ನನ್ನ ದೇವರು- ’ದೇವರು ಎಂಬುದು ಅಸತ್ಯ. ದೇವರಿಲ್ಲ ಎಂಬುದು ಅವಿದ್ಯೆ’

ಜಗತ್ತಿನ ಯಾವುದೇ ವಿಚಾರವಾಗಲೀ, ಇದನ್ನು ನಾನು ಒಪ್ಪಲಾರೆ ಎಂದು ಖಡಾಖಂಡಿತವಾಗಿ ತಿರಸ್ಕರಿಸಿದರೆ ಹೊಸ ಸಾಧ್ಯತೆಗಳಿಂದ ವಂಚಿತರಾಗುತ್ತೇವೆ. ನಾನು ದೇವರನ್ನು ನಂಬುವುದಿಲ್ಲ ಎಂದು ನನ್ನ ಒಳಸ್ಮೃತಿಯನ್ನು ಸಿದ್ದಪಡಿಸಿಕೊಂಡಿದ್ದೇ ಆದಲ್ಲಿ , ದೇವರನ್ನು ನಂಬಿದಾಗ ಹೊರಹೊಮ್ಮುವ ಸಾಧ್ಯತೆ, ಅನುಭವ, ಅನೂಹ್ಯ ಅವಲಂಬನೆ ಇದಾವುದೂ ದೊರಕುವುದಿಲ್ಲ. ಅದೇ ರೀತಿಯಾಗಿ ದೇವರನ್ನು ನಂಬುತ್ತೇನೆ ಎಂದು ಪಟ್ಟು ಹಿಡಿದು ಕುಳಿತರೆ, ಕಳಚಿ ನಿಲ್ಲುವ ನಿರ್ವಾಣ, ಪ್ರತೀಕವಿಲ್ಲದೆ ಅಸ್ತಿತ್ವ ಹುಡುಕುವ ಸ್ವಾದ ದೊರಕುವುದಿಲ್ಲ.

ಈ ನಿಟ್ಟಿನಲ್ಲಿ ನಾನು ನಂಬುವವ, ನಂಬದಿರುವವ ಎಂದು ತಮ್ಮನ್ನು ತಾವು ಘೋಷಿಸಿಕೊಳ್ಳುವುದು ರಸಹೀನ ಪ್ರವೃತ್ತಿಯಾಗುತ್ತದೆ. ನಾಸ್ತಿಕ ಮತ್ತು ಆಸ್ತಿಕ ಎಂಬ ಪದಪ್ರಯೋಗ ಇಲ್ಲಿ ಬಳಸುವುದು ಸೂಕ್ತವಲ್ಲ. ನಿರೀಶ್ವರ ವಾದ ಎಂಬುದೂ ಸೂಕ್ತ ಪದವಲ್ಲ. ಏಕೆಂದರೆ ಇವೆಲ್ಲವೂ ಸಮುದಾಯ ಕೇಂದ್ರಿತ ಪದಗಳು. ವಾದ ಎಂಬುದೇ ದ್ವೈತ ಪ್ರತೀಕ. ದೇವರು ಎಂಬುದನ್ನು ವೈಯಕ್ತಿಕ ಎಂದು ಅಂಗೀಕರಿಸಿಕೊಂಡಮೇಲೆ ಅದು ಸ್ವಾದವೇ ಹೊರತು ವಾದವಾಗಬಾರದು. ಆದ್ದರಿಂದ ನಾನು ನನ್ನ ಸ್ಮೃತಿ ವಿಸ್ತರಣೆಯನ್ನು ಹಿಡಿದು ನಿಲ್ಲಿಸಿಲ್ಲ. ತನ್ನನ್ನು ತಾನು ಅರಿತುಕೊಳ್ಳುವವನು ಅರ್ಥಾತ್ ವಿಮರ್ಶನ ಶಕ್ತಿ ಹೊಂದಿರುವವನೇ ’ಧೀರ’ ಎಂದು ಉಪನಿಷತ್ ಗಳಲ್ಲಿ ಪ್ರಸ್ತಾಪವಾಗುತ್ತದೆ. ಎಲ್ಲಾ ಸಾಧ್ಯತೆಗಳ್ಅನ್ನು ಹಿಡಿದು ಸಾಕ್ಷಾತ್ಕರಿಸಿಕೊಳ್ಳುವ ’ಧೀರ’ನಾಗುವುದು ನನ್ನ ಅಪೇಕ್ಷೆಯೂ ಹೌದು. ನಮ್ಮ ಪರಂಪರೆ ಹಾಕಿಕೊಟ್ಟ ಮೌಲ್ಯವೂ ಹೌದು.

ಪ್ರತೀಕ ಮತ್ತು ಮೌಲ್ಯ

ಅಸಹಾಯಕತೆಯ ಉತ್ಪನ್ನವೇ ’ದೇವರು’. ಅಸಮಾನ್ಯತೆಯನ್ನು ಮನುಷ್ಯ ಅದರಲ್ಲಿ ಕಾಣಲು ಇಚ್ಚಿಸುತ್ತಾನೆ. ತನ್ನ ದೌರ್ಬಲ್ಯವನ್ನು ದೇವರ ಮೂಲಕ ತೊಡೆದುಕೊಳ್ಳಲು ಮುಂದಾಗುತ್ತಾನೆ. ಹೀಗೆ ಮುಂದಾಗುವುದು ಮನುಷ್ಯನ ಮೂಲಗುಣ. ಈ ತನ್ನ ದೈನ್ಯತೆಯನ್ನು ಅವನು ನಿರಾಕಾರವಾದುದಕ್ಕೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಅವನ ಎಲ್ಲಾ ಗುಣಗಳೂ ರಸ-ಭಾವಗಳ ಮೂಲದಿಂದಲೇ ಉತ್ಪನ್ನವಾಗಿರುತ್ತದೆ. ರಸವೇ ಪ್ರಧಾನವಾದ ಅವನ ಮನೋಭಾವದಲ್ಲಿ ಪ್ರತೀಕಕ್ಕೆ ಹೆಚ್ಚು ಮಾನ್ಯತೆ. ಅವನ ಉತ್ಸಾಹ , ನಿರ್ಮಲತೆ, ಶಕ್ತಿ, ಹತಾಶೆ ಇವೆಲ್ಲಕ್ಕೂ ಅದು ಉತ್ತರರೂಪಿಯಾಗಿರುತ್ತದೆ. ಅದು ವಿಗ್ರಹವಾಗಿರಬಹುದು, ಚಿಹ್ನೆಯಾಗಿರಬಹುದು, ಗ್ರಂಥವಾಗಿರಬಹುದು.. ಒಟ್ಟಿನಲ್ಲಿ ಅವನಿಗೆ ಪ್ರತೀಕ ಬೇಕು.

ದೇವರು ಎಂಬುದು ಒಮ್ಮೆ ವಿವರಣೆಗೆ ಸಿಲುಕಿತು ಎಂದಮೇಲೆ ಅದು ವಿಗ್ರಹವೇ! ವಿಗ್ರಹಾರಾಧನೆ ಎಂದರೆ ಕಲ್ಲೇ ಎಂದಲ್ಲ. ಇಲ್ಲಿ ಪ್ರತೀಕದಿಂದ ಮನುಷ್ಯ ಜೀವಕ್ಕೆ ಉಂಟಾಗುವ ಭಾವಸ್ಖಲನ ಮುಖ್ಯವೇ ಹೊರತು ಅದರ ತರ್ಕವಲ್ಲ. ಈ ವಿವರಣೆಗೆ ಇಂಬು ಕೊಡುವಂತೆ ನನಗೆ ಕೇದಾರನಾಥ ಲಿಂಗಕ್ಕಿಂತಲೂ ಅದರ ಹಿಂದಿರುವ ಪರ್ವತ ದೇವರು ಎಂದೆನಿಸುತ್ತದೆ. ಅದರ ಬಳಿ ನನ್ನದೆಲ್ಲವನ್ನೂ ತೋಡಿಕೊಂಡು ಪರಿಹಾರ ಬಯಸುವ ಕಣ್ಣೀರು ಹರಿಯುತ್ತದೆ. ಸರ್ವಶಕ್ತನಪ್ಪ ನೀನು, ನನ್ನನ್ನು ಪಾಲನೆ ಮಾಡಲಾರೆಯಾ? ಎಂದು ಬೇಡಿಕೊಳ್ಳುವ ಮನಃಸಮಾಧಾನದ ಮನುಷ್ಯ ಮೂಲಗುಣ ಒಸರುತ್ತದೆ. ಅದು ಶಿವನೋ, ಕಲ್ಪನೆಯೋ, ಪ್ರಕೃತಿ ಆರಾಧನೆಯೋ, ಏನಾದರಾಗಲೀ.. ನಾವು ವೈಯಕ್ತಿಕವಾಗಿ ಯಾವುದನ್ನು ಪ್ರತೀಕವಾಗಿರಿಸಿಕೊಂಡಿದ್ದೇವೆ, ಅದು ನಮ್ಮ ಭಾವಮಂಡಲದಲ್ಲಿ ಯಾವ ಮೌಲ್ಯವನ್ನು ಹೊಂದಿದೆ ಎಂಬುದು ಮುಖ್ಯ. ನನ್ನ ಪ್ರತಿ ಅಸಹಾಯಕ ಸ್ಥಿತಿಯಲ್ಲೂ ಈ ರೀತಿಯ ಹಲವು ರೀತಿ ದೇವರನ್ನು ಸೃಷ್ಠಿಸಿಕೊಂಡಿದ್ದೇನೆ, ಆಯಾ ಪ್ರಕರಣಕ್ಕೆ ಅವು ನನ್ನೊಂದಿಗೆ ಸ್ಪಂದಿಸುತ್ತದೆ. ಸ್ಪಂದನೆಗೆ ಹಲಬುವ ಮನುಷ್ಯ ಎಂಬ ಸಂಘಜೀವಿಗೆ ದೇವರು ಎಂಬುದೇ ಮೊದಲ ಸಂಗಾತಿ.

ಅಸತ್ಯ ಮತ್ತು ಅವಿದ್ಯೆ

ತಾರ್ಕಿಕ ನೆಲೆಯಲ್ಲಿ, ಭೌತಿಕವಾಗಿ ದೇವರನ್ನು ಕಾಣುವುದು ಅಸತ್ಯವೇ ಆಗಿದೆ. ಭೌತಿಕ ಪ್ರಮೇಯದಲ್ಲಿ ದೇವರನ್ನು ಹುಡುಕುವುದು ಅವಿದ್ಯೆಯಾಗಿದೆ. ಆಯಾ ದೇಶ, ವಲಯದ ಪುರಾಣೋಕ್ತದ ಕಲ್ಪನೆಯ ಆಧಾರದ ದೇವರುಗಳ ಬಗ್ಗೆ ಮಾತನಾಡುವುದು ಸಂಸ್ಕೃತಿಯ ವಿಷಯವಾಗುತ್ತದೆಯೇ ಹೊರತು ದೇವರಿನ ವಿಚಾರವಾಗುವುದಿಲ್ಲ. ದೇವರನ್ನು ತಿರಸ್ಕರಿಸಿದ ತಕ್ಷಣ, ಅಸ್ತಿತ್ವದ ಬಗ್ಗೆ ಉಂಟಾಗುವ
ಗೊಂದಲವನ್ನು ವಿಜ್ನಾನವಾದ ಸಮರ್ಥವಾಗಿ ಪರಿಹರಿಸುತ್ತದೆ. ಆದರೆ ವಿಜ್ನಾನವಾದ ಭೌತಿಕತೆಯನ್ನು ಮಾತ್ರ ಪ್ರಮಾಣವಾಗಿರಿಸಿಕೊಂಡಿರುವುದರಿಂದ ಅದು ’ಬಹುದು’ ಎಂಬ ವಾದದಲ್ಲೇ ನಿಲ್ಲುತ್ತದೆ.

ಅಸತ್ಯ ಎಂಬ ನಿರ್ಣಯಕ್ಕೆ ಆಧಾರ ಯಾವುದು ಎಂದರೆ ಇಂದ್ರಿಯಾತ್ಮಕ ವಿವರಣೆ ಮಾತ್ರ ನೀಡುತ್ತೇವೆ, ಇಂದ್ರಿಯಕ್ಕೆ ನಿಲುಕದ ವಿಜ್ನಾನ ಆವಿಷ್ಕಾರಗೊಂಡರೂ, ಯಥಾಸ್ಥಿತಿವಾದವನ್ನೇ ವಿಜ್ನಾನ ಎಂದುಕೊಂಡಿರುವುದು ಅವಿದ್ಯೆಯಾಗಿದೆ. ಸಾಮಾಜಿಕ ಸ್ತರದಲ್ಲಿ ಇದನ್ನು ಪರೀಕ್ಷೆಗೆ ಒಳಪಡಿಸಿದಾಗ ವೈಯಕ್ತಿಕವಾಗಿಯೂ ದೇವರು ಎಂಬುದು ತೀರಾ ಉತ್ಪ್ರೇಕ್ಷೆಯಿಂದ ಕೂಡಿದ ಕಲ್ಪನೆ ಎನಿಸುತ್ತದೆ. ಇದಕ್ಕೆ ಕಾರಣ ನಮ್ಮ ಪ್ರತೀಕಗಳು, ಅದರ ಜೊತೆಗೆ ಜೋತುಬಿದ್ದ ಮನುಷ್ಯನ ಆಸೆ-ಭಯದ ಚೌಕಟ್ಟುಗಳು. ಮನುಷ್ಯ ನಿರ್ಮಿತವಾದ ಯಾವುದನ್ನೂ ’ದೇವರು’ ಎಂದು ಒಪ್ಪಿಕೊಳ್ಳುವುದು ಕ್ಷುಲ್ಲಕವೆನಿಸುತ್ತದೆ.

ಆದರೆ ’ಕಲ್ಪನೆ’ಯೂ ಮನುಷ್ಯ ನಿರ್ಮಿತವಲ್ಲವೇ? ಎಂಬ ಪ್ರಶ್ನೆ ಧುತ್ತೆಂದು ಏಳುತ್ತದೆ. ಕಾಲಾಕಾಲದಿಂದ ಸಾಮಾಜಿಕವಾಗಿ ವೈಯಕ್ತಿಕವಾಗಿ ದೇವರ ಬಗೆಗೆ ಆದ ಚರ್ಚೆಗಳ ಕೊನೆಯು ಈ ಪ್ರಶ್ನೆಗೇ ನಿಂತು, ಇಲ್ಲಿಂದ ದಿಕ್ಕಾಪಾಲಾಗುತ್ತದೆ. ಆದ್ದರಿಂದ ದೇವರ ಬಗೆಗಿನ ಜಿಜ್ನಾಸೆ ನಿಜವಾಗಿ ಹುಟ್ಟುವುದು ಮನುಷ್ಯನ ಅಸ್ತಿತ್ವವನ್ನು ಕಿತ್ತೊಗೆದು, ಅಸಲಿಗೆ ಜೀವ, ಜಡ ಎಲ್ಲದರ ಅಸ್ತಿತ್ವವನ್ನು ತ್ಯಜಿಸಿ ಏಕವಾದಾಗ. ಹೀಗೆ ಏಕತ್ವ ಕಂಡವರು ದೇವರು ಇದ್ದಾನೆ ಎಂದು ನಿರೂಪಿಸಿಲ್ಲ. ದೇವರು ಇಲ್ಲ ಎಂಬುದನ್ನೂ ಅವರಿಗೆ ಸಾಧ್ಯವಾಗಿಲ್ಲ. ಎಲ್ಲವೂ ಏಕವಾದಮೇಲೆ ಯಾರು ಯಾರಿಗೆ ನಿರೂಪಿಸಲು ಸಾಧ್ಯ? ಯಾವುದನ್ನು ನಿರೂಪಿಸಲು ಸಾಧ್ಯ? ಇದನ್ನು ಗೌತಮ ಶೂನ್ಯ ಎನ್ನುತ್ತಾರೆ, ಶಂಕರ ಅದ್ವೈತ ಎನ್ನುತ್ತಾರೆ. ಏನೂ ಇಲ್ಲ ಎಂಬುದೂ ಒಂದನ್ನು ಸೂಚಿಸುತ್ತದೆ. ಒಂದೇ ಇರುವುದು ಎಂಬುದೂ ಪೂರ್ಣತ್ವದ ಶೂನ್ಯವನ್ನೇ ಸೂಚಿಸುತ್ತದೆ.

ದೈವತ್ವ ಮತ್ತು ಪರಮಗುರಿ

ಮನುಷ್ಯ ಜೀವನದ ಸಾಧ್ಯತೆ ಏನು? ಬದುಕಿನ ಪರಮ ಪ್ರಯತ್ನ ಏನಿರಬಹುದು? ಯಾವುದನ್ನು ಗುರಿಯಾಗಿಸಿಕೊಳ್ಳಬೇಕು ಎಂಬುದು ಸಹಜಸ್ವಸ್ಥ ಪ್ರಶ್ನೆ. ಇದಕ್ಕೆ, ದೇವರು ಎಂಬ ಆದರ್ಶ ಒಂದು ಮಾನದಂಡವನ್ನು-ಗುರಿಯನ್ನೂ ಸೂಚಿಸುತ್ತದೆ. ದೇವರು ಮತ್ತು ದೈವತ್ವ ಸಮಾನಾರ್ಥಕವಲ್ಲ. ದೇವಗುಣ ಮತ್ತು ರಾಕ್ಷಸಗುಣ ಎರಡೂ ಮನುಷ್ಯನ ಎರಡು ಸಾಧ್ಯತೆಗಳು. ದೇವಗುಣಗಳು ಆದರ್ಶದ ಹಾದಿಯಲ್ಲಿ ಸಿಗುವ ತಂಗುದಾಣಗಳೇ ಹೊರತು ಅದೇ ಗುರಿಯಲ್ಲ. ಇನ್ನು ರಾಕ್ಷಸಗುಣ ಆದರ್ಶಕ್ಕೆ ತದ್ವಿರುದ್ಧವಾದುದು. ಮೂಲತಃ ಆದರ್ಶ ಗುಣಾತೀತವಾದದ್ದು. ಈ ರೀತಿಯಾದಂಥ ನನ್ನ ಆಲೋಚನೆಯನ್ನು ಪರಿಶೀಲಿಸುವಾಗ ಈ ಕೆಳಗಿನ ಎರಡು ಮಾತುಗಳನ್ನು ಪ್ರಮಾಣವಾಗಿರಿಸಿಕೊಳ್ಳುತ್ತೇನೆ.

ನದೇವಾ ಅಸುರಾ ವಾ ಅನ್ಯೇ ಕೇಚನ ವಿದ್ಯಂತೇ| (ಮನುಷ್ಯರಿಗಿಂತ ಬೇರೆ ಯಾವ ದೇವತೆಗಳಾಗಲಿ, ಅಸುರರಾಗಲಿ ಇಲ್ಲ) ಶಂಕರ ಭಾಷ್ಯ, ಬೃಹದಾರಣ್ಯಕ ಉಪನಿಷದ್ (5.2.3)
ಯೇ ಝಾನಪಸುತಾ ಧೀರಾ ನೆಕ್ಖಮ್ಮೂಪಸಮೇ ರತಾ ದೇವಾ ಪಿ ತೇಸಙ್ ಪಿಹಯಂತಿ ಸಂಬುದ್ಧಾಙ್ ಸತೀಮತಙ್ (ಯಾವ ಧೀರರು ಧ್ಯಾನದಲ್ಲಿಯೇ ನೈಷ್ಕರ್ಮ್ಯ, ಉಪಶಮ ಇವುಗಳಲ್ಲಿ ನಿರತರಾಗಿರುವರೋ ಅಂಥ ಸ್ಮೃತಿವಂತರಾದ ಬುದ್ಧರಂತೆ ನಾವೂ ಆಗಲಿಲ್ಲವಲ್ಲ – ಎಂದು ದೇವತೆಗಳೂ ಅನ್ನುವರು) ಗೌತಮ ಬುದ್ಧ ಧಮ್ಮಪದ, ಬುದ್ಧವರ್ಗ – 181

ದೈವತ್ವ ಇನ್ನೆಲ್ಲೋ ಇಲ್ಲ. ನಮ್ಮಲ್ಲೇ ಇದೆ. ದೈವತ್ವವನ್ನು ಮೀರಿದ್ದೂ ಇದೆ ಎಂಬುದನ್ನು ಇವು ಸಾಧಿಸುತ್ತದೆ. ಇಂಥಹ ಗುಣಾತೀತವಾದ ಸ್ಥಿತಿಯನ್ನು ತಲುಪುವುದೇ ಮನುಷ್ಯಸಾಧ್ಯ ಪರಮಗುರಿ. ಕೆಲವರು ಗುರಿ ಇಲ್ಲ ಎಂದು ಕೂತುಬಿಡುತ್ತಾರೆ. ಕೆಲವರು ಗುರಿಯನ್ನು ಅರಸುತ್ತಾ ನಡೆದು ಆನಂದಿಸುತ್ತಾರೆ. ಕೆಲವರು ತಾವು ತಲುಪಿದ್ದನ್ನೇ ಗುರಿ ಎನ್ನುತ್ತಾರೆ. ಒಟ್ಟಿನಲ್ಲಿ ನಮ್ಮ ನಮ್ಮ ವಿವೇಕಾನುಸಾರ ನಮ್ಮ ನಮ್ಮ ದೇವರು ಇರುತ್ತಾನೆ ಅಥವಾ ಇರುವುದಿಲ್ಲ.

ಪ್ರತಿಕ್ರಿಯಿಸಿ