ಜೆಕ್ ಗಣರಾಜ್ಯದ ಕಥೆ : ಅಪ್ಪಟ ಸುಖದ ಒಂದೆರಡು ಕ್ಷಣ

ಜೂನ್ ತಿಂಗಳು ಎಂದಮೇಲೆ ತಲೆಯೇ ಸುಟ್ಟುಹೋಗುವಷ್ಟು ಸೆಕೆ. ಅಂತೂ ಕೊನೆಗೆ ಹಾನಾ ಹೊರಾಕೊವಾ ಒದ್ದೆಯಾದ ಸಾರಿಸುವ ಬಟ್ಟೆಯನ್ನು ಹಿಂಡಿ ನೆಟ್ಟಗೆ ನಿಂತು ಮೈಮುರಿದು, ಹಣೆಯ ಬೆವರನ್ನು ಮುಂಗೈಯಿಂದ ಒರೆಸಿಕೊಂಡಳು. ಅಬ್ಬಾ, ವೆರಾಂಡಾ ಒರೆಸಿದ್ದಾಯಿತು. ಇನ್ನೂ ಬಾಗಿಲ ಮುಂದಿನ ಕಾಲೊರೆಸುವ ಬಟ್ಟೆಯನ್ನು ಕೊಡವಿ, ಕಸವನ್ನು ಗುಡಿಸಿ, ಸಾರಿಸಬೇಕೆಂಬುದು ನೆನಪಾಯಿತು. ಕಡೇಪಕ್ಷ ತನ್ನ ಬಾಗಿಲ ಮುಂದಿಂದ ಪಕ್ಕದ ಮನೆಯ ಸೀಕೊರೊವಾರವರ ಬಾಗಿಲವರೆಗಾದರೂ ಮಾಡಲೇಬೇಕು.

ಬೇಸರದಿಂದಲೇ ಬಾಗಿಲನ್ನು ತೆಗೆದು ಬಕೆಟನ್ನು ಮಂಡಿಯಿಂದ ತಳ್ಳಿದಳು. ಬಾಗಿಲ ಮೇಲೆ ಹೊಸದಾಗಿ ಹಾಕಿಸಿದ್ದ ಗಂಡನ ಹೆಸರಿನ ನಾಮಫಲಕ ಕಾಣಿಸಿತು. ಹೆಸರಿನ ಹಿಂದಿನ ಬಿ.ಇ. ಎಂಬ ಎರಡಕ್ಷರ ಕಣ್ಣಿಗೆ ಬಿದ್ದು ನೆಲಸಾರಿಸುತ್ತಿದ್ದ ತನ್ನ ಪಾಡಿಗೆ ಅವನೇ ಕಾರಣವೆನಿಸಿ ಸ್ವಲ್ಪ ಕೋಪವೂ ಬಂತು. ಆಹಾ, ಬಿ.ಇ. ಅಂತೆ. ಇಷ್ಟು ಹೊತ್ತಿಗಾಗಲೇ ಹಳ್ಳಿಯ ಮನೆಹಿಂದಿನ ತೊರೆಯಲ್ಲಿ ಕಾಲುಚಾಚಿ ಮಜಾ ಮಾಡ್ತಿರ್ತಾನೆ ಹಾಳಾದೋನು.

ಅಷ್ಟರಲ್ಲೇ ತಾನು ಮಾಡುತ್ತಿರುವುದು ಅನ್ಯಾಯವೆಂದೂ ಅನಿಸಿತು. ಬೇಸಿಗೆ ರಜಕ್ಕೆ ಒಂಬತ್ತು ವರ್ಷದ ಮಗನನ್ನು ಕರೆದುಕೊಂಡು ಗಂಡ ನೆನ್ನೆಯೇ ಹಳ್ಳಿಗೆ ಹೋದದ್ದೇನೋ ನಿಜ. ಆದರೆ ಮನೆಯ ಕಸವನ್ನೆಲ್ಲಾ ತೆಗೆದು ಒಂದು ದಿನ ತಡವಾಗಿಯೇ ಹೊರಡುವೆನೆಂದು ಹೇಳಿದ್ದು ತಾನೇ ಅಲ್ಲವೇ? ಮೂವರೂ ಸೇರಿ ಕೆಲಸ ಮುಗಿಸಿ ಒಟ್ಟಿಗೇ ಹೋಗುವುದಕ್ಕೆ ತಯಾರೆಂದರೂ ಕೇಳದೇ ಇಬ್ಬರನ್ನೇ ಕಳಿಸಿದ್ದು ತಾನೇ ಅಲ್ಲವೇ? ಆದರೂ ಹಳೆಯ ಟಿ-ಶರ್ಟು, ಲಂಗವನ್ನು ಹಾಕಿಕೊಂಡು ನೆಲ ಸಾರಿಸುತ್ತಿರುವುದನ್ನು ನೋಡಿ ಅನ್ಯಾಯವೆನಿಸಿದ್ದೂ ಅಷ್ಟೇ ಸತ್ಯ.

ಪ್ರಾಥಮಿಕ ಶಾಲೆಯೊಂದರಲ್ಲಿ ಚೆಕ್ ಭಾಷೆ ಮತ್ತು ಸಂಗೀತ ಹೇಳಿಕೊಡುವ ಕೆಲಸ. ಬೇಸಿಗೆ ರಜದ ಎರಡನೇ ದಿನ ಕೇವಲ ಒಂದೇ ದಿನವಾದರೂ ಸರಿ, ಯಾಕೋ ಒಬ್ಬಳೇ ಇರಬೇಕೆಂದೆನಿಸಿ ಈ ಮನೆಗೆಲಸದ ಸಬೂಬು ಹಾಕಿದ್ದಳು. ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದ್ದರಿಂದ ಕಾಟಾಚಾರಕ್ಕೆಂಬಂತೆ ಸಾರಿಸುವ ಬಟ್ಟೆಯನ್ನು ಹೊಸ್ತಿಲಿನ ಮುಂದೆ ಒಂದೆರಡು ಬಾರಿ ಜಾಲಾಡಿ ತಲೆಯೆತ್ತಿದಾಗ ಕಾಣಿಸಿದ್ದು ಹೊಳೆಯುತ್ತಿದ್ದ ನಾಮಫಲಕ. ಎಷ್ಟೇ ಆದರೂ ಮದುವೆಯಾದ ಮೇಲೆ ಹೆಂಗಸಿನ ಗತಿ ಇಷ್ಟೇ. ಗಂಡ ತೊಮಾಶ್ ಇತರ ಗಂಡಸರಿಗೆ ಹೋಲಿಸಿದರೆ ಒಳ್ಳೆಯವನೇ. ಮನೆಗೆಲಸದಲ್ಲಿ ತಾನೂ ಕೈಸೇರಿಸುವವ… ಆದರೂ…

ಇದ್ದಕಿದ್ದಂತೆ ಯಾವುದೋ ಸುವಾಸನೆಯ ಅರಿವಾಯಿತು… ಆಹಾ ಏನು ಸುಗಂಧ! ಬಾಗಿಲು ಮುಚ್ಚುವ ಮುನ್ನ ಮತ್ತೊಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡಳು.

ಕಾಫಿ ಮಾಡಿಕೊಂಡು, ಸಿಗರೇಟ್ ಹತ್ತಿಸಿ ಮೇಜಿನ ಮುಂದೆ ಕುಳಿತು ಆ ಸುಗಂಧವನ್ನು ನೆನೆಸಿಕೊಂಡಳು. ಯಾವುದೋ ಸೆಂಟಿನ ಜೊತೆಗೆ ತಂಬಾಕಿನ ಕಂಪು, ಅದರ ಜೊತೆಗೆ ಒಂದಷ್ಟು ಬೆವರಿನ ನಾತ. ಒಳಗೆಲ್ಲೋ ಹುದುಗಿದ್ದ ಏನನ್ನೋ ನೆನಪಿಸುವಂತಹ ಸುವಾಸನೆ. ಎದ್ದುಹೋಗಿ ಬಾಗಿಲನ್ನು ತೆಗೆದು ಒಣಗಿದ್ದ ಕಾಲೊರೆಸುವ ಬಟ್ಟೆಯನ್ನು ಓರಣಗೊಳಿಸಿ ಬಂದು ಕಾಫಿ ಲೋಟವನ್ನು ತುಟಿಗೆ ಏರಿಸಿದಳು.

ಬಾಗಿಲ ಹೊರಗೆ ಹರಡಿದ್ದು ಪರಪುರುಷನೊಬ್ಬನ ಪರಿಮಳ!

ನೆಲ ಸಾರಿಸುತ್ತಿದ್ದಾಗ ಹೆಜ್ಜೆಗಳು ಮೆಟ್ಟಿಲು ಹತ್ತಿ ಬಂದ, ಪಕ್ಕದ ಮನೆಯ ಬಾಗಿಲು ತಟ್ಟಿ, ನಂತರ ಕಾಲಿಂಗ್ ಬೆಲ್ ಒತ್ತಿ, ಸ್ವಲ್ಪ ಕಾದು, ಕೆಳಗೆ ಇಳಿದು ಹೋದ ಸದ್ದುಗಳೆಲ್ಲಾ ಕೇಳಿಸಿತ್ತು. ಕಿಂಡಿಯಲ್ಲಾದರೂ ನೋಡಲಿಲ್ಲವಲ್ಲಾ ಎಂದು ಬೇಸರವಾಯಿತು.

ಎದ್ದು ಕೋಣೆಯ ದೊಡ್ಡ ಕನ್ನಡಿಯ ಮುಂದೆ ನಿಂತು ತನ್ನನ್ನು ತಾನೇ ದಿಟ್ಟಿಸಿ ನೋಡಿದಳು. ಕಟ್ಟಿದ್ದ ಕೂದಲನ್ನು ಬಿಚ್ಚಿ ಅದರ ದಟ್ಟ ಎಳೆಗಳನ್ನು ಭುಜದ ಮೇಲೆ ಹರಡಿಕೊಂಡು, “ಹೀಗಿದ್ರೇ ವಾಸಿ ಅಲ್ವಾ? ಏನೋ… ಒಂದೂ ಗೊತ್ತಾಗ್ವಲ್ದು” ಏಂದು ಗೊಣಗಿಕೊಂಡಳು.

ದಷ್ಟಪುಷ್ಟ ಅಂಗಸೌಷ್ಟವವಿದ್ದ, ಚೆಲುವಯೆಂದು ಹಲವಾರು ಗಂಡಸರು ಮೆಚ್ಚಿ ಹೊಗಳಿದಂತಹ, ಮೈಕಟ್ಟಿದ್ದರೂ ಏನೋ ಅಸಮಾಧಾನ. ಈಗಿನವರ ನಡುವೆ ಸುಂದರಿಯೆನಿಸಿಕೊಳ್ಳಬೇಕಾದರೆ ತೂಕ ಸ್ವಲ್ಪ ತಗ್ಗಿಸಬೇಕೆಂದು ಟೀವಿ, ಪತ್ರಿಕೆಗಳು ಸಾರಿ ಹೇಳುತ್ತಿದ್ದವು… ಹಾಕಿಕೊಳ್ಳುತ್ತಿದ್ದ ಬಟ್ಟೆಯ ಶೈಲಿ ವಯಸ್ಸಿಗೆ ಒಪ್ಪುತ್ತಿರಲಿಲ್ಲವೆಂದು ಗೊತ್ತಿದ್ದರೂ ಯಾವ ಬದಲಾವಣೆಯೂ ತೋಚಿರಲಿಲ್ಲ. ರೋಸಿಹೋದಾಗ ಕೆಲವೊಮ್ಮೆ ಕನ್ನಡಿಯ ಬಗಲಲ್ಲಿ ನೇತುಹಾಕಿದ್ದ ಫೋಟೋದಲ್ಲಿನ ಅಜ್ಜಿ ಆಗ್ನೆಸ್ ಉಟ್ಟಿದ್ದ ಕುಪ್ಪುಸ ಲಂಗ ತೊಡಬಾರದೇಕೆ ಎನಿಸುತ್ತಿತ್ತು.

ಕಾಫಿ ಆರಿಹೋಗಿತ್ತು. ಒಂದೇ ಒಂದು ಕಣವೂ ಕಾಣದಂತೆ ಮನೆ ಶುಭ್ರವಾಗಿತ್ತು. ಏನೂ ತೋಚದೇ ಗೂಡಿನಲ್ಲಿಟ್ಟಿದ್ದ ವಿಸ್ಕಿ ಬಾಟಲನ್ನು ತೆಗೆದು ಒಂದು ಪೆಗ್ ಲೋಟಕ್ಕೆ ಸುರಿದುಕೊಂಡಳು. ತನ್ನ ಈ ದುರ್ದಸೆಯನ್ನು ಗಂಡ ನೋಡಬೇಕಿತ್ತು ಎಂದು ಒಳಗೊಳಗೇ ಸ್ವಲ್ಪ ಖುಷಿಯೂ ಆಯಿತು. ವಿಸ್ಕಿಯನ್ನು ಮುಗಿಸಿ ಲೋಟವನ್ನು ಬದಿಗಿಟ್ಟು ಹಿಂದೆ ಉಳಿದ ಕಾರಣವೇನು ಎಂದು ಮನಸ್ಸಿನಲ್ಲೇ ತಡಕಾಡಿದಳು. ಕಸ ತೆಗೆದು ನೆಲಸಾರಿಸುವುದಕ್ಕಂತೂ ಅಲ್ಲ ಎಂದು ಗೊತ್ತಿತ್ತು.

ಕಳೆದ ಶನಿವಾರದ ನೆನಪಾಯಿತು. ದಿನವಿಡೀ ಏನೋ ಅಸಮಾಧಾನ, ಯಾವುದೋ ಜಿಗುಪ್ಸೆ. ಬೆಳಿಗ್ಗೆ ಅಂಗಡಿಗೆ ಹೋಗಿ ಬಂದು, ಅಡುಗೆ ಊಟ ಮುಗಿಸಿ, ಗಂಡ ಹೆಂಡತಿ ಒಟ್ಟಿಗೆ ಹತ್ತಿರದ ಪಾರ್ಕಿನಲ್ಲಿ ಕೆಲಕಾಲ ಬಿಸಿಲು ಕಾಯಿಸಿದ್ದರು. ಸಂಜೆ ಸಿನೆಮಾವೊಂದನ್ನು ನೋಡಿ ಮನೆಗೆ ಬರುವಷ್ಟರಲ್ಲಿ ಯಾರ ಮೇಲೆ ರೇಗಬೇಕೋ ಗೊತ್ತಾಗಿರಲಿಲ್ಲ. ಇನ್ನೇನು ಜಗಳವೇ ಆಗುವಂತಿದ್ದದ್ದನ್ನು ಕಂಡ ಗಂಡನಿಗೆ ಎಲ್ಲಿಲ್ಲದ ಅಚ್ಚರಿ. ಇಡೀ ಜಗತ್ತೇ ಮಂಜು ಕವಿದು ಸ್ಪಷ್ಟವಾಗಿ ಏನೂ ಕಾಣಿಸದಂತೆ ಆಗಿತ್ತು.

ಮರುದಿನ ಭಾನುವಾರ… ಅಬ್ಬಾ ಎಂತಹ ಧಗೆ. ಮದ್ಯಾಹ್ನದ ಹೊತ್ತಿಗೆ ತಲೆ ಸುತ್ತಿದಂತೆ ಆಯಿತು. ಕಾರಣ ಗೊತ್ತಾಗಲಿಲ್ಲ. ಇಸ್ತ್ರಿ ಮಾಡುತ್ತಾ ಸಂಜೆ ಟೀವಿಯಲ್ಲಿ ಹಾಲಿವುಡ್ ಸಿನೆಮಾವೊಂದನ್ನು ನೋಡುವಾಗ ಬಂದ ಕಣ್ಣೀರು ಗಂಡನ ಶರ್ಟಿಗೆ ಇಳಿದಿತ್ತು. ಇಂತಹ ಪ್ರೇಮವನ್ನು ನಾನು ಎಂದಾದರೂ ಅನುಭವಿಸುವೆನೇ? ಹೀಗೆ ನನ್ನನ್ನು ಯಾರಾದರೂ ರಮಿಸಲು ಸಾಧ್ಯವೇ? ಎಂಬ ಪ್ರಶ್ನೆಗಳು ಮನಸ್ಸಿಗೆ ಬಂದರೂ ನಾಲಗೆಗೆ ಇಳಿಯದೇ ಉಳಿದಿದ್ದವು. ಕಲಹದ ವಾತಾವರಣವನ್ನು ಮಾತ್ರ ಕದಲಿಸಲಾಗಿರಲ್ಲಿಲ್ಲ.

ಜೂನ್ ತಿಂಗಳ ಕೊನೆಯ ದಿನ. ನಡುವಯಸ್ಸಿನ ಎಲ್ಲರನ್ನೂ ಆಡಿಕೊಳ್ಳುವಂತೆ ಆಕಾಶ ಶುಭ್ರವಾಗಿತ್ತು. ಇಲ್ಲಿಯವೆರೆಗೂ ಅವ್ಯಕ್ತವೆನಿಸಿದ್ದ ಅವಳ ಚಡಪಡಿಕೆಯ ಎರಡು ಮುಖಗಳು – ಈಡೇರದ ಕಾಮನೆ, ಜಾರಿಹೋದ ಅವಕಾಶ – ಕ್ರಮೇಣ ಸ್ಪಷ್ಟವಾಗಿದ್ದವು. ಯಾವುದೂ ಸರಿಯಾಗಿ ಗೋಚರವಾಗದಂತೆ, ಸರಿಸಲಾಗದ ಪರದೆಯೊಂದರ ಹಿಂದೆ ನಿಂತಂತೆ ಅನಿಸತೊಡಗಿತ್ತು. ಇದರೊಂದಿಗೆ ಒಬ್ಬಳೇ ಸೆಣೆಸಬೇಕು ಎನಿಸಿದ್ದಕ್ಕೇ ಹಿಂದೆ ಉಳಿದದ್ದು.

ವಿಸ್ಕಿ ಲೋಟ ಖಾಲಿಯಾಗಿತ್ತು. ಎಲ್ಲವನ್ನೂ ಮರೆಸುವಂತೆ ಆ ಪರಪುರುಷನ ಪರಿಮಳ ಅವಳ ಮನಸ್ಸನ್ನು ಆವರಿಸಿತ್ತು. ಅದರ ಹಿಂದೆಯೇ ಸಂಭೋಗದ ತುಡಿತ ಸಹ. ತನ್ನ ಮನಸ್ಸು ಹಿಡಿದ್ದಿದ್ದ ಜಾಡು ಇದಾ? ಎಂದು ಸ್ವಲ್ಪ ನಾಚಿಕೆಯಾಯಿತು. ಹತ್ತು ವರ್ಷಗಳಲ್ಲಿ ಗಂಡನ ಹೊರತು ಇನ್ನೊಬ್ಬನನ್ನು ಬಯಸದೇ ಇದ್ದವಳಿಗೆ ಇಂದು…

ಎಷ್ಟೋ ಸಲ ಈ ವಿಷಯವನ್ನು ಗೆಳತಿಯರ ಹರಟೆಯಲ್ಲಿ ಕೇಳಿದಾಗ ಅಚ್ಚರಿ ಎನ್ನಿಸುತ್ತಿತ್ತು. ಆದರೂ ಕೆಲವೊಮ್ಮೆ ತಾನೇ ಪೆದ್ದಿಯೇನೋ ಅನಿಸಿದ್ದೂ ಉಂಟು. ಈಗ… ಅದು ಕೈಗೆಟುಕುವಂತಿದ್ದರೆ… ಎನಿಸಿದಾಗ ಏನೋ ಹಿಂಜರಿಕೆ. ಇದೇನಾ ನನಗೆ ಬೇಕಾಗಿದ್ದ ಸುಖ?

ಅವಳೇನೂ ಅಂತಹ ಅಮಾಯಕಳಾಗಿರಲಿಲ್ಲ. ಇಪ್ಪತ್ತೈದರ ಹೊತ್ತಿಗೆ ಸಾಕಷ್ಟು ಅನುಭೋಗಿಸಿದ್ದಳು. ಮದುವೆಯಾಗಿ ಹತ್ತು ವರ್ಷಗಳಾದರೂ ಇಬ್ಬರ ನಡುವೆಯ ದೈಹಿಕ ಪುಳಕ ಕಡಿಮೆಯೇನೂ ಆಗಿರಲ್ಲಿಲ್ಲ. ಆದರೆ ಈಚೆಗೆ ಕೆಲವು ದಿನಗಳ ಹಿಂದೆ ಇದೆಲ್ಲಕ್ಕೂ ಕಡಿವಾಣ ಬಿದ್ದಂತಾಗಿತ್ತು.

ವಿಸ್ಕಿ ಕುಡಿದ ಮೇಲೆ ಹಲ್ಲು ಉಜ್ಜಬೇಕೆಂದು ಬಚ್ಚಲಿಗೆ ಹೋಗಿ ಕನ್ನಡಿಯ ಮುಂದೆ ಹಲ್ಲು ಬಿಚ್ಚಿ ನಿಂತಾಗ ಬಾಗಿಲ ಗಂಟೆಯ ಸದ್ದಾಯಿತು. ಹಿಂದೆ ಮುಂದೆ ನೋಡದೇ ಬಾಗಿಲನ್ನು ಢಾಳಾಗಿ ತೆರೆದಳು.

ಬಾಗಿಲಲ್ಲಿ ನಿಂತಿದ್ದು ಅವನು… ಆ… ಪುರುಷ. ಅಬ್ಬಬ್ಬಾ ಎಂದರೆ ನಲವತ್ತು ಇರಬಹುದು. ಬಿಳಿಯ ಟೀ-ಶರ್ಟ್, ಸೈನಿಕರು ಧರಿಸುವಂತಹ ಪ್ಯಾಂಟು, ಸೊಂಟಕ್ಕೆ ಸುತ್ತಿ ಕಟ್ಟಿಕೊಂಡಿದ್ದ ಸ್ವೆಟರ್. ಬಾಗಿಲು ತೆಗೆದಾಗ ಅವನ ಮುಖದ ಮುಗುಳ್ನಗೆ ಮಾಯವಾಗಿತ್ತು.

“ನಮಸ್ಕಾರ” ಎಂದವನ ಮಾತು ಅಲ್ಲಿಗೇ ಉಡುಗಿಹೋಯಿತು. ’ಅಬ್ಬಾ… ಬೆಡಗಿಯೆಂದರೆ ಇವಳು ಕಣೋ’, ಎಂದು ಸ್ವಗತ. ’ಆದ್ರೆ ಇದೇನಿದು? ಯಾಕೋ ನನ್ನ ಒಂಥರಾ ನೋಡ್ತಾಯಿದಾಳಲ್ಲಾ?’

“ನಮಸ್ತೆ”… ಎಂದು ಶುರುಮಾಡಿದಳು. “ನೀವು…” “ಹೀಗೆ…”

“ಅಲ್ಲಾ…” “ನಾನು…” ಎಂದು ನಿಲ್ಲಿಸಿ, “ಹುಷಾರಾಗಿದ್ದೀರಾ?” ಎಂದ.

“ಇಲ್ಲ ಇಲ್ಲ… ಚೆನ್ನಾಗೇ ಇದ್ದೀನಿ… ಅದೂ… ನೆಲ ಸಾರಿಸ್ತಿದ್ದೆ…” ಎಂದಳು.

“ಓ! ಸಾರಿ. ನಿಮಗೆ ತೊಂದರೆ ಕೊಟ್ಟೆ. ಪಕ್ಕದ ಮನೆ ಸೀಕೊರೊವಾ ಎಲ್ಲಿ ಹೋದ್ರು ಎನಾದ್ರೂ ಗೊತ್ತಾ?”

“ಇಲ್ಲವಲ್ಲಾ…”

“ಸರಿ… ಅದೂ.. ಅಂದ್ರೆ… ಅವರು ನನ್ನ ಚಿಕ್ಕಮ್ಮ” ಎನ್ನುವುದರಲ್ಲಿ

“ಒಳಗೆ ಬನ್ನಿ, ಬಾಗಿಲಲ್ಲಿ ಯಾಕೆ ಇದೆಲ್ಲಾ”

“ಅಲ್ಲ… ಇರಿ… ಚಪ್ಪಲಿ ಬಿಚ್ತೀನಿ… ಸಾರಿಸಿರೋ ನೆಲ…” ಎಂದು ಬರಿಗಾಲಲ್ಲಿ ಒಳಗೆ ಬಂದು ಬಾಗಿಲು ಹಾಕಿ ನಿಂತ.

“ಅವರು ನನ್ನ ಚಿಕ್ಕಮ್ಮ” ಎಂದು ಮುಂದುವರೆಸಿ “ಏನೋ ಕೊಡ್ಬೇಕಿತ್ತು. ಆಗಾಗ ಎನಾದ್ರು ತರ್ತಾ ಇರ್ತೀನಿ”.

“ಇರಿ. ಕಾಫಿ ಮಾಡ್ತೀನಿ. ಅಷ್ಟ್ರಲ್ಲಿ ಬಂದ್ರೂ ಬರಬಹುದು”

“ಅಯ್ಯೋ… ನಿಮಗೆ ತೊಂದ್ರೆ ಯಾಕೆ”

“ತೊಂದ್ರೆ ಏನೂ ಇಲ್ಲ… ಇರೋದು ನಾನೊಬ್ಳೇ” ಬಾಯಿ ಹೇಳಿದ್ದು ತನಗೇ ನಂಬಲಾಗಲಿಲ್ಲ. ಏನೋ… ಹೇಳಿದ್ದಾಯ್ತು. ಕಾಫಿಗೆ ನೀರು ಕಾಯಿಸುತ್ತಾ ನಿಂತವಳು ಅವನೆಡೆಗೆ ನೋಡಿದಾಗಲೆಲ್ಲಾ ಮೈ ಜುಮ್ಮೆಂದಿತ್ತು. ಆಶ್ಚರ್ಯವೆಂದರೆ ಅವನ ಕಣ್ಣಲ್ಲೂ… ಅವನ ಮೇಲಿನ ತನ್ನ ಬಯಕೆಯ ಪ್ರತಿಬಿಂಬ. ಏನು ಮಾಡಲೂ ತೋಚಲಿಲ್ಲ. ಬಿಳಿಯ ಅಡುಗೆಮನೆಯ ಮೇಲೆ ಕಾರ್ಮೋಡ ಕವಿದಂತಾಗಿ ಕಣ್ಣು ಕಪ್ಪಿಟ್ಟಿತು. ತಳಮಳವನ್ನು ಹತ್ತಿಕ್ಕಲು ಸಿಗರೇಟು ತೆಗೆದು “ನೀವು?” ಎಂದು ಕೇಳಿದಳು .

ಆತ ತಲೆಯಾಡಿಸಿ ಪೈಪ್ ತೆಗೆದು ಹೊಗೆಸೊಪ್ಪು ತುಂಬಿಸಲು ತಲೆಬಾಗಿಸಿದ.

ಅವನ ದೃಷ್ಟಿ ಬೇರೆಡೆಗೆ ತಿರುಗಿದ್ದರಿಂದ ಸ್ವಲ್ಪ ನಿರಾಳವೆನಿಸಿತು. ಈಗೇನು ಮಾಡುವುದು? ಹಿಂದೇ ಮುಂದೇ ನೋಡದೇ… ಇಲ್ಲೇ? ಈಗಲೇ? ಯಾಕಾಗಬಾರದು? ಯಾರೂ ಅಂತಾ ಕೂಡಾ ಗೊತ್ತಿಲ್ಲ!

ಅದೇನೋ ಒಂಥರಾ ಕಳೆ… ಲಾಯರ್, ಇಂಜಿನೀಯರ್, ಆಫೀಸರ್ ಆಗಿರೋಕ್ಕೆ ಸಾಧ್ಯಾನೇ ಇಲ್ಲ. ಹೆಂಡತಿ ಮಕ್ಕಳು ಮನೆ ಅಂತ ತಲೆಕೆಡಿಸಿಕೊಂಡವನ ಹಾಗೆ ಕಾಣುವುದಿಲ್ಲ. ಯಾವುದೋ ಕಾದಂಬರಿಯಲ್ಲೋ, ಚಲನಚಿತ್ರದಲ್ಲೋ ಬರುವ ನಾಯಕನ ಹಾಗಿದ್ದಾನೆ.

“ಚಿಕ್ಕಮ್ಮ ನಿಮಗೆ ಗೊತ್ತಾ?” ಎಂದು ಕೇಳಿದ.

“ಗೊತ್ತು ಅಂತೇನಲ್ಲ. ಹೋಗಿ ಬರುವಾಗ ಒಂದೆರಡು ಮಾತು ಅಷ್ಟೇ. ನಾವು ಇಲ್ಲಿಗೆ ಬಂದು ಕೇವಲ ಆರು ತಿಂಗಳಾಯಿತು.”

“ಓ… ನಾನು… ಅವರಿಗೆ ಯಾರೂ ಇಲ್ಲ ನೋಡಿ. ಅದಕ್ಕೇ ಬಂದು ನೋಡ್ಕೊಂಡು ಹೋಗ್ತೀನಿ”

“ನಿಮ್ಮದು ಯಾವೂರು?”

“ಇದೇ ಊರೇ… ಆದ್ರೆ ಮನೇಗೆ ಬರೋಕ್ಕಾಗೋದು ಯಾವಾಗ್ಲೋ ಒಂದ್ಸಲ…”

ಊರೂರು ಸೊತ್ತೋ ಕೆಲಸ ಅನ್ಸುತ್ತೆ. ಸರಿ ಹಾಗಾದ್ರೆ…

ಮಾತು, ಕತೆ, ಗೊಂದಲ, ಗದ್ದಲ ಏನೂ ಇಲ್ಲದೇ ಒಂದೆರಡು ಕ್ಷಣ ಅಷ್ಟೇ… ಇನ್ನೇನೂ ಬೇಡ…. ಯಾವ ಅಕ್ಕರೆ, ಸಲುಗೆ ಏನೂ ಇಲ್ಲದ ಅಪ್ಪಟ ಸುಖ… ಮತ್ತೆ ಬೇಕಾದರೆ ಮುಂದಿನ ವರ್ಷ.

ಎದ್ದು ನಿಂತು ಹತ್ತಿರ ಬಂದು… ಸಿಗರೇಟಿಗೆ ಬೆಂಕಿ ಹಚ್ಚಿದ. ತೀರಾ ಹತ್ತಿರಬಂದಿದ್ದರಿಂದ ಮುಟ್ಟದೇ ಇರಲಾಗಲಿಲ್ಲ. ಒಂದು ಕ್ಷಣ ಹರಡಿದ್ದ ಅವಳ ಕೂದಲನ್ನು ನೋಡಿ ಹಿಂದಕ್ಕೆ ಸರಿಸಲೇ ಎಂದು ಯೋಚಿಸಿದ. ಇಷ್ಟು ಹೊತ್ತೂ ನೋಡಿದ್ದನ್ನು ಗ್ರಹಿಸಿದ್ದು ಸರಿಯೇ ಆದರೆ ಇದೇ ತಕ್ಕ ಘಳಿಗೆಯೆನಿಸಿತು.

ಅವಳಿಗೂ ಹಾಗೇ ಅನ್ನಿಸಿ ಕೆನ್ನೆ ಬಿಸಿಯಾಯಿತು. ಇದ್ದಕ್ಕಿದಂತೇ “ನಾನು ಟೀಚರ್” ಎಂದಳು.

“ಹೌದಾ?” ಎಂದು ಮುಗುಳ್ನಗೆ ಬೀರಿ ಕೇಳಿದ.

“ಮತ್ತೇ… ನೀನು?”

ಬಾಯಿತೆಗೆಯಲು ತುಸು ತಡಮಾಡಿ ತಪ್ಪು ಮಾಡಿದ. ಅವಳಿಗೆ ಹಿಡಿಸಿದ್ದು ಗೊತ್ತಾಗಿತ್ತು. ಅವನಿಗೂ ಅದೇ ಬೇಕಿತ್ತು. ಅಂತೆಯೇ ಎಂದಿಗಿಂತ ಜಾಗರೂಕನಾಗಿ, “ನಾನಾ? ನಂದು ಲೆಕ್ಕಪತ್ರ, ತೆರಿಗೆ… ಇದರ ಬಿಸಿನೆಸ್.”

“ಹೌದಾ?” ಎಂದುಸುರಿ ಹಿಂದಕ್ಕೆ ಹೆಜ್ಜೆಯಿಟ್ಟು ಅಡುಗೆ ಕಟ್ಟೆಗೆ ಒರಗಿ ನಿಂತಳು. ಕವಿದ್ದಿದ್ದ ಕಾರ್ಮೋಡ ಸರಿದಿತ್ತು.

ನೋಟದಲ್ಲಿ, ಮಾತಲ್ಲಿ ಆದ ಬದಲಾವಣೆ ಅವನಿಗೂ ಅರ್ಥವಾಯಿತು. ಸಮಯ ಮೀರಿತ್ತು. ಛೇ! ಸುಳ್ಳು ಹೇಳಬಾರದಿತ್ತು. ಥೂ! ಏನುಮಾಡುವುದಕ್ಕೂ ಹೊಳೆಯಲಿಲ್ಲ.

“ಸರಿ… ನಾನಿನ್ನು ಬರ್ತೀನಿ. ಚಿಕ್ಕಮ್ಮ ಯಾವಾಗ ಬರ್ತಾರೋ…” ಎಂದು ಪ್ಲಾಸ್ಟಿಕ್ ಚೀಲ ಎತ್ತು ಹಿಡಿದು, “ನಿಮಗೆ ಅಡ್ಡಿಯಿಲ್ಲ ಎಂದರೆ ಇದನ್ನು ಇಲ್ಲಿ ಇಡಬಹುದಾ?”

“ಅದಕ್ಕೇನಂತೆ”

“ಥ್ಯಾಂಕ್ಸ್… ಕಾಫಿ ಚೆನ್ನಾಗಿತ್ತು. ನಿಮ್ಮನ್ನು ನೋಡಿ ಖುಷಿಯಾಯ್ತು.”

“ನನಗೂ ಸಹಾ”

ಬಾಗಿಲು ಜಡಿದು ಬೆನ್ನು ಒರಗಿ ಅಲ್ಲಿಯೇ ಕುಳಿತುಕೊಂಡ ಹಾನಾ ಕೆನ್ನೆಯ ಮೇಲೆ ಮತ್ತೆ ಕಣ್ಣೀರು ಹರಿಯುತ್ತಿತ್ತು.

ಮಾರನೆಯ ದಿನ ಬೆಳಗ್ಗೆ ಸೂಟ್‍ಕೇಸ್ ತಳ್ಳಿಕೊಂಡು ಪಕ್ಕದ ಮನೆಯ ಬಾಗಿಲ ಗಂಟೆ ಒತ್ತಿದಳು.

“ಓ ನೀವಾ, ಬನ್ನಿ ಒಳಗೆ. ಇದು ನನಗಾ?” ಎಂದು ಸೀಕೊರೊವಾ ಬರಮಾಡಿಕೊಂಡರು.

“ನೆನ್ನೆ ನಿಮ್ಮ ಸೋದರಳಿಯ ಬಂದಿದ್ರು. ಇದನ್ನು ನಮ್ಮ ಮನೇಲಿ ಇಟ್ಟು ಹೋದ್ರು”

“ಅಯ್ಯೋ! ದಿನಗಟ್ಟಲೆ ಗೂಟ ಬಡ್ಕೊಂಡು ಮನೇಲೇ ಕೂತಿರ್ತೀನಿ. ಅಪರೂಪಕ್ಕೆ ಹೊರಗೆ ಹೋದೆ ಅಂದ್ರೆ ಹೀಗಾಗುತ್ತೆ ನೋಡಿ. ದಡ್ಡ ಮುಂಡೇದು… ಒಂದು ಫೋನ್ ಮಾಡೋಕ್ಕಾಗೋಲ್ವಾ?”

“ಹೋಗ್ಲಿ ಬಿಡಿ. ಮತ್ತೆ ಬರ್ತಾರೆ.”

“ಹೂಂ… ಬರ್ತಾನೆ… ಆರೋ ಎಂಟೋ ತಿಂಗ್ಳಾಗುತ್ತೆ ಬರೋದು. ಇದ್ದಿಕ್ಕಿದ್ದಂತೆ ಸಮಯ ಸಿಕ್ತು ಅಂತ ಎಲ್ಲಿಂದಲೋ ಬಂದಿದ್ದ ಅನ್ಸುತ್ತೆ. ನಿಮಗೆ ಗೊತ್ತಾ? ಅವನೊಬ್ಬ ನಾವಿಕ… ಮರ್ಚೆಂಟ್ ನೇವೀಲಿ… ಸದಾ ತಿರುಗ್ತಾನೇ ಇರ್ತಾನೆ”

“ನೇವೀನಾ!?”

“ಹೌದು. ಓದಿದ್ದು ಕಾಮರ್ಸ್. ಆದ್ರೆ ತಲೆ ಪೂರ್ತಿ ಹಡಗು, ಸಮುದ್ರ… ಹದಿನೈದು ವರ್ಷ ಆಯ್ತು ನೋಡಿ. ಪ್ರಪಂಚ ಪೂರ್ತಿ ಸುತ್ತಾಡಿದ್ದಾನೆ. ಒಳ್ಳೇ ಹುಡುಗ ಮಾತ್ರ. ಕಾಗದ ಬರೀತಾನೆ. ಬಂದಾಗ್ಲೆಲ್ಲ ನನ್ನನ್ನು ನೋಡದೇ ಹೋಗೋದಿಲ್ಲ… ಏಷ್ಟು ಒಳ್ಳೆಯವನಾದ್ರೆ ಏನು ಉಪಯೋಗ ಹೇಳಿ. ಮನೆ ಮಕ್ಕಳು ಒಂದೂ ಇಲ್ಲ. ಮಾಡೋ ಕೆಲಸ ನೋಡಿದ್ರೆ ಯಾರು ತಾನೇ ಹೆಣ್ಣು ಕೊಡ್ತಾರೆ.” ಎಂದು ಬೇಸರಿಸಿದರು.

“ಅಯ್ಯೋ, ನಾನು ಹಾಗೇ ಹರಟೆ ಹೊಡೀತಾಯಿದೀನಿ. ನಿಮಗೆ ತಡ ಆಯ್ತು ಅನ್ಸುತ್ತೆ. ಹೊರಟಿದ್ದು ಎಲ್ಲಿಗೆ ಅಂತ ಕೇಳಬಹುದಾ?”

ಅವಳ ಮುಖ ಬಾಡಿತ್ತು. “ನಾನಾ? ಗಂಡನ ಊರಿಗೆ… ರಜಾ ಅಲ್ವಾ… ಅವನು ನಿನ್ನೆನೇ ಹೋದ….”

( ಪ್ರಸ್ತುತ ಕಥೆ 2002 ರಲ್ಲಿ ಪ್ರಕಟವಾದ “Doktor Kott přemítá ( Doctor Kott Wonders ) ” ಎಂಬ ಸಂಕಲನದಿಂದ ಆಯ್ದದ್ದು . )

ಚಿತ್ರ : ಮದನ್ ಸಿ. ಪಿ


ಅನುವಾದ : ನಾಗವಳ್ಳಿ ಎಸ್. ಕಿರಣ್ 
1972ರಲ್ಲಿ ಹುಟ್ಟಿದ್ದು ಬೆಂಗಳೂರಿನಲ್ಲಿ . ಸಸ್ಯಶಾಸ್ತ್ರದಲ್ಲಿ ಡಾಕ್ಟ್ರರೇಟ್ ಪದವಿ ಗಳಿಸಿ , 2013 ರ ವರೆಗೆ ಸಸ್ಯ ವಿಜ್ಞಾದಲ್ಲಿ ಸಂಶೋಧನೆ ಮಾಡಿ , ಪ್ರಸ್ತುತ ಎಲೆಕ್ಟ್ರಾನ್ ಮೈಕ್ರೋಸ್ಕೋಪುಗಳ ತಯಾರಿಕಾ ಸಂಸ್ಥೆಯಲ್ಲಿ ಸಂಶೋಧನಾ ಪ್ರಾಯೋಜನೆಗಳ ನಿರ್ವಾಹಕರಾಗಿ ಕಾರ್ಯ . ಜೊತೆಗೆ ಸುಮಾರು 20 ವರ್ಷಗಳಿಂದ ಅನುವಾದಕರೂ ಕೂಡ . ಜಯಂತ ಕಾಯ್ಕಣಿಯವರ ‘ ಅಮೃತಬಳ್ಳಿ ಕಷಾಯ’ ಸಂಕಲನದ ಎರಡು ಕಥೆಗಳು ಇಂಗ್ಲೀಶ್ ನಲ್ಲಿ ‘Dot and Lines’ ಎಂದು 2004 ರಲ್ಲಿ ಪ್ರಕಟವಾಯಿತು . ದೆಹಲಿಯ ಕಥಾ ಸಂಸ್ಥೆ ಬ್ರಿಟೀಷ್ ಕೌನ್ಸಿಲ್ ಜೊತೆಗೆ 1997-98 ರಲ್ಲಿ ಆಯೋಜಿಸಿದ್ದ ಎರಡನೇ ಅಖಿಲ ಭಾರತ ಕಥಾನುವಾದ ಸ್ಪರ್ಧೆಯಲ್ಲಿ ಶಾಂತಿನಾಥ ದೇಸಾಯಿಯವರ ಕಥೆಯೊಂದರ ಅನುವಾದ ಅಭಿನಂದನಾ ಪ್ರಶಸ್ತಿ ಗಳಿಸಿತು . ಕಳೆದ 20 ವರ್ಷಗಳಿಂದ ಚೆಕ್ ಗಣರಾಜ್ಯದಲ್ಲಿ ನೆಲೆಸಿದ್ದಾರೆ .

ಪ್ರತಿಕ್ರಿಯಿಸಿ