ನಡುವೆ ಸುಳಿವ ಸ್ವಾತಂತ್ರ್ಯ ಎಡವೂ ಅಲ್ಲ, ಬಲವೂ ಅಲ್ಲ, ಕಾಣಾ…

ಹುಟ್ಟು ಮೈಸೂರಿಗರಾದ ಶಶಿ ಕುಮಾರ್ ವಿಶ್ವದ ಪ್ರತಿಷ್ಟಿತ ಪ್ರಕಾಶಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ಇಂಗ್ಲಿಶ್ ಅನುವಾದಗಳನ್ನು ನೋಡಿಕೊಂಡದ್ದವರು. ಕನ್ನಡದ ಕಾದಂಬರಿಯೊಂದರ ಇಂಗ್ಲಿಶ್ ಅನುವಾದದಲ್ಲಿಯೂ ಹಾಗೂ ಕನ್ನಡ ವಿಮರ್ಶಾತ್ಮಕ ಸಂಕಥನಗಳ ಕುರಿತ ಇಂಗ್ಲಿಶ್ ಪುಸ್ತಕವೊಂದರ ಸಂಪಾದನೆಯಲ್ಲಿಯೂ ತೊಡಗಿಕೊಂಡಿರುವ ಶಶಿ ಕುಮಾರ್ ಬರೆಯುವ ಹೊಸ ಅಂಕಣ ಅನುವಾದ ಇಂದಿನಿಂದ ಋತುಮಾನದಲ್ಲಿ ..

ಇಂದು ಆಗಸ್ಟ್ 15, 2017. ಭಾರತ ಮತ್ತು ಪಾಕಿಸ್ತಾನಕ್ಕೆ 70 ವರ್ಷಗಳ ಸ್ವಾತಂತ್ರ್ಯ ಸಂಭ್ರಮ.

ಉತ್ತರ ಭಾರತದ ಗಡಿ ನಗರ ಅಮೃತಸರದಲ್ಲಿ ಉಪಖಂಡದ ಮೊದಲ ವಿಭಜನೆ ವಸ್ತುಸಂಗ್ರಹಾಲಯ(Partition Museum) ಲೋಕಾರ್ಪಣೆ. ಬಿಚ್ಚಿಡಲಿದೆಯೇ ಇದು ಘೋರ, ಭೀಕರ, ಹಿಂಸಾಚಾರ, ಅತ್ಯಾಚಾರ, ಮಾರಣಹೋಮದ ನೆನಪಿನ ಪೆಟ್ಟಿಗೆ?  

200 ವರ್ಷಗಳ ಕಾಲ ತಮ್ಮನ್ನಾಳಿದ ಬ್ರಿಟಿಶರ ವಿರುದ್ಧ ಸರ್ವಧರ್ಮೀಯರು ನೆತ್ತರು ಹರಿಸಿ ಹೋರಾಡಿ ಪಡೆದದ್ದು ಆ ಸ್ವಾತಂತ್ರ್ಯ. ಆದರೂ, ಆ ಸ್ವಾತಂತ್ರ್ಯದಲ್ಲಿ ಇರಲಿಲ್ಲ ಯಾವ ಸಂಭ್ರಮ. ಭಾರತ ಉಪಖಂಡವಾಗಿತ್ತು ಸೂತಕದ ಮನೆ. ಮಡಿದ ಜೀವಗಳಿಗೆ ಇರಲಿಲ್ಲ ಯಾವ  ಲೆಕ್ಕ. ಎರಡು ಹೋಳಾಗಿತ್ತು ಅಖಂಡ ಭಾರತದ ಹಿಂದೂ-ಮುಸ್ಲಿಮ್-ಸಿಖ್ ಸೌಹಾರ್ದದ ಒಡಲು. ಅಲ್ಲಿಂದ ಚಿಮ್ಮಿತ್ತು ಕೋಮುವಾದದ ನೆತ್ತರು. ನದಿಯಾಗಿ ಹರಿದಿತ್ತು ನೆಲದಲ್ಲಿ ನೆತ್ತರು. ಆ ನೆತ್ತರಿನ ಬಸಿರಲ್ಲಿ ಹುಟ್ಟಿದ್ದವು ಹಿಂದೂ ಭಾರತ, ಮುಸ್ಲಿಂ ಪಾಕಿಸ್ತಾನ ಎಂಬ ಎರಡು ದೇಶಗಳು. ಇದರೊಂದಿಗೆ ಎರಡಾಗಿ ಹರಿದು ಹೋಗಿತ್ತು ಹಿಂದೂಸ್ತಾನಿ ನಾಲಗೆ. ಒಂದು ನಾಲಗೆ ನುಡಿದರೆ ಭಾರತದಲ್ಲಿ ಹಿಂದಿ, ಮತ್ತೊಂದು ನಾಲಗೆ ನುಡಿದಿತ್ತು ಪಾಕಿಸ್ತಾನದಲ್ಲಿ ಉರ್ದು. ಸ್ವಾತಂತ್ರ್ಯವನ್ನೂ ಪಡೆದವು, ಬೇರೆ ರಾಷ್ಟ್ರವನ್ನೂ ಪಡೆದವು ಭಾರತ ಪಾಕಿಸ್ತಾನ. ಆದರೆ, ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದ, ದೇಶ ವಿಭಜನೆಯನ್ನು ವಿರೋಧಿಸಿದ್ದ ಹಿಂದೂ ಜೀವವೊಂದು ತನ್ನ ಧರ್ಮದವರ ಗುಂಡಿಗೆ ಆಗಿತ್ತು ಬಲಿ. ಉರ್ದು ನುಡಿವ ಮುಸ್ಲಿಮರಿಗಾಗಿಯೇ ಪ್ರತ್ಯೇಕ ರಾಷ್ಟ್ರಬೇಕೆಂದು ಹಟತೊಟ್ಟು ನಿಂತಿದ್ದ ನಾಸ್ತಿಕ ಜೀವ ತಾನು ಕನಸಿದ್ದ ನಾಡಿನಲ್ಲಿ ಬದುಕುಳಿದಿದ್ದಿದ್ದು ಒಂದೇ ವರುಶ.

ಆಗಸ್ಟ್ 14, 1947.  ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಜವಾಹರ್ ಲಾಲ್ ನೆಹರೂ ಆಯ್ಕೆ. ದೆಹಲಿಯ ಕೆಂಪುಕೋಟೆಯ ಮೇಲೆ ಹಾರಿಸಿದರು ತ್ರಿವರ್ಣ ಧ್ವಜ. ದೇಶವನ್ನುದ್ದೇಶಿಸಿ ಮಾಡಿದ್ದರು ಚಾರಿತ್ರಿಕ Tryst with destiny ಭಾಷಣ.  “Long years ago, we made a tryst with destiny, and now the time comes when we shall redeem our pledge, not wholly or in full measure, but very substantially,” ಎಂದು ಆರಂಭಿಸಿ, “There is no resting for any one of us till we redeem our pledge in full, till we make all the people of India what destiny intended them to be” ಎಂದು ಹೇಳಿ ಮುಗಿಸಿದ್ದರು.  ಅವರು ಅಧಿಕೃತವಾಗಿ  ‘ಪೂರ್ಣ ಸ್ವರಾಜ್'(ಸಂಪೂರ್ಣ ಸ್ವಾತಂತ್ರ್ಯ) ಘೋಷಣೆ ಮಾಡಿದ ದಿನ 31 ಡಿಸೆಂಬರ್, 1929. ಆಗ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ. ಘೋಷಣೆ ಅಂಗೀಕಾರವಾದ ದಿನ 26 ಜನವರಿ, 1930. ಇಡೀ ದೇಶವೇ 26 ಜನವರಿಯಂದು ಸ್ವಾತಂತ್ರ್ಯ ದಿನಾಚರಣೆ ಮಾಡಬೇಕೆಂದು ತ್ರಿವರ್ಣ ಧ್ವಜ ಹಾರಿಸಿ ಕರೆ ಕೊಟ್ಟಿದ್ದರು ನೆಹರೂ. ಇದೆಲ್ಲ ನಡೆದ ಸ್ಥಳ: ಇಂದು ಪಾಕಿಸ್ತಾನದ ಭಾಗವಾಗಿರುವ, ಅಂದು ಭಾರತದ ಭಾಗವಾಗಿದ್ದ ಲಾಹೋರ್ ನ ರಾವಿ ನದಿಯ ದಂಡೆ.

ಕಾಂಗ್ರೆಸಿನ ಲಾಹೋರ್ ಅಧಿವೇಶನದಲ್ಲಿ ನೆಹರು ಭಾಷಣ

ಈ ‘ಪೂರ್ಣ ಸ್ವರಾಜ್’ ಘೋಷಣೆಗೆ ಮೊದಲು ಕರೆಕೊಟ್ಟ ರಾಜಕೀಯ ನಾಯಕ ರೂವಾರಿ ಖ್ಯಾತ ಉರ್ದು ಕವಿ ಹಾಗೂ ಕಾಮ್ರೇಡ್ ಮೌಲಾನ ಹಸ್ರತ್ ಮೋಹನಿ. ಅದು 1921ರಲ್ಲಿ ಅಹ್ಮದಾಬಾದ್ ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ವೇದಿಕೆ.

26 ಜನವರಿ 1949. ‘ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯ’ವಾಗಿ ಭಾರತದ ಉದಯ. ದೇಶದ ಎಲ್ಲ ನಾಗರಿಕರಿಗೂ ಸಲ್ಲಬೇಕು ‘ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ.’ ಈ ತತ್ವ, ಆದರ್ಶಗಳನ್ನೊಳಗೊಂಡ ಸಂವಿಧಾನವನ್ನು ತಮಗೆ ತಾವೇ ಅರ್ಪಿಸಿಕೊಂಡಿತು ದೇಶದ ಜನತೆ. ‘ಪೂರ್ಣ ಸ್ವರಾಜ್’ ಘೋಷಣೆಯಾಗಿದ್ದ ದಿನವಾದ 26 ಜನವರಿ ಸ್ವಾತಂತ್ರ್ಯಾ ನಂತರದಲ್ಲಿ ಸಂವಿಧಾನ ಅಂಗೀಕಾರವಾದ ಬಳಿಕವಾಯಿತು ಗಣರಾಜ್ಯ ದಿನ. 

24 ಜನವರಿ, 1966 – 24 ಮಾರ್ಚ್, 1977. ಇಂದಿರಾ ಗಾಂಧಿ ಪ್ರಧಾನಿ. 25 ಜೂನ್, 1975-21 ಮಾರ್ಜ್, 1977 ದೇಶ ಕಂಡಿತು ಮೊದಲ ಆಂತರಿಕ ತುರ್ತುಪರಿಸ್ಥಿತಿ(ಎಮರ್ಜೆನ್ಸಿ). ನಾಗರಿಕ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ವಿಚಿತ್ರವೆಂಬಂತೆ, ಸಂವಿಧಾನದ 42ನೇ ತಿದ್ದುಪಡಿ. ‘ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯ’ದ ನಡುವೆ ಸೆಕ್ಯುಲರ್, ಸಮಾಜವಾದಿ(socialist) ತತ್ವಗಳ ಸೇರ್ಪಡೆ. 

ಅಂದಿನಿಂದ ಭಾರತವಾಯಿತು, ‘ಸಾರ್ವಭೌಮ, ಸಮಾಜವಾದಿ, ಸೆಕ್ಯುಲರ್, ಪ್ರಜಾಸತ್ತಾತ್ಮಕ, ಗಣರಾಜ್ಯ.’

26 ಮೇ, 2014. ಭಾರತೀಯ ಜನತಾ ಪಕ್ಷ(ಭಾಜಪ)ದ ನರೇಂದ್ರ ಮೋದಿ ದೇಶದ 14ನೇ ಪ್ರಧಾನಿ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ(ಇಂಗ್ಲಿಶ್ ನಲ್ಲಿ National Democratic Alliance ಅಥವಾ NDA)ಯ ಸರಕಾರ ರಚನೆ. ‘ಹಿಂದುಗಳಿಂದ, ಹಿಂದುಗಳಿಗಾಗಿ, ಹಿಂದುಗಳಿಗೋಸ್ಕರ’ ಎಂಬ ತತ್ವ, ಆದರ್ಶಕ್ಕೆ ದೊರಕಿತು ಇನ್ನಿಲ್ಲದ ಮುನ್ನಡೆ.

26 ಜನವರಿ, 2015. ಗಣರಾಜ್ಯೋತ್ಸವಕ್ಕೆ ನೀಡಲಾದ ಜಾಹೀರಾತಿನಲ್ಲಿದ್ದ ಸಂವಿಧಾನದ ಪ್ರಸ್ತಾವನೆಯಲ್ಲಿ ಸೆಕ್ಯುಲರ್, ಸಮಾಜವಾದಿ(socialist) ಪದಗಳು ಕಣ್ಮರೆ. ಈ ವಿವಾದದ ಹಿಂದೆಯೇ ಮುನ್ನೆಲೆಗೆ ಬಂತು ಇವುಗಳನ್ನು ಸಂವಿಧಾನದಿಂದ ಶಾಶ್ವತವಾಗಿ ಕೈಬಿಡಬೇಕೆಂಬ ಹಿಂದೂ ಸಂಘಟನೆಗಳ ಬೇಡಿಕೆ.

ಇದು ಬರೆಯಿತು ಪಂಥೀಯ ರಾಜಕೀಯಕ್ಕೆ ಹೊಸ ಮುನ್ನುಡಿ. ಎಡ(ಪಕ್ಷಗಳು), ಬಲ(ಪಕ್ಷಗಳು), ಎಡಬಲಗಳ  ನಡುವಿನ(ಪಕ್ಷಗಳು), ಎಡಬಲಗಳಾಚೆಗಿನ(ಪಕ್ಷಗಳು)—ಈ ಸಂಘರ್ಷಕ್ಕೆ ದೊರಕಿತು ಅಧಿಕೃತ ಚಾಲನೆ.

ಈ ಹಿನ್ನೆಲೆಯಲ್ಲಿ,ಸಾರ್ವಭೌಮ, ಸಮಾಜವಾದಿ, ಸೆಕ್ಯುಲರ್, ಪ್ರಜಾಸತ್ತಾತ್ಮಕ, ಗಣರಾಜ್ಯ’ವಾದ ಭಾರತದ 70 ವರ್ಷಗಳ ಸ್ವಾತಂತ್ರ್ಯದಲ್ಲಿ ಎಡ-ಬಲಗಳ ರಾಜಕೀಯ ಸಂಕಥನ ಮೂಡಿಬಂದ ಬಗೆಯ ಕಥನ ಮಂಡಿಸಲಿದೆ ಈ ಬರೆಹ.

ಫ್ರೆಂಚ್ ಹಾಗೂ ರಶ್ಯನ್ ಮಹಾಕ್ರಾಂತಿಗಳು ಪೂರಣ್ ಪೋಳಿಯ ಹಾಗೆ!

1789ರಲ್ಲಿ ಫ್ರೆಂಚ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎದ್ದಿತೊಂದು ಪ್ರಶ್ನೆ: ಹೊಸ ರಾಜಕೀಯ ಆಳ್ವಿಕೆಯಲ್ಲಿ ರಾಜನಿಗೆ ಇರಬೇಕೇ ಇರಬೇಡವೇ ವಿಟೊ ಅಧಿಕಾರ (ನಿಷೇಧಾಧಿಕಾರ ಅಥವಾ ತಡೆಹಕ್ಕು). ಇದ್ದರೆ ಅದು ಹೇಗಿರಬೇಕು? ಸಂಪೂರ್ಣ ಅಥವಾ ಸೀಮಿತವಾಧಿ ಅಧಿಕಾರ? ಕಡೆಗೆ ನಡೆದಿದ್ದೂ ಆಯಿತು ಮತದಾನ. ಅಧಕ್ಷನ ಬಲ ಭಾಗಕ್ಕೆ ಕೂತವರು ಸಂಪೂರ್ಣ ಅಧಿಕಾರಕ್ಕೆ, ಎಡ ಭಾಗಕ್ಕೆ ಕೂತವರು ಸೀಮಿತಾವಧಿ ಅಧಿಕಾರಕ್ಕೆ ನೀಡಿದರು ಮತ.  ಕ್ರೈಸ್ತಧರ್ಮದ ಪ್ರಕಾರ, ದೇವರ ಅಥವಾ ಕುಟುಂಬದ ಹಿರಿಯರ ಬಲಕ್ಕೆ ಕೂತರೆ ಅದು ಗೌರವ. ಅಂತೆಯೇ, ಸಭಾಕೊಠಡಿ ಇದ್ದಕ್ಕಿದ್ದಂತೆ ಪಡೆಯಿತು ರಾಜಕೀಯ ಮಹತ್ವ. ರಾಜಪ್ರಭುತ್ವಕ್ಕೆ ತಲೆಬಾಗಿದವರಾದವರು, ಬಲ. ರಾಜನಿಗೆ ಸೀಮಿತಾಧಿಕಾರ ನೀಡಬೇಕೆಂದವರು, ಎಡ. ಹೀಗೆ ಹುಟ್ಟಿಕೊಂಡಿತು 19ನೇ ಶತಮಾನದ ಫ್ರಾನ್ಸ್ ನ ರಾಜಕೀಯ ಪರಿಭಾಷೆ. ಇದು ನಿರ್ಧರಿಸಿತು ಫ್ರೆಂಚ್ ಪಾರ್ಲಿಮೆಂಟಿನ ಸದಸ್ಯರ ರಾಜಕೀಯ ಓಲಿಕೆ. ಎಡಬಲವೆಂಬ ಈ ರಾಜಕೀಯ ಪರಿಭಾಷೆ ಯಾವ ದ್ವಿಭಜನೆಗೂ ಒಗ್ಗದ ರಾಜಕೀಯ ತತ್ವವನ್ನು ಆಗಿಸಿತ್ತು ಸರಳ. ಬಲವೆಂದರೆ, ಪುರಸ್ಕಾರ. ಎಡವೆಂದರೆ, ತಿರಸ್ಕಾರ. ಬೆಳೆಯಿತು ಭಾರತದಲ್ಲಿನ ಜಾತಿಉಪಜಾತಿಗಳಂತೆ, ಈ ರಾಜಕೀಯ ಹೊಗರುಸಾಲು. ಒಬ್ಬೊಬ್ಬ ರಾಜಕಾರಣಿಯನ್ನೂ ಎಡದಿಂದ ಬಲಕ್ಕೆ ಕೂರಿಸುತ್ತ, ಬೆಳೆಯಿತು ಎಡಬಲದ ಜಾತಿ. ಪಕ್ಕಾ ಎಡಪಂಥೀಯ ಬಲ, ಎಡಪಂಥೀಯ ಎಡ, ಬಲಪಂಥೀಯ ಎಡ, ಬಲಪಂಥೀಯ ಬಲ, ಎಡ-ಮಧ್ಯೆ, ಬಲ-ಮಧ್ಯೆ, ಇತ್ಯಾದಿ. ಹೀಗೆ ಬೆಳೆಯಿತು ಪಂಥೀಯವಾದ. ಎಡಬಲದಿಂದ ಆಗಿತ್ತು ಫ್ರಾನ್ಸ್ ಎರಡು ಹೋಳು. ಸಂಪೂರ್ಣ ರಾಜಾಡಳಿದ ಬೆಂಬಲಿಗರು ಬಲ, ಸಾಂವಿಧಾನಿಕ ರಾಜಾಡಳಿತದ ಬೆಂಬಲಿಗರು ಎಡ. ಹೀಗೆಯೇ ಬೆಳೆಯುತ್ತ ಹೋಯಿತು: ರಾಜಾಡಳಿತ ಬೆಂಬಲಿಗರು ರಿಪಬ್ಲಿಕನ್ನರ ವಿರುದ್ಧ, ಸಾಂಪ್ರದಾಯಿಕ(conservative) ರಿಪಬ್ಲಿಕನ್ನರು ಆಧುನಿಕರ(modernist) ವಿರುದ್ಧ. ಪತ್ರಿಕಾ ಸ್ವಾತಂತ್ರ್ಯ, ಸಂಘಸಂಸ್ಥೆಗಳ ಸ್ವಾತಂತ್ರ್ಯ, ಟ್ರೇಡ್ ಯೂನಿಯನ್ ಗೆ ಸೇರುವ ಸ್ವಾತಂತ್ರ್ಯ, ವಿಚ್ಛೇದನ, ಇತ್ಯಾದಿ ಆಧುನಿಕರ ಬಳುವಳಿ.

ಫ್ರೆಂಚ್ ಪಾರ್ಲಿಮೆಂಟ್, 1877 ಕೃಪೆ : ವಿಕಿಮೀಡಿಯ ಕಾಮನ್ಸ್

 

20ನೇ ಶತಮಾನದ ತಿರುವಿಗೆ, ಕ್ಯಾತೊಲಿಕ್ ವಾದದ ಸಮರ್ಥಕರು ಹಾಗೂ ಚರ್ಚ್ ಹಾಗೂ ಪ್ರಭುತ್ವ ಬೇರೆಬೇರೆ ಎಂದು ಪ್ರತಿಪಾದಿಸುವವರ ನಡುವಿನ ವಾಗ್ವಾದವನ್ನೂ ಒಳಗೊಂಡುಬಿಟ್ಟಿತ್ತು ಎಡ-ಬಲ. 1905ರಲ್ಲಾದ ಈ ಪಲ್ಲಟ-ಕ್ಯಾತೊಲಿಕ್ ಹಾಗೂ ಕ್ರೈಸ್ತಪುರೋಹಿತವರ್ಗ ವಿರೋಧಿ ಸಂಘರ್ಘಕ್ಕೆಡೆ ಮಾಡಿಕೊಟ್ಟಿತು. 1930ರಿಂದ ಮುಂದಕ್ಕೆ, ಆರ್ಥಿಕ ವಿಭಜನೆ ಮುನ್ನೆಲೆಗೆ ಬಂದುದರಿಂದ, ಸಮಾಜವಾದವನ್ನು ಎಡ ಸಮರ್ಥಿಸಿಕೊಂಡರೆ, ಬಲ ಸಮರ್ಥಿಸಿಕೊಂಡಿದ್ದು ಆರ್ಥಿಕ ಉದಾರೀಕರಣ.

ಒಟ್ಟಾರೆಯಾಗಿ, ರಾಜಾಡಳಿತವನ್ನು ವಿರೋಧಿಸುವ ಮೂಲಕ ಫ್ರೆಂಚ್ ಕ್ರಾಂತಿಗೆ ನಾಂದಿ ಹಾಡಿದ್ದು ಎಡ. ಇದರಿಂದಾಗಿಯೇ ಆದದ್ದು ಆಧುನಿಕ ವಿಶ್ವ ರಾಜಕೀಯವನ್ನು ಪ್ರಭಾವಿಸಿದ ರಿಪಬ್ಲಿಕ್ ಹಾಗೂ ಸೆಕ್ಯುಲರೀಕರಣದ ಸೃಷ್ಟಿ. 1815ರಲ್ಲಿ ರಾಜಾಡಳಿತ ಮರುಸ್ಥಾಪಿತವಾದಾಗ, ಪ್ರಧಾನವಾಗಿ ಹೊರಹೊಮ್ಮಿತ್ತು ಎಡ. ಎಡ-ಬಲದೊಂದಿಗೆ -ಪಂಥ ಅಥವಾ ಬಣ(wing ಪದದ ಕನ್ನಡಾನುವಾದ)ಸೇರಿಕೊಂಡ ಕಾಲ 19ನೇ ಶತಮಾನ. ಧಾರ್ಮಿಕ ಹಾಗೂ ರಾಜಕೀಯ ನಿಲುವುಗಳಲ್ಲಿ ಸಾಂಪ್ರದಾಯಿಕವಲ್ಲದವರಾದರು, ಬದಲಾವಣೆ ತರಬಯಸುವವರು ಎಡಪಂಥೀಯರಾದರೆ, ಸಾಂಪ್ರದಾಯಿಕವಾದ ನಿಲುವು ಹೊಂದಿದ, ಇರುವ ವ್ಯವಸ್ಥೆ, ಕ್ರಮ ಮುಂದುವರಿಸಿಕೊಂಡು ಹೋಗುವವರಾದರು ಬಲಪಂಥೀಯರು.

ಕಾಲ ಕಳೆದಂತೆ, ವಿಶ್ವ ರಾಜಕೀಯ ತತ್ವ, ಸಿದ್ಧಾಂತಗಳು ಸರಳ ದ್ವಿವಿಭಜನೆಯಿಂದಾದವು ಎಡ-ಬಲ. ಸ್ವಾತಂತ್ರ್ಯಾನಂತರದಲ್ಲಿ ಭಾರದ ದೇಶವನ್ನಾಳಿದ ಸರಕಾರಗಳು ಪಕ್ಷಭೇದವಿಲ್ಲದೆ ಅಳವಡಿಸಿಕೊಂಡವು ಸಮಾಜವಾದ ಹಾಗೂ ಆರ್ಥಿಕ ಉದಾರೀಕರಣ ನೀತಿಗಳು. ಇವೇ ಮುಂದೆ ದೇಶ ಮುನ್ನಡೆಸುವಲ್ಲಿ ಆದವು ನಿರ್ಣಾಯಕ.

ರಶ್ಯನ್ ಕ್ರಾಂತಿ, 1917 – ಲೆನಿನ್ ಮಾಸ್ಕೊದಲ್ಲಿ ಸಭೆಯೊಂದನ್ನುದ್ದೇಶಿಸಿ ಭಾಷಣ ಮಾಡುತ್ತಿರುವುದು

1917ರ ರಶ್ಯನ್ ಕ್ರಾಂತಿಯಿಂದಾಗಿ ಜಗತ್ತಿನಲ್ಲಿ ಹಲವು ಕ್ರಾಂತಿಗಳು ನಡೆದವು. ಇದು  ಭಾರತದಲ್ಲಿನ ಕ್ರಾಂತಿಕಾರಿಗಳನ್ನು ಪ್ರಭಾವಿಸಿದ ಪರಿಣಾಮವಾಗಿಯೇ ಹುಟ್ಟಿದ್ದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ(ಸಿಪಿಐ). ಇಂದು ಉಜ್ಬೇಕಿಸ್ತಾನ್ ನಲ್ಲಿರುವ ತಾಶ್ಕೆಂಟ್ ನಲ್ಲಿ ಮನಬೇಂದ್ರ ನಾಥ್ ರಾಯ್(ಪಕ್ಷದ ಮೊದಲ ನಾಯಕರಾದವರು), ಅಬಾನಿ ಮುಖರ್ಜಿ ಹಾಗೂ ರಾಯ್ ರ ಪತ್ನಿ ಎವೆಲಿನ್ 1920ರಲ್ಲಿ ಹೊರಡಿಸಿದ ಮ್ಯಾನಿಫೆಸ್ಟೊ(ಪ್ರಣಾಳಿಕೆ) ಇದಕ್ಕೆ ಕಾರಣ. ಆದರೆ, ಸಿಪಿಐನ ಅಧಿಕೃತ ಇತಿಹಾಸದ ಪ್ರಕಾರ, ಅದು  ಹುಟ್ಟಿದ್ದು 26 ಡಿಸೆಂಬರ್ 1925.

ಕಾಕತಾಳೀಯವೆಂಬಂತೆ, ಕೆ.ಬಿ.ಹೆಡ್ಗೇವಾರ್ ನೇತೃತ್ವದ ಹಿಂದೂ ಬಲಪಂಥೀಯ ಸಂಘಟನೆ ರಾಷ್ತ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ ಎಸ್) ಆರಂಭವಾಗಿದ್ದು ಸೆಪ್ಟಂಬರ್ 27,1925, ವಿಜಯದಶಮಿಯ ದಿನ.

ಹೀಗೆ ಭಾರತವನ್ನೊಳಗೊಂಡಂತೆ, ಇಡೀ ಜಗತ್ತನ್ನೇ ಪ್ರಭಾವಿಸಿದವು ಫ್ರೆಂಚ್ ಹಾಗೂ ರಶ್ಯನ್ ಕ್ರಾಂತಿಗಳು. ಇವು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುವ ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಡಾ. ಬಿ. ಆರ್. ಅಂಬೇಡ್ಕರ್ ರ ರಾಜಕೀಯ ಹಾಗೂ ಬೌದ್ಧಿಕ ಚಿಂತನೆ ಮೇಲೂ ಮಾಡಿದ್ದವು ಪ್ರಭಾವ. ಜಗತ್ತಿನ ಚಿಂತನೆಯ ದಿಕ್ಕನ್ನೇ ಬದಲಿಸಿದ್ದು ಫ್ರೆಂಚ್ ಹಾಗೂ ರಶ್ಯನ್ ಕ್ರಾಂತಿಗಳು ಎಂಬುದು ಅವರ ನಂಬಿಕೆ. ಅವರಿಗೆ ಮರಾಠಿ ತಿನಿಸಾದ ಪೂರಣ್ ಪೋಳಿ (ಕರ್ನಾಟಕದ ಹೋಳಿಗೆ) ಈ ಎರಡು ಕ್ರಾಂತಿಗಳ ರೂಪಕ. ಫ್ರೆಂಚ್ ಕ್ರಾಂತಿ ಪೂರಣ್ ಪೋಳಿಯ ಹೊರಪದರ, ಹೂರಣವಿರುವ ಒಳಭಾಗ ರಶ್ಯಾದ ಕ್ರಾಂತಿ. ಒಂದು ಸಂಪೂರ್ಣ ಪೋಳಿ ತಯಾರಿಸಲು ಈ ಎರಡೂ ಸಾಮಗ್ರಿಗಳು ಅತ್ಯವಶ್ಯಕ. ಒಂದು ಬಿಟ್ಟು ಮತ್ತೊಂದು ಅಪೂರ್ಣ ಎಂಬುದು ಅವರ ವ್ಯಾಖ್ಯಾನ.

ಮುಂದಿನ ಭಾಗದಲ್ಲಿ : ದೇಶ  ಕಂಡ  ಪ್ರಮುಖ ರಾಜಕೀಯ ನಾಯಕರುಗಳಾದ ಗಾಂಧಿ, ನೆಹರೂ, ಅಂಬೇಡ್ಕರ್, ಲೋಹಿಯಾ, ಇಂದಿರಾ ಗಾಂಧಿ ಹಾಗೂ ಇನ್ನಿತರರು ಎಡ-ಬಲ ಪಂಥೀಯವಾದವನ್ನು ಕಾಲದಿಂದ ಕಾಲಕ್ಕೆ ಹೇಗೆ ನಿರೂಪಿಸುತ್ತಾ ಬಂದರು ಹಾಗೂ 1950ರಿಂದ, ಅಂದರೆ ಸಂವಿಧಾನ ಜಾರಿಗೆ ಬಂದಂದಿನಿಂದ ಇಲ್ಲಿಯವರೆಗೆ ರಾಷ್ಟ್ರೀಯ ಪಕ್ಷಗಳು ತಾವು ರಚಿಸಿದ ಸರಕಾರಗಳ ಮೂಲಕ ತಮ್ಮ ಯೋಜನೆಗಳು, ಶಾಸನಗಳು, ನೀತಿ, ನಿಯಮಗಳು, ಸಂವಿಧಾನ ತಿದ್ದುಪಡಿಗಳ ಮೂಲಕ ಎಡ-ಬಲ ಪಂಥೀಯವಾದವನ್ನು ಹೇಗೆ ಮುಂದಿಡುತ್ತ ಬಂದಿವೆ ಎಂಬುದನ್ನು ಮಂಡಿಸಲಾಗುವುದು.


ಪೋಸ್ಟರ್ ವಿನ್ಯಾಸ : ನನಿತ್ ರಾಜ್

2 comments to “ನಡುವೆ ಸುಳಿವ ಸ್ವಾತಂತ್ರ್ಯ ಎಡವೂ ಅಲ್ಲ, ಬಲವೂ ಅಲ್ಲ, ಕಾಣಾ…”

ಪ್ರತಿಕ್ರಿಯಿಸಿ