ಜನರ ಓದಿನ ಹವ್ಯಾಸಕ್ಕೆ ಕಾದಂಬರಿಯ ಕೊಡುಗೆ ಬೇರೆ ಯಾವುದೇ ಸಾಹಿತ್ಯ ಪ್ರಕಾರಕ್ಕಿಂತ ಮಿಗಿಲಾದದ್ದು. ಕಾದಂಬರಿ ಎಂದರೆ ಇಂತಿಷ್ಟು ಎನ್ನಲಾಗದಷ್ಟು ಪ್ರಯೋಗಗಳನ್ನು ಕಾದಂಬರಿಕಾರರು ಮಾಡುತ್ತ ಬಂದಿದ್ದಾರೆ. ಒಂದಕ್ಕೊಂದು ಹೊಂದದ ಹಲವು ಸಾಹಿತ್ಯ ಪ್ರಕಾರಗಳ ಅಂಶಗಳ ಮಿಶ್ರಣವಿರುವ ಸಾಹಿತ್ಯ ಪ್ರಕಾರ ಕಾದಂಬರಿ ಎಂದು ರಶಿಯಾದ ವಿಮರ್ಶಕ ಮಿಖಾಯಿಲ್ ಭಖ್ತಿನ್ ವ್ಯಾಖ್ಯಾನಿಸುತ್ತಾರೆ. ಅದರ ಒಳಗೊಳ್ಳುವಿಕೆಯ ಗುಣವೇ ಕಾದಂಬರಿಯನ್ನು ಒಂದು ಶ್ರೇಷ್ಠ ಸಾಹಿತ್ಯ ಪ್ರಕಾರವನ್ನಾಗಿಸಿದೆ ಅನ್ನುತ್ತಾರೆ ಭಾರತೀಯ ಆಂಗ್ಲ ಕಾದಂಬರಿಕಾರ ಅಮಿತವ್ ಘೋಷ್. ಭಾರತೀಯ ಕಾದಂಬರಿಕಾರರು ಪಾಶ್ಚಾತ್ಯ ಮಾದರಿಗಳ ನಕಲು ಮಾಡಿಯಷ್ಟೇ ಬರೆಯುತ್ತಾರೆ, ಈ ಸಾಹಿತ್ಯ ಪ್ರಕಾರವನ್ನು ಶ್ರೀಮಂತವಾಗಿಸುವ, ಸಮೃದ್ಧಗೊಳಿಸುವ ಸ್ವಂತಿಕೆ ಅವರದಲ್ಲ ಎಂಬ ಮಾತು ಒಂದು ಕಾಲದಲ್ಲಿ ಕೇಳಿ ಬರುತ್ತಿತ್ತು. ಆದರೆ, ಈ ಮಾತು ಸತ್ಯಕ್ಕೆ ದೂರ ಎನ್ನುವುದನ್ನು ಭಾರತೀಯ ಸಾಹಿತ್ಯದ ಸಮೀಕ್ಷಕರು ತೋರಿಸಿಕೊಟ್ಟಿದ್ದಾರೆ. ಮೀನಾಕ್ಷಿ ಮುಖರ್ಜಿ ಸಂಪಾದಿಸಿರುವ “ಅರ್ಲಿ ನಾವೆಲ್ಸ್ ಇನ್ ಇಂಡಿಯಾ” (ಭಾರತದ ಮೊದಲ ಕಾದಂಬರಿಗಳು) ಎಂಬ ಪುಸ್ತಕ ಬೆಳಕು ಚೆಲ್ಲುವಂತೆ ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿ ಭಾರತೀಯರು ಕಾದಂಬರಿ ಬರೆಯಲು ಶುರುಮಾಡಿದಾಗಿನಿಂದಲೂ ಈ ಸಾಹಿತ್ಯ ಪ್ರಕಾರದಲ್ಲಿ ಹಲವು ಬಗೆಯ ಪ್ರಾದೆಶೀಕ ಗುಣಗಳನ್ನು ಅಳವಡಿಸಲಾಗಿದೆ. ಕಾದಂಬರಿ ಆಯಾ ಕಾಲಖಂಡದಲ್ಲಿ ನಮ್ಮ ಸಮಾಜದ ಹಲವು ಜರೂರತ್ತುಗಳಿಗೆ ಸಂವಾದಿಯಾಗಿ ರೂಪುಗೊಳ್ಳುತ್ತ ಬಂದಿದೆಯೇ ವಿನಾ ಯಾವೊಂದು ಸಿದ್ಧ ಪಾಶ್ಚಾತ್ಯ ಮಾದರಿಯ ನಕಲಾಗಿಯಲ್ಲ. ಕನ್ನಡದಲ್ಲಿಯೂ ಕಾದಂಬರಿ ಪ್ರಕಾರದ ಎಲ್ಲೆಗಳನ್ನು ಹಿಗ್ಗಿಸಿರಿವ ಅದೆಷ್ಟೋ ಕಾದಂಬರಿಗಳಿವೆ – ಕುವೆಂಪುರವರ “ಮಲೆಗಳಲ್ಲಿ ಮದುಮಗಳು”, ಅಥವಾ ದೇವನೂರು ಮಹಾದೇವರ “ಕುಸುಮಬಾಲೆ” ತಕ್ಷಣಕ್ಕೆ ಹೊಳೆಯುವ ಉದಾಹರಣೆಗಳು.
ಟಿ.ಎಸ್. ಗೊರವರ್ ಅವರ ಕಾದಂಬರಿ “ರೊಟ್ಟಿ ಮುಟಗಿ”ಯನ್ನು ಓದುತ್ತ ಈ ಮೇಲಿನ ವಿಷಯಗಳು ನೆನಪಾದವು. ಯಾಕೆಂದರೆ, ಪ್ರತಿಯೊಬ್ಬ ಸಾರ್ಥಕ ಬರಹಗಾರರಂತೆ ಗೊರವರ್ ಕೂಡ ತಮ್ಮ ಈ ಕೃತಿಯಲ್ಲಿ ಪ್ರಯೋಗಾತ್ಮಕ ಕ್ರಿಯಾಶೀಲತೆ ತೋರಿಸುತ್ತಾರೆ. ಗಟ್ಟಿ ಕಥಾಹಂದರವನ್ನು ಅವಲಂಬಿಸದೆಯೂ ತನ್ನ ವರ್ಣನೆಗಳ ಸಾಂದ್ರತೆಯಿಂದ ಓದುಗರ ಆಸಕ್ತಿಯನ್ನು ಅಂತ್ಯದವರೆಗೂ ಉಳಿಸಿಕೊಳ್ಳುವ ಈ ಕಾದಂಬರಿ, ಪಾರಂಪರಿಕವಾಗಿ ನಾವು ಒಳ್ಳೆಯ ಕತೆಯಲ್ಲಿ ಕಾಣಬಯಸುವ ಸಂಘರ್ಷ, ಪಾತ್ರ ಪ್ರಸ್ತುತಿ, ವಸ್ತು, ಕ್ಲೈಮಾಕ್ಷ್, ದಿನೂಮಾ ಇಂತಹ ಅಂಶಗಳ ಸಹಾಯವಿಲ್ಲದೇ, ಒಂದು ಪರಿಣಾಮಕಾರೀ ಕಾದಂಬರಿಯಾಗಿದೆ. ದ್ಯಾಮನೆಂಬ ಪಾತ್ರದ ಸುತ್ತ ಹೆಣೆದಿರುವ ಈ ಕತೆ, ಅವನ ಬಾಲ್ಯಲೀಲೆಯಿಂದ ಶುರುವಾಗಿ, ಅವನು ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟು ಸಶಕ್ತನಾಗುವ ಪರಿಯನ್ನು ಬಣ್ಣಿಸುತ್ತದೆ. ಹಾಗೆ ನೋಡಿದರೆ, ಇದೊಂದು ರೀತಿಯಲ್ಲಿ ಯುರೋಪಿಯನ್ನರು ‘ಬಿಲ್ದಂಗ್ಸ್ ರೋಮಾನ್ ‘ ಎಂದು ಕರೆಯುವ ಕತಾ ನಾಯಕನ ಬೆಳವಣಿಗೆಯ ಕತೆ. ಹೀಗೆ ನಾಯಕನ ಬಾಲ್ಯದಿಂದ ಪ್ರೌಢತೆಯವರೆಗಿನ ಕತೆ ಹೇಳುವ ಪ್ರಕಾರ ಕಾದಂಬರಿಯ ಇತಿಹಾಸದಲ್ಲಿ ಮೂಲದಿಂದಲೂ ಕಾಣಸಿಗುತ್ತದೆ ಮತ್ತು ಇದೊಂದು ಬಹಳ ಜನಪ್ರಿಯ ಕಾದಂಬರಿ ಪ್ರಕಾರ ಸಹ ಹೌದು. ಹೀಗಿದ್ದಾಗಲೂ, ಈ ವಸ್ತುವಿನ ಆಯ್ಕೆಯಲ್ಲಿಯೂ ಗೊರವರ್ ತಮ್ಮತನವನ್ನು ತೋರುವುದನ್ನು ನಾವು ಗಮನಿಸಬೇಕು. ಸಾಮಾನ್ಯವಾಗಿ ಈ “ಬೆಳವಣಿಗೆಯ ಕಾದಂಬರಿ” (bildungsroman) ಕತಾನಾಯಕನ ಬೆಳವಣಿಗೆಯನ್ನು ಹೇಗೆ ಗುರುತಿಸತ್ತದೆ ಎಂದರೆ, ಸಾಧಾರಣ ಬದುಕಿನಿಂದ ಶುರುವಾಗಿ ಯಾವುದಾದರೊಂದು ಬಗೆಯ ಸಾರ್ಥಕತೆಯನ್ನು ಅಥವಾ ಮಹತ್ವವನ್ನು ಕತಾನಾಯಕ ಗಳಿಸುವ ಕಡೆ ಅದು ಹೊರಳುತ್ತದೆ. “ರೊಟ್ಟಿ ಮುಟಗಿ”ಯ ದ್ಯಾಮನ ಜೀವನಗಾಥೆ ಅವನನ್ನು ಯಾವೊಂದು ಮಹತ್ವದ ಸ್ಥಾನಕ್ಕೆ ತಲುಪಿಸುವ ಗೋಜಿಗೆ ಹೋಗದೇ, ದ್ಯಾಮ ತನ್ನ ಬಾಳನ್ನು ತನ್ನ ಕಾಯಕದ ಆಧಾರದ ಮೇಲೆ ತಾನೇ ಕಟ್ಟಿಕೊಳ್ಳುವ ಬಗೆಯನ್ನಷ್ಟೇ ಹೇಳುತ್ತದೆ.
“ರೊಟ್ಟಿ ಮುಟಗಿ” ಕಾದಂಬರಿ ಎಲ್ಲಿಯೂ ತನ್ನ ಹಳ್ಳಿಕಾಣ್ಕೆಯ ಹೊರಹೋಗುವುದಿಲ್ಲ. ಹಾಗಾಗಿಯೇ, ಈ ಕಾದಂಬರಿಯ ಆಂತರಿಕ ಮೌಲ್ಯಮಾಪನದಲ್ಲಿ ದ್ಯಾಮನ ಬೆಳವಣಿಗೆ ಎಂದರೆ ಆತ ಶ್ರೀಮಂತನಾಗುವುದಾಗಲೀ, ತನ್ನ ಹಳ್ಳಿಯ ಹೊರ ಹೋಗಿ ಏನಾದರೊಂದು ದೊಡ್ಡ ಅಂತಸ್ತನ್ನು ಗಳಿಸುವುದಾಗಲೀ ಅಲ್ಲ. ಬದಲಿಗೆ, ದ್ಯಾಮ ತನ್ನದೇ ಹಳ್ಳಿಯಲ್ಲಿ ತನ್ನ ಊರವರ ಸಹಕಾರದಲ್ಲಿ, ತನಗೆ ಸೂಕ್ತ ಕಾಯಕವನ್ನು ಕಂಡುಕೊಳ್ಳುವ ಪ್ರಕ್ರಿಯೆಯನ್ನು ಬೆಳವಣಿಗೆಯಾಗಿ ಕಾಣುತ್ತದೆ “ರೊಟ್ಟಿ ಮುಟಗಿ”. ಅಂದರೆ, “ರೊಟ್ಟಿ ಮುಟಗಿ”ಯಲ್ಲಿ ಕಾಯಕವೇ ಪರಮ ಮೌಲ್ಯವಾಗಿ ಬಿಂಬಿತವಾಗಿದೆ.
ದ್ಯಾಮ ಈ ಕಾದಂಬರಿಯ ಕೆಂದ್ರ ಪಾತ್ರ ನಿಜ. ಅವನ ತಾಯಿ ಶಂಕ್ರವ್ವ, ಅವನ ಮಡದಿ ಲಕ್ಷ್ಮಿ, ನೆರೆ ಮನೆಯ ರುದ್ರಮ್ಮ ಇತ್ಯಾದಿ ಪಾತ್ರಗಳು ದ್ಯಾಮನ ಜೀವನದಲ್ಲಿ ಹೇಗೋ ಕಾದಂಬರಿಯಲ್ಲಿಯೂ ಮುಖ್ಯವಾಗುತ್ತವೆ. ಆದರೆ, ಹೀಗೆ ಪಾತ್ರಗಳ ಬೆಳವಣಿಗೆ “ರೊಟ್ಟಿ ಮುಟಗಿ”ಯ ಧ್ಯೇಯವಲ್ಲ. ವಾಡಿಕೆಯಂತೆ ಕಾದಂಬರಿ ಪ್ರಕಾರ ವಸ್ತು ಕೇಂದ್ರಿತ (plot-oriented) ಅಥವಾ ಪಾತ್ರ ಕೇಂದ್ರಿತ (character- oriented) ಆಗಿರುತ್ತದೆ. ಕಾದಂಬರಿಯಲ್ಲಿ ಪ್ರಯೋಗಾತ್ಮಕತೆ ಎನ್ನುವುದು ಇದನ್ನು ಮೀರುವುದರಲ್ಲಿಯೇ ಸಾಮಾನ್ಯವಾಗಿ ಕಾಣಸಿಗುತ್ತದೆ. “ರೊಟ್ಟಿ ಮುಟಗಿ” ಸಹ ಒಂದು ಪ್ರಯೋಗಾತ್ಮಕ ಕಾದಂಬರಿ ಆಗುವುದು ಈ ಕಾರಣಕ್ಕೆ. ಯಾಕೆಂದರೆ, ಇಲ್ಲಿ ಕ್ರಿಯೆ (action) ಮುಖ್ಯವಾಗುವುದಿಲ್ಲ. ಘಟನೆಗಳ ಸಾಮರಸ್ಯ, ಅಥವಾ ವಿಕಸನದ ಮೇಲೆ ಆಧಾರಿತ ಕಾದಂಬರಿ ಇದಲ್ಲ. ಬದಲಿಗೆ, ಒಂದು ಹಾಡಿನ ತರಹದಲ್ಲಿ ಇದು ಬಯಲುಗೊಳುವಿಕೆಯನ್ನು ಆಧರಿಸಿದ ಕಾದಂಬರಿ. ಹೀಗೆ ಬಯಲುಗೊಳ್ಳುತ್ತಾ ಹೋಗುವುದು ದ್ಯಾಮನನ್ನೂ ಹಿಡಿದಂತೆ ಯಾವುದೇ ಪಾತ್ರ ಮಾತ್ರವಲ್ಲ. ಏಕಪಾತ್ರದ ಮೇಲೆಯೇ “ರೊಟ್ಟಿ ಮುಟಗಿ”ಯ ಗಮನ ಕೇಂದ್ರಿತವಾಗಿದ್ದರೂ ಈ ಕಾದಂಬರಿ ಬಯಲುಗೊಳಿಸುವುದು ಯಾವೊಂದು ಪಾತ್ರದ ಬದಲಾಗಿ, ಬಾಳ್ಮೆಯನ್ನು ಎಂದರೆ ಸರಿಯಾದೀತು. ಒಟ್ಟಾರೆ ಜೀವನಶೈಲಿಯನ್ನೇ ಇಲ್ಲಿ ಅನಾವರಣಗೊಳಿಸಲಾಗುತ್ತಿದೆ. ಕಾಯಕವನ್ನು ನೆಚ್ಚಿದ, ಹಳ್ಳಿಗೆ ಹೊರತಾಗದ ಅಥವಾ ಹೊರಹೋಗದ ಜೀವನಶೈಲಿ ಅದು. ತಾನು ಆಯ್ದಿರುವ ಪ್ರದೇಶದ ಆಹಾರ ಪದ್ಧತಿ, ದೈನಂದಿನ ಭಾಷಾ ಬಳಕೆ, ನುಡಿಗಟ್ಟು, ಭೌಗೋಳಿಕ ವಿವರ, ಆ ಭೌಗೋಳಿಕ ವಿವರಗಳಿಗಂಟಿದ ಬಾಳ್ಮೆಗಳನ್ನು “ರೊಟ್ಟಿ ಮುಟಗಿ” ಅನಾವರಣ ಮಾಡುತ್ತದೆ.
ಕತೆಯ ಜೀವಾಳವೇ ಸಂಘರ್ಷ ಮತ್ತು ಅದನ್ನು ಅನುಸರಿಸಿ ಕತೆ ಪಡೆಯುವ ಹೊರಳುವಿಕೆ (reversal / turn) ಎನ್ನುವುದು ಪಾಶ್ಚಾತ್ಯ ಮೀಮಾಂಸೆಯ ಪ್ರಬಲ ಪ್ರಮೇಯ. ಬಹುಪಾಲು ಕತೆಗಳು – ಅವು ಕಾದಂಬರಿ ಇರಲಿ, ಸಿನೆಮಾ ಇರಲಿ, ಅಥವಾ ಸಣ್ಣಕತೆ, ನಾಟಕಗಳಿರಲಿ – ಸಂಘರ್ಷ ಮತ್ತು ಹೊರಳುವಿಕೆಯ ಅಂಶಗಳನ್ನು ಹೊಂದಿರುತ್ತವೆ. ಪ್ರಯೋಗಾತ್ಮಕ ಕತೆಗಳಲ್ಲಿ ಇವೆರಡರ ಎಲ್ಲೆ ಮೀರುವುದೇ ಮುಖ್ಯವಾಗುವುದು ಸಹ ಈ ಅಂಶಗಳ ಪ್ರಾಮುಖ್ಯವನ್ನೇ ಹೇಳುತ್ತವೆ. ಆದರೆ, “ರೊಟ್ಟಿ ಮುಟಗಿ”ಯಲ್ಲಿ ಎರಡೂ ಇಲ್ಲ. ಇಲ್ಲಿ ಪಾತ್ರ-ಪಾತ್ರಗಳ ನಡುವೆಯಾಗಲಿ, ವ್ಯಕ್ತಿಯೊಬ್ಬನ/ಳ ಅಂತರ್ಯದಲ್ಲಿಯಾಗಲಿ, ವಿರುದ್ಧ ಮೌಲ್ಯಗಳ ಮಧ್ಯೆಯಾಗಲೀ ಸಂಘರ್ಷ ಏರ್ಪಡಿಸಲಾಗಿಲ್ಲ. ಅಂತೆಯೇ, ಕತೆಯ ದಿಶೆಯನ್ನೇ ಬದಲಿಸಿ ಓದುಗರನ್ನು ಚಕಿತಗೊಳಿಸಿ ಆಕರ್ಷಣೆ ಉಳಿಸಿಕೊಳ್ಳುವ ಹೊರಳುವಿಕೆಯೂ “ರೊಟ್ಟಿ ಮುಟಗಿ” ಕಾದಂಬರಿಯಲ್ಲಿ ಎಲ್ಲಿಯೂ ಬಳಕೆಯಾಗಿಲ್ಲ.
ಘಟನೆಗಳ ಸಂಭ್ರಮ, ಕತಾಹಂದರದ ಚಾಕಚಕ್ಯತೆ, ಪಾತ್ರಗಳ ವೈಶಿಶ್ಠ್ಯ ಮುಂತಾದ ಕಾದಂಬರಿ ಪ್ರಕಾರದ ಪರಿಚಿತ ದಾರಿಗಳನ್ನು ಅನುಸರಿಸುವುದಿಲ್ಲ ಎನ್ನುವುದು ಈ ಕಾದಂಬರಿಯ ವಿಶೇಷ ಗುಣ. ಇದೇ ಗೊರವರ್ ಅವರ ಸಾರ್ಥಕತೆ. ಬದಲಿಗೆ, “ರೊಟ್ಟಿ ಮುಟಗಿ” ಬಾಳ್ಮೆಯ ಅನಾವರಣಕ್ಕಾಗಿ ಕಾದಂಬರಿ ಪ್ರಕಾರವನ್ನು ಬಳಸುತ್ತದೆ. ದಮನಿತ ಸಮಾಜದ ಹಲವು ಬರಹಗಾರರು ಕಾದಂಬರಿ ಪ್ರಕಾರವನ್ನು ಹೀಗೆ ದುಡಿಸಿ ಕೊಂಡಿರುವುದನ್ನು ನಾವು ಸ್ಮರಿಸಿಕೊಳ್ಳ ಬಹುದು. ನಾನು ಕಂಡಂತೆ “ರೊಟ್ಟಿ ಮುಟಗಿ”ಯ ಹೆಚ್ಚುಗಾರಿಕೆಯೆಂದರೆ ಈ ಪ್ರಯೋಗ ಮಾತ್ರವಲ್ಲದೇ, ಒಂದು ಪ್ರದೇಶದ ಜನರ ಕಾಯಕವನ್ನು ಕೇಂದ್ರವಾಗಿಟ್ಟುಕೊಂಡು ಆಯಾ ಕಾಯಕಗಳ ವರ್ಣನೆ, ಸಂಬಂಧಿತ ನುಡಿಗಟ್ಟುಗಳ ಉಪಯೋಗ ಮತ್ತು ಕೇಂದ್ರ ಪಾತ್ರವು ತನ್ನ ಕಾಯಕವನ್ನು ಕಂಡುಕೊಳ್ಳುವುದನ್ನೇ ಕತೆಯ ಗುರಿಯಾಗಿ ಕಾಣುವುದರ ಹಿಂದಿರುವ ಕಾಣ್ಕೆ. ಈ ಕಾಣ್ಕೆ ಬದಲಾವಣೆಯನ್ನು ಹಳ್ಳಿಯಿಂದ ದೂರ ಹೋಗುವುದರಲ್ಲಿಯಾಗಲೀ, ಬೆಳವಣಿಗೆಯನ್ನು ಅಂತಹ ಬದಲಾವಣೆಯಲ್ಲಿಯಾಗಲೀ ಕಾಣದೇ ಕಾಯಕದ ತಿಳುವಳಿಕೆಯನ್ನ ಕತೆಯ ಕೇಂದ್ರವಾಗಿಸುವ ಮೂಲಕ ಪ್ರಾದೇಶಿಕ ಬಾಳ್ಮೆಯನ್ನು ಮನಗಾಣಿಸಿಕೊಡುವ ಪ್ರಯತ್ನವಾಗಿದೆ.
ರೊಟ್ಟಿ ಮುಟಗಿ
ಟಿ. ಎಸ್. ಗೊರವರ್
ಕಾದಂಬರಿ
ಪುಟ: ೯೦
ಬೆಲೆ:
ಪ್ರಕಾಶಕರು: ಪಲ್ಲವ ಪ್ರಕಾಶನ
ಕಮಲಾಕರ ಕಡವೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರ್ಶಿಯ ಕಡವೆ ಗ್ರಾಮದವರು.
ಈಗ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದರೆ.
ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವ, ಅನುವಾದ ಮಾಡಿರುವ ಅವರು ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ.