೧
ಬಂಡವಾಳ ಹೂಡಿವೆ ಭ್ರೂಣದಲ್ಲಿ
ಈಡಿಪಸ್‍ನ ಖಾಸಾ ಹಳವಂಡಗಳು
ಬಿಳಿ ಕಾಲರಿನವರದೇನೂ
ತಕಾರಿಲ್ಲ: ಬೇಳೆ ಬೇಯಿಸುವುದಕ್ಕೆ
ಹಣದ ಹಡದಿಯ ಹಾಸಿ
ವಿನಾಯಿತಿಗಳ ವಿನಯ ತೋರಿದ್ದಾರೆ
ಅರೇ- ಅದೆಂತಹ ಮಾತೃ ವಾತ್ಸಲ್ಯ !!
ಜೀವಧಾತುಗಳ ಪೂರೈಕೆಗೆ
ಉಂಬಳಿ ಬಿಡುತ್ತಾರಂತೆ
ಊಳಲಾಗದ ಉತ್ತರರು
ಅಲೀಯಾಸ್ ಕಂಬಳಿ ಹುಳುಗಳು
ಕುದುರೆ ಹಿಂದೆ ಕಿನ್ನೂರಿ ನುಡಿಸುವರು
ಸೋ… ಎನ್ನಿರೇ- ಸಂಪನ್ನರಿಗೆ
೨
ಕಾಗೆ ಗೂಡು ಬಾಡಿಗೆ ಬಸಿರು
ಕರುಳ ಬಳ್ಳಿಯ ಸರಕುಗಳು
ಸರಿದು ಹೋಗುತ್ತಿವೆ
ಹೃದಯಾಂತರದಿಂದ ದೇಶಾಂತರಕ್ಕೆ
ಹೊಕ್ಕಳ ಹುರಿ ಕತ್ತರಿಸಿ
ಕರುಳಿಗೊಂದು ಕಾನೂನು ಮಾಡವರೆ
ನ್ಯಾಯವಂತ ಸೈತಾನರು !
೩
ಗಾಯಕ್ಕೆ ಜೀವವಿಮೆ ನೀಡಿ
ಮಲಾಮು ಸಬ್ಸಿಡಿ ಕೊಡುವರಂತೆ
ಹರಾಮಿ ಸಂಕಟಗಳೆದುರು
ಹಲಕಾ ಮಂದಿ ಸಾಧುಗಳಾಗವರೇ
ಸಿದ್ಧಿತನಕೆ ಶೀಲದ ಸೋಗಲಾಡಿತನ !
೪
ಮೋಜಿನ ಹಾಡು
ಲೋಕದ ಲಾಲಿತ್ಯಕ್ಕೆ
ಎದೆ ಕುಟುಕರ ಲೋಕದಲ್ಲಿ
ಗಾಯಗಳು ಖಾಸಾ ಬೀಗರಿದ್ದಂತೆ
ಹಂಗಾಮಿ ಹರೆಯಕ್ಕೆ
ಸುಖದ ನೋವು.
ಋತುಗೀತೆಯೊಂದು ರಕ್ತ ಕವಿತೆ.
ಚಿತ್ರ : ಚೇತನಾ ತೀರ್ಥಹಳ್ಳಿ
ಮಹಾಂತೇಶ ಪಾಟೀಲ ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ . ಕರ್ನಾಟಕ ವಿ.ವಿ ಯಲ್ಲಿ ಕನ್ನಡ ಎಂ.ಎ ಪದವಿ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ (ಗುಲಬರ್ಗಾ) ದಲ್ಲಿ ’ದಶಕದ ಕತೆಗಳಲ್ಲಿ ಪರಂಪರೆ ಮತ್ತು ಆಧುನಿಕತೆಯ ಸ್ವರೂಪ’ ಎಂಬ ವಿಷಯವನ್ನು ಕುರಿತು ಡಾ. ವಿಕ್ರಮ ವಿಸಾಜಿ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದಾರೆ. ಈವರೆಗೆ ಸಂಕ್ರಮಣ ಕಾವ್ಯ ಬಹುಮಾನ,ಕ್ರೈಸ್ಟ್ ಕಾಲೇಜ್ ಬೇಂದ್ರೆ ಕಾವ್ಯ ಪುರಸ್ಕಾರ, ಅಂಕುರ ಕಾವ್ಯ ಪ್ರಶಸ್ತಿ, ಸಂಚಯ ಕಾವ್ಯ ಪ್ರಶಸ್ತಿ ಹಾಗೂ ಪ್ರಜಾವಾಣಿ ದೀಪಾವಳಿ ಕಾವ್ಯ ಸ್ಪರ್ಧೆ,ಲಡಾಯಿ ಪ್ರಕಾಶನ ಗದಗ ಕೊಡುವ ವಿಭಾ ಸಾಹಿತ್ಯ ಪ್ರಶಸ್ತಿ ‘ಒಡೆದ ಬಣ್ಣದ ಚಿತ್ರಗಳು’ ಎಂಬ ಮೊದಲ ಸಂಕಲನಕ್ಕೆ ದೊರಕಿದೆ. ಸಧ್ಯ ಮಂಗಳೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ (ಕೊಡಗು) ಇಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡದ ಅತ್ಯುತ್ತಮ ಯುವ ಕವಿ. ಆದರೆ ಈ ಬಗೆಗೆ ವಿಮರ್ಶಕರು ಚರ್ಚೆಯ ನಡೆದಿಲ್ಲ. ಓದುಗ ವಲಯದಲ್ಲಿ ಚರ್ಚೆಗಳು ನಡೆದಂತೆ