನುಭವದ ಮಿತಿಗೆ ಒಳಪಟ್ಟಿರುವಂತೆ ಹೊರಹಾಕಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅಂಥ ಕ್ರಿಯಾಶೀಲ ಬರಹಗಳು ವಾಚ್ಯವಾಗುವ ಇಲ್ಲವೆ ಪೇಲವವಾಗುವ ಸಾಧ್ಯತೆಗಳು ಹೆಚ್ಚು. ಹೀಗಿದ್ದರೂ ಸಮಾಜದ ಸಂಗತಿಗಳಿಗೆ ಮಿಡಿಯುವುದು ಕವಿಯೊಬ್ಬನ ಕಾವ್ಯ ರಚನಾ ಬದ್ಧತೆಯ ಮೂಲಭೂತ ಅಂಶವೂ ಆಗಿರುತ್ತದೆ. ಹಾಗೆಂದು ಆತ ವ್ಯಕ್ತಿನಿಷ್ಟ ನೆಲೆಯ ಜೀನಾನುಭವವನ್ನು ಪೂತರ್ಾ ಬಿಟ್ಟುಕೊಡುವಂತೆಯೂ ಇಲ್ಲ, ಸಮಾಜವನ್ನು ಫೂರ್ಣವಾಗಿ ಆವಾಹನೆ ಮಾಡಿಕೊಳ್ಳುವಂತೆಯೂ ಇಲ್ಲ. ಇವೆರಡರ ನಡುವಿನ ಸಾಮರಸ್ಯ ಮತ್ತು ಸುಸಂಗತೆಯನ್ನು ಸಾಧಿಸುವ ಕಾರ್ಯಪಟುತ್ವದ ಮೇಲೆ ಕವಿಯ ಹಾದಿ ಸುಗಮವೋ ದುರ್ಗಮವೋ ಎಂಬ ಅಂಶ ಅವಲಂಬಿಸಿರುತ್ತದೆ. ಒಂದೇ ಹಿಡಿಯಲ್ಲಿ ವ್ಯಕ್ತಿ ಹಿತ ಮತ್ತು ಸಮೂಹ ಹಿತ ಸಾಧಿಸುವ ಈ ಕ್ರಮದಲ್ಲಿ ಯಶೋವಂತನಾದಲ್ಲಿ ತನ್ನ ಜೀವಿತ ಕಾಲಾವಧಿಯ ಸಮಾಜದೊಂದಿಗೆ ಮತ್ತು ಸಾಮಾಜಿಕ ಸಮಸ್ಯೆಗಳೊಂದಿಗೆ ಮಾತನಾಡಲು, ಚಿಂತಿಸಲು ಮತ್ತು ಅವುಗಳ ಕುರಿತು ಹೊಸ ಹೊರದಾರಿಗಳನ್ನು ಹುಡುಕಲು ಪ್ರಯೋಗಶೀಲನಾಗುವಲ್ಲಿ ಅವಕಾಶಗಳು ತೆರೆದುಕೊಳ್ಳುತ್ತವೆ. ಆಗ ಮಾತ್ರ ಬರವಣಿಗೆ ಸಾಂಸ್ಕೃತಿಕ ಆಯಾಮ ಪಡೆದುಕೊಳ್ಳುತ್ತದೆ.

 

ಯಾವುದೇ ಬರಹ ಹಸಿ ಹಸಿ ಸಂಗತಿಗಳಿಗೆ ತೋರುವ ಹರಿಬಿರಿ ಪ್ರತಿಕ್ರಿಯೆ ಆಗಿರುವುದಿಲ್ಲವಾದ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಮೂಡುವ ಬರಹಗಳಾಗಲೀ ಬರಹಗಾರರಾಗಲೀ ಎದುರಿಸಬೇಕಾದ ಇಕ್ಕಟ್ಟುಗಳು, ಬಿಕ್ಕಟ್ಟುಗಳು ಮತ್ತು ಸವಾಲುಗಳು ಸರಳವಲ್ಲವೆಂದೆ ತೋರುತ್ತದೆ. ಇವನ್ನು ಎದುರಿಸಿ ಗೆದ್ದುಬಂದವರು ಬರಹ ಬದುಕಿನಲ್ಲಿ ಕೊಂಡವನ್ನು ಹಾದು ಬಂದವರಾಗಿದ್ದು ಆಯಾ ಸಂದರ್ಭಕ್ಕನುಗುಣವಾಗಿ ದಿಢೀರನೆ ಬರಹ ಮಾಡಬಲ್ಲ ಶಕ್ತಿ ಸಾಮಥ್ರ್ಯ ಪಡೆದವರಾಗಿರುತ್ತಾರೆ. ಇವರನ್ನು ಒಂದು ಬಗೆಯಲ್ಲಿ ಆಶುಕವಿಗಳೆಂದೆ ಕರೆಯಬೇಕು ಮತ್ತು ಇಂಥವರ ಕ್ರಿಯಾಪಟುತ್ವ ಅಸಾಧಾರಣ ಮತ್ತು ಅಗಾಧವೆಂದೆ ಹೇಳಬೇಕು.

 

ಹೀಗಿದ್ದರೂ ವರ್ಡ್ಸ್ ವರ್ತ್ the spontaneous overflow of powerful feelings: it takes its origin from emotion recollected in tranquility ಎಂದು ತನ್ನ ಕಾವ್ಯ ಕುರಿತು ನೀಡಿರುವ ವಿವರಣೆಯನ್ನು ಕನ್ನಡ ನವೋದಯ ಕವಿಗಳು ನಂಬಿ ಅನುಸರಿಸಿದ್ದಾರೆ. ಇಂಗ್ಲಿಶ್ನ ರೊಮ್ಯಾಂಟಿಕ್ ಕಾವ್ಯ ಪರಂಪರೆಯ ಧರ್ಮ ನಿರಪೇಕ್ಷ ಮನೋಭಾವ, ಪ್ರಕೃತಿಯೊಂದಿಗೆ ತಾದ್ಯಾತ್ಮ ಮತ್ತು ಅವಿನಾಭಾವ ಸಂಬಂಧ, ಆನುಭಾವಿಕ ನೋಟ ಇವನ್ನು ಕನ್ನಡ ನವೋದಯ ಕಾವ್ಯ ತನ್ನದಾಗಿಸಿಕೊಂಡಿದೆ. ಗೋವಿಂದ ಪೈ ಕನ್ನಡ ಕಾವ್ಯ ಪರಂಪರೆಯಲ್ಲಿ ಹರಿದು ಬಂದ ಆದಿಪ್ರಾಸವನ್ನು ಕೈಬಿಡಲು ಮಾನಸಿಕ ತುಮುಲವನ್ನು ಎದುರಿಸಿದ್ದಾರೆ. ಬಿಎಂಶ್ರೀ ತಮ್ಮ ಇಂಗೀಷ್ ಗೀತಗಳು ಸಂಕಲನದ ಕವನಗಳಲ್ಲಿ ನವೋದಯದ ಅಗತ್ಯ ಆಶಯಗಳಿಗೆ ಅನುಗುಣವಾದ ಅದರ ಭಾಷಿಕ ನಡೆ, ನುಡಿ, ಮೈಕಟ್ಟುಗಳನ್ನು ಹೇಗೆ ಮುರಿದು ಕಟ್ಟಿಕೊಂಡಿದ್ದಾರೆಂದು ತೀನಂಶ್ರೀ ಅವರು ತೋರಿಸಿಕೊಟ್ಟಿದ್ದಾರೆ. `ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು’ ಎಂದು ಗೋಕಾಕ ನವ್ಯ ಮನೋಭಾವದಲ್ಲಿ ಕ್ರಾಂತಿಕಾರಿ ಪ್ರತಿಜ್ಞೆ ಮಾಡಿದರೂ ನವೋದಯದ ಹಾದಿಯಲ್ಲಿ ಕಟ್ಟುವೆವವು ನಾವು, ಮೋಹನ ಮುರಲಿ ರಚನೆಯ ನಂತರವೂ ಅಡಿಗ ನವ್ಯಕಾವ್ಯದ ವ್ಯಕ್ತಿ ವಿಶೇಷತೆ, ವೈಯಕ್ತಿಕತೆ, ಒಳತೋಟಿ, ವ್ಯಂಗ್ಯ, ಸಂಕೀರ್ಣ ಪ್ರತಿಮಾ ವಿನ್ಯಾಸದ ಆಶಯಕ್ಕೆ ಅನುಗುಣವಾಗಿ ಭಾಷೆಯಲ್ಲಿ ಆಡುಮಾತಿನ ಪ್ರಯೋಗ ಮತ್ತು ನಡೆಯಲ್ಲಿ ಛಂದೋಪ್ರಯೋಗ ಅಂತರ್ಗತಗೊಳಿಸಿಕೊಂಡ ಲಯ ವಿನ್ಯಾಸದ ಮೂಲಕ ತಮ್ಮ ಅಸಲು ಕಸುಬನ್ನು ಸಾಧಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಪ್ರತಿಯೊಂದು ಕವಿತೆ ರಚನೆಯ ಸಂದರ್ಭದಲ್ಲೂ ವರ್ಡ್ಸ್ ವರ್ತ್ ನ ಕಾವ್ಯ ವ್ಯಾಖ್ಯಾನದಿಂದ ಹೊರಗುಳಿದು ನವ್ಯ ಕಾವ್ಯ ಕಟ್ಟುವ ಚಿಂತನಾ ಕ್ರಮದಲ್ಲಿ ಪ್ರತಿಯೊಂದೂ ಪದವನ್ನು ಉಜ್ಜಿ ತಿದ್ದಿ ತೀಡಿ ಪ್ರಜ್ಞಾಪೂರ್ವಕ ನೆಲೆಯಲ್ಲಿ ಕಾವ್ಯಶಿಲ್ಪ ಕಟೆದು ಮರುರೂಪಿಸಿಕೊಂಡ ಬಗೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಈ ಎಲ್ಲ ನೆಲೆಗಳನ್ನು ಧಿಕ್ಕರಿಸಿ ಪಾರಂಪರಿಕ ಸಮಾಜದತ್ತ ಮುಖ ಮಾಡಿದ ದಲಿತ ಬಂಡಾಯ ಕಾವ್ಯ ಪ್ರತಿಭಟನಾ ಮೆರಣಿಗೆಯ ಘೋಷವಾಕ್ಯಗಳ ಮೂಲಕ ತನ್ನ ಸ್ವರೂಪವನ್ನು ಪಡೆದುಕೊಂಡಿದ್ದರೂ ಅದರ ಹಿಂದಿರುವ ಬುದ್ಧ, ಮಾರ್ಕ್ಸ್ , ಅಂಬೇಡ್ಕರ್, ಲೋಹಿಯಾ ಮತ್ತು ಸಮಾಜವಾದಿ ಚಿಂತಕರ ಬೌದ್ಧಿಕ ಪರಿಶ್ರಮ ಮರೆಯುವಂತಿಲ್ಲ.

 

ಇಂದಿನ ದಿನಮಾನಗಳಲ್ಲಿ ಸಮಕಾಲೀನ ಆಧುನಿಕೋತ್ತರ ಪಾಶ್ಚಾತ್ಯ ಚಿಂತಕರಾದ ಮೈಕಲ್ ಫೂಕೋ, ರೋಲ್ಯಾಂಡ್ ಬಾಥರ್್, ಸ್ಟ್ಯಾನ್ಲೀ ಫಿಶ್ ಮುಂತಾದವರ ಆಲೋಚನೆಗಳು ನಮ್ಮನ್ನು ಪ್ರಭಾವಿಸುತ್ತಿವೆ. ಕಾವ್ಯ ಎಂಬುದು ಕವಿ ಕಟ್ಟಿಕೊಟ್ಟ ಪಠ್ಯ ಓದುಗರ ಹಲವು ಬಗೆಯ ಓದಿನಲ್ಲಿ ಮರುಹುಟ್ಟು ಪಡೆದುಕೊಳ್ಳುವ ಅರ್ಥ ಪ್ರಕ್ರಿಯೆಯಲ್ಲಿ ಮತ್ತು ಆ ನಂತರದಲ್ಲಿ ನಡೆಯುವ ಸಂವಾದದಲ್ಲಿ ಹುಟ್ಟುತ್ತದೆ. ಯಾವುದೇ ಕೃತಿಯ ಪಠ್ಯ ಕವಿ/ಬರಹಗಾರನೊಬ್ಬನಿಂದ ಹುಟ್ಟಿಕೊಳ್ಳದೆ ಹಲವು ಓದುಗರ ಪಾಲುಗೊಳ್ಳುವಿಕೆಯಲ್ಲಿ ರೂಪುಗೊಳ್ಳುವಂತಹದ್ದು ಆಗಿದೆ. ಹೀಗಾಗಿಯೇ ಬರಹಗಾರನ ಅಧಿಕೃತತೆ ಕಳೆದುಹೋಗಿ ಕೃತಿಯೊಂದು ಹಲವು ಓದುಗರ ಓದಿನಲ್ಲಿ ಹಲವು ಪಠ್ಯಗಳಾಗಿ ಹುಟ್ಟಿಕೊಳ್ಳುತ್ತದೆ ಎಂಬ ವಿಚಾರಗಳು ಪ್ರಚಲಿತದಲ್ಲಿವೆ. ಇದು ಕವಿ ಮತ್ತು ಕಾವ್ಯ ಕುರಿತ ಅನನ್ಯ ಮತ್ತು ಅದ್ವಿತೀಯ ಕಲ್ಪನೆಯನ್ನು ಒಡೆದುಹಾಕಿದೆ.

 

ಈ ಹಿನ್ನೆಲೆಯಲ್ಲಿ ಸಮುದ್ರ ನಿಂತ ನೀರಂತೆ ಕಂಡರೂ ಅದರ ಒಳಹರಿವು ಗೋಚರವಾಗುವುದಿಲ್ಲ: ವಾಯುಭಾರದಲ್ಲಿ ಉಂಟಾಗುವ ಏರುಪೇರು ಚಂಡಮಾರುತವನ್ನು ಎಬ್ಬಿಸಬಲ್ಲದು: ಕ್ರಿಯೆ ಪ್ರತಿಕ್ರಿಯೆ ಇಲ್ಲದ ಶೂನ್ಯದಿಂದ ಜಗತ್ತಿನಲ್ಲಿ ಯಾವುದೂ ಹುಟ್ಟುವುದಿಲ್ಲ, ಏನೂ ಘಟಿಸುವುದಿಲ್ಲ: ಪ್ರತಿಯೊಂದೂ ಚಲನೆ, ಸ್ಫುರಣೆ, ಬದಲಾವಣೆಯ ಹಿಂದೆ ಕಾಣದ ಹಲವಾರು ಒತ್ತಡಗಳು ಕೆಲಸ ಮಾಡುತ್ತಲೆ ಇರುತ್ತವೆ ಎಂಬುದು ಕವಿ-ಕಾವ್ಯ ಸಂದರ್ಭದಲ್ಲೂ ಅನ್ವಯವಾಗುವ ಸಂಗತಿಯಾಗಿದೆ.

 

ಚಂದ್ರ ನೀರ ಹೂ ಸಂಕಲನದ ಮೊದಲ ಪುಟದಲ್ಲಿ ಮಹಾನಾರಾಯಣೋನಿಷತ್ನ ಕೆಲವು ಸಾಲುಗಳ ಉಲ್ಲೇಖವಿದೆ. ಈ ಸಂಕಲನದಲ್ಲಿ ಇದೇ ಹೆಸರಿನ ಕವಿತೆ ತೈತ್ತೀರಿಯ ಅರಣ್ಯಕದಲ್ಲಿನ ‘ಮಂತ್ರಪುಷ್ಪಂ’ನನ್ನು ಆಧರಿಸಿದ್ದಾಗಿದೆ. ಇದೇ ಸಂಕಲನದಲ್ಲಿ ಚಾರಿತ್ರಿಕ ನೆಲೆಯಲ್ಲಿ ಜೆರುಸಲೆಂ ಕುರಿತು ಮೂರು ಕವಿತೆಗಳಿವೆ. ಅಲ್ಲದೆ ಕೋವಿ ಮತ್ತು ಕೊಳಲು ಸಂಕಲನದಲ್ಲಿ ಲಾ ಇಲಾಹ ಇಲ್ಲಲ್ಲಾಹ್, ಗೋಲ್ಗಥೆಯ ಶಿಲುಬೆ, ಯಹೋವಾ, ಇರಾಕಿನ ಒಂದು ಸುಡು ಮಧ್ಯಾಹ್ನ, ಪ್ಯಾಲೈಸ್ಟೈನ್ ಮೇಲೆ ಇಸ್ರೇಲ್ ದಾಳಿಯ ಪರಿಣಾಮ ಕುರಿತ ಸೋಂಕು, ಸಾಕ್ಷ್ಯವಿಲ್ಲದ ಸಾವು, ಕೊರಿಯಾ ಭಾಷೆಯಲ್ಲಿನ ಕ್ರಮ ಸಂಖ್ಯೆ ಹಾನ್, ಧೂಳ್, ಸೆತ್, ಮರಾಠಿ ಸಂತಕವಿ ಜ್ಞಾನದೇವ, ಮಂಟೇಸ್ವಾಮಿ, ಹರ್ಕ್ಯುಲಸ್ ರನ್ನು ಉಲ್ಲೇಖಿಸುವ ಹೊಸಕಾಲಚಕ್ರ ಹುಟ್ಟುವ ಕನಸು ಮುಂತಾದ ಕವಿತೆಗಳು ಮಾನವನ ನಾಗರಿಕತೆಯ ಚರಿತ್ರೆಯ ವಿವಿಧ ಪುಟಗಳೊಂದಿಗೆ ಸಂಬಂಧ ಪಡೆದಿವೆ. ಲಾವೋನ ಕನಸು ಸಂಕಲನದಲ್ಲಿ ಅಮೆರಿಕೆಯ ಕವಿ ಚಾರ್ಲ್ಸ್ ಬುಕೋವೆಸ್ಕಿ ಮತ್ತು ಚೀನಾದ ತತ್ತ್ವಜ್ಞಾನಿ ಲಾವೋನ ಸಂಬಂಧದಲ್ಲಿ ರಚನೆಗಳಿವೆ. ಪ್ರೇಮ ಮೋಕ್ಷದ ಪರಿಯು ಕವಿತೆಯಲ್ಲಿ ತಮಿಳು ಕವಿ ಆಂಡಾಳ್ರ ತಿರುಪ್ಪಾವೈ ಕಾವ್ಯದಿಂದ ಆಯ್ದ ಸಾಲುಗಳು ಉಲ್ಲೇಖಿತವಾಗಿವೆೆ. ಅಂಗೈನಲ್ಲಿನ ಹುಣ್ಣು ಮತ್ತು ಅರಗಿನರಮನೆಯ ನ್ಯಾಯ ಕವಿತೆ ಸಾಮಾಜಿಕ ನ್ಯಾಯ ಕುರಿತ ಪ್ರಚಲಿತ ಸುದ್ದಿಯನ್ನಾಧರಿಸಿದೆ. ಅಲ್ಲದೆ ಗಾಂಧಿ, ಶಾಸ್ತ್ರಿ, ರಾಮ, ಕೃಷ್ಣ, ಸ್ಥಳೀಯ ದೈವಗಳು-ಪುರಾಣಗಳು ಜಾಗ ಪಡೆದುಕೊಂಡಿವೆ.

ಇಂಥ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದ್ ತಮ್ಮ ಕವನ ಸಂಕಲನಗಳಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುತ್ತ ‘ಸಾಹಿತ್ಯದ ಓದು-ಬರಹ, ಕರ್ನಾಟಕ ಸಂಗೀತ, ಇತಿಹಾಸ, ಬೌದ್ಧಮತ, ಝೆನ್ ಪೇಟಿಂಗ್. ತತ್ವ ಮತ್ತು ಪಾಕಶಾಸ್ತ್ರಗಳಲ್ಲಿ ಆಸಕ್ತ’ರಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಚಂದ್ರ ನೀರ ಹೂ ಸಂಕಲನದ ಮೊದಲ ಪುಟದಲ್ಲಿ ಮಹಾನಾರಾಯಣೋನಿಷತ್ನ ಕೆಲವು ಸಾಲುಗಳ ಉಲ್ಲೇಖವಿದೆ. ಈ ಸಂಕಲನದಲ್ಲಿ ಇದೇ ಹೆಸರಿನ ಕವಿತೆ ತೈತ್ತೀರಿಯ ಅರಣ್ಯಕದಲ್ಲಿನ ‘ಮಂತ್ರಪುಷ್ಪಂ’ನನ್ನು ಆಧರಿಸಿದ್ದಾಗಿದೆ. ಇದೇ ಸಂಕಲನದಲ್ಲಿ ಚಾರಿತ್ರಿಕ ನೆಲೆಯಲ್ಲಿ ಜೆರುಸಲೆಂ ಕುರಿತು ಮೂರು ಕವಿತೆಗಳಿವೆ. ಅಲ್ಲದೆ ಕೋವಿ ಮತ್ತು ಕೊಳಲು ಸಂಕಲನದಲ್ಲಿ ಲಾ ಇಲಾಹ ಇಲ್ಲಲ್ಲಾಹ್, ಗೋಲ್ಗಥೆಯ ಶಿಲುಬೆ, ಯಹೋವಾ, ಇರಾಕಿನ ಒಂದು ಸುಡು ಮಧ್ಯಾಹ್ನ, ಪ್ಯಾಲೈಸ್ಟೈನ್ ಮೇಲೆ ಇಸ್ರೇಲ್ ದಾಳಿಯ ಪರಿಣಾಮ ಕುರಿತ ಸೋಂಕು, ಸಾಕ್ಷ್ಯವಿಲ್ಲದ ಸಾವು, ಕೊರಿಯಾ ಭಾಷೆಯಲ್ಲಿನ ಕ್ರಮ ಸಂಖ್ಯೆ ಹಾನ್, ಧೂಳ್, ಸೆತ್, ಮರಾಠಿ ಸಂತಕವಿ ಜ್ಞಾನದೇವ, ಮಂಟೇಸ್ವಾಮಿ, ಹರ್ಕ್ಯುಲಸ್ ರನ್ನು ಉಲ್ಲೇಖಿಸುವ ಹೊಸಕಾಲಚಕ್ರ ಹುಟ್ಟುವ ಕನಸು ಮುಂತಾದ ಕವಿತೆಗಳು ಮಾನವನ ನಾಗರಿಕತೆಯ ಚರಿತ್ರೆಯ ವಿವಿಧ ಪುಟಗಳೊಂದಿಗೆ ಸಂಬಂಧ ಪಡೆದಿವೆ. ಲಾವೋನ ಕನಸು ಸಂಕಲನದಲ್ಲಿ ಅಮೆರಿಕೆಯ ಕವಿ ಚಾರ್ಲ್ಸ್ ಬುಕೋವೆಸ್ಕಿ ಮತ್ತು ಚೀನಾದ ತತ್ತ್ವಜ್ಞಾನಿ ಲಾವೋನ ಸಂಬಂಧದಲ್ಲಿ ರಚನೆಗಳಿವೆ. ಪ್ರೇಮ ಮೋಕ್ಷದ ಪರಿಯು ಕವಿತೆಯಲ್ಲಿ ತಮಿಳು ಕವಿ ಆಂಡಾಳ್ರ ತಿರುಪ್ಪಾವೈ ಕಾವ್ಯದಿಂದ ಆಯ್ದ ಸಾಲುಗಳು ಉಲ್ಲೇಖಿತವಾಗಿವೆೆ. ಅಂಗೈನಲ್ಲಿನ ಹುಣ್ಣು ಮತ್ತು ಅರಗಿನರಮನೆಯ ನ್ಯಾಯ ಕವಿತೆ ಸಾಮಾಜಿಕ ನ್ಯಾಯ ಕುರಿತ ಪ್ರಚಲಿತ ಸುದ್ದಿಯನ್ನಾಧರಿಸಿದೆ. ಅಲ್ಲದೆ ಗಾಂಧಿ, ಶಾಸ್ತ್ರಿ, ರಾಮ, ಕೃಷ್ಣ, ಸ್ಥಳೀಯ ದೈವಗಳು-ಪುರಾಣಗಳು ಜಾಗ ಪಡೆದುಕೊಂಡಿವೆ. ಇವೆಲ್ಲ ಮಾನವ ಕೇಂದ್ರಿತ ಜಗತ್ತಿನ ವ್ಯವಹಾರಗಳಲ್ಲಿ ತೀವ್ರ ಆಸಕ್ತಿ, ಮಾನವ ಏಳಿಗೆಯನ್ನು ಮುಂದುಮಾಡಿಕೊಂಡಿರುವ ವಿಭಿನ್ನ ಮತಧರ್ಮಗಳು ತಮ್ಮ ಉಳಿವಿಗಾಗಿ ನಡೆಸುವ ಧರ್ಮ ರಾಜಕಾರಣದ ವಿಭಿನ್ನ ಆಯಾಮಗಳ ಚಟುಟಿಕೆಗಳಲ್ಲಿನ ಅತೀವ ಕುತೂಹಲ, ಮಾನವ ಪರವಾದ ಮನನೀಯ ಚಿಂತನೆ, ಆಲೋಚನೆಗಳಿಗಾಗಿ ವ್ಯಾಪಕ ಓದುಗಳಿರುವ ಬೌದ್ಧಿಕ ಪೂರ್ವಸಿದ್ಧತೆಯೊಂದು ಇಲ್ಲಿ ಮೈತಳೆದಿದ್ದು ಕವಿಯ ಮಿದುಳಿನಲ್ಲೊಂದು ನಿಲುತಾಣ ಮಾಡಿಕೊಂಡಿದೆ. ಅಂದರೆ ಈ ರಚನೆಗಳ ಹಿಂದೆ ಕವಿಯ ಬುದ್ಧಿಭಾವಗಳು ಘೋಷಿತ ವಲಯದಾಚೆಗಿನ ಅಘೋಷಿತವಾದ ಹಲವು ದಿಗಂತದೆಡೆಗೆ ದಾಂಗುಡಿ ಇಟ್ಟಿವೆ. ರಾಜೇಂದ್ರ ಪ್ರಸಾದ್ ಅವರ ರಚನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧವಾಗಿದ್ದು ಸಾಮಾಜಿಕ ಜಾಲತಾಣಗಳ ದಿನನಿತ್ಯದ ಹಸಿಬಿಸಿ ಸಂಗತಿಗಳಿಗೆ ಪ್ರತಿಕ್ರಿಯಿಸುವ ಅಥವಾ ದಾಖಲಿಸುವ ಕಾವ್ಯವಾಗಿರುವಂತೆ ಕಾಣುವುದು ಮೇಲುತೋರಿಕೆ ಸತ್ಯವಷ್ಟೆ. ಇದಕ್ಕೆ ಪೂರಕವಾಗಿ ದಿನನಿತ್ಯ ಘಟಿಸುವ ಯಾವುದೇ ವಸ್ತು ವಿಷಯ ಕುರಿತು ಕಾವ್ಯ ಹೊಸೆಯಲು ಪ್ರಯತ್ನಪಟ್ಟ ರಚನೆಗಳು ಈ ಸಂಕಲನಗಳಲ್ಲಿ ಸಾಕಷ್ಟು ಇವೆ. ಆದರೆ ವಾಸ್ತವದಲ್ಲಿ ಪ್ರತಿಯೊಂದು ಯಶಸ್ವಿ ರಚನೆಯ ಹಿಂದೆ ಸಾಕಷ್ಟು ಮಡುಗಟ್ಟಿದ ಬೌದ್ಧಿಕ ಮತ್ತು ಭಾವುಕ ಕಸರತ್ತು, ಸಿದ್ಧತೆ, ಪರಿಣತಿ, ಬದ್ಧತೆ ಇರುವುದು ಮನದಟ್ಟಾಗುವ ಅಂಶವಾಗಿದೆ.

 

ಇದರಿಂದಾಗಿ ಕಾವ್ಯದ “ಅಸಲು ಕಸುಬು” ಕುರಿತು ರಾಜೇಂದ್ರ ಪ್ರಸಾದ್ ಗಂಭೀರವಾಗಿ ಪ್ರಜ್ಞಾವಂತಿಕೆಯಿಂದ ಮಾತನಾಡುತ್ತಾರೆ. ಇದು ಕಾವ್ಯಾಸಕ್ತರಿಗೆ ಸಂತೋಷವುಂಟುಮಾಡುವ ಸಂಗತಿಯೇ ಆಗಿದೆ. ಇಲ್ಲಿ ಕಾವ್ಯ ಮೈತಳೆದಿರುವ ಕ್ರಮವಿಧಾನ ಕುರಿತು ಅವರ ಮಾತು ಹೀಗಿದೆ.

 • `ಆನು ಒಲಿದಂತೆ ಹಾಡುವೆ’ -ಅಷ್ಟೇ! ಅಕಾಡೆಮಿಕ್ ಸೂತ್ರ ಬಂಧಗಳಿಂದ ಕಾವ್ಯವನ್ನು ನಲುಗಿಸುವುದು ನನಗಿಷ್ಟವಿಲ್ಲ… ಆದರೆ ಬಹುಮುಖ್ಯವಾಗಿ ವರ್ತಮಾನದಲ್ಲಿ ಗಮನಿಸಬೇಕಾದದ್ದು `ಕಾವ್ಯ’ ಹಳೆಯ ಡೆಫನಿಷನ್ನುಗಳಲ್ಲಿ ಉಳಿದಿಲ್ಲ. ಅದು ಬರಿಯ ಅಕ್ಷರ ರೂಪಿಯಷ್ಟೇ ಆಗಿಲ್ಲ. ಬದಲಾದ ಕಾಲಘಟ್ಟದಲ್ಲಿ ತನ್ನ ಹರಹನ್ನು ಬೇಕಾದಷ್ಟೂ ವಿಸ್ತರಿಸಿಕೊಂಡು ಅಕ್ಷರಗಳ ಗಡಿಯನ್ನು ಮೀರಿ ಕಲೆ, ಸಿನಿಮಾ, ವ್ಯವಸಾಯ, ತೋಟ, ಅಡುಗೆ, ಕಸೂತಿ, ಸಮಾಜ ಸೇವೆ ಇನ್ನೂ ನೂರಾರು ರೂಪಗಳಲ್ಲಿ ಕಾಣಿಸಿಕೊಳ್ಳತೊಡಗಿದೆ.(ಕೋವಿ ಮತ್ತು ಕೊಳಲು- ಚೂರೇ ಚೂರು ಮಾತು ಪು. 13-14)
 • ಈ ಕಾಲದ ಕಾವ್ಯದ ಉದ್ದೇಶ ಏನು? ಹಣದ ಹಿಂದೆ ಬಿದ್ದ ಧಾವಂತ ಬದುಕು ಇವತ್ತು ಎಲ್ಲವನ್ನೂ ಮನರಂಜನೆಯ ನಿಟ್ಟಿನಲ್ಲಿಯೇ ನೋಡುವಾಗ ಕಾವ್ಯವೂ ಇವತ್ತಿನ ಮನರಂಜನೆಯ ಪಟ್ಟಿಯಲ್ಲಿ ಸೇರಿದೆಯೇ? ಅಥವಾ ಯಾಕೆ ಸೇರಬಾರದು ಮತ್ತು ಯಾಕೆ ಕಾವ್ಯ ಅಕಾಡೆಮಿಕ್ ಆಗಿಯೇ ಉಳಿಯಲೂಬಾರದು, ಎನ್ನುವುದು ನನ್ನಲ್ಲಿ ಹುಟ್ಟಿಕೊಂಡಿರುವ ಪ್ರಶ್ನೆ ಅಥವಾ ಗೊಂದಲ… ಕಾವ್ಯಕ್ಕೆ ಅಘೋಷಿತವಾದ ಒಂದು ಸಾಮಾಜಿಕ ಬದ್ಧತೆಯಿದೆ. ಆ ಬದ್ಧತೆಯನ್ನು ಅಭದ್ರಗೊಳಿಸುವ ಕಾವ್ಯ ಅಪ್ರಯೋಜಕ ಎಂದು ಮಾತ್ರ ಹೇಳಬಲ್ಲೆ. (ಲಾವೋನ ಕನಸು-ಒಂದೆರಡು ಮಾತು, ಸಹಿಷ್ಣುವಾಗಿ… ಪು. 105-106)

ಕಾವ್ಯದ ನಾವಿನ್ಯತೆ/ಕ್ರಿಯಾಶೀಲತೆ ಶೈಕ್ಷಣಿಕ ಶಿಸ್ತಿನಿಂದ ಹೊರತಾಗಿದೆ, ಅದು ಸ್ವತಂತ್ರವಾದ ಪ್ರತ್ಯೇಕ ಚಿಂತನಾಕ್ರಮದಿಂದ ಕೂಡಿದೆ, ಮಾತ್ರವಲ್ಲ ಚಲನಶೀಲ ಸಮಾಜದ ಜೀವನಾಡಿಯಾಗಿದೆ, ಹಾಗಾಗಿ ಶೈಕ್ಷಣಿಕ ಶಿಸ್ತಿಗೊಳಪಟ್ಟ ಕ್ರಿಯಾಶೀಲತೆ ತನ್ನ ಅನನ್ಯತೆಯನ್ನು ಪಡೆದುಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಅವರ ಕವಿತಾ ರಚನೆಗಳಲ್ಲಿ ಯಾವುದು ಕಾವ್ಯ ಯಾವುದು ಕಾವ್ಯವಲ್ಲ ಎಂಬ ಕುರಿತೂ ರಚನೆಗಳಿವೆ.

 

ಶಬ್ದ ಸಂಭ್ರಮದ ಸ್ತಂಭಗಳ ನಿಲಿಸಿ
ಅಕ್ಷರಗಳ ಸ್ಥಾವರ ಕಟ್ಟಿ
ಗಾಳಿಗೋಪುರಗಳ ಕೂಡಿಸಿದೆಡೆ
ಅಲ್ಲಿ ಬದುಕಲುಬಹುದೆ?!
ಬಯಲ ಬಿಸಿಲಿನ
ವಿಪ್ಲವ ಮೌನ ತಾಗಿ, ಕರಗಿ ಕರಗಿ
ಗೋಡೆ ಕಳಚಿ ಬಿದ್ದೇ ಬೀಳುವುದು

 

ಶಬ್ದ ಬಿನ್ನಾಣವ ತೊರೆದ
ಜಂಗಮರ ಎದೆಯಲ್ಲಿ
ಅರ್ಥದ ಹೂ ಹುಟ್ಟಲಾಗಿ
ವಿದ್ವಾಂಸರೆಲ್ಲಾ ವಿಕಾರಿಗಳಾದರು
ಆಸ್ಥಾನಿಕರೆಲ್ಲಾ ಅಭಿಚಾರಿಗಳಾದರು
ಮೀಮಾಂಸಕರು ಮಣ್ಣಾದ
ಕಾರಣ
ಕವಿತೆ ಎಂಬುದು ಬಯಲೇ ಆಗಿತ್ತು ಕಾಣಾ! (ಕೋವಿ ಮತ್ತು ಕೊಳಲು-ಕವಿತೆ ಎಂಬುದು)

 

ಮೊದಲನೆಯದಾಗಿ, ಮೊದಲ ಚರಣದಲ್ಲಿ ಶೈಕ್ಷಣಿಕ ಶಿಸ್ತಿಗೆ ಒಳಪಟ್ಟ ಕಾವ್ಯ ಕ್ರಿಯಾಹೀನವೂ ಅವಾಸ್ತವವೂ ಆಗಿದ್ದು ಕಾವ್ಯಸತ್ವವಿಲ್ಲದೆ ನಾಶವಾಗುತ್ತದೆ ಎಂಬ ಆಶಯವಿದೆ. ಈ ಆಶಯಕ್ಕೂ ಲೇಖಕರ ಮಾತಿನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಕ್ಕೂ ಅಂತಹ ವ್ಯತ್ಯಾಸ ಇಲ್ಲ. ಕವಿತೆ ರೂಪದಲ್ಲಿ ವ್ಯಕ್ತವಾಗಿರುವ ಆಶಯ ಅಭಿಪ್ರಾಯವೊಂದರ ಸಾಂಕೇತಿಕ ನಿರೂಪಣೆಯಾಗಿ ಮಾತ್ರ ಉಳಿದಿದೆ.

ಎರಡನೆಯದಾಗಿ, ಕ್ರಿಯಾಶೀಲತೆ ಮತ್ತು ಕನ್ನಡದ ಅಕಾಡೆಮಿಕ್ ವಲಯದ ಬಗ್ಗೆ ಕನ್ನಡದ ಹಿರಿಯ ಬರಹಗಾರ ತೇಜಸ್ವಿ ನವ್ಯ ಸಾಹಿತ್ಯ ಕುರಿತು ತಳೆದ ನಿಲುವು ಸಾಂಸ್ಕೃತಿಕ ಲೋಕದ ಗತಿಯನ್ನು ಬದಲಿಸಿತು. ಅದು ಹೀಗಿದೆ.

 • ಇಡಿಯ ಒಂದು ಭಾಷಾ ಸಮುದಾಯದ ಅಭಿವ್ಯಕ್ತಿಯಾಗಬೇಕಾದ ಸಾಹಿತ್ಯ ಕೇವಲ ಪಾಠ ಹೇಳುವರ ಕುಲಕಸುಬಿನಂತಾದರೆ, ಅದು ಎಷ್ಟು ಸಹಜವಾಗಿಯೇ ಸಂಭವಿಸಿದ್ದರೂ ಆ ನಾಗರಿಕತೆ ರೋಗಗ್ರಸ್ತವಾಗುತ್ತದೆ… ಇದು… ಭಾರತೀಯ ಸಂದರ್ಭದಲ್ಲಿ ಒಬ್ಬನ ವೃತ್ತಿಯು ಕನ್ನಡ ಜಾನಪದದ ಒಟ್ಟು ಅನುಭವ ವಿಸ್ತೀರ್ಣದಲ್ಲಿ ಎಷ್ಟನ್ನು ಒಳಗೊಂಡಿರಬಲ್ಲುದೆಂಬ ಪ್ರಶ್ನೆ. ಭಾಷೆಯ ಉಪಯೋಗದಲ್ಲಿನ ಏಕತಾನತೆ, ಅನುಭವ, ಶೈಲಿ ಮುಂತಾದುವುಗಳ ಪುನರಾವರ್ತನೆ, ಪಾಶ್ಚಿಮಾತ್ರ ಕೃತಿಗಳ ಎರವಲು ಪಡೆದ ರಚನೆ, ಮತ್ತು ಪ್ರಕಾಶಕ ವಿಮರ್ಶಕ ಮತ್ತು ಬರಹಗಾರರೊಡಗೂಡಿದ ವಂಚಕ ಜಾಲಗಳು; ಇವಕ್ಕೆಲ್ಲಾ ಈ ಮೂರೂ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವ್ಯಾಪ್ತಿಯೊಳಗಿರುವ ವರ್ಗ, ಬಡ್ತಿ, ನೇಮಕ, ಪಠ್ತಪುಸ್ತಕ ಇತ್ಯಾದಿಗಳ ಕೆಟ್ಟ ರಾಜಕಾರಣದಲ್ಲಿ ಮುಳುಗಿರುವ ಉಪಾಧ್ಯಾಯ ಸಾಹಿತಿಗಳ ಸಮುದಾಯವೇ ಕಾರಣ… ಈ ಜನ ವಿದ್ವತ್ ಗೋಷ್ಠಿಗಳಲ್ಲಿ, ವಿಮಶರ್ೆಯಲ್ಲಿ ಚಚರ್ೆಯ ಸಮಾವೇಶಗಳಲ್ಲಿ ಅತಿ ನಾಜೂಕಿನ ವಾತಾವರಣ ಒಂದನ್ನು ಸೃಷ್ಟಿಮಾಡಿ, ಕೇವಲ ಆತ್ಮಗೋಚರ ಮಾತ್ರವಾದ ವಿಮಶರ್ೆಯ ಪಾರಿಭಾಷಿಕ ಶಬ್ದ ಸರಣಿಗಳನ್ನು ಸೃಷ್ಟಿಸಿ; ನೇರವಾದ, ಸರಳವಾದ ಅನ್ಯಕ್ಷೇತ್ರದ ವ್ಯಕ್ತಿಗಳು ಸಾಹಿತ್ಯ ಕ್ಷೇತ್ರದಿಂದ ಸಂಕೋಚಗೊಂಡು ಓಡಿಬಿಡುವಂತೆ ಮೆಣಸಿನ ಹೊಗೆ ಹಾಕಿದ್ದಾರೆ. (ಪೂರ್ಣಚಂದ್ರ ತೇಜಸ್ವಿ, ಅಬಚೂರಿನ ಪೋಸ್ಟಾಫೀಸು, ಮುನ್ನುಡಿ)

ಸಮಾಜದಿಂದ ದೂರವುಳಿದು ಶ್ರೇಷ್ಟತೆಯ ಪೋಜಿನಲ್ಲಿ ಮೆರೆಯುತ್ತಿದ್ದ ನವ್ಯ ಸಾಹಿತ್ಯ ಚಳವಳಿಯ ಹಳಸಲು ಹಿಡಿತದಿಂದ ಬಿಡುಗಡೆ ಪಡೆಯಲು ತೇಜಸ್ವಿ `ಯಾಂತ್ರಿಕವಾಗಿರುವ ಅದರ ಸಾಂಕೇತಿಕ ಶೈಲಿ ತಂತ್ರಗಳು, ಉಪಾಧ್ಯಾಯರೇ ಹೆಚ್ಚಾಗಿರುವ ಅದರ ಸಾಹಿತಿ ವರ್ಗ ಮತ್ತು ಕೇವಲ ಸಾಹಿತ್ಯದ ಮಟ್ಟಿಗೇ ಸೀಮಿತಗೊಂಡ ಅದರ ಕ್ರಾಂತಿಕಾರತನ’ ಎಂಬ ಮೂರು ಕಾರಣಗಳನ್ನು ನೀಡಿದ್ದಾರೆ. ಲೋಹಿಯಾ ತತ್ವಚಿಂತನೆ, ಕುವೆಂಪು ಕಲಾಸೃಷ್ಟಿ ಮತ್ತು ಕಾರಂತರ ಜೀವನ ದೃಷ್ಟಿ ಮತ್ತು ಬದುಕಿನಲ್ಲಿನ ಪ್ರಯೋಗಶೀಲತೆ – ಈ ಮೂರು ಅಂಶಗಳು ಸ್ವತಹ ತೇಜಸ್ವಿ ಮೇಲೆ ಗಾಢ ಪರಿಣಾಮ ಉಂಟುಮಾಡಿವೆ. ಶೈಕ್ಷಣಿಕ ಶಿಸ್ತು ಮತ್ತು ಶ್ರದ್ಧೆಯಿಂದ ಕ್ರಿಯಾಶೀಲತೆ ಹೊರತಾದುದು ಎಂದಾಗಲೀ ಇದರಿಂದ ಕ್ರಿಯಾಶೀಲತೆಯ ಸ್ವತಂತ್ರ ಮೂಲ ಪ್ರವೃತ್ತಿಗೆ ಧಕ್ಕೆಯಾಗುವುದು ಎಂದಾಗಲೀ ಅವರು ಹೇಳಿಲ್ಲ. ತೇಜಸ್ವಿ ನಿಲುವಿನಿಂದ ದಟ್ಟ ಪ್ರಭಾವಕ್ಕೊಳಗಾಗಿರುವ ರಾಜೇಂದ್ರ ಪ್ರಸಾದ್ ನವ್ಯ ಸಾಹಿತ್ಯ ಸಂದರ್ಭ ಮತ್ತು ತಮ್ಮ ಕಾವ್ಯ ಬರಹ ಸಂದರ್ಭ ಭಿನ್ನವಾಗಿದ್ದರೂ `ಅಕಾಡೆಮಿಕ್ ಮತ್ತು ಕಾವ್ಯ’ ಪರಸ್ಪರ ವಿರುದ್ಧವಾದುದು ಎಂಬ
ಅಭಿಪ್ರಾಯವನ್ನು ಪ್ಯಾಶನೇಟಾಗಿ ಅಪ್ಪಿಕೊಂಡಿರುವಂತೆ ತೋರುತ್ತದೆೆ. ಶೈಕ್ಷಣಿಕ ಶಿಸ್ತು ಮತ್ತು ಶ್ರದ್ಧೆ ಕ್ರಿಯಾಶೀಲತೆಯ ನಾವಿನ್ಯತೆಗೆ ಬಲ ಮತ್ತು ಬೇರು ಒದಗಿಸುತ್ತದೆ ಎಂಬುದನ್ನು ಅರಿಯುವುದರಿಂದ ಹೆಚ್ಚು ಅನುಕೂಲಕರ.

 

ಮೂರನೆಯದಾಗಿ, ಕೋವಿ ಮತ್ತು ಕೊಳಲು ಮುನ್ನುಡಿಯಲ್ಲಿ ಬಸವಣ್ಣನ ಉಲ್ಲೇಖ, ಕವಿತೆಗಳಲ್ಲಿ ವಚನ ಸಾಹಿತ್ಯದ ಸ್ಥಾವರ-ಜಂಗಮ, ಬಯಲು-ಆಲಯ ಚಿಂತನಾಕ್ರಮಗಳ ಬಳಕೆ – ಇವು ಹನ್ನೆರಡನೆಯ ಶತಮಾನದ ಚಲನಶೀಲ ಸಮಾಜದ ಧಾಮರ್ಿಕ ರಾಜಕಾರಣದ ಭಾಗವಾಗಿ ಮೈತಳೆದ ವಚನ ಸಾಹಿತ್ಯವನ್ನು ಪರಂಪರೆಯಲ್ಲಿ ನಿರೂಪಿಸಿಕೊಂಡು ಬಂದಿರುವ ಕ್ರಮದಲ್ಲೇ ಗ್ರಹಿಸಿರುವುದಾಗಿದೆ. ಹಾಗಾಗಿಯೇ ಲಾವೋನ ಕನಸು ಸಂಕಲನದಲ್ಲಿ ವ್ಯಕ್ತವಾಗಿರುವ ವರ್ತಮಾನ ಸಮಾಜದ ಧಾರ್ಮಿಕ ರಾಜಕಾರಣದ ಸಂವೇದನಾಶೀಲ ಒಳನೋಟವನ್ನು ಇಲ್ಲಿ ನಿರೀಕ್ಷಿಸಲು ಬರುವುದಿಲ್ಲ. ಇದರ ಪರಿಣಾಮವಾಗಿ ವಚನ ಸಾಹಿತ್ಯದ ಚಿಂತನಾ ಕ್ರಮವೆ ಇಲ್ಲಿನ ತನ್ನ ಚಿಂತನಾಕ್ರಮದ ಸಂಕೇತವಾಗಿಯೂ ಉಪಯೋಗವಾಗಿದೆ. ಮಾತ್ರವಲ್ಲದೆ ಕಾವ್ಯಭಾಷೆಯ ರೀತಿಯೂ ವಚನ ಸಾಹಿತ್ಯವನ್ನೇ ಅನುಸರಿಸಿದೆ. ಉಪಮೇಯ ಮತ್ತು ಉಪಮಾನ ಎರಡರಲ್ಲೂ ಸ್ವಂತಿಕೆಯ ಕ್ರಮ ಮೊಳಕೆದೋರದಿರುವುದನ್ನು ಗಮನಿಸಬಹುದು.

 

ಅಡಿ ಇಟ್ಟಲೆಲ್ಲ ಎಷ್ಟು ಚೌಕಟ್ಟುಗಳು
ಗುರುವೇ ಇಲ್ಲಿ?
ಒಂದು ತಪ್ಪಿದರೆ ಮತ್ತೊಂದು,
ಬಯಲೆನ್ನುವುದು ಬರೀ ಬಾಯಿ ಮಾತು (ಕೋವಿ ಮತ್ತು ಕೊಳಲು-ಎಷ್ಟೊಂದು ಚೌಕಟ್ಟುಗಳು)

 

ಕವಿತೆ ಎಂಬುದು ಕವನದಲ್ಲಿ `ಕವಿತೆ ಎಂಬುದು ಬಯಲೇ ಆಗಿತ್ತು’ ಎಂಬ ಉದ್ಗಾರಕ್ಕೆ ವ್ಯತಿರಿಕ್ತವಾಗಿ ಎಷ್ಟೊಂದು ಚೌಕಟ್ಟುಗಳು ಕವನದಲ್ಲಿ ಅದಕ್ಕೆ ವಿರುದ್ಧ ಆಶಯದ ಸಂಕೇತಗಳ ಮೂಲಕ ಆತಂಕ, ಗೊಂದಲ ಮನಸ್ಥಿತಿಯನ್ನು ಹೊರಹಾಕಲಾಗಿದೆ. ಇದು ಸ್ವಂತ ಎರಕದಲ್ಲಿ ಕರಗದಿರುವ ಅನ್ಯವೊಂದರ ಯಥಾವತ್ತು ಅನುಸರಣೆಯ ಪರಿಣಾಮ. ಇದೇ ಕ್ರಮವಿಧಾನ ಅನುಭಾವದ ಅಭಿವ್ಯಕ್ತಿ ವಿಧಾನ ಮತ್ತು ಚಿಂತನಾಕ್ರಮದಲ್ಲೂ ಮುಂದುವರೆದಿದೆ.

 

ಬೆಳ್ಳಿಪಾದುಕೆಗಳ ಜಂಗಮಗುರುಗಳು ಸುವರ್ಣ ಸಿಂಹಾಸನವ
ಬಯಸಿದರು ಬಿಟ್ಟೂ ಬಿಡದೆ
ಅಡ್ಡ ಪಲ್ಲಕ್ಕಿಯನೇರಿ ಊರು ಸುತ್ತಿದರು.
ಅಯ್ಯಾ
ಹೀಗೆ ಭವದ ಭೋಗದಲ್ಲಿ
ಜಂಗಮರು, ಜೋಗಿಗಳು
ವಿರಕ್ತ ವೈರಾಗಿಗಳು ಬೇಯುತ್ತಿರಲಾಗಿ,

 

ಇಚ್ಚೆಗಳನು ಇರಿದು
ಮಾನ-ಪ್ರಾಣಗಳ ಅಮಾನತುಗೊಳಿಸಿ
ಅಕ್ಷರಗಳ ಹಂಗಿಲ್ಲದೆ ಅರಿವಿನ ಗುರುಮನೆ ಕಟ್ಟಿ
ಬಿದಿರಿನ ತಡಿಕೆಯಲಿ ಜೀವ ತೊಗಲಿನ ಬೆತ್ತಲ ಬಟ್ಟೆ ತೊಟ್ಟು
ಬರಿಗಾಲಲ್ಲಿ ನಡೆದು ನೆಲದ ನಾಲಿಗೆಯಾದವರು
ಬಯಲ ಗುರುಗಳಾಗಿ ಹೋದರು,
ಮಿಕ್ಕವರು ಬಚ್ಚಲ ನೀರಾಗಿ ಹರಿದು ಹೋದರು ಕಾಣಾ! (ಕೋವಿ ಮತ್ತು ಕೊಳಲು-ಅಡ್ಡಪಲ್ಲಕ್ಕಿಯ ಜಂಗಮರು)

 

ಭವದ ಲಜ್ಜೆಯ ತೊರೆದು
ಇಹದ ಕಾಮವ ಹಳದು, ಒಂದೊಂದೂ ಅರಿವೆಯ
ಅರಿವುಗಳಲಿ ಹರಿದುಹಾಕಿ
ಬೆತ್ತಲಾಗಬೇಕಿತ್ತು ಬಯಲಿನಲಿ ಗುರುವುಕುಟೀಚಕನ ಸುತ್ತ ಕೋಟೆಯ ಕಾವಲು
ನಿಂತು ಏನ ಕಾಯಬೇಕಿತ್ತು? ಒಳಗೆ ಏನು ನಡೆದಿತ್ತು!
ವಿರಕ್ತನ ಮೈಯಲ್ಲಿ ಯಾವ ರಿಕ್ತಿಯು ಸುಳಿದಿತ್ತು?
ಕಾಣಬೇಕಿತ್ತು ತೆರೆದಪರದೆಯಲಿ ಗುರುವುಎದೆಯಲ್ಲಿ ಯೋಗಮುದ್ರೆಯ ಹೊತ್ತ ಮೇಲೆ
ಸ್ತನ ಕಂಡು ಚಿತ್ತದಲಿ ಸ್ಥಾನಪಲ್ಲಟಗೊಂಡರೆ, ಅಲ್ಲಿ
ವಿಷದ ಕಳ್ಳಿಸಾಲು ಬೆಳೆದು ರೋಗದ ನಾಯಿ ಹೆಣ ಬಿದ್ದುದಲ್ಲದೇ
ಮತ್ತಾವ ವಾಸನೆ ಇರದು.

 

ಅರಳಬೇಕಿತ್ತು ಗಂಧದಹೂವಾಗಿ ಗುರುವುಅದಾಗದೇ
ನೆಲಕೆ ಕೃಷ್ಣಾಜಿನ, ಮೈತುಂಬಾ ಬೆಚ್ಚಗೆ ಕಷಾಯವಸ್ತ್ರ
ಮಿನುಗುವ ರುದ್ರಾಕ್ಷಿ ಸ್ಫಟಿಕ ಮಣಿಮಾಲೆಗಳು
ಬೆಳ್ಳಿಯ ಪಾದುಕೆಯ ಮೇಲೆ ಚಿನ್ನದ ಅಂಗುಷ್ಠ
ಕೈಯಲ್ಲಿ ಜಪಮಣಿ, ಬಾಯಿತುಂಬಾ ಧರ್ಮಮಂತ್ರ
ದೀನತೆಯನ್ನು ಉದ್ದೀಪಿಸುವ ಕ್ಷುದ್ರ ಮೊಗಮಂದಹಾಸ
ಅಯ್ಯಾ…
ಜಂಗಮರ ಮಠದಲ್ಲಿ ಬೆಕ್ಕನ್ನು ಸಾಕಲಾಗಿ
ಆಕಳ ಕೆಚ್ಚಲಿಗೆ ಸೋಂಕು ತಾಗಿತು
ಮಕ್ಕಳು ಹಸಿದುವು, ಪ್ರಸಾದ ರುಚಿಸದಾಯಿತು.
ಕೆಚ್ಚಲ ತುಂಬಾ ಉಗುರು ಚುಚ್ಚಿದ ಗುರುತುಗಳಲಿ ರಕ್ತ ಒಸರುತ್ತಿರಲು
ಯಾಜಕರು ಬಲಿಗೆ ಸಿದ್ಧರಾದರು, ಭಕ್ತರು ಉಮೇದಿನಲಿ
ಸಾಕ್ಷಿಯಾದರು.

 

ಇದಾದ ಮರುಕ್ಷಣ ದೇವರುಗಳು ಸತ್ತುಹೋದ
ಸುದ್ದಿಯೊಂದು ಬಲಿಪೀಠದ ಕೆಳಗೆ
ಬಿಸಿರಕ್ತದಂತೆ ಹರಿಯಿತು! (ಕೋವಿ ಮತ್ತು ಕೊಳಲು-ಮಠದ ಬೆಕ್ಕು ಮತ್ತು ದೇವರ ಸಾವು)

 

ಈ ಎರಡೂ ರಚನೆಗಳ ಭಾಷಾ ರೂಪದಲ್ಲಿ, ಪರಿಭಾಷೆಯಲ್ಲಿ, ಚಿಂತನಾ ಕ್ರಮದಲ್ಲಿ ವಚನ ಸಾಹಿತ್ಯದ ದಟ್ಟ ಪ್ರಭಾವವಿದೆ. ಮೊದಲನೆಯದರಲ್ಲಿ ಅಲ್ಲಮನ ನೆರಳು ಎರಡನೆಯದಲ್ಲಿ ದಾಸಿಮಯ್ಯನ ಕೊರಳು ಸ್ಫುಟವಾಗಿ ಗೋಚರಿಸುತ್ತದೆ. ಹೀಗಿದ್ದರೂ ‘ದೇವರು ಸತ್ತ’ ಕಲ್ಪನೆಯ ಪ್ರಯೋಗ ಹೊಸ ಚಿಂತನೆ ಚಿಗುರೊಡೆದ ಸಂಕೇತವೋ ಆಕಸ್ಮಿಕ ಬೆಳವಣಿಗೆಯೋ ಏನೆಂಬುದು ಹೇಳಲಾಗದು. ಹೀಗೆ ಕಾವ್ಯದ ಅಸಲು ಕಸುಬಿನ ಹಾದಿ ತೆಗ್ಗು ತೆವರುಗಳಲ್ಲಿ ಹರಿದಿದ್ದು ಇದೇ ಕ್ರಮವನ್ನ್ನು ಕಾವ್ಯ ಚಿಂತನೆಯ ರಚನೆಗಳಲ್ಲಿ ಆಗಿರುವ ಬೆಳವಣಿಗೆಯಲ್ಲೂ ಗುರುತಿಸಬಹುದು.

 

ಈ ತಹತಹ..
ಉರಿಬೇಗುದಿ ಯಾವ
ಲೋಕ ಯಾಪಾರಕ್ಕೆ!

 

ಎಲ್ಲ ಎದೆಗಳ
ಸುನಾಮಿಯಂತೆ
ಒಮ್ಮೆಗೆ ಆವರಿಸಬೇಕು

 

ಕವಿ ಸುಮ್ಮನೆ
ಹರಿಯಬೇಕು
ಲೋಕದ ಘಟಾರವಾಗಿ! (ಚಂದ್ರ ನೀರ ಹೂ-ಲೋಕದ ಘಟಾರ್ದ)

 

ಕಾವ್ಯ ಕಲ್ಪನೆಯ ಸಂಕೇತಗಳು `ಬಯಲು’ `ಬಯಲು ಬರೀ ಬಾಯಿಮಾತು’ `ಲೋಕದ ಘಟಾರ’ಗಳಲ್ಲಿ ಒಂದರಿಂದ ಮತ್ತೊಂದಕ್ಕೆ ಬದಲಾಗಿದೆ. ಅನುಭಾವದ ನಿಜ ಸಾಧಕರು ಮತ್ತು ತೋರಿಕೆಯ ಸಾಧಕರು ನಡುವಿನ ವ್ಯತ್ಯಾಸ ಕಾಣಿಸುವಲ್ಲಿ ತೋರಿಕೆ ಸಾಧಕರ ಸಂಕೇತವಾಗಿ ಬಳಸಿದ `ಬಚ್ಚಲ ನೀರು’ ಚಿತ್ರ ಮತ್ತು ಕವಿ-ಕಾವ್ಯಗಳ ಕಾರ್ಯಮಹತ್ತು ಸಂಕೇತಿಸುವ `ಲೋಕದ ಘಟಾರ’ ಚಿತ್ರಗಳ ನಡುವೆ ಸಾಮ್ಯತೆ ಇರುವುದು ನಿರುದ್ದೇಶಿತವಾಗಿದ್ದರೂ ಅದರ ಕಾರ್ಯಸಾಧನೆಯಲ್ಲಿ ವೈರುಧ್ಯತೆಯನ್ನು ಸಾಧಿಸಿದೆ.

ಕಾವ್ಯದ ಈ ಇಕ್ಕಟ್ಟು-ಬಿಕ್ಕಟ್ಟು ಅಸಲು ಕಸುಬಿನ ಆರಂಭಿಕ ಹಂತ ಮಾತ್ರ ಎನ್ನಬಹುದು. ಇಂಥ ದಟ್ಟ ನಿರಾಸೆಯ ನಡುವೆಯೂ ಬೆಳಕು ಚೆಲ್ಲುವಂಥ ಶಬ್ದಚಿತ್ರಗಳು, ಸಾಲುಗಳು ಅಲ್ಲಲ್ಲಿವೆೆ. ಇವು ಇಕ್ಕಟ್ಟು-ಬಿಕ್ಕಟ್ಟಿನ ಸ್ಥಿತಿಯಿಂದ ಹೊರಬರುವ ಪ್ರಯತ್ನವೂ ಆಗಿವೆ.

 

ಹೊಸ ಶಬ್ದಚಿತ್ರಗಳು: ಸ್ವಂತ ಚಾಳಿ
ಹಗಲು ಬಣ್ಣವ ತೊಟ್ಟ
ಮುಗಿಲು
ತೊಟ್ಟು ಕಳಚಿ
ಕತ್ತಲ ಕೊಳಕ್ಕೆ ಬಿತ್ತು (ಕೋವಿ ಮತ್ತು ಕೊಳಲು-ಮುಗಿಲ ಹಣ್ಣು)

 

ಪ್ರವಾದಿಗಳು ಸೋದರರು

ಅನುಯಾಯಿಗಳು ದಾಯಾದಿಗಳು (ಚಂದ್ರ ನೀರ ಹೂ-ಜೆರುಸಲೆಂ ಅಜ್ಜ ಹೇಳಿದ್ದು)

 

ಮುಗಿಯದ ಇರುಳ ಪಾಳಿಯ ವ್ಯವಸಾಯ
ಹೊದ್ದ ಚಾದರದ ಕೆಳಗೊಂದು ಅಸ್ತವ್ಯಸ್ತ ಹೊಲ (ಕೋವಿ ಮತ್ತು ಕೊಳಲು-ನೇತ್ರೋನ್ಮಿಲನ)

ಮೊದಲ ಚಿತ್ರದಲ್ಲಿ ಸೂರ್ಯ ಮರೆಮಾಚಿ ಹಗಲು ಇರುಳಾಗುವ ದಿನನಿತ್ಯದ ಖಗೋಳ ವ್ಯಾಪಾರವೇ ಅಲಂಕಾರವಾಗಿದೆ, ರೀತಿ ಆಕರ್ಷಕವಿದೆ. ಎರಡನೆಯದು ಜಾಗತಿಕ ಮಟ್ಟದಲ್ಲಿನ ಧರ್ಮ ರಾಜಕಾರಣದ ನೆಲೆಯನ್ನು ಕೌಟುಂಬಿಕ ಸಂಬಂಧದಲ್ಲಿ ಸರಳವಾಗಿ ಮತ್ತು ಅಷ್ಟೇ ವಾಸ್ತವ ರೀತಿಯಲ್ಲಿ ಅಭಿವ್ಯಕ್ತಿಸಲಾಗಿದೆ. ಮೂರನೆಯದರಲ್ಲಿ ನಿರೂಪಿಸಬೇಕಾದ ನವದಾಂಪತ್ಯ ಜೀವನದ ಆರಂಭಿಕ ಉತ್ಸುಕ ಮನಸ್ಸಿನ ಸಾಮಾನ್ಯ ಸಂಗತಿಯನ್ನು ಇರುಳಪಾಳಿಯ ವ್ಯವಸಾಯ ಮತ್ತು ಅಸ್ತವ್ಯಸ್ತ ಹೊಲ ಎಂಬ ನೂತನ ಚಿತ್ರಗಳ ಮೂಲಕ ಅನುಭವವನ್ನು ಪರಿಣಾಮಕಾರಿಯಾಗಿ ಮಂಡಿಸಿದೆ. ತನ್ನದೇ ಸ್ವಂತಿಕೆಯ ನೋಟ ಮತ್ತು ಹೊಚ್ಚ ಹೊಸತು ನುಡಿಗಟ್ಟುಗಳಿಂದ ಓದುಗರ ಗಮನ ಸೆಳೆಯಲಾಗಿದೆ.

 

ಸಿದ್ದರಾಮ ಕಟ್ಟಿದ ಕೆರೆಯಲಿ
ಹೆಣಗಳ ಹೋಮ
**
ರಕುತದ ಓಕುಳಿಗೆ
ಬಲಿಯ ಸಂಭ್ರಮ (ಚಂದ್ರ ನೀರ ಹೂ-ಉರಿಯ ಕನಸಿಗೆ ಕಲಿದೇವರು ಕಂಡಿದ್ದಾನೆ)

 

ಕೊಲುವ ಕೈ ರುಚಿಗೆ ತನ್ನದೇ ತಲೆಯ ಕತ್ತರಿಸಿಕೊಳುವ
ಹೊತ್ತು ಬಹಳವಿಲ್ಲ __ ತಾಳು ತಾಳು (ಕೋವಿ ಮತ್ತು ಕೊಳಲು- ಯಹೋವಾ..)

 

ವಚನ ಚಳವಳಿ ಅಂತಿಮವಾಗಿ ತಂದಿತ್ತ ಜೀವ ವಿರೋದಿ ಪರಿಣಾಮ ಮತ್ತು ಅದರ ವೈಭವೀಕರಣ ಮೊದಲ ಚಿತ್ರದಲ್ಲಿದೆ. ವಚನ ಸಾಹಿತ್ಯದ ಆಶಯ ಮತ್ತು ಚಳವಳಿಯ ಫಲಿತ ಪರಸ್ಪರ ವೈರುಧ್ಯತೆಯಿಂದ ಕೂಡಿದ್ದು ಅದರ ವಾಸ್ತವ ಭೀಕರತೆಯಿಂದ ಕೂಡಿರುವುದನ್ನು ಧ್ವನಿಸುವ ಶಕ್ತಿ ಪಡೆದುಕೊಂಡಿದೆ. ಪುಣ್ಯಭೂಮಿಯನ್ನು ಅರಸುತ್ತಲೆ ಪ್ರವಾದಿಯ ಅನುಯಾಯಿಗಳು ಅನುಸರಿಸಿರುವ ಹಿಂಸಾಮಾರ್ಗ ಮತ್ತು ಅದು ಅವರಿಗೇ ಮಾರಕವಾಗಬಹುದಾದ ಆಶಯ ಎರಡನೆಯದರಲ್ಲಿದೆ. ಮತಗಳು ತಮ್ಮ ಉನ್ನತ ಆಶಯ ಸಾಧನೆಯಲ್ಲಿ ಅನುಸರಿಸಿಕೊಂಡು ಬಂದ ಹಿಂಸೆಯ ಹಾದಿ ಮಾನವ ವಿರೋಧಿ ಹಾಗೂ ಜೀವ ವಿರೋಧಿಯಾಗಿದ್ದು ಅದು ತಂತಾನೆ ಮತ/ಧರ್ಮ ವಿರೋದಿಯಾಗಿಯೂ ಪರಿಣಮಿಸಿರುತ್ತದೆ. ಇದರ ಮರ್ಮ ಅರಿಯದಿದ್ದಲ್ಲಿ ಹಿಂಸೆಯ ಹಾದಿ ಹಿಡಿದವರ ದುರಂತ ಅಡಗಿದೆ ಎಂಬ ಆಶಯದ ಮೂಲಕ ಮತ/ಧರ್ಮಗಳ ಸಾಮಾಜಿಕ ಪರಿಣಾಮದ ನಡೆ ಹಿನ್ನಡೆಯೋ ಮುನ್ನಡೆಯೋ ಎಂಬುದನ್ನು ಕಾಣಿಸುತ್ತದೆ. ಅದೇ ರೀತಿ `ಅಡ್ಡಪಲ್ಲಕ್ಕಿಯ ಜಂಗಮರು’ ಕವಿತೆಯ ನಿಜ ಸಾಧಕರು ಕುರಿತ ಚಿತ್ರದೊಂದಿಗೆ ಈ ಕೆಳಗಿನ ಚಿತ್ರವನ್ನು ತೂಗಿನೋಡಬಹುದು.

ನಾನೊಬ್ಬ ಪರಕೀಯ
ನಿನ್ನ ಜೋಪಡಿಯ ಬಾಗಿಲು ಬಲುದೂರ
**
ಓಗೊಡದ ನೀನು ಪಾತಳಿಯಲ್ಲಿ ಸಿಕ್ಕ ಪತಂಗ (ಕೋವಿ ಮತ್ತು ಕೊಳಲು-ಲಾ ಇಲಾಹ ಇಲ್ಲಲಾಹ್)

 

ಇಲ್ಲಿ ಅನುಭಾವದ ಅನುಭವವನ್ನು ಅತಿ ಕಡಿಮೆ ಪದರೂಪಗಳಲ್ಲಿ ಕಡೆದ ಶಬ್ದಚಿತ್ರದ ಮೂಲಕ ಓದುಗನ ಭಾವ ಜಗತ್ತಿನ ಭಾಗವಾಗುವಂತೆ ಮಾಡಲಾಗಿದೆ. ನಿಜವಾದ ಕವಿತಾಶಕ್ತಿ ಇಂಥ ಚಿತ್ರಗಳಲ್ಲಿ ಬೆಳಗುತ್ತದೆ. ಅನುಭಾವದ ನಿಗೂಢತೆ ಮತ್ತು ಮೌನದ ಅಗಾಧತೆ, ಅನುಭಾವಿಯ ಒಂಟಿತನ ಮತ್ತು ಅನ್ಯಭಾವ, ತನಗಾಗಿ ಸ್ಪಂದಿಸುವ ಶಕ್ತಿಯ ಅಸ್ತಿತ್ವ ಕುರಿತ ಅಪಾರ ನಂಬಿಕೆ – ಇವೆಲ್ಲವೂ ಇಲ್ಲಿ ಗಾಢ ಧ್ವನಿರೂಪ ತಳೆದಿದೆ.

 

ಶಬ್ದಚಿತ್ರಗಳ ಮರುಬಳಕೆ: ಸ್ವಂತಿಕೆಯಲ್ಲಿ ಅಸಂತುಷ್ಟಿ

 

ನದಿ ಮತ್ತು ದಡ, ಮೇಲಿಂದ ಮೇಲೆ ಬಳಕೆಯಾಗಿರುವ ಶಬ್ದಚಿತ್ರವಾಗಿದೆ. ಇದ್ರು ಸ್ವಂತ ಪರಿಚಯ ಮಾಡಿಕೊಳ್ಳುವಲ್ಲಿ, ಹೆಣ್ಣು ಗಂಡು ಕುರಿತ ಚಿಂತನಾಕ್ರಮ ಬೆಳವಣಿಗೆಯ ವಿವಿಧ ಹಂತಗಳ ಅಭಿವ್ಯಕ್ತಿಯಲ್ಲಿ ಮತ್ತೆ ಮತ್ತೆ ಮರುಕೊಳಿಸಿದೆ.

ನೀನು ಹರಿಯಲು ನಾನು ದಡ (ಒಂದಿಷ್ಟು ಪ್ರೀತಿಗೆ-ಪುಟ 23)

 

ಅವಳು ಹರಿವ
ನದಿಯಾದಳು
ನಾ ಬಹುಕಾಲದಿಂದ
ದಡವಾಗಿ ಕಾದಿದ್ದೆ! (ಒಂದಿಷ್ಟು ಪ್ರೀತಿಗೆ-ಪುಟ 37)

 

ನಿಂತ ಗಂಡಿನ ದಡದಲ್ಲಿ
ಹರಿವ ನದಿಯಾಗಿದ್ದೆ ನೀನು (ಚಂದ್ರ ನೀರ ಹೂ- ಸ್ತ್ರೀ ಸೂಕ್ತ)ಅವಳು ಹರಿದೇ ಬಿಟ್ಟಳು
ದೂರ ದೂರ ಸಾಗರ
ನಾನು ಅದೇ ಸವೆದ ದಡ! (ಚಂದ್ರ ನೀರ ಹೂ- ಒಲವಿನ ಹಂಗಿಲ್ಲ)

ಕೊನೆಯ ಚಿತ್ರ ಬಹುಸಮುದಾಯಗಳ ಸಮಾಜದಲ್ಲಿ ಭಿನ್ನ ಸಮುದಾಯಗಳಿಗೆ ಸೇರಿದ ಪ್ರೇಮಿಗಳ ತೊಡರಿನ ಸಂಬಂಧ ಮುಗಿಯದ ಸಂಕೀರ್ಣ ಜೀವನದ ಸಂಬಂಧವಾಗಿ ರೂಪತಳೆದಿರುವುದನ್ನು ಧ್ವನಿಸುತ್ತದೆ. ಇದರ ಮತ್ತೊಂದು ಆಯಾಮ ಹೀಗಿದೆ.

ಅವಳು ಒಳಬರದ
ಮೂರು ದಿನವೂ
ನಾನೂ ಹೊರಗಾಗುತ್ತೇನೆ (ಚಂದ್ರ ನೀರ ಹೂ-ಪೀರಿಯಡ್ ಮಿಕ್ಸ್ ಕವಿತೆಗಳು)

 

ಕೆ.ಎಸ್.ನ. ಅವರ `ರಾಯರು ಬಂದರು ಮಾವನ ಮನಗೆ’ ಕವಿತೆಗೂ ಈ ಮೇಲಿನ ಸಾಲುಗಳು ಕಟ್ಟಿಕೊಡುವ ಚಿತ್ರಕ್ಕೂ ವಸ್ತು ವಿಷಯ ಆಶಯದಲ್ಲಿ ಇರುವ ಸಾಮ್ಯತೆ ಮತ್ತು ಅದನ್ನು ಕಲಾರೂಪವಾಗಿ ಮಂಡಿಸುವ ಕ್ರಮದಲ್ಲಿರುವ ವ್ಯತ್ಯಾಸ ಗಮನಿಸತಕ್ಕುದಾಗಿದೆ. ಹೆಣ್ಣಿಲ್ಲದೆ ಗಂಡಿನ ಇರುವಿಕೆಗೆ ಸಫಲತೆ ದೊರೆಯುವುದಿಲ್ಲ ಎಂಬುದನ್ನು ಹೆಣ್ಣಿನ ಮಾಸಿಕ ಆಚರಣೆ ನೆಪದಲ್ಲಿ ಮಂಡಿಸುತ್ತಿದ್ದು ಹೆಣ್ಣು ಗಂಡಿನ ನಡುವೆ ಪರಸ್ಪರ ಹೆಣೆದುಕೊಂಡಿರುವ ಸಂಬಂಧ ಸ್ವರೂಪವನ್ನು ಕುರಿತಿದೆ.

ತಾಯಿ ಕೊಟ್ಟ ಸೀರೆ
ಈಗ ಸುಕ್ಕು ಗಟ್ಟಿದೆ ಮೈತುಂಬಾ (ಚಂದ್ರ ನೀರ ಹೂ-ಅವ್ವನ ಜರೀಸೀರೆ)

ಹೆಣ್ಣಿನ ಜೀವಿತದಲ್ಲಿ ಆಕೆಯ ಮೊದಲರ್ಧ ಜೀವನವನ್ನು ಆವರಿಸಿರುವ ತವರು ಕೊನೆಯುಸಿರಿನವರೆಗೂ ನೆನಪಾಗಿ ಉಳಿವ ಬಾಳಿನ ಸಂಗಾತಿಯಾಗಿದೆ. ತವರಿನಿಂದ ಉಡುಗೊರೆಯಾಗಿ ಬಂದ ಯಾವುದೇ ವಸ್ತುವಿನ ಜೊತೆಗೆ ಬೆಸೆದಿರುವ ಹೆಣ್ಣಿನ ಭಾವನಾತ್ಮಕ ಸಂಬಂಧದ ನಿರಂತರತೆ ಮತ್ತು ದೀರ್ಘಕಾಲಿಕತೆಯನ್ನು ಮೇಲಿನ ಸಾಲುಗಳು ಕಟ್ಟಿಕೊಟ್ಟಿವೆ. `ಸುಕ್ಕು ಗಟ್ಟಿದೆ’ ಎಂಬ ಪದರೂಪ ತವರುಮನೆಯಿಂದ ಬಂದ ಜೀವ ಮತ್ತು ವಸ್ತು ಕಾಲದ ಹೊಡೆತಕ್ಕೆ ಸಿಲುಕಿ ಜರ್ಜರಿತವಾಗಿದ್ದೂ ಜೀವಂತವಾಗಿರುವ ಚೆಲುವನ್ನು ಕಾಣಿಸಿದೆ.

ನನ್ನ ನಿದ್ದೆಗಾಗಿ ಅವ್ವ
ಅದೆಷ್ಟೋ ಪದ ಕಟ್ಟಿ
ಹಾಡಿದಳು ಯಾರೂ
ಅವಳನ್ನು ಕವಿಯೆನ್ನಲಿಲ್ಲ (ಚಂದ್ರ ನೀರ ಹೂ-ಸ್ತ್ರೀ ಕಾಂಡ)

ಪ್ರಸಿದ್ಧಿಯ ಹಂಗು ಇರದ ಜಾನಪದ ತಾಯಿ ಸ್ವರೂಪವಾಗಿದ್ದು ಅದು ಸದಾ ಜೀವನದ ಸಾರ್ಥಕತೆ ಕಡೆಗೆ ಮುಖ ಮಾಡಿದೆ. ತಾಯಿ ಜಾನಪದಕ್ಕೂ ಕವಿ ಆಧುನಿಕ ಜಗತ್ತಿನ ಹಕ್ಕು ಅಧಿಕಾರ ರೂಪಿ ವ್ಯಕ್ತಿಗೂ ಪ್ರತೀಕವಾಗಿದೆ. ಜಾನಪದ ಮತ್ತು ಆಧುನಿಕ ಕವಿ ಕುರಿತ ಕಲ್ಪನೆ ಬೆಳೆದು ಪೂರ್ಣ ಪ್ರಮಾಣದ ಕವಿತೆಯಾಗಿರುವುದು ಲಾವೋನ ಕನಸು ಸಂಕಲನದಲ್ಲಿದೆ.

ಅಳುವ ಕಂದನಿಗಾಗಿ ಕಟ್ಟಿದ
ಪದಗಳನು ಅವ್ವ ಯಾವತ್ತೂ ಬಿಕರಿಗೆ ಇಟ್ಟಿರಲಿಲ್ಲ;
ಮಣ್ಣೊಳಗೆ ಬೀಜ ಹುದುಗಿಸಿ, ಬೆಳೆದು ಬದುಕಲಾರದ
ಹೆಳವನೊಬ್ಬ ಕದ್ದು ಅವುಗಳನು
ಬುಟ್ಟಿಯ ತುಂಬಿ ಊರೂರು ಬೀದಿಯ ಸುತ್ತಿ
ಕೂಗಿ ಕೂಗಿ ದಣಿದ.
ಯಾರು ಕೊಳ್ಳುವರು ಕಳ್ಳನ ಮಾಲನು
ಎಲ್ಲ ಮನೆಗಳಲೂ ಅವ್ವಂದಿರ
ಪದ, ಸಂದುಗಳ ತಿಜೋರಿ ತುಂಬಿ ತುಳುಕಿರುವಾಗ?
ದಣಿವು, ನೀರಡಿಕೆ, ಹಸಿವು ಹೊತ್ತು
ಬೆವರು ಸುರಿಯುತ್ತಿದವನಲ್ಲಿ
ಕಣ್ಣು-ಕಾಲುಗಳು ಮಾತ್ರವಲ್ಲ ಎದೆಬಡಿತವೂ ಇರಲಿಲ್ಲ.
ತೊಟ್ಟಿಲೊಂದು ಚಂಡೀ ಹಿಡಿದ ಮಗುವು
ಚೀರಲು ಬುಟ್ಟಿಯ ಹೊತ್ತು ವೇಷ ಹಾಕಿದ್ದ
ದಮಾರಿಯು ಬೆಚ್ಚಿ ಊರುಬಿಟ್ಟು ಓಡಿದಳು
ಕಳ್ಳ ಈಗ ತೊಟ್ಟಿಲ ತೂಗುತ್ತಿದ್ದಾನೆ! (ಲಾವೋನ ಕನಸು-ಅವ್ವ ಮತ್ತು ಕವಿ)

ಒಂದು ಶಬ್ದ ಚಿತ್ರದ ಮರುಬಳಕೆ ಸಾರ್ಥಕತೆಯ ಪ್ರತಿಬಿಂಬವಾಗಿ ಯಶಸ್ವಿ ಕವಿತೆಯೊಂದು ಹೊರಹೊಮ್ಮಿದೆ. ಅಂದರೆ ಕವಿಯ ಮನಸ್ಸು ತಾನು ಕಟ್ಟಿದ ಶಬ್ದಚಿತ್ರದ ಬಗ್ಗೆ ಸದಾ ಕ್ರಿಯಾಶೀಲವಾಗಿ ಚಿಂತಿಸುತ್ತಲೆ ಇದ್ದು ಅದರ ಸಾಧಕ-ಬಾಧಕಗಳು, ಯಶಸ್ವಿಗೊಳಿಸುವ ಭಿನ್ನ ಆಯಾಮಗಳ ಬಗ್ಗೆ ಜಾಗ್ರತಾಸ್ಥೆಯಲ್ಲಿರುವುದರ ಸೂಚಕವಾಗಿರುವಂತೆ ಈ ಕವಿತೆ ಕಾಣುತ್ತದೆ. ತಾಯಿ-ಮಗು ಜಾನಪದ-ಶಿಷ್ಟ ಜಾನಪದ ಕವಿ-ಆಧುನಿಕ ಕವಿ ಈ ಆಯಾಮಗಳಲ್ಲಿ ಸಮೃದ್ಧ ಜೀವನ ಮತ್ತು ನೈತಿಕತೆ ಕುರಿತು ಮೂಡಿಸಿರುವ ಅರಿವು ಮಾನವನ ನಾಗರಿಕ ಬೆಳವಣಿಗೆಯ ಭಾಗವಾಗಿದೆ.

 

ಸ್ವಂತಿಕೆಯ ಸ್ವಂತತನ- ಭಾಗ 1

 

ಅವ್ವ ಮತ್ತು ಕವಿ ಕವಿತೆಯಂತೆ ಗಮನ ಸೆಳೆಯುವಂಥ ಪೂರ್ಣಪ್ರಮಾಣದ ಕವಿತೆಗಳು ಒಂದಿಷ್ಟು ಪ್ರೀತಿಗೆ ಸಂಕಲನದಲ್ಲಿಯೆ ಸುಳಿವುದೋರಿವೆೆ.

ಇರುವರು ಇಬ್ಬರೇ ಮನೆಯಲ್ಲಿ
ಆದರೂ ಪರದೆಯುಂಟು ಬಚ್ಚಲು ಮನೆಗೆ
ಪ್ರತಿ ಮುಂಜಾವು ಸಿಕ್ಕುವ
ದೋರು ಹುಣಸೆಕಾಯಿ
ರುಚಿ ಹೇಳತೀರದು! (ಒಂದಿಷ್ಟು ಪ್ರೀತಿಗೆ-ಪುಟ 75)

 

ಅವಳು ಕುಡಿದುಳಿದ
ನೀರ ಹನಿಯೊಂದು
ತುಟಿತಾಗಿ ಗಲ್ಲದ
ಗಿರಿ ಇಳಿದು ಎದೆಸಾಗರವ
ಸೇರುವಾಗ. ನನ್ನ
ನಾಲಗೆ ಒಣಗಿ
ದಾಹವೇರಿ ಮೈಸುಡುವ ಕೆಂಡವಾಗಿತ್ತು. (ಒಂದಿಷ್ಟು ಪ್ರೀತಿಗೆ-ಪುಟ 90)

 

ಪೋರನೊಬ್ಬ ಸರಿರಾತ್ರಿಯಲಿ
ಗೆಳತಿಗೆ ಫೋನಾಯಿಸುತ್ತಾನೆ,
ತಡೆಯಲಾಗದ ಮಾತೊಂದ ಉಲಿಯಲು.
ರಿಂಗಣಿಸುತ್ತಿರುವ ಶಬ್ದದಲಿ ಹುಡುಗಿ,
ಬೆಚ್ಚಗಿನ ಅವನ ಕನಸ ಕಾಣುತ್ತ
ಪವಡಿಸುತ್ತಾಳೆ, ಕರೆ ಅವನದೆಂದು ತಿಳಿದೂ! (ಒಂದಿಷ್ಟು ಪ್ರೀತಿಗೆ-ಪುಟ 102)

ಇಂಥ ಒಂದು ನೂರು ಕವಿತೆಗಳು ಈ ಸಂಕಲನದಲ್ಲಿದ್ದು,. ಇದನ್ನೊಂದು ಪ್ರೀತಿ ಶತಕವೆಂದು ಕರೆಯಬಹುದು. ಈ ರಚನೆಗಳು ಹರೆಯದ ಸಹಜ ಆಕರ್ಷಣೆಗಳಿಗೆ ಹೊರತಾದ ಪ್ರೇಮದ ಹೊಸತು ಪರಿಯೊಂದನ್ನು ಕಂಡುಕೊಳ್ಳಲು ಯತ್ನಿಸಿದ (ಪ್ರೀತಿಯದು ಕಣ್ಣಿನ ಭಾಷೆ, ಒಂದಿಷ್ಟು ಪ್ರೀತಿಗೆ ಪುಟ-8) ಫಲಗಳೆಂದು ಹೇಳಿಕೊಂಡಿದ್ದರೂ ಹರೆಯದ ಪ್ರೇಮ ಕಾಮಗಳಿಗೆ ಹೊರತಾದ ರಚನೆಗಳಾವುವೂ ಇಲ್ಲಿ ಕಾಣುವುದಿಲ್ಲ. ಈ ರಚನೆಗಳು ವ್ಯಕ್ತಿಯ ವೈಯಕ್ತಿಕ ವಸ್ತು ವಿಷಯಗಳಲ್ಲಿ ಮುಳುಗಿದ್ದು ಅಷ್ಟರಮಟ್ಟಿಗೆ ಸಾಮಾಜಿಕ ಪ್ರಜ್ಞೆ ಇವುಗಳಲ್ಲಿ ಮಸುಕಾಗಿದೆ. ಹೀಗಿದ್ದರೂ ಮೇಲಿನ ಮೂರು ರಚನೆಗಳು ತಮ್ಮ ರಚನಾ ಕೌಶಲ್ಯದಲ್ಲಿ ಪರಿಣತಿ, ಅಭಿವ್ಯಕ್ತಿಯಲ್ಲಿ ಪರಿಪೂರ್ಣತೆ, ಮತ್ತು ಮೈದುಂಬಿಕೊಂಡಿರುವ (ರಚನೆಯ) ಭಾವತೀವ್ರತೆಯನ್ನು ಕಟ್ಟಿಕೊಟ್ಟಿರುವ ಕ್ರಮದಲ್ಲಿ ಪರಿಪಕ್ವತೆಯಿಂದ ಕೂಡಿ ಉಳಿದವಕ್ಕಿಂತ ಬೇರೆ ಬಗೆಯಾಗಿವೆ. ಮೊದಲನೆಯದರಲ್ಲಿ ‘ದೋರು ಹುಣಸೆಕಾಯಿ’ ಎಂಬ ಶಬ್ದಚಿತ್ರ ಪ್ರೇಮದ ಹೊಸ ಅನುಭವದ ಹೊಸಪರಿಯನ್ನೂ, ಎರಡನೆಯದರಲ್ಲಿ ‘ಗಲ್ಲದ ಗಿರಿ’ ಮತ್ತು ‘ಎದೆಸಾಗರ’ ಎಂಬ ನುಡಿಚಿತ್ರಗಳು ಪ್ರೇಮದ ತವಕ-ತಲ್ಲಣಗಳ ಮನ ಕಲಕುವಂಥ ತೀವ್ರತೆಗೆ ಮೂಲವಾದ ಕಾರಣವನ್ನೂ ಮತ್ತು ಕೊನೆಯದರಲ್ಲಿ ಸುಳ್ಳು ನಟನೆಯ ನಾಟಕೀಯ ಚಿತ್ರ ಗಾಢ ಪ್ರೀತಿಗೆ ಎಡೆ ಮಾಡಿಕೊಡುವಂಥ ಮಾನಸಿಕ ಒತ್ತಡ ಹೇರುವ ಸೋಗಲಾಡಿಯ ಹಾವಭಾವದ ಸೊಗಸನ್ನೂ ಸಮರ್ಪಪಕವಾಗಿ ಮತ್ತು ಸುಸಂಗತವಾಗಿ ಕಟ್ಟಿಕೊಡುವಲ್ಲಿ ಸಾರ್ಥಕವಾಗಿವೆ. ಯಶ ಸಾಧಿಸಿವೆ.

 

ಸ್ವಂತಿಕೆಯ ಸ್ವಂತತನ- ಭಾಗ 2

 

ಈ ಹಂತದಲ್ಲಿ ರಚನೆಯ ಕಾವ್ಯಶಿಲ್ಪದ ಹೊಳಪಿನೊಂದಿಗೆ ಸಾಮಾಜಿಕ ಸಮಸ್ಯೆಯನ್ನು ಅಷ್ಟೇ ಶಕ್ತಿಶಾಲಿಯಾಗಿ ಬಳಸಿಕೊಳ್ಳುವ ಪ್ರಯತ್ನ ನಡೆದಿರುವುದು ಈ ಕೆಳಗಿನ ಕವಿತೆಯಲ್ಲಿ ಕಾಣಬಹುದು.

ಈ ವಿಶಾಲ ಕಲ್ಯಾಣ ರಾಜ್ಯದಲ್ಲಿ
ನೂರಾರು ರಾಮಂದಿರು ಅಟ್ಟಿದ
ಸೀತೆಯರು,
ಕೃಷ್ಣಂದಿರು ಮರೆತ ರಾಧೆಯರು
ಇಲ್ಲಿ ದಿನವೂ ಅಗ್ನಿಪ್ರವೇಶ ಮಾಡುತ್ತಾರೆ.
ಉಂಗುರ ಕಳೆದುಕೊಂಡ ಶಕುಂತಲೆಯರು
ಅಲ್ಲೊಬ್ಬಳು ಅಹಲ್ಯೆ, ಇಲ್ಲೊಬ್ಬಳು ಸಾವಿತ್ರಿ
ಸಾವಿನ ಬೆನ್ನುಬಿದ್ದು ಕಾಯುತ್ತಾ, ಮೈ ಸುತ್ತ ಎರಗುವ ಮೃಗಗಳಿಗೆ
ಖಂಡವನೂ ರಕ್ತವನೂ ಉಣಿಸಿ
ಅರೆಜೀವಗಳಲ್ಲಿ ಅದೇ ರಾಮನನ್ನೂ ಕೃಷ್ಣನನ್ನೂ
ಶಬ್ದಬಾರದ ಬಾಯ ಉಸಿರಲ್ಲಿ ಕೂಗಿಕೊಳ್ಳುತ್ತಾರೆ
ಹೂಹ್ ಯಾವ ಬಾಣವೂ ಯಾರನ್ನೂ ಸೀಳಿ ಬರಲಿಲ್ಲ
ಯಾವ ಅಕ್ಷಯ ಸೀರೆಯೂ ಇವರ ಒಡಲು ಮುಚ್ಚಲಿಲ್ಲ.
ಪಿಳ್ಳಂಗೋವಿಯ ಸದ್ದು ಹಸಿವಿಗೆ ಕೇಳಲಿಲ್ಲ.
ಇಲ್ಲ ಇಲ್ಲ ಏನೂ ಇಲ್ಲ ಏನೆಂದರೆ ಏನೂ ಇಲ್ಲ.
ಅಗೋ
ವೃಂದಾವನದ ತುಂಬೆಲ್ಲಾ
ಬದುಕಿ ಸತ್ತ ಸಾವಿರಾರು ಬತ್ತಿಗಳು
ಉರಿಯದೇ ಕರಗುತ್ತಿವೆ, ಬೆಳಕು ಹಿಂಗಿ (ಕೋವಿ ಮತ್ತು ಕೊಳಲು-ವೃಂದಾವನದ ಸೀತೆಯರು)

ಪುರಾಣ ಕಾಲದಿಂದ ಹಿಡಿದು ಇಂದಿನ ದಿನಮಾನದ ವರೆಗೂ ನಡೆದುಕೊಂಡು ಬಂದಿರುವ ಭಾರತೀಯ ಹೆಣ್ಣಿನ ಸಾಮಾಜಿಕ ಸ್ಥಿತಿಯನ್ನಿದು ಕುರಿತಿದೆ. ಅವಳ ಜೀವನದಲ್ಲಿ ತನ್ನ ಪುರುಷ ಸಂಗಾತಿಯ ದೆಸೆಯಿಂದ ಎದುರಾದ ಅಗ್ನಿ ಪ್ರವೇಶ/ ಸತಿ ಆಚರಣೆ ಸಾಮಾನ್ಯವಾಗಿದೆ. ಅವಳ ಮೈ ಮೇಲೆ ಎರಗುವ ಮೃಗಗಳಿಗೆ ತನ್ನನ್ನೆ ಕತ್ತರಿಸಿಕೊಂಡು ಒಪ್ಪಿಸಿಕೊಂಡಿದ್ದಾಳೆ. ಇಡೀ ದೇಶವೇ ಪೂಜಿಸುವ ಯಾವ ಪುರುಷ ದೇವರೂ ಕೂಡ ದನಿ ಕಳೆದುಕೊಂಡ ಅವಳ ಮೊರೆಗೆ ಕಿವಿಗೊಡುತ್ತಿಲ್ಲ. ಹೆಣ್ಣನ್ನು ಅವಳ ಕಷ್ಟ ಪರಂಪರೆಯಿಂದ ಪಾರು ಮಾಡುವ ಎಲ್ಲ ದೈವಗಳ ಕತೆಗಳು ಪುರಾಣ ಕತೆಗಳ ಕಟ್ಟುಕತೆಯಾಗಿ ಮಾತ್ರ ಉಳಿದಿವೆ. ದೈವ ಸಮಾನವಾಗಿರುವ ಎಲ್ಲ ಪುರುಷರೂ ಅವಳನ್ನು ಮೃಗದಂತೆ ಹರಿದು ತಿನ್ನುವವರೇ ಆಗಿದ್ದಾರೆ. ಇದರಿಂದ ಬಿಡಿಸಿಕೊಂಡು ಹೊರಬರಲು ಸಾಧ್ಯವಿಲ್ಲದ ಸ್ಥಿತಿಯನ್ನು ಆಕೆ ತಲುಪಿದ್ದಾಳೆ. ಹಾಗಾಗಿ ಅತ್ತ ಬೆಳಕು ಬೀರದ ಇತ್ತ ಉರಿಯಲಾರದ ಸತ್ತ ಬತ್ತಿಗಳಂತೆ ಭಾರತೀಯ ಮಹಿಳೆಯರ ದೀನ ಹೀನ ಸ್ಥಿತಿ ಮುಂದುವರೆದಿರುವ ಬಗ್ಗೆ ಕೊರಗು, ವಿಷಾದ ತುಂಬಿದೆ.

 

ಭಾರತೀಯ ಸಮಾಜದಲ್ಲಿ ಪರಂಪರಾಗತವಾಗಿರುವ ಲಿಂಗಭೇದ ನೀತಿ, ಅದರ ಭಾಗವಾದ ಬಾಲ್ಯ ವಿವಾಹ, ಸತಿ ಆಚರಣೆ, ವಿಧವಾ ಸಮಸ್ಯೆ, ಅನಕ್ಷರತೆ, ವರದಕ್ಷಿಣೆ ಪಿಡುಗು, ಬಹುಪತ್ನಿತ್ವ ಪದ್ಧತಿಗಳ ವಿರುದ್ಧ ಸಮಾಜವನ್ನು ಸುಧಾರಿಸುವ ದೊಡ್ಡ ಆಂದೋಲನವೆ 19ನೆಯ ಶತಮಾನದಲ್ಲಿ ನಡೆದಿದ್ದರೂ ಅದು ಕೊನೆಗೆ ಭಾರತೀಯ ಮಹಿಳೆಯರ ಸಮಸ್ಯೆಗಳು ನೆಪವಾಗಿ ಅದರ ಮೂಲಕ ಭಾರತದ ಪುರುಷ ಸಮಾಜ ಮತ್ತು ಅಂದಿನ ಬ್ರಿಟಿಶ್ ಸರಕಾರ ನಡುವೆ ನಡೆದ ಅಧಿಕಾರ ಮತ್ತು ಪ್ರತಿಷ್ಟೆಗಳ ಹಗ್ಗ ಜಗ್ಗಾಟವಾಗಿ ಪರಿಣಮಿಸಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ ವ್ಯಂಗ್ಯವಾಗಿದೆ. ಸಮಾಜ ಸುಧಾರಣೆಯ ಭಾಗವಾಗಿ ಕೆಲವೊಂದು ಪದ್ಧತಿಗಳು, ಆಚರಣೆಗಳು ಸಮಾಜದಿಂದ ಮರೆಯಾದರೂ ಅದರ ಮುಂದುವರೆದ ಭಾಗವಾಗಿ ಸ್ವಾತಂತ್ರ್ಯೋತ್ತರ ಅಧುನಿಕ ಭಾರತದಲ್ಲಿ ಕೌಟುಂಬಿಕ ಹಿಂಸೆ, ಮರ್ಯಾದಾ ಹತ್ಯೆಗಳು, ಅತ್ಯಾಚಾರಗಳು, ಉದ್ಯೋಗ ಮತ್ತು ವಿದ್ಯಾ ಕ್ಷೇತ್ರಗಳಲ್ಲಿ ಲೈಂಗಿಕ ದುರುದ್ದೇಶದ ಕೆಟ್ಟ ನಡತೆಗಳು ನಿರಂತರವಾಗಿ ಘಟಿಸುತ್ತಲೆ ಇವೆ. ಮಹಿಳೆಯರ ಸ್ಥಿತಿಗತಿ ಮತ್ತು ಸ್ಥಾನಮಾನಗಳಲ್ಲಿ ಕಾಲಮಾನದ ಅಗತ್ಯಕ್ಕೆ ತಕ್ಕಂತೆ ಬದಲಾವಣೆಯಾಗಿದ್ದರೂ ಸಮಾಜ ಸುಧಾರಣಾ ಪೂರ್ವದಲ್ಲಿದ್ದ ಮೂಲಸ್ಥಿತಿ ಗಮನಾರ್ಹ ಬದಲಾವಣೆಯಾಗದಿರುವುದು ಇಲ್ಲಿ ಸಂಕೇತವಾಗಿದೆ.

ಹಾಗಾಗಿ ವೃಂದಾವನದ ಸೀತೆಯರು ಕವಿತೆಯಲ್ಲಿ ವ್ಯಕ್ತವಾಗಿರುವ ಅಳಲು ಸಮಕಾಲೀನವಾಗಿದೆ. ಇದು ಸಮಾಜದ ಲಿಂಗ ನೀತಿ ವಿರುದ್ಧದ ದನಿಯಾಗಿದೆ. ಲಿಂಗ ಸಮಾನತೆ ಬಹುದಿನದ ಬೇಡಿಕೆ ಮತ್ತು ಆಗ್ರಹವಾಗಿದ್ದರೂ ಇಂದಿಗೂ ವಾಸ್ತವವಾಗದ ಆದರ್ಶವಾಗಿದೆ. ಹಾಗಾಗಿ ಸ್ತ್ರೀ ಸಂಬಂಧಿತ ಸಮಸ್ಯೆಗಳು ಈಗಾಗಲೇ ಬಹುಚರ್ಚಿತ ವಿಷಯವಾಗಿ ಇರುವುದರಿಂದೇನೂ ಈ ಕವಿತೆಯ ಮಹತಿ ಕಡಿಮೆಯಾಗುವುದಿಲ್ಲ. ಇಡೀ ಭಾರತೀಯ ಸಮಾಜದ ಅರ್ಧ ಜನ ಸಮುದಾಯದ ಪ್ರತಿನಿಧಿಯಾಗಿ ದನಿ ಪಡೆದಿರುವ ಈ ಕವಿತೆ ತನ್ನ ಹುಟ್ಟಿನಿಂದಲೆ ಪ್ರಕೃತಿದತ್ತವಾಗಿ ಪಡೆದಿರುವ ಪ್ರತಿಯೊಂದು ಜೀವ-ಜೀವನದ ಸಮಾನ ಹಕ್ಕುಗಳಿಗಾಗಿ ಹರಡಿ ನಿಂತಿರುವ ಮಾನವೀಯ ಸೆಲೆಯಾಗಿದೆ. ಕವಿತೆಯ ಬಂಧ ಎಲ್ಲೊ ಸಡಿಲವಿರುವಂತೆ ತೋರುವುದಾದರೂ ಅದು ಗೌಣವಾಗಿದೆ.

 

ಸ್ವಂತಿಕೆಯ ಸ್ವಂತತನ- ಭಾಗ 3

 

ಇತ್ತೀಚಿಗಿನ ಲಾವೋನ ಕನಸು ಸಂಕಲನದಲ್ಲಿ ಈ ಮೇಲಿನ ಎರಡೂ ಹಂತಗಳಲ್ಲಿ ಸಿದ್ಧಿ ಪಡೆದ ಅಂಶಗಳು ಒಂದು ಹದದಲ್ಲಿ ಮೇಳೈಸಿ ಕಾವ್ಯದ ಹೊಸ ಬಗೆ ಹೊಸಬನಿಯೊಂದು ಮೈತಳೆದಿರುವುದನ್ನು ಕಾಣಬಹುದು. ಈ ಮಜಲಿನಲ್ಲೂ ಹೊಸ ಹದ ಒಡಮೂಡುವಲ್ಲಿ ಕೊರತೆಯನ್ನು ತುಂಬಿಕೊಳ್ಳುವ ಪ್ರಯೋಗಗಳು ನಡೆದಿದ್ದು ಅವನ್ನು ಗಮನಿಸಬಹುದು.

 

ಕಾಲುಗಳು ಕಡಲ ಕಿನಾರೆಯಂತೆಯೂ
ಕೈಗಳು ಹಸಿರು ತುಂಬಿದ ಗದ್ದೆಯ ಬಯಲಂತೆಯೂ (ಲಾವೋನ ಕನಸು- ಕತ್ತಲಿಗೆ ಅಡವಿತ್ತ ಬೆತ್ತಲ ಮೈ)

 

ಈ ಸಾಲುಗಳು ಬೇಂದ್ರೆಯವರ ಬೆಳಗು ಕವನದ ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳಾ ಹಾಡು ಹೊರಟಿತು ಹಕ್ಕಿಗಳಾ ಹಾಡು ಎಂಬ ಸಾಲನ್ನು ತಟ್ಟನೆ ನೆನಪಿಸುತ್ತದೆ. ಬೇಂದ್ರೆಯವರ ಸಾಲುಗಳಲ್ಲಿನ ಕಲ್ಪಕ ಮತ್ತು ಚಿತ್ರಕ ಶಕ್ತಿಯಲ್ಲಿರುವ ತಾಜಾತನವೇ ರಾಜೇಂದ್ರ ಪ್ರಸಾದರ ಈ ಮೇಲಿನ ಸಾಲುಗಳಲ್ಲಿಯೂ ಕಂಡುಬಂದು ಹಿತಕರವಾದ ಅನುಭವ ಉಂಟಾಗುತ್ತದೆ. ಪ್ರಕೃತಿಯ ಕಾರ್ಯಕಲಾಪದಲ್ಲಿ ಭಾಗಿಯಾಗಿರುವ ಸಕಲ ಜೀವ ಜಡ ವಸ್ತುಗಳು ಒಂದಾಗಿ ಕಾರ್ಯನಿರ್ವಹಿಸುತ್ತಿರುವ ಚೈತನ್ಯದ ಅಖಂಡತೆಯನ್ನು ಬೇಂದ್ರೆಯವರ ಸಾಲು ಒಂದೇ ಉಸಿರಲ್ಲಿ ಮನವರಿಕೆ ಮಾಡಿಬಿಡುತ್ತದೆ. ಈ ಸಾಲು ಇಡೀ ಕವಿತೆಯಲ್ಲೂ ಶೋಭಿಸುತ್ತದೆ, ಕವಿತೆಯಿಂದ ಪ್ರತ್ಯೇಕಿಸಿ ಇಟ್ಟರೂ ಅಷ್ಟೇ ಸುಖ ಕೊಡುತ್ತದೆ. ಹಾಗಾಗಿಯೇ ಏನೋ ಮಾಸ್ತಿ ನಾದಲೀಲೆ ಸಂಕಲನಕ್ಕೆ ಮುನ್ನುಡಿ ಬರೆದ ಸಂದರ್ಭದಲ್ಲಿ ಬೇಂದ್ರೆಯನ್ನು ಭರವಸೆಯ ಕವಿ ಎಂದು ಹೇಳಲು ಗರಿ ಸಂಕಲನದ ಇದೇ ಸಾಲನ್ನು ಎತ್ತಿ ಹೇಳಿದ್ದಾರೆ. ರಾಜೇಂದ್ರ ಪ್ರಸಾದರ ಸಾಲು ಕೂಡ ತನ್ನ ಹೊಸ ಭಾಷೆ ಹೊಸ ಪ್ರತಿಮೆಗಳ ಮನೋಹರತೆಯಿಂದ ಓದುಗರನ್ನು ಅಷ್ಟೇ ತೀವ್ರವಾಗಿ ಸೆಳೆಯುತ್ತದೆ. ಅದು ತನ್ನನ್ನು ತಾನು ತೆರೆದು ತೋರಿಸದಿದ್ದರೂ ತನ್ನ ಸ್ವಂತಿಕೆಯ ಹೊಸ ಮೆಟ್ಟಿಲ ಸರಿದಾರಿಯಲ್ಲಿರುವ ಸೂಚಿಯಾಗಿದೆ.

 

ಮಗನ ತಲೆಯಲ್ಲಿ ಬೆಳ್ಳಿ ಹೂವಿನ ನಾರು ಅರಳಿದುವು
ಅಮ್ಮ ಇದೀಗ ಟಚಿಣಡಿಟಠಟಿಥಿ.ಛಿಠಟಗೆ ಲಾಗಿನ್ ಆಗುವುದನ್ನು
ಕಲಿತಿದ್ದಾಳೆ! (ಲಾವೋನ ಕನಸು- ಹೆಣ್ಣ ಹುಡುಕುವುದು ಕಣ್ಣ ತಂದಂತೆ!)

ಹೆಣ್ಣು ಗಂಡಿನ ಸಂಬಂಧದಲ್ಲಿ ಪ್ರಚಲಿತದಲ್ಲಿರುವ ಹೆಣ್ಣು ಬಾಳಿನ ಕಣ್ಣು ಎಂಬ ರೂಢಿ ಮಾತನ್ನು ನಂಬಿರುವ ತಾಯಿಯೊಬ್ಬಳು ತನ್ನ ಮಗನಿಗೆ ಚೆಂದದ ಹೆಣ್ಣು ತರಲು ಹುಡುಕಾಟ ನಡೆಸಿದ್ದಾಳೆ. ಮಗನಿಗೆ ತರುವ ಹೆಣ್ಣು ಅವನಿಗೆ ಗೆಳತಿಯಾಗಿ ಹೆಂಡತಿಯಾಗಿ, ತಾಯಿಯಾಗಿ ಅವನ ಸರ್ವ ಜವಾಬುದಾರಿಯನ್ನು ಸಮರ್ಥವಾಗಿ ನಿಭಾಯಿಸುವಂತಹವಳು ಆಗಿರಬೇಕೆಂದು ಬಯಸಿದ್ದಾಳೆ. ಹೆಣ್ಣು ಗಂಡು ಆದಿಯಾಗಿ ಮನುಷ್ಯರೆಲ್ಲ ಪರಿಪೂರ್ಣ ಗುಣ ಸ್ವಭಾವ ಸಂಪನ್ನರಾಗಿರದೆ ಎಲ್ಲರಲ್ಲೂ ಅರೆಕೊರೆಗಳಿರುವುದು ಎಷ್ಟು ಪ್ರಕೃತಿ ಸಹಜವೋ ಇದನ್ನು ಮರೆಮಾಚುವಂಥ ತಾಯ ಮಮತೆ ಮಗನ ಮೇಲಿರುವುದು ಕೂಡ ಅಷ್ಟೇ ಸಹಜವಾದುದಾಗಿದೆ. ತಾಯಿ ತನ್ನ ಮಗನಿಗಾಗಿ ನಡೆಸುವ ಪರಿಪೂರ್ಣ ಹೆಣ್ಣಿನ ಹುಡುಕಾಟ ಕೊನೆಕಾಣುವಂಥದ್ದಲ್ಲ, ಮಾತ್ರವಲ್ಲ ಅಂಥ ಆದರ್ಶ ಹೆಣ್ಣಿನ ಹುಡುಕಾಟ ಮಗನ ಬಾಳಿಗೆ ಮುಳುವಾಗುವಂಥದ್ದೂ ಆಗಿರುತ್ತದೆೆ. ಮನೆಗೆ ಮದುವೆ ಮೂಲಕ ಕಾಲಿಡಲಿರುವ ಹೆಣ್ಣಿನ ಕುರಿತು ತಾಯಿ ಮತ್ತು ಮಗನ ಅಗತ್ಯಗಳು ಬೇರೆ ಬೇರೆಯಾಗಿದ್ದು ತಾಯಿಯ ಅಗತ್ಯ ಮಗನ ಅಗತ್ಯವನ್ನು ಮುಂದುಮಾಡಿಕೊಳ್ಳದಿದ್ದಲ್ಲಿ ಎದುರಾಗುವ ಸಮಸ್ಯೆ ಇಲ್ಲಿಯ ವಸ್ತುವಾಗಿದೆ.

 

ಮಾನವೀಯ ಹೋರಾಟಗಾರನಾಗಿರುವ ಅಲ್ಪಸಂಖ್ಯಾತ ಕವಿ ಕಲಾವಿದನಿಗೆ ಪ್ರಭುತ್ವ ವಿರೋಧಿ ನೆಲೆಯಲ್ಲಿ ತನ್ನ ವೈಯಕ್ತಿಕ ಜೀವನವೆ ಕಂಟಕಗಳ ಭೂಮಿಕೆಯಾಗಿರುತ್ತದೆ. ಅಂಥ ನಿರ್ಬಂಧಿತ ಜೀವನದಲ್ಲಿ ಅವನಿಗೆ ತನ್ನ ಕ್ರಿಯಾಶೀಲತೆಯೇ ತನಗೆ ಮುಳುವಾಗಿರುತ್ತದೆ ಮತ್ತು ತನ್ನ ಅಸ್ತಿತ್ವವೂ ಆಗಿರುತ್ತದೆ, ಅಲ್ಲದೆ ತನ್ನ ಉಸಿರಾದ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಲು ಆತ ಸದಾ ಹೋರಾಟ ಮಾಡುವ ಸ್ಥಿತಿಯೂ ನಿರ್ಮಾಣವಾಗಿರುತ್ತದೆ.

ಒಬ್ಬ ಹೆಣ್ಣು ಯಾರಂತೆಯೂ ಇರದೆ ತನ್ನಂತೆ ಮಾತ್ರ ಇರಲು ಸಾಧ್ಯ. ಆ ಹೆಣ್ಣು ಜೀವ ಮತ್ತೊಬ್ಬರ ಕಣ್ಣಾಗಲು, ಬಾಳಿನ ಬೆಳಕಾಗಲು ಸಾಧ್ಯವಿಲ್ಲ, ಇದು ಕೇವಲ ಆಶಯ ಮಾತ್ರ. ಈ ಆಶಯ ಹೆಣ್ಣು ಗಂಡುಗಳಿಬ್ಬರ ನಡುವಿನ ಹೊಂದಾಣಿಕೆ ಮನೋಭಾವ, ಪರಸ್ಪರ ಅರ್ಥಮಾಡಿಕೊಳ್ಳುವ ಶಕ್ತಿ, ಇಬ್ಬರೂ ಪರಸ್ಪರರಲ್ಲಿ ಹೊಂದುವ ವಿಶ್ವಾಸ, ಗೌರವ ಮತ್ತು ಗೆಳೆತನದ ಮಟ್ಟವನ್ನು ಅನುಸರಿಸಿರುತ್ತದೆ. ಇದು ಯಾವುದೇ ವ್ಯಕ್ತಿಯಲ್ಲಿ ಆಗುವಿಕೆಯೇ ಹೊರತು ಸಿದ್ಧವಾಗಿ ಇರುವ ಸ್ಥಿತಿಯಲ್ಲ. ಮನುಷ್ಯನಲ್ಲಿ ಆಗುವಿಕೆಯನ್ನು ಇರುವಿಕೆಯನ್ನಾಗಿ ಬಯಸಿದಾಗ ಅದು ಅಸಹಜವಾಗುತ್ತದೆ, ಸ್ವಾರ್ಥ ಸ್ವಭಾವವಾಗುತ್ತದೆ. ಇಂಥ ಸ್ವಭಾವ ಇಲ್ಲಿನ ತಾಯಿಯದಾಗಿದೆ. ಹಾಗಾಗಿ ಅವಳ ಹುಡುಕಾಟಕ್ಕೆ ಹೊಸ ಕಾಲಮಾನದ ನವ ಸಲಕರಣೆಗಳ ಸೌಲಭ್ಯ ದೊರೆತು ಸಾಗುವ ನಿರಂತರತೆ ಪ್ರಾಪ್ತವಾಗಿದೆ. ಇದು ಸಮಸ್ಯೆಯನ್ನು ದುರಂತದೆಡೆಗೆ ದೂಡುತ್ತದೆ. ಇಂಥ ಸಹಜ ಮತ್ತು ಅಸಹಜ ಬದುಕು ಬೆರೆತಲ್ಲಿ ಮಾನವ ಜೀವನ ಹೇಗೆ ಏರಿಳಿತಕ್ಕೊಳಪಡಬಲ್ಲುದು ಎಂಬುದರ ಕಡೆ ಗಮನ ಸೆಳೆದಿದೆ. ಮದುವೆ ಪೂರ್ವದಲ್ಲಿ ಗಂಡು ಮತ್ತು ಗಂಡಿನ ತಾಯಿ ತನ್ನ ಮನೆಗೆ ಬರುವ ಹೆಣ್ಣಿನ ಕುರಿತು ತಳೆದಿರುವ ಮನಸ್ಥಿತಿ ಹೇಗೆ ಒಂದು ಸಾಮಾಜಿಕ ಸಮಸ್ಯೆಯಾಗಬಲ್ಲ ಅನಾರೋಗ್ಯಕರ ಮನಸ್ಥಿತಿ ಎಂಬುದನ್ನು ಧ್ವನಿಸಿದೆ. ಉಪಮೇಯ ಮತ್ತು ಉಪಮಾನಗಳು ಪ್ರಕಟವಾಗುವ ಯಾವ ಹಂತದಲ್ಲೂ ಜಟಿಲತೆಗೆ ಒಳಗಾಗದೆ ಸ್ಫುಟವಾಗಿ ಬೆಳಗುವ ಕ್ರಮ ಇಲ್ಲಿದೆ.

 

ದುರಿತಕಾಲ ನಿನ್ನೆ ಮೊನ್ನೆಯದಲ್ಲ.
ಅದು ಒಡಹುಟ್ಟಿದ ಒಡಲಶಾಪ!ಉದುರುವ ಎಲೆ ಎಂದೂ
ಬೀಸುವ ಗಾಳಿಯ ದ್ವೇಷಿಸೋಲ್ಲ! (ಲಾವೋನ ಕನಸು-ಯುದ್ಧಕಾಲದಿ ಸಾಂತ್ವನಶಾಸ್ತ್ರ)

 

ಮಾನವ ಸಮಾಜದ ಸಾಂಸ್ಥಿಕ ವ್ಯವಸ್ಥೆ ಮತ್ತು ವ್ಯಕ್ತಿಯ ವೈಯಕ್ತಿಕ ಸ್ವಭಾವಗಳ ನಡುವೆ ಅನಾದಿ ಕಾಲದಿಂದಲೂ ಬಿರುಕುಗಳು ಇವೆ. ವ್ಯಕ್ತಿಯಿಂದಲೇ ಸಮಾಜ ಮತ್ತು ಸಾಮಾಜಿಕ ಸಂಸ್ಥೆಗಳು ರೂಪ ಪಡೆದಿದ್ದರೂ ವ್ಯಕ್ತಿ ಅವಗಣನೆಗೆ ಒಳಗಾಗಿ ಅವನ ಹಕ್ಕು ಅಧಿಕಾರಗಳನ್ನು ಮೊಟಕುಗೊಳಿಸಲಾಗುತ್ತದೆ ಇಲ್ಲವೆ ಕಸಿದುಕೊಳ್ಳಲಾಗುತ್ತದೆ. ಪ್ರಜ್ಞಾವಂತ ಜೀವಿಯಾದ ಕವಿ ಕಲಾವಿದ ಕ್ರಿಯಾಶೀಲತೆಯ ಪ್ರತಿರೂಪನಾಗಿದ್ದು ಮಾನವನ ಹಕ್ಕು ಅಧಿಕಾರಗಳಿಗೆ ಮಾನವ ಕೇಂದ್ರಿತ ಸಂಸ್ಥೆಗಳಿಂದಲೇ ಧಕ್ಕೆಯೊದಗಿದ ಸಂದರ್ಭಗಳಲ್ಲೆಲ್ಲ ಪ್ರಭುತ್ವ ವಿರೋಧಿ ನಿಲುವು ತಾಳುತ್ತಾನೆ. ಈ ತಿಕ್ಕಾಟದಲ್ಲಿ ಪ್ರಭುತ್ವದ ಆಯುಧ ಮತ್ತು ಅಧಿಕಾರ ಬಲಗಳು ಹಾಗೂ ಕವಿ ಕಲಾವಿದನ ನೈತಿಕ ಮತ್ತು ಮಾನವೀಯ ಬಲಗಳು ಸದಾ ಎದುರಾಗುತ್ತಲೆ ಬಂದಿವೆ. ಮಾನವೀಯ ಹೋರಾಟಗಾರನಾಗಿರುವ ಅಲ್ಪಸಂಖ್ಯಾತ ಕವಿ ಕಲಾವಿದನಿಗೆ ಪ್ರಭುತ್ವ ವಿರೋಧಿ ನೆಲೆಯಲ್ಲಿ ತನ್ನ ವೈಯಕ್ತಿಕ ಜೀವನವೆ ಕಂಟಕಗಳ ಭೂಮಿಕೆಯಾಗಿರುತ್ತದೆ. ಅಂಥ ನಿರ್ಬಂಧಿತ ಜೀವನದಲ್ಲಿ ಅವನಿಗೆ ತನ್ನ ಕ್ರಿಯಾಶೀಲತೆಯೇ ತನಗೆ ಮುಳುವಾಗಿರುತ್ತದೆ ಮತ್ತು ತನ್ನ ಅಸ್ತಿತ್ವವೂ ಆಗಿರುತ್ತದೆ, ಅಲ್ಲದೆ ತನ್ನ ಉಸಿರಾದ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಲು ಆತ ಸದಾ ಹೋರಾಟ ಮಾಡುವ ಸ್ಥಿತಿಯೂ ನಿರ್ಮಾಣವಾಗಿರುತ್ತದೆ. ಸಮಾಜ ವ್ಯವಸ್ಥೆ ರೂಪುಗೊಂಡ ದಿನದಿಂದಲೂ ಕವಿ ಕಲಾವಿದ ಎದುರಿಸಿಕೊಂಡುಬಂದಿರುವ ಈ ಉಭಯ ಸಂಕಟದ ಸ್ಥಿತಿಯನ್ನು ಇಲ್ಲಿ ದುರಿತ ಕಾಲ ಎಂಬ ನುಡಿಗಟ್ಟುಗಳಿಂದ ಕಟ್ಟಿಕೊಡಲಾಗಿದೆ. ಜೀವ ಮತ್ತು ದೇಹದಂತೆ ಕವಿ ಮತ್ತು ದುರಿತ ಕಾಲಗಳ ಸಂಬಂಧವಿದ್ದು ಇದರಿಂದ ಬಿಡುಗಡೆ ಇಲ್ಲವೆಂದು ಹೇಳಲಾಗಿದೆ. ಮಾನವ ಹಕ್ಕುಗಳ ಹೋರಾಟದಲ್ಲಿ ಕವಿ ಕಲಾವಿದನ ಜೀವನ ಆ ಹೋರಾಟದಲ್ಲಿಯೇ ಅಂತ್ಯ ಕಾಣುತ್ತದೆ. ಅಂದರೆ ಮಾನವ ಹಕ್ಕುಗಳಿಂದಲೇ ಜನಿಸಿದ ಕವಿ ಕಲಾವಿದ ಅದಕ್ಕಾಗಿಯೇ ಜೀವಿಸುತ್ತಾನೆ ಮತ್ತು ಅದರಿಂದಲೇ ತನ್ನ ಜೀವನವನ್ನು ಮುಗಿಸುತ್ತಾನೆ, ಅವನ ಸುಖ ಅದರಲ್ಲಿಯೇ ಅಡಗಿದೆ. ಈ ಮಾತನ್ನು ಕವಿತೆಯ ಕೊನೆಯ ಎರಡು ಸಾಲು ತನ್ನ ರೂಪಕದ ಭಾಷೆಯಲ್ಲಿ ಸುಂದರವಾಗಿ ಮಂಡಿಸಿದೆ. ಇಲ್ಲಿ ಕವಿತೆ ಒಂದು ತತ್ವದ ರೂಪುರೇಷೆ ತಳೆದು ಸಿದ್ಧಿಯ ಹಂತ ತಲುಪಿದೆ.

 

ಪ್ರಭುವೇ,
ಎಂದೂ ಏನೂ ಕೇಳದ ನಾನು
ಮಂಡಿಯೂರಿ ಬೊಗಸೆಯಷ್ಟು ಪ್ರೀತಿ ಬೇಡಿದೆ
ನಿನ್ನ ಕರುಣೆಯ ಖಡ್ಗ ಕೈಯನ್ನೇ ಕತ್ತರಿಸಿತು.
ಸಾವರಿಸಿಕೊಂಡು ಕಾಣಲು ಯತ್ನಿಸಿದೆ,
ಕಣ್ಣನ್ನೇ ಇಂಗಿಸಿದೆ.
ಕಿವಿಗೊಟ್ಟು ಆಲಿಸೋದರೆ,
ತಮಟೆಯನ್ನೇ ಒಡೆದುಹಾಕಿದೆ.
ಹೇಳಿಕೊಳ್ಳಲು ಶುರುವಾದೆ
ನಾಲಿಗೆ ಬೀಳಿಸಿದೆ.ಏನೂ ತೋಚದೆ ಕಡೆಗೆ
ಎದೆಯನ್ನೇ ನಿನಗಿತ್ತು ಶರಣಾದ ಬಳಿಕ
ನಾವಿಬ್ಬರೂ ಶವವಾಗಿ ಹೋದೆವು
ಭಕ್ತ ಸತ್ತ ಬಳಿಕ ದೇವನುಳಿಯಲಿಲ್ಲ (ಲಾವೋನ ಕನಸು-ಪ್ರಾರ್ಥನೆ)

 

ಈ ಕವಿತೆಯ ತಲೆಬರಹ ಮತ್ತು ಆರಂಭಿಕ ಉದ್ಗಾರ ಅಡಿಗರ ‘ಪ್ರಾರ್ಥನೆ’ ಪದ್ಯವನ್ನು ಅನಾಯಾಸವಾಗಿ ನೆನಪಿಗೆ ತರುತ್ತದೆ. ಅಲ್ಲಿ ಅಂತರಂಗದ ಕಾಮ ಪ್ರವೃತ್ತಿ ಬಗ್ಗೆ ಒಪ್ಪಿತ ಸಾಮಾಜಿಕ ಮಡಿವಂತಿಕೆಯ ನಿಲುವನ್ನು ವಿರೋಧಿಸುವ ತೀವ್ರ ವ್ಯಂಗ್ಯದ ಧಾಟಿಯಲ್ಲಿ ಆರಂಭಗೊಂಡು ತನ್ನ ಜಟಿಲ ರಚನಾ ವಿಧಾನದಲ್ಲಿ ಪ್ರಾರ್ಥನೆಯ ಸಾಂಪ್ರದಾಯಿಕ ಕ್ರಿಯಾತ್ಮಕ ಆಚರಣೆ ಮತ್ತು ದಿವ್ಯ ಅರ್ಥವನ್ನು ಒಡೆದು ಮುಂದುವರೆಯುತ್ತದೆ. ಇಲ್ಲಿ ಹಾಗಿಲ್ಲ. ಎಲ್ಲವೂ ನೇರ, ಸ್ಪಷ್ಟ ಮತ್ತು ಸ್ಫುಟವಾಗಿದೆ. ಭಕ್ತ ತನ್ನ ದೈವದಲ್ಲಿ ಮೊರೆಯಿಡುವ ಸಂಗತಿ ವಾಚ್ಯವಾಗಿ ಮಂಡಿತವಾಗಿದೆ. ಅದಕ್ಕೆ ದೈವ ನೀಡಿದ ಸ್ಪಂದನೆಯ ಬೆಳವಣಿಗೆಯನ್ನು ಸೂಚ್ಯಾರ್ಥಕ್ಕೆ ಏರಿಸಿದೆ. ಭಕ್ತನ ಮೊರೆ, ದೈವದ ಸ್ಪಂದನೆ ಈ ಎರಡೂ ಹಂತಗಳ ಕೊನೆಯಲ್ಲಿ ದೈವ-ಭಕ್ತ ಕಲ್ಪನೆ ನಾಶವಾಗುತ್ತವೆ. ವಾಚ್ಯಾರ್ಥ ಸೂಚ್ಯಾರ್ಥಗಳು ತಮ್ಮ ಅರ್ಥದ ನೆಲೆ ಕಳೆದುಕೊಂಡು ಕಾವ್ಯದ ನೆಲೆ ಬಿಮ್ಮನೆ ಬಿರಿಯುತ್ತದೆ. ಹೀಗಿದು ವಾಚ್ಯ, ಸೂಚ್ಯ ನೆಲೆಯಲ್ಲಿ ಸಾಗಿ ಧ್ವನಿಯಲ್ಲಿ ಮುಗಿತಾಯವಾಗುವ ಕ್ರಮದಲ್ಲಿದೆ. ಈ ವಿಧಾನದಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೇರುತ್ತ ಕಾವ್ಯ ಸ್ಫುಟಗೊಳ್ಳುತ್ತ ಸಾಗುತ್ತದೆ. ಕಾವ್ಯದ ವಾಚ್ಯ ನಿರೂಪಣೆ, ಸೂಚಾರ್ಥದ ಮಂಡನೆ ಮತ್ತು ಧ್ವನಿ ಶಕ್ತಿ – ಈ ಎಲ್ಲವೂ ಇಷ್ಟು ಸರಳ ಕ್ರಮದಲ್ಲಿ ಒಂದೇ ಕವಿತೆಯಲ್ಲಿ ಮೇಳೈಸಿಕೊಂಡಿರುವುದು ವಿಶೇಷವಾಗಿದೆ. ಬಿಳಿಮಲೆ ಅವರು ಹೇಳಿರುವಂತೆ ಇದನ್ನು ‘ಒಂದು ಬಗೆಯ ಮೌನ ಮತ್ತು ನಿಗೂಢತೆಯ ಆಯಾಮ’ದಿಂದ ಸಾಧಿಸಲಾಗಿದೆ.ಇದು ಒಳಗೊಂಡಿರುವ ವಸ್ತು ವಿಷಯವಾದರೂ ಅಷ್ಟೇ ಗಂಭೀರವಾದುದಾಗಿದೆ. ನಾಗರಿಕತೆಯ ಕೊನೆಯ ಮೆಟ್ಟಿಲು ಎಂಬ ಕವಿತೆ ‘ಬಲಿಗಂಬದ ಬಳಿ ಎಣಿಸಲಾರದಷ್ಟು ಮುಂಡಗಳು’ ಎಂಬ ಸಾಲಿನಲ್ಲಿ ಅತ್ಯಾಧುನಿಕ ನವನಾಗರಿಕ ಮಾನವ ಸಮಾಜ ಬಂದು ತಲುಪಿರುವ ಹಂತವನ್ನು ಸಾರಿ ಹೇಳುತ್ತದೆ. ಶಾಂತಿ, ಅಹಿಂಸೆ, ಸಹಬಾಳ್ವೆಯ ಬದಲಾಗಿ ಕ್ರೌರ್ಯ ಆಧುನಿಕ ಮಾನವನ ಸ್ವಭಾವವಾಗಿ ಬಿಟ್ಟಿದೆ. ಮನುಕುಲ ತನ್ನ ಜೀವನ ಕಟ್ಟಿಕೊಳ್ಳುವುದಕ್ಕಿಂತ ಹೆಚ್ಚು ಧರ್ಮ ಕಟ್ಟಿಕೊಳ್ಳುವುದರಲ್ಲಿ ಮುಂದಿದೆ. ಪಶ್ಚಿಮದಲ್ಲಿ ಸೋದರರಾಗಿ ಹುಟ್ಟಿದ ವಿಶ್ವದ ಪ್ರಮುಖ ಧರ್ಮಗಳು ಕಾಲ ಸರಿದಂತೆ ದಾಯಾದಿಗಳಾಗಿ ಧರ್ಮ ರಕ್ಷಣೆಯ ಹೆಸರಿನಲ್ಲಿ ದ್ವೇಷ ಸಾಧಿಸುತ್ತಿವೆ. ಆಧುನಿಕ ಜ್ಞಾನ ಬೆಳಣಿಗೆಯೊಂದಿಗೆ ಜಗತ್ತಿನ ಹೊಸ ಭೂಪ್ರದೇಶಗಳನ್ನು ಶೋಧಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳು ತಾವು ಶೋಧಿಸಿದ ಹೊಸ ಭೂಪ್ರದೇಶಗಳಲ್ಲಿ ಒಂದಾನೊಂದು ಕಾಲದಿಂದ ನೆಲೆಸಿದ್ದ ಬೇರೆ ಬೇರೆ ಭಾಷೆ, ಸಂಸ್ಕೃತಿ, ಧರ್ಮಗಳನ್ನು ಹೊಸಕಿಹಾಕಿ ಅಲ್ಲಿ ತಾವು ನಂಬಿದ್ದ ಮತ್ತು ಅನುಸರಿಸುತ್ತಿದ್ದ ಧರ್ಮವನ್ನು ನೆಲೆಗೊಳಿಸಲು ಪಾಲಿಸಿದ ಹಿಂಸೆಯ ದಾಖಲೆಗಳು ಚರಿತ್ರೆಯ ಪುಟ ಸೇರಿವೆ. ಇದರಿಂದ ಶೋಧಿತ ಜಗತ್ತು ಪಡಬಾರದ ಪಾಡು ಅನುಭವಿಸಿದೆ. ಅಪಾರ ನೋವು ಅನುಭಿಸಿದ ಕಪ್ಪು ಜಗತ್ತಿನ ಒಡಲ ಗಾಯ ಚಿನುವಾ ಅಚಿಬೆಯ ‘ಥಿಂಗ್ಸ್ ಫಾಲ್ ಅಪಾಟರ್್’ ಕಾದಂಬರಿಯಲ್ಲಿ ಕಲಾಕೃತಿಯಾಗಿ ಮೂಡಿದೆ. ಇದರ ಮುಂದುರೆದ ರೂಪ ಡಬ್ಲ್ಯುಟಿಒ ಗಗನಚುಂಬಿ ಕಟ್ಟಡಗಳನ್ನು ನಿನರ್ಾಮ ಮಾಡಿ ಭಯೋತ್ಪಾದನೆ/ಧರ್ಮ ಯುದ್ಧದ ಹೆಸರಿನಲ್ಲಿ ಅಮಾಯಕ ಸಾವಿರಾರು ಜನರ ಸಾವಿಗೆ ಕಾರಣವಾದ ಆಧುನಿಕ ಜಗತ್ತಿನ ದಾಯಾದಿ ಧರ್ಮದ ಕೃತ್ಯದಲ್ಲಿ ಅಡಗಿದೆ. ಧರ್ಮ ದೇವರ ಹೆಸರಿನಲ್ಲಿ ಸಮಾಜದ ಸಹ ಜನ ಸಮುದಾಯಗಳನ್ನು ಅಸಹನೆ, ಕುತಂತ್ರ ಮತ್ತು ದೌರ್ಜನ್ಯದಿಂದ ನಡೆಸಿಕೊಳ್ಳುತ್ತ ಬಂದಿರುವ ಈ ದೇಶದ ಪ್ರಮುಖ ಧರ್ಮವೆಸಗಿರುವ ಹಿಂಸೆಯೂ ಬೇರಾವ ಧರ್ಮದ ಹಿಂಸೆಗಿಂತ ಕಡಿಮೆಯಿಲ್ಲ. ಹೀಗೆ ಇಡೀ ಜಗತ್ತು ಧರ್ಮದ ಮಾನವ ಕುಲ ಉದ್ಧಾರದ ಉದಾರತೆಯ ಸೋಗಿನಲ್ಲಿ ಕ್ರೌರ್ಯ ಎಸಗುತ್ತ ಬಂದಿದ್ದು ಧರ್ಮ ಚರಿತ್ರೆಯ ಮೂಲಬೇರನ್ನು ಈ ಕವಿತೆ ಎಲ್ಲರಿಗೂ ಎದ್ದು ಕಾಣುವಂತೆ ಮಾಡಿದೆ. ಧರ್ಮದ ಹಿಂಸಾತ್ಮಕ ನಡೆ ಜೀವ ವಿರೋಧಿಯೂ ದೈವ ವಿರೋಧಿಯೂ ಆಗಿರುವುದನ್ನು ಅಷ್ಟೇ ತಣ್ಣಗಿನ ಭಾಷೆಯಲ್ಲಿ ನಮ್ಮ ಮುಂದೆ ಇರಿಸಿದೆ. ದೈವ ನಂಬಿಕೆ ಮತ್ತು ದೈವ ನಂಬಿಕೆಯಿಂದ ಹುಟ್ಟುವ ಹಿಂಸೆ ಇದರ ಪರಿಣಾಮವಾಗಿ ದೈವ-ಭಕ್ತ ಕಲ್ಪನೆಯೊಂದಿಗೆ ನಂಬಿಕೆ-ಪ್ರತೀಕಾರದಂಥ ಭಾವುಕ-ಬೌದ್ಧಿಕ ಪ್ರಮೇಯಗಳೂ ಇಲ್ಲವಾಗುತ್ತವೆ. ಈ ಪ್ರಕ್ರಿಯೆ ಹೊಸ ಜಗತ್ತಿನ ಆರಂಭಕ್ಕೆ ಕಾರಣವಾಗಲಿದೆ ಎಂದು ಕಾಣಿಸಿದೆ.

 

ಇದರ ದೇಶೀ ಸ್ವರೂಪ ಈ ಮುಂದಿನ ಕವಿತೆಗಳಲ್ಲಿದೆ.

 

ಹಾರುತಿವೆ ಏರುತಿವೆ ಹಸಿರು, ಕೇಸರಿ ಪತಾಕೆಗಳು
ಬಿದ್ದು ಮಣ್ಣಾಗುತ್ತಿವೆ ಬಿಳಿಯ ಬಾವುಟಗಳು (ಲಾವೋನ ಕನಸು-ಗಾಂಧಿ)

 

ಅಟ್ಟ ಸೇರಿದ್ದ ತುಕ್ಕಿನ ಖಡ್ಗಗಳಿಗೆ
ಸಾಣೆ ಹಿಡಿಯಲಾಗುತ್ತಿದೆ, ಪಟ್ಟಾಭಿಷೇಕ
ಆಯುಧ ಪೂಜೆ, ಶಸ್ತ್ರಾಸ್ತ್ರ ವೀಕ್ಷಣೆ, ಖಾಸಗಿ ದರ್ಬಾರು
ಮೊದಲು ಮುಗಿಯಲೆಂದು ಮುಹೂರ್ತಕ್ಕೆ ಕಾಯಲಾಗಿದೆ.
ಧರ್ಮಯುದ್ಧ ಘೋಷಣೆಗೂ ಮೊದಲು
ಅಶ್ವಮೇಧ ಯಾಗ ಗ್ಯಾರಂಟಿ! ಪಟ್ಟದ ಕುದುರೆ ಹಿಡಿದು ಕಟ್ಟಿದ್ದ
ಕವಿಗಳು, ಕಲಾವಿದರು, ಜನರೂ-ಜನೋಪಕಾರಿಗಳ
ಪಟ್ಟಿ ಸಿದ್ಧವಾಗುತ್ತಿದೆ.ಹೆಮ್ಲಾಕ್ ವಿಷದ ಬಟ್ಟಲುಗಳು, ನೇಣುಗಂಬಗಳು
ಗಿಲೋಟಿನ್ ಯಂತ್ರಗಳು, ಗ್ಯಾಸ್ ಚೆಂಬರುಗಳು
ಈಗ ನಡೆಯುವುದಿಲ್ಲ, ಸದ್ದಿಲ್ಲದ ಪ್ರಾಣಹರಣ,
ಅಧಿಕಾರದ ಕೈಗೆ ಕಾನೂನು ಸುಲಭ!
ಗೋಗ್ರಹಣದಲಿ ಸತ್ತರೆ ದೋಷವಿಲ್ಲವಂತೆ ಹೊಸ ಸಂವಿಧಾನ
ಭಕ್ತ ಸೇವಕರಿಂದ ಗೋ ಮೂತ್ರಪಾನ-ಪಾರಾಯಣಆಯರ್ಾವರ್ತದ ಉದ್ದಗಲಕ್ಕೂ ಹರತಾಳ
ಕಲ್ಯಾಣ ರಾಜ್ಯಕ್ಕೆ ರಾಮರಾಜ್ಯದ ನಾಮಕರಣ!
ಗದ್ದುಗೆಗೆ ಬಂದದ್ದು ಕ್ರಿಮಿಸಂತಾನ.
ಎಷ್ಟು ರಕ್ತವೋ ಎಷ್ಟು ರೋಗವೋ ಅಂದಾಜು ಅಡಗಿಹೋಗಿದೆ.
ಹುಚ್ಚರ ಸಂತೆಯಲಿ ಜನರು ಕಳೆದುಹೋಗಿದ್ದಾರೆ.ಇನ್ನು ಕಾಯಬೇಕು ಕಾದು ನೋಡಿ ಕೇಳಬೇಕು
ಎಷ್ಟೆಷ್ಟು ಭಾಷಣಗಳ ಕೆಳಗೆ, ಎಷ್ಟೆಷ್ಟು ಹೆಣ ಬೀಳುತ್ತೆಯೆಂದು!
ಭಾಷಣದ ಬಾಯಿಗೆ ಬಲು ಸುಲಭ
ದುಡಿಯುವ ರಟ್ಟೆಗೆ ಕರಕಷ್ಟ
ನೀರು ಬತ್ತಿದ ಕೆರೆಯಲ್ಲಿ ಎದ್ದ ಅಮೃತಶಿಲೆಯ ಗುಡಿಯೊಳಗೆ
ಅಪ್ಪನಾಣೆ, ಭತ್ತದ ತೆನೆ ತೂಗಿ ಬೆಳೆದು ತೂಗುವುದಿಲ್ಲ!
ಎರಡುದ್ದರಣೆ ಪಚ್ಚಕರ್ಪುರದ  ನೀರು ಉರಿದಲ್ಲದೆ ಹೊಟ್ಟೆ ತುಂಬಿಸುವುದಿಲ್ಲ.
ಏನೇ ಆಗಲಿ,
ಮತ್ತೆ ಹೊರದಿರಲಿ ಇಟ್ಟಿಗೆಗಳನು ಸರಯೂ ತೀರಕೆ
ಬದುಕಿನ ಅರವಟ್ಟಿಗೆಗಳ ಎದೆಯ ತುಳಿದು
ಮತ್ತೆ ಹೊರದಿರಲಿ ಕಬ್ಬಿಣದ ಸರಳುಗಳನು ಅಲ್ಲಿಗೆ
ಕೊಲೆಗಡುಕರು ಇರಿದು ನೆರೆಯ ರಕ್ತ ಬಳಿದು
ಅದೋ
ರಾಜಧಾನಿಯಲ್ಲಿ ಕೇಸರಿ ಬಾವುಟ, ರಂಗೋಲಿ ಮತ್ತು ಜಯಕಾರ(ಲಾವೋನ ಕನಸು-ಪ್ರಧಾನ ಸೇವಕರು, ಕರ ಸೇವಕರು ಮತ್ತು ಗೋ-ಕರು)

 

ಭಾರತದ ಬಾವುಟದಲ್ಲಿ ಒಪ್ಪಿತವಾಗಿರುವ ಬಹುಬಣ್ಣಗಳು ಇಲ್ಲಿನ ಬಹುಬಗೆಯ ಜನ ಸಮುದಾಯಗಳು, ಅವರ ಆಚಾರ ವಿಚಾರಗಳು, ಧರ್ಮಗಳು, ಸಂಸ್ಕೃತಿ ಬಹುಬಗೆಯದಾಗಿರುವುದರ ಸಂಕೇತವಾಗಿದೆ. ಅದರಲ್ಲಿ ಬಿಳಿಯ ಬಣ್ಣ ಶಾಂತಿ, ಸಹನೆ, ಅಹಿಂಸೆ ಮತ್ತು ಸಂಯಮದ ಪ್ರತೀಕವಾಗಿದೆ. ಈ ದೇಶದ ಮೂಲ ಧರ್ಮಗಳು ಮತ್ತು ಮೂಲ ಕೇಂದ್ರ ಪ್ರಜ್ಞಾ ಹರಿವು ಹೇಗೆ ನಲುಗಿ ನಾಶವಾಗುತ್ತಿದೆ ಎಂಬುದರ ಬಗೆಗೆ ಗಾಂಧಿ ಕವಿತೆಯ ಈ ಸಾಲುಗಳಲ್ಲಿದೆ. ಇಲ್ಲಿ ವ್ಯಕ್ತವಾಗಿರುವ ವಿಷಾದ ಸ್ವಾತಂತ್ರ್ಯೋತ್ತರ ಸಮಕಾಲೀನ ಸಮಾಜದ ಸ್ಥಿತಿ-ಗತಿಗೆ ಹಿಡಿದ ಕೈಗನ್ನಡಿಯಾಗಿದೆ. ಅಸಹನೆ ಮತ್ತು ಕೋಮು ಭಾವನೆ ಹೇಗೆ ಇಂದಿನ ಜೀವನ ಮೌಲ್ಯವಾಗಿದೆ ಎಂಬುದನ್ನು ಕಾಣಿಸಿದೆ. ಇದರ ಚರಿತ್ರೆಯನ್ನು ಧರ್ಮನಿರಪೇಕ್ಷ ಮನಸ್ಥಿತಿಯಲ್ಲಿ ಅರಸಿದಾಗ ಧರ್ಮ ರಾಜಕಾರಣ ಮತ್ತು ಅದರ ಆಕ್ರಮಣಕಾರಿ ನಡೆ ಎದ್ದು ಕಾಣುತ್ತದೆ. ನಮ್ಮ ಜೀವನದ ಭಾಗವಾಗಿರುವ ಈ ಕ್ರಮವಿಧಾನದಲ್ಲಿ ಅಡಗಿರುವ ಕ್ರೌರ್ಯದ ಬಹುಮುಖಿ ನೆಲೆ ಪ್ರಕಟಗೊಳ್ಳುವ ಬಗೆಯನ್ನು ಪ್ರಧಾನ ಸೇವಕರು… ಕವಿತೆ ಬಗೆದು ತೋರಿಸಿದೆ. ಪ್ರಧಾನ ಸಮುದಾಯ ತನ್ನ ಸಾಂಸ್ಕೃತಿಕ ರಾಜಕಾರಣದಲ್ಲಿ ಬಳಸಿರುವ ಧಾಮರ್ಿಕ, ರಾಜಕೀಯ ಮೇಲಾಟದಲ್ಲಿನ ಸಾಮಾಜಿಕ ಪರಿಣಾಮದಿಂದ ಇತರ ಬಹು ಸಮುದಾಯಗಳು ಕಳೆದುಕೊಳ್ಳುತ್ತಿರುವ ತಮ್ಮ ಜೀವಿತದ ಮಾನವ ಹಕ್ಕು ಅಧಿಕಾರಗಳ ಬಗ್ಗೆ ಚಿಂತೆ, ಕಳವಳದ ಶಿಲ್ಪವನ್ನು ಕಟ್ಟಿಕೊಟ್ಟಿದೆ. ಹಾಗಾಗಿಯೆ ಸಹಜೋಕ್ತಿಯಂತಿರುವ ‘ಹುಚ್ಚರ ಸಂತೆಯಲಿ ಜನರು ಕಳೆದುಹೋಗಿದ್ದಾರೆ’ ಎಂಬಂಥ ಹೇಳಿಕೆಗಳು ಈ ಕವಿತೆಯಲ್ಲಿ ಬಹಳಷ್ಟಿವೆ. ಆದರೆ ಇವು ಕಾವ್ಯದ ನೆಲೆಗೆ ಧಕ್ಕೆಯನ್ನು ಉಂಟುಮಾಡದೆ ವಾಸ್ತವ ಕಟುಸತ್ಯವನ್ನು ಕಟ್ಟಿಕೊಡುವ ಅತಿವಾಸ್ತವತೆಯ ಅಲಂಕಾರಿಕ ನವಶೈಲಿಯಂತಿದೆ. ಇಲ್ಲಿ ಕಾವ್ಯದ ವಾಚ್ಯ, ಸೂಚ್ಯ ಮತ್ತು ಧ್ವನಿ ನೆಲೆಗಳು ಒಂದರೊಳಗೊಂದು ಬೆರೆತು ಕಲಸಿ ನಾದಿದ ಹೊಸ ಹದವೊಂದು ಸ್ಫುಟತ್ವದ ಲಕ್ಷಣ ಪಡೆದು ಮೈತಳೆದುಕೊಂಡಿದೆ.

ನಡುಹಗಲು ನೆತ್ತಿಯ ಮೇಲೆ
ಕೂತು ತೂಕಡಿಸುವಾಗ
ಪಶ್ಚಿಮಚೀನಾದಿಂದ ನೀರೆಮ್ಮೆಯ ಮೇಲೆ
ಹೊರಟು ಲಾವೋ ತಾತ
ಕಾವೇರಿಯ ದಡಕ್ಕೆ ಬಂದಿದ್ದ! (ಲಾವೋನ ಕನಸು-ಲಾವೋನ ಕನಸು)

ಜಗತ್ತಿನ ಯಾವುದೇ ಮೂಲೆಯಲ್ಲಿರುವ ಮಾನವ ಹಿತಕೇಂದ್ರಿತ ಭಾವನೆಗಳು, ಆಲೋಚನೆಗಳು, ತತ್ವಗಳು ಪ್ರಾದೇಶಿಕ ಮಿತಿಗಳ ಎಲ್ಲೆಯನ್ನು ಮೀರಿ ಒಂದಾಗುತ್ತವೆ, ಪರಸ್ಪರ ಕೈ ಜೋಡಿಸುತ್ತವೆ ಎಂಬುದನ್ನು ತನ್ನದೇ ಹೊಸ ಬಗೆಯ ಶಬ್ದಚಿತ್ರಗಳ ಮೂಲಕ ಕಟ್ಟಿಕೊಡಲಾಗಿದೆ. ಕವಿ ತತ್ವಜ್ಞಾನಿಗಳು ಮಾನವ ರಚಿತ ಸಮಾಜವನ್ನು ಮತ್ತಷ್ಟು ಮಾನವ ಪರ ಮತ್ತು ಮಾನವ ಕೇಂದ್ರಿತವನ್ನಾಗಿ ಮಾಡುವಲ್ಲಿ ಜಾಗತಿಕ ನೆಲೆಯಲ್ಲಿ ಸಮಾನರು ಎಂಬುದರತ್ತ ಗಮನ ಸೆಳೆಯುತ್ತ ಕಾವ್ಯತತ್ವ ಮತ್ತು ಸಮಾಜ ತತ್ವ ನಡುವಿರುವ ಸಮಾನ ಅಂಶಗಳನ್ನು ಇಲ್ಲಿ ಮುನ್ನೆಲೆಗೆ ತರಲಾಗಿದೆ.

ಹೀಗೆ ರಾಜೇಂದ್ರ ಪ್ರಸಾದರ ಕಾವ್ಯದ ಅಸಲು ಕಸುಬು ಮತ್ತು ಸಾಮಾಜಿಕ ಬದ್ಧತೆ ಪರಸ್ಪರಾವಲಂಬಿತ ಮತ್ತು ಸಮಾಜ ಸುಧಾರಣೆಗೆ ಓಲುವೆ ಹೊಂದಿರುವಥದ್ದೆಂದು ಆಲೋಚಿಸುವ ಸಂದರ್ಭದಲ್ಲಿ “Poets are unacknowledged legislators of the world” ಎಂಬ ಶೆಲ್ಲಿಯ ಕಾವ್ಯ ಕುರಿತ ಹೇಳಿಕೆ ನೆನಪಿಗೆ ಬರುತ್ತದೆ. ಮಾನವ ತನ್ನ ಹುಟ್ಟಿನಿಂದ ಪಡೆದಿರುವ ಜೀವಿತದ ಹಕ್ಕು ಅಧಿಕಾರಗಳಿಂದ ಸದಾ ವಂಚನೆಗೆ ಒಳಗಾಗುತ್ತಲೆ ಬಂದಿದ್ದು ಅದನ್ನು ಮರಳಿ ಪಡೆವ ಹೋರಾಟದಲ್ಲಿ ನಿರಂತರ ಪ್ರಯತ್ನ ಮಾಡುತ್ತಲೆ ಇದ್ದಾನೆ. ಈ ದಿಸೆಯಲ್ಲಿ ಕವಿ ತನಗೆ ದಕ್ಕುವ ಜೀವನಾನುಭವದ ನೆಲೆಯಲ್ಲಿ ತನ್ನ ಭಾಷಿಕ ಸಾಧನೋಪಕರಣಗಳನ್ನು ಸಾಣೆ ಹಿಡಿಯುತ್ತಲೆ ಇರುವ ಒಬ್ಬ ಕುಶಲ ಕಸುಬುದಾರನಾಗಿದ್ದಾನೆ ಮತ್ತು ಇರುಳ ಲೋಕದಲ್ಲಿ ಮಿಂಚಿನಂತೆ ಹೊಳೆವ ಅವನ ಕೈಯಲಗು ಕಾವ್ಯವಾಗಿದೆ.

 

2 comments to “ರಾಜೇಂದ್ರ ಪ್ರಸಾದ್ ಕಾವ್ಯದ ಅಸಲು ಕಸುಬು ಮತ್ತು ಸಾಮಾಜಿಕ ಬದ್ಧತೆ”
 1. ಹೊಸಕಾಲದ ಕವಿಯೊಬ್ಬನ ಕವಿತೆಗಳ ಕುರಿತು ಯಾರಾದರೂ ಮಾತನಾಡಿದರೆ ನಿಜಕ್ಕೂ ಅವನಿಗೆ ಖುಷಿಯೇ ಆಗುತ್ತದೆ.
  ಅದು ಟೀಕೆಯೋ, ಪ್ರಶಂಸೆಯೋ ಮತ್ತೊಂದೋ ಏನೇ ಆಗಿರಲಿ.. ಮಾತನಾಡುವುದು ಮುಖ್ಯ.
  ಶ್ರೀಧರ ಪಿಸ್ಸೆ ಅವರು ನನ್ನ ಮೇಲೆ ಮತ್ತು ಕವಿತೆ ಮೇಲೆ ವಚನ ಸಾಹಿತ್ಯದ ಪ್ರಭಾವವನ್ನು ತುಂಬಾ ಚೆನ್ನಾಗಿ ಗುರುತಿಸಿದ್ದಾರೆ.
  ಅಲ್ಲದೇ ನನ್ನ ಎಲ್ಲ ಕಾವ್ಯ ಸಂಕಲನಗಳ ಪೂರ್ಣ ಪ್ರಮಾಣದಲ್ಲಿ ಓದಿ ಇಷ್ಟು ದೀರ್ಘವಾದ ಬರಹವನ್ನು ಸಿದ್ಧಮಾಡಿದ್ದಾರೆ.
  ಇಂತಹದೊಂದು ಪ್ರಯತ್ನ ಮಾಡಿದ ಋತುಮಾನ. ಕಾಮ್ ತಂಡಕ್ಕೆ ನನ್ನಿ. <3

 2. ತುಂಬು ಮೆಚ್ಚುಗೆಗೆ ಒಳಗೊಳ್ಳಲೇಬೇಕಾದ ಗಟ್ಟಿ ಬರಹ. ಸಂತೆಗೆ ಮೊಳ ನೇಯುತ್ತಿರುವವರ ಹೊತ್ತಲ್ಲಿ ರಾಜೇಂದ್ರಪ್ರಸಾದನಂಥ ಕೆಲವಾದರೂ ನಿಜದ ಕವಿಗಳಿರುವುದು ಕನ್ನಡ ಕಾವ್ಯ ಸಂದರ್ಭದ ಹೆಚ್ಚುಗಾರಿಕೆ. ಅವರೇ ಸಂಪಾದಿಸುತ್ತಿರುವ ಸಂಕಥನ ಕೂಡ ಅವರು ನೆಚ್ಚಿರುವ ಸಂಗತಿಗಳ ಮಾರ್ಗದಲ್ಲೇ ಇದೆ. ಆದರೂ ಅಂತರ್ಜಾಲದಲ್ಲಷ್ಟೇ ಲಭ್ಯವಿರುವ ಸಾಮಾಜಿಕ ಜಾಲತಾಣಗಳು ಮತ್ತು ಇತರ ಸೌಲಭ್ಯಗಳು ಸಿಕ್ಕದಿರುವ ಹಲವು ಸಾಹಿತ್ಯಾಸಕ್ತರು ಸಂಸ್ಕೃತಿಯ ಆರಾಧಕರು ಸಂಗೀತಾಭಿಮಾನಿಗಳು ಬಹಳ ಸಂಖ್ಯೆಯಲ್ಲಿರುವುದನ್ನೂ ಮರೆಯಲಾಗದು. ಇದೇ ಬರಹ ಬಹುಆವೃತ್ತಿಯ ಪತ್ರಿಕೆಯೊಂದರ ವಿಶೇಷ ಸಂಚಿಕೆಯಲ್ಲಿ ಬಂದಿದ್ದರೆ ಓದುಗರಿಗೆ ತಲುಪುತ್ತಿದ್ದ ವೇಗಕ್ಕೂ ಮತ್ತು ಬರಿದೇ ಬ್ರೌಸು ಮಾಡುವ ಅಂತರ್ಜಾಲದ ನೋಡುಗರಿಗೂ ಇರುವ ವ್ಯತ್ಯಾಸ ಮತ್ತು ಸಹಜತೆಯನ್ನೂ ನಾವು ಅರಿಯಬೇಕು.
  ಮೊನ್ನೆ ಸಂಪನ್ನಗೊಂಡ ಧಾರವಾಡ ಸಾಹಿತ್ಯ ಸಂಭ್ರಮ ಮತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಕಾರ್ಯಕ್ರಮದಲ್ಲಿ ಆಹ್ವಾನಿತ ಗಣ್ಯರನ್ನೂ ಅವರು ಸಾಹಿತ್ಯ ಸಂಸ್ಕೃತಿಗಳಿಗೆ ಸಲ್ಲಿಸುತ್ತಿರುವ ಕೆಲಸಗಳನ್ನು ಗುರ್ತಿಸುವುದಕ್ಕೂ ಇದೇ ಅಂತರ್ಜಾಲದಲ್ಲಿ ಕ್ರಿಯಾಶೀಲರಾಗಿರುವವರನ್ನೇ ಆಯ್ಕೆ ಮಾಡಿಕೊಂಡಿರುವುದರ ಹಿನ್ನೆಲೆಯನ್ನೂ ‘ಅರ್ಥ’ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನೂ ಅರಿತರೆ ಒಟ್ಟೂ ಜಗತ್ತು ಹೊರಟಿರುವ ದಿಕ್ಕಿಗೂ ಋತುಮಾನದಂಥ ಅಪ್ಪಟ ರುಚಿಗೂ ವ್ಯತ್ಯಾಸಗಳ ಗಾಢತೆ ಗೊತ್ತಾಗುತ್ತದೆ. ಆದರೇನು ಮಾಡಲು ಸಾಧ್ಯ? ವರ್ತಮಾನ ಎನ್ನುವುದೇ ಬಾಯಿಬಡುಕರ ಆಡೊಂಬಲವಾಗಿರುತ್ತದೆ. ಅದು ನೆಲಕ್ಕಂಟಿದ ಶಾಪ ಕೂಡ.

ಪ್ರತಿಕ್ರಿಯಿಸಿ